ಮೂರು ವರ್ಷಗಳ ಹಿಂದೆ ಒಂದು ಸಂಜೆ ಅಚ್ಚರಿಯೊಂದು ನನಗೆ ಕಾದಿತ್ತು. ನೇಪಾಳದ ಭಕ್ತಪುರದಿಂದ ಬಂದಿದ್ದ ಯೋಗೇಶ್‌ರಾಜ್ ಎಂಬ ಯುವಕ ಅಲ್ಲಿಂದ ತಂದಿದ್ದ ಎರಡು ಶಾಸನಗಳ ಚಿತ್ರಗಳನ್ನು ತೋರಿಸಿ “ಅವುಗಳಲ್ಲಿ ಕನ್ನಡ ಇರುವಂತಿದೆ: ದಯಮಾಡಿ ಓದಿ ಹೇಳಿ” ಎಂದರು. ನೋಡಿ ಆಶ್ಚರ್ಯವೂ ಆಯಿತು, ಸಂತೋಷವೂ ಆಯಿತು. ನೇಪಾಲಿ ಭಾಷೆಯ ತಾಮ್ರಪಟದ ಕೊನೆಯಲ್ಲಿ ಮತ್ತು ಒರಳುಕಲ್ಲಿನ ಮೇಲೆ ಕನ್ನಡ ಅಕ್ಷರಗಳಲ್ಲಿ ಕನ್ನಡ ಭಾಷೆಯ ಬರಹಗಳಿದ್ದುವು. ಅವು ಭಕ್ತಪುರದ ಜಂಗಂ ಮಠದ ಶಾಸನಗಳು. ಆ ಹೊತ್ತಿಗಾಗಲೇ ನನಗೆ ರಾಜಶೇಖರ ವಿರೂಪಾಕ್ಷ ಸ್ವಾಮಿ ಗೋರಟಾ ಅವರ ಲೇಖನವೊಂದರಿಂದ ಭಕ್ತಪುರದ ಜಂಗಂ ಮಠದ ಸ್ಥೂಲ ಪರಿಚಯವಾಗಿತ್ತು.[1] ಯೋಗೇಶ್‌ರಾಜ್‌ಹೇಳಿದರು: ನೇಪಾಳವನ್ನು ಆಳಿದ್ದು ಕನ್ನಡ ದೊರೆಗಳು. ಅದೂ ನನಗೆ ಆಗಲೇ ಸ್ವಲ್ಪ ಪರಿಚಯವಾಗಿದ್ದ ಸಂಗತಿಯೇ. ಆಗುಂಬೆ ಎಸ್‌. ನಟರಾಜ್‌ತಮ್ಮ “ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು” ಎಂಬ ಕಿರುಕೃತಿಯಲ್ಲಿ ನೇಪಾಳ, ಬಂಗಾಳ, ತಮಿಳುನಾಡುಗಳಲ್ಲಿ ಆಳಿದ ಕರ್ನಾಟಕದ ರಾಜವಂಶಗಳ ಪರಿಚಯವನ್ನು, ಆ ಪ್ರದೇಶಗಳಿಗೆ ಹೋಗಿ ಅಲ್ಲಿನ ಪ್ರಾಚೀನ ಸ್ಥಳಗಳನ್ನು ಪರಿಶೀಲಿಸಿ ಕೆಲ ವಿವರಗಳನ್ನು ನೀಡಿದ್ದರು. ಕಾಶಿಯ ಜಂಗಮವಾಡಿ ಮಠದ ಇಕ್ಕೇರಿ, ಕೊಡಗು, ಮೈಸೂರು ಅರಸರ ಶಾಸನಗಳೇ ಕರ್ನಾಟಕದ ಹೊರಗೆ ಅತಿ ದೂರದಲ್ಲಿ ದೊರಕಿರುವ ಕನ್ನಡ ಬರಹಗಳು ಎಂಬ ಸಾಮಾನ್ಯ ಗ್ರಹಿಕೆಯನ್ನು ಹಿಂದಕ್ಕೆ ಹಾಕಿ, ಇನ್ನೂ ಉತ್ತರಕ್ಕೆ ನೇಪಾಳದಲ್ಲಿ ಕನ್ನಡ ಶಾಸನಗಳು ದೊರಕುತ್ತಿರುವುದು ನನಗೆ ಮಹತ್ವದ ಹೊಸ ಸಂಗತಿಯಾಗಿತ್ತು. ನೇಪಾಳಕ್ಕೆ ಹೋಗಿ ಎಲ್ಲವನ್ನೂ ಪ್ರತ್ಯಕ್ಷ ಪರಿಶೀಲಿಸಬೇಕೆಂಬ ಕನಸು ಮೂಡಿದ್ದು ಹಾಗೆ. ಪಶುಪತಿ ದೇವಾಲಯದ ಅರ್ಚಕರು ಕರ್ನಾಟಕದವರು ಎಂಬ ಸಂಗತಿಯಂತೂ ಎಲ್ಲರಿಗೂ ತಿಳಿದ ವಿಷಯ. ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ನೇಪಾಳವನ್ನು ನೋಡುವ ಬಯಕೆಯೂ ಅದರ ಜೊತೆ ಸೇರಿಕೊಂಡಿತ್ತು.

ನನ್ನ ಮನೆಯ ಪಕ್ಕದ ಶ್ರೀಮತಿ ಅನಿತ ಸಂಜಯ್‌ನೇಪಾಳದವರಾಗಿದ್ದು, ಕಾಠಮಾಂಡೊದಲ್ಲಿರುವ ತಮ್ಮ ಬಂಧುಗಳಿಂದ ಎಲ್ಲ ಬಗೆಯ ಸಹಕಾರವನ್ನು ಕೊಡಿಸುವುದಾಗಿ ಹೇಳಿದರು. ಅವರೂ ಯೋಗೇಶ್‌ರಾಜ್‌ಅವರೂ ತಮ್ಮ ಮಾತೃಭಾಷೆ ನೇಪಾಳಿಯಲ್ಲಿ ಪರಸ್ಪರ ಮಾತನಾಡಿಕೊಂಡರು: ನೇಪಾಳದಿಂದ ದೂರದ ದಕ್ಷಿಣ ಭಾರತಕ್ಕೆ ಬಂದಿದ್ದ ಯೋಗೇಶ್‌ರಾಜ್‌ಮತ್ತು ಬೆಂಗಳೂರಿನಲ್ಲಿ ನೆಲಸಿ ಅಚ್ಚ ನೇಪಾಳಿ ಭಾಷೆಯಲ್ಲಿ ಮಾತನಾಡಲು ಹೆಚ್ಚಿನ ಅವಕಾಶವಿಲ್ಲದ ಶ್ರೀಮತಿ ಸಂಜಯ್‌ಅವರಿಗೆ ಇಬ್ಬರಿಗೂ ಸಂತೋಷದ ಸಂಗತಿ ಅದಾಗಿತ್ತು.

ಕರ್ನಾಟಕ ಸರ್ಕಾರ, ಬೆಂಗಳೂರಿನ ನಿರ್ಮಾಣ್‌ಷೆಲ್ಟರ್ಸ, ಮೈಸೂರಿನ ಶ್ರೀ ಶಿವರಾತ್ರೀಶ್ವರ ಮಹಾಸಂಸ್ಥಾನ ಇವುಗಳಿಂದ ನನಗೆ ಧನಸಹಾಯ ದೊರೆಯುವ ಭರವಸೆಯೂ ಸಿಕ್ಕಿತು. ನೇಪಾಳದ ಸಂಶೋಧನ ಪ್ರವಾಸದ ಮುನ್ನ ಸುಮಾರು ಒಂದು ವರ್ಷ ನೇಪಾಳದ ಚರಿತ್ರ, ಬುಡಕಟ್ಟುಗಳು, ಹಬ್ಬಗಳು ಇತ್ಯಾದಿ ಕುರಿತಂತೆ ಸಾಕಷ್ಟು ಅಧ್ಯಯನ ಮಾಡಿ ಟಿಪ್ಪಣಿ ಮಾಡಿಕೊಂಡೆ. ಆ ಅಧ್ಯಯನದ ಸಮಯದಲ್ಲಿ ನನಗೆ ಹಲವು ಹೊಸ ಸಂಗತಿಗಳೂ ಲಭ್ಯವಾದುವು, ನೇಪಾಳದಲ್ಲಿ ಲಕ್ಷ್ಯವಿಟ್ಟು ನೋಡಬೇಕಾದ ಸಂಗತಿಗಳೂ ಕೆಲವು ಹೊಳೆದುವು. ಈ ಮಧ್ಯೆ ಕೆಲವು ಸಾಂಸಾರಿಕ ಸಮಸ್ಯೆಗಳಿಂದಾಗಿ ನೇಪಾಳ ಪ್ರವಾಸವನ್ನು ಮುಂದೆ ಹಾಕಬೇಕಾಯ್ತು. ಸಕ್ಕರೆ ತೊಂದರೆಯಿಂದ ಪ್ರಜ್ಞಾಹೀನನಾಗಿ, ಆಮಢಲಡ ಚಿಕಿತ್ಸೆಯಿಂದ ಚೇತರಿಸಿಕೊಂಡರೂ ನೇಪಾಳ ಪ್ರವಾಸವನ್ನು ಆ ಸ್ಥಿತಿಯಲ್ಲಿ ಕೈಬಿಡಬೇಕೋ ಏನೋ ಎಂಬ ಅಳುಕೂ ನನ್ನನ್ನು ಬಾಧಿಸಿತು. ಅಂತೂ, ೨೦೦೨ರ ಸೆಪ್ಟೆಂಬರ್ ೧೫ ರಿಂದ ೩೦ ರವರೆಗೆ ಹದಿನೈದು ದಿನ ನೇಪಾಳ ಸಂಶೋಧನ ಪ್ರವಾಸವನ್ನು ಮುಗಿಸಿ ನನ್ನ ಬದುಕಿನ ಒಂದು ಸಾರ್ಥಕ ಭಾಗವನ್ನು ಕಳೆದೆನೆಂದು ಕೃತಕೃತ್ಯತೆಯ ಭಾವ ನನ್ನು ತುಂಬಿಕೊಂಡಿತು.

ಕರ್ನಾಟಕದ ಹೊರಗೆ ಕನ್ನಡ ದೊರೆಗಳು

ಕರ್ನಾಟಕದ ಹೊರಗೆ, ಭಾರತಾದ್ಯಂತ ಕನ್ನಡಿಗ ದೊರೆಗಳು ಆಳಿ ಅಲ್ಲಲ್ಲಿನ ಪ್ರಾದೇಶಿಕ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಈ ಬಗ್ಗೆ ಕನ್ನಡಿಗರಿಗಿರುವ ಅಕ್ಷಮ್ಯ ಅವಜ್ಞೆಗಳ ಬಗ್ಗೆ ೧೯೫೯ರಷ್ಟು ಹಿಂದೆ ಡಿ.ಸಿ ಸರ್ಕಾರರಂತಹ ಇತಿಹಾಸಕಾರರು ಮರುಗಿದ್ದಾರೆ.[2] ಆರನೇ ಶತಮಾನದಲ್ಲಿ ಸ್ಥಾಪನೆಗೊಂಡ ಬಾದಾಮಿ ಚಾಲುಕ್ಯರು ಭಾರತದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವರಲ್ಲದೆ ಭಾರತಾದ್ಯಂತ ಅವರು ಹರಡಿದರು. ಅವರೂ ಸೇರಿದಂತೆ ಮುಂದಿನ ಕನ್ನಡ ರಾಜಮನೆತನಗಳು ವ್ಯಾಪಕಗೊಳಿಸಿದ ‘ಕನ್ನಡಿಗ ಸಂಸ್ಕೃತಿ’ಯ ಬಗ್ಗೆ ಅಧ್ಯಯನವೇ ನಡೆದಿಲ್ಲ (There is ample evidence to prove that, for several centuries from the foundation of the Chalukya House of Badami in the sixth century A.D, the Kannadigs were not merely one of the important peoples on the stage of Indian history, but they actually spread over wide areas of India. However, neither the characteristics of the Kannadiga culture nor impact on the areas outside Karnataka have so far been studied. The world of scholars will be grateful to the Karnataka University if it is successful in initiating studies in this interesting subject.’’).[3]

ಭಾರತದ ಹೊರಗೆ ಆಳಿದ ಕನ್ನಡ ರಾಜಮನೆತನಗಳು ಸ್ಥೂಲವಾಗಿ ಇಂತಿವೆ. ಕಳಿಂಗದ ಪೂರ್ವ ಗಂಗರು ( ಕ್ರಿ.ಶ. ೫ನೇ ಶ.), ಆಂಧ್ರದ ವೆಂಗಿಯ ಪೂರ್ವ ಚಾಳುಕ್ಯರು (೭ನೇ ಶ.), (ಬಹುಶಃ ಕಳಿಂಗದ ಕದಂಬರೂ ಕೂಡ). ಬಂಗಾಳ ಬಿಹಾರಗಳ ಪಾಲರ (ಕ್ರಿ.ಶ. ೮ನೇ ಶ.) ದಾಖಲೆಗಳಲ್ಲಿ ಕರ್ನಾಟಕ (ಕರ್ನಾಟಕ ಸೈನಿಕರ) ಹೆಸರಿವೆ. ಪಾಲರಿಗೂ ರಾಷ್ಟ್ರಕೂಟರಿಗೂ ಇದ್ದ ವೈವಾಹಿಕ ಸಂಬಂಧ ಇದಕ್ಕೆ ಕಾರಣವಿರಬಹುದು. ಬಂಗಾಳದ ಸೇನರು (೧೧ನೇ ಶ.) ಕರ್ನಾಟ ಮೂಲದವರು. ಮತ್ತು ಚಾಲುಕ್ಯರ ಮೊದಲನೆಯ ಸೋಮೇಶ್ವರ, ಅವನ ಮಗ ಆರನೆಯ ವಿಕ್ರಮಾದಿತ್ಯರು ಪೂರ್ವ ಭಾರತವನ್ನು ಗೆದ್ದುದರ ಪರಿಣಾಮವೇ “ಕನಾಟ”ರೆಂದು ಕರೆದಿಕೊಳ್ಳುವ ಸೇನೆ ವಂಶ. ಆ ವಂಶದ ಮೂಲಪುರುಷ ಸಾಮಂತ ಸೇನನನ್ನು (ಸು. ೧೦೫೦) ಅವನ ದಾಖಲೆಗಳಲ್ಲಿ ‘ದಾಕ್ಷಿಣಾತ್ಯ’ನೆಂದು, ಅವನ ಮೊಮ್ಮಗ ವಿಜಯಸೇನನನ್ನು (ಸು.೧೦೬೫) ‘ಬ್ರಹ್ಮಕ್ಷತ್ರಿಯ’ ಅಥವಾ ‘ಕರ್ನಾಟ ಕ್ಷತ್ರಿಯ’ನೆಂದು ಕರೆದಿದೆ. ಅವನ ವಂಶಸ್ಥ ಬಲ್ಲಾಳ ಸೇನ (ಕ್ರಿ.ಶ ೧೨ನೇ ಶ.) ಇವರು ಚಂದ್ರ ವಂಶದ ಕ್ಷತ್ರಿಯರು. (ನೇಪಾಳದ “ಕರ್ನಾಟರು” ಸೂರ್ಯವಂಶದವರು). ಇವನ ಮಗ ತುರ್ಕಿಷ್‌ಮಸಲ್ಮಾನರಿಗೆ ಬಾಗ ಬೇಕಾಯ್ತು. ಸೇನರ ರಾಜಧಾನಿ ನಬೋದ್ವೀಪ (ನವದ್ವೀಪ) ಬಳಿ “ಬಲ್ಲಾಳ್‌ದೀಬ್‌” ಎಂಬ ದಿಬ್ಬವಿರುವುದು ದಾಖಲಾಗಿದೆ (ಬಲ್ಲಾಳ್ – ಕನ್ನಡ ವ್ಯಕ್ತಿನಾಮ. ದೀಬ್‌=ದಿಬ್ಬ).

ಭಾರತದ ಹಲವೆಡೆ ರಾಷ್ಟ್ರಕೂಟ ವಂಶಗಳು ಕಾಣಿಸಿವೆ. ಕರ್ನಾಟಕದ ರಾಷ್ಟ್ರಕೂಟರು (೮ – ೧೦ಶ.) ಕನ್ಯಾಕುಮಾರಿಯವರೆಗೆ ಗೆದ್ದು ಸಿಲೋನ್‌ಮೇಲೂ ದಾಳಿ ನಡೆಸಿದ್ದರು. ಅವರ ವ್ಯಾಪ್ತಿಗೆ ಈಗಿನ ಮಹಾರಾಷ್ಟ್ರದ ಇಡೀ ದಕ್ಷಿಣ ಪಶ್ಚಿಮ ಭಾಗ ಸೇರಿತ್ತು. ಗುಜರಾತಿನ ಚೌಳುಕ್ಯರು (೧೦ – ೧೩ನೇ ಶ.) ಮೂಲತಃ ಕರ್ನಾಟಕದ ಚಾಲುಕ್ಯರೇ. ಗುಜರಾತಿನ ಚೌಳುಕ್ಯರ (೧೨ ಶ.) ಅಥವಾ ಸೋಲಂಕಿಗಳ ರಾಣಿ ನಾಯಕಿ ದೇವಿ ಗೋವೆಯ ಕನ್ನಡ ದೊರೆ ಕದಂಬ ಪೆರ್ಮಾಡಿದೇವನ ಮಗಳು. (ಪೆರ್ಮಾನಡಿಯು ವಿಕ್ರಮಾದಿತ್ಯನ ಮಗಳ ಮಗ, ಗೋವೆಯ ದೊರೆ) ವಿಧವೆಯಾಗಿದ್ದ ಅವಳ ಚೌಳುಕ್ಯ ರಾಜ್ಯದ ಮೇಲೆ ಆಕ್ರಮಣ ಮಾಡಿದ ಘೋರಿ ಮಹಮ್ಮುದನನ್ನು ೧೧೭೮ರಲ್ಲಿ ಸೋಲಿಸಿ, ದೆಹಲಿಯ ಪೃಥ್ವಿರಾಜ ಚೌಹಾಣನಿಂದ “ಯವನ ವಿಜೇತೆ” ಎಂಬ ಖ್ಯಾತಿಯನ್ನು ಪಡೆದಳು. (ಸೂರ್ಯನಾಥ ಕಾಮತ್‌: ಕರ್ನಾಟಕದ ವೀರರಾಣಿಯರು, ಪು. ೧೯ – ೨೧.)ಸು. ೯೬೫ರ ಕಾಲದ ಇವರಲ್ಲಿ “ಬಾರಪ್ಪ” ಎಂಬುವವನ ಹೆಸರಿದೆ.[4] ಇಂದಿಗೂ “ಸೋಲಂಕಿ” ವಂಶನಾಮದವರು ಗುಜರಾತಿನಲ್ಲಿದ್ದಾರೆ. (“ಸೋಲಂಕಿ” ಪದವು “ಚಾಲುಕ್ಯ” ಪದದ ತದ್ಭವ.)

ದೇವಗಿರಿಯ ಯಾದವರು ಕನ್ನಡ ದೊರೆಗಳು. ಮಾನಪುರದ ರಾಷ್ಟ್ರಕೂಟರು (೬ – ೭ಶ.), ಬೀರಾರಿನ ರಾಷ್ಟ್ರಕೂಟರು (೭ ಕ್ರಿ. ಶ.), ಒರಿಸ್ಸಾದ ರಾಷ್ಟ್ರಕೂಟರು (೧೧ – ೧೨ ಶ.) ಕನ್ನಡಿಗರು. ಮಧ್ಯಪ್ರದೇಶವನ್ನು ಆಳಿದವರು (೭೬೦ – ೮೬೫) ರಾಷ್ಟ್ರಕೂಟರೇ. ಕನೋಜಿನ ರಾಷ್ಟ್ರಕೂಟರೂ ಅಷ್ಟೇ (೧೧ – ೧೨ ಶ.) ಇವರ ೧೨ – ೧೩ನೇ ಶತಮಾನದ ಶಾಸನದಲ್ಲಿ ಲಖಣ ಪಾಲನ ಕಾಲದಲ್ಲಿ “ಈಶಾನಶಿವ” ಎಂಬ ಗೌಡ ದೇಶದ ಶೈವಗುರುವು ಹರಿಯಾಣದ “ಸಿಂಹಪಲ್ಲಿ”ಯಲ್ಲಿದ್ದು ಒಂದು ಶಿವದೇವಾಲಯ ಕಟ್ಟಿಸಿದನು. (ಪಲ್ಲಿ – ಪಳ್ಳಿ. ಇದು ದ್ರಾವಿಡ ಭಾಷಾ ಪದ.) ರಾಜಸ್ಥಾನದಲ್ಲಿ ಆಳಿದ ರಾಠೋಡರು (ರಠಡರು) ರಾಷ್ಟ್ರಕೂಟರೇ (೧೩ – ೧೪ ಶ.) ಹಸ್ತಿಕುಂಡಿ, ಧನೋಪ್‌, ಬಿಢುದ ಅವರ ಕೇಂದ್ರಗಳು.[5] ಗುಜರಾತ್‌, ಮಾಳವಗಳಲ್ಲಿ ಆಡಳಿತ ವಿಭಾಗಗಳನ್ನು ಹಳ್ಳಿಗಳ ಸಂಖ್ಯೆಯಿಂದ ಸೂಚಿಸುವ ಪದ್ಧತಿಗೆ ಕರ್ನಾಟಕವೇ ಮೂಲ. (ನೋಡಿ : “ಬನವಾಸಿ ೧೨೦೦೦” ನಾಡು). ಮಿಥಿಲೆಯನ್ನಾಳಿದ ಕರ್ನಾಟ ರಾಜರೂ ಕೂಡ ಆಡಳಿತ ಘಟಕಗಳನ್ನು ಹಳ್ಳಿಗಳ ಸಂಖ್ಯೆಯಿಂದ ಸೂಚಿಸುತ್ತಿದ್ದುದು ಗಮನಾರ್ಹ. ‘ಗ್ರಾಮಪತಿ’ಯು ಒಂದು ಗ್ರಾಮದ ಕಂದಾಯ ವಸೂಲು ಮಾಡುವವನಾದರೆ ‘ದಶಗ್ರಾಮಿಕ’ನು ಹತ್ತು ಗ್ರಾಮಗಳ ಕಂದಾಯ ವಸೂಲು ಮಾಡುವ ಅಧಿಕಾರಿ; ‘ಸಹಸ್ರ ಗ್ರಾಮಪತಿ’ಯು ಸಾವಿರ ಗ್ರಾಮಗಳ ಕಂದಾಯದ ಅಧಿಕಾರಿ. (Sinha : Mithila under the Karnatas, P. 136 – 7.) ಬಂಗಾಳ ಕೊಲ್ಲಿಯ ಆಚೆಯ ಆಗ್ನೇಯ ದ್ವೀಪಗಳ ಮೇಲೂ ಕರ್ನಾಟಕದ ಪ್ರಭಾವ ಆಗಿದೆ. ಅಲ್ಲಿನ ಶಾಸನಗಳ ಪೇಟಿಕಾ ಶಿರಸ್ಸಿನ ಬ್ರಾಹ್ಮಿಲಿಪಿಯು ಕದಂಬರ ಕಾಲದ ಲಿಪಿಯೇ ಆಗಿದೆ. ಇಂಡೋ ಚೈನೀಸ್‌ನ ಇಂಡೊನೇಷಿಯದ ಏಳು ಎಂಟನೇ ಶತಮಾನದ ದಾಖಲೆಗಳಲ್ಲಿ “ಶಕ” ವರ್ಷ ಸೂಚಿತವಾಗಲು ಕರ್ನಾಟಕದ ಪ್ರಭಾವವೇ ಕಾರಣ. (ಪಲ್ಲವರು ‘ಶಕ’ ವರ್ಷ ಬಳಸಲಿಲ್ಲ; ೬ನೇ ಶತಮಾನದಿಂದಲೇ ಬಾದಾಮಿ ಚಾಲುಕ್ಯರು ಅದನ್ನು ಬಳಸುತ್ತಿದ್ದರು.) ಅಲ್ಲಿ ದಶಮಾಂಶ ಪದ್ಧತಿಯ ಸಂಖ್ಯೆಗಳನ್ನು ನಮೂದಿಸಲು ಕರ್ನಾಟಕದ ಪ್ರಭಾವವೇ ಕಾರಣ. (ಮೇಲಿನ ಮಾಹಿತಿಗೆ ನಾನು ಡಿ. ಸಿ. ಸರ್ಕಾರ್‌ಲೇಖನಕ್ಕೆ ಕೃತಜ್ಞ.)

ಹಿಮಾಚಲಪ್ರದೇಶದಲ್ಲಿ ಆಳಿದ ಸೇನರೂ ಕೂಡ (ಕ್ರಿ. ಶ. ೧೨ – ೧೩ಶ.)ಬಂಗಾಳದ ಸೇನ ವಂಶದವರೇ (ಅರ್ಥಾತ್‌ಅವರ ಮೂಲ ಕರ್ನಾಟಕವೇ). ಬಂಗಾಳದ ಲಕ್ಷ್ಮಣ ಸೇನ ಆ ಪ್ರದೇಶದ ಕೊನೆಯ ಹಿಂದೂ ದೊರೆ. ಅವನ ವಂಶದ ರೂಪಸೇನ್‌ಪಂಜಾಬಿಗೆ ಹೋಗಿ ಅಲ್ಲಿ ಆಳಿದನು; ಅವನ ಮಗ ಬೀರಸೇನ ಹಿಮಾಚಲ ಪ್ರದೇಶದ ಸುಕೇತ್‌ಗೆ ಹೋಗಿ (ಕ್ರಿ. ಶ. ೧೨೩೩) ಅಲ್ಲಿ ಒಂದು ರಾಜ್ಯವನ್ನು ಕಟ್ಟಿದನು. ಇದು ಭಾರತದ ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ವಿಲೀನವಾಯ್ತು. ಈಗಲೂ ಆ ಸೇನರ ವಂಶಸ್ಥರಾದ ರಾಜಾ ಅಶೋಕ್‌ಪಾಲ್‌ಸೇನ್‌, ತಿಕ್ಕ ಉಮೇಶ್ವರ ಸಿಂಗ್‌ಇವರು ಮಂಡಿ ಎಂಬ ಊರಿನ ಅರಮನೆಯಲ್ಲಿ ವಾಸವಾಗಿದ್ದಾರೆ. ಅವರು ಮೂಲತಃ ಕರ್ನಾಟಕದವರೆಂದು ಮತ್ತೆ ಹೇಳಬೇಕಾಗಿಲ್ಲ.[6] ‘ಕಾಲಿಕಾ’ ಇವರ ಕಾಲದಲ್ಲಿ ಸಾಹಿತ್ಯ, ಶಿಲ್ಪ, ಖಗೋಳ ವಿಜ್ಞಾನ, ವೈದ್ಯ ವಿಜ್ಞಾನಗಳು ಬೆಳೆದುವು.

ಆಧುನಿಕ ಪೂರ್ವ ಭಾರತದಲ್ಲಿ ಮಾನ್ಯವಾಗಿದ್ದ ಕಾನೂನು ಗ್ರಂಥವಾದ ವಿಜ್ಞಾನೇಶ್ವರನ “ಮಿತಾಕ್ಷರಾ” ಕಲ್ಯಾಣ ಚಾಲುಕ್ಯರ ಕಾಲದಲ್ಲಿ ರಚಿತವಾಗಿದ್ದರೆ, ಬಂಗಾಳದಲ್ಲಿ ಪ್ರಚುರವಾಗಿದ್ದ ಜೀಮೂತವಾಹನನ “ದಾಯ ಭಾಗ”ವು ಸೇನರ ಕಾಲದ್ದು: ಎರಡೂ ವಂಶಗಳು ಕರ್ನಾಟಕದವು ಎಂಬುದನ್ನು ಹೇಳಬೇಕಾಗಿಲ್ಲ. ಸುಪ್ರಸಿದ್ಧ ಕವಿ ಜಯದೇವನು (ಕೃತಿ – ಸಂಸ್ಕೃತ “ಗೀತ ಗೋವಿಂದ”) ಲಕ್ಷ್ಮಣಸೇನನ ಆಸ್ಥಾನಕವಿ (ಕ್ರಿ. ಶ. ೧೨೦೦). ಬಂಗಾಳದ ಮಹಿಷಾಸುರ ಮರ್ದಿನಿ ಅಥವಾ ದುರ್ಗಾ (ಕಾಲೀ) ಮೂಲತಃ ಕರ್ನಾಟಕದ ಚಾಮುಂಡಿ ಎಂದೂ ಹೇಳುವವರಿದ್ದಾರೆ.[7] ಬಹುಶಃ ಅದು ಸರಿಯಾಗಿರಲಾರದು.

ಕರ್ನಾಟಕದ ಹೊರಗೆ ಕನ್ನಡಿಗರು ಉತ್ತರ ಬಿಹಾರ ಮತ್ತು ನೇಪಾಳಗಳನ್ನು ಕೂಡಿಸಿದಂತೆ ಆಳಿದರು: ಅವರೇ “ಕರ್ನಾಟ”ರು ಎಂದು ತಮ್ಮ ದಾಖಲೆಗಳಲ್ಲಿ ಕರೆದುಕೊಂಡಿರುವ ಮಿಥಿಲೆಯ “ಕರ್ನಾಟ” ರಾಜರು.

ನೇಪಾಳ:

ಭಾರತದ ಉತ್ತರಕ್ಕೆ, ದಕ್ಷಿಣದಲ್ಲಿ ಪಶ್ಚಿಮ ಬಂಗಾಳ ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ಅಂಟಿಕೊಂಡಂತಿರುವ ಈಗಿನ ನೇಪಾಳವು ಹದಿನೆಂಟು ಮಿಲಿಯನ್‌ಜನಸಂಖ್ಯೆಯಿರುವ ೧೪೦, ೭೯೮ ಚದರ ಕಿಲೋ ಮೀಟರ್‌ವ್ಯಾಪ್ತಿಯ, “ವಿಶ್ವದ ಏಕೈಕ ಹಿಂದೂ ರಾಷ್ಟ್ರ”ವೆಂದು ನೇಪಾಳಿಗರು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ಸ್ವತಂತ್ರ ರಾಷ್ಟ್ರ (ಚಿತ್ರ – ೧). “ನೇಪಾಳ” ಪದವು “ನಿಪ” (a lake) ಪದದಿಂದ ಬಂದಿದೆಯೆಂದು ಕೆಲವರು ಭಾವಿಸುತ್ತಾರೆ. ಹಿಂದೊಮ್ಮೆ ನೇಪಾಳ ಕಣಿವೆಯು ದೊಡ್ಡ ಸರೋವರವಾಗಿತ್ತೆಂದು ಹೇಳಲಾಗಿದೆ. (Inscriptions of Ancient Nepal. III. Ed: D. R. Regmi.) ನೇಪಾಳವನ್ನು “ನಾಗಹ್ರದ” (ಹ್ರದ = ಸರೋವರ) ಎಂದು ಕರೆಯುತ್ತಿದ್ದುದೂ ಉಂಟು. (Daniel Wright : History of Nepal.) ‘ನೆವಾರ’ ಜನಾಂಗದ ಜನರಿಂದ ನೇಪಾಳ ಬಂದಿತೆಂದು ಊಹಿಸುವುದೂ ಉಂಟು. “ನೇ” ಎಂಬುದು ದೇವರ ಹೆಸರು; ಅವನು ರಕ್ಷಿಸುತ್ತಿರುವ ನಾಡೇ, ಜನರೇ ನೇವಾರ. ನೇವಾರ – ನೇಪಾಳ. (Ed: Bikram Jit Hasrat: History of Nepal.) ಕೆಲವು ವಂಶಾವಳಿಗಳ ಪ್ರಕಾರ, ನಾನ್ಯದೇವನ ಜೊತೆ “ನಯೇರ” ನಾಡಿನಿಂದ ಬಂದವರು ನೇವಾರರು. ಇವರು ‘ಬ್ರಹ್ಮಪುತ್ರ ಛೇತ್ರಿ’ ಮತ್ತು ‘ಆಚಾರ್‌’ ವರ್ಗಕ್ಕೆ ಸೇರಿದವರು. ನೆವಾರಿಗಳು ಈ ಕತೆಯನ್ನು ನಂಬಿ ತಾವು ಕರ್ನಾಟಕದವರೆಂದೂ ಹೇಳಿಕೊಳ್ಳುತ್ತಾರೆ. ನೆವಾರಿಗಳು ನೇಪಾಳದ ಮೂಲ ನಿವಾಸಿಗಳೆಂಬಲ್ಲಿ ಅನುಮಾನವಿಲ್ಲ.

ದಕ್ಷಿಣದ ತರೈ (ತಿರೈ) ಎಂಬ ಸಮತಟ್ಟು ಪ್ರದೇಶ, ಮಧ್ಯದ ಕಣಿವೆ ಪ್ರದೇಶ (ರಾಜಧಾನಿ ಕಾಠಮಾಂಡೋ ಇರುವ ಅತ್ಯಂತ ಪ್ರಮುಖ ಪ್ರದೇಶ), ಉತ್ತರದ ಉನ್ನತ ಹಿಮಾಲಯ ಪರ್ವತ ಶ್ರೇಣಿ ಹೀಗೆ ನೇಪಾಳವನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ಅಲ್ಲಿ ಹಿಂದಿನಿಂದ ಅನುಸರಿಸಿಕೊಂಡು ಬಂದ ಧರ್ಮಗಳನ್ನು ಜನರು ಮುಂದುವರಿಸಲು ಮುಕ್ತ ಅವಕಾಶವಿದೆ; ಮತಾಂತರಕ್ಕೆ ಅವಕಾಶ ಇಲ್ಲ. ಜನಸಂಖ್ಯೆಯಲ್ಲಿ ಹಿಂದೂಗಳದ್ದೇ ಹೆಚ್ಚು[8] (೯೦% ಹಿಂದೂ; ೫.೩% ಬೌದ್ಧ; ೨.೯% ಮುಸ್ಲಿಮರು; ೫೦, ೦೦೦ ಕ್ರಿಶ್ಚಿಯನ್ನರು). ತರೈನಲ್ಲಿ ಹೆಚ್ಚಾಗಿ ಮೈಥಿಲಿ ಬ್ರಾಹ್ಮಣ, ರಜಪುತ್‌, ಭುನಿಯಾರ್‌, ಕೂರ್ಮಿ, ತೇಲಿ, ಥರು, ಧನ್ವರ್‌, ರಾಜ ಬಂಶಿ, ಸತರ್‌, ಮುಸಲ್ಮಾನ್‌ಜನರಿದ್ದರೆ, ಮಧ್ಯದ ಕಣಿವೆ ಪ್ರದೇಶದಲ್ಲಿ ಹೆಚ್ಚಾಗಿ ನೆವಾರ್‌, ರೈ, ಲಿಂಬು, ತಮಂಗ್‌, ಮಗರ್‌, ಗುರುಂಗ್‌, ಥಕಲಿ, ಬ್ರಾಹ್ಮಣ, ಛೇತ್ರಿ (ಕ್ಷತ್ರಿಯ) ಈ ಜನರಿದ್ದಾರೆ. ಉತ್ತರದ ಹಿಮಾಲಯ ಶ್ರೇಣಿಯಲ್ಲಿ ಷೆರ್ಪ, ಲ್ಹೋಮಿ, ಲೋಪ, ಬಾರಗೌನ್ಲೆ, ದೊಲ್ಪೊ ಮನಂಗ್ವ ಜನರಿದ್ದಾರೆ. ಕಾಠಮಾಂಡೋ ಸಮುದ್ರ ತಳದಿಂದ ೪೫೦೦ ಅಡಿ ಎತ್ತರದಲ್ಲಿದೆ. ಉತ್ತರದ ಎವರೆಸ್ಟ್‌ಶಿಖರದ ಎತ್ತರ ೨೯, ೦೨೮ ಅಡಿ. ಎವರೆಸ್ಟನ್ನು ನೇಪಾಳದಲ್ಲಿ ‘ಸಾಗರ್‌ಮಾತಾ’ ಎನ್ನುತ್ತಾರೆ. ಶೇಕಡ ಎಪ್ಪತ್ತೈದು ಭಾಗ ಬೆಟ್ಟಗುಡ್ಡಗಳಿದ್ದು ನೇಪಾಳದ ಮೂರನೇ ಭಾಗ ಒಂದು ಕಾಡಿನಿಂದ ಆವೃತ್ತ. ಅಧಿಕೃತ ಭಾಷೆ ಇಂಡೋ ಆರ್ಯನ್‌ವರ್ಗಕ್ಕೆ ಸೇರಿದ ನೇಪಾಲಿ; ಅಧಿಕೃತ ಬಣ್ಣದ ತೆಳುಗೆಂಪು; ಅಧಿಕೃತ ಪ್ರಾಣಿ ಗೋವು. ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ ಧಾನ್ಯದ ಉತ್ಪನ್ನವಿದ್ದರೂ ಲೋಹ ಸಂಪತ್ತು ಕಡಿಮೆ.

ನೇಪಾಳದಲ್ಲಿ ಶೇಕಡ ಹನ್ನೆಡರಷ್ಟು ಸಾಕ್ಷರತೆ ಇದೆ. ೧೨ – ೧೬ನೇ ಶತಮಾನಗಳಲ್ಲಿ ಭಾರತದಲ್ಲಿ ಮುಸ್ಲಿಮರಿಗೆ ಸೋತ ಹಲವು ದೊರೆಗಳು ನೇಪಾಳಕ್ಕೆ ಬಂದು ಆಳಿದರು. ಹದಿನೆಂಟನೇ ಶತಮಾನದಲ್ಲಿ ಮಲ್ಲ ದೊರೆಗಳನ್ನು (ಇವರ ವಿಷಯ ಮತ್ತೆ ಮುಂದೆ ಬರುತ್ತದೆ) ಹಿಂದಕ್ಕೆ ತಳ್ಳಿ ಗೋರ್ಖ ವಂಶದ ಪೃಥ್ವಿನಾರಾಯಣ ಶಹನು ನೇಪಾಳದ ಬೇರೆ ಬೇರೆ ಭಾಗಗಳನ್ನು ಒಂದು ವ್ಯವಸ್ಥೆಗೆ ತಂದು ಕಾಠಮಾಂಡೊದಿಂದ ಆಳಲು ಆರಂಭಿಸಿದನು (೧೭೬೯). ಪಾಶ್ಚಾತ್ಯ ಜೀವನ ವಿಧಾನದ ಬಗ್ಗೆ ಅವನಿಗೆ ತಿರಸ್ಕಾರ ಭಾವನೆಯಿತ್ತು. ಆ ಕಾರಣದಿಂದ, ತನಗಿಂತ ಹಿಂದಿನವರು ಕ್ರಿಸ್ತಪಾದ್ರಿಗಳಿಗೆ ನೀಡಿದ್ದ ಆಶ್ರಯವನ್ನು ರದ್ದುಪಡಿಸಿದನು (S. D. Munni : Foreign policy of Nepal ನೋಡಿ.) ಆಧುನಿಕ ನೇಪಾಳದ ಅಸ್ತಿತ್ವಕ್ಕೆ ಅವನು ಕಾರಣ. ೧೭೭೫ರಲ್ಲಿ ಮಾಡಿದ ಭಾಷಣದಲ್ಲಿ ಅವನು “ಹಾಗೆ ನೋಡಿದರೆ, ನನ್ನ ನೇಪಾಳವೇ ನಿಜವಾದ ‘ಹಿಂದೂಸ್ಥಾನ್‌’” ಎಂದು ಹೇಳಿಕೊಂಡನು. ಅವನ ಪ್ರಕಾರ, ಭಾರತವು “ಮುಘ್ಲಾನ” (ಮುಸ್ಲಿಮರ ನಾಡು) ಎಂದು ಕರೆಯಿಸಿಕೊಳ್ಳಲು ಯೋಗ್ಯವಾದ ರಾಷ್ಟ್ರ. ಪೃಥ್ವಿನಾರಾಯಣ ಶಹನಿಗೆ ತಾನು ಒಬ್ಬ ಹಿಂದೂವೆಂದು ಕರೆದುಕೊಳ್ಳಲು ಹೆಮ್ಮೆಯಿತ್ತು. ಭಾರತದ ಚರಿತ್ರೆಯಲ್ಲಿ ಮುಸ್ಲಿಮ್‌ದೊರೆಗಳಿಂದಾದ ಅನಾಹುತಗಳ ಬಗ್ಗೆ ಅವನಿಗೆ ತೀವ್ರ ನೋವಿತ್ತೆಂಬುದು ಸ್ಪಷ್ಟ. ಮುಂದೆ ಶಹ ವಂಶದ ದೊರೆಗಳು ದುರ್ಬಲರಾದಾಗ, ಥಾಪಾ (೧೮೦೬ – ೩೭), ರಾಣಾ (೧೮೪೦ – ೧೯೫೦) ವಂಶದವರು ಪ್ರಬಲರಾಗಿ ಶಹ ರಾಜರನ್ನು ಹೆಸರಿಗೆ ಇಟ್ಟುಕೊಂಡು ನೇಪಾಳವನ್ನು ಆಳಿದರು. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಭಾರತವನ್ನು ತಮ್ಮ ಕೈಗೆ ತೆಗೆದುಕೊಂಡಾಗ, ರಾಣಾ ವಂಶದವರು ನೇಪಾಳದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ಜೊತೆ ಒಂದು ಒಪ್ಪಂದ ಮಾಡಿಕೊಂಡರು. ಬ್ರಿಟಿಷರು ಆ ಒಪ್ಪಂದದ ಪ್ರಕಾರ, ಧೈರ್ಯಶಾಲಿಗಳಾದ ಗೋರ್ಖಾಗಳನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳಬಹುದು; ವಿದೇಶಾಂಗ ನೀತಿಯಲ್ಲಿ ನೇಪಾಳವು ಬ್ರಿಟನ್ನನ್ನು ಆಶ್ರಯಿಸಬೇಕು. ಇದರಿಂದಾಗಿ ನೇಪಾಳಕ್ಕೆ ಬ್ರಿಟನ್ನಿನ ರಕ್ಷಣೆ ದೊರೆಯಿತು; ಆಂತರಿಕ ಸ್ವಾತಂತ್ರ್ಯ ಉಳಿಯಿತು. ೧೮೦೬ – ೩೭ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಭೀಮಸೇನ್‌ಥಾಪಾ ನೇಪಾಳದಲ್ಲಿ ಗುಲಾಮಗಿರಿ ರದ್ದುಪಡಿಸಿದನು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದುದರ ಜೊತೆಯಲ್ಲಿ ಹಿಂದಿನಂತೆ ರಾಜ್ಯಾಡಳಿತವು ಶಹ ದೊರೆಗಳ ಕೈಗೆ ದೊರಕಿತು (೧೯೫೦)[9]., ನೇಪಾಳವು ಸ್ವತಂತ್ರ ರಾಷ್ಟ್ರವಾಯಿತು.

ನೇಪಾಳವು ಬೇರೆ ದೇಶಗಳಿಂದ ಸುತ್ತುವರಿದ ಚಿಕ್ಕ ರಾಷ್ಟ್ರವಾದ್ದರಿಂದ, ವ್ಯಾಪಾರದಲ್ಲಿ ವಿಶೇಷವಾಗಿ ಭಾರತವನ್ನು ಅವಲಂಬಿಸುತ್ತದೆ. ೧೯೯೦ರಲ್ಲಿ ಪ್ರಜಾಪ್ರಭುತ್ವವಾದಿಗಳ ಧ್ವನಿ ಪ್ರಬಲವಾಗಿ ರಾಜನ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಯ್ತು. ಈಗ ಇರುವಂತೆ, ಹದಿನೆಂಟು ವರ್ಷಗಳಿಗಿಂತ ಮೇಲ್ಪಟ್ಟ ಪ್ರಜೆಗಳಿಗೆ ಮತದಾನದ ಹಕ್ಕು ಇದೆ. ಅವರಿಂದ ಆಯ್ಕೆಯಾದ ಇನ್ನೂರೈದು ಸದಸ್ಯರಿರುವ ಪ್ರತಿನಿಧಿ ಸಭೆ (‘ಲೋಯರ್‌ಹೌಸ್‌’) ಮುಖ್ಯವಾದುದು. ಅರವತ್ತು ಜನರಿರುವ ರಾಷ್ಟ್ರೀಯ ಸಭೆ ಕೂಡ (‘ಅಪ್ಪರ್‌ಹೌಸ್‌’) ಉಂಟು. ಬಹುಮತವಿರುವ ಪಕ್ಷದ ನಾಯಕನನ್ನು ರಾಜನು ಪ್ರಧಾನಿಯಾಗಿ ನೇಮಿಸುತ್ತಾನೆ. ರಾಜನು ಪಾರ್ಲಿಮೆಂಟಿನ ಭಾಗವೂ ಹೌದು.

ನೇಪಾಳಿ ಭಾಷೆಯು ಸಾಹಿತ್ಯಕವಾಗಿ ಶ್ರೀಮಂತಗೊಂಡಿದೆ. ಕಾಠಮಾಂಡೊ ಪ್ರದೇಶದ ನೆವಾರರ ಶಿಲ್ಪ, ಚಿತ್ರ, ವಾಸ್ತುಗಳು ಜಗತ್ಪ್ರಸಿದ್ಧ ಕಾಠಮಾಂಡೊ ಕಣಿವೆಯೊಂದರಲ್ಲಿ ಎರಡು ಸಾವಿರಕ್ಕೂ ಮೀರಿದ ದೇವಾಲಯ, ಮಂದಿರಗಳಿವೆ. ಧರ್ಮವು ನೇಪಾಳಿಗಳ ಉಸಿರಾಗಿದೆ.[10] ಕಾಠಮಾಂಡೊ ಕಣಿವೆಯ ನೆವಾರಿಗಳು ನೇಪಾಳದ ಸ್ಥಳೀಯ ಪ್ರಮುಖ ಜನಾಂಗಗಳಲ್ಲಿ ಒಂದು. ಬಾಗ್‌ಮತಿ, ವಿಷ್ಣುಮತಿ ನದಿಗಳ ಸಂಗಮಸ್ಥಾನದಲ್ಲಿದೆ. ರಾಜಧಾನಿ ಕಾಠಮಾಂಡೊ. ಅಲ್ಲಿ ಒಂದೇ ಮರದಿಂದ ಕಟ್ಟಿದೆಯೆಂದು ನಂಬಲಾದ “ಕಾಷ್ಠ ಮಂಟಪ” (ಕಾಷ್ಠ ಮಂಡಪ) ಹೆಸರಿನ ಬೃಹತ್‌ಕಟ್ಟಡವಿದೆ. “ಕಾಷ್ಠ ಮಂಡಪ” ವೇ ಕಾಠಮಾಂಡೊ ಎಂದಾಗಿದೆ. ಆ ಕನಿಷ್ಠ ಮಂಟಪದಲ್ಲಿ ಹಿಂದೂಗಳ ಮೂವತ್ತಮೂರು ಕೋಟಿ ದೇವತೆಗಳು ವಾಸಿಸುವರೆಂದು ನಂಬಲಾಗಿದ್ದು, ಹಿಂದೂಗಳಿಗೆ ಆ ಕಟ್ಟಡ ಅತ್ಯಂತ ಪವಿತ್ರವಾಗಿದೆ.

 

[1] ರಾಜಶೇಖರ ವಿರೂಪಾಕ್ಷಸ್ವಾಮಿ ಗೋರಟಾ : ‘ನೇಪಾಳದ ವೀರಶೈವರು’ (ಸಂ: ಎ. ಎಸ್‌. ಹಿರೇಮಠ – “ವೀರಶೈವ ದರ್ಶನ” ಕೃತಿಯಲ್ಲಿ)

[2] D.C Sircar: `Kannadigas outside down the Ages.’ (studies in Education and Culture. D.C pavate Felicitation volume. 1959 E.d: G.S. Halappa). ಈ ಅಧ್ಯಾಯದ ಹಲವು ವಿವರಗಳು ಮೇಲ್ಕಂಡ ಲೇಖನದಿಂದ

[3] ಅದೇ, ಪು. ೨೪೬. ಭಾರತದ ಹೊರಗೆ ಕರ್ನಾಟಕ ಸಂಸ್ಕೃತಿಯ ಪ್ರಭಾವ ಕುರಿತಂತೆ ನಡೆದಿರುವ ಅಧ್ಯಯನಗಳಲ್ಲಿ ನೇಪಾಳ ಸಂಬಂಧಿಯಾದ ನನ್ನ ಅಧ್ಯಯನವೇ ಮೊತ್ತಮೊದಲನೆಯದು. ಭಾರತದ ಒಳಗೂ ಅಂತಹ ವಿಶೇಷ ಅಧ್ಯಯನ ನಡೆದಿಲ್ಲವೆಂದೇ ಹೇಳಬೇಕಾಗಿದೆ.

[4] H. C. Ray : Dynastic History of Northen India, Vol. II. ನೋಡಿ.

[5] ಅದೇ.

[6] ಇಲ್ಲಿಯ ವಿವರಗಳು, B. Chakravati : Sens of Himachala Pradesh Their Pan – Indian Heritage ಕೃತಿಯಿಂದ (ಈ ಕೃತಿಯತ್ತ ಗಮನ ಸೆಳೆದವರು ಡಾ. ಸೂರ್ಯನಾಥ ಕಾಮತ್‌).

[7] ಅದೇ.

[8] The Europa World Year Book, 2000. Vol. II.

[9] ವಿವರಗಳು – Encyclopaedia Britannica (Macropaedia) ಸಂಪುಟದಿಂದ.

[10] ಅದೇ, ಧರ್ಮ ಮತ್ತು ರಾಜತ್ವ ಇವು ಇಂದಿಗೂ ಅಲ್ಲಿನ ನಿಯಂತ್ರಕ ಶಕ್ತಿಗಳು.