೩೧

ಊರು ಯರಗುಪ್ಪಿ
ಸ್ಥಳ ಊರ ನಡುವೆ
ಸ್ಮಾರಕ ನಾರಾಯಣದೇವರ ಗುಡಿ
ಅಭಿಮುಖ ಉತ್ತರ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ಭಾಗದಲ್ಲಿ ವೈಷ್ಣವ ದೇವಾಲಯಗಳು ತುಂಬಾ ವಿರಳ. ಹಾಗಾಗಿ ಪ್ರಸ್ತುತ ನಾರಾಯಣದೇವರ ಗುಡಿ ಮಹತ್ವದ್ದಾಗಿದೆ. ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಹೊಂದಿರುವ ದೇವಾಲಯ ಸರಳರಚನೆಯದು. ಅರ್ಧಮಂಟಪದ ಪ್ರವೇಶದಲ್ಲಿ ಎರಡು ಕಂಬಗಳ ಮೇಲಿರುವ ಮಕರತೋಡರಣದಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರ ಉಬ್ಬು ಶಿಲ್ಪಗಳಿವೆ. ನವರಂಗದ ಮಧ್ಯದಲ್ಲಿ ತಿರುಗಣೆಯಂತ್ರದಿಂದ ಕಡೆದ ನಾಲ್ಕು ಕಂಬಗಳಿವೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ತೊಲೆಗಳ ಭದ್ರತೆಗಾಗಿ ಹೆಚ್ಚುವರಿ ಕಂಬಗಳನ್ನು ಆಧಾರವಾಗಿ ನಿಲ್ಲಿಸಿದ್ದಾರೆ. ಅವು ನಂತರದ ಕಾಲದವು. ಮರದಿಂದ ಮಾಡಿದ ಬಾಗಿಲಿದ್ದು, ಸೂಕ್ಷ್ಮಕೆತ್ತನೆಗಳಿಂದ ಕೂಡಿದೆ. ಇದರ ಮುಂದಿರುವ ಪ್ರವೇಶಮಂಟಪ ಮಾಳಿಗೆ ಶೈಲಿಯಲ್ಲಿದ್ದು, ಇತ್ತೀಚಿನ ನಿರ್ಮಾಣವಾಗಿದೆ.

ಗರ್ಭಗೃಹದಲ್ಲಿರುವ ನಾರಾಯಣನ ಶಿಲ್ಪ ಸುಮಾರು ೪.೫ ಅಡಿ ಎತ್ತರವಿದ್ದು, ಪಾಣಿಪೀಠದ ಮೇಲಿದೆ. ಪಾಣಿಪೀಠದ ಮುಂಭಾಗದಲ್ಲಿ ಗರುಡಲಾಂಛನವನ್ನು ಕಾಣಬಹುದು. ಅರ್ಧಮಂಟಪದಲ್ಲಿ ಗಣಪತಿ ಮತ್ತು ಸೂರ್ಯ ಶಿಲ್ಪಗಳಿವೆ.

ಪ್ರವೇಶ ಮಂಟಪದಲ್ಲಿ ಶಾಸನವೊಂದಿದ್ದು, ಅದು ಪ್ರಕಟವಾದ ಬಗ್ಗೆ ಮಾಹಿತಿ ಇಲ್ಲ.

೩೨

ಊರು ಯಲಿವಾಳ
ಸ್ಥಳ ಊರ ನೈರುತ್ಯ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸಂಪೂರ್ಣವಾಗಿ ಬಿದ್ದು ಹೋಗಿರುವ ದೇವಾಲಯವಿದು. ಅದರ ಗರ್ಭಗೃಹವನ್ನು ಈಗ್ಗೆ ಕಲವು ದಶಕಗಳ ಹಿಂದೆ ಜೀರ್ಣೋದ್ಧಾರಗೊಳಿಸಿದ್ದಾರೆ. ಗರ್ಭಗೃಹಕ್ಕೆ ದ್ವಾರವಿಲ್ಲ. ನಾಲ್ಕು ಮೂಲೆಗಳಲ್ಲಿ ನಾಲ್ಕು ಕಂಬಗಳನ್ನು ನಿಲ್ಲಿಸಿ, ಮೇಲೆ ಸಿಮೆಂಟಿನ ಶಿಖರವನ್ನು ನಿರ್ಮಿಸಿದ್ದಾರೆ. ಈ ನಾಲ್ಕು ಕಂಬಗಳಲ್ಲಿ ಮೂರು ಕಂಬಗಳು ತಿರುಗಣೆ ಯಂತ್ರದ ರಚನೆಗಳಾಗಿವೆ. ಉಳಿದ ಒಂದು ಕಂಬ ಚೌಕರಚನೆಯದು. ಪ್ರಾಚೀನ ದ್ವಾರದ ಹೊಸ್ತಿಲನ್ನು ಈಗಲೂ ಕಾಣಬಹುದು. ಇದೇ ದೇವಾಲಯಕ್ಕೆ ಸಂಬಂಧಿಸಿದ ಮತ್ತೊಂದು ಹೊಸ್ತಿಲನ್ನು ಇಲ್ಲಿನ ಜಗತಿಯಲ್ಲಿ ಅಳವಡಿಸಿದ್ದಾರೆ.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಗೆ ಶಾಸನೋಕ್ತ ವೀರಗಲ್ಲುಗಳಿವೆ. ಇವಲ್ಲದೆ ಭಗ್ನಗೊಂಡ ಮತ್ತೊಂದು ವೀರಗಲ್ಲು ಸಹ ಕಂಡುಬರುತ್ತವೆ.

ಇಲ್ಲಿರುವ ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನ ಕ್ರಿ.ಶ. ೧೧೦೮ರ ಶಾಸನವೊಂದು, ಕುಂದಗೋಳ ಮಹಾಜನರಲ್ಲೊಬ್ಬನಾದ ಕೇಶಿಯಣ್ಣ ಎಂಬುವವನು ಅಂಗಡಿಗಳನ್ನು ದಾನಮಾಡಿದನೆಂದಿದೆ (ಸೌಇಇxx : ೭೦). ಕ್ರಿ.ಶ. ೧೧೯೧ರ ಶಾಸನವು ಎಮ್ಮೇರ ಮಾದಯ್ಯನ ವಂಶಾವಳಿ ಮತ್ತು ದಾನಗಳನ್ನು ಉಲ್ಲೇಖಿಸುವುದು (ಅದೇ : ೨೯೩). ಇನ್ನು ವೀರಗಲ್ಲು ಶಾಸನಗಳು ಗೋಗ್ರಹಣ ಪ್ರಸಂಗದಲ್ಲಿ ಮಡಿದವರನ್ನು ಉಲ್ಲೇಖಿಸುತ್ತವೆ.

೩೩

ಊರು ರಟ್ಟಿಗೇರಿ
ಸ್ಥಳ ಕೆರೆ ಹತ್ತಿರ
ಸ್ಮಾರಕ ಸಿದ್ದೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹವು ಜೀರ್ಣೋದ್ಧಾರಗೊಂಡಿದ್ದು, ಅದರ ಭಿತ್ತಿಯನ್ನು ಕಲ್ಲು ಮತ್ತು ಮಣ್ಣಿಗಳಿಂದ ನಿರ್ಮಿಸಿದ್ದಾರೆ. ಮೇಲೆ ಸಿಮೆಂಟಿನ ಮೆಟ್ಟಿಲಾಕಾರದ ಶಿಖರವಿದೆ.

ಗಭ್ಭಗೃಹದಲ್ಲಿ ಲಿಂಗವಿದ್ದು, ಹೊರಭಾಗದಲ್ಲಿ ನಂದಿಯ ಎರಡು ಶಿಲ್ಪಗಳಿವೆ. ಈ ದೇವಾಲಯದ ಹತ್ತಿರ ಹಳೆ ಊರಿನ ಅವಶೇಷಗಳು ಕಂಡುಬರುತ್ತವೆ.

೩೪

ಊರು ರೊಟ್ಟಿಗವಾಡ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಭಗ್ನಗೊಂಡ ಗರ್ಭಗೃಹವು ಪ್ರಾಚೀನ ದೇವಾಲಯದ ಭಾಗವಾಗಿ ಉಳಿದುಬಂದಿದೆ. ಒಳಭಾಗದಲ್ಲಿ ಲಿಂಗ, ನಂದಿ, ಭಗ್ನಗೊಂಡ ಗಣಪತಿ ಮತ್ತಿತರ ಶಿಲ್ಪಾವಶೇಷಗಳಿವೆ. ಇದೇ ಊರಿನಲ್ಲಿ ಇನ್ನೊಂದು ಪ್ರಾಚೀನ ದೇವಾಲಯವಿದ್ದು, ಅದನ್ನು ಕೆಡವಿ ಈಗ ಶರಣಬಸವೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ.

೩೫

ಊರು ಸಂಶಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯದ ಪ್ರಾಚೀನ ರಚನೆಗಳು ಹಾಳಾಗಿವೆ. ಅದೇ ಸ್ಥಳದಲ್ಲಿ, ಸ್ಥಳೀಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ದೇವಾಲಯ ೧೯ನೆಯ ಶತಮಾನದ್ದು. ಮರದ ಕಂಬ ಮತ್ತು ತೊಲೆಗಳನ್ನು ಬಳಸಿ ನಿರ್ಮಿಸಿರುವ ದೇವಾಲಯ ಗರ್ಭಗೃಹ ಮತ್ತು ನವರಂಗಗಳನ್ನು ಒಳಗೊಂಡಿದೆ. ಕಲ್ಯಾಣ ಚಾಲುಕ್ಯರ ಶೈಲಿಯನ್ನೇ ಅನುಕರಿಸಿ ಗರ್ಭಗೃಹದ್ವಾರ ಮತ್ತು ಇಕ್ಕೆಲಗಳಲ್ಲಿ ಜಾಲಂಧ್ರಗಳ ರಚನೆ ಇಲ್ಲಿನ ವಿಶೇಷ. ನವರಂಗದ ನಡುವೆ ಇರುವ ನಾಲ್ಕು ಕಂಬಗಳು ದಪ್ಪನಾಗಿದ್ದು, ಅಲಂಕೃತ ಬೋದಿಗೆಗಳನ್ನು ಹೊಂದಿವೆ. ಈ ಮರದ ಕಂಬಗಳು ನಾಲ್ಕು ಮತ್ತು ಎಂಟು ಮುಖಗಳ ಅಲಂಕರಣದಿಂದ ಕೂಡಿವೆ.

ಗರ್ಭಗೃಹದಲ್ಲಿ ಲಿಂಗ ಮತ್ತು ನವರಂಗದಲ್ಲಿ ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿ ನಾಗಶಿಲ್ಪಗಳನ್ನು ಕಾಣಬಹುದು.

ಸಮೀಪದಲ್ಲಿರುವ ಶಾಸನ ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನ ಕಾಲದ್ದು. ಶಾಸನ ಸವೆದಿದ್ದು, ಅಸ್ಪಷ್ಟವಾಗಿದೆ (ಸೌಇಇxx : ೯೭),

೩೬

ಊರು ಸಂಶಿ
ಸ್ಥಳ ಕೋರಿಯವರ ಓಣಿ
ಸ್ಮಾರಕ ಶಂಕರಲಿಂಗ ದೇವಾಲಯ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಊರ ನಡುವೆ ಎತ್ತರದ ಪ್ರದೇಶದಲ್ಲಿರುವ ದೇವಾಲಯವು ಗರ್ಭಗೃಹ, ಅಂತರಾಳ ಹಾಗು ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹದ ದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವುಂಟು. ಅಂತರಾಳದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಇದರ ಮೇಲಿನ ಮಕರತೋರಣದಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಸೂಕ್ಷ್ಮ ಉಬ್ಬುಶಿಲ್ಪಗಳಿವೆ. ದ್ವಾರದ ಇಕ್ಕೆಲಗಳಲ್ಲಿ ಅಲಂಕೃತ ಜಾಲಂಧ್ರಗಳ ರಚನೆಯನ್ನು ಕಾಣಬಹುದು. ನವರಂಗದಲ್ಲಿರುವ ದೇವಕೋಷ್ಠಗಳಲ್ಲಿ ಬಿಡಿಶಿಲ್ಪಗಳಿವೆ. ದೇವಕೋಷ್ಠಗಳ ಮೇಲೆ ಶಿಖರಗಳ ಅಲಂಕರಣವಿದೆ. ನಡುವಿನ ನಾಲ್ಕು ಕಂಬಗಳು ಬಳೆಗಳ ಅಲಂಕರಣದಿಂದ ಕೂಡಿದ್ದು, ತಿರುಗಣೆ ಯಂತ್ರದ ರಚನೆಗಳಾಗಿವೆ. ಬೋದಿಗೆ ಪೀಠಗಳು ಚಚ್ಚೌಕವಾಗಿದ್ದು, ತಳಭಾಗ ವೃತ್ತರಚನೆಯದು. ನವರಂಗದ ಭುವನೇಶ್ವರಿಯಲ್ಲಿ ಅರಳಿದ ಕಮಲವನ್ನು ಬಿಡಿದೆ. ಇದೇ ರೀತಿಯ ಕಮಲಗಳ ಅಲಂಕರಣವನ್ನು ತೊಲೆಗಳ ಮೇಲೂ ಕಾಣಬಹುದು. ತೊಲೆಗಳ ಮೇಲ್ಭಾಗದ ಅಂಚುಗಳು ಒಳಹೊರ ರಚನೆಗಳಿಂದ ಕೂಡಿವೆ. ಹೊರಭಿತ್ತಿಯಲ್ಲಿ ಅರ್ಧಕಂಬ ಮತ್ತು ದೇವಕೋಷ್ಠಗಳ ರಚನೆಗಳನ್ನು ಕಾಣಬಹುದು. ಉಳಿದ ಭಿತ್ತಿಭಾಗವನ್ನು ಮುಚ್ಚಿದ್ದಾರೆ. ಅಧಿಷ್ಠಾನ ಹೊರಕಾಣಿಸುತ್ತದೆ. ಗರ್ಭಗೃಹದ ಮೇಲಿದ್ದ ಶಿಖರ ಬಿದ್ದು ಹೋಗಿದ್ದು, ಚಾವಣಿಯನ್ನು ಎತ್ತರಿಸಿ ಪೂರ್ವ ಮತ್ತು ಪಶ್ಚಿಮದಿಕ್ಕಿಗೆ ಕಿಂಡಿಗಳನ್ನು ನಿರ್ಮಿಸಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ.

ದೇವಾಲಯದಲ್ಲಿ ಲಿಂಗ, ನಂದಿ, ಸಪ್ತಮಾತೃಕೆಯರು ಹಾಗು ಭೈರವಿ (೨) ಶಿಲ್ಪಗಳಿವೆ. ಈ ದೇವಾಲಯದಲ್ಲಿ ಕ್ರಿ.ಶ. ೧೧ನೆಯ ಶತಮಾನದ ಅಸ್ಪಷ್ಟ ಶಾಸನವಿದ್ದು, ಕೆಲವು ದಾನಗಳನ್ನು ಉಲ್ಲೇಖಿಸುತ್ತದೆ (ಸೌಇಇ xx : ೨೮೯).

೩೭

ಊರು ಸಂಶಿ
ಸ್ಥಳ ಊರ ವಾಯುವ್ಯ ಭಾಗ
ಸ್ಮಾರಕ ಸಿದ್ದೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಊರಿಗೆ ಹೊಂದಿಕೊಂಡಂತೆ ಹೊಲದ ನಡುವೆ ಇರುವ ದೇವಾಲಯವಿದು. ಹೊರಭಾಗ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹ, ಅಂತರಾಳ, ನವರಂಗ ಮತ್ತು ಸಭಾ ಮಂಟಪಗಳಿವೆ. ಅಂತರಾಳದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳ ರಚನೆ ಇದ್ದು, ಮೇಲಿನ ಮಕರತೋರಣದಲ್ಲಿ ತ್ರಿಮೂರ್ತಿಗಳ ಉಬ್ಬುಶಿಲ್ಪಗಳನ್ನು ಬಿಡಿಸಿದೆ. ನವರಂಗದ ಕಂಬಗಳು ಗಿಡ್ಡಗಿದ್ದು, ತಿರುಗಣೆ ಯಂತ್ರದ ರಚನೆಗಳಾಗಿವೆ. ದೇವಕೋಷ್ಠಗಳಲ್ಲಿ ಯಾವುದೇ ಶಿಲ್ಪಗಳಿಲ್ಲ. ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಪೂರ್ವದ ಬಾಗಿಲ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬು ಶುಲ್ಪವಿದ್ದು, ಮೇಲಿನ ಫಲಕದಲ್ಲಿ ವೇಸರ, ನಾಗರ ಮತ್ತು ದ್ರಾವಿಡ ಶಿಕರಗಳ ಸೂಕ್ಷ್ಮ ಮಾದರಿಗಳನ್ನು ಬಿಡಿಸಲಾಗಿದೆ. ಬಾಗಿಲುವಾಡದಲ್ಲಿ ದುಂಡನೆಯ ನೀಳಕಂಬಗಳ ರಚನೆ ಇದೆ. ಸಭಾಮಂಟಪದಲ್ಲಿ ದುಂಡಾದ ಹಾಗು ನಕ್ಷತ್ರಾಕಾರರ ಕಂಬಗಳಿವೆ. ಮೊದಲಿಗೆ ಸಭಾಮಂಟಪವು ತೆರೆದ ಸ್ಥಿತಿಯಲ್ಲಿದ್ದು, ದಕ್ಷಿಣ, ಉತ್ತರ ಮತ್ತು ಪೂರ್ವದಿಂದ ಪ್ರವೇಶವಿತ್ತು. ಈಗ ದಕ್ಷಿಣದ ಪ್ರವೇಶ ಸೇರಿದಂತೆ ಸಿಮೆಂಟ್ ಗೋಡೆಯಿಂದ ಮುಚ್ಚಿದ್ದಾರೆ. ನೆಲವನ್ನು ನವೀಕರಿಸಲಾಗಿದೆ. ಇಲ್ಲಿ ಸ್ವಾಮಿಗಳೊಬ್ಬರು ವಾಸವಿದ್ದು, ಇದರ ಸುಸ್ಥಿತಿಗೆ ಕಾರಣರಾಗಿದ್ದಾರೆ.

ದೇವಾಲಯದಲ್ಲಿ ಲಿಂಗ ಮತ್ತು ನಂದಿಶಿಲ್ಪಗಳಿವೆ. ಹೊರಭಾಗದಲ್ಲಿರುವ ಶಾಸನ ಕಲ್ಯಾಣ ಚಾಲುಕ್ಯರ ಎರಡನೆಯ ಸೋಮೇಶ್ವರನ ಕಾಲದ್ದಾಗಿದ್ದು, ಅಸ್ಪಷ್ಟವಾಗಿದೆ. (ಸೌಇಇ xx : ೪೮).

೩೮

ಊರು ಶಿರೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಊರ ನಡುವಿನ ಎತ್ತರದ ಸ್ಥಳದಲ್ಲಿರುವ ದೇವಾಲಯವು ಮಾಳಿಗೆರಚನೆಯದು. ಗರ್ಭಗೃಹ, ಸಭಾಮಂಟಪ ಮತ್ತು ತೆರದಮಂಟಪಗಳಿಂದ ಕೂಡಿದ ದೇವಾಲಯದ ಚಾವಣಿಯಲ್ಲಿ ಮರದ ಜಂತಿ ಮತ್ತು ತೊಲೆಗಳ ಮೇಲೆ ಕಲ್ಲನ್ನು ಹಾಸಿ ಮಣ್ಣು ತುಂಬಲಾಗಿದೆ. ಗರ್ಭಗೃಹದ ಮೇಲೆ ಗಾರೆಶಿಖರವನ್ನು ನಿರ್ಮಿಸಿದ್ದಾರೆ. ಈ ದೇವಾಲಯಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲಿ ವೀರಭದ್ರನ ಗುಡಿ ಇದ್ದು, ವಿಶಾಲವಾದ ಹಜಾರವನ್ನು ಹೊಂದಿದೆ.

ಕಲ್ಮೇಶ್ವರ ಲಿಂಗ, ನಂದಿ, ವೀರಭದ್ರ ಮತ್ತು ಭಗ್ನಲಿಂಗ ಶಿಲ್ಪಗಳಲ್ಲದೆ, ಹೊರಭಾಗದಲ್ಲಿ ಸಪ್ತಮಾತೃಕೆಯರು, ವಿಷ್ಣು,ಗಣಪತಿ, ಸೂರ್ಯ, ಚಂದ್ರ, ಭೈರವ, ನಾಗ ಮತ್ತಿತರ ಪ್ರಾಚೀನ ಶಿಲ್ಪಾವಶೇಷಗಳನ್ನು ಕಾಣಬಹುದು. ಇವೆಲ್ಲವೂ ಕಲ್ಯಾಣ ಚಾಲುಕ್ಯರ ಕಾಲದ ರಚನೆಗಳು. ಈ ದೇವಾಲಯದ ಇತ್ತೀಚಿನ ಆವರಣಗೋಡೆಯಲ್ಲಿ ಕುಬೇರ ಮತ್ತಿತರ ಶಿಲ್ಪಗಳನ್ನು ಅಳವಡಿಸಿದ್ದಾರೆ. ಸಮೀಪದ ಕೆರೆಯಂಗಳದಲ್ಲಿ ಬಹುಶಃ ರಾಷ್ಟ್ರಕೂಟರ ಕಾಲಕ್ಕೆ ನಿರ್ದೇಶಿಸಬಹುದಾದ ಮಹಿಷಮರ್ದಿನಿ ಮತ್ತು ಭೈರವಿ ಶಿಲ್ಪಗಳಿವೆ.

ಮಹಿಷಮರ್ದಿನಿ ಶಿಲ್ಪವು ನಾಲ್ಕುಕೈಗಳನ್ನು ಹೊಂದಿದ್ದು, ಚಕ್ರ, ಶಂಖ, ಖಡ್ಗಗಳನ್ನು ಹೊಂದಿದ್ದು, ಕೆಳ ಎಡಗೈಯಲ್ಲಿ ಮಹಿಷನ ಕೊಂಬನ್ನು ಹಿಡಿದಿದ್ದಾಳೆ. ಮಹಿಷನು ಮನುಷ್ಯಾಕೃತಿಯ ದೇಹವನ್ನು, ಕೋಣನ ತಲೆಯನ್ನು ಹೊಂದಿದ್ದಾನೆ. ತಲೆಯ ಮೇಲೆ ಪುಷ್ಪವನ್ನಿರಿಸಲಾಗಿದೆ. ಮುಖಭಾಗಗಳು ಸವೆದಿವೆ. ಪ್ರಭಾವಳಿ ಇದ್ದು, ದೇವಿಯು ನಿಂತಿದ್ದಾಳೆ. ಸಮೀಪದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಇತ್ತೀಚೆಗೆ ಭೂಮಿಯಲ್ಲಿ ಶಾಸನೋಕ್ತ ವೀರಗಲ್ಲು ದೊರೆತಿದೆ (ಇದು ರಾಷ್ಟ್ರಕೂಟರ ಕಾಲದ್ದಿರಬಹುದು). ಮರಿಯಮ್ಮನ ದೇವಸ್ಥಾನದ ಮುಂದಿರುವ ಮರದ ಕೆಳಗೆ ಸಿಂಹಲಾಂಛನದ ಪಾಣಿಪೀಠವಿದ್ದು, ಅದರ ಮೇಲೆ ಭಗ್ನಗೊಂಡ ಸ್ತ್ರೀ ಶಿಲ್ಪವಿದೆ. ಇದನ್ನು ಸ್ಥಳೀಯರು ಗಾಳಿದುರ್ಗಮ್ಮ ಎಂದು ಕರೆಯುತ್ತಾರೆ. ಇದೇ ಊರಿನ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವರಾಂಡದ ಪೂರ್ವ ಮತ್ತು ಪಶ್ಚಿಮ ಗೋಡೆಗಳ ಗೂಡುಗಳಲ್ಲಿ ಪಾರ್ಶ್ವನಾಥ ಮತ್ತು ಮಹಾವೀರರ ಶಿಲ್ಪಗಳನ್ನು ಅಳವಡಿಸಿದ್ದಾರೆ. ಬಹುಶಃ ಇವು ರಾಷ್ಟ್ರಕೂಟರ ಕಾಲದ ರಚನೆಗಳಿರಬಹುದು. ಶಾಲೆಯು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದೆ. ಹೀಗೆ ಶಿರೂರಿನಲ್ಲಿ ಪ್ರಾಚೀನ ಶಿಲ್ಪಾವಶೇಷಗಳು ಯಥೇಚ್ಛವಾಗಿ ಕಂಡುಬರುತ್ತವೆ.

ಇಲ್ಲಿನ ತೀರ್ಥಂಕರ ಪಾದಪೀಠದ ಶಾಸನದಲ್ಲಿ ಕುಸುಮ ಜಿನಾಲಯಕ್ಕೆ ಪಾರ್ಶ್ವನಾಥ ಭಟ್ಟಾರಕರ ವಿಗ್ರಹವನ್ನು ಸಮರ್ಪಣೆ ಮಾಡಿದ ಉಲ್ಲೇಖವಿದೆ (ಸೌಇಇxx : ೩೨೫). ಈ ಊರಿನ ಮತ್ತೊಂದು ಶಾಸನದಲ್ಲಿ ಹುಲಿಗೆರೆಯ ಪ್ರಸ್ತಾಪವನ್ನು ಕಾಣಬಹುದು. ಉಳದೆರಡು ಶಾಸನಗಳು ಅಸ್ಪಷ್ಟವಾಗಿವೆ.

೩೯

ಊರು ಶಿರೂರು
ಸ್ಥಳ ಊರ ನಡುವೆ
ಸ್ಮಾರಕ ನಾಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಇತ್ತೀಚೆಗೆ ನಿರ್ಮಿಸಿದ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹ ಮತ್ತು ಅಂತರಾಳಗಳು ಪ್ರಾಚೀನ ನಿರ್ಮಾಣಗಳಾಗಿದ್ದು, ಭಿತ್ತಿ ಮತ್ತು ನೆಲವನ್ನು ಕ್ರಮವಾಗಿ ಸೆರಾಮಿಕ್ ಮತ್ತು ಕಡಪಕಲ್ಲುಗಳಿಂದ ಮುಚ್ಚಿ ಜೀರ್ಣೋದ್ಧಾರ ಮಾಡಿದ್ದಾರೆ. ಅಂತರಾಳದ್ವಾರದ ಇಕ್ಕೆಲುಗಳಲ್ಲಿ ಅಲಂಕೃತ ಜಾಲಂಧ್ರಗಳಿವೆ. ಬಾಗಿಲುವಾಡಗಳ ತಳದಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿದ್ದು, ದ್ವಾರಬಂದ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವಿದೆ. ಇದರ ಮೇಲ್ಭಾಗದ ಫಲಕದಲ್ಲಿ ಐದುಶಿಖರಗಳ ಉಬ್ಬುರಚನೆಯ ಅಲಂಕರಣವುಂಟು. ಸಭಾಮಂಟಪವನ್ನು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಅಂತರಾಳಗಳ ಹೊರಭಿತ್ತಿಯನ್ನು ಜೀರ್ಣೋದ್ಧಾರದ ವೇಳೆ ಮುಚ್ಚಲಾಗಿದೆ. ಗರ್ಭಗೃಹದ ಮೇಲೆ ಸಿಮೆಂಟಿನ ಶಿಖರವನ್ನು ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ಲಿಂಗ, ನಂದಿ, ಉಮಾಮಹೇಶ್ವರ, ಸಪ್ತಮಾತೃಕೆಯರು ಮತ್ತು ನಾಗಶಿಲ್ಪಗಳಿವೆ. ನಂದಿ ಶಿಲ್ಪವು, ಉತ್ತರ ಕರ್ನಾಟಕದ ಇಂದಿನ ಸ್ಥಳೀಯ ದನಗಳ ತಳಿಯನ್ನು ಹೋಲುವಂತಿದೆ. ಇದು ಪಟ್ಟದಕಲ್ಲಿನ ನಂದಿಯನ್ನು ನೆನಪಿಸುವುದು.