ಅನುಬಂಧ – ೩ : ನೇಪಾಳದ ಸಾಮಾಜಿಕ ಜೀವನ

[1]

೧. ನೇಪಾಳದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಸಾಂಪ್ರದಾಯಿಕ ಭೇದವಿದ್ದರೂ ಅವುಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ವರ್ಗಗಳನ್ನು ಮಾತ್ರ ಗುರುತಿಸಬಹುದು.[2] ಬ್ರಾಹ್ಮಣರು ಮೇಲ್ಜಾತಿಯವರು, ಮದುವೆ ಸಾವು ಇತ್ಯಾದಿ ಸಂದರ್ಭಗಳಲ್ಲಿ ಪೌರೋಹಿತ್ಯ ವಹಿಸುವವರು, ಕೆಲವು ದೇವಾಲಯಗಳಲ್ಲಿ ಅರ್ಚಕರು. ಬ್ರಾಹ್ಮಣರಲ್ಲಿ ಉಪಾಧ್ಯೆ, ಅರಿಯಾಲು, ಆಚಾರ್ಯ, ಪೌಡೇಲ್‌ಎಂಬಿತ್ಯಾದಿ ವರ್ಗಗಳುಂಟು. ಕ್ಷತ್ರಿಯರನ್ನು ‘ಛೇತ್ರಿ’ಗಳೆಂದು ‘ಜಜಮಾನ್‌’ ಎಂದು ಕರೆಯುತ್ತಾರೆ. ಇವರು ದೇವಾಲಯಗಳ ಪೂಜಾ ಉಸ್ತುವಾರಿ, ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವವರು.

ಅಸ್ಪೃಶ್ಯರು ದೇವಾಲಯಗಳ ಒಳಕ್ಕೆ ಬಂದು ಬ್ರಾಹ್ಮಣ ಅರ್ಚಕರಿಂದ ಆರತಿ ಸ್ವೀಕರಿಸಬಹುದು. ಪಶುಪತಿ ದೇವಾಲಯದಿಂದ ಒಂದು ಕಿಲೋ ಮೀಟರ್‌ದೂರದಲ್ಲಿರುವ ಗುಹ್ಯೇಶ್ವರಿ ದೇವಾಲಯದ ಅರ್ಚಕರು ಅಸ್ಪೃಶ್ಯರು. ‘ಪೋಡೆ’ ಚಿಯಾಮಿಗಳು ಕಸಗುಡಿಸುವವರ, ದಮೈಗಳು ವಾದ್ಯ ನುಡಿಸುವವರು – ಇವರು ಕೆಳವರ್ಗದವರು. ಎಲ್ಲರಿಗಿಂತ ‘ಪೋಡೆ’ಗಳು ಕೆಳಗಿನವರು. ಇವರು ಅಸ್ಪೃಶ್ಯರು. ಕಸೈಗಳು ಕುಸುಳಿಗಳು ತಮಂಗ್‌ಗಳು ಇವರು ಕಟುಕರು, ಅಸ್ಪೃಶ್ಯರು. ಅಸ್ಪೃಶ್ಯರನ್ನು ಮನೆಯೊಳಕ್ಕೆ ಬಿಡಿಸಿಕೊಳ್ಳುವುದಿಲ್ಲ; ಅವರು ಕರೆದರೂ ಒಳಗೆ ಹೋಗರು. ಕ್ಷೌರಿಕರು ಕ್ಷೌರಿಕ ಗಂಡಸರಿಗೆ ಹೆಂಗಸರಿಗೆ ಹೊಸ ವಸ್ತ್ರ ನೀಡುತ್ತಾರೆ.

೨. ಹಿಂದೆ ದೇವತೆಗಳಿಗೆ ನರಬಲಿಗಳನ್ನು ನೀಡುತ್ತಿದ್ದರು, ವಿಶೇಷವಾಗಿ ಕಾಳಿಗೆ. ಬದುಕಿರುವ ಮಗುವನ್ನು ಕೊಂದು ಮಾಂಸವನ್ನು ಹಾಗೇ ಹುಗಿದು, ಹನ್ನೆರಡು ವರ್ಷದ ಬಳಿಕ ಸುಡುತ್ತಿದ್ದರು. ನಿರ್ದಿಷ್ಟವಾಗಿ ಮೂವತ್ತೆರಡು ಲಕ್ಷಣಗಳನ್ನು ಹೊಂದಿರುವವರನ್ನು ಹುಡುಕಿ ಕದ್ದು ಕೊಲ್ಲುತ್ತಿದ್ದರು. ಅದರಲ್ಲೂ “ಧಾರ್ಮಿ” ಹೆಸರಿನ ಮಂತ್ರ ತಂತ್ರ ತಿಳಿದಿದ್ದ ಜನ. ಇವರು ಜುಟ್ಟು ಬಿಟ್ಟು ಬಿಳಿ ಬಟ್ಟೆ ಧರಿಸುತ್ತಿದ್ದರು.

ಹಿಂದೆ ಭಾರತದಲ್ಲಿ ಬಹುವಾಗಿ ಜನ ಹೆದರುತ್ತಿದ್ದದು ಕಾಪಾಲಿಕರಿಗೆ. ಅವರು ಶಿವನಿಗೆ (ಕಾಳಿಗೆ) ನರಬಲಿಯನ್ನು ಕೊಡುತ್ತಿದ್ದರು. ಈಗಲೂ ನೇಪಾಳದಲ್ಲಿ ಕಾಪಾಲಿಕ ಎಂನ ಹೆಸರಿನ ಭಿಕ್ಷುಕರು ಕೊರಳಲ್ಲಿ ತಲೆ ಬುರುಡೆ (ಮನುಷ್ಯರ ತಲೆ ರೀತಿಯ ಬೊಂಬೆಗಳು) ಧರಿಸಿ, ಕೈಯಲ್ಲಿ ತ್ರಿಶೂಲ, ಡಮರು ಹಿಡಿದು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಾರೆ. ಅವರನ್ನು ಜೋಗಿ (ಜುಗಿ) ಎಂದು ಕರೆಯುತ್ತಾರೆ. ಅವರು ತಮ್ಮ ಹೆಸರುಗಳ ಹಿಂದೆ “ಕಪಲಿ” ಎಂದು ಸೇರಿಸಿಕೊಳ್ಳುತ್ತಾರೆ. ಅವರು ಭಿಕ್ಷೆ ಬೇಡುವುದರ ಜೊತೆ ಮುಂದಿನ ಭವಿಷ್ಯ ಕೂಡ ಹೇಳುತ್ತಾರೆ. ಅವರು ಈಗ ಅಸ್ಪೃಶ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ.[3] ಇವರು ನರಬಲಿ ಕೈಬಿಟ್ಟಿದ್ದಾರಾದರೂ, ಗುಟ್ಟಾಗಿ ನರಬಲಿ ಕೊಡುತ್ತಾರೆ ಎಂಬ ಗುಮಾನಿ ಜನರಿಂದ ತೊಲಗಿಲ್ಲ.

೩. ಸಹಗಮನ ಪದ್ಧತಿ ಈಗ ಸಂಪೂರ್ಣ ಮರೆಯಾಗಿದೆ. ಗುಡ್ಡ ಪ್ರದೇಶಗಳಲ್ಲಿ ಕೆಲವರು ನಾಲ್ವರು ಹೆಂಡಿರನ್ನು, ಅದು ಕಾನೂನು ಬಾಹಿರವಾಗಿದ್ದರೂ ಮದುವೆಯಾಗುತ್ತಾರೆ. ಅಕ್ಕನ ಮಗಳನ್ನು ಅಥವಾ ಬಂಧುಗಳನ್ನು ಮದುವೆಯಾಗುವಂತಿಲ್ಲ. ಹಿಂದಿನ ಏಳು ತಲೆಮಾರು ಯಾವುದೇ ಬಾಂಧವ್ಯವಿರದ ಕುಟುಂಬಗಳ ಮಧ್ಯೆ ಮಾತ್ರ ವಿವಾಹಗಳು ಸಾಧ್ಯ. ಮನೆಯ ಮಗಳಿಗೆ ಆಸ್ತಿಯಲ್ಲಿ ಹಕ್ಕು ಇಲ್ಲದಿದ್ದರೂ ಅವಳ ತಾಯಿಗೆ ಸ್ವಾಭಾವಿಕವಾಗಿ ಬಂದದ್ದು ಅವಳಿಗೂ ದೊರೆಯುತ್ತದೆ. ವರದಕ್ಷಿಣೆ ಪದ್ಧತಿ ಇಲ್ಲ. ಹೆಣ್ಣಿನ ತಂದೆ ಅಳಿಯನಿಗೆ ಮನೆ ಸಾಮಾನು (‘ಡೈಜು’ ‘ದಹೇಜ್‌’) ಕೊಡಿಸುವ ಪದ್ಧತಿಯಿದೆ.

೪. ರಾಜ ಬಂಶಿ ಜಾತಿಯ ಜನರಲ್ಲಿ ತೆರೆ (ವಧುದಕ್ಷಿಣೆ) ಕೊಡದ ಹುಡುಗನು ಹುಡುಗಿಯ ಮನೆಯಲ್ಲಿ ದುಡಿದು ಅದನ್ನು ತೀರಿಸಬೇಕು.[4] ಹಳ್ಳಿಗಳ ಕಡೆ ಹುಡುಗಿ ಜೊತೆ ಹುಡುಗ ಮನೆಬಿಟ್ಟು ತಪ್ಪಿಸಿಕೊಂಡು ಹೋಗಿ ಅವಳನ್ನು ಮದುವೆಯಾಗುವ ಪದ್ಧತಿ ಇದೆ. ಹುಡುಗಿ ಏಳು ವರ್ಷದವಳಾಗಿದ್ದಾಗಲೇ ಬಿಲ್ವ ಫಲದ ಜೊತೆ ಅವಳ ಮದುವೆ ಆಗುತ್ತದೆ. ಮದುವೆ ಆದಮೇಲೆ ಮುಂದೆ ಅವಳು ಮದುವೆಗೆ ಮುನ್ನ ಹುಡುಗ ಕೊಟ್ಟಿದ್ದ ಅಡಕೆ ವಾಪಸ್‌ಕೊಟ್ಟು ಮತ್ತೆ ಇನ್ನೊಬ್ಬನ ಜೊತೆ ಮದುವೆಯಾಗಬಹುದು. ಬಿಲ್ವ ಫಲದ ಜೊತೆ ಮದುವೆ ಆದ ಹುಡುಗಿಯಾದ್ದರಿಂದ ಅವಳು ಎಂದೂ ವಿಧವೆ ಅಥವಾ ಪರಿತ್ಯಕ್ತೆ ಎನ್ನಿಸಿಕೊಳ್ಳುವುದಿಲ್ಲ.

೫. ನೇಪಾಳದ ಶೈವಧರ್ಮವೇ ಪ್ರಧಾನ. ಅವರ ಕುಲದೇವತೆ ‘ಕಾಲಿ’ (ಅಥವಾ ಶಕ್ತಿ). ವಿಷ್ಣು ದೇವಾಲಯಗಳು ಅಲ್ಲಿ ಕಡಮೆ. ನಾಮಧಾರಿಗಳಾದ ವೈಷ್ಣವರು, ಅದರಲ್ಲೂ ನೇಪಾಳಿ ವೈಷ್ಣವರು ಪ್ರಾಮಾಣಿಕರಲ್ಲವೆಂಬ ಒಂದು ಸಾಮಾನ್ಯ ನಂಬಿಕೆಯಿದೆ. ಇದ್ದುದರಲ್ಲಿ ಭಾರತದಿಂದ ಹೋದ ವೈಷ್ಣವರು ನಂಬಲರ್ಹರೆನ್ನುತ್ತಾರೆ.

೬. ಗರ್ಭಗುಡಿ ಸೇರಿದಂತೆ ಇಡೀ ದೇವಾಲಯದ ಪ್ರಾಕಾರದೊಳಕ್ಕೆ ವಿದ್ಯುಚ್ಛಕ್ತಿ ಪ್ರವೇಶವಿಲ್ಲ. ಅಲ್ಲಿ ಅಖಂಡ ಜ್ಯೋತಿಯಾಗಿ ದೀಪ ಉರಿಯಬೇಕು. ಈರುಳ್ಳು, ವಿದೇಶಿ ತರಕಾರಿಗಳು ಮೈಲಿಗೆಯೆಂದೇ ಪರಿಗಣಿತ. ಅಗ್ನಿಯು ಪವಿತ್ರವಾದ್ದರಿಂದ ಅಡುಗೆ ಮನೆಯ ಒಲೆಗೆ ಅನೇಕರು ತ್ಯಾಜ್ಯವಸ್ತುಗಳನ್ನು (ಉದಾ. ಕಾಗದ, ರಟ್ಟು) ಹಾಕುವುದಿಲ್ಲ.

೭. ಗೋಮಾಂಸವನ್ನುಳಿದ ಮಾಂಸಾಹಾರವು ನೇಪಾಳದಲ್ಲಿ ಸರ್ವೇಸಾಮಾನ್ಯ ಬ್ರಾಹ್ಮಣರೂ ಕೂಡ ಬಹುತೇಕ ಮಾಂಸಾಹಾರಿಗಳು. ವೈಷ್ಣವರು ಮಾತ್ರ ಶಾಕಾಹಾರಿಗಳು. ಅಸ್ಪೃಶ್ಯರು ಸತ್ತ ಗೋಗಳ ಮಾಂಸ ತಿನ್ನುತ್ತಾರೆ. ವಿಧವೆಯರು ಮಾಂಸ ಬೆಳ್ಳುಳ್ಳಿ ಈರುಳ್ಳಿಗಳನ್ನು ಅವು ‘ರಾಜಸಿಕ’ ಎಂದು ವರ್ಜಿಸುತ್ತಾರೆ.

೮. ನೇಪಾಳದಲ್ಲಿ ರಾಜತ್ವ, ಧರ್ಮ ಇವು ಅಲ್ಲಿನ ಜನಜೀವನವನ್ನು ನಡೆಯಿಸುವ ಚೈತನ್ಯ ಶಕ್ತಿಗಳು. ರಾಜ, ಅವರಿಗೆ ಇಂದಿಗೂ ಪ್ರತ್ಯಕ್ಷ ದೇವತೆ (ಆ ಕಾರಣವಾಗಿಯೇ ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ ಮಾವೋ ವಾದವು ಹುಟ್ಟಿಕೊಂಡಿರುವುದು). ರಾಜನು ಸತ್ತ ಮೇಲೆ ಅವನ ದಹನ ಇತ್ಯಾದಿಗಳು ನಡೆದು ಕೆಲದಿನಗಳ ಬಳಿಕ ಅವನ ಶ್ರಾದ್ದ ಸಮಾರಾಧನೆ ನಡೆದ ದಿನವೇ ಅರಮನೆಯಲ್ಲಿ ರಾಜಾನ್ನವನ್ನು ಸ್ವೀಕರಿಸಿದ ಬ್ರಾಹ್ಮಣನಿಗೆ ಹಣವನ್ನು ಕೊಟ್ಟು ನಗರದಿಂದ (ನೇಪಾಳದಿಂದ) ಹೊರಕ್ಕೆ ಕಳುಹಿಸುತ್ತಾರೆ. ಅವನು ಒಂದು ವರ್ಷ ಎಲ್ಲರಿಂದ ಕಣ್ಮರೆಯಾಗಿ ಹೋಗಬೇಕು. ರಾಜನ ಪ್ರೇತವು ಅವನ ಮೂಲಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಪವಿತ್ರಾತ್ಮಕವಾಗಿ ಮೋಕ್ಷವನ್ನು ಪಡೆಯಲಿ ಎಂಬ ಆಶಯ ಅದರ ಹಿಂದಿರುವಂತಿದೆ. ಹಿಂದೆ ಆ ಬ್ರಾಹ್ಮಣ ನೇಪಾಳವನ್ನು ಬಿಟ್ಟು ಹೊರಗೆ ಹೋಗುತ್ತಿದ್ದನು. ಈಗ ನೇಪಾಳದ ದಕ್ಷಿಣಕ್ಕಿರುವ ತಿರೈನಂತಹ ಭಾಗಕ್ಕೆ ಹೋಗುತ್ತಾನೆ. ಕಾಲವು ಆಧುನಿಕಗೊಂಡಂತೆ ಅಂತಹ ಆಚರಣೆಗಳು ಸಡಿಲಗೊಳ್ಳುವುದನ್ನು ಯಾರೂ ಊಹಿಸಿಕೊಳ್ಳಬಹುದು.

೯. ಪಶುಪತಿ ದೇವಾಲಯಕ್ಕೆ ಒಂದು ಕಿಲೋ ಮೀಟರ್‌ದೂರದ ಗುಹ್ಯೇಶ್ವರಿಯಲ್ಲಿ ಪೂಜೆ ನಡೆಯುವುದು ನೆಲದ ಮೇಲೆ ಕೆತ್ತಿರುವ ಸ್ತ್ರೀ ಯೋನಿಗೆ ಅದು ‘ಸತಿ’ ಪಾರ್ವತಿಯ ಗುಹ್ಯಾಂಗ. ಪಶುಪತಿ ಮಹಾದೇವಾಲಯದ ಪರಿಸರದಲ್ಲಿರುವ ಕೆಲವು ಪ್ರಮುಖ ದೇವಾಲಯ ಅಥವಾ ಮೂರ್ತಿಗಳು ಇಂತಿವೆ: ಶ್ರೀ ಕಿರಾತೇಶ್ವರ್‌, ಶ್ರೀಗೋರಕನಾಥ ಮಂದಿರ್‌, ಶ್ರೀ ರಾಜರಾಜೇಶ್ವರಿ ನವದುರ್ಗಾ ಮಂದಿರ್‌, ಶ್ರೀ ಭಸ್ಮೇಶ್ವರ್‌ಶಿವಲಿಂಗ, ಶ್ರೀ ನೀಲ ಸರಸ್ವತಿ, ಶ್ರೀ ವತ್ಸಲೇಶ್ವರಿ ಮಂದಿರ್‌, ಶ್ರೀ ಮೃಗೇಶ್ವರ್‌, ಶ್ರೀ ವಿರೂಪಾಕ್ಷ, ಶ್ರೀ ಗಂಗಾಮಾಯೀ ಮಂದಿರ್‌, ಶ್ರೀರಾಮ ಮಂದಿರ್‌, ಶ್ರೀ ಲಕ್ಷ್ಮೀನಾರಾಯಣ ಮಂದಿರ್‌, ಶ್ರೀ ವಿಶ್ವರೂಪು ಮಂದಿರ್‌. ನದಿ ದಾಟಿ ಗುಹೇಶ್ವರಿ ಮಂದಿರಕ್ಕೆ ಹೋಗುವ ದಾರಿಯ ಎಡಗಡೆಯ ಗುಡ್ಡವೇ ಮೃಗಸ್ಥಲೀ. ಅಲ್ಲಿ ಸಾಧುಸಂತರು ಇರಲು ಚಿಕ್ಕ ಮನೆಗಳಿವೆ. ಅರ್ಧ ಹೂತು ಹೋಗಿರುವ ಬುದ್ಧ ವಿಗ್ರಹವಿದೆ. ಗುಡ್ಡದ ಕೆಳಗೆ ನಗರಕ್ಕೆ ಅಂಟಿಕೊಂಡಂತೆ ದೊಡ್ಡ ಗೋಶಾಲೆ ಇದೆ. ನೇಪಾಳವು ೧೯೫೦ ರವರೆಗೆ ಹೊರಗಿನವರಿಗೆ ನಿಷೇಧಿತವಾಗಿದ್ದರೂ ಪಶುಪತಿನಾಥ ದರ್ಶನಕ್ಕೆ ಬರುವ ಭಾರತದ ಸಾಧುಸಂತರಿಗೆ ಪ್ರವೇಶವಿದ್ದು ಅವರಿಗೆ ಸರ್ಕಾರವೇ ಸ್ವಲ್ಪ ಹಣ, ಬೆಚ್ಚನೆಯ ಕಂಬಳಿ ನೀಡುತ್ತಿತ್ತೆಂದು ತಿಳಿದುಬಂದಿದೆ.

೧೦. ನೇಪಾಳಿಗಳು ಸಾಮಾನ್ಯವಾಗಿ ಶವಗಳ ದಹನ ಮಾಡಿದರೂ ‘- ಪುರಿ’, ‘ಭಾರತ’, ‘- ಗಿರಿ’ ವರ್ಗಗಳ ಸನ್ಯಾಸಿಗಳನ್ನು ಮಾತ್ರ ಕೂರಿಸಿ ಹುಗಿಯುತ್ತಾರೆ.

೧೧. ಕಾಠಮಾಂಡೊಕ್ಕೆ ಐದು ಕಿಲೋ ಮೀಟರ್‌ದೂರದಲ್ಲಿರುವ ಗೋಕರ್ಣದಲ್ಲಿ ನದಿಯು ಉತ್ತರ ವಾಹಿನಿಯಾಗಿದ್ದು, ಅದು ಶ್ರಾದ್ಧ ಕರ್ಮಗಳಿಗೆ ಪ್ರಶಸ್ತವೆಂದು ಪರಿಗಣಿತವಾಗಿದೆ. ಹುಣ್ಣಿಮೆ ದಿನಗಳಂದು ಜನ ಸ್ನಾನಕ್ಕೆ ಅಲ್ಲಿಗೆ ಧಾವಿಸುತ್ತಾರೆ. ಗೋಕರ್ಣವನ್ನು ‘ಸ್ವಸ್ಥಾನಿ’ಯೆಂದು ಕರೆಯಲು ಕಾರಣ, ಜನರು ಪರಲೋಕಕ್ಕೆ, ತಮ್ಮ ಮೂಲ ಸ್ಥಾನಕ್ಕೆ ತೆರಳುವ ಜಾಗ ಅದು ಎಂಬ ನಂಬಿಕೆ ಇರಬಹುದು.

೧೨. ಮತಾಂತರ ಕಾರ್ಯಕ್ಕೆ ಅವಕಾಶವಿಲ್ಲವಾದರೂ ಕೆಲವೆಡೆ ಆಸೆ ಆಮಿಷ ತೋರಿಸಿ ಹಿಂದೂಗಳನ್ನು ಕ್ರಿಶ್ಚಿಯನ್‌ಧರ್ಮಕ್ಕೆ ಸೇರಿಸಿಕೊಳ್ಳುತ್ತಿರುವುದಂತೂ ನಡೆದಿದೆ. ಅಂತಹ ಕೆಲವರು ವಿರಳವಾಗಿ ಗೋದಾನ ಮಾಡಿ, ಪ್ರಾಯಶ್ಚಿತ್ತ ವಿಧಿಗಳ ಮೂಲಕ ಹಿಂದೂ ಧರ್ಮಕ್ಕೆ ವಾಪಾಸಾಗಿದ್ದಾರೆ. ಅಂತವರು ‘ಸಪ್ತಸಾಗರ’ದ ಆಚೆಯಿಂದ ಬಂದವರೆಂದೇ ಪರಿಗಣಿತರಾಗುತ್ತಾರೆ. ಹಿಂದೂ ಹುಡುಗ ಒಬ್ಬ ಮುಸ್ಮಿಮ್‌ಹುಡುಗಿಯನ್ನು ಮದುವೆಯಾದರೆ ಅವನು ಮುಸ್ಲಿಂ ಆದಂತೆಯೇ. ಇಂಥವರ ಸಂಖ್ಯೆ ಜಾಸ್ತಿ ಇಲ್ಲ. ಆದರೆ ಹೊರಗಿನಿಂದ ನಿರಾಶ್ರಿತರ ಹೆಸರಲ್ಲಿ ಮುಸ್ಲಿಮರು ಹೆಚ್ಚಾಗಿ ಬರುತ್ತಿದ್ದಾರೆ. ಹಿಂದಿಗಿಂತ ಈಗೀಗ ಮಸೀದಿಯು ನೇಪಾಳದಲ್ಲಿ ಎದ್ದು ಕಾಣಿಸುವ ವ್ಯವಸ್ಥೆಯಾಗಿದೆ. ಮುಸ್ಲಿಮರು ಹೆಚ್ಚು ಹೆಚ್ಚಾಗಿ ಮಸೀದಿಗಳಿಗೆ ಹೋಗುವುದು ಎಲ್ಲ ಕಡೆ ಕಂಡುಬರುತ್ತದೆ.

 

ಅನುಬಂಧ – ೪ : ವಾರಣಾಸಿ (ಕಾಶಿ) – ಕರ್ನಾಟಕ

ಹಿಂದೆ ಉತ್ತರ ಭಾರತದ ಹದಿನಾರು ರಾಜ್ಯಗಳಲ್ಲಿ (‘ಜನಪದ’) ಕಾಶಿಯೂ ಒಂದಾಗಿದ್ದು, ಒಂದು ಆಡಳಿತ ಭಾಗದ ಹೆಸರಾಗಿದ್ದು ಅದರ ರಾಜಧಾನಿ ‘ವಾರಣಾಸಿ’ ಎಂದು ಕರೆಯಿಸಿಕೊಳ್ಳುತ್ತಿತ್ತು. ಕ್ರಮೇಣ ‘ಕಾಶಿ’, ‘ವಾರಣಾಸಿ’ ಹೆಸರುಗಳು ಸಮಾನಾರ್ಥಕಗಳಾದುವು. ಕಾಶಿಯು ಆರಂಭದಲ್ಲಿ ರಾಜಕೀಯ ಪ್ರಾಮುಖ್ಯವನ್ನು ಪಡೆದಿದ್ದು ಕ್ರಮೇಣ ಅದೊಂದು ಪುಣ್ಯಕ್ಷೇತ್ರ, ಆಧ್ಯಾತ್ಮಿಕ ಕೇಂದ್ರವೆಂದು ಪ್ರಸಿದ್ಧವಾಯ್ತು. ಹನ್ನೊಂದನೇ ಶತಮಾನದ ಕಲ್ಹಣನ ರಾಜತರಂಗಿಣಿ ಪ್ರಕಾರ, ಸಾವನ್ನಪ್ಪಲು ಕಾಶ್ಮೀರದ ಜನ ಕಾಶಿಗೆ ಧಾವಿಸುತ್ತಿದ್ದರು.[5] ‘ಕಾಶೀಖಂಡ’ ಹೇಳುವಂತೆ ಶಿವನ ಗಣಗಳು ಸ್ಥಾಪಿಸಿದ ನಲವತ್ತು ಲಿಂಗಗಳಲ್ಲಿ ಈಗ ಹನ್ನೆರಡು ಉಳಿದಿವೆ.[6]

ವಾರಣಾಸಿಯು ನೇಪಾಳಿಗಳೂ ಸೇರಿದಂತೆ ಎಲ್ಲ ಹಿಂದೂಗಳಿಗೂ ಪವಿತ್ರ ಕ್ಷೇತ್ರವೆಂಬುದನ್ನು ವಿವರಿಸಬೇಕಾಗಿಲ್ಲ. ಅಷ್ಟೇ ಅದು ಜೈನರಿಗೂ ಬೌದ್ಧರಿಗೂ ಪವಿತ್ರ ಸ್ಥಳ. ಕಾಶಿಗೆ ಸಂಬಂಧಿಸಿದ ಕೆಳಗಿನ ತೇದಿಗಳನ್ನು ಆ ದೃಷ್ಟಿಯಿಂದಲೂ ಗಮನಿಸಿ.

ಕ್ರಿ. ಪೂ. ೮ನೇ ಶ. ಜೈನ ಇಪ್ಪತ್ತಮೂರನೇ ತೀರ್ಥಂಕರ ಪಾರ್ಶ್ವನಾಥನ ಜನನ.
ಕ್ರಿ. ಪೂ. ೬ನೇ ಶ. ಬುದ್ಧನು ಕಾಶಿ ಪಕ್ಕದ ಸಾರನಾಥದಲ್ಲಿ ಬೋಧಿಸಿದನು.
ಕ್ರಿ. ಪೂ. ೨೪೦ನೇ ಅಶೋಕ ಕಾಶಿಬೆ ಭೇಟಿ ನೀಡಿದ್ದನು.
ಕ್ರಿ. ಶ. ೪೯೦ ವಿಶ್ವನಾಥ ಮಹಾದೇವನಿಗೆ ಮೊದಲ ದೇವಸ್ಥಾನ ನಿರ್ಮಾಣ. ಮುಂದೆ ಚೀನಿ ಪ್ರವಾಸಿ ಹ್ಯುಯೆನ್‌ತ್ಸಾಂಗ್‌ಕಾಶಿಯಲ್ಲಿ ಎಪ್ಪತ್ತು ವಿಹಾರ, ನೂರು ದೇವಾಲಯಗಳನ್ನು ಕಂಡನು.
ಕ್ರಿ. ಶ. ೧೦೧೩ ಅಹಮದ್‌ನಿಯಲ್ತಗೀನನಿಂದ ನಗರ ನಾಶ; ಹಲವು ಗುಡಿಗಳ ನಾಶ.
ಕ್ರಿ. ಶ. ೧೧೯೪ ಕುತುಬ್‌ಉದ್ದೀನ್‌ಏಬರ್ಕನಿಂದ ವಿಶ್ವನಾಥ ದೇವಾಲಯ ನಾಶ. ಹಲವು ದೇವಾಲಯಗಳ ಜಾಗದಲ್ಲಿ ಮಸೀದಿ ಕಟ್ಟಿಸಿದನು.
ಕ್ರಿ. ಶ. ೧೩ನೇ ಶ. ಅಲ್ಲಾವುದೀನನಿಂದ ಒಂದು ಸಾವಿರ ದೇವಾಲಯ ನಶ.
ಕ್ರಿ. ಶ. ೧೪೯೪ ಸಿಕಂದರ್‌ಲೋದಿಯಿಂದ ಒಂದು ಸಾವಿರ ಗುಡಿ ನಾಶ. ಪ್ರಯಾಗ ಕೂಡ ನಾಶ.
ಕ್ರಿ. ಶ. ೧೫೮೫ ತೋದರ ಮಲ್‌ನಿಂದ ವಿಶ್ವನಾಥ ಮಂದಿರದ ಪುನರ್ನಿರ್ಮಾಣ.
ಕ್ರಿ. ಶ. ೧೬೬೪ ವಿಶ್ವನಾಥನ ದೇವಾಲಯದ ಪಕ್ಕದಲ್ಲಿ ದಶನಾಮಿನಾಗ ಸನ್ಯಾಸಿಗಳಿಗೂ ಔರಂಗಜೇಬನ ಸೈನ್ಯಕ್ಕೂ ಕಾದಾಟ ದೇವಾಲಯ ನಾಶ – ವಿಶ್ವನಾಥನ ಮೂರ್ತಿ ಭಗ್ನ. ಅಲ್ಲಿ ಮತ್ತು ಬಿಂದುಮಾಧವ ಮಂದಿರದಲ್ಲಿ ಮಸೀದಿ ನಿರ್ಮಾಣ. ಕಾಶಿಗೆ ‘ಮುಹಮ್ಮದಾಬಾದ್‌’ ನಾಮಕರಣ.
ಕ್ರಿ. ಶ. ೧೭ನೇ ಶ. ಶಹಜಹಾನ್‌ನಿಂದ ಎಪ್ಪತ್ತಾರು ಗುಡಿ ನಾಶ. ೧೬೩೨ ರಲ್ಲಿ ಅರವತ್ತೇಳು ದೇವಾಲಯಗಳನ್ನು ನಿರ್ಮಿಸಿದ್ದನ್ನು ಕೇಳಿ ತಕ್ಷಣ ಅದನ್ನು ಕೆಡವಿಸಿದನು.
ಕ್ರಿ. ಶ. ೧೭೭೭ ವಿಶ್ವನಾಥ ದೇವಾಲಯ ಪುನರುದ್ಧಾರ – ಹೊಸ ಶಿವಲಿಂಗ ಮೂರ್ತಿ ಪ್ರತಿಷ್ಠಾಪನೆ, [7] ಅಹಲ್ಯಾಬಾಯಿ ಹೋಳ್ಕರ್‌ಮೂಲಕ.

ಮೇಲೆ ಸೂಚಿಸಿರುವಂತೆ, ಸಿಕಂದರ್‌ಲೋದಿಯಿಂದ ಹದಿನೈದನೇ ಶತಮಾನದಲ್ಲಿ ಕಿತ್ತು ಹಾಕಲ್ಪಟ್ಟ ವಿಶ್ವನಾಥನ ಶಿವಲಿಂಗವನ್ನು ನೇಪಾಳದ ಭಕ್ತಪುರಕ್ಕೆ ಒಯ್ದು ಅಲ್ಲಿ ಸ್ಥಾಪಿಸಿರುವಂತೆ ತೋರುತ್ತದೆ. (ಅನುಬಂಧ – ೬ ನೋಡಿ).

ಸಂಗತಿಯ ಸ್ವಾರಸ್ಯಕ್ಕಾಗಿ ಈ ಎರಡು ವಿಷಯಗಳನ್ನು ದಾಖಲಿಸಲಾಗಿದೆ. ವೈಕುಂಠ ಚತುರ್ದಶಿ ದಿನ ಕಾಶಿಯಲ್ಲಿ ವಿಶ್ವನಾಥನಿಗೆ ತುಲಸಿ ಪತ್ರವನ್ನು ವಿಷ್ಣುವಿಗೆ ಬಿಲ್ವ ಪತ್ರವನ್ನು ಏರಿಸಲಾಗುತ್ತದೆ.

ನೇಪಾಳದಿಂದ ಗಿಳಿಗಳನ್ನು ಅಲ್ಲಿನ ಭಕ್ತರು ಕಾಶಿಗೆ ತಂದು ಶಿವನ ಹೆಸರಲ್ಲಿ ಅವುಗಳಲ್ಲಿ ಹಾರಿ ಬಿಡುತ್ತಾರೆ.[8]

ಕಾಶಿಯಲ್ಲಿ ಗಂಗಾನದಿಗೆ ಅನೇಕ ಸ್ನಾನ ಘಟ್ಟಗಳಿವೆ. ಮಣಿ ಕರ್ಣಿಕಾ, ಹರಿಶ್ಚಂದ್ರ ಇತ್ಯಾದಿ. ಅವುಗಳಲ್ಲಿ ಹನುಮಾನ್‌ಘಾಟ್‌ಭಾಗವಾಗಿ “ಕರ್ನಾಟಕ ಘಾಟ್‌” ಎಂಬುದೂ ಒಂದು. ಅದನ್ನು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಮೈಸೂರರಸರು ಜೀರ್ಣೋದ್ಧಾರ ಮಾಡಿ ಗಂಗೆಯ ದಂಡೆಯ ಮೇಲೆ ಧರ್ಮಶಾಲೆಯನ್ನು ಕಟ್ಟಿಸಿದ್ದು ಕಾರಣವಾಗಿ ಅದು “ಮೈಸೂರ್‌ಘಾಟ್‌” ಎಂದು ಕೆಲಕಾಲ ಪ್ರಸಿದ್ಧವಾಗಿ ಮತ್ತೆ “ಕರ್ನಾಟಕ ಘಾಟ್‌” ಎಂದೇ ಹೆಸರಾಗಿದೆ.[9]

ಕಾಶಿ ಎಲ್ಲ ಭಾರತೀಯರ ಪವಿತ್ರ ಕ್ಷೇತ್ರವಾದುದರಿಂದ ಅದು ಮೊದಲಿನಿಂದ ಸಮಸ್ತ ಭಾರತದ ಜೊತೆ ಜೀವಂತ ಸಂಪರ್ಕವನ್ನು ಪಡೆದಿತ್ತೆಂಬುದು ಪ್ರಸಿದ್ಧ ವಿಷಯವೇ. ಕಾಶಿಗೂ ಕರ್ನಾಟಕಕ್ಕೂ ಇರುವ ಸಂಬಂಧವು ಎಷ್ಟು ಪ್ರಾಚೀನವೆಂಬುದನ್ನು ಹೇಳಬೇಕಾಗಿಲ್ಲ. ಭಾರತದ ಉಳಿದ ಭಾಗಗಳಿಗೆ ಇರುವ ಸಂಬಂಧವು ಅದರಿಂದ ಭಿನ್ನವಾಗಿಲ್ಲ. ಚಾಲುಕ್ಯ ದೊರೆ ಚಾಮುಂಡರಾಜನೆಂಬುವವನು ವಾರಣಾಸಿಗೆ ತೀರ್ಥಯಾತ್ರೆ ಹೋಗಿದ್ದುದರ ವಿಷಯ ದಾಖಲಾಗಿದೆ.[10] (ಈತ ಯಾರು, ತಿಳಿಯದು). ಇದು ಕೇವಲ ಒಂದು ಉದಾಹರಣೆ. ಕಾಶಿಗೂ ವೀರಶೈವ ಧರ್ಮಕ್ಕೂ ಇರುವ ಸಂಬಂಧದ ಚರಿತ್ರೆ ಇನ್ನೂ ಸ್ಪಷ್ಟವಾಗಬೇಕಾಗಿದೆ. ಕಾಶಿಯ ವಿಶ್ವೇಶ್ವರ ಲಿಂಗದಿಂದ ಪಂಚಾಚಾರ್ಯರಲ್ಲಿ ಐದನೆಯವರಾದ ವಿಶ್ವಾರಾಧ್ಯರು ಮೂಡಿಬಂದರು ಎಂದು ವೀರಶೈವರು ನಂಬುತ್ತಾರೆ. (ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಗೆ ಸೇರಿದ ಕವಿ, ಕ್ರಿ. ಶ. ೧೬೯೮ರ ಸಂಪಾದನೆಯ ಪರ್ವತೇಶನ ಚತುರಾಚಾರ್ಯ ಚಾರಿತ್ರ ಕೃತಿಯ ಪ್ರಕಾರ, ಕಾಶಿಯ ವಿಶ್ವೇಶ್ವರ ಲಿಂಗದಿಂದ ಮೂಡಿಬಂದವನು ಪಂಡಿತಾರಾಧ್ಯ ಈತ, ಆ ಕೃತಿಯ ಪ್ರಕಾರ ‘ಕನಕ ಯಜ್ಞೋಪವೀತ ಧಾರಿ). ಅದು ಶ್ರದ್ಧೆಯ ವಿಷಯವಾದ್ದರಿಂದ ಅದರಲ್ಲಿ ಚರಿತ್ರೆಯನ್ನು ಹುಡುಕುವುದು ವ್ಯರ್ಥವಾದರೂ, ಪಂಚಾಚಾರ್ಯರ ಪಟ್ಟಿಗೆ ವಿಶ್ವಾರಾಧ್ಯರು ಸೇರಿದ್ದು ಹದಿಮೂರೇ ಶತಮಾನದ ನಂತರವೇ. ಮೊದಲು ಇದ್ದುದು ನಾಲ್ವರು ಆಚಾರ್ಯರು: ರೇವಣಾರಾಧ್ಯ, ಮರುಳಾರಾಧ್ಯ, ಪಂಡಿತಾರಾಧ್ಯ ಮತ್ತು ಏಕೋರಾಮಾರಾಧ್ಯ – ಇವರು ಹನ್ನೆರಡನೆಯ ಶತಮಾನದ ವಚನಕಾರರಿಂದ ಉಲ್ಲೇಖಗೊಂಡಿದ್ದಾರೆ. ಇವರಲ್ಲಿ ರೇವಣಾರಾಧ್ಯ ಬಸವಣ್ಣನವರ ಹಿರಿಯ ಸಮಕಾಲೀನರು. ಉಳಿದವರೂ ಅದೇ ಹನ್ನೆರಡನೆಯ ಶತಮಾನದವರಿರಬೇಕು.[11]

ಅದೇ ಹನ್ನೆರಡನೇ ಶತಮಾನದ ಶಿವಭಕ್ತ, ವಚನಕಾರ ಶಿವಲೆಂಕ ಮಂಚಣ್ಣನ ಜನ್ಮಸ್ಥಳ ಕಾಶಿ. ಇವನು ‘ಪಂಡಿತತ್ರಯ’ರೆಂದು ಪ್ರಸಿದ್ಧರಾದವರಲ್ಲಿ ಒಬ್ಬ (ಉಳಿದ ಇಬ್ಬರು – ಶ್ರೀಪತಿ ಪಂಡಿತ ಮತ್ತು ಮಲ್ಲಿಕಾರ್ಜುನ ಪಂಡಿತ). ‘ಮಂಚಣ್ಣ’ ಹೆಸರೇ ಹೇಳುವಂತೆ ಅವನ ಪೂರ್ವಜರು ದಕ್ಷಿಣ ಭಾರತದಿಂದ, ಕರ್ನಾಟಕದಿಂದ ಕಾಶಿಗೆ ಹೋಗಿ ನೆಲಸಿದರವರೆಂದು ಸುಲಭವಾಗಿ ಊಹಿಸಬಹುದು. ಅವನ ಅಜ್ಜ ಸೋಮಶಂಭು ದೇಶಿಕನು ಮಹಾವಿದ್ವಾಸನಾಗಿದ್ದು ಕಾಮಿಕಾಗಮ ಮೊದಲಾದ ಆಗಮಗಳಿಗೆ ವ್ಯಾಖ್ಯಾನಗಳನ್ನು ಬರೆದನೆಂದು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಹೇಳಿದೆ.[12] ಅವನ ಮಗ ಶಂಭುಭಟ್ಟನ ಮಗನೇ ಶಿವಲೆಂಕ ಮಂಚಣ್ಣ.[13] ಅವನ ಹೆಸರೇ ಹೇಳುವಂತೆ ಕಾಶಿಯ ವಿಶ್ವೇಶ್ವರನಿಗೆ ಏಕೈಕ ನಿಷ್ಠೆಯ ಭಕ್ತನಾಗಿದ್ದು ಅವನು ವಿಶ್ವೇಶ್ವರನಿಗೆ ತನ್ನ ಹತ್ತು ಬೆರಳುಗಳನ್ನು ಸಮರ್ಪಿಸಿ ಮತ್ತೆ ಹಿಂದಕ್ಕೆ ಪಡೆಯುತ್ತಿದ್ದನೆಂಬ ಕತೆ ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣಮು ಕೃತಿಯಲ್ಲಿ ನಿರೂಪಿತವಾಗಿದೆ.[14] “ಜಗತ್ತಿಗೆ ಈಶ್ವರನೊಬ್ಬನೇ ಕರ್ತ, ವೀರಮಾಹೇಶ್ವರ (ವೀರಶೈವ) ಧರ್ಮವೇ ಶ್ರೇಷ್ಠ” ಎಂದು ಘೋಷಿಸುವ ಧ್ವಜವನ್ನು, ಕಾಶಿಯಲ್ಲಿ ಸ್ಥಾಪಿಸಿದ್ದನು. ಪರಧರ್ಮದವರು ಅದಕ್ಕೆ ಸವಾಲು ಒಡ್ಡಿದಾಗ, ಅವನು ವಿಷ್ಣುವನ್ನು ಅವನ ದೇವಾಲಯದಿಂದ ಹೊರಡಿಸಿ, ಬೀದಿಯಲ್ಲಿ ನಡೆಯಿಸಿಕೊಂಡು ಬಂದು ಕಾಶಿ ವಿಶ್ವೇಶ್ವರನಿಗೆ ಬಾಗುವಂತೆ ಮಾಡುವ ಪವಾಡವನ್ನೇ ಮಾಡಿದವನು.[15] ಲಕ್ಕಣ್ಣ ದಂಡೇಶನ (೧೪೩೦) ಪ್ರಕಾರ, ವಿಷ್ಣುವು (ಬಿಂದುಮಾಧವನು) ಶಿವನಿಗೆ ಬಾಗಿರುವುದನ್ನು ಈಗಲೂ ನೋಡಬಹುದು (“ಈಗ ಕಾಶಿಪುರದೊಳೊಪ್ಪುತ್ತದೆ”).[16] ಅವನೇ “ಕಾಶಿಯ ಶಿಲೆಯ ಕಾಯಕ”ದ ಭಕ್ತನೊಬ್ಬನ ವಿಷಯವನ್ನು ಪ್ರಸ್ತಾಪಿಸುತ್ತಾನೆ.[17] ಈ ಶಿವಭಕ್ತನು ಕಾಶಿಯಿಂದ ಶಿಲೆಯನ್ನು ತಂದು ಲಿಂಗಗಳನ್ನು ಮಾಡುತ್ತಿದ್ದ ಕಾಯಕದವನೋ ಏನೋ ತಿಳಿಯದು.

ಶಿವಲೆಂಕ ಮಂಚಣ್ಣನು ಕಲ್ಯಾಣದ ಬಸವಣ್ಣನವರ ಭಕ್ತಿಯನ್ನು ಕೇಳಿ ಅಲ್ಲಿಗೆ ಬಂದು, “ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ” ಎಂಬ ಅಂಕಿತದಲ್ಲಿ ವಚನಗಳನ್ನು ಬರೆದನು. ಅವನ ನೂರ ಮೂವತ್ತೆರಡು ವಚನಗಳು ಸಿಕ್ಕು ಅಚ್ಚಾಗಿವೆ.[18]

ಹರಿಹರ ರಾಘವಾಂಕರ ಸಮಕಾಲೀನನಾಗಿದ್ದ ಕೆರೆಯ ಪದ್ಮರಸನೂ ಅವನ ವಂಶಸ್ಥರೂ ಕಾಶಿ ವಿಶ್ವೇಶ್ವರನ ಅವಿಚ್ಛಿನ್ನ ಭಕ್ತರು. ಅವನ ವಂಶದ ಮೂಲಪುರುಷ ಮಲ್ಲರಸ ಅಥವಾ ಮಲ್ಲಿಕಾರ್ಜುನ ಪಂಡಿತನು ಕಲ್ಲುಕುರಿಕೆಯ ದೊರೆಯಾಗಿದ್ದು ‘ವಿಶ್ವಪತಿ’ಯ (ಕಾಶಿಯ ವಿಶ್ವೇಶ್ವರ) ಅವತಾರದಂತಿದ್ದವನು. ಅವನ – ಮಗನೇ ಬಸವಣ್ಣನವರ ಸಮಕಾಲೀನ, ವೈಣಿಕ, ಶ್ರೇಷ್ಠ ವಚನಕಾರ ಸಕಲೇಶ ಮಾದರಸ (ಕ್ರಿ. ಶ. ೧೧೬೦). ಇವನ ಮಗ ಮಾಯಿದೇವನಿಗೆ ಹೊಯ್ಸಳ ದೊರೆ ನರಸಿಂಹ ಬಲ್ಲಾಳನ ದಂಡನಾಯಕನಾಗಿದ್ದ ‘ಕಮ್ಮೆಕುಲ’ದ ಗೌರಪನ ಅಕ್ಕ ಮಂಗಲೆಯನ್ನು ಕೊಟ್ಟು ಮದುವೆ ಮಾಡಲಾಗಿತ್ತು.[19] ಮಾಯಿದೇವನ ಪತ್ನಿ ಗರ್ಭೀಣಿಯಾದಾಗ ಕಾಶಿಯ ವಿಶ್ವೇಶ್ವರನು ಯತಿವೇಷದಲ್ಲಿ ಅವನ ಕನಸಿನಲ್ಲಿ ಕಾಣಿಸಿಕೊಂಡು ಒಂದು ಲಿಂಗವನ್ನು ಕೊಟ್ಟು ಹುಟ್ಟುವ ಮಗುವಿಗೆ ಇದನ್ನು ಕಟ್ಟಿ ಆ ಮಗು ಪ್ರಾಪ್ತವಯಸ್ಕನಾದ ಮೇಲೆ ತನ್ನಲ್ಲಿಗೆ ಬರಬೇಕು ಎಂಬ ಸೂಚನೆಯನ್ನು ಕೊಟ್ಟನು. ಅದರಂತೆ ಪದ್ಮರಸ ಪ್ರಾಪ್ತವಯಸ್ಕನಾದ ಬಳಿಕ ತನ್ನ ಕೊನೆಯ ದಿನಗಳನ್ನು ಕಾಶಿಯಲ್ಲಿ ಕಳೆಯುತ್ತಾನೆ.

ಮಾಯಿದೇವನ ಮಗನೇ ಕೆರೆಯ ಪದ್ಮರಸ. ಅವನು ನೂರೆಂಟು ರುದ್ರಾಕ್ಷಿಗಳನ್ನು ಯಜ್ಞೋಪವೀತ ರೂಪದಲ್ಲಿ, ಜೊತೆಗೆ ಇಷ್ಟಲಿಂಗ ಹಾಗೂ ಯಜ್ಞ ಸೂತ್ರಗಳನ್ನು ಧರಿಸಿದ್ದನು. ‘ಆರಾಧ್ಯ ಚಕ್ರವರ್ತಿ’, ‘ದೇಶಿಕಚಿಂತಾಮಣಿ’ ಎಂದೂ ಕರೆಯಲಾಗಿರುವ ಅವನು ತನ್ನ ಹಿಂದಿನವರಂತೆ ‘ಆಚಾರ್ಯ ಪಟ್ಟ’ವನ್ನು ಅಲಂಕರಿಸಿದ್ದ ‘ಬ್ರಾಹ್ಮಣೋತ್ತಮಂ ವೀರಶೈವಾಚಾರ್ಯ’.[20]ಅವನು ದೋರ ಸಮುದ್ರದಲ್ಲಿ ತನ್ನ ಮಾವನ ಸ್ಥಾನವನ್ನು (‘ದಂಡನಾಯಕ’) ಪಡೆದು, ಅಲ್ಲಿ ಕೆರೆ ಕಟ್ಟಿಸಿ, ತಂದೆಯಂತೆ ತನ್ನ ಕೊನೆಯ ದಿನಗಳನ್ನು ಕಾಶಿಯಲ್ಲಿ ಕಳೆಯಲು ಹೊರಟು, ದಾರಿಯಲ್ಲಿ ಹಂಪೆಗೆ ಬಂದು ಹರಿಹರನಿಗೆ ಇನ್ನೆಂಟು ದಿನಗಳಲ್ಲಿ ನೀನು ವಿರೂಪಾಕ್ಷನಲ್ಲಿ ಲಿಂಗೈಕ್ಯನಾಗಲಿರುವೆ ಎಂಬ ಸುದ್ದಿಯನ್ನು ತಿಳಿಸಿ ಅಷ್ಟರಲ್ಲಿ ನಿನ್ನ ಅಪೂರ್ಣ ಕಾವ್ಯವನ್ನು ಮುಗಿಸು ಎಂದು ಸೂಚಿಸಿ ತೆರಳುತ್ತಾನೆ. ಪದ್ಮರಸನು ಗಂಗೆಯನ್ನು ದಾಟಿ ಕಾಶಿಗೆ ಬಂದು ವಿಶ್ವನಾಥನನ್ನು ದರ್ಶನ ಮಾಡಿ ಮಣಿಕರ್ಣಿಕಾ ಘಾಟ್‌ನಲ್ಲಿ ಶಿವಲೆಂಕ ಪಂಡಿತನು ವಿಶ್ವನಾಥನಿಗೆ ಎರಗಿಸಿದ ವಿಷ್ಣು ವಿಗ್ರಹವನ್ನು ನೋಡಿದನು. ಕೆಲವು ಕಾಲಾನಂತರ ಅವನು ಲಿಂಗೈಕ್ಯನಾದ ವಿಷಯ ತಿಳಿದ ಅವನ ಮಗ ಕುಮಾರ ಪದ್ಮರಸನು ಅದನ್ನು ಉತ್ಸವರೂಪದಲ್ಲಿ ಆಚರಿಸಿದನು.

ಕೆರೆಯ ಪದ್ಮರಸನು ತನ್ನ ‘ದೀಕ್ಷಾ ಬೋಧೆ’ಯ ಆದಿ, ಅಂತ್ಯಗಳಲ್ಲಿ ಮತ್ತು ಮಧ್ಯೆ ಹಲವೆಡೆ ವಿಶ್ವನಾಥನನ್ನು ಸ್ಮರಿಸಿದ್ದಾನೆ.

ಕಾಯಯ್ಯ ಸದ್ಗುರುಗೆ ಈಯಯ್ಯ ಸದ್ಗುರುವೆ
ನೋಯದಂತಿರಿಸು ಲಿಂಗಾಯತದಿ ಸದ್ಗುರುವೆ

ಇದು ಅಲ್ಲಿಯ ಸ್ತೋತ್ರದ ಒಂದು ಮಾದರಿ. “ಅಂಗದೊಳು ಲಿಂಗಧಾರಣವಾಗಬೇಕು” ಎಂಬುದು ಒಂದು ಕಡೆ ಇರುವ ಅವನ ಬೋಧನೆ.

ಅವನ ಮಗ ಕುಮಾರ ಪದ್ಮರಸನ ‘ಸಾನಂಥ ಚರಿತೆ’ಯಲ್ಲಿ ಸಂಸ್ಕೃತದ ಕಾಶೀ ಖಂಡ ಕೃತಿಯು ಕರ, ಉರ, ಕೊರಲು, ಕಕ್ಷ, ಶಿರ ಎಲ್ಲಿಯಾದರೂ ಸರಿಯೇ ಲಿಂಗವನ್ನು ಧರಿಸುವ ವಿಷಯವಿರುವ ಸಂಗತಿಯನ್ನು ಉಲ್ಲೇಖಿಸುವ ಸಂಸ್ಕೃತ ಶ್ಲೋಕವನ್ನು ಕೊಡಲಾಗಿದೆ.[21] ಶೂದ್ರ, ಶ್ವಪಚರು ಶಿವಭಕ್ತರಾದರೆ ಅವರು ದ್ವಿಜರಿಗಿಂತ ಶ್ರೇಷ್ಠ ಎನ್ನುತ್ತಾನೆ ಕುಮಾರ ಪದ್ಮರಸ.[22] ‘ಶಿವಾರ್ಚನ’ದಿಂದ ಮಾತ್ರ ಒಬ್ಬ ದಿಕ್ಕಿಗೆ ‘ಬ್ರಾಹ್ಮಣಿಕೆ’ ಸಂಪ್ರಾಪ್ತವಾಗುತ್ತದೆ.[23] ಕುಮಾರ ಪದ್ಮರಸನ (ಸು. ೧೨೪೦)ಮಗನ ಹೆಸರು ವಿಶ್ವರಾಧ್ಯ.[24]

ಇಂದು ಕಾಶಿಯ ಪ್ರಮುಖ ಮಠಗಳಲ್ಲಿ ಜಂಗಮವಾಡಿ ಮಠವೂ ಒಂದಾಗಿದೆ. ವಿಶ್ವೇಶ್ವರ ಲಿಂಗದಿಂದ ಮೂಡಿಬಂದರೆನ್ನಲಾದ ವಿಶ್ವಾರಾಧ್ಯರಿಂದ ಅದು ಸ್ಥಾಪನೆಗೊಂಡುದೆಂಬ ಪರಂಪರಾಗತ ನಂಬಿಕೆ ಇದೆ. ಆ ಮಠಕ್ಕೆ ಇಕ್ಕೇರಿ, ಮೈಸೂರು, ಕೊಡಗು ರಾಜರು ದತ್ತಿಗಳನ್ನು ಬರೆಯಿಸಿ ಶಾಸನಗಳನ್ನು ಹಾಕಿಸಿದ್ದಾರೆ. ಅದು ಚರಿತ್ರೆಯ ಈಚಿನ ಅಧ್ಯಾಯ. (ಅನುಬಂಧ – ೬ ನೋಡಿ).

ಮೇಲಿನ ಮಾಹಿತಿ ಒಂದು ತೋರ್ಬೆರಡು ಮಾತ್ರ. ಕಾಶಿಗೂ ಕರ್ನಾಟಕದ ವೀರಶೈವರಿಗೂ ಇರುವ ಸಂಬಂಧ ಹನ್ನೆರಡನೆಯ ಶತಮಾನಕ್ಕಿಂತ ಹಿಂದಕ್ಕೆ ಹೋಗುತ್ತದೆ. ಕಾಶಿಯಲ್ಲಿ ಹದಿನೈದನೇ ಶತಮಾನದ ಉತ್ತರಾರ್ಧದಲ್ಲಿ ವಿಶ್ವೇಶ್ವರನ ದೇವಾಲಯ ಭಗ್ನಗೊಂಡಾಗ ಅಲ್ಲಿದ್ದ ವಿಶ್ವನಾಥ ಲಿಂಗವನ್ನು ನೇಪಾಳಕ್ಕೆ ಸಾಗಿಸಿ ಅಲ್ಲಿ ಭಕ್ತಪುರದ ಜಂಗಂ ಮಠದ ಆವರಣದಲ್ಲಿ ಅದನ್ನು ಪುನಃ ಪ್ರತಿಷ್ಠಾಪಿಸುವಲ್ಲಿ ವೀರಶೈವರ (ಜಂಗಮರ) ಪ್ರಮುಖ ಪಾತ್ರವಿರುವಂತಿದೆ. (ಅನುಬಂಧ – ೬ ನೋಡಿ). ಹದಿನಾಲ್ಕನೇ ಶತಮಾನದ ಮಧ್ಯಭಾಗದಲ್ಲಿ ಭಕ್ತಪುರದ ಸಮೀಪ ಬನೆಪ ಊರಲ್ಲಿ ಶ್ರೀಪತಿ ಆರಾಧ್ಯಶರ್ಮನೆಂಬುವವನ ಮಗನಾದ ನಾರಾಯಣಪತಿ ಆರಾಧ್ಯ ಶರ್ಮನು ಕ್ರಿ. ಶ. ೧೩೬೦ರಲ್ಲಿ ಕಾಠಮಾಂಡೊದ ಪಶುಪತಿ ದೇವಾಲಯದಲ್ಲಿ ಶಿವಲಿಂಗದ ಪುನಃ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದ ಸಂಗತಿಯನ್ನಾಗಲೇ ನೋಡಿದ್ದೇವೆ. ಈಗಿನ ಜಂಗಂ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಂಗಂ ಜನರು ಕೆರೆಯ ಪದ್ಮರಸನಂತೆ ಲಿಂಗ ಜಿನಿವಾರಗಳೆರಡನ್ನೂ ಧರಿಸುವ ಸಂಗತಿಯನ್ನೂ ಗಮನಿಸಿದ್ದೇವೆ. ಕಾಶಿಯಿಂದ ನೇಪಾಳಕ್ಕೆ ಹೋದ ಆರಾಧ್ಯ ಜಂಗಮರು ಕೆರೆಯ ಪದ್ಮರಸನ ವಂಶಸ್ಥರೇ ಸರಿ ಎಂದು ಹೇಳುವುದು ಅತಿ ದುಡುಕಿನ ಮಾತಾದರೂ, ಆ ವರ್ಗದ ಜನ ಕಾಶಿಯಿಂದ ನೇಪಾಳಕ್ಕೆ ಹೋಗಿ ಅಲ್ಲಿ ನೆಲಸಿದರು ಎಂದು ಹೇಳಲು ಯಾವುದೇ ಅನುಮಾನವೂ ಕಾಣಿಸುವುದಿಲ್ಲ. ಈ ಬಗ್ಗೆ ನನ್ನ ಹೊಳಹುಗಳನ್ನು ನೀಡಿದ್ದೇನೆ. ಹೆಚ್ಚಿನ ವಿಚಾರಕ್ಕೂ ಅವಕಾಶವಿದೆಯೆಂಬುದು ತೀರ ಸ್ಪಷ್ಟ.

 

[1] ನಾನ್ಯದೇವನ ವಂಶಸ್ಥರಾದ ಶ್ರೀದೇವ್‌ಬೈದ್ಯ ಮತ್ತು ಅವರ ಪತ್ನಿ ಬೆಂಗಳೂರಿನ ಪದ್ಮನಿ ಬೈದ್ಯ ಇವರಿಂದ ಬೆಂಗಳೂರಿನಲ್ಲಿ ಮಾಹಿತಿ ಸಂಗ್ರಹ. ಅವರ ಬಾಯಿಂದ ಕೇಳಿದ್ದನ್ನು, ಬೇರೆಡೆ ಸಿಕ್ಕ ಒಂದೆರಡು ಭಿನ್ನ ಭಿನ್ನ ವಿಷಯಕ ಸಂಗತಿಗಳನ್ನು ಅವುಗಳ ಮಾಹಿತಿ ಮೌಲ್ಯಕ್ಕಾಗಿ ಹಾಗೇ ಕೊಡುತ್ತಿದ್ದೇನೆ.

[2] ಭಾರತದಲ್ಲಿ ಬ್ರಾಹ್ಮಣನನ್ನು ಮಾತ್ರ ಗುರುತಿಸಬಹುದು.

[3] ನೆಲಮಂಗಲ ತಾಲೂಕು ಆದಿಚುಂಚನಗಿರಿ ಆಸುಪಾಸಿನಲ್ಲಿ ‘ಕಾಪಾಲಿಕ’ ಎಂಬ ಹೆಸರಿನ ಜನಾಂಗದವರಿದ್ದಾರೆ. ಅವರಲ್ಲಿ ಯಾವುದೇ ಕಾಪಾಲಿಕಾಚರಣೆಗಳೂ ಉಳಿದಿಲ್ಲ. ಆದಿಚುಂಚನಗಿರಿಯು ಅಲ್ಲಿನ ಸ್ಥಳಪುರಾಣದ ಪ್ರಕಾರ ಹಿಂದೊಮ್ಮೆ ಕಾಪಾಲಿಕ ಕೇಂದ್ರವಾಗಿತ್ತು. ‘ಆದಿಚುಂಚನಗಿರಿ ಮಹಾತ್ಮ್ಯ’ ಕೃತಿಯಲ್ಲಿ ಅದನ್ನು ‘ಕಾಪಾಲಿ ಪೀಠ’ ವೆಂದೇ ಕರೆದಿದೆ. ಅಲ್ಲಿಯ ಬೆಟ್ಟದ ಮೇಲೆ, ಬೈರವನ ಗುಡಿ ಮುಂಭಾಗದಲ್ಲಿ ರುಂಡದಿಂದ ಮುಂಡ ಬೇರೆಯಾಗಿರುವ ಮನುಷ್ಯರ ಶಿಲ್ಪಗಳಿವೆ. (ನೋಡಿ ಎಂ.ಚಿದಾನಂದಮೂರ್ತಿ : ‘ಮಧ್ಯಕಾಲೀನ ಕರ್ನಾಟಕದ ಕೆಲವು ರಹಸ್ಯ ತಾಂತ್ರಿಕ ಪಂಥಗಳು’. ಸಂಶೋಧನ ತರಂಗ – ೨. ಪು.೨೦೩ – ೪)

[4] Dor Bahadur Bista : People of Nepal, p. 136. ಮೂರನೇ ಪ್ಯಾರಾದ ವಿಷಯ ಮಾತ್ರ ಈ ಕೃತಿಯಿಂದ.

[5] Varanasi through the Ages (Ed: T. P. Verma, D. P. Singh, J. S. Mishra), P. 36 – 47.

[6] P. B. Singh : Shiva’s Universe in Varanasi, P. 303 – 11. ವಾರಣಾಸಿಯಲ್ಲಿ ಈಗ ಸುಮಾರು ಎರಡು ಸಾವಿರ ಮಂದಿರಗಳು ಐದು ಲಕ್ಷ ದೇವತಾ ವಿಗ್ರಹಗಳಿವೆಯೆಂದು ಒಂದು ಅಂದಾಜು.

[7] Baidyanath Saraswathi : Kashi (Myth and Reality of a Classical Cultural Tradition), P. 7 – 9.

[8] ೮೮. ಅದೇ, ಪು. ೩೬.

[9] ೮೯. ಹರಿಶಂಕರ್‌: ಕಾಶಿ ಕೆ. ಘಾಟ್‌ – ಕಲಾತ್ಮಕ ಏವಂ ಸಾಂಸ್ಕೃತಿಕ್‌ಅಧ್ಯಯನ್‌(ಹಿಂದಿ), ಪು. ೪೭.

[10] ೮೯ಅ. Om Prakash Gupta : “The Iconoclasts and Varanasi in Medieval times’ (VaranAsi through the Ages, P.೫೧ – ೪). ಕಾಶಿಯಲ್ಲಿ ದೇವಸ್ಥಾನಗಳ ನಾಶದ ಹಲವು ವಿವರಗಳು ಇದರಲ್ಲಿವೆ. ಡಾ. ಗುಪ್ತರ ಪ್ರಕಾರ, ಮುಸ್ಲಿಮರಿಗೆ ಕಾಶಿಯಲ್ಲಿ ಎರಡು ಆಕರ್ಷಣೆಗಳು ಕಾಣಿಸಿದವು. ಒಂದು, ಆ ಪವಿತ್ರ ಕ್ಷೇತ್ರದ ಅಪವಿತ್ರೀಕರಣ ಮತ್ತು ವಿಶ್ವನಾಥ ದೇವಾಲಯದ, ಕಾಶಿಯ ಶ್ರೀಮಂತರ ಐಶ್ವರ್ಯದ ಲೂಟಿ.

[11] ಎಂ. ಚಿದಾನಂದಮೂರ್ತಿ : ‘ಪಂಚಾಚಾರ್ಯರ ಬಗೆಗಿನ ವಿವಾದಕ್ಕೆ ಅಂತಿಮ ತೆರೆ’. ವಚನಶೋಧ, ಭಾಗ – ೨, ಪು. ೧೨ – ೫೩.

[12] ಸಂಪುಟ –II ಸಂ. ಆರ್‌. ಸಿ. ಹಿರೇಮಠ ಮತ್ತು ಎಂ. ಎಸ್‌. ಸುಂಕಾಪುರ, ಪು. ೨೦೭ – ೮.

[13] “ಲೆಂಕ” ಎಂದರೆ ಕನ್ನಡದಲ್ಲಿ ನೆಚ್ಚಿನ ಸೇವಕ, ಅನುಯಾಯಿ ಎಂದರ್ಥ. ರಾಜರ ಬಳಿ ‘ಲೆಂಕವಾಳಿ’ಗಳೆಂಬ ಹೆಸರಿನ ನಿಷ್ಠಾವಂತ ಅಂಗರಕ್ಷಕರಿದ್ದು ಅವರು ಸದಾ ಅವರ ಬೆಂಗಾವಲಿಗೆ ಇರುತ್ತಿದ್ದರು.

[14] ಅನು : ಪಿ. ವಿ. ನಾರಾಯಣ, ಪು. ೩೮೩.

[15] ಅದೇ.

[16] ಶಿವತತ್ವ ಚಿಂತಾಮಣಿ (ಸಂ: ಎಸ್‌. ಬಸಪ್ಪ) , ೩೭.೧೧೬. ಕಾಶಿಯ ಬಿಂದು ಮಾಧವ ದೇವಾಲಯ ಪ್ರಸಿದ್ಧವಾದುದು. ಅವನು ಕಾಶಿಯ ರಕ್ಷಣಾ ದೇವತೆಗಳನ್ನು ಒಬ್ಬ.

[17] ಅದೇ, ಪು. ೩೯೦.

[18] ಸಮಗ್ರ ವಚನ ಸಂಪುಟ – ೯ (ಸಂ : ಬಿ. ಆರ್‌. ಹಿರೇಮಠ), ಪು. ೫೭ – ೮೯.

[19] ಬಸವಣ್ಣನವರ ತಂದೆಯದೂ ಕಮ್ಮೆಕುಲ.

[20] ಪದ್ಮಣಾಂಕನ ಪದ್ಮರಾಜಪುರಾಣ (ಸಂ: ಆರ್‌. ಸಿ. ಹಿರೇಮಠ), ಕುಮಾರ ಪದ್ಮರಸನ ಸಾನಂದ ಚರಿತೆ (ಸಂ: ಎಸ್‌. ಬಸಪ್ಪ), ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣ (ಸಂ: ಶಿ. ಶಿ. ಬಸವನಾಳ) ಇತ್ಯಾದಿ ಕೃತಿಗಳನ್ನು ನೋಡಿ.

[21] ಸಾನಂದ ಚರಿತೆ (ಸಂ: ಎಸ್‌. ಬಸಪ್ಪ), ಪು. ೧೭೮.

[22] ಅದೇ, ಪು. ೧೫೬ – ೭.

[23] ಅದೇ, ಪು. ೬೧

[24] ಮೈಸೂರು ಸರ್ಕಾರದಲ್ಲಿ ಉನ್ನತ ಅಧಿಕಾರಿಗಳಾಗಿದ್ದ ಮೈಸೂರಿನ (ಲಿಂ) ಜೆ. ಬಿ. ಮಲ್ಲಾರಾಧ್ಯರು ಕೆರೆಯ ಪದ್ಮರಸನ ವಂಶಸ್ಥರು.