ಭಾರತಕ್ಕೆ ಕಾಶಿಯ ವಿಶ್ವೇಶ್ವರ ಮಂದಿರ ಇದ್ದಂತೆ ನೇಪಾಳಕ್ಕೆ ಕಾಠಮಾಂಡೊದ ಪಶುಪತಿನಾಥ ಮಹಾದೇವನ ಮಂದಿರ. ನೇಪಾಳದ ಮಹಾರಾಜರ ಆರಾಧ್ಯದೈವ; ನೇಪಾಳಿಗಳ ಜೀವನ ಕೇಂದ್ರ; ಅಷ್ಟೇ ಏಕೆ, ಭಾರತೀಯರಿಗೂ ಕಾಶಿ ವಿಶ್ವೇಶ್ವರನಷ್ಟೇ ಪೂಜ್ಯ ದೇವತೆ ಪಶುಪತಿ ಮಹಾದೇವ. ಈ ದೇವತೆ ಕ್ರಿ.ಶ. ಆರನೇ ಶತಮಾನದಷ್ಟು ಹಳೆಯದು.

ಕಾಠಮಾಂಡೊ ನಗರದ ಅಂಚಿನಲ್ಲಿ ಹರಿಯುವ ಬಾಗಮತಿ (ಭಾಗ್ಯಮತಿ) ನದಿಯ ಬಲದಂಡೆಯ ಮೇಲಿರುವ ಆ ಭವ್ಯ ದೇವಾಲಯವು ವಾಸ್ತು ಮತ್ತು ಶಿಲ್ಪಗಳ ದೃಷ್ಟಿಯಿಂದ ಒಂದು ಅನನ್ಯ ರಚನೆ. ನೇಪಾಳದ ಕುಸುರಿ ಕಾಷ್ಠ ಕಲೆಯ ಪರಿಪೂರ್ಣ ರೂಪವನ್ನು ಅಲ್ಲಿ ನೋಡಬಹುದು. ಅದನ್ನು ದೇವಾಲಯವೆನ್ನುವುದಕ್ಕಿಂತ ಅದು ಅಕ್ಷರಶಃ ನೂರಾರು ದೊಡ್ಡ ಚಿಕ್ಕ ಗುಡಿಗಳ, ಬಯಲು ಶಿವಲಿಂಗಗಳ, ಶಿಲ್ಪಗಳ, ಶಾಸನಗಳ ಒಂದು ದೇವಾಲಯ ಸಂಕೀರ್ಣ. (ಚಿತ್ರ ೯) ಆ ಸಂಕೀರ್ಣದ ಕೇಂದ್ರ ಬಿಂದುವಾದ ಪಶುಪತಿಯ ದರ್ಶನಕ್ಕೆ ಜನರ ದೊಡ್ಡ ಸಾಲು ಯಾವಾಗಲೂ ಇರುತ್ತದೆ. ದೇವಾಲಯದ ಆವರಣದಲ್ಲಿರುವ ಬೇರೆ ಬೇರೆ ದೇವಾಲಯಗಳ ಮಂಟಪಗಳಲ್ಲಿ ವೇದಾಭ್ಯಾಸ, ವೇದಘೋಷ ನಡೆಯುತ್ತಿರುತ್ತವೆ. ಪಕ್ಕದಲ್ಲೇ ಹರಿಯುವ ಬಾಗಮತಿ ನದಿಯ ಬಲದಂಡೆಯ ಕೆಳಗೆ, ನೀರ ಹರಿವಿನ ಸ್ವಲ್ಪ ಮೇಲಕ್ಕೆ ಉದ್ದಕ್ಕೂ ಕಟ್ಟಿರುವ ಶಿಲಾವೇದಿಕೆ ಒಂದು ಶಾಶ್ವತ ಸ್ಮಶಾನ. ಅಲ್ಲಿ ಯಾವಾಗಲೂ ಚಿತೆಗಳು ಉರಿಯುತ್ತಿರುತ್ತವೆ. ಬೇರೆ ಬೇರೆ ವರ್ಗದ ಜನರಿಗೆ ಚಿತೆಯ ಘಟ್ಟಗಳು ಅಲ್ಲಿ ನಿಗದಿಯಾಗಿರುತ್ತವೆ. ಚಿತಾಭಸ್ಮವನ್ನು ನದಿಯಲ್ಲಿ ಬಿಡಲಾಗುತ್ತದೆ. ಸಾವಿರಾರು ಭಕ್ತ ಜನರು ಬಂದು ಹೋಗುವ ಜಾಗವಾದರೂ ನದಿಯ ಸ್ನಾನ ಘಟ್ಟವು ಒಂದು ವೇದಿಕೆ, ಚಿತೆಗಳ ವೇದಿಕೆಯಾದರೂ ಸರ್ಕಾರವು ಇಡೀ ದೇವಾಲಯದ ಆವರಣವನ್ನು ಶುಭ್ರವಾಗಿ ಇಟ್ಟಿರುವುದು ಗಮನಾರ್ಹ. ಆ ದೇವಾಲಯ ಸಮುಚ್ಛಯವನ್ನು ವಿಶ್ವಪರಂಪರೆ ಪಟ್ಟಿಗೆ ಯುನೆಸ್ಕೊ ಸೇರಿಸಿದೆ. ದೇವಾಲಯದ ಆವರಣದೊಳಕ್ಕೆ ದೇವಾಲಯಕ್ಕೆ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲವೆಂದು ನಾಮಫಲಕವನ್ನು ಹಾಕಿರುವುದರಿಂದ ವಿದೇಶೀಯರು ಬಾಗಮತಿ ಎಡದಂಡೆಯ ಮೇಲಿಂದ ದೇವಾಲಯದ ಹೊರಭಾಗವನ್ನು ಮಾತ್ರ ನೋಡಲು ಸಾಧ್ಯ. ಆದರೆ ಅಸ್ಪ್ರಶ್ಯರಿಗೆ ನೇಪಾಳದ ಎಲ್ಲ ದೇವಾಲಯಗಳಿಗೆ ಪ್ರವೇಶವುಂಟು; ಹಲವು ದೇವಾಲಯಗಳಲ್ಲಿ ದಲಿತರು ಅರ್ಚಕರೂ ಆಗಿದ್ದಾರೆ. ನೇಪಾಳವು ದಲಿತರನ್ನು ಹಿಂದೂಗಳೆಂದೇ ಭಾವಿಸಿರುವುದು ಶ್ಲಾಘನೀಯವಾಗಿದೆ. ನ್ಯಾಯಬದ್ಧವೂ ಆಗಿದೆ. (ಸ್ಪ್ರಶ್ಯ, ಅಸ್ಪ್ರಶ್ಯ ಭೇದ ಈಗ ಅಳಿಸಿಹೋಗುತ್ತಿದೆ.)

ಒಂದು ವಿಶೇಷವೆಂದರೆ ದೇವಾಲಯಗಳ ಪ್ರಾಕಾರಗಳ ಒಳಭಾಗಗಳಿಗೆ ವಿದ್ಯುಚ್ಛಕ್ತಿ ಬರಲು ಅವಕಾಶ ಮಾಡಿಕೊಟ್ಟಿಲ್ಲ. ವಿದ್ಯುಚ್ಛಕ್ತಿ ನಮ್ಮ ಸಂಸ್ಕೃತಿಗೆ ಈಚೆಗೆ ಬಂದದ್ದು; ಈಚೆಗೆ ಬಂದದ್ದೆಲ್ಲಾ ಮೈಲಿಗೆ ತಾನೇ! ಗರ್ಭಗುಡಿಗಳಲ್ಲಿ ಬರೀ ನಂದಾದೀವಿಗೆಗಳು ಉರಿಯಲು ಅವಕಾಶವಿದೆ. ಆದರೆ ಗರ್ಭಗುಡಿಯಿಂದ ಹೊರಗೆ ಮಾತ್ರವಲ್ಲ, ದೇವಾಲಯದ ಪ್ರಾಕಾರದ ಹೊರಗೆ ಮಾತ್ರ ವಿದ್ಯುದ್ದೀಪಗಳು ಉಂಟು.

ನದಿಯ ಬಲಗಡೆ ದಂಡೆಯಿಂದ ಸೇತುವೆ ಮೂಲಕ ಎಡದಂಡೆಗೆ ಹೋದರೆ ಅಲ್ಲೂ ಚಿಕ್ಕ ದೊಡ್ಡ ದೇವಾಲಯಗಳಿವೆ. ಎಲ್ಲ ಕಡೆಗೂ ವಿವಿಧ ಬಗೆಯ ಸನ್ಯಾಸಿಗಳು ಕಾಣಿಸುತ್ತಾರೆ. ನಾನು ಕಂಡ ಒಬ್ಬ ಸನ್ಯಾಸಿ ಹುಲಿ ಚರ್ಮದ ಬಣ್ಣದ ವಸ್ತ್ರವನ್ನುಟ್ಟು, ಜಟಾಧಾರಿಯಾಗಿ ಕೈಯಲ್ಲಿ ನಾಗರಹಾವಿನ ಹೆಡಯ ತುದಿಯ ದಂಡವನ್ನು ಹಿಡಿದಿದ್ದನು. ನನಗೆ ನೇಪಾಳಿ ಅಥವಾ ಹಿಂದಿ ಗೊತ್ತಿರಲಿಲ್ಲವಾದ ಕಾರಣ ಆತನ ಜೊತೆ ಮಾತನಾಡಿ ಸನ್ಯಾಸಿಗಳ ಒಳ ಪ್ರಪಂಚದ ಅರಿವನ್ನು ಪಡೆಯಲಾಗದ್ದಕ್ಕೆ ವ್ಯಥೆ ಪಟ್ಟೆ. ಎಡದಂಡೆಯಲ್ಲೇ ಒಂದು ಚಿಕ್ಕ ಗುಡ್ಡ ಇದೆ; ಅಲ್ಲೆಲ್ಲ ಬಹು ಎತ್ತರದ ಮರಗಳು. ಆ ಮರಗಳ ಮಧ್ಯದಲ್ಲೆಲ್ಲ ಎಲ್ಲಿ ನೋಡಿದರಲ್ಲಿ ಗುಡಿಗಳು, ಅವುಗಳನ್ನು ಕಟ್ಟಿಸಿದವರ ಶಾಸನಗಳು. ಆ ಗುಡ್ಡವನ್ನು ಇಳಿದು ಸುಮಾರು ಅರ್ಧ ಕಿಲೋ ಮೀಟರ್ ಹೋದರೆ ಅಲ್ಲೇ ಬಲಗಡೆ “ಗುಹೇಶ್ವರಿ” ಎಂದು ಜನ ಕರೆಯುವ ದೇವಾಲಯ: ಅದರ ನಿಜವಾದ ಹೆಸರು “ಗುಹ್ಯೇಶ್ವರಿ” ಇರಬೇಕು ಎಂಬ ನನ್ನ ಊಹೆ ಮುಂದೆ ನಿಜವಾಯ್ತು (ಚಿತ್ರ ೮). ಹಾಸುಗಲ್ಲಿನ ಮೇಲೆ ಕೆತ್ತಿರುವ ಸ್ತ್ರೀಯೋನಿಯಾಕಾರದ ರೇಖಾ ಚಿತ್ರವನ್ನು ಅಲ್ಲಿ ಪೂಜಿಸುವಂತೆ ತೋರಿತು. ವಿಶೇಷವಾಗಿ ಸ್ತ್ರೀಯರು ಆ ಚಿತ್ರದ ಮೇಲೆಲ್ಲ ಹೂವು ಕುಂಕುಮ ಹರಡಿದ್ದರಿಂದ ಆ ಕೆತ್ತನೆ ಏನೆಂಬುದು ಸ್ಪಷ್ಟವಾಗಲಿಲ್ಲ. ರಹಸ್ಯ ನಿಗೂಢ ವಾಮಾಚಾರದ ತಾಂತ್ರಿಕ ಪಂಥಗಳ ಕೇಂದ್ರ ಅದು ಹಿಂದೊಮ್ಮೆ ಆಗಿದ್ದಿರಬೇಕೆಂಬಲ್ಲಿ ಅನುಮಾನವಿಲ್ಲ. ದಕ್ಷನು ಅಳಿಯ ಶಿವನನ್ನು ಆಹ್ವಾನಿಸದೆ ಯಜ್ಞ ಮಾಡಿದುದನ್ನು ಪ್ರತಿಭಟಿಸಿ ಅವನ ಮಗಳು ದಾಕ್ಷಾಯಿಣಿ (ಸತಿ) ಅಗ್ನಿ ಪ್ರವೇಶ ಮಾಡಿದಳೆಂದೂ, ತನ್ನ ಪತ್ನಿಯ ಸುಟ್ಟ ದೇಹವನ್ನು ಶಿವ ಹೊತ್ತು ತರುವಾಗ ಅವಳ ಯೋನಿ ಭಾಗವು ಬಾಗಮತಿ ದಡದಲ್ಲಿ ಬಿದ್ದ ಜಾಗವೇ ‘ಗುಹ್ಯೇಶ್ವರಿ’ಯೆಂದೂ ಅವಳ ಶವದ ಉಗುರಿನ ಭಾಗವು ಬಿದ್ದ ಜಾಗವೇ ಕೋಲ್ಕತ್ತದ ಕಾಳಿ ದೇವಾಲಯವೆಂದೂ ಸ್ಥಳ ಪುರಾಣಗಳಿವೆ. ಗುಹ್ಯೇಶ್ವರಿ ಅರ್ಚಕರು ಅರ್ಸ್ಪಶ್ಯರು.

ಪಶುಪತಿ ಮಹಾದೇವನ ಲಿಂಗದ ನಾಲ್ಕೂ ಕಡೆ ಶಿವನ ನಾಲ್ಕು ಮುಖಗಳನ್ನು ಕೆತ್ತಿದ್ದಾರೆ. ಅವು ಹೀಗಿವೆ – ದಕ್ಷಿಣದ್ದು ಅಘೋರ ಮುಖ: ಇದಕ್ಕೆ ರುದ್ರಾಕ್ಷಿ ಮಾಲೆ; ಪೂರ್ವದ್ದು ತತ್ಪುರುಷ ಮುಖ: ಶಿರದಲ್ಲಿ ಜಟೆ ಇದೆ; ಉತ್ತರದ್ದು ವಾಮದೇವ ಮುಖ: ಇದು ಅರ್ಧನಾರೀಶ್ವರ ರೂಪದ್ದು; ಪಶ್ಚಿಮದ್ದು ಸದ್ಯೋಜಾತ ಮುಖ: ಇದಕ್ಕೆ ಕಿರೀಟವುಂಟು.[1] ತುದಿಯಲ್ಲಿ ಬರಿಯ ಗೋಳಾಕಾರವಿದೆ: ಅದು ಶಿವನ ಐದನೆಯ ಮುಖವಾದ ಈಶಾನ. (ಕೆಲವೆಡೆ ಬಹು ವಿರಳವಾಗಿ ಐದನೆಯ ಈಶಾನ ಮುಖವನ್ನು ಲಿಂಗದ ತುದಿಯ ಮೇಲೆ ಬಿಡಿಸಿರುವುದುಂಟು). ಇಂಥ ಶಿವಲಿಂಗಗಳನ್ನು ‘ಮುಖ ಲಿಂಗ’ವೆಂದು, ‘ಚತುರ್ಮುಖ ಲಿಂಗ’ವೆಂದು, ಐದು ಮುಖಗಳನ್ನೂ ಕೆತ್ತಿದ್ದರೆ ‘ಪಂಚಮುಖ ಲಿಂಗ’ವೆಂದು ಕರೆಯುತ್ತಾರೆ. ಪಶುಪತಿ ದೇವಸ್ಥಾನಕ್ಕೆ ತೀರ ಸಮೀಪದಲ್ಲಿರುವ ಒಂದು ಪುಟ್ಟ ಪುಷ್ಕರಣಿಯ ಮೇಲೆ ಶಿವಲಿಂಗಾಕಾರದ ಶಿಲೆಯ ನಾಲ್ಕೂ ಮುಖಗಳಲ್ಲಿ ನಾಲ್ಕು ಬುದ್ಧನ ವಿಗ್ರಹಗಳನ್ನು ಕೆತ್ತಿರುವುದನ್ನು ಕಾಣಬಹುದು. ಕಾಠಮಾಂಡೊದ ಇತರ ಶಿವದೇವಾಲಯಗಳಲ್ಲೂ (ಉದಾ.ಗೆ ಬಾಣೇಶ್ವರ) ಚತುರ್ಮುಖ ಲಿಂಗಗಳನ್ನು ಅಂತೆಯೇ ಚತುರ್ಮುಖ ಬೌದ್ಧ ಶಿಲ್ಪಗಳನ್ನು ಕಾಣಬಹುದು. ಸ್ವಯಂಭು ಬೌದ್ಧ ದೇವಾಲಯದ ಆವರಣದಲ್ಲಂತೂ ಅಂತಹ ಹಲವು ಚತುರ್ಮುಖ ಬೌದ್ಧ ಶಿಲ್ಪಗಳನ್ನು ಗುರುತಿಸಬಹುದು. (ಕರ್ನಾಟಕದ ಮಹಾಕೂಟದಲ್ಲಿ ಇಂತಹ ಚತುರ್ಮುಖ ಲಿಂಗದ ಶಿಲ್ಪವಿದೆ.)

ಬೌದ್ಧ ಹಿಂದೂ ಧರ್ಮಗಳು ಪರಸ್ಪರ ಬೆರೆತಿರುವುದನ್ನು ನೇಪಾಳದಲ್ಲಿ ಹೆಜ್ಜೆ ಹೆಜ್ಜೆಗೆ ಗುರುತಿಸಬಹುದು. “ನೇಪಾಳಿ ಮಾಹಾತ್ಮ್ಯ” ಹೇಳುವಂತೆ “ಬುದ್ಧನನ್ನು ಪೂಜಿಸಿದರೆ ಶಿವನನ್ನು ಪೂಜಿಸಿದಂತೆ”. ಹಿಂದೂ ದೇವಾಲಯಗಳಲ್ಲಿ ಬೌದ್ಧ ಅರ್ಚಕರೂ ಇದ್ದಾರೆ. ಲಿಂಗಗಳಲ್ಲಿ ಮೂರು ಬಗೆಯುಂಟು:

೧. ಸ್ವಯಂಭೂ – ಸಹಜವಾದ ದಿಣ್ಣೆ

೨. ಸಹಜ ಬಂಡೆಗಳು

೩. ಕೈಯಿಂದ ಕೆತ್ತಿದ ಗೋಳಾಕಾರದ, ಗುಂಡನೆಯ ತುದಿಯ ಕಲ್ಲಿನ (ವಿರಳವಾಗಿ ಮರದ) ಮೂರ್ತಿಗಳು. ಇವುಗಳಲ್ಲಿ ಮುಖ ಕೆತ್ತಿರುವ ಉದಾಹರಣೆಗಳು ಉಂಟು: ಇವೇ ಮೇಲೆ ನೋಡಿದ ‘ಮುಖ ಲಿಂಗ’ಗಳು.

ಪಶುಪತಿನಾಥ ದೇವಾಲಯವು ಸಾಕಷ್ಟು ಪ್ರಾಚೀನವಾದುದು. ಅಲ್ಲಾವುದ್ದೀನ್ ಖಿಲ್ಜಿಯು ೧೨೯೦ – ೧೩೦೦ರ ಸುಮಾರಿನಲ್ಲಿ ನೇಪಾಳದ ಮೇಲೆ ಧಾಳಿ ಮಾಡಿ ಹಲವು ದೇವಾಲಯಗಳನ್ನೂ ಸ್ತೂಪಗಳನ್ನೂ ನಾಶಪಡಿಸಿದನು. ಆ ಸಮಯದಲ್ಲಿ ಮುಸ್ಲಿಮರು ಪಶುಪತಿನಾಥ ದೇವಾಲಯವನ್ನು ನಾಶಪಡಿಸಿ ಅದರ ಮೂಲ ಮೂರ್ತಿಯನ್ನು – ಪಶುಪತಿನಾಥ ಶಿವಲಿಂಗವನ್ನು ವಿರೂಪಗೊಳಿಸಿದರು. ೧೩೪೯ರ ಬಂಗಾಳದ ಸುಲ್ತಾನ್‌ನು ಪಶುಪತಿ ಮತ್ತು ಸ್ವಯಂಭೂ ಬೌದ್ಧ ವಿಹಾರಗಳನ್ನು ಲೂಟಿ ಮಾಡಿದನು. ಆ ಶಿವಲಿಂಗದ ಸ್ಥಾನದಲ್ಲಿ ಜಯಸಿಂಹ ವರ್ಧನ ಮತ್ತು ರಾಮ ವರ್ಧನರೆಂಬ ಸಾಮಂತರಾಜ ಹಾಗೂ ಅವನ ಮಂತ್ರಿಯ ನಿರಂತರ ಪ್ರಯತ್ನದ ಫಲವಾಗಿ ಹೊಸ ಮೂರ್ತಿಯನ್ನು ಕ್ರಿ.ಶ. ೧೩೬೦ರಲ್ಲಿ ಪ್ರತಿಷ್ಠಾಪಿಸಲಾಯಿತು. (ಈಗಿನ ಕಟ್ಟಡ ಕ್ರಿ.ಶ. ೧೬೯೬ರಲ್ಲಿ ಕಟ್ಟಿದ್ದು). ಆ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪೌರೋಹಿತ್ಯ ಕರ್ತವ್ಯವನ್ನು ಮಾಡಿದವನು ಆರಾಧ್ಯಶರ್ಮ ಎಂಬ ದಕ್ಷಿಣ ಭಾರತದ ಬ್ರಾಹ್ಮಣ.[2] ಆರಾಧ್ಯ ಶರ್ಮ ಬ್ರಾಹ್ಮಣ ಕುಟುಂಬವು ಭಕ್ತಪುರಕ್ಕೆ ೨೦ – ೩೦ ಕಿಲೋ ಮೀಟರ್ ದೂರದಲ್ಲಿರುವ ಬನೆಪದಲ್ಲಿ ಹದಿನಾಲ್ಕನೇ ಶತಮಾನದಲ್ಲಿದ್ದಿತು. ಹದಿನಾಲ್ಕನೇ ಶತಮಾನದ ಪಶುಪತಿ – ಗಂಚಾನನಿ ಶಾಸನದಲ್ಲಿ ಮೂವರು ಆರಾಧ್ಯರ ಹೆಸರುಗಳು ದಾಖಲಾಗಿವೆ –

ಶ್ರೀಪತಿ ಆರಾಧ್ಯ ಶರ್ಮ
|
…ರಾಯಣಪತಿ ಆರಾಧ್ಯ ಶರ್ಮ
|
ರಾಜಪತಿ ಆರಾಧ್ಯ ಶರ್ಮ

ಇವರಲ್ಲಿ ಎರಡನೆಯವನೇ ಪಶುಪತಿ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಭಾಗವಹಿಸಿದ್ದವನು (ಅವನ ಹೆಸರಿನ ಪೂರ್ವಭಾಗ ಹಾಳಾಗಿದೆ). ರಾಜಪತಿ ಆರಾಧ್ಯ ಶರ್ಮನೇ ಮೇಲ್ಕಂಡ ಶಾಸನವನ್ನು ರಚಿಸಿದವನು. ಈ ಆರಾಧ್ಯ ಬ್ರಾಹ್ಮಣರು ಕರ್ನಾಟಕದ ವೀರಶೈವ ಆರಾಧ್ಯ ಬ್ರಾಹ್ಮಣರ ಪಂಗಡಕ್ಕೆ ಸೇರಿದವರೆಂಬ ರೆಗ್ಮಿಯವರ ಊಹೆ ಸಾಧಾರವಾದುದು.[3]

ಭಕ್ತಪುರದ ಯಕ್ಷಮಲ್ಲನ ಕಾಲದಲ್ಲಿ (೧೪೨೮ – ೮೨) ಪಶುಪತಿನಾಥನ ಪೂಜೆಯು ದಕ್ಷಿಣ ಭಾರತದ “ಭಟ್ಟ ಬ್ರಾಹ್ಮಣ”ರಿಂದಲೇ ನಡೆಯಬೇಕೆಂದು ವ್ಯವಸ್ಥೆಯಾದುದು. ಆ ಪರಂಪರೆ ಇನ್ನೂ ಉಳಿದುಕೊಂಡು ಬಂದಿದೆ. ಇದಕ್ಕೆ ಕಾರಣ, ಆಗ ನೇಪಾಳದಲ್ಲಿ ಪ್ರಬಲವಾಗಿದ್ದ ಘೋರ ವಾಮಾಚಾರ ಪದ್ಧತಿಯ ಪೂಜೆಗಳು. ಈಗಲೂ ನೆವಾರಿ ದೇವಾಲಯಗಳಲ್ಲಿ ಪೂಜೆ ನಡೆಯುವುದು ಎಡಗೈಯಿಂದ; ದೇವರಿಗೆ ಪಶುಬಲಿ ಮೂಲಕ ಮಾಂಸ, ಮದ್ಯ ಅರ್ಪಣೆ ನಿರಂತರವಾಗಿ ನಡೆಯುತ್ತದೆ. ಮುಖ್ಯ ಪೂಜೆ ನಡೆಯುವಾಗ ಗರ್ಭಗುಡಿಯ ಬಾಗಿಲು ಮುಚ್ಚಿ ಒಳಗೆ ಅರ್ಚಕನು ಏಕಾಂತದಲ್ಲಿ ಪೂಜಿಸುತ್ತಾನೆ; ಅವನು ಅರ್ಚನೆಯಲ್ಲಿ ಹೆಚ್ಚು ಕಡಿಮೆ ಮಾಡಿದರೆ ನಾಶವಾಗುವನೆಂದು ಜನ ಹೇಳುತ್ತಾರೆ. ಆ ಕಾಲದಲ್ಲಿಯೂ, ಎಂದರೆ ೧೩ – ೧೪ನೇ ಶತಮಾನಗಳಲ್ಲಿ ವಾಮಾಚಾರ ಪೂಜಾ ವಿಧಾನವು ಅಲ್ಲಿ ಹಿಂದೂಗಳಲ್ಲಿ, ಬೌದ್ಧ ವಜ್ರಯಾನಿಗಳಲ್ಲೂ ವ್ಯಾಪಕವಾಗಿ ಪ್ರಚುರಗೊಂಡಿತ್ತು. ಬೌದ್ಧರ ವಜ್ರಯಾನವು, ಎಂದರೆ ತಾಂತ್ರಿಕ ಬೌದ್ಧಧರ್ಮದ ಶಾಖೆಯು ನೇಪಾಳದಲ್ಲಿ ಪ್ರಬಲಿಸಿತೆಂದೂ, ವೇದಗಳ ಅಧ್ಯಯನವು ಹಿಂದಕ್ಕೆ ಸರಿದು ಪಶುಪತಿನಾಥ ಆರಾಧನೆಯು ನಿಂತುಹೋಯಿತೆಂದು ಆಗ ದಕ್ಷಿಣದಿಂದ ಬಂದ ಶಂಕರಾಚಾರ್ಯರಿಂದಾಗಿ ಪಶುಪತಿನಾಥನ ಪೂಜೆ ಆರಂಭವಾಯಿತೆಂದೂ ಹೇಳುತ್ತಾರೆ. ಅವರ ಶಿಷ್ಯರು ದೇವಾಲಯದಲ್ಲಿ ತುಂಬಿಕೊಂಡಿದ್ದ ಕಸ, ಧೂಳು ಇತ್ಯಾದಿ ತೆಗೆದು ಹಾಕಿ, ವೇದಮಂತ್ರ ಸಮೇತ ಸಾತ್ವಿಕ ಪೂಜೆ ಆರಂಭಿಸಿದರು ಎಂದೂ ಹೇಳಲಾಗಿದೆ. ಶಂಕರಾಚಾರ್ಯರು ಪಶುಪತಿ ಮಹಾದೇವನ ಮೇಲೆ ಒಂದು ಸ್ತೋತ್ರ ಗೀತವನ್ನು ರಚಿಸಿ, ಆ ದೈವವನ್ನು ವೇದೋಕ್ತ ರೀತಿಯಲ್ಲಿ ಅರ್ಚಿಸಿದ ಮೊದಲಿಗರು ಎಂದೂ ನಂಬಲಾಗಿದೆ. ಆದಿಶಂಕರರು (ಕ್ರಿ.ಶ. ೮ನೇ ಶ.) ವಾಸ್ತವವಾಗಿ ನೇಪಾಳಕ್ಕೆ ಬಂದಿದ್ದರೇ ಇಲ್ಲವೇ ತಿಳಿಯದು. ಆದರೆ ಯಕ್ಷಮಲ್ಲ ದೊರೆಯು (೧೪೬೦) ಶಂಕರಾಚಾರ್ಯರ ಕೃತಿಗಳನ್ನು ಅಭ್ಯಸಿಸಿ, ಪ್ರಭಾವಿತನಾಗಿ ದಕ್ಷಿಣ ಭಾರತದ, ಕರ್ನಾಟಕದ ಸ್ಮಾರ್ತ ಸಂಪ್ರದಾಯದ ಭಟ್ಟರನ್ನು ಅರ್ಚಕರನ್ನಾಗಿ ನೇಮಕ ಮಾಡಲು ಆರಂಭಿಸಿದನೆಂಬವುದು ಬಹುತೇಕ ಖಚಿತ; ಹಾಗೆಯೇ ಆ ದೇವಾಲಯದ ಭಂಡಾರಿಗಳನ್ನಾಗಿ ನೆವಾರಿ ಜಾತಿಯ ಜನರನ್ನು ನೇಮಿಸಿದನು.[4]

ಪಶುಪತಿನಾಥನಿಗೆ ಶೈವ – ಶಾಕ್ತ ಪದ್ಧತಿಯಲ್ಲಿ ಪೂಜೆಯನ್ನು ಮಾಡಲಾಗುತ್ತಿದ್ದು, ದೈವವು “ಶ್ರೀವಿದ್ಯಾ” ಸಂಪ್ರದಾಯಕ್ಕೆ ಸೇರಿದುದಾಗಿದೆ. “ಶ್ರೀವಿದ್ಯಾ” ಸಂಪ್ರದಾಯವನ್ನು ಚನ್ನಾಗಿ ಬಲ್ಲವರೆಂದರೆ ದಕ್ಷಿಣ ಭಾರತದ ಸ್ಮಾರ್ತ ಬ್ರಾಹ್ಮಣರೇ.

ಕ್ರಿ.ಶ. ೧೯೯೩ರ ವರೆಗಿನ ಪಶುಪತಿ ದೇವಾಲಯದ ‘ಮೂಲ ಪೂಜಾರಿ’ ಅಥವಾ ‘ಮೂಲ ಭಟ್ಟ’ರ ಹೆಸರುಗಳು ಇಂತಿವೆ:[5]

ಕೃಷ್ಣಭಟ್ಟ (ಕ್ರಿ.ಶ. ೧೭೪೭)
ರಾಮಚಂದ್ರ ಭಟ್ಟ
ನೀಲಕಂಠ ಭಟ್ಟ
ಗೋಪಾಲ ಭಟ್ಟ
ರಾಮಚಂದ್ರ ಭಟ್ಟ
ಶ್ಯಾಮ ಭಟ್ಟ
ಅನಂತರಾಮ ಭಟ್ಟ
ಕೃಷ್ಣ ಶಾಸ್ತ್ರೀ (ಅಡಿಗ)
ದಾಮೋದರ ಭಟ್ಟ (ಮಹಾರಾಷ್ಟ್ರ)
ಸುಬ್ರಹ್ಮಣ್ಯ ಶಾಸ್ತ್ರೀ (ಅಡಿಗ)
ಪದ್ಮನಾಭ ಶಾಸ್ತ್ರೀ (ಅಡಿಗ)
ಸುಬ್ರಹ್ಮಣ್ಯ ಶಾಸ್ತ್ರೀ (೧೯೯೩)[6]

ಸುಬ್ರಹ್ಮಣ್ಯ ಶಾಸ್ತ್ರಿಗಳ ಬಳಿಕ ನೇಮಕಗೊಂಡವರು ರಾವಲ್ ಅನಂತಕೃಷ್ಣ ಶಾಸ್ತ್ರೀ (ಸೋಮಯಾಜಿ): ಅನಂತಪದ್ಮನಾಭ ಸೋಮಯಾಜಿ ಎಂಬ ಹೆಸರೂ ಉಂಟು. ಅವರ ಜೊತೆ ನಾನು ಮಾತನಾಡಿದ್ದೇನೆ. ಅವರು ನಿವೃತ್ತರಾಗಿ ಈಗ ಕುಂದಾಪುರ ತಾಲೂಕಿನಲ್ಲಿ ಶಂಕರನಾರಾಯಣ ಎಂಬ ಊರಲ್ಲಿ ನೆಲೆಸಿದ್ದಾರೆ. ಅವರ ಬಳಿಕ ನೇಮಕಗೊಂಡವರು ಅದೇ ದಕ್ಷಿಣ ಕನ್ನಡ ಜಿಲ್ಲೆಯ ಮಹಾಬಲೇಶ್ವರ ಭಟ್ (ಬಾಯರಿ) ಅವರು. ಅವರು ಪಶುಪತಿ ದೇವಾಲಯದ ಆವರಣದಲ್ಲೇ ಇರುವ ಅಧಿಕೃತ ನಿವಾಸದಲ್ಲಿದ್ದಾರೆ. ಅವರ ಮನೆಯಲ್ಲಿ ಕುಳಿತು ಅವರ ಜೊತೆ ಮಾತನಾಡಿ ಸಾಕಷ್ಟು ವಿಷಯ ತಿಳಿದುಕೊಂಡಿದ್ದೇನೆ.

ಶ್ರೀ ಮಹಾಬಲೇಶ್ವರ ಭಟ್ (ಬಾಯರಿ) ಅವರ ಜೊತೆ ಸಹಾಯಕ ಪೂಜಾರಿಗಳಾಗಿರುವ ಕೃಷ್ಣ ಭಟ್, ರಾಮ ಕಾರಂತ್, ಗಣೇಶ ಭಟ್, ವಾಸುಕೀ ನಾರಾಯಣ್ ಪೂಜಾರಿ, ರಾಮಚಂದ್ರ ಭಟ್ ಇವರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯವರು. (ಕೊನೆಯ ಇಬ್ಬರದು ಪಶುಪತಿ ಗರ್ಭಗುಡಿ ಹೊರಗಿನ ದೈವಗಳ ಪೂಜಾಕಾರ್ಯ.)

ಪಶುಪತಿನಾಥನ ವಿಶೇಷ ಪೂಜೆ ನಡೆಯುವುದು ಶಿವರಾತ್ರಿಯಂದು. ಹೆಚ್ಚು ಕಡಿಮೆ ೧೮೦೦ – ೧೯೫೦ ಈ ನೂರೈವತ್ತು ವರ್ಷ ನೇಪಾಳಕ್ಕೆ ಯಾವ ವಿದೇಶೀಯರಿಗೂ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲವಾದರೂ, ಶಿವರಾತ್ರಿಯ ದಿನಕ್ಕೆ ಮಾತ್ರ ಭಾರತದಿಂದ ಜನರು, ಸಾಧು ಸಂತರು ಬರಲು ಸರ್ಕಾರ ಅವಕಾಶ ಮಾಡಿಕೊಡುತ್ತಿತ್ತು. ಆ ದಿನ ಪಶುಪತಿನಾಥನ ದರ್ಶನಕ್ಕೆ ಬರುವ ಯಾತ್ರಾರ್ಥಿ ಭಕ್ತ ಜನರಿಗೆ ನೇಪಾಳದಲ್ಲಿ ದಾರಿಯುದ್ದಕ್ಕೂ ಊಟ ತಿಂಡಿ ವಸತಿ ವ್ಯವಸ್ಥೆಯನ್ನು ಜನರೇ ಮಾಡಿಕೊಡುತ್ತಿದ್ದರು. ಮಾರ್ಗಶೀರ್ಷ ಕೃಷ್ಣ ಪಕ್ಷದಂದು ಪಶುಪತಿನಾಥ ಲಿಂಗವನ್ನು ಬೌದ್ಧರು ಬುದ್ಧನೆಂದೇ ಭಾವಿಸಿ ಪೂಜಿಸುತ್ತಾರೆ.

ಪಶುಪತಿನಾಥನ ಅರ್ಧಾಂಗಿ ಗುಹ್ಯೇಶ್ವರಿ, ಕಾಶಿಯ ವಿಶ್ವನಾಥನಿಗೆ ವಿಶಾಲಾಕ್ಷಿ ಇದ್ದಂತೆ. (“ಗುಹ್ಯೇಶ್ವರಿ” ಅಲ್ಲ “ರಾಜರಾಜೇಶ್ವರಿ” ಎಂದೂ ಹೇಳುವುದುಂಟು.)

ದಸರಾ ಸಮಯದಲ್ಲಿ ನೇಪಾಳದಲ್ಲಿ ವಿಶೇಷ ಹಬ್ಬದ ಸಂಭ್ರಮ. ಆಗ ದೇವಾಲಯಗಳಲ್ಲಿ ಹೆಚ್ಚಿನ ಪೂಜೆಗಳು ಉಂಟು. ಪ್ರಾಣಿಬಲಿ ಸಾಮಾನ್ಯವಾಗಿ ನಡೆಯುತ್ತದೆ. ಪಶುಪತಿ ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದಂತೆ ದೇವಾಲಯದ ಪ್ರಾಕಾರದ ಹೊರಗೆ ‘ರಕ್ತದ ಕೋಡಿಯೇ ಹರಿಯುತ್ತದೆ’. ಪಶುಪತಿನಾಥನದು ಮಾತ್ರ ಸಾತ್ವಿಕ ಪೂಜೆ. ಆದರೆ ದೇವಾಲಯದ ಆವರಣದಲ್ಲಿ ಸ್ವಲ್ಪ ಸಮೀಪದಲ್ಲಿಯೇ ಇರುವ ಕೀರ್ತಿಮುಖ ಭೈರವನಿಗೆ ಮಾತ್ರ ‘ಪಂಚವಲಿ’ ಎಂಬ (ಗಿಳಿ, ಕೋಣ, ಮೇಕೆ, ಬಾತುಕೋಳಿ, ಮೊಟ್ಟೆ) ಐದು ಬಗೆಯ ಪ್ರಾಣಿ ಬಲಿ ನಡೆದು, ಆ ಭೈರವನ ಮೂರ್ತಿಗೆ ಅರ್ಪಿಸಿದ ಎಡೆಯನ್ನು ಮುಟ್ಟಿದ ದಾರದ ಎಳೆಯು ಪಶುಪತಿ ಶಿವಲಿಂಗದ ಮುಂದಿನ ಕಳಶದ ನೀರನ್ನು ಮುಟ್ಟುವಂತೆ ಮಾಡಿರುತ್ತಾರೆ. ಹಿಂದೊಮ್ಮೆ ಪ್ರಾಣಿ ಬಲಿಯು ಪಶುಪತಿಗೂ ನಡೆಯುತ್ತಿದ್ದುದರ ಕುರುಹು ಅದಾಗಿರಬಹುದು. ಪಶುಪತಿನಾಥನ ಗರ್ಭಗುಡಿಯ ಮುಂದೆ ಮೆಟ್ಟಿಲುಗಳ ಕೆಳಗೆ ಇರುವ ದೊಡ್ಡ ಹಿತ್ತಾಳೆಯ ಹಲಗೆ ಮೇಲೆ ಐದು ಬಗೆಯ ಧಾನ್ಯಗಳಿಂದ ಮಾಡಿದ ಎಡೆಯನ್ನು ಹಾಕಿರುತ್ತಾರೆ. ದಾರದ ಎಳೆಯು ಅದನ್ನು ಸ್ಪರ್ಶಿಸಿಕೊಂಡು ಮುಂದೆ ಹೋಗಿರುತ್ತದೆ. ಧಾನ್ಯದ ಎಡೆಯೂ ‘ಪಂಚವಲಿ’ಯೇ (ಪಂಚ+ಬಲಿ).

ಹಿಂದೆ ನೇಪಾಳದ ಮಹಾರಾಜರು ಸ್ಮಾರ್ತ ಪೀಠಗಳಲ್ಲಿ ಶೃಂಗೇರಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದವರು ಅದು ಬದಲಾಗಿ ಈಗ ಕಾಂಚೀಪೀಠದತ್ತ ಹೆಚ್ಚು ಒಲಿದಿದ್ದಾರೆ.

ಕಾಠಮಾಂಡೊಗೆ ಪೂರ್ವಕ್ಕೆ ಐದು ಕಿಲೋ ಮೀಟರ್ ದೂರದ ಗೋಕರ್ಣವು ಹಿರಿಯರ “ಶ್ರಾದ್ಧ” ಕ್ರಿಯೆಗಳನ್ನು ನಡೆಸಲು ಪ್ರಶಸ್ತವಾದ ಪುಣ್ಯಕ್ಷೇತ್ರ. ಅಲ್ಲಿ ಬಾಗಮತಿ ನದಿ ಉತ್ತರವಾಹಿನಿಯಾಗಿ ಹರಿಯುತ್ತದೆ. ಅಲ್ಲಿನ ಗೋಕರ್ಣೇಶ್ವರ ಮಹಾದೇವ ದೈವದಿಂದಾಗಿ ಅದೂ ಒಂದು ಯಾತ್ರಾಸ್ಥಳವೇ. ಆ ಊರಿನ ಹೆಸರು ಕರ್ನಾಟಕದ ಗೋಕರ್ಣದ ಸಾದೃಶ್ಯದ ಮೇಲೆ ಬಂದಿದೆಯೆಂಬ ಊಹೆಯನ್ನು ಕೆಲವರು ಮಾಡಿರುವುದುಂಟು.[7] (ಅದಕ್ಕೆ ಆಧಾರ ನೇಪಾಳದ ಸಾಂಪ್ರದಾಯಕ ಭೂಗೋಳ ಗ್ರಂಥಗಳು). ಗೋಕರ್ಣೇಶ್ವರನ ಪೂಜೆ ಮಹಾರಾಷ್ಟ್ರ ಬ್ರಾಹ್ಮಣರಿಂದ.

 

[1] ರಾವಲ್ ಅನಂತಕೃಷ್ಣ ಸೋಮಯಾಜಿ : ಶ್ರೀ ಪಶುಪತಿ ದರ್ಶನ್ (ಹಿಂದಿ), ಪು. ೪೫.

[2] Jadish Chandra Sharma Regmi : Nepal – India Relations, P. 22.

[3] ಅದೇ, ಪು. ೨೨.

[4] ಗೋವಿಂದ ತಂಡನ್ : ಪಶುಪತಿ ಕ್ಷೇತ್ರಕೋ ಸಾಂಸ್ಕೃತಿಕ್ ಅಧ್ಯಯನ್ (ನೇಪಾಲಿ), ಪು. ೨೨೨.

[5] ಅದೇ, ಪು. ೨೨೫.

[6] ಗೋವಿಂದ ತಂಡನ್ : ಪಶುಪತಿ ಕ್ಷೇತ್ರಕೋ ಸಾಂಸ್ಕೃತಿಕ್ ಅಧ್ಯಯನ್ (ನೇಪಾಲಿ), ಪು. ೨೩೪ – ೫.

[7] Mary M. Anderson : The Festivals of Nepal, P. 113.