ಅಂತರಾಳ : ಗರ್ಭಗೃಹದ ಮುಂದಿನ ಭಾಗ. ಗರ್ಭಗೃಹ ಮತ್ತು ನವರಂಗದ ನಡುವಿನ ಕೋಣೆ. ಸಾಮಾನ್ಯವಾಗಿ ಇಲ್ಲಿ ನಂದಿಶಿಲ್ಪಗಳನ್ನು ಇರಿಸಿರುತ್ತಾರೆ.

ಅಧಿಷ್ಠಾನ : ದೇವಾಲಯದ ಪ್ರಧಾನ ಭಾಗ. ಇದು ಗುಡಿಯ ತಳಪಾಯ. ಸಾಮಾನ್ಯವಾಗಿ ಇದು ಜಗತಿ, ಉಪಾನ, ಕುಮುದ, ಕಂಠ ಭಾಗಗಳನ್ನು ಒಳಗೊಂಡಿರುತ್ತದೆ. ಕೆಲವು ಸಂಕೀರ್ಣವಾದ ಅಧಿಷ್ಠಾನಗಳಲ್ಲಿ ಕರ್ಣ, ಪ್ರತಿಭದ್ರ, ಭದ್ರಬಾಗಗಳು ಇರುತ್ತವೆ.

ಅರ್ಧಮಂಟಪ : ದ್ವಾರವಿಲ್ಲದ ಅಂತರಾಳ ಭಾಗವನ್ನು ಅರ್ಧಮಂಟಪವೆಂದು ಕರೆಯಲಾಗಿದೆ.

ಏಕತಲ ದೇವಾಲಯ : ಪ್ರಸ್ತರದ ಮೇಲೆ ಕೂಟ, ಶಾಲ, ಶಿಖರ ಮತ್ತು ಕಲಶಗಳನ್ನು ಹೊಂದಿರುವ ದೇವಾಲಯ.

ಕಂಬ : ಇದು ಉದ್ದನೆಯ ಕಲ್ಲಿನ ದಿಂಡು. ಇದು ದೇವಾಲಯದ ಚಾವಣಿಯನ್ನು ಮತ್ತು ಅಡ್ಡತೊಲೆಗಳನ್ನು ಹೊರುತ್ತದೆ. ಚೌಕ, ವೃತ್ತ, ಅಷ್ಟಕೋನಾಕೃತಿ ಮತ್ತು ನಕ್ಷತ್ರಾಕಾರಗಳಲ್ಲಿ ಇರುತ್ತದೆ.

ಕದಂಬನಾಗರ ಶಿಖರ : ಪಿರಮಿಡ್ಡಿನ ಆಕಾರದಂತೆ ಇರುವ ತಲಗಳ ಸಮೂಹದಿಂದ ಕೂಡಿದ ಶಿಖರ.

ಕಕ್ಷಾಸನ : ರಂಗಮಂಟಪದ ಭಾಗದಲ್ಲಿ ಸುತ್ತಲೂ ಇರುವ ಕಲ್ಲಿನ ಕಟ್ಟೆ, ಒರಗಿ ಕುಳಿತುಕೊಳ್ಳಬಹುದು.

ಕಲಶ : ಶಿಖರದ ಮೇಲಿನ ಕೋನಾಕೃತಿಯ ಭಾಗ. ಇದು ಕಲ್ಲು ಅಥವಾ ಲೋಹದಿಂದ ಮಾಡಲ್ಪಟ್ಟಿರುತ್ತದೆ. ದೇವಾಲಯದ ತುತ್ತ ತುದಿಯ ಭಾಗ.

ಗರ್ಭಗೃಹ : ಗರ್ಭಗೃಹ ದೇವಾಲಯದ ಪ್ರಮುಖ ಭಾಗ. ಇದು ಕೋಣೆಯ ರಚನೆಯಾಗಿರುತ್ತದೆ. ಇಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು.

ಗೋಡೆಗಂಬ : ಇವುಗಳು ಬಿಡಿಗಂಬಗಳಾಗಿದ್ದು, ಅರ್ಧಭಾಗವು ಭಿತ್ತಿಯಲ್ಲಿ ಮುಚ್ಚಿಕೊಂಡಿರುತ್ತವೆ. ಸಾಮಾನ್ಯವಾಗಿ ನವರಂಗದಲ್ಲಿರುತ್ತವೆ. ಹಾಗೂ ಚಾವಣಿಯನ್ನು ಆಧರಿಸುತ್ತವೆ.

ತಲ : ಕೂಟ, ಶಾಲ ಮತ್ತು ಪಂಜರಗಳನ್ನು ಒಳಗೊಂಡ ಪ್ರಸ್ತರ (ಛತ್ತಿನ) ಭಾಗ.

ದೇವಕೋಷ್ಠ : ಪರಿವಾರ ದೇವತೆಗಳಿಗಾಗಿ ನಿರ್ಮಿಸಿರುವ ಪ್ರತ್ಯೇಕ ಗೂಡುಗಳು. ಇದು ಭಿತ್ತಿಯ ಒಳ ಮತ್ತು ಹೊರ ಭಾಗದಲ್ಲಿರುತ್ತದೆ. ಇದು ಚೌಕಾಕಾರವಾಗಿ ಇರುತ್ತದೆ. ಕೆಲವೆಡೆ ಮೂರ್ತಿಶಿಲ್ಪಕ್ಕನುಗುಣವಾಗಿ ಆಯಾತಾಕಾರದಲ್ಲಿಯೂ ರಚಿಸುತ್ತಾರೆ.

ದ್ರಾವಿಡ ಶಿಖರ : ದಕ್ಷಿಣ ಭಾರತದಲ್ಲಿ ಕಂಡುಬರುವ ಶಿಖರದ ಶೈಲಿ. ಇದು ಸಾಮಾನ್ಯವಾಗಿ ಗೋಲಾಕಾರ ಅಥವಾ ಷಷ್ಠಾಸ್ರ ಅಥವಾ ಅಷ್ಠಾಸ್ರ ವಿಭಜನೆ ಹೊಂದಿರುತ್ತದೆ.

ನವರಂಗ : ಅಂತರಾಳ ಮಂಟಪದ ನಂತರದ ಭಾಗವಾಗಿದೆ. ಒಂಬತ್ತು ಸಮ ಅಂಕಣಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ನಾಲ್ಕು ಬಿಡಿಕಂಬಗಳನ್ನು ಹೊಂದಿದ್ದು, ಹನ್ನೆರಡು ಗೋಡೆಗಂಬಗಳನ್ನು ಹೊಂದಿರುತ್ತದೆ.

ನಾಗರ ಶಿಖರ : ಇದು ನರ್ಮದಾ ನದಿಯ ಮೇಲಿನ ಪ್ರದೇಶಗಳಲ್ಲಿ ಕಂಡುಬರುವ ಚೌಕಾಕಾರದ ಶಿಖರ ಭಾಗ. ಕೆಲವೊಮ್ಮೆ ನೀಳವಾಗಿಯೂ ಇರುತ್ತದೆ.

ಪ್ರವೇಶ ಮಂಟಪ : ಇದು ದೇವಾಲಯದ ಪ್ರವೇಶದಲ್ಲಿರುತ್ತದೆ. ನಾಲ್ಕು ಅಥವಾ ಆರು ಕಂಬಗಳು ಇದ್ದು, ಚಾವಣಿಯನ್ನು ಆಧರಿಸಿರುತ್ತದೆ.

ಪ್ರಸ್ತರ : ಭಿತ್ತಿ ಮತ್ತು ತಳಗಳ ನಡುವಿನ ಭಾಗ.

ಭಿತ್ತಿ : ಅಧಿಷ್ಠಾನದ ಮೇಲೆ ಬರುವ ಭಾಗವೇ ಭಿತ್ತಿ ಅಥವಾ ಗೋಡೆ. ಇದನ್ನು ಕಲ್ಲು ಅಥವಾ ಇಟ್ಟಿಗೆಯನ್ನು ಬಳಸಿ ಕಟ್ಟಲಾಗುತ್ತದೆ.

ಭುವನೇಶ್ವರಿ : ನವರಂಗದ ನಾಲ್ಕು ಕಂಬಗಳ ನಡುವಿನ ಒಳಛತ್ತಿನಲ್ಲಿರುತ್ತದೆ. ತಾವರೆ ಅಥವಾ ಹೂವಿನ ಅಥವಾ ಅಲಂಕರಣವಿರುವ ಭಾಗ. ಕೆಲವು ದೊಡ್ಡ ದೇವಾಲಯಗಳಲ್ಲಿ ನವರಂಗದ ಒಂಬತ್ತು ಅಂಕಣಗಳ ಒಳಛತ್ತಿನಲ್ಲಿ ವಿವಿಧ ಅಲಂಕರಣಗಳನ್ನು ಹೊಂದಿರುತ್ತವೆ. ನವಗ್ರಹಗಳ ಉಬ್ಬುಶಿಲ್ಪ, ಅಷ್ಟದಿಕ್ಪಾಲಕರ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿರುತ್ತದೆ.

ವೇಸರ ಶಿಖರ : ಇದು ದ್ರಾವಿಡ ಮತ್ತು ನಾಗರ ಶೈಲಿಗಳ ಸಂಗಮ. ಈ ತೆರನಾದ ಶಿಖರಗಳನ್ನು ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ದೇವಾಲಯಗಳಲ್ಲಿ ಕಾಣಬಹುದಾಗಿದೆ.

ಶಿಖರ : ಇದು ಪ್ರಸ್ತರದ ಮೇಲಿನ ದುಂಡನೆಯ ಭಾಗ. ಇದು ದೇವಾಲಯದ ಮುಖ್ಯ ಅಂಗ.