ಅನುಬಂಧ – ೧ : ‘ಠಾಕೂರ್‌’, ‘ತಕ್ಕರ್‌’ (?)

ಥಕ್ಕರ್‌, ಠಾಕೂರ್‌, ಠಕ್ಕುರ, ಠಕೋರ, ಠಕರ, ಥಕ್ರು, ಠಾಕೂರ, ಠಾಗೂರ್‌, ಠಕ್ರೆ ಈ ಹೆಸರುಗಳುಳ್ಳ ಜನರು ಭಾರತದಾದ್ಯಂತ ಇದ್ದಾರೆ. ಟರ್ನರ್‌ಅವರ ನಿಘಂಟುವಿನಲ್ಲಿ ದಾಖಲಾಗಿರುವ, ಇಂಡೋ ಆರ್ಯನ್‌ಭಾಷೆಗಳಲ್ಲಿರುವ ಆ ಹೆಸರಿನ ರೂಪಾಂತರಗಳು, ಅರ್ಥಗಳು ಹೀಗಿವೆ:

[1]

ಠಕ್ಕುರ, ತುಕುರ್‌, ಠಕುರ, ಠೋಕುರ್‌, ಠಕುರು, ಠಾಕರ್‌, ಠಾಕೂರ್‌, ಠಕುರಾಣಿ (ಸ್ತ್ರೀಲಿಂಗ), ಠಾಕುರಾಣಿ, ಠಾಕುರ, ಠಾಕುರ್‌, ಠಾಕೋರ್‌ಇವೇ ಮೊದಲಾದ ರೂಪದ ಪದಗಳು ಮರಾಠಿ, ಗುಜರಾತಿ, ಮೈಥಿಲಿ, ಭೋಜಪುರಿ ಒರಿಯ, ಬಿಹಾರಿ, ಅಸ್ಸಾಮಿ, ಬಂಗಾಳಿ, ಪ್ರಾಕೃತ ಇತ್ಯಾದಿ ಭಾಷೆಗಳಲ್ಲಿದ್ದು ರಜಪುತ, ಊರಿನ ಮುಖ್ಯಸ್ಥ, ಬ್ರಾಹ್ಮಣ, ಯಜಮಾನ, ದೇವರು, ದೇವತಾ ಮೂರ್ತಿ ಈ ಅರ್ಥಗಳಲ್ಲದೆ ಫಕೀರ, ಸೇವಕನು ಯಜಮಾನನ್ನು ಸಂಬೋಧಿಸಬೇಕಾದ ಗೌರವಪದ ಈ ಅರ್ಥಗಳೂ ಇವೆ. ಯಜಮಾನ, ಗೌರವಾರ್ಹ, ಮುಖ್ಯಸ್ಥ ಎಂಬುದು ಪ್ರಧಾನಾರ್ಥ. ಕೆಲವೆಡೆ ಅದಕ್ಕೆ ಕ್ಷೌರಿಕ, ಕಮ್ಮಾರ ಎಂಬ ಅರ್ಥದ ಬೆಳವಣಿಗೆಗಳೂ ಕಂಡುಬರುತ್ತವೆ. ಮಹಾರಾಷ್ಟ್ರದಲ್ಲಿ ಅದು ಗಿರಿಜನರ ಒಂದು ವರ್ಗಸೂಚಕ. ಈ ಪದಗಳಿಗೆ ಮೂಲವಾಗಿದ್ದ ಪದವು ಯಾವ ವರ್ಗವು ಭಾಷೆಗಳಿಗೆ ಸೇರಿದ್ದೆಂಬುದು ಸ್ಪಷ್ಟವಾಗಿಲ್ಲ.

ಮಹಾರಾಷ್ಟ್ರದ ಥಕ್ಕರ್‌ಅಥವಾ ಥಕರ್‌(ಥೊಕ್ಕರ್‌) ಜನ ಶಿವಾಜಿ ಕಾಲದಲ್ಲಿ ಗೂಢಚಾರರಾಗಿದ್ದರು. ಗೊಂಬೆ ಆಟ ಪ್ರದರ್ಶನ ಅವರ ಮುಖ್ಯ ವೃತ್ತಿ. ಅಲಂಕರಿಸಿದ ಎತ್ತುಗಳನ್ನು ಜೊತೆಯಲ್ಲಿಟ್ಟುಕೊಂಡು ಭಿಕ್ಷೆ ಮಾಡುತ್ತಾರೆ. ಚಿತ್ರದ ಕೆತ್ತನೆಯ ಕೆಲಸಗಳಲ್ಲಿ ಪರಿಣತರು. ಠಾಕೊರ್‌, ಠಕರ್ದ ಹೆಸರಿನ ಗುಜರಾತಿನ ಜನರಲ್ಲಿ ಸೋಲಂಕಿ (<ಚಾಳುಕ್ಯ), ಪರಮಾರ ಇತ್ಯಾದಿ ಒಳಪಂಗಡಗಳಿವೆ. ಗುಜರಾತಿ, ಮರಾಠಿ ಅವರ ಮನೆಮಾತು. ಲಕ್ಷ ದ್ವೀಪದ ಥಕ್ರು ಕೆಳವರ್ಗದ ಜನರ ಮುಖ್ಯನನ್ನು ಹೇಳುತ್ತದೆ. ತ್ರಿಪುರದಲ್ಲಿ ಠಾಕೂರರು ರಜಪುತ್‌ಕ್ಷತ್ರಿಯರು; ವ್ಯವಸಾಯ ಇವರ ವೃತ್ತಿ; ಒಮ್ಮೆ ರಾಜರ ಆಸ್ಥಾನಗಳಲ್ಲಿ ಉದ್ಯೋಗಿಗಳಾಗಿದ್ದವರು. ಬಿಹಾರದ ಠಾಕೂರರೂ ರಜಪೂತರೇ. ಸಿಕ್ಕಿಮ್ಮಿನ ಠಕುರಿಗಳು ನೇಪಾಳದಿಂದ ಬಂದವರು.

ಮಹಾರಾಷ್ಟ್ರದ ‘ತಕರಿ’ಗಳು ಕರ್ನಾಟಕ ಮೂಲದವರೆಂದು ಹೇಳಿಕೊಳ್ಳುತ್ತಾರೆ. ‘ತಕರಿ’ಗಳು ಕಳ್ಳತನಕ್ಕೆ ಪ್ರಸಿದ್ಧರೆಂಬ ನಂಬಿಕೆಯಿದೆ (ನೋಡಿ – ‘ಠಕ್ಕ’). ತಕ್ಕರಿ, ತಕ್ಕರ್‌, ತಿಗ್ಗರಿ ಎಂಬ ನಾಮಾಂತರಗಳೂ ಉಂಟು. ಇವರಲ್ಲಿ ಹಳಬರು ಕನ್ನಡ ಮಾತನಾಡಿದರೂ ಈಚಿನವರು ಮರಾಠಿ, ಹಿಂದಿ ಮಾತನಾಡುತ್ತಾರೆ. ಇವರಲ್ಲಿ “ಸೋಲಂಕಿ” ಮುಂತಾದ ಒಳಪಂಗಡಗಳಿವೆ. ಪವಾರ್‌, ಭೋಸ್ಲೆ, ದಡ್‌ಮನಿ (ದೊಡ್ಡಮನಿ), ಹಾದಿಮನಿ ಇವೇ ಮುಂತಾದ ವಂಶನಾಮಗಳು (surnames) ಇವರಲ್ಲಿರುವುದು ಗಮನಾರ್ಹ. ಎಲ್ಲಮ್ಮ, ಅಂಬಾಬಾಯಿ ಇವರ ದೈವಗಳು.[2]

ಒಂದೆರಡು ಇತಿಹಾಸ ಗ್ರಂಥಗಳಲ್ಲಿ[3] ಕರ್ನಾಟ ವಂಶದ ದೊರೆಗಳ ಹೆಸರುಗಳು “ಠಾಕೂರ್‌” ಎಂಬ ವಂಶನಾಮದಿಂದ ಕೊನೆಯಾಗುತ್ತವೆ. ಉದಾ.ಗೆ.

ನಾನ್ಯದೇವ ಠಾಕೂರ್‌
|
ಗಂಗದೇವ ಠಾಕೂರ್‌
|
ನರಸಿಂಹದೇವ ಠಾಕೂರ್‌
|
ಶಕ್ತಿಸಿಂಹದೇವ ಠಾಕೂರ್‌
|
ಹರಿಸಿಂಹದೇವ ಠಾಕೂರ್‌

“ಠಾಕೂರ್‌” ವಂಶನಾಮದ ಜೊತೆ ಈ ದ್ರಾವಿಡ ಪದಗಳನ್ನು ಹೋಲಿಸಿ ತಮಿಳು. ತಕ್ಕಾರ್‌‘the noble persons’; ಮಲಯಾಳಂ. ತಕ್ಕಂ ‘father’; ಕೊಡಗು. ತಕ್ಕ ‘chief man, headman of a village’[4]. ಕೊಡಗಿನಲ್ಲಿ ಇಂದಿಗೂ ‘ನಾಡತಕ್ಕ’, ‘ಊರತಕ್ಕ’, ‘ದೇವತಕ್ಕ’ ಮಾತುಗಳು ಆಯಾ ವ್ಯವಸ್ಥೆಯ ಮುಖ್ಯನನ್ನು ಹೇಳುತ್ತವೆ. (ಈ ಸಂಗತಿಯನ್ನು ತಿಳಿಸಿದವರು ಪ್ರೊ. ಎಂ. ಜಿ. ನಾಗರಾಜ್‌).

ಈ ಮಾಹಿತಿ ಕೇವಲ ತೌಲನಕ್ಕೆ ಮತ್ತು ಓದುಗರ ಗಮನಕ್ಕೆ. ಈ ಮಾಹಿತಿಯಿಂದ ನಾನು ಯಾವುದೇ ನಿರ್ಧಾರಕ್ಕೂ ಬಂದಿಲ್ಲವೆಂಬುದ್ನು ಸ್ಪಷ್ಟಪಡಿಸುವುದು ಅಗತ್ಯವಾಗಿದೆ.

 

ಅನುಬಂಧ – ೨ : ‘ತಲೇಜು’, ‘ತುಳಜಾ ಭವಾನಿ’

ನೇಪಾಳದ ‘ತಲೇಜು’:

ತಲೇಜು ನೇಪಾಳದ ದಿವ್ಯ ಮಾತೃದೇವತೆ; ರಕ್ಷಣಾದೇವತೆ; ರಾಜಮನೆತನಗಳ ‘patron deity’. ಒಂದು ಕತೆಯ ಪ್ರಕಾರ, ಕೊನೆಯ ನೆವಾರಿ ರಾಜ ಜಯಪ್ರಕಾಶ ಮಲ್ಲನ ಕಾಲದಲ್ಲಿ ತಲೇಜು ಕಾಠಮಾಂಡೊದ ಒಬ್ಬ ಕಿರು ಹುಡುಗಿಯ ಮೈಮೇಲೆ ಬಂದುದನ್ನು ತಿಳಿದು ಆ ಹುಡುಗಿಯದು ಭ್ರಮೆ ಎಂದು ಅವಳನ್ನು ಆ ರಾಜ ಊರು ಬಿಟ್ಟು ಓಡಿಸಿದನು. ತಲೇಜು ಅವನ ರಾಣಿಯ ಮೇಲೆ ಬಂದಾಗ ತನ್ನ ತಪ್ಪಿನ ಅರಿವಾಗಿ ಆ ಹುಡುಗಿಯನ್ನು ವಾಪಸ್‌ಕರೆಯಿಸಿ ಅವಳನ್ನು “ಕುಮಾರಿ” ಎಂದು ಕರೆದು ಅವಳ ಪಾದಗಳಿಗೆ ನಮಸ್ಕರಿಸಿ ಅವಳಿಗಾಗಿ ಪ್ರತ್ಯೇಕ ಗೃಹ ಕಟ್ಟಿಸಿದನು. ಅದೇ ಕಾಠಮಾಂಡೊದಲ್ಲಿ ಹನುಮಾನ್‌ಧೋಕಾದ “ಕುಮಾರ್‌ಘರ್‌”.

ಇನ್ನೊಂದು ಕತೆಯ ಪ್ರಕಾರ ಅದೇ ನೆವಾರಿ ದೊರೆ ತಲೇಜು ದೇವತೆ ಜೊತೆ ತನ್ನ ಅರಮನೆಯಲ್ಲಿ ಬಹಳ ಹೊತ್ತು ಪಗಡೆ ಆಡುತ್ತ ಅವಳನ್ನು ಕಾಮುಕ ದೃಷ್ಟಿಯಿಂದ ಕಾಣುತ್ತಲೇ ಅವಳು ಮಾಯವಾಗಿ ಮೂರು ದಿನಗಳ ಬಳಿಕ ಅವನ ಕನಸಿನಲ್ಲಿ ಬಂದು ಹೇಳಿದಳು – “ನಿನ್ನ ತಪ್ಪಿನಿಂದಾಗಿ ನಿನ್ನ ವಂಶದ ಕೊನೆಯ ದೊರೆ ನೀನೇ ಆಗುವೆ. ಇನ್ನು ನೀನು ಎಂದೂ ನನ್ನನ್ನು ನೋಡಲಾರೆ. ನೀನು ಆರಿಸಿದ ನೆವಾರ್‌ಜಾತಿ ಹುಡುಗಿಯಲ್ಲಿ ನಾನಿರುತ್ತೇನೆ. ಅವಳ ಪೂಜೆಯೇ ನನ್ನ ಪೂಜೆ”. ನೆವಾರ್‌ವಂಶದವರಿಂದ ಈಗಿನ ಗೊರ್ಖಾ ವಂಶದ ದೊರೆಗಳಿಗೆ ರಾಜ್ಯಭಾರವು ವರ್ಗಾವಣೆಯಾಗಲು “ತಲೇಜು” (“ಕುಮಾರಿ”) ಕಾರಣವೆಂದು ಜನ ನಂಬಿದ್ದಾರೆ.

ತಲೇಜು ಭವಾನಿಯು ಮಹಿಷಾಸುರ ಮರ್ದಿನಿಯೆಂದು ರಾಮನ ಆರಾಧ್ಯದೈವವೆಂದು ಭಾವಿಸುತ್ತಾರೆ. ವಿಜಯದರ್ಶಮಿ ದಿನ ತಲೇಜು ಮಹಿಷಾಸುರನನ್ನು ಕೊಂದರೆ ಅದೇ ದಿನ ರಾಮನು ತಲೇಜು ಅನುಗ್ರಹದಿಂದ ರಾವಣನನ್ನು ಕೊಂದನು. ಕತೆ ಪ್ರಕಾರ ಅಯೋಧ್ಯೆಯಲ್ಲಿ ರಾಮನು ತಲೇಜು ದೇವಾಲಯವನ್ನು ನಿರ್ಮಿಸಿದನು. ನೇಪಾಳದ ಸಂರಕ್ಷಕಳಾದ ತಲೇಜು ದೇವಿಯ ಗುಡಿಗಳು ಹಿಂದೆ ರಾಜಧಾನಿಗಳಾಗಿದ್ದ ಕಾಠಮಾಂಡೊ, ಭಕ್ತಪುರ, ಪಾಟಣ್‌ಗಳ ಕೇಂದ್ರ ಭಾಗದಲ್ಲಿ ಅರಮನೆಗಳ ಪಕ್ಕದಲ್ಲೇ ಇರುವುದು ಅದಕ್ಕಾಗಿ – ರಾಜನ, ಅರ್ಥಾತ್‌ದೇಸದ ರಕ್ಷಣೆಗಾಗಿ.

ನೇಪಾಳದ ದಸರಾ ಹಬ್ಬದ ಸಂಭ್ರಮವು ವರ್ಣನಾತೀತ. ಜನರು ಮನೆಗಳಿಗೆ ಸುಣ್ಣ ಬಣ್ಣ ಮಾಡಿ ಹೊಸ ಬಟ್ಟೆ ಉಟಟು ಭಕ್ಷ್ಯ ಭೋಜ್ಯಗಳನ್ನು ಮಾಡಿಸವಿಯುತ್ತಾರೆ. ಹತ್ತು ಹದಿನೈದು ದಿನ ಇಡೀ ನೇಪಾಳವೇ ರಜೆಯಲ್ಲಿರುತ್ತದೆ. ಪರಸ್ಪರ ಭೇಟಿಯಾದಾಗ ಜನರ ಬಾಯಲ್ಲಿ ‘ವಿಜಯ ದಶಮಿ’, ‘ಸುಭ ದಸಮಿ’ ಎಂಬ ಪರಸ್ಪರ ಅಭಿನಂದನೆಯ ಮಾತುಗಳು ಬರುತ್ತವೆ. ಜನರು ತರೈನಿಂದ ಸಾವಿರಾರು ಕುರಿ, ಮೇಕೆ, ಕೋಳಿ, ಎಮ್ಮೆ, ಕೋಣಗಳನ್ನು ತಂದು ಕಣಿವೆ ನಗರಗಳಲ್ಲಿ ಮಾರುತ್ತಾರೆ. ಅವುಗಳನ್ನು ದೇವತೆಗಳಿಗೆ ಬಲಿ ಕೊಡಲಾಗುತ್ತದೆ. ಹದಿನೆಂಉ ಹಸ್ತಗಳ, ತಲೆ ಬುರುಡೆ ಮಾಲೆ ಧರಿಸಿದ ಕಾಳಿ, ಭೈರವಿ, ದುರ್ಗಾ ಎಂಬ ನಾಮಾಂತರಗಳು ತಲೇಜು ದೇವಿಗೆ. ಅವಳೇ ಲಕ್ಷ್ಮೀ, ಸರಸ್ವತಿ, ಗೌರಿ ಮಾತ್ರವಲ್ಲ, ಬೌದ್ಧರ ತಾರಾ ಭಗವತಿಯೂ ಹೌದು. ಅವಳು ಕರುಣಾಮಯಿಯೂ ಹೌದು, ಘೋರಳೂ ಹೌದು. ರಾತ್ರಿ ನದಿಗಳಲ್ಲಿ ಜನರು ಸ್ನಾಮಾಡಿ ದೀಪಗಳನ್ನು ತೇಲಿಬಿಡುತ್ತಾರೆ, ಅವಳ ಮೇಲಿನ ಭಕ್ತಿಯಿಂದ.

ದಸರೆಯ ಎಂಟನೆಯ ರಾತ್ರಿ ‘ಕಾಲರಾತ್ರಿ’. ಆ ದಿನ ಜನರು ಬೀದಿಗಳಲ್ಲಿ ಆವೇಶದಿಂದ ಕುಣಿಯುತ್ತಾರೆ. ಪ್ರಾಣಿಗಳ, ಅದರಲ್ಲೂ ಕೋಣಗಳ ಬಲಿ ನಡೆಯುತ್ತದೆ. ಕೆಲವೊಮ್ಮೆ ತಲೆ ಕಡಿದು ಅಥವಾ ಈಟಿಯಿಂದ ಹೃದಯಕ್ಕೆ ಚುಚ್ಚಿ ಅಥವ ಗಂಟಲು ಕತ್ತರಿಸಿ ಕೊಲ್ಲುತ್ತಾರೆ. ಹಿಂದೆ ನರಬಲಿಗಳೂ ನಡೆಯುತ್ತಿದ್ದುವೆಂದು ಹೇಳುತ್ತಾರೆ. ಈಗಲೂ ಕೆಲವು ಪ್ರದೇಶದ ಹಳ್ಳಿಗಳಲ್ಲಿ ಒಂದು ವರ್ಗದ ಜನ ಗುಟ್ಟಾಗಿ ನರಬಲಿ ನೀಡುತ್ತಾರೆ. ಹಿಂದೊಮ್ಮೆ ಫರ್ಪಂಗ್‌ನಲ್ಲಿ ನರಬಲಿ ಕೊಡಲು ಕಾನೂನಿನ ಒಪ್ಪಿಗೆಯಿತ್ತೆಂದೂ ಜನ ಜ್ಞಾಪಿಸಿಕೊಳ್ಳುತ್ತಾರೆ. ಈಗಲೂ ಜನರು ‘ಮಕ್ಕಳು ಗಾಳಿಯಲ್ಲಿ ಮಾಯವಾದರು’ ಎಂದು ಗೋಳಾಡುತ್ತಾರೆ, ಅವರ ಮಕ್ಕಳು ಕಾಣೆಯಾಗಿರುವ ಸಂಗತಿ ತಿಳಿದಾಗ. ಮಕ್ಕಳು ಮಾಂತ್ರಿಕರಿಂದ ಬಲಿಯಾದರು ಎಂದೇ ಅದಕ್ಕೆ ವ್ಯಾಖ್ಯಾನಿಸಲಾಗುತ್ತದೆ.

ಭಕ್ತಪುರದ ತಲೇಜು ಬಗ್ಗೆ ಇರುವ ಜನಪದ ಕತೆ ಹೀಗಿದೆ. ತ್ರೈಲೋಕ್ಯಮಲ್ಲ ದೊರೆಗಿಂತ ಹಿಂದಿನವರು ತಲೇಜುವನ್ನು ಭಕ್ತಪುರದಿಂದ ಕಾಠಮಾಂಡೊಗೆ ತೆಗೆದುಕೊಂಡು ಹೋದುದರಿಂದ ಭಕ್ತಪುರದ ಅವನಿಗೆ ಅವಳನ್ನು ದಿನವೂ ನೋಡುವುದು ಕಷ್ಟವಾಯಿತು. ಅವನ ದುಃಖವನ್ನರಿತ ದೇವಿಯು ಅವನ ಕನಸಲ್ಲಿ ಬಂದು ಹೇಳಿದಳು: “ನಾನು ನಿನ್ನ ಜೊತೆ ‘ತ್ರಿಪಾಸ’ ಆಡುತ್ತೇನೆ, ಯಾವ ಹೆಂಗಸನ್ನೂ ಒಳಕ್ಕೆ ಬಿಡಬೇಡ.” ಅವನು ತನ್ನ ಆಚಾರ್ಯರ ಸಲಹೆಯಂತೆ ವಜ್ರಗಳಲ್ಲಿ ಮಾಂತ್ರಿಕ ಚಿತ್ರದ ಯಂತ್ರವನ್ನು ತಲೇಜುವಿನ ಹಾಗೆ ಮಾಡಿಸಿ ಪೂಜಿಸಿ ದೇವಿಯ ನಿರೀಕ್ಷೆಯಲ್ಲಿರುವಾಗ ಅವನ ಮಗಳು ಗಂಗಾದೇವಿ ಒಳಗೆ ಬಂದುಬಿಟ್ಟಳು. ದೇವಿ ಬರಲಿಲ್ಲ. ಮುಂದಿನ ಕನಸಲ್ಲಿ ಅವಳು ಕಾಣಿಸಿಕೊಂಡು – “ಇನ್ನು ಮೇಲೆ ನೀನೆಂದೂ ನನ್ನನ್ನು ನೋಡಲಾರೆ. ಮೇಲ್ಜಾತಿ ಹುಡುಗಿಯೊಬ್ಬಳಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ” ಎಂದು ಹೇಳಿ ‘ಬಂದ್ಯ’ ಹುಡುಗಿ ‘ಕುಮಾರಿ’ಯಲ್ಲಿ ಕಾಣಿಸಿಕೊಂಡಳು. ‘ಕುಮಾರಿ’ ರೂಪದಲ್ಲಿ ತಲೇಜು ಪೂಜೆ ಭಕ್ತಪುರದಲ್ಲಿ ಮುಂದುವರೆದಿದೆ.[5]

ಕಾಠಮಾಂಡೊ ನಗರಕ್ಕೆ ಪೂರ್ವದಲ್ಲಿ ಎಂಟು ಮೈಲಿ ದೂರದಲ್ಲಿರುವ ಭಕ್ತಪುರದ ದಿನ ಮೊದಲು ಬಜ್ರಾಚಾರ್ಯ ಪೂಜಾರಿಯು ನಿರ್ದಿಷ್ಟ ಗುಣಗಳುಳ್ಳ ಕುಮಾರಿಯನ್ನು ಆರಿಸುತ್ತಾನೆ. ಆಕೆಯನ್ನು ತಲೇಜು ಕೊಳಕ್ಕೆ ಕರೆತಂದು ಸ್ನಾಮಾಡಿಸಿ ಆಕೆಗೆ ವಿಧಿವತ್ತಾದ ಪೂಜೆ ಮಾಡಿದರೆ ಅವಳು ತಲೇಜು ದೇವತೆಯ ಮಾನುಷರೂಪವೇ ಆಗುತ್ತಾಳೆ. ಜನತು ತಲೇಜುವನ್ನು ತಮ್ಮ ತಮ್ಮ ಮನೆಗಳಲ್ಲಿ ‘ಘಟ’ ಸ್ಥಾಪನೆ ಮಾಡಿ ಅದನ್ನು ಪೂಜಿಸುತ್ತಾರೆ. ‘ಘಟ’ವು ತಲೇಜುವಿನ ಸಂಕೇತ. ಮನೆಗಳಲ್ಲಿ ತಲೇಜು ಘಟ ಸ್ಥಾಪನೆಯಿಂದ ಆ ಹಬ್ಬ ಆರಂಭ. ತಲೇಜು ಪೂಜೆ ಬಳಿಕ ‘ಚಂಡೀಪಾಠ’ಉಂಟು. ಪ್ರತಿನಿತ್ಯ ತಟ್ಟೆಯಲ್ಲಿ ಅನ್ನ ಇಟ್ಟು ಕುಮಾರಿ ಪೂಜೆ ಮಾಡುತ್ತಾರೆ. ಪಂಚಮಿ ದಿನ ಮಾಂಸದ ನೈವೇದ್ಯ. ಷಷ್ಠಿ ದಿನ ತಲೇಜು ದೇವಾಲಯದಲ್ಲಿ ಮೂಲ ದೇವತೆಯ ಸಾಂಕೇತಿಕ ಪೂಜೆ ಆಗುತ್ತದೆ. ಸಪ್ತಮಿ ದಿನದ್ದು ವಿಶೇಷ ಪೂಜೆ. ನವಮಿ ದಿನ ಮೆರವಣಿಗೆ. ದಶಮಿ ದಿನ ತಲೇಜು ಸಂಕೇತದ ಘಟವನ್ನು ಗುಹ್ಯ ಪೂಜಾವಿಧಾನದಲ್ಲಿ ಅರ್ಚಿಸಿ ಅದರ ಮಂದಿರಕ್ಕೆ ಕುಮಾರಿಯನ್ನು ಕರೆತರುತ್ತಾರೆ. ರಾಜನ ಬದಲು ‘ರಾಜೋಪಾಧ್ಯಾಯ’ನು (ಮುಖ್ಯ ಪೂಜಾರಿ) ಗೌರವ ಸಲ್ಲಿಸುತ್ತಾನೆ. ಆ ದಿನ ‘ಕುಮಾರಿ’ಯ ಬಾಯಲ್ಲಿ ಭವಿಷ್ಯವಾಣಿ ಬರುತ್ತದೆ. ಮುಂದಾಗಲಿರುವ ಶುಭ, ಅಶುಭಗಳನ್ನು ಅವಳು ಹೇಳುತ್ತಾಳೆ. ಅಲ್ಲಿಗೆ ನವರಾತ್ರಿಯು ಘಟ ವಿಸರ್ಜನೆ ಮೂಲಕ ಮುಕ್ತಾಯಗೊಳ್ಳುತ್ತದೆ.[6]

ತಲೇಜು ದೇವಾಲಯಗಳ ಮುಂದೆ ಬಲಿಗಳ ಸಂಖ್ಯೆ ಹೆಚ್ಚು. ಬಲಿ ರಕ್ತ ಕೊನೆಯ ಪಕ್ಷ ಗುಡಿಯೊಳಕ್ಕೆ ನುಗ್ಗಬೇಕು ಎಂದು ಜನ ಅಪೇಕ್ಷಿಸುವುದುಂಟು. ಒಂಬತ್ತನೇ ದಿನ ‘ವಿಶ್ವಕರ್ಮ’ ದಿನ. ಆ ದಿನ ಆಯುಧ, ವಾಹನ, ಪುಸ್ತಕ ಇವುಗಳ ಪೂಜೆ ನಡೆಯುತ್ತದೆ.

ವಿಜಯದಶಮಿಯು ರಾಕ್ಷಸರ ಸಂಹಾರವಾದ ದಿನ. ನಂಟರಿಸ್ಟರು ಆ ದಿನ ಭೇಟಿಯಾಗುತ್ತಾರೆ; ಮನೆ ಮನೆಗಳಿಗೆ ಹೋಗಿ ಶುಭ ಹೇಳಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಅರಮನೆಯಲ್ಲಿ ಬ್ರಾಹ್ಮಣ ಪುರೋಹಿತರು ರಾಜನಿಗೆ “ಟಿಕ” (ಕುಂಕುಮ) ಇಡುತ್ತಾರೆ. ಆ ದಿನ ಸಂಜೆ ವಿಚಿತ್ರ ಮೆರವಣಿಗೆಗಳು ಆಗುತ್ತವೆ. ಖಡ್ಗಗಳ ಮೆರವಣಿಗೆಯೇ ‘ಖರ್ಗ ಜಾತ್ರ’. ಬೌದ್ಧ ತಾಂತ್ರಿಕರು (‘ಬಜ್ರಾಚಾರಿಗಳು’) ಕುಮಾರಿ, ಅಜಿಮ, ಗಣೇಶ ಇತ್ಯಾದಿ ವೇಷ ಹಾಕಿಕೊಂಡು ಕೈಯಲ್ಲಿ ಖಡ್ಗಹಿಡಿದು ಆವೇಶದಿಂದ ಕುಣಿಯುತ್ತಿದ್ದರೆ ಜನರು ಅವರ ಬಳಿ ಹೋಗಲು ಹೆದರುತ್ತಾರೆ.

ದಸರದ ಕೊನೆಯ ದಿನ, ಕಾರ್ತಿಕ ಪೂರ್ಣಿಮ ದಿನದಿಂದ ಒಂದು ತಿಂಗಳು ಹೆಂಗಸರು ಉಪವಾಸ ಆರಂಭಿಸಿ, ದಿನದಿಂದ ದಿನಕ್ಕೆ ಆಹಾರ ಕಡಿಮೆ ಮಾಡುತ್ತ ಬಂದು ಒಂದು ತಿಂಗಳ ಬಳಿಕ ಹುಣ್ಣಿಮೆ ದಿನ ಅದನ್ನು ನಿಲ್ಲಿಸುತ್ತಾರೆ. ಆ ದಿನ ಪಶುಪತಿ ದೇವಾಲಯದಲ್ಲಿ ದೀಪೋತ್ಸವ, ರಾತ್ರಿಯೆಲ್ಲ ಹಾಡು, ಕುಣಿತ.[7]

ತುಳಜಾ ಭವಾನಿ:

ಮಹಾರಾಷ್ಟ್ರದ ರಾಷ್ಟ್ರೀಯ – ದೈವಗಳೆಂದೇ ಮರಾಠಿ ಜನರು ಗೌರವಿಸುವ ಕೊಲ್ಲಾಪುರದ ಮಹಾಲಕ್ಷ್ಮೀ, ಪಂಡರಪುರದ ವಿಠೋಬ, ಜೆಜೂರಿಯ ಖಂಡೋಬ, ತುಳಜಾಪುರದ ತುಳಜಾಭವಾನಿ ಈ ನಾಲ್ಕೂ, ಸ್ವಾರಸ್ಯದ ವಿಷಯವೆಂದರೆ, ಕರ್ನಾಟಕದ ದೇವತೆಗಳು. ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯದ ಶಾಸನಗಳೆಲ್ಲವೂ ಕನ್ನಡದಲ್ಲಿವೆ ಮತ್ತು ಆ ಜಿಲ್ಲೆ ಹಿಂದೆ ಅಪ್ಪಟ ಕನ್ನಡ ಪ್ರದೇಶವಾಗಿತ್ತು. ಶಿವಾಜಿಯು ಅದನ್ನು “ಕರ್ನಾಟ”ವೆಂದೇ ಭಾವಿಸಿದ್ದನು.[8] ಪಂಡರಾಪುರದ ಹಳೆಯ ಹೆಸರು ‘ಪಂಡರಗೆ’ (ನೋಡಿ : ಜೇವರ್ಗಿ, ಮುಂಡರಗೆ); ವಿಠೋಬನನ್ನು ಸಂತಜ್ಞಾನೇಶ್ವರನು ‘ಕಾನಡಾ’ (ಕನ್ನಡ ದೇವತೆ) ಎಂದೇ ಕರೆದಿದ್ದಾರೆ. ಖಂಡೋಬ ಯಾರೂ ಅಲ್ಲ, ಕರ್ನಾಟಕದ ಮೈಲಾರ; ಅವನ ಹೆಂಡತಿ ಮಾಲ್ಹಸಾ ಕರ್ನಾಟಕದ ಮಾಳಚಿಯೇ. ತುಳಜಾಪುರದ ತುಳಜಾಭವಾನಿಯೂ ಮೂಲತಃ ಕರ್ನಾಟಕದ ದೇವತೆ. ಹಿಂದೊಮ್ಮೆ ಅಚ್ಚಗನ್ನಡ ಪ್ರದೇಶವಾಗಿದ್ದ ಮಹಾರಾಷ್ಟ್ರದ ಒಸ್ಮಾನ್‌ಬಾದ್‌ಜಿಲ್ಲೆಯ ತುಳಜಾಪುರವು ಸೊಲ್ಲಾಪುರಕ್ಕೆ ನಲವತ್ತು ಕಿಲೋ ಮೀಟರ್‌ದೂರದಲ್ಲಿರುವ ಅದೇ ಹೆಸರಿನ ತಾಲೂಕಿನ ಕೇಂದ್ರ (ಒಸ್ಮಾನಾಬಾದಿನ ಹಿಂದಿನ ಹೆಸರು ‘ಧಾರಾಶಿವ’). ಊರಿನ ಪೂರ್ವಕ್ಕೆ ಇರುವ ಹಳೇ ತುಳಜಾಪುರದಲ್ಲಿ ನೇಕಾರರು, ಕುಂಬಾರರು, ತೋಟಿಗರು ಇದ್ದಾರೆ. ತುಳಜಾಪುರ ಪಕ್ಕದ ಗುಡ್ಡದ ಓರೆಯಲ್ಲಿ, ಸ್ವಲ್ಪ ಕೆಳಗೆ ಒಂದು ಹಳ್ಳದ ದಂಡೆ ಮೇಲೆ ಇರುವ ತುಳಜಾಭವಾನಿಯ ಗುಡಿಯಲ್ಲಿ ಪೂರ್ವಾಭಿಮುಖವಾಗಿ ತುಳಜಾಭವಾನಿ ವಿಗ್ರಹವಿದೆ. ಕಲ್ಲಿನಲ್ಲಿ ಸುಂದರವಾಗಿ ಕೆತ್ತಿರುವ ಅಷ್ಟಭುಜ ವಿಗ್ರಹದ ಕಿರೀಟದಲ್ಲಿ ಶಿವಲಿಂಗ ಮತ್ತು ಯೋನಿಗಳನ್ನು ಬಿಡಿಸಿದೆ. ಕಾಲಕೆಳಗೆ ಕತ್ತರಿಸಿದ ಕೋಣನ ತಲೆ ಇದೆ. (ಚಿತ್ರ ೨೦) ದೇವಾಲಯದ ಸಮೀಪ “ಕಲ್ಲೊಳ್‌ತೀರ್ಥ”[9] ಎಂಬ ಕಲ್ಲಿನ ಸುಂದರ ಕೊಳವಿದೆ. ಈ ತೀರ್ಥದ ನೀರನ್ನು ಅತ್ಯಂತ ಪವಿತ್ರವೆಂದು ಭಾವಿಸುತ್ತಾರೆ. ಇನ್ನೂ ಕೆಳಗೆ ಗೋವಿನ ಬಾಯಲ್ಲಿ ನೀರು ಬರುವ ಗೋಮುಖ ತೀರ್ಥವಿದೆ.

ಶಿವಾಜಿಗೆ ಆರಾಧ್ಯದೈವವೂ ಸ್ಫೂರ್ತಿ ಕೇಂದ್ರವೂ ಆಗಿದ್ದ ತುಳಜಾಭವಾನಿ ವಿಗ್ರಹವನ್ನು ಕ್ರಿ.ಶ. ೧೬೫೯ರ ಸುಮಾರಿನಲ್ಲಿ ಅಫಜಲಖಾನನು ಕೊಂಡೊಯ್ದು ಭಗ್ನ ಮಾಡಿದನು. (ದೇವಾಲಯವು ಇನ್ನೂ ಹಿಂದಿನದು.) ಶಿವಾಜಿಯು ನೇಪಾಳದ ಗಂಡಕಿ ನದಿಯಿಂದ ಶಿಲೆಯನ್ನು ತರಿಸಿ ಈಗಿನ ಮೂರ್ತಿಯನ್ನು ಮಾಡಿಸಿದನಂತೆ!

ಮಹಿಷಾಸುರ ಮರ್ದಿನಿಯಾದ ತುಳಜಾಭವಾನಿಗೆ ತುರಜಾ, ತ್ವರಜಾ, ತ್ವರಿತಾ, ತುಕಾಇ ಎಂಬ ನಾಮಾಂತರಗಳೂ ಇವೆ.[10] ವಿಶೇಷವಾಗಿ ದಸರಾ ಸಮುಯದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ವಿಜಯದಶಮಿಯ ದಿನ ದೇವಾಲಯದ ತನ್ನ ಗಡಿ ದಾಟಿ ‘ಸೀಮೋಲ್ಲಂಘನ’ ಮಾಡುತ್ತಾಳೆ (ಇದು ಸಾಂಕೇತಿಕ). ಅಕ್ಟೋಬರ್‌ತಿಂಗಳಲ್ಲಿ ಈ ಜಾತ್ರೆ, ಏಪ್ರಿಲ್‌ತಿಂಗಳಲ್ಲಿ ಇನ್ನೊಂದು ಜಾತ್ರೆ ನಡೆಯುತ್ತವೆ. ಪೂರ್ಣಿಮೆ ದಿನ ಸಾವಿರಾರು ಜನರು ಸೇರುತ್ತಾರೆ. ಹಿಂದೆ ದೇವಿಗೆ ಪೂಜೆ, ನೈವೇದ್ಯ ನೆಪದಲ್ಲಿ ಮದ್ಯಪಾನ ಮಾಡುವ ರೂಢಿಯಿದ್ದು, ಈಗ ನೈವೇದ್ಯದ ಸಮಯದಲ್ಲಿ ಸಾಂಕೇತಿಕವಾಗಿ ಮದ್ಯವನ್ನು ಅರ್ಪಿಸಿದರೂ ಕುಡಿಯಲು ಅವಕಾಶವಿಲ್ಲ. ಹಿಂದೊಮ್ಮೆ ದೇವಿಯು ಆಟವಾಡುತ್ತ ಊಟವನ್ನೇ ಮರೆತು ದೇವಾಯಲದ ಹೊರಗೆ ಉಳಿದುದರಿಂದ, ಈಗಲೂ ಪೂಜಾರಿಯು ಪೂಜಾ ಸಮಯದಲ್ಲಿ ದೇವಿಯನ್ನು ಕೂಗಿ ಕರೆಯುತ್ತಾನೆ.

ಪಾರ್ವತಿ ಅವತಾರವಾದ ಅವಳು ಸೀತಾನ್ವೇಷಣೆ ವಿಷಯದಲ್ಲಿ ರಾಮನಿಗೆ ಮಾಡಿದ ಸಹಾಯದಿಂದಾಗಿ ‘ರಾಮವರದಾಯಿನೀ’ ಕೂಡ ಆಗಿದ್ದಾಳೆ.[11] ಶುಕ್ರವಾರ ವಿಶೇಷ ಪೂಜೆ ಇರುವುದರಿಂದ ಅವಳು ‘ತುಕಾಯಿ’ ಎಂದೂ (ಶುಕ್ರ – ತುಕ್ಕ) ಹೆಸರಾಗಿದ್ದಾಳೆ. ಸನಿಹದಲ್ಲಿ ಭವಾನೀಶಂಕರ, ಖಂಡೋಬ ದೇವಾಲಯಗಳಲ್ಲದೆ ತೋಳ ಭೈರವ, ಕಾಳಭೈರವ ಗುಡಿಗಳೂ ಇವೆ. ನಾಗಝರಿ ಎಂಬ ಹಳ್ಳದ ದಂಡೆಯ ಮೇಲೆ ಸ್ವಲ್ಪ ದೂರದಲ್ಲಿ ಮುದ್ಗಲೇಶ್ವರ ಗುಡಿ ಇದೆ. ರಾಮದರೀ ಎಂಬುದು[12] ಕಣಿವೆ ಪ್ರದೇಶವಾಗಿದ್ದು ಪ್ರಕೃತಿಯ ನಯನ ಮನೋಹರ ದೃಶ್ಯವನ್ನು ಅಲ್ಲಿ ಕಾಣಬಹುದು.

‘ತುಳಜಾ’ ಪದ ಹೇಗೆ ನಿಷ್ಪನ್ನಗೊಂಡಿದೆಯೋ ತಿಳಿಯದು (ಬಹುಶಃ ಅಚ್ಚಗನ್ನಡ ಪದ ಇದು. ೮೧ನೇ ಟಿಪ್ಪಣಿ ನೋಡಿ). ಆದರೆ ಹನ್ನೊಂದನೆ ಶತಮಾನದ ಅಂತ್ಯದಲ್ಲಿ ಕರ್ನಾಟಕದಿಂದ ನೇಪಾಳಕ್ಕೆ ಹೋದ ಕರ್ನಾಟ ವಂಶದ ಅರಸರ ಕುಲದೇವತೆಯಾಗಿದ್ದ ಅವಳು ತಲೇಜು ಹೆಸರಲ್ಲಿ ನೇಪಾದಲ್ಲಿ ಪ್ರಸಿದ್ಧವಾಗಿದ್ದು ತಲೇಜು ದೇವತೆಗೂ ಈಗಿನ ತುಳಜಾಭವಾನಿಗೂ ಸಾಮ್ಯ ಎದ್ದು ಕಾಣುತ್ತದೆ. ಇಬ್ಬರೂ ಮಹಿಷಾಸುರ ಮರ್ದಿನಿಯರು; ಎರಡು ಕಡೆಯೂ ಆ ದೇವಿಯ ಹೆಸರಲ್ಲಿ ನಡೆಯುವ ಉತ್ಸವ ಅತ್ಯಂತ ಜನಪ್ರಿಯ; ಎರಡೂ ಪ್ರಾಣಿ ಬಲಿ, ಮದ್ಯಪಾನಗಳಿಗೆ ಅವಕಾಶವಿರುವ ತಾಂತ್ರಿಕ ಪೂಜೆ ಕೈಗೊಳ್ಳುವ ದೇವತೆಗಳು. ಎರಡೂ ಕಡೆ ಭೈರವನ ದೇವಾಲಯಗಳಿವೆ. ಎರಡೂ ರಾಜರ ಕುಲದೇವತೆಗಳೇ.__


 

[1] A Comparative Dictionary of Indo – Aryan Languaes, P. 306.

[2] Singh : India’s Communities, VI, P. 3419, 3480, 3481, 3482, 3485 ಇತ್ಯಾದಿ ನೋಡಿ.

[3] ಪಂ. ರಾಘವೇಂದ್ರರಾವ್‌ಪಗಡೀ : ಮೈಥಿಲೀ ಕವಿ ವಿದ್ಯಾಪತಿ (ಮರಾಠಿ), ಪು. ೯.

[4] T. Burrow and M. B. Emeneau : A Dravidian Etymological Dictionary, P. 193.

[5] Bikram Jit Hasrat : History of Nepal, P.59.

[6] ಪುರುಷೋತ್ತಮ ಲೋಚನ ಶ್ರೇಷ್ಠ : ‘ಐತಿಹಾಸಿಕ್‌ಏವಂ ಸಾಂಸ್ಕೃತಿಕ ಸಂದರ್ಭಮಾ ಭಕ್ತಪುರ ತಲೇಜುಮಾ ಗರಿನೇ ದರ್ಶಪೂಜಾ ವಿಧಾನ್‌ – ಏಕ್‌ಚರ್ಚಾ’. Rolamba II, No. 3, (1991), P. 1 – 8.

[7]Mary M. Anderson: Festivals of Nepal ಕೃತಿಯಿಂದ ವಿವರಗಳು.

[8] ಅವನು ಹಂಪಿಗೆ ಹೋಗಿದ್ದಾಗ ಅಲ್ಲಿಯ ಜನಕ್ಕೆ ತನ್ನ ಮಗ ರಾಜಾರಾಮನನ್ನು ‘ಕರ್ನಾಟಕ’ದಲ್ಲಿ ಸ್ಥಾಪಿಸಿ (ಎಂದರೆ ಕೊಲ್ಲಾಪುರದಲ್ಲಿ) ತನ್ನ ಇಳಿವಯಸ್ಸಿನಲ್ಲಿ ಹಂಪಿಯಲ್ಲಿ ನೆಲಸುವುದಾಗಿ ಮಾತು ಕೊಟ್ಟಂತೆ ಅವನ ಸೊಸೆ, ರಾಜಾರಾಮನ ಪತ್ನಿ ತಾರಾಬಾಯಿ ಬರೆಯಿಸಿದ “ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ” ಕೃತಿಯಲ್ಲಿದೆ.

[9] ಈ ಹೆಸರಲ್ಲಿ ಕಲ್ಲು, ಒಳ (‘ಒಳಗೆ’ ಎಂಬರ್ಥವೂ ಇರಬಹುದು. ಶ್ರೇಷ್ಠ ಎಂಬರ್ಥವೂ ಇರಬಹುದು ಈ ಪದಕ್ಕೆ) ಎಂಬ ಎರಡು ಅಚ್ಚಗನ್ನದ ಹೆಸರುಗಳು ಸ್ಪಷ್ಟ. ಇದನ್ನು ಮರಾಠಿ ವಿದ್ವಾಂಸರು “ಕಲ್ಲೋಳ” (ಗಲಾಟೆ. ನೋಡಿ – ಅಲ್ಲೋಲ ಕಲ್ಲೋಲ’ ನೋಡಿ) ಎಂಬ ಪದದಿಂದ ನಿಷ್ಪನ್ನ ಮಾಡುತ್ತಾರೆ, ಕತೆಯೊಂದನ್ನು ಆಧರಿಸಿ. ಆದರೆ ಅದು ಬಹುಶಃ ಅಚ್ಚಗನ್ನಡವೇ.

[10] ತುರಜಾ – ಇದು ಕನ್ನಡದ ‘ತೊಱೆ’ (=ಹಳ್ಳ) ಪದದಿಂದ ಬಂದಿರುವಂತಿದೆ: ಇದು ‘ತುಳಜಾ’ ಎಂದು ಮಾರ್ಪಾಟಾಗಿರುವ ಸಾಧ್ಯತೆ ಇದೆ. (ನೋಡಿ –ತಮಿಳು. ತುಱೈ‘ಜಾಗ, ಮಾರ್ಗ, ನದಿ, ಸಮುದ್ರ’, ಮಲಯಾಳ. ತುಱ ‘ಬಂದರು, ಬಟ್ಟೆ ಒಗೆಯುವ ಜಾಗ, ಸಹಜ ಕೊಳ’, ಕನ್ನಡ. ತೊಱಿ; ತುಳು. ತುದೆ ‘ಹಳ್ಳ). ತುಳಜಾ ಭವಾನಿ ಗುಡಿ ಪಕ್ಕದಲ್ಲಿ ಕೊಳವೂ ಇದೆ, ನದಿಯೂ ಇದೆ.

[11] ಇಂತಹುದೇ ಕತೆ ತಲೇಜು ನೇಪಾಳದಲ್ಲಿ ಹಿಂದೆ ನೋಡಿದ್ದೇವೆ.

[12] ‘ತೋಳು’ ಪದ ಕನ್ನಡವೆಂಬಲ್ಲಿ ಅನುಮಾನವಿಲ್ಲ. ‘ಮುದ್ಗಲೇಶ್ವರ’ವು ಮುದುಗಲೇಶ್ವರ ಆಗಿದ್ದರೂ ಆಶ್ಚರ್ಯಪಡಬೇಕಾಗಿಲ್ಲ. (‘ಮುದ್‌’, ‘ಮುತ್‌ – ಎಂದರೆ ಪ್ರಾಚೀನ, ಪವಿತ್ರ) “ಜರಿ” “ದರಿ” (=ಇಳಿಜಾರು) ಎಂಬುವೂ ಅಚ್ಚಗನ್ನಡ ಪದಗಳೆಂಬುದು ಗಮನಾರ್ಹ. ತುಳಜಾಭವಾನಿ ದೈವದ ಬಗ್ಗೆ ವಿವರಗಳನ್ನು ಈ ಕೆಳ ಆಕರಗಳಿಂದ ಪಡೆದಿದ್ದೇನೆ – Maharashtra State Gazetteer (Osmanabad District); Imperial Gazetteer of India, Vol. XXIV; D. R. Amladi : Tulajapur Bhavani; ಮಹಾದೇವ ಶಾಸ್ತ್ರೀ ಜೋಶಿ : ಭಾರತೀಯ ಸಂಸ್ಕೃತಿ ಕೋಶ (ಮರಾಠಿ). ಇದರ ಕೆಲವು ಭಾಗಗಳನ್ನು ಓದಿ ವಿವರಿಸಿದವರು ಡಾ. ಸೂರ್ಯನಾಥ ಕಾಮತ್‌. ಅಮ್ಲಾದಿಯವರ ಕೃತಿಯತ್ತ ಗಮನ ಸೆಳೆದರು ಆದ್ಯ ರಾಮಾಚಾರ್ಯರು.