೪೬

ಊರು ಮುತ್ತಗಿ
ಸ್ಥಳ ಹೊಂಡದ ಬಳಿ
ಸ್ಮಾರಕ ರಾಮೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಗರ್ಭಗೃಹವನ್ನು ಹೊರತುಪಡಿಸಿ ಉಳಿದ ಭಾಗಗಳು ಬಿದ್ದು ಹೋಗಿವೆ. ಇತ್ತೀಚೆಗೆ ಗರ್ಭಗೃಹವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಮೇಲ್ಭಾಗದಲ್ಲಿ ಮಣ್ಣು ತುಂಬಿದ್ದಾರೆ.

ಗರ್ಭಗೃಹದಲ್ಲಿ ಲಿಂಗವಿದ್ದು, ಪೂಜೆಗೊಳ್ಳುತ್ತಿದೆ. ಹೊರಭಾಗದಲ್ಲಿ ಗಣಪತಿ ಶಿಲ್ಪಗಳು, ನಂದಿ, ಪತ್ನಿ ಸಹಿತನಾದ ದಕ್ಷ, ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

ಇಲ್ಲಿರುವ ಕ್ರಿ.ಶ. ೧೨೨೩ ರ ಶಾಸನವು ಮುತ್ತಗೆಯ ಬೊಂತಗಾವುಂಡಾದಿಗಳು ಸುಳ್ಳೇವರ ದೇವರಿಗೆ ಭೂಮಿಯನ್ನು ದಾನಮಾಡಿದರೆಂದಿದ (ಕಲಬುರ್ಗಿ : ಧಾ ಜಿ ಶಾ ಸೂ). ಇದರಿಂದ ಮೇಲಿನ ದೇವಾಲಯದ ಪ್ರಾಚೀನ ಹೆಸರು ಸುಳ್ಳೇಶ್ವರ ಎಂದಿರಬಹುದು.

೪೭

ಊರು ಲಾಳಗಟ್ಟಿ
ಸ್ಥಳ ದೇವರ ಹುಬ್ಬಳ್ಳಿ ದಾರಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹೆಂಚನ್ನು ಹೊದಿಸಿದ ಕೊಠಡಿಯಲ್ಲಿ, ಒರಟುರಚನೆಯ ಲಿಂಗದ ವಿಷ್ಣಭಾಗ ಮತ್ತು ರುದ್ರಭಾಗಗಳಿವೆ. ಹೊರಗೆ ಹಳೆ ದೇವಾಲಯದ ಕೆಲವು ವಾಸ್ತು ಅವಶೇಷಗಳು ಹಾಗು ಪಾದಪೀಠವೊಂದು ಕಂಡುಬರುತ್ತವೆ.

೪೮

ಊರು ಲಿಂಗನಕೊಪ್ಪ
ಸ್ಥಳ ಗಂಭ್ಯಾಪುರ ದಾರಿ
ಸ್ಮಾರಕ ಸಿದ್ದಲಿಂಗಪ್ಪ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹೊಸದಾಗಿ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಚಾವಣಿಯಲ್ಲಿ ಹೆಂಚನ್ನು ಹೊದಿಸಿದ್ದಾರೆ. ಮುಂಭಾಗದಲ್ಲಿ ಹಳೆ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿ ಚೌಕರಚನೆಯ ಲಿಂಗವಿದೆ. ಉಳಿದಂತೆ ಯಾವುದೇ ಶಿಲ್ಪಾವಶೇಷಗಳು ಕಂಡುಬರುವುದಿಲ್ಲ.

೪೯

ಊರು ಶೀಗಿಕಟ್ಟಿ
ಸ್ಥಳ ಹೊಂಡದ ಬಳಿ
ಸ್ಮಾರಕ ಬಸವಣ್ಣನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರಾಚೆಗೆ ಹೊಲದ ನಡುವೆ ಹೊಂಡದ ಬಳಿ ಇತ್ತೀಚೆಗೆ ನಿರ್ಮಿಸಿರುವ ಸಣ್ಣ ಕೊಠಡಿಯೇ ದೇವಾಲಯ. ಕೊಠಡಿಯಲ್ಲಿ ಹಳೆ ದಾವಾಲಯಕ್ಕೆ ಸೇರಿದ ನಂದಿ ಶಿಲ್ಪವಿದೆ. ಇದನ್ನು ಬಸವಣ್ಣ ಎಂದು ಕರೆಯುತ್ತಾರೆ. ಈ ಕೊಠಡಿಯ ಸತ್ತಲೂ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಭಗ್ನಗೊಂಡಿರುವ ಸರಸ್ವತಿ, ಮರದ ಕೆಳಗಿರುವ ಯೋನಿಪೀಠ, ಶಾಸನ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

ಇಲ್ಲಿರುವ ಶಾಸನ ಪ್ರಕಟವಾದ ಬಗ್ಗೆ ಮಾಹಿತಿ ಇಲ್ಲ. ಆದರೆ ಹಳೆ ಊರಿನ ನಿವೇಶನದಲ್ಲಿರುವ ಹನುಮಂತ ದೇವಾಲಯದ ಹಾಳು ಮಂಟಪದಲ್ಲಿನ ಕ್ರಿ.ಶ. ೧೧೬೨ ರ ಶಾಸನವು ಪ್ರಕಟವಾಗಿದೆ(ಕಲಬುರ್ಗಿ : ಧಾ ಜಿ ಶಾ ಸೂ). ಇದು ಅರಸನು ಸಿದ್ದೇಶ್ವರ ದೇವರಿಗೆ ತೆರಿಗೆಯನ್ನು ದಾನ ಮಾಡಿದನೆಂದಿದೆ. ಇಲ್ಲಿ ಇನ್ಯಾವುದೇ ಶಿವಾಲಯವಿಲ್ಲದಿರುವುದರಿಂದ, ಮೇಲೆ ತಿಳಿಸಿದ ಹಳೆ ದೇವಾಲಯವೇ ಶಾಸನದಲ್ಲಿ ಉಲ್ಲೇಖಗೊಂಡಿರುವ ಸಿದ್ದೇಶ್ವರ ದೇವಾಲಯವಾಗಿರಬಹುದು.

೫೦

ಊರು ಸಂಗಮೇಶ್ವರ
ಸ್ಥಳ ಊರ ಉತ್ತರ ಹೊಲ
ಸ್ಮಾರಕ ಬಸವಣ್ಣದೇವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೦ನೆಯ ಶತಮಾನ
ಶೈಲಿ ರಾಷ್ಟ್ರಕೂಟ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗಿಡ್ಡನೆಯ ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಒಳಗೊಂಡಿದೆ. ಭಗ್ನಗೊಂಡಿರುವ ದೇವಾಲಯದ ಮೇಲೆ ನಾಡಹೆಂಚಿನ ಚಾವಣಿಯನ್ನು ನಿರ್ಮಿಸಿದ್ದಾರೆ. ಗರ್ಭಗೃಹದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿಶಿಲ್ಪವುಂಟು. ಬಾಗಿಲುವಾಡದಲ್ಲಿ ಅರ್ಧಕಂಬಗಳು ಮತ್ತು ದ್ವಾರಪಾಲಕರನ್ನು ಬಿಡಿಸಲಾಗಿದೆ. ಅರ್ಧಮಂಟಪದ ಪ್ರವೇಶದಲ್ಲಿ ಎರಡು ಸಣ್ಣ ಕಂಬಗಳು ನಿಂತಿವೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಎರಡೂ ಕಂಬಗಳ ಮೇಲ್ಭಾಗದ ಒಂದೊಂದು ಮುಖದಲ್ಲೂ ಘಟನಾವಳಿಗಳನ್ನು ನಿರೂಪಿಸುವ ಉಬ್ಬು ಶಿಲ್ಪಗಳಿವೆ. ಉಳಿದಂತೆ ಕಂಬಗಳ ತಳದಲ್ಲಿ ಚೌಕರಚನೆಯನ್ನು ಮಧ್ಯಭಾಗದಲ್ಲಿ ಮಧ್ಯಭಾಗದಲ್ಲಿ ಬಹುಮುಖರಚನೆಯನ್ನು ಹಾಗೂ ಅದನ್ನು ಸುತ್ತುವರೆದ ಅಲಂಕೃತ ಅಡ್ಡಪಟ್ಟಿಯನ್ನು ಕಾಣಬಹುದು. ಕಂಬಗಳ ಮೇಲೆ ದುಂಡನೆಯ ಬೋದಿಗೆ ಪೀಠಗಳಿವೆ. ಅರ್ಧಮಂಟಪದ ಗೋಡೆಗಂಬಗಳ ಮೇಲೆ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ.

ಗರ್ಭಗೃಹದಲ್ಲಿ ಲಿಂಗವಿದೆ. ಗೋಡೆಯಲ್ಲಿರುವ ಗೂಡಿನಲ್ಲಿ ಉಮಾಮಹೇಶ್ವರ ಶಲ್ಪವಿದ್ದಂತಿದೆ? ಅರ್ಧಮಂಟಪದಲ್ಲಿ ಮಹಿಷಮರ್ಧಿನಿ, ನಾಗ ಮತ್ತು ಸರಸ್ವತಿ ಶಿಲ್ಪಗಳಿವೆ. ನವರಂಗದಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ, ನಂದಿ, ದಕ್ಷಿಣಾಮೂರ್ತಿ ಮತ್ತಿತರ ಶಿಲ್ಪಾವಶೇಷಗಳಿವೆ.

ದೇವಾಲಯದ ತೊಲೆಯಲ್ಲಿರುವ ಗೋವೆ ಕದಂಬರ ಮೂರು ಶಾಸನಗಳು ಕ್ರಮವಾಗಿ ಕ್ರಿ.ಶ. ೧೦೬೮, ೧೦೬೮ ಮತ್ತು ೧೦೮೨ರ ವರ್ಷಗಳಿಗೆ ಸೇರಿವೆ. ಇವು ದೇವಾಲಯಕ್ಕೆ ನೀಡಿದ ಭೂದಾನ ಮತ್ತು ಹಣದಾನಗಳನ್ನು ಉಲ್ಲೇಖಿಸಿವೆ (ಕಲಬುರ್ಗಿ : ಧಾ ಜಿ ಶಾ ಸೂ). ಕೆರೆ ಏರಿಯಲ್ಲಿರುವ ಕ್ರಿ.ಶ. ೧೨ನೆಯ ಶತಮಾನದ ಶಾಸನವು, ಹೆಮ್ಮೇಶ್ವರ ದೇವರು ಮತ್ತು ದತ್ತಿಬಿಟ್ಟ ಭೂಮಿಗಳ ಸೀಮೆಯನ್ನು ಪ್ರಸ್ತಾಪಿಸಿದೆ (ಅದೇ).

ಇಲ್ಲಿನ ಶಾಸನಗಳನ್ನು ದಾಖಲಿಸುವಾಗಿ ಈ ದೇವಾಲಯದ ಹೆಸರನ್ನು ಕಲ್ಮೇಶ್ವರ ಎಂದು ನಮೂದಿಸಲಾಗಿದೆ. ಈಗ ಬಸವಣ್ಣದೇವರ ಗುಡಿ ಎಂದು ಜನರು ಕರೆಯುತ್ತಿದ್ದಾರೆ. ದೇವಾಲಯದಲ್ಲಿರುವ ಶಾಸನಗಳು ಸಹ ಅಧಿಕೃತ ಹೆಸರನ್ನು ಹೇಳದೆ, ಶಿವಾಲಯ ಎಂದಷ್ಟೆ ತಿಳಿಸುತ್ತವೆ. ಹೀಗಾಗಿ ಈ ದೇವಾಲಯದ ಪ್ರಾಚೀನ ಹೆಸರು ಏನೆಂಬುದು ತಿಳಿದುಬರುವುದಿಲ್ಲ. ಸಾಮಾನ್ಯವಾಗಿ ಊರಿನ ಪ್ರಮುಖ ದೇವಾಲಯದ ಹೆಸರೇ ಕಾಲಕ್ರಮೇಣ ಊರಿನ ಹೆಸರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಈ ಗ್ರಾಮದ ಹೆಸರು ಸಂಗಮೇಶ್ವರ ಎಂದಿರುವುದರಿಂದ ಬಹುಶಃ ಮೇಲಿನ ದೇವಾಲಯದ ಪ್ರಾಚೀನ ಹೆಸರು ಸಂಗಮೇಶ್ವರ ಎಂದಿರಬಹುದೆ? ಅಥವಾ ಕೆರೆಏರಿ ಶಾಸನ ಉಲ್ಲೇಖಿಸುವ ಹೆಮ್ಮೇಶ್ವರ ಎಂದಿರಬಹುದೆ? ಅಥವಾ ಹೆಮ್ಮೇಶ್ವರ ಕೆರೆದಂಡೆಯಲ್ಲಿದ್ದ ಮತ್ತೊಂದು ದೇವಾಲಯವಾಗಿರಬಹುದೆ? ಈ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ.

೫೧

ಊರು ಸುತಗಟ್ಟಿ
ಸ್ಥಳ ಗಂಜಿಗಟ್ಟಿ ದಾರಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ದಿಂಡುಗಲ್ಲಿನ ಗೋಡೆಯ ಗರ್ಭಗೃಹದ ಮೇಲೆ ಸಿಮೆಂಟಿನ ಶಿಖರವನ್ನು ನಿರ್ಮಿಸಿದ್ದಾರೆ. ಸಭಾಗೃಹವು ಮಾಳಿಗೆ ರಚನೆಯಾಗಿದ್ದು, ಮಣ್ಣಿನ ಗೋಡೆಯಿಂದ ಕೂಡಿದೆ. ಗರ್ಭಗೃಹದಲ್ಲಿ ಹಳೆ ಲಿಂಗ ಮತ್ತು ನಂದಿಶಿಲ್ಪಗಳಿವೆ. ಹೊರಗೆ ಹಳೆ ದೇವಾಲಯದ ವಾಸ್ತು ಅವಶೇಷಗಳು, ನಾಗಶಿಲ್ಪ ಮತ್ತಿತರ ಶಿಲ್ಪಾವಶೇಷಗಳಿವೆ.

೫೨

ಊರು ಸೂಳಿಕಟ್ಟಿ
ಸ್ಥಳ ಸಂಗಮೇಶ್ವರ ರಸ್ತೆ
ಸ್ಮಾರಕ ರಾಮಲಿಂಗ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಬಿದ್ದು ಹೋಗಿದ್ದು, ಗರ್ಭಗೃಹ ಮತ್ತು ಅಂತರಾಳ ಭಾಗಗಳ ಅಡಿಪಾಯ ರಚನೆಗಳು ಕಂಡುಬರುತ್ತವೆ. ಗರ್ಭಗೃಹ ಭಾಗದಲ್ಲಿ ಪಾಣಿಪೀಠದಲ್ಲಿ ಅಳವಡಿಸಿರುವ ಲಿಂಗದ ರುದ್ರಭಾಗವಿದೆ. ಅಂತರಾಳದಲ್ಲಿ ಎರಡು ಪಾಣಿಪೀಠಗಳಿವೆ. ರಸ್ತೆಯಾಚೆ ಹೊಲದಲ್ಲಿ ಭಗ್ನಗೊಂಡಿರುವ ನಂದಿಶಿಲ್ಪವಿದೆ. ಮುಂಭಾಗದಲ್ಲಿ ಶಾಸನವಿದ್ದು, ಪ್ರಕಟವಾಗಬೇಕಾಗಿದೆ.

೫೩

ಊರು ಹಟಗಿನಾಳ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಅವನತಿ ಹೊಂದಿದ್ದು, ಅದರ ಶಿಲ್ಪ ಮತ್ತು ವಾಸ್ತು ಅವಶೇಷಗಳು ಕಂಡುಬರುತ್ತವೆ. ನಿಧಿ ಆಸೆಯಿಂದ ಗರ್ಭಗೃಹವಿದ್ದಲ್ಲಿ ತಗ್ಗುತೋಡಿ ಹಾಳುಮಾಡಲಾಗಿದೆ. ಇಲ್ಲಿ ಭಗ್ನಗೊಂಡಿರುವ ನಂದಿ, ವೀರಸತಿಕಲ್ಲು ಹಾಗು ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ. ವೀರಸತಿಕಲ್ಲಿನ ರಚನೆಗೆ ದೇವಾಲಯದ ವಾಸ್ತು ಅವಶೇಷವನ್ನು ಬಳಸಲಾಗಿದೆ. ಅಂದರೆ ಕಮಲವನ್ನು ಬಿಡಿಸಿರುವ ಚಾವಣಿಭಾಗದ ಶಿಲಾಚಪ್ಪಡಿಯಲ್ಲಿ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ಪಕ್ಕದ ಹೊಲದಲ್ಲಿ ನಾಲ್ಕು ವೀರಗಲ್ಲು ಶಿಲ್ಪಗಳಿವೆ.

೫೪

ಊರು ಹಟಗಿನಾಳ
ಸ್ಥಳ ಊರ ನಡುವೆ
ಸ್ಮಾರಕ ಬಸವಣ್ಣ ದೇವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸೀಮೆಹೆಂಚಿನ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿರುವ ದೇವಾಲಯದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಈ ಶಿಲ್ಪಗಳನ್ನು ಹಳೆಊರಿನಿಂದ ತಂದು ಇಟ್ಟಿರಬೇಕು. ಈ ಗ್ರಾಮದ ನೈರುತ್ಯಕ್ಕೆ ಸುಮಾರು ೨ ಕಿ.ಮೀ. ಅಂತರದಲ್ಲಿರುವ ಭಟ್ಟಿಕೊಪ್ಪ ಎಂಬ ಹಾಳೂರಿನಲ್ಲಿ ಪ್ರಾಚೀನ ಶಿಲ್ಪಾವಶೇಷಗಳು ಮತ್ತು ಶಾಸನವಿದೆ. ಕಡೇಕೊಪ್ಪ ಎಂಬ ಹಾಳೂರಿನಲ್ಲಿ ಕೆಲವು ಶಿಲ್ಪಾವಶೇಷಗಳಿವೆ. ಈ ಹಾಳೂರುಗಳಲ್ಲಿ ಈಗ ಕಾಡು ಬೆಳೆದಿದೆ.

೫೫

ಊರು ಹನುಮಾಪುರ
ಸ್ಥಳ ಹಾಳೂರು ನಿವೇಶನ
ಸ್ಮಾರಕ ಕಲ್ಮೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯ ನಾಶವಾಗಿದೆ. ಎತ್ತರದ ದಿಬ್ಬದ ಮೇಲೆ ಹಳೆ ಲಿಂಗದ ರುದ್ರಭಾಗ, ನಂದಿ, ವೀರಗಲ್ಲುಗಳು ಮತ್ತಿತರ ಭಗ್ನಾವಶೇಷಗಳು ಬಿದ್ದಿರುವುದನ್ನು ಕಾಣಬಹುದು.

ಮತ್ತೊಂದು ಕಲ್ಮೇಶ್ವರ ದೇವಾಲಯ ಊರಿನ ಹೊಂಡದ ದಡದಲ್ಲಿದ್ದು, ಬಿದ್ದು ಹೋಗಿದೆ. ಅದರ ಲಿಂಗವನ್ನು ಆಂಜನೇಯನ ಗುಡಿಯಲ್ಲಿಟ್ಟಿದ್ದಾರೆ. ಲಿಂಗ ಹಳೆಯದು. ಬಹುಶಃ ಈ ಲಿಂಗವನ್ನು ಮೊದಲಿಗೆ ಹಾಳೂರಿನಿಂದ ತಂದು ಪ್ರತಿಷ್ಠಾಪಿಸಿರಬೇಕು.

೫೬

ಊರು ಹಸರಂಬಿ
ಸ್ಥಳ ಊರ ಪಶ್ಚಿಮ ಹೊಲ
ಸ್ಮಾರಕ ಸೋಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಭಗ್ನಗೊಂಡಿದ್ದು, ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಒಳಗೊಂಡಿದೆ. ಅಪಾಯದ ಸ್ಥಿತಿಯಲ್ಲಿರುವ ದೇವಾಲಯವಿದು. ನವರಂಗಕ್ಕೆ ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಮಧ್ಯದ ಕಂಬಗಳು ಚೌಕರಚನೆಯವು. ಗೋಡೆಯಲ್ಲಿ ದೇವಕೋಷ್ಠಗಳಿವೆ. ಚಾವಣಿಭಾಗವು ಈ ಹಿಂದೆ ಜೀರ್ಣೋದ್ಧಾರಗೊಂಡಿದ್ದು, ಕಲ್ಲಿನ ಹಲಗೆಹಾಸಿ ಮೇಲೆ ಮಣ್ಣು ತುಂಬಲಾಗಿದೆ. ಈಗ ಅದು ಸಹ ಭಗ್ನಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿರುವುದನ್ನು ಕಾಣುತ್ತೇವೆ. ಪೂರ್ವದ್ವಾರವು ಬೀಳುವ ಸ್ಥಿತಿಯಲ್ಲಿದೆ. ದೇವಾಲಯದ ಮೇಲೆ ಮಣ್ಣು ತುಂಬಲಾಗಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ನವರಂಗದ ದೇವಕೋಷ್ಠಗಳಲ್ಲಿ ಗಣಪತಿ, ವಿಷ್ಣು, ಮಹಿಷಮರ್ದಿನಿ ಮತ್ತು ಸೂರ್ಯ ಶಿಲ್ಪಗಳಿವೆ. ಉಳಿದಂತೆ ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ನವರಂಗದ ಪೂರ್ವದ್ವಾರದ ಮುಂಭಾಗದಲ್ಲಿ ನಂದಿಶಿಲ್ಪವಿದ್ದು, ನಿಧಿಗಳ್ಳರು ಸೀಳಲು ಪ್ರಯತ್ನಿಸಿದ್ದಾರೆ. ಪಕ್ಕದಲ್ಲಿ ಕಾಲಭೈರವನ ಶಿಲ್ಪವಿದೆ.

ಇಲ್ಲಿರುವ ಕ್ರಿ.ಶ. ೧೧೭೦-೭೧ ರ ಶಾಸನವು, ಸೋಮೇಶ್ವರ ದೇವಾಲಯಕ್ಕೆ ನೀಡಿದ ಭೂದಾನವನ್ನು ಉಲ್ಲೇಖಿಸಿದೆ (ಕಲಬುರ್ಗಿ : ಧಾ ಜಿ ಶಾ ಸೂ).

೫೭

ಊರು ಹಿರೇಹೊನ್ನಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿನ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ಕೊಠಡಿಯಲ್ಲಿ ಹಳೆ ಲಿಂಗವಿದ್ದು, ಸಿಮೆಂಟಿನ ವೇದಿಕೆಯಲ್ಲಿ ಅಳವಡಿಸಿದ್ದಾರೆ. ಹೊರಗೆ ಮುಂಭಾಗದ ಗೋಡೆಯಲ್ಲಿರುವ ಗೂಡಿನಲ್ಲಿ ಕಾರ್ತಿಕೇಯನ ಶಿಲ್ಪವನ್ನಿಟ್ಟಿದ್ದಾರೆ. ಹಾಗು ಪ್ರಾಚೀನ ದೇವಾಲಯದ ಪಾಣಿಪೀಠ ಮತ್ತಿತರ ಶಿಲ್ಪಾವಶೇಷಗಳಿವೆ. ಈ ಊರಿನ ಮೈಲಾರೇಶ್ವರ ದೇವಾಲಯದ ಮುಂದಿರುವ ಮರದ ಕೆಳಗೆ ಹಳೆ ಲಿಂಗ ಹಾಗು ಇನ್ನಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

೫೮

ಊರು ಹುಣಸಿಕಟ್ಟಿ
ಸ್ಥಳ ಊರ ಹೊರಗೆ ಹೊಲ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ಗರ್ಭಗೃಹ, ಅಂತರಾಳ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಗರ್ಭಗೃಹ ದ್ವಾರವು ಸರಳರಚನೆಯದು. ದ್ವಾರದ ಲಲಾಟಬಿಂಬದಲ್ಲಿ ಬ್ರಹ್ಮನ ಉಬ್ಬುಶಿಲ್ಪವಿದೆ. ಧ್ಯಾನಮುದ್ರೆಯಲ್ಲಿ ಕುಳಿತಿರುವ ಶಿಲ್ಪವು ನಾಲ್ಕುಕೈಗಳನ್ನು ಹೊಂದಿದ್ದು, ಮೇಲಿನ ಎರಡುಕೈಗಳಲ್ಲಿ ಕ್ರಮವಾಗಿ ಮಣಿಸರ ಮತ್ತು ಕಳಸವಿದೆ.

ಗರ್ಭಗೃಹದಲ್ಲಿ ಸ್ವಯಂಭು ಲಿಂಗವಿದೆ. ಅಂತರಾಳದಲ್ಲಿ ಭಗ್ನಗೊಂಡಿರುವ ಎರಡು ನಂದಿಶಿಲ್ಪಗಳು ಮತ್ತು ವಿಷ್ಣುಶಿಲ್ಪವನ್ನು ಕಾಣಬಹುದು. ಹೊರಭಾಗದಲ್ಲಿ ಹಳೆ ದೇವಾಲಯ ಕಂಬ ಮತ್ತಿತರ ವಾಸ್ತು ಅವಶೇಷಗಳು ಬಿದ್ದಿವೆ. ಮುಂಭಾಗದಲ್ಲಿರುವ ದಿಂಡುಗಲ್ಲಿನ ವೇದಿಕೆಯಲ್ಲಿ ಸುಮಾರು ೧೫ ಅಡಿ ಎತ್ತರದ ಶಿಲಾಸ್ತಂಭವನ್ನು ಅಳವಡಿಸಲಾಗಿದೆ.

ಇಲ್ಲಿರುವ ಕ್ರಿ.ಶ. ೧೧೪೨ ರ ಶಾಸನವು, ಗೋವೆ ಕದಂಬರ ಪೆರ್ಮಾಡಿದೇವನ ಕಾಲದ್ದು, ಹುಲಿಗೋಡ ಮುದ್ದಗಾವುಂಡನು ಹೋಲೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿದನೆಂದಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಮೇಲಿನ ದೇವಾಲಯದ ಪ್ರಾಚೀನ ಹೆಸರು ಹೋಲೇಶ್ವರ ಎಂದು ತಿಳಿದುಬರುತ್ತದೆ.

೫೯

ಊರು ಹುಲ್ಲುಂಬಿ
ಸ್ಥಳ ಊರ ಪೂರ್ವ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ದಿಂಡುಗಲ್ಲಿನ ಕೊಠಡಿಯನ್ನು ಹೊಂದಿದೆ. ಕೊಠಡಿಯಲ್ಲಿ ಪ್ರಾಚೀನ ದೇವಾಲಯಕ್ಕೆ ಸೇರಿದ ಲಿಂಗವುಂಟು. ಹೊರಭಾಗದಲ್ಲಿ ಹಳೆಯ ಶಿಲ್ಪಾವಶೇಷಗಳಿವೆ. ಇದರಿಂದ ಇಲ್ಲಿ ಪ್ರಾಚೀನ ಶಿವಾಲಯವಿದ್ದು, ಅದು ಹಾಳಾಗಿರುವುದು ತಿಳಿದುಬರುತ್ತದೆ.