ಧರ್ಮ ಮತ್ತು ರಾಜ ಇವೆರಡೂ ನೇಪಾಳದ ಬದುಕನ್ನು ನಡೆಯಿಸುವ ಹಾಗೂ ಒಗ್ಗೂಡಿಸಿರುವ ಚೈತನ್ಯ ಶಕ್ತಿಗಳು.[1] ಇದರಿಂದಾಗಿ ಅಲ್ಲಿ ವರ್ಷದುದ್ದಕ್ಕೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. (ಚಿತ್ರ ೩೧) ಆ ಹಬ್ಬಗಳಲ್ಲಿ ಭಕ್ತಪುರದ “ಬಿಸ್ಕೆತ್” (Bisket) ಅಥವಾ “ನವಬರ್ಸ” ಜಾತ್ರೆಯನ್ನು (ಏಪ್ರಿಲ್ ಮಧ್ಯ) ಅದರ ಸ್ವಾರಸ್ಯಕ್ಕಾಗಿ ಇಲ್ಲಿ ನಿರೂಪಿಸಲಾಗಿದೆ. (ಚಿತ್ರ ೩೩)

ನೆವಾರಿ ಭಾಷೆಯಲ್ಲಿ “ಬಿ” ಎಂದರೆ ಹಾವು; “ಸ್ಯಕೊ” ಎಂದರೆ ಕೊಲ್ಲು; ಎರಡು ನಾಗರ ಹಾವುಗಳ ಸಾವಿನ ಹಬ್ಬವೇ “ಬಿಸ್ಕೆತ್” (ವಿಸ್ಕಟ್) ಎಂಬುದು ಸಾಂಪ್ರದಾಯಿಕ ವಿವರಣೆ. ಸುಂದರ ರಾಜಕುಮಾರಿ ಬಳಿಗೆ ಪ್ರತಿ ದಿನ ರಾತ್ರಿ ಒಬ್ಬ ಹೋಗಬೇಕಿತ್ತು. ರಾತ್ರಿ ಮಲಗಿದಾಗ ಅವಳ ಮೂಗಿನ ಹೊಳ್ಳೆಗಳಿಂದ ಹೊರಬರುತ್ತಿದ್ದ ಎರಡು ಹಾವುಗಳು ಅವಳ ಜೊತೆ ಇರುತ್ತಿದ್ದ ಪುರುಷನನ್ನು ಕೊಲ್ಲುತ್ತಿದ್ದವು. ಬೇರೆ ಊರಿನ ರಾಜಕುಮಾರನ ಸರದಿ ಬಂದಾಗ ಅವನು ಎಚ್ಚರದಿಂದಿದ್ದು ಆ ಹಾವುಗಳನ್ನು ಕೊಂದು ರಾಜಕುಮಾರಿಯನ್ನು ಮದುವೆಯಾದನು. ಆ ಹಾವುಗಳೇ ಎತ್ತರದ ಕಂಬಗಳಾದುವು; ಭದ್ರಕಾಲಿಯ ಮೆರವಣಿಗೆ ನಡೆಯಿತು. ಭದ್ರಕಾಲಿ ಬಗ್ಗೆ ಇನ್ನೊಂದು ಕತೆ ಇದೆ. ಅವಳ ವೈಭವದ ಮೆರವಣಿಗೆ ನೋಡಲು ಕಾಶಿಯಿಂದ ಕಾಲಭೈರವನು ಮನುಷ್ಯ ವೇಷದಲ್ಲಿ ಬಂದಿದ್ದನು. ಮಾಂತ್ರಿಕನೊಬ್ಬ ಅವನನ್ನು ಗುರುತಿಸಿ ಭಕ್ತಪುರದಲ್ಲೇ ನೆಲೆಸಲು ಕೇಳಿಕೊಂಡನು. ಭೈರವನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜನ ಅವನ ತಲೆ ಕತ್ತರಿಸಿದರು. ರುಂಡ ಇಲ್ಲೇ ಉಳಿಯಿತು; ಮುಂಡ ಕಾಶಿಗೆ ಓಡಿಹೋಯ್ತು. ಭಕ್ತಪುರದ ಮೂರಂತಸ್ತಿನ ಗುಡಿಯಲ್ಲಿ (ಚಿತ್ರ ೧೮) ರುಂಡ ಮಾತ್ರ ಇದೆ (ಕಂಚಿನ ತಲೆ). ಕಾಶಿಯ ಕ್ಷೇತ್ರಪಾಲ ಭೈರವನ ತಲೆ ಮೂಲದ್ದಲ್ಲ ಎಂದು ಹೇಳುತ್ತಾರೆ. “ಭಕ್ತಪುರದ ಭೈರವನಿಗೆ ಮುಂಡ ಇಲ್ಲ, ಕಾಶಿಯ ಭೈರವನಿಗೆ ರುಂಡ ಇಲ್ಲ” ಎನ್ನುವ ಗಾದೆಯೇ ಇದೆ. ಭದ್ರಕಾಲಿಯು ಭೈರವನ ಪತ್ನಿ. ಈಗ ಬಿಸ್ಕೆತ್ ಮೆರವಣಿಗೆಯಲ್ಲಿ ಎರಡು ರಥಗಳಲ್ಲಿ ಇಬ್ಬರದೂ ಸಂಭ್ರಮದ ಮೆರವಣಿಗೆ ನಡೆಯುತ್ತದೆ. ಆ ಜಾತ್ರೆ ಹೊರಡುವುದು ಅಲ್ಲಿನ ಜಂಗಂ ಮಠದಿಂದ. ಹೊಸ ವರ್ಷದ ಹಿಂದಿನ ದಿನ ‘ಲಿಂಗಂ’ (ನಿಂಗಂ) ನಿಲ್ಲಿಸುತ್ತಾರೆ. ಆ ‘ಲಿಂಗ’ ಸ್ತಂಭ ಸ್ಥಾಪನೆಯಲ್ಲಿ ಜಂಗಂ ಮಠದ ಜಂಗಮರ ಪಾತ್ರ ಪ್ರಧಾನವಾದುದು. ‘ಲಿಂಗಂ’ ಎಂಬುದು ಕಾಡಿನಿಂದ ಆರಿಸಿ ತಂದ ಎಂಬತ್ತಡಿ ಎತ್ತರದ ದೊಡ್ಡ ಮರದ ಕಂಬ. (ಚಿತ್ರ ೩೪ – ೩೫). ಭೈರವ, ಭದ್ರಕಾಲಿಯರು ಆ ‘ಲಿಂಗಂ’ ಸ್ತಂಭವನ್ನು ನಿಲ್ಲಿಸುವುದನ್ನು ನೋಡುತ್ತಾರೆ. (ನಿಲ್ಲಿಸುವಾಗ ಮನುಷ್ಯರ ಪ್ರಾಣಹಾನಿಯಾಗಿರುವುದೂ ಉಂಟು). ‘ಲಿಂಗಂ’ ತುದಿಯಲ್ಲಿ ಸರ್ಪಗಳ ಆಕೃತಿ ಕಟ್ಟುತ್ತಾರೆ. ಆ ಕಂಭಕ್ಕೆ, ಭೈರವ ಕಾಲಿಯರಿಗೆ ಸಾಕಷ್ಟು ಪ್ರಾಣಿಬಲಿಗಳು ನಡೆಯುತ್ತವೆ. ಹೊಸ ವರ್ಷದ ಮಧ್ಯಾಹ್ನ ‘ಲಿಂಗಂ’ ಕಂಬ ಬೀಳಿಸಿದಾಗ ಆ ಕಂಬದ ಚಕ್ಕೆಗಳನ್ನು ಜನರು ಶ್ರದ್ಧೆಯಿಂದ ಮನೆಗಳಿಗೆ ಕೊಂಡೊಯ್ಯುತ್ತಾರೆ. ‘ಲಿಂಗಂ’ನಿಂದಾಗಿ ತಮ್ಮ ಕೇಡುಗಳು ದೂರವಾಗುತ್ತವೆ ಎಂದು ನಂಬುತ್ತಾರೆ. ಮುಂದಿನ ನಾಲ್ಕು ದಿನ ಹಲವು ದೇವ ದೇವಿಯರ ಮೆರವಣಿಗೆಗಳಾಗುತ್ತವೆ. ಇಡೀ ಭಕ್ತಪುರದ ನೆವಾರಿ ಜನಾಂಗವು ಹಬ್ಬದುದ್ದಕ್ಕೂ ಸಂಭ್ರಮ ಪಡುತ್ತದೆ.[2] ದೇವತೆಗಳಿಗೆ ಮದ್ಯ ಮಾಂಸ ನೈವೇದ್ಯ ಎಲ್ಲ ನಡೆಯುತ್ತದೆ. ಕೆಲವೊಮ್ಮೆ “strange, secret sexual rites” ಕೂಡ ನಡೆಯುತ್ತವೆ.[3] ನೆವಾರಿಗಳ ಹಿಂದೂ ಧರ್ಮವು ತಾಂತ್ರಿಕಾಚಾರ ಪ್ರಾಧಾನ್ಯವುಳ್ಳದ್ದು.

“ಬಿಸ್ಕೆತ್” ಜಾತ್ರೆಯು ಮುಖ್ಯವಾಗಿ ಮಳೆ ಬೆಳೆಗಳಿಗೆ ಸಂಬಂಧಿಸಿದ ಉತ್ಸವ, ಒಂದು “fertility rite”.

ಕಾಠಮಾಂಡೊದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ “ಇಂದ್ರ ಜಾತ್ರಾ” ಹಬ್ಬವು ಅಷ್ಟೇ ಸಡಗರದ್ದು. ಇಂದ್ರನಿಗೆ ಬಿಳಿ ಪಾರಿಜಾತವನ್ನು ಕಂಡರೆ ಬಹು ಇಷ್ಟ.ಅವು ಸ್ವರ್ಗದಲ್ಲಿರದೆ ಕಾಠಮಾಂಡೊ ಕಣಿವೆಯಲ್ಲಿ ಬೆಳೆಯುತ್ತಿದ್ದವು. ಅವನು ಕಳ್ಳನಂತೆ ಬಂದು ಆ ಹೂಗಳನ್ನು ಕದ್ದಾಗ ಜನರು ಅವನನ್ನು ಹಿಡಿದರು. ಅವನನ್ನು ಬಿಡಿಸಲು ಬಂದ ಅವನ ತಾಯಿ ತನ್ನ ಮಗನ ಬಿಡುಗಡೆಯಾದುದಕ್ಕೆ ಹರ್ಷಿಸಿ ಕಾಠಮಾಂಡೊ ಕಣಿವೆಗೆ ಚಳಿಗಾಲಕ್ಕೆ ಸಮೃದ್ಧ ಮಂಜನ್ನು ಒದಗಿಸಿದಳು.

ಜಾತ್ರೆಗೆ ಮೊದಲು ಜನರು ಕಾಡಿಗೆ ಹೋಗಿ ಅಲ್ಲಿ ಕಣ್ಣು ಕಟ್ಟಿ ಬಿಟ್ಟ ಮೇಕೆ ಮರಿಯು ಮುಟ್ಟಿದ ಮರವನ್ನು ಕಡಿದು ತಂದು ಶುಕ್ಲ ಪಕ್ಷದ ಹನ್ನೆರಡನೆಯ ದಿನ ಹನುಮಾನ್ ಧೋಕಾದಲ್ಲಿ ನಿಲ್ಲಸುತ್ತಾರೆ. ವಾದ್ಯಗಳ ಮೊಳಗಿನ ಜೊತೆ ಬಂದೂಕುಗಳ ಗುಂಡಿನ ಶಬ್ದವೂ ಮೊಳಗುತ್ತದೆ. “ಲಿಂಗಂ” (“ನಿಂಗ್” = ಲಿಂಗ) ಎಂದು ಕರೆಯುವ ಆ ಕಂಬದ ತುದಿಯಲ್ಲಿ ಇಂದ್ರನ ಧ್ವಜ ಹಾರಿಸುತ್ತಾರೆ. ಆ ಧ್ವಜವು ಕಣಿವೆಗೆ ಸುಖ ಶಾಂತಿ ತರುತ್ತದೆಯೆಂದು ನಂಬುತ್ತಾರೆ. ಕೆಳಗಡೆ ಇಂದ್ರನ ಮೂರ್ತಿಯನ್ನು ಕುಳ್ಳಿರಿಸುತ್ತಾರೆ. (೧೯೪೦ ಕ್ಕೆ ಮೊದಲು ಎಮ್ಮೆಗೆ ಹೆಂಡ ಕುಡಿಸಿ, ತಿವಿದು ರೇಗಿಸಿ ಅದನ್ನು ಕೊಂದು ಅದರ ರಕ್ತಪಾನ ಮಾಡಿ ಜನ ಕುಣಿಯುತ್ತಿದ್ದರು – ಈಗ ಅದು ನಿಂತಿದೆ). ಹುಣ್ಣಿಮೆಯ ಹಿಂದಿನ ದಿನ “ಕುಮಾರಿ” ದರ್ಶನವಾಗುತ್ತದೆ.

ನೇಪಾಳದ “ಕುಮಾರಿ” ಪರಿಕಲ್ಪನೆ ವಿಶಿಷ್ಟವಾದುದು. ನೆವಾರಿಗಳಲ್ಲಿ ಶಾಕ್ಯರ ಬಜ್ರಯಾನೀ ಪಂಥದ (ಬಜ್ರಾಚಾರಿಗಳ) ಜಾತಿಯ ಮೂರು ನಾಲ್ಕು ವರ್ಷದ ಹುಡುಗಿಯನ್ನು “ಕುಮಾರಿ”ಯಾಗಿ (ಚಿತ್ರ ೧೩) ಆರಿಸುವ ವಿಧಾನ ಹೀಗಿದೆ. ಆ ಹುಡುಗಿಯಲ್ಲಿ ಮೂವತ್ತೆರಡು ಲಕ್ಷಣಗಳಿರಬೇಕು. ಉದಾಹರಣೆಗೆ ಅವಳ ತಲೆಯ ಕೂದಲುಗಳು ನೇರವಾಗಿ ಕೆಳಗೆ ಬಲಕ್ಕೆ ಬಾಗಿರಬೇಕು. ಅವಳಲ್ಲಿ ಯಾವ ಅಂಗವೂ ಊನವಾಗಿರಬಾರದು. ಅವಳ ದೇಹದಿಂದ ಎಂದೂ ರಕ್ತ ಒಸರಿರಬಾರದು; ದೇಹದ ಮೇಲೆ ಗಾಯದ ಚಿಹ್ನೆ ಇರಕೂಡದು. ಕತ್ತರಿಸಿದ ಪ್ರಾಣಿಗಳ ತಲೆಗಳು, ಭೂತಪ್ರೇತಗಳ ವೇಷಧಾರಿಗಳು ತುಂಬಿದ ಕತ್ತಲೆ ಕೋಣೆಯಲ್ಲಿ, ಕೂಗಾಟ ಚೀರಾಟಗಳ ಮಧ್ಯೆ ಯಾವ ಹುಡುಗಿ ಧೈರ್ಯವಾಗಿ ಇರುವಳೋ ನಡೆಯುವಳೋ ಅವಳನ್ನು ‘ಕುಮಾರಿ’ಯಾಗಿ ಆರಿಸಲಾಗುತ್ತದೆ. ಅವಳ ಜಾತಕವು ರಾಜನ ಜಾತಕಕ್ಕೆ ಹೊಂದಬೇಕು. ಅಂದಿನಿಂದ ಆ ಕುಮಾರಿಯ ವಾಸ ಹನುಮಾನ್ ಧೋಕಾ ಬಳಿಯ “ಕುಮಾರಿ ಘರ್”ನಲ್ಲಿ (ಚಿತ್ರ ೧೪). ಅವಳನ್ನು ‘ಕಾಳಿ’ಯ ಅವತಾರವೆಂದು ತಲೇಜು ಭವಾನಿ ಅವತಾರವೆಂದು ಜನ ನಂಬಿ ಪ್ರತಿ ದಿನ ಅವಳ ದರ್ಶನ ಮಾಡಿ ಕಾಣಿಕೆ ನೀಡುತ್ತಾರೆ.[4] ಹದಿನೆಂಟನೇ ಶತಮಾನದಲ್ಲಿ ದೊರೆಗಳ ಕುಲದೇವತೆ ತಲೇಜು ನೆವಾರಿ ಹುಡುಗಿಯೊಬ್ಬಳ ಮೈಮೇಲೆ ಬಂದ ದಿನದಿಂದ ಕುಮಾರಿ ಮೆರವಣಿಗೆ ಆರಂಭವಾಯಿತು. ‘ಕುಮಾರಿ’ಯು ತಲೇಜು ದೇವತೆಯ ಮಾನುಷರೂಪವೆಂದೇ ಜನ ನಂಬಿದ್ದಾರೆ.

ಹುಣ್ಣಿಮೆ ಹಿಂದಿನ ದಿನ ಸಂಜೆ ನೇಪಾಳ ಮಹಾರಾಜರು ಅವಳ ದರ್ಶನಕ್ಕೆ ಬರುತ್ತಾರೆ. ಅವಳ ವಾಸದ ಮನೆಯ ಹೊರಭಾಗದಲ್ಲಿ ಹಸುವನ್ನು ನಿಲ್ಲಿಸಿ ಅದರ ಬಾಲಕ್ಕೆ ಹಗ್ಗವನ್ನು ಕಟ್ಟಿ ಆ ಹಗ್ಗದ ಇನ್ನೊಂದು ತುದಿಯನ್ನು ಮಹಡಿ ಮೇಲೆ ಕಿಟಕಿಯಲ್ಲಿ ನಿಂತಿರುವ “ಕುಮಾರಿ” ಕೈಗೆ ಕೊಡುತ್ತಾರೆ. (ಚಿತ್ರ ೧೪). ಅದನ್ನು ಬ್ರಾಹ್ಮಣನೊಬ್ಬನಿಗೆ ಅಲ್ಲಿಂದಲೇ ದಾನವಾಗಿ ನೀಡಿ ಅಲ್ಲರನ್ನೂ ಹರಸುತ್ತಾಳೆ. ಅಲ್ಲಿ ರಾಜನ ಸಂಕೇತವಾಗಿ ಅವನ ಖಡ್ಗವನ್ನು ತಂದಿರಿಸಲಾಗಿರುತ್ತದೆ. ಅವಳ ರಥವನ್ನು ಭೈರವ, ಗಣೇಶರು ಎಳೆಯುತ್ತಾರೆ ಎಂಬುದಕ್ಕೆ ಸಾಂಕೇತಿಕವಾಗಿ ಅವಳ ರಥದ ಮುಂದೆ ಭೈರವ, ಗಣೇಶರನ್ನು ಸಾಂಕೇತಿಸುವ ಇಬ್ಬರು ಹುಡುಗಿಯರು ಕುಳಿತಿರುತ್ತಾರೆ. (ಈ ಮೂವರೂ ಬೌದ್ಧ ಜಾತಿಯವರೇ.)

ಐವರು ಬೌದ್ಧ ‘ಬ್ರಜಯಾನೀ’ ಪುರೋಹಿತರು ಗಂಟೆ ಬಾರಿಸುತ್ತಿದ್ದಂತೆ ಮಹಡಿಯಿಂದ “ಕುಮಾರಿ”ಯನ್ನು ಎತ್ತಿಕೊಂಡು ಕೆಳಗೆ ಇಳಿದು ಬರುತ್ತಾರೆ. (ಚಿತ್ರ ೧೩). ಆಗ ಭೈರವನ ತೃಪ್ತಿಗಾಗಿ ಮೇಕೆಯ ಬಲಿ ನಡೆಯುತ್ತದೆ. ಆ ಮೂರು ರಥಗಳ (ಗಣೇಶ, ಭೈರವ, ಕುಮಾರಿ) ಮೆರವಣಿಗೆ ಬೇರೆ ಬೇರೆ ಬೀದಿಗಳಲ್ಲಿ ನಡೆಯುತ್ತಿದ್ದಂತೆ ಅಲ್ಲಲ್ಲೇ ಸ್ಥಾಪಿಸಿರುವ ಹನ್ನೆರಡು ಆಕಾಶ ಭೈರವರ ವಿಗ್ರಹಗಳ ಬಾಯಿಂದ ಟೊಳ್ಳು ಕಡ್ಡಿ ಮೂಲಕ ಮದ್ಯವು ಹನಿದಾಗ (ಚಿತ್ರ ೩೭) ಜನ ಅದನ್ನು ನೆಕ್ಕಲು ತಳ್ಳಾಡುತ್ತಾರೆ. ಆ ಮದ್ಯದಲ್ಲಿ ಪುಟ್ಟ ಜೀವಂತ ಮೀನು ಸಿಕ್ಕರಂತೂ ಅದು ಅದೃಷ್ಟವೇ. ಮೆರವಣಿಗೆಯಲ್ಲಿ ಉದ್ದಕ್ಕೂ ದೊರೆಯ “ಖಡ್ಗ” ಜೊತೆಯಲ್ಲಿರುತ್ತದೆ. ಮೆರವಣಿಗೆ ಸಂಜೆಗೆ ಮುಗಿದು ‘ಕುಮಾರಿ ಘರ್’ಗೆ ವಾಪಸಾಗುವ ಹೊತ್ತಿಗೆ ಅಲ್ಲಿಗೆ ಕಿರೀಟಧಾರಿಗಳಾದ ರಾಜ ರಾಣಿಯರೂ ವಿದೇಶಗಳ ಉನ್ನತ ಅಧಿಕಾರಿಗಳೂ ಹಾಜರಿದ್ದು ಮೆರವಣಿಗೆಯನ್ನು ಸ್ವಾಗತಿಸುತ್ತಾರೆ. ರಾಜ ರಾಣಿಯರು “ಕುಮಾರಿ”ಗೆ ನಮಸ್ಕರಿಸಿ ಕಾಣಿಕೆ ಒಪ್ಪಿಸಿದಾಗ “ಇನ್ನೊಂದು ವರ್ಷ ನನ್ನ ರಾಜ್ಯವನ್ನು ನೀನು ಆಳು” ಎಂದು ಅಧಿಕಾರವನ್ನು ನೀಡಿ ಆಶೀರ್ವದಿಸುತ್ತಾಳೆ;[5] ಪ್ರಸಾದವನ್ನು ನೀಡುತ್ತಾಳೆ. ಅವಳ ಮೆರವಣಿಗೆಯ ಬಳಿಕ ಕಾಲ ಭೈರವ ವಿಗ್ರಹ ಸಮೀಪ ನಿಲ್ಲಿಸಿದ್ದ “ನಿಂಗೊ” (ಲಿಂಗಂ) ಕಂಬವನ್ನು ಇಳಿಸಲಾಗುತ್ತದೆ. ಆ ಕಂಬದ ಚಕ್ಕೆಯನ್ನು ಜನ ಅದು ಪವಿತ್ರವೆಂಬ ಭಾವನೆಯಿಂದ ಕೊಂಡೊಯ್ದು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. “ಮಲ್ಲ” ರಾಜರಿಂದ “ಗೊರ್ಖಾ” ರಾಜರಿಗೆ ೧೭೬೮ರಲ್ಲಿ ಅಧಿಕಾರ ಕೊಡಿಸದ್ದು “ಕುಮಾರಿ” ಎಂದೇ ಜನ ನಂಬುತ್ತಾರೆ. ೧೯೫೫ರಲ್ಲಿ ತ್ರಿಭುವನ ಮಹಾರಾಜ, ಮಗ ಮಹೇಮದ್ರ ಇಬ್ಬರೂ ಇಂದ್ರ ಜಾತ್ರಾ ದಿನ ಅವಳ ದರ್ಶನ ಮಾಡಿದಾ “ಕುಮಾರಿ”ಯು ಕಣ್ತಪ್ಪಿನಿಂದ ರಾಜನಿಗೆ ತಿಲಕ ಇಡುವ ಬದಲು ಅವನ ಮಗನಿಗೆ ಇಟ್ಟಳು. ಅದು ಜನರಿಗೆ ‘ಅಪಶಕುನ’ವಾಗಿ ಕಂಡಿತು. ಇದರ ಪರಿಣಾಮವಾಗಿ ಮುಮದಿನ ಎಂಟು ತಿಂಗಳಲ್ಲಿ ರಜ ಸತ್ತು, ಅವನ ಮಗ ಮಹೇಂದ್ರನು ದೊರೆ ಆಗಬೇಕಾಯ್ತು.

“ಕುಮಾರಿ”ಯ ಕೊನೆಯ ಮರೆವಣಿಗೆ ನಡೆದು ಇಂದ್ರಧ್ವಜದ ‘ಲಿಂಗೊ’ ಕಮಬವನ್ನು ಇಳಿಸುವುದು ಹಿನ್ಣಿಮೆಯ ದಿನ’ ಹುಣ್ಣಿಮೆ ಹಿಂದಿನ ರತ್ರಿ ‘ಕುಮಾರಿ’ ಮೆರವಣಿಗೆ ಮುಗಿದ ಬಳಿಕ ಜನರು ಕಟಮಾಮಡೊನಿಮದ ಎಂಟು ಮೈಲಿ ದೂರ ನಡೆದು ಹುಣ್ಣಿಮೆ ದಿನ ಬೆಳಿಗ್ಗೆ ಇಂದ್ರ ಸರೋವರದಲ್ಲಿ ಸ್ನಾನ ಮಾಡುತ್ತಾರೆ. ರಾತ್ರಿ ಅವರು ನಡೆಯುವಾಗ ಜೊತೆಯಲ್ಲಿ ಇಂದ್ರ ಇರುತ್ತಾನೆಂದು ನಂಬುತ್ತಾರೆ. ಹುಣ್ಣಿಮೆ ದಿನ ಇಳಿಸಿದ ‘ಲಿಂಗೊ’ ಕಂಬವನ್ನು ವಾದ್ಯ ಧ್ವನಿಗಳ ಮಧ್ಯೆ ಕೆಳಕ್ಕೆ ಎಳೆದು ಬಾಗಮತಿ ನದಿಯಲ್ಲಿ ಮುಳುಗಿಸಿ, ಬಳಿಕ ಎತ್ತಿ ಕಡಿದು ಅದರ ಚೂರುಗಳನ್ನು ಯಜ್ಞಕುಂಡಕ್ಕೆ ಸಮರ್ಪಿಸುತ್ತಾರೆ. ಅಲ್ಲಿಗೆ ಇಂದ್ರೋತ್ಸವ ಮುಗಿದಂತೆ. ಕಾಠಮಾಂಡೊ ನೆವಾರಿಗಳು ಹಬ್ಬಕ್ಕೆ ತಮ್ಮ ಬಂಧುಗಳನ್ನು ಕರೆಯಿಸುತ್ತಾರೆ. ಕಳೆದ ವರ್ಷ ಸತ್ತ ತಮ್ಮ ಬಂಧುಗಳ ನೆನಪಿಗಗಿ ಇಂದ್ರೋತ್ಸವದ ದಿನ ದೀಪ ಬೆಳಗಿಸುತ್ತಾರೆ.

ನಾನು ‘ಇಂದ್ರ ಜಾತ್ರಾ’ದ ಕುಮಾರಿ ಮೆರವಣಿಗೆ ನೋಡಿದೆ. ‘ಕುಮಾರಿ ಘರ್’ ಮನೆ ಮುಮದೆ ಅಕ್ಷರಶಃ ಸಾವಿರಾರು ಜನರು, ವಿದೇಶಿ ಪ್ರವಾಸಿಗರು ಕುಗೂಹಲದಿಮದ ಸೇರದ್ದರು. ಒಬ್ಬನು ಇಂದ್ರ ಐರಾವತದಂತೆ ಆನೆ ವೇಷ ಧರಿಸಿ ಜನಗಳ ಮಧ್ಯೆ ಕುಣಿಯುತ್ತ ಅವರ ಮೇಲೆ ನುಗ್ಗುತ್ತಿದ್ದುದು ವಿನೋದಕಾರಿಯಾಗಿತ್ತು ಮಾರನೆಯ ದಿನ ಬೆಳಿಗ್ಗೆ ‘ಕುಮಾರಿ ಘರ್’ಗೆ ಹೋಗಿ ಅಲ್ಲಿನ ಮಹಡಿಯಲ್ಲಿ ಆ ಪುಟ್ಟ ಹುಡುಗಿಯನ್ನು ಹತ್ತಿರದಿಂದ ನೋಡಿದೆ.

“ಕುಮಾರಿ”ಯು ಒಂದು ರೀತಿಯಲ್ಲಿ ಕಾಠಮಾಂಡೊ ನಗರದ ಪೌರ ಚಟುವಟಿಕೆಗಳ ಮುಖ್ಯಸ್ಥೆ, “Mayoress” ಇದ್ದಂತೆ; ಇನ್ನೂ ಸರಿಯಾಗಿ ಹೇಳಬೇಕಾದರೆ ನಗರದ “Guardian Deity” ಇದ್ದಂತೆ.[6] ಆ ನಗರಕ್ಕೆ ಏಕೆ, ಒಂದು ರೀತಿ ಇಡೀ ನೇಪಾಳಕ್ಕೇ “Guardian Deity”. ಅಷ್ಟೇ ಅಲ್ಲ, ರಾಜನಿಗೆ ಅಧಿಕಾರ ನೀಡುವವಳು ಅವಳು.

ಅವಳು ಋತುಮತಿಯಾದ ದಿನದಿಂದ ಅವಳಿಗೆ “ಕುಮಾರಿ” ಪಟ್ಟ ತಪ್ಪುತ್ತದೆ; ಅವಳ ಜಾಗಕ್ಕೆ ಹಿಂದೆ ಹೇಳಿದ ಕ್ರಮದಲ್ಲಿ ಬೇರೊಬ್ಬ ಹುಡುಗಿಯನ್ನು ಆರಿಸುತ್ತಾರೆ. ‘ಕುಮಾರಿ’ಯಾಗಿದ್ದ ಹುಡುಗಿ ಆ ಹೊತ್ತಿಗೆ ಸಾಕಷ್ಟು ಶ್ರೀಮಂತಳೂ ಆಗಿರುತ್ತಾಳೆ. ‘ಜೀವಂತ ದೇವತೆ’ಯೇ ಆಗಿದ್ದ ಹುಡುಗಿಯನ್ನು ಮದುವೆಯಾಗುವ ಹುಡುಗನಿಗೆ ಧೈರ್ಯಬೇಕು. ಅವಳ ಕೌಮಾರ್ಯ ಛೇದನ ಮಾಡುವ ಹುಡುಗ ಸಾಯುತ್ತಾನೆ ಎಂಬ ನಂಬಿಕೆಯೂ ಇರುವುದರಿಂದ ಕುಮಾರಿಯರು ಆಜೀವ ಪರ್ಯಂತ ಅವಿವಾಹಿತೆಯರಾಗಿ ಉಳಿದಿರುವ ಪ್ರಸಂಗಗಳೂ ಉಂಟು. ನಾನು ಕಾಠಮಾಂಡೊದಲ್ಲಿದ್ದಾಗ ಪತ್ರಿಕೆಗಳಲ್ಲಿ ಆ ಬಗ್ಗೆ ಸಾಕಷ್ಟು ವಿವಾದಗಳು ನಡೆದುದನ್ನು ಗಮನಿಸಿದೆ. ಕುಮಾರಿ ಪದ್ಧತಿಯು ಅನಿಷ್ಟಕರ, ಸ್ತ್ರೀತ್ವಕ್ಕೆ ಅಪಮಾನ, ಅದನ್ನು ರದ್ದುಪಡಿಸಿ ಎಂದು ಕೆಲವರು ವಾದಿಸಿದರೂ ಕುಮಾರಿ ಪದ್ಧತಿ ಬಗ್ಗೆ ಅದರ ಪರವಾಗಿ ಪ್ರಬಲವಾಗಿ ಪ್ರತಿಪಾದಿಸುವವರು ಸಾಕಷ್ಟಿರುವುದು ನನ್ನ ಗಮನಕ್ಕೆ ಬಂದಿತು.

“ಕುಮಾರಿ” ಮೆರವಣಿಗೆಯಲ್ಲಿ “ಪಾಂಚೆ ಬಾಜ” ಎಂಬ ಸಾಂಪ್ರದಾಯಕ, ವಿಶೇಷ ಗೌರವದ ವಾದ್ಯಮೇಳವಿರುತ್ತದೆ. ಭಾರತಾದ್ಯಂತ, ಕರ್ನಾಟಕದಲ್ಲೂ ಇದ್ದ “ಪಂಚವಾದ್ಯ”ವೇ, [7] ಐದು ವಾದ್ಯಗಳ ಒಕ್ಕೂಟವೇ “ಪಾಂಚೆ ಬಾಜ” ಅಥವಾ ಪಂಚವಾದ್ಯ. (ಚಿತ್ರ ೧೫ ನೋಡಿ.) ಇದರಲ್ಲಿ ಐದು ನಗಾರಿಗಳು ಸ್ಪಷ್ಟವಾಗಿದೆ. (ಕುಮಾರಿ ಉತ್ಸವದ ಸಂದರ್ಭದಲ್ಲಿ ಹಿಂದೆ ನರಬಲಿಗಳನ್ನು ಕೊಡಲಾಗುತ್ತಿತ್ತೆಂದೂ ವದಂತಿಯಿದೆ.)

ಮಿಥಿಲೆಯ ರಾಜಕೀಯ ಚರಿತ್ರೆಯನ್ನು ನೋಡುವಾಗ ನಾನ್ಯದೇವನು ತುಳಜಾಪುರದಿಂದ (ಅಂದಿನ ಕರ್ನಾಟಕದ, ಇಂದಿನ ಮಹಾರಾಷ್ಟ್ರದ ಒಸ್ಮಾನಾಬಾದ್‌ಜಿಲ್ಲೆ) ತುಳಜಾಭವಾನಿ ದೇವತೆಯ ಮೂರ್ತಿಯೊಂದನ್ನು[8] ಕೊಂಡೊಯ್ದು ಅದನ್ನು ಸಿಮ್ರೌನ್‌ಗಡದಲ್ಲಿ ಸ್ಥಾಪಿಸಿದನು. ಮುಂದೆ ಹರಿಸಿಂಹದೇವನು ತನ್ನ ರಾಜಧಾನಿಯನ್ನು ಭಕ್ತಪುರಕ್ಕೆ ವರ್ಗಾಯಿಸಿದಾಗ ತನ್ನ ಮನೆದೇವತೆಯನ್ನು ಅಲ್ಲಿಗೆ ಕೊಂಡೊಯ್ದು ಅಲ್ಲಿ ಸ್ಥಾಪಿಸಿದ ವಿಷಯವನ್ನಾಗಲೇ ಹಿಂದೆ ಪ್ರಸ್ತಾಪಿಸಲಾಗಿದೆ. ‘ತಲೇಜು, ‘ತಲೆ’ ಎಂದು ಕರೆಯಲ್ಪಡುವ ಆ ದೇವತೆಯು ಮುಂದೆ ಮಲ್ಲ, ಗೊರ್ಖಾ ದೊರೆಗಳ ಮನೆ ದೇವತೆಯಾಗಿಯೂ ಪರಿಣಿಸಿದಳು. ಆಕೆಯ ದೇವಾಲಯಗಳು ಭಕ್ತಪುರದಲ್ಲಲ್ಲದೆ ಅರಮನೆಗಳ ಭಾಗಗಳಾಗಿ ಕಾಠಮಾಂಡೊ, ಪಾಟಣ್‌ಗಳಲ್ಲೂ ಇವೆ. ಭಕ್ತಪುರದ ದೇವಾಲಯದಲ್ಲಿ ಅವಳ ವಿಗ್ರಹವಿಲ್ಲ.

ಮುಂದಿನದು ಅತ್ಯಂತ ಸ್ವಾರಸ್ಯದ ಸಂಗತಿ. ತುಳಜಾ ಭವಾನಿಯು ಮೂಲತಃ ಪ್ರಾಚೀನ ಕರ್ನಾಟಕದ ತುಳಜಾಪುರದ ದೇವತೆ (ಈಗ ತುಳಜಾಪುರವು ಮಹಾರಾಷ್ಟ್ರದ ಒಸ್ಮಾನಾಬಾದ್‌ಜಿಲ್ಲೆಯಲ್ಲಿದೆ.) ನೇಪಾಳದ ತುಳಜಾ ಅಥವಾ ತಲೇಜು ದೇವಾಲಯಗಳ ಸಮೀಪಕ್ಕೆ ಯಾವ ವಿದೇಶಿಯನಿಗೂ ಪ್ರವೇಶವಿಲ್ಲ; ಗರ್ಭಗುಡಿ ವರ್ಷದುದ್ದಕ್ಕೂ ಮುಚ್ಚಿರುತ್ತದೆ. ವರ್ಷಕ್ಕೊಮ್ಮೆ ಚಾಡಪರ್ವದಲ್ಲಿ (ದಸರಾ) ಅರ್ಚಕರು, ರಾಜರು ಮಾತ್ರ ಹೋಗಿ ಅದರ ಪೂಜೆ ಮಾಡುವುದರಿಂದ ಅದನ್ನು ‘ನಿಗೂಢ ದೇವತೆ’ಯೆಂದೇ (Mysterious Goddess) ಕರೆಯಲಾಗಿದೆ. ಹಿಂದೂ ಸಾರ್ವಜನಿಕರಿಗೆ ಆ ಒಂದು ದಿನ ದೇವಿಯ ದರ್ಶನ ಉಂಟು. ಸ್ವಾರಸ್ಯದ ಸಂಗತಿಯೆಂದರೆ, “ಕುಮಾರಿ”ಯು ತಲೇಜು ದೇವತೆಯ ಅವತಾರವೆಂಬ ನಂಬಿಕೆ.[9] ಹದನೆಂಟನೇ ಶತಮಾನದಲ್ಲಿ ನೇಪಾಳಿ ದೊರೆಗಳ ಕುಲದೇವತೆಯಾದ ತಲೇಜುವು ನೆವಾರಿ ಹುಡುಗಿಯೊಬ್ಬಳ ಮೈಮೇಲೆ ಬಂದುದರಿಂದ ಆ ಅವಿವಾಹಿತ ಹುಡುಗಿ “ಕುಮಾರಿ”ಯೆನ್ನಿಸಿಕೊಂಡಳು. ಅವಳಿಂದ. “ಕುಮಾರಿ” ಪಂಥ ಆರಂಭವಾಯಿತು. ಆ “ಕುಮಾರಿ”ಯೇ ನೇಪಾಳದ ನಿಜವಾದ ಚಕ್ರವರ್ತಿನಿ. ಅವಳು ಇಂದ್ರ ಜಾತ್ರಾ ಸಮಯದಲ್ಲಿ ನೇಪಾಳದ ರಾಜನಿಗೆ ಹರಸಿ, ಆತನ ಹಣೆಗೆ ತಿಲಕವಿಟ್ಟು ನೇಪಾಳನ್ನು ಒಂದು ವರ್ಷದ ಬಳಿಕ ನವೀಕರಿಸಿ ಮತ್ತೆ ರಾಜನಿಗೆ ನೀಡುತ್ತಾಳೆ. ತಲೇಜು ಭವಾನಿಯೇ “ಕುಮಾರಿ”.[10]

ಎಂದರೆ, ಸೈದ್ಧಾಂತಿಕವಾಗಿಯಾದರೂ ಇಂದಿನ ನೇಪಾಳದ ದೊರೆ ಆಳುತ್ತಿರುವುದು ಮೂಲತಃ ಕರ್ನಾಟಕದವಳಾದ ದೇವಿಯ ಆಜ್ಞಾನುಸಾರವಾಗಿ. ಅವನು ಪ್ರತಿವರ್ಷ ಇಂದ್ರ ಜಾತ್ರಾ ಸಂದರ್ಭದಲ್ಲಿ ‘ಕುಮಾರಿ’ಯನ್ನು (ಅರ್ಥಾತ್‌ತುಳಜಾ ಭವಾನಿಯನ್ನು) ಸಕಲ ರಾಜಮರ್ಯಾದೆಯೊಡನೆ ದರ್ಶನ ಮಾಡಿ, ಕಾಣಿಕೆ ನೀಡಿ ಆ ಮುಂದಿನ ವರ್ಷ ರಾಜ್ಯವನ್ನಾಳಲು ಕುಮಾರಿಯಿಂದ ಅನುಜ್ಞೆ ಪಡೆಯಬೇಕು.

ಇದು ಆಕಸ್ಮಿಕ ಹೋಲಿಕೆ ವಿಜಯನಗರದ ದೊರೆಗಳಿಗಿಂತ ಹಿಂದಿನ ಹಂಪಿ ಪ್ರದೇಶಕ್ಕೆ ನಿಜವಾದ ದೊರೆ ವಿರೂಪಾಕ್ಷ ದೈವವೇ ಎಂದು ಜನ ನಂಬಿದ್ದರು. ನೂರು ಚದರ ಮೈಲು ವಿಸ್ತೀರ್ಣದ “ಪಂಪಾಪುರ”ದ ನಿಜವಾದ ಒಡೆಯ ವಿರೂಪಾಕ್ಷನೇ ಆಗಿದ್ದನು. ಹಂಪಿಯ ಮೇಲೆ ಯಾವುದೇ ಮನುಷ್ಯ ರಾಜನಿಗೂ ಅಧಿಕಾರವಿರಲಿಲ್ಲ. ೧೩೩೬ ರಿಂದ ಆಳಿದ ವಿಜಯನಗರದ ದೊರೆಗಳು ಮೊದಮೊದಲು ವಿರೂಪಾಕ್ಷನೇ ತಮ್ಮ ರಾಜ್ಯದ ನಿಜವಾದ ದೊರೆಯೆಂದೂ ತಾವು ಅವನ ಮಾನುಷ ಪ್ರತಿನಿಧಿಗಳೆಂದೂ ಭಾವಿಸಿದ್ದರು. ಕಾಶಿಯ ಜನ ತೀರ ಈಚಿನವರೆಗೆ ಕಾಶಿಯ ನಿಜವಾದ ದೊರೆ ವಿಶ್ವೇಶ್ವರ ಎಂದೂ ನಂಬಿದ್ದರು.[11] ನೇಪಾಳದ ಇಂದಿನ ನಂಬಿಕೆಗೂ ಮೇಲಿನ ನಂಬಿಕೆಗೂ ಇರುವ ದಟ್ಟ ಹೋಲಿಕೆ ಸ್ಪಷ್ಟವಾಗಿಯೇ ಇದೆ. (ಆಕಸ್ಮಿಕ, ಆದರೂ ಗಮನಾರ್ಹ.)

 

[1] Rishikesh Raj Regmi : Khatamandu, Patan and Bhaktapur.

[2] ವಿವರಗಳು : Mary M. Anderson ಅವರ The Festivals of Nepal ಕೃತಿಯಿಂದ.

[3] ಹಿಂದೆ ‘ಕೌಲ’ ಎಂಬ ಹೆಸರಿನ ವಾಮಾಚಾರದ ಪಂಥವಿತ್ತು. ಅದರಲ್ಲಿ ಪೂರ್ವ ಕೌಳರು ಸ್ತ್ರೀ ಯೋನಿಯ ಚಿತ್ರವನ್ನು ಪೂಜಿಸಿದರೆ ಉತ್ತರ ಕೌಳರು ಸ್ತ್ರೀಯ ಯೋನಿಯನ್ನೇ ಪೂಜಿಸುತ್ತಿದ್ದರು. (ನೋಡಿ: ಎಂ. ಚಿದಾನಂದಮೂರ್ತಿ: ‘ಕೌಳರು – ಒಂದು ವಿವೇಚನೆ’. ಸಂಶೋಧನ ತರಂಗ, ಪು. ೮೦.) ಕರ್ನಾಟಕದಲ್ಲಿ ತೆರೆದ ಯೋನಿಯ ‘ಲಜ್ಜಾ ಗೌರಿ’ ಎಂದು ಜನ ಕರೆಯುವ ಶಿಲ್ಪಗಳು ಹಲವೆಡೆ ದೊರೆತಿವೆ. ಅವು ಮೂಲತಃ ಯಾವುದೋ ತಾಂತ್ರಿಕಾರಾಧನೆಯ ಫಲಶಕ್ತಿ ದೇವತೆಯ ಕುರುಹುಗಳಿರಬೇಕು.

[4] Dietmar Frank : Dream land Nepal ಕೃತಿಯಿಂದ. ನೆವಾರಿ ಬೌದ್ಧರು ಅವಳನ್ನು ಬೌದ್ಧರ ‘ವಜ್ರದೇವಿ’ ಎಂದು ಭಾವಿಸುತ್ತಾರೆ. (David N. Geonllner : Monk, Household and Tantric Priest, Newar Buddhism and its hierarchy of ritual, P. 81). ಈ ಕೃತಿಯತ್ತ ಗಮನ ಸೆಳೆದವರು ಡಾ. ಎಸ್. ನಾಗರಾಜ್.

[5] “It is believed that after receiving a tika (ಟಿಕ = ಕುಂಕುಮ) from the living Goddess, the blessing empowers the King to rule the country peacefully for the rest of the year” – The Kathamandu Post ಪತ್ರಿಕೆ (೨೬.೯.೨೦೦೨)

“During Indra – Jatra, Kumari symbolically bestows upon the King of Nepal the right to rule for the coming year by placing the sacred red ಟಿಕ mark on his forehead as her blessing.” – Mary M. Anderson : The Festivals of Nepal, p. 133. ‘ಕುಮಾರಿ ಘರ್’ ಮತ್ತು ಅರಮನೆಗಳು ಅಕ್ಕಪಕ್ಕದಲ್ಲಿ ನಗರದ ಕೇಂದ್ರದಲ್ಲಿವೆ: ಕುಮಾರಿ ಮತ್ತು ರಾಜ ಇವರು ರಾಜ್ಯದ ಕೇಂದ್ರಗಳು ಎಂಬ ಸಂಕೇತಿಕ ಅರ್ಥ ಅದು.

ಭಕ್ತಪುರದಲ್ಲಿ ವಿಜಯದಶಮಿ ದಿನ ಕುಮಾರಿಯನ್ನು ರಜಮರ್ಯಾದೆಗಳೊಮದಿಗೆ ಮೆರವಣಿಗೆ ಮಾಡಿಯಾದ ಮೇಲೆ, ಅವಳು ನಾಡಿನ ಭವಿಷ್ಯವನ್ನು ನುಡಿಯುತ್ತಾಳೆ. ಭಕ್ತಪುರದ ತಲೇಜು ದೇವಲಯದಲ್ಲಿ ವಿಗ್ರಹವಿಲ್ಲದಿದ್ದರೂ ಈ ಕುಮಾರಿಯೇ ತಲೇಜು ಎಂದು ಜನ ಭಾವಿಸುತ್ತಾರೆ.

[6] (Ed) B. R. Bajracharya, S. R. Sharma and S. R. Bakshi : Cultural History of Nepal.

[7] ‘ಪಂಚವಾದ್ಯ’ ವಿವರಗಳಿಗೆ ನೋಡಿ – ಎಂ. ಚಿದಾನಂದಮೂರ್ತಿ: ‘ಪಂಚವಾದ್ಯ ಒಂದು ಟಿಪ್ಪಣಿ’. ಸಂಶೋಧನ ತರಂಗ, ಪು. ೨೪೬.

[8] ತುಳಜಾಪುರದ ತುಳಜಾಭವಾನಿಯನ್ನು “ಜಗದಂಬಾ ಮಹಾಭವಾನಿ”ಯೆಂದು ಭಾವಿಸಿ ಜನರು ಪೂಜಿಸುತ್ತಾರೆ. ಅವಳು ಮಹಿಷಾಸುರ ಮರ್ದಿನಿಯಾಗಿ ದುರ್ಗೆಯೇ. ತುಳಜಾಭವಾನಿ ಜೊತೆ ಹಳ್ಳಿಗರ ಗ್ರಾಮ್ಯ ದೇವತೆ ಭರಾಡಿಯನ್ನು ಸಮೀಕರಿಸುತ್ತಾರೆ. ಭರಾಡಿಯು (ಜಗದಂಬೆಯು) ಮಹಿಷಾಸುರನನ್ನು (ಕೋಣವನ್ನು) ಪ್ರೀತಿಸಿ ಮದುವೆಯಾಗಿ ಬಳಿಕ ಆ ರಾಕ್ಷಸನನ್ನು ಕೊಲ್ಲುತ್ತಾಳೆ. ಈಗಲೂ ಭರಾಡೀ ಹೆಸರಲ್ಲಿ ಕಾಡಿಗೆ ಹೋಗಿ ಬೇಟೆಯಾಡಿ ಅಲ್ಲಿ ಕೊಂದ ಪ್ರಾಣಿಗಳನ್ನು ಹಳ್ಳಿಹಳ ಹೆಂಗಸರು ಪೂಜಿಸುತ್ತಾರೆ.

ಶಿವನ ಪತ್ನಿ ದಾಕ್ಷಾಯಣಿ ತನ್ನ ತಂದೆಯಿಂದಾದ ಅವಮಾನ ತಾಳಲಾರದೆ ಬೆಂಕಿಗೆ ಬಿದ್ದಾಗ ಅವಳ ಸುಟ್ಟ ದೇಹವನ್ನು ಶಿವನು ಹೊತ್ತು ತಂದನೆಂದೂ, ಅವಳ ದೇಹದ ಒಂದು ಭಾಗ ಬಿದ್ದ ಜಾಗವೇ ತುಳಜಾಪುರವೆಂದು ಹೇಳುತ್ತಾರೆ.

ಶಿವಾಜಿಯ ಮನೆ ದೇವತೆ ತುಳಜಾ ಭವಾನಿ; ಮತ್ತು ಅವಳ ಹೆಸರಿನ ದೇವಾಲಯವನ್ನು ಅವನು ತನ್ನ ಪ್ರತಾಪಗಡ ಕೋಟೆಯಲ್ಲಿ ಕಟ್ಟಿಸಿದನು, ತುಳಜಾಪುರದ ತುಳಜಾ ಭವಾನಿಯು ಅಷ್ಟ ಬಾಹುಗಳ, ಹುಲಿ ಮೇಲೆ ಸವಾರಿ ಮಾಡುವ ಮಹಿಷಾಸುರ ಮರ್ದಿನಿಯೇ ಆಗಿದ್ದಾಳೆ. (ವಿವರಗಳು, ಅನುಬಂಧ – ೨ರಲ್ಲಿ)

[9] Mary M. Anderson : of Nepal, p.20.

[10] “A girl at her pre – puberty stage is selected from among the Bajrachari families of the Buddhists to give her the divine position, who is believed to be an incarnation of Hindu patron Goddess Taleju Bhavani….”

The Khatmandu post. 24.09.2002. “It is believed that after receiving a ಟಿಕ from the Living Goddess, the blessing empowers the King to rule the country peacefully for the rest of the year.’’ ಅದೇ, ೨೬. ೯. ೨೦೦೨.

[11] ಎಂ. ಚಿದಾನಂದಮೂರ್ತಿ ‘ಪಂಪಾಪರ (ಹಂಪಿ) ಕೆಲವು ಅಭಿಜ್ಞಗಳು…’ (ಹೊಸತು ಹೊಸತು, ಪು. ೪೩೬ – ೭);Baidyanath Saraswathi : Kashi (Myth and Reality of a classical cultural tradition, P.30) – “The popular belief is that this (ಕಾಶಿ) is the capital of ಶಿವ and hence no one else can be the Overlord of ಕಾಶಿ”