ಕುಂದಗೋಳ ತಾಲೂಕು

ಕುಂದಗೋಳ ತಾಲೂಕು

ಊರು ಇಂಗಳಗಿ
ಸ್ಥಳ ಊರ ಪೂರ್ವ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಪ್ರಾಚೀನ ದೇವಾಲಯವಿದ್ದ ಸ್ಥಳದಲ್ಲೇ ಹೊಸದಾಗಿ ನಿರ್ಮಾಣಗೊಂಡಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿದ್ದು, ಮೇಲೆ ಮೆಟ್ಟಿನಾಕಾರದ ಗಾರೆಶಿಖರವಿದೆ.

ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಲಿಂಗವಿದೆ. ಹೊರಭಾಗದಲ್ಲಿ ಹಳೆಯ ದೇವಾಲಯಕ್ಕೆ ಸೇರಿದ ಭಗ್ನಗೊಂಡ ಸಪ್ತಮಾತೃಕೆಯರ ಶಿಲ್ಪಫಲಕ, ನಾಗ ಮುಂತಾದ ಶಿಲ್ಪಾವಶೇಷಗಳಿವೆ.

ಊರು ಇನಾಮಕೊಪ್ಪ
ಸ್ಥಳ ಊರ ನಡುವೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಒಂದೇ ಕೊಠಡಿಯನ್ನು (ಗರ್ಭಗುಡಿ) ಹೊಂದಿದೆ. ದಿಂಡುಗಲ್ಲಿನ ಈ ಪುಟ್ಟ ದೇವಾಲಯ ಸುಮಾರು ೧೯ನೆಯ ಶತಮಾನದ ನಿರ್ಮಾಣ. ಹಿಂದೆ ಬ್ರಾಹ್ಮಣರೊಬ್ಬರಿಗೆ ಈ ಊರು ಇನಾಮು ಬಂದಿತ್ತು. ಹಾಗಾಗಿ ಈ ಊರನ್ನು ಇನಾಮಕೊಪ್ಪ ಎಂದು ಕರೆಯುತ್ತಾರೆ. ಇನಾಮದಾರರೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.

ದೇವಾಲಯದಲ್ಲಿ ಸಣ್ಣಲಿಂಗ ಮತ್ತು ನಂದಿ ಶಿಲ್ಪಗಳಿವೆ. ದ್ವಾರದ ಬಾಗಿಲುವಾಡದಲ್ಲಿ ಸಂಸ್ಕೃತದ ಶಾಸನವಿದ್ದು, ಇದು ದೇವಾಲಯದ ನಿರ್ಮಾಣವನ್ನು ಕುರಿತಿದೆ. ಈ ಶಾಸನ ಪ್ರಕಟಗೊಂಡಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವುದು.

ಊರು ಕಮಡೊಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಹೊಂದಿದ್ದು, ಗಿಡ್ಡ ರಚನೆಯದು. ನವರಂಗದ ನಾಲ್ಕು ಕಂಬಗಳು ತಿರುಗಣೆ ಯಂತ್ರದ ರಚನೆಗಳಾಗಿದ್ದು, ದುಂಡಗಿವೆ. ಬಳೆಗಳ ಅಲಂಕರಣವಿದೆ. ಒಳಭಿತ್ತಿ ಜೀಣೋದ್ಧಾರಗೊಂಡಿದ್ದು, ಸಿಮೆಂಟಿನಿಂದ ಮುಚ್ಚಿದ್ದಾರೆ.

ಗರ್ಭಗೃಹದಲ್ಲಿ ಕಲ್ಮೇಶ್ವರ ಲಿಂಗ, ಅರ್ಧಮಂಟಪದಲ್ಲಿ ನಂದಿ ಹಾಗೂ ನವರಂಗದಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ನಾಗಶಿಲ್ಪಗಳಿವೆ.

ಊರು ಕಮಡೊಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ರಾಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಊರ ನಡುವೆ ಎತ್ತರದ ಸ್ಥಳದಲ್ಲಿರುವ ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳಿಂದ ಕೂಡಿದೆ. ದೇವರಿಗೆ ಅಭಿಮುಖವಾಗಿ ನವರಂಗದ ಪೂರ್ವ ಅಂಕಣದಲ್ಲಿ ಸಣ್ಣ ಗರ್ಭಗೃಹ ಮತ್ತು ಅಂತರಾಳಗಳಿವೆ. ನವರಂಗದ ಸುತ್ತಲೂ ಇತ್ತೀಚೆಗೆ ಗೋಡೆ ನಿರ್ಮಿಸಿ, ಈಶಾನ್ಯ ಮೂಲೆಯಲ್ಲಿ ಪ್ರವೇಶದ್ವಾರವನ್ನಿಟ್ಟು ಜೀರ್ಣೋದ್ಧಾರ ಮಾಡಿದ್ದಾರೆ. ಗರ್ಭಗೃಹದ್ವಾರವು ಸರಳ ರಚನೆಯದು. ಅರ್ಧಮಂಟಪದ ಪ್ರವೇಶದಲ್ಲಿ ದುಂಡಾದ ಎರಡು ಸಣ್ಣ ಕಂಬಗಳ ಮೇಲೆ ಮಕರತೋರಣವಿದ್ದು, ಅದರ ಲಲಾಟಬಿಂಬದಲ್ಲಿ ನಟರಾಜನ ಉಬ್ಬುಶಿಲ್ಪವಿದೆ. ಎಡಬಲಗಳಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳಿವೆ. ನವರಂಗದಲ್ಲಿ ಮಧ್ಯದ ನಾಲ್ಕು ಕಂಬಗಳು ತಿರುಗಣೆಯಂತ್ರದ ರಚನೆಗಳಾಗಿವೆ. ವಿವಿಧ ಬಳೆಗಳ ಅಲಂಕರಣದಿಂದ ಕೂಡಿದ ಕಂಬಗಳು ಕಲೆಕೆಳಗೆ ಮಾಡಿದ ಕಂಭಾಕೃತಿಯ ರಚನೆಯಿಂದಾಗಿ ಸುಂದರವಾಗಿದೆ. ಬೋದಿಗೆ ಮತ್ತು ಪೀಠಗಳು ಕಲ್ಯಾಣ ಚಾಲುಕ್ಯರ ಶೈಲಿಗೆ ಉತ್ತಮ ಉದಾಹರಣೆಗಳು. ಉಳಿದ ಕಂಬಗಳು ನಕ್ಷತ್ರಾಕಾರ ಹಾಗೂ ಹಿನ್ಸರಿತ ಮತ್ತು ಮುನ್ಸರಿತ ರಚನೆಗಳಿಂದ ಕೂಡಿವೆ. ಭುವನೇಶ್ವರಿ ಸರಳರಚನೆಯದು. ಗರ್ಭಗೃಹದ ಹೊರಭಿತ್ತಿಯನ್ನು ಮರಳುಗಲ್ಲಿನಲ್ಲೂ, ದೇವಕೋಷ್ಠಗಳನ್ನು ಬಸಾಲ್ಟ್‌ಶಿಲೆಯಲ್ಲೂ ನಿರ್ಮಿಸಲಾಗಿದೆ. ಅಧಿಷ್ಠಾನದ ಭಾಗಗಳು ಸವೆದು ಹಾಳಾಗಿವೆ. ಗರ್ಭಗೃಹದ ಮೇಲೆ ಶಿಖರದ ಮೊದಲತಲದ ರಚನೆಯನ್ನು ಕಾಣಹುದು. ಇದರ ಮೇಲೆ ಇತ್ತೀಚೆಗೆ ಸಿಮೆಂಟಿನ ಶಿಖರವನ್ನು ನಿರ್ಮಿಸಿದ್ದಾರೆ.

ಮುಖ್ಯ ಗರ್ಭಗೃಹದಲ್ಲಿ ಎತ್ತರವಾದ ರಾಮೇಶ್ವರ ಲಿಂಗವಿದೆ. ಅರ್ಧಮಂಟಪದ ಪ್ರವೇಶದಲ್ಲಿ ನಂದಿಶಿಲ್ಪವನ್ನಿಡಲಾಗಿದೆ. ಎದುರಿನ ಸಣ್ಣ ಗರ್ಭಗೃಹದಲ್ಲಿ ಲಿಂಗವನ್ನು ಕಾಣಬಹುದು. ನವರಂಗದಲ್ಲಿ ಆಧುನಿಕರಚನೆಯ ಗಣೇಶ ಮತ್ತು ರಾಮಲಕ್ಷ್ಮಣರ ಉಬ್ಬು ಶಿಲ್ಪಫಲಕವಿದೆ. ಕಲ್ಲಿನ ಬಾನಿಯೊಂದು ಇದ್ದು, ನೀರು ತುಂಬಲು ಬಳಸಲಾಗುತ್ತಿತ್ತು.

ಊರು ಕಮಡೊಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಬನಶಂಕರಿ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೯ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಭಗ್ನಗೊಂಡಿರುವ ದೇವಾಲಯವಿದು. ಗರ್ಭಗೃಹವನ್ನು ಮಾತ್ರ ಹೊಂದಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿರುವ ಭೈರವಿ ಶಿಲ್ಪವನ್ನು ಬನಶಂಕರಿ ಎಂದು ಕರೆಯುತ್ತಿದ್ದಾರೆ. ಶಿಲ್ಪವು ಐದು ಅಡಿ ಎತ್ತರವಿದ್ದು, ಕೈಗಳಲ್ಲಿ ಶಂಖ, ಚಕ್ರ, ಡಮರು ಮತ್ತು ಬಟ್ಟಲನ್ನು ಹಿಡಿದಿದ್ದಾಳೆ. ಪಾದದ ಬಳಿ ರುಂಡಶಿಲ್ಪಗಳನ್ನು ಬಿಡಿಸಲಾಗಿದೆ.

ಊರು ಕಮಡೊಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಸಿದ್ಧಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಜೀರ್ಣೋದ್ಧಾರಗೊಂಡಿರುವ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಪ್ರವೇಶ ಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವಿದ್ದು, ಲಲಾಟಬಿಂಬ ಸಪಾಟಾಗಿದೆ. ಅಂತರಾಳದಲ್ಲಿ ಮರದ ಬಾಗಿಲನ್ನು ಅಳವಡಿಸಿದ್ದಾರೆ. ದೇವಾಲಯದ ಭಿತ್ತಿ ಮತ್ತು ಪ್ರವೇಶಮಂಟಪವನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ. ಈ ಪ್ರಾಚೀನ ದೇವಾಲಯವು ಇದೇ ಊರಿನ ರಾಮೇಶ್ವರ ಮತ್ತು ಕಲ್ಮೇಶ್ವರ ದೇವಾಲಯಗಳ ಸಮಕಾಲೀನವಾದದ್ದು.

ಗರ್ಭಗೃಹದಲ್ಲಿ ದೊಡ್ಡ ಲಿಂಗವಿದ್ದು, ವಿಷ್ಣುಭಾಗವು ಭಿತ್ತಿರಚನೆಯಂತಿದೆ. ಅಂತರಾಳದಲ್ಲಿ ಸಣ್ಣ ನಂದಿಶಿಲ್ಪವನ್ನು ಕಾಣಬಹುದು.

ಇಲ್ಲಿ ಕಲ್ಯಾಣ ಚಾಲುಕ್ಯರ ಎರಡನೆಯ ಜಯಸಿಂಹನ ಶಾಸನವಿದ್ದು, ಅಸ್ಪಷ್ಟವಿದೆ (ಸೌಇಇ XX : ೨೮).

ಊರು ಕುಂಕೂರು
ಸ್ಥಳ ಊರ ದಕ್ಷಿಣ
ಸ್ಮಾರಕ ಅನಂತಶಯನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಉತ್ತಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸುತ್ತಲೂ ಹೆಂಚಿನ ಪ್ರಾಂಗಣವನ್ನು ಹೊಂದಿದೆ. ಅಂದರೆ ಗರ್ಭಗೃಹ ಪ್ರಾಚೀನ ರಚನೆಯಾಗಿದ್ದು, ಇತ್ತೀಚೆಗೆ ಅದರ ಸುತ್ತಲೂ ಪ್ರಾಕಾರ ಗೋಡೆಯನ್ನು ನಿರ್ಮಿಸಿ ಹೆಂಚಿನ ಚಾವಣಿಯನ್ನು ನಿರ್ಮಿಸಿದ್ದಾರೆ. ಗರ್ಭಗೃಹ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಅಳವಡಿಸಲಾಗಿದೆ. ಹೊರಗೆ ಮುಂಭಾಗದಲ್ಲಿ ಹಳೆ ದೇವಾಲಯದ ಕಟಾಂಜನಗಳನ್ನು ಕಾಣಬಹುದು.

ಗರ್ಭಗೃಹದಲ್ಲಿ ಗರುಡಲಾಂಛನವಿರುವ ಪಾಣಿಪೀಠದ ಮೇಲೆ ಅನಂತಶಯನ ಶಿಲ್ಪವಿದೆ. ಇದರ ಮುಂಭಾಗದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ರಚಿಸಿದ ಇನ್ನೊಂದು ಅನಂತಶಯನ ಶಿಲ್ಪವನ್ನಿಟ್ಟಿದ್ದಾರೆ. ಹೊರಭಾಗದಲ್ಲಿ ಲಕ್ಷ್ಮೀಸಮೇತನಾದ ಹಯವದನ ಶಿಲ್ಪದ ಫಲಕವನ್ನು ಕಾಣಬಹುದು. ಈ ದೇವಾಲಯದ ದಕ್ಷಿಣ ಭಾಗದಲ್ಲಿ ಪ್ರಾಚೀನ ಶಿವಾಲಯದ ಅವಶೇಷಗಳು ಕಂಡುಬರುತ್ತವೆ. ಅವುಗಳಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ, ವೀರಗಲ್ಲು ಮತ್ತಿತರ ಶಿಲ್ಪಾವಶೇಷಗಳು ಪ್ರಮುಖವಾಗಿವೆ.

ಊರು ಕುಂಕೂರು
ಸ್ಥಳ ದೇವತವ್ವನ ಸ್ಥಳ
ಸ್ಮಾರಕ ಈಶ್ವರ ದೇವರು
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯ ನೆಲಸಮಗೊಂಡಿದ್ದು, ಗರ್ಭಗೃಹದ ತಳಪಾಯವನ್ನು ಕಾಣಬಹುದು. ಗರ್ಭಗೃಹವಿದ್ದ ಸ್ಥಳದಲ್ಲಿ ಲಿಂಗ, ಗಣಪತಿ ಮತ್ತು ಉಮಾಮಹೇಶ್ವರ ಶಿಲ್ಪಗಳಿವೆ. ಸಮೀಪದಲ್ಲಿ ಭಗ್ನಗೊಂಡ ಸಪ್ತಮಾತೃಕೆಯರ ಶಿಲ್ಪಫಲಕ, ಭೈರವಿ, ವಿಷ್ಣು ಮುಂತಾದ ಶಿಲ್ಪಾವಶೇಷಗಳು ಕಂಡುಬರುತ್ತವೆ.

ಊರು ಕುಂದಗೋಳ
ಸ್ಥಳ ಗಂಗಾಧರೇಶ್ವರ ಓಣಿ
ಸ್ಮಾರಕ ಗಂಗಾಧರೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಊರಿನ ದಕ್ಷಿಣ ಭಾಗದಲ್ಲಿರುವ ದೇವಾಲಯ ಮೂಲತಃ ಪೂರ್ವಾಭಿಮುಖವಾಗಿದ್ದರೂ, ಪ್ರವೇಶಮಹಾದ್ವಾರವು ಉತ್ತರಾಭಿಮುಖವಾಗಿದೆ. ಗರ್ಭಗೃಹ, ವಿಶಾಲವಾದ ಹಜಾರ ಮತ್ತು ನಂದಿಮಂಟಪ(ಕೋಣೆ)ಗಳನ್ನು ಹೊಂದಿರುವ ದೇವಾಲಯವಿದು. ಹಜಾರವು ಸಂಪೂರ್ಣವಾಗಿ ಇತ್ತೀಚಿನ ನಿರ್ಮಾಣವಾಗಿದ್ದು, ಮರಮುಟ್ಟುಗಳಿಂದ ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ನಂದಿಕೋಣೆಗಳು ಪ್ರಾಚೀನ ರಚನೆಗಳಾಗಿವೆ. ಗರ್ಭಗೃಹದ್ವಾರವು ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವನ್ನು ಮತ್ತು ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ರಚನೆಯನ್ನು ಹೊಂದಿದೆ. ದೇವಾಲಯದ ಹೊರಗಡೆಯನ್ನು ಸಿಮೆಂಟಿನಿಂದ ಮುಚ್ಚಿ ಜೀರ್ಣೋದ್ಧಾರ ಮಾಡಿದ್ದಾರೆ.

ದೇವಾಲಯದಲ್ಲಿ ಲಿಂಗ ಮತ್ತು ನಂದಿ ಶಿಲ್ಪಿಗಳಿವೆ. ಹೊರಭಾಗದಲ್ಲಿ ಭೈರವಿ, ನಾಗ ಮತ್ತಿತರ ಭಗ್ನಶಿಲ್ಪಾವಶೇಷಗಳನ್ನು ಕಾಣಬಹುದು.

ದೇವಾಲಯದ ಗೋಡೆಯಲ್ಲಿ ಅಳವಡಿಸಿರುವ ಎರಡುಶಾಸನಗಳು ಕ್ರಮವಾಗಿ ಕಲ್ಯಾಣ ಚಾಲುಕ್ಯರ ತ್ರಿಭುವನಮಲ್ಲ ಮತ್ತು ಯಾದವ ಸಿಂಘಣನ ಕಾಲಕ್ಕೆ ಸೇರಿವೆ. ಮೊದಲ ಶಾಸನ ಅಸ್ಪಷ್ಟವಾಗಿದ್ದು, ಸ್ವಯಂಭು ದೇವಾಲಯದ ಸೂತ್ರದಾರಿ ಬರ್ಮೋಜ ನೀಡಿದ ದಾನವನ್ನು ಉಲ್ಲೇಖಿಸಿದೆ(ಸೌಇಇ xx : ೯೬). ಶಾಸನದಲ್ಲಿ ಉಲ್ಲೇಖಗೊಂಡಿರುವ ಸ್ವಯಂಭು ದೇವಾಲಯ ಪ್ರಸ್ತುತ ಕುಂದಗೋಳದ ಶಂಭುಲಿಂಗನ ಗುಡಿ ಎಂದು ಈಗಾಗಲೇ ಗುರುತಿಸಲಾಗಿದೆ. ಶಂಭುಲಿಂಗನ ಗುಡಿಯನ್ನು ನಿರ್ಮಿಸಿದವರು ಸೂತ್ರದಾರಿ ಬರ್ಮೊಜ ಎಂದು ತಿಳಿಸುವ ಈ ಶಾಸನ ಮಹತ್ವದ್ದಾಗಿದೆ. ಗಂಗಾಧರೇಶ್ವರ ದೇವಾಲಯವು ಈ ಊರಿನ ಮತ್ತೊಂದು ಪ್ರಾಚೀನ ಶಿವಾಲಯವಾಗಿದ್ದು, ಸೂತ್ರದಾರಿ ಬರ್ಮೋಜ ದಾನ ನೀಡಿದ್ದಾನೆ.

೧೦

ಊರು ಕುಂದಗೋಳ
ಸ್ಥಳ ಬಾಲಕಿಯರ ಪ್ರೌಢಶಾಲೆ
ಸ್ಮಾರಕ ದುರ್ಗಾದೇವಿ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಪ್ರಾಚೀನ ದೇವಾಲಯ ನಶಿಸಿದನಂತರ ಈಗಿನ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ದುರ್ಗಾದೇವಿಯು ಶಿಲ್ಪವಿದೆ. ಮುಂದಿನ ಕಟ್ಟೆಯಲ್ಲಿರುವ ಸೇವುಣರ ಕಾಲದ ಶಾಸನದಲ್ಲಿ ದುರ್ಗಾದೇವಿಗೆ ಭೂದಾನ ನೀಡಿದ ಉಲ್ಲೇಖವಿದೆ. ಅಂದರೆ ಇಲ್ಲಿ ಕ್ರಿ.ಶ. ೧೩ನೆಯ ಶತಮಾನದಲ್ಲೆ ದುರ್ಗಾದೇವಿಯ ದೇವಾಲಯವಿತ್ತೆಂಬುದು ಸುಸ್ಪಷ್ಟ. ಸುತ್ತಮುತ್ತ ಪ್ರಾಚೀನ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ಇಲ್ಲಿಯ ಶಾಲೆಯ ಅಡಿಪಾಯದ ಗೋಡೆಯಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಶಿಖರ ಮತ್ತು ಶಿಲ್ಪಾವಶೇಷಗಳನ್ನು ಅಳವಡಿಸಿದ್ದಾರೆ. ಅದೇ ರೀತಿ ಶಾಲೆಯೊಳಗಿನ ಗೋಡೆಯಲ್ಲಿ ಪದ್ಮಾಸನದಲ್ಲಿರುವ ಮಹಾವೀರನ ಶಿಲ್ಪವನ್ನು ಅಳವಡಿಸಲಾಗಿದೆ. ಇದರ ಎತ್ತರ ಸುಮಾರು ೪ ಅಡಿ.

ಈ ಊರಿನ ನ್ಯಾಯಾಧೀಶರ ವಸತಿಗೃಹದ ಆವರಣಗೋಡೆಯಲ್ಲಿ ಪ್ರಾಚೀನ ಶಿಲ್ಪಾವಶೇಷಗಳನ್ನು ಅಳವಡಿಸಿದ್ದಾರೆ. ಇದರ ಎದುರಿನ ಗಜಾನನ ಯುವಕ ಮಂಡಳ ಕಟ್ಟಡದ ಜಗತಿಯ್ಲಲ್ಲಿ ಜೈನ ತೀರ್ಥಂಕರ ಶಿಲ್ಪವೊಂದನ್ನು ಅಳವಡಿಸಿ ಗೂಡುಕಟ್ಟಿದ್ದಾರೆ. ಕಂಬ ಮತ್ತಿತರ ವಾಸ್ತು ಅವಶೇಷಗಳು ಬೀದಿಯಲ್ಲಿ ಚೆಲ್ಲಾಡಿವೆ.

೧೧

ಊರು ಕುಂದಗೋಳ
ಸ್ಥಳ ಮಾರ್ಕೇಟ್‌ರಸ್ತೆ
ಸ್ಮಾರಕ ಭೂತೇಶ್ವರ ಗುಡಿ
ಅಭಿಮುಖ ಪಶ್ಚಿಮ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಮುಖ್ಯ ರಸ್ತೆಯಲ್ಲಿರುವ ದೇವಾಲಯವು ಗರ್ಭಗೃಹ ಮತ್ತು ವಿಶಾಲವಾದ ಸಭಾಂಗಣಗಳನ್ನು ಒಳಗೊಂಡಿದೆ. ಮರದ ತೊಲೆ, ಜಂತಿ ಮತ್ತು ಕಂಬಗಳನ್ನು ಬಳಸಿ, ಶಿಸ್ತಾಗಿ ನಿರ್ಮಿಸಿರುವ ಈ ಕಟ್ಟಡದ ಚಾವಣಿಯನ್ನು ಸೀಮೆಹೆಂಚಿನಿಂದ ಮುಚ್ಚಿದ್ದಾರೆ. ಕಟ್ಟಡದ ಪಶ್ಚಿಮ ಭಾಗವನ್ನು ಹೊರತುಪಡಿಸಿ, ಉಳಿದಂತೆ ಮೂರುಭಾಗಗಳಲ್ಲಿ ಉಪ್ಪರಿಗೆಯನ್ನು ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದ್ದು, ಹೊರಗೆ ನಂದಿಶಿಲ್ಪವನ್ನಿಡಲಾಗಿದೆ. ಬಹುಶಃ ಈ ಲಿಂಗವನ್ನು ಬೇರೊಂದು ದೇವಾಲಯದಿಂದ ತಂದು ಈಗಿನ ದೇವಾಲಯವನ್ನು ನಿರ್ಮಿಸಿರಬೇಕು.

೧೨

ಊರು ಕುಂದಗೋಳ
ಸ್ಥಳ ಕಿಲ್ಲೆ
ಸ್ಮಾರಕ ಶಂಭುಲಿಂಗನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಊರಿನ ಎತ್ತರದ ಪ್ರದೇಶದಲ್ಲಿರುವ ಕಿಲ್ಲೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಂಭುಲಿಂಗನ ದೇವಾಲಯವಿದೆ. ಗರ್ಭಗೃಹ, ಅಂತರಾಳ ಮತ್ತು ತೆರೆದ ವಿಶಾಲವಾದ ನಕ್ಷತ್ರಾಕಾರದ ಸಭಾಮಂಟಪಗಳಿಂದ ಕೂಡಿದ ದೇವಾಲಯವು ಈ ಭಾಗ ಪ್ರಮುಖ ಸ್ಮಾರಕ. ಗರ್ಭಗೃಹದ ದ್ವಾರಪಟ್ಟಿಗಳಲ್ಲಿ ಸೂಕ್ಷ್ಮ ಕೆತ್ತನೆಯ ಅಲಂಕರಣವನ್ನು ಕಾಣಬಹುದು. ನಡುವೆ ಅರ್ಧಕಂಬಗಳನ್ನು ಬಿಡಿಸಲಾಗಿದೆ. ಅಂತರಾಳದ ಚಾವಣಿಯಲ್ಲಿ ಕೆತ್ತನೆಯ ಅಲಂಕರಣವಿದ್ದು, ನಡುವೆ ಕಬ್ಬಿಣದ ಕೊಂಡಿಯನ್ನು ಅಳವಡಿಸಿದೆ. ಅಂತರಾಳದ್ವಾರದ ಲಲಾಟಬಿಂಬದಲ್ಲಿ ಗಣಪತಿಯ ಉಬ್ಬುಶಿಲ್ಪವಿದ್ದು, ಮೇಲಿನ ಮಕರತೋರಣದಲ್ಲಿ ಲಕ್ಷ್ಮಣ, ರಾಮ ಮತ್ತು ಸೀತೆಯರ ಬಿಡಿ ಶಿಲ್ಪಗಳಿವೆ. ಅಂದರೆ ಜೀರ್ಣೋದ್ದಾರದ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯನ್ನು ಅನುಕರಿಸಿ ಹೊಸ ಸೇರ್ಪಡೆಗಳನ್ನು ಅಳವಡಿಸಿದ್ದಾರೆ. ಅಂತರಾಳದ ಗೋಡೆಗಳಲ್ಲಿ ಸಣ್ಣ ಜಾಲಂಧ್ರಗಳನ್ನು ಅಳವಡಿಸಿ ಗಾಳಿ ಮತ್ತು ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ. ನಕ್ಷತ್ರಾಕಾರದ ತೆರೆದ ಸಭಾಮಂಟಪದಲ್ಲಿರುವ ದುಂಡನೆಯ ಹೊಳಪಿನ ಕಂಬಗಳು ಮನಸೆಳೆಯುತ್ತವೆ. ತಿರುಗಣೆ ಯಂತ್ರದಿಂದ ಕಡೆದ ಈ ಕಂಬಗಳು ಬಳೆಗಳ ಅಲಂಕರಣ ಮತ್ತು ತಲೆಕೆಳಗಾದ ಕುಂಬಾಕಾರದ ರಚನೆಗಳಿಂದ ಚಿತ್ತಾಕರ್ಷಕವಾಗಿವೆ. ಹೊಳಪಿನ ಈ ಕಂಬಗಳು ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದ ಕಂಬಗಳನ್ನು ನೆನಪಿಸುತ್ತವೆ. ಸಭಾಮಂಟಪವು ಸುತ್ತಲೂ ಕಕ್ಷಾಸನ ಹೊಂದಿದ್ದು, ಹೊರಮೈಯಲ್ಲಿ ಮೇಲಿನ ಸಾಲಿನಲ್ಲಿ ಉಬ್ಬುಶಿಲ್ಪಗಳನ್ನು ಹಾಗು ಕೆಳಗಿನ ಸಾಲಿನಲ್ಲಿ ನಾಗರಶೈಲಿಯ ಶಿಖರಗಳನ್ನು ಬಿಡಿಸಿ ಅಲಂಕರಿಸಲಾಗಿದೆ. ಮಧ್ಯದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಸೂಕ್ಷ್ಮ ಶಿಲ್ಪಗಳನ್ನು ಮನಮೋಹಕವಾಗಿ ಕಡೆದಿರುವುದು ಇಲ್ಲಿನ ವಿಶೇಷ. ಅದೇ ರೀತಿ ಉಳಿದ ಚಾವಣಿ ಭಾಗಗಳಲ್ಲಿ ಅರಳಿದ ಕಮಲವನ್ನು ಕಲಾತ್ಮಕವಾಗಿ ಬಿಡಿಸಿರುವುದನ್ನು ಕಾಣಬಹುದು.

ಗರ್ಭಗೃಹದ ಮೇಲೆ ಗಾರೆಶಿಖರವಿದ್ದು, ಅಧಿಷ್ಠಾನ ಸಹಿತ ಹೊರಭಿತ್ತಿ ಜೀರ್ಣೋದ್ಧಾರಗೊಂಡಿದೆ. ಸಪಾಟಾಗಿರುವ ಭಿತ್ತಿಯಲ್ಲಿ ಯಾವುದೇ ರಚನೆಗಳಿಲ್ಲ. ಆದರೆ ಅಂತರಾಳದ ಹೊರಭಿತ್ತಿ ಪ್ರಾಚೀನವಾಗಿದ್ದು ಅರ್ಧಕಂಬ ಮತ್ತು ದೇವಕೋಷ್ಠಗಳ ಅಲಂಕರಣವುಂಟ. ಇದರಿಂದಾಗಿ ಜೀರ್ಣೋದ್ಧಾರಕ್ಕೂ ಮೊದಲಿನ ಗರ್ಭಗೃಹದ ಹೊರಭಿತ್ತಿಯ ಅಲಂಕರಣವನ್ನು ಗ್ರಹಿಸಬಹುದು. ಸಭಾಮಂಟಪದ ಉತ್ತರ ಭಾಗದ ಚಾವಣಿಯ ಸೂರನ್ನು ಪ್ರಾಚೀನ ಶೈಲಿಯಲ್ಲೇ ರಚಿಸಿ ಜೀರ್ಣೋದ್ಧಾರ ಮಾಡಿದ್ದಾರೆ. ಅಲ್ಲದೆ ಸಭಾಮಂಟಪದ ಸುತ್ತಲೂ ಸೂರಿಗೆ ಆಧಾರವಾಗಿ ಮರದ ತೊಲೆಗಳನ್ನು ಅಳವಡಿಸಿ ಕಬ್ಬಿಣದ ಕಂಬಗಳನ್ನು ನಿಲ್ಲಿಸಲಾಗಿದೆ. ಸಭಾಮಂಟಪದ ಮೇಲೆ ಗಾರೆಯ ಕೈಪಿಡಿಗೋಡೆಯನ್ನು ನಿರ್ಮಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಉಪ್ಪರಿಗೆಯಿಂದ ಕೂಡಿದ ಪ್ರವೇಶದ್ವಾರಮಂಟಪವನ್ನು ನಿರ್ಮಿಸಲಾಗಿದೆ. ಇದು ಜಮಖಂಡಿ ಸಂಸ್ಥಾನಿಕರ ನಿರ್ಮಾಣ. ದ್ವಾರದ ಮೇಲಿನ ಗೋಡೆಯಲ್ಲಿ ಅಳವಡಿಸಿರುವ ಮರಾಠಿ ಶಾಸನ ನಿರ್ಮಾಣದ ವರ್ಷವನ್ನು ಸೂಚಿಸುತ್ತದೆ.

ಗರ್ಭಗೃಹದಲ್ಲಿರುವ ಲಿಂಗ ಇತ್ತೀಚಿನದು. ಹೊಳಪುಳ್ಳ ಲಿಂಗ ಕಪ್ಪುಗ್ರಾನೈಟ್‌ ಶಿಲೆಯದು. ನಂದಿಯು ಸಹ ಹೊಸದಾಗಿ ಸಿದ್ಧವಾದ ಶಿಲ್ಪ. ಸಭಾಮಂಟಪದ ಮೂಲೆಯಲ್ಲಿ ಪ್ರಾಚೀನ ಲಿಂಗಗಳ ಮೂರು ರುದ್ರಭಾಗಗಳನ್ನು ನೆಲದಲ್ಲಿ ಅಳವಡಿಸಿದ್ದಾರೆ. ಪಕ್ಕದಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕವಿದೆ.

ಇಲ್ಲಿನ ಸಭಾಮಂಟಪದಲ್ಲಿರುವ ಶಾಸನವೊಂದು ಕಲಚೂರಿ ಸೋವಿದೇವನ ಕಾಲದ್ದಾಗಿದ್ದು, ಮಹಾಪ್ರಧಾನ ಲಕ್ಷ್ಮೀಧರ ದಂಡನಾಯಕಾದಿಗಳಿಂದ ಸ್ವಯಂಭುದೇವರಿಗೆ ದಾನೆಂದಿದೆ (ಸೌಇಇ xx : ೧೬೩). ಶಾಸನದಲ್ಲಿ ಉಲ್ಲೇಖಗೊಂಡಿರುವ ಸ್ವಯಂಭು ದೇವರೆ ಪ್ರಸ್ತುತ ಶಂಭುಲಿಂಗನಾಗಿದ್ದು, ಮೇಲಿನ ದೇವಾಲಯದ ಕಾಲ ಕ್ರಿ.ಶ. ೧೨ನೆಯ ಶತಮಾನ ಎಂದು ಸ್ಪಷ್ಟವಾಗುವುದು. ಅಂತರಾಳದ ದಕ್ಷಿಣಭಿತ್ತಿಯಲ್ಲಿರುವ ಜಾಲಂಧ್ರದ ಒಳಭಾಗದಲ್ಲಿ ಶಾಸನವೊಂದಿದ್ದು, ಅಪ್ರಕಟಿತವಿರಬಹುದು. ಇದೇ ಊರಿನ ಗಂಗಾಧರೇಶ್ವರ ದೇವಾಲಯದ ಶಾಸನವೊಂದು, ಸ್ವಯಂಭು ದೇವಾಲಯದ ಸೂತ್ರಧಾರಿ ಬರ್ಮೋಜನನ್ನು ಆಗು ಅವರು ನೀಡಿದ ದಾನವನ್ನು ಉಲ್ಲೇಖಿಸುತ್ತದೆ. ಇದರಿಂದ ಶಂಭುಲಿಂಗನ ಗುಡಿಯನ್ನು ನಿರ್ಮಿಸಿದವನು ಸೂತ್ರದಾರಿ ಬರ್ಮೋಜ ಎಂಬುದು ಸ್ಪಷ್ಟವಾಗುವುದು, ಅಂದರೆ ಗಂಗಾಧರೇಶ್ವರ ದೇವಾಲಯ ಈ ಊರಿನ ಮತ್ತೊಂದು ಪ್ರಾಚೀನ ಶಿವಾಲಯವಾಗಿತ್ತು. ಈ ದೇವಾಲಯಕ್ಕೆ ಸೂತ್ರಧಾರಿ ಬರ್ಮೋಜ ದಾನ ನೀಡಿದ್ದಾನೆ. ಕುಂದಗೋಳದ ಶಂಭುಲಿಂಗನ ಗುಡಿ ಇಂದಿಗೂ ಈ ಭಾಗದ ಪ್ರಮುಖ ದೇವಾಲಯವಾಗಿದ್ದು, ತನ್ನ ವಾಸ್ತು ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತಿದೆ. ಇಂತಹ ದೇವಾಲಯದ ಸೂತ್ರಧಾರಿಯನ್ನು ಗೌರವಾಭಿಮಾನದಿಂದ ಶಾಸನದಲ್ಲಿ ಸ್ವಯಂಭು ದೇವಾಲಯದ ಸೂತ್ರದಾರಿ ಬರ್ಮೋಜ ಎಂದು ಕರೆಯಲಾಗಿದೆ.

೧೩

ಊರು ಕುಂದಗೋಳ
ಸ್ಥಳ ಮಾರ್ಕೆಟ್‌ಬೀದಿ
ಸ್ಮಾರಕ ಹನುಮಂತದೇವರ ಗುಡಿ
ಅಭಿಮುಖ ದಕ್ಷಿಣ
ಕಾಲ ಕ್ರಿ.ಶ. ೧೫ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಜನನಿಬಿಡ ಪ್ರದೇಶದಲ್ಲಿರುವ ದೇವಾಲಯ ಸ್ಥಳೀಯವಾಗಿ ಮಹತ್ವದ್ದಾಗಿದೆ. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯವು ವಾಸ್ತವವಾಗಿ ೧೫ನೆಯ ಶತಮಾನದ ರಚನೆ. ಆದರೆ ಇತ್ತೀಚೆಗೆ ಸಭಾಮಂಟಪವನ್ನು ಕೆಡವಿ ಹೊಸ ಸಭಾಮಂಟಪವನ್ನು ನಿರ್ಮಿಸಿದ್ದಾರೆ. ಗರ್ಭಗೃಹದ ದ್ವಾರವನ್ನು ಸಹ ಬದಲಾಯಿಸಲಾಗಿದೆ.

ಇಲ್ಲಿನ ಆಂಜನೇಯ ಶಿಲ್ಪವು ಸುಮಾರು ೮ ಅಡಿ ಎತ್ತರವುಳ್ಳದ್ದು. ಇದನ್ನು ಕ್ರಿ.ಶ. ೧೪೪೪ ರಲ್ಲಿ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಮುಂಭಾಗದಲ್ಲಿರುವ ಶಾಸನವೊಂದು, ವಿಜಯನಗರದ ಎರಡನೆಯ ದೇವರಾಯನ ಕಾಲದ್ದು (ಸೌಇಇ xx : ೨೩೪). ಇದರ ಕಾಲ ಕ್ರಿ.ಶ. ೧೪೪೪. ಸೂರ್ಯ ವಂಶದ ವಲ್ಲಭರಾಜ ಎಂಬುವವನು ಕುಂದಗಲ್ಲದಲ್ಲಿ ಹನುಮಂತದೇವರನ್ನು ಪ್ರತಿಷ್ಠಾಪಿಸಿದ ಎಂದು ಉಲ್ಲೇಖಿಸುತ್ತದೆ. ಉಳಿದೆರಡು ಶಾಸನೋಕ್ತ ವೀರಗಲ್ಲು ಮತ್ತು ಮಾಸ್ತಿಕಲ್ಲುಗಳು ಅಸ್ಪಷ್ಟವಾಗಿದೆ.

೧೪

ಊರು ಕುಂದಗೋಳ
ಸ್ಥಳ ಕಿಲ್ಲೆ ಪ್ರದೇಶ
ಸ್ಮಾರಕ ಹರಿಹರೇಶ್ವರ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಕುಂದಗೋಳ ಪಟ್ಟಣದ ಎತ್ತರದ ಪ್ರದೇಶವಾದ ಕಿಲ್ಲೆಯಲ್ಲಿ ಹರಿಹರೇಶ್ವರ ದೇವಾಲಯವಿದೆ. ಮುಂಭಾಗದಲ್ಲಿ ಭಾರಿ ಆಳದ ಹೊಂಡವಿದ್ದು, ಮಲಿನನೀರು ತುಂಬಿ ಕೊಂಡಿರುವುದು. ದೇವಾಲಯವು ಕಾಂಕ್ರೀಟ್‌ಕಟ್ಟಡವಾಗಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ. ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದುದು.

ದೇವಾಲಯದಲ್ಲಿ ಲಿಂಗ, ನಂದಿ, ಭೈರವಿ, ವಿಷ್ಣು, ನಾಗ ಮುಂತಾದ ಶಿಲ್ಪಗಳು ಕಂಡು ಬರುತ್ತವೆ. ಭೈರವಿ ಶಿಲ್ಪವು ಸುಂದರವಾಗಿದ್ದು, ಪಾಶಾಂಕುಶ, ಡಮರು, ಖಡ್ಬ ಮತ್ತು ಬಟ್ಟಲಗಳನ್ನು ಕೈಗಳಲ್ಲಿ ಹಿಡಿದಿದ್ದಾಳೆ. ಆಭರಣಗಳ ಅಲಂಕರಣವಿದೆ. ಶಿಲ್ಪದ ತಳಭಾಗದ ಎಡಬಲಗಳಲ್ಲಿ ಪರಿಚಾರಕಿಯರ ಸೂಕ್ಷ್ಮ ಶಿಲ್ಪಗಳನ್ನು ಬಿಡಿಸಿದೆ. ಇಲ್ಲಿರುವ ಗಣಪತಿ ಶಿಲ್ಪ ಇತ್ತೀಚಿನದು. ಇಲ್ಲಿ ಯಾವುದೇ ಶಾಸನಗಳು ಕಂಡುಬರುವುದಿಲ್ಲ.

೧೫

ಊರು ಕುಬಿಹಾಳ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ
ಅಭಿಮುಖ
ಕಾಲ ಕ್ರಿ.ಶ. ೧೧-೧ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಹಳೆಯ ದೇವಾಲಯದ ಕಂಬ ಮತ್ತಿತರ ವಾಸ್ತು ಅವಶೇಷಗಳನ್ನು ನೆಲದಲ್ಲಿ ಹುಗಿದು ಅದರ ಮೇಲೆ ಹೊಸದಾಗಿ ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಳೆಯ ದೇವಾಲಯವನ್ನು ಕಲ್ಮೇಶ್ವರ ಗುಡಿ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯಕ್ಕೆ ಸಂಬಂಧಿಸಿದ ಲಿಂಗ, ಸರಸ್ವತಿ ಮುಂತಾದ ಶಿಲ್ಪಾವಶೇಷಗಳನ್ನು ಕಾಣಬಹುದು. ಈ ಗ್ರಾಮ ಕುಬೇರನ ಪಟ್ಟಣವಾಗಿತ್ತೆಂದು ಸ್ಥಳೀಯರು ನಂಬಿದ್ದಾರೆ.

ಸುಮಾರು ೧೭ನೆಯ ಶತಮಾನದ ಶಾಸನದಲ್ಲಿ ಈ ಊರನ್ನು ಕುಯಿಬಾಳ ಎಂದು ಕರೆಯಲಾಗಿದೆ (ಸೌಇಇ xx : ೪೧೫). ಕಲ್ಯಾಣ ಚಾಲುಕ್ಯರ ಒಂದನೆಯ ಸೋಮೇಶ್ವರನ ಶಾಸನವು, ಇಲ್ಲಿನ ಜೋಗೇಶ್ವರದೇವರಿಗೆ ಮಹಾಸಾಮಂತ ಇಂದ್ರಕೇಶಿ ಭೂದಾನ ನೀಡಿದನೆಂದು ತಿಳಿಸುವುದು (ಅದೇ : ೩೮). ಬಹುಶಃ ಈಗಿನ ಶಿಲ್ಪಾವಶೇಷಗಳು ಶಾಸನೋಕ್ತ ಜೋಗೇಶ್ವರ ದೇವಾಲಯಕ್ಕೆ ಸಂಬಂಧಿಸಿರಬಹುದು. ಎರಡನೆಯ ಜಗದೇಕಮಲ್ಲನ ಶಾಸನವೊಂದರಲ್ಲಿ ಬಸದಿಗೆ ಭತ್ತ ಮತ್ತು ಸುಂಕಗಳನ್ನು ದಾನನೀಡಿದ ಉಲ್ಲೇಖವಿದೆ(ಅದೇ : ೧೧೯). ಉಳಿದಂತೆ ವೀರಗಲ್ಲು ಶಾಸನಗಳು ಯಾದವ ಸಿಂಘಣನ ಕಾಲಕ್ಕೆ ಸೇರಿವೆ(ಅದೇ : ೧೯೫).