“ಜಂಗಮ” ಪರಿಕಲ್ಪನೆ ದಕ್ಷಿಣ ಭಾರತಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಸೀಮಿತವಾದುದಲ್ಲ. ಜಂಗಮ ಜನರು ಭಾರತಾದ್ಯಂತ ಇರುವುದನ್ನು ಗಮನಿಸಿದರೆ (ಅನುಬಂಧ – ೫ ನೋಡಿ) ನೇಪಾಳದ ಜಂಗಮರು ಕರ್ನಾಟಕದಿಂದ ಹೋಗಿ ನೆಲಸಿದವರು ಎಂಬ ಊಹೆಯನ್ನು ಮಾಡುವುದಕ್ಕೆ ಅವಕಾಶಗಳಿವೆ. ಈಗ ನೇಪಾಳದಲ್ಲಿರುವ ಜಂಗಂ ಕುಟುಂಬಗಳು ಸುಮಾರು ಐವತ್ತು. ಅವರು ಮಾತನಾಡುವುದು ನೇಪಾಳಿ ಭಾಷೆಯನ್ನು. ಅವರಲ್ಲಿ ಯಾರಿಗೂ ಕನ್ನಡ ತಿಳಿಯದು. ಅವರು ನೇಪಾಳದ ಸ್ಥಳೀಯರು ಬಹುಶಃ ಅಲ್ಲ. ಉತ್ತರ ಭಾರತದಿಂದ, ವಿಶೇಷವಾಗಿ ಕಾಶಿಯಿಂದ ಹೋಗಿ ನೆಲಸಿದವರೆಂದು ಭಾವಿಸಲು ಕೆಲವು ಸೂಚನೆಗಳಿವೆ. “ನೇಪಾಳಿ ಬೃಹತ್‌ಶಬ್ದ ಕೋಶ”ದಲ್ಲಿ (ಪ್ರ: ಆರ್ಯಾಲ್‌) “ಜಂಗಮ” ಮಾತಿಗೆ ಅದರ ಮೊದಲ ಆವೃತ್ತಿಯಲ್ಲಿ ಕೊಟ್ಟ ಅರ್ತ ಹೀಗಿತ್ತು: “one of the sanyasi (race), caste’’. ಅದರ ಎರಡನೆಯ ಆವೃತ್ತಿಯಲ್ಲಿ ಮೊದಲ ಅರ್ಥದ ಜೊತೆ, “ವೀರಶೈವ, ಲಿಂಗಾಯತ, one type of Bramhins’’ ಎಂಬ ಅರ್ಥವನ್ನು ಹೇಳಿದೆ. ಈ ಎರಡನೆಯ ಅರ್ಥ ಕೊಡಲು ತಾವು ಕಾರಣರೆಂದು ಕಾಠಮಾಂಡೊ ಮಿತ್ರ ಶ್ರೀ ಭರತ್‌ಮಣಿ ಜಂಗಂ ನನಗೆ ತಿಳಿಸಿದರು.

ಭರತ್‌ಮಣಿ ಜಂಗಮ್‌ಮೂಲತಃ ಭಕ್ತಪುರದವರು. ಅವರ “ಜಂಗಂ” ಮಠ ಭಕ್ತಪುರದ ತೌಮಡಿ ಎಂಬ ಪ್ರದೇಶದಲ್ಲಿ, ದರ್ಬಾರ್ ಚೌಕ ಪ್ರದೇಶದಲ್ಲಿದೆ. (ಚಿತ್ರ೧೭, ೧೯) ದರ್ಬಾರ್‌ಚೌಕದಲ್ಲಿ ಭಕ್ತಪುರವನ್ನಾಳಿದ ಮಲ್ಲ ದೊರೆಗಳ ಅರಮನೆ, ಬೃಹತ್‌ದೇವಾಲಯಗಳು, ವಿಶೇಷವಾಗಿ ಹದಿಮೂರನೇ ಶತಮಾನದ ಭೈರವ ದೇವಾಲಯವಿದೆ. (ಚಿತ್ರ ೧೬, ೩೮) ಅರಮನೆ ಆವರಣದಲ್ಲೇ ತಲೇಜು ದೇವಾಲಯವಿರುವುದನ್ನು ಹಿಂದೆಯೇ ಸೂಚಿಸಲಾಗಿದೆ. ಅವರ ಅಣ್ಣ ರಾಮಮಣಿ ಜಂಗಂ ಭಕ್ತಪುರದ ಜಂಗಂ ಮಠದ ಮುಖ್ಯಸ್ಥರು. (ಅವರ ತಂದೆ ಗೋವಿಂದಹರಿ ಜಂಗಂ).

ಭಕ್ತಪುರದಲ್ಲಿ ಒಂದು ದಂತಕತೆ ಪ್ರಚಲಿತವಾಗಿದೆ. ನೇಪಾಳದಲ್ಲಿ ಬೌದ್ಧಧರ್ಮದ ಪ್ರಾಬಲ್ಯವನ್ನು ತಪ್ಪಿಸಲು ಶಿವನು ಕನಸಲ್ಲಿ ಒಂದು ದಕ್ಷಿಣ ಭಾರತದಿಂದ “ಜಂಗಂ ಬ್ರಾಹ್ಮಣ”ರನ್ನು ಕರೆಯಿಸಲು ಸಲಹೆ ಮಾಡಿದನು. ಆಗ ರಾಜನು ಸಮೀಪದಲ್ಲೇ ಇದ್ದ ಕಾಶಿಯ ರಾಜನನ್ನು ಸಂಪರ್ಕಿಸಿ, ಜಂಗಂ ಮಠದ ವಿಶ್ವನಾಥನ ಪೂಜಾರಿಕೆಗೆ ಜಂಗಮರನ್ನು ನೇಪಾಳಕ್ಕೆ ಕರೆಯಿಸಿಕೊಂಡನು. ಎಂದರೆ ಶಿವನ ಸೂಚನೆ ಪ್ರಕಾರ ದಕ್ಷಿಣ ಭಾರತದಿಂದ (ಕರ್ನಾಟಕದಿಂದ) ಕಾಶಿಗೆ ಬಂದಿದ್ದ ಜಂಗಮರನ್ನು ನೇಪಾಳಕ್ಕೆ ತರೆತರಲಾಯಿತು. ಇನ್ನೊಂದು ವದಂತಿಯೂ ಅಷ್ಟೇ ಅಥವಾ ಅದಕ್ಕಿಂತ ಮುಖ್ಯವಾದುದು. ಅಲ್ಲಾವುದ್ದೀನ್‌ಖಿಲ್ದಿಯು ಹದಿಮೂರನೇ ಶತಮಾನದಲ್ಲಿ ಕಾಶಿರಾಜನನ್ನು ಸೋಲಿಸಿ ಕಾಶಿಯ ವಿಶ್ವನಾಥ ಮಂದಿರವನ್ನು ನಾಶಗೊಳಿಸಿದಾಗ ಅಲ್ಲಿನ ಅರ್ಚಕ ಜಂಗಮರು ಖಿಲ್ಜಿಯು ಕಿತ್ತುಹಾಕಿದ್ದ ವಿಶ್ವನಾಥ ಶಿವಲಿಂಗದ ಶಿರವನ್ನು (ಮೇಲಿನ ಗೋಳಕ ಭಾಗವನ್ನು) ತಂದು ಭಕ್ತಪುರದ ಜಂಗಂ ಮಠದಲ್ಲಿ ಸ್ಥಾಪಿಸಿದರು.[1] ವಾರಣಾಸಿಯ ಇಂದಿನ ಶಿವಲಿಂಗವು ಹದಿನೆಂಟನೇ ಶತಮಾನದಲ್ಲಿ ಅಹಲ್ಯಾಬಾಯಿ ಹೋಳ್ಕರ್‌ಸ್ಥಾಪಿಸಿದ್ದು. ಹದಿನೇಳನೇ ಶತಮಾನದಲ್ಲಿ ಶಿವಲಿಂಗವನ್ನು ಕಿತ್ತು ಮುಸಲ್ಮಾನರು ಅಲ್ಲೇ ಪಕ್ಕದ ಬಾವಿಗೆ (‘ಜ್ಞಾನವಾಪಿ’) ಹಾಕಿದರೆಂದು ನಂಬಿದ್ದಾರೆ. ಭಕ್ತಪುರದ ವದಂತಿಯು ನಿಜವಾಗಿದ್ದಲ್ಲಿ ಕಾಶಿಯ ವಿಶ್ವನಾಥನ ಮೂಲ ಲಿಂಗವು ಭಕ್ತಪುರದಲ್ಲಿದೆ ಎಂದಾಗುತ್ತದೆ. ಅದು ಹದಿನಾರನೇ ಶತಮಾನದಲ್ಲಿ ಕೆಳದಿ ದೊಡ್ಡ ಸಂಕಣ್ಣ ನಾಯಕನು ಕಾಶಿಯಿಂದ ತಂದು ಸ್ಥಾಪಿಸಿದ್ದು (ಅನುಬಂಧ – ೬ ನೋಡಿ). ನಾನು ಜಂಗಂ ಮಠದ ಆವರಣದ ಎಂಟಡಿ ಎತ್ತರದ ಪುಟ್ಟ ಗಡಿಯಲ್ಲಿರುವ ವಿಶ್ವನಾಥ ಲಿಂಗವನ್ನು ನೋಡಿದ್ದೇನೆ. (ಚಿತ್ರ ೨೪) ಆಗ ನನಗೆ ಮೇಲಿನ ವದಂತಿ ತಿಳಿದಿರಲಿಲ್ಲ.

ಹಿಂದೆ ನಾವು ಗಮನಿಸಿದ ದಂತಕಥೆ ಇಲ್ಲಿ ಅರ್ಥಪೂರ್ಣವಾಗಿ ತೋರುತ್ತದೆ. ವೈಭವದ ಮೆರವಣಿಗೆ ನೋಡಲು ಕಾಶಿಯಿಂದ ಬಂದಿದ್ದ ಭೈರವನ ತಲೆಯನ್ನು ಕತ್ತರಿಸಿದಾಗ ಅವನು ಓಡಿಹೋಗಿ ಕಾಶಿ ಸೇರಿದನೆಂಬ, ಅವನ ತಲೆ ಮಾತ್ರ ಭಕ್ತಪುರದಲ್ಲೇ ಉಳಿಯಿತು. ಎಂಬ ಕತೆಯಲ್ಲಿ ಕಾಶಿಗೆ ಸಂಬಂಧಿಸಿದ ಮೇಲಿನ ಅರೆ ಐತಿಹಾಸಿಕ ಕತೆಯ ಅವಶೇಷ ಹುದುಗಿರುವಂತಿದೆ.

‘ಜಂಗಂ’ ಮಠವು ಕನಿಷ್ಠ ಹದಿನಾರನೇ ಶತಮಾನದಷ್ಟು ಹಳೆಯದು. ಕರ್ನಾಟಕದ ಆರಾಧ್ಯ ವೀರಶೈವ ಜನರು ಹದಿನಾಲ್ಕನೇ ಶತಮಾನದಲ್ಲಿ ಬನೆಪ ಭಾಗದಲ್ಲಿ ಇದ್ದುದನ್ನು, ಅವರು ಪಶುಪತಿಯ ಲಿಂಗವನ್ನು ಪುನಃ ಪ್ರತಿಷ್ಠೆ ಮಾಡುವಲ್ಲಿ ಪ್ರಧಾನ ಪಾತ್ರವಹಿಸಿದುದನ್ನು ಗಮನಿಸಿದ್ದೇವೆ. ಕ್ರಿ.ಶ. ೧೨೯೦ – ೧೩೦೦ ರಲ್ಲಿ ಪಶುಪತಿ ದೇವಾಲಯವು ಅಲ್ಲಾವುದ್ದೀನ್‌ಖಿಲ್ಜಿಯಿಂದ ಭಗ್ನಗೊಂಡಿತು. ಮುಂದೆ ಮತ್ತೆ ೧೪೯೪ರಲ್ಲಿ ಸಿಕಂದರ್‌ ಲೋದಿಯಿಂದ ನಾಶವಾಯಿತು. ಸು. ೧೫೬೫ರಲ್ಲಿ ಕೆಳದಿ ದೊಡ್ಡ ಸಂಕಣ್ಣ ನಾಯಕನು ಜಂಗಮನಂತೆ ದೆಹಲಿಗೆ ಬಂದು ಅಕ್ಬರನ ಒಪ್ಪಿಗೆ ಪಡೆದು ಕಾಶಿಯ ಭಗ್ನ ಮೂಲ ಲಿಂಗವನ್ನು ತನ್ನ ವಶಕ್ಕೆ ತೆಗೆದುಕೊಂಡು ನೇಪಾಳಕ್ಕೆ ಬಂದು ಅದನ್ನು ಸ್ಥಾಪಿಸಿ ಅಲ್ಲಿನ ಜಂಗಮ ಮಠವನ್ನು ನವೀಕರಿಸಿ ಕಟ್ಟಿಸಿದನು. ಕಾಶಿಯ ಲಿಂಗವನ್ನು ನೇಪಾಳಕ್ಕೆ ತಂದವರು ಜಂಗಮರೇ ಎಂಬ ದಂತಕತೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ.

ಜಂಗಂ ಮಠವು ಸುಮಾರು ನಾನೂರು ವರ್ಷಗಳಷ್ಟು (ಸು. ೧೫೬೫ – ೭೦) ಹಳೆಯ ದೊಡ್ಡ ಕಟ್ಟಡ. ಬಾಗಿಲುಗಳ ಕಿಟಕಿಗಳ ಮರಗೆಲಸದ ಕುಸುರಿ ಕೆಲಸ ನೇಪಾಳದ ಕಲೆಗನುಗುಣವಾಗಿದೆ. (ಚಿತ್ರ ೧೯) ಭಕ್ತಪುರದಲ್ಲಿಯ ಜಂಗಂ ಮಠದಲ್ಲಿ ಈ ಕೆಳಕಂಡ ದೇವರುಗಳಿವೆ:

ಬಿಶ್ವೇಶ್ವರ್‌(ಶ್ರೀ ವಿಶ್ವನಾಥ) (ಚಿತ್ರ ೨೪)
ಬೀರಭದ್ರ (ಚಿತ್ರ ೨೧)
ಬಿಭೂತೇಶ್ವರ್‌
ನೀಲಕಂಠೇಶ್ವರ್‌(ಚಿತ್ರ ೨೫)
ಕೋಟಿಲಿಂಗೇಶ್ವರ್‌
ಮಲ್ಲಿಕಾರ್ಜುನ್‌
ಉಮಾಮಾಹೇಶ್ವರ್‌
ದೇವಿ (ಭದ್ರಕಾಲಿ)
ಪಶುಪತಿ ಮಹಾದೇವ್‌

ಈ ಮಠವು ಮಲ್ಲ ದೊರೆಗಳ ಕಾಲದಲ್ಲಿ “ಲಾವ ಮಠ”ವೆಂದೇ (ರಾಹುಲ್‌, ರಾವುಲ್‌ಮಠ. ಇದು ‘ರಾಜ’ ಪದದಿಂದ ನಿಷ್ಪನ್ನವಾಗಿದೆ) ಪ್ರಖ್ಯಾತವಾಗಿತ್ತು. ಹದಿನಾರನೇ ಶತಮಾನದ ವಿಶ್ವಮಲ್ಲನ ರಾಣಿ ಗಂಗಾದೇವಿಯು ಬಿಶ್ವೇಶ್ವರ್‌ಮತ್ತು ನೀಲಕಂಠ ದೇವರುಗಳ ನಿತ್ಯ ನೈಮಿತ್ತಿಕ ಪೂಜೆಗಳಿಗಾಗಿ ಕ್ರಿ. ಶ. ೧೫೭೨ರಲ್ಲಿ ಭೂದಾನ ಮಾಡಿದ ಶಾಸನ ಜಂಗಂ ಮಠದಲ್ಲಿದೆ. “ಲಾವ ಮಠ”ವು (ಜಂಗಂ ಮಠ) ಜಯ ರುದ್ರಮಲ್ಲನ ಕಾಲದಲ್ಲಿ (೧೩ – ೧೪ ಶ.) ಸ್ಥಾಪಿತಗೊಂಡಿತು. ಬಿಸ್ಕೆಟ್‌ ಜಾತ್ರಾದಲ್ಲಿ (ಅದರ ವಿವರಗಳು ಹಿಂದೆ ಬಂದಿವೆ) ಜಂಗಂ ಮಠದ ಬಿಶ್ವನಾಥ ದೇವರಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಶಿವರಾತ್ರಿ, ಮಕರ ಸಂಕ್ರಾಂತಿಗಳೆಂದು ವೀರಭದ್ರ, ವಿಶ್ವೇಶ್ವರರಿಗೆ ವಿಶೇಷ ಭಕ್ಷ್ಯಗಳನ್ನು, ವಿಸ್ಕೆಟ್‌ಜಾತ್ರಾದಲ್ಲಿ ಭೈರವನು ರಥಾರೂಢನಾಗುವಾಗ ಮೊಸರವಲಕ್ಕಿಯನ್ನು ಹಿಂದೆ ಅರ್ಪಿಸುತ್ತಿದ್ದು ಈಗಲೂ ಮುಂದುವರಿದಿದೆ. ಭಕ್ತಪುರದ ಜಂಗಂ ಮಠದ ವಿಶ್ವೇಶ್ವರ ದೈವದಿಂದಾಗಿ ನೇಪಾಳದ ಕಾಶಿಯೆಂದೇ ಪ್ರಸಿದ್ಧವೆಂಬುದನ್ನು ಗಮನಿಸಬಹುದು. ಮತ್ತು ಅದಕ್ಕೆ ಕಾರಣವೂ ಇದೆಯೆಂಬುದು ಈಗಾಗಲೇ ಸ್ಪಷ್ಟವಾಗಿದೆ.[2] “ಘಂಟಾಕರ್ಣ ಚತುರ್ದಶಿ”ಯ ಹಬ್ಬವೂ ಪ್ರಖ್ಯಾತ. ಅವನು ಶಿವನಲ್ಲದೆ ಅನ್ಯನಾಮವನ್ನು ಕೇಳಬಾರದೆಂದು ಸದಾ ಕಿವಿಗಳಿಗೆ ಗಂಟೆಯನ್ನು ಕಟ್ಟಿಕೊಂಡಿರುತ್ತಿದ್ದನೆಂಬ ಕತೆ ಇದೆ. ಅವನ ಜಾತ್ರೆಯಲ್ಲಿ ರಾಕ್ಷಸಾಕಾರದ ಭೈರವಾಕೃತಿ ಮಾಡಿ ಭಯವನ್ನು ಹುಟ್ಟಿಸುವ ಘಂಟಾಕರ್ಣ ಮೂರ್ತಿಯನ್ನು ನಿರ್ಮಿಸಿ ಅದರ ಸುತ್ತ ಭೂತಗಳ ಬೊಂಬೆಗಳನ್ನು ಕುಳ್ಳಿರುಸುವುದ ಆ ಜಾತ್ರೆಯ ವಿಶೇಷ.[3] (ಚಿತ್ರ ೩೯)

ಜಂಗಂ ಮಠದಲ್ಲಿ ಎರಡು ಕನ್ನಡ ಶಾಸನಗಳಿರುವುದು ಅತ್ಯಂತ ಕುತೂಹಲಕಾರಿಯಾದ ವಿಷಯ. ಒಂದು ತಾಮ್ರ ಪತ್ರದ ನಾಲ್ಕು ಸಾಲುಗಳ ಪಾಠ ಹೀಗಿದೆ[4] (ಚಿತ್ರ ೨೩):

೧. ? ವಾಣವಾನ್ಹು ಗಜೈಃ ಖ್ಯಾತೋ ನೇಪಾಲಾಬ್ದೇ ತುರಂಗಭೇ | ಚತುರ್ಥಾ ಕೃಷ್ಣಪಕ್ಷೇ ಚ ವೃದ್ದಿಯೋಗೇ ಮುದಾs ಕರೋತ್‌|| ಜೀರ್ಣಚಂದಾ

೨. ತಪೋದ್ವಾರಂ ನೀಲಕಂಠೇಶ ತುಷ್ಟಯೇ ರುದ್ರಾಕ್ಷ ಭೂತಿ ಜಂಭಾದ್ರೇ ಚನ್ನ ವೀರೋ ವಿಚಕ್ಷಣಃ || ಸಂ ೮೨೫ ಭಾದ್ರಪದ ವದಿ ೪

೩. ಶುಭ || ಮಟಪತ್ತಿ ಶ್ರೀ ಚೆಂನ್ನವೀರ ದೇವರಿಗೆ ಮಹಾಮಹಂತ್ತಿನ ಪಾದೇ ಗತಿ ರುದ್ರಾಕ್ಷಿ ೧೩೦೦೦ ವಿಭೂತಿ

೪. ೩೦೦೦[5]

ಚನ್ನವೀರ (ದೇವ) ಎಂಬ ‘ವಿಚಕ್ಷಣ’ನು, ವಿವೇಕಿ ಶಿವಭಕ್ತನು ನೇಪಾಳಿ ಸಂವತ್‌೮೨೫ರಲ್ಲಿ (ಕ್ರಿ. ಶ. ೧೭೦೫ರಲ್ಲಿ) ನೀಲಕಂಠ ದೇವರ ಪ್ರೀತ್ಯರ್ಥವಾಗಿ ಹದಿಮೂರು ಸಾವಿರ ರುದ್ರಾಕ್ಷಿಗಳನ್ನು ಮೂರು ಸಾವಿರ ವಿಭೂತಿಗಳನ್ನು ಅರ್ಪಿಸಿದ ವಿಷಯವನ್ನು ತಿಳಿಸುವುದೇ ತಾಮ್ರ ಪತ್ರದ ಪ್ರಧಾನ ಉದ್ದೇಶ. ಆ ರುದ್ರಾಕ್ಷಿ ಮಾಲೆಗಳು ಹಾಗೂ ವಿಭೂತಿಗಳು ಇನ್ನೂ ಇವೆ.

ಈ ಶಾಸನ ರಚಿತವಾದ ಕಾಲದಲ್ಲಿ (ಕ್ರಿ. ಶ.೧೭೦೫) ಭಕ್ತಪುರವನ್ನು ಆಳುತ್ತಿದ್ದ ದೊರೆ ಭೂಪತೀಂದ್ರ ಮಲ್ಲ.

ಅದೇ ಜಂಗಮ ಮಠದ ದಕ್ಷಿಣ ಪೂರ್ವದಲ್ಲಿನ (ಆಗ್ನೇಯ ದಿಕ್ಕಿನಲ್ಲಿ) ಒಂದು ಒರಳು ಕಲ್ಲಿನ ಮೇಲೆ ಸುತ್ತ ಅಂಚಿನಲ್ಲಿ ಕನ್ನಡ ಮತ್ತು ನೇಪಾಲಿ ಭಾಷೆಯ ಒಂದು ಸಾಲಿನ ಶಾಸನವಿದೆ. (ಚಿತ್ರ ೨೨).

“ಮಠದ ಶ್ರೀ ಚೆಂನವೀರದವರು ಸಮ್‌೮೧೯ ಭಾದ್ರ ಶುದಿ ೨”

ಈ ಶಾಸನದ “ಮಠದ ಶ್ರೀ ಚನ್ನವೀರ ದವರು” ಎಂಬುದು ಕನ್ನಡ ಭಾಷೆ ಹಾಗೂ ಅಕ್ಷರಗಳಿದ್ದು ಉಳಿದ ಭಾಗವು ನೇಪಾಳಿ ಭಾಷೆ, ಅಂಕೆಗಳಲ್ಲಿದೆ. ಶಾಸನದ ಕಾಲ ಕ್ರಿ. ಶ. ೧೬೯೯ (ನೇಪಾಳಿ ಸಂವತ್‌೮೧೯+೮೮೦= ಕ್ರಿ. ಶ. ೧೬೯೯). ಹಿಂದಿನ ಶಾಸನದ ಮತ್ತು ಈ ಶಾಸನದ ಚನ್ನವೀರ ದೇವರು ಎಂಬ ಹೆಸರಿನ ವ್ಯಕ್ತಿ ಒಬ್ಬನೇ.

ಈ ಒಂದು ಸಾಲಿನ ಶಾಸನವಿರುವ ಒರಳುಕಲ್ಲು ಸ್ಪಷ್ಟವಾಗಿ ಹಿಂದೊಮ್ಮೆ ಅಡುಗೆ ಮನೆ ಊಟದ ಮನೆ ಆಗಿತ್ತೆಂದು ಹೇಳಬಹುದಾದ ಜಾಗದಲ್ಲಿದೆ. ಒರಳು ಕಲ್ಲು ಇರುವುದು ಮನೆಯ ಮೇಲ್ಚಾವಣಿ ಇರುವ, ಮನೆಯ ಒಳಗಿನ ಒಂದು ಕಟ್ಟೆಯ ಮೇಲೆ. ಆ ಕಟ್ಟೆಯ ಮೇಲೆ ನಿಂತು ಕೈ ತೊಳೆದ ನೀರು ಕೆಳಗೆ ಬಿದ್ದು ಹರಿದು ಹೋಗುತ್ತದೆ. ಆ ದೊಡ್ಡ ಕಟ್ಟೆಯ ಮೇಲೆ ಉದ್ದಕ್ಕೂ ಸಾಲಾಗಿ ಒಂದಡಿ ಎತ್ತರದ ದುಂಡನೆಯ ಮಣ್ಣಿನ ವೇದಿಕೆಗಳಿವೆ. ಊಟದ ತಟ್ಟೆಗಳನ್ನು (ಗಂಗಾಳಗಳನ್ನು)ಅವುಗಳ ಮೇಲಿಟ್ಟುಕೊಂಡು ಜನರು ಕುಳಿತು ಊಟ ಮಾಡಬಹುದು. ಅಲ್ಲೇ ಸಮೀಪದಲ್ಲೇ ಅಡುಗೆ ಮನೆಯಿದೆ. ಇಡೀ ಅಡುಗೆ ಮನೆಯ ವ್ಯವಸ್ಥೆ ಚನ್ನವೀರ ದೇವರು ಎಂಬ ವ್ಯಕ್ತಿಯದು. ಆತ ನೀಲಕಂಠೇಶ್ವರನಿಗೆ ಒಪ್ಪಿಸುವ ಎಡೆ ತಯಾರಿಸಲು ಬೇರೆ ಅಡುಗೆ ಮನೆ, ಹಾಗೆ ಅರ್ಪಿಸಿದ ಎಡೆಯನ್ನು ಕುಳಿತು ಭಕ್ತರು ಭುಂಜಿಸಲು ಪ್ರತ್ಯೇಕ ಊಟದ ಮನೆ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿದುದು ಸ್ಪಷ್ಟವಾಗಿದೆ. ಆ ಒರಳು ಕಲ್ಲು ಅಡುಗೆ ಮನೆಯ ಒಂದು ಭಾಗ. ಒರಳು ಕಲ್ಲಿನ ಮೇಲಿನ ಶಾಸನ ಓದಲು ಸ್ಪಷ್ಟವಾಗಿದೆ. “ಚನ್ನವೀರ ದೇವರು” ಎಂಬುದು ಸ್ಪಷ್ಟವಾಗಿ ಕರ್ನಾಟಕದ, ಬಹುಶಃ ದಕ್ಷಿಣ ಕರ್ನಾಟಕದ ವೀರಶೈವ ಜಂಗಮನ ಹೆಸರು ಎಂಬಲ್ಲಿ ಅನುಮಾನವಿಲ್ಲ. “ಚನ್ನ” ಪದ, “ – ರು” ಪ್ರತ್ಯಯ ಎರಡೂ ಕನ್ನಡ.

ಅದೇ ಜಂಗಮ ಮಠದ ಕ್ರಿ. ಶ. ೧೭೪೨ರ ಸಂಸ್ಕೃತ, ನೇಪಾಲಿ ಭಾಷೆಗಳಲ್ಲಿರುವ ಶಾಸನ ಈ ಸಂದರ್ಭದಲ್ಲಿ ಗಮನಾರ್ಹ. ಭಕ್ತಪುರದ ರಾಜ ದರ್ಬಾರಿಗೆ ದಕ್ಷಿಣಕ್ಕೆ ತೀರ ಸಮೀಪದಲ್ಲಿರುವುದರಿಂದ ಜಂಗಮ ಮಠವು ಅದರ ಸ್ಥಾಪನಾ ಕಾಲದಿಂದ (ಸು. ೧೩೫೦) ರಾಜರಾಣಿಯರ ಗೌರವವನ್ನು ಪಡೆದುದಾಗಿತ್ತು. ೧೫೭೨ರಷ್ಟು ಹಿಂದೆಯೇ ರಾಣಿ ಗಂಗಾದೇವಿ ಜಂಗಮಮಠಕ್ಕೆ ದಾನ ನೀಡಿದ್ದುದು, ಅದನ್ನು ೧೭೪೨ರಲ್ಲಿ ನವೀಕರಿಸಿರುವುದು ಈ ಶಾಸನದಿಂದ ವಿದಿತವಾಗುತ್ತದೆ. ಗಂಗಾದೇವಿಯ ದಾಖಲೆಯಲ್ಲಿ ಭಕ್ತಪುರದ ಜಂಗಂ ಮಠದ ಮಠಪತಿ ಮಲ್ಲಿಕಾರ್ಜುನನನ್ನು ‘ಜಂಗಂ ಬ್ರಾಹ್ಮಣ’ ಎಂದಿದೆ. ‘ಜಂಗಂ ಬ್ರಾಹ್ಮಣ’ರನ್ನು ರಾವಲ್ (ಲಾವ) ಎಂದು, ಅವರ ಮಠಗಳನ್ನು ‘ಲಾವಡ ಮಠ’ ಎಂದು ಕರೆಯಲಾಗಿದೆ. ಈ ಮಠ ಸ್ಥಾಪನೆಯಾದುದು ಹದಿನಾಲ್ಕನೇ ಶತಮಾನದಲ್ಲಿ. ರಾಣಿ ಗಂಗಾದೇವಿ ೧೫೭೨ರಲ್ಲಿ ಇಲ್ಲಿ ವಿಶ್ವೇಶ್ವರನನ್ನು ಸ್ಥಾಪಿಸಿ ಅದರ ಮೇಲೆ ಪುಟ್ಟ ಗುಡಿ ಕಟ್ಟಿದಳು. (ಆ ವಿಶ್ವೇಶ್ವರಮೂರ್ತಿ ಕಾಶಿಯಲ್ಲಿ ಕಿತ್ತು ಹಾಕಲ್ಪಟ್ಟ, ದೊಡ್ಡ ಸಂಕಣ್ಣ ನಾಯಕ ತಂದ ಮೂರ್ತಿಯೇ ಆಗಿರುವ ಸಾಧ್ಯತೆ ಬಹಳ ಇದೆ.)

ಭಕ್ತಪುರದ ಜಂಗಂ ಮಠದಲ್ಲಿ ಮಕರ ಸಂಕ್ರಾಂತಿಯ ದಿನ ವೀರಭದ್ರ ವಿಶ್ವೇಶ್ವರರಿಗೆ ಕ್ಷೀರಾನ್ನ ಇತ್ಯಾದಿ ಭಕ್ಷ್ಯಗಳನ್ನು, ಶಿವರಾತ್ರಿಯಂದು ರೊಟ್ಟಿಯನ್ನು ಅರ್ಪಿಸುವುದು ವಾಡಿಕೆಯಿದ್ದು ಈ ಪದ್ಧತಿ ೧೫೭೨ರಷ್ಟು ಪ್ರಾಚೀನ ಕಾಲದ್ದೆಂಬುದು ಈ ಶಾಸನದಿಂದ ವಿದಿತವಾಗುತ್ತದೆ.

ಕ್ರಿ. ಶ. ೧೭೪೨ರ ಕಾಲದ ಶಾಸನದಲ್ಲಿ ಶಿವಲಿಂ(ಗ)ದೇವರು ಎಂಬ ಗುರುಗಳ ಹೆಸರು ಉಲ್ಲೇಖವಾಗಿರುವುದು ಗಮನಾರ್ಹ.

ಕ್ರಿ. ಶ. ೧೬೬೧ರಲ್ಲಿ ಲಿಖಿತವಾದ ಸ್ವರ್ಣಪತ್ರದ ಮೇಲೆ ಜಂಗಮಮಠದ ಹಲವು ದೇವತೆಗಳ ಉಲ್ಲೇಖವಿದ್ದು, ಆ ವರ್ಷ ಅಲ್ಲಿ ವೀರಭದ್ರನ ಪ್ರತಿಷ್ಠೆಯಾಗಿ (ಚಿತ್ರ ೨೧) ಮಠಪತಿ ಮಹದ್ದೇವರು ಆ ದೇವರ ಪೂಜೆಗಾಗಿ ನೇಮಕವಾದ ವಿಷಯವು ಅದರಲ್ಲಿ ಬಂದಿದೆ. (“ಮಹದ್ದೇವರು” ಹೆಸರು ವಿಶೇಷ ಗಮನಾರ್ಹ). ವೀರಭದ್ರನು ಆ ಮಠದ “ಕ್ಷೇತ್ರಪಾಲ” ದೇವತೆ (ವೀರಭದ್ರ ಮುಖ್ಯವಾಗಿ ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ, ಅದರಲ್ಲೂ ವೀರಶೈವರ ಆರಾಧ್ಯದೈವ).

ಭಕ್ತಪುರದ ಹೊರಭಾಗದಲ್ಲಿ ಅದರ ಭಾಗವಾಗಿರುವ ಸೂರ್ಯ ವಿನಾಯಕ ಸ್ಥಾನದಲ್ಲಿ, ಹುಮಾನ್‌ಘಾಟ್‌ಎಂಬಲ್ಲಿ ಒಂದು ಅನಂತಲಿಂಗೇಶ್ವರ ಎಂಬ ಶಿವಲಿಂಗ ಸಮುಚ್ಚಯವಿದೆ. ಒಟ್ಟು ಅರವತ್ತ ನಾಲ್ಕು ಶಿವಲಿಂಗಗಳನ್ನು (ಇವು ವೀರಶೈವರ ಅರವತ್ತನಾಲ್ಕು ಶೀಲಗಳ ಸಂಕೇತವಿರಬಹುದು) ಕೆಳಗಿನಿಂದ ಶಿಖಾರಾಕಾರವಾಗಿ ಬೇರೆ ಬೇರೆ ವೇದಿಕೆಗಳಲ್ಲಿ ಜೋಡಿಸಿ ತುದಿಯಲ್ಲಿ ಅನಂತಲಿಂಗೇಶ್ವರ ಲಿಂಗವನ್ನು ಸ್ಥಾಪಿಸಿದೆ. ಈ ಬಯಲು ಲಿಂಗಗಳ ಸಮುಚ್ಚಯವು ಭಕ್ತಪುರದ ಜಂಗಂ ಮಠದ ಅಧೀನದಲ್ಲಿದೆ; ಮತ್ತು ಬೊಲೇಚಿಯಲ್ಲಿಯೂ ಒಂದು ಜಂಗಂ ಮಠದ ಕಟ್ಟಡವಿದೆ. ಶಿಖಾರಾಕಾರದ ಒಂದು ಲಿಂಗ ಸಮುಚ್ಚಯದ ಒಂದು ಪಾರ್ಶ್ವದಲ್ಲಿ ಎರಡು ಪದ್ಮಾಸನ ಭಂಗಿಯ ಗುರುಗಳ ಶಿಲಾ ಮೂರ್ತಿಗಳಿವೆ (ಚಿತ್ರ – ೨೮): ಅವುಗಳ ಕೈಯಲ್ಲಿ ಇಷ್ಟಲಿಂಗಗಳು ಸ್ಪಷ್ಟವಾಗಿರುವುದರಿಂದ ಅವು ವೀರಶೈವರ, ಖಚಿತವಾಗಿ ಹೇಳುವುದಾದರೆ ೧೬ – ೧೭ನೇ ಶತಮಾನದ ಜಂಗಂ ಮಠದ ಜಂಗಮ ಗುರುಗಳ ವಿಗ್ರಹಗಳು. (ಚಿತ್ರ ೨೬, ೨೭ ನೋಡಿ).

ಅಲ್ಲಿ, ಹನುಮಾನ್‌ಘಾಟ್‌ನಲ್ಲಿ ದೊರಕಿರುವ ಶಿಲಾಶಾಸನದ ಪ್ರಕಾರ, ಕ್ರಿ. ಶ. ೧೮೨೦ ರಲ್ಲಿ ಶಿವದತ್ತ ಎಂಬ ಅಧಿಕಾರಿಯು“ಗೋಚಾರಣೆ”ಗಾಗಿ (ಗೋವುಗಳು ಮೇಯುವ ಹುಲ್ಲುಗಾವಲಿಗಾಗಿ) ಭೂಮಿ ದಾನ ಮಾಡಿದನೆಂದು ಹೇಳಿದೆ. ಆಗ ಅದರ ಅರ್ಚಕನಾಗಿದ್ದಾತ ನಾಗಲಿಂಗ ಎಂಬ ಜಂಗಮ. ಅವನನ್ನು ಶಾಸನದಲ್ಲಿ ‘ರುದ್ರಿ ಬ್ರಾಹ್ಮಣ’[6]ನೆಂದು ಕರೆದಿದೆ. (ಇದು ಕರ್ನಾಟಕದ ‘ಶಿವಬ್ರಾಹ್ಮಣ’ಕ್ಕೆ ಸಮಾನವಾದುದು). ಮೇಲೆ ಹೇಳಿದ ಎರಡು ಜಂಗಂ ಮೂರ್ತಿಗಳು ಜಂಗಂ ಮಠದ ಮಠಪತಿಗಳ ಶಿಲ್ಪಗಳು. ಅವುಗಳ ಮೇಲಿನ ಹಣೆಯ ಬಣ್ಣದ ನಾಮವು ಈಚೆಗೆ ಹಚ್ಚಿರುವುದು.

ಭಕ್ತಪುರಕ್ಕೆ ಸುಮಾರು ಇಪ್ಪತ್ತೈದು ಕಿಲೋ ಮೀಟರ್‌ದೂರದಲ್ಲಿರುವ ಬನೆಪದಧನೇಶ್ವರ ದೇವಾಲಯದ ಒಡೆಯರು, ಅರ್ಚಕರು ಜಂಗಮರು. ಅಲ್ಲಿಗೆ ನಾಲ್ಕು ಕಿಲೋ ಮೀಟರ್‌ದೂರದ ಪನೌತೀ ಒಂದು ಸುಂದರ ಊರು. ಮೂಲತಃ ಪನೌತಿಯು ಏಳು ಊರುಗಳ (ಪನೌತಿ, ಸಂಗ, ನಲ, ಬನೇಪ, ಧೂಲಿಖೇಲ್‌, ಚೌಕೋಟ್‌, ಖಂಡ್ಪು) ಒಂದು ಆಡಳಿತಾತ್ಮಕ ಘಟಕ. ಹದಿನಾಲ್ಕನೇ ಶತಮಾನದ ಹೊತ್ತಿಗೆ ಬನೆಪ ಊರಲ್ಲಿ ಶ್ರೀಪತಿ ಆರಾಧ್ಯ ಶರ್ಮನೆಂಬ ವ್ಯಕ್ತಿಯಿದ್ದು, ಕ್ರಿ. ಶ. ೧೩೬೦ರಲ್ಲಿ ಅವನ ಮಗ “…. ರಾಯಣಪತಿ ಆರಾಧ್ಯ ಶರ್ಮ”. ಎಂಬಾತ (‘ನಾರಾಯಣಪತಿ’ ಎಂಬುದು ಆ ಹೆಸರಿನ ಪೂರ್ವಾರ್ಧವಾಗಿರಬಹುದು) ಕ್ರಿ. ಶ. ೧೩೬೦ರಲ್ಲಿ ಕಾಠಮಾಂಡೊದ ಪಶುಪತಿನಾಥ ಮೂರ್ತಿಯ ಪುನಃ ಪ್ರತಿಷ್ಠಾಪನೆಯಲ್ಲಿ ಪೌರೋಹಿತ್ಯವಹಿಸಿದ ವಿಷಯ ಹಿಂದೆ ಬಂದಿದೆ. ಅವನ ಮಗನೇ ೧೩೯೪ರ ಬನೆಪ ಶಾಸನದ ಕರ್ತೃ ರಾಜಪತಿ ಆರಾಧ್ಯಶರ್ಮ. ಆ ಆರಾಧ್ಯ ಕುಟುಂಬವು ಬನೆಪ ರಾಜರ ಕುಲಪುರೋಹಿತರಾಗಿದ್ದರು. ೧೪೬೫ರ ಪರ್ಪಿಂಗ್ ಪ್ರದೇಶದ ಸೋಲಂಕಿ ಹೆಸರಿನ ಅಧೀನ ರಾಜರ ಕಾಲದಲ್ಲಿಯೂ ಅವರಿದ್ದರು.

ಪನೌತಿಯು “ಪುಣ್ಯವತಿ”ಯ ತದ್ಭವ (‘ಪೂರ್ಣಮತಿ’ ಎಂದೂ ಉಂಟು) ಮತ್ತು ಊರ ಪಕ್ಕದಲ್ಲೇ ಆ ಹೆಸರಿನ ಪುಟ್ಟ ನದಿ ಹರಿಯುತ್ತದೆ. ಅಲ್ಲಿನ ಭಾಲೇಶ್ವರ, ಇಂದ್ರೇಶ್ವರ ಮಹಾದೇವ (ಚಿತ್ರ ೨೯) ದೇವಾಲಯಗಳ ಅರ್ಚಕರು ಜಂಗಂ ಜನರೇ. ಕ್ರಿ. ಶ. ೧೬೩೯ರ ಸ್ವರ್ಣರಸ ಲೇಪಿತ ಒಂದು ತಾಮ್ರ ಪತ್ರವು ಮೂಲತಃ ಅಲ್ಲಿನ ಇಂದ್ರೇಶ್ವರ ದೇವಾಲಯಕ್ಕೆ ಸೇರಿದ್ದು ಅದೀಗ ಭಕ್ತಪುರದ ಜಂಗಂ ಮಠದಲ್ಲಿದೆ. ಪನೌತಿಯು ಪ್ರಾಚೀನ ಇತಿಹಾಸವಿರುವ ಸುಂದರ ನಗರವಾದರೂ ಅಲ್ಲಿ ಪ್ರಸಿದ್ಧ ಇಂದ್ರೇಶ್ವರ ದೇವಾಲಯ ನಿರ್ಮಾಣವಾದುದು ೧೨ – ೧೩ನೇ ಶತಮಾನದಲ್ಲಿ ಎಂದು ಹೇಳಬಹುದು. ರಾಜ ಜಯನರೇಶ ಮಲ್ಲದೇವನ ಆಳಿಕೆಯಲ್ಲಿ ಕ್ರಿ. ಶ. ೧೬೩೯ರಲ್ಲಿ ಒಬ್ಬ ಶಿವಭಕ್ತ ‘ಚೈತ್ರಕಾರ’ ಕೃಷ್ಣರಾಮ ಎಂಬಾತ ಆ ದೇವಾಲಯದ ದಕ್ಷಿಣ ದ್ವಾರ ಪಶ್ಚಿಮ ದ್ವಾರಗಳಲ್ಲಿ ಸಿಂಹಗಳನ್ನು ಮಾಡಿಸಿಟ್ಟದ್ದು ಇಲ್ಲಿ ದಾಖಲಾಗಿದೆ. ಶಾಸನದ ಒಂದು ಭಾಗ ಹೀಗಿದೆ – “ಶ್ರೀ ಜಯನರೇಶ ಮಲ್ಲದೇವ ಮಹಾರಾಜಾಧಿರಾಜ ರಿಪುಕುಲದಾವಾನಲ ಸತ್ಕೀರ್ತಿ ಪ್ರತಾಪ ಕ್ರಾಂತ ಭೂಮಂಡಲ ನೇಪಾಲ ಮಂಡಲೇಶ್ವರ ವಿಜಯರಾಜ್ಯ ಪುಣ್ಯಾವತೀ…”. ಪನೌತಿಯು ‘ಉತ್ತರ ಪ್ರಯಾಗ’ವೆಂದೇ ಪ್ರಖ್ಯಾತವಾಗಿದೆ.[7] ಅದು ಪುಣ್ಯವತಿ, ರೋಷಿಖೋಲ ನದಿಗಳ ಸಂಗಮ.

ಇಂದ್ರೇಶ್ವರ ದೇವಾಲಯದ ಅರ್ಚಕರಾದ ಶಿವಪ್ರಸಾದ್‌ಜಂಗಮ್‌ಮತ್ತು ರಮೇಶ್‌ಜಂಗಮ್‌ಅವರು ಭರತ್‌ಮಣಿ ಜಂಗಮರ ತಮ್ಮಂದಿರು (ಅವರ ತಂದೆ ಗೋವಿಂದ ಹರಿ ಜಂಗಮ್‌). ಇಂದ್ರೇಶ್ವರ ದೇವಾಲಯದ ಆವರಣದಲ್ಲೇ ಇರುವ ಅವರ ಮನೆಯ ಮಹಡಿಯಲ್ಲಿ ನಿಂತು ನೋಡಿದರೆ ಪಕ್ಕದಲ್ಲೇ ಇರುವ ಸುತ್ತಮುತ್ತಣ ಬೆಟ್ಟ ಗುಡ್ಡ ಕಣಿವೆ ನದಿ, ಗುಡ್ಡಗಳ ಮೇಲಿನ ಮನೆಗಳು, ಗದ್ದೆ ತೋಟಗಳು ಇವೆಲ್ಲ ಅತ್ಯಂತ ರಮಣೀಯ ದೃಶ್ಯವನ್ನು ಒದಗಿಸುತ್ತವೆ. ಆ ಸೋದರರು ತಮ್ಮ ಅರ್ಣಣ ಭರತ್ ಜಂಗಮ್‌ಜೊತೆ ನೇಪಾಳಿ ಭಾಷೆಯಲ್ಲಿ ತೀವ್ರ ವಾಗ್ವಾದಕ್ಕಿಳಿದುದು ನನ್ನ ತೀವ್ರ ಕುತೂಹಲ ಕೆರಳಿಸಿದರೂ ಅದು ನನಗೆ ಅರ್ಥವಾಗದೆ ಪೇಚಾಡಬೇಕಾಯ್ತು. ತಾವು ವೀರಶೈವರು, ಜಂಗಮರು, ನಿಜ. ಆದರೆ ತಮ್ಮ ಗೋತ್ರ ಸೂತ್ರ ಯಾವುದು? ಐದು ಪಂಚ ಪೀಠಗಳಲ್ಲಿ ಯಾವ ಪೀಠಕ್ಕೆ ಸೇರಿದವರೆಂದು ಹೇಳಿಕೊಳ್ಳಬೇಕು? ಇದು ಅವರ ತೀವ್ರ ಭಾವಾವೇಶದ ಚರ್ಚೆಯ ವಿಷಯವಾಗಿತ್ತು. ಗೋಡೆಯ ಮೇಲೆ ಕಾಶಿ ಜಂಗಮವಾಡಿ ಮಠದ ಕ್ಯಾಲೆಂಡರ್‌ಇತ್ತು. ಕಾಶಿ ಅವರಿಗೆ ಸಮೀಪವಿರುವುದರಿಂದ ಕಾಶಿಯ ವಿಶ್ವಾರಾಧ್ಯ ಪೀಠಕ್ಕೆ ತಾವು ಸೇರಿದವರೆಂದು ಭಾವಿಸಿಕೊಳ್ಳುವುದು ಉತ್ತಮವೆಂಬ ನನ್ನ ಸಲಹೆ ಸ್ವೀಕಾರಾರ್ಹವಾದಂತೆ ಕಾಣಲಿಲ್ಲ. (ವಾಸ್ತವವಾಗಿ ಜಂಗಂ ಮಠವು ಕಾಶಿಯಿಂದ ಬಂದ ದೊಡ್ಡ ಸಂಕಣ್ಣ ನಾಯಕ ಕಟ್ಟಿಸಿದ್ದು.) ಇಂದ್ರೇಶ್ವರ ದೇವಾಲಯದ ಪಕ್ಕದಲ್ಲಿರುವ ಒಂದು ಚಿಕ್ಕ ದೇವಾಲಯದ ಅಂಗಳವನ್ನು ನೇಪಾಳದ ಪ್ರಾಚ್ಯವಸ್ತು ಇಲಾಖೆಯು ಒಂದು ಚಿಕ್ಕ ಮ್ಯೂಜಿಯಮ್‌ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಆ ಸೋದರರಲ್ಲಿ ಚಿಕ್ಕವರು ಮದುವೆಯಾಗಿರುವುದು ಒಂದು ‘ಛೇತ್ರಿ’ (ಕ್ಷತ್ರಿಯ) ಕುಟುಂಬದಲ್ಲಿ.

ಪನೌತಿಯಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್‌ದೂರದ ಧೂಲಿಖೇಲ್‌ಅತ್ಯಂತ ಮನೋಹರ ಪ್ರದೇಶ. ಉನ್ನತ ಗಿರಿಶಿಖರಗಳ ದಟ್ಟ ಕಾಡುಗಳ ಅಂಚಿನಲ್ಲಿರುವ ಅಲ್ಲಿಗೆ ಕೇವಲ ಅರವತ್ತು ಕಿಲೋ ಮೀಟರ್‌ದೂರದಲ್ಲಿದೆ. ನೇಪಾಳ ಚೀನಾ ಗಡಿ. ಹಿಮಾಲಯ ಪರ್ವತಾರೋಹಿಗಳು ಬಂದು ತಂಗುವ ಮೊದಲ ತಾಣ ಅದು. ಅಲ್ಲಿಂದ ಅವರ ದುರ್ಗಮ ಪರ್ವತಾರೋಹಣ ಆರಂಭ. ಆ ಪುಟ್ಟ ನಗರದ ಅಂಚಿನಲ್ಲಿ ಒಂದು ದೊಡ್ಡ ಕಣಿವೆ. ಅಲ್ಲಿ ಒಂದು ಹಳ್ಳದ ನೀರು ಮೇಲಿಂದ ಧಾರಾಕಾರವಾಗಿ ಧುಮುಕುತ್ತದೆ. ಇಳಿದು ಹೋದರೆ ಆ ಜಲಪಾತದ ನೀರು ಕೆಳಗಿರುವ ಚಿಕ್ಕ ಗೋಖುರೇಶ್ವರ ಮಂದಿರದ ಪ್ರಾಕಾರವನ್ನು ತುಂಬಿ ಹರಿಯುತ್ತದೆ. ನಾನು ಹೋದಾಗ ಆ ದೇವಾಲಯದ ಪಕ್ಕದಲ್ಲೇ ಕಟ್ಟಿರುವ ತಂಗುದಾಣ ಮಂದಿರದಲ್ಲಿ ವಾಸವಾಗಿದ್ದ ಜಟಾಧಾರಿ ಯೋಗಿ ಸನ್ಯಾಸಿಯು ಆ ನೀರನ್ನೆಲ್ಲ ಎತ್ತಿ ಆಚೆಗೆ ಸುರಿಯುತ್ತಿದ್ದ. ತಲೆಯೆತ್ತಿ ನೋಡಿದರೆ ಬೃಹದಾಕಾರದ ಶಿಖರಗಳ ಶ್ರೇಣಿ. ನನಗೆ ಆ ಇಡೀ ವಾತಾವರಣ, ಏಕೋ ಏನೋ ಪ್ರಾಚೀನ ಭಾರತದ ವೇದಕಾಲದ ಋಷಿಗಳು, ಅವರಿದ್ದ ವನಪ್ರದೇಶಗಳು, ಗುರುಕುಲಗಳು, ವೇದಘೋಷ, ಅವರ ಸಾಧನೆ ಇವು ಜ್ಞಾಪಕಕ್ಕೆ ಬಂದುವು.

ಗೋಖುರೇಶ್ವರ (ಖುರ=ಗೊರಸು) ದೇವಾಲಯದಿಂದ ಮೇಲಕ್ಕೆ ಹತ್ತಿ ಬಂದರೆ ಅಲ್ಲೇ ಅಂಚಿನಲ್ಲಿ ಆ ದೇವಾಲಯದ ಅರ್ಚಕರೂ ಮೇಲ್ವಿಚಾರಕರೂ ಆದ ಜಂಗಮರ ಮೂರು ನಾಲ್ಕು ಮನೆಗಳು. ಆ ಪ್ರದೇಶದ ಜನರು ‘ಗುರು’ ಎಂದು ಭಾವಿಸುವ ಅರವತ್ತೆಂಟು ವಯಸ್ಸಿನ; ನಿವೃತ್ತ ಪ್ರೌಢಶಾಲಾ ಅಧ್ಯಾಪಕ ದುರ್ಗಾ ಪ್ರಸಾದ್‌ಶಾಸ್ತ್ರೀಜಿಯವರು ಆ ಜಂಗಂ ಕುಟುಂಬಗಳ ಮುಖ್ಯಸ್ಥರು. ಅವರು ಕಾಶಿಯ ಜಂಗಮವಾಡಿ ಮಠದಲ್ಲಿದ್ದುಕೊಂಡು ಕಾಶಿಯ ವಿದ್ಯಾಪೀಠದಲ್ಲಿ ಸಂಸ್ಕೃತ ಕಲಿತವರು. ಜಂಗಮವಾಡಿ ಮಠದಲ್ಲಿ ಅವರ ಜೊತೆ ಓದುತ್ತಿದ್ದ ಕರ್ನಾಟಕದ ವಿದ್ಯಾರ್ಥಿಗಳಿಂದಾಗಿ ಅವರಿಗೆ ಹಿಂದೆ ಕನ್ನಡವು ತಕ್ಕಮಟ್ಟಿಗೆ ಕರಗತವಾಗಿದ್ದು ಈಗ ‘ಹೋಗು’ ‘ಎರಡು’, ‘ಅಮ್ಮ’, ‘ಹಣ್ಣು’ ಇಂತಹ ಕೆಲವು ಕನ್ನಡ ಪದಗಳು ಮಾತ್ರ ಜ್ಞಾಪಕದಲ್ಲಿವೆ. ಅವರ ಮೊಮ್ಮಗನ ಹೆಸರು ಶಾಶ್ವತ್‌ಜಂಗಮ್‌. ಅವರ ಬಂಧು ಮಹಿಳೆಯರ ಹೆಸರು ಶಾರದಾ ಜಂಗಮ್‌ಅವರ ಮನೆಯ ಮುಂದೆಯೇ, ಪರ್ವತದ ಬುಡದಲ್ಲಿ ಪ್ರವಾಸಿಗರಿಗಾಗಿ ಸುಸಜ್ಜಿತ ಹೋಟಲ್‌ಇಟ್ಟಿರುವವರು ಜಂಗಂ ಮಹಿಳೆಯನ್ನು ಮದುವೆ ಮಾಡಿಕೊಂಡಿರುವ ಜಂಗಮೇತರ ವರ್ಗದ ಒಬ್ಬ ವ್ಯಕ್ತಿ.

ಭಕ್ತಪುರ, ಬನೆಪ, ಪನೌತಿ, ಧೂಲಿಖೇಲ್‌ಗಳಲ್ಲದೆ ಸಿಪಾಡೋಲ್‌(- ಡೋಲೇಶ್ವರ ಮಹಾದೇವ), ಬಾಗೇಶ್ವರಿ (- ಬಾಗೇಶ್ವರ ಮಹಾದೇವ), ಚಾಂಗು (- ಮೀಲೇಶ್ವರ ಮಹಾದೇವ), ನಾಸಮನಾ (- ಮಂಗಲೇಶ್ವರ ಮಹಾದೇವ), ತಚ್‌ಪಾಲ್‌(- ರುದ್ರೇರ್ಶವರ ಮಹಾದೇವ), ಇನಾಚೊ (- ಮಲ್ಲಿಕಾರ್ಜುನ ಮಹಾದೇವ) ಇಲ್ಲೆಲ್ಲ ಇರುವ ಶಿವದೇವಾಲಯಗಳ ಅರ್ಚಕರು ಜಂಗಮರೇ ಆಗಿದ್ದಾರೆ.

ನೇಪಾಳದಲ್ಲಿ ಒಟ್ಟು ಸುಮಾರು ಐವತ್ತು ಜಂಗಂ ಕುಟುಂಬಗಳಿದ್ದು ಅವರೆಲ್ಲರೂ ಪರಸ್ಪರ ಬಂಧುಗಳೇ ಆಗಿದ್ದಾರೆ. ಕರ್ನಾಟಕದಿಂದ ಬಹುಶಃ ಕಾಶಿಯ ಜಂಗಮವಾಡಿ ಮಠದ ಮೂಲಕ ಹೋದ ಯಾವುದೋ ಜಂಗಂ ಕುಟುಂಬದ ವ್ಯಕ್ತಿ ಆ ಎಲ್ಲ ಜಂಗಂ ಕುಟುಂಬಗಳ ಮೂಲಪುರುಷನೆಂದು ಕಾಣುತ್ತದೆ. ಕಾಶಿ ಜಂಗಮವಾಡಿ ಮಠದ ಕಟ್ಟಡವನ್ನು ನೇಪಾಳದ ರಾಜ ರುದ್ರಮಲ್ಲನು (೧೨೯೬ – ೧೩೨೬) ಕಟ್ಟಿಸಿದನೆನ್ನಲಾಗಿದೆ.[8] ಆ ವಿಷಯವನ್ನು ಹೇಳುವ ಶಾಸನವು ಜಂಗಮವಾಡಿ ಮಠದಲ್ಲಿದೆ. (ಕಟ್ಟಡವನ್ನು) ಸು. ೧೫೬೫ರಲ್ಲಿ ದೊಡ್ಡ ಸಂಕಣ್ಣ ನಾಯಕನು ನವೀಕರಿಸಿದನು.) ಹದಿನಾರನೇ ಶತಮಾನದಲ್ಲಿ ನೇಪಾಳದ ಜಯರುದ್ರಮಲ್ಲನು ಆ ಮಠಕ್ಕೆ ಕೆಲವು ಭೂಮಿಗಳನ್ನು ಕೊಟ್ಟಂತೆ ದಾಖಲಾಗಿದೆ. ಕಾಶಿಯ ಜಂಗಮವಾಡಿ ಮಠದ ನಿಜವಾದ ಚರಿತ್ರೆ ಆರಂಭವಾಗುವುದೇ ಬಹುಶಃ ೧೩ – ೧೪ನೇ ಶತಮಾನದಿಂದ. ‘ಪಂಚಾಚಾರ್ಯ’ದಲ್ಲಿ ಮೊದಲು ಇದ್ದುದು ಚತುರಚಾರ್ಯರೆಂಬ ಹೆಸರಿನ ನಾಲ್ವರು ಮಾತ್ರ (ರೇವಣಾರಾಧ್ಯ, ಮರುಳಾರಾಧ್ಯ, ಪಂಡಿತಾರಾಧ್ಯ ಮತ್ತು ಏಕೋರಾಮಾರಾಧ್ಯ). ಈ ಪಟ್ಟಿಗೆ ಕಾಶಿಯ ವಿಶ್ವಾರಾಧ್ಯರ ಹೆಸರು ಸೇರಿದ್ದು ೧೩ – ೧೪ನೇ ಶತಮಾನಗಳ ಬಳಿಕ ಎಂಬುದು ಗಮನಾರ್ಹ.

ಕಾಶಿಯಲ್ಲಿ ರುದ್ರಮಲ್ಲನು ಜಂಗಮವಾಡಿ ಮಠವನ್ನು ಕಟ್ಟಿಸಿದ ಮೇಲೆ, ಅದರ ಮೂಲಕ ಹೋದ ಜಂಗಮ ವ್ಯಕ್ತಿಯೊಬ್ಬ ನೇಪಾಳದ ಜಂಗಂ ವರ್ಗದ ಜನರಿಗೆ ಮೂಲಪುರುಷನಾಗಿರಬಹುದು. ಬನೆಪ ಪ್ರಾಂತದಲ್ಲಿ ಹದಿನಾಲ್ಕನೇ ಶತಮಾನದಲ್ಲಿ ಆರಾಧ್ಯ ಜಂಗಮರಿದ್ದುದನ್ನು ನಾವಾಗಲೇ ಗಮನಿಸಿದ್ದೇವೆ. ಜಂಗಂ ಮಠದ ಶಾಸನಗಳಲ್ಲಿ ಬರುವ ಚನ್ನವೀರ ದೇವರು, ಮಹದ್ದೇವರು (ಬಹುಶಃ ‘ಮಹಾದೇವ ದೇವರು’), ಶ್ರೀ ಶಿವಲಿಂಗದೇವರು ಈ ಹೆಸರುಗಳು ಸ್ಪಷ್ಟವಾಗಿ ಕನ್ನಡದ ಹೆಸರುಗಳು (ನೋಡಿ: ಪ್ರಭುದೇವರು, ಮಲ್ಲೇದೇವರು, ಲಿಂಗದೇವರು ಇವು ಈಗಲೂ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಹೆಸರುಗಳು. ರು ಎಂಬುದು ಕನ್ನಡ ಪ್ರತ್ಯಯ). ಜೊತೆಗೆ, ಭಕ್ತಪುರದ ಜಂಗಂ ಮಠದ “ಮಲ್ಲಿಕಾರ್ಜುನ” ಎಂಬ ದೈವವು ದಕ್ಷಿಣ ಭಾರತದ್ದು ಮತ್ತು ವೀರಶೈವರ ಆರಾಧ್ಯಧೈವ. ಆ ಹೆಸರಿನ ಮೂಲದಲ್ಲಿ “ಮಲೆ” (=hillock). ಪದವಿದೆ. ವೀರಭದ್ರನಂತೂ ವೀರಶೈವರ ವಿಶಿಷ್ಟ ದೇವತೆ. ಇಂದಿಗೂ ಕರ್ನಾಟಕದಲ್ಲಿ ವೀರಭದ್ರ ದೇವಾಲಯಗಳ ಅರ್ಚಕರು ಬಹುತೇಕ ವೀರಶೈವರು.

ನೇಪಾಳದ “ಜಂಗ” ಸಮುದಾಯದ ಹಾಗ ಜಂಗಂ ಮಠಗಳ ಖಚಿತ ಚರಿತ್ರೆ ಬರೆಯುವ ಅಗತ್ಯವಿದೆಯಾದರೂ, ಆ ಜನ ಮತ್ತು ಅವರ ಮಠಗಳು ಮೂಲತಃ ಕನ್ನಡದವರೇ, ಅವರ ಮಠಗಳೇ ಎಂಬಲ್ಲಿ ಅನುಮಾನವಿಲ್ಲ. “- ಆರಾಧ್ಯ” ಕೊನೆಯಲ್ಲಿ ಬರುವ ಹೆಸರಿನವರನ್ನೂ ನಾವು ಗಮನಿಸಬೇಕು. ೧೪ನೇ ಶತಮಾನದ ಬನೆಪ ಭಾಗದ ಆರಾಧ್ಯರು ಕರ್ನಾಟಕದವರೇ ಎಂಬ ಜಗದೀಶ್‌ಚಂದ್ರ ಶರ್ಮ ರೆಗ್ಮಿಯವರ ಊಹೆ ಸಕಾರಣವಾದುದು. ಭಕ್ತಪುರದ ಜಮಗಂ ಮಠವು ಕಾಶಿಯ ಜಂಗಮವಾಗಿ ಮಠದ ಶಾಖೆ ಎಂಬ ತೀರ್ಮಾನ ರೆಗ್ಮಿಯವರದು – “At the same time we come to the conclusion that the Jangam Math in Bhaktapur is no other than a branch of the Jangam Math at Kashi.’’[9] ಈ ಮಾತನ್ನು ಸ್ಥೂಲವಾಗಿ ಒಪ್ಪಿಕೊಳ್ಳಬಹುದಾದರೂ, ಹೆಚ್ಚಿನ ವಿವರಣೆಯನ್ನು ಬಯಸುತ್ತದೆ (ಅನುಬಂಧ – ೬ ನೋಡಿ)

ನೇಪಾಳದ ಜಂಗಂ ವರ್ಗದ ಜನರ ಹೆಸರುಗಳು, ಗಂಡಾಗಲಿ ಹೆಣ್ಣಾಗಲಿ “ಜಂಗಂ” ಎಂದೇ ಕೊನೆಯಾಗುತ್ತವೆ (ಭರತ್‌ಮಣಿ ಜಂಗಂ, ಸೀತಾ ಜಂಗಂ ಇತ್ಯಾದಿ.) ಅವರು ಮೈಮೇಲೆ ಇಷ್ಟಲಿಂಗ, ಜನಿವಾರ ಎರಡನ್ನೂ ಧರಿಸುತ್ತಾರೆ. ನಾನು ಭೇಟಿ ಮಾಡಿದ ಇಬ್ಬರಲ್ಲಿ ಒಬ್ಬರು ಇಷ್ಟಲಿಂಗ ಮತ್ತು ಜನಿವಾರಗಳನ್ನು ಪ್ರತ್ಯೇಕವಾಗಿ ಧರಿಸಿದ್ದರೆ ಇನ್ನೊಬ್ಬರು ಇಷ್ಟಲಿಂಗವನ್ನು ಜನಿವಾರದ ತುದಿಗೆ ಕಟ್ಟಿಕೊಂಡಿದ್ದರು. ಪ್ರತ್ಯೇಕವಾಗಿ ಎರಡನ್ನೂ ಧರಿಸುವುದೇ ಮೊದಲಿದ್ದ ಪದ್ಧತಿಯೆಂಬುದನ್ನು ಖಚಿತಪಡಿಸಿಕೊಂಡಿದ್ದೇನೆ. ಲಿಂಗ ದೀಕ್ಷೆ, ವಿವಾಹಗಳಲ್ಲಿ ಪಂಚ ಕಳಶ ಹೂಡುತ್ತಾರೆ. ವಿವಾಹದಲ್ಲಿ ಅಗ್ನಿಪೂಜೆ ಹೋಮ ಹವನಾದಿಗಳುಂಟು. ವೀರಭದ್ರ ದೇವರಿಗೆ ಕರ್ನಾಟಕದಲ್ಲಿನಂತೆ “ಗುಗ್ಗುಳ” ಉತ್ಸವವುಂಟು. ಎಲ್ಲರೂ ಅಪ್ಪಟ ಶಾಖಾಹಾರಿಗಳು. ತಮ್ಮನ್ನು ಒಂದು ರೀತಿಯಲ್ಲಿ ರುದ್ರಬ್ರಾಹ್ಮಣ, ಶಿವಬ್ರಾಹ್ಮಣ ಅಥವಾ ಜಂಗಂ ಬ್ರಾಹ್ಮಣರೆಂದೇ ಭಾವಿಸುವ ಅವರು ಬ್ರಾಹ್ಮಣ ಜೊತೆ ಮತ್ತು ‘ಛೇತ್ರಿ’ಗಳ ಜೊತೆ ಸಂಬಂಧ ಬೆಳೆಸುತ್ತಾರೆ. ಅವರ ಮದುವೆ, ತಿಥಿ ಇತ್ಯಾದಿ ಸಮಯದಲ್ಲಿ ಬ್ರಾಹ್ಮಣರೇ ಪುರೋಹಿತರು.

ಮೂಲತಃ ಭಕ್ತಪುರದವರಾದ ಭರತ್‌ಮಣಿ ಜಂಗಂ (ಜನನ : ೧೯೪೭) ಈಗ ಕಾಠಮಾಂಡೊದಲ್ಲಿ ನೆಲಸಿ ಅಲ್ಲಿನ ಸಾಹಿತ್ಯಕ, ಸಾಮಾಜಿಕ, ಪತ್ರಿಕಾ ರಂಗಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. (ದಿ) ಬೀರೇಂದ್ರ ಬಿಕ್ರಮ್‌ಷಹ ಮಹಾರಾಜರಿಗೆ ಕೆಲಕಾಲ ಅರಮನೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡಿರುವ ಅವರು ೧೯೮೦ ರಲ್ಲಿ ಭಕ್ತಪುರದಿಂದ ಪಾರ್ಲಿಮೆಂಟಿಗೆ ಸ್ಪರ್ಧಿಸಿದ್ದರು. ಅವರ ಎರಡು ಶ್ರೇಷ್ಠ ಕಾದಂಬರಿಗಳು ಇಂಗ್ಲಿಷಿಗೆ ಅನುವಾದವಾಗಿವೆ (The Black Sun; The Red Sun). ಕಷ್ಟದಲ್ಲಿರುವವರಿಗೆ ಮಾರ್ಗ ತೋರಿಸಲು “ಸಮಾಲೋಚನ್‌” ಎಂಬ ಸಂಸ್ಥೆ ನಡೆಯಿಸುತ್ತಿದ್ದಾರೆ. “ಜಂಗಮ್‌ಛಾತ್ರ ಬ್ರತಿ”ಯು (Jangam Scholarship Programme) ಭಕ್ತಪುರದ ಎಂಟು ಹತ್ತು ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಸಹಾಯ ಮಾಡುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಮಾಜ ಕಾರ್ಯಕರ್ತರೂ ಖ್ಯಾತ ಪತ್ರಿಕೆ ಅಂಕಣ ಬರಹಗಾರರೂ ಆಗಿದ್ದಾರೆ, ಭರತ್‌ಮಣಿ ಜಂಗಮ್‌(ಚಿತ್ರ ೩೦). ಭಕ್ತಪುರದ ಜಂಗಂ ಮಠದಲ್ಲಿ ‘ಜಂಗಂ ಪ್ರತಿಷ್ಠಾನ’ ಸಂಸ್ಥೆಯಿದೆ. (ಚಿತ್ರ ೧೭).

ಅವರ ಸಮೀಪ ಬಂಧುಗಳಾದ ಸಾವಿತ್ರಿ ಜಂಗಮ್‌ಥಾಪ ಒಬ್ಬ ಉನ್ನತ ಅಧಿಕಾರಿಯಾಗಿದ್ದರು; ಲೇಖಕಿಯೂ ಹೌದು. ದೀಪಕ್‌ಜಂಗಮ್‌, ಪುಷ್ಕರ್‌ಜಂಗಮ್‌ಇಬ್ಬರೂ ಶ್ರೇಷ್ಠ ಸಂಗೀತ ಕಲಾವಿದರು. ಕೆಲವರು ವ್ಯಾಪಾರ ಕ್ಷೇತ್ರದಲ್ಲಿದ್ದಾರೆ. ಹಲವರು ರೈತರೂ ಬಡವರೂ ಆಗಿ ಬದುಕಿನ ನಿರ್ವಹಣೆಗಾಗಿ ಕಷ್ಟಪಡುತ್ತಿದ್ದಾರೆ.

ಇಂದು ಜಂಗಂ ಮಠವು ಭಕ್ತಪುರದ ಪ್ರಮುಖ ಧಾರ್ಮಿಕ ಕೇಂದ್ರವಲ್ಲದಿದ್ದರೂ ಅದರ ಇಂದಿನ ಸುಂದರ ಕಟ್ಟಡ ಉಳಿದ ಭಕ್ತಪುರದ ಕಟ್ಟಡಗಳಿಗೆ ಹೋಲಿಸಿದರೆ ಗಮನಾರ್ಹವಲ್ಲದಿದ್ದರೂ ಸಂಸ್ಥೆಯಾಗಿ ಉದ್ದಕ್ಕೂ ಭಕ್ತಪುರದ ಸಾಮಾಜಿಕ ರಾಜಕೀಯ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತ ಬಂದಿದೆ. ಇಂದಿಗೂ ಭಕ್ತಪುರದ ಎಲ್ಲ ಧಾರ್ಮಿಕ ಹಬ್ಬಗಳಲ್ಲಿ ಅದಕ್ಕೊಂದು ಮಹತ್ವದ ಸ್ಥಾನವಿದೆ. ಪಶುಪತಿ ದೇವಾಲಯದ ಅರ್ಚಕರು ಕನ್ನಡವನ್ನು ಮಾತನಾಡುತ್ತ ಆ ದೇವಾಲಯದಲ್ಲಿ ಕರ್ನಾಟಕತ್ವವನ್ನು ನೆನಪಿಸುವಂತೆ, ಜಂಗಂ ಮಠದಲ್ಲಿ ಜನ ಕನ್ನಡ ಮಾತನಾಡದಿದ್ದರೂ ತಾವು ಮೂಲತಃ ಕರ್ನಾಟಕದವರು ಎಂಬ ಪ್ರಜ್ಞೆ ಉಳ್ಳವರಾಗಿದ್ದು ಆ ಮಟ್ಟಿಗೆ ಅವರು ಕರ್ನಾಟಕತ್ವವನ್ನು ನೆನಪಿಗೆ ತರುತ್ತಾರೆ. ಅಲ್ಲಿನ ಕನ್ನಡ ಶಾಸನಗಳಂತೂ ಸರಿಯೇ.

 

[1] ಭರತಮಣಿ ಜಂಗಮ್‌ : ‘ಭಕ್ತಪುರಕಾ ಧಾರ್ಮಿಕ್‌ರ ಸಾಂಸ್ಕೃತಿಕ್‌ವಿಕಾಸಮಾ ಜಂಗಮ್‌ಜಾತಿಕೋ ಭೂಮಿಣ’ (ನೇಪಾಳಿ ಲೇಖನ. ಅಚ್ಚಾದ ಲೇಖನದ ಬಿಡಿ ಪ್ರತಿಯಲ್ಲಿ ಅದು ಪ್ರಕಟಿತವಾದ ಅದು ಪ್ರಕಟಿತವಾದ ಪತ್ರಿಕೆಯ ಉಲ್ಲೇಖವಿಲ್ಲ.)

[2] ಅನುಬಂಧ – ೬ ನೋಡಿ.

[3] ಪುರುಷೋತ್ತಮ ಲೋಚನ ಶ್ರೇಷ್ಠ : ‘ಭಕ್ತಪುರಮಾ ವೀರಶೈವ ಮತಕೋ ವಿಕಾಸ್‌ರ್‌ಪ್ರಭಾವ್‌’. ಖೋಪೃಢ್‌, ೧೯೯೯ – ೨೦೦೦.

[4] ಪುರುಷೋತ್ತಮ ಲೋಚನ ಶ್ರೇಷ್ಠ : ‘ಜಂಗಮ ಮಠಕಾ ಅಭಿಲೇಖ್‌’. Voice of History. June. 2000, p. 113 – 128. ಲೇಖಕರು ತಾಮ್ರಪತ್ರ ಮತ್ತು ಶಿಲಾಶಾಸನಗಳ ನೇಪಾಳಿ ಭಾಗಗಳನ್ನು ಮಾತ್ರ ಪ್ರಕಟಿಸಿ, ಕನ್ನಡ ಶಾಸನಗಳ ಭಾಗವನ್ನು ಖಾಲಿ ಬಿಟ್ಟು, ಕೆಳಗೆ “ಇವು ಕನ್ನಡ ಭಾಷೆಯಲ್ಲಿರುವುದರಿಂದ ಓದಲು ಸಾಧ್ಯವಾಗಿಲ್ಲ” ಎಂದಿದ್ದಾರೆ. (ಪು. ೧೧೯, ೧೨೧) (ಚಿತ್ರ ೪೨). ಈ ಭಾಗದಲ್ಲಿ ಉಲ್ಲೇಖಿಸಿರುವ ಶಾಸನಗಳು ಡಾ. ಶ್ರೇಷ್ಠ ಅವರ ಲೇಖನದಿಂದ.

[5] ಮೊದಲ ಎರಡು ಸಾಲುಗಳ ಭಾಷೆ ಮತ್ತು ಲಿಪಿ ನೇಪಾಳಿ. ಮೂರನೇ ಸಾಲಿನ “ಶುಭ” ಬಳಿಕ ಬಂದಿರುವ ಪಾಠದ ಭಾಗ ಕನ್ನಡ ಅಕ್ಷರಗಳಲ್ಲಿ ಮತ್ತು ಅಂಕೆಗಳಲ್ಲಿ ಇದೆ.

[6] ವೀರಶೈವದಲ್ಲಿ ‘ರುದ್ರಿ ಬ್ರಾಹ್ಮಣ’ ಅಥವಾ ಶಿವ ಬ್ರಾಹ್ಮಣ ಜಂಗಮರಲ್ಲಿ ಹದಿನೆಂಟು ಪ್ರಕಾರಗಳಿವೆಯೆಂದು ಡಾ. ಪುರುಷೋತ್ತಮ ಲೋಚನ ಶ್ರೇಷ್ಠಿಯವರ ಲೇಖನದಲ್ಲಿದೆ. (‘ಜಂಗಮಮಠ ಕಾ ಅಭಿಲೇಖ್‌’ : Voice of History, Vol. XV, No. 1. June, 2000).

ಶಿವ, ಪಶುಪತಿ, ಮೃತ್ಯುಂಜಯ, ತ್ರಿನೇತ್ರ, ಕೃತ್ತಿವಾಸ, ಪಂಚಾನನ, ಶಿತಿಕಂಠ, ಖಂಡಪರಶು, ಪ್ರದ್ಯಮಾಧೀಯ, ಗಂಗಾಧರ, ಮಹೇಶ್ವರ, ರುದ್ರ, ವಿಷ್ಣು, ಪಿತಾಮಹ, ಸಂಸಾರ ವೈದ್ಯ, ಸರ್ವಜ್ಞ, ಪರಮಾತ್ಮ, ಕಪಾಲಿ. ಇದಕ್ಕೆ ಆಧಾರವೇನೋ ತಿಳಿಯದು. ಹಲವು ಶಿವನ ಪರ್ಯಾಯ ನಾಮಗಳೆಂಬುದು ಸ್ವಯಂವೇದ್ಯ. ಕರ್ನಾಟಕದ ಕೆಲವು ಹಿಂದಿನ ಗ್ರಂಥಗಳಲ್ಲಿ ವೀರಶೈವರನ್ನು ‘ಭೂರುದ್ರ’ರೆಂದು ಕರೆದಿದೆ (ನೋಡಿ – ‘ಭೂಸೂರ’=ಬ್ರಾಹ್ಮಣ).

[7] ಜಂಗಂ ಮಠದ ಶಾಸನಗಳ ಬಗ್ಗೆ ಮಾಹಿತಿಯನ್ನು ಪಡೆದಿರುವ ಆಕರ: ಪುರುಷೋತ್ತಮ ಲೋಚನ ಶ್ರೇಷ್ಠ : ‘ಜಂಗಮ್‌ಮಠ ಕಾ ಅಭಿಲೇಬ್‌’ Voice of History, Vol. XV, No.1, June, 2000. ಆ ಶಾಸನಗಳಲ್ಲಿ ಎರಡು ಕಡೆ ಬಂದಿರುವ ಕನ್ನಡ ಭಾಷೆಯ ಪಾಠವನ್ನು ಅವರು ಅಚ್ಚು ಮಾಡಿಸಿಲ್ಲ; ಅವು ಕನ್ನಡವೆಂದು ಮಾತ್ರ ಸೂಚಿಸಿದ್ದಾರೆ. (ಚಿತ್ರ ೪೨). ಆ ಶಾಸನಗಳ ಕನ್ನಡ ಭಾಗಗಳ ಪಾಠವನ್ನು ಮೊದಲಿಗೆ ನಾನು ಓದಿ ಕೊಟ್ಟದ್ದೆಂಬ ವಿಷಯ ಈ ಕೃತಿಯ ಆರಂಭದಲ್ಲೇ ಬಂದಿದೆ. ಆ ಕನ್ನಡ ಪಾಠ ನೇಪಾಳದಲ್ಲಿ ಪ್ರಕಟವಾಗಿಲ್ಲ.

[8] Jagadish Chandra Sharma Regmi : Nepal – India Cultural Relations (ಅಪ್ರಕಟಿತ), ಪು. ೧೯. ಅದೇ ಲೇಖಕರ History of Religions in Nepal (P.101 – 2) ಎಂಬ ಕೃತಿಯಲ್ಲಿಯೂ ಆ ಬಗ್ಗೆ ಪ್ರಸ್ತಾಪವಿದೆಯಾದರೂ ನಾನು ಕೃತಿಯನ್ನು ನೋಡಿಲ್ಲ.

[9] ಅದೇ, ಪು. ೨೦.