ಕರ್ನಾಟಕದ ನೃತ್ಯ ಪರಂಪರೆ ಎಂದರೆ ಸಾಧಾರಣವಾಗಿ ಅದಕ್ಕೆ ಅನ್ವಯವಾಗುವುದು ಭರತನಾಟ್ಯ. ಅಂದರೆ ಹಿಂದಿನ ಮೈಸೂರು ರಾಜ್ಯದಲ್ಲಿ ನೃತ್ಯವೆಂದರೆ ಆ ಭವ್ಯ ನೃತ್ಯ ಪದ್ಧತಿಯೇ ನಿಜ. ಉತ್ತರ ಕರ್ನಾಟಕದ ಭಾಗದಲ್ಲಿ ಸ್ವಲ್ಪ ಕಾಲ ಲಕ್ನೋ ಘರಾಣೆಯ ಪರಿಣಿತ ಮೋಹನ್ ಕಲ್ಯಾಣ್‌ಪೂರ್‌ರ ಪ್ರಭಾವದಿಂದ ಕಥಕ್ ಶೈಲಿ ವಿಜೃಂಭಿಸಿತು. ಆದರೆ ಆ ಖ್ಯಾತಿ ಉತ್ತರ ಭಾರತದ ಶೈಲಿ ಬೆಳೆಯಲಿಲ್ಲ. ಉಳಿಯಲೂ ಇಲ್ಲ ಎಂದರೂ ತಪ್ಪಾಗಲಾರದು. ಅದಕ್ಕಿಂತ ತಮ್ಮನೃತ್ಯಶಾಲೆಯನ್ನು ಸ್ಥಾಪಿಸಿ, ತಮ್ಮ ಸಿನಿಮಾ ಸಂಬಂಧದಿಂದ ಚೈನ್ನೈನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ ಶ್ರೀನಿವಾಸ ಕುಲಕರ್ಣಿ ಅವರ ಪ್ರಭಾವದಿಂದ ಶ್ರೀಯುತರು ಹೇಳಿಕೊಳ್ಳುವಷ್ಟು ಪರಿಣಾಮಕಾರಿ ಕಲಾವಿದ ಎನಿಸಿಕೊಳ್ಳದಿದ್ದರೂ ಆ ಶೈಲಿ ಸ್ವಲ್ಪಮಟ್ಟಿಗೆ ಆ ಭಾಗದಲ್ಲಿ ಜನಪ್ರಿಯವಾಗಲು ನೆರವಾದರು ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಪರಂಪರೆ ಎನ್ನಲು ಯೋಗ್ಯವಾದ ಹಿನ್ನೆಲೆ ಉಳ್ಳ ಶೈಲಿ ಎಂದರೆ ಅದು ಭರತನಾಟ್ಯ ಎಂದು ಧಾರಾಳವಾಗಿ ಹೇಳಬಹುದು.

ಈ ಕೆಲವು ಕಾರಣಗಳಿಂದ ಕರ್ನಾಟಕದಲ್ಲಿ ನೃತ್ಯ ಪರಂಪರೆ ಎನ್ನುವಾಗ ಅಲ್ಲಿ ಪ್ರಸ್ತುತ ಎನ್ನುವ ಶೈಲಿ ಭರತನಾಟ್ಯ. ಆದರೆ ಇಂತಹ ಪರಂಪರೆಯಲ್ಲಿ ರಾರಾಜಿಸುವ ಹೆಸರು ಹೊಯ್ಸಳರ ರಾಣಿ ಶಾಂತಲಾರವರದು. ಈ ಹೆಮ್ಮೆಯ ಕಲಾವಿದೆ ಯಾವ ಶೈಲಿಯನ್ನು ಪ್ರತಿಪಾದಿಸುತ್ತಿದ್ದರು? ಆ ದಿನಗಳಲ್ಲಿ ಪ್ರಚಲಿತವಿದ್ದ ಶೈಲಿಗಳಾವುವು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳಬೇಕು. ಅದು ನೃತ್ಯವನ್ನವಲಂಬಿಸಿತ್ತೋ, ನಾಟ್ಯವನ್ನವಲಂಬಿಸಿತ್ತೋ ಎಂಬುದೂ ಅನಿಶ್ಚಿತ. ಆ ಕಾಲದ ಶಿಲ್ಪಕಲಾವೈಭವದಿಂದ ನಿರೂಪಣೆಯಲ್ಲಿ ನೃತ್ಯಭಂಗಿಗಳಿಗಿದ್ದ ಪ್ರಮುಖ ಸ್ಥಾನವನ್ನು ಊಹಿಸಬಹುದು. ಅವುಗಳಲ್ಲಿ ಕಂಡುಬರುವ ಪಾದ, ಹಸ್ತ, ವಿನ್ಯಾಸಗಳು, ಶಿರೋಭೇದಗಳಲ್ಲಿ ಭರತನಾಟ್ಯದ ಹೊಳಹು ಮಾತ್ರ ಸ್ಪಷ್ಟ. ಅಂದರೆ ಆ ಶೈಲಿ ಭರತನಾಟ್ಯಕ್ಕಿಂತ ಭಿನ್ನವಾಗಿರಲಿಲ್ಲ ಎಂದೂ ಊಹಿಸಬಹುದು. ಆದರೆ ಶಾಂತಲಾ ಶ್ರೇಷ್ಠ ಕಲಾವಿದೆ ಎನಿಸಿ ಚರಿತ್ರಾರ್ಹ ವ್ಯಕ್ತಿಯಾದರೂ, ಆಕೆ ಯಾವುದೇ ಶಿಷ್ಯಸಂಪತ್ತಿನ ವಾರಸುದಾರರಾಗಲಿಲ್ಲ. ಅಂದರೆ ಆ ಶೈಲಿ ಒಂದು ಪರಂಪರೆ ಎನಿಸಿಕೊಳ್ಳಲಿಲ್ಲ. ಇದಕ್ಕೆ ಮುಂಚೆ ಚಾಲುಕ್ಯರ ಆ ಸ್ಥಾನದಲ್ಲಿ ನಾಟ್ಯಾಚಾರ್ಯ ಎನಿಸಿದ್ದ ಅಚಲರೂ ಇದಕ್ಕೆ ಬೇರೆ ಎನ್ನುವಂತಿಲ್ಲ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಒಂದು ಪರಂಪರೆ ರೂಪತಾಳಿದ್ದು, ಮೈಸೂರಿನ ಒಡೆಯರ ಆಸ್ಥಾನದಲ್ಲಿ ಇಂತಹಪರಂಪರೆ ರೂಪಗೊಳ್ಳುವ ಮೊದಲು. ಅಂದರೆ ಹಿಂದಿನ ಶತಮಾನದ ಇಪ್ಪತ್ತರ ದಶಕದಲ್ಲಿ ಅಂದಿನ ಮದರಾಸು ಪ್ರಾಂತದ ಸರಕಾರ ಆಜ್ಞೆಯನ್ನನುಸರಿಸಿ, ಮೈಸೂರಿನಲ್ಲಿ ನೃತ್ಯಕಲೆಯ ಮೇಲೆ ಪ್ರತಿಬಂಧಕಾಜ್ಞೆಯನ್ನು ಜಾರಿಮಾಡಲಾಗಿತ್ತು. ಆಗ ಮದರಾಸಿನಲ್ಲಿ ದೇವದಾಸಿಯರು ಈ ಪುರಾತನ ಕಲೆಯ ಪ್ರತಿಪಾದಕರಾಗಿದ್ದರೆ, ಮೈಸೂರಿನಲ್ಲಿ ಅವರು ನಾಯಕಸಾನಿಯರು ಎನಿಸಿಕೊಂಡು ರಾಜಾಸ್ಥಾನದಲ್ಲಿ ವಿರಾಜಮಾನರಾಗಿದ್ದರು. ದೇವದಾಸಿಯರ ಕಾರ್ಯಕ್ಷೇತ್ರ ಅಲ್ಲಿನ ದೇವಾಲಯಗಳು. ಅಂದರೆ ಈ ಆಜ್ಞೆಯಿಂದ ಅವರು ನಿರ್ಗತಿಕರಾದರು. ಮೈಸೂರಿನಲ್ಲಿ ಪರಿಸ್ಥಿತಿ ಅಷ್ಟು ಶೋಚನೀಯವಾಗಿರಲಿಲ್ಲ. ಆಸ್ಥಾನದಲ್ಲಿ ನೃತ್ಯಾಧಾರಿತ ಚಟುವಟಿಕೆಗಳು ಕುಂಠಿತವಾದರೂ, ಅವರ ಯೋಗಕ್ಷೇಮವನ್ನು ರಾಜಾಸ್ಥಾನ ಕಡೆಗಣಿಸಲಿಲ್ಲ. ಅಂದರೆ ನೃತ್ಯಕಲೆ ನಶಿಸಿಹೋಗದೆ ಅವರ ಗುರುಮನೆಗಳಲ್ಲಿ ಪೋಷಣೆಯಲ್ಲಿ ಊರ್ಜಿತವಾಗಿತ್ತು.

ಮುಂದೆ 1934-35ರ ಸುಮಾರಿನಲ್ಲಿ ಚನ್ನೈನಲ್ಲಿ ಶ್ರೀಮತಿ ರುಕ್ಮಿಣಿದೇವಿ ಅರುಂಡೇಲ್ ಹಾಗೂ ಇ. ಕೃಷ್ಣಅಯ್ಯರ್ ಅವರುಗಳ ತಂತ್ರದಿಂದ ಅಲ್ಲಿನ ಸರಕಾರ ತನ್ನ ಪ್ರತಿಬಂಧಕಾಜ್ಞೆಯನ್ನು ಅನೂರ್ಜಿತಗೊಳಿಸಿತು. ಎಂದಿನಂತೆ ಅದನ್ನನುಸರಿಸಿ, ಮೈಸೂರು ಸರಕಾರವೂ ಮುಚ್ಚುಮರೆ ಇಲ್ಲದೆ ಸಂತೋಷದಿಂದ ತಾನೂ ಆ ಬಹಿಷ್ಕಾರವನ್ನು ತೆರವುಗೊಳಿಸಿತು.

ಈ ಸಂದರ್ಭದಲ್ಲಿ ರುಕ್ಮಿಣಿದೇವಿ-ಕೃಷ್ಣ ಅಯ್ಯರ್‌ರು ಹೂಡಿದ ತಂತ್ರದ ಬಗ್ಗೆ ಒಂದೆರಡು ವಾಕ್ಯಗಳು ಅಪ್ರಸ್ತುತ ಎನಿಸಲಾರದು. ಈರ್ವರೂ ಗಣ್ಯವ್ಯಕ್ತಿಗಳು. ಕೃಷ್ಣ ಅಯ್ಯರ್ ಹಿರಿಯ ವಕೀಲರಾದರೆ, ರುಕ್ಮಿನಿ ತಮಿಳುನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಉದ್ದಾಮ ಪಂಡಿತ ನೀಲಕಂಠಶಾಸ್ತ್ರಿಗಳ ಮಗಳು. ಇಬ್ಬರೂ ನೃತ್ಯ ಪರಿಣಿತರು. ಅಂದಿನ ಬ್ರಿಟಿಷ್ ಸರಕಾರ ಆ ಪ್ರತಿಬಂಧಕವನ್ನು ಹೇರಿದ್ದ ಕಾರಣ ಸೈದ್ಧಾಂತಿಕ ಎಂದು ಪರಿಗಣಿಸುವಂತಿರಲಿಲ್ಲ. ಅದರಲ್ಲಿ ಸ್ವಾರ್ಥತೆ ಸುಲಭಗ್ರಾಹ್ಯ. ನಮ್ಮ ಕಲೆ ವಿಷಯ ಲೋಲುಪತೆಯನ್ನು ಪ್ರಚೋದಿಸುತ್ತದೆ ಎಂಬ ಸೋಗನ್ನೊಡ್ಡಿ, ತಮ್ಮ ನೃತ್ಯಪ್ರಕಾರವನ್ನೂ ನಮ್ಮ ಮೇಲೆ ಹೇರುವುದೇ ಅವರ ಉದ್ದೇಶವಾಗಿತ್ತು. ತಮ್ಮ ಕುಶಾಗ್ರಮತಿಯಿಂದ ಈರ್ವರು ಪ್ರವರ್ತಕರು ಬ್ರಿಟಿಷ್ ಆಡಳಿತಗಾರರಿಗೆ ಮಣ್ಣೆರಚಿ, ನಮ್ಮನೃತ್ಯ ಪದ್ಧತಿ ಇಂದ್ರಿಯಾಗತ ಅಲ್ಲವೆಂದೂ, ಅದು ಕೇವಲ ಭಕ್ತಿಪ್ರಧಾನವೆಂದೂ ಪ್ರತಿಪಾದಿಸಿ, ಆ ಸುಗ್ರೀವಾಜ್ಞೆಯನ್ನು ಅನೂರ್ಜಿತಗೊಳಿಸಿ, ನಮ್ಮ ಭವ್ಯ ಕಲೆಯ ಪುನರುತ್ಥಾನಕ್ಕೆ ಕಾರಣೀಭೂತರಾದರು. ಇಲ್ಲಿ ರುಕ್ಮಿಣಿ ತಮ್ಮ ತಂತ್ರಕ್ಕೆ ಭಕ್ತಿಪೂರಕವಾಗಿ “ಭಕ್ತಿ ಶೃಂಗಾರ” ಎಂದು ವ್ಯಾಖ್ಯಾನಿಸಿದ್ದು, ಅವರ ವಾದವನ್ನು ಪುಷ್ಟೀಕರಿಸಿತ್ತು.

ಆ ಸುಮಾರಿನಲ್ಲಿ ಮೈಸೂರಿನಲ್ಲೂ ನಮ್ಮ ನೃತ್ಯಕಲೆ ಅಸ್ತಂಗತವಾಗಿರಲಿಲ್ಲ. ಖ್ಯಾತ ಭರತನಾಟ್ಯ ಕಲಾವಿದೆ ಜಟ್ಟಿ ತಾಯಮ್ಮ ಒಂದು ಕಡೆ ಪ್ರವರ್ಧಮಾನಕ್ಕೆ ಬರುತ್ತಿದ್ದರೆ, ಮತ್ತೊಂದು ಕಡೆ ಸಂಗೀತ, ನೃತ್ಯ ಎರಡರಲ್ಲೂ ಪರಿಣತಿ ಪಡೆದ ಮೂಗೂರಿನ ಮನೆತನದವರು ತಮ್ಮ ಪತಾಕೆಯನ್ನು ಹಾರಿಸಿದ್ದರು. ಇತ್ತ ಬೆಂಗಳೂರಿನ ಸುತ್ತಮುತ್ತ ಕೋಲಾರದ ಕಿಟ್ಟಣ್ಣ, ಪುಟ್ಟಪ್ಪ ಮುಂತಾದ ನಟುವನಾರ್‌ಗಳು ತಮ್ಮ ಶಿಷ್ಯರನೇಕರಿಂದ “ತಾಪೆ” ಅನ್ನು ಪ್ರದರ್ಶಿಸುತ್ತಾ ಜನಮನವನ್ನು ಗೆದ್ದಿದ್ದರು. ನಗರದ ಬಳೇಪೇಟೆ/ಕಿಲಾರಿ ರಸ್ತೆ ಆಜುಬಾಜಿನಲ್ಲಿ ದಂಡಿನ ಫ್ರೇಸರ್ ಟೌನ್ ಬಡಾವಣೆಯಲ್ಲಿ ಕುಂಚಿಟಿಗರ ವಿವಾಹ ಮಹೋತ್ಸವಗಳಲ್ಲಿ ಇತ್ತೀಚಿನವರೆಗೂ ಇಂತಹ ತಾಪೆಗಳನ್ನು ನೋಡಬಹುದಿತ್ತು. ಈ ದೃಷ್ಟಿಯಿಂದ ಇಲ್ಲಿನ ಪರಂಪರೆ ಎರಡು ಹಂತಗಳಲ್ಲಿ ಪಸರಿಸುತ್ತಿತ್ತು ಎಂದು ಊಹಿಸಬಹುದು. ತಮ್ಮ “ನೆನಪಿನಂಗಳದಲ್ಲಿ” ಮಾನ್ಯ ಡಿವಿಜಿಯವರು ನಮೂದಿಸಿರುವ ಮುಳುಬಾಗಿಲಿನ ನಾಯಕಸಾನಿಯರೂ, ಇದೇ ಕಿಟ್ಟಣ್ಣ ಪುಟ್ಟಪ್ಪನವರ ಮನೆತನಕ್ಕೆ ಸೇರಿದವರೇ ಎಂಬುದೂ ನಿಜ. ಆ ಮನೆತನದ ನೆಲಮಂಗಲದ ಗುಂಡಪ್ಪ, ನಂತರ ಈ ಎರಡೂ ಶೈಲಿಗಳನ್ನು ಸಾಮರಸ್ಯ ಎಂದರೆ, ನೃತ್ಯಕ್ಕಿಂತ ಅಭಿನಯದತ್ತ ಹೆಚ್ಚಿನ ಒಲವು, ಮೈಸೂರಿನ ರಾಜಾಸ್ಥಾನ, ಅರಮನೆಯ ಬಂಧುಬಳಗ, ಗುರು ಮನೆಗಳಲ್ಲಿ ಇತ್ತಕಡೆಯ ನರ್ತಕಿಯರು ವಿವಿಧ ಅಭಿನಯ ಪ್ರಕಾರಗಳಾದ ವಿವರಣಾತ್ಮಕ, ಕಥಾನಕ, ಮತ್ತು ಪದಾಭಿನಯಕ್ಕೆ ನೆರವಾಗುವ ಪದ, ಜಾವಳಿಗಳನ್ನೇ ಬಳಸುತ್ತಿದ್ದರು. ಒಂದೇ ವ್ಯತ್ಯಾಸವೆಂದರೆ ಮೈಸೂರಿನ ಸನ್ನಿವೇಶದಲ್ಲಿ, ಸಂದರ್ಭಗಳಿಗನುಗುಣವಾಗಿ ಹೆಚ್ಚಾಗಿ ಕುಳಿತೇ ಅಭಿನಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ಈ ಭಾಗದಲ್ಲಿ ವಧೂ-ವರರ ಮೆರವಣಿಗೆಯಲ್ಲಿ ನರ್ತಿಸಬೇಕಾಗುತ್ತಿದ್ದುದರಿಂದ, ಚಲಿಸುತ್ತಲೇ ಅಭಿನಯವನ್ನು ನರ್ತಿಸುತ್ತಿದ್ದರು. ಕೀರ್ತಿವಂತ ಡಾ|| ಕೆ.ವೆಂಕಟಲಕ್ಷ್ಮಮ್ಮನವರೇ ಹೇಳುತ್ತಿದ್ದಂತೆ ಈ ಕಡೆಯ ಶೈಲಿ ಬೆಳಗಿದ್ದು, ಅಭಿನಯದಿಂದಲೇ ಅದರಲ್ಲೂ ಪದ, ಜಾವಳಿ, ಶ್ಲೋಕ ಮತ್ತು ಅಷ್ಟಪದಿಗಳ ಮೂಲಕ. ನೃತ್ಯದ ಪುಷ್ಟಿ ಇದಕ್ಕೆ ದೊರಕಿದ್ದು ತಂಜಾವೂರಿನ ಕಂಚೀಪುರಂ ನಟುವನಾರ್ ಗಳ ಪ್ರಭಾವದಿಂದ. ಭರತನಾಟ್ಯಕ್ಕೆ ಒಂದು ಸಂಪೂರ್ಣತೆ ದೊರತದ್ದು ಆ ಮೂಲಕವೇ ಎಂದೂ ಅವರು ಮನವರಿಕೆ ಮಾಡಿದ್ದುಂಟು.

ಆಗ, ಅಂದರೆ ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಜಟ್ಟಿ ತಾಯಮ್ಮ ಆಸ್ಥಾನ ಕಲಾವಿದೆ. ಅರಮನೆಯಲ್ಲದೆ, ಒಡೆಯರ ಸಂಬಂಧಿಕರ ಮನೆಗಳಲ್ಲೂ ವಿಶೇಷ ಸಂದರ್ಭಗಳಲ್ಲಿ ಇವರು ನರ್ತಿಸುತ್ತಿದ್ದುದುಂಟು. ಈ ಲೇಖಕನನು ವಾಸಿಸುತ್ತಿದ್ದ ಚಾಮರಾಜಪುರಂನ ಅತಿ ಸಮೀಪದಲ್ಲಿ ಅಳಿಯ ಲಿಂಗರಾಜರೂ, ದರ್ಬಾರ್ ಬಕ್ಷಿ ಎಚ್.ಎಲ್. ದೇವರಾಜ ಅರಸರೂ ವಾಸಿಸುತ್ತಿದ್ದರು. ಆಗಿನ್ನೂ ಮಾಧ್ಯಮಿಕ ಶಾಲೆಯನ್ನು ಪ್ರವೇಶಿಸಿದ್ದ ಈತ ಸಂದರ್ಭ ಒದಗಿದಾಗಲೆಲ್ಲಾ ಇವರುಗಳ ಬೈಠಕ್ ಖಾನೆಗೆ ನುಸುಳಿ ತಾಯಮ್ಮನವರ ನೃತ್ಯವನ್ನು ನೋಡಿ ಆಕರ್ಷಿತನಾಗಿದ್ದ. ಆದರೆ ತಾಯಮ್ಮನವರಿಗಿಂತ ಈತನ ಗಮನ ಸೆಳೆದಿದ್ದು ಆಕೆಯ ಶ್ರೇಷ್ಠ ಶಿಷ್ಯರೆನಿಸಿದ ಸುಂದರಮ್ಮ ಮತ್ತು ಗೌರೀ. ತಾಯಮ್ಮ ಕುಳಿತೇ ಸೊಗಸಾಗಿ ಅಭಿನಯಿಸುತ್ತಿದ್ದರೆ ಇವರೀರ್ವರೂ ಅಂದವಾಗಿ ಹೆಜ್ಜೆಗಳನ್ನು ಹಾಕುತ್ತಾ, ಹಾಡಿಕೊಂಡು ನರ್ತಿಸುತ್ತಿದ್ದರು. ಈರ್ವರೂ ತಾರುಣ್ಯದಲ್ಲೇ ವಿಶ್ರಮಿಸಿದ್ದು ದುರಾದೃಷ್ಟಕರ. ಇವರುಗಳ ನಂತರ ತಾಯಮ್ಮನವರ ಶಿಷ್ಯರಲ್ಲಿ ಕೀರ್ತಿಶೇಷ ಡಾ|| ವೆಂಕಟಲಕ್ಷ್ಮಮ್ಮ ಹಾಗೂ ಎಸ್‌.ಎನ್. ಸ್ವಾಮಿ ಹೆಸರಾಂತರು. ವೆಂಕಟಲಕ್ಷ್ಮಮ್ಮನವರಂತೂ ತಾಯಮ್ಮನವರ ಹಿರಿಮೆಯನ್ನು ಮುಂದುವರಿಸಿದರಲ್ಲದೇ, ಅದನ್ನು ಬೆಳಗಿಸಿ, ಒಂದು ಶಿಷ್ಯ ಸಮೂಹದ ಸೃಷ್ಟಿಗೇ ಕಾರಣರಾದರು. ಸ್ವತಃ ಪ್ರತಿಭಾವಂತ ನರ್ತಕಿಯಾಗಿದ್ದರಲ್ಲದೇ, ಇವರ ಶಿಷ್ಯರಲ್ಲಿ ಕೆಲವರು ಅವರ ವಿಶಿಷ್ಟಕಲೆಯ ನೆನಪನ್ನುಳಿಸಲು ಯಶಸ್ವಿಯಾಗಿದ್ದರೆ. ಅವರಲ್ಲಿ ಶಕುಂತಲಾ, ಲಲಿತಾ ಶ್ರೀನಿವಾಸನ್ ಅವರನ್ನು ಹೆಸರಿಸಬಹುದು.

ಅದೇ ಸಮಯದಲ್ಲಿ ಮೈಸೂರಿನ ಆಸ್ಥಾನ ಕಲಾವಿದೆಯ ಪಟ್ಟವನ್ನು ಅಲಂಕರಿಸಿದ ಮತ್ತೊಬ್ಬ ನರ್ತಕಿ ಜೇಜಮ್ಮ. ಮೂಗೂರಿನ ಮನೆತನಕ್ಕೆ ಸೇರಿದ ಈಕೆಯ ಅಭಿನಯವೂ ಶ್ರೇಷ್ಠಮಟ್ಟದ್ದು. ಈಕೆಯ ಬಳುಕುವ ಶರೀರ ಈಕೆ ನರ್ತಿಸುವಾಗ ಪೂರ್ಣವಿಕಾಸಗೊಂಡು ಅಪೂರ್ವ ಶೋಭೆಯಿಂದ ಕೂಡಿರುತ್ತಿತ್ತು. ಜೇಜಮ್ಮನವರ ಮುಖಾಭಿನಯ ಎಷ್ಟು ಪ್ರಭಾವಶಾಲಿ ಎಂದರೆ ದುರದೃಷ್ಟವಶಾತ್ ಈಕೆ ದೃಷ್ಟಿಹೀನರಾದಾಗಲೂ ಭಾವ, ಅನುಭಾವಗಳು ಸುಸ್ಪಷ್ಟವಾಗಿ, ಕೇವಲ ಮುಖಸಾಮುದ್ರಿಕೆಯಿಂದಲೇ ಪ್ರಕಟವಾಗಿರುತ್ತಿತ್ತು. ಇವರಿಂದ ಅನೇಕ ಸಮಕಾಲೀನ ನರ್ತಕ/ನರ್ತಕಿಯರು ಇವರ ಸಲಹೆಗಳನ್ನು ಗಳಿಸಿ ಉಪಕೃತರಾಗಿದ್ದಾರೆ.

ಹೀಗೆ, ಈ ಭಾಗದಲ್ಲಿ ವ್ಯವಸ್ಥಿತವಾಗಿ ಆರಂಭವಾದ ನೃತ್ಯಶಾಲೆ ಸೋಹನ್‌ಲಾಲ್ ನೃತ್ಯ ಕಲಾಶಾಲಾ! ಅದು ಮಲ್ಲೇಶ್ವರದಲ್ಲಿ ಸ್ಥಾಪಿತವಾಯಿತು. ಅದೇ ಮೊದಲ ನೃತ್ಯಶಾಲೆ ಎಂಬುದೂ ನಿಜ! ಅಲ್ಲಿಂದ ಶುರುವಾಯಿತು ಒಂದು ಹೊಸಯುಗ. ರಾಂಗೋಪಾಲ್ ರೇ ಬೆನ್ಸನ್ ಟೌನ್‌ನ ತಮ್ಮ ಗೃಹದಲ್ಲಿ “ಸ್ಟುಡಿಯೋ” ಆರಂಭಿಸಿದರು. ಆ ಮುಂದೆ ನೃತ್ಯ ಚಟುವಟಿಕೆ ಚುರುಕುಗೊಂಡಿತು. ವಿಶ್ವೇಶ್ವರಪುರಂನಲ್ಲಿ ಲಲಿತಾದೊರೆ, ಬಸವನಗುಡಿಯಲ್ಲಿ ವಿ.ಎಸ್. ಕೌಶಿಕ್, ಮಲ್ಲೇಶ್ವರಂನಲ್ಲಿ ಎಚ್‌.ಆರ್. ಕೇಶವಮೂರ್ತಿ, ಗಾಂಧಿನಗರದಲ್ಲಿ ಯು.ಎಸ್.ಕೃಷ್ಣರಾವ್ ದಂಪತಿಗಳು, ದಂಡಿನಲ್ಲಿ ಮಾಣಿಕ್ಯಂ ಹೀಗೆ ಭರತನಾಟ್ಯ ತರಗತಿಗಳು ಪ್ರಾರಂಭಗೊಂಡವು. ಮೊದಲಿಗೆ ಹಿಂಜರಿಯುತ್ತಿದ್ದ ಸಂಪ್ರದಾಯಸ್ತ ಮನೆತನದವರೂ ತಮ್ಮ ಹೆಣ್ಣು ಮಕ್ಕಳಿಗೆ ನೃತ್ಯವನ್ನು ಕಲಿಸಲು ಪಕ್ರಮಿಸಿದರು. ಸ್ವಲ್ಪ ಸ್ವಲ್ಪವಾಗಿ ನೃತ್ಯ ಪ್ರದರ್ಶನಗಳೂ ನಡೆಯಲಾರಂಭಿಸಿದವು. ಇದೇ ಸಮಯದಲ್ಲಿ ರಾಂಗೋಪಾಲ್ ಹಾಗೂ ಸ್ವಲ್ಪಕಾಲ ಅವರ ತಂಡದಲ್ಲಿ ನರ್ತಿಸುತ್ತಿದ್ದ ಮೃಣಾಲಿನಿ ಸ್ವಾಮಿನಾಥನ್ (ಮುಂದೆ ಸಾರಾಭಾಯಿ) ರವರುಗಳ ಅಪೇಕ್ಷೆಯಂತೆ. ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೆಯವರ ಹಿರಿಯ ಶಿಷ್ಯ ಕಾಟ್ಟುಮನ್ನಾರ್ ಗುಡಿ ಮುತ್ತುಕುಮಾರನ್ ಪಿಳ್ಳೆ ಹಾಗೂ ಕಾಂಚೀಪುರಂನ ಎಲ್ಲಪ್ಪ ಪಿಳ್ಳೆ ನಗರದಲ್ಲಿ ನೆಲೆಸಿ ಇವರೀರ್ವರಿಗೂ ನೃತ್ಯ ತರಬೇತಿಗೆ ಕಾರಣರಾದರು. ಈರ್ವರೂ ಪ್ರಥಮವಾಗಿ ಪಂದನಲ್ಲೂರಿನ ಹೆಸರಾಂತ ಗುರು ಮೀನಾಕ್ಷಿ ಸುಂದರಂ ಪಿಳ್ಳೆಯವರ ಮಾರ್ಗದರ್ಶನ ಪಡೆದಿದ್ದರು.

ಅದೇ ಸಮಯದಲ್ಲಿ ಇವರುಗಳಿಗೂ ಮೊದಲಿನಿಂದ ಮೀನಾಕ್ಷಿ ಸುಂದರಂ ಪಿಳ್ಳೆಯವರಲ್ಲಿ ನೃತ್ಯಾಭ್ಯಾಸ ಮಾಡಿದ ನಾಡಿನ ಹೆಸರಾಂತ ನರ್ತಕಿ ಶಾಂತಾರಾವ್‌ರ ಪ್ರದರ್ಶನ ಹೆಚ್ಚಿನ ವೀಕ್ಷಕರನ್ನು ಆಕರ್ಷಿಸಿತ್ತು. ಪ್ರಶಂಸೆಯನ್ನು ಗಳಿಸಿತು. ಪರಿಣಾಮವಾಗಿ ಮಂಗಳೂರಿನವರಾದ ಶಾಂತ ಬೆಂಗಳೂರಿನಲ್ಲೇ ನೆಲೆಸುವಂತಾದರು. ಪಂದನಲ್ಲೂರಿನ ಗುರುಮನೆಯ ಒಳಗೆ ಬೆಳೆಯುತ್ತಾ ಬಂತು.

ಅದೇ ಸುಮಾರಿನಲ್ಲಿ ಈ ಹಿಂದೆಯೇ ರಾಂಗೋಪಾಲ್‌ರ ತಂಡದಲ್ಲಿ ನರ್ತಿಸಿ, ಗಾಂಧಿನಗರದಲ್ಲಿ ನೃತ್ಯ ತರಗತಿಗಳನ್ನು ಜರುಗಿಸುತ್ತಾ, ಅಲ್ಲಲ್ಲಿ ಭರತನಾಟ್ಯದ ಬಗ್ಗೆ ಪ್ರಾತ್ಯಕ್ಷಿಕೆಗಳನ್ನಿತ್ತು ಜನಪ್ರಿಯರಾಗುತ್ತಿದ್ದ ಪ್ರೊ. ಯು.ಎಸ್. ಕೃಷ್ಣರಾವ್ ದಂಪತಿಗಳೂ ಅದೇ ಗುಂಪಿಗೆ ಸೇರಿದವರೆನ್ನಬಹುದು. ಪತ್ನಿ ಚಂದ್ರಭಾಗಾದೇವಿ ತಮ್ಮ ಹುಟ್ಟೂರಾದ ಮಂಗಳೂರಿನಲ್ಲಿ ಮೊದಲಿಗೆ ನೃತ್ಯಕ್ಕೆ ಪಾದಾರ್ಪಣೆ ಮಾಡಿ, ಶಿವರಾಮ ಕಾರಂತರ ಹಲವು ನೃತ್ಯಭ್ಯಾಸ ಮಾಡಿ, ರಾಂಗೋಪಾಲ್‌ರ ಜೊತೆಗೂಡಿ ಚಿಕ್ಕ-ಪುಟ್ಟ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಯೋಗಾಯೋಗವೆಂಬಂತೆ ಪದವೀಧರರಾದ ಈರ್ವರೂ ವಿವಾಹವಾಗಿ, ಮುಂದೆ ಪಂದನಲ್ಲೂರಿನಲ್ಲಿ ಗುರು ಮೀನಾಕ್ಷಿ ಸುಂದರಂರಿಂದಲೂ ಮಾರ್ಗದರ್ಶನ ಪಡೆದರು. ನಗರಕ್ಕೆ ಹಿಂದಿರುಗಿದ ನಂತರ ಕೃಷ್ಣರಾವ್ ಕಾಲೇಜಿನಲ್ಲಿ ಉಪನ್ಯಾಸಕರಾದರೂ, ತಮ್ಮ ಪ್ರವೃತ್ತಿಯನ್ನು ಕೈಬಿಡಲಿಲ್ಲ. ಅವರ “ಮಹಾಮಾಯ” ನೃತ್ಯಶಾಲೆ ಮುಂದೆ, ಬೆಂಗಳೂರು ಅರಮನೆಯ ಸಮೀಪ ತನ್ನ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡು, ತನ್ನ ಶಿಕ್ಷಣ ಪ್ರದರ್ಶನ ಕಾರ್ಯದಲ್ಲಿ ಗಣನೀಯವಾಗಿ ಮುಂದುವರಿಸಿ, ಹಲವಾರು ಪ್ರತಿಭಾವಂತ ನರ್ತಕ/ನರ್ತಕಿಯರು ಬೆಳಕಿಗೆ ಬರಲು ಕಾರಣವಾಯಿತು. ಇವರ ಶಿಷ್ಯರಲ್ಲನೇಕರು ದೇಶ-ವಿದೇಶಗಳಲ್ಲಿ ಇಂದಿಗೂ ಶಿಕ್ಷಣ ಪ್ರದರ್ಶನ ನಿರತರಾಗಿದ್ದಾರೆ. ಅವರಲ್ಲಿ ಈಗ ದೆಹಲಿಯಲ್ಲಿ ನೆಲೆಸಿರುವ ಪ್ರತಿಭಾ ಪ್ರಹ್ಲಾದ್, ಕೆನಡಾದ ಮಾಂಟ್ರೆಯಲ್‌ನಲ್ಲಿ ಕೆಲವು ವರ್ಷಗಳಿಂದ ನೃತ್ಯ ಶಾಲೆಯನ್ನು ನಡೆಸುತ್ತಿರುವುದರಲ್ಲದೇ ಪ್ರದರ್ಶನಗಳಲ್ಲೂ ತೊಡಗಿಸಿಕೊಂಡಿರುವ ಶೀಲಾರಾವ್ ಅವರು ಖ್ಯಾತನಾಮರು. ಹೀಗೆ ಮಹಾಮಾಯಾದ ಶಿಕ್ಷಣ ಪಡೆದು ನಗರದಲ್ಲಿ ನೃತ್ಯಶಾಲೆಯೊಂದನ್ನಾರಂಭಿಸಿ, ಯಶಸ್ವಿಯಾದ ಮತ್ತೊಬ್ಬ ಕಲಾವಿದೆ ರಾಧಾ ಶ್ರೀಧರ್. ಇವರ ವೆಂಕಟೇಶ ನಾಟ್ಯಮಂದಿರ ಈಗಾಗಲೇ ತನ್ನ ಮೂವತ್ತನೇ ವರ್ಷದ ಉತ್ಸವವನ್ನು ವಿಜೃಂಭಣೆಯಿಂದ ಜರುಗಿಸಿ ಕೀರ್ತಿಶಾಲಿಯಾಗಿದ್ದಾರೆ. ಅನೇಕ ಶಿಷ್ಯರಂತೆ ಹಲವಾರು ನೃತ್ಯನಾಟಕಗಳ ಕತೃವಾಗಿದ್ದಾರೆ.

ಅದೇ ಸುಮಾರಿನಲ್ಲಿ ಸೋಹನ್‌ಲಾಲ್‌ರ ಹಿರಿಯ ಶಿಷ್ಯೆ ಮಾಯಾರಾವ್ ತನ್ನದೇ ಆದ ಕಥಕ್ ಕೇಂದ್ರದ ಒಂದನ್ನು ಮಲ್ಲೇಶ್ವರಂನಲ್ಲಿ ಹುಟ್ಟುಹಾಕಿದರು. ಅವರಿಗೆ ನೆರವಾಗಿ ನಿಂತವರು ಮುಂದೆ ಅವರನ್ನೇ ವಿವಾಹವಾದ ಎ.ಎಸ್.ನಟರಾಜನ್ ಕೆಲವು ಕಾಲ ರಾಜ್ಯ ಸಂಗೀತ ನಾಟಕ (ಹೌದು, ಈ ಅಕಾಡೆಮಿ ಸ್ಥಾಪಿತವಾದಾಗ ಅದರ ವ್ಯಾಪ್ತಿ ಸಂಗೀತ, ನಾಟಕ ಮತ್ತು ನೃತ್ಯಗಳನ್ನು ಒಳಗೊಂಡಿತು.) ಅಕಾಡೆಮಿಯ ಕಾರ್ಯನಿರ್ವಾಹಕರಾಗಿದ್ದ ಇವರ ಸರಸ್ವತೀ ಆರ್ಕೆಸ್ಟ್ರಾ ರಾಂಗೋಪಾಲ್, ಯು.ಎಸ್. ಕೃಷ್ಣರಾವ್ ಜೋಡಿ ತಾರಾಚೌದುರಿ, ಸೋಹನ್‌ಲಾಲ್ ಮುಂತಾದ ನೃತ್ಯ ತಂಡಗಳಿಗೆಲ್ಲಾ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿ, ಒದಗಿಸಿ ಹೆಸರುಗಳಿಸಿದ್ದವು. ಆದರೆ ಮಾಯಾ ತಮ್ಮ ಕಥಕ್ ಕಲಿಕೆಯಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ, ಜಯಪುರ, ದೆಹಲಿಗೆ ತೆರಳಿದ್ದರಿಂದ ಆ ಶಾಲೆ ಮುಂದುವರೆಯದೇ ಹೋಯಿತು. ಹಲವು ವರುಷಗಳ ನಂತರ, ಎಂದರೆ ಎಂಭತ್ತರ ದಶಕದಲ್ಲಿ ಮಯಾರಾವ್ ದೆಹಲಿಯಲ್ಲಿ ಸ್ಥಾಪಿಸಿದ್ದ ತಮ್ಮನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯಾಗ್ರಫಿಯನ್ನು ನಗರಕ್ಕೆ ವರ್ಗಾಯಿಸಿದಾಗ, ಆ ಹಳೆಯ ನೃತ್ಯಶಾಲೆಗೆ ಪುನರ್ಜೀವ ಬಂದಂತಾಗಿದೆ ಎಂದರೂ ತಪ್ಪಲ್ಲ!

ಇದು ನಡೆದುದ್ದು 1980ರ ದಶಕದಲ್ಲಿ, ಆ ಹೊತ್ತಿಗೆ ಬೆಂಗಳೂರಿನಲ್ಲಿ ವಿವಿಧ ನೃತ್ಯಶೈಲಿಗಳ ಪದಾರ್ಪಣವಾಗಿತ್ತು. ಇದರ ಕೀರ್ತಿ “ನೂಪುರ” ಸಂಸ್ಥೆಯ ಲಲಿತಾ ಶ್ರೀನಿವಾಸನ್‌ರಿಗೆ ಸಲ್ಲಬೇಕು. ಆ ನೃತ್ಯಶಾಲೆಯನ್ನು ಆರಂಭಿಸಿದ್ದು ನೂಪುರ ಸಂಸ್ಥೆಯ ಲಲಿತಾ ಶ್ರೀನಿವಾಸನ್ ಹೆಚ್.ಆರ್. ಕೇಶವಮೂರ್ತಿಯವರ ಶಿಷ್ಯರ ಹಿರಿಯ ಸಾಲಿಗೆ ಅವರ ಪುತ್ರಿ ವಸಂತಲಕ್ಷ್ಮಿ ಪುತ್ರ ಬಿ.ಕೆ. ಶಾಂಪ್ರಕಾಶ್‌ರಲ್ಲದೇ ಲಲಿತಾ ಸಹ ಸೇರುತ್ತಾರೆ. 1970ರ ದಶಕದಲ್ಲಿ ತಮ್ಮ ಈ ನೃತ್ಯಶಾಲೆಯನ್ನು ಆರಂಭಿಸಿ ಕೈಗೊಂಡ ಮೊದಲ ಶ್ಲಾಘನೀಯ ಕಾರ್ಯಕ್ರಮ ಎಂದರೆ ಅವರ ವಾರ್ಷಿಕ “ನಿತ್ಯ ನೃತ್ಯ” ಒಂದು ವಾರ ಜರುಗುತ್ತಿದ್ದ ಆ ವಿಶಿಷ್ಯ ನೃತ್ಯೋತ್ಸವ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವುದರ ಜೊತೆಗೆ ರಾಷ್ಟ್ರದ ಇವರ ನೃತ್ಯ ಪ್ರಕಾರಗಳನ್ನು ಪ್ರತಿಪಾದಿಸುವ ಕಲಾವಿದರನ್ನು ಬರಮಾಡಿಕೊಂಡು ಆ ಶೈಲಿಗಳ ಪರಿಚಯಕ್ಕೆ ನೆರವಾದರು. ಅಲ್ಲದೆ ಬೆಳಗಿನ ವೇಳೆಯಲ್ಲಿ ಚರ್ಚಾಕೂಟ, ಪ್ರಾತ್ಯಕ್ಷಿಕೆಗಳನ್ನೇರ್ಪಡಿಸಿ, ಆ ಶೈಲಿಗಳ ಬಗ್ಗೆ ಕುತೂಹಲ ಕೆರಳಿಸಲು ನೆರವಾದವು. ಗೋಪೀನಾಥ್, ತಮ್ಮ ಪುತ್ರಿ ರಂಗಶ್ರೀ ನೆರವಿನಿಂದ ಜರುಗಿಸುತ್ತಿರುವ ಕಿಂಕಿಣಿ ನೃತ್ಯಶಾಲೆಯೂ ಇದೇ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ನೃತ್ಯೋತ್ಸವ ನಡೆಸುತ್ತಾ ಬಂದಿದ್ದಾರೆ.

ಇಷ್ಟು ಹೊತ್ತಿಗಾಗಲೇ ನಗರದಲ್ಲಿ ಭರತನಾಟ್ಯವಲ್ಲದೇ ಕಥಕ್ ಶೈಲಿಯನ್ನರಸುವವರ ಸಂಖ್ಯೆಯೂ ಬೆಳೆಯ ಹತ್ತಿತ್ತು. ಇದಕ್ಕೆ ಸ್ವಲ್ಪ ಹಿಂದೆ ಉಷಾ ದಾತಾರ್ ತನ್ನ ತಾಯಿ ಸ್ನೇಹ ಪ್ರಭಾರಲ್ಲಿ ಹಾಸನದಲ್ಲಿ ಭರತನಾಟ್ಯವನ್ನು ಕಲಿತು, ಕೇರಳ ಕಲಾಮಂಡಳಿನಲ್ಲಿ ಕಥಕ್ಕಳಿ ಮತ್ತು ಮೋಹಿನಿ ಆಟ್ಟಂಗಳಲ್ಲಿ ತರಬೇತಿ ಪಡೆದು, ನಗರದಲ್ಲಿ ತಮ್ಮ ನೃತ್ಯ ಶಾಲೆಯನ್ನು ಆರಂಭಿಸಿ, ಆ ಮೂರು ಶೈಲಿಗಳಲ್ಲೂ ಶಿಕ್ಷಣವನ್ನೊದಗಿಸುತ್ತಿದ್ದರು. ಆದರೆ, ಕೇರಳದ ಈ ವಿಶಿಷ್ಟಶೈಲಿಗಳ ಪರಿಚಯ ಸ್ಥಳೀಯರಿಗಿರಲಿಲ್ಲವೆಂದಲ್ಲ. 1944-45ರ ಸುಮಾರಿನಲ್ಲಿ, ಅದೇ ಕಲಾಮಂಡಳಿಯ ಹಿರಿಯ ನೃತ್ಯಪಟು ಆನಂದ ಶಿವರಾಂ, ಸೋಹನ್ ಲಾಲ್‌ರ ತಂಡವನ್ನು ಸೇರಿ, ಆ ಮೂಲಕ ಶಿಕ್ಷಣ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಆ ತಂಡದಲ್ಲಿದ್ದ ಕೆಲವರಿಗೆ ಇದರಿಂದ ಕಥಕ್ಕಳಿ, ಮೋಹಿನಿ ಆಟ್ಟಂಗಳಲ್ಲಿ ಆಸಕ್ತಿ ಹುಟ್ಟಿದ್ದೂ ನಿಜ. ಅವರಂತೆ ಖ್ಯಾತ ಉದಯಶಂಕರ‍್ರ ಆಲ್ಮೋರಾ ಕಲ್ಚರಲ್ ಸೆಂಟರ್‌ನಲ್ಲಿ ಕಲಾವಿದರಾಗಿದ್ದ ದಯಾಳ್ ಶರಣ್ ಸಹ ತಾವು ಪರಿಣತಿ ಪಡೆದ ಮಣಿಪುರಿ ಶೈಲಿಯ ಪರಿಚಯಕ್ಕೆ ಕಾರಣರಾಗಿದ್ದರು. ಅಂತೂ, ಆಗಿನಿಂದ ನಗರದ ನೃತ್ಯಕ್ಷೇತ್ರ ಗರಿಗೆದರಿಗೊಂಡು ವಿವಿಧ ಶೈಲಿಗಳನ್ನೊಳಗೊಂಡ ಹೆಚ್ಚು ಹೆಚ್ಚಾಗಿ ಜನಮನವನ್ನು ಆಕರ್ಷಿಸುವಂತಾಯಿತು.

ಈ ಮಧ್ಯೆ ಕಾಳಹಸ್ತಿಯಲ್ಲಿ ಪ್ರಚಲಿತವಿದ್ದ ಆಂಧ್ರಶೈಲಿ ನೃತ್ಯದಲ್ಲಿ ಪರಿಣಿತರಾದ ವಿಖ್ಯಾತ ನಟರಾಜ ರಾಮಕೃಷ್ಣ ಅದೇ ರಾಜ್ಯದ ವೈಭವೋಪೇತ ಕೂಚಿಪುಡಿಯಲ್ಲಿ ಪಾಂಡಿತ್ಯ ಪಡೆದ ಎ.ಸಿ.ಆಚಾರ್ಯ ಹಾಗೂ ಏಲೂರಿನ ಕೊರಾಡಾ ನರಸಿಂಹರಾವ್‌ರವರುಗಳು ಆಗಿಂದಾಗ್ಗೆ ನಗರಕ್ಕೆ ಆಗಮಿಸಿ ಆ ಶೈಲಿಗಳಲ್ಲಿ ಶಿಷ್ಯರನ್ನುಗಳಿಸಿಕೊಂಡಿದ್ದರು. ಅಂಥವರಲ್ಲಿ ರಾಮಕೃಷ್ಣ ಶಿಷ್ಯರಾದ ಸುನಂದಾ ಮತ್ತು ಉಷಾ ದಾತಾರ್ ಆ ಶೈಲಿಯಿಂದ ಆಕರ್ಷಿತರಾದವರಿಗೆ ಶಿಕ್ಷಣವನ್ನು ಇಂದಿಗೂ ಒದಗಿಸುತ್ತಿದ್ದಾರೆ. ಅಂತೆಯೇ ನರಸಿಂಹರಾವ್‌ರ ಹಿರಿಯ ಶಿಷ್ಯ ವೀಣಾಮೂರ್ತಿ ಮತ್ತು ಇತ್ತೀಚೆಗೆ ಅವರಿಂದ ಪ್ರಭಾವಿತರಾದ ವೈಜಯಂತಿ ಕಾಶಿ ಅವರ ಶಿಕ್ಷಣ-ಕಾರ್ಯಕ್ರಮಗಳೂ ಅವ್ಯವಹತವಾಗಿ ನಡೆದುಬಂದಿದೆ. ಈ ಮಧ್ಯೆ ಅದೇ ಕೂಚಿಪುಡಿಯ ಹೆಸರಾಂತ ಗುರು ವೇಂಪಟಿ ಚಿನ್ನ ಸತ್ಯಂರ ಮೆಚ್ಚಿನ ಶಿಷ್ಯೆ ಮಂಜು ಭಾರ್ಗವಿ ನಗರದಲ್ಲಿ ನೆಲೆಸಿ, ಆ ಶೈಲಿಗೆ ಪುಟ್ಟವಿಟ್ಟಂತಾಯಿತು. ಲಕ್ಷ್ಮೀ ರಾಜಾಮಣಿ ಕೂಚಿಪುಡಿಯ ಮತ್ತೊಬ್ಬ ಹಿರಿಯ ಗುರು ಪ್ರಹ್ಲಾದ ಶರ್ಮರ ಶಿಷ್ಯೆ.

ಹೀಗೆ ವಿವಿಧ ನೃತ್ಯ ಪ್ರಕಾರಗಳ ಕೇಂದ್ರವಾದ ಬೆಂಗಳೂರಿನಿಂದ ಹೊರಗುಳಿದ ಒಂದೇ ಶೈಲಿಯೆಂದರೆ, ಅತ್ಯಂತ ಪುರಾತನವೆನಿಸಿದ ಒರಿಸ್ಸಾದ ಓಡಿಸ್ಸಿ, ಅದರ ಪ್ರದೇಶ ವಿವಾದಸ್ಪದ ಸನ್ನಿವೇಶದಲ್ಲುಂಟಾಯಿತು. ಕಾರಣ ಆ ಶೈಲಿಗೆ ರಾಜ್ಯ ಸರಕಾರದಿಂದ ಎಂದೂ ಇಲ್ಲದ ಪ್ರೋತ್ಸಾಹ, ಆ ಶೈಲಿಯಲ್ಲಿ ಅತಿ ಶೀಘ್ರದಲ್ಲಿ ಪ್ರಾವೀಣ್ಯತೆ ಪಡೆದು ಜಯಪ್ರಿಯರಾದ ಪ್ರತಿಮಾ ಬೇಡಿ (ಗೌರಿ) ತನ್ನ ಕಲೆಯಲ್ಲದೇ ವ್ಯವಹಾರದಲ್ಲೂ ಚತುರೆ. ತಮ್ಮ ಪ್ರಭಾವದಿಂದ ರಾಜ್ಯ ಸರಕಾರದ ಮನವೊಲಿಸಿ ತಮ್ಮ ಮಹತ್ವಾಕಾಂಕ್ಷೆಯ “ನೃತ್ಯಗ್ರಾಮ”ಕ್ಕೆ ನಗರದ ಹೊರವಲಯದಲ್ಲಿ ಹತ್ತು ಎಕರೆ ಜಮೀನನ್ನು ಪಡೆದುಕೊಂಡರು. ನಗರದ ಅನೇಕ ಕಲಾವಿದರ ಆಕ್ರೋಶವನ್ನು ಈ ಭೇದಬಾವ ಕೆರಳಿಸಿತಾದರೂ, ಪ್ರತಿಮಾರ ಯೋಜನೆಗೆ ಇದರಿಂದ ಯಾವುದೇ ಆಡಚಣೆ ಉಂಟಾಗಲಿಲ್ಲ. ಬದಲಿಗೆ ಸ್ಥಳೀಯ ಕಲಾವಿದರನೇಕರು ಆ ಆದರ್ಶ ನೃತ್ಯ ಕ್ಷೇತ್ರದಿಂದ ಪ್ರೇರಿತರಾಗಿ ಪ್ರತಿಮಾರ ಅನುಯಾಯಿಗಳಾದರು. ಆ ಮೂಲಕ ಒದಗಿಸಲಾದ ಆಕೆಯ ಪ್ರಖ್ಯಾತ ಗುರು ಕೇಳುಚರಣ್ ಮಹಾಪಾತ್ರದಿಂದ ಓಡಿಸ್ಸಿ ಮತ್ತು ಅಷ್ಟೇ ಹೆಸರಾಂತ ಕೇರಳ ಕಲಾ ಮಂಡಲಂನ ಕಲ್ಯಾಣ ಕುಟ್ಟಿ ಮೃತ್ಯುವಿಗೊಳಗಾದರೂ, ಆಕೆಯ ಶಿಷ್ಯೆ ಸ್ವರೂಪಸೇನ್ ಮುಂತಾದವರಿಂದ ಆಕೆಯ ಕನಸು ನನಸಾಗುವತ್ತ ಸಾಗಿದೆ. ಅಲ್ಲಿ ತಯಾರಾದ ಹಲವು ನರ್ತಕಿ/ನರ್ತಕಿಯರ ಕಾರ್ಯಕ್ರಮಗಳೂ ದೇಶದ ವಿವಿದೆಡೆಗಳಲ್ಲಿ ಜರುಗುತ್ತಲೇ ಇದೆ. ಮುಖ್ಯವಾಗಿ ಒಡಿಸ್ಸೀಯ ಪ್ರವೇಶದಿಂದ ಬೆಂಗಳೂರು ಭಾರತದ ಎಲ್ಲಾ ಶಾಸ್ತ್ರೀಯ ನೃತ್ಯ ಪ್ರಕಾರಗಳ ವಿಶಿಷ್ಟ ಕೇಂದ್ರವೆನಿಸಿದೆ ಎಂಬುದಂತೂ ನಿರ್ವಿವಾದ.

ಇಷ್ಟಾದರೂ ಶೈಲಿಗಳ ಬಗ್ಗೆ ವಾದ-ವಿವಾದಗಳ ನಡುವೆಯು ಭರತನಾಟ್ಯ ತನ್ನ ಅತ್ಯುನ್ನತ ಸ್ಥಾನವನ್ನು ಉಳಿಸಿಕೊಂಡಿದೆ ಎಂದರೆ ಆ ಭವ್ಯ ಕಲೆಯ ಗುಣವಿಶೇಷವನ್ನು ಊಹಿಸಬಹುದು. ಮೇಲೆ ನಮೂದಿಸಿದ ಅನೇಕ ಭರತನಾಟ್ಯವನ್ನು ಪ್ರತಿಪಾದಿಸುವ ಶಾಲೆಗಳೊಂದಿಗೆ ಹತ್ತಾರು ಹೊಸಶಾಲೆಗಳು ಸೇರ್ಪಡೆಯಾಗಿವೆ.

ಈ ಶಾಲೆಗಳಲ್ಲಿ ಮೊದಲ ಸಾಲಿಗೆ ಸೇರುವುದು ಮೇಲೆ ಹೇಳಿರುವ ಹೆಚ್‌.ಆರ್. ಕೇಶವಮೂರ್ತಿ, ಯು.ಎಸ್. ಕೃಷ್ಣರಾವ್ ದಂಪತಿಗಳಲ್ಲದೇ, ಅದೇ ತಲೆಮಾರಿಗೆ ಸೇರಿದ ಕೌಶಿಕ್, ಮಾಣಿಕ್ಯಂ, ಸಿ.ರಾಧಾಕೃಷ್ಣ ಹಾಗೂ ಲಲಿತಾದೊರೆಯವರ ಕೇಂದ್ರಗಳು. ಇವುಗಳಲ್ಲಿ ಹಲವು ತಮ್ಮ ಸ್ವರ್ಣಜಯಂತಿಯನ್ನಾಚರಿಸಿವೆ. ಅವುಗಳ ರೂವಾರಿಗಳಲ್ಲಿ ಹಲವರು ನಮ್ಮನ್ನಗಲಿದ್ದಾರೆ ಕೂಡ.

ಇಂತಹ ಸ್ತುತ್ಯ ಕಾರ್ಯವನ್ನು ಮುಂದುವರಿಸಿಕೊಂಡು ಬಂದವರಲ್ಲಿ ನರ್ಮದಾ ಮೊದಲಿಗರು. ಆರಂಭದಲ್ಲಿ ಕೌಶಿಕ್‌ರಲ್ಲಿ ಕಲಿತು ಅವರ ನೇತೃತ್ವದಲ್ಲೇ ತಮ್ಮ ರಂಗಪ್ರವೇಶವನ್ನಾಗಿಸಿದ ಇವರು ಮುಂದೆ ತಂಜಾವೂರ ಕಿಟ್ಟಪ್ಪ ಪಿಳ್ಳೆಯವರಲ್ಲಿ ಅಭ್ಯಾಸವನ್ನು ಮುಂದುವರಿಸಿ, ನೃತ್ಯ ಶಿಕ್ಷಕಿಯಾಗಿ ಅಪಾರ ಮನ್ನಣೆಗಳಿಸಿದರು. ನೂರಾರು ಶಿಷ್ಯರನ್ನು ಪಳಗಿಸಿದರು. ಇದರ ಬುನಾದಿ, ಅವರ ನೆರೆಹೊರೆಯಲ್ಲಿ ನೆಲೆಸಿದ್ದ ಪದ್ಮಾನಾಭನ್ ಎಂಬ ತಮಿಳುನಾಡಿನಿಂದ ವಲಸೆ ಬಂದ ಸುಸಂಸ್ಕೃತರ ಸಂಸಾರ. ಸ್ವತಃ ವೇಣುವಾದಕರಾದ ಇವರು ತಮ್ಮ ಪುತ್ರಿ ಪದ್ಮಲೋಚನಿಗೆ ನೃತ್ಯ ಶಿಕ್ಷಣವನ್ನೊದಗಿಸಲು ಪ್ರಖ್ಯಾತ ನೃತ್ಯ ಪರಂಪರೆಯ ಪಂದನಲ್ಲೂರು ಮುತ್ತಯ್ಯ ಪಿಳ್ಳೈಯವರನ್ನು ಕರೆತಂದರು. ಅವರು ತಮ್ಮ ಸೊದರಳಿಯ, ಸಂಗೀತ-ನೃತ್ಯ ಪರಿಣಿತ ತಂಜಾವೂರು ಕಿಟ್ಟಪ್ಪಪಿಳ್ಳೆಯವರನ್ನೂ ಕರೆತಂದರು. ಇಬ್ಬರಿಗೂ ಅದೇ ಪರಿಸರದಲ್ಲಿ ವಾಸ್ತವ್ಯ. ಈ ಸದಾವಕಾಶವನ್ನು ಉಪಯೋಗಿಸಿಕೊಂಡು ನರ್ಮದಾರಿಗೆ ಕಿಟ್ಟಪ್ಪರಿಂದ ಪಾಠಾಂತರದ ಏರ್ಪಾಡಾಯಿತು.

ಈ ಈರ್ವರು ಗುರುಗಳ ವಾಸ್ತವ್ಯದಿಂದ ಉಪಕೃತರಾದ ನೃತ್ಯಾಕಾಂಕ್ಷಿಗಳು ಹಲವಾರು. ಮಲ್ಲೇಶ್ವರದಲ್ಲಿ ಪ್ರಥಮವಾಗಿ ಕೃಷ್ಣರಾವ್ ದಂಪತಿಗಳಿಂದ ನೃತ್ಯಭ್ಯಾಸ ತೊಡಗಿದ, ಇಂದು ಚೆನ್ನೈನಲ್ಲಿ ನೆಲೆಸಿರುವ ಸುಧಾರಾಣಿ ರಘುಪತಿ ಕಿಟ್ಟಪ್ಪನವರ ಶಿಷ್ಯೆಯಾದರೆ, ರೇವತಿ-ಆಶಾ ಜೋಡಿ ಮುತ್ತಯ್ಯರವರ ಶಿಷ್ಯೆಯರಾದರು. ತಮ್ಮ ಯುಗಳ ನೃತ್ಯ ಕಾರ್ಯಕ್ರಮಗಳಿಂದ ಜನಾನುರಾಗ ಗಳಿಸಿ, ಪ್ರಸ್ತುತ ಅಮೆರಿಕಾದಲ್ಲಿ ಪ್ರತ್ಯೇಕ ನೃತ್ಯ ಶಾಲೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇಂತಹ ಖ್ಯಾತ ನೃತ್ಯ ಗುರುಗಳ ಶಿಕ್ಷಣ ಕೆಲಕಾಲ ನಗರದ ಭಾರತೀಯ ವಿದ್ಯಾಭವನಕ್ಕೂ ದೊರಕಿತ್ತು. ಆದರೆ ಈ ವ್ಯವಸ್ಥೆ ಬಹಳ ಕಾಲ ಮುಂದುವರಿಯಲಿಲ್ಲ. ನಂತರ ಪ್ರವೇಶ ಮಾಡಿದ ಯು.ಎಸ್. ಕೃಷ್ಣರಾವ್ ದಂಪತಿಗಳ ಅವಧಿಯೂ ಅದೇ ರೀತಿ ಕೊನೆಗೊಂಡಿತ್ತು.

ಇವರಿಂದ ಹೆಚ್ಚಿನ ಪ್ರಯೋಜನಪಡೆದವರು ಅದೇ ಗುರುಮನೆಗೆ ಸೇರಿದ ಲೀಲಾ ರಾಮನಾಥನ್. ಈಕೆ ಸ್ವಲ್ಪ ಕಾಲ ಪುಟ್ಟಪ್ಪನವರಲ್ಲಿ ಅಭ್ಯಾಸ ಮಾಡಿ, ಅದೇ ಸಮಯದಲ್ಲಿ ಸೋಹನ್‌ಲಾಲ್‌ರಿಂದ ಕಥಕ್ ಶೈಲಿಯನ್ನು ಅಭ್ಯಸಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ಪಂದನಲ್ಲೂರಿಗೇ ತೆರಳಿ ಗುರು ಮೀನಾಕ್ಷಿ ಸುಂದರಂ ಪಿಳ್ಳೆಯರವರ ಮಾರ್ಗದರ್ಶನ ಪಡೆದರು. ವಾಪಾಸ್ಸಾದ ನಂತರ ಮುತ್ತಯ್ಯ-ಕಿಟ್ಟಪ್ಪನವರನ್ನೊಡಗೂಡಿದ ತಮ್ಮ ಗುರುಗಳ ಹೆಸರಿನಲ್ಲಿ ಒಂದು ನೃತ್ಯಶಾಲೆಯನ್ನು ಆರಂಭಿಸಿ, ಅದನ್ನು ಪ್ರಸ್ತುತ ತಾವೊಬ್ಬರೇ ನಡೆಸಿಕೊಂಡು ಬರುತ್ತಿದ್ದಾರೆ.

ಈ ಶಾಲೆಯಲ್ಲಿ ಕಲಿತವರಲ್ಲಿ ಪ್ರಮುಖರು ಪದ್ಮಿನಿರಾವ್. ಮೊದಲು ಲೋಕಯ್ಯರಿಂದ ಭರತನಾಟ್ಯ ಕುಚಿಪುಡಿ ಎರಡೂ ಶೈಲಿಗಳ ಅಭ್ಯಾಸಕ್ಕೆ ತೊಡಗಿ, ಈ ಶಾಲೆಯ ವಿದ್ಯಾರ್ಥಿಯಾದರು. ಅದರ ಹಿಂದೆಯೇ ನೃತ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಿಟ್ಟಪ್ಪ ಪಿಳ್ಳೆಯವರನ್ನು ಒಲಿಸಿ, ಸ್ವಗೃಹದಲ್ಲೇ ವಾಸಕ್ಕೆ ಅನುಕೂಲ ಕಲ್ಪಸಿ, ಒಂದು ವಿದವಾದ ಗುರುಕುಲವಾಸದಿಂದ ತಮ್ಮ ಕಲಿಕೆಯನ್ನು ಮುಂದುವರಿಸಿದರು. ಅವರ ಹೆಮ್ಮೆಯ ಶಿಷ್ಯರಲ್ಲಿ ಒಬ್ಬರಾದರು. ಅವರದೇ ಆಶೀರ್ವಾದದಿಂದ ಒಂದು ನೃತ್ಯಶಾಲೆಯನ್ನಾರಂಭಿಸಿ, ಶಿಷ್ಯರನ್ನೂ ಪಡೆದು, ಅನೇಕಾನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದರಲ್ಲದೇ, ಒಂದು ಭವ್ಯವಾದ ಸಭಾಂಗಣಕ್ಕೆ ಕಾರಣರಾದರು. ಆದರೆ, ತಮ್ಮ ಒಂದು ಕಾರ್ಯಕ್ರಮದ ಮಧ್ಯದಲ್ಲೇ, ರಂಗದ ಮೇಲೆಯೇ ಅಸುನೀಗಿ, ತಮ್ಮ ಅಪಾರ ಶಿಷ್ಯ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದರು. ಅವರ ಹಿಂದೆಯೇ ನರ್ಮದಾರೂ ಸಾವಿಗೆ ತುತ್ತಾಗಿ ಕಿಟ್ಟಪ್ಪ ಪಿಳ್ಳೆಯವರ ಇಬ್ಬರು ಹಿರಿಯ ಶಿಷ್ಯರ ಆಶೋತ್ತರಗಳಿಗೆ ಧಕ್ಕೆಯುಂಟಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ಪದ್ಮಿನಿರಾವ್ ಶಿಷ್ಯರಲ್ಲಿ ಪ್ರತಿಭೆಯಳ್ಳ ವಾಣಿ ಕೃಷ್ಣಸ್ವಾಮಿ, ಊರ್ಮಿಳಾ ದೊರೆಸ್ವಾಮಿ, ವಳ್ಳಿ ಮುಂತಾದವರೆಲ್ಲಾ ಇಂದು ನಿಷ್ಕ್ರಿಯರಾಗಿದ್ದಾರೆ ಎಂಬುದು ದುರಾದುಷ್ಟಕರ. ನರ್ಮದಾರ ಶಿಷ್ಯರ ವಿಷಯವೂ ಇದಕ್ಕಿಂತ ಹೆಚ್ಚು ಭಿನ್ನ ಎನ್ನಲಾಗದು. ಅವರ ಹಿರಿಯ ಶಿಷ್ಯರಾದ ಡಾ|| ಸಾವಿತ್ರಿ ರಾಮಯ್ಯ, ಲಕ್ಷ್ಮೀ ಗೋಪಾಲಸ್ವಾಮಿ, ಪದ್ಮಿನೀ ಶಿರೀಶ್, ಡಾ|| ಶ್ರೀಧರ್ ಮುಂತಾದವರೆಲ್ಲಾ ಸಕ್ರಿಯರೆನಿಸಿದರೂ, ಪರಂಪರೆಯ ಮುಂದುವರಿಕೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದೇ ಹೇಳಬೇಕು. ಆದರೆ ಭರತನಾಟ್ಯ-ಕಥಕ್ ಎರಡರಲ್ಲೂ ಹೆಸರು ಮಾಡಿರುವ ನಿರುಪಮಾ ತಮ್ಮ ಕಥಕ್ ಕಲಾವಿದ ಪತಿ ರಾಜೇಂದ್ರರೊಡಗೂಡಿ, ಒಂದು ಸೊಗಸಾದ ಶಾಲೆಯ ನಿರ್ದೇಶಕಿಯಾಗಿರುವುದು ಶ್ಲಾಘನೀಯ. ಅಂತೆಯೇ ಐ.ವಿ.ಸೌಂದರ್ಯ ಮತ್ತು ಪ್ರವೀಣ್ ಕುಮಾರ್ ಸಹ ನೃತ್ಯ ಶಿಕ್ಷಣದಲ್ಲಿ ತೊಡಗಿದ್ದಾರೆ ಎಂಬುದೂ ನಿಜ.

ನಮ್ಮ ರಾಜ್ಯದ ಸೌಲಭ್ಯಗಳಿಂದ ಉತ್ತೇಜಿತರಾಗಿ, ವಲಸೆ ಬಂದ ನೃತ್ಯದ ಮತ್ತೊಂದು ಗುರುಮನೆ ವಳಿಯೂರ್ ರಾಮಯ್ಯ ಪಿಳ್ಳೆಯವರಿಗೆ ಸೇರಿದ್ದು. ಅವರ ಶಿಷ್ಯರಲ್ಲಿ ಪ್ರಖ್ಯಾತರಾದ ಕಮಲಾರ ಸಹವರ್ತಿ ಪದ್ಮಿನೀ ರಾಮಚಂದ್ರನ್‌ರಿಂದ ಪ್ರೇರಿತ ಈ ವಲಸೆ 1970ರ ದಶಕದ ಮೊದಲಲ್ಲಿ ನಗರಕ್ಕೆ ಬಂದು ತಮ್ಮ ನೃತ್ಯಶಾಲೆಯನ್ನಾರಂಭಿಸಿದ ಈಕೆ ಹಿಂದಿನ ದಂಡು ಪ್ರದೇಶದಲ್ಲಿ ಅನೇಕಾನೇಕ ಶಿಷ್ಯರನ್ನು ತಯಾರಿಸಿದ್ದಾರೆ. ನೃತ್ಯ ರೂಪಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಇವರ ಶಿಷ್ಯರನೇಕರೂ ದೇಶ-ವಿದೇಶಗಳಲ್ಲಿ ನರ್ತಿಸಿ ಕೀರ್ತಿಗಳಿಸಿದ್ದಾರೆ. ಆ ಸುಮಾರಿನಲ್ಲಿ ಮನಮೆಚ್ಚುವ ನರ್ತಕಿ ಎಂಬ ಹೊಗಳಿಕೆಗೆ ಪಾತ್ರರಾದ ಪದ್ಮಿನಿ ರವಿ ಸಹ ಅದೇ ಗುರುಮನೆಯ ಕೆ.ಜೆ.ಸರಸಾರ ಶಿಷ್ಯೆ. ಇವರ ನೃತ್ಯಶಾಲೆಯೂ ಸ್ಥಾಪನೆಗೊಂಡ ಅತಿ ಶೀಘ್ರದಲ್ಲೇ ಅನೇಕ ಶಿಷ್ಯರನ್ನಾಕರ್ಷಿಸಿ, ಶಿಕ್ಷಣ ಪ್ರದರ್ಶನ ಎರಡೂ ವಿಭಾಗಗಳಲ್ಲಿ ಖ್ಯಾತಿಗಳಿಸಿತು. ಅಂತೆಯೇ ಆಕೆಯದೇ ಸೋಲೋಗಳಲ್ಲದೇ ಆಕೆಯ ಶಿಷ್ಯರ ಪ್ರದರ್ಶನಗಳೂ ಜನಮನ್ನಣೆಗಳಿಸಿದ್ದವು. ಕಾರಣಾಂತರದಿಂದ ಆ ಶಾಲೆ ಮುಂದುವರೆಯದೇ, ಆಕೆಯೂ ಪ್ರದರ್ಶನದಿಂದ ವಿಮುಖರಾಗಿದ್ದರೂ ಆಕೆಯ ಶಿಷ್ಯರು ಎರಡೂ ವಿಭಾಗಗಳಲ್ಲಿ ಕಾರ್ಯೋಧ್ಯುಕ್ತರಾಗಿದ್ದಾರೆ. ನಗರದ ದಕ್ಷಿಣ ಭಾಗದಲ್ಲಿ ಶಾಲೆಯನ್ನು ಆರಂಭಿಸಿ ಯಶಸ್ವಿಯಾಗಿರುವ ರೇವತಿ ನರಸಿಂಹನ್ ಸಹ ಇದೇ ಗುರುಮನೆಗೆ ಸೇರಿದವರು. ಈಕೆಯ ಶಿಷ್ಯರಲ್ಲನೇಕರೂ ಆಕೆಯ ಪಾಠಾಂತರಕ್ಕೆ ಕೀರ್ತಿ ತಂದಿದ್ದಾರೆ.

ಚೆನ್ನೈನ ಅಂತಹದೇ ಮತ್ತೊಂದು ಗುರುಮನೆ ಸುವಿಖ್ಯಾತ ರುಕ್ಮಿಣೀದೇವಿ ಅರುಂಡೇಲನ ಕಲಾಕ್ಷೇತ್ರ. ಸೂಜಿಗವೆಂದರೆ ಆ ಸಂಸ್ಥೆಯಲ್ಲಿ ಪ್ರತಿನಿಧಿಸುತ್ತಿರುವ ಹಿರಿಯ ನರ್ತಕ/ಶಿಕ್ಷಕ ನಮ್ಮವರೇ ಆದ ಎಂ.ಆರ್. ಕೃಷ್ಣಮೂರ್ತಿ. ಅದೇ ಕಲಾಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿದ್ದಾಗಲೂ, ನಗರದ ಒಂದೆರಡು ನೃತ್ಯಶಾಲೆಗಳಿಗೆ ಸಲಹೆಗಾರರಾಗಿದ್ದ ಇವರು ನಿವೃತ್ತಿ ಹೊಂದಿದ ನಂತರ ತಮ್ಮದೇ ಆದ ಒಂದು ಸುಸಜ್ಜಿತ ನೃತ್ಯಶಾಲೆಯನ್ನು ಆರಂಭಿಸಿದ್ದಾರೆ. ಹಗಲಿರುಳು ಚಟುವಟಿಕೆಯಿಂದ ಕೂಡಿರುವ ಈ ಶಾಲೆ ಹಲವಾರು ಶಿಷ್ಯಂದಿರನ್ನು ತಯಾರಿಸಿದೆ. ಅವರಲ್ಲಿ ಲಕ್ಷ್ಮೀಬಾಯಿ, ಅರಣ್ಯ ನಾರಾಯಣ್, ಪ್ರತಿಭಾ ರಾಮಸ್ವಾಮಿ, ಸುಮನಾ ನಾಗೇಶ್, ದೀಪಾಭಟ್‌ರಂಥವರು ಹೆಸರಿರುವಂಥವರು. ಅದೇ ಕಲಾಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಕಿಟ್ಟು ಮಾಸ್ಟರ್‌ಗಿಂತ ಹಿರಿಯ ಶಿಕ್ಷಕಿ ವಸಂತವೇದಂ. ನಿಶಬ್ಧವಾಗಿ ಶಿಕ್ಷಣದಲ್ಲಿ ತೊಡಗಿರುವ ಇವರ ಶಿಷ್ಯರ ಗುಂಪೂ ಕಡಿಮೆ ಏನಿಲ್ಲ. ಶಿಸ್ತಿಗೆ ಹೆಸರಾದ ಇವರಿಂದ ಸೈ ಎನಿಸಿಕೊಂಡವರು ಮಾತ್ರ ವಿರಳ. ರಂಜನಿ ಗಣೇಶ್ ಸಹ ಅದೇ ಕಲಾಕ್ಷೇತ್ರದಲ್ಲಿ ತಯಾರಾದ ನರ್ತಕಿ. ಇವರ ಪ್ರದರ್ಶನಗಳು ಪಾಠಾಂತರದಂತೆಯೇ ಜನಪ್ರಿಯಗಳಿಸಿವೆ.

ಅದೇ ಕಲಾಕ್ಷೇತ್ರದಲ್ಲಿ ಸ್ವಲ್ಪಕಾಲ ಶಿಕ್ಷಕರಾಗಿ, ತಮ್ಮ ವರ್ಣಗಳ ಸಂಯೋಜನೆಯಿಂದ ಖ್ಯಾತನಾಮರಾದ ದಂಡಾಯುಧಪಾಣಿ ಪಿಳ್ಳೆಯವರ ಕಿರಿಯ ಶಿಷ್ಯ ಎನಿಸಿರುವ ಬಿ. ಭಾನುಮತಿಯೂ ಹೆಚ್ಚಿನ ಸಂಖ್ಯೆಯ ಶಿಷ್ಯರನ್ನು ತಯಾರಿಸಿದ್ದಾರೆ. ಇದೇ ತಾನೇ ತನ್ನ ರಜತ ಮಹೋತ್ಸವವನ್ನು ಆಚರಿಸಿದ ಈಕೆಯ ಶಾಲೆ ಸಮೂಹ ಸಂಯೋಜನೆಯಲ್ಲಿ ವಿಶೇಷ ಯಶಸ್ಸಿಗೆ ಪಾತ್ರವಾಗಿದೆ. ಅಷ್ಟೇ ಜನಪ್ರಿಯ ನೃತ್ಯ ದಂಪತಿಗಳು ಶ್ರೀಧರ್-ಅನುರಾಧ. ಅನು ಸಹ ಕಲಾಕ್ಷೇತ್ರದ ಶಿಷ್ಯೆ. ಈಕೆ ಮತ್ತು ಶ್ರೀಧರ್ ಇಬ್ಬರು ರಾಧಾ ಶ್ರೀಧರ್ ಅವರಲ್ಲಿ ಕಲಿತವರು.

ಇವುಗಳಲ್ಲದೇ ಪಂದನಲ್ಲೂರಿನ ಶ್ರೀನಿವಾಸನ್‌ರ ಶಿಷ್ಯ ಶುಭಾ ಧನಂಜಯ, ಜ್ಯೋತಿ ಪಟ್ಟಾಭಿರಾಮನ್, ಪದ್ಮಿನಿ ರವಿರ ಶಿಷ್ಯರಾದ ಕಿರಣ್-ಸಂಧ್ಯಾ ಕಿರಣ್, ಮುಂಬಯಿನ ರಾಜರಾಜೇಶ್ವರಿ ಕಲಾನಿಕೇತನದ ಶಿಷ್ಯೆ ವಾಣಿ ಗಣಪತಿ, ತನ್ನ ಭವ್ಯ ನೃತ್ಯರೂಪಕಗಳ ಮೂಲಕ ಖ್ಯಾತಿವೆತ್ತ ಪ್ರಭಾತ್ ಕಲಾವಿದರು ಅಲ್ಲದೇ ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಹಲವಾರು ಶಾಲೆಗಳೂ ನೃತ್ಯದ ತರಬೇತಿಯಲ್ಲಿ ನಿರತರಾಗಿದ್ದಾರೆ. ಇವರುಗಳ ಪಾಠಾಂತರದ ಮಟ್ಟ ಶ್ರೇಷ್ಠ ಎನ್ನಲಾಗದಿದ್ದರೂ ಈ ಕಲೆಯ ಚಲನೆಯನ್ನು ಜೀವಂತವಾಗಿಡಲು ಯಶಸ್ವೀ ಎಂದು ಹೇಳಬಹುದು.

ಅಂತೂ ಕರ್ನಾಟಕದಲ್ಲಿ ನೃತ್ಯಕಲೆ ಅವ್ಯಾಹತವಾಗಿ, ವಿವಿಧ ಪ್ರಕಾರಗಳಲ್ಲಿ ಅರಳಿದೆ ಎಂದು ಧಾರಳವಾಗಿ ಒಪ್ಪಿಕೊಳ್ಳಬೇಕು. ಈ ಕಲೆಯ ಹರಹು ವಿಸ್ತಾರವಾಗಿದೆ. ಆದರೆ ಇದರ ಆಳ ಅಷ್ಟೇ ಸಮರ್ಪಕ ಎನ್ನುವಂತಿಲ್ಲ. ಅದರಲ್ಲೂ ಅಭಿನಯದ ಅಂಶದಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ.

ಈ ಭರತನಾಟ್ಯ ಯಾವ ರೀತಿಯಲ್ಲಿ ರಾಜ್ಯದ ಕರಾವಳೀ ಪ್ರದೇಶದಲ್ಲಿ ಪ್ರಭಾವ ಬೀರಿದೆ ಎಂಬುದರತ್ತ ಗಮನ ಹರಿಸದೆ ಈ ವಿವರಣೆ ಮುಕ್ತಾಯವೆನಿಸದು. ಪ್ರಾಚೀನ ಯಕ್ಷಗಾನ ಜನಜನಿತವಾಗಿರುವ ಮಂಗಳೂರು-ಉಡುಪಿ ಅಜುಬಾಜಿನಲ್ಲಿ ಭರತನಾಟ್ಯ ಜನಪ್ರಿಯವಾಗಿದೆ. ಇದರ ಪುರೋಭಿವೃದ್ಧಿಗೆ ಕಾರಣರಾದವರು ಸೇಲಂ ಪ್ರದೇಶಕ್ಕೆ ಸೇರಿದ ರಾಜರತ್ನಂ ಪಿಳ್ಳೆ. ಇವರೂ ಪಂದನಲ್ಲೂರಿನಲ್ಲಿ ನೃತ್ಯಭ್ಯಾಸ ಮಾಡಿದುದಾಗಿ ಪ್ರತೀತಿ. ಇವರ ಶಿಷ್ಯರಲ್ಲಿ ಪ್ರಮುಖರು ಮಂಗಳೂರಿನ ಯು.ಎಸ್.ಕೃಷ್ಣರಾವ್, ರಾಯರ ಹಿರಿಯ ಪುತ್ರ ಅರುಣ. ಅರುಣ ಕಲಾವಿದರು ಎಂಬ ಶೀರ್ಷಿಕೆಯಡಿಯಲ್ಲಿ ಅನೇಕ ನೃತ್ಯರೂಪಕಗಳನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿ ಖ್ಯಾತಿಗಳಿಸಿದ್ದರು. ತಮ್ಮ ಪುತ್ರರಲ್ಲದೇ ಕೃಷ್ಣರಾಯರು ಇತರೆ ಹಲವು ಶಿಷ್ಯರನ್ನು ತಯಾರಿಸಿದ್ದರು. ಇವರ ನಂತರ ಖ್ಯಾತ ದಂಡಾಯಧವಾಣಿ ಪಿಳ್ಳೆಯವರ ಪ್ರಪ್ರಥಮ ಶಿಷ್ಯರಾದ ಜಯಲಕ್ಷ್ಮಿ ಆಳ್ವ ಚೆನ್ನೈ, ಮುಂಬಯಿ, ಅಹಮದಾಬಾದ್‌ಗಳಲ್ಲಿ ಅನೇಕ ಶಿಷ್ಯರನ್ನು ತಯಾರಿಸಿ, ತಮ್ಮದೇ ಜನಪ್ರಿಯರಾಗಿದ್ದಾರೆ. ಇವರ ಪುತ್ರಿ ಆರತಿ ಶೆಟ್ಟಿ ನುರಿತ ನರ್ತಕಿ ಮತ್ತು ಕಾಲೇಜು ಹಂತದಲ್ಲಿ ಶಿಕ್ಷಣ ಒದಗಿಸುತ್ತಿರುವ ಪ್ರಾಧ್ಯಾಪಕಿ. ಈ ತಾಯಿ ಮಕ್ಕಳು ತಮ್ಮ ಶಾಲೆಯ, ಸ್ಥಳೀಯ ಭಾರತೀಯ ವಿದ್ಯಾ ಭವನದ ಮೂಲಕ ತಯಾರಿಸುತ್ತಿರುವ ಶಿಷ್ಯ ಸಮೂಹ ಅನಂತ. ಇವರಲ್ಲದೇ ಕರಾವಳೀ ಪ್ರದೇಶಕ್ಕೆ ನೃತ್ಯ ಕಲೆಯನ್ನು ಶ್ರೀಮಂತಗೊಳಿಸಿ ಗುರುಗಳ ಗುರುವೆನಿಸಿರುವ ಮುರಳೀಧರರಾವ್, ಇವರ ಶಿಷ್ಯರನೇಕರು ಈಗಾಗಲೇ ಖ್ಯಾತನಾಮರಾಗಿದ್ದಾರೆ.  ಅಂತೆಯೇ ಇವರ ಪಾಂಡಿತ್ಯ ಪೂರ್ಣ, ನೃತ್ಯವನ್ನು ಕುರಿತ ಗ್ರಂಥ, ಅಕೆಡೆಮಿಕ್ ಹಂತದಲ್ಲಿ ಒಂದು ವಿಶಿಷ್ಟ ಕೊಡುಗೆ. ಅಂತೆಯೇ ಕೀರ್ತಿ ಶೇಷ ಜೇಜಮ್ಮನವರ ಏಕೈಕ ಶಿಷ್ಯರೆನ್ನಬಹುದಾದ ಕೆ.ಬಿ. ಮಾಧವರಾವ್ ಮತ್ತು ಪುತ್ತೂರಿನ ಮೋಹನಕುಮಾರ ಉಲ್ಲಾಳರೂ ಅನೇಕ ಶಿಷ್ಯರನ್ನು ಹೊಂದಿದ್ದಾರೆ. ಹಲವರು ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಶಿಕ್ಷಣವೀಯುತ್ತಲಿದ್ದಾರೆ. ವಿಶ್ವನಾಥ ರೈ, ಪ್ರೇಂನಾಥ್, ಉಡುಪಿಯಲ್ಲಿ ರಾಧಾಕೃಷ್ಣ ತಂತ್ರಿ ಮುಂತಾದ ಗುರುಗಳು ತರಗತಿಗಳನ್ನು ನಡೆಸುತ್ತಿದ್ದಾರೆ.

ಇದೇ ತರಹ ಮಡಿಕೇರಿಯಲ್ಲಿ ಸುಬ್ಬರಾವ್ ಎಂಬ ನೃತ್ಯಗುರು 1970ರ ಸುಮಾರಿನಲ್ಲಿ ಒಂದು ಶಾಲೆಯನ್ನು ಸ್ಥಾಪಿಸಿ ಭರತನಾಟ್ಯದ ಜನಪ್ರಿಯತೆಗೆ ಭಾಜನರಾಗಿದ್ದರು. ಹಾಸನ-ಶಿವಮೊಗ್ಗ ಹರವಿನಲ್ಲಿ, ಉಷಾ ದಾತಾರ್‌ರ ತಾಯಿ ಸ್ನೇಹಪ್ರಭಾರಿಂದ ಬೀಜಾಂಕುರಗೊಂಡ ಈ ನೃತ್ಯ ಪ್ರಕಾರ, ಉಷಾರ ಸೋದರಿ ಗೀತಾ ಮತ್ತು ಸಹೋದರರ ನೆರವಿನಿಂದ ತನ್ನ ಅಸ್ತಿತ್ವವನ್ನು ಸಾರುತ್ತಲಿದೆ. ರಸಿಕರನ್ನು ಆಕರ್ಷಿಸುತ್ತಿದೆ. ಅಂತೆಯೇ, ನರ್ಮದಾರ ಶಿಷ್ಟೆ ರೇಖಾ ಹೆಗ್ಡೆಯವರಿಂದ, ಭರತನಾಟ್ಯ ಬೆಳಗಾಂವಿಯಲ್ಲೂ ಜನಪ್ರಿಯತೆಯನ್ನು ಗಳಿಸಿದೆ.

ಇಷ್ಟೆಲ್ಲಾ ವಿಚಾರ ಮಾಡಿದ ಮೇಲೆ ನಮ್ಮ ರಾಜ್ಯದ ನೃತ್ಯಕಲೆಯ ಉಗಮಸ್ಥಾನವಾದ ಮೈಸೂರನ್ನು ಕಡೆಗಣಿಸುವುದುಂಟೆ! ರಾಜಧಾನಿ ಬದಲಾವಣೆಗೊಂಡರೂ, ಮೈಸೂರಿನ ಘನತೆಗೇನೂ ಕುಂದುಂಟಾಗಲಿಲ್ಲ. ಜಟ್ಟಿ ತಾಯಮ್ಮ, ಜೇಜಮ್ಮನವರುಗಳ ಶಿಷ್ಯರಲ್ಲದೇ ಸ್ವಲ್ಪಕಾಲ ಸೋಹನ್‌ಲಾಲ್‌ರಿಂದ ಕಥಕ್ ನೃತ್ಯವನ್ನು ಅಭ್ಯಸಿಸಿದ ಚೆನ್ನವೀರಯ್ಯ ತನ್ನದೇ ಆದ ನೃತ್ಯಶಾಲೆಯಲ್ಲಿ ತೊಡಗಿ, ಆ ಮೂಲಕ ಕಾರ್ಯಕ್ರಮಗಳನ್ನೇರ್ಪಡಿಸಿ ರಸಿಕರ ಮನವನ್ನು ಆಕರ್ಷಿಸಿದರು. ರಾಜ್ಯ ಅಕಾಡೆಮಿಯ ಪ್ರಶಸ್ತಿಗಳಿಸುವವರಲ್ಲಿ ಮೊದಲ ಸಾಲಿಗೆ ಸೇರಿದವರಾದರೂ ಕೂಡ. ಅದೇ ನಿಟ್ಟಿನಲ್ಲಿ ಚೆನ್ನೈನ ಕಲಾಕ್ಷೇತ್ರದಲ್ಲಿ ಪದವೀಧರರಾದ ಉಮಾರಾವ್ ತಮ್ಮ ಶಾಲೆಯಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡಿದರಲ್ಲದೇ, ಹಲವಾರು ಶ್ರೇಷ್ಠಮಟ್ಟದ ನೃತ್ಯ ರೂಪಕಗಳನ್ನು ರಚಿಸಿ ಖ್ಯಾತನಾಮರಾಗಿದ್ದಾರೆ. ಅಂತೆಯೇ ಹಿರಿಯ ಕಲಾವಿದೆ ವಸುಂಧರಾ ದೊರೆಸ್ವಾಮಿಯವರೂ ತಮ್ಮ ಶಾಲೆಯ ಮೂಲಕ ಅನೇಕ ಶಿಷ್ಯಂದಿರನ್ನು ತಯಾರಿಸಿದ್ದಾರೆ. ವಸುಂಧರಾ ಕ್ರಿಯಾಶೀಲತೆಯನ್ನೂ ಎತ್ತಿ ಹಿಡಿದಿದ್ದಾರೆ. ಇವರಲ್ಲದೇ ಕೃಪಾಪಡ್ಕೆ ರಾಮಮೂರ್ತಿರಾವ್, ತುಳಸಿ ರಾಮಚಂದ್ರ, ನಂದಿನಿ, ಈಶ್ವರ ಮುಂತಾದ ಇಂದಿನ ತಲೆಮಾರಿನ ನರ್ತಕ/ನರ್ತಕಿಯರೂ, ಮೈಸೂರಿನ ಕಲಾಧ್ವಜವನ್ನು ಎತ್ತಿಹಿಡಿಯಲು ಸಾರ್ಥ್ಯಕ್ಕೆ ಪಡೆದಿದ್ದಾರೆ. ಇದಕ್ಕೆಲ್ಲ ಮಿಗಿಲಾಗಿ, ಸ್ಥಳೀಯ ವಿಶ್ವವಿದ್ಯಾನಿಲಯ ಪ್ರದರ್ಶನ ಕಲಾವಿಭಾಗ ಮೊದಲಿಗೆ ಡಾ|| ವೆಂಕಟಲಕ್ಷ್ಮಮ್ಮನವರ ನೇತೃತ್ವದಲ್ಲಿ ಮುಂದೆ ಆಕೆಯ ಶಿಷ್ಯೆ ಶಕುಂತಲರ ಪರಿಶ್ರಮದಲ್ಲಿ ಅನೇಕ ಶಿಷ್ಯರ ಏಳಿಗೆಗೆ ಕಾರಣರಾಗಿದ್ದಾರೆ. ವಿಭಾಗ ಈಗಲೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ.

ಹಾಗೆಯೇ ಬೆಂಗಳೂರು ವಿಶ್ವವಿದ್ಯಾನಿಲಯವೂ, ಡಾ|| ಎಚ್.ನರಸಿಂಹಯ್ಯನವರ ಪ್ರವರ್ತನ ಶಕ್ತಿಯಿಂದ ಆರಂಭಗೊಂಡ ಕಲಾವಿಭಾಗದಲ್ಲಿ ಮೊದಲು ಪ್ರೊ|| ಯು.ಎಸ್.ಕೃಷ್ಣರಾವ್, ನಂತರ ವಿಜಯರಾವ್‌ರಿಂದ ಪ್ರೇರೇಪಿತಗೊಂಡು ನರ್ತನ, ಕಲಾವಿದರ ವಿಕಾಸನಕ್ಕೆ ಕಾರಣವಾಯಿತು. ಮುಂದೆ ಸರ್ವೋತ್ತಮ ಕಾಮತ್, ಉಷಾ ದಾತಾರ್, ಬಿ.ಕೆ. ವಸಂತಲಕ್ಷ್ಮಿ ಅವರ ಮುಂದಾಳತ್ವದಲ್ಲಿ ಹಲವಾರು ಸ್ನಾತಕೋತ್ತರ ಪದವೀಧರ ಬೆಳವಣಿಗೆಗೂ ದಾರಿತೋರಿತ್ತು. ಹಾಗೆ ಪದವೀಧರರಾದವರಲ್ಲಿ ಜಯಾರಂಥವರು ತಮ್ಮದೇ ಆದ ಕಲಾಶಾಲೆಯನ್ನು ನಡೆಸುವಲ್ಲೂ ಯಶಸ್ವಿಯಾಗಿದ್ದಾರೆ ಎಂಬುದು ಗಮನಾರ್ಹ.

ಇನ್ನು ಧಾರವಾಡದಲ್ಲಿ ಸುಮಾರು ಐವತ್ತು ವರ್ಷಗಳಿಂದ ಉಪಾಧ್ಯ ನೃತ್ಯ ವಿಹಾರ ಎಂಬ ಸಂಸ್ಥೆ ನಡೆಸಿದ ಪಿ. ವೆಂಕಟರಮಣ ಉಪಾಧ್ಯ ಅವರ ಶಿಷ್ಯೆ ಮಂದಾಕಿನಿ ಅವರ ಸೇವೆ ನೆನೆಯುವಂತಾದ್ದೇ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಹಲವಾರು ಭರತನಾಟ್ಯದ ಶಿಬಿರಗಳನ್ನು ನಡೆಸುವ ಮೂಲಕ ಹಾಗೂ ರಂಗ ಪ್ರವೇಶಗಳನ್ನು ನಡೆಸುವ ಮೂಲಕ ಹೆಚ್ಚು ಶಿಷ್ಯರನ್ನು ರೂಪಿಸಿದ ಕೀರ್ತಿ ಮೈಸೂರಿನ ಕೆ. ರಾಮಮೂರ್ತಿರಾವ್‌ಗೂ ಸಲ್ಲುತ್ತದೆ. ಹಾಗೆಯೇ ಯು.ಎಸ್.ಕೃಷ್ಣರಾವ್ ಶಿಷ್ಯ ಪರಂಪರೆಯ ಕುಮುದಿನ ರಾವ್ ಅವರು ಅಲ್ಲಿ ತಮ್ಮ ಸಂಸ್ಥೆಯ ಮೂಲಕ ಕಲಾಸೇವೆ ಮಾಡುತ್ತಿದ್ದರು. ಹುಬ್ಬಳ್ಳಿಯಲ್ಲಿ ಸುಜಾತ ರಾಜಗೋಪಾಲ, ಮೈಸೂರಿನ ನಂದಿನಿ ಈಶ್ವರ ಅವರ ಶಿಷ್ಯೆ ಶಾಂತಲಾ ವಟ್ಟಂ ಮುಂತಾದವರು ತಮ್ಮ ಛಾಪನ್ನೊತ್ತಿದ್ದಾರೆ. ಹಾಗೆಯೇ ದಾವಣಗೆರೆಯಲ್ಲಿ ಶ್ರೀನಿವಾಸ ಕುಲಕರ್ಣಿ ಪರಂಪರೆಯ ರಘುನಾಥ ಕುಲಕರ್ಣಿ ಹಂಸಭಾವಿಯಲ್ಲಿ ಕೆ.ಆರ್.ಕುಲಕರ್ಣಿ ಮುಂತಾದವರು ಶ್ರಮಿಸುತ್ತಿದ್ದಾರೆ.