ನೇಪಾಳದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಮೇಲೆ ಕರ್ನಾಟಕ ಬೀರಿರುವ ಗಮನಾರ್ಹ ಪ್ರಭಾವವನ್ನು ಇಲ್ಲಿಯವರೆಗೆ ಪರಿಶೀಲಿಸಲಾಯ್ತು. ನೇಪಾಳದ ಜೊತೆ ಕರ್ನಾಟಕದ ನೇರ ದಟ್ಟ ಸಂಪರ್ಕವು ಸು. ೧೧೦೦೦ರಲ್ಲಿ ಎಂದರೆ ಒಂಬೈನೂರು ವರ್ಷಗಳ ಹಿಂದೆ ಆದರೂ ಇಂದಿಗೂ ಅಲ್ಲಿನ ಮತ್ತು ಬಿಹಾರದ ಜನ ತಮ್ಮ ಸಮೂಹ ಸ್ಮರಣೆಯಲ್ಲಿ ಕರ್ನಾಟಕವನ್ನು ಬೇರೆ ಬೇರೆ ರೀತಿಗಳಲ್ಲಿ ಉಳಿಸಿಕೊಂಡು ಬಂದಿರುವುದನ್ನು ಉದ್ದಕ್ಕೂ ಗಮನಿಸಿದ್ದೇವೆ. ಉದಾಹರಣೆಗೆ ನೆವಾರಿ, ಕುಡುಖ್‌, ಮೈಥಿಲಿ ಬ್ರಾಹ್ಮಣರು, ಕಾಯಸ್ಥರು ತಮ್ಮ ಕರ್ನಾಟಕ ಮೂಲವನ್ನು ನೆನಪಿನಲ್ಲಿಟ್ಟುಕೊಂಡಿರುವುದು. ಇಂದಿಗೂ ಇರುವ ಜೀವಂತ ಸಂಪರ್ಕವು ಪಶುಪತಿನಾಥ ದೇವಾಲಯವೆಂಬುದು ಗಮನಾರ್ಹ. ‘ಜಂಗಂ’ ಮಠಗಳು ಕರ್ನಾಟಕದ ಜೊತೆ ಇದ್ದ ಭೌತಿಕ ಸಂಪರ್ಕವನ್ನು ಉಳಿಸಿಕೊಂಡಿಲ್ಲವಾದರೂ ಮಾನಸಿಕವಾಗಿ ‘ಜಂಗಂ’ ಜನ ಕರ್ನಾಟಕದತ್ತ ನೋಡುತ್ತಾರೆ. ಮತ್ತು ಧಾರ್ಮಿಕ ಸಾಮಾಜಿಕ ಸಂಪರ್ಕವನ್ನು ಬೆಳೆಸಿಕೊಳ್ಳಲು ಕಾತರರಾಗಿದ್ದಾರೆ.ಸ ಮರ್ಥ ವ್ಯವಸ್ಥಿತ ಆಡಳಿತ, ಕಲೆ, ಭಾಷೆ, ಸಾಹಿತ್ಯ, ಹಿಂದೂ ಸಂಸ್ಕೃತಿಯ ರಕ್ಷಣೆ ಇತ್ಯಾದಿಗಳ ದೃಷ್ಟಿಯಿಂದ ನೇಪಾಳ ಸಂಸ್ಕೃತಿಯ ಸಂವರ್ಧನೆಯಲ್ಲಿ ಕರ್ನಾಟಕವು ವಹಿಸಿರುವ ಪಾತ್ರ ಗಣ್ಯವಾದುದೇ ಸರಿ.

ಉತ್ತರ ಭಾರತಕ್ಕೆ ಪ್ರವಾಸ ಹೋಗುವವರು ಕಾಶಿಯ ವಿಶ್ವನಾಥನನ್ನು ಎಂತೋ ನೇಪಾಳದ ಪಶುಪತಿ ಮಹಾದೇವನ ದರ್ಶನವನ್ನು ಮಾಡಲು ಯಾತ್ರಾರ್ಥಿಗಳು ಬಯಸುತ್ತಾರೆ. ಕರ್ನಾಟಕದಿಂದ ಹೋಗುವ ಯಾತ್ರಾರ್ಥಿಗಳನ್ನು ಪಶುಪತಿ ದೇವಾಲಯದ ಅರ್ಚಕರು ಗುರುತಿಸಿ ಕನ್ನಡದಲ್ಲಿ ಮಾತನಾಡಿಸಿ ಆತ್ಮೀಯತೆಯಿಂದ ಬೀಳ್ಕೊಡುತ್ತಾರೆ.

ಹದಿನೈದು ದಿನಗಳ ನನ್ನ ನೇಪಾಳದ ಸಂಶೋಧನ ಸಮೀಕ್ಷೆ ಸಮಗ್ರವಾಗಿರಲು ಸಾಧ್ಯವೇ ಇಲ್ಲ. ಎರಡು ಮೂರು ವರ್ಷಗಳ ಹಿಂದೆ ನಾನು ಹೋಗಿದ್ದರೆ ಸಂಶೋಧನೆ, ಆರೋಗ್ಯ ಇವುಗಳಲ್ಲಿ ಸಂಶೋಧನೆಗೆ ಆದ್ಯತೆ ಇರುತ್ತಿತ್ತು. ಆದರೂ ನಾನು ಹಲವು ನೂತನಾಂಶಗಳನ್ನು ಗುರುತಿಸಿದ್ದೇನೆಂಬ ವಿಶ್ವಾಸ ನನ್ನದಾಗಿದೆ (ಅವುಗಳ ಪಟ್ಟಿಗೆ ಅನುಬಂಧ – ೯ ನೋಡಿ).

ಇಷ್ಟು ತೀರ ಸ್ಪಷ್ಟ: ಬಿಹಾರ ನೇಪಾಳಗಳಿಗೆ ಹೋಗಿ ಇನ್ನೂ ತೀವ್ರ ಸಮೀಕ್ಷೆ ಮಾಡುವ ಅಗತ್ಯವಿದೆ. ಉದಾಹರಣೆಗೆ, ಕಾಠಮಾಂಡೊ ನಗರಕ್ಕೆ ಇನ್ನೂರೈವತ್ತು ಕಿಲೋ ಮೀಟರ್‌ದೂರದ ಪೋಖ್ರಾನ್‌ನಗರ ಸಮೀಪದ ಗುಹಾದೇವಾಲಯದ ಬಾಗಿಲಲ್ಲಿ ಕನ್ನಡ ಅಕ್ಷರಗಳ ಶಾಸನವೊಂದು ಕಣ್ಣಿಗೆ ಬಿದ್ದು ಅದನ್ನು ಪರಿಶೀಲಿಸಬೇಕೆನ್ನುವಷ್ಟರಲ್ಲಿ ದೀಪ ಆರಿಹೋಗಿ ನಿರಾಸೆಪಡಬೇಕಾಯ್ತೆಂದು ತುಮಕೂರಿನ ಮಿತ್ರರೊಬ್ಬರು ತಿಳಿಸಿದ್ದಾರೆ. ಆ ಶಾಸನ ಇರುವುದು ನಿಜವೇ ಎಂಬುದು ಖಚಿತವಾಗಬೇಕಾಗಿದೆ. ಕುರುಖ್‌, ಸೋಲಂಕಿ, ನೆವಾರಿ, ಮೈಥಿಲಿ ಬ್ರಾಹ್ಮಣ, ಕಾಯಸ್ಥ ಇವೇ ಮೊದಲಾದ ಜನಾಂಗಗಳ ಜನಗಳನ್ನೂ ಅವರ ವ್ಯವಹಾರಗಳನ್ನೂ ಭಾಷೆಗಳನ್ನು ಕರ್ನಾಟಕದ ದೃಷ್ಟಿಯಿಂದ ಸಮೀಕ್ಷಿಸುವ ಅಗತ್ಯವಿದೆ. ಈ ಕೆಲಸಗಳಿಗೆ ಸಿಮ್ರೌನ್‌ಗಡ, ಪಾಟ್ನ, ದರ್ಭಾಂಗ ಇತ್ಯಾದಿ ಜಾಗಗಳಿಗೇ ಹೋಗಬೇಕು. ಜಂಗಂ ಜನರ ಸಾಮಾಜಿಕ ಅಧ್ಯಯನ ನಡೆಯಬೇಕು. ಎಲ್ಲ ಜಂಗಂ ಮಠಗಳಿಗೂ ಆ ಮಠಗಳ ಮುಖ್ಯರ ವಶದಲ್ಲಿರುವ ದೇವಾಲಯಗಳಿಗೂ ಹೋಗಿ ಪರಿಶೀಲಿಸುವ ಅಗತ್ಯವಿದೆ. ಪಶುಪತಿ ದೇವಾಲಯದ ಅರ್ಚಕರ ಇತಿಹಾಸದ ಸಮೀಕ್ಷೆಯೂ ಆಗಬೇಕು. ಅದಕ್ಕೆ ಮೊದಲು ನೇಪಾಳದ ಇತಿಹಾಸ, ಸಂಸ್ಕೃತಿ ಬಗ್ಗೆ ಬಂದಿರುವ ನೇಪಾಳಿ, ಹಿಂದಿ, ಇಂಗ್ಲಿಷ್‌ಗ್ರಂಥಗಳನ್ನು ನೋಡಬೇಕು. ಮೈಥಿಲಿ ಬ್ರಾಹ್ಮಣರ ಕಾಯಸ್ಥರ ವಂಶಾವಳಿಗಳು ಈ ದಿಸೆಯಲ್ಲಿ ಬಹು ಸಹಾಯ ಮಾಡುತ್ತವೆ.

ಅಂತೆಯೇ ಕರ್ನಾಟಕದ ದೊರೆಗಳು ಆಳಿದ ಭಾರತದ ಬೇರೆ ಬೇರೆ ಭಾಗಗಳಿಗೇ ಹೋಗಿ ವ್ಯಾಪಕ ಸಮೀಕ್ಷೆಯಾಗುವ ಅಗತ್ಯವಿದೆ. ಆ ದಿಸೆಯಲ್ಲಿ ನನ್ನದೊಂದು ಮಿತ ಪ್ರಮಾಣದ ನಮ್ರ ಪ್ರಯತ್ನ.

ಕಾಲವನ್ನು ನಿನ್ನೆ, ಇಂದು, ನಾಳೆ ಎಂದು ನಾವು ನಮ್ಮ ಅನುಕೂಲಕ್ಕೆ ವಿಂಗಡಿಸಿಕೊಳ್ಳುತ್ತೇವೆ. ವಾಸ್ತವವಾಗಿ ಈ ಕ್ಷಣ ಎಂಬುದೇ ಇಲ್ಲ. ಸಮಯವೆಂಬುದು ನಿರಂತರವಾಗಿ ಚಲಿಸುವ ಒಂದು ಬಿಂದು. ಈ ಕ್ಷಣ ಎನ್ನುತ್ತಿದ್ದಂತೆ ಅದು ಇತ್ತ ನಿನ್ನೆಗೆ ಸೇರಿ ಅತ್ತ ನಾಳೆಯನ್ನು ಮುಟ್ಟಿರುತ್ತದೆ. ಆದರೂ ಭೂತ, ವರ್ತಮಾನ, ಭವಿಷ್ಯಗಳೆಂಬ ಸ್ಥೂಲ ಪರಿಕಲ್ಪನೆಯನ್ನಿಟ್ಟುಕೊಳ್ಳುವುದಾದರೆ ಅವುಗಳಲ್ಲಿ, ಎಂದರೆ ನಿನ್ನೆ ಇಂದು ನಾಳೆಗಳಲ್ಲಿ ಯಾವುದು ಮುಖ್ಯವೆನ್ನುವ ಪ್ರಶ್ನೆ ಸ್ವಾರಸ್ಯವಾಗಿರುತ್ತದೆ. ಇಂದು, ನಾಳೆಗಳ ವಿರುದ್ಧ ಯಾರೂ ಮಾತನಾಡಲಾರರು. ಆದರೆ ಹಲವರು ‘ನಿನ್ನೆ’ಯ ಬಗ್ಗೆ, ಅದು ಕಳೆದುಹೋದದ್ದು, ಅದನ್ನು ಕಟ್ಟಿಕೊಂಡೇನು ಎಂಬ ಸ್ವಲ್ಪ ತಿರಸ್ಕಾರದ ಅಥವಾ ಅಸಡ್ಡೆಯ ಮಾತುಗಳನ್ನಾಡಬಹುದು ಮಾತ್ರವಲ್ಲ, ಆಡುತ್ತಾರೆ. ವಿಚಾರಮಾಡಿ ನೋಡಿದರೆ ಮನುಷ್ಯ ನಿನ್ನೆಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಅವನ ಇಂದಿನ ಬದುಕು, ಅವನ ಅನುಭಪ, ಅವನ ನೆನಪಿನ ಬುತ್ತಿ ಇವೆಲ್ಲ ನಿನ್ನೆಯನ್ನೇ ಅವಲಂಬಿಸಿವೆ. ವಿಜ್ಞಾನಕ್ಕೆ ಹಿಂದೆ ಆಗಿರುವುದರ ಅರಿವಿಲ್ಲದೆ ಮುಂದೆ ಸಾಗಲಾರದು. ಮನುಷ್ಯನ ಬೆಳವಣಿಗೆ ಆಗಿರುವುದೇ ಆಗುತ್ತಿರುವುದೇ ನಿನ್ನೆಯದರ ಉತ್ತಮಿಕೆಯಿಂದ, ಅದನ್ನು ಉಳಿಸಿಕೊಂಡು ಉತ್ತಮಪಡಿಸಿಕೊಳ್ಳುವುದರಿಂದ. ಅವನಿಗೆ ಬೇಸರವಾದಾಗ ಅವನು ಮಾನಸಿಕವಾಗಿ ಹೋಗುವುದು ಹೋಗಬೇಕಾದ್ದು ನಿನ್ನೆಗೇ. ಅವನಿಗೆ ಸ್ಫೂರ್ತಿ ನೀಡುವುದು ನಿನ್ನೆಯೇ, ನಿನ್ನೆಯ ಪ್ರಪಂಚವೇ, ಅದು ಕಂಡ ಶ್ರೇಷ್ಠರೇ. ನಿನ್ನೆಗೆ ಸೇರಿರುವ ಅವನ ಬಾಲ್ಯ, ಯೌವನ ಇತ್ಯಾದಿ ಘಟ್ಟಗಳು ಅವನಿಗೆ ನವನವೋತ್ಸಾಹದಾಯಕ.

ವ್ಯಕ್ತಿಯಂತೆಯೇ ಒಂದು ನಾಡು, ರಾಷ್ಟ್ರಕ್ಕೂ ನಿನ್ನೆ ಎಂಬುದು; ಎಂದರೆ ಅದರ ಗತಕಾಲ, ಅದರ ಚರಿತ್ರೆ ಮುಖ್ಯ. ವ್ಯಕ್ತಿಗೆ ಅವನ ನೆನಪು ಇದ್ದಂತೆ ನಾಡಿಗೆ ಅದರ ಇತಿಹಾಸ. ಒಂದು ನಾಡಿನ ಜನಕ್ಕೆ ಸ್ಫೂರ್ತಿ ಆ ಜನರ ಇತಿಹಾಸ, ಸಾಧನೆಗಳು. ಇಪ್ಪತ್ತನೆಯ ಶತಮಾನದ ಆರಂಭದ ಇಡೀ ಭಾರತದಲ್ಲಿ ಮಹಾರಾಷ್ಟ್ರ, ಬಂಗಾಳ ಮತ್ತು ತಮಿಳುನಾಡುಗಳು ತಮ್ಮ ಚರಿತ್ರೆ ಬಗ್ಗೆ ಜಾಗೃತಗೊಂಡು ಅಲ್ಲಿಂದ ಸ್ಫೂರ್ತಿಯನ್ನು ನಿರಂತರವಾಗಿ ಪಡೆದವು. ಆ ಪ್ರದೇಶಗಳ ಜನರು ನಿಜವಾದ ಸ್ವಾಭಿಮಾನಿಗಳಾಗಿ ಬೆಳೆದರು. ಆ ನಾಡುಗಳಷ್ಟೇ ಶ್ರೇಷ್ಠ ಚರಿತ್ರೆಯನ್ನು ಪಡೆದಿರುವ ಕರ್ನಾಟಕದ ಜನರು ತಮ್ಮ ಚರಿತ್ರೆಯ ಬಗ್ಗೆ ಜಾಗೃತರಾಗದೇ ಉಳಿದಿರುವುದರ ಬಗ್ಗೆ ಆಲೂರು ವೆಂಕಟರಾಯರಂತಹ ನಾಡು – ನುಡಿ ಅಭಿಮಾನಿಗಳು ತೀವ್ರವಾಗಿಯೇ ನೊಂದರು. ಇಂದಿಗೂ ಕರ್ನಾಟಕದ ಜನಕ್ಕೆ ತಮ್ಮ ಪರಂಪರೆಯ ಪ್ರಜ್ಞೆ ಬಗ್ಗೆ ಇರುವ ಅರಿವು ಸಾಲದು. ಆ ಅರಿವು ಇಲ್ಲದ್ದರಿಂದ ಅದು ಮೂಡಿಸಬಹುದಾದ ಅಭಿಮಾನದ ಕೊರತೆ ಕನ್ನಡಿಗರಲ್ಲಿ ವಿಶೇಷವಾಗಿ ಕಾಣಿಸುತ್ತಿದೆ. ಈ ಪುಸ್ತಿಕೆ ಕರ್ನಾಟಕದಲ್ಲಿ ಮಾತ್ರವಲ್ಲ, ಕರ್ನಾಟಕದ ಹೊರಗೂ ಕನ್ನಡಿಗರು ಏನು ಬಹು ದೊಡ್ಡದನ್ನು ಸಾಧಿಸಿದರು ಎಂಬುದರ ಕುರಿತಾಗಿದೆ. ಕರ್ನಾಟಕದಿಂದ ಹೊರಗೆ ಹೋದವರು ತಮ್ಮ ಮೂಲನಾಡಿನಿಂದ ಸ್ಫೂರ್ತಿ ಪಡೆದು ತಾವು ನೆಲಸಿದ ಪ್ರದೇಶದ ಭಾಷೆ, ಕಲೆ, ಸಂಸ್ಕೃತಿಯನ್ನು ಬೆಳೆಸಿದರು; ಆ ಜನರ ಹಿತಕ್ಕಾಗಿ ಶ್ರಮಿಸಿದರು. ಅದನ್ನು ಕನ್ನಡಿಗರ ಅರಿವಿಗೆ ತರಲು ಈ ಕೃತಿ ಸಹಾಯಕವಾಗಲಿ ಎಂದು ಹಾರೈಸುತ್ತೇನೆ.

ಒಂದು ಮಾತು ಎಲ್ಲ ಕಾಲಕ್ಕೂ ನಿಜ. ನಿನ್ನೆಯನ್ನು ಮರೆತವನು ನಾಳೆಯನ್ನೆಂದೂ ಕಟ್ಟಲಾರ. ನಿನ್ನೆಯೆಂಬುದು ಕಾಲಗರ್ಭದಲ್ಲಿ ಹೂತುಹೋಗಿದೆ, ನೆಲದಲ್ಲಿ ಕಾಣಿಸದೆ ಅಜ್ಞಾತವಾಗಿರುವ ಕಟ್ಟಡದ ಅಸ್ತಿಭಾರತದಂತೆ. ಅಸ್ತಿಭಾರದ ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ. ನೆನಪಿಡಿ. ನಿನ್ನೆಯನ್ನು ಮರೆತವನು ನಾಳೆಯನ್ನೆಂದೂ ಕಟ್ಟಲಾರ.