೩೧

ಊರು ನೂಲ್ವಿ
ಸ್ಥಳ ಊರ ಹೊರಗೆ
ಸ್ಮಾರಕ ಆದಿ ಬಸವಣ್ಣ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಭಾಗವಾಗಿ ಉಳಿದು ಬಂದಿರುವ ಗರ್ಭಗೃಹವು ಭಗ್ನಸ್ಥಿತಿಯಲ್ಲಿದೆ. ಗರ್ಭಗೃಹದ ಹೊರಭಿತ್ತಿ ಬಿದ್ದುಹೋಗಿದೆ. ಸುತ್ತಲು ಮರಗಿಡಗಳು ಬೆಳೆದಿವೆ.

ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದೆ. ಹೊರಭಾಗದಲ್ಲಿ ಲತಾಬಳ್ಳಿಗಳ ಅಲಂಕರಣವಿರುವ ಉಬ್ಬುಶಿಲ್ಪಫಲಕ ಮತ್ತು ಭಗ್ನ ನಂದಿಶಿಲ್ಪವನ್ನು ಕಾಣಬಹುದು.

೩೨

ಊರು ನೂಲ್ವಿ
ಸ್ಥಳ ಉಡುಚವ್ವನ ಗುಡಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಭಗ್ನಸ್ಥಿತಿಯಲ್ಲಿರುವ ದೇವಾಲಯವಿದು. ಗರ್ಭಗೃಹ ಮತ್ತು ಅಂತರಾಳಗಳಿರುವ ದೇವಾಲಯದ ಹೊರಮೈಯನ್ನು ಮಣ್ಣಿನ ಗೋಡೆಯಿಂದ ಮುಚ್ಚಲಾಗಿದೆ. ಗರ್ಭಗೃಹ ಮತ್ತು ಅಂತರಾಳಗಳ ಒಳಚಾವಣಿಯಲ್ಲಿ ಭುವನೇಶ್ವರಿಯನ್ನು ಬಿಡಿಸಿದೆ. ಅಂತರಾಳ ದ್ವಾರದ ಇಕ್ಕೆಲಗಳಲ್ಲಿರುವ ಜಾಲಂಧ್ರದಲ್ಲಿ ದೊಡ್ಡ ಕಿಂಡಿಗಳನ್ನು ಕೊರೆಯಲಾಗಿದೆ. ಈ ಬಗೆಯ ಒರಟುರಚನೆ ಮತ್ತು ಸರಳ ಅಲಂಕರಣೆಯ ಜಾಲಂಧ್ರಗಳಿರುವ ದೇವಾಲಯಗಳು ಸಾಮಾನ್ಯವಾಗಿದೆ ಗೋವೆಯ ಕದಂಬರ ಆಳ್ವಿಕೆಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ದೇವಾಲಯಗಳು ಮೂಲತಃ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದರೂ ಸಹ, ಬಾಗಿಲು, ಜಾಲಂಧ್ರ ಮತ್ತಿತರ ವಾಸ್ತುಭಾಗಗಳ ರಚನೆ ಮತ್ತು ಅಲಂಕರಣದಲ್ಲಿ ಸ್ವಲ್ಪ ಪ್ರತ್ಯೇಕವಾಗಿಯೇ ನಿಲ್ಲುತ್ತವೆ. ಇವುಗಳ ರಚನೆಯ ಕಾಲ, ಲಕ್ಷಣ ಮತ್ತು ಪ್ರದೇಶಗಳನ್ನು ಗಮನಿಸಿ ಗೋವೆ ಕದಂಬರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ದೇವಾಲಯಗಳೆಂದು ಗುರುತಿಸಬಹುದಾಗಿದೆ. ಪ್ರಸ್ತುತ ಕಲ್ಮೇಶ್ವರ ದೇವಾಲಯವು ಸಹ ಗೋವೆ ಕದಂಬರ ಆಳ್ವಿಕೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಬಹುದು.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಭಾಗದಲ್ಲಿ ಭೈರವ, ವಿಷ್ಣು, ಲಿಂಗವೊಂದರ ರುದ್ರಭಾಗ, ಲಿಂಗ, ಭಗ್ನಗೊಂಡ ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ಈ ಊರಿನ ಮೂರು ಶಾಸನಗಳು ಗೋವೆ ಕದಂಬರ ಕಾಲದವು. ಊರ ಒಕ್ಕಲಿಗರು ದೇವಾಲಯಗಳ ಆಚಾರ್ಯರಿಗೆ ನೀಡಿದ ಭೂದಾನಗಳನ್ನು ಉಲ್ಲೇಖಿಸುತ್ತವೆ (ಕಲಬುರ್ಗಿ : ಧಾ ಜಿ ಜ ಶಾ ಸೂ).

೩೩

ಊರು ನೂಲ್ವಿ
ಸ್ಥಳ ಊರ ಈಶಾನ್ಯ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯದ ಭಾಗವಾಗಿ ಗರ್ಭಗೃಹ ಮಾತ್ರ ಉಳಿದಿದ್ದು, ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವುಂಟು. ಹೊರಭಾಗದಲ್ಲಿ ಭಗ್ನ ನಂದಿಶಿಲ್ಪವನ್ನು ಕಾಣಬಹುದು. ಈ ಊರಿನಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳಿದ್ದು, ಗರ್ಭಗೃಹಗಳು ಮಾತ್ರ ಉಳಿದುಬಂದಿವೆ. ಅವೂ ಸಹ ದುಸ್ಥಿತಿಯಲ್ಲಿವೆ.

೩೪

ಊರು ನೂಲ್ವಿ
ಸ್ಥಳ ಊರ ನಡುವೆ
ಸ್ಮಾರಕ ರಾಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರ ನಡುವೆ ಇರುವ ದೇವಾಲಯವು ಗರ್ಭಗೃಹ ಮತ್ತು ಮಾಳಿಗೆಶೈಲಿಯ ಮುಖಮಂಟಪಗಳನ್ನು ಒಳಗೊಂಡಿದೆ. ಒಳಭಾಗದಲ್ಲಿ ಲಿಂಗದ ರುದ್ರಭಾಗ ಮಾತ್ರ ಇದೆ. ಮುಖಮಂಟಪದಲ್ಲಿ ನಂದಿಶಿಲ್ಪವುಂಟು. ಹೊರಗೆ ಕೆಲವು ಭಗ್ನಶಿಲ್ಪಾವಶೇಷಗಳು ಕಂಡುಬರುತ್ತವೆ.

೩೫

ಊರು ನೂಲ್ವಿ
ಸ್ಥಳ ಕುಂಬಾರ ಓಣಿ
ಸ್ಮಾರಕ ವೀರಭದ್ರನ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯವಿದು. ಗರ್ಭಗೃಹ ಪ್ರಾಚೀನ ದೇವಾಲಯದ ಭಾಗವಾಗಿದೆ. ಸಭಾಮಂಟಪವನ್ನು ಮಾಳಿಗೆಶೈಲಿಯಲ್ಲಿ ಬಹುಹಿಂದೆಯೇ ನಿರ್ಮಿಸಿದ್ದಾರೆ. ಗರ್ಭಗೃಹ ಒಳಸೇರಿದಂತೆ ಸುತ್ತಲೂ ಗೋಡೆ ಇರುವುದರಿಮದ ಪ್ರದಕ್ಷಿಣಾ ಪಥ ನಿರ್ಮಾಣಗೊಂಡಂತಾಗಿದೆ.

ಗರ್ಭಗೃಹದಲ್ಲಿ ೧೯೭೨ರಲ್ಲಿ ಮಾಡಿಸಿದ ವೀರಭದ್ರನ ಶಿಲ್ಪವನ್ನಿಡಲಾಗಿದೆ. ಶಿಲ್ಪವು ಸಿಂಹಲಾಂಛನದ ಪಾಣಿಪೀಠದ ಮೇಲಿರುವುದು ಆಶ್ಚರ್ಯಕರ. ಅಂದರೆ ಈ ಪೀಠ ಮೂಲತಃ ಮಹಾವೀರನಿಗೆ ಸಂಬಂಧಿಸಿರುವುದು ಗಮನಾರ್ಹ ಸಂಗತಿ. ಬಹುಶಃ ಈ ದೇವಾಲಯ ಜೈನಬಸದಿಯಾಗಿದ್ದು, ಇತ್ತೀಚೆಗೆ ವೀರಭದ್ರನನ್ನು ಪ್ರತಿಷ್ಠಾಪಿಸಿಕೊಂಡಿರಬೇಕು. ದೇವಾಲಯದ ಹೊರಭಾಗದಲ್ಲಿ ಭಗ್ನಗೊಂಡ ಸೂರ್ಯ ಶಿಲ್ಪವಿದೆ. ಈ ಊರಿನ ಆಂಜನೇಯ ಗುಡಿ ಎದುರು ಮರದ ಕೆಳಗೆ ವೀರಗಲ್ಲು, ಆಂಜನೇಯ ಮತ್ತಿತರ ಶಿಲ್ಪಾವಶೇಷಗಳಿವೆ.

೩೬

ಊರು ಬಿ.ಅರಳೀಕಟ್ಟಿ
ಸ್ಥಳ ಹಳೆ ಊರಿನ ಕೆರೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇಲ್ಲಿ ಹಳೆಯ ದೇವಾಲಯವಿತ್ತು. ಅದನ್ನು ಕೆಡವಿ ಸಣ್ಣ ಗುಡಿಯನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ. ಇಲ್ಲಿದ್ದ ಹಳೆಯ ದೇವಾಲಯದ ಶಿಲ್ಪಾವಶೇಷಗಳನ್ನು ನೆಲದಲ್ಲಿ ಹುಗಿದುರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಈ ಭಾಗದಲ್ಲಿ ಜೀರ್ಣ ಸ್ಥಿತಿಯಲ್ಲಿರುವ ಹಳೆಯ ದೇವಾಲಯಗಳನ್ನು ಕೆಡವಿ, ಅದರ ವಾಸ್ತು ಮತ್ತು ಮೂರ್ತಿಶಿಲ್ಪಾವಶೇಷಗಳನ್ನು ನೆಲದಲ್ಲಿ ಹುಗಿದು, ಅದರ ಮೇಲೆ ಹೊಸ ದೇವಾಲಯವನ್ನು ನಿರ್ಮಿಸುವುದು ಸಾಮಾನ್ಯವಾಗಿದೆ.

ಗರ್ಭಗೃಹದಲ್ಲಿ ಇತ್ತೀಚಿನ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ.

೩೭

ಊರು ಬುಡರಸಿಂಗಿ
ಸ್ಥಳ ಊರ ನಡುವೆ
ಸ್ಮಾರಕ ಆಂಜನೇಯ ದೇವಾಲಯ
ಅಭಿಮುಖ ದಕ್ಷಿಣ
ಕಾಲ ಕ್ರಿ.ಶ. ೧೬ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಬುಡರಸಿಂಗಿ ಗ್ರಾಮದ ಆಂಜನೇಯ ದೇವಾಲಯ ಈ ಭಾಗದಲ್ಲಿ ಪ್ರಸಿದ್ಧವಾದುದು. ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿಂದ ಕೂಡಿದ ದೇವಾಲಯವಿದು. ಗರ್ಭಗೃಹದ ದ್ವಾರ ಕಮಾನಿನ ಅಲಂಕರಣದಿಂದ ಕೂಡಿದೆ. ಅಂತರಾಳದ ದ್ವಾರವನ್ನು ಕಲ್ಯಾಣ ಚಾಲುಕ್ಯರ ಶೈಲಿಯ ದ್ವಾರಗಳನ್ನು ಅನುಕರಿಸಿ ರಚಿಸಲಾಗಿದೆ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ರಚನೆಯನ್ನು ಮತ್ತು ಲಲಾಟಬಿಂಬದಲ್ಲಿ ಭಕ್ತಾಂಜನೇಯನ ಉಬ್ಬುಶಿಲ್ಪವನ್ನು ಕಾಣಬಹುದು. ಸುಮಾರು ದಶಕಗಳ ಹಿಂದೆ ಸಭಾಮಂಟಪವನ್ನು ಗಾರೆಯಲ್ಲಿ ನಿರ್ಮಿಸಿದೆ. ಮಧ್ಯದಲ್ಲಿರುವ ಭಾರಿಗಾತ್ರದ ನಾಲ್ಕು ಕಂಬಗಳು ಚಾವಣಿಯನ್ನು ಹೊತ್ತಿನಿಂತಿವೆ. ಕಲ್ಲು ಮತ್ತು ಗಾರೆಗಳಿಂದ ನಿರ್ಮಿಸಿರುವ ಕಂಬಗಳು ದುಂಡಾಗಿವೆ. ತುದಿಯಲ್ಲಿ ನೆಲ್ಲಿಕಾಯಿಯ ಅಲಂಕರಣವನ್ನು ಹೊಂದಿವೆ. ಚಾವಣಿಯಲ್ಲಿ ಮರ, ಕಬ್ಬಿಣದ ತೊಲೆ ಹಾಗೂ ಕಬ್ಬಿಣದ ಹಳಿಗಳನ್ನು ಅಳವಡಿಸಿ ಮೇಲೆ ಗಾರೆಗಚ್ಚು ಮಾಡಿದ್ದಾರೆ. ಸುತ್ತಲಿನ ಗೋಡೆಗೆ ಹೊಂದಿಕೊಂಡಂತೆ ಅಲ್ಲಲ್ಲಿ ಗೋಡೆಕಂಬಗಳನ್ನು ನಿರ್ಮಿಸಿದ್ದಾರೆ. ಸಭಾಮಂಟಪಕ್ಕೆ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ದ್ವಾರಗಳಿವೆ. ಹೊರಭಿತ್ತಿಯಲ್ಲಿ ಆಂಜನೇಯನ ವಿವಿಧ ಶಿಲ್ಪಗಳನ್ನು ಅಳವಡಿಸಿದ್ದಾರೆ. ಗರ್ಭಗೃಹದ ಮೇಲೆ ಪಿರಮಿಡ್ಡಿನಾಕಾರದ ಕಲ್ಲಿನ ಶಿಖರವನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿರುವ ಆಂಜನೇಯ ಶಿಲ್ಪವು ಸುಮಾರು ೮ ಅಡಿ ಎತ್ತರವಿದ್ದು, ಕಪ್ಪುಶಿಲೆಯದು. ಇಡೀ ಶಿಲ್ಪಕ್ಕೆ ಕೀರ್ತಿಮುಖದಿಂದ ಕೂಡಿದ ಕಮಾನಿನ ಅಲಂಕರಣವಿದೆ. ಸಭಾಮಂಟಪದ ಗೋಡೆಯಲ್ಲಿ ನಾಗಬಂಧದ ಉಬ್ಬುಶಿಲ್ಪಗಳಿವೆ. ಹೊರಗೆ ಶಾಸನವನ್ನು ಒಳಗೊಂಡ ನಂದಿಕಂಬವನ್ನು ನಿಲ್ಲಿಸಲಾಗಿದೆ. ಸೊನ್ನಲಿಗೆಯ ಕಪಿಲಸಿದ್ಧ ಮಲ್ಲಿಕಾರ್ಜುನನಿಗೆ ಕ್ರಿ.ಶ. ೧೨೫೮ ರಲ್ಲಿ ಉಚ್ಚಂಗಿ ಗ್ರಾಮವನ್ನು ದಾನ ಮಾಡಿದ ವಿಷಯವಿದೆ (ಎಇ x x x vi :         ಪು. ೧೬೪-೬೬).

ಕಟ್ನೂರಿನ ಸರ್ವೇ ನಂಬರ್‌ ೪ ರ ಜಮೀನಿನಲ್ಲಿರುವ ಸುಮಾರು ೧೬ನೆಯ ಶತಮಾನದ ಶಾಸನವೊಂದು, ಬುಡರಸಿಂಗಿ ಹನುಮಂತದೇವರ ಹೊಲವನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ     ಧಾ ಜಿ ಶಾ ಸೂ). ಇದರಿಂದ ಪ್ರಸ್ತುತ ದೇವಾಲಯದ ಅಸ್ತಿತ್ವವನ್ನು ಕ್ರಿ.ಶ. ೧೬ನೆಯ ಶತಮಾನದಿಂದ ಗುರುತಿಸಬಹುದು.

೩೮

ಊರು ಬುಡರಸಿಂಗಿ
ಸ್ಥಳ ಊರ ನಡುವೆ
ಸ್ಮಾರಕ ಸಿದ್ಧಾರಾಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಆರ್.ಸಿ.ಸಿ.
ಸ್ಥಿತಿ ಉತ್ತಮ
ಸಂರಕ್ಷಣೆ

ಹೊಸದಾಗಿ ನಿರ್ಮಿಸಿರುವ ದೇವಾಲಯವಿದು. ಮುಖ್ಯ ಗರ್ಭಗೃಹದಲ್ಲಿರುವ ಪಿರಾಮಿಡ್‌ ಆಕೃತಿಯ ರಚನೆಯನ್ನು ಸಿದ್ಧರಾಮೇಶ್ವರನ ಗದ್ದುಗೆ ಎಂದು ಪೂಜಿಸುತ್ತಿದ್ದಾರೆ. ಮತ್ತೊಂದು ಗರ್ಭಗೃಹದಲ್ಲಿಟ್ಟಿರುವ ಮಹಾವೀರನ ವಿಗ್ರಹ ಇತ್ತೀಚೆಗೆ ಭೂಮಿಯಲ್ಲಿ ದೊರೆತಿದ್ದು, ತುಂಬಾ ಸುಂದರವಾದ ಶಿಲ್ಪ. ಇದರ ಪೀಠದಲ್ಲಿ ಕನ್ನಡ ಶಾಸನವಿದೆ. ಶಿಲ್ಪದ ಸುತ್ತಲೂ ೨೪ ತೀರ್ಥಂಕರರ ಸೂಕ್ಷ್ಮ ಶಿಲ್ಪಗಳು, ತಲೆಯ ಮೇಲೆ ಮುಕ್ಕೊಡೆ, ಅದರ ಮೇಲೆ ಸೂಕ್ಷ್ಮ ಜಿನಬಿಂಬ ಹಾಗೂಕಿರ್ತಿಮುಖದ ಅಲಂಕರಣವುಂಟು. ಪಾದದ ಇಕ್ಕೆಲಗಳಲ್ಲಿ ಯಕ್ಷಯಕ್ಷಿಯರಿದ್ದಾರೆ. ಹೊರಭಾಗದಲ್ಲಿ ಸಿಂಹಲಾಂಛನದ ಪಾಣಿಪೀಠವಿದ್ದು, ಮಹಾವೀರನಿಗೆ ಸಂಬಂಧಿಸಿದೆ. ಮಹಾವೀರನ ಶಿಲ್ಪವನ್ನು ಊರಿಗೆ ಹೊಂದಿಕೊಂಡಂತಿರುವ ಗುಡ್ಡದಲ್ಲಿ ಬೋರಲಾಗಿ ಹುಗಿಯಲಾಗಿತ್ತು. ಇತ್ತೀಚೆಗೆ ಮಳೆಬಿದ್ದ ಸಂದರ್ಭದಲ್ಲಿ ಅದು ಬೆಳಕಿಗೆ ಬಂದಿತು. ಶಿಲ್ಪ ನಯನ ಮನೋಹರವಾಗಿದ್ದು, ಪ್ರಮಾಣಬದ್ಧವಾಗಿದೆ. ಇದೇ ಗುಡ್ಡದಲ್ಲಿ ದೊರೆತ ಗಣಪತಿಯ ಶಿಲ್ಪವನ್ನು ಸಹ ತಂದು ದೇವಾಲಯದ ಮುಂಭಾಗದಲ್ಲಿಟ್ಟಿದ್ದಾರೆ.

ಅದರಗುಂಚಿ ಗ್ರಾಮದ ಸವೇ ನಂ. ೫೭ರ ಜಮೀನಿನಲ್ಲಿರುವ ಜೈನಶಾಸನ, ಕ್ರಿ.ಶ. ೧೩ನೆಯ ಶತಮಾನಕ್ಕೆ ಸೇರುವುದು. ಶಾಸನವು ಯಾಪನೀಯ ಸಂಘದ ಕಾನೂರ ಗಣಕ್ಕೆ ಸಂಬಂಧಿಸಿದ ಉಚ್ಚಂಗಿ ಬಸದಿಯನ್ನು ಮತ್ತು ಅದರ ಹೊಲವನ್ನು ಉಲ್ಲೇಖಿಸುತ್ತದೆ. (ಕಲಬುರ್ಗಿ : ಧಾ ಜಿ ಶಾ ಸೂ). ಉಚ್ಚಂಗಿ ಎಂಬುದು ಇಂದಿನ ಬುಡರಸಿಂಗಿ ಗ್ರಾಮದ ಪ್ರಾಚೀನ ಹೆಸರು. ಈ ಊರಿನಲ್ಲಿ ಜೈನಬಸದಿ ಇದ್ದು, ಹಾಳಾಗಿದೆ. ಮೇಲೆ ಹೇಳಿದ ಜೈನಶಿಲ್ಪವು ಶಾಸನೋಕ್ತ ಉಚ್ಚಂಗಿ ಬಸದಿಗೆ ಸಂಬಂಧಿಸಿದೆ. ಇದರಿಂದ ಬುಡರಸಿಂಗಿಯು ಪ್ರಾಚೀನ ಜೈನಕೇಂದ್ರವಾಗಿರುವುದು ಸ್ಪಷ್ಟವಾಗುತ್ತದೆ.

೩೯

ಊರು ಬೆಂಗೇರಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹುಬ್ಬಳ್ಳಿ ನಗರ ವ್ಯಾಪ್ತಿಗೆ ಸೇರುವ ಬೆಂಗೇರಿಯು ಕಲ್ಮೇಶ್ವರ ದೇವಾಲಯವು ಗರ್ಭಗೃಹ ಮತ್ತು ಆರ್.ಸಿ.ಸಿ. ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಮೇಲೆ ನಾಗರಶೈಲಿಯ ಶಿಖರವನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಹಳೆಯ ಸಣ್ಣ ಲಿಂಗವಿದೆ. ಮುಂಭಾಗದಲ್ಲಿ ವಾಮನಮುದ್ರೆಕಲ್ಲಿದೆ. ಇಲ್ಲಿನ ಮಾರುತಿ ದೇವಾಲಯದ ಆವರಣದಲ್ಲಿ ಭಗ್ನಗೊಂಡಿರುವ ವೀರಗಲ್ಲುಗಳಿವೆ.

೪೦

ಊರು ಬೆಳಗಲಿ
ಸ್ಥಳ ಊರ ಹೊರಗೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಲು ಮತ್ತು ಮಣ್ಣುಗಳಿಂದ ನಿರ್ಮಿಸಿರುವ ಕೊಠಡಿಯೇ ದೇವಾಲಯ. ಬಹುಶಃ ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಹಾಳಾದ ನಂತರ ಈಗಿನ ಗುಡಿಯನ್ನು ಸುಮಾರು ನೂರು ವರ್ಷದ ಹಿಂದೆ ನಿರ್ಮಿಸಿರಬೇಕು. ಕೊಠಡಿಯ ದ್ವಾರವು ಗಿಡ್ಡಗಿದ್ದು, ಶಿಲಾರಚನೆಯದು.

ಒಳಭಾಗದಲ್ಲಿ ಪ್ರಾಚೀನ ಲಿಂಗದ ಬ್ರಹ್ಮಭಾಗದ ಮೇಲೆ ಇತ್ತೀಚಿನ ಲಿಂಗವನ್ನಿಟ್ಟಿದ್ದಾರೆ. ಮುಂದಿರುವ ಹೊಲದಲ್ಲಿ ಗಜಲಕ್ಷ್ಮಿಯ ಶಿಲ್ಪ ಬಿದ್ದಿದೆ. ಹೀಗಾಗಿ ಇಲ್ಲಿ ಹಳೆಯ ದೇವಾಲಯ ಇತ್ತೆಂದು ತಿಳಿಯಬಹುದು.

೪೧

ಊರು ಬ್ಯಾಹಟ್ಟಿ
ಸ್ಥಳ ಜಾಡಿಗೇರಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ದ್ವಾರಗಳು ರಚನೆಯಲ್ಲಿ ಸರಳವಾಗಿವೆ. ನವರಂಗದ ನಡುವಿನ ಕಂಬಗಳು ಚೌಕ ಮತ್ತು ಬಹುಮುಖ ರಚನೆಯ ಅಲಂಕರಣವನ್ನು ಹೊಂದಿವೆ. ಮುಂದಿರುವ ಪ್ರವೇಶ ಮಂಟಪ ಮಾಳಿಗೆಶೈಲಿಯಲ್ಲಿದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗ ಮತ್ತು ಇತ್ತೀಚಿನ ನಂದಿಶಿಲ್ಪಗಳಿವೆ. ಅಂತರಾಳದಲ್ಲೂ ನಂದಿಶಿಲ್ಪವನ್ನು ಕಾಣಬಹುದು. ದೇವಾಲಯದ ಬಲಪಕ್ಕದಲ್ಲಿರುವ ವಿಶಾಲವಾದ ಹಜಾರದಲ್ಲಿ ಸವೆದಿರುವ ಪ್ರಾಚೀನ ಲಿಂಗಗಳು ಮತ್ತು ನಂದಿಶಿಲ್ಪ ಕಂಡುಬರುತ್ತವೆ. ಹೊರಗೆ ಶಿಥಿಲವಾದ ನಂದಿಶಿಲ್ಪವಿದೆ.

ಈ ಊರಿನಲ್ಲಿ ಶಾಸನ ಮತ್ತು ವೀರಗಲ್ಲುಗಳು ಹೆಚ್ಚು ಸಂಖ್ಯೆಯಲ್ಲಿವೆ. ಗೋವೆ ಕದಂಬ ಪೆರ್ಮಾಡಿ ದೇವನ ಕ್ರಿ.ಶ.೧೧೬೬ರ ಶಾಸನವು ಗ್ರಾಮೇಶ್ವರ ದೇವರಿಗೆ ಬಿಟ್ಟ ಭೂದಾನವನ್ನು ಉಲ್ಲೇಖಿಸಿದೆ (ಕಲಬುರ್ಗಿ    ಧಾ ಜಿ ಶಾ ಸೂ). ಕಲ್ಯಾಣ ಚಾಲುಕ್ಯ ಕ್ರಿ. ಶ. ೧೦೩೭ ರ ಶಾಸನವೊಂದು, ಜಿನಾಲಯಕ್ಕೆ ತೆರಿಗೆ ದಾನ ಮಾಡಿದ ವಾವನರಸ ಮತ್ತು ಹನ್ನೆರಡು ಗಾವುಂಡರನ್ನು ಪ್ರಸ್ತಾಪಿಸಿದೆ (ಅದೇ). ಉಳಿದಂತೆ ಶಾಸನಗಳು ಹೊಯ್ಸಳ ಮತ್ತು ಸೇವುಣರ ಕಾಲಕ್ಕೆ ಸೇರಿದ್ದು, ಬ್ರಾಹ್ಮಣರಿಗೆ ನೀಡಿದ ದಾನಗಳನ್ನು ಕುರಿತಿವೆ. ಬಹುಶಃ ಬ್ಯಾಹಟ್ಟಿಯ ಕಲ್ಮೇಶ್ವರ ದೇವರ ಮೂಲಹೆಸರು ಗ್ರಾಮೇಶ್ವರ ಎಂದಿರಬಹುದು.

೪೨

ಊರು ಭಂಡಿವಾಡ
ಸ್ಥಳ ಶಾಲೆಯ ಹತ್ತಿರ
ಸ್ಮಾರಕ ಕಲ್ಲಪ್ಪನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿಂದ ಕೂಡಿರುವ ದೇವಾಲಯದಲ್ಲಿ ಹೊಸದಾಗಿ ಲಿಂಗವೊಂದನ್ನು ಪ್ರತಿಷ್ಠಾಪಿಸಿದ್ದಾರೆ. ಹೊರಭಾಗದಲ್ಲಿ ಹಳೆಯ ಲಿಂಗ ಮತ್ತು ಭಗ್ನ ನಂದಿಶಿಲ್ಪಗಳು ಕಂಡುಬರುತ್ತವೆ. ಈ ಶಿಲ್ಪಾಶೇಷಗಳಿಂದ ಇಲ್ಲಿ ಪ್ರಾಚೀನ ದೇವಾಲಯವಿತ್ತೆಂದು ವಿದಿತವಾಗುತ್ತದೆ.

೪೩

ಊರು ಭಂಡಿವಾಡ
ಸ್ಥಳ ಊರ ನಡುವೆ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಾಣಗೊಂಡ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ಕಟ್ಟಡವನ್ನು ಸಿಮೆಂಟಿನಿಂದ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಸುಮಾರು ೧.೫ ಅಡಿ ಎತ್ತರದ ವೇದಿಕೆಯ ಮೇಲೆ ಪ್ರಾಚೀನ ಲಿಂಗವನ್ನಿಡಲಾಗಿದೆ. ಹಿಂಭಾಗದ ವೇದಿಕೆಯ ಮೇಲೆ ಸಾಲಾಗಿ ಇತ್ತೀಚಿನ ಗಣಪತಿ, ಕಾಳಿ ಮತ್ತು ವೀರಭದ್ರರ ಶಿಲ್ಪಗಳಿವೆ. ಸಭಾಮಂಟಪದಲ್ಲಿರುವ ನಂದಿಶಿಲ್ಪವು ಸಹ ಇತ್ತೀಚಿನದು.

ಈ ದೇವಾಲಯದ ಹತ್ತಿರ ಕಲ್ಯಾಣ ಚಾಲುಕ್ಯರ ಕಾಲದ ಶಾಸನವೊಂದಿದ್ದು, ಅಸ್ಪಷ್ಟವೆನ್ನಲಾಗಿದೆ.

೪೪

ಊರು ಮಂಟೂರು
ಸ್ಥಳ ಗುಡಿ ಓಣಿ
ಸ್ಮಾರಕ ವಲ್ಲಭೇಶ್ವರ
ಅಭಿಮುಖ ಪಶ್ಚಿಮ
ಕಾಲ ಕ್ರಿ.ಶ. ೧೧ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯ ಸಂಪೂರ್ಣವಾಗಿ ನವೀಕರಣಗೊಂಡಿದೆ. ಹಳೆಯ ದೇವಾಲಯದ ವಾಸ್ತು ಭಾಗವಾಗಿ ಗರ್ಭಗೃಹದ ಹೊಸ್ತಿಲನ್ನು ಕಾಣಬಹುದು. ದೇವಾಲಯವು ಗರ್ಭಗೃಹ, ಸಭಾಮಂಟಪ, ಮುಖಮಂಟಪ ಮತ್ತು ಪ್ರವೇಶ ಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಒಳಚಾವಣಿಯಲ್ಲಿ ಗಾರೆಗುಮ್ಮಟವನ್ನು ರಚಿಸಿದ್ದಾರೆ. ಬಾಗಿಲಿಗೆ ಹಿತ್ತಾಳೆ ತಗಡಿನ ಹೊದಿಕೆಯುಂಟು. ಸಭಾಮಂಟಪದಲ್ಲಿ ಮರದ ಕಂಬಗಳಿದ್ದು, ಆರ್.ಸಿ.ಸಿ. ಚಾವಣಿ ನಿರ್ಮಿಸಲಾಗಿದೆ. ಇಲ್ಲಿನ ಗೂಡುಗಳಲ್ಲಿ ನಾಗ, ವಿಷ್ಣು, ಲಿಂಗದ ರುದ್ರಭಾಗಗಳು, ಭೈರವಿ (ಇತ್ತೀಚಿನದು) ಮೊದಲಾದ ಶಿಲ್ಪಾವಶೇಷಗಳು ಕಂಡುಬರುತ್ತವೆ. ಮುಂಭಾಗದಲ್ಲಿರುವ ಕಮಾನಿನ ಅಲಂಕರಣವಿರುವ ಪ್ರವೇಶದ್ವಾರ ಮಂಟಪವು ಒಳಭಾಗದಲ್ಲಿ ಜಗತಿಗಳನ್ನು ಹೊಂದಿದೆ.

ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಹಾಗೂ ಉತ್ಸವಮೂರ್ತಿ ಇದ್ದು, ವಿಶೇಷ ದಿನಗಳಲ್ಲಿ ಮೆರವಣಿಗೆ ಒಯ್ಯಲಾಗುವುದು. ಇವಲ್ಲದೆ ಪಲ್ಲಕ್ಕಿ, ಉಯ್ಯಾಲೆಮಣೆ, ಮರದ ಪೆಟ್ಟಿಗೆಗಳು ಮತ್ತು ನಗಾರಿ ವಸ್ತು ಅವಶೇಷಗಳು ಕಂಡುಬರುತ್ತವೆ. ಇವು ದೇವಾಲಯದಲ್ಲಿ ನಡೆಯುವ ಪೂಜೆ ಮತ್ತು ಆಚರಣೆಗಳ ಮೇಲೆ ಬೆಳಕು ಚೆಲ್ಲುತ್ತವೆ.

ಇಲ್ಲಿರುವ ಶಾಸನಗಳು ಕ್ರಿ.ಶ. ೧೧-೧೨ನೆಯ ಶತಮಾನಕ್ಕೆ ಸೇರಿವೆ. ಕಲ್ಯಾಣ ಚಾಲುಕ್ಯರ ಎರಡನೆಯ ಸೋಮೇಶ್ವರನ ಕ್ರಿ.ಶ. ೧೦೭೨ನೆಯ ಶಾಸನದಲ್ಲಿ, ಮಹಾಮಂಡಳೇಶ್ವರ ಲಕ್ಷ್ಮರಸನು ಮಂಟೂರ ರುದ್ರಶಕ್ತಿ ಪಂಡಿತನಿಗೆ ಭೂದಾನ ಮಾಡಿದನೆಂದಿದೆ. ಅಂದರೆ ಮೇಲಿನ ದೇವಾಲಯದ ಅಸ್ತಿತ್ವವನ್ನು ಕ್ರಿ.ಶ. ೧೧ನೆಯ ಶತಮಾನದಲ್ಲೇ ಗುರುತಿಸಬಹುದು. ಇಲ್ಲಿನ ಮತ್ತೊಂದು ಶಾಸನ ಜೈನಯತಿಗಳನ್ನು ಉಲ್ಲೇಖಿಸುತ್ತದೆ. ಉಳಿದ ಶಾಸನಗಳು ಅಸ್ಪಷ್ಟವಾಗಿವೆ (ಕಲಬುರ್ಗಿ : ಧಾ ಜಿ ಶಾ ಸೂ).

೪೫

ಊರು ಮಲ್ಲಿಗವಾಡ
ಸ್ಥಳ ಊರ ನಡುವೆ
ಸ್ಮಾರಕ ಸೋಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ತ್ರಿಕೂಟ ದೇವಾಲಯವಿದು. ಪ್ರಧಾನ ಗರ್ಭಗೃಹವು ಅಂತರಾಳವನ್ನು ಹೊಂದಿದ್ದು, ಉಳಿದೆರಡು ಗರ್ಭಗೃಹಗಳು ನವರಂಗಕ್ಕೆ ಹೊಂದಿಕೊಂಡಂತಿವೆ. ಗರ್ಭಗೃಹ ಮತ್ತು ಅಂತರಾಳ ದ್ವಾರಗಳು ಸರಳ ಅಲಂಕರಣೆಯವು. ನವರಂಗದಲ್ಲಿ ದೇವಕೋಷ್ಠಗಳಿವೆ. ನಡುವಿನ ಕಂಬಗಳು ಚೌಕರಚನೆಯಾಗಿದ್ದು, ನಡುವೆ ಪಟ್ಟಿಕಾ ಅಲಂಕರಣವಿದೆ. ಬೋದಿಗೆಗಳು ಸಹ ಅಲಂಕೃತಗೊಂಡಿವೆ. ನವರಂಗದ ಪ್ರವೇಶದ್ವಾರದಲ್ಲಿ ಅರ್ಧಕಂಬಗಳ ರಚನೆಯನ್ನು ಕಾಣಬಹುದು. ಹೊರಭಾಗದಲ್ಲಿ ಅಧಿಷ್ಠಾನವನ್ನು ಮುಚ್ಚಿ ಕಲ್ಲಿನ ವೇದಿಕೆಯನ್ನು ನಿರ್ಮಿಸಿದ್ದಾರೆ. ಗೋಡೆ ಸಪಾಟಾಗಿದ್ದು, ಯಾವುದೇ ಅಲಂಕರಣವಿಲ್ಲ. ಗೋಡೆಯ ತುದಿಯಲ್ಲಿ ಕಪೋತ ಮತ್ತು ಕೈಪಿಡಿಯ ರಚನೆಗಳಿವೆ. ಗರ್ಭಗೃಹದ ಮೇಲಿರುವ ಕದಂಬನಾಗರಶೈಲಿಯ ಶಿಖರವು ಸುಖನಾಸವನ್ನು ಹೊಂದಿದೆ. ಹಾಗೂ ಶಿಖರದ ತುದಿಯಲ್ಲಿ ಕಲ್ಲಿನ ಕಳಸವಿದೆ.

ಪ್ರಧಾನ ಗರ್ಭಗೃಹದಲ್ಲಿ ಲಿಂಗವಿದ್ದು, ಪೂಜೆಗೊಳ್ಳುತ್ತಿದೆ. ಉಳಿದಂತೆ ದಕ್ಷಿಣದ ಗರ್ಭಗೃಹದಲ್ಲಿ ಲಿಂಗದ ರುದ್ರಭಾಗವಿದ್ದು, ಉತ್ತರದ ಗರ್ಭಗೃಹದಲ್ಲಿ ಯಾವುದೇ ಶಿಲ್ಪವಿಲ್ಲ. ದೇವಾಲಯ ಪ್ರವೇಶದ ಜಗತಿಯಲ್ಲಿ ಭಗ್ನಗೊಂಡ ಸಿಂಹಶಿಲ್ಪವಿದ್ದು, ಹೊಯ್ಸಳ ಲಾಂಛನ ಶಿಲ್ಪಕ್ಕೆ ಸಂಬಂಧಿಸಿದೆ. ಗಜಲಕ್ಷ್ಮಿ ಹಾಗೂ ಗೋಸಾಸದ ಶಿಲ್ಪಗಳು ಇಲ್ಲಿವೆ.

ಇಲ್ಲಿನ ಶಾಸನಗಳು ಕ್ರಿ.ಶ. ೧೨ನೆಯ ಶತಮಾನಕ್ಕೆ ಸೇರಿದ್ದು, ಪ್ರಕಟಗೊಂಡಿವೆ (ಕಇ v : ೧೦೨).