ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕರ್ನಾಟಕ ಕೇವಲ ಒಂದು ರಾಜ್ಯವಲ್ಲ; ಸಂಕ್ಷಿಪ್ತ ಭಾರತ ಖಂಡ. ಈ ಭೂಮಿಯನ್ನು ಆಳಿದ, ಈ ಭೂಮಿಯಲ್ಲಿ ಬಾಳಿದ ಪ್ರಭುಗಳು, ಪ್ರಜ್ಞೆಗಳಲ್ಲಿ ಹಲವಾರು ಜನ ವ್ಯಾಪಾರ, ವ್ಯವಹಾರ, ಕಲೆ, ಸಂಸ್ಕೃತಿ, ರಾಜಕಾರಣ, ಶಿಕ್ಷಣಗಳ ಕಾರಣದಿಂದ ತಮ್ಮ ಸೀಮೆಯ ಮೂಲ ಚೌಕಟ್ಟನ್ನು ದಾಟಿ ಭಾರತ ಖಂಡ ಮತ್ತು ಅದರಾಚೆಗೂ ತಮ್ಮ ಸಾಹಸ ಮತ್ತು ಪ್ರತಿಭೆಗಳನ್ನು ಮೆರೆದಿದ್ದಾರೆ, ಆ ಮೂಲಕ ಜಗದ್ವಿಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ ಮೂಲನೆಲೆಯನ್ನು ಆಕ್ರಮಿಸಿದ ರಾಜರು, ಚಕ್ರವರ್ತಿಗಳಿಗೆ ಬುದ್ಧಿ ಕಲಿಸುವ ಸಲುವಾಗಿ, ನೆರೆಹೊರೆಯ ರಾಜ್ಯಗಳಲ್ಲಿ ಸ್ವತಃ ದುಸ್ಥಿತಿಗೆ ಪಕ್ಕಾಗಿ, ನೆರೆಹೊರೆಯ ಅನ್ಯಾಯದ ಆಕ್ರಮಣಕ್ಕೆ ತುತ್ತಾಗಿ ಪರಿತಪಿಸುವವರಿಗೆ ಸಹಾಯ, ಸಹಕಾರಗಳನ್ನು ನೀಡುವ ಮಾನವೀಯ ದೃಷ್ಟಿಯಿಂದ ಕೂಡ ಬೇರೆ ಬೇರೆ ಆಕ್ರಮಣಕಾರಿಗಳನ್ನು ಗೆದ್ದು ಆಯಾ ಸಂಸ್ಥಾನಗಳನ್ನು ಅದರ ಮೂಲ ವಂಶದವರಿಗೆ ದೊರಕಿಸಿಕೊಟ್ಟಿದ್ದಾರೆ. ತಮ್ಮ ದೈವ, ಧರ್ಮ, ಭಕ್ತಿಗಳ ಪ್ರಚಾರಕ್ಕಾಗಿ, ಪ್ರಸಾರಕ್ಕಾಗಿ ಮತ್ತು ತಾಯ್ನಾಡಿನಿಂದ ದೂರ ದೂರದಲ್ಲಿ ವಿಭಿನ್ನ ಕಾರಣಗಳಿಗಾಗಿ ಹೋಗಿ ನೆಲೆಸಿದ ಕರ್ನಾಟಕಸ್ಥರಿಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ದೇವಾಲಯಗಳನ್ನು, ಸ್ಮಾರಕಗಳನ್ನು ಕಟ್ಟಿದ್ದಾರೆ. ಕರ್ನಾಟಕದ ಬಗೆ ಬಗೆಯ ಕಲೆ ಮತ್ತು ಸಂಸ್ಕೃತಿಗಳ ಪ್ರಸಾರಕ್ಕಾಗಿ ಕೂಡ ಇಂತಹ ಸಾಂಸ್ಕೃತಿಕ ನಿರ್ಮಾಣಗಳನ್ನು ಮಾಡಿದ್ದಾರೆ. ಹೀಗೆ ಒಂದಲ್ಲ ಒಂದು ಕಾರಣಕ್ಕೆ ಕರ್ನಾಟಕದ ರಾಜರು, ಕಲಾವಿದರು ಮತ್ತು ಸಾಮಾನ್ಯ ಜನ ಸಹ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿ, ಅಲ್ಲಿ ಆಕ್ರಮಣಶೀಲರಾಗದೆ ಸಮನ್ವಯಶೀಲರಾಗಿ ಆದರ್ಶ ಬಾಳುವೆಯನ್ನು ನಡೆಸಿದ್ದಾರೆ. ಸಾವಿರ ಸಾವಿರ ವರ್ಷಗಳ ಇತಿಹಾಸದ ಉದ್ದಕ್ಕೂ ಈ ಕರ್ನಾಟಕದ ವಿವಿಧ ಸ್ತರದ ಜನ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಅಚ್ಚಳಿಯದ ವಿಶಿಷ್ಟ ಹೆಜ್ಜೆಗಳನ್ನು ಮೂಡಿಸಿದ್ದಾರೆ. ಆದರೆ, ವಸಾಹತುಶಾಹಿ ಸಂದರ್ಭದ ಕ್ರೌರ್ಯಗಳಿಗೆ ತುತ್ತಾದ ಜನ ಮತ್ತು ಪ್ರಭುಗಳು ಈ ಸೀಮೋಲ್ಲಂಘನ ಶಕ್ತಿಯನ್ನು ಕಳೆದುಕೊಂಡು ತಮ್ಮ ತಮ್ಮಲ್ಲಿ ಸೀಮಿತ ಪರಿಧಿಗಳನ್ನು ಕಟ್ಟಿಕೊಂಡು ಬಾಳತೊಡಗಿ ತಮ್ಮ ಸಾಹಸ ಶ್ರೀಮಂತಿಕೆಯ ಮೂಲ ಸೆಲೆಯನ್ನು ಕಳೆದುಕೊಂಡುಬಿಟ್ಟಿದ್ದಾರೆ. ಕುರಿತೋದದೆಯೂ ಪ್ರಯೋಗ ಪರಿಣತ ಮತಿಗಳಾದ, ಸಜ್ಜನರಾದ, ಸುಭಟರಾದ, ನೀತಿಯುತರಾದ ಕರ್ನಾಟಕೀಯರ ಸಾಹಸಶೀಲತೆಗಳು, ದೇಶ ಪರ್ಯಟನಗಳು, ವಿಕ್ರಮ ಸಾಧನೆಗಳು ಬರುಬರುತ್ತಾ ಮಂಕಾಗತೊಡಗಿ ಈಗಿನ ಕರ್ನಾಟಕದ ಜನತೆ ತಮ್ಮ ಸಾಹಸಶೀಲತೆಯನ್ನು, ದೇಶ ಪ್ರೇಮವನ್ನು, ಸ್ವಾಭಿಮಾನವನ್ನು, ಪರಿಶ್ರಮ ಶೀಲತೆಯನ್ನು, ಭಾಷಾ ಪ್ರೇಮವನ್ನು, ಸಂಸ್ಕೃತಿಯ ಹಿರಿಮೆಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿರುವ ವಿಷಣ್ಣ ಸಂದರ್ಭದಲ್ಲಿ ನಾವಿದ್ದೇವೆ. ಮಾನಸಿಕವಾಗಿ, ಕ್ರಿಯಾತ್ಮಕವಾಗಿ ದುರ್ಬಲರಾಗುತ್ತಿರುವ ಕನ್ನಡಿಗರ ಸ್ವಾಭಿಮಾನವನ್ನು ಒಳಮೂಲದಿಂದ ಸಹಜವಾಗಿ ಎಚ್ಚರಿಸುವ ಕೆಲಸವನ್ನು ಸರ್ಕಾರ ಮತ್ತು ಸಂಸ್ಥೆಗಳು ತೀವ್ರ ಗತಿಯಲ್ಲಿ ಮಾಡಬೇಕಾಗಿದೆ. ಈ ಕಾರ್ಯದ ಒಂದು ಅಂಗವಾಗಿ ನಮ್ಮ ಸ್ವಾಭಿಮಾನಶೀಲತೆಯನ್ನು, ನಮ್ಮ ಸಂಪದ್ಯುಕ್ತ ಭೂತಕಾಲವನ್ನು ಜೀವಂತವಾಗಿ ಸ್ಮರಣೆಗೆ ಮತ್ತು ಅಧ್ಯಯನಕ್ಕೆ ತಂದುಕೊಳ್ಳುವ ಮೂಲಕ ಎಚ್ಚರಿಸಬೇಕಾಗಿದೆ. ತನ್ನ ಹಿಂದಿನ ಚರಿತ್ರೆಯನ್ನು ತಿಳಿಯದವನು ಇಂದಿನ ಚಾರಿತ್ರಿಕ ಸಂಧಿಯಲ್ಲಿ ಸಹಜ ಜೀವಂತಿಕೆಯಿಂದ ಬದುಕಲಾರ; ಹಾಗೆಯೇ ಭವಿಷ್ಯದ ಉಜ್ವಲ ಚರಿತ್ರೆಯನ್ನು ಕಟ್ಟಿಕೊಳ್ಳಲಾರ. ಈ ಕಾರಣದಿಂದ ಕರ್ನಾಟಕದ ಪ್ರಾಚೀನ ಜನಾಂಗ ಗತ ಇತಿಹಾಸದ ಅವಧಿಗಳಲ್ಲಿ ಸಾಧಿಸಿದ ಮಹತ್ಕಾರ್ಯಗಳನ್ನು, ಮಾಡಿದ ಮಹಾ ಸಾಹಸಗಳನ್ನು, ಕೈಗೊಂಡ ವೈನತೇಯ ಪರ್ಯಟನವನ್ನು ಮತ್ತು ಅದಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ಅದರ ಅಸಲು ಸ್ವರೂಪದೊಡನೆ ಅವಾಹಿಸಿಕೊಳ್ಳಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಅದರಣೀಯವೂ ಆದರ್ಶವೂ ಆದ ಪೂರ್ವ ಚರಿತ್ರೆಯನ್ನು ನಮ್ಮ ಕಣ್ಮನಸ್ಸುಗಳಲ್ಲಿ ಮತ್ತೊಮ್ಮೆ ನಿರ್ಮಿಸಿಕೊಳ್ಳುವ ಮೂಲಕ ಬತ್ತುತ್ತಿರುವ ನಮ್ಮ ಸ್ಫೂರ್ತಿ ಕಾರಂಜಿಗೆ ಅಭಿಮಾನದ ಜೀವಜಲವನ್ನು ತುಂಬಬೇಕಾಗಿದೆ. ಒಂದು ಕಡೆ ವರ್ತಮಾನವೇ ಶ್ರೇಷ್ಠ, ಭೂತ ಚರಿತ್ರೆ ಕನಿಷ್ಠ ಮತ್ತು ಅಗಣನೀಯ ಎಂಬ ಸಿನಿಕತನ; ಮತ್ತೊಂದೆಡೆ ನಮ್ಮ ವರ್ತಮಾನ ಭವಿಷ್ಯಗಳಿಗಿಂತ ಭೂತ ಚರಿತ್ರೆಯೇ ಪರಮಾದರ್ಶ ಎನ್ನುವ ಭಾವುಕ ಜಗತ್ತಿನಲ್ಲಿಯೇ ಬದುಕುವ, ವರ್ತಮಾನ ಭವಿಷ್ಯಗಳ ಕೊಂಡಿ ಕಳಚಿಕೊಂಡ ಆತಂತ್ರ ಪ್ರಜ್ಞೆ. ಇವೆರಡರ ಅತಿರೇಕದಲ್ಲಿ ನಮ್ಮ ನಾಡು, ನುಡಿ ಮತ್ತು ಜನಾಂಗ ನಲುಗುತ್ತಿವೆ. ನಮ್ಮ ಭೂತ ಚರಿತ್ರೆಯನ್ನು ನಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಳ್ಳುವುದೆಂದರೆ ವರ್ತಮಾನ ಭವಿಷ್ಯಗಳನ್ನು ನಿರಾಕರಿಸುವುದಲ್ಲ, ಅವುಗಳಿಗೆ ಅಂತಃಚೇತನವನ್ನು ತುಂಬುವುದು. ಹೀಗಾಗಿ ಕರ್ನಾಟಕದ ಸಮಸ್ತ ಜನತೆ ವರ್ತಮಾನ ಮತ್ತು ಭವಿಷ್ಯಗಳ ಉಜ್ವಲೀಕರಣಕ್ಕೆ ಮತ್ತು ಸತ್ವಪೂರ್ಣತೆಗೆ ಗತಕಾಲವನ್ನು ತೆರೆದ ಮನಸ್ಸಿನಿಂದ ಚೂಪುಗೊಂಡ ಚಾರಿತ್ರಿಕ ಪ್ರಜ್ಞೆಯಿಂದ ಅಂತಸ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಮೇಲಿನ ಹಿನ್ನೆಲೆಯಲ್ಲಿ ಕರ್ನಾಟಕದ ಹಿಂದೆ ಇದೇ ಭರತ ಖಂಡದಲ್ಲಿ ಮತ್ತು ಅದರಾಚೆಗೂ ಸ್ಥಾಪಿಸಿದ್ದ ಸಾಹಸದ ಪ್ರತೀಕಗಳನ್ನು, ಗಳಿಸಿದ್ದ ಹಿರಿಮೆಗಳನ್ನು ಸ್ಮೃತಿಪಟಲದಲ್ಲಿ ಸಾಕ್ಷಾತ್ಕರಿಸಿಕೊಳ್ಳಬೇಕಾಗಿದೆ. ಅವಜ್ಞೆಯ ಅನವಧಾನದ ಮತ್ತು ನಿರಭಿಮಾನದ ಕಾರಣದಿಂದಾಗಿ ಹುದುಗಿಹೋಗಿರುವ ಕರ್ನಾಟಕದ ರೋಮಾಂಚಕಾರಿ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ಪುನರ್‌ನಿರ್ಮಿಸಿಕೊಂಡಾಗ ಮಾತ್ರ ಪೂರ್ಣ ಕನ್ನಡಿಗನಾಗುವುದಕ್ಕೆ ನಮಗೆ ಸಾಧ್ಯವಾಗುತ್ತದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಇಡೀ ಉತ್ತರ ಭಾರತವನ್ನು ಬೇರೆ ಬೇರೆ ಕಾಲಘಟ್ಟಗಳಲ್ಲಿ ತಮ್ಮ ಅಪ್ರತಿಮ ಶೌರ್ಯ, ಸಾಹಸಗಳಿಂದ ತಮ್ಮ ಆಡಳಿತದ ಚೌಕಟ್ಟಿಗೆ ತೆಗೆದುಕೊಂಡಿದ್ದ ರೋಚಕ ಇತಿಹಾಸವನ್ನು ನಿರಂತರವಾದ ಸಂಶೋಧನೆಗಳಿಂದ, ಅಧ್ಯಯನಗಳಿಂದ ಹೆಕ್ಕಿ ತೆಗೆಯುವ ಮೂಲಕ ನಮ್ಮ ಕನ್ನಡ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಆ ಪ್ರಜ್ಞೆಯ ಬೆಳಕಿನಲ್ಲಿ ಕನ್ನಡಿಗರ ಸಾಹಸ ಸಂಪತ್ತಿನ, ಸಂಸ್ಕೃತಿ ಸಂಪತ್ತಿನ, ಬೌದ್ಧಿಕ ಸಂಪತ್ತಿನ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾರ್ಥವನ್ನು ಬದಿಗೊತ್ತಿ ಸತ್ಯಾನ್ವೇಷಣೆಯಲ್ಲಿ ತೊಡಗುವ, ಅಂಜುಗುಳಿತನದ ಸೋಂಕಿಲ್ಲದ, ಸ್ವಾಭಿಮಾನ ಪ್ರೇರಿತರಾದ ಸಂಶೋಧಕರ ಬೃಹತ್ ತಂಡ ಈ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಸರ್ಕಾರ, ಸಂಘಸಂಸ್ಥೆಗಳು, ಉದಾರಿ ಶ್ರೀಮಂತರು ಪ್ರಾಚೀನ ಪ್ರಾಚೀನ ಕರ್ನಾಟಕದ ಮಹಾಪಥವನ್ನು ಗುರುತಿಸುವ ಈ ಮಹತ್ಕಾರ್ಯಕ್ಕೆ ನೆರವು ನೀಡಬೇಕಾಗಿದೆ.

ಕನ್ನಡನಾಡು, ನುಡಿಗಳ ಅಭಿಮಾನವನ್ನು, ಪ್ರೀತಿಯನ್ನು ತಮ್ಮ ಮೈಮನಗಳ ತುಂಬ ತುಂಬಿಕೊಂಡಿರುವ ನಾಡಿನ ಹಿರಿಯ ಸಂಶೋಧಕರಾದ ಡಾ. ಚಿದಾನಂದಮೂರ್ತಿ ಅವರು ತಮ್ಮ ವೃತ್ತಿಜೀವನದ ಆರಂಭದಿಂದಲೂ ಇಂತಹ ಸತ್ಯಶೋಧನ ಸಾಹಸಕ್ಕೆ ತೊಡಗಿಕೊಂಡಿರುವ, ಆ ಮೂಲಕ ಕರ್ನಾಟಕದ ಗತ ಚರಿತ್ರೆಗೆ ಹೊಸ ಮುಖಗಳನ್ನು ಜೋಡಿಸುತ್ತಾ ಬಂದಿರುವ, ಯುವ ಸಂಶೋಧಕರಿಗೆ ಸ್ಫೂರ್ತಿಯ ಸೆಲೆಯಾಗಿ, ನೆಲೆಯಾಗಿ ಪರಿಣಮಿಸಿರುವ ಮಹಾ ವಿದ್ವಾಂಸರು. ಅವರು ತಮ್ಮ ಸಂಶೋಧನ ಪಥದಲ್ಲಿ ನೆಟ್ಟಿರುವ ಮೈಲಿಗಲ್ಲುಗಳು ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಇತಿಹಾಸಗಳಿಗೆ ಹೊಸ ಸ್ವರೂಪವನ್ನು, ಹೊಸ ಎತ್ತರವನ್ನು ತಂದುಕೊಟ್ಟಿವೆ. ಈ ದಿಸೆಯಲ್ಲಿ ಪ್ರಸ್ತುತ ಗ್ರಂಥ “ಕರ್ನಾಟಕ – ನೇಪಾಳ: ಸಾಂಸ್ಕೃತಿಕ ಸಂಬಂಧ” ಎಂಬ ಕೃತಿ ಪ್ರಸ್ತುತ ಕನ್ನಡ ನಾಡಿನ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದದ್ದು ಎಂದು ನಾನು ಭಾವಿಸುತ್ತೇನೆ. ಕನ್ನಡ ನಾಡಿನ ಚರಿತ್ರೆಗೆ ಹೊಸ ಕೊಂಡಿಯೊಂದು ದೊರೆಯಬಹುದೆಂಬ ಸೂಚನೆಯನ್ನು ಕಂಡಕೂಡಲೇ ತಮ್ಮ ಇಳಿವಯಸ್ಸನ್ನು, ದೇಹಾರೋಗ್ಯವನ್ನು, ಕುಟುಂಬದ ಕಷ್ಟಗಳನ್ನು ಬದಿಗೊತ್ತಿ ಕನ್ನಡ ಶಕ್ತಿಯನ್ನು ಅವಾಹಿಸಿಕೊಂಡು ಜಿಗಿದು ನಿಲ್ಲುವ ಜೀವ ಮೂರ್ತಿಯವರದು. ಕರ್ನಾಟಕದ ರಾಜ ಮನೆತನವೊಂದು ಭಾರತದ ತಲೆಯಲ್ಲಿರುವ ನೇಪಾಳಕ್ಕೆ ಪದಾರ್ಪಣ ಮಾಡಿ ಆ ರಾಜ್ಯವನ್ನು ಗೆದ್ದು, ಕರ್ನಾಟಕದ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತು ಅಲ್ಲಿ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯನ್ನು ನಾಟಿಹಾಕಿ ಪಸರಿಸಿದ ಬಗೆಯನ್ನು ಈ ಕೃತಿಯಲ್ಲಿ ಲೇಖಕರು ಬಿಡಿ ಬಿಡಿಯಾಗಿ ವಿವರಿಸಿದ್ದಾರೆ. ದುರ್ಬಲ ಆರೋಗ್ಯದ ನಡುವೆಯೂ ಸತ್ಯಶೋಧನ ಕುತೂಹಲದಿಂದ, ಸಂಸ್ಕೃತಿ ಪ್ರೇಮದಿಂದ, ನೇಪಾಳದವರೆಗೆ ಪ್ರಯಾಣಿಸಿ, ಕನ್ನಡ ನಾಡಿನ ರಾಜರು ಅಲ್ಲಿ ಬಿಟ್ಟುಹೋಗಿರುವ ಶ್ರೀಮಂತ ಸಂಸ್ಕೃತಿ ಚಿಹ್ನೆಗಳನ್ನು ತೆರೆದ ಮನಸ್ಸಿನಿಂದ ಮತ್ತು ತಾವು ಓದಿಕೊಂಡ ಹಲವಾರು ಇತಿಹಾಸ ಗ್ರಂಥಗಳ ಆಧಾರದಿಂದ ಹಾಗೂ ಸ್ಥಳೀಯರ ಮಾರ್ಗದರ್ಶನದಿಂದ ಗುರುತಿಸಿ ತಮ್ಮ ಮನಸ್ಸಿಗೆ ತುಂಬಿಕೊಂಡು ಬಂದಿದ್ದಾರೆ. ಈ ಸಂಸ್ಕೃತಿ ಸಾಹಸ ಯಾತ್ರೆಯ ಕಥನ ಇಲ್ಲಿ ಸುಮಾರು ೧೫೦ ಪುಟಗಳ ಈ ಕೃತಿಯಲ್ಲಿ ಜೀವಂತವಾಗಿ ಬಿಚ್ಚಿಕೊಂಡಿದೆ. ಕರ್ನಾಟಕ ಮತ್ತು ನೇಪಾಳಗಳ ರಾಜಕೀಯ ಸಂಬಂಧ, ಧಾರ್ಮಿಕ ಸಂಬಂಧ, ಸಾಮಾಜಿಕ ಸಂಬಂಧಗಳನ್ನು ಪ್ರತ್ಯಕ್ಷ ದರ್ಶನದಿಂದ ಅಧಿಕೃತವಾಗಿ ಇಲ್ಲಿ ವಿಶ್ಲೇಷಿಸಿದ್ದಾರೆ. ಪುಸ್ತಕಕ್ಕೆ ಪೂರಕವಾಗಿ ಅವರು ಕೊಟ್ಟಿರುವ ಒಂಬತ್ತು ಅನುಬಂಧಗಳು ಈ ಕೃತಿಯ ವ್ಯಾಪ್ತಿಯನ್ನು, ಸತ್ವವನ್ನು ಮತ್ತು ಅಧಿಕೃತತೆಯನ್ನು ಅಧಿಕಗೊಳಿಸಿವೆ. ತನ್ನ ನಾಡಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಮತ್ತು ಅಭಿಮಾನವನ್ನು ತೀವ್ರವಾಗಿ ತನ್ನಲ್ಲಿ ತುಂಬಿಕೊಂಡ ಇತಿಹಾಸಕಾರನೊಬ್ಬ ಕಾಲಗರ್ಭದಲ್ಲಿ ಹೂತುಹೋದ ನೈಜ ಇತಿಹಾಸದ ಸುವರ್ಣದ ಎಳೆಗಳನ್ನು ಹುಡುಕಿ ಮತ್ತೆ ಅವುಗಳಗೆ ಮರುಸ್ವರೂಪವನ್ನು ಕೊಡುವ ಮೂಲಕ ನಮ್ಮ ಮೂಲಭೂತ ಕಾಲವನ್ನು ನಮ್ಮೆದುರು ವೈಜ್ಞಾನಿಕ ನಿಷ್ಠೆಯಿಂದ ಹೇಗೆ ನಿಲ್ಲಿಸಬಲ್ಲ ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ, ಇತಿಹಾಸಕಾರರಿಗೆ, ಸಂಸ್ಕೃತಿ ಜಿಜ್ಞಾಸುಗಳಿಗೆ, ಭಾಷಾ ಪ್ರೇಮಿಗಳಿಗೆ ಮತ್ತು ನಾಡಿನ ಪ್ರಭುತ್ವಕ್ಕೆ ಸ್ಫೂರ್ತಿ, ಮಾರ್ಗದರ್ಶನ ಮತ್ತು ಸ್ವಾಭಿಮಾನಗಳನ್ನು ತುಂಬುವ ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಪಾತ್ರದಲ್ಲಿ ಮಹತ್ತರವಾದುದು ಎಂಬುದು ನನ್ನ ಅನಿಸಿಕೆ. ಕರ್ನಾಟಕದ ಸ್ಪರ್ಶಕ್ಕೆ ಈಡಾಗಿದ್ದ ಭಾರತದ ಬೇರೆ ಬೇರೆ ಪ್ರಾಂತಗಳ ಬಗೆಗೆ ಕೂಡ ಇಂತಹ ಅನನ್ಯ ಪ್ರಯತ್ನಗಳು, ಕಟ್ಟೆಚ್ಚರದ ಶೋಧನೆಗಳು ನಡೆದಲ್ಲಿ ಕನ್ನಡ ನಾಡಿನ ಮಹಿಮೋನ್ನತಿಗಳು ಸಾಕ್ಷಾತ್ಕಾರಗೊಂಡು ಕನ್ನಡಿಗನ ಕ್ಲೈಬ್ಯವನ್ನು ಕಳೆಯುವಲ್ಲಿ ಕಳೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತದೆ.

ಕೇವಲ ಇತಿಹಾಸ ಮತ್ತು ಸಂಸ್ಕೃತಿ ಪ್ರೇಮದ ನಿಸ್ಸಂದೇಹ ಪ್ರೇರಣೆಯಿಂದ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪರ್ಯಟನ ಮಾಡಿ ಈ ಕೃತಿಯನ್ನು ರಚಿಸಿ ಪ್ರಕಾಶನಕ್ಕಾಗಿ ಒದಗಿಸಿಕೊಟ್ಟ ನನ್ನ ವಿದ್ಯಾಗುರುಗಳಾದ ಡಾ. ಎಂ. ಚಿದಾನಂದಮೂರ್ತಿ ಅವರಿಗೆ ವೈಯಕ್ತಿಕವಾಗಿ ಮತ್ತು ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕುಲಪತಿಯವರು