ಅನುಬಂಧ – ೭ : ನೇಪಾಳದ ಕೆಲವು ಅನುಭವಗಳು

ನೇಪಾಳದ ಹದಿನೈದು ದಿನಗಳ ನನ್ನ ವಾಸ್ತವ್ಯ ಬೌದ್ಧಿಕ ಹುಡುಕಾಟವಾಗಿ ಭಾವನಾತ್ಮಕ ಅಲೆದಾಟವೂ ಆಯಿತು. ಆಧುನಿಕ ನಗರವಾಗಿ ಬೆಳೆದಿರುವ, ಬೆಳೆಯುತ್ತ ಅತ್ಯಾಧುನಿಕ ತಂತ್ರಜ್ಞಾನದತ್ತ ದಾಪುಗಾಲಿಟ್ಟಿರುವ ಕಾಠಮಾಂಡೊ ಭಾರತದ ಎಲ್ಲ ಹಿಂದಿನ ನಗರಗಳಂತೆ ಹಳತು ಹೊಸತರ ಮಿಶ್ರಣವಾಗಿ ಕಾಣುತ್ತದೆ. ಆಧುನಿಕತೆ ಅದರ ಸಾಂಸ್ಕೃತಿಕ ಮಹತ್ವವನ್ನು ಹಿಂದಕ್ಕೆ ಹಾಕಿಲ್ಲ.

ನಾನು ಉಳಿದುಕೊಂಡಿದ್ದ ಜೈನಭವನವು ನಗರದ ಕೇಂದ್ರ ಭಾಗದಲ್ಲಿದ್ದು ಬೆಂಗಳೂರಿನ ಗಾಂಧಿ ಬಜಾರಿನ ಅಥವಾ ರಾಜಾಜಿನಗರದ ಮುಖ್ಯ ಬೀದಿಯಂತೆ ಸದಾ ಅಂಗಡಿಗಳಿಂದ ಕಿಕ್ಕಿರಿದ ವಾಹನ ಸಂಚಾರವಿರುವ ರಸ್ತೆ. ಅಲ್ಲೇ ಸಮೀಪವಿರುವ ದೇವಾಲಯದಿಂದಾಗಿ ಆ ಬಡಾವಣೆಗೆ ಜ್ಞಾನೇಶ್ವರ್‌ಎಂಬ ಹೆಸರು ಬಂದಿದೆ. ಸಸ್ಯಾಹಾರ ದೊರಕುವ ಆ ಮಂದಿರದ ವಾತಾವರಣ ನನಗೆ ಆಲ್ಹಾದಕರವಾಗಿತ್ತು. ಅಲ್ಲೇ ಜೈನಮಂದಿರದಿಂದ ಬೆಳಿಗ್ಗೆ ಸಂಜೆ ಘಂಟಾನಾದ, ಜಿನಸ್ತೋತ್ರ, ಭಜನೆ, ಹಾಡುಗಳು ಕೇಳಿಬರುತ್ತಿದ್ದವು. ಅಲ್ಲಿಂದ ಯಾವುದೇ ರಸ್ತೆಗೆ ಇಳಿದರೂ ಮರಗಳ ಕೆಳಗೆ, ಸ್ವಲ್ಪ, ತಗ್ಗಿನಲ್ಲಿ, ಕೂಡುರಸ್ತೆಗಳಲ್ಲಿ ಯಾವುದೋ ವಿಗ್ರಹ, ಅದಕ್ಕೆ ದೀಪದ ವ್ಯವಸ್ಥೆ ಕಾಣುತ್ತಿತ್ತು. ಕಾಳಿ, ಭೈರವ, ನಂದಿ, ಶಿವ, ಗಣೇಶ ಹೀಗೆ ಭಿನ್ನ ಭಿನ್ನ ಆಕಾರರಹಿತ, ಆಕಾರಸಹಿತ ಮೂರ್ತಿಗಳು. ಅವುಗಳೆಲ್ಲ ಕುಂಕುಮ, ಭಸ್ಮ, ಹೂಗಳಿಂದ ತುಂಬಿರುತ್ತಿದ್ದವು. ಕೆಲವೆಡೆ ಮರಗಳೇ ದೈವಗಳಾಗಿ ಪೂಜೆಗೊಳ್ಳುತ್ತಿದ್ದುವು. ಜನರ ಶ್ರದ್ಧೆ, ಭಕ್ತಿಭಾವ ಎದ್ದು ಕಾಣುತ್ತಿದ್ದುವು. ಚಿಕ್ಕ ಅಥವಾ ಸ್ವಚ್ಛ ಗಲ್ಲಿಗಳಲ್ಲೆಲ್ಲ ಕಡೆ ದೊಡ್ಡ ಚಿಕ್ಕ ಗುಡಿಗಳು. ಹಲವೆಡೆ ಶಿವದೇವಾಲಯಗಳಾದರೂ ಬುದ್ಧನ ನಾಲ್ಕು ಮುಖಗಳಿರುವ ಪುಟ್ಟ ಸ್ತಂಭ ಶಿಲ್ಪವನ್ನು ವೇದಿಕೆಯ ಮೇಲೆ ಸ್ಥಾಪಿಸಿರುತ್ತಿದ್ದರು. ಬುದ್ಧನೂ ಹಿಂದುಗಳಿಗೆ ಅಲ್ಲಿ ಆರಾಧ್ಯ. ಕಾಠಮಾಂಡೊದ ಮಹಂಕಾಲನು (ಮಹಾಕಾಲ) ಹಿಂದೂಗಳಿಗೆ ಶಿವ, ಬೌದ್ಧರಿಗೆ ಪದ್ಮಪಾಣಿ (ಅವಲೋಕಿತ): ಹಿಂದೂಗಳೂ ಬೌದ್ಧರೂ ಅದಕ್ಕೆ ಬಾಗುತ್ತಾರೆ. ಅಲ್ಲಿನ ಬೀದಿಗಳಲ್ಲಿ ಓಡಾಡುವುದೇ ಒಂದು ವಿಶೇಷ ಅನುಭವವಾಗಿತ್ತು. ವಿದ್ಯಾವಂತರಾದರೂ ಹೆಂಗಸರು ಗಂಡಸರು ಮುಖದ ಮೇಲೆ ಗಂಧ, ಕುಂಕುಮ, ವಿಭೂತಿಗಳನ್ನು ಇಟ್ಟುಕೊಳ್ಳಲು ಸಂಕೋಚಪಡುತ್ತಿರಲಿಲ್ಲ. ಅತ್ಯಾಧುನಿಕ ರೀತಿಯ ವೇಷಭೂಷಣದ ಮಾತಿನ ನಡಾವಳಿಯ ಹುಡುಗ ಹುಡುಗಿಯರಿಗೂ ಕೊರತೆಯಿರಲಿಲ್ಲವೆಂದು ಹೇಳಬೇಕಾಗಿಲ್ಲ. ಆದರೆ ತೀರ ಸ್ವಚ್ಛಂದ ಅಸಭ್ಯ ನಡವಳಿಕೆ ದೊಡ್ಡವರಲ್ಲಾಗಲಿ ಚಿಕ್ಕವರಲ್ಲಾಗಲಿ ನನಗೆ ಕಾಣಲಿಲ್ಲ. ಜನ ಒಟ್ಟಾರೆ ಹೆಚ್ಚು ಸಭ್ಯರು, ಸುಸಂಸ್ಕೃತರು – ಇದು ನನ್ನ ತೀರ ಮಿತ ಅನುಭವಕ್ಕೆ ಬಂದದ್ದು.

ಅಲ್ಲಿನ ರಾಷ್ಟ್ರೀಯ ವಸ್ತುಪ್ರದರ್ಶನಾಲಯವು ಅತ್ಯಮೂಲ್ಯ ಬೌದ್ಧ, ಹಿಂದೂ, ಶಾಕ್ತ ಕಲಾಕೃತಿಗಳ ಅಪೂರ್ವ ಸಂಗ್ರಹ. ಸಿಮ್ರೌನ್‌ಗಡದಿಂದ ತಂದಿಟ್ಟಿರುವ ಸುಮಾರು ನಾಲ್ಕಡಿ ಎತ್ತರದ ಸೂರ್ಯ, ಉಮಾಮಹೇಶ್ವರ, ವಿಷ್ಣು ಶಿಲಾಮೂರ್ತಿಗಳು ಮನಸೆಳೆಯುತ್ತವೆ. “ಸಿಂಹ ಸಿಂಹ ಸಿಂಹ ವಾಹನಿ ಲೋಕೇಶ್ವರ್‌” ದೈವದ ಎರಕದ ಲೋಹ ಶಿಲ್ಪ ವರ್ಣನಾತೀತ. ಆ ಸಿಂಹ, ಗರುಡ, ನರಸಿಂಹಗಳ ವಾಹಕ ಲೋಕೇಶ್ವರನ ಸೂಕ್ಷ್ಮ ಕುಸುರಿ ಎರಕದ ಬೌದ್ಧ ಶಿಲ್ಪವು ವಿಶೇಷವಾಗಿ ನೋಡಬೇಕಾದ್ದು. ಬುದ್ಧ, ಮಾಯಾದೇವಿಯರ ಎರಕ ಶಿಲ್ಪಗಳೂ ಅಷ್ಟೇ. ವಿಷ್ಣುವಿನ ವಿಶ್ವರೂಪ ದರ್ಶನದ, ಬಲಿ – ಬಾಮನ್‌ – ತ್ರಿವಿಕ್ರಮ್‌ಶಿಲ್ಪಗಳಾಗಲಿ ಅಷ್ಟೇ. ಇಂತಹ ಎರಕದ ಶಿಲ್ಪಗಳಲ್ಲಿ ನೆವಾರಿಗಳು ಸಿದ್ಧಹಸ್ತರು; ಅಂತೆಯೇ ಮರಗೆತ್ತನೆ ಕೆಲಸದಲ್ಲೂ. ಆ ಮ್ಯೂಜಿಯಂನ ಸಹಾಯಕ ಅಧಿಕಾರಿ ಯುವಕ ನಿರನ್‌ಕುಮಾರ್‌ರಾಜ್‌ವಂಶಿಯು “ಕರ್ನಾಟ” ವರ್ಗದ ನೆವಾರಿ.

“ನ್ಯಾಷನಲ್‌ಆರ್ಕಿವ್ಸ್‌” ಒಂದು ಅತ್ಯಮೂಲ್ಯ ಹಸ್ತಪ್ರತಿ ಭಂಡಾರ. ಇಸ್ಲಾಂ ಆಕ್ರಮಣದಿಂದ ಸಂತ್ರಸ್ತರಾದ ಹಿಂದೂಗಳು ಪ್ರಾಣ ರಕ್ಷಣೆಗಾಗಿ, ಅಂತೆಯೇ ತಮ್ಮ ಧರ್ಮಗ್ರಂಥಗಳ ಸಂರಕ್ಷಣೆಗಾಗಿ ಓಡಿಬಂದು ನೇಪಾಳವನ್ನು ಆಶ್ರಯಿಸಿದರು. ಅವರು ತಂದ ಹಸ್ತಪ್ರತಿಗಳಲ್ಲಿ ಎಷ್ಟು ಸಾವಿರ ಹಾಳಾದುವೋ! ಅಥವಾ ನೇಪಾಳದ ಮೂಲೆ ಮೂಲೆಗಳಲ್ಲಿ ಸಂಗ್ರಹವಾಗದೇ ಉಳಿದಿರುವ, ನಾಶವಾಗುತ್ತಿರುವ ಹಸ್ತಪ್ರತಿಗಳು ಎಷ್ಟಿವೆಯೋ ತಿಳಿಯದು.* ನ್ಯಾಷನಲ್‌ಆರ್ಕಿವ್ಸ್‌ಇಲಾಖೆಯಲ್ಲಿ ಕೆಲವು ಗಂಟೆ ಕುಳಿತು ಅಲ್ಲಿನ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಗಳನ್ನು ತಿರುವಿ ಹಾಕಿದೆ. ತಾಳೆ, ಭೂರ್ಜ, ಕಾಗದ ಇತ್ಯಾದಿ ವಸ್ತುಗಳ ಮೇಲೆ ಬರೆದಿರುವ ವೇದ, ಗೀತೆ, ಪುರಾಣಗಳು, ಆಗಮಗಳು, ಕಾವ್ಯಗಳು, ಬೌದ್ಧಜೈನ ಧಾರ್ಮಿಕ ಗ್ರಂಥಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಹಲವು ಸಾವಿರ ಹಸ್ತಪ್ರತಿಗಳ ಮಾಹಿತಿ ಉಂಟು. ನೋಡದೇ ಕಟ್ಟಿಟ್ಟಿರುವ ಹಸ್ತಪ್ರತಿಗಳು ಸಾವಿರಾರು ಇವೆಯೇನೋ! ಕರ್ನಾಟಕದ ವಿದ್ವಾಂಸರಿಂದ ರಚಿತವಾದ ಸಂಸ್ಕೃತ ಗ್ರಂಥಗಳೂ ಅಲ್ಲಿರಬಹುದು. ಜನರ ಗಮನಕ್ಕೆ ಬಾರದ ಕನ್ನಡ, ತಮಿಳು, ತೆಲುಗು ಹಸ್ತಪ್ರತಿಗಳೂ ಇದ್ದರೂ ಆಶ್ಚರ್ಯವಿಲ್ಲ. “ಧೂರ್ತ ಸಮಾಗಮ” ಎಂಬ ನಾಟಕದ (ಅದರ ಉಲ್ಲೇಖ ಹಿಂದೆ ಬಂದಿದೆ) ವಿಷಯವಿರುವ ಹಸ್ತಪ್ರತಿ ವರ್ಣನಾತ್ಮಕ ಸೂಚಿ ಭಾಗವನ್ನು ನಾನು ನೆರಳಚ್ಚು ಮಾಡಿಸಿಕೊಂಡೆ – ಅದರಲ್ಲಿ ಹರಿಸಿಂಹದೇವನನ್ನು “ಕರ್ಣಾಟ ಚೂಡಾಮಣಿ” ಎಂದು ಕರೆದಿದೆ (ಚಿತ್ರ ೩ ನೋಡಿ).

ನಾನಿದ್ದ ಜಾಗದಿಂದ ಸುಮಾರು ಎಂಟು ಕಿಲೋ ಮೀಟರ್‌ನಲ್ಲಿ, ಕಾಠಮಾಂಡೊ ನಗರದ ಅಂಚಿನಲ್ಲಿ ಚಿಕ್ಕ ಗುಡ್ಡದ ಮೇಲಿರುವ ಸ್ವಯಂಭೂ ಬೌದ್ಧ ದೇವಾಲಯವು (ಚಿತ್ರ ೧೧) ಒಂದು ಅದ್ಭುತ ಕಟ್ಟಡ. ಅಲ್ಲಿ ನೂರಾರು ಬುದ್ಧನ ಚಿಕ್ಕ ದೊಡ್ಡ ಮೂರ್ತಿಗಳಿವೆ; ಹಾಗೆಯೇ ಚಿಕ್ಕಮಂದಿರಗಳಲ್ಲಿ ಬುದ್ಧನ, ಅವಲೋಕಿತೇಶ್ವರ, ತಾರಾ ಭಗವತಿಯರ ಆರಾಧನೆ ನಡೆಯುತ್ತಿದೆ. ಕಲೆಯ ದೃಷ್ಟಿಯಿಂದ ಒಂದೊಂದು ಅಮೂಲ್ಯ ರಚನೆ. ಆ ಗುಡ್ಡದ ಮೇಲಿಂದ ಕಾಣುವ ಕಾಠಮಾಂಡೋ ನಗರದ ಇಡೀ ಕಣಿವೆಯ ದೃಶ್ಯ ಚೀತೋಹಾರಿಯಾದುದು. ನನಗೆ ಬೆಟ್ಟದ ಮೇಲೆ ಆದ ಕಲಾನುಭವಕ್ಕಿಂತ ಬುದ್ಧನ ಬದುಕಿನ ಔನ್ನತ್ಯದ ನೆನಪಿನ ಅನುಭವ ಅಮೂಲ್ಯವಾಯಿತು. ತನ್ನೆಲ್ಲ ಲೌಕಿಕ ಭೋಗಗಳನ್ನು ತ್ಯಜಿಸಿ, ಜನರ ದುಃಖ ನಿವಾರಣೆಗಾಗಿ ತನ್ನ ಬದುಕನ್ನು ಮೀಸಲಾಗಿಟ್ಟು ಆಧ್ಯಾತ್ಮಿಕ ಸಾಧನೆಯಿಂದ ಬುದ್ಧನಾದ ಅವನು ಒಂದು ಘಟ್ಟದಲ್ಲಿ ತನಗೆ ಲಭ್ಯವಾದ ‘ನಿರ್ವಾಣ’ ಸ್ಥಿತಿಯನ್ನು ನಿರಾಕರಿಸಿ, ಜಗತ್ತಿನಲ್ಲಿ ದುಃಖವಿರುವವರೆಗೆ ಆ ನಿರ್ವಾಣ ಪದವಿ ಬೇಡವೆಂದು ಸಂಕಲ್ಪಿಸಿದ ಆ ಮಹಾಸಂದರ್ಭ ನೆನಪಿಗೆ ಬಂದು (ಇದು ಮಹಾಯಾನ ಪಂಥದಲ್ಲಿ ಬರುವ ಬುದ್ಧನ ಕತೆ) ಮನಸ್ಸು ಉದಾತ್ತಗೊಂಡಿತು. ದಯೆ, ಪ್ರೇಮ, ಚಿತ್ತಸ್ಥಿರತೆ, ಉದಾತ್ತ ಧ್ಯೇಯ, ತ್ಯಾಗ, ಉದಾರ ಮನೋಧರ್ಮ ಇವುಗಳಿಗೆ ಸಂಕೇತವಾದ ಬುದ್ಧ ಹುಟ್ಟಿದ ನಾಡಲ್ಲಿ, ಅದ್ಭುತ ಬುದ್ಧ ಮಂದಿರ, ಅಲ್ಲೇ ಬೌದ್ಧ ವಿಹಾರ ಇರುವ ಆ ತಾಣದಲ್ಲಿ ನಾನು ಕೆಲವು ಹೊತ್ತು ನೀರವವಾಗಿ ಕುಳಿತು ಅಂತರ್ಮುಖಿಯಾದೆ. ಎಲ್ಲವೂ ಸುಂದರ, ಎಲ್ಲವೂ ಪ್ರಶಾಂತ. ಅದರ ಜೊತೆ ಜೊತೆಗೆ ಕಾಠಮಾಂಡೊ ಬೀದಿಗಳಲ್ಲಿ ಕಾಣುವ ಭಿಕ್ಷುಕರು, ದರ್ಬಾರ್‌ಚೌಕ (ಚಿತ್ರ ೧೦) ಹತ್ತಿರ ತೊಟ್ಟಿಯಿಂದ ಎತ್ತಿ ಐಸ್‌ಕ್ರೀಮ್‌ಬಟ್ಟಲನ್ನು ನೆಕ್ಕುತ್ತಿದ್ದ ಚಿಂದಿ ಬಾಲಕ, ಮಾವೋ ವಾದಿಗಳಿಂದ ಕ್ಷುಭಿತಗೊಂಡಿರುವ ನೇಪಾಳ ಎಲ್ಲವೂ ಜ್ಞಾಪಕಕ್ಕೆ ಬಂದುವು. ನಾಲ್ಕು ಮಾರಿ ಬಿಸ್ಕತ್‌ತಿಂದು, ನೀರು ಕುಡಿದು ಕೆಳಗೆ ಇಳಿದೆ. ಸಕ್ಕರೆ ತೊಂದರೆಯಿಂದ ಎಲ್ಲಿ ಹೋದರೂ ಬಿಸ್ಕತ್‌, ನೀರು ನನ್ನ ಜೊತೆಯಲ್ಲಿಯರುತ್ತಿದ್ದವು. ಬಿಸ್ಕತ್‌ತಿಂದೆ; ಹಸಿದಿರುವ ಬಡಜನಕ್ಕೆ ಎಲ್ಲಿ ಬಿಸ್ಕತ್ತು? ಒಣರೊಟ್ಟಿಯೂ ಅಲಭ್ಯ. ಸ್ವಯಂಭೂ ಬೌದ್ಧ ದೇವಾಲಯದ ಮೇಲ್ಭಾಗದ ಶಿಖರದ ನಾಲ್ಕೂ ಕಡೆ ಇರುವ ಬುದ್ಧನ (ಬೋಧಿಸತ್ವನ) ಮುಖಗಳು ದೂರಕ್ಕೆ ಕಾಣಿಸುತ್ತವೆ. ಬುದ್ಧ ಜಗತ್ತಿನತ್ತ ನಾಲ್ಕೂ ದಿಕ್ಕುಗಳ ಕಡೆ ಆಸೆಗಣ್ಣಿಂದ ನೋಡುತ್ತಿದ್ದಾನೆ.

ಅಲ್ಲಿಂದ ಸ್ವಲ್ಪ ದೂರದಲ್ಲಿನ ಮಹಾಬೌದ್ಧ ವಿಹಾರವು ಜಗತ್ತಿನ ಮಹಾಸ್ತೂಪಗಳಲ್ಲಿ ಒಂದು. ಆ ಸ್ತೂಪವನ್ನು ಹತ್ತಿ ಮೇಲೆಲ್ಲಾ ಓಡಾಡಬಹುದು. ಅಲ್ಲಿ ಗಂಟೆಗಳನ್ನು ತಿರುಗಿಸಿ ಪ್ರಾರ್ಥನೆ ಸಲ್ಲಿಸಬಹುದು. ‘ಬುದ್ಧಂ ಸರಣಂ ಗಚ್ಚಾಮಿ, ಸಂಘಂ ಸರಣಂ ಗಚ್ಛಾಮಿ, ಧಮ್ಮಂ ಸರಣಂ ಗಚ್ಚಾಮಿ’ ಎಂಬ ಶ್ಲೋಕ ಮತ್ತು ಇತರ ಬೌದ್ಧಧರ್ಮದ ಪವಿತ್ರ ಮಂತ್ರಗಳು ಉದ್ದಕ್ಕೂ ಧ್ವನಿವರ್ಧಕದಿಂದ ಕೇಳಿಸುತ್ತಿದ್ದುವು. ಮನಸ್ಸು ಮುದಗೊಂಡಿತು. ನಾನು ಆಂತರಂಗಿಕವಾಗಿ ಒಬ್ಬ ಬೌದ್ಧನೇ ಆಗಿದ್ದೆ; ಆ ಇಡೀ ದಿನವಂತೂ ಬೌದ್ಧನೇ ಆಗಿಬಿಟ್ಟೆ.

ಬೆಟ್ಟದ ಬುಡದಲ್ಲಿ ಕಾಠಮಾಂಡೊ ನಗರದ ಅಂಚಿಗೆ ನಾಲ್ಕಾರು ಕಿಲೋ ಮೀಟರ್‌ದೂರದಲ್ಲಿರುವ ಬುಢಾ ನೀಲಕಂಠನ ಕ್ಷೇತ್ರವು ಪ್ರಸಿದ್ಧ. ಅದು ಕೊಳದಲ್ಲಿ ಮಲಗಿರುವ ಬೃಹತ್‌ಶೇಷಶಾಯಿ ವಿಷ್ಣುವಿನ ವಿಗ್ರಹವಾಗಿದ್ದು (ಚಿತ್ರ ೧೨). ಹೂತುಹೋಗಿದ್ದ ಅದನ್ನು ಯಾವನೋ ಒಬ್ಬ ವಯಸ್ಕ (ವೃದ್ಧ, ‘ಬುಢ’) ನೀಲಕಂಠ ಎಂಬಾತ ಗುರುತಿಸಿದ್ದರಿಂದ ಆ ಹೆಸರು ಬಂತೆಂದು ಕತೆಗಳಿವೆ. ಸಮೀಪದ ಬೆಟ್ಟಗಳ ಮೇಲೆಲ್ಲ ಮನೆಗಳಿವೆ.

ಭಕ್ತಪುರವು ಇಕ್ಕಟ್ಟು ರಸ್ತೆಗಳಿರುವ, ಎಲ್ಲಿ ನೋಡಿದರೂ ಗುಡಿಗಳೇ ಕಾಣಿಸುವ, ಒಂದು ರೀತಿಯಲ್ಲಿ ನೇಪಾಳದ ಸಾಂಸ್ಕೃತಿಕ ರಾಜಧಾನಿ. ಪನೌತಿ, ಧೂಲಿಖೇಲ್‌ಗಳ ಬಗ್ಗೆ ಹಿಂದೆಯೇ ಬರೆದಿದ್ದೇನೆ. ಎಲ್ಲಿ ನೋಡಿದರೂ ಗುಡ್ಡ, ಬೆಟ್ಟ, ದಟ್ಟ ಕಾಡು, ಗುಡ್ಡದ ಓರೆಗಳಲ್ಲಿ ಮನೆಗಳು, ಬಯಲಲ್ಲಿ ಹಸಿರು ಬತ್ತದ ಗದ್ದೆಗಳು. ಮಳೆಗಾಲದ ಕೊನೆಯ ದಿನಗಳಲ್ಲಿ ಹೋದ ನನ್ನ ಕಣ್ಣಿಗೆ ಕಾಣಿಸಿದ್ದು ಮೂರನೇ ಒಂದು ಭಾಗದಷ್ಟು ಮಾವೋ – ವಾದಿಗಳ ಹಿಡಿತದಲ್ಲಿರುವ ಹಸಿರು ನೇಪಾಳ (ಹಸಿದ ನೇಪಾಳವೂ ಅದು).

ಕಾಠಮಾಂಡೊ ಬೀದಿಗಳಲ್ಲಿ ಅಲ್ಲಿ ಇಲ್ಲಿ ಕಾಣಿಸುತ್ತಿದ್ದ ಮಾಂಸದ ಅಂಗಡಿಗಳಲ್ಲಿ ಪ್ರಾಣಿಗಳನ್ನು ಕಡಿದು ಅವುಗಳ ಮಾಂಸವನ್ನು, ಕೆಲವೆಡೆ ಅವುಗಳ ತಲೆಗಳನ್ನು ಮಾರಾಟಕ್ಕಿಟ್ಟುದನ್ನೂ ಮರೆಯಲಾರೆ. ಆ ದೃಶ್ಯ ನನ್ನ ಕಣ್ಮನಗಳನ್ನು ನೋಯಿಸುತ್ತಿತ್ತು.

ಪಶುಪತಿ ಮಹಾದೇವ ದೇವಾಲಯಕ್ಕೆ ನಾನು ಮೂರು ಬಾರಿ ಹೋದೆ. ಮೊದಲು ಹೋದಾಗ ಪ್ರವೇಶ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಎಡೆಗಡೆ ಕಾಣಿಸಿದ್ದು ಭಗ್ನ ದೇವಾಲಯದ ಕಂಬಗಳ, ಚಪ್ಪಡಿಗಳ, ಇತರ ಅವಶೇಷಗಳ ರಾಶಿ. ಅದು ಹದಿಮೂರನೇ ಶತಮಾನದಲ್ಲಿ ನಡೆದ ಮುಸ್ಲಿಮರ ದಾಳಿಯಿಂದ ಹಾಳಾದ ಪಶುಪತಿ ದೇವಾಲಯದ ಅವಶೇಷಗಳೆಂಬುದು ಮುಂದೆ ಖಚಿತವಾಯ್ತು.

ಪಶುಪತಿ ದೇಗುಲಕ್ಕೆ ಹೋಗಿ ಅಲ್ಲಿನ ಕೆಲವು ಚಿಕ್ಕ ದೊಡ್ಡ ಆಲಯಗಳನ್ನು ನೋಡುತ್ತ, ವೇದಮಂತ್ರ ಪಠಣವನ್ನು ಆಲಿಸುತ್ತ ಭಾಗಮತಿ ನದಿ ಆಚೆಯ ಕಡೆ ಹೋಗಿ ಅಲ್ಲಿ ಗುಡ್ಡ ಹತ್ತಿ ಅಲ್ಲೆಲ್ಲ ಓಡಾಡಿದೆ. ಎದುರಿಗೇ ಭಾಗಮತಿ ತೀರದಲ್ಲಿ ಉದ್ದಕ್ಕೂ ಚಿತೆಗಳು ಉರಿಯುತ್ತಿವೆ. ನೂರಾರು ವರ್ಷಗಳಲ್ಲಿ ಸಾವಿರಾರು ಜನ ಭಕ್ತರು ಬಂದು ಹೋದ ಪವಿತ್ರ ಪುಣ್ಯಕ್ಷೇತ್ರ. “ಅಸತೋ ಮಾ ಸದ್ಗಮಯ….”, “ಓಂ ಭೂರ್ಭುವಸ್ಸುವಃ…”, “ಪೂರ್ಣಮದಂ ಪೂರ್ಣಮಿದಂ ಪೂರ್ಣಾತ್‌ಪೂರ್ಣಮುದಚ್ಯತೆ…” ಇತ್ಯಾದಿ ಪುಣ್ಯ ಶ್ಲೋಕಗಳು ಬಾಯಿಂದ ಹೊರಟು ಬಾಯಲ್ಲೇ ಗುಣುಗಿದುವು. “ದುಃಖೇಷ್ವನುದ್ವಿಗ್ನ ಮನಾಃ….” ಇತ್ಯಾದಿ ಗೀತವಾಕ್ಯಗಳು, “ಗುರುಬ್ರಹ್ಮಾ ಗುರುರ್ವಿಷ್ಣುಃ…” ಇವೇ ಮೊದಲಾದ ಪ್ರಾರ್ಥನಾ ಶ್ಲೋಕಗಳು, “ಪರಮ ಜಿನೇಂದ್ರ ವಾಣಿಯೆ ಸರಸ್ವತಿ…”, “ಉಳ್ಳವರು ಶಿವಾಲಯದ ಮಾಡುವರು…”, “ತುಳೀ ಹತ್ತಿ ತುಳೀ ಒತ್ತಿ ಅಹಂಕಾರವಳಿಯಲಿ…” ಎಂಬಿವೇ ಮೊದಲಾದ ಹಿಂದಿನ, ಇಂದಿನ ಕನ್ನಡ ವಾಙ್ಮಯದ ಸೂಕ್ತಿಗಳು ಬಾಯಿಂದ ತಾನಾಗಿ ಬಂದುವು. ಭಾರತ, ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ ಎಲ್ಲವೂ ನೆನಪಿಗೆ ಬಂದುವು. ಮನಸ್ಸು ಬಹು ಪ್ರಫುಲ್ಲಿತವಾಯಿತು, ಸ್ವಲ್ಪ ಎತ್ತರಕ್ಕೆ ಏರಿತು, ಶುಭ್ರವಾಯಿತು, ಹಗುರವಾಯಿತು, ಮಿಂಚಿನ ಸಂಚಾರವಾಯಿತು. ಅದನ್ನೆಲ್ಲ ವಿಸ್ತರಿಸಲಾರೆ. ಆಧುನಿಕ ಪೂರ್ವ ಭಾರತವನ್ನು ಕಾಣುವವರು ನೇಪಾಳಕ್ಕೆ ಬರಬೇಕು. ಇಲ್ಲಿ ಬರೀ ಅನುಪಮ ಸುಂದರ ದೃಶ್ಯಗಳಲ್ಲ; ಜೊತೆಗೆ ತನ್ನೆಲ್ಲ ದೌರ್ಬಲ್ಯಗಳೊಡನೆ ಯಾವುದೋ ಒಂದು ಉದಾತ್ತ ಸಂಸ್ಕೃತಿಯೊಂದರ ಮಿಡಿತ ಜೀವಂತವಾಗಿರುವುದರ ಅನುಭವವಾಗುತ್ತದೆ. ನೇಪಾಳದಲ್ಲಿ ಆಧುನಿಕಪೂರ್ವ ಭಾರತವನ್ನು ಕಂಡದ್ದೂ ಕೂಡ ನನ್ನ ಮಟ್ಟಿಗೆ ಒಂದು ಬಗೆಯ ಸಂಶೋಧನೆಯೇ.

ನೇಪಾಳವನ್ನು ತೆರೆದ ಕಣ್ಣುಗಳಿಂದ ನೋಡಿದೆ. ಹಾಗೆಯೇ ನೇಪಾಳವನ್ನು ತೆರೆದ ಮನಸ್ಸಿನಿಂದ “ಕಂಡೆ.” “ನೋಡು”, “ಕಾಣು” – ಒಂದು ವಸ್ತುವನ್ನು ನೋಡುವುದು ಬೇರೆ; ಆ ವಸ್ತು ತನ್ನ ಸಮಸ್ತ ಚೈತನ್ಯದೊಢನೆ ನಮ್ಮ ಪ್ರಜ್ಞೆಯ ಭಾಗವಾಗುವುದು, ಎಂದರೆ ಅದನ್ನು “ಕಾಣು”ವುದು ಬೇರೆ. ಗೊಮ್ಮಟನನ್ನು ಬರಿಗಣ್ಣಿಂದ ನೋಡುವುದು ಬೇರೆ; ಅದು ಅಸೀಮ ತ್ಯಾಗದ ಸಂಕೇತವೆಂಬ ಅನುಭವದಿಂದ ಉದಾತ್ತಗೊಳ್ಳುತ್ತ ಅದನ್ನು “ಕಾಣು”ವುದು ಬೇರೆ. ನೇಪಾಳವನ್ನು ನೋಡಿದೆ; ಇಂದ್ರಿಯಗಳು ಸಂತೋಷಗೊಂಡವು. ನೇಪಾಳವನ್ನು ಕಂಡೆ, ಆತ್ಮ ತೃಪ್ತಿಯನ್ನು ಪಡೆದೆ. ಅದನ್ನು ಆಧ್ಯಾತ್ಮಿಕ ಅನುಭವವೆಂದರೂ ಸರಿಯೇ.

ತೀವ್ರ ಮಾನಸಿಕ ಯಾತನೆಯನ್ನು ಬಹು ದಿನಗಳಿಂದ ಅನುಭವಿಸುತ್ತಿದ್ದ ನಾನು ಭಾರತಕ್ಕೆ ವಾಪಸ್‌ಹೊರಡುವ ಹಿಂದಿನ ದಿನ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್ಟರ ಸೂಚನೆಯಂತೆ ದೇವಾಲಯಕ್ಕೆ ಬೆಳಿಗ್ಗೆ ಏಳು ಮೂವತ್ತಕ್ಕೇ ಹೋದೆ. ಪಶುಪತಿ ಮಹಾದೇವನ ಗರ್ಭಗುಡಿ ಒಳಗೆ, ಲಿಂಗಕ್ಕೆ ತೀರ ಸಮೀಪದಲ್ಲಿ ನಿಂತು ಅದಕ್ಕೆ ನಡೆಯುವ ಶಾಸ್ತ್ರೋಕ್ತ ಪೂಜೆಯನ್ನು ಬಹು ಹತ್ತಿರದಿಂದ ನೋಡಿದೆ. ಮುಚ್ಚಿದ ಬಾಗಿಲುಗಳ ಹೊರಗೆ ಜನ ಆಗಲೇ ಬರಲು ಬಹುಸಂಖ್ಯೆಯಲ್ಲಿ ಜಮಾಯಿಸಿದ್ದರು. ಶುಭ್ರ ಮನಸ್ಸನ್ನು ಶುಭ್ರ. ಆಲೋಚನೆಯನ್ನು ದಯಪಾಲಿಸಲು ಭಗವಂತನನ್ನು ಬೇಡಿಕೊಂಡೆ. ಒಳಗಿನ ನನ್ನ ನೋವುಗಳನ್ನು ಮೌನವಾಗಿ ಬಿನ್ನವಿಸಿಕೊಂಡೆ. ಕತ್ತಲಲ್ಲಿ ದಾರಿ ತೋರಲು ಮನಸಾರೆ ಪ್ರಾರ್ಥಿಸಿದೆ. ಪೂಜೆ ಮುಗಿದು, ನನ್ನ ಕೈಗೆ ಭಗವತ್‌ಪ್ರಸಾದವನ್ನು ಅರ್ಚಕರು ನೀಡುತ್ತಿದ್ದಂತೆ ಜನಸಮೂಹ ಒಳನುಗ್ಗಿತು. ನನ್ನ ಭಗವದ್‌ಭಕ್ತಿ ಅಕೃತಕವಾದುದು; ಯಾವುದೇ ಫಲಾಪೇಕ್ಷೆಯ ಗುರಿಯುರ್ಳಳುದಲ್ಲ. ನಾಡಿಗಾಗಿ ರಾಷ್ಟ್ರಕ್ಕಾಗಿ ಬದುಕನ್ನು ವ್ಯಯಿಸಲು ಅನುಗ್ರಹ ಮಾಡುವುದನ್ನು ಭಗವಂತನಲ್ಲಿ ಬೇಡಿಕೊಳ್ಳುವುದಾಗಿತ್ತು. ಪ್ರಫುಲ್ಲ ಮನಸ್ಸಿನಿಂದ ಹೊರಬಂದೆ.**

ಮಾರನೆಯ ಬೆಳಿಗ್ಗೆ ೭.೩೦ಕ್ಕೆ ನೇಪಾಳದಿಂದ ವಿಮಾನದಲ್ಲಿ ಹೊರಟು ಬೆಂಗಳೂರನ್ನು ಹತ್ತು ಗಂಟೆಗೆ ಸೇರಿದೆ. ನಾನು ಉಳಿದುಕೊಂಡಿದ್ದ ಜೈನ ಭವನದ ಕಸಗುಡಿಸುವ ಇಬ್ಬರು ಹೆಣ್ಣು ಮಕ್ಕಳಿಗೆ ಸ್ವಲ್ಪ ಹಣ ಕೊಡಬೇಕೆಂದಿದ್ದೆ. ಆದರೆ ಹಿಂದಿನ ದಿನದ ಮಧ್ಯಾಹ್ನದಿಂದ ಅವರು ಗೈರು ಹಾಜರಾಗಿ ಬಿಟ್ಟಿದ್ದರು. ನನ್ನ ಜೇಬಲ್ಲಿ ಉಳಿದಿದ್ದ ಎಂಬತ್ತು ನೇಪಾಳಿ ರೂಪಾಯಿಗಳನ್ನು ನೇಪಾಳಿ ಏರ್‌ಲೈನ್ಸ್‌ನ ಸೌಜನ್ಯಯುತ ಗಗನಸಖಿಯರ ಕೈಯಲ್ಲಿ ಕೊಟ್ಟು, “ಇದನ್ನು ಕಷ್ಟದಲ್ಲಿರುವ ಯಾರಾದರೂ ಹೆಣ್ಣು ಮಕ್ಕಳಿಗೆ ನೀಡಿ” ಎಂದು ಹೇಳಿ, “ನೇಪಾಳದಲ್ಲಿ ನನ್ನ ಬದುಕಿನ ಅತ್ಯಂತ ಸಂತಸದ ಫಲಪ್ರದ ದಿನಗಳನ್ನು ಕಳೆದೆ. ನೇಪಾಳಕ್ಕೆ ನನ್ನ ನಮಸ್ಕಾರ ತಿಳಿಸಿ” ಎಂದು ಹೇಳಿ ವಿಮಾನದಿಂದ ಹೊರಬಂದೆ.

ನೇಪಾಳಕ್ಕೆ ಹೋದೆ, ಬಂದೆ. ಅಲ್ಲಿಂದ ಬಂದ ಮೇಲೆ ಅಲ್ಲಿಗೆ ಹೋಗಿ ಬರದ ದಿನವೇ ಇಲ್ಲವೆಂಬುದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲ.

 

ಅನುಬಂಧ – ೮: ನೇಪಾಳವನ್ನು ‘ನೋಡಿದೆ’ ಹಾಗೂ ‘ಕಂಡೆ’

ಭಾರತದ ಬಿಹಾರ್‌, ಉತ್ತರ ಪ್ರದೇಶಗಳಿಗೆ ಅಂಟಿಕೊಂಡಿರುವ ನೇಪಾಳವು ಇಂದು ಸ್ವತಂತ್ರ ರಾಷ್ಟ್ರವಾಗಿದ್ದರೂ ಅದೂ ಭಾರತವೂ ಒಂದೇ ಸಂಸ್ಕೃತಿಯನ್ನು ಹಂಚಿಕೊಂಡಿರುವುದು, ಒಂದು ಸಂಸ್ಕೃತಿಯ ಭಾಗವಾಗಿರುವುದು ಎಲ್ಲರಿಗೆ ತಿಳಿದ ವಿಷಯವೇ ಆಗಿದೆ. ನಾನು ಚಿಕ್ಕವನಾಗಿದ್ದಾಗ ನನ್ನ ಹಳ್ಳಿಯ ವೀರಭದ್ರದೇವರ ಮೆರವಣಿಗೆಯ ಮುಂದೆ ಕತ್ತಿ ಹಿಡಿದು, ‘ಖಡ್ಗ’ ಎಂದೇ ಕರೆಯುತ್ತಿದ್ದ ವೀರಭದ್ರನ ಪರಾಕ್ರಮವನ್ನು ವರ್ಣಿಸುವ ಕತೆಯನ್ನೂ ಅವನ ಪರಾಕುಗಳನ್ನೂ ಹೇಳುತ್ತಿದ್ದವರು ಸಮಾಳದ ವಾದ್ಯಕ್ಕನುಗುಣವಾಗಿ ಆವಶೇಷಪರವಾಗಿ ಕುಣಿಯುತ್ತಿದ್ದರು. ಆ ಅನಕ್ಷರಸ್ಥ ಭಕ್ತರ ಬಾಯಲ್ಲಿ ಬರುತ್ತಿದ್ದ ‘ಖಡ್ಗ’ ಘೋಷಣೆಗಳಲ್ಲಿ ಅಂಗ, ವಂಗ, ಕಳಿಂಗ ಇವೇ ಮೊದಲಾದ ‘ಚಪ್ಪನ್ನೈವತ್ತಾರು ದೇಶ’ಗಳಲ್ಲಿ ನೇಪಾಲವೂ ಒಂದಾಗಿರುತ್ತಿತ್ತು. ಅವರಿಗೆ ‘ನೇಪಾಳ’ ಎಲ್ಲಿದೆಯೆಂಬುದು ತಿಳಿಯದಿದ್ದರೂ ಆ ದೇಶದ ಹೆಸರು ತಮ್ಮ ಸಂಸ್ಕೃತಿಯ ಭಾಗವಾಗಿದ್ದುದರ ಅರಿವಿತ್ತು. ಅಂತಹ ನೇಪಾಳದ ಹೆಸರು ಕನ್ನಡ ಕಾವ್ಯ, ಶಾಸನಗಳಲ್ಲಿ, ಗಾದೆಗಳಲ್ಲಿ (‘ನೇಪಾಳದ ಭೂಪಾಳನಾದರೆ ಗೋಪಾಳನಿಗೇನು ಬಂತು?’) ನೂರಾರು ಕಡೆ ಉಕ್ತವಾಗಿದೆ. ಅಲ್ಲಿನ ಹಿಮಾಲಯ ಶಿಖರಗಳು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಾನಗಳು: ಅವು ಶಿವನ ಆವಾಸ ಸ್ಥಾನ. ಅಲ್ಲಿನ ಪಶುಪತಿನಾಥ ದೇವಾಲಯವು ಹಿಂದೂಗಳಿಗೆ ವಾರಣಾಸಿಯ ವಿಶ್ವೇಶ್ವರ ದೇವಾಲಯದಷ್ಟೇ ಪೂಜ್ಯವಾದುದು. ಅಂತಹ ನೇಪಾಳವನ್ನು ನೋಡಬೇಕೆಂಬ ನನ್ನ ಕುತೂಹಲವು ಕೆಲವು ತಿಂಗಳ ಹಿಂದೆ ಕಾರ್ಯಗತವಾಗಿ ನನ್ನ ಬದುಕಿನ ವಿಶೇಷ ಅನುಭವವನ್ನು ಪಡೆದೆ. ನೇಪಾಳಕ್ಕೆ ಹೋಗಿ ಬಂದೆ; ಬಂದಮೇಲೂ ಆಗಾಗ್ಗೆ ನೇಪಾಳಕ್ಕೆ ಮಾನಸಿಕವಾಗಿ ಹೋಗಿ ಇರುತ್ತೇನೆ; ವಾಪಸ್‌ಬರಲು ಒಮ್ಮೊಮ್ಮೆ ಮನಸ್ಸಾಗುವುದಿಲ್ಲ.

ಕೃಷ್ಣಾ, ಗೋದಾವರಿ, ಗಂಗಾನದಿಗಳಂತಹ ನದಿಗಳು ಬರಿಯ ವಕ್ರ ಬೆಳ್ಳಿಗೆರೆಗಳಂತೆ ವಿಮಾನದಿಂದ ಕಾಣುತ್ತಿದ್ದವು. ಇದ್ದಕ್ಕಿದ್ದಂತೆ ಉನ್ನತ ಬೆಟ್ಟಗಳು, ಚಿಕ್ಕ ಬೆಟ್ಟಗಳ ಮೇಲೆ ಬಿಳಿಯ ಬಿಡಿ ಮನೆಗಳು, ಕಣಿವೆಗಳಲ್ಲಿ ಪುಟ್ಟ ಊರುಗಳು ಕಾಣುತ್ತಿದ್ದಂತೆ ಕಾಠಮಾಂಡೊ ಸಮೀಪಿಸುತ್ತಿದ್ದುದನ್ನು ಘೋಷಿಸಲಾಯ್ತು. ಆ ಅತ್ಯಂತ ಮನೋಹರ ದೃಶ್ಯಗಳನ್ನು ಸವಿಯುತ್ತಿದ್ದಂತೆ ಸುತ್ತ ಬೆಟ್ಟಗಳಿಂದಾವೃತವಾದ ವಿಶಾಲ ಕಣಿವೆಯ ಕಾಠಮಾಂಡೊ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನ್ನನ್ನು ಸ್ವಾಗತಿಸಿ ಕರೆದೊಯ್ಯಲು ಬಂದಿದ್ದ ಮಾಲಾ ಮಲ್ಲ ಎಂಬ ಇತಿಹಾಸಜ್ಞೆ (ಗೆಳೆಯ ಡಾ. ಕೆ. ಎಸ್‌. ಅರುಣಿ ಮೂಲಕ ಪರಿಚಯ) ನೇಪಾಳವನ್ನಾಳಿದ ಮಲ್ಲ ದೊರೆಗಳ ವಂಶದವರು. ಮಲ್ಲ ವಂಶದವರು ಕರ್ನಾಟಕ ಮೂಲದವರಲ್ಲ; ನೇಪಾಳದ ಸ್ಥಳೀಯ ನೆವಾರಿ ವರ್ಗಕ್ಕೆ ಸೇರಿದವರು. ಅವರು ತಮಗಿಂತ ಹಿಂದೆ ಕಾಠಮಾಂಡೊ ಸಮೀಪದ ಭಕ್ತಪುರದಿಂದ ಆಳಿದ ಕರ್ನಾಟ ಮೂಲದ, ‘ಕರ್ನಾಟ’ರೆಂದೇ ಕರೆದುಕೊಂಡಿದ್ದ ಕರ್ನಾಟ ವಂಶದ ದೊರೆಯ ರಾಜಕುಮಾರಿಯನ್ನು ಮದುವೆಯಾಗಿದ್ದುದರಿಂದ ತಮ್ಮನ್ನು ‘ಕರ್ನಾಟ’ರೆಂದೇ ಕರೆದುಕೊಂಡಿದ್ದರು. ನೆವಾರಿಗಳ ಒಂದು ವರ್ಗವು ಇಂದಿಗೂ ತಮ್ಮನ್ನು ‘ಕರ್ನಾಟ’ ಎಂದು ಕರೆದುಕೊಳ್ಳುತ್ತದೆ. ಅಂತಹ ಮಾಲಾ ಅವರ ಮನೆಗೆ ಮುಂದೆ ಹೋಗಿ ಅವರ ಆತಿಥ್ಯ ಸ್ವೀಕರಿಸಿದೆ. ಕ್ರಿ. ಶ. ೧೧೦೦ – ೧೩೨೪ರವರೆಗೆ ದಕ್ಷಿಣ, ಮಧ್ಯ ನೇಪಾಳವನ್ನು ಆಳಿದವರು ಕರ್ನಾಟಕದ ನಾನ್ಯದೇವನ ವಂಶಸ್ಥರು. ನಾನ್ಯದೇವನು (ಮೂಲ ಹೆಸರು ಅಚ್ಚಗನ್ನಡದ ‘ನನ್ನಿದೇವ’) ಕಲ್ಯಾಣ ಚಾಲುಕ್ಯರ ವಿಕ್ರಮಾದಿತ್ಯನ ಜೊತೆ ಹೋಗಿ, ವಿಕ್ರಮಾದಿತ್ಯನು ಗೆದ್ದ ಬಿಹಾರ ನೇಪಾಳಗಳಲ್ಲಿ ಆ ಚಕ್ರವರ್ತಿಯ ಪ್ರತಿನಿಧಿಯಾಗಿ, ಸಾಮಂತನಾಗಿ ಆಳಿದ ದೊರೆ. ನಾನ್ಯದೇವನ ರಾಜಧಾನಿ ಸಿಮ್ರೌನ್‌ಗಡ್‌ಎಂಬ ನಗರವು ಈಗ ದಕ್ಷಿಣ ನೇಪಾಳದ ಒಂದು ಹಳ್ಳಿ: ಭಗ್ನ ದೇವಾಲಯ ಶಿಲ್ಪಗಳಿರುವ, ಹಂಪಿಯಂತಹ ಒಂದು ಐತಿಹಾಸಿಕ ಸ್ಥಳ. ನೇಪಾಳಕ್ಕೆ ಹೋಗುವ ಮುಖ್ಯ ಪ್ರಚೋದನೆಗಳಲ್ಲಿ ಕನ್ನಡದ ದೊರೆಗಳು ಅದನ್ನು ಆಳಿದ್ದುದೂ ಒಂದಾಗಿತ್ತು. ಬಿಹಾರದ, ನೇಪಾಳದ ಚರಿತ್ರೆಯ ಕೃತಿಗಳು ಆ ಭಾಗದ ಜನಜೀವನವನ್ನು (ರಾಜಕೀಯ, ಸಾಂಸ್ಕೃತಿಕ) ವ್ಯವಸ್ಥೆಗೊಳಿಸುವಲ್ಲಿ ‘ಕರ್ನಾಟ’ ವಂಶದ ದೊರೆಗಳು ವಹಿಸಿದ ಪಾತ್ರವನ್ನು ಮುಕ್ತಕಂಠದಿಂದ ಪ್ರಶಂಸಿಸಿವೆ.

‘ತಲ್ಲಣ’ದ ಅನುಭವ

ನಾನು ಕಾಠಮಾಂಡೊ ತಲುಪಿದ ಸಂಜೆಯೇ ತಿಳಿದ ವಿಷಯ: ಮಾರನೆಯ ದಿನ ಮಾವೊವಾದಿಗಳು ‘ನೇಪಾಳ್‌ಬಂದ್‌’ಗೆ ಕರೆ ನೀಡಿದ್ದರು. ಎಲ್ಲ ಶಾಲಾ ಕಾಲೇಜುಗಳು, ಕಚೇರಿಗಳಿಗೆಲ್ಲ ಅಂದು ರಜೆ. ನೇಪಾಳದ ಮೂರನೆಯ ಒಂದು ಭಾಗ ಮಾವೋವಾದಿಗಳ ಹಿಡಿತದಲ್ಲಿದೆ. ಬಡವರ ಪರ, ರಾಜಸತ್ತೆಯ ವಿರೋಧ ಎಂದು ಕರೆದುಕೊಳ್ಳುವ ಅವರ ಖಚಿತ ಹಕ್ಕೊತ್ತಾಯಗಳು ಯಾರಿಗೂ ತಿಳಿಯವು; ಆದರೆ ಶಸ್ತ್ರಾಸ್ತ್ರಗಳನ್ನವಲಂಬಿಸಿರುವ ಅವರಿಗೆ ಜನ ಹೆದರಿದ್ದರು. ನೇಪಾಳದ ಗೆಳೆಯರು ನನಗೆ ನಾನು ಉಳಿದಿದ್ದ ನಗರ ಮಧ್ಯದ ಜೈನ ಮಂದಿರದಿಂದ ಮೂರು ಕಿಲೋ ಮೀಟರ್‌ದೂರದ ಪಶುಪತಿ ಮಹಾದೇವನ ದೇವಾಲಯಕ್ಕೆ ನಡೆದುಕೊಂಡು ಹೋಗಿ ಬರಲು ತೊಂದರೆಯಿಲ್ಲವೆಂದು ಸೂಚಿಸಿದ್ದರು. ಮಾರನೆಯ ದಿನ ಬೆಳಿಗ್ಗೆ ಎಂಟಕ್ಕೆ ಉಪಹಾರ ಮುಗಿಸಿ ರಸ್ತೆಗೆ ಇಳಿದರೆ ವಾಹನ ಸಂಚಾರವಿಲ್ಲ. ವಿರಳವಾಗಿ ಸೈಕಲ್ಲುಗಳು, ಮೋಟಾರ್‌ಬೈಕುಗಳು, ಇನ್ನೂ ವಿರಳವಾಗಿ ಕಾರುಗಳು. ಜನಸಂಚಾರವೂ ವಿರಳವಾಗಿತ್ತು. ರಸ್ತೆಯ ಉದ್ದಕ್ಕೂ ಅಲ್ಲಿ ಇಲ್ಲಿ ರೈಫಲ್‌ಹಿಡಿದ ಕಾವಲುಗಾರರು ಗಸ್ತು ತಿರುಗುತ್ತಿದ್ದರು. ಕೆಲವೆಡೆ ಜನರನ್ನು ವಾಹನಗಳನ್ನು ನಿಲ್ಲಿಸಿ ತನಿಖೆ ಮಾಡುತ್ತಿದ್ದರು. ನಾನು ನಡೆದು ಹೋಗುತ್ತಿರುವಾಗ ನನ್ನ ಹಿಂದೆ ಫಟ್‌ಎಂಬ ಶಬ್ದವಾಗಿ ಅದು ನಾನೂ ಸೇರಿದಂತೆ ಅಲ್ಲಿನ ಜನರಿಗೆ ‘ಭಢ್‌’ ಎಂಬ ಆಸ್ಫೋಟವಾಗಿ ಕೇಳಿಸಿತು. ಜನ ನಿಂತಲ್ಲೇ ತಿರುಗಿ ನೋಡಿದರು; ಮನೆಗಳ ಹೊರಕ್ಕೆ ಕೆಲವರು ಭೀತರಾಗಿ ಇಣುಕಿ ನೋಡಿದರು. ಅದು ಬಾಂಬ್‌ಸ್ಫೋಟವೆಂದೇ ಎಲ್ಲರೂ ನಂಬುವ ವಾತಾವರಣ ನೇಪಾಳದ್ದು, ವಿಶೇಷವಾಗಿ ಅಂದಿನ ದಿನದ್ದು. ಇಬ್ಬರು ಏರಿದ್ದ ಸೈಕಲ್ಲಿನ ಚಕ್ರವು ಒಡೆದು ಸಿಡಿದಿತ್ತು. ಆ ಸೈಕಲ್‌ಸವಾರರಿಗೇ ಎಷ್ಟು ಭಯವಾಗಿತ್ತೆಂದರೆ ಐದು ನಿಮಿಷ ಅವರಿಗೆ ಏನೂ ತೋಚದೆ ಹಾಗೇ ಗರಬಡಿದವರಂತೆ ನಿಂತು ಬಿಟ್ಟಿದ್ದರು.

ನಾನು ಜೈನ ಮಂದಿರಕ್ಕೆ ಹಿಂದಿರುಗಿದೆ. ಮುಂದಿನ ಹದಿನೈದು ದಿನಗಳ ನೇಪಾಳಿ ಪತ್ರಿಕೆಗಳಲ್ಲಿ ಪ್ರತಿದಿನವು ನಡೆಯುತ್ತಿದ್ದ ಬಾಂಬ್‌ಸ್ಫೋಟ, ಹಲ್ಲೆ, ಜನರ ಅಪಹರಣ, ಮಂತ್ರಿಗಳ ಅಧಿಕಾರಿಗಳ ಅಪಹರಣ ಯತ್ನ ಇವೇ ತುಂಬಿರುತ್ತಿದ್ದವು. ಸುಂದರ ನೇಪಾಳ ಇಂದು ತತ್ತರಿಸಿ ಹೋಗಿದೆ.

‘ಪ್ರಜಾ’, ‘ರಂಭಾ’

ಕಾಠಮಾಂಡೊದ ಐತಿಹಾಸಿಕ ಪ್ರಸಿದ್ಧ ಹನುಮಾನ್‌. ಧೋಕಾದ ಅದ್ಭುತ ಕಾಷ್ಠಮಂದಿರಗಳ ರಚನೆಗೆ ಬೆರಗಾಗಿ ಓಡಾಡುತ್ತಿದ್ದಾಗ ಅಲ್ಲೇ ರಸ್ತೆ ಬದಿಯಲ್ಲಿ ಐಸ್‌ಕ್ರೀಮ್‌ಎಂಜಲು ಬಟ್ಟಲುಗಳನ್ನು ನೆಕ್ಕುತ್ತಿದ್ದ ಎಲುಬು ಮಕ್ಕಳ ದೃಶ್ಯ ನನ್ನ ಕರುಳನ್ನು ಹಿಂಡಿತು. ನೇಪಾಳ ಒಂದು ಬಡ ರಾಷ್ಟ್ರ. ಬೆಟ್ಟಗುಡ್ಡಗಳಲ್ಲಿ ವಾಸಿಸುವ ಅನಕ್ಷರಸ್ಥ ಕಾಡು ಜನರ ಬದುಕು ಅಸಹನೀಯ. ಮಾವೋವಾದಿಗಳು ಅಂತಹ ಕಡೆ ತಮ್ಮ ಪ್ರಬಲ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಬಡಜನರ ಸಹಾನುಭೂತಿಯೂ ಅವರ ಕಡೆ ಇರುವಂತಿದೆ. ಮಳೆ ಬಂದು ಪ್ರವಾಹದಿಂದಾಗಿ ನಿರ್ವಸಿತರಾದ ‘ಪ್ರಜಾ’ ಎಂಬ ವರ್ಗದ ಜನರು ತಮ್ಮ ಗುಹೆಗಳಿಗೇ ಹಿಂದಿರುಗಬೇಕಾಗಿರುವ ಒಂದು ತೀವ್ರ ನೋವಿನ ಸಂಗತಿಯನ್ನು, ಆ ಜನರಲ್ಲಿ ರಂಭಾ ಎಂಬ ಹುಡುಗಿ ಶಾಲೆಯಲ್ಲಿ ಅಕ್ಷರ ಕಲಿಯುತ್ತಿದ್ದವಳು ಮತ್ತೆ ಹಕ್ಕಿ ಜೇನು ಬೇಟೆಗೆ ಹಿಂದಿರುಗಬೇಕಾಗಿರುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದೆ. ‘ರಂಭಾ’ – ನಮ್ಮಲ್ಲಿ ಸಂಸ್ಕೃತಪ್ರಿಯರು ಬಳಸುವ ವಿರಳ ಹೆಸರಾದರೆ ಅಲ್ಲಿ ಗಿರಿಜನರಲ್ಲೂ ಅಂತಹ ಹೆಸರುಗಳಿವೆ. (ರಂಭಾ – ಬಿಜ್ಜಳ ಚಕ್ರವರ್ತಿಯ ಒಬ್ಬ ರಾಣಿಯ ಹೆಸರು). ಆ ‘ಅಪ್ಸರೆ’ ಹೆಸರಿಗೂ ಅಲ್ಲಿನ ಕಡುಬಡತನಕ್ಕೂ ಎಲ್ಲಿಯ ಸಂಬಂಧ! ನೇಪಾಳದ ಬೀದಿಗಳ, ಅಂಗಡಿಗಳ ಹೆಸರುಗಳು, ವ್ಯಕ್ತಿನಾಮಗಳು ಸಂಸ್ಕೃತಮಯ. ಭಾರತವು ತನ್ನ ಬಡತನದ ಸ್ಥಿತಿಯಲ್ಲೂ ನೇಪಾಳಕ್ಕೆ ಎಲ್ಲ ಬಗೆಯ ಸಹಾಯವನ್ನು ಮಾಡಿದೆ. ಇನ್ನೂ ಹೆಚ್ಚು ಮಾಡುವ ಅಗತ್ಯವಿದೆ. ನೇಪಾಳಕ್ಕೆ ಮಾಡುವ ಸಹಾಯ ತನ್ನ ಸಂಸ್ಕೃತಿ ಸಂವರ್ಧನೆಗೇ ಮಾಡಿದ ಪ್ರಯತ್ನವೂ ಆಗುತ್ತದೆ.

ಪಶುಪತಿ ದೇವಾಲಯ

ನೇಪಾಳದ ದೊರೆಗಳ ಮಾತ್ರವಲ್ಲ, ಎಲ್ಲ ನೇಪಾಳಿಗಳ ಆರಾಧ್ಯದೈವ ಪಶುಪತಿನಾಥ ಮಹಾದೇವನ ದೇವಾಲಯವು ಕಾಠಮಾಂಡೊದ ಅತಿ ಮುಖ್ಯ ಸ್ಥಳ. ನಗರದ ಅಂಚಿನಲ್ಲಿರುವ ಆ ದೈವವು ನಗರದ ರಕ್ಷಣಾ ದೇವತೆಯೂ ಹೌದು.

ಆದರೆ ಹಿಂದೆ ದೇವಾಲಯದ ಆಚೆ ಭಾಗಕ್ಕೆ ಹೋಗಿ ಜನರು ಮನೆಗಳನ್ನು ಕಟ್ಟುತ್ತಿರಲಿಲ್ಲವಂತೆ: ತಾವು ಮಹಾದೇವನ ರಕ್ಷಣೆಯಿಂದ ವಂಚಿತರಾಗಬಹುದಾದ ಭಯ ಅವರದು. ಎರಡು ಗುಡ್ಡಗಳ ಮಧ್ಯೆ ಹರಿಯುವ ಬಾಗಮತಿ ನದಿಯ ಬಲದಂಡೆಯ ಮೇಲೆ ಇರುವ ಆ ಭವ್ಯ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ನಾನು ರೋಮಾಂಚಿತನಾದೆ. ಬೃಹತ್‌ಲೋಹದ ನಂದಿ ವಿಗ್ರಹದ ಮುಂಭಾಗದಲ್ಲಿ ಎತ್ತರದ, ಸುಂದರ ಕಾಷ್ಠ ಶಿಲ್ಪಗಳ ದೇವಾಲಯದಲ್ಲಿನ ಪಶುಪತಿನಾಥ ಸ್ವಾಮಿಯ ದರ್ಶನಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದರು. ಬೃಹತ್‌ಶಿವಲಿಂಗದ ನಾಲ್ಕು ಕಡೆ ಶಿವನ ಈಶಾನವನ್ನು ಹೊರತುಪಡಿಸಿ ಉಳಿದ ನಾಲ್ಕು ಮುಖಗಳನ್ನು ಕೆತ್ತಿದ್ದಾರೆ. ಅಂತಹ ಶಿವಲಿಂ‌ಗಗಳನ್ನು ಮುಖಲಿಂಗಗಳೆಂದು ಕರೆಯುತ್ತಾರೆ. ಆ ಕೇಂದ್ರ ದೇವಾಲಯದ ಸುತ್ತ ಅಕ್ಷರಶಃ ನೂರಾರು ಚಿಕ್ಕ ದೊಡ್ಡ ದೇವಾಲಯಗಳು ಬಯಲು ಲಿಂಗಗಳು; ಅಲ್ಲೇ ಸಂತರು ಕುಳಿತು ಭಜನೆ ಮಾಡುತ್ತಿರುತ್ತಾರೆ. ವೇದ ಮಂತ್ರಗಳನ್ನು ಪಠನ ಮಾಡುತ್ತಾರೆ. ನದಿಯ ಅಂಚಿನಲ್ಲಿ ಉದ್ದಕ್ಕೂ ಇರುವ ಕಟ್ಟೆಯ ಮೇಲೆ ಚಿತೆಯ ವೇದಿಕೆಯಲ್ಲಿ ಶವಗಳ ದಹನ ನಡೆಯುತ್ತದೆಯಾದರೂ ಎಲ್ಲವನ್ನೂ ಶುಭ್ರವಾಗಿಟ್ಟಿದ್ದಾರೆ. ರಾಜ, ರಾಣಿಯರ ಸುಂದರ ಭಕ್ತಿ ಭಾವಪೂರಿತ ಶಿಲಾಮೂರ್ತಿಗಳು ಹಲವಿವೆ. ಬಾಗಮತಿ ನದಿಯನ್ನು ಸೇತುವೆ ಮೂಲಕ ದಾಟಿ ಆಚೆ ಹೋದರೆ ಆ ಗುಡ್ಡದ ಮೆಟ್ಟಿಲುಗಳು, ಶಾಸನಗಳು, ಬಯಲು ಲಿಂಗಗಳು. ಪಶುಪತಿ ದೈವ, ಭಾಗ್ಯಮತಿ ನದಿ, ಅದರ ನೀರ ಹರಿವಿನ ಪಕ್ಕದಲ್ಲೇ ಚಿತೆಗಳು ಎಲ್ಲವೂ ನನಗೆ ಜಗತ್ತಿನ, ಬದುಕಿನ ಸಂಕೇತವಾಗಿ ಕಾಣಿಸಿದುವು. ‘ಜೀವನ’ ಎಂದರೆ ಬದುಕು ಎಂದೂ ಅರ್ಥ, ನೀರು ಎಂದೂ ಅರ್ಥ.

ಆ ಗುಡ್ಡವನ್ನು ಹತ್ತಿ ಆಚೆ ಇಳಿದರೆ ಅಲ್ಲೇ ಗುಹೇಶ್ವರಿ ಎಂದು ಜನ ಕರೆಯುವ ದೇವಾಲಯವಿದೆ. ಅದನ್ನು ನೋಡುತ್ತಿದ್ದಂತೆ ಬಹುಶಃ ‘ಗುಹ್ಯೇಶ್ವರಿ’ ಇರಬಹುದೇ ಎಂಬ ನನ್ನ ಊಹೆ ನಿಜವಾಯ್ತು. ರಹಸ್ಯ ವಾಮಾಚಾರದ ಪಂಥದ ಕೇಂದ್ರವಾಗಿದ್ದಿರಬಹುದಾದ ಆ ದೇವಾಲಯದ ಒಳಗೆ ನೆಲದ ಕಲ್ಲಿನ ಮೇಲೆ ವಿಚಿತ್ರವಾಗಿದ್ದ ಮೂರ್ತಿಯಿತ್ತು. ಪೂಜಾ ಸಾಮಗ್ರಿಗಳಿಂದ ತುಂಬಿ ಹೋಗಿದ್ದ ಅದರ ಮೂಲ ಸ್ವರೂಪವನ್ನು ನೋಡಲಾಗಲಿಲ್ಲ. ಅಲ್ಲೇ ವಿಚಿತ್ರ ವೇಷದ ದಂಡಗಳ ಸನ್ಯಾಸಿಗಳನ್ನು ಕಂಡೆ. ಅಲ್ಲಿ ಕಳೆದ ಒಂದು ಸಂಜೆ ನನ್ನ ಬದುಕಿನ ಸಾರ್ಥಕ ದಿನಗಳಲ್ಲೊಂದು. ಪಶುಪತಿ ದೇವಾಲಯದ ಅರ್ಚಕರು ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಶೃಂಗೇರಿ ಸ್ಮಾತ್‌ಸಂಪ್ರದಾಯದವರೇ ಆಗಿರಬೇಕು. (ಅಲ್ಲಿನ ಹಿಂದಿನ ‘ಮೂಲ ಭಟ್‌’ ಶ್ರೀರಾವಲ್‌ಅನಂತಪದ್ಮನಾಭ ಸೋಮಯಾಜಿ ಅವರು ನಿವೃತ್ತರಾಗಿ ಕುಂದಾಪುರ ತಾಲೂಕಿನಲ್ಲಿ ನೆಲೆಸಿದ್ದಾರೆ. ಈಗಿನ ‘ಮೂಲ ಭಟ್‌’ ಶ್ರೀ ಮಹಾಬಲೇಶ್ವರ ಭಟ್ಟರು).

ಕಾಠಮಾಂಡೊದ ಯಾವುದೇ ರಸ್ತೆಯಲ್ಲಿ ಓಡಾಡಿದರೂ ಚಿಕ್ಕ ದೊಡ್ಡ ದೇವಾಲಯಗಳು, ಮಂಟಪಗಳು ಕಾಣುತ್ತವೆ. ಅಲ್ಲಿನ ಜನ ದೈವಭಕ್ತರು; ಸಂಪ್ರದಾಯ ಪ್ರಿಯರು. (ಈಗಿನ ಆಧುನಿಕತೆಯೂ ಸಾಕಷ್ಟು ಕಾಣಿಸುತ್ತದೆ).

‘ಕುಮಾರಿಪಂಥ

ಋತುಮತಿಯಾಗದ ಚಿಕ್ಕ ಹುಡುಗಿಯನ್ನು ದೇವತೆಯಂತೆ ಆರಾಧಿಸುವ ಒಂದು ವಿಶೇಷ ಪಂಥ (Cult) ನೇಪಾಳದಲ್ಲಿದೆ. ಮೂರು ನಾಲ್ಕು ವರ್ಷದ ಧೈರ್ಯದ ಹುಡುಗಿಯೊಬ್ಬಳನ್ನು ಆರಿಸಿ ಬೇಲದ ಜೊತೆ ಮದುವೆ ಮಾಡಿ ಅವಳನ್ನು ‘ಕುಮಾರಿ’ಯನ್ನಾಗಿಸುತ್ತಾರೆ. ಅಂದಿನಿಂದ ಅವಳು ಜನರ ಬಣ್ಣಿಸಲಾಗುತ್ತದೆ. ಅವಳ ಆಶೀರ್ವಾದವನ್ನು ಎಲ್ಲರೂ ಬಯಸುತ್ತಾರೆ. ನಾನು ಹೋದಾಗ (ಸೆಪ್ಟೆಂಬರ್‌) ಇಂದ್ರಜಾತ್ರಾ ವೈಭವದಿಂದ ನಡೆದಿತ್ತು; ಆ ಸಂದರ್ಭದಲ್ಲಿ ನೇಪಾಳದ ರಾಜ ದಂಪತಿಗಳು ಅವಳ ದರ್ಶನ ಮಾಡಿ ನೇಪಾಳವನ್ನು ಆಳಲು ಅವಳಿಂದ ‘ಅನುಮತಿ’ ಪಡೆಯುತ್ತಾರೆ. ಆ ಮುಗ್ಧ ಹುಡುಗಿಯ ಮೆರವಣಿಗೆ ನೋಡಲು ಜನ ಜಾತ್ರಯೋ ಜಾತ್ರೆ: ಆ ಜಾತ್ರೆಯನ್ನು ಕಂಡು, ಮಾರನೆಯ ದಿನ ‘ಕುಮಾರಿಘರ್‌’ ಪ್ರವೇಶಿಸಿ, ಮಹಡಿ ಮೇಲೆ ನಾಲ್ಕು ವರ್ಷದ ಮುಗ್ಧ ಸುಂದರ ಹುಡುಗಿಯನ್ನು ನೋಡಿದೆ ಅವಳನ್ನು ಯಾರೋ ಹೆಂಗಸರು ಪ್ರೀತಿಯಿಂದ ಎತ್ತಿಕೊಂಡೇ ಬಂದರು. ಅವಳು ಋತುಮತಿಯಾಗುತ್ತಿದ್ದಂತೆ ಅವಳ ‘ಕುಮಾರಿ’ ಪಟ್ಟ ಅಂತ್ಯಕ್ಕೆ ಬಂದು ಬೇರೆ ಹುಡುಗಿಯನ್ನು ಅವಳ ಸ್ಥಾನಕ್ಕೆ ತರುತ್ತಾರೆ. ಬಳಿಕ ಅವಳು ಮದುವೆಯಾಗಬಹುದು. ದೇವತೆಯಾಗಿದ್ದ ಹುಡುಗಿಯನ್ನು ಮದುವೆಯಾಗಲು ಯುವಕರು ಹೆದರಿ ಅವಳು ಆಜನ್ಮ ಅವಿವಾಹಿತೆಯಾಗಿಯೇ ಉಳಿಯುವುದೂ ಉಂಟು. ಆ ಪದ್ಧತಿಯನ್ನು ರದ್ದು ಮಾಡಲು ಕೆಲವರು ಕೊಟ್ಟ ಸಲಹೆಗೆ ನೇಪಾಳದ ಎಲ್ಲ ಪಕ್ಷಗಳೂ ವಿರೋಧ ವ್ಯಕ್ತಪಡಿಸಿದುವು. ಆ ಹುಡುಗಿ ನೇಪಾಳದ ಶಾಕ್ಯ ಕುಲದ ಬೌದ್ಧಸಂಪ್ರದಾಯದವಳಾಗಿರಬೇಕು. ನೇಪಾಳದಲ್ಲಿ ಹಿಂದೂ – ಬೌದ್ಧ ದೇವಾಲಯದಲ್ಲಿ ಆಳೆತ್ತರದ ಸುಂದರ ಬುದ್ಧ ವಿಗ್ರಹವು ನನ್ನಲ್ಲಿನ ಉದಾತ್ತ ಮನೋಭಾವವನ್ನು ವರ್ಧಿಸಿತು.

ನಾಲ್ಕಡಿ ಹಿಮಾಲಯ ದರ್ಶನ

ಅಲ್ಲಿ ನನಗೆ ಸ್ನೇಹಿತರಾದ ‘ಜಂಗಂ’ ಕುಲನಾಮದ ಶ್ರೀ ಭರತ್‌ಮಣಿ ಜಂಗಂ ಎಂಬುವರು ನಾಲ್ಕು ಜಂಗಂ ಮಠಗಳನ್ನು ತೋರಿಸಲು ನೇಪಾಳದ ಬೇರೆ ಬೇರೆ ಎಡೆಗಳಿಗೆ ಕರೆದೊಯ್ದರು. ಕರ್ನಾಟಕದಿಂದ ಹೋದ ವೀರಶೈವರು ಸ್ಥಾಪಿಸಿದ ಮಠಗಳು ಅವು. ಭಕ್ತಪುರ ಜಂಗಂ ಮಠದಲ್ಲಿ ಎರಡು ಕನ್ನಡ ಶಾಸನಗಳಿವೆ. (ಕಾಲ ಕ್ರಿ.ಶ. ೧೬೯೯). ಪನೌತಿ ಎಂಬಲ್ಲಿನ ಇಂದ್ರೇಶ್ವರ ದೇವಾಲಯದ ಅರ್ಚಕರು ‘ಜಂಗಂ’ ಜನರೇ. ಅದೊಂದು ಯಾರನ್ನೂ ಮಂತ್ರ ಮುಗ್ಧವಾಗಿಸುವ ಪ್ರಾಕೃತಿಕ ಸೌಂದರ್ಯದ ಸ್ಥಲ. ಅಲ್ಲಿನ ಪುಟ್ಟ ನದಿ, ಸುತ್ತ ಇರುವ ಹಸಿರು ಬೆಟ್ಟಗಳ ಮೇಲೆ ಮನೆಗಳು, ಅವುಗಳ ಸುತ್ತ ಕಾಡು, ಬಯಲು ಬತ್ತದ ಗದ್ದೆಗಳು ಇವುಗಳ ಚೆಲುವು ಅವರ್ಣನೀಯ ಧೂಲಿಖೇಲ್‌ಎಂಬುದು ಒಂದು ಕಣಿವೆಯ ಪಕ್ಕದ ಊರು. ಅಲ್ಲಿನ ಇಳಿಜಾರು ಕಣಿವೆಯಲ್ಲಿ ನೀರಿನ ಝರಿ. ಅಲ್ಲೇ ಗೋಖುರೇಶ್ವರ ದೇವಾಲಯ. ಆ ದೇವಾಲಯದ ಅಂಗಳದಲ್ಲಿ ಹರಿದು ನಿಂತಿದ್ದ ನೀರನ್ನು ಒಬ್ಬ ಜಟಾಧಾರಿ ಕಾವಿವಸ್ತ್ರದ ಸನ್ಯಾಸಿ ಎತ್ತಿ ಆ ಕಡೆ ಹಾಕುತ್ತಿದ್ದಾರೆ. ನನಗೆ ಆ ಕ್ಷಣ ವೇದದ ಋಷಿಗಳು ವಾಸಿಸುತ್ತಿದ್ದ ಪ್ರಶಾಂತ ಅರಣ್ಯದ ನೆನಪು ಬಂದಿತು. ಅಲ್ಲೇ ಸ್ವಲ್ಪ ಎತ್ತರದ ದಿಣ್ಣೆಯ ಮೇಲೆ ಅತ್ಯಾಧುನಿಕ ಹೋಟಲ್‌. ಆ ದೇವಾಲಯದ ಅರ್ಚಕರು ವಾರಣಾಸಿಯ ಜಂಗಮವಾಡಿ ಮಠದಲ್ಲಿ ಕನ್ನಡಿಗರೊಡನೆ ಸಂಸ್ಕೃತ ಕಲಿತು ನಾಲ್ಕಾರು ಕನ್ನಡ ಪದಗಳನ್ನು ನೆನಪಿಟ್ಟುಕೊಂಡಿದ್ದ ‘ಜಂಗಂ’ ವ್ಯಕ್ತಿ. ಆ ಆಧುನಿಕ ಹೋಟೆಲ್‌ಮಾಲಿಕರೂ ಕೂಡ ಜಂಗಂ ಜನರ ಬಂಧುಗಳು. ಹಿಮಾಲಯ ಪ್ರವಾಸಕ್ಕೆ ಹೋಗುವವರು ಬಂದು ಉಳಿಯುವ ಜಾಗವೇ ಧೂಲಿಕೇಲ್‌; ಅಲ್ಲಿಂದ ಚೀನಾದ ಗಡಿ ಕೇವಲ ಅರವತ್ತು ಕಿಲೋ ಮೀಟರ್‌. ಮುಂದಿನ ಐದಾರು ದಿನಗಳಲ್ಲಿ ಪುಟ್ಟ ವಿಮಾನವೊಂದರಲ್ಲಿ ಹಿಮಾಲಯ ದರ್ಶನಕ್ಕೆ ಹೋದೆ. ನಿರಭ್ರ ವಾತಾವರಣವಿದ್ದರೆ ಕಾಣುವ ದೃಶ್ಯಗಳು ಅವರ್ಣನೀಯವಂತೆ. ನಮಗೆ ಆ ಒಂದು ಗಂಟೆಯ ವಿಮಾನದ ಹಾರಾಟದಲ್ಲಿ ಕಾಣಿಸಿದ್ದು ಕೆಳಗೆ ಬರೀ ಮೋಡಗಳು, ಮೇಲೆ ಆಕಾಶ. ಎಲ್ಲೋ ದಿಗಂತದ ಒಂದು ಮೂಲೆಯಲ್ಲಿ ಇಪ್ಪತ್ತೊಂಬತ್ತು ಸಾವಿರದ ಇಪ್ಪತ್ತೆಂಟು ಅಟಿ ಎತ್ತರದ ಸಾಗರಮಾತಾ (ಎವರೆಸ್ಟ್‌) ಶಿಖರದ ನಾಲ್ಕು ಅಡಿಗಳಷ್ಟು ತುದಿ ಕಾಣಿಸುತ್ತಿತ್ತು. ಆ ನಾಲ್ಕಡಿ ಶಿಖರದ ದರ್ಶನಕ್ಕೆ ನಾನು ಕೊಟ್ಟಿದ್ದು ನಾಲ್ಕು ಸಾವಿರ ರೂಪಾಯಿ. ನಾನಂದುಕೊಂಡೆ: ಶಿವ ಇರುವುದು ಉತ್ತುಂಗ ಪರ್ವತದ ತುದಿಯಲ್ಲಾದ್ದರಿಂದ ಶಿವನ ವಾಸಸ್ಥಾನದ ದರ್ಶನ ಆಯಿತು; ಶಿವನ ದರ್ಶನವೇ ಆದಂತಾಯಿತು.

ಭಾರತೀಯ ಸಂಸ್ಕೃತಿ

ಆಧುನಿಕ ಪೂರ್ವ ಭಾರತದ ಸಂಸ್ಕೃತಿ ಇಂದಿಗೂ ಜೀವಂತವಾಗಿ ಕಾಣಸಿಗುವುದು ನೇಪಾಳದಲ್ಲಿ. ಭಾರತೀಯನಾಗಿರುವ ನನಗೆ ಅಲ್ಲಿ ಎಲ್ಲೆಲ್ಲೊ ಕಾಣಿಸಿದ್ದು ಭಾರತೀಯತೆ ಅಥವಾ ನೇಪಾಳೀಯತೆ. ನೇಪಾಳವನ್ನು ‘ನೋಡು’ವುದು ಒಂದು; ಅದರ ಹೊರಚೆಲುವನ್ನು ನೋಡಬೇಕು. ಅದನ್ನು ‘ಕಾಣು’ವುದು ಬೇರೆ; ನೇಪಾಳದ ಹಿಂದೆ ಮಿಡಿಯುತ್ತಿರುವ ಆಧ್ಯಾತ್ಮಿಕತೆಯನ್ನು ‘ಕಾಣ’ಬೇಕು. ನಾನು ನೇಪಾಳವನ್ನು ನೋಡಿದೆ, ಹಾಗೆಯೇ ‘ಕಂಡೆ’.

 

* ಈ ಮಾತು ಕರ್ನಾಟಕಕ್ಕೂ ನಿಜ, ಭಾರತದ ವಿಷಯದಲ್ಲೂ ನಿಜ. ನೇಪಾಳದ ವಿಷಯದಲ್ಲಂತೂ ಹೆಚ್ಚು ನಿಜ.

** ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದುದು ಪಂಪಾ ವಿರೂಪಾಕ್ಷನ ಕೃಪೆಯಿಂದ ಎಂಬುದನ್ನು ಈಗಾಗಲೇ ದಾಖಲಿಸಿದ್ದೇನೆ. ಪಂಪ ಪ್ರಶಸ್ತಿ ನನಗೆ ಬಂದುದು ಪಶುಪತಿಯ ಕೃಪೆಯಿಂದ ಎಂಬ ದೃಢ ನಂಬಿಕೆ ನನ್ನದಾಗಿದೆ. ನನ್ನ ನೇಪಾಳದ ಸಂಶೋಧನ ಪ್ರವಾಸದ ಫಲಿತಾಂಶಗಳನ್ನು ಪತ್ರಿಕಾಗೋಷ್ಠಿ ಮೂಲಕ (೮.೧೦.೨೦೦೨) ಸಾರ್ವಜನಿಕರಿಗೆ ತಿಳಿಸಿದ್ದು ನನಗೆ ಪಂಪ ಪ್ರಶಸ್ತಿ ನೀಡುವ ನಿರ್ಧಾರವನ್ನು ತೀವ್ರಗೊಳಿಸಿರಬಹುದು. (ಅಥವಾ ಪಂಪ ಪ್ರಶಸ್ತಿ ಬರದೇ ಹೋಗಿದ್ದರೂ ಆಶ್ಚರ್ಯವಿಲ್ಲ.) ಸೆಪ್ಟೆಂಬರ್‌ತಿಂಗಳ ಕೊನೆಯ ವಾರ ನೇಪಾಳದಿಂದ ವಾಪಸಾದೆ; ಪಂಪ ಪ್ರಶಸ್ತಿ ನನಗೆ ದೊರೆತದ್ದು ಡಿಸೆಂಬರ್‌೨೩ ರಂದು ಪತ್ರಿಕೆಗಳಲ್ಲಿ ಅಧಿಕೃತವಾಗಿ ಪ್ರಕಟವಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಷಯ ತಿಳಿದುದೂ ೨೩ನೇ ತಾರೀಖು. ೨೩ನೇ ತಾರೀಖು ನನ್ನ ಬದುಕಿನ ಇನ್ನೂ ಕೆಲವು ಮುಖ್ಯ ಘಟನೆಗಳ ದಿನ.

ಇದು ಭಾವನಾತ್ಮಕ ವಿಷಯ; ಸಂಶೋಧನ ಕೃತಿಯಲ್ಲಿ ಇಂತಹುದಕ್ಕೆ ಅವಕಾಶವಿಲ್ಲವೆಂದು ಯಾರಿಗಾದರೂ ಅನ್ನಿಸಿದರೆ ಆಶ್ಚರ್ಯವಿಲ್ಲ. ಸಂಶೋಧನೆ ಬಗ್ಗೆ ನಾನು ಸಂಪೂರ್ಣ ವಸ್ತುನಿಷ್ಠ ದೃಷ್ಟಿಯವನೆಂದು ಮತ್ತೆ ಹೇಳಬೇಕಿಲ್ಲ.