೧೬

ಊರು ತಂಬೂರು
ಸ್ಥಳ ಊರ ಮುಂಭಾಗ
ಸ್ಮಾರಕ ಕಾಳಬಸವಣ್ಣನ ಗುಡಿ
ಅಭಿಮುಖ ದಕ್ಷಿಣ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ನಾಡಹೆಂಚಿನ ದೇವಾಲಯವಿದು. ಒಳಗೆ ದೊಡ್ಡ ನಂದಿಶಿಲ್ಪವಿದೆ. ಬಹುಶಃ ಈ ನಂದಿಯನ್ನು, ಉತ್ತರಾಭಿಮುಖವಾಗಿದ್ದ ಶಿವಾಲಯಕ್ಕೆ ಅಭಿಮುಖವಾಗಿ ಪ್ರತಿಷ್ಠಾಪಿಸಿದಂತೆ ಕಂಡುಬರುತ್ತದೆ. ಏಕೆಂದರೆ ಈ ದೇವಾಯದ ಮುಂಭಾಗದಲ್ಲಿ ದೇವಾಲಯವೊಂದು ನಶಿಸಿ ಹೋಗಿರುವ ಕುರುಹುಗಳು ದೊರೆಯುತ್ತವೆ. ಇವುಗಳಲ್ಲಿ ಶಿಲಾವೇದಿಕೆಯ ಮೇಲೆ ನಿಲ್ಲಿಸಿರುವ ಸುಮಾರು ೩೦ ಅಡಿ ಎತ್ತರದ ಶಿಲಾಸ್ತಂಭ ಪ್ರಮುಖವಾಗಿದೆ.

ಹೊರಭಾಗದಲ್ಲಿ ಗರುಡಲಾಂಛನವಿರುವ ಪಾಣಿಪೀಠ ಇತರ ಪಾಣಿಪೀಠಗಳು ಹಾಗೂ ಮತ್ತಿತರ ಶಿಲ್ಪಾವಶೇಷಗಳು ಚೆಲ್ಲಾಡಿವೆ.

೧೭

ಊರು ತಂಬೂರು
ಸ್ಥಳ ಊರ ನಡುವೆ
ಸ್ಮಾರಕ ಬಸವಣ್ಣನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ ಭಾ.ಪು.ಸ. ಇಲಾಖೆ

ದೇವಾಲಯವು ಸುಸ್ಥಿತಿಯಲ್ಲಿದ್ದು, ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆಯಲ್ಲಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದೆ. ಮೇಲಿನ ತೋರಣ ಫಲಕದಲ್ಲಿ ಐದು ಸಣ್ಣ ಗೂಡುಗಳಲ್ಲಿ ಕ್ರಮವಾಗಿ ಬ್ರಹ್ಮ, ಗಣಪತಿ, ಮಹೇಶ್ವರ, ಸೂರ್ಯ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳನ್ನು ಬಿಡಿಸಿದೆ. ಅರ್ಧಮಂಟಪದ ಗೋಡೆಗಂಬಗಳು ಘನಾಕೃತಿಯಲ್ಲಿದ್ದು, ಅಲಂಕಾರಿಕ ಚಿತ್ರಗಳನ್ನು ಒಳಗೊಂಡಿವೆ. ನವರಂಗದ ನಾಲ್ಕು ಕಂಬಗಳು ತಿರುಗಣೆ ಯಂತ್ರದ ರಚನೆಗಳಾಗಿವೆ. ಬಳೆಗಳ ಅಲಂಕರಣವಿರುವ ಕಂಬಗಳು ಚಿತ್ತಾಕರ್ಷಕವಾಗಿವೆ. ನವರಂಗವು ಮೇಲೆ ತಿಳಿಸಿದಂತೆ ಪೂರ್ವ ಮತ್ತು ದಕ್ಷಿಣದಲ್ಲಿ ಪ್ರವೇಶ ದ್ವಾರಗಳನ್ನು ಹೊಂದಿತ್ತು. ನವರಂಗದ ಪೂರ್ವ ಅಂಕಣದಲ್ಲಿ ಬೃಹತ್‌ನಂದಿಶಿಲ್ಪವಿದ್ದು, ಜನರ ಭಕ್ತಿ ಮತ್ತು ನಂಬಿಕೆಗೆ ಪಾತ್ರವಾಗಿದೆ. ಹಾಗಾಗಿ ಈ ದೇವಾಲಯವನ್ನು ಬಸವಣ್ಣಗುಡಿ ಎಂದೇ ಕರೆಯುತ್ತಾರೆ. ಈ ನಂದಿಶಿಲ್ಪಕ್ಕೆ ವಿಶೇಷ ಪೂಜೆಪುರಸ್ಕಾರಗಳು ನಿತ್ಯವೂ ನಡೆಯುವುದರಿಂದ ಪೂರ್ವದ ಪ್ರವೇಶದ್ವಾರಕ್ಕೆ ಕಬ್ಬಿಣದ ಜಾಲಂಧ್ರವನ್ನು ಅಳವಡಿಸಿ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಹೀಗಾಗಿ ಜನರು ದಕ್ಷಿಣದ ಪ್ರವೇಶದ್ವಾರದಿಂದಲೇ ದೇವಾಲಯವನ್ನು ಪ್ರವೇಶಿಸುತ್ತಾರೆ. ಪ್ರವೇಶದ್ವಾರದ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಕಟಾಂಜನಗಳಿವೆ.

ದೇವಾಲಯವು ಅಧಿಷ್ಠಾನವನ್ನು ಹೊಂದಿದೆ. ಜಗತಿ, ಉಪಾನ, ತ್ರಿಪಟ್ಟಕುಮುದ, ಕಂಠ, ಕಪೋತ ಮತ್ತು ಉರ್ದ್ವೋಪಾನಗಳಿಂದ ಕೂಡಿದ ಅಧಿಷ್ಠಾನ ಸುಂದರವಾಗಿದೆ. ಭಿತ್ತಿಯಲ್ಲಿ ಅರ್ಧಕಂಬಗಳ ಅಲಂಕರಣವಿದ್ದು, ಉಳಿದಂತೆ ಸಪಾಟಾಗಿದೆ. ಮೇಲ್ಛಾವಣಿಯಲ್ಲಿ ಸುತ್ತಲೂ ಕೈಪಿಡಿ ಗೋಡೆಯ ಅಲಂಕರಣವುಂಟು. ಗರ್ಭಗೃಹದ ಮೇಲೆ ಏಕತಲದ ದ್ರಾವಿಡ ಶೈಲಿಯ ಶಿಖರವಿದ್ದು, ಸ್ತೂಪಿ ಮತ್ತು ಶಿಲಾಕಳಸವನ್ನು ಹೊಂದಿದೆ. ಶಿಖರವು ಸುಖನಾಸದಿಂದ ಕೂಡಿದ್ದು, ಲಲಾಟದಲ್ಲಿ ನಟರಾಜನ ಶಿಲ್ಪ ಮತ್ತು ಕೀರ್ತಿಮುಖದ ಅಲಂಕರಣವನ್ನು ಕಾಣಬಹುದು. ದೇವಾಲಯವು ಸುತ್ತಲೂ ಆವರಣ ಗೋಡೆಯನ್ನು ಹೊಂದಿದೆ. ಈಶಾನ್ಯ ಮೂಲೆಯಲ್ಲಿ ಮಂಟಪವಿದ್ದು, ನಡುವೆ ಪಾಣಿಪೀಠವಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಭಗ್ನಗೊಂಡಿರುವ ಕಾಲಭೈರವ, ಸೂರ್ಯ, ದಕ್ಷಿಣಾಮೂರ್ತಿ ಮತ್ತಿತರ ಶಿಲ್ಪಾವಶೇಷಗಳನ್ನು ಲಿಂಗದ ಹಿಂಬದಿಯಲ್ಲಿ ಇಡಲಾಗಿದೆ. ನವರಂಗದಲ್ಲಿರುವ ಮಹಿಷಮರ್ದಿನಿ ಶಿಲ್ಪ ತ್ರಿಭಂಗಿಯಲ್ಲಿದ್ದು, ಮನಮೋಹಕವಾಗಿದೆ. ದೊಡ್ಡ ನಂದಿಶಿಲ್ಪವು ಸಲಕ್ಷಣವಾಗಿದ್ದು, ದೇವಾಲಯದ ಹೆಸರನ್ನೆ ಬದಲಿಸಿದೆ. ಅಂದರೆ ಈ ಪ್ರಾಚೀನ ಶಿವಾಲಯವನ್ನು ಬವಣ್ಣನ ಗುಡಿ ಎಂದೇ ಕರೆಯುತ್ತಾರೆ. ಅನೇಕ ಹಾಡು ಮತ್ತು ಕಥೆಗಳಲ್ಲಿ ತಂಬೂರ ಬಸವೇಶ್ವರನೆಂದೇ ಪ್ರಸಿದ್ಧವಾಗಿರುವ ಈ ಶಿಲ್ಪ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ. ಹೊರಭಾಗದಲ್ಲಿ ಭಗ್ನಗೊಂಡಿರುವ ಗಣಪತಿ ಶಿಲ್ಪಗಳು, ಮತ್ತಿತರ ಶಿಲ್ಪಾವಶೇಷಗಳಿವೆ.

ದೇವಾಲಯದ ಆವರಣದಲ್ಲಿ ಶಾಸನಗಳು ಮತ್ತು ವೀರಗಲ್ಲುಗಳು ಕಂಡು ಬರುತ್ತವೆ. ಆರನೆಯ ವಿಕ್ರಮಾದಿತ್ಯನ ಕ್ರಿ.ಶ. ೧೧೨೦ರ ಶಾಸನವೊಂದು ಫಣಿರಾಜ ದೇವಾಲಯದ ನಿರ್ಮಾಣವನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ). ಕ್ರಿ.ಶ. ೧೧೨೪ರ ಶಾಸನವು ಸತ್ರಕ್ಕೆ ಭೂದಾನವನ್ನು, ಕ್ರಿ.ಶ. ೧೧೪೪ ರ ಶಾಸನವು ಚೌಡೇಶ್ವರ ದೇವಾಲಯಕ್ಕೆ ಭೂದಾನವನ್ನು ಹಾಗು ಕ್ರಿ.ಶ. ೧೧೫೬ರ ಶಾಸನವು ನಾರಾಯಣದೇವರಿಗೆ ಸುಂಕಗಳ ದಾನವನ್ನು ಉಲ್ಲೇಖಿಸುತ್ತವೆ (ಅದೇ). ಮೇಲಿನ ಶಾಸನಗಳಿಂದ ಈ ಊರಿನಲ್ಲಿ ಫಣಿರಾಜ ದೇವಾಲಯ, ನಾರಾಯಣ ದೇವಾಲಯ ಮತ್ತು ಚೌಡೇಶ್ವರ ದೇವಾಲಯಗಳಿದ್ದವೆಂದು ಸ್ಪಷ್ಟವಾಗುವುದು. ಪ್ರಸ್ತುತ ಬಸವಣ್ಣನ ಗುಡಿಯೇ ಶಾಸನದಲ್ಲಿ ಉಲ್ಲೇಖಗೊಂಡಿರುವ ಚೌಡೇಶ್ವರ ದೇವಾಲಯವಿರಬಹುದು. ಇದೇ ಊರಿನ ಕೋಟೆಯಲ್ಲಿರುವ ಕ್ರಿ.ಶ. ೧೧೨೫ರ ಶಾಸನವೊಂದು ತಂಬೂರಿನಲ್ಲಿ ಜಿನಾಲಯದ ನಿರ್ಮಾಣ ಮತ್ತು ಭೂದಾನವನ್ನು ತಿಳಿಸುತ್ತದೆ (ಅದೇ). ಆದರೆ ಜಿನಾಲಯದ ಬಗ್ಗೆ ಯಾವುದೇ ಮಾಹಿತಿಗಳು ಈಗ ದೊರೆಯುವುದಿಲ್ಲ. ಇಲ್ಲಿನ ಶಾಸನಗಳು ಉಲ್ಲೇಖಿಸಿರುವ ವಿಷ್ಣು ಅಥವಾ ನಾರಾಯಣ ದೇವಾಲಯವು ಸಹ ಕಣ್ಮರೆಯಾಗಿದೆ. ಉಳಿದಂತೆ ರಾಷ್ಟ್ರಕೂಟರ ಕಾಲದಿಂದ ಮೊದಲುಗೊಂಡು ವೀರಗಲ್ಲು ಶಾಸನಗಳಿದ್ದು, ಯುದ್ಧಗಳಲ್ಲಿ ಮರಣಹೊಂದಿದ ವೀರರನ್ನು ಉಲ್ಲೇಖಿಸಿವೆ. ಕ್ರಿ.ಶ. ೯೩೨ರ ನಾಲ್ಕನೆಯ ಗೋವಿಂದನ ವೀರಗಲ್ಲು ಶಾಸನವು ತಮ್ಮ ಊರ ಅಣ್ಣಿಗನ ವೀರಮರಣವನ್ನು ಉಲ್ಲೇಖಿಸುತ್ತದೆ (ಅದೇ). ಇದರಿಂದ ತಂಬೂರಿನ ಪ್ರಾಚೀನ ಹೆಸರು ತಮ್ಮ ಊರು ಎಂದು ಗ್ರಹಿಸಬಹುದು. ತಂಬೂರು ಕೋಟೆ ಮತ್ತು ಕಂದಕಗಳನ್ನು ಒಳಗೊಂಡಿದೆ. ಈ ಎಲ್ಲ ಮಾಹಿತಿಗಳಿಂದ, ತಂಬೂರು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಪಡೆದ ಸ್ಥಳವೆಂದು ಸ್ಪಷ್ಟವಾಗುವುದು.

೧೮

ಊರು ತಂಬೂರು
ಸ್ಥಳ ಊರ ಮಡ್ಡಿ ಮೇಲೆ
ಸ್ಮಾರಕ ಹಾಳು ಶಿವಾಲಯ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಅರ್ಧಮಂಟಪಗಳನ್ನು ಒಳಗೊಂಡಿದ್ದು, ಭಗ್ನ ಸ್ಥಿತಿಯಲ್ಲಿದೆ. ಗರ್ಭಗೃಹ ದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವುಂಟು. ಬಾಗಿಲುವಾಡದಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದ್ದು, ನಿಮ್ನಪಟ್ಟಿಗಳ ಅಲಂಕರಣದಿಂದ ಕೂಡಿವೆ. ಅರ್ಧಮಂಡಪದ ಪ್ರವೇಶದಲ್ಲಿ ದುಂಡಾದ ಎರಡು ಸಣ್ಣಕಂಬಗಳನ್ನು ನಿಲ್ಲಿಸಲಾಗಿದೆ. ನವರಂಗಭಾಗವು ನೆಲಸಮಗೊಂಡಿದೆ. ದೇವಾಲಯವು ಅಧಿಷ್ಠಾನವನ್ನು ಹೊಂದಿದ್ದು, ಹೊರಭಿತ್ತಿ ಸರಳರಚನೆಯದು. ಭಿತ್ತಿಯನ್ನು ಶಿಲಾಚಪ್ಪಡಿಗಳನ್ನು ಪೇರಿಸಿ ನಿರ್ಮಿಸಲಾಗಿದೆ. ಗರ್ಭಗೃಹದ ಮೇಲೆ ಕದಂಬನಾಗರಶೈಲಿಯ ಭಗ್ನಶಿಖರವಿದೆ.

ಗರ್ಭಗೃಹದಲ್ಲಿ ಲಿಂಗ ಮತ್ತು ಗಣಪತಿಯ ಉಬ್ಬುಶಿಲ್ಪಫಲಕವಿದೆ. ಹೊರಗೆ ಭಗ್ನಗೊಂಡಿರುವ ಗಣಪತಿ, ಮಹಿಷಮರ್ದಿನಿ, ಪಾಣಿಪೀಠಗಳು ಮತ್ತು ವಾಸ್ತು ಅವಶೇಷಗಳು ಕಂಡುಬರುತ್ತವೆ. ಹಿಂಭಾಗದಲ್ಲಿ ಕೆರೆ ಇದೆ.

ಇಲ್ಲಿ ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯ ಮತ್ತು ಗೋವೆ ಕದಂಬರ ಎರಡನೆಯ ಗುವಲದೇವನ ಕ್ರಿ.ಶ.೧೧೨೦ರ ಶಾಸನವಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಜಯದೇವ ಎಂಬುವನು ವಿಷ್ಣು ದೇವಾಲಯವನ್ನು ನಿರ್ಮಿಸಿ, ಭೂಮಿಯನ್ನು ದಾನಮಾಡಿದನೆಂದಿದೆ. ಹಾಳೂರು ಶೆಡಂಬಿಯ ಕ್ರಿ.ಶ. ೧೦೬೨ರ ಶಾನವೊಂದು, ಜಯದೇವಯ್ಯನು ತಮ್ಮಿ ಊರೊಡೆಯನಾಗಿದ್ದನೆಂದು ತಿಳಿಸುತ್ತದೆ (ಅದೇ). ತಂಬೂರಿನ ಪ್ರಾಚೀನ ಹೆಸರು ಈ ಶಾಸನದಲ್ಲಿ ತಮ್ಮಿ ಊರು ಎಂದಿರುವುದರಿಂದ, ಮೇಲೆ ತಿಳಿಸಿದ ಜಯದೇವ ಮತ್ತು ಜಯದೇವಯ್ಯ ಒಬ್ಬನೇ ಆಗಿರಬೇಕು.

೧೯

ಊರು ತುಮರಿಕೊಪ್ಪ
ಸ್ಥಳ ದೊಡ್ಡ ಓಣಿ
ಸ್ಮಾರಕ ಬಸವಣ್ಣದೇವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಮೇಲೆ ಹೆಂಚನ್ನು ಹೊದಿಸಲಾಗಿದೆ. ಗರ್ಭಗೃಹದಲ್ಲಿ ಎತ್ತರದ ವೇದಿಕೆಯ ಮೇಲೆ ಸ್ವಯಂಭು ಲಿಂಗವನ್ನಿಟ್ಟಿದ್ದಾರೆ. ಸಭಾಗೃಹದಲ್ಲಿ ನಂದಿಶಿಲ್ಪವಿದೆ.

೨೦

ಊರು ದ್ಯಾವನಕೊಂಡ
ಸ್ಥಳ ಊರ ಈಶಾನ್ಯ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹದ ಚಾವಣಿ ಕಲ್ಲಿನದು. ಸಭಾಗೃಹದ ಮೇಲೆ ಸೀಮೆಹೆಂಚನ್ನು ಹೊದಿಸಲಾಗಿದೆ. ಗೋಡೆ ಮಣ್ಣಿನದು. ಗರ್ಭಗೃಹದಲ್ಲಿ ಶಿಲಾವೇದಿಕೆಯ ಮೇಲೆ ಪ್ರಾಚೀನ ಸ್ವಯಂಭುಲಿಂಗವನ್ನಿಡಲಾಗಿದೆ. ಸಭಾಗೃಹದಲ್ಲಿ ಸಣ್ಣ ನಂದಿಶಿಲ್ಪವಿದೆ.

ಈ ಊರಿನ ಸುಮಾರು ೧೨ನೆಯ ಶತಮಾನದ ಶಾಸನವು ವ್ಯಕ್ತಿಯೊಬ್ಬನನ್ನು ವರ್ಣನೆ ಮಾಡಿದೆ (ಕಲಬುರ್ಗಿ : ಧಾ ಜಿ ಶಾ ಸೂ).

೨೧

ಊರು ದಿಂಬುವಳ್ಳಿ
ಸ್ಥಳ ಕಲ್ಲಪ್ಪ ಘಟ್ಟ
ಸ್ಮಾರಕ
ಅಭಿಮುಖ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವಿಲ್ಲ. ಆದರೆ ಹಳೆಯ ದೇವಾಲಯಕ್ಕೆ ಸೇರಿದ ಭಗ್ನ ಶಿಲ್ಪಾವಶೇಷಗಳು ಮತ್ತು ವಾಸ್ತು ಅವಶೇಷಗಳಿವೆ. ಗಣಪತಿ, ನಾಗ, ಮತ್ತಿತರ ಶಿಲ್ಪಗಳು ಕಂಡುಬರುತ್ತವೆ. ಇದರಿಂದ ಇಲ್ಲಿ ಹಳೆಯ ಶಿವಾಲಯವಿತ್ತೆಂಬುದು ಸ್ಪಷ್ಟವಾಗುವುದು. ಕೆಲವೇ ಮೀಟರ್‌ಗಳ ಅಂತರದಲ್ಲಿ ಶಾಸನೋಕ್ತ ವೀರಗಲ್ಲು ಶಿಲ್ಪಗಳಿವೆ. ಬಹುಶಃ ಇವು ಅಪ್ರಕಟಿತವಿರಬಹುದು. ಮರವೊಂದರ ಕೆಳಗೆ ಸತಿಕಲ್ಲಿದೆ.

ದಿಂಬುವಳ್ಳಿ-ಕಂದಳಿ ದಾರಿಯಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕನೆ ಸೋಮೇಶ್ವರ ಮತ್ತು ಗೋವೆ ಕದಂಬರ ಪೆರ್ಮಾಡಿದೇವನ ಕಾಲದ ಕ್ರಿ.ಶ. ೧೧೭೪ರ ಶಾಸನವಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಇದು ದಂಡನಾಯಕ ಮಾದಿರಾಜ ಹಾಗೂ ಕೇತಗಾವುಂಡಾದಿಗಳು ಮೈಳಲೇಶ್ವರ ದೇವಾಲಯಕ್ಕೆ ಭೂಮಿಯನ್ನು ದಾನಮಾಡಿದರೆಂದು ತಿಳಿಸುವುದು.

೨೨

ಊರು ದುಮ್ಮವಾಡ
ಸ್ಥಳ ಕೆರೆದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹ ಮತ್ತು ಅಂತರಾಳಗಳಿರುವ ದೇವಾಲಯದ ಹೊರಭಿತ್ತಿಯನ್ನು ದಿಂಡುಗಲ್ಲಿನಿಂದ ಮುಚ್ಚಲಾಗಿದೆ.

ಗರ್ಭಗೃಹದಲ್ಲಿ ಲಿಂಗವಿದ್ದು, ಅಂತರಾಳದಲ್ಲಿ ನಂದಿಶಿಲ್ಪವಿದೆ. ಗೋಡೆಯ ಗೂಡುಗಳಲ್ಲಿ ಗಣಪತಿ ಮತ್ತು ನಾಗಶಿಲ್ಪಗಳಿವೆ. ಹೊರಭಾಗದಲ್ಲಿ ವೀರಗಲ್ಲು ಶಿಲ್ಪವಿದೆ.

೨೩

ಊರು ದೇವಿಕೊಪ್ಪ
ಸ್ಥಳ ಕೆರೆ ಏರಿ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

 

೧೯೯೦ ರಲ್ಲಿ ನಿರ್ಮಿಸಿದ ಆರ್‌.ಸಿ.ಸಿ. ಕೊಠಡಿಯಲ್ಲಿ ಪ್ರಾಚೀನಕಾಲದ ಲಿಂಗವಿದೆ. ಲಿಂಗವು ಬ್ರಹ್ಮಭಾಗ ಮತ್ತು ರುದ್ರಭಾಗವನ್ನು ಒಳಗೊಂಡಿದೆ. ಹೊರಗೆ ಹಳೆಯ ದೇವಾಲಯದ ಕೆಲವು ವಾಸ್ತು ಅವಶೇಷಗಳು ಕಂಡು ಬರುತ್ತವೆ. ಬಹುಶಃ ಕೆರೆ ಮುಂಭಾಗದಲ್ಲಿದ್ದ ಹಳೆಯ ದೇವಾಲಯವು ನಸಿಸಿದ ನಂತರ ಮೇಲಿನ ದೇವಾಲಯವನ್ನು ನಿರ್ಮಿಸಿರಬೇಕು.

೨೪

ಊರು ದೇವಿಕೊಪ್ಪ
ಸ್ಥಳ ಶಿಗನಹಳ್ಳಿ ರಸ್ತೆ
ಸ್ಮಾರಕ ಕಲ್ಮೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ರಸ್ತೆಯಂಚಿನಲ್ಲಿ ಶಾಸನ, ವೀರಗಲ್ಲು, ಗೋಸಾಸದ ಕಲ್ಲುಗಳು ಹಾಗೂ ವಾಸ್ತು ಅವಶೇಷಗಳು ಬಿದ್ದಿವೆ. ಇದರಿಂದ ಇಲ್ಲಿ ಶಿವಾಲಯವೊಂದು ಅಸ್ತಿತ್ವದಲ್ಲಿತ್ತು ಎಂದು ಗ್ರಹಿಸಬಹುದು. ಈ ಅವಶೇಷಗಳಿಗೆ ಯಾವುದೇ ರಕ್ಷಣೆ ಇಲ್ಲ.

೨೫

ಊರು ನಾಗನೂರು
ಸ್ಥಳ ಊರ ಮುಂದೆ
ಸ್ಮಾರಕ ಬಸವಣ್ಣ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಎರಡು ಗರ್ಭಗೃಹಗಳನ್ನು ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಮೇಲೆ ಸೀಮೆಹೆಂಚನ್ನು ಹೊದಿಸಿದ್ದಾರೆ. ಗರ್ಭಗೃಹಗಳಲ್ಲಿ ಕ್ರಮವಾಗಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹಳೆ ಪೀಠದ ಮೇಲೆ ಘನಾಕೃತಿಯ ಕಲ್ಲನ್ನು ಇಟ್ಟು, ಅದರ ಮೇಲೆ ನಂತರದ ಕಾಲಕ್ಕೆ ಸೇರಿದ ಒರಟುರಚನೆಯ ರುದ್ರಭಾಗವನ್ನು ಒಳಗೊಂಡ ಯೋನಿಪೀಠವನ್ನಿಡಲಾಗಿದೆ. ಗೋಡೆಯಲ್ಲಿ ಕೆಲವು ಶಿಲ್ಪಗಳ ಅಳವಡಿಕೆಯನ್ನು ಕಾಣುತ್ತೇವೆ. ಹೊರಗೆ ಹಳೆಯ ನಂದಿ ಶಿಲ್ಪಗಳು ಮತ್ತು ನಾಗಶಿಲ್ಪಗಳಿವೆ.

೨೬

ಊರು ನೀರಸಾಗರ
ಸ್ಥಳ ಕಲ್ಲಪ್ಪನ ಜಮೀನು
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇಲ್ಲಿದ್ದ ಹಳೆ ದೇವಾಲಯ ಬಿದ್ದುಹೋಗಿದೆ. ಅದೇ ಸ್ಥಳದಲ್ಲಿ ಗರ್ಭಗೃಹ ಮತ್ತು ಸಭಾಗೃಹಗಳನ್ನು ನಿರ್ಮಿಸಿ, ಮೇಲೆ ಸೀಮೆಹೆಂಚನ್ನು ಹೊದಿಸಲಾಗಿದೆ. ಗರ್ಭಗೃಹದಲ್ಲಿ ಗದ್ದಿಗೆ ಇದ್ದು, ಅದರ ಮೇಳೆ ಒರಟುರಚನೆಯ ಲಿಂಗವನ್ನಿಟ್ಟಿದ್ದಾರೆ. ಸಭಾಗೃಹದಲ್ಲಿ ದೇವಾಲಯದ ಹೊಸ್ತಿಲು ಅವಶೇಷವನ್ನು ಕಾಣಬಹುದು. ಹೊರಭಾಗದಲ್ಲಿ ಭಗ್ನಗೊಂಡಿರುವ ಸಪ್ತಮಾತೃಕೆಯರ ಶಿಲ್ಪಫಲಕ, ಸವೆದಿರುವ ಶಾಸನ ಮತ್ತು ಪಾಣಿಪೀಠ ಕಂಡುಬರುತ್ತವೆ. ಈ ಶಿಲ್ಪಾವಶೇಷಗಳಿಂದ ಇಲ್ಲಿ ಹಳೆ ದೇವಾಲಯವಿತ್ತೆಂಬುದು ಸ್ಪಷ್ಟವಾಗುತ್ತದೆ.

೨೭

ಊರು ನೀರಸಾಗರ
ಸ್ಥಳ ಹೊಂಡದ ಹತ್ತಿರ
ಸ್ಮಾರಕ ಕಲ್ಮೇಶ್ವರ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹವನ್ನು ಮತ್ತು ಹಾಳುಬಿದ್ದ ಸಭಾಗೃಹವನ್ನು ಹೊಂದಿದೆ. ಗೋಡೆಯನ್ನು ಚಕ್ಕೆಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಲಾಗಿದೆ. ಚಾವಣಿಯಲ್ಲಿ ಚಪ್ಪಡಿ ಕಲ್ಲನ್ನು ಹಾಸಿ ಮೇಲೆ ಮಣ್ಣು ತುಂಬಿದೆ. ಮುಂದಿದ್ದ ಸಭಾಗೃಹದ ಚಾವಣಿ ಬಿದ್ದುಹೋಗಿದ್ದು, ಪಾರ್ಶ್ವದ ಗೋಡೆಗಳಿವೆ. ಸಭಾಮಂಟಪವು ಜಗತಿಗಳನ್ನು ಒಳಗೊಂಡಿದೆ.

ಗರ್ಭಗೃಹದಲ್ಲಿ ಹಳೆ ಪೀಠದ ಮೇಲೆ ನಂತರದ ಕಾಲಕ್ಕೆ ಸೇರುವ ಸಣ್ಣ ಲಿಂಗವಿದೆ. ಹೊರಭಾಗದಲ್ಲಿ ನಂದಿಶಿಲ್ಪಗಳು, ನಾಗ, ಸಪ್ತಮಾತೃಕೆಯರ ಶಿಲ್ಫಫಲಕ ಹಾಗು ಹಳೆ ದೇವಾಲಯದ ಕಂಬ ಮತ್ತಿತ್ತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

ದೇವಾಲಯದ ಮುಂದಿರುವ ಶಾಸನದ ಮಾಹಿತಿಗಳು ಲಭ್ಯವಾದಲ್ಲಿ, ಹಳೆ ದೇವಾಲಯದ ಮೇಲೆ ಬೆಳಕು ಚೆನ್ನಬಹುದು.

೨೮

ಊರು ನೆಲಹರವಿ
ಸ್ಥಳ ಊರ ಉತ್ತರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಸಭಾಗೃಹ ಮತ್ತು ಪ್ರವೇಶ ಮಂಟಪಗಳನ್ನು ಒಳಗೊಂಡಿದೆ. ಚಾವಣಿಯಲ್ಲಿ ಸೀಮೆಹೆಂಚನ್ನು ಹೊದಿಸಲಾಗಿದೆ.

ಗರ್ಭಗೃಹದಲ್ಲಿ ಪ್ರಾಚೀನಕಾಲಕ್ಕೆ ಸೇರುವ ಸ್ವಯಂಭುಲಿಂಗವಿದ್ದು, ವೇದಿಕೆ ಮೇಲಿಟ್ಟಿದ್ದಾರೆ. ಸಭಾಗೃಹದಲ್ಲಿ ಪ್ರಾಚೀನ ವಿಷ್ಣುಶಿಲ್ಪ ಮತ್ತು ನಾಗಶಿಲ್ಪಗಳಿವೆ. ನಂದಿಶಿಲ್ಪ ಇತ್ತೀಚಿನದು.

೨೯

ಊರು ಪುರ (ಹಾಳೂರು)
ಸ್ಥಳ ನಾಡಿನ ನಡುವೆ
ಸ್ಮಾರಕ
ಅಭಿಮುಖ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಅರಣ್ಯದ ನಡುವೆ ಶಿವಾಲಯವೊಂದಕ್ಕೆ ಸಂಬಂಧಿಸಿದ ಭಗ್ನಗೊಂಡಿರುವ ಶಿಲ್ಪಾವಶೇಷಗಳು ಕಂಡುಬರುತ್ತವೆ. ದೇವಾಲಯವು ಸಂಪೂರ್ಣವಾಗಿ ಹಾಳಾಗಿದೆ. ಅದರ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಕೆಲವು ವಾಸ್ತು ಅವಶೇಷಗಳನ್ನು ಬೇರೆಡೆಗೆ ಸಾಗಿಸಲಾಗಿದೆ. ನಿಧಿ ಆಸೆಯಿಂದ ಇಲ್ಲಿನ ಶಿಲ್ಪಾವಶೇಷಗಳನ್ನು ಭಗ್ನಗೊಳಿಸಿದ್ದಾರೆ. ಲಿಂಗ, ಕಾಲಭೈರವ, ಮಹಿಷಮರ್ದಿನಿ, ನಂದಿ, ಪಾಣಿಪೀಠಗಳು ಮತ್ತಿತರ ಶಿಲ್ಪಾವಶೇಷಗಳು ಅಲ್ಲಲ್ಲಿ ಬಿದ್ದಿವೆ. ಇಲ್ಲಿದ್ದ ಪುರ ಎಂಬ ಹೆಸರಿನ ಗ್ರಾಮವು ಹಾಳುಬಿದ್ದುದರಿಂದ ಜನರು ಬೇರೆಡೆ ವಲಸೆಹೋದರು. ಈ ಹೊನ್ನೆಲೆಯಲ್ಲಿ ಇಲ್ಲಿನ ದೇವಾಲಯವು ಸಹ ನಾಶಹೊಂದಿರಬಹುದು. ದೇವಾಲಯವಿದ್ದಲ್ಲಿ ಈಗ ಅರಣ್ಯ ಬೆಳೆದಿದೆ.

೩೦

ಊರು ಬಚ್ಚಿವಾಡ
ಸ್ಥಳ ಹೊಲದ ನಡುವೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಭಾಗವಾಗಿ ಗರ್ಭಗೃಹವೊಂದೇ ಉಳಿದಿದೆ. ಅದು ಸಹ ಭಗ್ನಸ್ಥಿತಿಯನ್ನು ತಲುಪಿದ್ದು, ಅದರ ಹೊರಗೋಡೆ ಬಿದ್ದು ಹೋಗಿರುವುದನ್ನು ಕಾಣಬಹುದು. ಗರ್ಭಗೃಹದಲ್ಲಿ ಲಿಂಗವಿದ್ದು, ಪೂಜೆಗೊಳ್ಳುತ್ತಿದೆ. ಹೊರಭಾಗದಲ್ಲಿ ಗಣಪತಿ ಮತ್ತು ವಿಷ್ಣು ಶಿಲ್ಪಗಳಿವೆ. ಹಾಗು ಜಾಲಂಧ್ರ, ಕಂಬ ಮತ್ತಿತರ ವಾಸ್ತು ಅವಶೇಷಗಳು ಕಂಡುಬರುತ್ತವೆ.