೧೬

ಊರು ಕೊಡ್ಲಿವಾಡ
ಸ್ಥಳ ಊರ ಮುಂಭಾಗ
ಸ್ಮಾರಕ ವೀರಭದ್ರ ದೇವಾಲಯ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಪ್ರಾಚೀನ ದೇವಾಲಯವಿದ್ದ ಸ್ಥಳದಲ್ಲಿ, ಇತ್ತೀಚೆಗೆ ವೀರಭದ್ರದೇವಾಲಯವನ್ನು ನಿರ್ಮಿಸಿದ್ದಾರೆ. ಗರ್ಭಗೃಹದಲ್ಲಿ ಬೇತಾಳಭೈರವನ ಶಿಲ್ಪವಿದೆ. ದೇಹದ ಮೂಳೆಗಳು ಎದ್ದು ಕಾಣುತ್ತವೆ. ಬಲಗೈಯಲ್ಲಿ ಖಡ್ಗ ಹಿಡಿದಿದ್ದು, ಎಡಗೈಯಲ್ಲಿ ವ್ಯಕ್ತಿಯೊಬ್ಬನನ್ನು ಹಿಡಿದು ಕತ್ತರಿಸಲು ಸಿದ್ಧವಾಗಿರುವ ಭಯಾನಕ ಶಿಲ್ಪವಿದು. ಶಿಲ್ಪ ಪ್ರಾಚೀನವಾದುದು. ಇದನ್ನು ಸ್ಥಳೀಯರು ವೀರಭದ್ರನೆಂದು ಕರೆದು ಪೂಜಿಸುತ್ತಿದ್ದಾರೆ.

ಈ ದೇವಾಲಯದ ಒಳಗೋಡೆಯಲ್ಲಿ ಶಾಸನೋಕ್ತ ಉಬ್ಬುಶಿಲ್ಪಫಲಕವನ್ನು ಅಳವಡಿಸಿದ್ದಾರೆ. ಶಾಸನದ ಮೇಲ್ಭಾಗದಲ್ಲಿ ಹಸು, ಕರು, ಸೂರ್ಯ, ಚಂದ್ರ, ಲಿಂಗ ಮತ್ತು ಯತಿಯ ಉಬ್ಬುಶಿಲ್ಪಗಳಿವೆ. ಶಾಸನದ ಕೆಳಭಾಗದಲ್ಲಿ ದಕ್ಷನು ಕುಳಿತಿದ್ದು, ಸುತ್ತಲೂ ಪರಿವಾರದ ಉಬ್ಬುಶಿಲ್ಪಗಳಿವೆ. ಲಿಪಿಯ ದೃಷ್ಠಿಯಿಂದ ಈ ಶಾಸನವನ್ನು ರಾಷ್ಟ್ರಕೂಟರ ಕಾಲಕ್ಕೆ ನಿರ್ದೇಶಿಸಬಹುದು.

ದೇವಾಲಯದ ಹೊರಭಾಗದಲ್ಲಿ ಪ್ರಾಚೀನ ದೇವಾಲಯಕ್ಕೆ ಸೇರಿದ ಗಣೇಶ, ಲಿಂಗ, ನಾಗಿಣಿ, ಮಹಿಷಮರ್ದಿನಿ, ದೇವಿ, ಸಪ್ತಮಾತೃಕೆಯರು ಮುಂತಾದ ಬಿಡಿಶಿಲ್ಪಗಳಿವೆ. ಇವುಗಳೆಲ್ಲ ಭಗ್ನಗೊಂಡಿವೆ. ಇವು ಶೈಲಿಯ ದೃಷ್ಠಿಯಿಂದ ರಾಷ್ಟ್ರಕೂಟರ ಕಾಲಕ್ಕೆ ಸೇರುತ್ತವೆ.

೧೭

ಊರು ಗುಡಗೇರಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮಠ
ಅಭಿಮುಖ ಉತ್ತರ
ಕಾಲ ಕ್ರಿ.ಶ. ೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಕಲ್ಮಠವೆಂದು ಕರೆಯುವ ಈ ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ವಿಶಾಲವಾದ ಸಭಾಂಗಣಗಳನ್ನು ಹೊಂದಿದೆ. ಗರ್ಭಗೃಹ ಮತ್ತು ಅರ್ಧಮಂಟಪಗಳು ಪ್ರಾಚೀನ ರಚನೆಗಳು. ಇವುಗಳಿಗೆ ಹೊಂದಿಕೊಂಡಂತೆ ಸುಮಾರು ೧೯ನೆಯ ಶತಮಾನದಲ್ಲಿ ಕಲ್ಲಿನ ಸಭಾಂಗಣವನ್ನು ನಿರ್ಮಿಸಲಾಯಿತು. ಇದರ ಮುಂಭಾಗದಲ್ಲಿ ಮಾಳಿಗೆ ಚಾವಣಿಯ ವಿಶಾಲವಾದ ಹಜಾರವನ್ನು ನಿರ್ಮಿಸಿದ್ದಾರೆ. ಈ ಹಜಾರದ ನಡುವೆ ಗುರುಗಳೊಬ್ಬರ ಗದ್ದುಗೆ ಎಂದು ಕರೆಯಲಾಗುವ ಸ್ಥಳದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳನ್ನು ನಿಲ್ಲಿಸಲಾಗಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಗೆ ಗಣಪತಿ ಶಿಲ್ಪವನ್ನು ಕಾಣಬಹುದು.

ಇಲ್ಲಿನ ಕಂಬಗಳ ಮೇಲೆ ಶಾಸನಗಳು ಕಂಡುಬರುತ್ತವೆ. ಕ್ರಿ.ಶ. ೧೨೧೭ರ ಯಾದವ ಸಿಂಘಣ ಶಾಸನ, ತೆಲ್ಲಿಗರ ಐವತ್ತು ಒಕ್ಕಲು ಗುಡಿಗೆರೆಯ ಕಾಳೇಶ್ವರ ದೇವರ ನಂದಾದೀಪಕ್ಕಾಗಿ ಎಣ್ಣೆದಾನ ಮಾಡಿದರೆಂದು ತಿಳಿಸುತ್ತದೆ (ಸೌಇಇ xx : ೧೯೩). ಇನ್ನೊಂದು ಶಾಸನ ೧೨ನೆಯ ಶತಮಾನಕ್ಕೆ ಸೇರಿದ್ದು, ಗುಡಿಗೆರೆಯ ಹನ್ನೆರಡುಗಾವುಂಡರು ನಿರ್ಮಿಸಿದ ಕಲಿದೇವ ದೇವಾಲಯಕ್ಕೆ ನೀಡಿದ ಭೂದಾನವನ್ನು ಉಲ್ಲೇಖಿಸಿದೆ (ಅದೇ : ೩೧೪). ಶಾಸನದಲ್ಲಿ ಉಲ್ಲೇಖಗೊಂಡಿರುವ ಕಲಿದೇವ ದೇವಾಲಯವು ಮುಂದೆ ೧೯ನೆಯ ಶತಮಾನದ ವೇಳೆಗೆ ಕಲ್ಮಠವೆಂದು ಗುರುತಿಸಿಕೊಂಡಿತು.

೧೮

ಊರು ಗುಡಗೇರಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಜೀರ್ಣೋದ್ಧಾರಗೊಂಡಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿವೆ. ಗರ್ಭಗೃಹ ಪ್ರಾಚೀನರಚನೆಯಾಗಿದ್ದು, ನವೀಕರಣಗೊಂಡಿದೆ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವಿದ್ದು, ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವನ್ನು ಕಾಣಬಹುದು. ಸಭಾಗೃಹವನ್ನು ಸ್ಥಳೀಯ ಮಾಳಿಗೆ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ಇಲ್ಲಿ ಲಿಂಗ ಮತ್ತು ನೆಲದಲ್ಲಿ ನೆಟಿರುವ ರಂಧ್ರಭಾಗಗಳು ಕಂಡುಬರುತ್ತವೆ. ನಂದಿ ಪ್ರತಿಮೆ ಇತ್ತೀಚಿನದು. ಹೊರಭಾಗದಲ್ಲಿ ಭಗ್ನಗೊಂಡಿರುವ ನಂದಿಶಿಲ್ಪವಿದೆ.

೧೯

ಊರು ಗುಡಗೇರಿ
ಸ್ಥಳ ಊರ ನಡುವೆ
ಸ್ಮಾರಕ ಜೈನ ಬಸದಿ
ಅಭಿಮುಖ ದಕ್ಷಿಣ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಉತ್ತಮ
ಸಂರಕ್ಷಣೆ

ಸ್ಥಳೀಯ ಜೈನರ ಉಸ್ತುವಾರಿಯಲ್ಲಿರುವ ಜೈನಬಸದಿಯು ಸುಸ್ಥಿತಿಯಲ್ಲಿದೆ. ಜೀರ್ಣೋದ್ಧಾರಗೊಂಡಿರುವ ಬಸದಿಯು ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ತೆರೆದಪ್ರವೇಶ ಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಬಾಗಿಲುವಾಡಗಳು ಸರಳವಾಗಿದ್ದು, ಅರ್ಧಕಂಬಳ ರಚನೆಯನ್ನು ಕಾಣಬಹುದು. ಸಭಾಮಂಟಪದ ನಾಲ್ಕು ಕಂಬಗಳು ತಿರುಗಣೆಯಂತ್ರದ ರಚನೆಗಳಾಗಿದ್ದು, ದುಂಡಗಿವೆ. ಕಂಬಗಳು ಬಳೆಗಳ ಅಲಂಕರಣವನ್ನು ಮತ್ತು ನೀಳ ಕುಂಭ ರಚನೆಯನ್ನು ಹೊಂದಿವೆ. ಸಭಾಮಂಟಪದ ಬಾಗಿಲಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಇವು ಗದೆ, ಡಮರು, ತ್ರಿಶೂಲ ಮತ್ತು ಸರ್ಪಗಳನ್ನು ಹೊಂದಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವುಂಟು. ಪ್ರವೇಶಮಂಟಪ ಮಾಳಿಗೆ ಶೈಲಿಯದು. ಇದನ್ನು ಎತ್ತರದ ಮರದ ಕಂಬಗಳು, ತೊಲೆ ಹಾಗೂ ಜಂತಿಗಳನ್ನು ಬಳಸಿ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿರುವ ಮಹಾವೀರನ ಶಿಲ್ಪವು ನಾಲ್ಕುಅಡಿ ಎತ್ತರವಿದ್ದು, ಬಸಾಲ್ಟ್ ಶಿಲೆಯದು. ಇದು ನಯವಾದ ರಚನೆ. ಇದರ ಬಲಭಾಗದಲ್ಲಿ ಇನ್ನೊಂದು ಮಹಾವೀರನ ಶಿಲ್ಪವಿದ್ದರೆ, ಎಡಭಾಗದಲ್ಲಿ ಅಮೃತಶಿಲೆಯ ಪಾರ್ಶ್ವನಾಥನ ಶಿಲ್ಪವಿದೆ. ಇನ್ನೊಂದು ಮಹಾವೀರನ ವಿಗ್ರಹವು ಸುಮಾರು ಐದು ಅಡಿ ಎತ್ತರವಿದ್ದು, ರಾಷ್ಟ್ರಕೂಟ ಶೈಲಿಯನ್ನು ಹೋಲುತ್ತದೆ. ಅಂತರಾಳದಲ್ಲಿ ಬ್ರಹ್ಮದೇವರ ಶಿಲ್ಪವನ್ನು ಕಾಣಬಹುದು.

ಹೊರಭಾಗದಲ್ಲಿ ಶಾಸನಗಳು ಕಂಡುಬರುತ್ತವೆ. ಕ್ರಿ.ಶ. ೧೦೭೨ ರ ಶಾಸನದಲ್ಲಿ, ದಂಡನಾಯಕ ರುದ್ರಭಟ್ಟೋಪಾಧ್ಯಾಯನು ನಂದಿಪಂಡಿತದೇವನಿಗೆ ಗುಡಿಗೆರೆ ಗ್ರಾಮವನ್ನು ಪುನರ್ದತ್ತಿಯಾಗಿ ನೀಡಿದನೆಂದಿದೆ (ಸೌಇಇ xx : ೪೬). ಕ್ರಿ.ಶ. ೧೦೭೮ರ ಶಾಸನದಲ್ಲಿ ಕುಂಕುಮ ಮಹಾದೇವಿ ಪುರಿಗೆರೆಯಲ್ಲಿ ಮಾಡಿಸಿದ ಆನೆಸಜ್ಜೆಯ ಬಸದಿಗೆ ಬಿಟ್ಟ ಗುಡಿಗೆರೆ ಗ್ರಾಮದ ಕೆಲವು ಭೂಮಿಯನ್ನು ಸೇನಬೋವ ಸಿಂಗಯ್ಯನು ಸತ್ರಕ್ಕೆ ಬಿಟ್ಟ ಉಲ್ಲೇಖವಿದೆ. (ಇಅ xviii : ಪು ೩೫-೪೦). ಇಲ್ಲಿನ ಕ್ರಿ.ಶ. ೧೨-೧೩ನೆಯ ಶತಮಾನದ ಶಾಸನವೊಂದರಲ್ಲಿ, ಕೇತಯ್ಯ ಶೆಟ್ಟಿ ಎಂಬುವನು ಮುರೆಯ ಬಸದಿಗೆ ಎಣ್ಣೆದಾನ ಮಾಡಿದ ವಿಷಯವುಂಟು (ಸೌಇಇ xx : ೩೨೬). ಹಾಗಾಗಿ ಪ್ರಸ್ತುತ ಬಸದಿಗೆ ಬಹುಶಃ ಮುರೆಯ ಬಸದಿ ಎಂದು ಹೆಸರಿದ್ದಂತೆ ಕಾಣುತ್ತದೆ.

೨೦

ಊರು ಗುಡಗೇರಿ
ಸ್ಥಳ ಊರ ನಡುವೆ
ಸ್ಮಾರಕ ಪರ್ವತೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ದೇವಾಲಯ ಇತ್ತೀಚಿನದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯವನ್ನು ಕಲ್ಲಿನಿಂದ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಪ್ರಾಚೀನ ದೇವಾಲಯಕ್ಕೆ ಸೇರಿದ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿ ಗೋಸಾಸದ ಕಲ್ಲುಗಳು ಕಂಡುಬರುತ್ತವೆ.

೨೧

ಊರು ಚಿಕ್ಕನರ್ತಿ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇಲ್ಲಿದ್ದ ಪ್ರಾಚೀನ ದೇವಾಲಯ ನಾಶವಾಗಿದೆ. ಹಾಗಾಗಿ ೧೯೮೦ರಲ್ಲಿ ಮಾಳಿಗೆ ಶೈಲಿಯ ಹೊಸ ದೇವಾಲಯವನ್ನು ನಿರ್ಮಿಸಿದ್ದಾರೆ. ಇದು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ.

ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದ್ದು, ಸಭಾಮಂಟಪದಲ್ಲಿ ನಂದಿಶಿಲ್ಪವಿದೆ. ಹೊರಭಾಗದಲ್ಲಿ ಶಾಸನಗಳಿವೆ. ಬಹುಶಃ ಇವು ಅಪ್ರಕಟಿತವಿರಬಹುದು.

೨೨

ಊರು ಚಿಕ್ಕಹರಕುಣಿ
ಸ್ಥಳ ಊರ ಮುಂಭಾಗ
ಸ್ಮಾರಕ ಈಶ್ವರದೇವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೦-೧೧ನೆಯ ಶತಮಾನ
ಶೈಲಿ ರಾಷ್ಟ್ರಕೂಟ
ಸ್ಥಿತಿ
ಸಂರಕ್ಷಣೆ

 

ಪ್ರಾಚೀನ ದೇವಾಲಯವು ಹಾಳಾಗಿದೆ. ನಂತರ ಸ್ಥಳೀಯವಾಗಿ ನಿರ್ಮಿಸಿದ ಕಲ್ಲುಮಣ್ಣಿನ ದೇವಾಲಯವು ಸಹ ಬಿದ್ದು ಹೋಗಿದ್ದು, ಗೋಡೆಯ ಅವಶೇಷವನ್ನು ಕಾಣಬಹುದು.

ಇಲ್ಲಿರುವ ಲಿಂಗ ಮತ್ತು ಮಹಿಷಮರ್ದಿನಿ ಶಿಲ್ಪಗಳು ಶೈಲಿಯ ರಚನೆಯಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರುತ್ತವೆ. ಈ ಶಿಲ್ಪಗಳು ಭಗ್ನಗೊಂಡಿವೆ. ಇದೇ ಶೈಲಿಯ ಮಹಿಷಮರ್ದಿನಿ ಶಿಲ್ಪವನ್ನು ಶಿರೂರಿನ ಕೆರೆಯಂಗಳದಲ್ಲಿ ಕಾಣಬಹುದು.

೨೩

ಊರು ದೇವನೂರು
ಸ್ಥಳ ಬೆಣ್ಣೆಹಳ್ಳ
ಸ್ಮಾರಕ ಬಸವಣ್ಣದೇವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರಿಂದ ಪೂರ್ವಕ್ಕೆ ಬೆಣ್ಣೆಹಳ್ಳದ ದಂಡೆಯಲ್ಲಿರುವ ದೇವಾಲಯವು ಜೀರ್ಣಸ್ಥಿತಿಯಲ್ಲಿದೆ. ಗರ್ಭಗೃಹ ಮತ್ತು ಅಂತರಾಳಗಳಿರುವ ದೇವಾಲಯವು ಒರಟು ರಚನೆಯದು. ನವರಂಗವಿದ್ದ ಸೂಚನೆಯುಂಟು. ಗರ್ಭಗೃಹದ್ವಾರದ ಲಲಾಟಬಿಂಬದಲ್ಲಿ ಲಕ್ಷ್ಮಿಯ ಉಬ್ಬುಶಿಲ್ಪವನ್ನು ಕಾಣಬಹುದು. ಇದರ ಮೇಲಿನ ಫಲಕದಲ್ಲಿ ನಾಗರಶೈಲಿಯ ಮೂರು ಶಿಖರಗಳನ್ನು ಅಲಂಕರಣದ ದೃಷ್ಠಿಯಿಂದ ಬಿಡಿಸಿದೆ. ಅಂತರಾಳದ್ವಾರದ ಲಲಾಟಬಿಂಬದಲ್ಲಿ ಕೀರ್ತಿಮುಖದ ರಚನೆ ಇದ್ದು, ದ್ವಾರದ ಇಕ್ಕೆಲುಗಳಲ್ಲಿ ಜಾಲಂಧ್ರ ಮತ್ತು ದೇವಕೋಷ್ಠಗಳಿವೆ.

ಗರ್ಭಗೃಹದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿ ನಾಗ, ವೀರ, ಭೈರವ, ಭೈರವಿ ಹಾಗೂ ನಾಗನಾಗಿಣಿಯರ ಶಿಲ್ಪಾವಶೇಷಗಳಿವೆ. ಸಮೀಪದ ಅರಳಿಕಟ್ಟೆಯಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕವಿದ್ದು, ಈ ಮೇಲಿನ ದೇವಾಲಯಕ್ಕೆ ಸಂಬಂಧಿಸಿದ್ದಿರಬಹುದು.

ಇಲ್ಲಿ ಯಾವುದೇ ಶಾಸನಗಳು ಕಂಡುಬಂದಿಲ್ಲ. ದೇವಾಲಯದ ಪಕ್ಕದಲ್ಲಿರುವ ಮೈಲಾರಲಿಂಗಪ್ಪ ಮತ್ತು ಆಂಜನೇಯ ದೇವಾಲಯಗಳು ಇತ್ತೀಚಿನವು.

೨೪

ಊರು ಬಾಗವಾಡ
ಸ್ಥಳ ಊರ ಮುಂದೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯ ನೆಲಸಮಗೊಂಡಿದೆ. ಅದರ ವಾಸ್ತು ಅವಶೇಷಗಳು ಅಲ್ಲಲ್ಲಿ ಬಿದ್ದಿವೆ. ಹಳೆಯ ದೇವಾಲಯದ ಲಿಂಗ, ನಂದಿ, ನಾಗ ಮತ್ತಿತರ ಶಿಲ್ಪಾವಶೇಷಗಳನ್ನು ಕಾಣಬಹುದು.

ಇಲ್ಲಿನ ಮುರುಗೇಶ್ವರ ಮಠದ ಮುಂದೆ ಶಾಸನೋಕ್ತ ವೀರಗಲ್ಲಿನ ತುಂಡೊಂದು ಬಿದ್ದಿದೆ. ಬಸವಣ್ಣದೇವರ ಗುಡಿ ಮುಂಭಾಗದಲ್ಲಿ ಮಹಾವೀರನ ಶಿಲ್ಪವಿದೆ. ಹಾಗೂ ಊರ ಮುಂದೆ ಕೋಣನತಲೆ ಶಿಲ್ಪವನ್ನು ಕಾಣಬಹುದು.

೨೫

ಊರು ಬೆಟ್ಟದೂರು
ಸ್ಥಳ ಕೊಪ್ಪದವರ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯದ ಭಾಗವಾಗಿ ಉಳಿದಿರುವ ಗರ್ಭಗೃಹ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಗೋಡೆಯನ್ನು ಇಟ್ಟಿಗೆ ಮತ್ತು ಮಣ್ಣಿನಿಂದ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದೆ. ಮುಂಭಾಗದಲ್ಲಿ ಎರಡು ನಂದಿಶಿಲ್ಪಗಳು, ಹಂಸ ಲಾಂಛನದ ಪಾಣಿಪೀಠ, ಎರಡು ಭೈರವಿಶಿಲ್ಪಗಳು, ಭೈರವ-ಭೈರವಿ, ನಾಗ ಮುಂತಾದ ಶಿಲ್ವಾವಶೇಷಗಳಿವೆ. ಭೈರವ-ಭೈರವಿ ಶಿಲ್ಪಫಲಕದಲ್ಲಿ ಮೂರು ರುಂಡಗಳನ್ನು ಬಿಡಿಸಿದ್ದು, ಅವುಗಳ ಮೇಲೆ ಮೇಲೆ ಕುಳಿತಿರುವಂತೆ ಬಿಡಿಸಿದೆ. ಇಲ್ಲಿರುವ ಎರಡು ವೀರಗಲ್ಲುಗಳು ಸವೆದಿವೆ.

ದೇವಾಲಯದ ಎದುರಿನಲ್ಲಿರುವ ಶಾಸನವೊಂದು, ಗೋವೆ ಕದಂಬರ ಎರಡನೆ ಜಯಕೇಶಿಯ ಕಾಲದ್ದು (ಸೌಇಇxx : ೮೨). ಇದು ಭೂದಾನವನ್ನು ಮತ್ತು ಕದಂಬ ಮಹಾ ಮಂಡಳೇಶ್ವರನನ್ನು ಉಲ್ಲೇಖಿಸುತ್ತದೆ.

೨೬

ಊರು ಬೆಳ್ಳಿಗಟ್ಟಿ
ಸ್ಥಳ ಹಾಳೂರು
ಸ್ಮಾರಕ ರಾಮಲಿಂಗ ದೇವಸ್ಥಾನ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದಿಂದ ವಾಯವ್ಯಕ್ಕೆ ೧ ಕಿ.ಮೀ. ಅಂತರದಲ್ಲಿರುವ ಹಾಳೂರು ನಿವೇಶನದ ಖುಷ್ಕಿ ಸರ್ವೇನಂಬರ್ ೫೦ರ ಹೊಲದಲ್ಲಿ ದೇವಾಲಯವಿದೆ. ಇದು ಗರ್ಭಗೃಹವನ್ನು ಮಾತ್ರ ಹೊಂದಿದ್ದು, ಸುತ್ತಲೂ ಮರಗಿಡಗಳು ಬೆಳೆದಿವೆ. ತೀರಾ ಭಗ್ನಗೊಂಡಿರುವ ಗರ್ಭಗೃಹದಲ್ಲಿ ಲಿಂಗವಿದೆ.

೨೭

ಊರು ಮತ್ತಿಗಟ್ಟಿ
ಸ್ಥಳ ಊರ ಮುಂಭಾಗ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರ ಮುಂದಿನ ಹೊಲದ ನಡುವೆ ಇರುವ ದೇವಾಲಯವು ಶಿಥಿಲಗೊಂಡ ಗರ್ಭಗೃಹವನ್ನು ಮಾತ್ರ ಹೊಂದಿದೆ. ಗರ್ಭಗೃಹದ್ವಾರವು ಸರಳರಚನೆಯದು. ಮುಂಭಾಗದಲ್ಲಿ ಜೀರ್ಣೋದ್ಧಾರವಾಗಿದ್ದು, ಅದು ಸಹ ಹಾಳಾಗಿದೆ.

ಗರ್ಭಗೃಹದಲ್ಲಿ ಲಿಂಗ ಮತ್ತು ನಂದಿಶಿಲ್ಪಗಳಿವೆ. ಹೊರಭಾಗದಲ್ಲಿ ನಾಲ್ಕು ನಾಗಶಿಲ್ಪಗಳುಂಟು. ದೇವಾಲಯದ ಹಿಂಭಾಗದಲ್ಲಿರುವ ಎತ್ತರವಾದ ವೇದಿಕೆಯ ಮೇಲೆ ಪ್ರಾಚೀನ ಲಿಂಗವಿದೆ.

೨೮

ಊರು ಮುಳ್ಳಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇಲ್ಲಿನ ಪ್ರಾಚೀನ ದೇವಾಲಯ ನಶಸಿಹೋಗಿದ್ದು, ಹೊಸದಾಗಿ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ದೇವಾಲಯದಲ್ಲಿರುವ ಲಿಂಗ ಮತ್ತು ನಂದಿ ಶಿಲ್ಪಗಳು ಇತ್ತೀಚಿನವು. ಪ್ರಾಚೀನ ದೇವಾಲಯಕ್ಕೆ ಸೇರಿದ ಲಿಂಗ ಮತ್ತು ನಂದಿ ಶಿಲ್ಪಗಳನ್ನು ಕೆರೆ ಬಳಿ ಇಟ್ಟಿದ್ದಾರೆ.

ದೇವಾಲಯದ ಮುಂಭಾಗದಲ್ಲಿ ಶಾಸನದ ತುಂಡು ಬಿದ್ದಿದೆ. ಬಹುಶಃ ಈ ಶಾಸನ ಅಪ್ರಕಟಿತವಿರಬಹುದು.

೨೯

ಊರು ಯರಗುಪ್ಪಿ
ಸ್ಥಳ ಊರ ನಡುವೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧೂನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಾಣಗೊಂಡ ದೇವಾಲಯವಿದು. ಆದರೆ ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದದು. ಬಹುಶಃ ಇದು ಕಲ್ಯಾಣ ಚಾಲುಕ್ಯರ ಕಾಲದ್ದಿರಬಹುದು. ಇಲ್ಲಿ ಉಳಿದಂತೆ ಯಾವುದೇ ಪ್ರಾಚ್ಯಾವಶೇಷಗಳು ಕಂಡುಬರುವುದಿಲ್ಲ.

೩೦

ಊರು ಯರಗಿಪ್ಪಿ
ಸ್ಥಳ ಊರ ಮುಂಭಾಗ
ಸ್ಮಾರಕ ಕುಸುಮಲಿಂಗೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹ ಮತ್ತು ಅರ್ಧಮಂಟಪಗಳಿವೆ. ಗರ್ಭಗೃಹದ ದ್ವಾರ ಸರಳರಚನೆಯದು. ಮುಂಭಾಗದಲ್ಲಿ ಮಾಳಿಗೆ ಶೈಲಿಯ ಮಂಟಪವನ್ನು ನಿರ್ಮಿಸಿದ್ದಾರೆ. ದೇವಾಲಯದ ಹೊರಭಿತ್ತಿಯನ್ನು ಸಿಮೆಂಟಿನಿಂದ ಮುಚ್ಚಲಾಗಿದೆ. ಗರ್ಭಗೃಹದ ಮೇಲೆ ಸರಳವಾದ ಗೋಪುರವನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ಲಿಂಗ, ಭಗ್ನಗೊಂಡ ನಂದಿ ಹಾಗು ಹೊರಭಾಗದಲ್ಲಿ ಸಪ್ತಮಾತೃಕೆಯರ ಭಗ್ನಶಿಲ್ಪಾವಶೇಷಗಳಿವೆ.