೪೬

ಊರು ಮಾವನೂರು
ಸ್ಥಳ ಹಳ್ಳದ ಬಳಿ
ಸ್ಮಾರಕ ಶಂಕರಲಿಂಗ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರಿಂದ ಪೂರ್ವಕ್ಕೆ ಹಳ್ಳದಾಚೆ ಇರುವ ದೇವಾಲಯವಿದು. ಜೀರ್ಣೋದ್ಧಾರಗೊಂಡಿರುವ ದೇವಾಲಯವು ಗರ್ಭಗೃಹ ಮತ್ತು ಅಂತರಾಳಗಳನ್ನು ಹೊಂದಿದೆ. ಗರ್ಭಗೃಹ ದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪದ ರಚನೆಯುಂಟು. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವನ್ನು ಕಾಣಬಹುದು. ದೇವಾಲಯದ ಹೊರಮೈಯನ್ನು ಮಣ್ಣಿನಿಂದ ಮುಚ್ಚಲಾಗಿದೆ. ಮುಂಭಾಗದಲ್ಲಿ ಸಿಮೆಂಟ್‌ಗೋಡೆಯನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿರುವ ಲಿಂಗ ಒರಟುರಚನೆಯದು. ಅದರ ಸುತ್ತಲೂ ಸಿಮೆಂಟ್‌ತುಂಬಿ, ಹೊರಮೈಗೆ ಸಿರಾಮಿಕ್‌ಬಿಲ್ಲೆಗಳನ್ನು ಅಂಟಿಸಿ ಗದ್ದಿಗೆಯ ರೀತಿ ನಿರ್ಮಿಸಿದ್ದಾರೆ. ಅಂತರಾಳ ಭಾಗದಲ್ಲಿ ಭೈರವ (ಕುಳಿತ), ಭೈರವ (ನಿಂತ), ನಾಗ ಮುಂತಾದ ಶಿಲ್ಪಗಳು ಕಂಡುಬರುತ್ತವೆ. ಹೊರಭಾಗದಲ್ಲಿರುವ ನಂದಿಗೆ ಹೊಸದಾಗಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ. ನಂದಿ ಬೃಹತ್‌ಗಾತ್ರದಲ್ಲಿದ್ದು, ಆಕರ್ಷಕವಾಗಿದೆ. ಮತ್ತಿತರ ಶಿಲ್ಪಾವಶೇಷಗಳು ಅಲ್ಲಲ್ಲಿ ಬಿದ್ದಿವೆ.

೪೭

ಊರು ರಾಯನಾಳ
ಸ್ಥಳ ಪಶು ಆಸ್ಪತ್ರೆ ಮುಂಭಾಗ
ಸ್ಮಾರಕ ಈಶ್ವರ
ಅಭಿಮುಖ ಉತ್ತರ
ಕಾಲ ಕ್ರಿ.ಶ. ೧೧-೧೨ ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯ ಸಂಪೂರ್ಣವಾಗಿ ನಶಿಸಿಹೋಗಿದೆ. ದೇವಾಲಯಕ್ಕೆ ಸಂಬಂಧಿಸಿದ ಲಿಂಗ ಮತ್ತಿತರ ಶಿಲ್ಪಾವಶೇಷಗಳು ಮರದ ಕೆಳಗೆ ಕಂಡುಬರುತ್ತವೆ.

೪೮

ಊರು ವರೂರು
ಸ್ಥಳ ಊರ ಹೊರಗೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ಕಟ್ಟಿರುವ ಒಂದೇ ಕೊಠಡಿಯುಳ್ಳ ದೇವಾಲಯವಿದು. ಕೊಠಡಿಯಲ್ಲಿ ಪ್ರಾಚೀನವೆನ್ನಬಹುದಾದ ಲಿಂಗವಿದೆ. ಹೊರಭಾಗದಲ್ಲಿ ಹಳೆಯ ದೇವಾಲಯಕ್ಕೆ ಸಂಬಂಧಿಸಿದ ನಂದಿ ಮತ್ತಿತರ ಭಗ್ನ ಶಿಲ್ಪಾವಶೇಷಗಳು ಕಂಡುಬರುತ್ತವೆ. ಇದರಿಂದ ಇಲ್ಲಿ ಹಳೆಯ ದೇವಾಲಯವಿದ್ದು, ಅದು ನಶಿಸಿ ಹೋಗಿರುವ ಬಗ್ಗೆ ಸ್ಪಷ್ಟ ಸೂಚನೆಗಳು ದೊರೆಯುತ್ತವೆ.

೪೯

ಊರು ವರೂರು
ಸ್ಥಳ ಊರ ನಡುವೆ
ಸ್ಮಾರಕ ಸಿದ್ಧರಾಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಭಗ್ನ ಸ್ಥಿತಿಯಲ್ಲಿದ್ದು, ಗಿಡಗಂಟಿಗಳಿಂದ ಆವೃತ್ತವಾಗಿದೆ. ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ದ್ವಾರಗಳು ರಚನೆಯಲ್ಲಿ ಸರಳವಾಗಿವೆ. ನವರಂಗದ ಕಂಬಗಳು ಚೌಕ ಮತ್ತು ಅಷ್ಠಮುಖದ ರಚನೆಯವು. ಗೋಡೆಯಲ್ಲಿ ದೇವಕೋಷ್ಠಗಳಿವೆ. ದೇವಾಲಯದ ಹೊರ ಮತ್ತು ಮೇಲ್ಭಾಗದಲ್ಲಿ ಮಣ್ಣನ್ನು ತುಂಬಲಾಗಿದೆ.

ಗರ್ಭಗೃಹದಲ್ಲಿ ಅರ್ಧಅಡಿ ಎತ್ತರದ ಪೀಠವಿದ್ದು, ಅದರ ಮೇಲೆ ಪಿರಮಿಡ್ಡಿನಾಕಾರದ ರಚನೆಯುಂಟು. ಬಹುಶಃ ಇದು ಗುರುಗಳೊಬ್ಬರ ಗದ್ದಿಗೆ ಇರಬಹುದು? ನವರಂಗದ ದೇವಕೋಷ್ಠದಲ್ಲಿ ಗಣಪತಿಯ ಶಿಲ್ಪವಿದೆ. ಇನ್ನೊಂದರಲ್ಲಿರುವ ದೇವಿಯ ರುಂಡಶಿಲ್ಪವಿದ್ದು, ಬಾಯಲ್ಲಿ ಕೋರೆಹಲ್ಲುಗಳನ್ನು ಹೊಂದಿದೆ. ಉಳಿದಂತೆ ಯಾವುದೇ ಶಿಲ್ಪಾವಶೇಷಗಳು ಕಂಡುಬರುವುದಿಲ್ಲ.

೫೦

ಊರು ಶಿರಗುಪ್ಪಿ
ಸ್ಥಳ ನಲುಡಿಹನುಮಪ್ಪ ಗುಡಿ
ಸ್ಮಾರಕ ಅರಳಿಕಟ್ಟೆ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಊರಿನ ನಡುವೆ ಇರುವ ನಲುಡಿಹನುಮಪ್ಪ ದೇವಾಲಯದ ಮುಂಭಾಗದಲ್ಲಿರುವ ಅರಳಿಕಟ್ಟೆಯಲ್ಲಿ ಪ್ರಾಚೀನ ಶಿಲ್ಪಾವಶೇಷಗಳನ್ನು ಇಡಲಾಗಿದೆ. ಸುಮಾರು ೧೧-೧೨ನೆಯ ಶತಮಾನಕ್ಕೆ ಸೇರುವ ಈ ಶಿಲ್ಪಾವಶೇಷಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದ್ದು, ಶಿವಾಲಯವೊಂದಕ್ಕೆ ಸಂಬಂಧಿಸಿವೆ. ಈ ಶಿಲ್ಪಾವಶೇಷಗಳಲ್ಲಿ ಭೈರವಶಿಲ್ಪ, ಲಿಂಗಗಳು, ಯೋನಿಪೀಠ, ನಂದಿ, ನಾಗ ಮತ್ತು ಶಾಸನದ ತುಂಡು ಪ್ರಮುಖವಾಗಿವೆ. ಇವುಗಳಲ್ಲಿ ಪಾಣಿಪೀಠದ ಮೇಲಿರುವ ಭೈರವನ ಶಿಲ್ಪ ಮನಮೋಹಕವಾದುದು. ಸುಮಾರು ೩.೫ ಅಡಿ ಎತ್ತರದ ಈ ಶಿಲ್ಪವು ಕೈಗಳಲ್ಲಿ ಕೊಡಲಿ, ತ್ರಿಶೂಲ, ಖಡ್ಗ, ಬಾಣ, ಡಮರು, ಪಾಶಾಂಕುಶ ಮತ್ತು ಬಟ್ಟಲುಗಳನ್ನು ಹಿಡಿದು ತ್ರಿಭಂಗಿಯಲ್ಲಿ ನಿಂತಿದೆ. ಶಿಲ್ಪದ ಒಂದು ಕೈ ಭಗ್ನಗೊಂಡಿದೆ. ಇಕ್ಕೆಲಗಳಲ್ಲಿ ನಾಗರಾಜ, ಭೂತಪ್ರೇತಗಳು, ನಾಯಿ ಮತ್ತು ರುಂಡಶಿಲ್ಪಗಳನ್ನು ಬಿಡಿಸಲಾಗಿದೆ. ಪೀಠದಲ್ಲಿ ನಂದಿ, ಶವ ಮತ್ತು ಪ್ರೇತಗಳ ಸೂಕ್ಷ್ಮ ಕೆತ್ತನೆಯನ್ನು ಕಾಣಬಹುದು. ನಗ್ನ ಮೂರ್ತಿಯು ಕೆದರಿದ ಜಟೆಯೊಂದಿಗೆ ರುಂಡಮಾಲೆಯಿಂದ ಕೂಡಿದ ಉಪವೀತ, ಕಂಠಾಭರಣ, ನಡುಪಟ್ಟಿ, ಬಳೆ, ಕಡಗ, ತೋಳ್ಬಂದಿ ಮೊದಲಾದ ಆಭರಣಗಳಿಂದ ಅಲಂಕೃತಗೊಂಡು, ಹೊಯ್ಸಳರ ಮದನಿಕೆಯರನ್ನು ಮೀರಿನಿಲ್ಲುವ ಅಪೂರ್ವ ಶಿಲ್ಪವಿದು. ಅಂಗಾಂಗ ಪ್ರಮಾಣ ಬದ್ಧತೆಯನ್ನು ಸಾಧಿಸಲಾಗಿದೆ. ಬಹುಶಃ ಭೈರವನು ಇಲ್ಲಿ ಪ್ರಧಾನವಾಗಿ ಪೂಜೆಗೊಳ್ಳುತ್ತಿದ್ದನೆಂದು ಗ್ರಹಿಸಬಹುದು.

೫೧

ಊರು ಶೆರವಾಡ
ಸ್ಥಳ ಊರ ನಡುವೆ
ಸ್ಮಾರಕ ಮೈಲಾರಲಿಂಗಪ್ಪನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ದೇವಾಲಯ ಇತ್ತೀಚಿನದು. ಈ ದೇವಾಲಯದ ಹೊರಭಾಗದಲ್ಲಿರುವ ಚತುರ್ಮುಖ ಶಿಲ್ಪ ಗಮನಾರ್ಹವಾಗಿದೆ. ಸ್ಥಳೀಯರು ಗ್ವಾಲಕವ್ವ ಎಂದು ಕರೆಯುತ್ತಾರೆ. ಜಟಾಮುಕುಟವಿರುವ ಶಿಲ್ಪದ ಕಿವಿಯಲ್ಲಿ ದೊಡ್ಡ ಆಭರಣವನ್ನು ಬಿಡಿಸಿದೆ. ದಪ್ಪನಾದ ಕಲ್ಲಿನ ತುದಿಭಾಗದಲ್ಲಿ ಸುಮಾರು ೧.೫ ಅಡಿ ಎತ್ತರದಲ್ಲಿ ಬಿಡಿಸಿರುವ ಈ ಶಿಲ್ಪ ಪ್ರಾಚೀನವಾದುದು. ಈ ಶಿಲ್ಪ ಮೊದಲಿನಿಂದಲೂ ಇಲ್ಲೆ ಇರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ವಾಸ್ತವವಾಗಿ ಇದು ಚತುರ್ಮುಖ ಶಿವನ ಶಿಲ್ಪವಾಗಿದ್ದು, ಹಣೆಭಾಗದಲ್ಲಿ ಕಣ್ಣನ್ನು ಬಿಡಿಸಿದೆ. ಹೀಗಾಗಿ ಇಲ್ಲಿ ಪ್ರಾಚೀನ ದೇವಾಲಯವಿದ್ದ ಸೂಚನೆಗಳು ದೊರೆಯುತ್ತವೆ. ದೇವಾಲಯ ಒಳಭಾಗದಲ್ಲಿ ಇತ್ತೀಚಿನ ಸಣ್ಣ ಶಿಲ್ಪಗಳಿವೆ. ಹೊರಗೆ ಮುಂಭಾಗದಲ್ಲಿ ಶಿಬಾರವನ್ನು ನಿರ್ಮಿಸಿದ್ದಾರೆ.

೫೨

ಊರು ಸುಳ್ಳ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ನವೀಕರಣಗೊಂಡ ದೇವಾಲಯವಿದು. ಗರ್ಭಗೃಹ, ಅಂತರಾಳ, ನವರಂಗ ಮತ್ತು ಪ್ರವೇಶ ಮಂಟಪಗಳಿಂದ ಕೂಡಿದ ದೇವಾಲಯವು ಮುಂಭಾಗದಲ್ಲಿ ಮಹಾದ್ವಾರ ಮಂಟಪವನ್ನು ಹೊಂದಿದೆ. ಗರ್ಭಗೃಹದ್ವಾರವು ಕಮಾನಿನಾಕಾರದಲ್ಲಿದ್ದು, ಬಾಗಿಲು ರಹಿತವಾಗಿದೆ. ಅಂತರಾಳದ ದ್ವಾರದಲ್ಲಿ ಮರದ ಬಾಗಿಲುವಾಡಗಳನ್ನು ಅಳವಡಿಸಿ, ತಗಡನ್ನು ಹೊದಿಸಲಾಗಿದೆ. ನವರಂಗವು ಮಾಳಿಗೆರಚನೆಯಾಗಿದ್ದು, ಮರದ ಜಂತಿ, ತೊಲೆ ಮತ್ತು ಕಂಬಗಳನ್ನು ಬಳಸಲಾಗಿದೆ. ಕಂಬಗಳನ್ನು ಸೂಕ್ಷ್ಮ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಗರ್ಭಗೃಹದ ಮೇಲೆ ಪಿರಮಿಡ್ಡಿನಾಕೃತಿಯ ಶಿಖರವಿದ್ದು, ಕಳಸವನ್ನು ಅಳವಡಿಸಿದ್ದಾರೆ.

ದೇವಾಲಯದಲ್ಲಿ ಪ್ರಾಚೀನ ಲಿಂಗವಿದ್ದು, ಪೂಜೆಗೊಳ್ಳುತ್ತಿದೆ. ಹೊರಭಾಗದಲ್ಲಿ ಭಗ್ನಗೊಂಡಿರುವ ನಂದಿ, ಕಾರ್ತಿಕೇಯ, ಉಮಾಮಹೇಶ್ವರ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ಈ ಶಿಲ್ಪಾವಶೇಷಗಳಿಂದ ಇಲ್ಲಿ ಪ್ರಾಚೀನ ಶಿವಾಲಯವಿದ್ದು, ಅದು ನಶಿಸಿದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿರುವುದು ಸ್ಪಷ್ಟವಾಗುತ್ತದೆ.

ಇಲ್ಲಿನ ಶಾಸನಗಳು ರಾಷ್ಟ್ರಕೂಟರ ಮತ್ತು ವಿಜಯನಗರ ಕಾಲಕ್ಕೆ ಸೇರಿವೆ. ದಾನಗಳನ್ನು ಉಲ್ಲೇಖಿಸುತ್ತವೆ (ಕಲಬುರ್ಗಿ : ಧಾ ಜಿ ಶಾ ಸೂ).

೫೩

ಊರು ಹಳೆಹುಬ್ಬಳ್ಳಿ
ಸ್ಥಳ ಅಸಾರಗಲ್ಲಿ
ಸ್ಮಾರಕ ಅನಂತನಾಥ ಬಸದಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಹಳೆಯ ಬಸದಿಯನ್ನು ತೆಗೆದು ಹೊಸದಾಗಿ ನಿರ್ಮಿಸಲಾಗಿದೆ. ಗರ್ಭಗೃಹ ಮತ್ತು ವಿಶಾಲವಾದ ಆರ್.ಸಿ.ಸಿ. ಸಭಾಮಂಟಪಗಳನ್ನು ಒಳಗೊಂಡಿರುವ ಬಸದಿಯು ನಗರದ ಪ್ರಮುಖ ಸ್ಮಾರಕ. ಗರ್ಭಗೃಹದ ದ್ವಾರವನ್ನು ಸಂಪೂರ್ಣವಾಗಿ ಮರದಿಂದ ರಚಿಸಿದ್ದು, ಕಲ್ಯಾಣ ಚಾಲುಕ್ಯರ ಶೈಲಿಯನ್ನು ಅನುಕರಿಸಿರುವುದು ಗಮನಾರ್ಹ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವಿದ್ದು ಲಲಾಟಬಿಂಬದಲ್ಲಿದ್ದ ಜಿನಮೂರ್ತಿಯ ಉಬ್ಬುಶಿಲ್ಪವನ್ನು ಕಾಣಬಹುದು. ಹೊರಭಾಗದಲ್ಲಿ ಮಾನಸ್ತಂಭವಿದ್ದು, ಜಿನನ ಉಬ್ಬುಶಿಲ್ಪವಿದೆ.

ಬಸದಿಯಲ್ಲಿ ಸು. ೧೨ನೆಯ ಶತಮಾನಕ್ಕೆ ಸೇರುವ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಅನಂತನಾಥ ಶಿಲ್ಪವಿದ್ದು, ಸುಮಾರು ೧೦ ಅಡಿ ಎತ್ತರವಿದೆ. ಸಭಾಮಂಟಪದ ಗೂಡಿನಲ್ಲಿ ಶಾಸನೋಕ್ತ ಬ್ರಹ್ಮದೇವರ ಶಿಲ್ಪವನ್ನು ಕಾಣಬಹುದು. ಮತ್ತೊಂದು ಗೂಡಿನಲ್ಲಿ ಕೂಷ್ಮಾಂಡಿನಿ ದೇವಿಯ ಶಿಲ್ಪವನ್ನಿಡಲಾಗಿದೆ.

ಇಲ್ಲಿನ ಬ್ರಹ್ಮದೇವರ ಪಾದಪೀಠ ಶಾಸನವು ಸುಮಾರು ೧೨ ನೆಯ ಶತಮಾನಕ್ಕೆ ಸೇರಿದ್ದು, ಬ್ರಹ್ಮೇಶ್ವರ ಪ್ರತಿಮೆಯ ದಾನವನ್ನು ಉಲ್ಲೇಖಿಸುತ್ತದೆ. ಮತ್ತೊಂದು ಜೈನವಿಗ್ರಹದ ಪಾದಪೀಠಶಾಸನವು ಸಹ ಇದೇ ಕಾಲಕ್ಕೆ ಸೇರಿದ್ದು, ಯಾಪನೀಯ ಸಂಘದ ಕಾಡೂರ ಗಣವನ್ನು ಪ್ರಸ್ತಾಪಿಸಿದೆ. ಬಸದಿಯ ಜಾಗಟೆ ಮೇಲಿರುವ ಕ್ರಿ. ಶ. ೧೮೬೩ ರ ಶಾಸನದಲ್ಲಿ, ಅನಂತನಾಥ ಬಸದಿಯ ೧೧೦೦ ವರ್ಷಗಳ ಹಿಂದಿನ ಜಾಗಟೆಯನ್ನು ಮುರಿದು ಹೊಸದಾಗಿ ಮಾಡಿಸಿದ ಬಗ್ಗೆ ಉಲ್ಲೇಖವಿದೆ. ಹುಬ್ಬಳ್ಳಿಯ ಶಾಸನವೊಂದು, ಈಗ ಮುಂಬಯಿಯ ಪ್ರಿನ್ಸ್‌ ಆಫ್‌ ವೇಲ್ಸ್‌ ವಸ್ತು ಸಂಗ್ರಹಾಲಯದಲ್ಲಿದೆ. ಇದು ಎಲೆಯ ಪೂರ್ವಳ್ಳಿಯ ೨೦೦ ಮಹಾಜನರನ್ನು ಉಲ್ಲೇಖಿಸುತ್ತದೆ. ಎಲೆಯ ಪೂರ್ವಳ್ಳಿಯು ಅಗ್ರಹಾರವಾಗಿದ್ದು, ಹುಬ್ಬಳ್ಳಿಯ ಸ್ಥಳನಾಮದ ಮೇಲೆ ಬೆಳಕು ಚೆಲ್ಲುತ್ತದೆ. ಅಂದರೆ ಪ್ರಾಚೀನ ಎಲೆಯ ಪೂರ್ವಳ್ಳಿಯು ಇಂದು ಹುಬ್ಬಳ್ಳಿ ಎಂದು ಕರೆಸಿಕೊಳ್ಳುತ್ತಿದೆ.

೫೪

ಊರು ಹೆಬಸೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಈಗ್ಗೆ ಕೆಲವು ದಶಕಗಳ ಹಿಂದೆ ನಿರ್ಮಾಣಗೊಂಡ ದೇವಾಲಯವಿದು. ದಿಂಡುಗಲ್ಲನ್ನು ಬಳಸಿ ನಿರ್ಮಿಸಿರುವ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಒಳಚಾವಣಿಯನ್ನು, ಶಿಸ್ತಾದ ಮರದ ಹಲಗೆಗಳನ್ನು ತ್ರಿಕೋನಾಕಾರವಾಗಿ ಅಳವಡಿಸಿ ಗುಮ್ಮಟಾಕಾರದಲ್ಲಿ ನಿರ್ಮಿಸಿದ್ದಾರೆ. ಭುವನೇಶ್ವರಿಯಲ್ಲಿ ಕಮಲವನ್ನು ಬಿಡಿಸಿದ್ದಾರೆ. ಇನ್ನು ಸಭಾಮಂಟಪವನ್ನು ಮಾಳಿಗೆಶೈಲಿಯಲ್ಲಿ ಕಲ್ಲಿನ ಹಲಗೆ, ಮರದ ಜಂತಿ, ತೊಲೆ ಮತ್ತು ಕಂಬಗಳನ್ನು ಬಳಸಿ ಕಟ್ಟಲಾಗಿದೆ. ಹೊರಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ದೇವಾಲಯದಲ್ಲಿರುವ ಲಿಂಗ ಸುಮಾರು ೧೧-೧೨ ಶತಮಾನದ ರಚನೆ ಎನ್ನಬಹುದು. ಸಭಾಮಂಟಪದಲ್ಲಿ ನಾಗ, ಬ್ರಹ್ಮ ಮತ್ತು ಲಿಂಗಗಳ ರುದ್ರಭಾಗಗಳು ಕಂಡುಬರುತ್ತವೆ. ಇತ್ತೀಚಿನ ನಂದಿಶಿಲ್ಪವೂ ಇದೆ. ವೀಣಾಶಿವನಿರುವ ಸಪ್ತಮಾತೃಕೆಯರ ಶಿಲ್ಪಫಲಕ ಹೊರಭಾಗದಲ್ಲಿ ಬಿದ್ದಿದೆ. ದೇವಾಲಯದ ಹಿಂಭಾಗದಲ್ಲಿ ನಂದಿಶಿಲ್ಪಗಳಿವೆ. ಊರಿನ ಆಂಜನೇಯ ದೇವಾಲಯದ ಹಿಂಭಾಗದಲ್ಲೂ ನಂದಿಶಿಲ್ಪಗಳಿವೆ. ಈ ಊರಿನ ಆಂಜನೇಯ ದೇವಾಲಯದ ಹಿಂಭಾಗದಲ್ಲಿ ಭಗ್ನಗೊಂಡಿರುವ ವೀರಗಲ್ಲು ಮತ್ತು ಜಿನಮೂರ್ತಿಯ ಶಿಲ್ಪವನ್ನು ಕಾಣುತ್ತೇವೆ. ಜಿನಮೂರ್ತಿಯು ಸುಮಾರು ಮೂರು ಅಡಿ ಎತ್ತರವಿದ್ದು, ಮುಖಭಾಗ ಸವೆದಿದೆ. ವೀರಭದ್ರ ದೇವಾಲಯದ ಎಡಭಾಗದಲ್ಲಿ ಭೈರವಿಶಿಲ್ಪವಿರುವ ಕಲ್ಲನ್ನು ನಿಲ್ಲಿಸಲಾಗಿದೆ.