ಕಲಘಟಗಿ ತಾಲ್ಲೂಕು

ಕಲಘಟಗಿ ತಾಲ್ಲೂಕು

 

ಊರು ಅರಳಿಹೊಂಡ
ಸ್ಥಳ ಹೊಂಡದ ಬಳಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಮೇಲ್ಭಾಗದಲ್ಲಿ ಸೀಮೆಹೆಂಚನ್ನು ಹೊದಿಸಿದ್ದಾರೆ. ಗರ್ಭಗೃಹದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಶಿಲ್ಪಗಳು ಮಧ್ಯಕಾಲದ ರಚನೆಗಳಂತೆ ಕಂಡುಬರುತ್ತವೆ. ಹೊರಭಾಗದಲ್ಲಿ ಕ್ರಿ.ಶ. ೧೧-೧೨ನೆಯ ಶತಮಾನಕ್ಕೆ ಸೇರುವ ಸಪ್ತ ಮಾತೃಕೆಯರ ಶಿಲ್ಪಫಲಕವಿದೆ.

ಊರು ಆಸ್ತಗಟ್ಟಿ
ಸ್ಥಳ ಹಾಳೂರು
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಕಲ್ಲು ಮತ್ತು ಮಣ್ಣಿನಲ್ಲಿ ನಿರ್ಮಿಸಿದ ಕೊಠಡಿಯಿದು. ಒಳಗೆ ಪ್ರಾಚೀನ ಲಿಂಗದ ಯೋನಿಪೀಠವಿದ್ದು, ಅದರಲ್ಲಿ ಮುಖದ ಚಿತ್ರವಿರುವ ರುದ್ರಭಾಗವನ್ನು ಅಳವಡಿಸಿದ್ದಾರೆ.

ಹೊರಭಾಗದಲ್ಲಿ ಹಳೆ ದೇವಾಲಯದ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಹಿಂಭಾಗದಲ್ಲಿ ದೊಡ್ಡ ಶಾಸನವಿದ್ದು, ಪ್ರಕಟಗೊಂಡಿದೆ. ಮೂರನೆಯ ಸೋಮೇಶ್ವರನ ಕ್ರಿ.ಶ. ೧೧೨೯ರ ಶಾಸನವಿದು. ಕೊಪ್ಪದ ಕೇತಿಸೆಟ್ಟಿಯು ದೇವರಿಗೆ ಭೂಮಿಯನ್ನು ದಾನ ಮಾಡುತ್ತಾನೆ. (ಕಲಬುರ್ಗಿ : ಧಾ ಜಿ ಶಾ ಸೂ).

ಊರು ಉಗ್ಗಿನಕೇರಿ
ಸ್ಥಳ ಕಂಪ್ಲಿಯವರ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಶೈಲಿ
ಸ್ಥಿತಿ ಸ್ಥಳೀಯ
ಸಂರಕ್ಷಣೆ

ದೇವಾಲಯವು ಕಲ್ಲಿನ ನಿರ್ಮಾಣವಾಗಿದ್ದು, ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಇದು ಸುಮಾರು ೧೦೦೦ ವರ್ಷಗಳ ಈಚಿನ ನಿರ್ಮಾಣವೆನ್ನಬಹುದು. ಗರ್ಭಗೃಹದಲ್ಲಿ ಹಳೆ ಲಿಂಗವಿದೆ. ಸಭಾಗೃಹದಲ್ಲಿ ಭೈರವ, ಗಣಪತಿ (ಎರಡು ಶಿಲ್ಪಗಳು, ವಿಷ್ಣು, ನಂದಿ ಮತ್ತು ಪಾಣಿಪೀಠ ಶಿಲ್ಪಾವಶೇಷಗಳು ಕಂಡುಬರುತ್ತವೆ. ಹೊರಗೆ ಶಾಸನ ವೀರಗಲ್ಲು ಮತ್ತಿತರ ಶಿಲ್ಪಾವಶೇಷಗಳಿವೆ.

ಇಲ್ಲಿನ ಹನುಮಂತದೇವರ ಗುಡಿ ಮುಂದಿರುವ ಎರಡು ಶಾಸನಗಳು ಮೂರನೆ ಸೋಮೇಶ್ವರ ಕಾಲಕ್ಕೆ ಸೇರಿವೆ. ಅಂದರೆ ಕ್ರಿ.ಶ. ೧೧೭೧ ರ ಈ ಶಾಸನಗಳು ಪಡೆವಳ ಉದಯಾದಿತ್ಯನು ಮೂಕೇಶ್ವರದೇವರಿಗೆ ಭೂಮಿಯನ್ನು ದಾನಮಾಡಿದನೆಂದು ಉಲ್ಲೇಖಿಸುತ್ತವೆ. ಬಹುಶಃ ಮೇಲಿನ ದೇವಾಲಯದ ಶಿಲ್ಪಾವಶೇಷಗಳು ಶಾಸನದಲ್ಲಿ ಉಲ್ಲೇಖಗೊಂಡಿರುವ ಮೂಕೇಶ್ವರ ದೇವಾಲಯಕ್ಕೆ ಸಂಬಂಧಿಸಿರಬೇಕು.

ಊರು ಎಮ್ಮೆಟ್ಟಿ
ಸ್ಥಳ ಹೊಲದ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀಣೋದ್ಧಾರಗೊಂಡಿರುವ ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಮುಂಭಾಗದ ಗೋಡೆಯನ್ನು ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿದ್ದಾರೆ. ಮೇಲೆ ಮಣ್ಣು ತುಂಬಲಾಗಿದೆ. ಗರ್ಭಗೃಹದಲ್ಲಿ ಲಿಂಗವಿದೆ. ಸಭಾಗೃಹದಲ್ಲಿ ನಂದಿ ಶಿಲ್ಪಗಳಿವೆ.

ಊರು ಕಂದ್ಲಿ
ಸ್ಥಳ ಹಾಳಾ ಊರು
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಅರ್ಧಮಂಟಪಗಳನ್ನು ಹೊಂದಿದೆ. ಗರ್ಭಗೃಹವು ಭಗ್ನಗೊಂಡಿದ್ದು, ದ್ವಾರ ಸರಳರಚನೆಯದು. ಹೊರಭಾಗದಲ್ಲಿ ಈ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿ ಲಿಂಗ, ನಾಗ, ಸೂರ್ಯ ಮತ್ತು ಕಾರ್ತಿಕೇಯ ಶಿಲ್ಪಗಳಿವೆ. ಹೊರಗೆ ಮಹಿಷ ಮರ್ದಿನಿ, ಭೈರವಿ, ವಿಷ್ಣು, ನಂದಿ ಮತ್ತು ಗಜಲಕ್ಷ್ಮಿ ಶಿಲ್ಪಗಳಿದ್ದು, ಭಗ್ನಗೊಂಡಿವೆ.

ಊರಿನ ಸಮೀಪವಿರುವ ಕಾಡಿನಲ್ಲಿ ಐದು ವೀರಗಲ್ಲು ಶಿಲ್ಪಗಳಿವೆ. ಅವುಗಳಲ್ಲಿ ಒಂದು ದೊಡ್ಡದಿದ್ದು, ಶಾಸನದಿಂದ ಕೂಡಿದೆ. ಇವು ಗೋವುಗಳ ಅಪಹರಣಕ್ಕೆ ಸಂಬಂಧಿಸಿವೆ. ಇದೇ ಸ್ಥಳದಲ್ಲಿ ಲಿಂಗದ ಯೋನಿಪೀಠ, ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಇದನ್ನು ಸ್ಥಳೀಯರು ಕಲ್ಮೇಶ್ವರ ಎಂದು ಕರೆಯುತ್ತಾರೆ. ಇದರಿಂದ ಇಲ್ಲಿ ಇನ್ನೊಂದು ಶಿವಾಲಯವಿತ್ತೆಂದು ತಿಳಿದುಬರುತ್ತದೆ.

ಹಾಳಾದ ಊರಿನ ಕ್ರಿ.ಶ. ೧೦೫೦ರ ಶಾಸನವು, ಗೋವೆ ಕದಂಬರ ಎರಡನೆ ಚಟ್ಟನದೇವನ ಕಾಲಕ್ಕೆ ಸೇರಿದೆ. ಮಾರಯ್ಯನು ಬಾದುಬ್ಬೆ ವಿಗ್ರಹ ನಿರ್ಮಾಣ ಮಾಡಿದನೆಂದಿದೆ (ಕಲಬುರ್ಗಿ : ಧಾ ಜಿ ಶಾ ಸೂ).

ಊರು ಕಲಕುಂಡಿ
ಸ್ಥಳ ಊರ ಮುಂದೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಮೂಲ ದೇವಾಲಯವು ಬಿದ್ದು ಹೋಗಿದೆ. ನಂತರ ಒರಟು ರಚನೆಯ ಮಂಟಪವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಮಂಟಪದ ಮೇಲೆ ಪ್ರತ್ಯೇಕವಾಗಿ ಹೆಂಚಿನ ಚಾವಣಿಯನ್ನು ಹೊದಿಸಿದ್ದಾರೆ.

ಮಂಟಪದಲ್ಲಿ ಲಿಂಗವಿದ್ದು, ಬೇರೆ ರುದ್ರಭಾಗವನ್ನು ಅಳವಡಿಸಲಾಗಿದೆ. ಹೊರಭಾಗದಲ್ಲಿ ನಂದಿ, ದಕ್ಷ, ವಿಷ್ಣು ಮತ್ತು ಅಪೂರ್ಣ ವೀರಗಲ್ಲು ಶಿಲ್ಪಗಳಿದ್ದು, ಭಗ್ನಗೊಂಡಿವೆ. ಜೊತೆಗೆ ಕಂಬ, ದ್ವಾರಬಂಧ ಮತ್ತಿತರ ವಾಸ್ತು ಅವಶೇಷಗಳು ಕಂಡುಬರುತ್ತವೆ. ಸಮೀಪದ ಮಾವಿನ ಮರದ ಕೆಳಗೆ ಭಗ್ನ ನಂದಿಶಿಲ್ಪಗಳಿವೆ. ಈ ಊರಿನ ರೈತರೊಬ್ಬರ ಮನೆಯ ಹಿತ್ತಲಲ್ಲಿರುವ ಕ್ರಿ.ಶ. ೧೧೫೦ರ ಎರಡನೆ ಜಗದೇಕಮಲ್ಲನ ಶಾಸನವು, ಅರಸ ಮತ್ತು ಸಾಮಂತರ ವಂಶಾವಳಿಯನ್ನು ಉಲ್ಲೇಖಿಸಿದೆ. ದೇವಾಲಯದ ಬಗೆಗೆ ಯಾವುದೇ ಮಾಹಿತಿ ಇಲ್ಲ (ಕಲಬುರ್ಗಿ : ಧಾ ಜಿ ಶಾ ಸೂ).

ಊರು ಕಲಘಟಗಿ
ಸ್ಥಳ ಬೆಂಡಿಗೇರಿ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ದೇವಾಲಯ ಹೊಸದಾಗಿ ನಿರ್ಮಾಣಗೊಂಡಿದ್ದು, ಗರ್ಭಗೃಹ ಮತ್ತು ವಿಶಾಲವಾಗಿ ಸಭಾಗೃಹಗಳಿವೆ. ಆರ್.ಸಿ.ಸಿ. ನಿರ್ಮಾಣದ ಈ ದೇವಾಲಯದಲ್ಲಿ ವಿಜಯನಗರ ಕಾಲಕ್ಕೆ ಸೇರುವ ಲಿಂಗವಿದೆ.

ಈ ಊರಿನ ಶಾಸನವೊಂದು, ಕಲ್ಲುಕುಟಿಗೆ ಗ್ರಾಮವನ್ನು ಉಲ್ಲೇಖಿಸುತ್ತದೆ. ಇದರಿಂದ ಕಲಘಟಗಿಯ ಪ್ರಾಚೀನ ಹೆಸರು ಕಲ್ಲುಕುಟಿಗೆ ಎಂದು ತಿಳಿದುಬರುವುದು (ಕಲಬುರ್ಗಿ : ಧಾ ಜಿ ಶಾ ಸೂ).

ಊರು ಕಾಮಧೇನು
ಸ್ಥಳ ಊರ ಹೊರಗೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಅಧಿಷ್ಠಾನದ ಮೇಲಿದ್ದು, ಗರ್ಭಗೃಹ, ಅಂತರಾಳ, ಆಯತಾಕಾರದ ಕೋಣೆ ಮತ್ತು ರಂಗಮಂಟಪವನ್ನು ಒಳಗೊಂಡಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಅರ್ಧಕಂಬಗಳ ರಚನೆಯುಂಟು. ಇದೇ ರೀತಿ ಅಂತರಾಳ ದ್ವಾರದಲ್ಲೂ ಅರ್ಧಕಂಬಗಳನ್ನು ಬಿಡಿಸಲಾಗಿದೆ. ದ್ವಾರದ ಮೇಲಿರುವ ಫಲಕದಲ್ಲಿ ಮಕರತೋರಣವನ್ನು, ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳನ್ನು ಬಿಡಿಸಿದೆ. ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಹಾಗೂ ತಳದಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ನಂತರ ಬರುವ ಆಯತಾಕಾರದ ಕೋಣೆಯ ಭಿತ್ತಿಯಲ್ಲಿ ಬಿಡಿಶಿಲ್ಪಗಳನ್ನಿಡಲು ಅವುಗಳ ಗಾತ್ರಕ್ಕೆ ಅನುಗುಣವಾಗಿ ಅಗಲವಾದ ಮತ್ತು ಎತ್ತರಾದ ದೇವಕೋಷ್ಠಗಳನ್ನು ನಿರ್ಮಿಸಲಾಗಿದೆ. ಕೋಣೆಯ ಬಾಗಿಲುವಾಡದಲ್ಲಿ ಅರ್ಧಕಂಬಗಳ ಅಲಂಕರಣವಿದೆ. ಇಕ್ಕೆಲಗಳಲ್ಲಿ ಸಣ್ಣ ಚೌಕರಂಧ್ರಗಳಿರುವ ಜಾಲಂಧ್ರಗಳಿದ್ದು, ಗೋಡೆಗಂಬಗಳಿಂದ ಬಂಧಿಸಲ್ಪಟ್ಟಿವೆ. ಅಕ್ಕಪಕ್ಕದ ಅಂಕಣಗಳಿಗೂ ಗೋಡೆಗಂಬಗಳಿಗೆ ಹೊಂದಿಕೊಂಡಂತೆ ಎರಡೆರಡು ದೊಡ್ಡ ಜಾಲಂಧ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಆಯತಾಕಾರದ ಕೊಠಡಿಗೆ ಸಾಕಷ್ಟು ಗಾಳಿ ಮತ್ತು ಬೆಳಕು ಬರುವಂತಾಗಿದೆ. ಅಂದರೆ ಭಿತ್ತಿಯ ಬದಲಿಗೆ ಉದ್ದಕ್ಕೂ ಜಾಲಂಧ್ರಗಳನ್ನು ಅಳವಡಿಸಲಾಗಿದೆ. ಇವೆಲ್ಲವನ್ನು ಗಮನಿಸಿದಾಗ ಆಯತಾಕಾರದ ಕೋಣೆಯು ಆ ಕಾಲದ ಒಂದು ವಿಶಿಷ್ಟವಾದ ವಾಸ್ತುರಚನೆ ಎನ್ನಬಹುದು. ನೋಡಲು ನವರಂಗದ ಪಶ್ವಿಮ ಅಂಕಣದ ಭಾಗದಂತೆ ಕಂಡುಬರುತ್ತದೆ. ಪ್ರಮುಖ ಶಿಲ್ಪಗಳನ್ನಿಡಲು ದೇವಕೋಷ್ಠಗಳನ್ನು ಉಳಿಸಿಕೊಂಡು, ಗಾಳಿ ಮತ್ತು ಬೆಳಕಿಗಾಗಿ ಹಾಗೂ ರಂಗಮಂಟಪದಿಂದ ಪ್ರತ್ಯೇಕಿಸುವ ಸಲುವಾಗಿ ಗೋಡೆಗೆ ಬದಲು ಜಾಲಂಧ್ರಗಳನ್ನು ಉದ್ದಕ್ಕೂ ಅಳವಡಿಸಿದಂತೆ ಕಂಡುಬರುತ್ತದೆ. ಅಂದರೆ ನವರಂಗದ ಬದಲಿಗೆ ತೆರೆದ ರಂಗಮಂಟಪವೇ ಉಪಯುಕ್ತವೆಂದು ಭಾವಿಸಿ ಆಯತಾಕಾರದ ಕೋಣೆಗೆ ಹೊಂದಿಕೊಂಡಂತೆ ರಂಗಮಂಟಪವನ್ನು ನಿರ್ಮಿಸಲಾಗಿದೆ. ರಂಗಮಂಟಪದ ಮಧ್ಯದಲ್ಲಿರುವ ಕಂಬಗಳು ತಳದಲ್ಲಿ ಮತ್ತು ಮಧ್ಯದಲ್ಲಿ ಚೌಕರಚನೆಯನ್ನು, ಉಳಿದಂತೆ ದುಂಡಾಗಿದ್ದು, ಬಳೆಗಳ ಅಲಂಕರಣದಿಂದ ಕೂಡಿವೆ. ಉಳಿದ ಕಂಬಗಳು ಕಕ್ಷಾಸನದ ಮೇಲಿದ್ದು, ಲಂಭ ಉಬ್ಬುತಗ್ಗುಗಳ ರಚನೆಯಿಂದ ಕೂಡಿವೆ. ಭುವನೇಶ್ವರಿಯಲ್ಲಿ ಒಂಭತ್ತು ಚೌಕಮನೆಗಳಿದ್ದು, ಕಮಲಗಳನ್ನು ಬಿಡಿಸಲಾಗಿದೆ. ನಕ್ಷತ್ರಾಕಾರದಲ್ಲಿರುವ ರಂಗಮಂಟಪವು ಸುತ್ತಲೂ ಕಕ್ಷಾಸನವನ್ನು ಹೊಂದಿದ್ದು, ಉತ್ತರ, ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ಪ್ರವೇಶಗಳಿವೆ. ಅಧಿಷ್ಠಾನದ ರಚನೆಯಲ್ಲಿ ಬಸಾಲ್ಟ್‌ಶಿಲೆಯನ್ನು, ಭಿತ್ತಿ ರಚನೆಯಲ್ಲಿ ಮರಳುಗಲ್ಲನ್ನು ಬಳಸಿರುವುದು ಈ ದೇವಾಲಯದ ವಿಶೇಷವೆನ್ನಬಹುದು. ಭಿತ್ತಿಯಲ್ಲಿ ಅರ್ಧಕಂಬ ಮತ್ತು ದೇವಕೋಷ್ಠಗಳ ರಚನೆಯನ್ನು ಕಾಣಬಹುದು. ಅರ್ಧಕಂಬಗಳ ತುದಿಯಲ್ಲಿ ದ್ರಾವಿಡಶೈಲಿಯ ಶಿಖರಗಳ ಸೂಕ್ಷ್ಮ ಮಾದರಿಗಳನ್ನು ಬಿಡಿಸಲಾಗಿದೆ. ದೇವ ಕೋಷ್ಠಗಳ ಮೇಲೆ ಮಂಟಪದ ರಚನೆಯಿದ್ದು, ಅದರ ಮೇಲೆ ವಿಮಾನದ ಸೂಕ್ಷ್ಮ ಮಾದರಿಯನ್ನು ಬಿಡಿಸಿ ಅಲಂಕರಿಸಿದೆ. ಬಹುಶಃ ಇದೇ ಮಾದರಿಯ ಶಿಖರ ಗರ್ಭಗೃಹದ ಮೇಲಿದ್ದಿರಬಹುದು. ಆದರೆ ಈಗಿರುವುದು ಇತ್ತೀಚೆಗೆ ನಿರ್ಮಿಸಿರುವ ಗೂಡುಗಳುಳ್ಳ ನಾಲ್ಕುಹಂತದ ಸಿಮೆಂಟಿನ ಶಿಖರ. ಮೇಲೆ ಆಮಲಕ ರಚನೆಯ ಸ್ತೂಪಿ ಮತ್ತು ಕಳಸವಿದೆ. ದೇವಾಲಯದ ಮೇಲಿನ ಕೈಪಿಡಿ ಭಾಗವು ಜೀಣೋದ್ಧಾರಗೊಂಡಿದ್ದು, ದುಂಡಾದ ಸಿಮೆಂಟನ ಸಣ್ಣ ಸಿದ್ದಕಂಬಗಳನ್ನು ಸಾಲಾಗಿ ಅಳವಡಿಸಿ ಸಿಮೆಂಟಿನ ತೊಲೆಯಿಂದ ಬಂಧಿಸಲಾಗಿದೆ. ರಂಗಮಂಟಪವನ್ನು ಬಸಾಲ್ಟ್ ಶಿಲೆಯಲ್ಲಿ ನಿರ್ಮಿಸಿದೆ. ಕಕ್ಷಾಸನದ ಹೊರಮೈಯಲ್ಲಿ ಅರ್ಧಕಂಬಗಳ ಮೇಲೆ ನಾಗರ ಶಿಖರಗಳ ಅಲಂಕರಣವನ್ನು ಬಿಡಿಸಿದ್ದು, ನಡುವೆ ಮುಂಗಾಲೆತ್ತಿ ನಿಂತಸಿಂಹಗಳ ಉಬ್ಬುಶಿಲ್ಪವಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಆಯತಾಕಾರದ ಕೊಠಡಿಯಲ್ಲಿನ ಗೂಡುಗಳಲ್ಲಿ ಗಣಪತಿ, ಸಪ್ತಮಾತೃಕೆಯರ ಶಿಲ್ಪಫಲಕ. ಕಾಲಭೈರವ ಮತ್ತಿತರ ಶಿಲ್ವಾವಶೇಷಗಳಿವೆ.

ಇಲ್ಲಿರುವ ಮೂರನೆ ಸೋಮೇಶ್ವರನ ಕ್ರಿ.ಶ. ೧೧೨೯ರ ಶಾಸನವು, ಮಲ್ಲಿಸೆಟ್ಟಿಯು ಕಲಿದೇವರಿಗೆ ದಾನನೀಡಿದನೆಂದಿದೆ (ಸೌಇಇ XX : ೧೦೧). ಗೋವೆ ಕದಂಬರ ಪೆರ್ಮಾಡಿ ದೇವನ ಕ್ರಿ.ಶ. ೧೧೭೧ರ ಶಾಸನವು ಸಾಸಲದ ಕಲಿದೇವರಿಗೆ ಮಠ ಮತ್ತು ಭೂಮಿಯನ್ನು ಬಿಟ್ಟ ಉಲ್ಲೇಖವಿದೆ (ಅದೇ : ೨೫೨). ಶಾಸನಗಳು ದೇವಾಲಯ, ಮಠ ಮತ್ತು ಸ್ಥಳನಾಮದ ಮೇಲೆ ಬೆಳಕು ಚೆಲ್ಲುತ್ತವೆ.

ಊರು ಕುರುವಿನಕೊಪ್ಪ
ಸ್ಥಳ ಇದ್ದಲಿಕೇರಿ ಜಮೀನು
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿದ ಸಣ್ಣ ಕೊಠಡಿಯಿದು. ಒಳಗೆ ಗಾರೆವೇದಿಕೆಯಲ್ಲಿ ಕುಳಿ ಇರುವ ವೃತ್ತಾಕಾರದ ಕಲ್ಲನ್ನು ಅಳವಡಿಸಿದ್ದಾರೆ. ಹೊರಗೆ ಮರದ ಕೆಳಗೆ ಹಳೆ ದೇವಾಲಯಕ್ಕೆ ಸೇರಿದ ಲಿಂಗವೊಂದರ ಬ್ರಹ್ಮಭಾಗ ಮತ್ತು ರುದ್ರಭಾಗಗಳಿವೆ. ಹಾಗೂ ಭಗ್ನಗೊಂಡಿರುವ ನಂದಿ ಶಿಲ್ಪವಿದೆ.

೧೦

ಊರು ಕೂಡಲಿಗೆ
ಸ್ಥಳ ಬುಡ್ಡೆಸಾಬ್ ಹೊಲ
ಸ್ಮಾರಕ ಕಲ್ಲಪ್ಪನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಗರ್ಭಗೃಹವು ಬಿದ್ದುಹೋಗಿದೆ. ನಿಧಿ ಆಸೆಯಿಂದ ಶಿಲ್ಪಗಳನ್ನು ಒಡೆದು ಹಾಕಿದ್ದಾರೆ. ಹಾಗೂ ನೆಲದಲ್ಲಿ ತಗ್ಗು ತೋಡಿದ್ದಾರೆ. ಹೊರಭಾಗದಲ್ಲಿ ವಿಷ್ಣು, ನಂದಿ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಜೊತೆಗೆ ಕೆಲವು ವಾಸ್ತು ಅವಶೇಷ ಅಲ್ಲಲ್ಲಿ ಬಿದ್ದಿವೆ. ಇದೇ ಊರಿಗೆ ಸೇರಿದ ಶೆಟ್ಟರ ಜಮೀನಿನಲ್ಲಿ ಲಿಂಗ, ನಂದಿ ಮತ್ತಿತರ ಶಿಲ್ಪಾವಶೇಷಗಳಿವೆ. ಇಲ್ಲಿ ಸಣ್ಣಸರು ಮತ್ತು ಮಂಗನಹಳ್ಳ ಎಂಬ ಎರಡು ಹಳ್ಳಗಳು ಕೂಡುವುದರಿಂದ ಈ ಸ್ಥಳವನ್ನು ಕೂಡಲಸಂಗಮ ಎಂದು ಕರೆಯುತ್ತಾರೆ. ಊರೊಳಗಿರುವ ವೆಂಕಟೇಶ ಗುಡಿ ಪಕ್ಕದಲ್ಲಿ ಸುಮಾರು ೧೧-೧೨ನೆಯ ಶತಮಾನಕ್ಕೆ ಸೇರುವ ಗಣಪತಿ ಶಿಲ್ಪವಿದ.

೧೧

ಊರು ಗಳಗಿ ಹುಲಕೊಪ್ಪ
ಸ್ಥಳ ಗಳಗಿ ಹೊಂಡದ ಬಳಿ
ಸ್ಮಾರಕ ಬಸವಣ್ಣನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚಿನ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿವೆ. ಹಳೆ ದೇವಾಲಯವು ಹಾಳಾದ ನಂತರ ಈಗಿನ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗೃಹದ ಚಾವಣಿಯನ್ನು ಒರಟು ಶಿಲಾಚಪ್ಪಡಿಗಳಿಂದ ನಿರ್ಮಿಸಿದ್ದಾರೆ. ಸಭಾಗೃಹದ ಮೇಲೆ ಸೀಮೆಹೆಂಚನ್ನು ಹೊದಿಸಲಾಗಿದೆ. ಸಭಾಗೃಹವು ಪೂರ್ವ ಮತ್ತು ಉತ್ತರದಿಕ್ಕುಗಳಲ್ಲಿ ಪ್ರವೇಶದ್ವಾರ ಮಂಟಪಗಳನ್ನು ಹೊಂದಿದೆ. ಪೂರ್ವದಿಕ್ಕನ ಪ್ರವೇಶದ್ವಾರದ ಭಿತ್ತಿಯಲ್ಲಿ ಗಣಪತಿ ಮತ್ತು ಸಪ್ತಮಾತೃಕೆಯರ ಶಿಲ್ಪಫಲಕವನ್ನು ಅಳವಡಿಸಿದೆ ಗರ್ಭಗೃಹದಲ್ಲಿ ಲಿಂಗದ ಬ್ರಹ್ಮಭಾಗವಿದ್ದು, ಅದರ ಮೇಲೆ ಕಲ್ಲಿನ ಗುಂಡನ್ನು ಇಡಲಾಗಿದೆ. ಸಭಾಗೃಹದಲ್ಲಿ ನಂದಿ ಶಿಲ್ಪವಿದೆ.

ಇಲ್ಲಿರುವ ಮೂರನೆ ಜಯಕೇಶಿಯ ಕ್ರಿ.ಶ. ೧೨೦೨ರ ಶಾಸನದಲ್ಲಿ, ಬೊಂತೇಶ್ವರ ದೇವರಿಗೆ ಭೂದಾನ ಮಾಡಿದ ಉಲ್ಲೇಖವಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಮೇಲಿನ ದೇವಾಲಯದ ಪ್ರಾಚೀನ ಹೆಸರು ಬೊಂತೇಶ್ವರ ಎಂದು ತಿಳಿದುಬರುತ್ತದೆ.

೧೨

ಊರು ಗಂಜೀಗಟ್ಟಿ
ಸ್ಥಳ ಪ್ಲಾಟ್‌ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯ ಇತ್ತೀಚಿನದು. ಗರ್ಭಗೃಹ ಮತ್ತು ಸಭಾಗೃಹಗಳಿರುವ ದೇವಾಲಯವು ಆರ್‌.ಸಿ.ಸಿ. ನಿರ್ಮಾಣವಾಗಿದೆ. ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಸಭಾಗೃಹದಲ್ಲಿ ನಂದಿಶಿಲ್ಪವುಂಟು. ಗೋಡೆಯಲ್ಲಿ ಗಣಪತಿ ಮತ್ತು ನಾಗಶಿಲ್ಪಗಳನ್ನು ಅಳವಡಿಸಿದ್ದಾರೆ. ಹೊರಗೆ ಅಂಗನವಾಡಿ ಶಾಲೆಯ ಪಕ್ಕದಲ್ಲಿ ಹಳೆಯಲಿಂಗವನ್ನು ಕಾಣಬಹುದು.

೧೩

ಊರು ಜಿನ್ನೂರು
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಭಾಗವಾಗಿ ಗರ್ಭಗೃಹ ಮತ್ತು ಅರ್ಧಮಂಟಪ ಉಳಿದಿವೆ. ಗೋಡೆಯನ್ನು ಜಂಬಿಟ್ಟಿಗೆಯಿಂದ ನಿರ್ಮಿಸಲಾಗಿದೆ. ಬಾಗಿಲುವಾಡಗಳು ಸರಳವಾಗಿದ್ದು, ನಿರಾಡಂಬರವಾಗಿವೆ. ದೇವಾಲಯದ ಮೇಲೆ ಮರಗಿಡಗಳು ಬೆಳೆದಿವೆ.

ಗರ್ಭಗೃಹದಲ್ಲಿ ಸ್ವಯಂಭು ಲಿಂಗವಿದೆ. ಹೊರಗೆ ನಂದಿ, ಪಾಣಿಪೀಠ ಮತ್ತಿತರ ಭಗ್ನ ಶಿಲ್ಪಾವಶೇಷಗಳಿವೆ. ಜಂಬಿಟ್ಟಿಗೆಯು ೨ x ೦, ೭೫ x ೧.೫ ಅಡಿಗಳ ಅಳತೆಯನ್ನು ಹೊಂದಿದೆ.

ಇಲ್ಲಿರುವ ಕ್ರಿ.ಶ. ೧೧೩೮ರ ಶಾಸನವು ಗೋವೆ ಕದಂಬರ ಎರಡನೆ ಜಯಕೇಶಿಯದು. ಹೆಗ್ಗಡೆ ಬೀಚಣನು ಗ್ರಾಮೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿದನೆಂದಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಮೇಲಿನ ದೇವಾಲಯದ ಪ್ರಾಚೀನ ಹೆಸರು ಗ್ರಾಮೇಶ್ವರ ಎಂದು ತಿಳಿದು ಬರುವುದು.

೧೪

ಊರು ಜುಂಜುನ ಬೈಲು
ಸ್ಥಳ ದುರ್ಗಪ್ಪನವರ ಹೊಲ
ಸ್ಮಾರಕ ಬಸವಣ್ಣದೇವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಬಿದ್ದು ಹೋಗಿದೆ. ಆದರೆ ಗರ್ಭಗೃಹದ ಭಿತ್ತಿ ಅವಶೇಷವನ್ನು ಮತ್ತು ಗೋಡೆಗಂಬಗಳು ಭಗ್ನಸ್ಥಿತಿಯಲ್ಲಿರುವುದನ್ನು ಕಾಣಬಹುದು. ತೆರೆದಸ್ಥಿತಿಯಲ್ಲಿರುವ ಗರ್ಭಗೃಹದಲ್ಲಿ ಲಿಂಗವಿದೆ. ಗಣಪತಿ, ಕುದುರೆ ಲಾಂಛನವಿರುವ ಭೈರವ (ಮೈಲಾರಲಿಂಗೇಶ್ವರ) ಮತ್ತಿತರ ಶಿಲ್ಪಾವಶೇಷಗಳಿವೆ. ಮುಂಭಾಗದಲ್ಲಿ ವಿಷ್ಣು, ಗಣಪತಿ, ಸೂರ್ಯ ಹಾಗೂ ನಂದಿ ಶಿಲ್ಪಗಳು ಕಂಡುಬರುತ್ತವೆ. ಇವೆಲ್ಲವೂ ಭಗ್ನಗೊಂಡಿವೆ.

ಈ ನಿವೇಶನದಿಂದ ಕೆಲವೇ ಮೀಟರ್‌ಗಳು ಅಂತರದಲ್ಲಿ ಭೈರವಿ ಶಿಲ್ಪವಿದೆ. ದೇವಿಯು ರುಂಡಗಳ ಮೇಲೆ ಕುಳಿತು, ಕೈಗಳಲ್ಲಿ ತ್ರಿಶೂಲ, ಖಡ್ಗ, ಡಮರು ಮತ್ತು ಬಟ್ಟಲನ್ನು ಹಿಡಿದಿದ್ದಾಳೆ. ಈ ಶಿಲ್ಪದ ಬಳಿ ಮೂರು ಸ್ತ್ರೀಯರ ಸೂಕ್ಷ್ಮ ಶಿಲ್ಪಫಲಕವಿದೆ. ಮುಖಭಾಗ ಭಗ್ನಗೊಂಡಿದೆ. ಇವುಗಳ ತಲೆತುರುಬಿನಲ್ಲಿ ತಾಳೆಹೂಗಳ ಅಲಂಕರಣವುಂಟು. ಅಂದರೆ ಮಹಾಸತಿ ಶಿಲ್ಪಗಳಲ್ಲಿರುವ ಅಲಂಕರಣದಂತೆ. ಆದರೂ ಈ ಶಿಲ್ಪಗಳ ರಚನೆಯ ಉದ್ದೇಶ ಸ್ಪಷ್ಟವಗುವುದಿಲ್ಲ.

ಸಮೀಪದಲ್ಲಿರುವ ಸಂಗಟಿಕೊಪ್ಪದ ಹಳೆ ಊರಿನ ನಿವೇಶನದಲ್ಲಿ ವೀರಸತಿಕಲ್ಲು ಮತ್ತಿತರ ಭಗ್ನಶಿಲ್ಪಾವಶೇಷಗಳು ಕಂಡುಬರುತ್ತವೆ. ಹುಲುಗಿನಕೊಪ್ಪದ ಹತ್ತಿರವಿರುವ ಕೆರವಾಡದ ಹಳೆ ಊರಿ ನಿವೇಶನದಲ್ಲಿ ಕೆಲವು ಶಿಲ್ಪಾವಶೇಷಗಳಿವೆ. ಇಲ್ಲಿ ಊರುಗಳು ಸ್ಥಳಾಂತರಗೊಂಡಿದ್ದು, ಅಲ್ಲೆಲ್ಲ ಈಗ ಕಾಡು ಬೆಳೆದಿದೆ. ಅದೇ ರೀತಿ ಕಾಡನ್ನು ಕಡಿದು ಹೊಸ ಊರುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿನ ಜನರು ಸಾಮಾನ್ಯವಾಗಿ ಹುಲಿಯಪ್ಪ ಎಂಬ ಹುಲಿಶಿಲ್ಪವನ್ನು ಪೂಜಿಸುತ್ತಾರೆ.

೧೫

ಊರು ಜುಂಜುನ ಬೈಲು
ಸ್ಥಳ ದುರ್ಗಪ್ಪನವರ ಹೊಲ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಭಾಗವಾಗಿ ಗರ್ಭಗೃಹ ಉಳಿದಿದೆ. ಇದರ ಮೇಲೆ ಭಾರಿ ಪ್ರಮಾಣದ ಮಣ್ಣನ್ನು ಸುರಿಯಲಾಗಿದೆ. ಮಣ್ಣಿನ ಮೇಲೆ ಗಿಡಗಂಟಿಗಳು ಬೆಳೆದಿವೆ. ಗರ್ಭಗೃಹದ ದ್ವಾರಬಂಧ ಮತ್ತಿತರ ವಾಸ್ತು ಅವಶೇಷಗಳು ಊರೊಳಗಿನ ಅರಳಿಮರದ ಕೆಳಗಿವೆ.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಗೆ ಕಾರ್ತಿಕೇಯ, ಗಣಪತಿ, ಉಮಾಮಹೇಶ್ವರ, ನಾಗ ಮತ್ತು ಸಪ್ತಮಾತೃಕೆಯರ ಶಿಲ್ಪಫಲಕ ಶಿಲ್ಪಾವಶೇಷಗಳು ಕಂಡುಬರುತ್ತವೆ. ಇವೆಲ್ಲವೂ ಭಗ್ನಗೊಂಡಿವೆ.