ಬಿಹಾರ, ನೇಪಾಳಗಳ ಮೈಥಿಲಿ ಬ್ರಾಹ್ಮಣರು ಇಂದಿಗೂ ಹೆಮ್ಮೆಯಿಂದ ತಾವು ಮೂಲತಃ ಕರ್ನಾಟಕದವರೆಂದೇ ಹೇಳಿಕೊಳ್ಳುವುದನ್ನು ಹಿಂದೆಯೇ ಗಮನಿಸಲಾಗಿದೆ. ನೇಪಾಳದ ಸ್ಥಳೀಯ ಬ್ರಾಹ್ಮಣರಲ್ಲಿ ಉಪಾಧ್ಯೆ, ಅರಿಯಾಲು, ಆಚಾರ್ಯ, ಪೌಡೇಲ್ ಮುಂತಾದ ಭಿನ್ನ ವರ್ಗಗಳಿದ್ದು ಅವರಲ್ಲಿ ಉಪಾಧ್ಯೆಯವರು ತಾವು ಉಳಿದವರಿಗಿಂತ ಶ್ರೇಷ್ಠರೆಂದು ಭಾವಿಸುತ್ತಾರೆ.

[1] ಮೈಥಿಲಿ ಬ್ರಾಹ್ಮಣರು ಕರ್ನಾಟ ರಾಜರ ಜೊತೆ ನೇಪಾಳಕ್ಕೆ ಹೋದವರು; ಮೂಲತಃ ಕರ್ನಾಟಕದವರು. ನೇಪಾಳದ ಬಹುತೇಕ ಬ್ರಾಹ್ಮಣರು ಮುಸ್ಲಿಮರಿಂದ ರಕ್ಷಣೆ ಪಡೆಯಲು ಭಾರತವನ್ನು ಬಿಟ್ಟು ನೇಪಾಳಕ್ಕೆ ಬಂದವರೆಂದು ಹೇಳಿಕೊಳ್ಳುತ್ತಾರೆ. ನಾನ್ಯದೇವನ ಕಾಲದಲ್ಲಿ ಅವನು ನೇಪಾಳವನ್ನು ಗೆದ್ದಾಗ ಕರ್ನಾಟಕದಿಂದ ಮಿಥಿಲೆಗೆ, ಮುಂದೆ ಹರಿಸಿಂಹದೇವನು ಸಿಮ್ರೌನ್‌ಗಡ್‌ತ್ಯಜಿಸಿ ಭಕ್ತಪುರಕ್ಕೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದಾಗ ಮಿಥಿಲೆ ಪ್ರದೇಶದಿಂದ ಮೈಥಿಲಿ ಬ್ರಾಹ್ಮಣರು ಹೆಚ್ಚಾಗಿ ನೇಪಾಳಕ್ಕೆ ಹೋಗಿ ನೆಲಸಿದ ವಿಷಯವನ್ನು ಗಮನಿಸಿದೆ. ಹದಿನಾರನೇ ಶತಮಾನದಲ್ಲಿಯೂ ಶಿವಸಿಂಹ ಮಲ್ಲನು ಮಿಥಿಲೆ ಬ್ರಾಹ್ಮಣರನ್ನು ನೇಪಾಳಕ್ಕೆ ಆಹ್ವಾನಿಸಿ ಅವರ ಜೀವನೋಪಾಯಕ್ಕೆ ಮನೆ, ಭೂಮಿಗಳನ್ನು ದಾನ ಮಾಡಿದ ವಿಷಯವು ನೇಪಾಳ ಚರಿತ್ರೆಯ ಗ್ರಂಥಗಳಲ್ಲಿ ಉಕ್ತವಾಗಿದೆ.

“ಮೈಥಿಲ ಕೋಕಿಲ” ಎಂದೇ ಪ್ರಸಿದ್ಧನಾದ ವಿದ್ಯಾಪತಿಯು (ಜನನ : ಕ್ರಿ. ಶ. ೧೩೫೦) ಮಿಥಿಲಾ ಪ್ರದೇಶದ ದರ್ಭಾಂಗ ಜಿಲ್ಲೆಯ (ಬಿಹಾರ) ಬಿಸಪಿಯಲ್ಲಿ ಜನಸಿದವನು. ಅವನು ಹುಟ್ಟುವ ಹೊತ್ತಿಗೆ ಕರ್ನಾಟ ವಂಶದ ಕೊನೆಯ ರಾಜ ಹರಿಸಿಂಹದೇವನು ನೇಪಾಳಕ್ಕೆ ಸ್ಥಳಾಂತರಿಸಿದ್ದರೂ, ಅದೇ ವಂಶದ ಚಿಕ್ಕ ದೊರೆಗಳು ಮಿಥಿಲೆಯನ್ನು ಆಳುತ್ತ ತಮ್ಮ ಹಿಂದಿನವರು ಸಂಸ್ಕೃತ, ಮೈಥಿಲಿ ವಾಙ್ಮಯಗಳನ್ನು ಬೆಳೆಸಿದ ಪರಂಪರೆಯನ್ನು ಮುಂದುವರಿಸಿದರು. ಚಾಲುಕ್ಯರ ಸಾಮ್ರಾಜ್ಯದಲ್ಲಿ ಕನ್ನಡವು ಸಂಸ್ಕೃತದ ಜೊತೆ ಜೊತೆಗೆ ರಾಜ ಪ್ರೋತ್ಸಾಹವನ್ನು ಪಡೆದು ಬೆಳೆದುದನ್ನು ಪ್ರತ್ಯಕ್ಷವಾಗಿ ಕಂಡಿದ್ದ ನಾನ್ಯದೇವನು ಮಿಥಿಲೆ ಪ್ರದೇಶದಲ್ಲಿ ಸಂಸ್ಕೃತದ ಜೊತೆ ದೇಶೀಯ ಭಾಷೆ (ಮೈಥಿಲಿ) ಸಂಸ್ಕೃತಿಗಳನ್ನು ಅಭಿವೃದ್ಧಿಪಡಿಸಲು ಎಲ್ಲ ಬಗೆಯ ಪ್ರೋತ್ಸಾಹ ನೀಡಿದನು. ವಿದ್ಯಾಪತಿ ಕವಿಯ ವಂಶದ ಮೂಲಪುರುಷ ವಿಷ್ಣುಶರ್ಮ. ಇವನ ಮೊಮ್ಮಗ ರಾಜಾದಿತ್ಯನು ಕರ್ನಾಟ ದೊರೆಗಳಲ್ಲಿ ಮಂತ್ರಿಯಾಗಿದ್ದನು. ಇವನ ಮೊಮ್ಮಗ ಬೀರೇಶ್ವರ ಠಾಕೂರನು ಹರಿಸಿಂಹದೇವನಲ್ಲಿ ಪ್ರಧಾನಿಯಾಗಿದ್ದನು. ಅವನ ಮಗನೇ ಚಂಡೇಶ್ವರ. ಈತ ಕವಿ ವಿದ್ಯಾಪತಿಯ ಚಿಕ್ಕಪ್ಪನ ಮಗ. ವಿದ್ಯಾಪತಿಯು ಶಿವಸಿಂಹ ಎಂಬ ದೊರೆಯ ಆಸ್ಥಾನ ಕವಿ. ಹರಿಸಿಂಹದೇವನು ಮಿಥಿಲೆಯಿಂದ ನೇಪಾಳಕ್ಕೆ ಹೋದಮೇಲೆ ದೆಹಲಿ ಸುಲ್ತಾನನು ಹರಿಸಿಂಹದೇವನ ವಂಶಸ್ಥನಾದ ರಾಮೇಶ್ವರ ಠಕ್ಕುರನನ್ನು ಸಾಮಂತ ರಾಜನೆಂದು ಮಿಥಿಲಾ ರಾಜ್ಯಕ್ಕೆ ನೇಮಕ ಮಾಡಿದನು. ಶಿವಸಿಂಹನು ರಾಮೇಶ್ವರ ಠಕ್ಕುರನ ಮುಂದಿನ ಮೂರನೆಯ ಸಂತತಿಯವನು. ಹೀಗೆ ಕರ್ನಾಟ ದೊರೆಗಳ ಮಂತ್ರಿ – ವಿದ್ವಾಂಸರ ಪರಂಪರೆಗೆ ಸೇರಿದ ಆಸ್ಥಾನ ಕವಿ ವಿದ್ಯಾಪತಿಯು ಮೈಥಿಲೀ ಭಾಷೆಯಲ್ಲಿ ಕಾವ್ಯಗಳನ್ನು ಹಾಡುಗಳನ್ನು ರಚಿಸಿದನು. ಸಂಸ್ಕೃತವೇ ಪ್ರತಿಷ್ಠಿತ ಭಾಷೆಯಾಗಿ ಮೆರೆಯುತ್ತಿದ್ದ ಕಾಲದಲ್ಲಿ ದೇಶೀಯ ಭಾಷೆಯೊಂದರಲ್ಲಿ ಕೃತಿರಚನೆ ಮಾಡಲು ಎಂಟೆದೆ ಬೇಕಾಗಿತ್ತು. ವಿದ್ಯಾಪತಿ ಅಂತಹ ಧೈರ್ಯವನ್ನು ಮಾಡಿದ್ದು ಗಮನಾರ್ಹ.[2] ಸ್ತ್ರೀ ಶಿಕ್ಷಣ ಪ್ರತಿಪಾದಕನಾಗಿದ್ದ ಅವನ ಸೊಸೆ ಚಂದ್ರಕಲಾ ಒಬ್ಬ ಪ್ರಸಿದ್ಧ ಕವಯಿತ್ರಿ. ಹರಿ ಹರರಿಗೆ ಭೇದ ಮಾಡದ ಅವನ ಹಾಡುಗಳಲ್ಲಿ ಶಿವಪರವಾದ ಸ್ತುತಿಗಳೇ ಹೆಚ್ಚು. ನೇಪಾಳದ ಮಲ್ಲ ದೊರೆಗಳ ಕಾಲದ ಕವಿಗಳ ರಚನೆಗಳೂ ಅವರ ಸ್ವಭಾಷೆಯಲ್ಲಿಯೇ ಇವೆ. ವಿದ್ಯಾಪತಿಯ ಪ್ರಭಾವ, ಕವಿಯಾಗಿ ಗೇಯಕಾರನಾಗಿ ನೇಪಾಳಿ ಭಾಷೆಯ ಮೇಲೆ ಸಾಕಷ್ಟಾಗಿದೆ. ವಿದ್ಯಾಪತಿಯಂತಹ ಕವಿ – ವಿದ್ವಾಂಸರನ್ನು ರೂಪಿಸಿದ್ದು ಮಿಥಿಲೆಯ ಕರ್ನಾಟ ರಾಜರು ಸೃಷ್ಟಿಸಿದ ಉದಾರ ವಾತಾವರಣ, ಸಂಸ್ಕೃತಪರವಾಗಿದ್ದರೂ ಜನರು ಆಡುವ ಭಾಷೆಯನ್ನೂ ಗೌರವಿಸುವ ಮನೋಧರ್ಮದ ವಾತಾವರಣ.

ವಿಶೇಷವಾಗಿ ಮೈಥಿಲಿ ಬ್ರಾಹ್ಮಣರು ಈಗ ಮೈಥಿಲಿ ಭಾಷೆಯನ್ನು ಹಿಂದಿನಿಂದ ಸ್ವತಂತ್ರ ಭಾಷೆಯೆಂದು ಗುರುತಿಸಿ, ದರ್ಭಾಂಗವನ್ನು ರಾಜಧಾನಿಯನ್ನಾಗಿಸಿಕೊಂಡು ಮೈಥಿಲೀ ರಾಜ್ಯವನ್ನು ರೂಪಿಸಬೇಕೆಂಬ ಹೋರಾಟವನ್ನೂ ನಡೆಸಿದ್ದಾರೆ. (ಆ ಹೋರಾಟ ದುರ್ಬಲವಾಗಿದ್ದರೂ ಜೀವಂತವಾಗಿದೆ.)

ನೇಪಾಳದ (ಬಿಹಾರದ) ಕಾಯಸ್ಥರು ಮುಖ್ಯವಾಗಿ ಒಂದಾನೊಂದು ಕಾಲದಲ್ಲಿ ಅಧಿಕಾರಿಗಳಾಗಿದ್ದವರು. ವಿಶೇಷವಾಗಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಣನ್ನು ನೋಡಿಕೊಳ್ಳುತ್ತಿದ್ದವರು ಅವರು. ಅವರಲ್ಲಿ ಈಗ ಕೆಲವರು ರೈತರಾಗಿದ್ದರೂ, ಭೂಮಿ ಒಡೆಯರೂ ಆಗಿರುವ ಅವರು ಬೇರೆಯವರಿಂದ ವ್ಯವಸಾಯ ಮಾಡಿಸುವುದೇ ಹೆಚ್ಚು. ಅವರು ಹನ್ನೊಂದನೇ ಶತಮಾನದ ಅಂತ್ಯದಲ್ಲಿ ನಾನ್ಯದೇವನ ಜೊತೆ ಬಂದ ಕರಣಗಳ (Accountants) ವಂಶಸ್ಥರೆಂಬುದನ್ನು ಹಿಂದೆಯೇ ನೋಡಿದ್ದೇವೆ. ಅವರಲ್ಲಿ ಅಂಬಷ್ಟ, ಭಟ್ನಗರ್‌, ಕರ್ಣ, ಮಧುರ್‌, ನಿಗಮ್‌, ಸಕ್ಸೇನ, ಶ್ರೀವಾಸ್ತವ ಇತ್ಯಾದಿ ಗುಂಪಿನವರು ಬಿಹಾರದಲ್ಲಿದ್ದಾರೆ, ನೇಪಾಳದಲ್ಲಿ ಇದ್ದಾರೆ. ದರ್ಭಾಂಗ ಜಿಲ್ಲೆಯಲ್ಲಿ ‘ಕರ್ಣ’ ಕಾಯಸ್ಥರು ಹೆಚ್ಚು ಮತ್ತು ಇವರು ನಾನ್ಯದೇವನ ಜೊತೆ ಬಂದ ಹನ್ನೆರಡು ಕರಣರಲ್ಲಿ ಹನ್ನೆರಡನೆಯವನಾದ ರತ್ನದೇವನ ವಂಶಸ್ಥರು ಮತ್ತು ಇಂದಿಗೂ “ಕರ್ಣ” (ಕರಣ) ಎಂಬ ವಂಶನಾಮವನ್ನು ಹೆಸರ ಕೊನೆಯಲ್ಲಿ ಹೊಂದಿರುವ ತಾವು ಮೂಲತಃ ಕರ್ನಾಟದವರೆಂಬುದನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. (ಆಂಧ್ರದ ನಿಯೋಗಿ ಬ್ರಾಹ್ಮಣರಲ್ಲೂ ಕರ್ಣ ಅಥವಾ ಕರಣ, ಪಟ್ವಾರಿ, ಆರ್ಯ ನಿಯೋಗಿ ಎಂಬ ಗುಂಪುಗಳುಂಟು.) ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಉಳಿದವರಿಗಿಂತ ಹೆಚ್ಚು. ನಾನ್ಯದೇವನ ಕರಣರಲ್ಲಿ ಶ್ರೀಧರದಾಸ ಮತ್ತು ರತ್ನದೇವರು ರಾಜನಿಗೆ ಹೆಚ್ಚು ಆತ್ಮೀಯರಾಗಿದ್ದರು. ಮಿಥಿಲೆಯ ಕರ್ನಾಟರ ಬಗ್ಗೆ ಲೇಖನವೊಂದನ್ನು ಪ್ರಕಟಿಸಿರುವ ಆರ್‌. ಕೆ.ಚೌಧುರಿ ಎಂಬುವರ ಪ್ರಕಾರ (Annals of the Bhandarkar Oriental Research Institute, Vol. XXXV, pp. 91 – 121)ರತ್ನದೇವನ ವಂಶಸ್ಥರೇ ‘ಕರ್ಣ’ ಕಾಯಸ್ಥರು. ಕಾಯಸ್ಥರೂ ಕೂಡ ಬ್ರಾಹ್ಮಣರಂತೆ ‘ಪಂಜಿ’ಗಳನ್ನು (Family reconrds) ಉಳಿಸಿಕೊಂಡು ಬಂದಿದ್ದಾರೆ. ಪಂಜಿಗಳನ್ನು ನೋಡಿ ವಿವಾಹಗಳನ್ನು ನಿರ್ಧರಿಸುವ ‘ಪಂಜಿಯಾರ್‌’ಗಳು[3] ಕಾಯಸ್ಥರಿಗೂ ಉಂಟು. ಕಾಯಸ್ಥರು ಜನಿವಾರ ಧರಿಸದಿದ್ದರೂ ಸಾಮಾಜಿಕವಾಗಿ ಬ್ರಾಹ್ಮಣರ ನಂತರದ ಸ್ಥಾನ ಅವರದು. ಅವರು ವರ್ಷದಲ್ಲಿ ಮಾಡುವ ವಿಶೇಷ ಪೂಜೆ “ದವತ್‌ಪೂಜಾ”. ಅಂದು ಅವರು ಲೇಖನಿ, ಮಸಿಗಳನ್ನು ಪೂಜಿಸುತ್ತಾರೆಂಬುದು ಅರ್ಥಪೂರ್ಣವಾಗಿದೆ. (ನೋಡಿ, ಕನ್ನಡ. ದೌತಿ=ಬರೆಯುವ ಮಸಿ ಇರುವ ಕುಡಿಕೆ.)

ನಾನ್ಯದೇವನ ಜೊತೆಗೆ ಬಂದ ಶ್ರೀಧರದಾಸ ಎಂಬ ಕರಣ ಅಧಿಕಾರಿಯ ವಂಶದವರು ಇಂದಿಗೂ ಬಿಹಾರದ ಬೈರಿಯ ಎಂಬ ಊರಲ್ಲಿದ್ದಾರೆ. ಮಿಥಿಲೆಯ ಆ ಕರ್ನಾಟ ಕಾಯಸ್ಥರು ತಮ್ಮದು “ನೌರಂಗ ಬಲಿ ಮೂಲ” ಎಂದು ಹೇಳುತ್ತಾರೆ. (ಗಮನಿಸಿ – ಕನ್ನಡ. ಬಳಿ – ವಂಶ.) ಮೇಲೆ ಹೇಳಿದ ಶ್ರೀಧರದಾಸನು “ಸದುಕ್ತಿ ಕರ್ಣಾಮೃತ” ಎಂಬ ಸಂಸ್ಕೃತ ಕೃತಿಯ ಕರ್ತೃ.

ನೆವಾರಿಗಳು ಕಾಠಮಾಂಡೊ ಕಣಿವೆ ಪ್ರದೇಶದ ಪ್ರಮುಖ ಜನಾಂಗ. ಭಕ್ತಪುರ ಇವರ ಕೇಂದ್ರ ಇವರು ಆಭೀರ, ಕಿರಾತ, ಲಿಚ್ಛವಿ, ವಿಷಯ ಠಾಕೂರಿ, ಕರ್ನಾಟ ಇತ್ಯಾದಿ ಬುಡಕಟ್ಟು ಗುಂಪುಗಳಿಗೆ (ethnic groups) ಸೇರಿದವರು. “ಪ್ರಧಾನ್‌” ಎಂದೂ ಇವರನ್ನು ಕರೆಯುತ್ತಾರೆ. ಇವರಲ್ಲಿ ಇಪ್ಪತ್ತಾರು ಉಪಗುಂಪುಗಳಿವೆ (“ಜಾತ್‌”) – ಬ್ರಾಹ್ಮಣ, ಶ್ರೇಷ್ಠಿ, ಉಧಸ್‌, ಮರ್ದಿನ್‌, ತಾಮ್ರಕಾರ್‌, ಜಯ್ಯ, ಕುರ್ಮ, ನೌ, ಕೌ, ಗಥು, ತೀಪು, ಪೂರ್ಣ್‌, ಮಹಿಮ್‌, ಬಲಮ್‌ಚಮ್‌ಇವು ಅವುಗಳಲ್ಲಿ ಕೆಲವು. ನೆವಾರಿ ಭಾಷೆಯನ್ನು ಮನೆಯಲ್ಲಿ, ಹೊರಗಡೆ ನೇಪಾಲಿ ಭಾಷೆಯನ್ನು ಮಾತನಾಡುತ್ತಾರೆ. ನೇಪಾಳಿಯು ಇಂಡೋ ಆರ್ಯನ್‌ವರ್ಗದ ಭಾಷೆಯಾದರೆ ನೆವಾರಿಯು ಟಿಬೆಟೊ ಬರ್ಮನ್‌ವರ್ಗಕ್ಕೆ ಸೇರಿದ ಭಾಷೆ. ಮೈಥಿಲಿ ಬ್ರಾಹ್ಮಣರಂತೆ ಕಾಯಸ್ಥರಂತೆ ಒಬ್ಬ ವ್ಯಕ್ತಿ ತನ್ನ ತಂದೆ ತಾಯಿಗಳ ಕಡೆಯಿಂದ ಹಿಂದಿನ ಏಳು ತಲೆಮಾರುಗಳವರೆಗೆ ಸಂಬಂಧಿಗಳಾಗಿರುವವರನ್ನು ಮದುವೆಯಾಗುವಂತಿಲ್ಲ. ಹೆಣ್ಣನ್ನು ಗಂಡು ಅಪಹರಿಸಿ ಮದುವೆ ಮಾಡಿಕೊಳ್ಳಬೇಕು ಎಂಬ ಪದ್ಧತಿಯಿತ್ತು.[4] ಅವರಲ್ಲಿ ಏಕಪತ್ನಿ ಪದ್ಧತಿಯಿದೆ. ಹುಡುಗಿ ಚಿಕ್ಕವಳಾಗಿದ್ದಾಗಲೇ ಅವಳನ್ನು ಬಿಲ್ವ ಫಲಕ್ಕೆ ಕೊಟ್ಟು ಮದುವೆ ಮಾಡುವುದರಿಂದ ಮುಂದೆ ಅವಳ ಗಂಡ ಸತ್ತರೂ ಅವಳು ನಿತ್ಯ ಮುತ್ತೈದೆಯಾಗಿ ಉಳಿಯುತ್ತಾಳೆ (ಬಿಲ್ವ ಫಲವು ‘ಶ್ರವಣ ಕುಮಾರ’ನ ಸಂಕೇತವಂತೆ!). ಕುಂಕುಮ, ಬಳೆಗಳು ಮುತ್ತೈದೆ ಲಕ್ಷಣ. ಶವವನ್ನು ದಹನ ಮಾಡುತ್ತಾರೆ. ಅವರಲ್ಲಿ ವ್ಯವಸಾಯ ಉಂಟು, ವ್ಯಾಪಾರವೂ ಉಂಟು. ಅವರ ಪುರೋಹಿತರು ನೇಪಾಳಿ ಬ್ರಾಹ್ಮಣರು. ಕುಂಭ ಕಲೆ, ಮರ ಲೋಹಗಳ ಕೆತ್ತನೆ ಕಲೆ, ಎರಕ ಕಲೆ ಇವುಗಳಲ್ಲಿ ಅದ್ವಿತೀಯರು. ಸಿಕ್ಕಿಂ ನೇವಾರಿಗಳಲ್ಲಿ ದೇವಬ್ರಾಹ್ಮಣ, ಶ್ರೇಷ್ಠ, ಜಯವೂ, ಮಾಲಿ, ಪುಲು, ರಣಜಿತ್‌ಕರ್‌, ಸಲ್ಮಿ, ಬಲಮಿ, ಭಾ, ಕಸೈ, ಕುಸ್ತೆ, ಪೊರೆ, ಚ್ಯಾಮೆ, ಹರ – ಹುರು ಎಂಬ ಜಾತಿಗಳಿವೆ. ನೆವಾರಿಗಳು ಹಿಂದೂಗಳಾದರೂ ಅವರಲ್ಲಿ ಕೆಲವರು ಬೌದ್ಧರೂ ಉಂಟು.

ನೆವಾರಿಗಳು ಶೈವರು ಹಾಗೂ ಶಾಕ್ತರು. “ಕರ್ನಾಟ” ವಂಶದ ನೆವಾರಿ ಜನಾಂಗದ ಶ್ರೀದೇವ್‌ ಬೈದ್ಯರ ಕುಲದೇವತೆ “ಶಕ್ತಿ” ಅಥವಾ “ಕಾಳಿ”ಯೇ. ಕರ್ನಾಟಕದಿಂದ ಹೋದ “ಕರ್ನಾಟ” ವಂಶದ ನಾನ್ಯದೇವ ಮತ್ತು ಅವನ ಮುಂದಿನ ರಾಜರು ಹಾಗೂ ಇತರ ವರ್ಗಗಳು ಭಕ್ತಪುರ ಪ್ರದೇಶದ ನಾವಾರಿಗಳ ಜೊತೆ ಸಂಪೂರ್ಣವಾಗಿ ಗುರುತಿಸಿಕೊಂಡರು. ಆ ಕಾರಣವೇ ನೆವಾರಿಗಳ ಒಂದು ವರ್ಗವು ಇಂದಿಗೂ “ಕರ್ನಾಟ”ರೆಂದೇ ಕರೆದುಕೊಳ್ಳುತ್ತಾರೆ ಎಂಬ ಊಹೆಯನ್ನು ಮಾಡಲವಕಾಶವಿದೆ. ಮಲ್ಲರೂ ಕೂಡ ನೆವಾರಿಗಳೇ. “ಕುಮಾರಿ”ಯಾಗಿ ಆಯ್ಕೆಯಾಗುವ ಹುಡುಗಿ ನೆವಾರಿಗಳಲ್ಲಿ ಶಾಕ್ಯ ಕುಲದ ಬೌದ್ಧ ಧರ್ಮಕ್ಕೆ ಸೇರಿದವಳಾಗಿರಬೇಕು.

ನೇಪಾಳದ ಚರಿತ್ರೆಯಲ್ಲಿ ನಾನ್ಯದೇವನು ಕರ್ನಾಟಕದಿಂದ “Sāka – Sahkāla’’ ಎಂಬ ಶಕೆಯನ್ನು “Māju’’ ಮತ್ತು “Swékhā’’ ಎಂಬ ಎರಡು ದೇವತೆಗಳನ್ನೂ ತಂದನೆಂದು ಬರೆಯಲಾಗಿದೆ.[5] ಆ ಶಕೆ ಮತ್ತು ದೇವತೆಗಳನ್ನು ಗುರುತಿಸುವುದು ಕಷ್ಟವಾಗಿದೆ. ಅವನ ಸೈನ್ಯದ ಜೊತೆ ಬಂದ Nāyéra ದೇಶದ “ಬ್ರಹ್ಮಪುತ್ರ – ಛೇತ್ರಿ”ಯ ಕುಲದ ಸೈನಿಕರು ನೇಪಾಳದ ನೇವಾರರೇ ಎಂದು ಕೆಲವೆಡೆ ಬರೆದಿದೆ. ನೇವಾರರು ಮೂಲತಃ ನೇಪಾಳ ದೇಶದವರೆಂಬುದನ್ನಾಗಲೇ ನೋಡಿದ್ದೇವೆ.

ನೇಪಾಳದ ಬೌದ್ಧಧರ್ಮವು ತಾಂತ್ರಿಕಾಚರಣೆಗಳ ಮಹಾಯಾನ ಪಂಥ. ಅದಕ್ಕೆ ವಜ್ರಯಾನವೆಂದೇ ಹೆಸರು. ಆ ವಜ್ರಯಾನ ಬೌದ್ಧದ ಗುರುಗಳನ್ನು “ಬಜ್ರಾಚಾರ್ಯ”ರೆಂದು ಕರೆಯುತ್ತಾರೆ.

ಧನಗಾರ್‌, ಒರೋನ್‌, ಕುರುಖ್ (Kurukh) ಎಂಬ ನಾಮಾಂತರಗಳಿರುವ ಜನಾಂಗದವರು ಭಾರತದ ಹಲವೆಡೆ ವಾಸವಾಗಿದ್ದಾರೆ. ಬಿಹಾರ, ಬಂಗಾಳಗಳಲ್ಲಿಯೂ ಗಡಿಯಾಚೆ ನೇಪಾಳದಲ್ಲೂ ಇದ್ದಾರೆ. ಆ ಜನರ ಸಾಂಪ್ರದಾಯಿಕ ನಂಬಿಕೆ ಪ್ರಕಾರ ಅವರು ಮೂಲತಃ ಕರ್ನಾಟಕದಿಂದ ಬಂದವರು.[6] ದಕ್ಷಿಣದಿಂದ ತಾವು ಬಂದವರೆಂದು ಬಿಹಾರದ ಒರೋನರು ನಂಬುತ್ತಾರೆ.[7]

ದಕ್ಷಿಣ ನೇಪಾಳದ ತಿರೈನಲ್ಲಿ, ಜನಕಪುರ ಪ್ರದೇಶದಲ್ಲಿನ ಧನಗಾರರ ಸಂಖ್ಯೆ ಸುಮಾರು ಒಂಬತ್ತು ಸಾವಿರ. ಅವರು ಬಹುತೇಕ ಕೃಷಿಕಾರ್ಮಿಕರು ಅಥವಾ ದನ ಸಾಕುವವರು. ಬಡವರಾದ ಇವರು ಮೇಲ್ಜಾತಿ ಹಿಂದೂಗಳ ಕಣ್ಣಲ್ಲಿ ಅಸ್ಪೃಶ್ಯರು. ಊರಿನ ಮುಖ್ಯಸ್ಥರನ್ನು “Maijan” ಎನ್ನುತ್ತಾರೆ.[8]

ಮದುವೆಯಾಗಲಿರುವ ಕನ್ಯೆಯನ್ನು “ಹುಡುಗಿ” ಎನ್ನುತ್ತಾರೆ (ನೋಡಿ – ಕನ್ನಡದ ‘ಹುಡುಗಿ’). ಮದುವೆ ವ್ಯವಸ್ಥೆಯಾಗಿದ್ದರೂ ಮದುವೆಗೆ ಮುನ್ನ ಮರೆಯಲ್ಲಿ ಅವಿತುಕೊಂಡ ಹುಡುಗಿಯನ್ನು ಹುಡುಗ ಹುಡುಕಬೇಕು (ಈ ಪದ್ಧತಿ ಕರ್ನಾಟಕದ ಬಣಜಾರ್‌ಅಥವಾ ಲಂಬಾಣಿ ಜನಾಂಗದವರಲ್ಲೂ ಉಂಟು.)“ತೆರ” ಪದ್ಧತಿ ಉಂಟು. ತಂದೆ ತಾಯಿ ಮನೆಯಲ್ಲಿ ಮದುವೆ. ಹುಡುಗಿಗೆ ಅವಳ ತಂದೆ ತಾಯಂದಿರಿಂದ ಕುಡುಗೋಲು ಉಡುಗೋರೆಯಾಗಿ ದೊರಕುತ್ತದೆ. ಅವರ ದೊಡ್ಡ ಹಬ್ಬದ ಹೆಸರು “ಕರ್ಮಧರ್ಮ” (God of Wisdom. ‘ಕರ್ಮ’ ಒಂದು ಬಗೆಯ ಮರದ ಹೆಸರೂ ಹೌದು.)

ಧನಗಾರ್‌(ಧನ್ವರ್‌) ಅಥವಾ ಓರೋನ್‌ಜನರ ಬುಡಕಟ್ಟುಗಳು (clans)ಬರ, ಭಕ್ಲ, ಎಕ್ಕ, ಕಜರ್‌, ಬೇಕ್ಲ್‌, ಲಕ್ರ, ಮಿಂಗ್‌, ತಿಗ, ತಿರಿಕ್ಯ, ಟೋಪು. ಅಸ್ಸಾಮಿ ಒರೋನ್‌ಜನ ತಮ್ಮನ್ನು “ಕುರುಖ್‌” ಎಂದು ಕರೆದುಕೊಳ್ಳುತ್ತಾರೆ. ತ್ರಿಪುರದಲ್ಲಿ ಒರೋನ್‌ಎಂಬುದು ಒರಂಗ್‌, ಉರೋನ್‌ಆಗುತ್ತದೆ. ಇವರಲ್ಲಿ ಕೆಲವರ ಮನೆಯ ಭಾಷೆ ಹಿಂದಿ ಅಥವಾ ಮೈಥಿಲಿ. ಮಹಾರಾಷ್ಟ್ರದ ಒರೋನರ ಮಾತೃಭಾಷೆ “ಸದ್ರಿ” (Sadri). ಬಿಹಾರದ ಧನಗಾರರ ವೃತ್ತಿ ಬೊಂಬು ಸಾಮಾನು ತಯಾರಿಸುವುದು.

ಬಿಹಾರದ ಒರೋನ್‌ಮಕ್ಕಳಿಗೆ ಅವು ಹುಟ್ಟಿದ ದಿನದ ಹೆಸರನ್ನೇ ಇಡುತ್ತಾರೆ. ಸೊಮ್ರ, ಮಂಗ್ರ, ಬುಧುವ, ಬಿಫೈಯ (‘ಬೃಹಸ್ಪತಿ’ಗೆ ಸಮಾನ), ಸುಕ್ರ, ಸನಿಚರ, ಎತ್ವಾರಿ (ಆದಿತ್ಯವಾರ) ಹೆಣ ಸುಟ್ಟ ಕೈ, ತೊಡೆ ಭಾಗಗಳಿಂದ ಐದು ಎಲುಬು ತುಂಡುಗಳನ್ನು ಮಡಕೆಯಲ್ಲಿ ಸಂಗ್ರಹಿಸಿ, ಉಳಿದ ಬೂದಿಯನ್ನು ನದಿಗೆ ಚೆಲ್ಲಿ ಮಡಕೆಯನ್ನು ಮನೆಗೆ ತರುತ್ತಾರೆ. ಹನ್ನೆರಡನೇ ದಿನ ನಡೆಯುವ ಸಮಾರಾಧನೆಯೇ “ಭೋಜ್‌” : ಅಂದು ಎಲ್ಲರೂ ಕುಡಿಯುತ್ತಾರೆ.

ಅವರಲ್ಲಿ ‘ತಿರ್ಕ್ಕಿ’, ‘ಎಕ್ಕ’ ಎಂಬ ಬಣಗಳು ಇದ್ದು, ‘ತಿರ್ಕಿ’ಯವರು ಚಿಕ್ಕ ಇಲಿಮರಿಗಳ, “ಎಕ್ಕ”ದವರು ಆಮೆಗಳ ವರ್ಗಕ್ಕೆ ಸೇರಿದವರಾದ್ದರಿಂದ ಆಯಾ ಪ್ರಾಣಿಗಳನ್ನು ಅವರು ಕೊಲ್ಲರು, ತಿನ್ನರು.

ಮಹಾರಾಷ್ಟ್ರದ ಧನಗಾರರು ಮರಾಠಿಯು ಮನೆ ಮಾತಾದರೂ ಕನ್ನಡವನ್ನೂ ಬಲ್ಲರು. ಇವರು ಕುರಿ, ಗೋ ಸಾಕುತ್ತಾರೆ. ಇವರು ಸಾಕುವ “ಧನಗಾರ್‌ಮ್ಹಸಿ”, “ಧನಗಾರ್‌ಗಾಯಿ” ಪ್ರಸಿದ್ಧ ( ಮ್ಹಸಿ=ಮಹಿಷಿ, ಎಮ್ಮೆ ; ಗಾಯಿ=ಗೋವು).

ಬಂಗಾಳ, ಮಧ್ಯಪ್ರದೇಶಗಳಲ್ಲಿ ಧನಗಾರರಿಗೆ ಒರಾಓ, ಉರಾಓ, ಉರಂಗ್‌, ಔರಂಗ್‌ಎಂಬ ನಾಮಾಂತರಗಳುಂಟು. ಕೆರೆ ಬಾವಿ ಅಗೆವ ಕೆಲಸ ಅವರದು.

ಓರೋನ್‌ಅಥವಾ ಕುರುಖ್‌(ಧನಗಾರ್‌) ಜನ ಈ ದಿನ ಬೇರೆ ಬೇರೆ ಭಾಷೆಗಳನ್ನಾಡುತ್ತಿದ್ದರೆ ಅದಕ್ಕೆ ಕಾರಣ ಅವರು ಬಹುಹಿಂದೆಯೇ ಹೋಗಿ ನೆಲಸಿದ ಆಯಾ ಪ್ರಾಂತದ ಪ್ರಬಲ ಭಾಷೆ. ಅವರ ನಿಜವಾದ ಮೂಲ ಭಾಷೆಯು ಒಂದು ದ್ರಾವಿಡ ಭಾಷೆ. ಆ ಕುರುಖ್‌ಭಾಷೆಯನ್ನು ಭಾಷಾ ವಿಜ್ಞಾನಿಗಳು ಉತ್ತರ ದ್ರಾವಿಡ ಭಾಷೆಯೆಂದು ಗುರುತಿಸಿದ್ದಾರೆ. ಉದಾಹರಣೆಗೆ, ಕನ್ನಡವು ದಕ್ಷಿಣ ದ್ರಾವಿಡವಾದರೆ ತೆಲುಗು ಮಧ್ಯದ್ರಾವಿಡ ಭಾಷೆ. ದ್ರಾವಿಡ ಭಾಷಾವಂಶದ ಇಪ್ಪತ್ತಕ್ಕೆ ಮೇಲ್ಪಟ್ಟು ಭಾಷೆಗಳಲ್ಲಿ ಪಶ್ಚಿಮ ಪಾಕಿಸ್ತಾನದಲ್ಲಿ ಆಡುತ್ತಿರುವ ಭಾಷೆಯಾದ ಬ್ರಾಹೂಇ, ನೇಪಾಳ ಬಿಹಾರ ಉತ್ತರ ಪ್ರದೇಶದ ಭಾಗಗಳಲ್ಲಿ ಜನರಾಡುವ ಕುರುಖ್‌ಮತ್ತು ಮಾಲ್ತೊ ಈ ಮೂರು ಭಾಷೆಗಳೇ ಉತ್ತರ ದ್ರಾವಿಡ ಭಾಷೆಗಳು.[9]ಇವುಗಳಲ್ಲಿ ಭಾಷಿಕವಾಗಿ ಕುರುಖ್‌ಮಾಲ್ತೋಗಳು ಹೆಚ್ಚು ಸಮೀಪದವು.

ಕುರುಖ್‌ಜನರು ಮೂಲತಃ ದಕ್ಷಿಣ ಭಾರತದವರೆಂದು ಕರ್ನಾಟಕದವರೆಂದು ಹೇಳಲು ಅವರು ಉಳಿಸಿಕೊಂಡು ಬಂದಿರುವ ಸಾಂಪ್ರಾದಾಯಿಕ ನಂಬಿಕೆ ಕಾರಣ. ಮತ್ತು ಅಂತಹ ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಗದು.

ಕನ್ನಡ, ಕುರುಖ್‌(ಧನಗಾರ್‌) ಭಾಷೆಗಳ ಕೆಲವು ಹೋಲಿಕೆಗಳು ಇಂತಿವೆ:

  ಕನ್ನಡ ಕುರುಖ್‌
‘one’ ಒಂದು, ಒಬ್ಬ ಒಂಟಿ, ಒರ್ಟ್‌
‘two’ ಎರಡು, ಇಬ್ಬರು ಎಂಡ್‌, ಇರ್ಬ್‌
‘three’ ಮೂರು, ಮೂವರು ಮೂಂಡ್‌, ನುಬ್
‘four’ ನಾಲ್ಕು, ನಾಲ್ವರು ನಾಖ್‌, ನಿಬ್‌
‘I’ ನಾನು ಏನ್‌
‘you’ ನೀನು ನೀನ್‌
‘they’ ಅವರು ಆರ್‌
‘eye’ ಕಣ್ಣು ಖಣ್‌
‘mouth’ ಬಾಯಿ ಬಾಇ
‘teeth’ (ಪ)ಹಲ್ಲು ಪಲ್‌
‘man’ ಆಳ್‌ ಆಲ್‌
‘men’ ಆಳುಗಳು ಆಲರ್‌
‘woman’ ಹೆಂಗಸು ಆಲೀ
‘cat’ ಬೆಕ್ಕು ಬೆರ್ಖಾ
‘come’ ಬಾ, ಬರು ಬರಾ
‘ear’ ಕಿವಿ ಖೆಬ್ದಾ

ಕನ್ನಡಕ್ಕೂ ಕುರುಖ್‌ಭಾಷೆಗೂ ಇರುವ ಹೋಲಿಕೆಯನ್ನು ಕುತೂಹಲಕ್ಕೆ ಮಾತ್ರ ಕೊಟ್ಟಿದೆ. ಅಂತಹುದೇ ಅಥವಾ ಸಾಮ್ಯ ತಮಿಳು, ತೆಲುಗುಗಳಿಗೂ ಉಂಟು. ಕಾರಣ, ಅವೆಲ್ಲ ದ್ರಾವಿಡ ಭಾಷೆಗಳು.[10]

ಮೇಲೆ ಸೂಚಿಸಿದಂತೆ ಕರ್ನಾಟಕದ ಭಾಷೆಯೂ ನೇಪಾಳದ ಕುರುಖ್‌ಭಾಷೆಯೂ ಉತ್ತರ ದ್ರಾವಿಡ ಭಾಷೆಯ ಸಮಾನ ವೈಲಕ್ಷಣ್ಯಗಳನ್ನು ಹೊಂದಿರುವುದು ಖಂಡಿತ ಉಪೇಕ್ಷಣೀಯವಾದುದಲ್ಲ.[11] ಕೊರಗರ ನೆರೆಯ ಭಾಷೆಯಾದ ತುಳು ದ್ರಾವಿಡ ಭಾಷೆಯಾದರೂ ಅದರಲ್ಲಿ ಮಧ್ಯ ದ್ರಾವಿಡದ ಲಕ್ಷಣಗಳಿರುವುದು ಡಾ. ಪಿ.ಎಸ್‌. ಸುಬ್ರಹ್ಮಣ್ಯಂ ಗುರುತಿಸಿದ್ದಾರೆ.

ಬುಟ್ಟಿ ಹೆಣೆಯುವ ವೃತ್ತಿ ಕೊರಗರು ಯಜಮಾನರ ಕೈಕೆಳಗೆ ಆಳುಗಳಾಗಿ ದುಡಿಯುವ ತೀರ ಕೇಳವರ್ಗದ ಅಸ್ಪೃಶ್ಯರು. ಅವರು ಸಾಮಾಜಿಕವಾಗಿ ಹೊಲೆಯರಿಗಿಂತ ಕೆಳಗೆ ‘ಕಾಪಟ ಕೊರಗ’ರು ಚಿಂದಿಬಟ್ಟೆ ಧರಿಸಿದರೆ ‘ಸೊಪ್ಪು ಕೊರಗರು’ ಹೆಸರೇ ಹೇಳುವಂತೆ ಮರದ ಸೊಪ್ಪು ಸುತ್ತಿಕೊಳ್ಳುವವರು. ವಾರಗಳಲ್ಲಿ ಭಾನುವಾರ ಅವರಿಗೆ ಶ್ರೇಷ್ಠ. ಮತ್ತು ಅವರು ಸೂರ್ಯಾರಾಧಕರು. ಅವರ ಮದುವೆಗಳು ನಡೆಯುವುದು ಭಾನುವಾರ. ಮೊದಲು ಹೆಣಗಳನ್ನು ದಹನ ಮಾಡುತ್ತಿದ್ದವರು ಈಗ ಹೂಳುತ್ತಾರೆ. ಅವರ ಸಾಂಸ್ಕೃತಿಕ ನಾಯಕನಾದ ‘ಕೊರಗ ತಣಿಯ’ನು ಅವರ ದೇವರು. ಮಕ್ಕಳು ಹುಟ್ಟುವ ದಿನವನ್ನು ಗಮನಿಸಿ ಹೆಸರಿಡುತ್ತಾರೆ. ಗಂಡು (ಹೆಣ್ಣು)ಮಕ್ಕಳ ಹೆಸರುಗಳು ಹೀಗಿರುತ್ತವೆ: ಐತ (ಐತು), ತೋಮ (ತೋಮು), ಅಂಗಾರೆ (ಅಂಗಾರು), ಬೂದ (ಬೂದು), ಗುರುವ (ಗುರುಬಿ), ತುಕ್ರ (ತುಕ್ರಿ), ತನಿಯ (ತನಿಯಾರು). ಹುಳ, ಪ್ರಾಣಿಗಳ ಹೆಸರುಗಳನ್ನು, ಕರಿಯ ಕಾಳ ಇತ್ಯಾದಿ ಹೆಸರುಗಳನ್ನೂ ಇಡುವುದುಂಟು.[12]

ಗಮನಿಸಬೇಕಾದ ಎರಡು ಅಂಶಗಳೆಂದರೆ ಕುರುಖ್‌ಜನರಲ್ಲಿರುವಂತೆಯೇ ಕೊರಗರಗಳಲ್ಲಿಯೂ ಮಕ್ಕಳು ಹುಟ್ಟಿದ ದಿನಗಳ ಹೆಸರಿಡುವುದು; ಶವಸಂಸ್ಕಾರದ ಬಳಿಕ ಹದಿಮೂರನೇ ದಿನ ನಡೆಯುವ ಸಾಮೂಹಿಕ ಸಮಾರಾಧನೆಗೆ ಒಂದೇ ಹೆಸರಿರುವುದು (ಕಾರುಖ್‌: ‘ಭೋಜ್‌’, ಕೊರಗ ‘ಬೊಜ್ಜ’).

‘ಕುರುಖ್‌’ ಮತ್ತು ‘ಕೊರಗ’ ಎರಡೂ ಪದಗಳ ಸ್ವರ ವ್ಯಂಜನಗಳ ರಚನೆ ಗಮನಿಸಿ: ಒಂದನ್ನು ಇನ್ನೊಂದರಿಂದ ಸುಲಭವಾಗಿ ನಿಷ್ಪನ್ನ ಮಾಡಬಹುದು. “ಕುರುಖ್‌” ಜನ ತಾವು ಕರ್ನಾಟಕದವರೆಂದು ಹೇಳಿಕೊಳ್ಳುವುದು ಗಮನಾರ್ಹ. ಕುರುಖ್‌ಮತ್ತು ಕೊರಗಗಳೆರಡೂ ಉತ್ತರ ದ್ರಾವಿಡ ಭಾಷಾ ಲಕ್ಷಣಗಳನ್ನು ಹೊಂದಿರುವುದನ್ನೂ ಗಮನಿಸಬೇಕು. ಕುರುಖ್‌ಜನ ಉತ್ತರದಿಂದ ದಕ್ಷಿಣಕ್ಕೆ ಬಂದು ಕೊರಗರಾದರೋ ಕೊರಗರೇ ಉತ್ತರಕ್ಕೆ ಹೋಗಿ ಕುರುಖ್‌ಜನ ಆದರೋ ಹೇಳುವುದು ಕಷ್ಟವಾದರೂ ಎರಡೂ ಜನಾಂಗದವರಿಗೆ ಜಾನಾಂಗಿಕ, ಭಾಷಿಕ ಸಂಬಂಧಗಳ ಸುಳುಹುಗಳಿರುವುದು ಕಾಣುತ್ತದೆ. ಈ ಬಗ್ಗೆ ಹೆಚ್ಚಿನ ಕೆಲಸ ನಡೆಯದೆ ಏನೊ ಹೇಳುವಂತಿಲ್ಲ. ಕೊರಗರು ತಾವು ಹಿಂದೆ ಹಬಾಷಿಕ ಎಂಬ ಕೊರಗ ರಾಜನ ಸೈನಿಕರಾಗಿದ್ದುದನ್ನು ಯುದ್ಧಗಳಲ್ಲಿ ಭಾಗವಹಿಸಿದ್ದನ್ನು ಹೇಳಿಕೊಳ್ಳುತ್ತಾರೆ. ಮಹಾರಾಷ್ಟ್ರದ ಧನಗಾರರು ಶಿವಾಜಿ ಸೈನ್ಯದಲ್ಲಿ ಸೈನಿಕರಾಗಿದ್ದರು. ಇದೆಲ್ಲವೂ ಅವರ ಇತಿಹಾಸದ ಬಗ್ಗೆ, ಅವರ ಸಂಚಲನದ ಬಗ್ಗೆ ಚಿಂತಿಸಲು ಅವಕಾಶ ಕೊಡುವ ಸೂಚನೆಗಳು. ಹೆಚ್ಚಿನ ಸಂಶೋಧನೆಗೆ ಅವಕಾಶವಿರುವುಂತಿದೆಯೆಂಬ ಮಾತಿಗಿಂತ ಈ ವಿಷಯದಲ್ಲಿ ಸದ್ಯಕ್ಕೆ ಏನೂ ಹೇಳಲಾರೆ.

 

[1] ಉಪಾಧ್ಯಾಯ – ಪ್ರಾಕೃತ. ಉವಜ್ಝ – ಓಝ – ಮೈಥಿಲೀ ಬ್ರಾಹ್ಮಣರ ಹೆಸರುಗಳ ಕೊನೆಯಲ್ಲಿ “ – ಝ” ಸಾಮಾನ್ಯ.

[2] Ramanatha Jha : Vidyapathi, P. 42 – ‘’… With the advent of the Karnatas, music and dance received a great impetus in Mithila…’’ P.70 – ‘’At a time when Sanskrit was the language of the cultured and in the land of Mithila where to write in any language other than Sanskrit was almost a sacrilege, he (ವಿದ್ಯಾಪತಿ)had the courage and self – confidence to write in the language actually spoken by the people of the land.’’

[3] ಒಂದು ಗಂಡು – ಹೆಣ್ಣು ಜೋಡಿಯು ಮದುವೆಯಾಗಬೇಕಾದರೆ ಅವರು ಕನಿಷ್ಠ ಹಿಂದಿನ ಏಳು ತಲೆಮಾರುಗಳಲ್ಲಿ ಬಂಧುಗಳಾಗಿರಕೂಡದು. ಅದನ್ನು ಖಚಿತಪಡಿಸಿ ಹೇಳುವ ದಾಖಲೆಯೇ “ಪಂಜಿ”, ಅವುಗಳನ್ನು ಓದುವವರೇ ‘ಪಂಜಿಯಾರ್‌’. ಅದೇ ದರ್ಭಾಂಗ ಜಿಲ್ಲೆಯಲ್ಲಿ “ಬಂಟರ್‌” ಹೆಸರಿನ ಜನರಿದ್ದಾರೆ. ಅವರು ನೇಪಾಳದಿಂದ ಬಂದವರೆಂಬ ಊಹೆಯಿದ್ದರೂ ಮುಖಚರ್ಯೆ ನೇಪಾಳಿಯರನ್ನು ಹೋಲುವುದಿಲ್ಲ. ಎರಡು ಒಣಕಟ್ಟಿಗೆ ತುಂಡುಗಳನ್ನು ಮೂರು ಬಾರಿ ಉಜ್ಜಿದಾಗಲೂ ಬೆಂಕಿ ಬಾರದಿದ್ದರೆ ಗೊತ್ತಾದ ಮದುವೆಗಳು ರದ್ದಾಗುತ್ತವೆ. ತಮ್ಮನು ಅಣ್ಣನ ವಿಧೆಯನ್ನು ಮದುವೆಯಾಗಲು ಅವಕಾಶವಿದೆ. ಈ ‘ಬಂಟರ್‌’ ಯಾರು? ಕರ್ನಾಟಕದ ಬಂಟರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಜನಾಂಗವೆಂಬುದು ಪ್ರಸಿದ್ಧ. (“ – ಆರ್‌” ಎಂಬುದು ದ್ರಾವಿಡ ಭಾಷೆಗಳ ಪುಂಸ್ತ್ರೀ ಬಹುವಚನ ಪ್ರತ್ಯಯವನ್ನು ನನಪಿಸುತ್ತದೆ.)

[4] ‘ವಿವಾಹ’ ಎಂದರೆ ಗಂಡು ಹೆಣ್ಣನ್ನು ಅಪಹರಿಸಿ ಹೊತ್ತೊಯ್ಯುವುದೆಂದೇ ಅರ್ಥ (ವಹ್‌=ಹೊರುವುದು; ವಾಹನ = a carriage). ಕರ್ನಾಟಕದ ಲಿಂಗಾಯತರಲ್ಲಿ, ಮದುವೆ ಹಿಂದಿನ ದಿನ ಹೆಣ್ಣಿನ ಕಡೆಯವರಿಗೂ ಗಂಡಿನ ಕಡೆಯವರಿಗೂ ಹೊಡೆದಾಟದ ತಮಾಷೆ ಯುದ್ಧ (ಜಗಳ) ಆಗುವುದು ಹಿಂದಿನ ಪದ್ಧತಿಯೊಂದರ ಪಳೆಯುಳಿಕೆ.

[5] Daniel Wright : of Nepal, p.167.

[6]G.A. Grierson : Linguistic Survey of India, IV, p. 406 “according to their own traditions the Kurukh tribe originally lived in the Carnatic…..’’

[7] Bihar through the Ages (Ed: R.R. Diwakar), p.88. ಬಿಹಾರದಲ್ಲಿ ಹೆಂಡ ಇಳಿಸುವವರನ್ನು ‘ಕಲ್ವಾರ್‌’ ಎನ್ನುತ್ತಾರೆ. (ಅದೇ, ಪು. ೧೯೫) ಗಮನಿಸಿ: ದ್ರಾವಿಡದಲ್ಲಿ (ಕನ್ನಡದಲ್ಲಿ) ಕಳ್=ಹೆಂಡ. “ವಾರ್‌” ಎಂಬ ಭಾಗದಲ್ಲೂ ದ್ರಾವಿಡ ಭಾಷೆಯ ಸೂಚನೆಯಿದೆ.

[8] Dor Bahadur Bista : people of Nepal, p. 146. ಇದು ಸಂಸ್ಕೃತದ ‘ಮಹಾಜನ’ ಇರಬಹುದು. ಬಿಷ್ಟ ಅವರ ಪ್ರಕಾರ ಧನಗಾರರದು ದ್ರಾವಿಡ ಭಾಷೆ.

[9] ಕನ್ನಡ, ತಮಿಳು, ಮಲಯಾಳ, ಕೊಡಗು, ಕೋತ, ತೋದ, ತುಳು, ಬಡಗ, ಕೊರಗ ಇವು ದಕ್ಷಿಣ ದ್ರಾವಿಡ ಭಾಷೆಗಳೆಂದು ತೆಲುಗು, ಕೊಂಡ, ಪೆಂಗೊ, ಮುಂಡ, ಕುಇ, ಕುವಿ, ಕೊಲಾಮಿ, ನಾಯ್ಕಿ, ಪಾರ್ಜಿ, ಗದಬ, ಒಲ್ಲಾರಿಗಳು ಮಧ್ಯದ್ರಾವಿಡವೆಂದು ಕುರುಖ್‌, ಮಾಲ್ತೊ, ಬ್ರಾಹೂಇಗಳನ್ನು ಉತ್ತರ ದ್ರಾವಿಡ ಭಾಷೆಗಳೆಂದು ಗುರುತಿಸಿದ್ದಾರೆ. ಇವುಗಳಲ್ಲಿ ತುಳುವು ದಕ್ಷಿಣ ದ್ರಾವಿಡವೆಂದು ಪರಿಗಣಿತವಾಗಿದ್ದರೂ ಅದರಲ್ಲಿ ಮಧ್ಯದ್ರಾವಿಡದ ಲಕ್ಷಣಗಳಿವೆ. ಕೊರಗವು ತುಳುವಿನಂತೆ ದಕ್ಷಿಣ ಕನ್ನಡದಲ್ಲಿ ಆಡುವ ಭಾಷೆಯಾಗಿದ್ದರೂ ಅದನ್ನು ಡಾ. ಡಿ.ಎನ್‌. ಶಂಕರಭಟ್ಟರು ಉತ್ತರ ದ್ರಾವಿಡ ಭಾಷಾ ವರ್ಗಕ್ಕೆ ಸೇರಿಸಿದ್ದಾರೆ. (The Koraga Language, p.3) ಭಾಷಿಕ ವೈಲಕ್ಷಣ್ಯಗಳಿಂದ ದಕ್ಷಿಣ, ಮಧ್ಯ. ಉತ್ತರ ಎಂದು ದ್ರಾವಿಡ ಭಾಷೆಗಳನ್ನು ವರ್ಗೀಕರಿಸಲಾಗಿದೆ.

[10] ನೀಲಗಿರಿ ‘ಕುರುಬ’’ರ ಉಪಭಾಷೆ ಕನ್ನಡ. ಭಾರತದ ಬೇರೆ ಕಡೆಗಳಲ್ಲೂ ‘ಕುರುಬ’ರ ಭಾಷೆ ಅದೇ ಆಗಿದೆ. ಮಧ್ಯಪ್ರದೇಶದ ‘ಗೋಲಾರ’ರ ಭಾಷೆ ಬಿಜಾಪುರದ ಕನ್ನಡವನ್ನು ಹೋಲುತ್ತದೆ. ನಾಗಪುರ ಪ್ರದೇಶದಲ್ಲಿ ಚಪ್ಪಲಿ ಹೊಲೆಯುವವರನ್ನು ‘ಹೋಲಿಯ’ ಎನ್ನುತ್ತಾರೆ. ನೀಲಗಿರಿಯ ಬಡಗ ಭಾಷೆಯಂತೂ ಕನ್ನಡದ ಉಪಭಾಷೆಯೇ G.A. Grieson: Linguistic Surey of India, IV, ಪು. ೩೬೩, ೩೮೫ ಇತ್ಯಾದಿ ಕತೆ ಪ್ರಕಾರ, ‘ಗೋಲಾರ’ರು ಹೋಲಿಯ’ರು ಅಣ್ಣ – ತಮ್ಮಂದಿರು.

[11] ಈ ಬಗ್ಗೆ ಡಿ. ಎನ್‌. ಸಂಕರ ಭಟ್ಟ ಅವರ ಮಾತುಗಳನ್ನು ಹಾಗೇ ಉದ್ಧರಿಸುತ್ತೇನೆ – “The following are some of the conspicuous grammatical features of Koraga which clearly indicate a closer affinity for Koraga with the North Dravidian languages, Kudux ( – ಕುರುಖ್‌), Malto and Brahui and carry it away from the neighbouring south Dravidian languages…’’ ಹೀಗೆ ಹೇಳಿರುವ ಅವರು ಹಲವು ಉದಾಹರಣೆಗಳನ್ನು ನೀಡಿದ್ದಾರೆ. ಕೊರಗ ಭಾಷೆಯ ಕ್ರಿಯಾಪದಗಳ ಲಿಂಗ – ವಚನ ಸೂಚಕವು ಕುರುಖ್‌ನಲ್ಲಿರುವುದನ್ನು ಸೂಚಿಸಿ, ಏಕವಚನದಲ್ಲಿ ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಸೂಚಕಗಳು ಒಂದೇ ಆಗಿದ್ದು, ಬಹುವಚನವನ್ನು ಹೇಳುವಲ್ಲಿ ಸ್ತ್ರೀಲಿಂಗವು ಪುಲ್ಲಿಂಗ ಸೂಚಕವನ್ನು ಬಳಸುವುದನ್ನು ಎತ್ತಿ ಹೇಳಿದ್ದಾರೆ. (The Koraga Language, p.3)

[12] Thurston : South Indian Castes and Tribes, III;ಪುರುಷೋತ್ತಮ ಬಿಳಿಮಲೆ: ಕೊರಗರ ಸಂಸ್ಕೃತಿ –ಇಲ್ಲಿಂದ ಮಾಹಿತಿ ಸಂಗ್ರಹ.