೧೬

ಊರು ಕಲ್ಲೆ
ಸ್ಥಳ ಊರ ಮುಂಭಾಗ
ಸ್ಮಾರಕ ಬಸವಣ್ಣನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಪ್ರಾಚೀನ ದೇವಾಲಯವು ನಶಿಸಿದ ನಂತರ, ಇತ್ತೀಚೆಗೆ ದಿಂಡುಗಲ್ಲಿನ ದೇವಾಲಯವನ್ನು ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಮಂಟಪಗಳಿವೆ. ದೇವಾಲಯದಲ್ಲಿ ಹಳೆಯ ಲಿಂಗವಿದೆ. ನಂದಿಶಿಲ್ಪ ಇತ್ತೀಚಿನದು.

೧೭

ಊರು ಕವಲಗೇರಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಿರುವ ಗರ್ಭಗೃಹ ಮತ್ತು ಸಬಾ ಮಂಟಪಗಳಿರುವ ದೇವಾಲಯವಿದು. ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಸಭಾಮಂಟಪದಲ್ಲಿರುವ ನಂದಿ ಶಿಲ್ಪ ಇತ್ತೀಚಿನದು. ಹಳೆಯ ನಂದಿಶಿಲ್ಪ ಭಗ್ನಗೊಂಡಿದ್ದು, ಇಲ್ಲಿನ ಶಿವಾನಂದ ಮಠದಲ್ಲಿದೆ. ದೇವಾಲಯದ ಗೋಡೆಯಲ್ಲಿ ಗಜಲಕ್ಷ್ಮಿ ಶಿಲ್ಪಫಲಕವನ್ನು ಅಳವಡಿಸಿದ್ದಾರೆ. ಫಲಕದ ಮೇಲ್ಭಾಗದಲ್ಲಿ ಸೂರ್ಯನನ್ನು ಸಂಕೇತಿಸುವ ವೃತ್ತಾಕಾರದ ಗೆರೆ ಚಿತ್ರವಿದೆ.

೧೮

ಊರು ಕುಂಬಾರಕೊಪ್ಪ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ಮೊದಲಿನ ಮಾಳಿಗೆ ರಚನೆಯ ದೇವಾಲಯವನ್ನು ಕೆಡವಿ, ಇತ್ತೀಚೆಗೆ ಹೊಸ ದೇವಾಲಯವನ್ನು ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಗೃಹಗಳಿರುವ ದೇವಾಲಯದ ಚಾವಣಿಯಲ್ಲಿ ಹೆಂಚನ್ನು ಹೊದಿಸಲಾಗಿದೆ. ಮುಂಭಾಗದಲ್ಲಿ ಹಳೆ ದೇವಾಲಯದ ಕೆಲವು ವಾಸ್ತು ಅವಶೇಷಗಳು ಕಂಡುಬರುತ್ತವೆ.

ದೇವಾಲಯದಲ್ಲಿ ಹಳೆ ಲಿಂಗದ ಪೀಠವಿದೆ. ಹೊರಗೆ ಹಳೆಯ ನಂದಿ ಶಿಲ್ಪವಿದೆ.

೧೯

ಊರು ಕೆಲಗೇರಿ
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಆರ್.ಸಿ.ಸಿ. ನಿರ್ಮಾಣವಾಗಿದ್ದು, ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ರುವ ಲಿಂಗ ಇತ್ತೀಚಿನದು. ಸಭಾಗೃಹದ ನೈರುತ್ಯ ಮೂಲೆಯಲ್ಲಿ ಪ್ರಾಚೀನ ಕಾಲದ ಲಿಂಗವಿದೆ. ನಂದಿಶಿಲ್ಪ ಇತ್ತೀಚಿನ ರಚನೆ. ಗೋಡೆಯಲ್ಲಿ ನಾಗಶಿಲ್ಪವನ್ನು ಅಳವಡಿಸಲಾಗಿದೆ.

ಈ ದೇವಾಲಯದ ಮುಂಭಾಗದಲ್ಲಿರುವ ಆರ್.ಸಿ.ಸಿ. ಕೊಠಡಿಯಲ್ಲಿ ಹಳೆಯ ಲಿಂಗವಿದ್ದು, ಸಿದ್ದಲಿಂಗೇಶ್ವರ ಎಂದು ಕರೆಯುತ್ತಾರೆ. ಇಲ್ಲಿ ಗಣಪತಿ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ಗುಡಿ ಹತ್ತಿರವಿರುವ ಹಲ್ಲಿನಲ್ಲಿ ವೀರನೊಬ್ಬನ ಉಬ್ಬುಶಿಲ್ಪವಿದೆ. ಬಲಗೈಯಲ್ಲಿ ಕತ್ತಿಯನ್ನು, ಎಡಗೈಯಲ್ಲಿ ಕೋವಿಯನ್ನು ಹಿಡಿದಿರುವಂತಿರುವ ಈ ಶಿಲ್ಪವು ಒರಟುರಚನೆಯಾಗಿದ್ದು, ಸುಮಾರು ೧೭-೧೮ನೆಯ ಶತಮಾನಕ್ಕೆ ನಿರ್ದೇಶಿಸಬಹುದು.

೨೦

ಊರು ಕೊಟಬಾಗಿ
ಸ್ಥಳ ಊರ ಈಶಾನ್ಯ ಮೂಲೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

೧೯೮೩ರಲ್ಲಿ ನಿರ್ಮಾಣಗೊಂಡ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿರುವ ದೇವಾಲಯವನ್ನು, ದಿಂಡುಗಲ್ಲು ಮತ್ತು ಚಪ್ಪಡಿಕಲ್ಲುಗಳಿಂದ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಪ್ರಾಚೀನ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಸಭಾಗೃಹದಲ್ಲಿ ಗಣಪತಿ ಮತ್ತು ವಿಷ್ಣುಶಿಲ್ಪಗಳಿದ್ದು, ಒರಟುರಚನೆಯ ಉಬ್ಬುಶಿಲ್ಪಗಳಂತೆ ಕಂಡುಬರುತ್ತವೆ. ಹೊರಭಾಗದಲ್ಲಿ ಸಪ್ತ ಮಾತೃಕೆಯರ ಶಿಲ್ಪಫಲಕ ಮತ್ತು ನಾಗಶಿಲ್ಪಗಳಿವೆ. ಈ ಶಿಲ್ಪಾವಶೇಷಗಳಿಂದ, ಇಲ್ಲಿ ಹಳೆಯ ದೇವಾಲಯ ಇತ್ತೆಂಬುದು ಸ್ಪಷ್ಟವಾಗುತ್ತದೆ. ಈ ಊರಿನ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಸೂರ್ಯ ಮತ್ತು ಭಗ್ನಗೊಂಡಿರುವ ಕಾತಿಕೇಯನ ಶಿಲ್ಪಗಳಿವೆ. ಗೋಡೆಯಲ್ಲಿ ವೀರಗಲ್ಲು ಶಿಲ್ಪವಿದೆ.

ಈ ಊರಿನ ಬಸವಣ್ಣನ ಗುಡಿ ಮುಂದಿನ ನಂದಿಕಂಬದಲ್ಲಿರುವ ಶಾಸನವು ಯಾದವ ಮಹಾದೇವರಾಯನ ಕಾಲದ್ದು. ಕ್ರಿ.ಶ. ೧೨೬೪ರ ಈ ಶಾಸನವು, ಸೊನ್ನಲಿಗೆಯ ಕಪಿಲಸಿದ್ದ ಮಲ್ಲಿಕಾರ್ಜುನ ದೇವರಿಗೆ ಕೊಟಬಾಗಿ ಗ್ರಾಮವನ್ನು ದಾನವಾಗಿ ನೀಡಿದ ಬಗ್ಗೆ ಉಲ್ಲೇಖಿಸುತ್ತದೆ (ಸೌಇಇXV : ೧೯೫).

೨೧

ಊರು ಕೋಟೂರು
ಸ್ಥಳ ಗುಡಿ ಓಣಿ
ಸ್ಮಾರಕ ಕಲ್ಮಠ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಜೀರ್ಣೋದ್ಧಾರಗೊಂಡ ದೇವಾಲಯವಿದು. ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹದ ಚಾವಣಿಯನ್ನು ಮಾಳಿಗೆ ಶೈಲಿಯಲ್ಲಿ ನಿರ್ಮಿಸಿದ್ದು, ಉಳಿದ ಭಾಗಗಳ ಚಾವಣಿಯನ್ನು, ಒರಟುಕಲ್ಲು ಚಪ್ಪಡಿಗಳಿಂದ ಮುಚ್ಚಲಾಗಿದೆ. ಸುತ್ತಲೂ ದಿಂಡುಗಲ್ಲಿನ ಗೋಡೆಯನ್ನು ಕಟ್ಟಿದ್ದಾರೆ.

ಗರ್ಭಗೃಹದ ಬಾಗಿಲುವಾಡಗಳಲ್ಲಿ ಒರಟು ರಚನೆಯ ಅರ್ಧಕಂಬಗಳನ್ನು ಮತ್ತು ಅವುಗಳ ದಿಂಟಿನ ಭಾಗದಲ್ಲಿ ಕಲಶಗಳನ್ನು ಬಿಡಿಸಲಾಗಿದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಅರ್ಧ ಮಂಟಪದ ವಿಸ್ತೀರ್ಣವನ್ನು ಕಡಿಮೆಮಾಡಿ ನವರಂಗವನ್ನು ವಿಸ್ತರಿಸಲಾಗಿದೆ. ನವರಂಗದ ಮುಂದಿರುವ ಪ್ರವೇಶಮಂಟಪ ಮಾಳಿಗೆರಚನೆಯರು.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಭಾಗದಲ್ಲಿ ನಾಗ, ಒಡೆದ ಶಾಸನಶಿಲ್ಪ, ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

೨೨

ಊರು ಕೊಟಬಾಗಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಅಂತರಾಳಗಳನ್ನು ಹೊಂದಿದೆ. ಅಧಿಷ್ಠಾನದ ಮೇಲಿರುವ ದೇವಾಲಯದ ಹೊರಗೋಡೆ ಬಿದ್ದು ಹೋಗಿದೆ. ದೇವಾಲಯದಲ್ಲಿ ಲಿಂಗ, ಗಣಪತಿ, ನಾಗ-ನಾಗಿಣಿ ಶಿಲ್ಪಗಳಿವೆ. ಹೊರಬಾಗದಲ್ಲಿ ಪತ್ನಿ ಸಹಿತ ದಕ್ಷ, ಉಮಾಮಹೇಶ್ವರ, ನಂದಿ, ನಾಗ ಮತ್ತಿತರ ಶಿಲ್ಪಾವಶೇಷಗಳಿವೆ. ಈ ಎಲ್ಲ ಶಿಲ್ಪಗಳು ಭಗ್ನಗೊಂಡಿವೆ.

೨೩

ಊರು ಕೋಟೂರು
ಸ್ಥಳ ಕೆರೆ ದಂಡೆ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಹೊಯ್ಸಳ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗಿಡ್ಡಗಿದ್ದು, ಅಧಿಷ್ಠಾನದ ಮೇಲಿದೆ. ಹಾಗೂ ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದೆ. ಅರ್ಧಮಂಟಪದ ಪ್ರವೇಶದಲ್ಲಿ ಸಣ್ಣ ಗಾತ್ರದ ದುಂಡನೆಯ ಎರಡು ಕಂಬಗಳನ್ನು ತೊಲೆಗೆ ಆಧಾರವಾಗಿ ತೋರಣೋಪಾದಿಯಲ್ಲಿ ನಿಲ್ಲಿಸಿರುವುದನ್ನು ಕಾಣಬಹುದು. ನವರಂಗದ ಕಂಬಗಳು ಚೌಕರಚನೆಯಲ್ಲಿವೆ. ಗೋಡೆಯಲ್ಲಿ ದೇವಕೋಷ್ಠಗಳನ್ನು ನಿರ್ಮಿಸಲಾಗಿದೆ. ಹೊರಭಿತ್ತಿ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಮೇಲೆ ಕದಂಬನಾಗರಶೈಲಿಯ ಶಿಖರವಿದ್ದು, ಅದರ ತುದಿಭಾಗ ಮತ್ತು ಸುಖನಾಸದ ಭಾಗಗಳು ಜೀರ್ಣೋದ್ಧಾರಗೊಂಡಿವೆ.

ದೇವಾಲಯದಲ್ಲಿ ಲಿಂಗ, ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ನಂದಿ ಶಿಲ್ಪಗಳು ಕಂಡುಬರುತ್ತವೆ. ಹೊರಭಾಗದಲ್ಲಿ ಗಣಪತಿ, ಲಿಂಗ ಮತ್ತು ವಾಸ್ತು ಅವಶೇಷಗಳಿವೆ. ಈ ಊರಿನ ವ್ಯವಸಾಯ ಸಹಕಾರ ಸಂಘದ ಮುಂದಿರುವ ಗೂಡಿನಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಹನುಮಂತದೇವರ ಗುಡಿ ಮುಂದೆ ಹೊಯ್ಸಳ ಲಾಂಛನದ ಸಿಂಹ ಶಿಲ್ಪವಿದ್ದು, ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಬಂಧಿಸಿದ್ದೆಂದು ಸ್ಥಳೀಯರು ತಿಳಿಸುತ್ತಾರೆ. ಹೀಗೆ ದೇವಾಲಯದಲ್ಲಿ ಕಂಡುಬರುವ ದುಂಡನೆಯ ಸುಂದರವಾದ ಎರಡು ಕಂಬಗಳು, ಸುಖನಾಸದ ರಚನೆ ಮತ್ತು ಹೊಯ್ಸಳ ಲಾಂಛನದ ಸಿಂಹ ಶಿಲ್ಪಗಳಿಂದಾಗಿ ಮೇಲೆ ತಿಳಿಸಿದ ಮಲ್ಲಿಕಾರ್ಜುನ ದೇವಾಲಯವು ಹೊಯ್ಸಳ ರಚನೆ ಎಂದು ಸ್ಪಷ್ಟವಾಗುವುದು.

೨೪

ಊರು ಕ್ಯಾರೆಕೊಪ್ಪ
ಸ್ಥಳ ಊರ ಉತ್ತರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ದಿಂಡುಗಲ್ಲುಗಳಿಂದ ನಿರ್ಮಿಸಿರುವ ಕೊಠಡಿಯೊಂದರ ದೇವಾಲಯವಿದು. ಕೊಠಡಿಯ ಮೇಲೆ ಮೆಟ್ಟಿಲಾಕಾರ ಶಿಖರವುಂಟು.

ಕೊಠಡಿಯಲ್ಲಿ ಎತ್ತರದ ವೇದಿಕೆಯ ಮೇಲೆ ಹಳೆ ಲಿಂಗವನ್ನಿಡಲಾಗಿದೆ. ಹೊರಭಾಗದಲ್ಲಿ ಹಳೆ ದೇವಾಲಯದ ವಾಸ್ತುಭಾಗಗಳು ಕಂಡುಬರುತ್ತವೆ. ಇದರಿಂದ ಇಲ್ಲಿ ಪ್ರಾಚೀನ ಶಿವಾಲಯವಿದ್ದು, ಅದು ಹಾಳಾಗಿರುವುದನ್ನು ಮನಗಾಣಬಹುದು.

೨೫

ಊರು ಗರಗ
ಸ್ಥಳ ಕೆರೆ ದಂಡೆ
ಸ್ಮಾರಕ ಈಶ್ವರ ದೇವರು
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಣ್ಣು ಮತ್ತು ಕಲ್ಲಿನಿಂದ ನಿರ್ಮಿಸಿರುವ ಕೊಠಡಿಯಲ್ಲಿ ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಲಿಂಗವು ಯೋನಿಪೀಠ ಮತ್ತು ರುದ್ರಭಾಗವನ್ನು ಮಾತ್ರ ಹೊಂದಿದೆ. ಹೊರಗೆ ಮರದ ಕೆಳಗೆ ಲಿಂಗವೊಂದರ ಯೋನಿಪೀಠವಿದೆ. ಸಮೀಪದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಕೆಲವು ಶಿಲ್ಪಾವಶೇಷಗಳು ಮತ್ತು ಜೈನಶಾಸನಗಳು ಕಂಡುಬರುತ್ತವೆ.

೨೬

ಊರು ಗರಗ
ಸ್ಥಳ ಕೆರೆ ದಂಡೆ
ಸ್ಮಾರಕ ಈಶ್ವರ ದೇವರು
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದುಸ್ಥಿತಿಯಲ್ಲಿರುವ ಮಾಳಿಗೆ ಕೊಠಡಿಯಲ್ಲಿ ಭಗ್ನಗೊಂಡಿರುವ ಲಿಂಗವಿದೆ. ಜೊತೆಗೆ ಭಗ್ನಗೊಂಡಿರುವ ನಂದಿಶಿಲ್ಪವನ್ನು ಕಾಣಬಹುದು. ಹೊರಗೆ ಭಗ್ನಗೊಂಡಿರುವ ಗಣಪತಿ ಹಾಗು ವೀರನೊಬ್ಬರ ಶಿಲ್ಪಗಳಿವೆ. ಈ ಊರಿನ ಬಾರಕೇರ ಅವರ ಮನೆ ಮುಂದೆ ಮಹಿಷಮರ್ದಿನಿಯ ಎರಡು ಶಿಲ್ಪಗಳು, ಕಾಲಭೈರವ ಮತ್ತು ನಾಗಶಿಲ್ಪಗಳಿವೆ. ರುದ್ರಪ್ಪ ವಾಲಿಕಾರರ ಮನೆ ಮುಂದೆ, ಅಗಸಿಬಾಗಿಲು ಮತ್ತು ಆಂಜನೇಯ ದೇವಾಲಯದ ಬಳಿ ವೀರಗಲ್ಲು ಶಿಲ್ಪಗಳು ಕಂಡುಬರುತ್ತವೆ.

೨೭

ಊರು ಗುಳದ ಕೊಪ್ಪ
ಸ್ಥಳ ಹೆದ್ದಾರಿ ಪಕ್ಕ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹವನ್ನು ಮತ್ತು ಸುತ್ತಲೂ ಪ್ರದಕ್ಷಿಣಾಮಂಟಪವನ್ನು ಹೊಂದಿದೆ. ಕ್ರಿ.ಶ. ೧೯೦೨ರಲ್ಲಿ ನಿರ್ಮಿಸಿದ ಗರ್ಭಗೃಹವನ್ನು ಇತ್ತೀಚೆಗೆ ನವೀಕರಿಸಿದ್ದಾರೆ. ಇದರ ಚಾವಣಿ ಕಲ್ಲಿನದು. ಸುತ್ತಲೂ ಇರುವ ಪ್ರದಕ್ಷಿಣಾಮಂಟಪವು ಇಳಿಜಾರಿನ ಹೆಂಚಿನ ಚಾವಣಿಯನ್ನು ಹೊಂದಿದೆ. ಈ ಚಾವಣಿಯನ್ನು ಗೋಡೆ ಮತ್ತು ದುಂಡಾದ ದಪ್ಪನೆಯ ಗಾರೆಕಂಬಗಳು ಹೊತ್ತಿವೆ. ಗರ್ಭಗೃಹದ ಮೇಲೆ ಗುಮ್ಮಟಕಾರದ ಸಿಮೆಂಟಿನ ಶಿಖರವಿದೆ.

ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಹೊರಗಿರುವ ನಂದಿಶಿಲ್ಪ ಇತ್ತೀಚಿನದು.

೨೮

ಊರು ಚಂದನಮಟ್ಟಿ
ಸ್ಥಳ ಬೆನಕನಮಟ್ಟಿ
ಸ್ಮಾರಕ ಪಾರ್ವತಮಲ್ಲೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇಳಿಜಾರಿನ ಬಯಲಿನ ನಡುವೆ ಮಣ್ಣಿನ ಗುಡ್ಡವಿದ್ದು, ಸ್ಥಳೀಯರು ಬೆಂಕನಮಟ್ಟಿ ಅಥವಾ ಬೆನಕನಮಟ್ಟಿ ಎಂದು ಕರೆಯುತ್ತಾರೆ. ಗುಡ್ಡದ ತುದಿಯಲ್ಲಿ ಕಲ್ಲು ಮತ್ತು ಗಾರೆಗಚ್ಚಿನಿಂದ ನಿರ್ಮಿಸಿದ ಸಣ್ಣ ಕೊಠಡಿಯ ದೇವಾಲಯವಿದೆ. ಉಳಿದಂತೆ ಗುಡ್ಡದಲ್ಲಿ ಎತ್ತರದ ಜಾಲಿಮರಗಳು ಬೆಳೆದವೆ. ಕೊಠಡಿಯಲ್ಲಿರುವ ಸಣ್ಣ ಲಿಂಗವನ್ನು ಸುತ್ತಮುತ್ತಲ ಹೊಲಗಳ ಕೃಷಿಕರು ಪೂಜಿಸುತ್ತಾರೆ. ಈ ಲಿಂಗದ ಮುಂಭಾಗದಲ್ಲಿರುವ ನಯಮಾಡಿದ ಆರು ಶಿಲಾಕೊಡಲಿಗಳು ಮತ್ತು ದುಂಡನೆಯ ಕವಣೆಕಲ್ಲನ್ನು ಸಹ ಪೂಜಿಸಲಾಗುತ್ತಿದೆ. ಈ ಶಿಲಾಯುಧೋಪಕರಣಗಳು ನವಶಿಲಾಯುಗ ಕಾಲಕ್ಕೆ ಸೇರಿದ್ದು, ಗುಡ್ಡದ ಸುತ್ತಲಿನ ಹೊಲಗಳಲ್ಲಿ ದೊರೆತಿವೆ. ಇವುಗಳ ನಯಗಾರಿಕೆಗೆ ಮನಸೋತ ರೈತರು, ದೇವರ ಮುಂದಿಟ್ಟು ಪೂಜಿಸುತ್ತಿದ್ದಾರೆ. ಈ ಶಿಲಾಕೊಡಲಿಗಳು ೩ ಅಂಗುಲದಿಂದ ೭ ಅಂಗುಲದವರೆಗೆ ಉತ್ತವಿದ್ದು, ಅವುಗಳ ಎರಡೂ ಪಾರ್ಶ್ವಗಳನ್ನು ಉಚ್ಚಿ ನಯಗೊಳಿಸಲಾಗಿದೆ. ದೇವರ ಮುಂದಿರುವ ಮತ್ತೊಂದು ಅವಶೇಷವೆಂದರೆ ಆಟಿಕೆ ಗಾತ್ರದ ಕಲ್ಲಿನ ಕಳಸ. ಇದರ ಮೇಲೆ ಸೂಕ್ಷ್ಮವಾಗಿ ಮೂರು ಸ್ತ್ರೀಶಿಲ್ಪಗಳನ್ನು ಬಿಡಿಸಲಾಗಿದೆ.

ಪ್ರಸ್ತುತ ಕ್ಷೇತ್ರಕಾರ್ಯದ ಸಂದರ್ಭದಲ್ಲಿ, ನವಶಿಲಾಯುಗ ಸಂಸ್ಕೃತಿಗೆ ಸಂಬಂಧಿಸಿದ ಆಯುಧೋಪಕರಣಗಳನ್ನು ಸಂಗ್ರಹಿಸಲಾಗಿದೆ. ಗುಡ್ಡದ ಸುತ್ತಲಿನ ಹೊಲಗಳಲ್ಲಿ ಈ ಆಯುಧೋಪಕರಣಗಳೊಂದಿಗೆ ಶಾತವಾಹನರ ಕಾಲದ ಚಿತ್ರಿತ ಕೆಂಪುಮಡಿಕೆ ಚೂರುಗಳು ದೊರೆಯುತ್ತವೆ. ಈ ಸ್ಥಳ ಹಳೆ ಊರಿನ ನಿವೇಶನವೆಂದು ಸ್ಥಳೀಯರು ತಿಳಿಸುತ್ತಾರೆ. ಕಾರಣಾಂತರಗಳಿಂದ ಈ ಊರನ್ನು ಈಗಿನ ಚಂದನಮಟ್ಟಿಗೆ ಸ್ಥಳಾಂತರಿಸಲಾಗಿದೆ. ಹೀಗೆ ಬೆಂಕನಮಟ್ಟಿಯು ನವಶಿಲಾಯುಗ ಕಾಯದಿಂದಲೂ ಮನುಷ್ಯರ ವಸತಿನೆಲೆಯಾಗಿತ್ತೆಂಬುದು ಗಮನಾರ್ಹ ಸಂಗತಿ.

ದೇವಾಲಯದ ಮುಂಭಾಗದಲ್ಲಿರವ ಹುಟ್ಟುಬಂಡೆಯ ಮೇಲೆ ಮನುಷ್ಯನ ಹೆಜ್ಜೆಗಳನ್ನು ಹೋಲುವ ಗುರುತುಗಳಿದ್ದು, ಅವು ಮಲ್ಲಯ್ಯನ ಹೆಜ್ಜೆಗಳೆಂದು ಸ್ಥಳೀಯರು ಗುರುತಿಸುತ್ತಾರೆ. ಈ ಬಂಡೆಯಿಂದ ಸ್ಪಲ್ಪ ದೂರದಲ್ಲಿ ತಗ್ಗನ್ನು ಕಾಣಬಹುದು. ಇಲ್ಲಿ ಕಲ್ಲಾಸರೆ ಮತ್ತು ಗವಿಯೊಂದಿದೆ. ಈ ಗವಿಯನ್ನು ಹುಲಿಗವಿ ಎಂದು ಕರೆಯುತ್ತಾರೆ. ದನಗಾಯಿಗಳು ಗವಿಯ ದ್ವಾರವನ್ನು ಕಲ್ಲುಗಳಿಂದ ಮುಚ್ಚಿದ್ದಾರೆ. ಈ ಪರಿಸರದಲ್ಲಿ ಹಂದೆ ಹುಲಿಗಳಿದ್ದವೆಂದು ಸ್ಥಳೀಯರು ತಿಳಿಸುತ್ತಾರೆ. ಜಾಲಿಮರಗಳಿಂದ ತುಂಬಿರುವ ಈ ಪರಿಸರ ಬೇಡೆಗೆ ಯೋಗ್ಯ ಸ್ಥಳವಾಗಿದೆ. ಸಮೀಪದಲ್ಲೆ ಕೆರೆಯೊಂದಿದೆ. ಸ್ವಲ್ಪದೂರದಲ್ಲಿ ಹಳ್ಳಗಳು ಹರಿಯುತ್ತವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ನವಶಿಲಾಯುಗದ ಮಾನವನು ಈ ಗುಡ್ಡದ ನೆತ್ತಿಯ ಇಳಿಜಾರಿನಲ್ಲಿರುವ ತಗ್ಗನ್ನು ತನ್ನ ವಸತಿ ಮತ್ತು ತಕ್ಷಣೆಗಾಗಿ ಬಳಸಿಕೊಂಡಿರಬಹುದು. ಏಕೆಂದರೆ ಈ ತಗ್ಗಿನಲ್ಲಿ ಕುಳಿತ ಹೊರಗಿನವರನ್ನು ನೋಡಬಹುದು. ಆದರೆ ಹೊರಗಿನವರು ಈ ತಗ್ಗಿನಲ್ಲಿರುವವರನ್ನು ಗುರುತಿಸುವುದು ಕಷ್ಟ. ಹಾಗಾಗಿ ಇದು ಬೇಟೆ ಮತ್ತು ರಕ್ಷಣೆಗೆ ಯೋಗ್ಯವಾದ ಸ್ಥಳವಾಗಿತ್ತು. ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಗ್ರಾನೈಟ್‌ಬೆಟ್ಟಗುಡ್ಡಗಳಷ್ಟೇ, ಬಯಲುಸೀಮೆಯ ಮಣ್ಣಿನ ಗುಡ್ಡಗಳು ಸಹ ನವಶಿಲಾಯುಗ ಕಾಳದ ಜನರಿಗೆ ಆಶ್ರಯತಾಣವಾಗಿದ್ದವೆಂಬುದು ಗಮನಾರ್ಹ ಸಂಗತಿ. ಇಂತಹ ಗುಡ್ಡಗಳಲ್ಲಿದ್ದ ಪ್ರಾಕೃತಿಕ ಗವಿಗಳನ್ನು ತನ್ನ ವಾಸಕ್ಕೆ ಬಳಸಿಕೊಳ್ಳುತ್ತಿದ್ದನೆಂದು ಹೇಳಬಹುದು.

೨೯

ಊರು ಚಂದನಮಟ್ಟಿ
ಸ್ಥಳ ಊರ ಮುಂಭಾಗ
ಸ್ಮಾರಕ ಬಸವಣ್ಣದೇವರ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಲಿನಲ್ಲಿ ನಿರ್ಮಿಸಿರುವ ದೇವಾಲಯವಿದು. ಒಳಭಾಗದಲ್ಲಿ ಲಿಂಗ ಮತ್ತು ನಂದಿಯನ್ನು ಪ್ರತಿಷ್ಠಾಪಿಸಿದ್ದಾರೆ. ಹೊರಭಾಗದಲ್ಲಿ ಬಿಲ್ಪವೃಕ್ಷದ ಕೆಳಗೆ ಹಳೆಯ ಲಿಂಗಾವಶೇಷಗಳು ಕಂಡುಬರುತ್ತವೆ.

೩೦

ಊರು ಜೀರಗವಾಡ
ಸ್ಥಳ ಊರ ನಡುವೆ
ಸ್ಮಾರಕ ಬಸವೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಗರ್ಭಗೃಹವು ಪ್ರದಕ್ಷಿಣಾ ಪಥವನ್ನು ಹೊಂದಿದೆ. ಇದು ಮಾಳಿಗೆ ಶೈಲಿಯ ಕಟ್ಟಡವಾಗಿದ್ದು, ಚಾವಣಿಯನ್ನು ಶಿಸ್ತಾದ ಕಲ್ಲಿನ ಹಲಗೆ, ಮರದ ಜಂತಿ, ತೊಲೆ ಮತ್ತು ಕಂಬಗಳನ್ನು ಬಳಸಿ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಇತ್ತೀಚಿನ ನಂದಿಶಿಲ್ಪವಿದೆ. ಸಭಾಗೃಹದ ಗೋಡೆಯಲ್ಲಿ ಸಪ್ತಮಾತೃಕೆಯ ಶಿಲ್ಪಫಲಕವನ್ನು ಅಳವಡಿಸಲಾಗಿದೆ. ಹಳೆಯದೆನ್ನಬಹುದಾದ ಸಣ್ಣ ಲಿಂಗವಿದೆ. ಹೊರಗೆ ಮರದ ಕೆಳಗೆ ಹಳೆಯ ದೇವಾಲಯದ ಕಂಬವನ್ನು ಕಾಣಬಹುದು. ಇಲ್ಲಿನ ಶಿಲ್ಪ ಮತ್ತು ವಾಸ್ತು ಅವಶೇಷಗಳಿಂದ, ಇಲ್ಲಿ ಹಳೆಯ ದೇವಾಲಯವಿದ್ದ ಸೂಚನೆಗಳು ದೊರೆಯುತ್ತವೆ.