೬೧

ಊರು ಮಂಡಿಹಾಳ
ಸ್ಥಳ ಹಳೆ ಊರು
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

೧೯೪೭ ರಲ್ಲಿ ನಿರ್ಮಿಸಿದ ದೇವಾಲಯವಿದು. ಗರ್ಭಗೃಹ ಮತ್ತು ಸಭಾ ಗೃಹಗಳನ್ನು ಒಳಗೊಂಡಿರುವ ದೇವಾಲಯದ ಗೋಡೆಯನ್ನು ದಿಂಡುಗಲ್ಲಿನಿಂದ ಕಟ್ಟಲಾಗಿದೆ. ಗರ್ಭಗೃಹದ ಮೇಲೆ ಗುಮ್ಮಟಾಕಾರದ ಶಿಖರವನ್ನು ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿರುವ ಬಿಲ್ವಮರದ ಕೆಳಗೆ ಹಳೆಯ ದೇವಾಲಯದ ಲಿಂಗ, ನಂದಿ ಮತ್ತಿತರ ವಾಸ್ತು ಅವಶೇಷಗಳಿವೆ.

೬೨

ಊರು ಮನಗುಂಡಿ
ಸ್ಥಳ ಗದಿಗೆಪ್ಪ ಅಂಗಡಿ ಹೊಲ
ಸ್ಮಾರಕ ಕಲ್ಲಪ್ಪಜ್ಜನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹವೊಂದನ್ನು ಹೊಂದಿದ್ದು, ಮಣ್ಣು ಮತ್ತು ಚಕ್ಕೆಕಲ್ಲುಗಳಿಂದ ಹೊರಮೈಯನ್ನು ಮುಚ್ಚಿದ್ದಾರೆ. ಚಾವಣಿಯಲ್ಲಿ ಒರಟು ಚಪ್ಪಡಿಕಲ್ಲುಗಳನ್ನು ಕೋನಾಕಾರದಲ್ಲಿ ಜೋಡಿಸಿದ್ದು, ಮಧ್ಯದಲ್ಲಿ ಕಮಲದ ಉಬ್ಬುರಚನೆಯಿದೆ. ಇದರಿಂದ ಜೀಣೋದ್ಧಾರಗೊಂಡಿರುವುದನ್ನು ಗ್ರಹಿಸಬಹುದು.

ವೇದಿಕೆ ಮೇಲೆ ಲಿಂಗವಿದೆ. ಅದನ್ನು ಸುತ್ತಲು ಸಿಮೆಂಟಿನಿಂದ ಮುಚ್ಚಲಾಗಿದೆ. ಹೊರಭಾಗದಲ್ಲಿ ಭಗ್ನಗೊಂಡಿರುವ ನಂದಿ, ಭಗ್ನಗೊಂಡಿರುವ ಸಪ್ತಮಾತೃಕೆಯರ ಐದು ಶಿಲ್ಪಫಲಕಗಳು, ಬ್ರಹ್ಮ, ವಿಷ್ಣು (ಪೀಠದಲ್ಲಿ ಶಾಸನವಿದೆ), ಭೈರವ, ಗಣಪತಿ, ದಕ್ಷ, ಗಣಪತಿ, ಭಗ್ನಗೊಂಡ ಪಾರ್ಶ್ವನಾಥ, ಲಿಂಗ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ಹಾಗು ಮರವೊಂದರ ಕೆಳಗೆ ಭಗ್ನ ಭೈರವಿಶಿಲ್ಪವೊಂದಿದೆ. ದೇವಾಲಯದ ಮುಂಭಾಗದಲ್ಲಿ ಕೆರೆ ಇದ್ದ ಭೂ ಲಕ್ಷಣವಿದೆ. ಈಗ ಕೃಷಿ ಭೂಮಿಯನ್ನಾಗಿ ಬಳಸುತ್ತಿದ್ದಾರೆ. ಈ ದೇವಾಲಯದ ಪಶ್ಚಿಮಕ್ಕೆ ಎತ್ತರದ ಸ್ಥಳದಲ್ಲಿ ಮಹಿಷಮರ್ದಿನಿಯ ಉಬ್ಬುಶಿಲ್ಪಫಲಕವಿದ್ದು, ಜನರು ಪೂಜಿಸುತ್ತಿದ್ದಾರೆ.

ಇಲ್ಲಿರುವ ಕ್ರಿಶ. ೧೨೧೫ರ ಮೂರನೆ ಜಯಕೇಶಿಯ ಶಾಸನವೊಂದು,ಬಸದಿಗೆ ನೀಡಿದ ದಾನಗಳನ್ನು ಉಲ್ಲೇಖಿಸುವುದು (ಕ ಇ V : ೬೮). ದುರ್ಗಾದೇವಾಲಯದ ಹತ್ತಿರವಿರುವ ಕ್ರಿ.ಶ. ೧೨೦೭ರ ನಾಲ್ಕನೆ ಸೋಮೇಶ್ವರ ಶಾದನವು, ಸಿದ್ದೇಶ್ವರ ದೇವರಿಗೆ ನೀಡಿದ ಸುಂಕದಾನವನ್ನು ಮತ್ತು ಭೋಜಗೇಶ್ವರ ದೇವರಿಗೆ ನೀಡಿದ ಭೂದಾನವನ್ನು ತಿಳಿಸುತ್ತದೆ (ಕಕು : ಪು ೪೦೧ : ೩) ಇದರಲ್ಲಿ ಮೇಲಿನ ದೇವಾಲಯದ ಹೆಸರು ಭೊಜಗೇಶ್ವರ ಎಂದಿರಬಹುದೆ? ಏಕೆಂದರೆ ಈ ದೇವಾಲಯದ ಪಶ್ಚಿಮಕ್ಕೆ ಹಾಳಾದ ಸಿದ್ದಲಿಂಗೇಶ್ವರ ಗುಡಿ ಇದ್ದು, ಶಾಸನದಲ್ಲಿ ಉಲ್ಲೇಖಗೊಂಡಿರುವ ಸಿದ್ದೇಶ್ವರ ದೇವಾಲಯವಾಗಿರಬಹುದು. ಪಾಶ್ವರ್ನಾಥನ ಶಿಲ್ಪ ಮತ್ತು ಶಾಸನದ ಉಲ್ಲೇಖದಿಂದ ಈ ಪರಿಸರದಲ್ಲಿ ಜೈನಬಸದಿಯು ನಿರ್ಮಾಣಗೊಂಡಿದ್ದನ್ನು ಮನಗಾಣಬಹುದು. ಶಿಲ್ಪಾವಶೇಷಗಳು ಮತ್ತು ಶಾಸನಗಳಿಂದ ಇಲ್ಲಿ ಒಂದಕ್ಕಿಂತ ಹೆಚ್ಚು ಶಿವದೇವಾಲಯಗಳು ನಿರ್ಮಾಣಗೊಂಡಿರುವುದನ್ನು ಕಾಣುತ್ತೇವೆ.

೬೩

ಊರು ಮನಗುಂಡಿ
ಸ್ಥಳ ಬಸಪ್ಪ ಅಂಗಡಿ ಹೊಲ
ಸ್ಮಾರಕ ಸಿದ್ದಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹಾಳುದೇವಾಲಯದ ಭಾಗವಾಗಿ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿರುವ ಅಂತರಾಳವಿದೆ. ಗರ್ಭಗೃಹ ಬಿದ್ದು ಹೋಗಿದ್ದು, ಅದರ ದ್ವಾರವಿದೆ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವಿದೆ. ಅಂತರಳದ್ವಾರದ ಎಡಬಾಗಿಲುವಾಡವಿಲ್ಲ. ಬಲಬಾಗಿಲುವಾಡವು ಜಾಲಂಧ್ರವನ್ನು ಹೊಂದಿದೆ. ನೋಡಲು ಹಾಳುಬಿದ್ದ ಅಳಿದುಳಿದ ಸ್ಮಾರಕದಂತೆ ಕಾಣುತ್ತದೆ.

ಅಂತರಾಳದಲ್ಲಿ ಯೋನಿಪೀಠ ಮತ್ತು ರುದ್ರಭಾಗವಿರುವ ಲಿಂಗವಿದೆ. ಹೊರಗೆ ಭಗ್ನಗೊಂಡಿರುವ ನಂದಿ, ವಿಷ್ಣು, ಗಜಲಕ್ಷ್ಮಿ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಈ ದೇವಾಲಯದ ಹಿಂಭಾಗದಲ್ಲಿ ಕೆಲವೇ ಮೀಟರ್‌ಗಳ ಅಂತರದಲ್ಲಿ ಮೂವರು ಸತಿ ಹೋದ ಶಾಸನೋಕ್ತ ಸತಿಕಲ್ಲಿವೆ. ಇದರಲ್ಲಿ ಪಕ್ಕದಲ್ಲಿ ಭಗ್ನಗೊಂಡಿರುವ ಗಣಪತಿಶಿಲ್ಪವುಂಟು.

ಇಲ್ಲಿರುವ ಶಾಸನವು ನಾಲ್ಕನೆಯ ಸೋಮೇಶ್ವರ ಆಳ್ವಿಕೆಯ ಕಾಲಕ್ಕೆ ಸೇರಿದೆ. ಶಾಸನವು ಜನರು ಶಿವದೇವಾಲಯಕ್ಕಾಗಿ ಚಂದ್ರಭೂಷಣದೇವರಿಗೆ ನೀಡಿದ ದಾನವನ್ನು ಉಲ್ಲೇಖಿಸಿದೆ. (ಸೌಇಇ xv : ೩೩). ದುರ್ಗಾದೇವಾಲಯದ ಸಮೀಪವಿರುವ ಕ್ರಿ.ಶ.೧೨೦೭ರ ಶಾಸನದಲ್ಲಿ ಎಂಟು ಹಿಟ್ಟು ಮತ್ತು ಪಂಚಮಠದ ಸಮ್ಮುಖದಲ್ಲಿ ೫೦೪ ಜನರು ಸಿದ್ದೇಶ್ವರದೇವರಿಗೆ ಸುಂಕಗಳ ದಾನನೀಡಿದ ಉಲ್ಲೇಖವಿದೆ(ಕಕು : ಪು. ೪೦೧-೩). ಇದರಿಂದ ಮೇಳಿನ ದೇವಾಲಯವು ಮನಗುಂಡಿಯ ಪ್ರಮುಖ ದೇವಾಲಯವಾಗಿತ್ತೆಂದು ತಿಳಿದು ಬರುತ್ತವೆ.

೬೪

ಊರು ಮನಸೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಮಾಳಿಗೆ ರಚನೆಯ ಹಳೆಯ ದೇವಾಲಯವನ್ನು ಕೆಡವಿ, ಇತ್ತೀಚೆಗೆ ಆರ್‌.ಸಿ.ಸಿ. ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಪ್ರಾಚೀನ ಕಾಲದ ಲಿಂಗ ಹಾಗು ನಂತರದ ಕಾಲದ ನಂದಿ ಶಿಲ್ಪಗಳಿವೆ. ಆಂಜನೇಯ ಗುಡಿ ಮುಂಭಾಗದಲ್ಲಿ ಗಣಪತಿ, ಭಗ್ನಗೊಂಡಿರುವ ಶಾಸನ ಮತ್ತಿತರ ಶಿಲ್ಪಾವಶೇಷಗಳಿವೆ.

೬೫

ಊರು ಮಾದನಬಾವಿ
ಸ್ಥಳ ಗುಡ್ಡದ ಮೇಲೆ
ಸ್ಮಾರಕ ಕಲ್ಲಪ್ಪಜ್ಜನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ದೇವಾಲಯ ಗಿಡ್ಡನೆಯದು. ಗರ್ಭಗೃಹ ಮತ್ತು ಮುಂದಿನ ಸಣ್ಣ ಕೊಠಡಿಯನ್ನು ಹೊಂದಿರುವ ದೇವಾಲಯವನ್ನು ಇತ್ತೀಚೆಗೆ ದಿಂಡುಗಲ್ಲಿನಿಂದ ನಿರ್ಮಿಸಿದ್ದಾರೆ. ನಡುವೆ ಕೆಲವು ಹಳೆಯ ಕಂಬಗಳನ್ನು ಬಳಸಲಾಗಿದೆ.

ಗರ್ಭಗೃಹದಲ್ಲಿರುವ ಯೋನಿಪೀಠ, ನಂತರ ಕಾಲದ ಒರಟು ರಚನೆಯದು. ಅದರಲ್ಲಿ ಅಳವಡಿಸಿರುವ ರುದ್ರಭಾಗವು ದೊಡ್ಡದಿದ್ದು, ಒರಟುರಚನೆಯದಾಗಿದೆ. ಹೊರಗೆ ಕೆಲವು ವಾಸ್ತ ಅವಶೇಷಗಳು ಮತ್ತು ಭಗ್ನಗೊಂಡಿರುವ ನಂದಿಶಿಲ್ಪ ಕಂಡುಬರುತ್ತವೆ.

೬೬

ಊರು ಮಾದನಬಾವಿ
ಸ್ಥಳ ಬಸ್ ನಿಲ್ದಾಣ
ಸ್ಮಾರಕ ರಾಮಲಿಂಗನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸರುವ ಕೊಠಡಿಯೇ ದೇವಾಲಯ. ನಾಲ್ಕೂಮೂಲೆಗಳಲ್ಲಿ ಕಂಬಗಳನ್ನು ನಿಲ್ಲಿಸಿ ಗೋಡೆ ನಿರ್ಮಿಸಿದ್ದಾರೆ. ಚಾವಣಿಯಲ್ಲಿ ಕಲ್ಲಿನ ತೊಲೆಗಳನ್ನು ಬಳಸಲಾಗಿದೆ. ಮೇಲೆ ಸಿಮೆಂಟಿನ ಶಿಖರವನ್ನು ಕಟ್ಟಿದ್ದಾರೆ.

ಕೊಠಡಿಯಲ್ಲಿ ಪ್ರಾಚೀನ ಲಿಂಗವಿದೆ. ಹೊರಭಾಗದಲ್ಲಿ ಶಾಸನ ಮತ್ತು ಹಳೆಯ ದೇವಾಲಯದ ಕಂಬ ಮತ್ತಿತರ ವಾಸ್ತು ಅವಶೇಷಗಳಿವೆ. ದೇವಾಲಯದ ಮುಂಭಾಗದಲ್ಲಿ ಭೂಮಿಯಲ್ಲಿ ದೊರೆತ ಸರಸ್ವತಿ ವಿಗ್ರಹವನ್ನು, ಹಾಲಿನ ಡೈರಿ ಬಳಿ ನಿರ್ಮಿಸಿರುವ ಸಣ್ಣ ಗೂಡಿನಲ್ಲಿರಿಸಲಾಗಿದೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಕಾಲಾಂತರದಲ್ಲಿ ಹಾಳಾಗಿರುವುದನ್ನು ಗ್ರಹಿಸಬಹುದು.

ದೇವಾಲಯದ ಮುಂದಿರುವ ಶಾಸನವು ಗೋವೆ ಕದಂಬರ ಎರಡನೆಯ ಜನಕೇಶಿ ಕಾಲದ್ದು. ಅಂದರೆ ಕ್ರಿ.ಶ. ೧೧೩೪-೩೮ರ ಶಾಸನವು, ಜಯಕೇಶಿ ಅರಸನು ಮಂದೂರ ಸ್ವಯಂಭೂ ಕಲಿದೇವರಿಗೆ ನೀಡಿದ ದಾನವನ್ನು ಉಲ್ಲೇಖಿಸಿದೆ. ಇದರಿಂದ ಮಾದನಬಾವಿಯ ಪ್ರಾಚೀನ ಹೆಸರು ಮಂದೂರು ಎಂಬುದು ಗಮನಾರ್ಹ. ಹಾಗು ಮೇಳೆ ಹೇಳಿದ ಗುಡಿಯಲ್ಲಿರುವ ರಾಮಲಿಂಗವೇ ಶಾಸನೋಕ್ತ ಕಲಿದೇವರಿರಬಹುದು?

೬೭

ಊರು ಮಾರಡಗಿ
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಾಣಗೊಂಡಿರುವ ಒಂದೇ ಕೊಠಡಿಯ ದೇವಾಲಯವಿದು. ಇದೇ ಊರಿನ ಹುಚ್ಚಪ್ಪ ಸಾಹುಕಾರರು ಕಟ್ಟಿಸಿಕೊಟ್ಟಿದ್ದಾರೆ. ದೇವಾಲಯವನ್ನು ಚಕ್ಕೆಕಲ್ಲು ಮತ್ತು ಸಿಮೆಂಟನಿಂದ ನಿರ್ಮಿಸಲಾಗಿದೆ.

ಕೊಠಡಿಯಲ್ಲಿರುವ ಲಿಂಗ ಮತ್ತು ನಂದಿ ಶಿಲ್ಪಗಳು ಇತ್ತೀಚಿನವು ಆದರೆ ಹೊರಭಾಗದಲ್ಲಿ ಹಳೆಯ ದೇವಾಲಯಕ್ಕೆ ಸೇರಿದ ಲಿಂಗ, ಭಗ್ನಗೊಂಡಿರುವ ನಂದಿ, ನಾಗ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

೬೮

ಊರು ಮಾರಡಗಿ
ಸ್ಥಳ ಕುರುಡಾಪುರ
ಸ್ಮಾರಕ ವೀರಭದ್ರೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೩ನೆಯ ಶತಮಾನ
ಶೈಲಿ ಸೇವುಣ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ತ್ರಿಕೂಟ ರಚನೆಯದು. ಪ್ರತಿ ಗರ್ಭಗೃಹವೂ ಅಂತರಾಳವನ್ನು ಹೊಂದಿವೆ. ಗರ್ಭಗೃಹ ಮತ್ತು ಅಂತರಾಳಗಳ ದ್ವಾರಗಳು ರಚನೆಯಲ್ಲಿ ಸರಳವಾಗಿವೆ. ನವರಂಗದಲ್ಲಿ ಸರಳ ಹಾಗೂ ಒರಟುರಚನೆಯ ದೇವಕೋಷ್ಠಗಳಿವೆ. ಮಧ್ಯದ ಕಂಬಗಳು ಚೌಕ ಮತ್ತು ಅಷ್ಟಮುಖ ರಚನೆಯನ್ನು ಹೊಂದಿವೆ. ಹೊರಗೋಡೆಯನ್ನು ಸ್ಥಳೀಯ ಕಲ್ಲುಗಳನ್ನು ಬಳಸಿ ನವೀಕರಿಸಲಾಗಿದೆ.

ಪ್ರಧಾನ ಗರ್ಭಗೃಹದಲ್ಲಿ ಲಿಂಗವಿದೆ. ಇದನ್ನು ಮಲ್ಲಯ್ಯ ಎಂದು ಕರೆಯುತ್ತಾರೆ. ಅಂತರಾಳದಲ್ಲಿ ನಂದಿಶಿಲ್ಪವುಂಟು. ಉತ್ತರಾಭಿಮುಖವಾಗಿರುವ ಗರ್ಭಗೃಹದಲ್ಲಿ ಲಿಂಗ ಮತ್ತು ವೀರಭದ್ರಸ್ವಾಮಿ ಶಿಲ್ಪಗಳಿದ್ದು, ಪ್ರಧಾನವಾಗಿ ಪೂಜೆಗೊಳ್ಳುತ್ತಿವೆ. ಹಾಗಾಗಿ ದೇವಾಲಯಕ್ಕೆ ವೀರಭದ್ರೇಶ್ವರ ಗುಡಿ ಎಂದು ಹೆಸರುಬಂದಿದೆ. ಇನ್ನು ದಕ್ಷಿಣಾಭಿಮುಖವಾಗಿರುವ ಗರ್ಭಗೃಹದಲ್ಲೂ ಲಿಂಗವನ್ನು ಕಾಣಬಹುದು. ನವರಂಗದಲ್ಲಿ ಗಣಪತಿ ಮತ್ತು ನಾಗಶಿಲ್ಪಗಳಿವೆ. ಹೊರಗೆ, ನಿಧಿ ಆಸೆಯಿಂದ ಭಗ್ನಗೊಂಡಿರುವ ನಂದಿಶಿಲ್ಪವನ್ನು ಕಾಣಬಹುದು. ಈ ದೇವಾಲಯದ ಮುಂಭಾಗದಲ್ಲಿ ಆಂಜನೇಯ ದೇವಾಲಯವಿದೆ. ಸು.೧೯೦೨ ರಲ್ಲಿ ಘಟಿಸಿದ ಪ್ಲೇಗ್ ಹಾವಳಿಯಿಂದಾಗಿ ಕುರುಡಾಪುರದ ಗ್ರಾಮಸ್ಥರು ಸಮೀಪದ ಹೆಬ್ಬಳ್ಳಿ, ಉಣಕಲ್ ಮತ್ತು ಮಾರಡಗಿ ಗ್ರಾಮಗಳಿಗೆ ವಲಸೆಹೋದರಂತೆ. ಹಾಗಾಗಿ ಕುರುಡಾಪುರ ಹಾಳುಗ್ರಾಮವಾಯಿತೆಂದು ಇಲ್ಲಿನ ಅರ್ಚಕರು ತಿಳಿಸುತ್ತಾರೆ.

೬೯

ಊರು ಮುಗಳಿ
ಸ್ಥಳ ಕಡೆ ಅಗಸಿ ಬಳಿ
ಸ್ಮಾರಕ ಬಸವಣ್ಣನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹೆಂಚಿನ ಮನೆಯ ದೇವಾಲಯವಿದು. ಜೋಡಿಗರ್ಭಗೃಹಗಳನ್ನು ಮತ್ತು ಸಭಾಗೃಹವನ್ನು ಒಳಗೊಂಡಿದೆ. ಗರ್ಭಗೃಹಗಳಲ್ಲಿ ಕ್ರಮವಾಗಿ ನಂದಿ ಮತ್ತು ಪ್ರಾಚೀನ ಲಿಂಗವಿದೆ. ಸಭಾಗೃಹ ದಲ್ಲಿರುವ ನಂದಿ ಹಳೆಯದಿದ್ದು, ಲಿಂಗಕ್ಕೆ ಅಭಿಮುಖವಾಗಿದೆ. ಮುಂಭಾಗದಲ್ಲಿ ಹಳೆಯ ಲಿಂಗವೊಂದರ ಭಗ್ಯೋನಿಪೀಠವುಂಟು.

ಊರ ಹೊರಗಿರುವ ಆಂಜನೇಯ ಗುಡಿಯ ಮುಂಭಾಗದಲ್ಲಿ ಗಣಪತಿ ಮತ್ತು ಭೈರವನ ಭಗ್ನಶಿಲ್ಪಗಳಿವೆ.

೭೦

ಊರು ಮುಗುದ
ಸ್ಥಳ ಪೇಠೆ ಓಣಿ
ಸ್ಮಾರಕ ಆದಿನಾಥ ಬಸದಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಬಸದಿಯು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಸಭಾಗೃಹವನ್ನು ವಿಸ್ತರಿಸಲಾಗಿದೆ. ಬಸದಿಯ ಸುತ್ತ ಚಕ್ಕೆಕಲ್ಲುಗಳಿಂದ ಆವರಣ ಗೋಡೆಯನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ವೇದಿಕೆಯ ಮೇಲೆ ಅಮೃತಶಿಲೆಯ ಆದಿನಾಥನ ಸಣ್ಣಶಿಲ್ಪವಿದೆ. ಗರ್ಭಗೃಹ ದ್ವಾರದ ಇಕ್ಕೆಲಗಳಲ್ಲಿ ಪಾರ್ಶ್ವನಾಥ ಮತ್ತು ಪದ್ಮಾವತಿಯ ಶಿಲ್ಪಗಳಿವೆ. ಇವು ಕಲ್ಯಾಣ ಚಾಲುಕ್ಯ ಕಾಲದ ರಚನೆಗಳಾಗಿವೆ.

ಬಸದಿಯಲ್ಲಿರುವ ಒಂದನೆಯ ಸೋಮೇಶವರ ಕ್ರಿ.ಶ. ೧೦೪೫ರ ಶಾಸನವು, ಮುಗುದ ಮೂವತ್ತರ ನಾಳ್ಗಾವುಂಡ ಸಾಮಂತ ಮಾರ್ತಂಡನು ಸಮ್ಯಕ್ತ್ವರತ್ನಾಕರ ಬಸದಿಯನ್ನು ಜೀರ್ಣೋದ್ಧಾರಮಾಡಿಸಿ, ನಾಟಕ ಶಾಲೆಯನ್ನು ನಿರ್ಮಿಸಿದನೆಂದಿದೆ (ಸೌಇಇ XI-i : ೭೮). ಇದರಿಂದ ಬಸದಿಯ ಮೂಲಹೆಸರು ತಿಳಿದುಬರುತ್ತದೆ. ಈ ಬಸದಿಯನ್ನು ಕ್ರಿ.ಶ. ೯೭೦ ರಲ್ಲಿ ನಿರ್ಮಿಸಲಾಯಿತೆಂದು ಜೈನ ಶಿಲಾಶಾಸನಗಳಲ್ಲಿ ತೀರ್ಥಕ್ಷೇತ್ರಗಳು ಎಂಬ ಪುಸ್ತಕದಲ್ಲಿ ಹೇಳಲಾಗಿದೆ. ಈ ಪುಸ್ತಕವನ್ನು ಕರ್ನಾಟಕ ವಿಶ್ವವಿದ್ಯಾಲಯವು ೧೯೯೬ ರಲ್ಲಿ ಪುನರ್‌ಮುದ್ರಿಸಿದೆ. ಬಸದಿಯು ಕ್ರಿ.ಶ ೧೦೪೫ರಲ್ಲಿ, ಸುಮಾರು ೧೯ನೆಯ ಶತಮಾನದಲ್ಲಿ ಹಾಗು ೨೦೦೩ರಲ್ಲಿ ಜೀರ್ಣೋದ್ಧಾರಕ್ರಿಯೆಗೆ ಒಳಗಾಗಿರುವುದನ್ನು ಕಾಣಬಹುದು.

೭೧

ಊರು ಮುಗುದ
ಸ್ಥಳ ಕೆರೆ ದಂಡೆ
ಸ್ಮಾರಕ ಈಶ್ವರ ಲಿಂಗ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಬಿದ್ದು ಹೋಗಿದ್ದು, ಅದರ ಅವಶೇಷಗಳು ಕಂಡುಬರುತ್ತವೆ. ಲಿಂಗದ ಯೋನಿಪೀಠ ಮತ್ತಿತರ ಅವಶೇಷಗಳಿವೆ. ಸಮೀಪದ ಮಠದ ಅರಳಿಕಟ್ಟೆಯಲ್ಲಿ ನಂದಿ, ಮಹಿಷಮರ್ದಿನಿ ಮತ್ತಿತರ ಭಗ್ನಶಿಲ್ಪಾವಶೇಷಗಳು ಕಾಣಸಿಗುತ್ತವೆ. ಕೆರೆ ಏರಿಯ ಮೇಲಿರುವ ಶಾಸನಗಳು ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿವೆ. ಕ್ರಿ.ಶ. ೧೧೨೫ರ ಶಾಸನವು ಬಮ್ಮರಸನು ಕೆರೆಗೆ ಭೂದಾನ ನೀಡಿದನೆಂದಿದೆ (ಸೌಇಇ XI-ii : ೧೭೭). ಸುಮಾರು ೧೨ನೆಯ ಶತಮಾನದ ವೀರಗಲ್ಲು ಶಾಸನವು, ಗೋಗ್ರಹಣ ಪ್ರಸಂಗದಲ್ಲಿ ವೀರನೊಬ್ಬನ ಮರಣವನ್ನು ಉಲ್ಲೇಖಿಸುತ್ತದೆ. (ಅದೇ XV ೫೫೩). ಈ ಎಲ್ಲಾ ಅವಶೇಷಗಳಿಂದ ಕೆರೆ ದಂಡೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿವಾಲಯವಿತ್ತೆಂದು ಸ್ಪಷ್ಟವಾಗುವುದು.

೭೨

ಊರು ಮುಗದ
ಸ್ಥಳ ಪೇಠೆ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿರುವ ಗರ್ಭಗೃಹವನ್ನು ಮತ್ತು ಹೆಂಚಿನ ಸಭಾಗೃಹವನ್ನು ಒಳಗೊಂಡಿದೆ. ಗರ್ಭಗೃಹದ ದ್ವಾರ ಇತ್ತೀಚಿನದು. ಸಭಾಗೃಹದಲ್ಲಿ ಮರದ ಕಂಬಗಳನ್ನು ಅಳವಡಿಸಿದ್ದಾರೆ. ಮೇಲೆ ಗಾರೆಶಿಖರವನ್ನು ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದುದು. ಸಭಾಗೃಹದ ಗೋಡೆಯಲ್ಲಿ ನಾಗ ಶಿಲ್ಪವನ್ನು ಮತ್ತು ಶಾಸನದ ತುಂಡನ್ನು ಅಳವಡಿಸಿದ್ದಾರೆ. ಹೊರಭಾಗದಲ್ಲಿ ವೀರಗಲ್ಲು ಮತ್ತು ಶಾಸನ ಅವಶೇಷಗಳು ಕಂಡುಬರುತ್ತವೆ. ಈ ಶಾಸನಗಳು ಪ್ರಕಟಗೊಂಡ ಬಗ್ಗೆ ಮಾಹಿತಿಗಳಿಲ್ಲ.

೭೩

ಊರು ಮುಮ್ಮಿಗಟ್ಟಿ
ಸ್ಥಳ ಗರಗ ರಸ್ತೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಹಳೆಯ ದೇವಾಲಯವನ್ನು ಕೆಡವಿ, ಒಂದೇ ಕೊಠಡಿಯ ಹೊಸ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಇದು ದಿಂಡುಗಲ್ಲಿನ ಗೋಡೆ ಮತ್ತು ಕಾಂಕ್ರೀಟ್ ಚಾವಣಿಯನ್ನು ಹೊಂದಲಿದೆ.

ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಹೊರಗೆ ನಂತರದ ಕಾಲದ ನಂದಿಶಿಲ್ಪವಿದೆ. ಹಾಗು ಹಳೆಯ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ಇಲ್ಲಿರುವ ಶಾಸನ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು, ತ್ರುಟಿತವಾಗಿದೆ. (ಕಲಬುರ್ಗಿ : ಧಾ ಜಿ ಶಾ ಸೂ).

೭೪

ಊರು ಮುಳಮುತ್ತಲ
ಸ್ಥಳ ಊರ ನಡುವೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಶೈಲಿಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದ್ದು, ಬ್ರಹ್ಮಭಾಗ ಮತ್ತು ರುದ್ರಭಾಗಗಳನ್ನು ಮಾತ್ರ ಕಾಣಬಹುದು. ಇದರ ಪಕ್ಕದಲ್ಲಿ ನಂತರದ ಕಾಲಕ್ಕೆ ಸೇರುವ ಇನ್ನೊಂದು ಲಿಂಗವಿದೆ. ಹೊರಗೆ ಎಡಬದಿಯಲ್ಲಿ ಶಾಸನವಿದ್ದು, ಅಕ್ಷರಗಳು ಸವೆದಿವೆ. ಇದು ಪ್ರಕಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮುಂಭಾಗದಲ್ಲಿ ವೀರಗಲ್ಲುಶಿಲ್ಪವಿದೆ.

೭೫

ಊರು ವನಹಳ್ಳಿ
ಸ್ಥಳ ಗೌಡರ ಓಣಿ
ಸ್ಮಾರಕ ಅಮೃತೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಣ್ಣು ಮತ್ತು ಕಲ್ಲಿನಿಂದ ನಿರ್ಮಿಸಿರುವ ಕೊಠಡಿಯೇ ದೇವಾಲಯ. ಕೊಠಡಿಯು ತೀರಾ ದುಸ್ಥಿತಿಯಲ್ಲಿದೆ. ಇದರಲ್ಲಿ ಹಳೆಯಲಿಂಗ, ಮತ್ತಿತರ ಭಗ್ನಗೊಂಡಿರುವ ಶಿಲ್ಪವಾವಶೇಷಗಳಿವೆ. ಹೊರಭಾಗದಲ್ಲಿ ನಾಗಶಿಲ್ಪಗಳು ಕಂಡುಬರುತ್ತವೆ. ಬಹುಶಃ ಈ ಲಿಂಗವನ್ನು ಬೇರೆಡೆಯಿಂದ ತಂದು ಪ್ರತಿಷ್ಠಾಪಿಸಿರಬಹುದು.