ಅನುಬಂದ – ೫: “ಜಂಗಮ”ರು, ಭಾರತದಲ್ಲಿ

“ಜಂಗಮ”ದ ಮೂಲ ಪರಿಕಲ್ಪನೆಗೆ ಪು. ೧೦೪ ನೋಡಿ. ಮೊದಲು ನನಗೆ ಲಭ್ಯವಿರುವ ಮಾಹಿತಿಯನ್ನು ನೀಡುತ್ತೇನೆ. ಈ ಲೇಖನದಲ್ಲಿ ಭಾರತಾದ್ಯಂತ ಇರುವ ಜಂಗಮರ ಬಗ್ಗೆ ಬರೆದಿದ್ದೇನೆ. (ಹೆಚ್ಚಿನ ವಿವರಗಳನ್ನು ತಿಳಿಯಬಯಸುವವರು ನನ್ನ “ಜಂಗಮ ಜಾತಿಯಲ್ಲಿ ಅನುಶ್ರೇಣಿ” ಎಂಬ ಲೇಖನವನ್ನು ನೋಡಬಹುದು. ಆ ಲೇಖನವು ನನ್ನ ಸಂಪ್ರಬಂಧ ಸಂಕಲನ “ಸ್ಥಾವರ : ಜಂಗಮ” ಸಂಪುಟದಲ್ಲಿ ಪ್ರಕಟವಾಗಿದೆ.)

ಜಂಗಮ್‌[1] : ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್‌, ತಮಿಳುನಾಡು, ಆಂಧ್ರಪ್ರದೇಶ, ಜಮ್ಮು – ಕಾಶ್ಮೀರಗಳಲ್ಲಿರುವ ಜಂಗಮರು (“ಝಂಗಮ”ರು) ಶೈವರಾದ ಸನ್ಯಾಸಿಗಳು ಅಥವಾ ಪುರೋಹಿತ ವರ್ಗದವರು. ಆಂಧ್ರ, ತಮಿಳುನಾಡು ಬಿಟ್ಟರೆ ಉಳಿದ ಕಡೆ ಜಂಗಮರೆಲ್ಲ ಸಸ್ಯಾಹಾರಿಗಳು ಮತ್ತು ಶೈವಪುರೋಹಿತರಾದ ಅವರು ತಮ್ಮನ್ನು ಬ್ರಾಹ್ಮಣರಿಗೆ ಸಮನೆಂದು ಭಾವಿಸುತ್ತಾರೆ.

ಆಂಧ್ರದಲ್ಲಿ ಜಂಗಮರನ್ನು “ದೇವೇರ”, “ಜಂಗಲು” ಎಂದೂ ಕರೆಯುತ್ತಾರೆ. ತೆಲುಗು ಮಾತನಾಡುವ ಅವರು ಸಾಧುಗಳಂತೆ ಬಟ್ಟೆ ಧರಿಸಿ, ನಂದಿ ಸಮೇತ ಶಿವಲಿಂಗವನ್ನು ಹಿಡಿದು ಸಂಚರಿಸುತ್ತಾರೆ. ತಲೆಗೆ ಪೇಟ, ಕಿವಿಗೆ ಉಂಗುರ, ರುದ್ರಾಕ್ಷ ಧರಿಸಿರುತ್ತಾರೆ. ಅವರಲ್ಲಿ ಗಣಾಯತಮ್‌ವರ್ಗದವರು ಸರಳ ಗಂಟೆಯನ್ನು ಹಿಡಿದಿದ್ದರೆ, ಲಿಂಗಾಯತಮ್‌ವರ್ಗದವರು ಲಿಂಗ ಸಮೇತ ಗಂಟೆಯನ್ನು (“ಲಿಂಗ ಗಂಟ”) ಹಿಡಿದಿರುತ್ತಾರೆ. ತಿರುಪತಿಯಲ್ಲಿರುವ ಜಂಗಂ ಕ್ಷೇಮಾಭಿವೃದ್ಧಿ ಸಂಸ್ಥೆ ಪ್ರಕಾರ ಅವರಲ್ಲಿ ಬೇಡ ಜಂಗಮ, ಬುಡಗ, ಜಂಗ, ಪುಸಲ ಅಥವಾ ಪಗಡ ಜಂಗಮ, ಚುರುಕೆ ಜಂಗಮ, ಉಂಪುಡು ಜಂಗಮ, ಮಾಲಾ ಜಂಗಮ ಮತ್ತು ಸವರ ಜಂಗಮ ಎಂಬ ಭೇದಗಳಿವೆ. ಅವರಲ್ಲಿ ಕೆಲವರು ಲಿಂಗಾಯತರಾಗಿ ಜನಿವಾರವನ್ನೂ ಧರಿಸುತ್ತಾರೆ.[2] ಜಂಗಮರೆಲ್ಲ ಕುಳಿತ ಭಂಗಿಯಲ್ಲಿ ಶವವನ್ನು ಹೂಳುತ್ತಾರೆ.

ಜಂಗಮರ ವೃತ್ತಿಯೆಂದರೆ ಭಿಕ್ಷಾಟನೆ ಮತ್ತು ಕೆಳವರ್ಗದವರ ಮನೆಗಳಲ್ಲಿ ಪೌರೋಹಿತ್ಯ. ಕೆಲವರು ಲಾವಣಿ (“ಬುರ್ರ ಕಥಾ”) ಹೇಳುತ್ತಾರೆ; ಕೆಲವರು ‘ಹಗಲು ವೇಷ’ದವರೂ ಉಂಟು (“ಪಗಟಿ ವೇಷಗಾಳ್ಳು”).

ತಮಿಳುನಾಡಲ್ಲಿ[3] ಜಂಗಮರನ್ನು ವೀರಶೈವ, ತಂಬೀರನ್, ದೇವರ್‌, ಆಂಡಿ, ವೀರಶೈವ ಜಂಗಂ ಎನ್ನುತ್ತಾರೆ. ಅವರಿಗೆ ಶೆಟ್ಟಿ, ಲಿಂಗಂ, ಪಂಡಾರಂ, ಅಯ್ಯರ್‌, ಚೆಟ್ಟಿ ಎಂಬ ವಂಶನಾಮಗಳುಂಟು. ಅವರಲ್ಲಿ “ಉಪ್ಪು”. “ಪಪ್ಪು” (=ಬೇಳೆ) ಎಂಬ ಎರಡು ವರ್ಗಗಳುಂಟು. (ಇಬ್ಬರಿಗೂ ವಿವಾಹ ಸಂಬಂಧಗಳು ನಿಷಿದ್ಧವಲ್ಲ). ನಂದೀಶ್ವರ, ಭೃಂಗೀಶ್ವರ ಸೇರಿದಂತೆ ಐದು ಗೋತ್ರಗಳಿವೆ. ಇವರು ಮಾಂಸಾಹಾರಿಗಳು. ಮುಖ್ಯ ವೃತ್ತಿ ವ್ಯವಸಾಯ (ಹೆಚ್ಚಿನ ವಿವರಗಳಿಗೆ, ಮುಂದೆ ನೋಡಿ).

ಮಧ್ಯಪ್ರದೇಶ[4] ಜಂಗಮರು ಮೈಮೇಲೆ ಶಿವಲಿಂಗವನ್ನು ಧರಿಸುತ್ತಾರೆ. ಇಂದೋರ್‌, ದೇವಸ್‌, ಖಾಂಡ್ವಾ, ಜಬಲ್‌ಪುರ ಜಿಲ್ಲೆಗಳಲ್ಲಿರುವ ಇವರು ಅಹಲ್ಯಾಬಾಯಿ ಹೋಳ್ಕರ್‌ಕಾಲದಲ್ಲಿ ಮಹಾರಾಷ್ಟ್ರದಿಂದ ವಲಸೆ ಬಂದವರೆಂದು ಹೇಳಲಾಗಿದೆ. ಅವರ ಮಾತೃಭಾಷೆ ಮರಾಠಿ. ಶುದ್ಧ ಸಸ್ಯಹಾರಿಗಳಾದ ಅವರು ತಾವು ಬ್ರಾಹ್ಮಣರಿಗೆ ಸಮಾನರೆಂದು ಭಾವಿಸುತ್ತಾರೆ. ಮಗುವಿಗೆ ಹುಟ್ಟಿದ ಐದನೇ ದಿನಕ್ಕೆ ಲಿಂಗಧಾರಣೆ ನಡೆಯುತ್ತದೆ. ಶವದ ಕೈಯಲ್ಲಿ ಇಷ್ಟಲಿಂಗವನ್ನು ನೀಡಿ, ಬಳಿಕ ಹೂಳಲಾಗುತ್ತದೆ.

ಮಹಾರಾಷ್ಟ್ರದ ಜಂಗಮರು ಲಿಂಗಾಯತರ ಗುರುಗಳು. ರುದ್ರಾಕ್ಷ, ವಿಭೂತಿ, ಕರಡಗೆಯಲ್ಲಿ ಇಷ್ಟಲಿಂಗ ಧರಿಸುತ್ತಾರೆ. ಕಂಕುಳಲ್ಲಿನ ಜೋಳಿಗೆಯಲ್ಲಿ ಭಿಕ್ಷೆ ಹಾಕಿಸಿಕೊಳ್ಳುತ್ತಾರೆ. ಶುದ್ಧ ಸಸ್ಯಾಹಾರಿಗಳು. ಅವರಲ್ಲಿ ಮಠಪತಿ, ಮಠವಾಳ್‌ಎಂಬ ಎರಡು ವರ್ಗಗಳಿವೆ. ಮಠಪತಿಯು ಇತರ ಲಿಂಗಾಯತರ ಜೊತೆ ಸಂಬಂಧ ಬೆಳಸಿ ಅವರ ಗುರುಗಳಂತೆ ನಡೆದುಕೊಂಡರೆ, ಮಠವಾಳನು ಬ್ರಹ್ಮಚಾರಿಯಾಗಿ ಉಳಿದು ಧರ್ಮೋಪದೇಶ ಮಾಡುತ್ತಾನೆ. ಗೋದ್ರಾಳ್‌, ರಥ್ರಾಳ್‌, ಬೂಕಾಳ್‌, ಕೊಂತಾಳ್‌ಇವು ಅವರ ಕೆಲವು ವಂಶನಾಮಗಳು. ಕಾಶಿಯ ಪೀಠವು ಅವರಿಗೆ ಅತಿದೊಡ್ಡ ಧಾರ್ಮಿಕ ಸಂಸ್ಥೆ. ಹುಟ್ಟು, ಮದುವೆ, ಸಾವು, ಇತರ ಹಬ್ಬಗಳು ಇಂತಹ ಸಂದರ್ಭಗಳಲ್ಲಿ ಭಕ್ತರು ನೀಡುವ ಕಾಣಿಕೆ ಅವರ ಮುಖ್ಯ ಆದಾಯ. ಕೆಲವರು ಶಿವದೇವಾಲಯಗಳ ಅರ್ಚಕರೂ ಹೌದು.

ಜಮ್ಮು – ಕಾಶ್ಮೀರದಲ್ಲಿ[5] ಜಂಗಮರು ತಮ್ಮನ್ನು “ಶಿವ – ಪಾರ್ವತಿ ವಿವಾಹ ಕಥಾ ವಾಚಕ್‌” ಎಂದು ಕರೆದುಕೊಳ್ಳುತ್ತಾರೆ. ಶಿವ – ಪಾರ್ವತಿಯರ ವಿವಾಹದ ಹಾಡುಗಳನ್ನು ಭಿಕ್ಷೆ ಸಮಯದಲ್ಲಿ ಹೇಳುವುದರಲ್ಲಿ ಅವರು ನಿಪುಣರು. ಉರ್ದು ಅಥವಾ ಹರ್ಯಾಣಿ ಅವರ ಭಾಷೆಯಾದರೆ ಅವರು ಬಳಸುವ ಲಿಪಿ ದೇವನಾಗರಿ, ಅಪ್ಪಟ ಸಸ್ಯಾಹಾರಿಗಳು ಅವರು. ಕಾವಿ, ತಲೆಗೆ ಸುತ್ತಿದ ವಿಶೇಷ ರುಮಾಲು, ಕಿವಿಯುಂಗುರ ಮತ್ತು ಕೈಯಲ್ಲಿ ಹಿಡಿದ ಚಿಕ್ಕ ಚರ್ಮವಾದ್ಯ ಇವುಗಳಿಂದ ಅವರನ್ನು ಸುಲಭವಾಗಿ ಗುರುತಿಸಬಹುದು. ಸತ್ತವರನ್ನು ಅವರು ದಹನ ಮಾಡುತ್ತಾರೆ. ಅವರ “ಜಂಗಮ್‌ಸಭಾ” ಸಂಘಟನೆಯು ಆ ವರ್ಗದ ಸಮಸ್ಯೆಗಳನ್ನು ಕುರಿತು ಪರಿಶೀಲಿಸುವ ವ್ಯವಸ್ಥೆಯಾಗಿದೆ. ಹಿಂದೂ ಪುರಾಣಗಳನ್ನು ಚೆನ್ನಾಗಿ ಬಲ್ಲ ಅವರು ತಮ್ಮನ್ನು ಹಿಂದೂಗಳೆಂದೇ ಭಾವಿಸುತ್ತಾರೆ. ಅವರು ವೈಷ್ಣೋ ದೇವಿ, ಭಾನುಪೊರ್ತೆ, ಅಮರನಾಥ್‌ಇತ್ಯಾದಿ ದೇವಾಲಯಗಳ ದರ್ಶನ ಮಾಡುತ್ತಾರೆ. ಅವರ ಮದುವೆಗಳಲ್ಲಿ ಬ್ರಾಹ್ಮಣರು ಪುರೋಹಿತರು. ಇತರ ಎಲ್ಲ ಹಿಂದೂ ವರ್ಗಗಳೊಡನೆ ಸಂಬಂಧ ಬೆಳೆಸುತ್ತಾರೆ.[6] ಅಂತಹ ಲಿಂಗಧಾರಿ, ಶಿವದೇವಾಲಯ ಪೂಜಾರಿ ವೀರಶೈವನನ್ನು ತಾವು ಕಾಶ್ಮೀರದಲ್ಲಿ ಭೇಟಿಯಾದುದಾಗಿ ಜಿ. ಆರ್‌. ಗುರುಮೂರ್ತಿಯವರು ತಿಳಿಸಿದ್ದಾರೆ.

“ಮಾಲಾ ಜಂಗಂ”: ಆಂಧ್ರ ಪ್ರದೇಶದ “ಮಾಲಾ” ಹೆಸರಿನ ಜನರಲ್ಲಿ ಶೈವರಾದವರಿಗೆ ಪುರೋಹಿತರಾದ “ಮಾಲಾ ಜಂಗಂ” ಜನರು ವಿಭೂತಿಧಾರಿಗಳು.[7] ಮೆಹಬೂಬ್‌ನಗರ, ಮೇದಕ್‌, ನಲ್ಗೊಂಡ, ಹೈದರಾಬಾದ್‌ಜಿಲ್ಲೆಗಳಲ್ಲದೆ ಪಕ್ಕದ ಮಹಾರಾಷ್ಟ್ರ, ಕರ್ನಾಟಕದ ಜಿಲ್ಲೆಗಳಲ್ಲೂ ಇರುವ ಮಾಲಾ ಜಂಗಮರು ಶಿವನಾಗಮಯ್ಯನ[8] ಅನುಯಾಯಿಗಳೆಂದು ಕರೆದುಕೊಂಡು ಅಲ್ಲಮಪ್ರಭುವನ್ನು ಆರಾಧಿಸುತ್ತಾರೆ. (ಅವರಿಗೆ ‘ಶಿವನಾಗ್ಮೈಯ’ರೆಂದೇ ಹೆಸರು). ಇವರ ಮಾತೃಭಾಷೆ ತೆಲಗು. ಮಾಲಾಜನರಲ್ಲಿ ಭಿಕ್ಷೆ ಮಾಡುವ ಅವರಿಗೆ ಮಾಂಸಾಹಾರ ನಿಷಿದ್ಧವಲ್ಲ. ಮಹಾರಾಷ್ಟ್ರದಲ್ಲಿ ೧೯೭೧ರಲ್ಲಿ ಅವರ ಜನಸಂಖ್ಯೆ ೯೮೬ ಇದ್ದುದು ೧೯೮೧ರಲ್ಲಿ ೧೯೫೯೫ ರಷ್ಟು ಏರಲು ಕಾರಣ, ಪರಿಶಿಷ್ಟ ವರ್ಗದವರ ಸವಲತ್ತು ಪಡೆಯಲು ವೀರಶೈವ ಜಂಗಮರು ತಮ್ಮನ್ನು “ಮಾಲಾ ಜಂಗಮ”ರೆಂದು ಕರೆದುಕೊಂಡುದು.[9] ಅವರು ಪೋಚಮ್ಮ, ಎಲ್ಲಮ್ಮ, ಮಹಿಷಮ್ಮ ದೇವತೆಗಳನ್ನು ಪೂಜಿಸುತ್ತಾರೆ.

“ಬೇಡ ಜಂಗಮ” / “ಬುಡ್ಗ ಜಂಗಮ”:[10]

ಇವರು ಆಂಧ್ರದ ರಾಯಲ ಸೀಮೆ, ತೇಲಂಗಾಣ ಜಿಲ್ಲೆಗಳಲ್ಲಲ್ಲದೆ ಕರ್ನಾಟಕದ ಬೀದರ್‌, ಗುಲ್ಬರ್ಗಾ, ರಾಯಚೂರ್‌, ಬಳ್ಳಾರಿ ಜಿಲ್ಲೆಗಳಲ್ಲಿಯೂ ಇದ್ದಾರೆ. ಹೊಲೆಯ, ಮಾದಿಗರಿಗೆ ಇವರು ಪುರೋಹಿತರು ಮತ್ತು ಅವರಿಗೆ ಭವಿಷ್ಯ ಹೇಳುತ್ತಾರೆ. ಇವರು ವೀರಶೈವರಿಂದ ಭಿನ್ನ; ಮತ್ತು ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಿದ್ದಾರೆ. ಇವರ ಜಾತಿ ಹೆಸರು ಹೇಳಿಕೊಂಡು ಕೆಲ ವೀರಶೈವ ಜಂಗಮರು ಹುದ್ದೆಗಳನ್ನು ಪಡೆದಿರುವುದುಂಟು. ಬೇಡ ಜಂಗಮ, ಬುಡ್ಗ ಜಂಗಮರು ಬೇಟೆಗಾರರು ಮತ್ತು ಚಾಪೆ ಹೆಣೆಯುವ ಕೆಲಸ ಕೂಡ ಮಾಡುತ್ತಾರೆ. ಇವರು ಮಾಂಸಾಹಾರಿಗಳು. (ಬೇಡ ಜಂಗಮ, ಬುಡ್ಗ ಜಂಗಮರ ಬಗೆಗಿನ ಮೇಲಿನ ಮಾಹಿತಿ K. S. Singh ಅವರ India’s Communities, IV, P. 346 ಇಲ್ಲಿಂದ. ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ದಾಸನೂರ ಕೂಸಣ್ಣ ಅವರ “ಶೋಷಿತ ಜಂಗಮರ ಮೀಸಲಾತಿ” ಎಂಬ ಕನ್ನಡ ಕೃತಿಯನ್ನೂ ನೋಡಬಹುದು.)

ನಕ್ಕ ಜಂಗಮ[11]: “ಸರದ ಜಂಗುವಾಳ್ಳು” ಎಂದೂ ಕರೆಯಲಾಗುವ ಇವರು ಆಂಧ್ರ ಶ್ರೀಕಾಕುಲಂ ಜಿಲ್ಲೆಯಲ್ಲಿದ್ದಾರೆ. ಲಿಂಗಾಯತರೆಂದು ಕರೆದುಕೊಳ್ಳುವುದರಿಂದ ಅವರನ್ನು “ಜಂಗಲು” ಎಂದೂ ಕರೆಯುತ್ತಾರೆ. ಅವರು ಶಿವಾರಾಧಕರು ಮತ್ತು ನಂದಿಯ ಭಕ್ತರು. ಅವರು ತಂಬೂರಿ ಹಿಡಿದು “ಸರ್ದ ರಾಮಾಯಣ”ವನ್ನು ಹಾಡುವುದರಿಂದ ‘ಸರದ ಜಂಗಮ’ರೆಂದೂ ಪ್ರಸಿದ್ಧರಾಗಿದ್ದಾರೆ. ಅವರ ಮನೆ ಮಾತು ತೆಲುಗು. ಅವರು ಮದುವೆ ಸಮಯದಲ್ಲಿ ಯಜ್ಞೋಪವೀತವನ್ನು ಧರಿಸಿ ಪ್ರತಿವರ್ಷ ಜಂಗಲ ಹುಣ್ಣಿಮೆ ದಿನ ಅದನ್ನು ಬದಲಾಯಿಸುತ್ತಾರೆ. ಶವವನ್ನು ಕುಳಿತಿರುವ ಭಂಗಿಯಲ್ಲಿ ಹೂಳುತ್ತಾರೆ. ಭಿಕ್ಷೆ ಬೇಡುವುದು ಅವರ ಸಾಂಪ್ರದಾಯಕ ವೃತ್ತಿ. (“ನಕ್ಕ” ಎಂದರೆ ತೆಲುಗಲ್ಲಿ ನರಿ ಎಂದರ್ಥ.)

ಮುಲಕ ಜಂಗಮ್‌[12]: “ಜಂಗಂ”, “ಜಂಗಮ”, “ಜಂಗಲು”, “ಜಂಗಮೊಲ್ಲು” ಈ ನಾಮಾಂತರಗಳಿರುವ ಇವರು ಮೈಮೇಲೆ ಲಿಂಗವನ್ನು ಹಣೆಗೆ ಭಸ್ಮವನ್ನು ಧರಿಸುತ್ತಾರೆ. ಅವರಲ್ಲಿ ಮಾಂಸಾಹಾರ ಮದ್ಯಪಾನ ಉಂಟು. ತೆಲುಗು ಮಾತೃಭಾಷೆಯ ಅವರು ತಾವು ಬಸವಣ್ಣನವರ ನಿಷ್ಠಾವಂತ ಅನುಯಾಯಿಗಳೆಂದು ಭಾವಿಸುವುದಿಲ್ಲ. (ಆಂಧ್ರದಲ್ಲಿ “ಜಂಗಮ” ಎಂಬುದು ಕೆಲವೆಡೆ ಬಸವಣ್ಣನವರಿಗೆ ನಿಷ್ಠೆ ತೋರುವ ಲಿಂಗಾಯತರ ಸೂಚಕವೂ ಹೌದು.)ಆಂಧ್ರದ ಚಿತ್ತೂರು, ನೆಲ್ಲೂರು, ಕರ್ನೂಲು, ಕಡಪ, ಅನಂತಪುರ, ಕರ್ನಾಟಕದ ಬಳ್ಳಾರಿ ಇತ್ಯಾದಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ (ತಮಿಳುನಾಡಲ್ಲೂ ಉಂಟು). ಲಿಂಗ, ವಿಭೂತಿಗಳಲ್ಲದೆ ಅವರ ಮೈಮೇಲೆ ರುದ್ರಾಕ್ಷಿ ಮಾಲೆ, ದೊಡ್ಡ ನಿಲುವಂಗಿ, ಮುಂಗೈ ಬಳೆ, ಕಾಲಿಗೆ ಗೆಜ್ಜೆ, ಜೋಳಿಗೆ ಇವೂ ಇರುತ್ತವೆ. ಅವರು ಮಾಂಸಾಹಾರಿಗಳು. ‘ಜೆಮ್ಮಿ’, ‘ಶಿವ’ ಎಂಬುವು ಅವರ ಗೋತ್ರ ನಾಮಗಳು. ತಮ್ಮನ್ನು ಶೂದ್ರರೆಂದು ಅವರು ಕರೆದುಕೊಳ್ಳುತ್ತಾರೆ. ಹಲವರು ಯಜ್ಞೋಪವೀತಧಾರಿಗಳೂ ಹೌದು. ಕುಳಿತ ಭಂಗಿಯಲ್ಲಿ ಅವರು ಶವಗಳನ್ನು ಹೂಳುತ್ತಾರೆ. ಹಾಡುತ್ತ ಭಿಕ್ಷೆ ಬೇಡುವುದು, ಪ್ರಾಣಿಗಳ ಹಕ್ಕಿಗಳ ಬೇಟೆ ಆಡುವುದು ಅವರ ವೃತ್ತಿ. ಈಶ್ವರ ಪ್ರಧಾನ ದೈವವಾದರೂ ಭೈರವ, ವೀರಭಧ್ರ, ಅಂಕಲಮ್ಮ, ಗಂಗಮ್ಮ ಪೋಲೇರಮ್ಮ; ಭದ್ರಕಾಳಿ ಅವರ ಇತರ ಮುಖ್ಯ ದೈವಗಳಲ್ಲಿ ಕೆಲವು. ಮಲ್ಲಿಕಾರ್ಜುನಸ್ವಾಮಿ, ಕಾಳಹಸ್ತೇಶ್ವರ, ಕಪಿಲೇಶ್ವರ ಇತ್ಯಾದಿ ಪ್ರಾದೇಶಿಕ ದೈವಗಳ ಭಕ್ತರೂ ಹೌದು. ಶಿವರಾತ್ರಿ, ದಸರಾ, ಗೌರಿ – ಗಣಪತಿ ಪೂಜೆ, ಸಂಕ್ರಾಂತಿ, ಉಗಾದಿ, ಬಸವ ಜಯಂತಿ ಇವು ಅವರ ಕೆಲವು ಹಬ್ಬಗಳು. ಬ್ರಾಹ್ಮಣ, ವೈಶ್ಯ, ಬಲಿಜ, ಕಾಪು ಮತ್ತು ಇತರ ಜಂಗಂ ಜಾತಿಗಳಿಂದ ಅನ್ನ; ನೀರು ಸ್ವೀಕರಿಸುತ್ತಾರೆ. ಗಂಟಾ ಬುಡಿಗಿ, ಬೇಡ ಚುರುಕು ಜಂಗಮ ಉಪಜಾತಿಗಳ ಜೊತೆ ಸಂಬಂಧವನ್ನು ಬೆಳೆಸುತ್ತಾರೆ. ಆರಾಧ್ಯರು, ಜಂಗಮರು, ಪಂಡಾರಂ (ಇವರೂ ಲಿಂಗಧಾರಿಗಳೇ), ವೀರಶೈವರು ಇವರ ಗುರುಗಳು. ದಲಿತ ವರ್ಗದವರನ್ನು ಬಿಟ್ಟರೆ ಇತರರ ಜೊತೆ ಬಾವಿ ನೀರನ್ನು ಬಳಸುತ್ತಾರೆ.[13]

“ತೆಲುಗು ಜಂಗಮುಲು”: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ “ತೆಲುಗು ಜಂಗಮುಲು” ಜಾತಿ ಜನರಿದ್ದಾರೆ. ಅವರ ಮನೆ ಮಾತು ತೆಲುಗಾದರೂ ಅವರು ಹಾಡುವ ಹಾಡುಗಳೆಲ್ಲ ಕನ್ನಡದಲ್ಲಿರುತ್ತವೆ (ಬಾಲನಾಗಮ್ಮ, ಗಂಗೆ ಗೌರಿ ಜಗಳ ಇತ್ಯಾದಿ). ವೀರಭದ್ರ ಅವರ ಕುಲದೈವ. ಅವರ ಹುಡುಗ ಹುಡುಗಿಯರಿಗೆ ಮದುವೆ ಸಮಯದಲ್ಲಿ ಲಿಂಗಧಾರಣೆಯಾಗುತ್ತದೆ. ಅವರ ಮುಖ್ಯಸ್ಥನನ್ನು “ಗಣಾಚಾರಿ”ಯೆನ್ನುತ್ತಾರೆ. ಅವರಲ್ಲಿ ಕೆಲವರು ಏಕತಾರಿ ವಾದ್ಯ ಹಿಡಿದು ಹಾಡುಗಳನ್ನು ಹಾಡುತ್ತ ಭಿಕ್ಷೆ ಎತ್ತಿ ಜೀವನ ಸಾಗಿಸುತ್ತಾರೆ. ಶವಗಳನ್ನು ಹೂಳುತ್ತಾರೆ.[14]

“ಜಂಗಂ” ಬಗ್ಗೆ ಇನ್ನಷ್ಟು ಮಾಹಿತಿ:

‘ಜಂಗಮ’ರ ಬಗ್ಗೆ ಔತ್ತರೇಯ ಹಿಂದಿ, ಸಂಸ್ಕೃತ ಸಾಹಿತ್ಯದಲ್ಲಿ ದೊರಕುವ ಮಾಹಿತಿ ಹೀಗಿದೆ: ಸಂಸ್ಕೃತದ ಶಂಕರ ವಿಜಯದ ‘ಶೈವಮತ ನಿರಾಕರಣಂ’ ಭಾಗದಲ್ಲಿ ಜಂಗಮನನ್ನು ಎದೆಯ ಮೇಲೆ ತ್ರಿಶೂಲ, ತಲೆಯಲ್ಲಿ ಶಿಲೆಯ ಶಿವಲಿಂಗ ಧರಿಸುವಾತ ಎಂದಿದೆ (“ಹೃದಿ ತ್ರಿಶೂಲಂ, ಶಿರಸಿ ಪಾಷಾಣಲಿಂಗಂ ಚ ಧಾರಯಂತೋ ಜಂಗಮಾಃ”) ಚಿದಂಬರ ದಾಯಿಯ (೧೨೦೦?) ಹಿಂದಿ “ಪೃಥ್ವಿರಾಜ ರಾಸೋ”ದಲ್ಲಿ ಒಬ್ಬ ಜಂಗಮನ ಉಲ್ಲೇಖವಿದೆ. ೧೪೦೦ಕ್ಕಿಂತ ಹಿಂದಿನ ಚರ್ಪಟನಾಥನ ಬರಹದಲ್ಲಿ – ನವನಾಥರಲ್ಲಿ ಒಬ್ಬ ಈತ – ಜಂಗಮರ ಉಲ್ಲೇಖವಿದೆ. ಕಬೀರನು (೧೫ನೇ ಶ.) ಜಟಾಧಾರಿ ಭಸ್ಮಧಾರಿ ಶಿವಶಕ್ತಿ ಆರಾಧಕ ‘ಜಂಗಮ’ನನ್ನು ಹೆಸರಿಸಿದ್ದಾರೆ. ದೇವಗಿರಿಯ ರಾಜಕುಮಾರಿಯೊಬ್ಬಳಿಗೆ ಒಬ್ಬ ಜಂಗಮನು ವೀಣಾವಾದನ ಹೇಳಿಕೊಟ್ಟಂತೆ ೧೪೭೫ರ ಒಂದು ಕೃತಿಯಲ್ಲಿದೆ. ಜಂಗಮರು ವೀಣಾವಾದನ ಪುಟಗಳೂ ಯೋಗ ನಿಷ್ಣಾತರೂ ಆಗಿದ್ದಂತೆ ಹಿಂದೆ ಸಾಹಿತ್ಯದಲ್ಲಿದೆ. ರಾಜಸ್ಥಾನದ ಪ್ರಸಿದ್ಧ ಶಿವಮಂದಿರ ಏಕಲಿಂಗಜೀ ದೇವಾಲಯದ ಅರ್ಚಕರು ಲಿಂಗಾಯತರು. ರಾಜಸ್ಥಾನದ ರಜಪೂತರು ಮೂಲತಃ ಶೈವರು. ಅವರು ಯುದ್ಧರಂಗಕ್ಕೆ ತಮ್ಮೊಡನೆ ಶಿವಲಿಂಗವನ್ನೂ ಒಯ್ಯುತ್ತಿದ್ದರೆಂದು ಜೇಮ್ಸ್‌ಟಾಡ್‌ತನ್ನ “Annals and Antiquities of Rajasthan” ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.[15] ಮಧ್ಯಭಾರತದ ಭಾರಶಿವ ದೊರೆಗಳು (೭ – ೮ಶ.) ಹೆಗಲ ಮೇಲೆ ಶಿವಲಿಂಗವನ್ನು ಒಯ್ಯುತ್ತಿದ್ದರೆಂಬುದು ಪ್ರಸಿದ್ಧ ವಿಷಯ. ಪಲ್ಲವರ (೬ – ೭ಶ.)ಶಾಸನಗಳಲ್ಲಿ ಅವರು ತಲೆಯಲ್ಲಿ ಶಿವಲಿಂಗವನ್ನು ಧರಿಸುತ್ತಿದ್ದರು ಎಂದು ದಾಖಲಾಗಿದೆ. (South Indian Inscriptions. I. No.21 – 22).

ಆಂಧ್ರದ “ಜಂಗಂ” ವರ್ಗ:

ಆಂಧ್ರದ “ಜಂಗಂ” ಜನ ತಲೆಕೂದಲು ತೆಗೆಯಿಸಿ ಕೊರಳಲ್ಲಿ ಅಥವಾ ತೋಳಿಗೆ ಲಿಂಗ ಕಟ್ಟಿಕೊಂಡು ವಿಭೂತಿ ಧರಿಸುತ್ತಾರೆ. ಕೋಲಿನ ತುದಿಗೆ ತ್ರಿಶೂಲ ಸಿಕ್ಕಿಸಿ ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಎಡಬಗಲಿಗೆ ಗಂಟೆ ಶಂಖ ನೇತು ಹಾಕಿ ಬಲಗೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ಭಿಕ್ಷೆ ಮಾಡುತ್ತಾರೆ. ಮನೆಗಳ ಮುಂದೆ ನಿಂತು ಗಂಟೆ ಸದ್ದು ಮಾಡಿ, ಶಂಖ ಊದಿ ‘ಮಹಾಶಂಭೋ’ ಎಂದು ಕೂಗಿ, ತ್ರಿಶೂಲ ಎತ್ತಿಹಿಡಿದು ಹಾಡುತ್ತಾರೆ. ಕೆಳವರ್ಗಕ್ಕೆ ಸೇರಿದ ಅವರಲ್ಲಿ ಇನ್ನಾವುದೇ ಜಾತಿಭೇದ ಇಲ್ಲವೆಂಬುದು ಗಮನಾರ್ಹ (ಇವರೂ ಮೇಲೆ ಹೇಳಿದ “ತೆಲುಗುಂ ಜಂಗಂ” ವರ್ಗದವರೂ ಒಂದೇ ಆಗಿರಬಹುದು.)ಅದೇ ಆಂಧ್ರದಲ್ಲಿ “ಕರ್ಣ (ರ್ಣಾ)ಭಕ್ತುಲು” ಎಂಬ ಹೆಸರಿನ ವೀರಶೈವರು ತಾವು ಬಸವಣ್ಣನ ಅನುಯಾಯಿಗಳೆಂದು ಭಾವಿಸುತ್ತಾರೆ. (ಕೆ. ಎಸ್‌. ಸಿಂಗ್‌ಅವರ ಕೃತಿಯಲ್ಲಿ ಆ ಬಗ್ಗೆ ವಿವರಗಳಿವೆ).

ತಮಿಳು “ಜಂಗಂ” – ಹೆಚ್ಚಿನ ವಿವರಗಳು:

ತಮಿಳುನಾಡಿನ “ಜಂಗಮ್‌ಪಂಡಾರ”ರ ಮನೆ ಮಾತು ತೆಲುಗು ಹಾಗೂ ತಮಿಳು. ‘ಪಂಡಾರ’ ಎನ್ನುವುದು ಅವರು ದೇವಾಲಯದ ಐಶ್ವರ್ಯ, ಆಸ್ತಿ, ಆಗುಹೋಗುಗಳ ಮೇಲ್ವಿಚಾರಕರು ಎಂಬುದರ ಸಂಕೇತ. ಅಲ್ಲಿನ ಹಲವು ಶಿವದೇವಾಲಯಗಳಲ್ಲಿ ಈ ಲಿಂಗಧಾರಿ ಜಂಗಮರು ಅರ್ಚಕರಾಗಿದ್ದು ತೇವಾರಂ, ತಿರುವಾಚಗಂ ಮತ್ತು ಇತರ ಸ್ತೋತ್ರಗಳನ್ನು ಹಾಡುತ್ತಾರೆ. ಅವರ ಹೆಸರುಗಳ ಮುಂದೆ ‘ಪಂಡಾರಂ’ ಎಂಬ ವಂಶನಾಮವಿರುತ್ತದೆ (ಇದೇ ಆಂಧ್ರದಲ್ಲಿ “ಭಂಡಾರಂ”). ಇವರಿಗೆ ತಮಿಳುನಾಡಲ್ಲಿ ಬ್ರಾಹ್ಮಣರಿಗೆ ಸಮಸಮನಾದ ಸಾಮಾಜಿಕ ಸ್ಥಾನವಿದೆ. (ಬೆಂಗಳೂರಲ್ಲಿ ತಮಿಳು ಜಂಗಂ ಸಮುದಾಯದ ಎರಡು ಸಾವಿರ ಕುಟುಂಬಗಳಿವೆ.[16]) ತಮಿಳುನಾಡಲ್ಲಿ (ಮತ್ತು ಇತರ ಕಡೆಯೂ ಕೂಡ)ಜಂಗಂ ಮೈಮೇಲೆ ಧರಿಸುವ ಅಥವಾ ಪುಟ್ಟ ಪೆಟ್ಟಿಗೆಯಲ್ಲಿಟ್ಟು ಪೂಜಿಸುವ ಇಷ್ಟಲಿಂಗವು ದೇವಾಲಯಗಳ ಲಿಂಗದ ಸಂಕ್ಷಿಪ್ತ ಆಕೃತಿಯದ್ಧಾಗಿರುತ್ತಾರೆ: ಇದೇ ನಿಜವಾದ ‘ಇಷ್ಟಲಿಂಗ’ (ಕರ್ನಾಟಕದಲ್ಲಿ ಅನುಕೂಲಕ್ಕಾಗಿ ಅದರ ಮೇಲೆ ಗೋಳಾಕಾರದಲ್ಲಿ ‘ಕಂತೆ’ ಕಟ್ಟಿರುತ್ತಾರೆ).

“ಜಂಗಂ ಪಂಡಾರರು ವಿವಾಹ ಸಮಯದಲ್ಲಿ ಕಡ್ಡಾಯವಾಗಿ ವಧೂ – ವರರಿಗೆ ಲಿಂಗಧಾರಣೆ ಮಾಡಿಸಿ ಇಷ್ಟಲಿಂಗ ಪೂಜಾ ವಿಧಾನ ಹೇಳಿಕೊಡುತ್ತಾರೆ.”[17] ಆದರೂ, ದಿನವೂ ಇಷ್ಟಲಿಂಗ ಪೂಜೆಯನ್ನು ಮುಂದುವರಿಸುವವರು ಕಡಿಮೆ. ಮುಟ್ಟು ಮೈಲಿಗೆ ಇರುವುದರಿಂದ ಸ್ತ್ರೀಯರು ಇಷ್ಟಲಿಂಗ ಧರಿಸಬಾರದು ಎನ್ನುವವರೂ ಇದ್ದಾರೆ. ಲಿಂಗವನ್ನು ಕಟ್ಟುವ ಪದ್ಧತಿ ಇದ್ದರೂ, ಒಂದು ವಂಶದಲ್ಲಿ ಒಬ್ಬ ಹಿರಿಯನು ಲಿಂಗವನ್ನು ಸದಾ ಧರಿಸಿದ್ದು (“ಸಜ್ಜೆ” – ಕರಡಿಗೆ), ಆ ಹಿರಿಯ ಗತಿಸಿದ ನಂತರ ಅದೇ ಕುಟುಂಬದ ಇನ್ನೊಬ್ಬ ಹಿರಿಯನು ಲಿಂಗ ಧರಿಸಿ “ಅಂದಿನಿಂದ ಪತ್ನಿಯ ಸಂಪರ್ಕ ತೊರೆಯುವ ವಾಡಿಕೆಯೂ ಉಂಟು.”[18] ಅವರ ಬಗ್ಗೆ ಜನಕ್ಕೆ ತುಂಬು ಗೌರವ. ಕೆಲವರು ಇಷ್ಟಲಿಂಗವನ್ನು ಒಂದು ಲೋಹದ ಚಿಕ್ಕ ಪೆಟ್ಟಿಗೆಯಲ್ಲಿಟ್ಟು ಅದನ್ನು ತಾವು ಹೋದ ಕಡೆಗೆಲ್ಲ ಕೊಂಡೊಯ್ಯುವ ಪದ್ಧತಿಯನ್ನೂ ಅನುಸರಿಸುತ್ತಾರೆ.[19] ತಮಿಳು ಜಂಗಂ ಅಥವಾ ಪಂಡಾರರು ಮಾಂಸಾಹಾರಿಗಳಾದರೂ, ಮೈಮೇಲೆ ಲಿಂಗವನ್ನು ಧರಿಸಿದವರು ಸಸ್ಯಹಾರಿಗಳಾಗಿ ಪರಿವರ್ತನೆ ಹೊಂದುತ್ತಾರೆ.

ವಚನಕಾರರ “ಗುರು – ಲಿಂಗ – ಜಂಗಮ” ಮೂಲ ಪರಿಕಲ್ಪನೆಯ “ಜಂಗಮ”ವು ಇಂದಿನ ಹುಟ್ಟು ಜಂಗಮರನ್ನು ಸೂಚಿಸುವುದಿಲ್ಲ. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ, ಲಿಂಗದೀಕ್ಷೆ ಪಡೆದು ನಿತ್ಯ ಸಂಚಾರಿಯಾಗಿ ಶಿವಧ್ಯಾನದಲ್ಲಿ ತೊಡಗಿರುತ್ತಿದ್ದ ವ್ಯಕ್ತಿಯೇ ಜಂಗಮನೆನ್ನಿಸಿಕೊಳ್ಳುತ್ತಿದ್ದನೆಂಬ ಊಹೆಗೆ[20] ಮೇಲಿನ ಮಾಹಿತಿ ಬಹು ಪುಷ್ಟಿಯನ್ನು ನೀಡುತ್ತದೆ. ‘ಜಂಗಮ’ ಒಂದು ಬಗೆಯ ಅರೆ ಸನ್ಯಾಸಿ; ಸದಾ ಸಂಚಾರಿ; ಸದಾ ಶಿವಪೂಜೆ ಶಿವಧ್ಯಾನದಲ್ಲಿರುವ ವ್ಯಕ್ತಿ. ಅವನು ಜನರ ಕಣ್ಣಲ್ಲಿ ಓಡಾಡುವ ಶಿವ (ಅಥವಾ ಶಿವಲಿಂಗ).

ಅಖಿಲ ಭಾರತ ವ್ಯಾಪ್ತಿಯುಳ್ಳ ‘ಜಂಗಂ’ ಜಾತಿಯ ಜನರ ಸಮಗ್ರ ಸಮೀಕ್ಷೆ, ವಚನ ವಙ್ಮಯ ಸೇರಿದಂತೆ ಇಡೀ ವೀರಶೈವ ಸಾಹಿತ್ಯ, ಇಂದಿನ ಜಂಗಮರ ಜೀವನ ವಿಧಾನ ಇವುಗಳ ಸಮಗ್ರ ಅಧ್ಯಯನವು ವೀರಶೈವ ಧರ್ಮದ ಮೂಲದ ಬಗ್ಗೆ ಬಹು ಒಳ್ಳೆಯ ಬೆಳಕನ್ನು ಬೀರುವ ಸಾಧ್ಯತೆ ಇದೆ. ‘ಜಂಗಂ’ ಜನರ ತೌಲನಿಕ ಅಧ್ಯಯನವು ಮೂಲ ವೀರಶೈವದ (Proto – Virashaivism) ಪುನಾರಚನೆಗೆ ಸಹಾಯಕ. ಆದರೆ ಆ ಅಧ್ಯಯನವು ಶ್ರಮಪೂರ್ಣವೂ ಅಷ್ಟೇ ಕಠೋರ ವಸ್ತುನಿಷ್ಠವೂ ಆಗಿರುವ ಅಗತ್ಯವೂ ಇದೆ.

ಕರ್ನಾಟಕದ ಜಂಗಮರು:

ಕರ್ನಾಟಕದ ಜಂಗಮರನ್ನು ಮಧ್ಯ ಮತ್ತು ಉತ್ತರ ಕರ್ನಾಟಕಗಳಲ್ಲಿ “ಅಯ್ನೋರು” (ಐನೋರು, ಅಯ್ಯನವರು) ಎಂದು ಕರೆಯುತ್ತಾರೆ. ಅವರು ವೀರಶೈವ (ಲಿಂಗಾಯತ) ಸಮಾಜದ ಪುರೋಹಿತರು. ಅವರ ಹೆಸರುಗಳು ಸಾಮಾನ್ಯವಾಗಿ ಅಯ್ಯ ಎಂದು ಕೊನೆಯಾಗುತ್ತವೆ (ಕೊಟ್ರಯ್ಯ, ಬಸಯ್ಯ, ಸಿದ್ಧಯ್ಯ, ವೀರಯ್ಯ ಇತ್ಯಾದಿ). ಮಠ ಎಂಬ ವಂಶನಾಮವಿರುವವರೂ ಜಂಗಮರೇ (ಉದಾ: ಹಿರೇಮಠ, ಸವದತ್ತಿಮಠ, ಭೂಸನೂರಮಠ ಇತ್ಯಾದಿ).

ಜಂಗಮರು ವೀರಶೈವರಲ್ಲಿ ಪ್ರತ್ಯೇಕಿಸಬಹುದಾದ ಒಂದು ಸ್ಪಷ್ಟ ಜಾತಿ. ಜಂಗಮ ತಂದೆ ತಾಯಿಗಳ ಮಗ ಸ್ವಾಭಾವಿಕವಾಗಿ ಜಂಗಮನೆನ್ನಿಸಿಕೊಳ್ಳುತ್ತಾನೆ. ಮಗು ಹುಟ್ಟಿದಾಗ ಒಬ್ಬ ಜಂಗಮನ ಕೈಯಲ್ಲಿ ಆ ಮಗುವಿಗೆ ಲಿಂಗವೊಂದನ್ನು ಕಟ್ಟಿಸಲಾಗುತ್ತದೆ. (ಅದನ್ನು ತೊಟ್ಟಿಲಿಗೆ ಕಟ್ಟಲಾಗುತ್ತದೆ). ಮುಂದೆ ಹತ್ತು ಹನ್ನೆರಡು ವರ್ಷಗಳ ಬಾಲಕನಾದಾಗ ಅವನಿಗೆ ಶಾಸ್ತ್ರೋಕ್ತ ಲಿಂಗದೀಕ್ಷೆಯಾಗುತ್ತದೆ. ಅದನ್ನು ‘ಅಯ್ಯಾಚಾರ’ವೆನ್ನುತ್ತಾರೆ. ಅಯ್ಯಾಚಾರ ಆದ ವ್ಯಕ್ತಿ ಮಾತ್ರ ಪೌರೋಹಿತ್ಯಕ್ಕೆ ಅರ್ಹನಾಗುತ್ತಾನೆ. ಆಗ ಒಬ್ಬ ಪಟ್ಟದ್ದೇವರಿಂದ ಪಡೆದ ಲಿಂಗವನ್ನು ಅವನು ಸದಾ ಧರಿಸಿರಬೇಕು; ಮತ್ತು ಅದನ್ನು ದಿನವೂ ಬೆಳಿಗ್ಗೆ ಸ್ನಾನ ಮಾಡಿ ಪೂಜಿಸಿದ ಮೇಲೆ ಮಾತ್ರ ಅವನು ಊಟ ಮಾಡತಕ್ಕದ್ದು. ರಾತ್ರಿಯೂ ಅವನು ಅದನ್ನು ಪೂಜಿಸಿಯೇ ಊಟ ಮಾಡತಕ್ಕದ್ದು. ಆಗ ಸ್ನಾ ಮಾಡದಿದ್ದರೂ ನಡೆದೀತು.

ಲಿಂಗಾಯತರ ಮನೆಗಳಲ್ಲಿ ಮಗು ಹುಟ್ಟಿದಾಗ, ಮದುವೆಗಳು ಆದಾಗ, ಸಾವು ಆದಾಗ ಅವನು ಬಂದು ಎಲ್ಲ ಸಂಸ್ಕಾರಗಳನ್ನು ನೆರವೇರಿಸುತ್ತಾನೆ. ಹಬ್ಬಗಳಂದು ಜನ ಅವನನ್ನು ಕರೆದು ಅವನ ಪಾದಗಳನ್ನು ತೊಳೆದು ಮನೆಗೆಲ್ಲ ಸಿಂಪಡಿಸುತ್ತಾರೆ. ಹಿಂದೆ ಆ ಪಾದೋದಕದ ಒಂದೆರಡು ಹನಿಗಳನ್ನು ಬಾಯಲ್ಲಿ ಹಾಕಿಕೊಳ್ಳುತ್ತದ್ದುದೂ ಉಂಟು. ಅವನು ಅಲ್ಲಿ ಪ್ರಸಾದ ಸ್ವೀಕರಿಸಿದ ಮೇಲೆ ಮನೆಯವರಿಗೆಲ್ಲ ಊಟ.

ಜಂಗಮರು ಜಂಗಮರಿಗೆ ಮಾತ್ರ ಹೆಣ್ಣು ಕೊಟ್ಟು ಹೆಣ್ಣು ತರುತ್ತಾರೆ. ಅನ್ಯ ಲಿಂಗಾಯತರಿಂದ ಹೆಣ್ಣು ತರುವುದು ಅನಿವಾರ್ಯವಾದಲ್ಲಿ ಪಂಚಮಸಾಲಿಗಳನ್ನು ಇಷ್ಟಪಡುತ್ತಾರೆ. ಹೆಂಗಸರಿಗೆ ಶಾಸ್ತ್ರೋಕ್ತ ಲಿಂಗದೀಕ್ಷೆಯಿಲ್ಲವಾದರೂ ಅವರು ಸದಾ ಮೈಮೇಲೆ ಲಿಂಗ ಧರಿಸುತ್ತಾರೆ. ಎಲ್ಲ ಜಂಗಮರೂ ಐದು ಗೋತ್ರಗಳಲ್ಲಿ ಒಂದಲ್ಲ ಒಂದು ಪಂಚಪೀಠಕ್ಕೆ ಸೇರಿರುತ್ತಾರೆ (ಬಾಳೆ ಹಳ್ಳಿ, ಉಜ್ಜಯಿನಿ, ಶ್ರೈಶೈಲ, ಕೇದಾರ, ಕಾಶಿ). ಒಂದು ಪೀಠಕ್ಕೆ ಸೇರಿದವರು ಆ ಪೀಠಕ್ಕೆ ಸೇರಿದ ಜಂಗಮರ ಮನೆಯಿಂದ ಹೆಣ್ಣು ತರುವಂತಿಲ್ಲ. ಏಕೆಂದರೆ ಅವರು ಅಣ್ಣ – ತಮ್ಮಂದಿರಿದ್ದಂತೆ. ಪಂಚಪೀಠಗಳಿಗೆ ಪೀಠಾಧ್ಯಕ್ಷರಾಗಲು ಜಂಗಮರಿಗೆ ಮಾತ್ರ ಅರ್ಹತೆ. (ವೀರಕ್ತ ಪೀಠಗಳಿಗೆ ಜಂಗಮೇತರರೂ ಆಗಬಹುದು).

ಕಾಲ ಬದಲಾವಣೆಯಿಂದ ಅವರ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಸಹಜವಾಗಿಯೇ ಬದಲಾವಣೆಗಳಾಗುತ್ತಿವೆ. ಮೈಸೂರು, ಮಂಡ್ಯ ಜಿಲ್ಲೆಗಳ ಆರಾಧ್ಯರೂ ಗುರುಗಳೇ ಆದರೂ ಅವರನ್ನು ಜಂಗಮರೆಂದು ಕರೆಯುವುದಿಲ್ಲ. ತಮ್ಮನ್ನು ಆರಾಧ್ಯ ಬ್ರಾಹ್ಮಣರೆಂದು ಕರೆದುಕೊಳ್ಳುವ ಅವರು ಇಷ್ಟಲಿಂಗದ ಜೊತೆ ಜನಿವಾರವನ್ನು ಕೂಡ ಧರಿಸುತ್ತಾರೆ.

 

ಅನುಬಂಧ – ೬: ಜಂಗಂ ಮಠ : ಕಾಶಿಲಿಂಗ : ಸಂಕಣ್ಣ ನಾಯಕ

ಭಕ್ತಪುರದ ಜಂಗಂ ಮಠದ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದ ಕ್ರಿ.ಶ. ೧೫೭೨ರ ಶಿಲಾಶಾಸನದ ಪ್ರಕಾರ, ಆ ವರ್ಷ ಅಲ್ಲಿ ಗಂಗಾದೇವಿ ರಾಣಿಯು ವಿಶ್ವೇಶ್ವರ ಲಿಂಗವನ್ನು ಸ್ಥಾಪಿಸಿದಾಗ ಮಠಪತಿಯಾಗಿದ್ದವನು ಮಲ್ಲಿಕಾರ್ಜುನ. ಆ ಲಿಂಗವು ಆ ಮುಂಚಿ ಕೆಳದಿ ರಾಜ ಸಂಕಣ್ಣ ನಾಯಕನು ಕಾಶಿಯಿಂದ ತಂದುದೇ ಆಗಿರಬಹುದು ಎಂಬ ಸಾಧಾರ ಊಹೆಗೆ ಅವಕಾಶವಿದೆ.

ದೊಡ್ಡ ಸಂಕಣ್ಣ ನಾಯಕನ (ಕ್ರಿ.ಶ. ೧೫೬೬ – ೧೫೭೦) ತೀರ್ಥಯಾತ್ರೆಯ ವಿವರಗಳು ಕೆಳದಿನೃಪವಿಜದಲ್ಲಿ (ಕ್ರಿ.ಶ. ೧೭೫೦) ದೊರಕುತ್ತವೆ.[21] ಅವನು ‘ಜಂಗಮ’ ವೇಷ ಧರಿಸಿ, ಎಂದರೆ ರಾಜಪೋಷಾಕನ್ನು ಬಿಟ್ಟು ಶಿವಭಕ್ತನಂತೆ ಸರಳ ಉಡುಪಿನಲ್ಲಿ ದೆಹಲಿಗೆ ಹೋಗಿ ತನ್ನ ಶೌರ್ಯದಿಂದ ಅಲ್ಲಿನ ಸುಲ್ತಾನನ ಮೆಚ್ಚುಗೆ ಗಳಿಸಿ, ಅವನ ರಾಜ್ಯದಲ್ಲಿ ಅಲ್ಲಲ್ಲಿ ಮಠಗಳನ್ನು ಸ್ಥಾಪಿಸಲು ಒಪ್ಪಿಗೆ ಕೇಳಿದಾಗ ಸುಲ್ತಾನನು ರಾಜ್ಯದ ಎಲ್ಲ ಕಡೆಯ ಅಧಿಕಾರಿಗಳಿಗೆ ಆ ಬಗ್ಗೆ ಸೂಚನೆ ನೀಡಿ ಸಂಕಣ್ಣ ನಾಯಕನಿಗೆ ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸುವಂತೆ ಆಜ್ಞೆ ನೀಡುತ್ತಾನೆ. ಮತ್ತು ಸುಲ್ತಾನನು ಹನ್ನೆರಡು ಸಾವಿರ ಹೊನ್ನು ನೀಡುತ್ತಾನೆ. ಅವನು ದೆಹಲಿಯಲ್ಲೇ “ಚಾವಲಿಕೆ ಮಂಡೈ” (‘ಅಕ್ಕಿ ಮಂಡಿ’ ಎಂಬ ಪೇಟೆ?) ಎಂಬಲ್ಲಿ ಜಂಗಮರಿಗೆ ಮಠ ಕಟ್ಟಿಸಿದನು. (ಅದನ್ನು ಗುರುತಿಸುವ ಅಗತ್ಯವಿದೆ.) ನಂತರ ಜಂಗಮರಿಗೆ ಮಠ ಕಟ್ಟಿಸಿದನು. (ಅದನ್ನು ಗುರುತಿಸುವ ಅಗತ್ಯವಿದೆ.) ನಂತರ ಪ್ರಯಾಗಕ್ಕೆ ಹೋಗಿ ಅಲ್ಲಿ ಒಂದು ಮಠ ಕಟ್ಟಿಸಿದ್ದು ಅದು ಈಗಲೂ ಕಾಶಿಯ ಜಂಗಮವಾಡಿ ಮಠದ ಶಾಖಾಮಠವೆನ್ನಿಸಿದೆ. ಬಳಿಕ ಕಾಶಿಗೆ ಹೋಗಿ ಹಲವು ತೀರ್ಥಗಳನ್ನು ಸಂದರ್ಶಿಸಿ ಅಲ್ಲಿ “ವಿಶ್ವೇಶ್ವರ ಪೂಜೆ ರಚಿಸಲು” ಅನುಮತಿ ಕೂಡ ಡಿಲ್ಲೀಶ್ವರನಿಂದ ಪಡೆದುಕೊಂಡಿದ್ದನು. ಕ್ರಿ.ಶ. ೧೪೮೪ರಲ್ಲಿ ಸಿಕಂದರ ಲೋದಿಯ ನಾಶಕೃತ್ಯದಿಂದಾಗಿ ಕಾಶಿಯಲ್ಲಿ ವಿಶ್ವೇಶ್ವರನ ಪೂಜೆಯು ನಿಂತು ಹೋಗಿತ್ತೆಂದು (ಪುಟ ೯೧) ಕಾಣುತ್ತದೆ; ದೊಡ್ಡ ಸಂಕಣ್ಣ ನಾಯಕನು ಸುಮಾರು ೧೫೬೫ರಲ್ಲಿ ಆ ದೈವದ ಪೂಜೆಗೆ ಮತ್ತೆ ವ್ಯವಸ್ಥೆ ಮಾಡಿದನೆಂದು ತೋರುತ್ತದೆ.[22] ಬಹು ಹಿಂದೆ ಶ್ರೀಶೈಲದ ಶೀಲವಂತ ನಾಯಕನೆಂಬ ವ್ಯಕ್ತಿ ದಶಾಶ್ವಮೇಧ ಘಾಟ್‌ಪಶ್ಚಿಮದಲ್ಲಿ ಹರಿಕೇಶವಾನಂದ ಕಾನನದಲ್ಲಿ ಕಟ್ಟಿಸಿದ ಮಠಕ್ಕೆ ಮಲ್ಲಿಕಾರ್ಜುನ ದೇವರು ಎಂಬ ‘ಜಂಗಮ’ನಿಗೆ ಪಟ್ಟ ಕಟ್ಟಿದ್ದನು. (‘ಹರಿಕೇಶವಾನಂದ ಕಾನನ’ ಹೆಸರು ಕಾಶಿಯ ಜಂಗಮವಾಡಿ ಮಠದ ಕ್ರಿ.ಶ. ೧೭೫೦ ರ ಶಾಸನದಲ್ಲೂ ಉಲ್ಲೇಖವಾಗಿದೆ. ವಿ. ಶಿವಾನಂದ ಸಂಪಾದಿತ ಕೃತಿ, ಪು. ೫೨. ಕೆಳಗೆ ನೋಡಿ). ಅದನ್ನು ಮುಂದೆ ಮ್ಲೇಚ್ಛರು ಆಕ್ರಮಿಸಿದರು. ದೊಡ್ಡ ಸಂಕಣ್ಣ ನಾಯಕನು ಅದನ್ನು ಬಿಡಿಸಿ (ಇದಕ್ಕೆ ದೆಹಲಿ ಸುಲ್ತಾನನ ಒಪ್ಪಿಗೆಯಂತೂ ಇತ್ತು ಅದಕ್ಕೆ “ಜಂಗಮವಾಟಿ”ಯೆಂಬ ಹೆಸರಿಟ್ಟು, [23] ಅದರ ಜೊತೆ ಪಂಚಮಠವನ್ನು ಕಟ್ಟಿಸಿ ಅದನ್ನು “ಶಿವಜಂಗಮಕ್ಕೆ ಶಿವಾರ್ಪಣಂಗೈದು” ಬಳಿಕ ಕಾಶಿಕ್ಷೇತ್ರದ ಕಪಿಲಾಧಾರಾ, ಮಾನಸ ಸರೋವರ, ಗಂಧರ್ವ ಸಾಗರ ಎಂಬ ತೀರ್ಥಗಳಿಗೆ ಸೋಪಾನ ಕಟ್ಟಿಸಿ, ಅಯ್ಯಪ್ಪನೆಂಬ ‘ಸೇನ ಬೋವ’ನ ಮೂಲಕ (=ಶಾನುಭೋಗ) ಕರ್ದಮೇಶ್ವರ ನರ್ಮದೇಶ್ವರ ಭೀಮಚಂಡಿಕೆ ವೃಷಭ ಧ್ವಜೇಶ್ವರ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿ ತನ್ನ ಮಗ ವೆಂಕಟಪ್ಪ ನಾಯಕನ ಹೆಸರಿನಲ್ಲಿ ಶಿಲಾಶಾಸನವನ್ನೂ ಬರೆಯಿಸಿದನು. ಇದು ಕಾಶಿಯ ಕಪಿಲಧಾರ ತೀರ್ಥದ (ಕ್ರಿ.ಶ. ೧೬೫೫ರ) ಮೆಟ್ಟಿಲು ಶಾಸನದಲ್ಲೂ ಉಲ್ಲೇಖವಾಗಿದೆ. (ಸಂ ವಿ. ಶಿವಾನಂದ : ಉತ್ತರ ಭಾರತದ ಕನ್ನಡದ ಹಸ್ತಪ್ರತಿ – ಇತರ ದಾಖಲೆಗಳ ಸೂಚಿ, ಪು. ೫೬). ಆ ಬಳಿಕ ವಾರಣಾಸಿ ಕ್ಷೇತ್ರದಲ್ಲಿ “ಅತಿ ಮನೋಹರವಾದ ಸ್ಥೂಲಲಿಂಗಮಂ ಸಂಪಾದಿಸಿಕೊಂಡನ್‌”. (“ಸಂಪಾದಿಸಿ ವಶಮಾಡಿಕೊಂಡ ನಂತರ” ಎಂಬ ಪಾಠಾಂತರವನ್ನು ಗಮನಿಸಬೇಕು. ಆ ಲಿಂಗ ವಿಶೇಷವಾದುದ್ದಿರಬೇಕು) ಅವನು ಆ ಲಿಂಗವನ್ನು ಜೊತೆಯಲ್ಲಿ ತೆಗೆದುಕೊಂಡು, ಗಯೆಗೆ ಹೋಗಿ ಅಲ್ಲಿ ಒಂದು ಮಠವನ್ನು ಸ್ಥಾಪಿಸಿದನು. ಮುಂದೆ ಅವನು ನೇಪಾಳಕ್ಕೆ ತೆರಳುತ್ತಾನೆ.

ಅವಿರಳ ವಿಕ್ರಮ ಜಿತರಿಪು
ನಿವಹಂ ಗಯೆಯಿಂದ ತೆರಳ್ದುದಗ್ದಿಕ್ಕಿನೊಳೊ
ಪ್ಪುವ ನೀಲಕಂಠ ನೇಪಾ
ಳವನೊಲವಿಂ ಸಾರ್ದನಾ ನೃಪಾಲಕ ತಿಲಕಂ ||
ಆ ತಾಣದೊಳುರೆ ಮಠಮಂ
ವೀತಭಯಂ ಸಂಕಣೋರ್ವಿಪಂ ವಿರಚಿಸಿ ಮ
ತ್ತಾತನಲ್ಲಿಂ ತೆರಳ್ದುರು
ಕೇತಾರವನಘವಿದೂರಮಂ ಮಿಗೆ ಸಾರ್ದಂ ||
ಕರಮೆಸವಾ ಕೇತಾರೇ
ಶ್ವರನಡಿದಾವರೆಯನೈದೆ ಪೂಜಿಸಿ ತದ್ಭೂ
ವರನಾ ಸ್ಥಳದೊಳ್ಜಂಗಮ
ವರ ಧರ್ಮಾರ್ಥಂ ಸುಮಠವನಿರದಾಗಿಸಿದಂ ||

ಕಾಶಿಯಿಂದ ಹೊರ ಅವನು ಗಯೆ, ನೇಪಾಳ, ಕೇತಾರಗಳನ್ನು ದರ್ಶಿಸಿ, ಹರಿದ್ವಾರ ಕಾಶ್ಮೀರ ಕುರುಕ್ಷೇತ್ರ (ಭಗ್ನ) ಹಂಪಿ ಇವುಗಳ ಮೂಲಕ ತನ್ನ ರಾಜಧಾನಿ ಕೆಳದಿಗೆ ಬರುತ್ತಾನೆ. ಆ ಮೊದಲು ಕೆಳದಿಯಿಂದ ಹೊರಟು ಶಿವಗಂಗೆ, ಕಂಚಿ, ಚಿದಂಬರಂ ಕುಂಭಕೋಣ, ರಾಮೇಸ್ವರ, ಬಿಜಾಪುರ, ಭಾಗನಗರ (ಹೈದರಾಬಾದ್) ಇವುಗಳ ಮೂಲಕ ದೆಹಲಿ ಸೇರಿರುತ್ತಾನೆ. ದೆಹಲಿಯಿಂದ (‘ಡಿಳ್ಳಿಯಿಂದ’) ಅವನು ಹಲವು ಕ್ಷೇತ್ರಗಳನ್ನು ಸಂದರ್ಶಿಸಿ ಹಿಂದಕ್ಕೆ ಬಂದುದನ್ನು ಮೇಲೆ ನೋಡಿದ್ದವೆ: ಹದಿನಾರನೇ ಶತಮಾನದ ಈ ತೀರ್ಥಯಾತ್ರೆ ಅತ್ಯಂತ ಅಪೂರ್ವವಾದುದು, ಸಾಹಸಮಯವಾದುದು. ಉದ್ದಕ್ಕೂ ಅವನು ರಾಜಪೋಷಾಕನ್ನು ತ್ಯಜಿಸಿ ಶಿವಭಕ್ತನಂತೆ ಉಡುಪು ಚಿಹ್ನೆಗಳನ್ನು ಧರಿಸಿದ್ದನು. ಅವನ ತೀರ್ಥಯಾತ್ರಗೆ ಕನಿಷ್ಠ ಎರಡು ವರ್ಷ ಬೇಕಾಗಿರಬಹುದು.

ಇಂದಿನ ಕಾಶಿಯ ಜಂಗಮವಾಡಿ ಮಠ, ಹಿಮವತ್‌ಕೇದಾರದ ಕೇದಾರ ಮಠಗಳು ಪ್ರಸಿದ್ಧ ವೀರಶೈವ ಮಠಗಳಾಗಿದ್ದು ಅವುಗಳನ್ನು ಸು. ಕ್ರಿ.ಶ. ೧೫೬೫ರಲ್ಲಿ ದೊಡ್ಡ ಸಂಕಣ್ಣ ನಾಯಕನು ನವೀಕರಿಸಿ ಕಟ್ಟಿಸಿದನೆಂಬುದು ತೀರ ಸ್ಪಷ್ಟವಾಗಿದೆ.

ಈಗ ಅವನ ಪ್ರವಾಸದ ಕಾಶಿ, ನೇಪಾಳಗಳ ಕಡೆ ಗಮನವನ್ನು ಹರಿಸೋಣ. ಅವನು ಕಾಶಿಯಲ್ಲಿ ವಿಶ್ವೇಶ್ವರನ ಪೂಜೆಯನ್ನು ‘ರಚಿಸಲು’ ಡಿಳ್ಳೀಶ್ವರನ ಅನುಮತಿಯನ್ನು ದೊರಕಿಸಿಕೊಂಡನು. ಅವನ ಕಾಲದಲ್ಲಿ ಆಳುತ್ತಿದ್ದ ದೊರೆ ಅಕ್ಬರ್ (೧೫೫೬ – ೧೫೦೫). ಉದಾರ ಮನೋಧರ್ಮದ ಅವನು ಕಾಶಿ ಇತ್ಯಾದಿ ಕಡೆಗಳಲ್ಲಿ ಜಂಗಮ ಮಠಗಳನ್ನು ಕಟ್ಟಿಸಲು ಹನ್ನೆರಡು ಸಾವಿರ ಚಿನ್ನದ ನಾಣ್ಯಗಳನ್ನು ನೀಡಿದನು. ಇಂತಹ ವರ್ತನೆಯು ಅಕ್ಬರನಿಂದ ಮಾತ್ರ ನಿರೀಕ್ಷಿತ. ಅಕ್ಬರನಿಗಿಂತ ಹಿಮದೆ ಕ್ರಿ.ಶ. ೧೪೯೪ರಲ್ಲಿ ಸಿಕಂದರ್ ಲೋದಿಯು ವಾರಣಾಸಿಯ ಮೇಲೆ ಧಾಳಿ ಮಾಡಿ ವಿಶ್ವೇಶ್ವರ ದೇವಾಲಯವನ್ನು ಭಗ್ನಗೊಳಿಸಿದುದರ ಪರಿಣಾಮವಾಗಿ ಅಲ್ಲಿ ಪೂಜಾದಿಗಳು ನಿಂತು ಹೋಗಿದ್ದು, ಆ ದೇವಾಲಯದಲ್ಲಿ ಪೂಜೆಯನ್ನು ಆರಂಭಿಸಲು ಅಕ್ಬರನಿಂದ ದೊಡ್ಡ ಸಂಕಣ್ಣ ನಾಯಕನು ಒಪ್ಪಿಗೆ ಪಡೆದು, ಮುಮದೆ ಅಲ್ಲಿ ಪೂಜಾದಿಗಳನ್ನು ನೆರವೇರಿಸಿರುವಂತೆ ಕಾಣುತ್ತದೆ. ವಿಶ್ವೇಶ್ವರನ ದೇವಾಲಯವು ಸುಸ್ಥಿತಿಯಲ್ಲಿದ್ದಿದ್ದರೆ ಸಂಕಣ್ಣ ನಾಯಕನು ಅಲ್ಲಿ ಪೂಜೆಯನ್ನು ನೆರವೇರಸಲು ಡಿಳ್ಳೀಶ್ವರನ ಒಪ್ಪಿಗೆ ಪಡೆಯಬೇಕಿರಲಿಲ್ಲ. ಹೊಸದಾಗಿ ಮಠಗಳನ್ನು ಕಟ್ಟಿಸಲಂತೂ ಡಿಳ್ಳಿ ಚಕ್ರವರ್ತಿಯ ಅನುಮತಿ ಬೇಕಾಗಿತ್ತು. ವಿಶ್ವನಾಥ ಮಂದಿರದಲ್ಲಿ ದೊಡ್ಡ ಸಂಕಣ್ಣ ನಾಯಕನು ಹೊಸ ವಿಶ್ವೇಶ್ವರ ಲಿಂಗವನ್ನು ಸ್ಥಾಪಿಸಿದನೋ ಅಥವಾ ಸಾಂಕೇತಿಕವಾಗಿ ಅಲ್ಲೊಂದು ಮೂರ್ತಿಯನ್ನಿಟ್ಟು ಪೂಜೆಯನ್ನು ನೆರವೇರಿಸಿದನೋ ತಿಳಿದು: ಬಹುಶಃ ಎರಡನೆಯ ಊಹೆ ನಿಜ. ೧೫೮೫ರಲ್ಲಿ ಅಕ್ಬರನ ಅತ್ಮೀಯನಾಗಿದ್ದ ಹಿಂದೂ ಧರ್ಮದ ತೋದರ ಮಲ್ಲನು ವಿಶ್ವೇಶ್ವರ ಮಂದಿರವನ್ನು ಕಟ್ಟಿಸಿದ್ದು ಗಮನಾರ್ಹ. ಅವನು ವಿಶ್ವೇಶ್ವರ ಮಂದಿರ ಕಟ್ಟಿಸಲು ದೊಡ್ಡ ಸಂಕಣ್ಣ ನಾಯಕನು ಚಕ್ರವರ್ತಿಯಿಂದ ಅಲ್ಲಿ ನಿಂತುಹೋಗಿದ್ದ ಪೂಜೆಗೆ ಅನುಮತಿ ಪಡೆದುದು ಸ್ಫೂರ್ತಿಯನ್ನು ನೀಡಿರಬೇಕು. ವಿಶ್ವೇಶ್ವರ ಮಂದಿರವು ಹೊಸದಾಗಿ ನಿರ್ಮಾಣವಾದುದು ದೊಡ್ಡ ಸಂಕಣ್ಣ ನಾಯಕನ ಕಾಶಿ ಭೇಟಿಯಾದ ಹದಿನೈದು ಇಪ್ಪತ್ತು ವರ್ಷಗಳಲ್ಲೇ ಎಂಬುದು ಗಮನಾರ್ಹ. ಈ ಊಹೆ ನಿಜವಾದರೆ ಇದೊಂದು ನಿಶ್ಚಿತವಾಗಿಯೂ ಅತ್ಯಂತ ಮಹತ್ವದ ಸಂಗತಿ.

ದೊಡ್ಡ ಸಂಕಣ್ಣ ನಾಯಕನು ಕಾಶಿಯಲ್ಲಿ ಒಂದು ಸುಂದರ “ಸ್ಥೂಲ ಲಿಂಗ”ವನ್ನು “ಸಂಪಾದಿಸಿ”ಕೊಂಡನೆಂದು ಅಚ್ಚಾದ ಪ್ರತಿಯಲ್ಲಿದ್ದರೆ, ಪಾಠಾಂತರದಲ್ಲಿ ಸಂಪಾದಿಸಿ “ವಶ ಮಾಡಿಕೊಂಡ” ಎಂದಿದೆ. ಅ ಲಿಂಗವನ್ನು ಹೊಸದಾಗಿ ಮಾಡಿಸಿ ಹಣ ಕೊಟ್ಟು ಕೊಂಡಿದ್ದರೆ ಅದನ್ನು ತನ್ನದನ್ನಾಗಿ ಮಾಡಿಕೊಂಡ ಎಂಬರ್ಥದ ಮಾತುಗಳು ಬರಬೇಕಿರಲಿಲ್ಲ. ನಡೆದಿರಬಹುದಾದ ಸಂಗತಿ ಹೀಗಿರುವಂತಿದೆ: ವಿಶ್ವನಾಥನ ಮೂಲ ಲಿಂಗದ ಮೇಲ್ಭಾಗದ ಗೋಳಕವನ್ನು ಕಿತ್ತು ಎಲ್ಲೋ ಹಾಕಿದ್ದರೆಂದು ಕಾಣುತ್ತದೆ: ಭಗ್ನಗೊಳ್ಳದ ಲಿಂಗದ ಆ ಗೋಳಕ ಭಾಗದ ಮಹತ್ವವನ್ನು ಗುರುತಿಸಿದ ದೊಡ್ಡ ಸಂಕಣ್ಣ ನಾಯಕನು ಕಾಶಿಯ ದೆಹಲಿ ಚಕ್ರವರ್ತಿಯ ಮುಸ್ಲಿಂ ಅಧಿಕಾರಿಗಳಿಗೆ ತಿಳಿಸಿ ಅದನ್ನು ಪಡೆದು ತನ್ನ ‘ವಶ’ಕ್ಕೆ ತೆಗೆದುಕೊಂಡನೆಂದು ಕಾಣುತ್ತದೆ. ಅದನ್ನೇ ಅವನು ನೇಪಾಳದ ಭಕ್ತಪುರಕ್ಕೆ ಒಯ್ದು ಅಲ್ಲಿನ ಜಂಗಂ ಮಠದಲ್ಲಿ ಸ್ಥಾಪಿಸಿರಬಹುದು. ಜಂಗಂ ಜನರು ಕಾಶಿಯ ಮೂಲ ಲಿಂಗವನ್ನು ನೇಪಾಳಕ್ಕೆ ತಂದು “ಜಂಗಂ” ಮಠದಲ್ಲಿ ಸ್ಥಾಪಿಸಿದರು ಎನ್ನುವ ಭಕ್ತಪುರದಲ್ಲಿ ಪ್ರಚಲಿತವಿರುವ ಕತೆಗೆ ಮೂಲ ಮೇಲಿನ ದೊಡ್ಡ ಸಂಕಣ್ಣನ ನೇಪಾಳದ ಭೇಟಿಯೇ ಎಂಬಲ್ಲಿ ಅನುಮಾನವಿಲ್ಲ.

ಅವನು “ನೀಲಕಂಠ ನೇಪಾಳ”ಕ್ಕೆ ಹೋದ ಎಂದರೇನೋ ತಿಳಿಯದು. ನೇಪಾಳದ “ಬುಢಾ ನೀಲಕಂಠ”ನು (ಚಿತ್ರ ೧೨) ವಾಸ್ತವವಾಗಿ ವಿಷ್ಣುಮೂರ್ತಿ. ಜಂಗಂ ಮಠದಲ್ಲಿಯೇ ಒಂದು ನೀಲಕಂಠನ ಚಿಕ್ಕ ದೇವಾಲಯವಿವೆ: ಇಡೀ ಜಂಗಂ ಮಠವನ್ನು ಕಟ್ಟಿಸಿದವನು ದೊಡ್ಡ ಸಂಕಣ್ಣ ನಾಯಕನಾದುದರಿಂದ ಆ ನೀಲಕಂಠ ದೈವಕ್ಕೂ “ನೀಲಕಂಠ ನೇಪಾಳ” ಹೆಸರಿಗೂ ಯಾವುದೇ ಸಂಬಂಧವಿರುವುದು ಕಾಣಿಸದು. ಭಕ್ತಪುರದ ಜಂಗಂ ಮಠದ ನಿರ್ಮಾಣವಾದುದು ಸಂಕಣ್ಣ ನಾಯಕನಿಂದ, ಸುಮಾರು ೧೫೬೫ – ೬೬ರಲ್ಲಿ. ಇಲ್ಲಿ ನಿರ್ಮಾಣವೆಂದರೆ ಬಹುಶಃ ಪುನರ್ನಿಮಾಣ, ಜೀರ್ಣೋದ್ಧಾರವೆಂದು ಭಾವಿಸುವುದು ಉಚಿತ. ಏಕೆಂದರೆ, ಭಕ್ತಪುರದ ಜಂಗಂ ಮಠವು ಕ್ರಿ.ಶ. ಹದಿನಾಲ್ಕನೇ ಶತಮಾನದಷ್ಟು ಹಲೆಯದೆಂಬುದನ್ನು ನೋಡಿದ್ದೇವೆ. ಮುಂಚೆ ಆ ಮಠಕ್ಕೆ “ಜಂಗಂ” ಎಂಬ ಹೆಸರಿದ್ದುದಕ್ಕೆ ದಾಖಲೆಗಳಿಲ್ಲ; ಬಹುಶಃ ಆ ಹೆಸರಿರಲಿಲ್ಲ. ಆ ಮಠವು ಕಾಶಿಯ ಮೂಲಕ ಹೋದ ಆರಾಧ್ಯ ವೀರಶೈವರು ಸ್ಥಾಪಿಸಿರಬಹುದೆಂಬುದಕ್ಕೆ ಆಧಾರಗಳಿರುವುದನ್ನು ನೋಡಿದ್ದೇವೆ (ಪು. ೬೧). ತೀರ ಸಾಮಾನ್ಯ ಕಟ್ಟಡವಾಗಿದ್ದ ಅಥವಾ ಜೀರ್ಣಾವಸ್ಥೆಯಲ್ಲಿದ್ದ ಆ ಮಠವನ್ನು ದೊಡ್ಡ ಸಂಕಣ್ಣ ನಾಯಕ ಕಟ್ಟಿಸಿ ಅದಕ್ಕೆ “ಜಂಗಂ ಮಠ”ವೆಂಬ ಹೆಸರಿಟ್ಟಿರುವಂತಿದೆ. ಈಗಿನ ಸುಂದರ, ಕಲಾತ್ಮಕ ಜಂಗಂ ಮಠವು ದೊಡ್ಡ ಸಂಕಣ್ಣ ನಾಯಕನ ಕೊಡುಗೆಯೆಂಬಲ್ಲಿ ಅನುನಮಾನವಿಲ್ಲ. ಆ ಮಠದಲ್ಲಿ ಅವನು ಸ್ಥಾಪಿಸಿದ ಕಾಶಿಯ ವಿಶ್ವೇಶ್ವರಲಿಂಗಕ್ಕೆ ಕ್ರಿ.ಶ. ೧೫೭೨ರಲ್ಲಿ ದೇವಾಲಯವನ್ನು ನೇಪಾಳದ ಗಂಗಾದೇವಿ ಕಟ್ಟಿಸಿದಳು. ಆಗ ಅಲ್ಲಿ ಜಂಗಂ ಮಠದ ಮುಖ್ಯಸ್ಥ ಮಲ್ಲಿಕಾರ್ಜುನ ಎಂಬಾತ; ಆಗ ದೊಡ್ಡ ಸಂಕಣ್ಣ ನಾಯಕನು ತನ್ನ ರಾಜ್ಯದಿಂದ ಜೊತೆಗೆ ಕರೆತಂದಿದ್ದ ವ್ಯಕ್ತಿಯೆಂಬಲ್ಲಿ ಅನುಮಾನವಿಲ್ಲ. ಮಲ್ಲಿಕಾರ್ಜುನನ ಉತ್ತರಾಧಿಕಾರಿಗಳಾಗಿ ಮುಂದೆ ಕರ್ನಾಟಕದ ಜಂಗಮರೇ ನೇಮಕಗೊಂಡರು; ಅಥವಾ ಅವನ ಸಂತತಿಯವರೇ ಅಲ್ಲಿ ಮಠದ ಮುಖ್ಯರಾಗಿ ಜವಾಬ್ದಾರಿ ವಹಿಸಿಕೊಂಡರು. “ – ದೇವರು” ಎಂದು ಕೊನೆಯಾಗುವ ಚನ್ನವೀರ ದೇವರು, ಮಹದ್ದೇವರು, ಧರ್ಮಲಿಂಗ ದೇವರು ಎಬ ವ್ಯಕ್ತಿನಾಮಗಳು ಜಂಗಂ ಮಠದ ಶಾಸನಗಳಲ್ಲಿ ಉಲ್ಲೇಖವಗಿದ್ದು ಆ ಮಠವು ಹದಿನೆಂಟನೇ ಶತಮಾನದವರೆಗೂ ಕರ್ನಾಟಕದ ಜೊತೆ ಸಂಪರ್ಕವನ್ನು ಹೊಂದಿದ್ದುದರ ಕುರುಹುಗಳೂ ಆಗಿವೆ.


 

[1] K. S. Singh: India’s Communities, V (1998), P. 1352.

[2] ಇದು ದಾರ ಸಮೇತದ ಇಷ್ಟಲಿಂಗವಾಗಿರಬಹುದು.

[3] ಅದೇ, ಪು. ೧೩೫೩. ಬೆಂಗಳೂರಲ್ಲಿ “ತಮಿಳು ಜಂಗಂ ಸಂಘ”ವು ಕೆಲವು ವರ್ಷಗಳ ಹಿಂದೆ ಅಲ್ಲಿಯ ಪುರಭವನದಲ್ಲಿ “ಪಿರಬುಲಿಂಗ ಲೀಲೈ” ನಾಟಕವನ್ನು ವ್ಯವಸ್ಥೆ ಮಾಡಿದ್ದಿತು.

[4] ಅದೇ.

[5] ಅದೇ ಪು. ೧೩೫೪.

[6] ಬಸವಣ್ಣನವರು ಕಾಶ್ಮೀರದಿಂದ ಜಂಗಮರನ್ನು ಕರೆಯಿಸಿದರೆಂಬ ಅಥವಾ ಬಸವಣ್ಣನವರನ್ನು ಕಾಣಲು ಕಾಶ್ಮೀರದಿಂದ ಜಂಗಮರು ಬಂದರೆಂಬ ಕತೆಗಳು ಇಂದಿಗೂ ಅಲ್ಲಿ ಜಂಗಮರಿದ್ದಾರೆಂಬ ಸಂಗತಿಯಿಂದ ಹೆಚ್ಚು ಅರ್ಥವಂತಿಕೆಯನ್ನು ಪಡೆಯುತ್ತವೆ.

[7] ಅದೇ, ಪು. ೨೧೨೯. ವೈಷ್ಣವ ಮಾಲಾ ಜನರಿಗೆ “ಮಾಲಾ ದಾಸರಿ”ಗಳು ಪುರೋಹಿತರು.

[8] ಇವನೇ ಬಸವನ ಸಮಕಾಲೀನ ಸಂಬೋಳಿ ನಾಗಿದೇವ ಮತ್ತು ದಲಿತ ವರ್ಗದ ವಚನಕಾರ.

[9] “ಮಾಲಾ” ವರ್ಗದ ಪರಿಶಿಷ್ಟ ಜಾತಿ ಜನರು ಕರ್ನಾಟಕದ ಬಳ್ಳಾರಿ, ಬೀದರ್‌, ರಾಯಚೂರು ಜಿಲ್ಲೆಗಳಲ್ಲಿದ್ದು ೧೯೮೧ರ ಜನಗಣತಿ ಪ್ರಕಾರ ಅವರ ಸಂಖ್ಯೆ ೧೦, ೧೪೯ ಅವರ ಮನೆ ಮಾತು ತೆಲುಗಾದರೂ ಕನ್ನಡ ಲಿಪಿ ಬಳಸುತ್ತಾರೆ. ಮಾಂಸಾಹಾರಿಗಳು. ಅವರ ಗೋತ್ರಗಳು: ರೆಡ್ಡಿಯವರು, ಭಂಡಾರದವರು, ದೊರಸನವರು, ಸುಂಕದವರು, ಕುಪ್ಪೆಯವರು, ಕೇಸರುಲು, ಓಲೆಯವರು, ಮಿನಗದವರು, ಕುಂಕುಮವಾಳ್ಳು ಮತ್ತು ಬೆಂಡೆಗಮ್ಮಳ್ಳು. ಹಿಂದೆ ಹುಡುಗಿಯರನ್ನು ಹುಡುಗರನ್ನು “ಬಸವಿ” “ಪೋತರಾಜ”ರನ್ನಾಗಿ ಬಿಡುತ್ತಿದ್ದರು. ಕುಳಿತ ಭಂಗಿಯಲ್ಲಿ ಹೆಣ ಹೂಳುತ್ತಾರೆ. ಅವರ ಪಾರಂಪರಿಕ ವೃತ್ತಿ ನೇಕಾರಿಕೆ, ವೆಂಕಟರಮಣ, ರಂಗಸ್ವಾಮಿ, ಸೋಮೇಶ್ವರ, ಎಲ್ಲಮ್ಮ ಇವರ ದೈವಗಳು. ಆಂಧ್ರದ ಉರಕೊಂಡಿ ವೀರಣ್ಣ ಅವರ ಮನೆ ದೇವರು, ಮಾದಿಗ ಜನರಿಂದ ಅವರು ನೀರು ಸ್ವೀಕರಿಸುವುದಿಲ್ಲ. ಮೇಲ್ವರ್ಗದ ಜನರ ಸಮಾಧಿ ಅಗೆಯುವ ಕೆಲಸ ಮಾಡುತ್ತಾರೆ ( – ಅದೇ).

[10] ಅದೇ IV. P. 346.

[11] ಅದೇ, V. P. 1358 – 9.

[12] ಅದೇ, ಪು. ೧೩೬ – ೭. “ಮುಲಕನಾಡು” ಎಂಬ ಸ್ಮಾರ್ತಬ್ರಾಹ್ಮಣರಿದ್ದಾರೆ.

[13] ಅದೇ, ಪು. ೧೩೫೬.

[14] ಎಂ. ಚಿದಾನಂದಮೂರ್ತಿ: ಕನ್ನಡಾಯಣ, ಪು. ೩೦ – ೧.

[15] ಮ. ಸು. ಕೃಷ್ಣಮೂರ್ತಿ: ಬಸವರಾಜ ಮಾರ್ಗ. ನೋಡಿ ಪು. ೭೭, ೭೯ – ೮೦, ೮೦ – ೩, ೧೭೨. ಕೊಲ್ಲಾಪುರದ ಮಹಾಲಕ್ಷ್ಮಿ ವಿಗ್ರಹದ ಶಿರಸ್ಸಿನಲ್ಲಿ ಶಿವಲಿಂಗವಿರುವುದನ್ನು ಹತ್ತು ಹನ್ನೊಂದನೇ ಶತಮಾನದ ಶಾಸನಗಳು ದಾಖಲಿಸಿವೆ ಮತ್ತು ಅದನ್ನು ಈಗಲೂ ನೋಡಬಹುದು. ಹಾವೇರಿಯ ವಿಷ್ಣು ವಿಗ್ರಹದ ಕೈಯಲ್ಲಿ ಶಿವಲಿಂಗವಿದೆ.

[16] ಈ ಎಲ್ಲ ವಿವರಗಳನ್ನು ಒದಗಿಸಿದವರು ತಮಿಳುನಾಡಲ್ಲಿ ಬಹುಕಾಲ ಹಿರಿಯ ಅಧಿಕಾರಿಗಳಾಗಿದ್ದ ಬೆಂಗಳೂರಿನ ಜಿ. ಆರ್‌. ಗುರುಮೂರ್ತಿಯವರು.

[17] ಜಿ. ಆರ್‌. ಗುರುಮೂರ್ತಿ: ‘ತಮಿಳುನಾಡಲ್ಲಿ ವೀರಶೈವರ ರೂಪರೇಖೆಗಳು’. ರಂಭಾಪುರಿ ಬೆಳಗು. ಆಗಸ್ಟ್‌೨೦೦೧, ಪು. ೧೪.

[18] ಅದೇ.

[19] ಅದೇ.

[20] ಎಂ. ಚಿದಾನಂದಮೂರ್ತಿ: ‘ಗುರು – ಲಿಂಗ – ಜಂಗಮ’. ಸ್ಥಾವರ : ಜಂಗಮ (೨೦೦೩), ಪು.೬೪೪ – ೫೨.

[21] ಕೆಳದಿ ನೃಪ ವಿಜಯ. ಸಂ: ಆರ್‌. ಶಾಮಶಾಸ್ತ್ರಿ. ಮೂರನೃ ಆಶ್ವಾಸ ನೋಡಿ. ತೀರ್ಥಯಾತ್ರಯ ಕೆಲ ವಿವರಗಳು ಕೆಳದಿ ಬಸವರಾಜನ ಸಂಸ್ಕೃತ ಶಿವತತ್ವ ರತ್ನಾಕರದಲ್ಲೂ (೧೭೦೦) ಉಂಟು (Radha Krishnamurthy :Shivatavaratnakara of Keladi Basavaraja – a Cultural Study. P 107). Adre “ಕೆಳದಿ ನೃಪ ವಿಜಯ”ವು ಕೊಡುವ ಎಷ್ಟೋ ಸಂಗತಿಗಳು ಅಲ್ಲಲ್ಲಿ : ಆ ದೃಷ್ಟಿಯಿಂದ “ಕೆಳದಿ ನೃಪ ವಿಜಯ”ವು ಬಹುಮುಖ್ಯ ಆಕರ ಕೃತಿಯಾಗಿದೆ.

[22] ಕೆಳದಿನೃಪವಿಜಯ, ೩.೫೧ – ‘ಡಿಳ್ಳೀಶ್ವರ’ನ ಮುಂದೆ, ಎಂದರೆ ದೆಹಲಿ ಸುಲ್ತಾನನ ಮುಂದೆ ದೊಡ್ಡ ಸಂಕಣ್ಣನಾಯಕ ಇಟ್ಟ ಮನವಿ ಇಂತಿದೆ – “…ಆಂ ಮುಂಚೆ ಕಾಶೀ ಕ್ಷೇತ್ರಕೈದಿಯಾ ತಾಣದೊಳ್‌ಶಿವಜಂಗಮ ಧರ್ಮಾರ್ಥವಾಗಿ ಮಠಮಂ ಕಟ್ಟಿಸಿ ಯದಕ್ಕೆ ತಕ್ಕ ಭೂಸ್ವಾಸ್ಥೆಯಂ ಬಿಡಿಸಿ ದಾನಧರ್ಮಂಗಳನಾಗಿಸಿ ವಿಶ್ವೇಶ್ವರನ ಪೂಜೆಯಂ ರಚಿಸಿ ಮತ್ತಂ ನಿನ್ನ ರಾಷ್ಟ್ರದೊಳ್‌ಪ್ರಸಿದ್ಧವಾದ ಸ್ಥಳಂಗಳೊಳ್‌ಶಿವಜಂಗಮ ಧರ್ಮಕ್ಕೋಸುಗಂ ಮಠ ಮಾನ್ಯಂಗಳನಾಗಿಸಿ ಬಳಿಕನ್ನೆ ಸಂಸ್ಥಾನಕೈದುವೆನೆಂದು ಸಂಕಲ್ಪಮಂ ರಚಿಸಿರ್ಪೆನೀ ಸಂಕಲ್ಪ ಸಿದ್ಧಿಯಂ ಪೂರ್ಣವನಾಗಿಸವೇಳ್ಕುಂ….’’

[23] ಅಚ್ಚಾಗಿರುವ ಪಾಠ‘ಜಂಗಮ ಗಾಟಿ’ಯೆಂದಿದೆ. ಆದರೆ ಅದಕ್ಕಿರುವ ಪಾಠಾಂತರ ‘ಜಂಗಮವಾಟಿ’ಯೆಂಬುದೇ ಸರಿಯಾದ ಪಾಠ. ಈಗ ಆ ಮಠವು ಜಂಗಮವಾಡಿ ಮಠವೆಂದೇ ಪ್ರಸಿದ್ಧ. ‘ಶಿವತತ್ವರತ್ನಾಕರ’ದ (೧೭೦೦) ಪ್ರಕಾರ, ದೊಡ್ಡ ಸಂಕಣ್ಣ ನಾಯಕನು ಮೊದಲು ಕಾಶಿಗೆ ಹೋಗಿ, ಬಳಿಕ ನೇಪಾಳಕ್ಕೆ ಹೋಗಿ, ವಾಪಸ್‌ಬರುವಾಗ ದೆಹಲಿಗೆ ಬಂದು ಅಲ್ಲಿ ದಿಲ್ಲೀಸ್ವರನಿಂದ ಕಾಶಿಯಲ್ಲಿ ಮುಸ್ಲಿಮರಿಂದ ಆಕ್ರಮಣಗೊಂಡಿದ್ದ ಜಂಗಮವಾಡಿ ಪ್ರದೇಶವನ್ನು ಪಡೆಯಲು ಅನುಮತಿ ಪಡೆದು ಮತ್ತೆ ಕಾಶಿಗೆ ಹೋಗಿ ಅಲ್ಲಿ ಜಂಗಮವಾಡಿ ಮಠ ಕಟ್ಟಿಸಿದನೆಂದಿದೆ. ಇದು ಇತಿಹಾಸಕ್ಕೆ ಹೆಚ್ಚು ಸಮೀಪವಿರುವಂತಿದೆ. ಅವನು ಕಾಶಿಗೆ ಮೊದಲು ಹೋದಾಗ, ಜಂಗಮವಾಡಿ ಮಠದ ಜಾಗವು ಮುಸ್ಲಿಮರಿಂದ ಆಕ್ರಮಣಗೊಂಡಿದ್ದ ವಿಷಯವು ಅವನ ಗಮನಕ್ಕೆ ಬಂದಿರಬೇಕು.