ಕರ್ನಾಟಕದ ಇತಿಹಾಸ, ಪುರಾತತ್ವ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪಾತ್ರ ಹಿರಿದಾದುದು. ಸಂಬಂಧಪಟ್ಟ ಕ್ಷೇತ್ರದ ಮೂಲ ಆಕರಗಳ ಸಂಗ್ರಹ ಮತ್ತು ಪ್ರಕಟಣೆಗೆ ಹೆಚ್ಚು ಒತ್ತು ನೀಡುತ್ತಿರುವುದು ಸ್ವಾಗತಾರ್ಹ. ಈ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಕನ್ನಡ ವಿಶ್ವವಿದ್ಯಾಲಯ ತನ್ನ ಅಸ್ತಿತ್ವವನ್ನು ಸ್ಥಿರೀಕರಿಸಿಕೊಂಡು ಅನಿವಾರ್ಯವಾಗಿಸಿದೆ. ಅದೇ ರೀತಿ ಆರಂಭದಿಂದಲೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಸಹ ಕನ್ನಡ ವಿಶ್ವವಿದ್ಯಾಲಯದ ಆಶಯಕ್ಕೆ ಅನುಗುಣವಾಗಿ ಶೈಕ್ಷಣಿಕ ಯೋಜನೆಗಳನ್ನು ತೆಗೆದುಕೊಂಡು ನಿರ್ವಹಿಸುತ್ತಾ ಬಂದಿರುವುದು ವಿಭಾಗದ ಹೆಗ್ಗಳಿಕೆ ಎನ್ನಬಹುದು. ಮೂಲತಃ ಕರ್ನಾಟಕವು ದೇವಾಲಯಗಳ ನಾಡ. ಅರಸರು, ರಾಣಿಯರು, ಮಂತ್ರಿಗಳು, ದಂಡನಾಯಕರು, ಅಧಿಕಾರಿಗಳು, ವರ್ತಕರು ಹಾಗೂ ಜನಸಾಮಾನ್ಯರು ಅಸಂಖ್ಯಾತ ದೇವಾಲಯಗಳನ್ನು ನಿರ್ಮಿಸಿ ದಾನದತ್ತಿಗಳನ್ನು ನೀಡಿದರು. ಆದರೆ ದೇವಾಲಯಗಳನ್ನು ನಿರ್ಮಿಸಿಕೊಂಡವರ ದೇಶಿ ಅಭಿಮಾನ ಶೂನ್ಯತೆ ಮತ್ತು ಭೋಗಜೀವನದ ಹುಡುಕಾಟದಿಂದಾಗಿ ದೇವಾಲಯಗಳು ಹಾಳುಬಿದ್ದವು. ಬಹುತೇಕ ದೇವಾಲಯಗಳು ಭಗ್ನಗೊಂಡು, ಅನಾಥ ಸ್ಥಿತಿಯಲ್ಲಿವೆ. ಕಾಲಕಾಲಕ್ಕೆ ಘಟಿಸಿದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಾದ ಬದಲಾವಣೆಗಳು ಸಹ ದೇವಾಲಯ ಸಂಸ್ಕೃತಿಯ ಅವನತಿಗೆ ಕಾರಣವಾಗಿವೆ. ಹೀಗೆ ಅಪಾಯದ ಅಂಚಿನಲ್ಲಿರುವ ದೇವಾಲಯಗಳನ್ನು, ಪುರಾತತ್ವೀಯ ಮತ್ತು ಸಾಂಸ್ಕೃತಿಕ ಅಧ್ಯಯನ ದೃಷ್ಟಿಯಿಂದ ದಾಖಲಿಸುವುದು ಅತ್ಯಾವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು, ಕರ್ನಾಟಕ ದೇವಾಲಯ ಕೋಶದ ಜಿಲ್ಲಾವಾರು ಅಧ್ಯಯನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರತಿ ಜಿಲ್ಲೆಯಲ್ಲಿ ಗ್ರಾಮವಾರು ಕ್ಷೇತ್ರಕಾರ್ಯ ನಡೆಸಿ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಜೊತೆಗೆ ಅಲ್ಲಿರುವ ಮೂರ್ತಿಶಿಲ್ಪಗಳು, ಶಾಸನಗಳು, ಮತ್ತಿತರ ಸ್ಮಾರಕ ಅವಶೇಷಗಳನ್ನು ದಾಖಲಿಸಿಕೊಂಡು, ಛಾಯಾಚಿತ್ರಗಳನ್ನು ಪಡೆಯಲಾಗುತ್ತದೆ. ಹೀಗೆ ಗ್ರಾಮೀಣ ಪರಿಸರದಲ್ಲಿರುವ ಪ್ರಾಚ್ಯಾವಶೇಷಗಳನ್ನು ಬೆಳಕಿಗೆ ತರುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು.

ಪ್ರಸ್ತುತ ಕರ್ನಾಟಕ ದೇವಾಲಯ ಕೋಶ ಧಾರವಾಡ ಜಿಲ್ಲೆ ಕೃತಿಯಲ್ಲಿ ಮುನ್ನೂರ ಹದಿನೇಳು ದೇವಾಲಯಗಳನ್ನು ದಾಖಲಿಸಲಾಗಿದೆ ಈ ಎಲ್ಲಾ ದೇವಾಲಯಗಳು ಪ್ರಾಚೀನ ಮತ್ತು ಮಧ್ಯಕಾಲದ ನಿರ್ಮಾಣಗಳಾಗಿವೆ. ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಅಧ್ಯಯನ ಕೈಗೊಳ್ಳುವ ಸಂಶೋಧಕರಿಗೆ ಮತ್ತು ಆಸಕ್ತರಿಗೆ ಮಾಹಿತಿಯನ್ನು ಒದಗಿಸುವ ಆಶಯದಿಂದ ಪ್ರಸ್ತುತ ಕರ್ನಾಟಕ ದೇವಾಲಯ ಕೋಶಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಸಾಮಾನ್ಯ ಜನರಿಗೂ ದೇವಾಲಯಗಳನ್ನು ಪರಿಚಯಿಸುವ ಉದ್ದೇಶ ನಮ್ಮದು. ಈ ಯೋಜನೆಯನ್ನು ಪರಿಚಯಿಸಿ, ಚಾಲನೆ ನೀಡಿದ ಮಾನ್ಯ ವಿಶ್ರಾಂತ ಕುಲಪತಿಗಳಾದ ಡಾ. ಎಂ.ಎಂ.ಕಲಬುರ್ಗಿಯವರನ್ನು ಈ ಸಂದರ್ಭದಲ್ಲಿ ಗೌರವದಿಂದ ನೆನೆಯುತ್ತೇನೆ.

ಪ್ರಸ್ತುತ ಕೃತಿ ಪ್ರಕಟವಾಗಲು ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರ ಪುರಾತತ್ವ ಅಧ್ಯಯನ ಆಸಕ್ತಿಯೇ ಕಾರಣ. ದಕ್ಷರೂ, ಸಮರ್ಥರೂ ಆದ ಮಾನ್ಯ ಕುಲಪತಿಗಳು ವಿಭಾಗದ ಬೆಳವಣಿಗೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅದು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಮಾನ್ಯರಿಗೆ ತುಂಬು ಗೌರವದ ನಮನಗಳು. ಅದೇ ರೀತಿ ಆಡಳಿತಾತ್ಮಕವಾಗಿ ಈ ಯೋಜನೆಯ ಯಶಸ್ಸಿಗೆ ಮಾನ್ಯ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರು ಕಾರಣಕರ್ತರಾಗಿದ್ದಾರೆ. ಅವರಿಗೆ ಗೌರವಪೂರ್ವಕ ವಂದನೆಗಳು. ಅಧ್ಯಯನಾಂಗದ ನಿರ್ದೇಶಕರಾದ ಡಾ. ಬಿ. ಆರ್. ಚಂದ್ರಶೇಖರ್ ಮತ್ತು ಡೀನರಾದ ಡಾ. ದೇವರಕೊಂಡಾರೆಡ್ಡಿ ಅವರುಗಳು ನನ್ನ ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ಪ್ರೋತ್ರಾಹ ನೀಡಿದ್ದಾರೆ. ಹಾಗಾಗಿ ಅವರುಗಳಿಗೂ ನನ್ನ ವಂದನೆಗಳು. ಈ ಎಲ್ಲಾ ಕೆಲಸಗಳಿಗೆ ಕಿರೀಟವಿಟ್ಟಂತೆ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಕೃತಿಯನ್ನು ಪ್ರಕಟಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಅವರಿಗೆ ಪ್ರೀತಿಯಿಂದ ನೆನೆಯುತ್ತೇನೆ. ಮುಖ್ಯವಾಗಿ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಎಸ್. ವಾಸುದೇವನ್, ಡಾ ವಾಸುದೇವ ಬಡಿಗೇರ, ಶ್ರೀ ರಮೇಶ ನಾಯಕ ಮತ್ತು ಡಾ. ಎಸ್. ವೈ. ಸೋಮಶೇಖರ ಅವರುಗಳಿಗೆ ನನ್ನ ಧನ್ಯವಾದಗಳು.

ಈ ಕೃತಿಯನ್ನು ಪ್ರಕಟಿಸುವ ಜವಾಬ್ದಾರಿಯನ್ನು ಹೊತ್ತ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ. ಅದೇ ರೀತಿ ಅಕ್ಷರ ಸಂಯೋಜನೆ ಮಾಡಿರುವ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಅವರಿಗೆ ನನ್ನ ಧನ್ಯವಾದಗಳು. ಬಹುಮುಖ್ಯವಾಗಿ ಈ ಯೋಜನೆಯ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಸಹಕರಿಸಿದ ಧಾರವಾಡ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನತೆಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

ಸಿ. ಮಹದೇವ