ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಧಾರವಾಡ ಜಿಲ್ಲೆಯು ಪ್ರಸ್ತುತ ಐದು ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯು ಉತ್ತರ ಅಕ್ಷಾಂಶ ೧೫ ೧೯1 ರಿಂದ ೧೫ ೩೭1 ಮತ್ತು ಪೂರ್ವ ರೇಖಾಂಶ ೭೪ ೪೯1 ರಿಂದ ೭೫ ೩೫1 ರವರೆಗಿನ ಪ್ರದೇಶದಲ್ಲಿದ್ದು, ೪೦೭೬.೪ ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಧಾರವಾಡ ಜಿಲ್ಲೆಯ ಫಲವತ್ತಾದ ಕಪ್ಪು ಮಣ್ಣಿನದು. ಮಲೆನಾಡು, ಅರೆಮಲೆನಾಡು ಮತ್ತು ಬಯಲು ಪ್ರದೇಶಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಜೋಳ, ಮೆಣಸಿನಕಾಯಿ, ಹತ್ತಿ, ಈರುಳ್ಳಿ, ಶೇಂಗಾ, ಸೂರ್ಯಕಾಂತಿ, ತೊಗರಿ, ಭತ್ತ, ತರಕಾರಿ ಮತ್ತು ಹಣ್ಣುಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಜಿಲ್ಲೆಯ ಉತ್ತರದಲ್ಲಿ ಬೆಳಗಾವಿ ಜಿಲ್ಲೆ ಇದ್ದು, ಮಲಪ್ರಭಾನದಿ ಗಡಿಯಾಗಿ ಹರಿಯುತ್ತದೆ. ದಕ್ಷಿಣದಲ್ಲಿ ನೂತನ ಹಾವೇರಿ ಜಿಲ್ಲೆ ಇದೆ. ಪೂರ್ವದಲ್ಲಿ ಗದಗ ಜಿಲ್ಲೆ ಇದ್ದು, ಪಶ್ಚಿಮದಲ್ಲಿ ಉತ್ತರ ಕನ್ನಡ ಜಿಲ್ಲೆ ವ್ಯಾಪಿಸಿದೆ. ಮಲೆನಾಡು ಪ್ರದೇಶವು ಜಿಲ್ಲೆಯಲ್ಲಿ ಸುಮಾರು ೨೫ ರಿಂದ ೩೦ ಕಿ.ಮೀ. ಅಗಲವನ್ನು ಹೊಂದಿದೆ. ಅಳಣಾವರದ ಪೂರ್ವಕ್ಕಿರುವ ತೇಗೂರು ಗುಡ್ಡ, ಧಾರವಾಡ ಮತ್ತು ಕಲಘಟಗಿ ನಡುವಿನ ಬೂದನ ಗುದ್ದ, ಇದರ ಪಶ್ಚಿಮಕ್ಕಿರುವ ಗಣೀಗುಡ್ಡ, ಹಾಗೂ ನವಲಗುಂದದ ಮರಳುಗಲ್ಲಿನ ಗುಡ್ಡಗಳು ಪ್ರಮುಖವಾಗಿದೆ. ಉಳಿದಂತೆ ಅಲ್ಲಲ್ಲಿ ಸಣ್ಣಪುಟ್ಟ ಗುಡ್ಡಗಳು ಕಂಡುಬರುತ್ತದೆ. ಬಯಲು ಪ್ರದೇಶವು ಸಾಮಾನ್ಯ ತಗ್ಗುದಿಣ್ಣೆಗಳಿಂದ ಕೂಡಿದೆ. ಭೂವಿಜ್ಞಾನಿಗಳು, ಧಾರವಾಡ ಪ್ರದೇಶದಲ್ಲಿ ನಾಲ್ಕು ಮುಖ್ಯ ಶಿಲಾಪ್ರಕಾರಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ಜ್ವಾಲಾಮುಖಿಶಿಲೆ, ಸ್ಫಟಿಕ ಪದರಶಿಲೆ, ರೂಪಗೆಟ್ಟ ಪ್ರಸ್ತರಿಶಿಲೆ ಮತ್ತು ಅಗ್ನಿಶಿಲೆ (ಧಾಜಿಗ್ಯಾ). ಧಾರವಾಡ ಪದರಶಿಲೆಯು ಉತ್ತರ-ದಕ್ಷಿಣವಾಗಿ ಹಬ್ಬಿದೆ. ಇದರ ಸುತ್ತಲೂ ಗ್ರಾನೈಟ್ ಮತ್ತು ನೈಸ್ ಶಿಲೆಗಳು ಹರಡಿವೆ. ಧಾರವಾಡ ಪ್ರದೇಶ ಸ್ಫಟಿಕ ಪದರಶಿಲೆಗೆ ಪ್ರಸಿದ್ಧವಾಗಿದೆ. ಇದನ್ನು, ರಾಬರ್ಟ್‌ಬ್ರೂಸ್ ಫೂಟ್‌ಎಂಬ ಭೂಗರ್ಭತಜ್ಞನು ಧಾರ್ವಾರ್‌ಸಿಸ್ಟ್‌ ಎಂದು ಕರೆದಿದ್ದಾನೆ. ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಖನಿಜಗಳು ಕಾಣಬರುವುದಿಲ್ಲ. ಧಾರವಾಡದ ಸೋಮೇಶ್ವರದಲ್ಲಿ ಹುಟ್ಟುವ ಶಾಲ್ಮಲಾ ನದಿಯು, ಧಾರವಾಡ ತಾಲ್ಲೂಕಿನಲ್ಲಿ ಹುಟ್ಟುವ ಬೇಡ್ತಿನದಿಯ ಉಪನದಿಯಾಗಿ ಕಲಘಟಗಿ ಬಳಿಯ ಸಂಗೇದೇವರಕೊಪ್ಪದಲ್ಲಿ ಕೂಡುತ್ತದೆ. ಬೇಡ್ತಿ ನದಿಗೆ ದುಮ್ಮವಾಡದ ಬಳಿ (ಕಲಘಟಗಿ ತಾಲ್ಲೂಕು) ಒಡ್ಡು ಹಾಕಿ ನೀರಸಾಗರ ಎಂಬ ಜಲಾಶಯವನ್ನು ನಿರ್ಮಿಸಿದ್ದಾರೆ. ಇದರ ನೀರನ್ನು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಒದಗಿಸಲಾಗುವುದು. ಉಳಿದಂತೆ ಜಿಲ್ಲೆಯಲ್ಲಿ ಕೆರೆಗಳು ಮತ್ತು ಬಾವಿಗಳಿದ್ದು, ಬಳಕೆಗೊಳ್ಳುತ್ತಿವೆ. ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ವಿಪುಲವಾಗಿದೆ. ತೇಗ, ಬೀಟೆ, ಹೊನ್ನೆ, ನಂದಿ ಮತ್ತಿತರ ಬೆಲೆಬಾಳುವ ಮರಗಳು ಬೆಳೆದಿವೆ. ಅಳಲೆಕಾಯಿ, ಜೇನುತುಪ್ಪ, ಮೇಣ, ಸೀಗೆಕಾಯಿ, ಅಂಟವಾಳ, ಧೂಪ ಇತರ ಅರಣ್ಯ ಉತ್ಪನ್ನಗಳಾಗಿವೆ. ಜೊತೆಗೆ ಅನೇಕ ಔಷಧಿ ಗಿಡಮೂಲಿಕೆಗಳು ದೊರೆಯುತ್ತವೆ.

ಧಾರವಾಡ ಜಿಲ್ಲೆಯಲ್ಲಿ ಪ್ರಾಗಿತಿಹಾಸ ಕಾಲದಿಂದಲೂ ಮಾನವನ ಚಟುವಟಿಕೆಯ ಕುರುಹುಗಳು ಕಂಡುಬರುತ್ತವೆ. ರಾಬರ್ಟ್‌ಬ್ರೂಸ್‌ಫೂಟ್ ಅವರು, ಮಲಪ್ರಭ ಮತ್ತು ಬೆಣ್ಣೆಹಳ್ಳಗಳು ಕೂಡುವ ಸ್ಥಳದಲ್ಲಿ ಹಳೆಶಿಲಾಯುಗದ ನೆಲೆಯನ್ನು ಪತ್ತೆಹಚ್ಚಿದ್ದಾರೆ. (ಧಾಜಿಗ್ಯಾ : ೫೨). ಧಾರವಾಡ ತಾಲೂಕಿನ ಕಲ್ಲಾಪುರ ಮತ್ತು ನವಲಗುಂದ ತಾಲ್ಲೂಕಿನ ಸಾಸ್ವಿಹಳ್ಳಿ (ಜೋಷಿ ೧೯೭೫ : ೫) ಮತ್ತು ಗುಡಿಸಾಗರಗಳಲ್ಲಿ ಆದಿಹಳೆಶಿಲಾಯುಗದ ಅವಶೇಷಗಳನ್ನು ಪತ್ತೆಹಚ್ಚಲಾಗಿದೆ. (ಇ.ಆ. ೧೯೬೭-೬೮ : ೩೬). ವೀರಾಪುರದಲ್ಲಿ ಸೂಕ್ಷ್ಮ ಶಿಲಾಯುಗದ ಅವಶೇಷಗಳನ್ನು ಬಿ. ನರಸಿಂಹಯ್ಯನವರು ಗುರುತಿಸಿದ್ದಾರೆ. ನೆರೆಯ ನರಗುಂದ ತಾಲೂಕಿನ ಅರಿಶಿಲಗೋಡಿ, ಭೈರನಮಟ್ಟಿ, ಹಾರುಗುಪ್ಪ, ಕುರುಗೋವಿನಕೊಪ್ಪ, ಲಿಂಗದಾಳ ಮತ್ತು ಶಿರೋಳ, ರೋಣ ತಾಲೂಕಿನ ಮಣ್ಣೂರು, ಮೆಣಸಗಿ, ನಿಡಗುಂಡಿ ಮತ್ತು ನಿಡಗುಂದಿಕೊಪ್ಪ ಮುಂತಾದ ನೆಲೆಗಳಲ್ಲಿ ಪ್ರಾಗಿತಿಹಾಸಕಾಲದ ಅವಶೇಷಗಳನ್ನು ಸಂಗ್ರಹಿಸಲಾಗಿದೆ (ಅದೇ). ಪ್ರಸ್ತುತ ದೇವಾಲಯ ಕೋಶದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಧಾರವಾಡ ತಾಲೂಕನ ಬೆನಕನಮಟ್ಟಿಯಲ್ಲಿ ನವಶಿಲಾಯುಗಕಾಲದ ಆಯುಧೋಪಕರಣಗಳನ್ನು ಗುರುತಿಸಲಾಗಿದೆ. ಇಲ್ಲಿನ ಪರ್ವತಮಲ್ಲಯ್ಯನ ಗುಡಿಯಲ್ಲಿ ಲಿಂಗದ ಮುಂದೆ ನಯಮಾಡಿದ ಶಿಲಾಕೊಡಲಿಗಳನ್ನು ಇಟ್ಟು ಪೂಜಿಸಲಾಗುತ್ತಿದೆ. ಬೆನಕನಮಟ್ಟಿಯ ಸುತ್ತಲಿನ ಹೊಲಗಳಲ್ಲಿ ನಯಮಾಡಿದ ಶಿಲಾಕೊಡಲಿಗಳು, ಕವಣೆಕಲ್ಲುಗಳು ದೊರೆಯುತ್ತವೆ. ಇವುಗಳ ನಯಗಾರಿಕೆಗೆ ಮನಸೋತ ರೈತರು ಆಯ್ದುತಂದು ಲಿಂಗದ ಮುಂದಿಟ್ಟಿದ್ದಾರೆ. ಗುಡ್ಡದ ನೆತ್ತಿಯ ಇಳಿಜಾರಿನಲ್ಲಿ ನವಿ ಇದ್ದು, ಹುಲಿಗವಿ ಎಂದು ಕರೆಯುತ್ತಾರೆ. ಸಮೀಪದಲ್ಲಿ ಕೆರೆಯೊಂದಿದೆ. ಸ್ವಲ್ಪದೂರದಲ್ಲಿ ಹಳ್ಳಗಳು ಹರಿಯುತ್ತವೆ. ಈ ಎಲ್ಲ ಭೌಗೋಳಿಕ ಹಿನ್ನೆಲೆಯಲ್ಲಿ ಬೆನಕನಮಟ್ಟಿಯು ನವಶಿಲಾಯುಗ ಕಾಲದ ಪ್ರಮುಖ ನೆಲೆಯಾಗಿತ್ತೆಂದು ಗ್ರಹಿಸಬಹುದು. ಜೊತೆಗೆ ಸುತ್ತಲಿನ ಹೊಲಗಳಲ್ಲಿ ಆದಿ ಇತಿಹಾಸ ಕಾಲದ ಚಿತ್ರಿತ ಕೆಂಪುಮಡಿಕೆ ಚೂರುಗಳು ದೊರೆಯುತ್ತವೆ. ಅಂದರೆ ಶಾತವಾಹನರ ಕಾಲದ ಮಡಿಕೆ ಚೂರುಗಳು ಯಥೇಚ್ಛವಾಗಿ ಕಂಡುಬರುತ್ತವೆ. ಮೇಲೆ ಹೇಳಿದ ಗುಡಿಯಲ್ಲಿ ಸೂಕ್ಷ್ಮ ರಚನೆಯ ಶಿಲಾಕಲಶವಿದ್ದು, ಅದರ ಮೇಲೆ ಮೂವರು ಸ್ತ್ರೀಯರ ಅತೀ ಸೂಕ್ಷ್ಮ ಶೀಲ್ಪಗಳನ್ನು ಬಿಡಿಸಿದೆ. ಬಹುಶಃ ಇದು ಸಹ ಅದಿ ಇತಿಹಾಸ ಕಾಲದ ರಚನೆಯೆನ್ನಬಹುದು. ಡಾ. ರಘುನಾಥ ಭಟ್ಟರು ಧಾರವಾಡದ ಬಳಿಯ ಕ್ಯಾರಕೊಪ್ಪದ ಹೊರವಲಯದಲ್ಲಿ ನವಶಿಲಾಯುಗದ ಕೊಡಲಿಗಳನ್ನು ಹಾಗೂ ಹಲವು ಕ್ವಾರ್ಟ್‌‌ಜೈಟ್‌ಆಯುಧಗಳನ್ನು ಪತ್ತೆಹಚ್ಚಿದ್ದಾರೆ. ನವಲಗುಂದ ತಾಲೂಕಿನ ದಾಟನಾಳದಲ್ಲಿ ನವಶಿಲಾಯುಗದ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳನ್ನು ಗುರುತಿಸಲಾಗಿದೆ. (ಇಂ.ಅ.೧೯೬೬-೬೭ : ೨೮). ನಾಗರಹಳ್ಳಿಯಲ್ಲಿ ಬೃಹತ್‌ಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಪತ್ತೆಹಚ್ಚಿದ್ದಾರೆ (ಇ.ಅ.೧೯೬೭-೬೮ : ೩೬). ಅಲ್ಲದೆ ಜಿಲ್ಲೆಯ ಪರಿಸರದಲ್ಲೂ ಬೃಹತ್‌ಶಿಲಾಯುಗದ ನೆಲೆ ಮತ್ತು ಕುರುಹುಗಳು ಬೆಳಕಿಗೆ ಬಂದಿವೆ. ಹೀಗೆ ಧಾರವಾಡ ಪ್ರದೇಶವು ಆದಿಹಳೆಶಿಲಾಯುಗ ಕಾಲದಿಂದಲೂ ಮಾನವನ ಚಟುವಟಿಕೆಯ ನೆಲೆಯಾಗಿರುವುದನ್ನು ಕಾಣುತ್ತೇವೆ.

ಕರ್ನಾಟಕದ ಇತರ ಪ್ರದೇಶಗಳಂತೆ ಧಾರವಾಡ ಪ್ರದೇಶದವು ಸಹ ಆದಿಇತಿಹಾಸ ಕಾಲದ ನೆಲೆಗಳನ್ನು ಒಳಗೊಂಡಿದೆ. ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ಆದಿಚಾರಿತ್ರಿಕ ನೆಲೆಯನ್ನು ಬೆಳಕಿಗೆ ತರಲಾಗಿದೆ. (ಇ.ಅ.೧೯೫೮-೫೯ : ೩೨). ನೆರೆಯ ಬೆಳಗಾವಿ ಸಮೀಪದ ವಡಗಾವಿ ಮಾಧವಪುರದಲ್ಲಿ ಉತ್ಖನನ ಮಾಡಿ ಆದಿಇತಿಹಾಸ ಕಾಲದ ಅವಶೇಷಗಳನ್ನು ಬೆಳಕಿಗೆ ತಂದಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳನ್ನು ಚಿತ್ರಿಕ ಕೆಂಪು ಮಡಿಕೆಚೂರುಗಳು ಕಂಡುಬರುತ್ತವೆ. ಅಂದರೆ ಶಾತವಾಹನರ ಚಿತ್ರಿತ ಕೆಂಪು ಮಡಿಕೆಚೂರುಗಳು ದೊರೆತಿವೆ. ಈ ಭಾಗವು ಮೊದಲಿಗೆ ಮೌರ್ಯರ ಆಡಳಿತಕ್ಕೆ ಒಳಗಾಗಿತ್ತೆಂದು ಹೇಳಬಹುದು. ನಂತರ ಶಾತವಾಹನರ ಆಳ್ವಿಕೆಗೆ ಒಳಪಟ್ಟಿತು. ನೆರೆಯ ಬಳ್ಳಾರಿ ಜಿಲ್ಲೆಯನ್ನು ಶಾತವಾಹನೀಹಾರ ಎಂದು ಕರೆದಿರುವ ಹಿನ್ನೆಲೆಯಲ್ಲಿ ಮೇಲಿನ ಅಭಿಪ್ರಾಯವನ್ನು ವ್ಯಕ್ತಮಾಡಬಹುದಾಗಿದೆ. ಸಮೀಪದ ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ವಾಸಿಷ್ಠಿ ಪುತ್ರ ಶ್ರಿಪುಳುಮಾವಿಯ ಪ್ರಾಕೃತ ಶಾಸನವಿದ್ದು, ಮಹಾದೇವ ಚಂಡಶಿವನ ದೇವಾಲಯ ಮತ್ತು ಶಿಲ್ಪಯೊಬ್ಬನನ್ನು ಉಲ್ಲೇಖಿಸಿದೆ. ಇದು ಕರ್ನಾಟಕದ ಪ್ರಾಚೀನ ಶಿವಾಲಯವೆಂದು ಹೇಳಲಾಗಿದೆ. (ಧಾಜಿಗ್ಯಾ : ೫೩). ಅವಿಭಜಿತ ಧಾರವಾಡ ಜಿಲ್ಲೆಯ ಅಕ್ಕಿಆಲೂರಿನಲ್ಲಿ ರೋಮನ್‌ನಾಣ್ಯಗಳು ದೊರೆತಿವೆ. ಇದರಿಂದ ಈ ಪ್ರದೇಶವು ರೋಮ್‌ನೊಂದಿಗೆ ವ್ಯಾಪಾರವಾಣಿಜ್ಯ ಸಂಪರ್ಕವನ್ನು ಹೊಂದಿತ್ತೆಂದು ಹೇಳಬಹುದು. ಈ ಭಾಗದ ಕೆಲವು ಪ್ರದೇಶಗಳನ್ನು ಟಾಲೆಮಿ ಉಲ್ಲೇಖಿಸಿದ್ದಾನೆ.

ಶಾತವಾಹನರ ನಂತರ ಈ ಪ್ರದೇಶವು ಕಂಚಿಯ ಪಲ್ಲವರ ಆಳ್ವಿಕೆಗೆ ಒಳಪಟ್ಟಿತು. ಕ್ರಿ.ಶ. ನಾಲ್ಕನೆಯ ಶತಮಾನದ ಆರಂಭದಲ್ಲಿ ಕದಂಬರು ಪಲ್ಲವರಿಂದ ಈ ಪ್ರದೇಶವೂ ಸೇರಿದಂತೆ ಇತರ ಭಾಗಗಳನ್ನು ಕಸಿದುಕೊಳ್ಳುತ್ತಾರೆ. ಕದಂಬರ ಶಾಸನಗಳಲ್ಲಿ ಕುಂದೂರು ವಿಷಯವು ಉಲ್ಲೇಖಗೊಂಡಿದ್ದು, ಇಂದಿನ ಧಾರವಾಡದ ಸಮೀಪವಿರುವ ನರೇಂದ್ರದ ಪರಿಸರವನ್ನೂ ಒಳಗೊಂಡಿತ್ತೆಂದು ಪಂಚಮುಖಿಯವರು ಗುರುತಿಸಿದ್ದಾರೆ (ಅದೇ : ೫೬). ಕದಂಬರ ನಂತರ ಈ ಪ್ರದೇಶವು ಬಾದಾಮಿ ಚಾಲುಕ್ಯರ ಆಡಳಿತಕ್ಕೆ ಸೇರುತ್ತದೆ. ಜಿಲ್ಲೆಯಲ್ಲಿ ಇವರ ಶಾಸನಗಳು ದೊರೆತಿವೆ. ಇವರ ಕಾಲದಲ್ಲಿ ಅಣ್ಣಿಗೇರಿಯಲ್ಲಿ ಬಸದಿಯೊಂದು ನಿರ್ಮಾಣಗೊಂಡಿತು(ಸೌಇಇ xi-i : ೫). ನೆರೆಯ ಲಕ್ಷ್ಮೇಶ್ವರದಲ್ಲಿ ಬಾದಾಮಿ ಚಾಲುಕ್ಯರ ಸ್ಮಾರಕಗಳು ಉಳಿದುಬಂದಿವೆ. ಇವರ ನಂತರ ಧಾರವಾಡ ಪ್ರದೇಶವು ರಾಷ್ಟ್ರಕೂಟರ ಆಳ್ವಿಕೆಗೆ ಒಳಗಾಯಿತು. ಜಿಲ್ಲೆಯಲ್ಲಿ ದೊರೆತಿರುವ ಇವರ ಶಾಸನಗಳ, ದೇವಾಲಯಗಳ ಮತ್ತು ಕೆರೆಗಳ ನಿರ್ಮಾಣವನ್ನು ಕುರಿತಿವೆ. ಹುಬ್ಬಳ್ಳಿಯ ಕ್ರಿ.ಶ. ೯೭೪ರ ಶಾಸನವೊಂದು, ಮೋರಿಯರ ಕಲಿಬಿಟ್ಟಯ್ಯನು ಕೆರೆಯನ್ನು ನಿರ್ಮಿಸಿ ದಾನ ಮಾಡಿದನೆಂದಿದೆ (ಕಲಬುರ್ಗಿಳ ಧಾಜಿಶಾಸೂ). ಅರಸರು ಮತ್ತು ಅವರ ಅಧಿಕಾರಿಗಳು ಆಡಳಿತಾತ್ಮಕವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಷ್ಟ್ರಕೂಟರ ಕಾಲದಲ್ಲೇ ಧಾರವಾಡ ಪ್ರದೇಶವು ಕುಂದೂರು-೧೦೦೦, ಪಲಸಿಗೆ-೧೨,೦೦೦, ಪುಲಿಗೆರೆ-೩೦೦ ಮತ್ತು ಬೆಳ್ವೊಲ-೩೦೦ ರ ಭಾಗವನ್ನು ಒಳಗೊಂಡಿತ್ತು. ಕನ್ನರನು ಈ ಪ್ರದೇಶವನ್ನು ತಲಕಾಡಿನ ಗಂಗರ ಭೂತುಗನಿಗೆ ಉಡುಗೊರೆಯಾಗಿ ನೀಡಿದ್ದನು. ಭೂತುಗನ ನಂತರ ಮಾರಸಿಂಹ ಈ ಪ್ರದೇಶವನ್ನು ನೋಡಿಕೊಳ್ಳುತ್ತಾನೆ. ಈತನ ಅಧಿಕಾರಿ ಪಾಂಚಾಲ ಎಂಬುವನು ಸಬ್ಬಿ-೩೦ (ಛಬ್ಬಿ, ಹುಬ್ಬಳ್ಳಿ ತಾಲೂಕು)ನ್ನು ಆಳುತ್ತಿದ್ದು, ಅದರಗುಂಚಿಯ ಮಲ್ಲಿಗೇಶ್ವರ ದೇವಾಲಯಕ್ಕೆ ದಾನ ನೀಡಿದ್ದಾನೆ (ಇ.ಅಆ.೧೨ : ೨೫೫-೫೬).

ರಾಷ್ಟ್ರಕೂಟರ ನಂತರ, ಈ ಪ್ರದೇಶವನ್ನು ಕಲ್ಯಾಣದ ಚಾಲುಕ್ಯರು ಆಳಿದರು. ಇವರ ಶಾಸನಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಅಸಂಖ್ಯಾತ ದೇವಾಲಯಗಳು ನಿರ್ಮಾಣಗೊಂಡವು. ಹಾಗೂ ದಾನದತ್ತಿಗಳು ಕೊಡಲ್ಪಟ್ಟವು. ಇವರ ಸಾಮಂತರಾಗಿ ಈ ಪ್ರದೇಶವನ್ನಾಳಿದ ಗೋವೆಯ ಕದಂಬರು ಸಹ ದೇವಾಲಯಗಳನ್ನು ನಿರ್ಮಿಸಿ, ದಾನದತ್ತಿಗಳನ್ನು ನೀಡಿದರು. ಜಿಲ್ಲೆಯಲ್ಲಿ ರಾಷ್ಟ್ರಕೂಟರಿಂದ ಆರಂಭಗೊಂಡ ಸಾಂಸ್ಕೃತಿಕ ಪರಂಪರೆಯು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಶ್ರೀಮಂತಗೊಂಡಿತು. ಜಿಲ್ಲೆಯಲ್ಲಿ ದೊರೆಯುವ ಕಲ್ಯಾಣ ಚಾಲುಕ್ಯರ ಮತ್ತು ಅವರ ಸಾಮಂತರ ಶಾಸನಗಳು ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಳ್ಳಲು ಅಮೂಲ್ಯ ಆಧಾರಗಳಿವೆ. ಜಯಸಿಂಹದೇವನು ಯುವರಾಜನಾಗಿ ಕುಂದೂರು-೧೦೦೦, ಪುಲಿಗೆರೆ-೩೦೦ ಮತ್ತು ಬೆಳ್ವೊಲ-೩೦೦ ಪ್ರದೇಶಗಳನ್ನು ಆಳಿದ್ದಾನೆ. ಹುಬ್ಬಳ್ಳಿಯ ಉಣಕಲ್ಲಿನಲ್ಲಿ, ಚಾಲುಕ್ಯರಿಗೂ ಮತ್ತು ಚೋಳರಿಗೂ ಯುದ್ಧ ನಡೆಯಿತು (ಧಾಜಿಗ್ಯಾ : ೬೬). ಸಾಮಂತ ಜಟಾಚೋಳನ ರಾಣಿ ಮಲಯವತಿದೇವಿಯು ಎಲೆಯ ಪೂರ್ವಳ್ಳಿ ಅಗ್ರಹಾರದ (ಇಂದಿನ ಹುಬ್ಬಳ್ಳಿ) ಆಡಳಿತ ನಡೆಸುತ್ತಿದ್ದಳು (ಅದೇ : ೭೦). ಜಕ್ಕರಸನೆಂಬ ಅಧಿಕಾರಿ, ಅಮರಗೋಳದಲ್ಲಿ (ಹುಬ್ಬಳ್ಳಿ ತಾಲೂಕು) ಕೇಶವ ಮತ್ತು ಭೈರವ ದೇವಾಲಯವನ್ನು ನಿರ್ಮಿಸಿದನು. ಅಮರಗೋಳವು ಹಲಸಿಗೆನಾಡಿನ ಉಣಕಲ್ಲ ಕಂಪಣದಲ್ಲಿತ್ತು. ಕಲ್ಯಾಣ ಚಾಳುಕ್ಯರ ಕೊನೆಯ ದೊರೆ ನಾಲ್ಕನೆಯ ಸೋಮೇಶ್ವರನು ಈ ಪ್ರದೇಶದಲ್ಲಿ ನೆಲಸಿ ಅಣ್ಣಿಗೇರಿಯ ದೇವಾಲಯಕ್ಕೆ ದಾನದತ್ತಿಗಳನ್ನು ನೀಡಿದ್ದಾನೆ (ಸೌಇಇ xv- : ೫೯, ೭೨). ಕಳಚೂರಿಳು ಸಹ ಧಾರವಾಡ ಪ್ರದೇಶದಲ್ಲಿ ಆಡಳಿತ ನಡೆಸಿದರು. ಇವರ ಅಧಿಕಾರಿಗಳು ಕುಂದಗೋಳ ಮತ್ತು ಅಣ್ಣಿಗೇರಿಯ ದೇವಾಲಯಗಳಿಗೆ ದಾನದತ್ತಿಗಳನ್ನು ನೀಡಿದ್ದಾರೆ (ಸೌಇಇ xx : ೧೬೩;XV : ೯೬, ೧೦೦, ೧೨೨). ತಂಬೂರಿನ ವೀರಗಲ್ಲು ಶಾಸನವೊಂದರಲ್ಲಿ, ಬಿಜ್ಜಳನು ಹಾನುಗಲ್ಲು ಕೋಟೆಯ ಮೇಲೆ ದಾಳಿಮಾಡಿದ ಉಲ್ಲೇಖವಿದೆ. ಇವನ ಸೋದರ ಮೈಲುಗಿ ಬೆಳ್ವೊಲ-೩೦೦ನ್ನು ಆಳುತ್ತಿದ್ದನು. ಕಲ್ಯಾಣದ ಕ್ರಾಂತಿಯ ನಂತರ ಚೆನ್ನಬಸವಣ್ಣ ಮತ್ತಿತರ ಶರಣರು ಧಾರವಾಡ, ಸತ್ತೂರು, ಹುಬ್ಬಳ್ಳಿ ಮತ್ತು ಅದರಗುಂಚಿಯ ಮಾರ್ಗವಾಗಿ ಉಳವಿಗೆ ಹೋದರೆಂದು ಹೇಳಲಾಗಿದೆ (ಧಾಜಿಗ್ಯಾ : ೭೨).

ಗೋವೆಯ ಕದಂಬರು ಈ ಪ್ರದೇಶದಲ್ಲಿ ಮೊದಲಿಗೆ ಕಲ್ಯಾಣ ಚಾಲುಕ್ಯರ ಸಾಮಂತರಾಗಿ ಆಡಳಿತ ನಡೆಸಿದರು. ನಂತರ ಸೇವುಣರ ಅಧೀನದಲ್ಲಿ ಮುಂದುವರೆದರು. ಅರಸರು, ರಾಣಿಯರು ಮತ್ತು ಅಧಿಕಾರಿಗಳು ದೇವಾಲಯಗಳನ್ನು ನಿರ್ಮಿಸ, ದಾನ ಮಾಡಿದ ಉಲ್ಲೇಖಗಳು ದೊರೆಯುತ್ತವೆ. ಇವರ ಕಾಲದಲ್ಲಿ ಸೊನ್ನಲಿಗೆಯ ಮಲ್ಲಿಕಾರ್ಜುನ ದೇವರಿಗೆ ಉಚ್ಛಂಗಿ (ಇಂದಿನ ಬುಡರಸಿಂಗಿ) ಗ್ರಾಮವನ್ನು ದತ್ತಿಯಾಗಿ ನೀಡಿದರು. ಅಂತಿಮವಾಗಿ ಕಲ್ಯಾಣವನ್ನು ಆಕ್ರಮಿಸಿದ ಸೇವುಣರು ಧಾರವಾಡ ಪ್ರದೇಶದ ಮೇಲೆ ಹಿಡಿತ ಹೊಂದಿದ್ದರು. ಆದರೂ ಈ ಪ್ರದೇಶದಲ್ಲಿ ಅಧಿಕಾರಕ್ಕಾಗಿ ಸೇವುಣರಿಗೂ ಮತ್ತು ಹೊಯ್ಸಳರಿಗೂ ನಿರಂತರವಾಗಿ ಯುದ್ಧಗಳು ನಡೆದವು. ಸೇವುಣರು ಮತ್ತು ಅವರ ಅಧಿಕಾರಿಗಳು ದೇವಾಲಯಗಳಿಗೆ ದಾನದತ್ತಿಗಳನ್ನು ನೀಡಿದ್ದಾರೆ.

ಹೊಯ್ಸಳರು ಈ ಪ್ರದೇಶದಲ್ಲಿ ಅಧಿಕಾರ ಸ್ಥಾಪನೆಗಾಗಿ ಹೋರಾಡಿದ ನಿರ್ದಶನಗಳಿವೆ. ಬೆಳ್ವೊಲ ಪ್ರಾಂತ್ಯಕ್ಕಾಗಿ ಹೊಯ್ಸಳರಿಗೂ ಮತ್ತು ಕಳವೂರಿಗಳಿಗೂ ಯುದ್ಧ ನಡೆಯಿತು. ಕ್ರಿ.ಶ. ೧೧೯೦ ರಲ್ಲಿ ನೆರೆಯ ಸೊರಟೂರಿನಲ್ಲಿ ಹೊಯ್ಸಳರಿಗೂ ಮತ್ತು ಸೇವುಣರಿಗೂ ಭಾರಿ ಯುದ್ಧ ನಡೆಯಿತು. ಹೊಯ್ಸಳ ಅರಸರು ಮತ್ತು ಅಧಿಕಾರಿಗಳು ಅಣ್ಣಿಗೇರಿಯ ಅಮೃತೇಶ್ವರ ದೇವಾಲಯಕ್ಕೆ ದಾನದತ್ತಿಗಳನ್ನು ನೀಡಿದ್ದಾರೆ.

ಮುಂದೆ ವಿಜಯನಗರದ ಕಾಲದಲ್ಲಿ ಧಾರವಾಡ ಪ್ರದೇಶದಲ್ಲಿ ವಿಜಯನಗರ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಸೀಮೆ ಮತ್ತು ವೇಂಠೆಗಳೆಂದು ಆಡಳಿತ ಭಾಗಗಳು ರೂಪುಗೊಂಡವು. ಕೃಷ್ಣದೇವರಾಯನ ಶಾಸನವೊಂದು ತೊರಗಲೆ ವೇಂಠೆಯ ಗುಮ್ಮಗೋಳ ಗ್ರಾಮವನ್ನು ಹೆಸರಿಸುತ್ತದೆ (ಸೌಇಇ xv : ೨೫೦). ವಿಜಯನಗರದ ಅರಸದ ಶಾಸನಗಳು, ಜಿಲ್ಲೆಯಲ್ಲಿ ಅವರು ಕೈಗೊಂಡ ಧರ್ಮಕಾರ್ಯಗಳನ್ನು ಮತ್ತು ನಾವಿದ ಸಮುದಾಯಕ್ಕೆ ನೀಡಿದ ಸುಂಕಮಾನ್ಯಗಳನ್ನು ತಿಳಿಸುತ್ತವೆ. ಜಿಲ್ಲೆಯ ಕೆಲವು ಪ್ರದೇಶಗಳು ಬಿಜಾಪುರದ ಆದಿಲ್‌ಷಾಹಿಗಳ ವಶದಲ್ಲಿದ್ದವು. ಇವರ ಶಾಸನಗಳು ಜಿಲ್ಲೆಯ ಅಣ್ಣಿಗೇರಿ, ನೆರೆಯ ಬಂಕಾಪುರ, ಸವಣೂರು ಮತ್ತು ಲಕ್ಷ್ಮೇಶ್ವರಗಳಲ್ಲಿವೆ. ಮುಂದೆ ಕ್ರಿ.ಶ. ೧೬೭೪ರ ವೇಳೆಗೆ ಶಿವಾಜಿ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೂ, ಕ್ರಿ.ಶ. ೧೬೮೫ ರ ವೇಳೆಗೆ ಧಾರವಾಡ ಮತ್ತು ಹುಬ್ಬಳ್ಳಿ ಕೋಟೆಗಳನ್ನು ಮೊಗಲ್‌ರಾಜಪುತ್ರ ಮುಆಜಂ ಗೆದ್ದುಕೊಂಡನು. ಇದರಿಂದಾಗಿ ಈ ಭಾಗದಲ್ಲಿ ಬಿಜಾಪುರದ ಆಡಳಿತ ಕೊನೆಗೊಂಡಿತು. ಹೀಗೆ ಧಾರವಾಡ ಪ್ರದೇಶವು ಮೊಗಲರ ಮತ್ತು ಮರಾಠರ ನಡುವೆ ಹಂಚಿಹೋಯಿತು. ಹಾಗೂ ಈ ಭಾಗದಲ್ಲಿ ಇಸ್ಲಾಂ ವ್ಯಾಪಕವಾಗಿ ಹರಡಿತು. ಧಾರವಾಡ ಪ್ರದೇಶವು ಬಿಜಾಪುರ ಕರ್ನಾಟಕ ಎಂಬ ಸುಭಾದಲ್ಲಿ ಸೇರಿತ್ತು (ಧಾಜಿಗ್ಯಾ : ೯೯). ಸವಣೂರು ನವಾಬನು ಮೊಗಲರ ಮಾಂಡಲಿಕನಾಗಿದ್ದನು. ಕ್ರಿ.ಶ. ೧೭೫೩ರಲ್ಲಿ ಪೇಶ್ವೆಗಳು ಧಾರವಾಡ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಮೊಗಲರ ದಾಖಲೆಗಳನ್ನು ಧಾರವಾಡವನ್ನು, ನಸೀರಾಬಾದ್ ಎಂದು ಕರೆಯಲಾಗಿದೆ. ಕ್ರಿ.ಶ. ೧೭೭೮ ರಲ್ಲಿ ಹೈದರಾಲಿಯು ಧಾರವಾಡ ಪ್ರದೇಶವನ್ನು ಗೆದ್ದು, ಮಲಪ್ರಭಾವರೆಗೆ ಅಧಿಕಾರ ಸ್ಥಾಪಿಸಿದನು. ಕ್ರಿ.ಶ. ೧೭೯೦ರ ವರೆಗೂ ಟಿಪ್ಪುವಿನ ವಶದಲ್ಲಿತ್ತು. ಈ ಭಾಗದಲ್ಲಿ ಕಂದಾಯ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಹಾಗೂ ಟಂಕಶಾಲೆಯನ್ನು ಸ್ಥಾಪಿಸಿದನು. ನಂತರ ಈ ಭಾಗ ಮರಾಠರ ವಶವಾಯಿತು. ಹದಿನೆಂಟನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯು ಯುದ್ಧ ಮತ್ತು ಸುಲಿಗೆಗಳ ತಾಣವಾಯಿತು ಎನ್ನಲಾಗಿದೆ. ಕ್ರಿ.ಶ. ೧೮೧೮ರ ವೇಳೆಗೆ ಧಾರವಾಡ ಪ್ರದೇಶವು ಬ್ರಿಟಿಷರ ವಶಕ್ಕೆ ಬಂದಿತು. ಇವರ ಕಾಲದಲ್ಲಿ ನೇಯ್ಗೆ ಉದ್ದಿಮೆಗೆ ಪ್ರಸಿದ್ಧಿಯಾಯಿತು. ಕ್ರಿ.ಶ. ೧೮೫೮ರಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ವ್ಯಕ್ತಗೊಂಡಿತು. ಇತರ ಪ್ರದೇಶಗಳಂತೆ ಇಲ್ಲಿಯೂ ಸ್ವಾತಂತ್ರ್ಯ ಹೋರಾಟಗಳು ನಡೆದವು. ಸ್ವಾತಂತ್ಯ್ರಾನಂತರ ಈ ಭಾಗ ಮುಂಬೈ ರಾಜ್ಯದಿಂದ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿತು.

ದೇವಾಲಯಗಳು

ಈ ಮೊದಲೆ ತಿಳಿಸಿದಂತೆ ಧಾರವಾಡ ಪ್ರದೇಶವು ಕರ್ನಾಟಕ ಸಂಸ್ಕೃತಿಯ ಹೃದಯ ಭಾಗವಿದ್ದಂತೆ. ಜೈನ, ಬೌದ್ಧ, ಶೈವ, ವೈಷ್ಣವ, ವೀರಶೈವ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಪಂಥಗಳಿಗೆ ಸಂಬಂಧಿಸಿದ ಸ್ಮಾರಕಗಳು ವಿವಿಧ ಕಾಲಗಳಲ್ಲಿ ನಿರ್ಮಾಣಗೊಂಡಿವೆ. ಹಲವು ಸ್ಮಾರಕಗಳು ಗುರುತಿಸಲಾರದಷ್ಟು ನವೀಕರಣಗೊಂಡಿವೆ. ಈ ಪ್ರದೇಶವು ಕೃಷಿ ಪ್ರಧಾನವಾಗಿದ್ದು, ವಿಶಾಲವಾದ ಎರೆಮಣ್ಣಿನ ಬಯಲು ಪ್ರದೇಶವನ್ನು ಮತ್ತು ಮಲೆನಾಡಿನ ಸೆರಗು ಪ್ರದೇಶಗಳನ್ನು ಒಳಗೊಂಡಿದೆ. ಹಾಗಾಗಿ ಆದಿ ಇತಿಹಾಸ ಕಾಲದಿಂದಲೂ ಇಲ್ಲಿ ಸಂಸ್ಕೃತಿ ಸಂವರ್ಧನೆ ನಡೆಯುತ್ತ ಬಂದಿದೆ.

ಕ್ರಿ.ಶ. ೧೩ನೆಯ ಶತಮಾನದವರೆಗೂ ಬೌದ್ಧಧರ್ಮವು ಕರ್ನಾಟಕದ ಕದರಿ, ಬನವಾಸಿ, ಬಳ್ಳಿಗಾವೆ, ಡಂಬಳ, ಕೋಳಿವಾಡ, ಕುರುಗೋಡು ಮುಂತಾದ ಸ್ಥಳಗಳಲ್ಲಿ, ಅಸ್ತಿತ್ವದಲ್ಲಿ ಇತ್ತೆಂಬುದು ಅಲ್ಲಿನ ವಾಸ್ತು ಮತ್ತು ಶಿಲ್ಪಾವಶೇಷಗಳಿಂದ ಸ್ಪಷ್ಟವಾಗುವುದು. (ಸುಂದರ ೧೯೯೭ : ೪೭೩). ಇತ್ತೀಚೆಗೆ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಕೈಗೊಂಡ ಉತ್ಖನನದ ಪರಿಣಾಮವಾಗಿ ಬೌದ್ಧಚೈತ್ಯ ಮತ್ತು ವಿಹಾರಗಳು ಬೆಳಕಿಗೆ ಬಂದಿವೆ. ಇಟ್ಟಿಗೆಯಿಂದ ನಿರ್ಮಿಸಿರುವ ಈ ರಚನೆಗಳ ಕಾಲವನ್ನು ಕ್ರಿ.ಶ.೪-೫ನೆಯ ಶತಮಾನವೆಂದು ಡಾ. ಎಂ.ಎಸ್. ಕೃಷ್ಣಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಅವಿಭಜಿತ ಧಾರವಾಡ ಜಿಲ್ಲೆಯ ಡಂಬಳ ಮತ್ತು ಕೋಳಿವಾಡ ಸ್ಥಳಗಳು ಬೌದ್ಧ ನೆಲೆಗಳಾಗಿರುವುದು ಗಮನಾರ್ಹ. ಆದರೆ ಕಾಲಾಂತರದಲ್ಲಿ ಬೌದ್ಧ ಸ್ಮಾರಕಗಳು ಮರೆಯಾದದ್ದು ವಿಸ್ಮಯವೇ ಸರಿ. ಜೈನ್ಯಧರ್ಮವು ಸಹ ಕರ್ನಾಟಕದೆಲ್ಲೆಡೆ ವ್ಯಾಪಿಸಿದ್ದು, ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ. ಜೈನ್ಯಧರ್ಮೀಯರು ಕೃಷಿಕರಾಗಿ, ವರ್ತಕರಾಗಿ ಬದುಕು ನಡೆಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಜೈನಬಸದಿಗಳು ಮತ್ತು ಶಿಲ್ಪಾವಶೇಷಗಳು ಕಂಡುಬರುತ್ತವೆ. ಛಬ್ಬಿ, ಬುಡರಸಿಂಗಿ (ಉಚ್ಚಂಗಿ), ಅದರಗುಂಚಿ, ಅಮ್ಮಿನಬಾವಿ, ಹುಬ್ಬಳ್ಳಿ, ಗುಡಗೇರಿ ಪ್ರಮುಖ ಜೈನ ಕೇಂದ್ರಗಳಾಗಿವೆ. ಅದರಗುಂಚಿ ಗ್ರಾಮದಲ್ಲಿರುವ ಮಹಾವೀರ ಶಿಲ್ಪಕ್ಕೆ ವಿಭೂತಿಯನ್ನು ಧಾರಣೆ ಮಾಡುವ ಮೂಲಕ ಶೈವೀಕರಿಸಲಾಗಿದೆ. ಅಲ್ಲಿನ ಜನರು ದೊಡ್ಡೇಶ್ವರನೆಂದು ಪೂಜಿಸುತ್ತಿದ್ದಾರೆ. ಒಂದು ಕಾಲಕ್ಕೆ ಧಾರವಾಡ ಪ್ರದೇಶದ ಪ್ರಧಾನ ಧರ್ಮವೆನ್ನಬಹುದಾಗ ಜೈನಧರ್ಮವು ಕಾಲಾಂತರದಲ್ಲಿ ಅವನತಿಗೊಂಡದ್ದು ಆಶ್ವರ್ಯಕರವಾಗಿದೆ. ಜಿಲ್ಲೆಯಲ್ಲಿ ಮೂಲಸಂಘದ ದೇವಗಣ ಮತ್ತು ಸೂರಸ್ತಗಣಗಳು ಅಸ್ತಿತ್ವದಲ್ಲಿದ್ದವು. ತೀರ್ಥಂಕರರಲ್ಲಿ ಆದಿನಾಥ, ಶಾಂತಿನಾಥ, ನೇಮಿನಾಥ, ಪಾರ್ಶ್ವನಾಥ ಮತ್ತು ಮಹಾವೀರರು ಶಿಲ್ಪಗಳು ಪ್ರಧಾನವಾಗಿ ಕಂಡಬರುತ್ತವೆ.

ಕರ್ನಾಟಕವನ್ನಾಳಿದ ಮೊದಲ ಸಾಮ್ರಾಟರಾದ ಬಾದಾಮಿ ಚಾಲುಕ್ಯರು ಈ ಪ್ರದೇಶದಲ್ಲಿ ಬಸದಿ ಮತ್ತು ದೇವಾಲಯಗಳನ್ನು ನಿರ್ಮಿಸಿದ ಮಾಹಿತಿ ಮತ್ತು ಸೂಚನೆಗಳು ಶಾಸನಗಳಿಂದ ದೊರೆಯುತ್ತವೆ. ಪ್ರಸ್ತುತ ಜಿಲ್ಲೆಯಲ್ಲಿ ಬಾದಾಮಿ ಚಾಲುಕ್ಯರ ಸ್ಮಾರಕಗಳು ಕಂಡುಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವು ನಿರ್ಮಾಣಗೊಂಡಿಲ್ಲವೆಂದು ಅರ್ಥವಲ್ಲ. ನಿರ್ಮಾಣಗೊಂಡಿದ್ದು, ಕಾಲಾಂತರದಲ್ಲಿ ನಾಶವಾಗಿವೆ. ಕ್ರಿ.ಶ. ೭೫೦-೫೨ರ ಶಾಸನವು, ಎರಡನೆಯ ಕೀರ್ತಿವರ್ಮನ ಆಳ್ವಿಕೆ ಕಾಲದಲ್ಲಿ ಜೇಬುಳಗೇರಿಯನ್ನು ಆಳುತ್ತಿದ್ದ ಕಲಿಯಮ್ಮ ಎಂಬುವನು ಅಣ್ಣಿಗೇರಿಯಲ್ಲಿ ಜಿನಮಂದಿರವನ್ನು ಕಟ್ಟಿಸಿದನೆಂದು ತಿಳಿಸುತ್ತದೆ. (ಸೌಇಇ xi-i : ೫). ಶಿಗ್ಗಾವಿಯ ತಾಮ್ರಪಟವು ವಿಜಯಾದಿತ್ಯನು ಗುಡಗೇರಿ ಊರನ್ನು ಲಕ್ಷ್ಮೇಶ್ವರದ ಬಸದಿಗೆ ದಾನ ನೀಡಿದನೆಂದಿದೆ (ಎಇ ೩೨ : ೩೧೭ : ೨೪). ಈತನ ಕಾಲದಲ್ಲಿ ಮೊದಲ ಬಾರಿಗೆ ತ್ರಿಕೂಟ ದೇವಾಲಯವು ನಿರ್ಮಾಣವಾಯಿತು. ಬಾದಾಮಿ ಚಾಲುಕ್ಯರು ವೈಷ್ಣವರಾಗಿದ್ದು, ಒಂದನೆಯ ವಿಕ್ರಮಾದಿತ್ಯನ ಕಾಲದಲ್ಲಿ ಶೈವರಾದರು. ಆದರೂ ಧಾರ್ಮಿಕ ಸಮನ್ವಯವನ್ನು ಸಾಧಿಸಿದರು. ನೆರೆಯ ಗದಗ ಜಿಲ್ಲೆಯ ಲಕ್ಷ್ಮೇಶ್ವರವನ್ನು ಹೊರತುಪಡಿಸಿದರೆ, ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ ಇವರ ಯಾವುದೇ ದೇವಾಲಯಗಳು ಕಂಡುಬರುವುದಿಲ್ಲ.

ರಾಷ್ಟ್ರಕೂಟರ ಕಾಲದಲ್ಲಿ ಧಾರವಾಡ ಜಿಲ್ಲೆಯ ವಿವಿಧೆಡೆಗಳಲ್ಲಿ ದೇವಾಲಯಗಳು ಮತ್ತು ಬಸದಿಗಳು ನಿರ್ಮಾಣಗೊಂಡಿವೆ. ಅವುಗಳಲ್ಲಿ ಬಹುತೇಕ ಸ್ಮಾರಕಗಳು ಹಾಳಾಗಿವೆ. ಕೆಲವು ಸ್ಮಾರಕಗಳು ಜೀರ್ಣೋದ್ಧಾರಗೊಂಡಿವೆ. ಬೆರಳೆಣಿಕೆಯಷ್ಟು ಸ್ಮಾರಕಗಳು ಭಗ್ನಗೊಂಡು ಮೂಲಸ್ಥಿತಿಯಲ್ಲಿವೆ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರಕೂಟರ ಸುಮಾರು ೧೦೦ ಶಾಸನಗಳು ದೊರೆತಿವೆ. ಅವು ಮುಖ್ಯವಾಗಿ ದೇವಾಲಯ, ಅಗ್ರಹಾರ ಮತ್ತು ಕೆರೆಗಳ ನಿರ್ಮಾಣವನ್ನು ಹಾಗೂ ದಾನದತ್ತಿಗಳನ್ನು ಪ್ರಸ್ತಾಪಿಸುತ್ತವೆ. ಡಾ. ಎಸ್. ರಾಜಶೇಖರ ಅವರು, ಕರ್ನಾಟಕದಲ್ಲಿನ ರಾಷ್ಟ್ರಕೂಟರ ದೇವಾಲಯಗಳನ್ನು ಕುರಿತು ಆಳವಾಗಿ ಅಧ್ಯಯನ ನಡೆಸಿದ್ದಾರೆ. (ರಾಜಶೇಖರ ೧೯೯೧). ಕನ್ನರನ ಕ್ರಿ.ಶ. ೯೪೫ರ ತುಪ್ಪದ ಕುರಹಟ್ಟಿ (ನವಲಗುಂದ ತಾಲ್ಲೂಕು) ಶಾಸನವು ಗಂಗ ಭೂತುಗನು ಬೆಳ್ವೊಲ-೩೦೦ ನ್ನು ಆಳುತ್ತಿದ್ದಾಗ, ಆಚಯ್ಯ ಎಂಬುವನು ಅಚ್ಚೇಶ್ವರ ದೇವಾಲಯವನ್ನು ನಿರ್ಮಿಸಿದನೆಂದಿದೆ (ಎಇ ೧೪ : ೩೬೪-೬೬).

ಕಲಘಟಗಿ ತಾಲ್ಲೂಕಿನ ಸಂಗಮೇಶ್ವರದಲ್ಲಿರುವ ಬಸವಣ್ಣದೇವರ ಗುಡಿಯು ರಾಷ್ಟ್ರಕೂಟರ ಕಾಲದ ನಿರ್ಮಾಣ. ಗಿಡ್ಡನೆಯ ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದೆ. ಅರ್ಧಮಂಟಪದ ಪ್ರವೇಶದಲ್ಲಿ ಎರಡು ಕಂಬಗಳನ್ನು ಅಲಂಕರಣದ ದೃಷ್ಠಿಯಿಂದ ನಿಲ್ಲಿಸಲಾಗಿದೆ ಈ ರೀತಿ ಅರ್ಧಮಂಟಪದ ಪ್ರವೇಶದಲ್ಲಿ ಎರಡು ಕಂಬಗಳನ್ನು ನಿಲ್ಲಿಸಿ ತೋರಣ ನಿರ್ಮಿಸುವ ವಾಸ್ತುರಚನೆಯು ರಾಷ್ಟ್ರಕೂಟರ ಕೊಡುಗೆಯಾಗಿದೆ. ಈ ಮಾದರಿಯ ರಚನೆಗಳನ್ನು ರಾಷ್ಟ್ರಕೂಟರ ಕಾಲದ ದೇವಾಲಯಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ನಂತರ ಈ ರಚನೆಗಳು ಕಲ್ಯಾಣ ಚಾಲುಕ್ಯರ ಆರಂಭ ಕಾಲದಲ್ಲೂ ಮುಂದುವರೆದವು. ಅಂದರೆ ಅರ್ಧಮಂಟಪವನ್ನು ಅಲಂಕರಣಗೊಳಿಸುವ ದೃಷ್ಠಿಯಿಂದ, ಎರಡು ಕಂಬಗಳನ್ನು ಒಳಗೊಂಡ ತೋರಣ ರಚನೆಯನ್ನು ಈ ಭಾಗದ ಕೆಲವು ದೇವಾಲಯಗಳಲ್ಲಿ ಕಾಣುತ್ತೇವೆ. ವಿಶೇಷವಾದ ಈ ವಾಸ್ತು ರಚನೆಯನ್ನು ಧಾರವಾಡ ಪ್ರದೇಶದಲ್ಲಿ ಕ್ರಿ.ಶ.೯-೧೦ನೆಯ ಶತಮಾನದಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಈ ಕಂಬಗಳು ಮಕರತೋರಣದ ಫಲಕವನ್ನು ಹೊತ್ತಿರುತ್ತವೆ. ತೋರಣದ ಮಧ್ಯಭಾಗದಲ್ಲಿ ತ್ರಿಮೂರ್ತಿಗಳ ಉಬ್ಬುಶಿಲ್ಪಗಳಿರುತ್ತವೆ. ಕೆಲವೆಡೆ ಈ ಕಂಬಗಳನ್ನು, ತೊಲೆ ಅಥವಾ ಚಾವಣಿಯನ್ನು ಹೊತ್ತಿರುವಂತೆ ನಿಲ್ಲಿಸಲಾಗಿರುತ್ತದೆ. ಉದಾ. ಧಾರವಾಡ ತಾಲ್ಲೂಕಿನ ಕೋಟೂರಿನ ಮಲ್ಲಿಕಾರ್ಜುನ ದೇವಾಲಯ, ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯ ರಾಮೇಶ್ವರ ಗುಡಿ ಮತ್ತು ಯರಗುಪ್ಪಿಯ ನಾರಾಯಣದೇವರ ಗುಡಿಗಳನ್ನು ಹೆಸರಿಸಬಹುದು. ಈ ಕಂಬಗಳು ಆರಂಭದಲ್ಲಿ ಚೌಕರಚನೆಯನ್ನು, ನಂತರದ ಕಾಲದಲ್ಲಿ ತಿರುಗಣೆಯಂತ್ರದಿಂದ ಕಡೆದ ದುಂಡನೆಯ ರಚನೆಯನ್ನು ಹೊಂದಿವೆ. ಕಂಬಗಳು ಸಣ್ಣ ಗಾತ್ರದಲ್ಲಿರುವುದು ವಿಶೇಷ ಲಕ್ಷಣವೆನ್ನಬಹುದು. ಇದರಿಂದಾಗಿ ಕಂಬಗಳನ್ನು ಅಲಂಕರಣದ ಉದ್ದೇಶದಿಂದ ಅಳವಡಿಸಿರುವುದು ಸ್ಪಷ್ಟವಾಗುತ್ತದೆ. ಈ ಕಂಬಗಳ ಸೇರ್ಪಡೆಯು, ಮುಂದೆ ದ್ವಾರ ಮತ್ತು ಸುಂದರ ಜಾಲಂಧ್ರಗಳ ಅಳವಡಿಕೆಗೆ ದಾರಿ ಮಾಡಿಕೊಟ್ಟಿತು. ಅಂದರೆ ಅರ್ಧಮಂಟಪಕ್ಕೆ ದ್ವಾರವನ್ನು ಅಳವಡಿಸಿ, ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಜೋಡಿಸಿ ಕೋಣೆಯನ್ನಾಗಿ ಪರಿವರ್ತಿಸಲಾಯಿತು. ಈ ಕೊಠಡಿಯನ್ನು ಅಂತರಾಳವೆಂದು ಕರೆಯಲಾಯಿತು. ಇದರಲ್ಲಿ ಸಾಮಾನ್ಯವಾಗಿ ನಂದಿ ಶಿಲ್ಪವಿರುತ್ತದೆ.

ಮೇಲೆ ತಿಳಿಸಿದ ಬಸವಣ್ಣದೇವರ ಗುಡಿಯ ನವರಂಗದ ನಾಲ್ಕು ಕಂಬಗಳು ತಳದಲ್ಲಿ ಮತ್ತು ಮೇಲೆ ಚೌಕರಚನೆಯನ್ನು ಹೊಂದಿವೆ. ನಡುವಿನ ದಿಂಡಿನಭಾಗದಲ್ಲಿ ಅಷ್ಟಮುಖಗಳ ರಚನೆಯನ್ನು ಕಾಣಬಹುದು. ಇದರ ಸುತ್ತಲೂ ಪಟ್ಟಿಕೆಯ ಅಲಂಕರಣವಿದೆ. ಮೇಲಿನ ಚೌಕಮುಖಗಳಲ್ಲಿ ಘಟನಾವಳಿಗಳನ್ನು ನಿರೂಪಿಸುವ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಇದರ ಮೇಲಿನ ದಿಂಡಿನ ಭಾಗದಲ್ಲಿ ತ್ರಿಕೋನಾಕೃತಿಯ ರಚನೆಗಳಿವೆ. ಕಂಬಗಳ ಮೇಲೆ ವೃತ್ತಾಕಾರದಲ್ಲಿ ದುಂಡಾದ ಬೋದಿಗೆಪೀಠವಿದೆ. ಈ ಬಗೆಯ ಬೋದಿಗೆಗಳನ್ನು ಶ್ರವಣಬೆಳಗೊಳದ ಚಂದ್ರಗಿರಿಯ ಬಸದಿಗಳಲ್ಲಿ ಕಾಣಬಹುದು. ಅರ್ಧಮಂಟಪದ ಗೋಡೆಗಂಬಗಳ ಮೇಳೆ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಈ ಎಲ್ಲ ವಾಸ್ತುಲಕ್ಷಣಗಳಿಂದ ರಾಷ್ಟ್ರಕೂಟರ ಶೈಲಿಯಲ್ಲಿರುವ ಮಹತ್ವದ ದೇವಾಲಯವಿದೆಂದು ಹೇಳಬಹುದು (ನೋಡಿ ಚಿತ್ರ.೧) ಅವಿಭಜಿತ ಧಾರವಾಡ ಜಿಲ್ಲೆ ಅಸುಂಡಿ, ಕೊಣ್ಣೂರು, ನರೇಗಲ್, ಮುಳಗುಂದದ ಬಸದಿಗಳು ಮತ್ತು ಸವಡಿಯ ದೇವಾಲಯಗಳು ಇವರ ಕಾಲದಲ್ಲಿ ನಿರ್ಮಾಣಗೊಂಡಿವೆ. ಆದರೆ ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರಕೂಟರ ದೇವಾಲಯಗಳ ಸಂಖ್ಯೆ ತುಂಬಾ ಕಡಿಮೆ. ಅದರಲ್ಲಿ ಕೆಲವು ದೇವಾಲಯಗಳು ಅವಸಾನಗೊಂಡಿದ್ದರೆ, ಮತ್ತೆ ಕೆಲವು ಜೀರ್ಣೋದ್ಧಾರ ಅಥವಾ ನವೀಕರಣಗೊಂಡಿವೆ.

ನಂತರ ಬಂದ ಕಲ್ಯಾಣದ ಚಾಲುಕ್ಯರು ಕರ್ನಾಟಕದಲ್ಲಿ ದೇವಾಲಯ ಸಂಸ್ಕೃತಿಯನ್ನೆ ಹುಟ್ಟುಹಾಕಿದರು. ಸಾಮಂತರು ಸಹ ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಗುಡಿಗುಂಡಾರಗಳನ್ನು ಕಟ್ಟಿಸಿದರು. ವಿಶೇಷವಾಗಿ ತುಂಗಭದ್ರೆಯ ಪರಿಸರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕಲ್ಯಾಣ ಚಾಲುಕ್ಯರ ಅರಸರು, ರಾಣಿಯರು, ಮಂತ್ರಿಗಳು, ದಂಡನಾಯಕರು, ಸಾಮಂತರು, ಮಾಂಡಲೀಕರು, ಅಧಿಕಾರಿಗಳು ಮತ್ತು ವರ್ತಕರು ದೇವಾಲಯಗಳನ್ನು ನಿರ್ಮಿಸಿ, ದಾನದತ್ತಿಗಳನ್ನು ನೀಡಿದ ನೆನಪಿಗೆ ಅಸಂಖ್ಯಾತ ಶಾಸನಗಳನ್ನು ಹಾಕಿಸಿದರು. ಇವರು ರಾಜಕೀಯ ಆಡಳಿತಕ್ಕೆ ಭದ್ರವಾದ ಬುನಾದಿ ಹಾಕಿದ ಫಲವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಮಾಡಲು ಸಾಧ್ಯವಾಯಿತು. ದೇವಾಲಯಗಳು ಮತ್ತು ಬಸದಿಗಳು ಹೆಚ್ಚಿನ ಸಂಖ್ಯೆಯಲ್ಲಿ, ನಿರ್ಮಾಣಗೊಂಡವು. ಶೈವಧರ್ಮ ಪ್ರಧಾನವಾಗಿತ್ತು. ಇದರಲ್ಲಿ ಪಾಶುಪತ, ಕಾಳಮುಖ ಮತ್ತು ಕಾಪಾಲಿಕ ಪಂಥಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿವಾಲಯಗಳು ನಿರ್ಮಾಣಗೊಂಡವು. ಜೊತೆಗೆ ವಿಷ್ಣು ದೇವಾಲಯಗಳು ಮತ್ತು ಬಸದಿಗಳು ಸಹ ಕಟ್ಟಲ್ಪಟ್ಟವು. ಇವರ ಆರಂಭಕಾಲದ ಕೆಲವು ದೇವಾಲಯಗಳು ರಾಷ್ಟ್ರಕೂಟರ ಕಾಲದ ವಾಸ್ತುಲಕ್ಷಣಗಳನ್ನು ಹೊಂದಿವೆ. (ರಾಜಶೇಖರ ೧೯೯೭ : ೨೫೨).

ಕ್ರಿ.ಶ. ೧೦೫೦ರ ನಂತರ ನಿರ್ಮಾಣಗೊಂಡ ದೇವಾಲಯಗಳಲ್ಲಿ, ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯು ಅಧಿಕೃತಗೊಂಡಿರುವುದನ್ನು ಗುರುತಿಸಲಾಗಿದೆ. ನಕ್ಷತ್ರಾಕಾರದ ತಲವಿನ್ಯಾಸ, ಹೊರಭಿತ್ತಿಯ ಅಲಂಕರಣ, ಜಾಲಂಧ್ರಗಳು, ತಿರುಗಣೆಯಂತ್ರದಿಂದ ಕಡೆದ ದುಂಡನೆಯ ಕಂಬಗಳು, ಅಲಂಕೃತ ಭುವನೇಶ್ವರಿ, ದೇವಕೋಷ್ಠಗಳು, ದ್ವಾರದ ಮೇಲಿನ ಮಕರತೋರಣ ಅಥವಾ ಶಿಲ್ಪಫಲಕ, ರಂಗಮಂಟಪ, ಕಕ್ಷಾಸನ, ಪ್ರವೇಶಮಂಟಪ, ಕಟಾಂಜನ, ವಿವಿಧ ಶೈಲಿಯ ಶಿಖರಗಳು ಮತ್ತು ಅವುಗಳ ಮಾದರಿಗಳ ಅಲಂಕರಣ ಮೊದಲಾದ ವಾಸ್ತುರಚನೆಗಳ ಸೇರ್ಪಡೆಯಿಂದಾಗಿ ದೇವಾಲಯಗಳು ಸುಂದರಗೊಂಡವು. ಜನರಲ್ಲಿ ಸೌಂದರ್ಯಾಭಿರುಚಿ ಇಮ್ಮಡಿಸಿತು.

ಅಲ್ಲಲ್ಲಿ ವೈಷ್ಣವ ದೇವಾಲಯಗಳು ನಿರ್ಮಾಣಗೊಂಡಿವೆ. ಉದಾ. ಯರಗುಪ್ಪಿಯ ನಾರಾಯಣ ದೇವಾಲಯ (ಕುಂದಗೋಳ ತಾಲ್ಲೂಕು), ದೇವರ ಹುಬ್ಬಳ್ಳಿಯ ರಂಗನಾಥ ದೇವಾಲಯ, ಅಮರಗೋಳದ ಶಾಸನೋಕ್ತ ಕೇಶವ ದೇವಾಲಯ, ಕೋಳಿವಾಡದ ವೀರನಾರಾಯಣ ದೇವಾಲಯ (ಹುಬ್ಬಳ್ಳಿ ತಾಲ್ಲೂಕು)ಗಳನ್ನು ಹೆಸರಿಸಬಹುದು.

ಇವರ ಕಾಲದಲ್ಲಿ ಬೌದ್ಧಸ್ಮಾರಕಗಳು ನಿರ್ಮಾಣಗೊಂಡ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಇನ್ನು ಜೈನಸ್ಮಾರಕಗಳು ಜಿಲ್ಲೆಯ ಹಲವೆಡೆ ಕಂಡುಬರುತ್ತವೆ. ಸುಸ್ಥಿತಿಯಲ್ಲಿರುವ ಬಸದಿಗಳು ಸಂಖ್ಯೆಯಲ್ಲಿ ಕಡಿಮೆ. ಅಲ್ಲಲ್ಲಿ ಜೈನ ಶಿಲ್ಪಾವಶೇಷಗಳು ಕಂಡುಬರುತ್ತವೆ. ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ, ಕುಂದಗೋಳ ತಾಲ್ಲೂಕಿನ ಗುಡಗೇರಿ, ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಮುಂತಾದೆಡೆಗಳಲ್ಲಿ ಬಸದಿಗಳಿದ್ದು, ಜೈನಧರ್ಮೀಯರ ಗಮನ ಸೆಳೆದಿವೆ.

ಜಿಲ್ಲೆಯ ಪ್ರಮುಖ ಶಿವಾಲಯಗಳಲ್ಲಿ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ, ಕುಂದಗೋಳದ ಶಂಭುಲಿಂಗ ಗುಡಿ, ಹುಬ್ಬಳ್ಳಿಯ ಉಣಕಲ್ಲಿನ ಚಂದ್ರಮೌಳೇಶ್ವರ ದೇವಾಲಯ, ಕಲಘಟಗಿ ತಾಲ್ಲೂಕಿನ ಕಾಮಧೇನುವಿನ ಕಲ್ಮೇಶ್ವರ ಗುಡಿ ಮತ್ತು ತಂಬೂರಿನ ಬಸವಣ್ಣ ಗುಡಿ ಪ್ರಮುಖವಾಗಿವೆ. ಅಣ್ಣಿಗೇರಿಯ ಅಮೃತೇಶ್ವರ ದೇವಾಲಯವು ಸುಂದರವಾದ ಕೆತ್ತನೆಗಳಿಂದ ಕೂಡಿದ, ಈ ಭಾಗದ ಮಹತ್ವದ ಸ್ಮಾರಕವೆನ್ನಬಹುದು. ಇದನ್ನು ಹಾಗೂ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯ ರಾಮೇಶ್ವರ ದೇವಾಲಯಗಳನ್ನು ಎರಡನೆಯ ಹಂತದ ಕಲ್ಯಾಣ ಚಾಲುಕ್ಯರ ದೇವಾಲಯಗಳ ಗುಂಪಿನಲ್ಲಿ ಗುರುತಿಸಲಾಗಿದೆ (ರಾಜಶೇಖರ ೧೯೯೭ : ೧೫೬). ಈ ಗುಂಪಿನ ದೇವಾಲಯಗಳು ಹೆಚ್ಚು ವಿಸ್ತಾರವಾಗಿದ್ದು, ಪದರಗಲ್ಲನ್ನು ಪ್ರಧಾನವಾಗಿ ಬಳಸಲಾಗಿದೆ. ಗೋಡೆಗಳಲ್ಲಿ ಗೋಡೆಗಂಬ, ಪಂಜರ ಮತ್ತು ಶಿಖರಗಳ ನಮೂನೆಗಳನ್ನು ಹೆಚ್ಚಾಗಿ ಕಾಣುತ್ತೇವೆ. ಗರ್ಭಗೃಹದ ಹೊರಭಿತ್ತಿಯಲ್ಲಿ ದೊಡ್ಡದಾದ ದೇವಕೋಷ್ಠಗಳಿದ್ದು, ಶಿಖರಗಳ ಅಲಂಕರಣದಿಂದ ಕೂಡಿವೆ. ಉಣಕಲ್ಲಿನ ಚಂದ್ರಮೌಳೇಶ್ವರ ದೇವಾಲಯವು ವಿಶಿಷ್ಠವಾದ ತಲನಕ್ಷೆಯನ್ನು ಹೊಂದಿರುವ ಕಟ್ಟಡ ಎನ್ನಬಹುದು. ಗರ್ಭಗೃಹವು ನಾಲ್ಕೂ ದಿಕ್ಕುಗಳಲ್ಲಿ ಪ್ರವೇಶದ್ವಾರಗಳನ್ನು ಹೊಂದಿದೆ. ಸುತ್ತಲೂ ಪ್ರದಕ್ಷಿಣಾಪಥವುಂಟು. ಅದೇ ರೀತಿ ನಾಲ್ಕು ಅಂತರಾಳಗಳಿದ್ದು, ಪೂರ್ವದಿಕ್ಕಿನಲ್ಲಿದ್ದ ರಂಗಮಂಟಪ ಈಗಿಲ್ಲ. ಇಲ್ಲಿನ ವಿಶೇಷವೆಂದರೆ ದೇವಾಲಯಕ್ಕೆ ನಾಲ್ಕೂ ದಿಕ್ಕುಗಳಿಂದಲೂ ಪ್ರವೇಶಿಸಬಹುದಾಗಿದೆ. ಈ ಹಿಂದೆ ಗರ್ಭಗೃಹದಲ್ಲಿ ಚತುರ್ಮುಖಲಿಂಗ ಇತ್ತೆಂದು ಹೇಳಲಾಗಿದೆ (ಅದೇ). ಬಾಗಿಲುವಾಡಗಳಲ್ಲಿ ಸೂಕ್ಷ್ಮ ಕೆತ್ತನೆಗಳ ಅಲಂಕರಣವುಂಟು. ಹೊರ ಭಿತ್ತಿಯಲ್ಲಿ ಗೋಡೆಗಂಬಗಳು, ಶಿಖರಗಳ ಅಲಂಕರಣದಿಂದ ಕೂಡಿದ ಪಂಜರಗಳು, ನಾಟ್ಯಭಂಗಿಯಲ್ಲಿರುವ ಗಣಪತಿ ಮತ್ತು ಶಿವನ ಶಿಲ್ಪಗಳನ್ನು ಕಾಣಬಹುದು. ಜಾಲಂಧ್ರಗಳಲ್ಲಿನ ಸುರುಳಿ ಅಲಂಕರಣದ ನಡುವೆ, ನರ್ತಕಿಯರು, ಗಾಯಕಿಯರು ಮೊದಲಾದ ಸೂಕ್ಷ್ಮ ಉಬ್ಬುಶಿಲ್ಪಗಳಿವೆ. ಈ ಜಾಲಂಧ್ರಗಳನ್ನು ಕಲ್ಯಾಣ ಚಾಲುಕ್ಯರ ಕಾಲದ ಸುಂದರ ರಚನೆಗಳೆಂದು ಗುರುತಿಸಲಾಗಿದೆ. ಅಧಿಷ್ಠಾನದಲ್ಲಿರುವ ಆನೆ ಮತ್ತು ಕುದುರೆಗಳ ಉಬ್ಬುಶಿಲ್ಪಗಳು ಗಮನಾರ್ಹವಾಗಿವೆ.

ಕಲಘಟಗಿ ತಾಲ್ಲೂಕಿನ ಕಾಮಧೇನು ಗ್ರಾಮದಲ್ಲಿರುವ ಕಲ್ಮೇಶ್ವರ ದೇವಾಲಯದಲ್ಲಿ, ನವರಂಗದ ಪಶ್ಚಿಮ ಅಂಕಣವನ್ನು ಉಳಿಸಿಕೊಂಡು ಉಳಿದ ಭಾಗವನ್ನು ರಂಗಮಂಟಪವನ್ನಾಗಿ ಪರಿವರ್ತಿಸಿದಂತೆ ಕಂಡುಬರುತ್ತದೆ. ದೇವಕೋಷ್ಠಗಳಿರುವ ನವರಂಗದ ಪಶ್ಚಿಮ ಅಂಕಣದ ಭಾಗವನ್ನು ರಂಗಮಂಟಪದಿಂದ ಬೇರ್ಪಡಿಸಲು ನಡುವೆ ಜಾಲಂಧ್ರಗಳನ್ನು ಉದ್ದಕ್ಕೂ ಅಳವಡಿಸುವ ಮೂಲಕ ವಿನೂತನವಾದ ರಚನೆಯನ್ನು ಮಾಡಿದ್ದಾರೆ. ಹೊರಭಿತ್ತಿಯಲ್ಲಿರುವ ದೇವಕೋಷ್ಠದ ಮೇಲೆ ವಿಮಾನದ ಸೂಕ್ಷ್ಮ ರಚನೆಯನ್ನು ಬಿಡಿಸಲಾಗಿದೆ. ಅರ್ಧಕಂಬಗಳ ತುದಿಯಲ್ಲಿ ಸೂಕ್ಷ್ಮರಚನೆಯ ಶಿಖರಗಳ ಅಲಂಕರಣವುಂಟು. ಈ ದೇವಾಲಯದ ವಿಶೇಷವೆಂದರೆ, ಅಧಿಷ್ಠಾನವನ್ನು ಬಸಾಲ್ಟ್‌ಶಿಲೆಯಲ್ಲೂ ಹಾಗೂ ಭಿತ್ತಿಯನ್ನು ಮರಳುಗಲ್ಲಿನಲ್ಲೂ ನಿರ್ಮಿಸಿರುವುದು. ಇದೇ ತಾಲ್ಲೂಕಿನ ತಂಬೂರಿನ ಬಸವಣ್ಣ ಗುಡಿಯು ಸುಸ್ಥಿತಿಯಲ್ಲಿದ್ದು, ಈ ಭಾಗದ ಪ್ರಸಿದ್ಧ ಸ್ಮಾರಕವೆನಿಸಿದೆ. ಗರ್ಭಗೃಹದ ಮೇಲೆ ಸುಖನಾಸವನ್ನು ಒಳಗೊಂಡ ಏಕತಲದ ಶಿಖರವಿದ್ದು, ಶಿಲಾಕಳಸವನ್ನು ಹೊಂದಿದೆ.

ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳದಲ್ಲಿರುವ ಬನಶಂಕರಿ ದೇವಾಲಯವನ್ನು, ಅಧಿಷ್ಠಾನ ಸೇರಿದಂತೆ ಕೆಂಪುಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಇದು ಮೂಲತಃ ಕೇಶವ ಮತ್ತು ಭೈರವದೇವರ ದ್ವಿಕೂಟ ದೇವಾಲಯವಾಗಿದೆ. ಧಾರವಾಡದ ಎಸ್.ಡಿ.ಎಂ. ತಾಂತ್ರಿಕ ವಿದ್ಯಾಲಯದ ಹತ್ತಿರವಿರುವ ಸೋಮೇಶ್ವರ ಗುಡಿ ಜೀರ್ಣೋದ್ದಾರಗೊಂಡಿದ್ದು, ಅಲ್ಲಿರುವ ಸ್ವಯಂಭುಲಿಂಗ ಉಲ್ಲೇಖಾರ್ಹವಾಗಿದೆ. ಕಲ್ಯಾಣ ಚಾಲುಕ್ಯರ ಸಾಮಂತರಾದ ಗೋವೆ ಕದಂಬರು ಸಹ ಧಾರವಾಡ ಪ್ರದೇಶದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿ ದಾನದತ್ತಿಗಳನ್ನು ನೀಡಿದ್ದಾರೆ. ಇವರು ದೇವಾಲಯಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲೆ ಇದ್ದರೂ ಸಹ ಅಲಂಕರಣ ಹಾಗೂ ಪ್ರಮಾಣದಲ್ಲಿ ಕಡಿಮೆ ಎನ್ನಬಹುದು. ಒರಟು ರಚನೆಯ ಮತ್ತು ಸರಳ ಅಲಂಕರಣೆಯ ಜಾಲಂಧ್ರಗಳ ಅಳವಡಿಕೆ, ಸರಳವಾದ ದ್ವಾರಗಳು ಮತ್ತು ಒರಟು ರಚನೆಯ ತೋರಣಶಿಲ್ಪ ಫಲಕಗಳ ರಚನೆಗಳಿಂದಾಗಿ ಸ್ವಲ್ಪ ಪ್ರತ್ಯೇಕವಾಗಿ ಕಾಣುತ್ತವೆ. ಉದಾ. ನೂಲ್ವಿಯ ಕಲ್ಮೇಶ್ವರ ದೇವಾಲಯದ ದೊಡ್ಡದಾದ ಒರಟು ರಚನೆಯ ಜಾಲಂಧ್ರಗಳು. ಅಂದರೆ ಸಾಮ್ರಾಟರ ಮತ್ತು ಸಾಮಂತರ ದೇವಾಲಯಗಳು ಒಂದೇ ಶೈಲಿಯಲ್ಲಿದ್ದರೂ ಅಲಂಕರಣದಲ್ಲಿ ಅಂತರ ಹೊಂದಿರುವುದನ್ನು ಗುರುತಿಸಬಹುದು. ಹೀಗಾಗಿ ಧಾರವಾಡ ಪ್ರದೇಶದಲ್ಲಿ ನಿರ್ಮಾಣಗೊಂಡ ಗೋವೆ ಕದಂಬರ ದೇವಾಲಯಗಳು, ಸರಳ ನಿರ್ಮಾಣಗಳೆನ್ನಬಹುದು.

ಈ ಭಾಗದ ಕಲ್ಯಾಣ ಚಾಲುಕ್ಯ ಶೈಲಿಯ ಕೆಲವು ದೇವಾಲಯಗಳ ಗರ್ಭಗೃಹದೊಳಗೆ ಗೋಡೆಗೆ ಹೊಂದಿಕೊಂಡಂತೆ ಮೂರು ಕಡೆ ಜೋಡಿಕಂಬಗಳನ್ನು ಅಳವಡಿಸಿದ್ದಾರೆ. ಉದಾ : ಧಾರವಾಡದ ಸೋಮೇಶ್ವರ ದೇವಾಲಯದ ಗರ್ಭಗೃಹದಲ್ಲಿ ಗೋಡೆಗೆ ಆಯತಾ ರಚನೆಯ ಜೋಡಿಕಂಬಗಳನ್ನು ಅಳವಡಿಸಲಾಗಿದೆ. ಕಂಬಗಳ ಜೋಡಣೆಯ ಉದ್ದೇಶ ಸ್ಪಷ್ಟವಾಗುವುದಿಲ್ಲ. ಬಹುಶಃ ಗರ್ಭಗೃಹದ ಗೋಡೆಯನ್ನು ಒಳಭಾಗದಿಂದ ಭದ್ರಪಡಿಸುವ ಸಲುವಾಗಿ ಅಥವಾ ಸಪಾಟಾದ ಒಳಗೋಡೆಯನ್ನು ಅಲಂಕರಿಸುವ ಉದ್ದೇಶದಿಂದ ಈ ಜೋಡಿಕಂಬಗಳನ್ನು ಅಳವಡಿಸಿರಬಹುದು. ಈ ಬಗೆಯ ದೇವಾಲಯಗಳು ಧಾರವಾಡ ಪ್ರದೇಶದಲ್ಲಿ ಕಾಣಸಿಗುತ್ತವೆ. ಈ ಪ್ರದೇಶವು ಗೋವೆ ಕದಂಬರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಮೇಲೆ ಹೇಳಿದ ಜೋಡಿಕಂಬಗಳ ಅಳವಡಿಕೆಯನ್ನು, ಗೋವೆ ಕದಂಬರ ವಿಶೇಷ ವಾಸ್ತುಶೈಲಿ ಎಂದು ಗುರುತಿಸಬಹುದೆ?

ಧಾರವಾಡ ಪ್ರದೇಶದ ಕಲ್ಯಾಣ ಚಾಲುಕ್ಯರ ಕಾಲದ ಹೆಚ್ಚಿನ ದೇವಾಲಯಗಳು ಕದಂಬನಾಗರಶೈಲಿಯ ಶಿಖರಗಳನ್ನು ಹೊಂದಿವೆ. ನಿರ್ಮಿತಿಯಲ್ಲಿ ಸುಲಭವೂ ಹಾಗೂ ಆರ್ಥಿಕವಾಗಿ ಮಿತವ್ಯಯವೂ ಆಗಿರುವುದರಿಂದ, ಬಹುಶಃ ಈ ಬಗೆಯ ಶಿಖರಗಳನ್ನು ನಿರ್ಮಿಸುವಲ್ಲಿ ಆಗಿನ ನಿರ್ಮಾತೃಗಳು ಹೆಚ್ಚಿನ ಒಲವು ತೋರಿರಬಹುಸು. ಕದಂಬರನಾಗರ ಶೈಲಿಯ ಶಿಖರಗಳಲ್ಲಿ ಯಾವುದೇ ಶಿಲ್ಪಗಳ ಅಥವಾ ಸೂಕ್ಷ್ಮ ಕೆತ್ತನೆಗಳ ಅಲಂಕರಣವಿರುವುದಿಲ್ಲ. ಮೆಟ್ಟಿಲಾಕಾರದ ಶಿಖರವನ್ನು ಯಾವ ಹಿನ್ನೆಲೆಯಲ್ಲಿ ಕದಂಬನಾಗರವೆಂದು ಹೆಸರಿಸಲಾಯಿತೆಂಬುದರ ಬಗ್ಗೆ ವಿದ್ವಾಂಸರಲ್ಲಿ ಸ್ಪಷ್ಟ ಅಭಿಪ್ರಾಯಗಳಿಲ್ಲ. ಕದಂಬರು ಈ ಶೈಲಿಯನ್ನು ಪರಿಚಯಿಸಿದರೆ? ಅಥವಾ ವಿದ್ವಾಂಸರು ಕದಂಬರ ಮೇಲಿನ ಪ್ರೀತಿಯಿಂದ ಕದಂಬನಾಗರಶೈಲಿ ಎಂದು ಕರೆದರೆ? ಅಥವಾ ಕಳಿಂಗನಾರವೆಂಬುದು ಕದಂಬ ನಾಗರವೆಂದಾಯಿತೆ? ಈ ಬಗ್ಗೆ ಹೆಚ್ಚಿನ ಪರಿಶೀಲನೆ ಅಗತ್ಯವಾಗಿದೆ. ಹೊಯ್ಸಳರು ಸಹ ಈ ಭಾಗದಲ್ಲಿ ತಮ್ಮ ದೇವಾಲಯಗಳನ್ನು ಕಲ್ಯಾಣ ಚಾಲುಕ್ಯರ ಶೈಲಿಯಲ್ಲೆ ನಿರ್ಮಿಸಿದ್ದಾರೆ. ಆದರೆ ಶಿಲ್ಪಗಳು ಮತ್ತು ಕಂಬಗಳು ಹೆಚ್ಚು ಅಲಂಕರಣಗೊಂಡವು. ನವಲಗುಂದ ತಾಲ್ಲೂಕಿನ ನಾವಳ್ಳಿಯ ಕಲ್ಮೇಶ್ವರ ದೇವಾಲಯವು ಹೊಯ್ಸಳರ ನಿರ್ಮಾಣವೆನ್ನಬಹುರು. ದೇವಾಲಯದ ಮುಂಭಾಗದಲ್ಲಿ ಭಗ್ನಗೊಂಡಿರುವ ಹೊಯ್ಸಳ ಲಾಂಛನಶಿಲ್ಪವಿದೆ. ಇದೇ ರೀತಿ ಕೋಟೂರಿನ ಮಲ್ಲಿಕಾರ್ಜುನ ಗುಡಿ ಮತ್ತು ಮಲ್ಲಿಗವಾಡದ ಕಲ್ಮೇಶ್ವರ ದೇವಾಲಯಗಳು ಹೊಯ್ಸಳರ ಕಾಲದ ನಿರ್ಮಾಣಗಳಾಗಿವೆ. ಈ ಭಾಗದಲ್ಲಿ ಪ್ರಾದೇಶಿಕವಾಗಿ ಗಾಢವಾಗಿದ್ದ ಕಲ್ಯಾಣ ಚಾಲುಕ್ಯರ ಶೈಲಿಯನ್ನೆ ಅನುಕರಿಸಿ ಹೊಯ್ಸಳರು ದೇವಾಲಯಗಳನ್ನು ನಿರ್ಮಿಸಿರುವುದು ಗಮನಾರ್ಹ. ಅಂದರೆ ಹೊಯ್ಸಳರು ಸ್ಥಳೀಯವಾಗಿ ಬೇರೂರಿದ್ದ ವಾಸ್ತುಶೈಲಿಗಳನ್ನು ಗೌರವಿಸಿದರು. ಹೀಗಾಗಿ ನಮ್ಮ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಲಿಲ್ಲ. ಇವರ ಶಾಸನಗಳು ಸಹ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟಿವೆ.

ಇನ್ನು ದೇವಗಿರಿ ಸೇವುಣರ ಶಾಸನಗಳು, ಮುಖ್ಯವಾಗಿ ದೇವಾಲಯಗಳಿಗೆ ನೀಡಿದ ದಾನದತ್ತಿಗಳ ವಿವರಗಳನ್ನು ಒಳಗೊಂಡಿವೆ. ತಡಕೋಡದ ಕಲ್ಮೇಶ್ವರ ದೇವಾಲಯವು ಮೂಲತಃ ಜೈನಬಸದಿಯಾಗಿದ್ದು, ಸೇವುಣರ ಕಾಲನಿರ್ದೇಶಿತ ಸ್ಮಾರಕವಾಗಿದೆ. ದೇವಾಲಯದಲ್ಲಿರುವ ಸೇವುಣ ರಾಮಚಂದ್ರನ ಕ್ರಿ.ಶ.೧೨೮೨ರ ಶಾಸನವು, ಕನ್ನರದೇವನ ಅರಸಿಯ ಆದೇಶದ ಮೇರೆಗೆ ಸರ್ವಾಧಿಕಾರಿ ಮಾಯಿದೇವನಿಂದ ಬಸದಿಯು ನಿರ್ಮಾಣವಾಯಿತೆಂದು ಉಲ್ಲೇಖಿಸುವುದು (ಸೌಇಇ XV : ೧೯೯). ಕಲ್ಯಾಣ ಚಾಲುಕ್ಯರ ನಂತರ ಧಾರವಾಡ ಪ್ರದೇಶವು ಹೊಯ್ಸಳರ ಮತ್ತು ಸೇವುಣರ ಯುದ್ಧಭೂಮಿಯಾಯಿತು. ನಿರಂತರವಾಗಿ ಕದನಗಳು ನಡೆದ ಪರಿಣಾಮವಾಗಿ ಈ ಪ್ರದೇಶದಲ್ಲಿ ದೇವಾಲಯಗಳ ನಿರ್ಮಾಣ ಕುಂಠಿತಗೊಂಡಿತು. ಕರ್ನಾಟಕದಲ್ಲಿ ದೇವಗಿರಿ ಸೇವುಣರ ಕಾಲನಿರ್ದೇಶಿತ ಸ್ಮಾರಕಗಳು ಕಡಿಮೆ. ಹೀಗಾಗಿ ತಡಕೋಡದ ಕಲ್ಮೇಶ್ವರ ದೇವಾಲಯವು ಪ್ರಮುಖ ಸ್ಮಾರಕವೆನ್ನಬಹುದು.

ವಿಜಯನಗರದ ಅರಸರು ಈ ಭಾಗದಲ್ಲಿ ದಾನದತ್ತಿಗಳನ್ನು ನೀಡುವುದರ ಮೂಲಕ ಪ್ರಾಚೀನ ಪರಂಪರೆಯನ್ನು ಜೀವಂತಗೊಳಿಸಿದ್ದಾರೆ. ಎರಡನೆಯ ದೇವರಾಯನ ಕಾಲದಲ್ಲಿ ಕುಂದಗೋಳದಲ್ಲಿ ಹನುಮಂತದೇವರ ಗುಡಿ ನಿರ್ಮಾಣವಾಯಿತು (ಸೌಇಇxx : ೨೩೪). ಇತ್ತೀಚಿಗೆ ಈ ದೇವಾಲಯಗಳನ್ನು ಕೆಡವಿ ಹೊಸ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಶಾಸನವೊಂದು ಕ್ರಿ.ಶ. ೧೪೪೮ರಲ್ಲಿ ದೊರೆ ಮಲ್ಲಿಕಾರ್ಜುನನು ನಂದಿಕಂಬ ನಿಲ್ಲಿಸಿದನೆಂದು ತಿಳಿಸುತ್ತದೆ (ಕಇ vi : ಧಾರವಾಡ ೬೮). ಕೃಷ್ಣದೇವರಾಯ ಮತ್ತು ಅಚ್ಯುತರಾಯರು ದಾನ ನೀಡಿದ ಉಲ್ಲೇಖಗಳಿವೆ. (ಸೌಇಇ xv : ೨೫೦, ೨೫೪). ಸದಾಶಿವರಾಯನು ನಾವಿದರಿಗೆ ಸುಂಕ ವಿನಾಯಿತಿ ನೀಡಿದನು (ಅದೇ : ೨೭೫, ೨೬೦). ಶಿರಗುಪ್ಪಿಯ ಹುಡೇದ ಹನುಮಂತ ದೇವಾಲಯದ ತೊಲೆಯಲ್ಲಿರುವ ಕೃಷ್ಣದೇವರಾಯನ ಶಾಸನವು, ಬಾಗಿಲ ತಿಮ್ಮಪ್ಪನಾಯಕನ ಅಧಿಕಾರಿ ತಿರುಮಲಪ್ಪನ ಪುಣ್ಯಾರ್ಥವಾಗಿ ಆತನ ಅಳಿಯ ಐರಾಪೀಳನು ದೇವಾಲಯ ನಿರ್ಮಿಸಿದನೆಂದಿದೆ. ಬಹುಶಃ ಈ ದೇವಾಲಯ, ಶಾಸನವಿರುವ ಹನುಮಂತದೇವರ ದೇವಾಲಯವಿರಬಹುದು. ಹೀಗೆ ವಿಜಯನಗರ ಕಾಲದಲ್ಲಿ, ಈ ಪ್ರದೇಶದಲ್ಲಿ ಆಂಜನೇಯ ದೇವಾಲಯಗಳು ಪ್ರಧಾನವಾಗಿ ನಿರ್ಮಾಣಗೊಂಡಿರುವುದನ್ನು ಮನಗಾಣುತ್ತೇವೆ. ಉಳಿದಂತೆ ಕೆಲವು ಹಳೆಯ ದೇವಾಲಯಗಳು ಜೀರ್ಣೋದ್ಧಾರಗೊಂಡವು. ಆದರೆ ಹಂಪೆಯಲ್ಲಿರುವಂತೆ ಬೃಹತ್ ದೇವಾಲಯಗಳಾವು ಧಾರವಾಡ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿಲ್ಲ. ಮಧ್ಯಕಾಲೀನ ಕರ್ನಾಟಕದಲ್ಲಿ ದೇವಾಲಯಗಳ ನಿರ್ಮಾಣವು ನಗರ ಕೇಂದ್ರಿತವಾಗಿತ್ತೆಂದು ಗುರುತಿಸಬಹುದು.

ಇನ್ನು ವಿಜಯನಗರೋತ್ತರ ಕಾಲದಲ್ಲಿ ಪಂಥ ಮತ್ತು ಕುಲದೇವತೆಗಳ ದೇವಾಲಯಗಳು ಹೆಚ್ಚಾಗಿ ನಿರ್ಮಾಣಗೊಂಡವು. ಅವು ಕಾಲಕಾಲಕ್ಕೆ ಜೀರ್ಣೋದ್ಧಾರ ಕ್ರಿಯೆಗೆ ಒಳಗಾಗಿವೆ. ಕೆಲವು ಸಮುದಾಯಗಳು ತಮ್ಮ ಪಂಥ ಅಥವಾ ಕುಲಕ್ಕೆ ಸಂಬಂಧಿಸಿದ ದೇವರುಗಳನ್ನು ಪ್ರಾಚೀನ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿಕೊಂಡಿವೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹಳೆಯ ದೇವಾಲಯಗಳನ್ನು ಕೆಲವು, ಅದೇ ಸ್ಥಳದಲ್ಲಿ ಮಣ್ಣಿನ ಅಥವಾ ಸಿಮೆಂಟಿನ ದೇವಾಲಯಗಳನ್ನು ಸ್ಥಳೀಯ ಅಥವಾ ಜನಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಂದರೆ ಜನರು ಹೊಸ ದೇವಾಲಯಗಳ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾರೆ.

ಮಠಗಳ ಪ್ರಾಬಲ್ಯ, ದೇವಾಲಯಗಳ ಭೂಮಿಯ ಪರಭಾರೆ ಮತ್ತು ಸೌಖ್ಯಾಕಾಂಕ್ಷಿ ಪುರೋಹಿತ ವರ್ಗಗಳ ವ್ಯಾಪಾರಿ ಮನೋಭಾವಗಳಿಂದಾಗಿ ಪ್ರಾಚೀನ ದೇವಾಲಯಗಳು ಸೊರಗಿವೆ. ಒಂದು ಕಾಲಕ್ಕೆ ವಿದ್ಯಾಕೇಂದ್ರಗಳಾಗಿದ್ದ ಈ ದೇವಾಲಯಗಳು, ಇಂದು ಜೂಜು ಕೋರರ ಮತ್ತು ವಿಷಜಂತುಗಳ ಆಶ್ರಯತಾಣಗಳಾಗಿ ಸಂರಕ್ಷಣೆಯಿಂದ ವಂಚಿತವಾಗಿವೆ.

ಶಿಲ್ಪಗಳು

ಆದಿಇತಿಹಾಸ ಕಾಲದಿಂದ ಮೊದಲುಗೊಂಡು ವಿಜಯನಗರೋತ್ತರ ಕಾಲದವರೆಗಿನ ಶಿಲ್ಪಾವಶೇಷಗಳು ಧಾರವಾಡ ಪ್ರದೇಶದಲ್ಲಿ ಕಾಣಸಿಗುತ್ತವೆ. ಧಾರವಾಡ ಜಿಲ್ಲೆಯ ಬೆನಕನಮಟ್ಟಿಯಲ್ಲಿ, ಪರ್ವತಮಲ್ಲಯ್ಯನ ಗುಡಿಯಲ್ಲಿ ಲಿಂಗದ ಮುಂದಿರುವ ಪುಟ್ಟ ಕಳಸದ ಮೇಲೆ ಮೂವರು ಸ್ತ್ರೀಯರ ಸೂಕ್ಷ್ಮ ಉಬ್ಬುಶಿಲ್ಪಗಳಿದ್ದು, ಆದಿಇತಿಹಾಸ ಕಾಲಕ್ಕೆ ನಿರ್ದೇಶಿಸಬಹುದಾಗಿದೆ. ನಂತರ ಹೆಸರಿಸಬಹುದಾದ ಶಿಲ್ಪಾವಶೇಷಗಳೆಂದರೆ ಜೈನ ತೀರ್ಥಂಕರರದು. ಅದರಗುಂಚಿ ಗ್ರಾಮದಲ್ಲಿ ದೊಡ್ಡೇಶ್ವರ ಎನ್ನುವ ಮಹಾವೀರನ ಶಿಲ್ಪ ರಚನೆಯಲ್ಲಿ ದೊಡ್ಡದು. ಜನರು ಶಿಲ್ಪಕ್ಕೆ ವಿಭೂತಿಯನ್ನು ಧಾರಣೆಮಾಡಿ ಪೂಜಿಸುತ್ತಿದ್ದಾರೆ. ಸಮೀಪದ ಬುಡರಸಿಂಗಿ ಗ್ರಾಮವು ಪ್ರಾಚೀನ ಉಚ್ಚಂಗಿ ಗ್ರಾಮವಾಗಿದ್ದು, ಅಲ್ಲಿದ್ದ ಬಸದಿಯನ್ನು ಅದರಗುಂಚಿಯ ಶಾಸನವೊಂದು ಉಲ್ಲೇಖಿಸುತ್ತದೆ. ಈಗ ಬಸದಿ ಇಲ್ಲ. ಆದರೆ ತೀರ್ಥಂಕರ ಶಿಲ್ಪವೊಂದು ಇತ್ತೀಚೆಗೆ ಮಣ್ಣಿನಲ್ಲಿ ದೊರೆತಿದೆ. ಶಿಲ್ಪವು ಸುಂದರವಾಗಿದ್ದು, ನಯನಮನೋಹರವಾಗಿದೆ. ಬಹುಶಃ ಇದು ರಾಷ್ಟ್ರಕೂಟರ ಕಾಲದ್ಧಿರಬಹುದು. ಹಳೆಹುಬ್ಬಳ್ಳಿ, ಅಮ್ಮಿನಬಾವಿ, ಛಬ್ಬಿ ಹಾಗೂ ಗುಡೇರಿಯಲ್ಲಿ ಜೈನಬಸದಿ ಮತ್ತು ಶಿಲ್ಪಗಳು ಕಂಡುಬರುತ್ತವೆ. ಈ ಶಿಲ್ಪಾವಶೇಷಗಳು, ಧಾರವಾಡ ಪ್ರದೇಶದಲ್ಲಿ ಜೈನಧರ್ಮದ ವ್ಯಾಪಕತೆಯನ್ನು ಸೂಚಿಸುತ್ತವೆ.

ಇನ್ನು ಶಿವಾಲಯಗಳಲ್ಲಿ ಲಿಂಗ, ನಂದಿ, ಮಹಿಷಮರ್ದಿನಿ, ಗಣಪತಿ, ವಿಷ್ಣು, ಸೂರ್ಯ, ಭೈರವ, ಭೈರವಿ, ದಕ್ಷ, ದಕ್ಷಿಣಾಮೂರ್ತಿ, ಕಾರ್ತಿಕೇಯ, ಸಪ್ತಮಾತೃಕೆಯರು, ಆಂಜನೇಯ, ಮತ್ತಿತರ ಶಿಲ್ಪಗಳು ಕಂಡುಬರುತ್ತವೆ. ಪ್ರಾಚೀನವೆನ್ನಬಹುದಾದ ಮಹಿಷಮರ್ದಿನಿಯ ಶಿಲ್ಪವೊಂದು ಕುಂದಗೋಳ ತಾಲ್ಲೂಕನ ಶಿರೂರಿನ ಕೆರೆದಂಡೆಯಲ್ಲಿದೆ. ಇದು ರಾಷ್ಟ್ರಕೂಟರ ಕಾಲದ ರಚನೆ ಎನ್ನಬಹುದು. ಸಂಖ್ಯೆಯಲ್ಲಿ ಹೋಲಿಸಿದಾಗ ಕಾರ್ತಿಕೇಯ ಶಿಲ್ಪಗಳು ತುಂಬಾ ಕಡಿಮೆ. ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿಯಲ್ಲಿರುವ ಭೈರವನ ಶಿಲ್ಪವಂತೂ ಸೌಂದರ್ಯದಲ್ಲಿ ಹೊಯ್ಸಳ ಶಿಲ್ಪಗಳನ್ನು ಮೀರಿಸುವಂತಿದೆ. ರೌದ್ರಮೂರ್ತಿಯಲ್ಲಿ ಸೌಮ್ಯಭಾವದ ದರ್ಶನವೇ ಶಿಲ್ಪದ ಹೆಗ್ಗಳಿಕೆ. ಹಾಗೂ ಇದು ಶಿಲ್ಪಿಯ ಕೌಶಲವೂ ಮತ್ತು ಆಶಯವೂ ಹೌದು. ಸುಮಾರು ೩.೫ ಅಡಿ ಎತ್ತರದ ಶಿಲ್ಪವು ಆಯುಧಗಳನ್ನು ಹಿಡಿದು ತ್ರಿಭಂಗಿಯಲ್ಲಿದೆ. (ನೋಡಿ, ಹಿಂಬದಿ ಮುಖಪುಟ). ಕುಂದಗೋಳ ತಾಲ್ಲೂಕಿನ ಕೊಡ್ಲಿವಾಡದಲ್ಲಿರುವ ಬೇತಾಳಭೈರವನ ಶಿಲ್ಪ ನೋಡಲು ಭಯಾನಕವಾಗಿದೆ. ಎಂತಹ ಧೈರ್ಯಶಾಲಿಗಳನ್ನು ಕ್ಷಣಕಾಲ ಬೆಚ್ಚಿಬೀಳಿಸುವಂತಿದೆ. ಶಿಲ್ಪಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾನೆ. ಕಲಘಟಗಿ ತಾಲ್ಲೂಕಿನ ಕಂದಲಿಯ ಹಾಳೂರಿನಲ್ಲಿರುವ ಕ್ರಿ.ಶ. ೧೦೫೦ರ ಶಾಸನವೊಂದು, ಗೋವೆ ಕದಂಬರ ಎರಡನೆಯ ಚಟ್ಟಯ್ಯನದು. ಇದರಲ್ಲಿ ಮಾರಯ್ಯ ಎಂಬುವನು ಬಾದುಬ್ಬೆ ವಿಗ್ರಹವನ್ನು ನಿರ್ಮಿಸಿದನೆಂದಿದೆ (ಕಲಬುರ್ಗಿ : ಧಾಜಿಶಾಸೂ). ಅಮ್ಮಿನಬಾವಿಯ ಮಡಿವಾಳರು, ಮರಿವಾಳ ಮಾಚಿದೇವನ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ಕ್ರಿ.ಶ. ೧೨೮೪ರ ಶಾಸನವು ಉಲ್ಲೇಖಿಸುತ್ತದೆ (ಕಭಾ : ೬-೪). ಅಂದರೆ ಶಿವಶರಣ ಮಾಚಿದೇವನು ತನ್ನ ಸಮುದಾಯದವರಿಂದ ಹದಿಮೂರನೆಯ ಶತಮಾನದಲ್ಲೆ ಪೂಜಿಸಲ್ಪಟ್ಟಿದ್ದನು. ಹಾಗೂ ಮಡಿವಾಳರು ಮಾಚಿದೇವನನ್ನು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನಾಗಿ ಗುರುತಿಸಿಕೊಂಡಿದ್ದರು. ಇದು ಮಾಚಿದೇವನ ಕಾಲದ ಬಗ್ಗೆಯೂ ಬೆಳಕು ಚೆಲ್ಲುವುದು. ಧಾರವಾಡ ತಾಲ್ಲೂಕಿನ ಗೂಗಿಕಟ್ಟಿಯಲ್ಲಿ ಕಲ್ಯಾಣ ಚಾಲುಕ್ಯರ ತ್ರಿಭುವನಮಲ್ಲನ ಮಗಳು ಹಾಗೂ ಎರಡನೆಯ ಜಯಕೇಶಿಯ ಹೆಂಡತಿ ಮೈಳಲದೇವಿಯು ಗೂಗಿಕಟ್ಟೆಯಲ್ಲಿ ಕೇಶವದೇವರನ್ನು ಪ್ರತಿಷ್ಠಾಪಿಸಿದಳೆಂದು, ದೇವರ ಪಾದಪೀಠದಲ್ಲಿರುವ ಕ್ರಿ.ಶ. ೧೧೨೫ ರ ಶಾಸನದಿಂದ ತಿಳಿದುಬರುವುದು (ಸೌಇಇ XV : ೮; XI II : ೧೯೯). ಅಗ್ರಹಾರ ಹುಪ್ಪವಳ್ಳಿಯ ಮಹಾಜನರು ಮಹಾಲಕ್ಷ್ಮಿದೇವಿಯನ್ನು ಪ್ರತಿಷ್ಠೆ ಮಾಡಿ, ದೇವಾಲಯಕ್ಕೆ ದಾನದತ್ತಿಗಳನ್ನು ನೀಡಿದ್ದಾರೆ. (ಸೌಇಇ XV : ೨೩೨; ಕಕು : ಪುಟ ೪೦೧-೩; ಕಇ V : ೬೬). ಜಿಲ್ಲೆಯಲ್ಲಿ ವಿಜಯನಗರ ಮತ್ತು ನಂತರದ ಕಾಲಕ್ಕೆ ಸೇರುವ ಆಂಜನೇಯ, ಗಣಪತಿ ಮತ್ತಿತರ ಶಿಲ್ಪಗಳು ಕಂಡುಬರುತ್ತವೆ. ಇವುಗಳಲ್ಲಿ ಧಾರವಾಡ ತಾಲ್ಲೂಕಿನ ಸತ್ತೂರಿನ ವೀರಗಲ್ಲು ಶಿಲ್ಪವೊಂದು ಮನಮೋಹಕವಾಗಿದ್ದು, ಉಲ್ಲೇಖಾರ್ಹವಾಗಿದೆ.

ಬಹುತೇಕ ದೇವಾಲಯಗಳ ದೇವಕೋಷ್ಠಗಳಲ್ಲಿ ಶಿಲ್ಪಗಳಿಲ್ಲ. ಕೆಲವು ಹೊಸ ದೇವಾಲಯಗಳಲ್ಲಿ ಹಳೆಯ ಶಿಲ್ಪಗಳನ್ನೆ ಪ್ರತಿಷ್ಠಾಪಿಸಿದ್ದಾರೆ. ಹೆಚ್ಚಿನ ಹೊಸ ದೇವಾಲಯಗಳಲ್ಲಿ ಹೊಸ ಶಿಲ್ಪಗಳನ್ನು ಪ್ರತಿಷ್ಠಾಪಿಸಿ, ಹಳೆಯ ಶಿಲ್ಪಗಳನ್ನು ಹೊರಹಾಕಿದ್ದಾರೆ. ಕೆಲವೆಡೆ ಹಳೆಯ ಶಿಲ್ಪಗಳನ್ನು ಹೊಸ ದೇವಾಲಯದ ಗರ್ಭಗೃಹದ ನೆಲದೊಳಗೆ ಹುಗಿದಿದ್ದಾರೆ. ಮತ್ತೆ ಕೆಲವೆಡೆ ಹಳೆಯ ಶಿಲ್ಪಾವಶೇಷಗಳನ್ನು ದೂರದ ನದಿ ಅಥವಾ ಹಳ್ಳಗಳಲ್ಲಿ ಬಿಸಾಡಿದ್ದಾರೆ. ಹೀಗೆ ಪ್ರಾಚೀನ ಶಿಲ್ಪಾವಶೇಷಗಳು ಗ್ರಾಮಸ್ಥರ ಇಚ್ಛೆಗೆ ಅನುಗುಣವಾಗಿ ಸ್ಥಳಾಂತರಗೊಂಡಿವೆ. ಇಂತಹ ಶಿಲ್ಪಾವಶೇಷಗಳ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸ ತುರ್ತಾಗಿ ಆಗಬೇಕು. ಇಲ್ಲದಿದ್ದಲ್ಲಿ ಮನುಷ್ಯನ ಮೌಡ್ಯಕ್ಕೆ ತುತ್ತಾಗಿ ಹಾಳಾಗುತ್ತವೆ. ಇದೇ ರೀತಿ ಶಾಸನಗಳು, ವೀರಗಲ್ಲು ಮತ್ತು ಸತಿಕಲ್ಲುಗಳು ಸಹ ಅಪಾಯದ ಸ್ಥಿತಿಯಲ್ಲಿವೆ. ಈ ಬಗ್ಗೆ ಜನರಲ್ಲಿ ಅರಿವನ್ನುಂಟುಮಾಡುವ ಕೆಲಸ ಗ್ರಾಮೀಣ ಮಟ್ಟದಲ್ಲಿ ನಡೆಯಬೇಕಾಗಿದೆ.

ಧಾರವಾಡ ಮತ್ತು ಕಲಘಟಗಿ ತಾಲ್ಲೂಕುಗಳ ಅರಣ್ಯ ಪ್ರದೇಶದ ಹಾಳೂರು ನಿವೇಶನಗಳಲ್ಲಿ, ಶಿಲ್ಪಗಳು ನಿಧಿಗಳ್ಳರ ದಾಳಿಗೆ ತುತ್ತಾಗಿ ಭಗ್ನಗೊಂಡಿವೆ. ಹಾಗೂ ಎಲ್ಲೆಂದರಲ್ಲಿ ಚೆಲ್ಲಾಡಿವೆ. ಕಲ್ಲುಗುಂಡುಗಳನ್ನು ಪೂಜಿಸುವ ಜನರು ಭಗ್ನಶಿಲ್ಪಗಳತ್ತ ಕಣ್ಣೆತ್ತಿಯೂ ಸಹ ನೋಡುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿರುವ ಪುರಾತತ್ವ ವಸ್ತುಸಂಗ್ರಹಾಲಯಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿರುವ ಅರಕ್ಷಿತ ಮತ್ತು ಅಲಕ್ಷಿತ ಶಿಲ್ವಾವಶೇಷಗಳನ್ನು ಸಂಗ್ರಹಿಸುವ ಕೆಲಸವನ್ನು ಕೈಗೊಂಡಲ್ಲಿ ವಸ್ತು ಸಂಗ್ರಹಾಲಯಗಳ ಸ್ಥಾಪನೆ ಸಾರ್ಥಕವಾದೀತು.

ಪ್ರಸ್ತುತ ದೇವಾಲಯ ಕೋಶದಲ್ಲಿ ಆದಷ್ಟೂ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡಲಾಗಿದೆ. ಇವು ಹೆಚ್ಚಿನ ಅಧ್ಯಯನ ಮತ್ತು ಸಂಶೋಧೆಗಳಿಗೆ ಅನುವು ಮಾಡಿಕೊಡುತ್ತವೆ. ಈ ಕೃತಿಯ ಪ್ರಧಾನ ಉದ್ದೇಶ ಜಿಲ್ಲೆಯ ದೇವಾಲಯ ಮತ್ತು ಶಿಲ್ಪಗಳ ಬಗೆಗೆ ಮಾಹಿತಿಯನ್ನು ಒದಗಿಸುವುದಾಗಿದೆ. ಜೊತೆಗೆ ಪುರಾತತ್ವ ನೆಲೆಗಳು, ಕುರುಹುಗಳು, ಇತರ ಸ್ಮಾರಕಗಳು ಮತ್ತು ಶಾಸನಗಳ ಮಾಹಿತಿಯನ್ನು ಪ್ರಧಾನ ವಿಷಯಕ್ಕೆ ಧಕ್ಕೆಬಾರದಂತೆ ಸಾಂದರ್ಭಿಕವಾಗಿ ದಾಖಲಿಸುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಕೃತಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಅಧ್ಯಯನಕಾರರಿಗೆ ಹಾಗೂ ಆಸಕ್ತರಿಗೆ ಉಪಯುಕ್ತವಾಗುವುದೆಂದು ಭಾವಿಸುತ್ತೇನೆ.

 

ಧಾರವಾಡ ಜಿಲ್ಲೆ

ಧಾರವಾಡ ಜಿಲ್ಲೆ