೩೧

ಊರು ಬದನಿಗಟ್ಟಿ
ಸ್ಥಳ ಹಾಳೂರು
ಸ್ಮಾರಕ ಬಸವಣ್ಣ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಅಂತರಾಳಗಳನ್ನು ಹೊಂದಿದೆ. ದೇವಾಲಯದ ಮೇಳೆ ಮತ್ತು ಸುತ್ತಲೂ ಚಕ್ಕೆಕಲ್ಲುಗಳನ್ನು ತುಂಬಿದ್ದಾರೆ. ನವರಂಗಭಾಗವು ಬಿದ್ದು ಹೋಗಿದ್ದು, ಈಗ್ಗೆ ಕೆಲವು ವರ್ಷಗಳ ಹಿಂದೆ ಮರದ ಕಂಬ ಮತ್ತು ತೊಲೆಗಳನ್ನು ಅಳವಡಿಸಿ ನವರಂಗವನ್ನು ನಿರ್ಮಿಸಿದ್ದಾರೆ. ಮೇಲೆ ಜಿಂಕ್‌ಶೀಟನ್ನು ಹೊದಿಸಲಾಗಿದೆ. ನವರಂಗವು ಉತ್ತರ, ದಕ್ಷಿಣ ಮತ್ತು ಪೂರ್ವದಲ್ಲಿ ದ್ವಾರಗಳನ್ನು ಹೊಂದಿದೆ. ಪೂರ್ವದ್ವಾರಕ್ಕೆ ಹೊಂದಿಕೊಂಡಿರುವ ಸಣ್ಣ ಕೊಠಡಿಯಲ್ಲಿ ಬೃಹತ್ ನಂದಿಶಿಲ್ಪವಿದೆ. ಬಹುಶಃ ಇದು ಹಿಂದೆ ನಂದಿಪಂಟಪವಾಗಿದ್ದು, ಪ್ರವೇಶದ್ವಾರವನ್ನು ಹೊಂದಿದ್ದಂತೆ ಕಂಡುಬರುತ್ತದೆ.

ಗರ್ಭಗೃಹದಲ್ಲಿ ಲಿಂಗವಿದೆ. ನವರಂಗದ ಆಗ್ನೇಯ ಮೂಲೆಯಲ್ಲಿರುವ ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಗರುಡಲಾಂಛನವಿರುವ ಪಾಣಿಪೀಠ, ಕಾರ್ತಿಕೇಯ ಮತ್ತಿತರ ಭಗ್ನಶಿಲ್ಪಾವಶೇಷಗಳು ಕಂಡುಬರುತ್ತವೆ. ಈ ಊರಿನ ಜನರು ಕಾಲಾಂತರದಲ್ಲಿ ಬಮ್ಮಿಗಟ್ಟಿಗೆ ಬಂದು ನೆಲಸಿದ್ದಾರೆ. ಬಮ್ಮಿಗಟ್ಟಿಯಲ್ಲಿ ಚಕ್ಕೆಕಲ್ಲಿನ ಕೋಟೆ ಮತ್ತು ಉಡೇವು ಸ್ಮಾರಕಗಳನ್ನು ಕಾಣಬಹುದು.

೩೨

ಊರು ಬಾನಗತ್ತಿಗುಡಿಹಾಳ
ಸ್ಥಳ ದೇಸಾಯಿ ಓಣಿ
ಸ್ಮಾರಕ ವಿರೂಪಾಕ್ಷೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹವನ್ನು ಹಾಗು ಅದರ ಸುತ್ತ ಸೇರಿದಂತೆ ಸಭಾಗೃಹವನ್ನು ಒಳಗೊಂಡಿದೆ. ಮೊದಲಿಗೆ ಈ ದೇವಾಲಯವು ಈಗಿನ ವಿಠೋಬ ದೇವಾಲಯವಿದ್ದಲ್ಲಿ ಇತ್ತು. ಕೆಲವು ದಶಕಗಳ ಹಿಂದೆ ಈಗಿರುವಲ್ಲಿಗೆ ಸ್ಥಳಾಂತರಿಸಲಾಗಿದೆ. ಇದನ್ನು ಇಲ್ಲಿನ ದೇಸಾಯಿಯವರು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿರುವ ಲಿಂಗ ವಿಜಯನಗರೋತ್ತರ ಕಾಲದ ರಚನೆಯೆನ್ನಬಹುದು. ಹೊರಗೆ ಗಣಪತಿ ಮತ್ತು ನಾಗಶಿಲ್ಪಗಳಿವೆ. ವಿಜಯನಗರದ ಪತನಾನಂತರ ಇಲ್ಲಿಗೆ ಬಂದು ನೆಲಸಿದ ದೇಸಾಯಿಯವರು, ವಿರೂಪಾಕ್ಷೇಶ್ವರನ ಹೆಸರಿನಲ್ಲಿ ದೇವಾಲಯವನ್ನು ಸ್ಥಾಪಿಸಿದರೆಂದು ಆ ಮನೆತನದವರು ತಿಳಿಸುತ್ತಾರೆ.

೩೩

ಊರು ಬಿಸರಳ್ಳಿ
ಸ್ಥಳ ಹೊಂಡದ ಬಳಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹವು ಹಳೆಯದಿದ್ದು, ಹೊರಭಿತ್ತಿ ಜೀಣೋದ್ಧಾರಗೊಂಡಿದೆ. ಅಂದರೆ ಅಧಿಷ್ಠಾನದ ಮೇಲಿರುವ ಗರ್ಭಗೃಹದ ಹೊರಭಿತ್ತಿಯ ಅರ್ಧದಿಂದ ದಿಂಡುಗಲ್ಲಿನ ಗೋಡೆ ನಿರ್ಮಿಸಿದ್ದಾರೆ. ಗರ್ಭಗೃಹದ ಮೇಲೆ ಗಾರೆಶಿಖರವಿದೆ. ಗರ್ಭಗೃಹದ ದ್ವಾರಕ್ಕೆ ಮರದ ಬಾಗಿಲುಚೌಕಟ್ಟನ್ನು ಅಳವಡಿಸಿದ್ದಾರೆ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದೆ. ದ್ವಾರದ ಮೇಲಿನ ಫಲಕದಲ್ಲಿ ಸಿಂಹ, ಆನೆ ಮತ್ತು ನಾಗರ ಶೈಲಿಯ ಶಿಖರಗಳ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಸಭಾಗೃಹದಲ್ಲಿ ಕಾಂಕ್ರಿಟಿನ ಕಂಬಗಳಿದ್ದು, ಮೇಲೆ ಸಿಮೆಂಟಿನ ಚಾವಣಿ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಲಿಂಗವಿದ್ದು, ಸಭಾಗೃಹದ ನೈರುತ್ಯಮೂಲೆಯಲ್ಲಿ ಗಣಪತಿ ಶಿಲ್ಪವಿದೆ. ಹೊರಗೆ ಮರದ ಕೆಳಗೆ ಪ್ರಾಚೀನ ಶಿಲ್ಪಾವಶೇಷಗಳು ಬಿದ್ದಿವೆ.

೩೪

ಊರು ಬೀರವಳ್ಳಿ
ಸ್ಥಳ ಹೊಂಡದ ಬಳಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗಿಡ್ಡನೆಯ ದೇವಾಲಯವು ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ದೇವಾಲಯದ ಮೇಲೆ ಮಣ್ಣು ತುಂಬಲಾಗಿದೆ. ಗರ್ಭಗೃಹದ ಬಾಗಿಲು ಸರಳರಚನೆಯದು. ನವರಂಗದ ಕಂಬಗಳು ಚೌಕರಚನೆಯವು. ದ್ವಾರವನ್ನು ಮರದಿಂದ ಮಾಡಲಾಗಿದೆ. ಮುಂದಿರುವ ಸಭಾಗೃಹದ ಚಾವಣಿಯಲ್ಲಿ ಸೀಮೆಹೆಂಚನ್ನು ಹೊದಿಸಲಾಗಿದೆ.

ಗರ್ಭಗೃಹದಲ್ಲಿ ಸ್ವಯಂಭುಲಿಂಗವಿದೆ. ನವರಂಗದಲ್ಲಿ ಸೂರ್ಯ, ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ನಾಗಶಿಲ್ಪಗಳಿವೆ. ಇವೆಲ್ಲವೂ ಭಗ್ನಗೊಂಡಿವೆ. ಹೊರಗೆ ಕಾಲಭೈರವನ ಶಿಲ್ಪವಿದೆ.

ಇಲ್ಲಿರುವ ಶಾಸನ ಪ್ರಕಟಗೊಂಡ ಬಗೆಗೆ ಮಾಹಿತಿ ಇಲ್ಲ.

೩೫

ಊರು ಬೀರವಳ್ಳಿ
ಸ್ಥಳ ಕಲಘಟಗಿ-ತಡಸ ರಸ್ತೆ
ಸ್ಮಾರಕ ರಾಮಲಿಂಗಪ್ಪ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ರಾಷ್ಟ್ರಕೂಟ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಜೀರ್ಣೋದ್ಧಾರಗೊಂಡಿರುವ ಗರ್ಭಗೃಹದಲ್ಲಿ ಸುಮಾರು ೧೦ ನೆಯ ಶತಮಾನಕ್ಕೆ ಸೇರುವ ಲಿಂಗವಿದೆ. ಗರ್ಭಗೃಹದ ಮೇಲೆ ಮಣ್ಣು ಮತ್ತು ಕಲ್ಲನ್ನು ತುಂಬಲಾಗಿದೆ. ಹೊರಗೆ ಹಳೆ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿರುವ ಲಿಂಗ ರಾಷ್ಟ್ರಕೂಟರ ಕಾಲದ ರಚನೆಯಂತೆ ಕಂಡುಬರುತ್ತದೆ. ಹಾಗು ನಂದಿಶಿಲ್ಪವಿದೆ. ಹೊರಗೆ ನಾಗಶಿಲ್ಪಗಳಿವೆ. ದೇವಾಲಯದ ಪಕ್ಕದಲ್ಲಿ ಹೊಂಡವಿದೆ.

೩೬

ಊರು ಬೆಲವಂತರ
ಸ್ಥಳ ಹೊಂಡದ ಬಳಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ ಮತ್ತು ಅರ್ಧಮಂಟಪಗಳನ್ನು ಹೊಂದಿರುವ ದೇವಾಲಯವಿದು. ಇದನ್ನು ಒಳಗೊಂಡಂತೆ ಸುತ್ತಲೂ ಚಕ್ಕೆಕಲ್ಲಿನ ಗೋಡೆ ನಿರ್ಮಿಸಿ, ಮೇಲೆ ಜಿಂಕ್‌ಶೀಟನ್ನು ಹೊದಿಸಿದ್ದಾರೆ. ಹೀಗಾಗಿ ದೇವಾಲಯದ ಸುತ್ತ ಪ್ರಾಂಗಣ ನಿರ್ಮಾಣವಾಗಿದೆ. ಗರ್ಭಗೃಹ ದ್ವಾರಭಾಗವು ಜೀರ್ಣೋದ್ಧಾರಗೊಂಡಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಮುಂದಿನ ಪ್ರಾಂಗಣದಲ್ಲಿ ಭಗ್ನಗೊಂಡಿರುವ ನಂದಿ, ಮತ್ತಿತರ ಶಿಲ್ಪಾವಶೇಷಗಳಿವೆ. ಹೊರಗೆ ಕೆಲವು ಭಗ್ನಶಿಲ್ಪಗಳು ಹಾಗೂ ಶಾಸನಗಳು ಕಂಡು ಬರುತ್ತವೆ.

ಇಲ್ಲಿರುವ ಶಾಸನಗಳ ಪ್ರಕಟಣೆ ಬಗ್ಗೆ ಮಾಹಿತಿ ಇಲ್ಲ. ಆದರೆ ಊರ ಓಣಿಯಲ್ಲಿರುವ ಕ್ರಿ.ಶ. ೧೧೪೯ರ ಎರಡನೆ ಜಗದೇಕಮಲ್ಲನ ಶಾಸನವು ವರದಿಯಾಗಿದೆ. ಹಡೆವಳೇಶ್ವರ ದೇವರಿಗೆ ಭೂಮಿಯನ್ನು ದಾನಮಾಡಿದ ಉಲ್ಲೇಖವುಂಟು (ಕಲಬುರ್ಗಿ : ಧಾ ಜಿ ಶಾ ಸೂ). ಮೇಲಿನ ದೇವಾಲಯದ ಪ್ರಾಚೀನ ಹೆಸರು ಹಡೆವಳೇಶ್ವರ ಎಂದಿರಬಹುದು.

೩೭

ಊರು ಬೆಂಡಲಗಟ್ಟಿ
ಸ್ಥಳ ಹಾಳೂರು
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ನಾಶವಾಗಿದೆ. ಅದರ ಲಿಂಗ, ನಂದಿ ಮತ್ತಿತರ ಭಗ್ನಶಿಲ್ಪಾವಶೇಷಗಳು ಕಂಡುಬರುತ್ತವೆ. ಇಲ್ಲಿ ಶಾಸನವಿದ್ದು, ಪ್ರಕಟಗೊಂಡಲ್ಲಿ ದೇವಾಲಯವನ್ನು ಕುರಿತ ಮಾಹಿತಿ ದೊರೆಯುತ್ತದೆ.

೩೮

ಊರು ಬೇಗೂರು
ಸ್ಥಳ ಹೊಂಡದ ಬಳಿ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಅರ್ಧಮಂಟಪಗಳನ್ನು ಒಳಗೊಂಡಿದೆ. ಜೀರ್ಣೋದ್ಧಾರಗೊಂಡಿರುವ ದೇವಾಲಯದ ಹೊರಮೈಯನ್ನು ಕಲ್ಲು ಮತ್ತು ಮಣ್ಣಿನಿಂದ ಮುಚ್ಚಿದ್ದಾರೆ. ಗರ್ಭಗೃಹದ ದ್ವಾರವನ್ನು ಜೀರ್ಣೋದ್ಧಾರ ಸಂದರ್ಭದಲ್ಲಿ ಬದಲಿಸಲಾಗಿದೆ. ಅರ್ಧಮಂಟಪದ ಚಾವಣಿಯು ಸಹ ನವೀಕರಣಗೊಂಡಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಗೆ ನಾಗಶಿಲ್ಪಗಳು, ಸಪ್ತಮಾತೃಕೆಯರ ಎರಡು ಶಿಲ್ಪ ಫಲಕಗಳು ಹಾಗು ಭಗ್ನಗೊಂಡಿರುವ ಶಾಸನವನ್ನು ಕಾಣಬಹುದು. ಹೊಂಡದ ದಾರಿಯಲ್ಲಿ ಶಾಸನೋಕ್ತ ವೀರಗಲ್ಲು ಮತ್ತು ವೀರಸತಿಗಲ್ಲುಗಳಿವೆ.

ದೇವಾಲಯದ ಮುಂದಿರುವ ಭಗ್ನಶಾಸನವು ನಾಲ್ಕನೆಯ ಸೋಮೇಶ್ವರನ ಕಾಲದ್ದು. ಅರಸನ ಪ್ರಶಸ್ತಿಯನ್ನು ಮಾತ್ರ ತಿಳಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ).

೩೯

ಊರು ಬೇಗೂರು
ಸ್ಥಳ ಹೊಂಡದ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಮಾಳಿಗೆ ರಚನೆಯ ಗರ್ಭಗೃಹವನ್ನು ಮತ್ತು ಹೆಂಚಿನ ಸಭಾಗೃಹವನ್ನು ಹೊಂದಿದೆ. ಮೊದಲಿಗೆ ಇಲ್ಲಿ ಪ್ರಾಚೀನ ದೇವಾಲಯವಿತ್ತು. ಅದು ಹಾಳಾದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿದ್ದಾರೆ. ಸಭಾಗೃಹಕ್ಕೆ ದಕ್ಷಿಣ ಮತ್ತು ಪೂರ್ವದಲ್ಲಿ ಪ್ರವೇಶದ್ವಾರಗಳಿವೆ.

ಗರ್ಭಗೃಹದಲ್ಲಿ ಹಳೆಯ ದೇವಾಲಯದ ಲಿಂಗವಿದೆ. ಸಭಾಗೃಹದಲ್ಲಿ ನಂತರದ ಕಾಲದ ಒರಟುರಚನೆಯ ನಂದಿಶಿಲ್ಪವಿದೆ.

೪೦

ಊರು ಮಡಿಕೆಹೊನ್ನಳ್ಳಿ
ಸ್ಥಳ ಊರ ಮುಂದೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿವೆ. ಹೊರಭಾಗದಲ್ಲಿ ಹಳೆ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ. ದೇವಾಲಯದಲ್ಲಿರುವ ಲಿಂಗ ಮತ್ತು ನಂದಿ ಶಿಲ್ಪಗಳು ಇತ್ತೀಚಿನವು. ಹಳೆ ದೇವಾಲಯದ ಲಿಂಗ ಮತ್ತು ನಂದಿಶಿಲ್ಪಗಳನ್ನು ಮೈಲಾರದ ಬಳಿ ತುಂಗಭದ್ರಾನದಿಯಲ್ಲಿ ಹಾಕಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ದೇವಾಲಯದ ಎಡಭಾಗದಲ್ಲಿ ವೀರಗಲ್ಲುಗಳು ಮತ್ತಿತರ ಭಗ್ನಾವಶೇಷಗಳಿವೆ. ಬಲಭಾಗದಲ್ಲಿ ಶಾಸನವಿದೆ.

ಶಾಸನವು ಗೋವೆ ಕಂದಂಬರ ಪೆರ್ಮಾಡಿದೇವನ ಕಾಲದ್ದು. ೧೧೫೮ರಲ್ಲಿ ಉಗುರೇಶ್ವರ ದೇವರಿಗೆ ನೀಡಿದ ದಾನವನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ). ಮೇಲಿನ ದೇವಾಲಯದ ಮೂಲ ಹೆಸರು ಉಗುರೇಶ್ವರ ಎಂದಿರಬಹುದು.

೪೧

ಊರು ಮಸಳಿಕಟ್ಟಿ
ಸ್ಥಳ ಊರ ಉತ್ತರ
ಸ್ಮಾರಕ ಬಸವಣ್ಣದೇವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ನಾಡಹೆಂಚಿನ ಚಾವಣಿಯ ಕೆಳಗೆ ಹಳೆಯ ಲಿಂಗ, ಎರಡು ನಂದಿಶಿಲ್ಪಗಳು, ಶಾಸನೋಕ್ತ ಉಪದೇಶ ಮಾಡುತ್ತಿರುವ ದಿಗಂಬರ ಜೈನ ಯತಿ, ಮತ್ತಿತರ ಶಿಲ್ಪಗಳಿವೆ. ಇವೆಲ್ಲವು ಭಗ್ನಗೊಂಡಿವೆ. ಹಾಗು ಹಳೆಯ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ. ಮುಂಭಾಗದಲ್ಲಿ ವೀರಗಲ್ಲುಗಳಿವೆ. ಅವುಗಳಲ್ಲಿ ಕೆಲವು ಶಾಸನೋಕ್ತವಾಗಿದ್ದು ಪ್ರಕಟವಾಗಿಲ್ಲ.

೪೨

ಊರು ಮಾಚಾಪುರ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸುಮಾರು ನೂರು ವರ್ಷದ ಹಿಂದೆ ನಿರ್ಮಾಣಗೊಂಡ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿವೆ. ಗರ್ಭಗೃಹದಲ್ಲಿ ಲಿಂಗವಿದ್ದು, ಸಭಾಗೃಹದಲ್ಲಿ ನಂದಿಶಿಲ್ಪವಿದೆ. ಹಳೆದೇವಾಲಯದ ಲಿಂಗ, ನಂದಿ ಮತ್ತಿತರ ಶಿಲ್ಪಾವಶೇಷಗಳನ್ನು ಮಣ್ಣಿನಲ್ಲಿ ಹುಗಿದಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಇದರಿಂದ ಇಲ್ಲಿ ಹಳೆ ದೇವಾಲಯವಿತ್ತೆಂದು ಸ್ಪಷ್ಟವಾಗುವುದು.

೪೩

ಊರು ಮಿಶ್ರಿಕೋಟೆ
ಸ್ಥಳ ಹೊಂಡದ ಹತ್ತಿರ
ಸ್ಮಾರಕ ರಾಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಅಧಿಷ್ಠಾನದ ಮೇಲಿದ್ದು, ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಪ್ರವೇಶ ಮಂಟಪಗಳನ್ನು ಒಳಗೊಂಡಿದೆ. ಹೊರಭಿತ್ತಿ ಜೀರ್ಣೋದ್ಧಾರಗೊಂಡು ಗಾರೆಯಿಂದ ಮುಚ್ಚಲಾಗಿದೆ. ಗರ್ಭಗೃಹದ ಬಾಗಿಲು ಗಿಡ್ಡಗಿದ್ದು, ಅರ್ಧಕಂಬಗಳ ರಚನೆಯನ್ನು ಕಾಣಬಹುದು. ನವರಂಗದಲ್ಲಿ ತಿರುಗಣೆ ಯಂತ್ರದಿಂದ ಕಡೆದ ನಾಲ್ಕುಕಂಬಗಳಿವೆ. ಇವು ತಳದಲ್ಲಿ ಚೌಕರಚನೆಯನ್ನು ಹೊಂದಿದ್ದು, ಪ್ರತಿ ಮುಖದಲ್ಲೂ ಉಬ್ಬುಶಿಲ್ಪಗಳಿವೆ. ಮೇಲ್ಭಾಗದಲ್ಲಿ ಬಳೆಗಳ ಅಲಂಕರಣದಿಂದ ಕೂಡಿವೆ. ಒಳಭಿತ್ತಿ ನವೀಕರಣಗೊಂಡಿದ್ದು, ಕಮಾನುರಚನೆಯ ಗೂಡುಗಳನ್ನು ನಿರ್ಮಿಸಲಾಗಿದೆ. ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಪೂರ್ವದ ದ್ವಾರಕ್ಕೆ ಹೊಂದಿಕೊಂಡಂತೆ ಪ್ರವೇಶಮಂಟಪವಿದೆ. ಇದರ ದ್ವಾರವು ಕಮಾನಿನ ಅಲಂಕರಣದಿಂದ ಕೂಡಿದೆ. ಈ ಬಾಗಿಲನ್ನು ಮುಚ್ಚಲಾಗಿದ್ದು, ನವರಂಗದ ದಕ್ಷಿಣದ್ವಾರದ ಮೂಲಕವೇ ದೇವಾಲಯವನ್ನು ಪ್ರವೇಶಿಸಬೇಕು.

ಗರ್ಭಗೃಹದಲ್ಲಿ ಲಿಂಗವಿದೆ. ನವರಂಗದ ಕಂಬಗಳ ತಳಭಾಗದಲ್ಲಿ ತ್ರಿವಿಕ್ರಮ, ಭೈರವ, ವರಾಹ, ಶಿಲಾಬಾಲಿಕೆಯರು ಮತ್ತಿತರ ಉಬ್ಬುಶಿಲ್ಪಗಳನ್ನು ಕಾಣಬಹುದು. ಗೂಡುಗಳಲ್ಲಿ ಕಾರ್ತಿಕೇಯ, ಮಹಿಷಮರ್ದಿನಿ, ಸೂರ್ಯ, ದಕ್ಷಿಣಾಮೂರ್ತಿ, ಸರಸ್ವತಿ ಮತ್ತು ನಂದಿಶಿಲ್ಪಗಳಿವೆ. ಹಾಗು ಸಪ್ತಮಾತೃಕೆಯರ ಶಿಲ್ಪಫಲಕವಿದೆ. ಪ್ರವೇಶಮಂಟಪದಲ್ಲಿ ನಂದಿ ಶಿಲ್ಪವನ್ನಿಡಲಾಗಿದೆ. ಇಲ್ಲಿರುವ ಶಿಲ್ಪಗಳು ಸುಂದರವಾಗಿದ್ದು, ಮನಮೋಹಕವಾಗಿವೆ. ಹೊರಬಾಗದಲ್ಲಿ ಭಗ್ನಗೊಂಡಿರುವ ಲಿಂಗ ಮತ್ತು ನಂದಿ ಶಿಲ್ಪಗಳಿವೆ.

ಇಲ್ಲಿರುವ ಕ್ರಿ.ಶ. ೧೧೩೬ ಮತ್ತು ೧೧೫೮ರ ಶಾಸನಗಳು ಕ್ರಮವಾಗಿ ಗೋವೆ ಕದಂಬರ ಎರಡನೆಯ ಜಯಕೇಶಿ ಮತ್ತು ಪೆರ್ಮಾಡಿದೇವನ ಆಳ್ವಿಕೆಗೆ ಸೇರಿವೆ. ಇವು ವ್ಯಕ್ತಿಯೊಬ್ಬನಿಗೆ ನೀಡಿದ ದಾನವನ್ನು ಮತ್ತು ಮಾಚೇಶ್ವರ ದೇವರಿಗೆ ಬಿಟ್ಟ ದಾನವನ್ನು ಉಲ್ಲೇಖಿಸುತ್ತವೆ (ಕಲಬುರ್ಗಿ : ಧಾ ಜಿ ಶಾ ಸೂ). ಬಹುಶಃ ಈ ದೇವಾಲಯದ ಪ್ರಾಚೀನ ಹೆಸರು ಮಾಚೇಶ್ವರ ಎಂದಿರಬಹುದು.

೪೪

ಊರು ಮುಕ್ಕಲ್ಲು
ಸ್ಥಳ ಹೊಂಡದ ಬಳಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹದ ಮೇಲೆ ಸಿಮೆಂಟಿನ ಶಿಖರವುಂಟು. ಸಭಾಗೃಹದ ಚಾವಣಿ ಹೆಂಚಿನದು. ದೇವಾಲಯದ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಿದ್ದು, ಮೇಲೆ ಸಿಮೆಂಟಿನ ಲೇಪನವಿದೆ. ಮುಂಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಬಿದ್ದಿವೆ.

ಗರ್ಭಗೃಹದಲ್ಲಿರುವ ಲಿಂಗ ಸಲಕ್ಷಣವಾಗಿದೆ. ಸಭಾಗೃಹದಲ್ಲಿ ನಾಗಶಿಲ್ಪಗಳಿವೆ. ಹೊರಭಾಗದಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ, ನಂದಿ ಮತ್ತಿತರ ಭಗ್ನಶಿಲ್ಪಾವಶೇಷಗಳು ಕಂಡುಬರುತ್ತವೆ.

ಇಲ್ಲಿರುವ ಕ್ರಿ.ಶ. ೧೦೭೯ರ ಶಾಸನವನ್ನು ಬರ್ಮ ಸೆಟ್ಟಿ ಎಂಬುವನು ಬರ್ಮೇಶ್ವರ ದೇವಾಲಯವನ್ನು ನಿರ್ಮಿಸಿ, ಭೂಮಿಯನ್ನು ದಾನಮಾಡಿದನೆಂದಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಕ್ರಿ.ಶ. ೧೧೦೩ರ ಶಾಸನವು ಬರ್ಮಗಾವುಂಡನು ಮೂಲಸ್ತಾನದೇವರಿಗೆ ಭೂಮಿಯನ್ನು ದಾನಮಾಡಿದನೆಂದು ತಿಳಿಸುವುದು(ಅದೇ). ಮೇಲಿನ ಶಾಸನಾಧಾರಗಳಿಂದ ಪ್ರಸ್ತುತ ದೇವಾಲಯದ ಪ್ರಾಚೀನ ಹೆಸರು ಬರ್ಮೇಶ್ವರ ಎಂದು ತಿಳಿಯಬಹುದಾಗಿದೆ.

೪೫

ಊರು ಮುತ್ತಗಿ
ಸ್ಥಳ ಹೊಂಡದ ಬಳಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹಳೆ ದೇವಾಲಯವು ಅವನತಿ ಹೊಂದಿದ್ದು, ಇತ್ತೀಚೆಗೆ ದಿಂಡುಗಲ್ಲಿನ ದೇವಾಲಯವನ್ನು ನಿರ್ಮಿಸಿದ್ದಾರೆ. ಇದು ಗರ್ಭಗೃಹ ಮತ್ತು ಸಭಾಗೃಹಗಳಲ್ಲಿ ಒಳಗೊಂಡಿದೆ.

ಗರ್ಭಗೃಹದಲ್ಲಿರುವ ಲಿಂಗ ಇತ್ತೀಚಿನದು. ಸಭಾಗೃಹದಲ್ಲಿ ಲಿಂಗ, ನಾಗಶಿಲ್ಪಗಳು ಮತ್ತು ಸಪ್ತಮಾತೃಕೆಯರ ಶಿಲ್ಪಫಲಕಗಳಿವೆ. ಹೊರಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಹಾಗು ಶಾಸನಗಳು ಮತ್ತು ವೀರಗಲ್ಲುಗಳು ಕಂಡು ಬರುತ್ತವೆ. ಮರದ ಕಳಗೆ ಭಗ್ನಗೊಂಡಿರುವ ನಂದಿಶಿಲ್ಪವಿದೆ.

ದೇವಾಲಯದ ಮುಂದಿರುವ ಎರಡುಶಾಸನಗಳು ಗೋವೆ ಕದಂಬರ ಮೂರನೆಯ ಜಯಕೇಶಿ ಕಾಲದವು ಕ್ರಿ.ಶ.೧೧೯೯-೧೨೦೦ ಮತ್ತು ೧೨೦೨ ರ ಈ ಶಾಸನಗಳಲ್ಲಿ ಮುತ್ತಗೆಯ ಸೋಮನಾಥ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದ ಉಲ್ಲೇಖಗಳಿವೆ. (ಕಲಬುರ್ಗಿ : ಧಾ ಜಿ ಶಾ ಸೂ). ಇದರಿಂದ ಮೇಲಿನ ದೇವಾಲಯದ ಪ್ರಾಚೀನ ಹೆಸರು ಸೋಮನಾಥ ಎಂದು ತಿಳಿದುಬರುತ್ತದೆ.