ನೇಪಾಳದ ಪ್ರಾಚೀನ ದಾಖಲೆಗಳ ಪ್ರಕಾರ, ‘ಭರತ ವರ್ಷ’ದ ಸಾರವತ್ತಾದ ಭಾಗ ನೇಪಾಳವೇ ಆಗಿತ್ತು; ‘ಭರತವರ್ಷ’ದಲ್ಲಿ ಅದಕ್ಕೊಂಡು ವಿಶಿಷ್ಟ ಸ್ಥಾನವಿದೆ. ಆ ಸಾಂಸ್ಕೃತಿಕ ಘಟಕದಲ್ಲಿ ಇಂದಿನ ನೇಪಾಳ, ಭಾರತಗಳು ಸೇರಿವೆ.

ಭಾರತ ನೇಪಾಳಗಳು ಇಂದು ರಾಜಕೀಯವಾಗಿ ಭಿನ್ನ ರಾಷ್ಟ್ರಗಳಾಗಿದ್ದರೂ ಸಾಂಸ್ಕೃತಿಕವಾಗಿ ಅವೆರಡೂ ಒಂದೇ: ಅದನ್ನು ಸನಾತನ ಸಂಸ್ಕೃತಿ ಎನ್ನಿ, ನೇಪಾಲೋ ಭಾರತೀಯ ಸಂಸ್ಕೃತಿ ಎನ್ನಿ ಅಥವಾ ಭಾರತೋ ನೇಪಾಲೀಯ ಸಂಸ್ಕೃತಿ ಎನ್ನಿ. ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ಅನಕ್ಷರಸ್ಥರು ಹೇಳುವ ವೀರಭದ್ರನ ಉತ್ಸವದ “ಖಡ್ಗ”ಗಳಲ್ಲಿ (“ವಡಬು”ಗಳಲ್ಲಿ) ನೇಪಾಳದ ಹೆಸರನ್ನು ಹೇಳಬಹುದು. ವೀರಭದ್ರ ದೇವರು “ಚಪ್ಪನ್ನೈವತ್ತಾರು ದೇಶ”ಗಳಲ್ಲಿ ಪ್ರಕೀರ್ತಿತ, ಅವರ ಪ್ರಕಾರ – “ಹೀಗಿರುತ್ತದೆ ಸ್ಥೂಲವಾಗಿ ‘ಖಡ್ಗ”ಗಳ ಆರಂಭ. ಆ ಐವತ್ತಾರು ದೇಶಗಳು, ವಿವೇಕ ಚಿಂತಾಮಣಿ ಕೊಡುವ ಪಟ್ಟಿ ಪ್ರಕಾರ ಹೀಗಿವೆ – ಅಂಗ, ವಂಗ, ಕಳಿಂಗ, ತೆಲುಂಗ, ಕೊಂಗ, ಲಾಟ, ಬಂಗಾಳ, ಚೋಳ, ಕೇರಳ, ಗೌಳ, ಪಾಂಚಾಳ, ಸಿಂಹಳ, ಕುಂತಳ, ನೇಪಾಳ, ಮಲೆಯಾಳ, ತುಳುವ, ಸೈಂಧವ, ಕೊಂಕಣ, ಕುರು, ಮಗಧ, ಮತ್ಸ್ಯ, ವಿದರ್ಭ, ಕೋಸಲ, ಶೂರಸೇನ, ಕಾಶ್ಮೀರ, ಮಹಾರಾಷ್ಟ್ರ, ಕರ್ಣಾಟ, ಕಿರಾತ, ತುರುಷ್ಕ, ಶಂಕರ, ಬರಮ, ತ್ರಿಗರ್ತ, ನಿಷಧ, ಮಧ್ಯ, ಜೈನ, ಬರ್ಬರ, ಬಾಹ್ಲೀಕ, ಲಾಟ, ಚೈನ, ಕರಾಳ, ಓಢ್ರ, ಘೂರ್ಝರ, ಕಾಂಬೋಜ, ಸೌರಾಷ್ಟ್ರ, ಸೌವೀರ, ಪಾಂಡ್ಯ, ಹೂಣ, ಯವನ, ಮ್ಲೇಚ್ಛ, ಹೈಹಯ, ಆರ್ಯಾವರ್ತ, ಭೋಜ, ದ್ವೈಪ, ಅಮರುಕ, ಉತ್ತರ ಕುರು ಮತ್ತು ಗ್ರೈಟಿ.

[1] ‘ನೇಪಾಳ’ಕ್ಕೆ ಒಂದು ದೇಶದ ಹೆಸರಲ್ಲದೆ ವಿರೇಚಕ ಗುಣವುಳ್ಳ ಕಾಯಿ ಬಿಡುವ ಗಿಡ ಎಂಬರ್ಥವೂ ಇದ್ದಿತು. ‘ನೇಪಾಳ ಕಂಬಳಿ’ಗೆ ವಾತ ಶ್ಲೇಷ್ಮ ತೊಂದರೆ ಹೋಗಲಾಡಿಸುವ, ಐಶ್ವರ್ಯ ತಂದುಕೊಡುವ ಗುಣವಿದೆಯೆಂದು ನಂಬಿದ್ದರು. (“ವಾತ ಶ್ಲೇಷ್ಮಹರವಾಗಿಯುಂ ಐಶ್ವರ್ಯಪ್ರದವಾಗಿಯೂ ಇರುವುದು”). ‘ನೇಪಾಳಗುದುರೆ’ ಎಂಬೊಂದು ಜಾತಿಯ ಒಳ್ಳೆಯ ಕುದುರೆಗಳಲ್ಲದೆ ಬೇವಿನಲ್ಲಿ ‘ನೇಪಾಳ ಬೇವು’ ಎಂಬ ಒಂದು ಬಗೆಯ ಕಹಿ ಎಲೆಯ ಮರವೇ ಇದ್ದಿತು.[2] “ನೇಪಾಳ ದೇಶದ ಭೂಪಾಳನಾದರೆ ಗೋಪಾಳದವನಿಗೆ ಏನು?” ಎಂಬ ಗಾದೆಯೇ ಪ್ರಚಲಿತವಿದ್ದಿತು. ಹದಿನಾಲ್ಕನೆ ಶತಮಾನದ ಕನ್ನಡ ಬಸವ ಪುರಾಣವು ನೇಪಾಳ, ಕುಂತಳ, ಬರ್ಬರ, ಕೇರಳ ಇತ್ಯಾದಿ ದೇಶಗಳಿಂದ “ಜಂಗಮ”ರು ಬಸವಣ್ಣನವರನ್ನು ನೋಡಲು ಬಂದರೆಂದು ಹೇಳುವುದು ಸ್ವಾರಸ್ಯವಾಗಿದೆ. ಇಂದಿಗೂ ನೇಪಾಳದಲ್ಲಿ ಜಂಗಮರಿರುವ ಸಂಗತಿ ಹಿಂದಾಗಲೇ ಸೂಚಿತವಾಗಿದೆ.[3]

ಬುದ್ಧನ ಹುಟ್ಟೂರಾದ ಲುಂಬಿನಿಯು (ರುಮಿಂದೈ) ದಕ್ಷಿಣ ನೇಪಾಳದಲ್ಲಿದೆ. ಕ್ರಿ. ಪೂ. ೩ನೇ ಶತಮಾನದ ಅಶೋಕನ ಶಾಸನವು ಅಲ್ಲಿದೆ. ನೇಪಾಳವನ್ನು ಲಿಚ್ಛವಿವಂಶೀಯರು (ಕ್ರಿ. ಶ. ೨ – ೮ ಶ.), ಠಾಕೂರಿಗಳು (೯ – ೧೧ಶ.)ಆಳಿದರು. ಠಾಕೂರಿ ವಂಶದ ಗುಣಕಾಮದೇವನು (೧೦ ಶ.)ಬಾಗ್ಮತಿ ಮತ್ತು ವಿಷ್ಣುಮತಿ ನದಿಗಳ ಸಂಗಮ ಸ್ಥಾನದಲ್ಲಿ ‘ಕಾಂತಿಪುರ’ ಅಥವಾ ಕಾಠಮಾಂಡೊ ನಗರವನ್ನು ಸ್ಥಾಪಿಸಿದವನು. ಕಾಠಮಾಂಡೊ ಅಥವಾ ಕಾಷ್ಠಮಂಡಪವು ಒಂದೇ ಒಂದು ಮರ ಬಳಸಿ ನಿರ್ಮಾಣವಾದ ದೊಡ್ಡ ಮರದ ಮನೆಯನ್ನು ಸೂಚಿಸುತ್ತದೆ: ಆ ಮನೆಯಿಂದಾಗಿ ನಗರಕ್ಕೆ ಆ ಹೆಸರು ಬಂದಿದೆ. ಇವನ ಕಾಲದಲ್ಲಿ ಪಶುಪತಿ ದೇವಾಲಯವು ಜೀರ್ಣೋದ್ಧಾರಗೊಂಡಿತು. ಈ ಠಾಕೂರಿ ವಂಶದ ರಾಘವದೇವನ ಕಾಲದಲ್ಲಿಯೇ ಕ್ರಿ. ಶ. ೮೭೯ – ೮೦ರಲ್ಲಿ ನೇಪಾಲ ಸಂವತ್‌(ನೆವಾರಿ ಶಕ) ಆರಂಭಗೊಂಡದ್ದು. ಈ ವಂಶದ ‘ಸೂರ್ಯವಂಶಿ ರಜಪೂತ್‌’ ಹರ್ಷದೇವನು (೧೦೯೦ – ೧೦೬೯) ದುರ್ಬಲನಾಗಿದ್ದ ಕಾರಣ, ಅವನ ಬಳಿಕ ಹತ್ತು ವರ್ಷ ರಾಜ್ಯವನ್ನು ವಶಪಡಿಸಿಕೊಳ್ಳಲು ಹಲವು ಮಹತ್ವಾಕಾಂಕ್ಷಿಗಳ ಮಧ್ಯೆ ತಿಕ್ಕಾಟಗಳು ನಡೆದುವು. ಸುಮಾರು ಈ ಕಾಲದಲ್ಲೇ “ಕರ್ನಾಟ” ವಂಶದ ದೊರೆ ನಾನ್ಯದೇವನು ದಕ್ಷಿಣ ನೇಪಾಳದ ಸಿಮ್ರೌನ್‌ಗಡ ರಾಜಧಾನಿಯಿಂದ ನೇಪಾಳದ ಮೇಲೆ ದಂಡೆತ್ತಿ ಬಂದು ಮಧ್ಯ ನೇಪಾಳದ ಭದಗಾಂವ್‌(ಭಕ್ತಪುರ) ನಗರವನ್ನು ತನ್ನ ನಿವಾಸವನ್ನಾಗಿ ಮಾಡಿಕೊಂಡನೆಂದು ಹೇಳಲಾಗಿದೆ.[4]

“ಕರ್ನಾಟ” ವಂಶದ ದೊರೆಗಳು ನೇಪಾಳವನ್ನು ಆಳಲು ಆರಂಭಿವುಸುದಕ್ಕೆ ಮೊದಲೆ, ಸಾಕಷ್ಟು ಹಿಂದಿನಿಂದಲೇ ಕರ್ನಾಟಕಕ್ಕೂ ನೇಪಾಳಕ್ಕೂ ಕೆಲವು ಸಂಬಂಧಗಳಿದ್ದುದನ್ನು ಗುರುತಿಸಬಹುದು. ಅಶೋಕನ ಸಾಮ್ರಾಜ್ಯದಲ್ಲಿ ನೇಪಾಲವೂ (ದಕ್ಷಿಣ ಭಾಗ) ಸೇರಿದ್ದು ಅವನ ಸಾಮ್ರಾಜ್ಯದ ದಕ್ಷಿಣ ಗಡಿಗಳು ಚಿತ್ರದುರ್ಗದವರೆಗೆ ವ್ಯಾಪಿಸಿದ್ದುವು: ನೇಪಾಳ, ಕರ್ನಾಟಕಗಳು ಅಶೋಕನ ಸಾಮ್ರಾಜ್ಯದ ಎರಡು ಗಡಿಗಳಾಗಿದ್ದವು. ಕ್ರಿಸ್ತಪೂರ್ವ ಮೂರು – ಎರಡನೆಯ ಶತಮಾನಗಳಲ್ಲಿ ಜೈನ ಸನ್ಯಾಸಿ ಭದ್ರಬಾಹುವು ಕ್ಷಾಮ ಕಾರಣವಾಗಿ ಉತ್ತರ ಭಾರತದಿಂದ ದಕ್ಷಿಣಕ್ಕೆ, ಕರ್ನಾಟಕಕ್ಕೆ ತನ್ನ ಶಿಷ್ಯ ದೊರೆ ಚಂದ್ರಗುಪ್ತನ (ಸಂಪ್ರತಿ ಚಂದ್ರಗುಪ್ತ) ಸಮೇತ ಬಂದು ಶ್ರವಣ ಬೆಳ್ಗೊಳದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದುದು, ಅದರ ಕುರುಹಾಗಿ ಭದ್ರಬಾಹು ಗುಹೆ, ಚಂದ್ರಗುಪ್ತ ಬಸದಿಗಳು ಶ್ರವಣಬೆಳ್ಗೊಳದಲ್ಲಿರುವುದು ಸುಪ್ರಸಿದ್ಧ ವಿಷಯ. ಈಚಿನ ಅಲ್ಲಿನ ಶಾಸನಗಳಲ್ಲಿ, ವಡ್ಡಾರಾಧನೆಯಂತಹ ಕೃತಿಗಳಲ್ಲಿ ಆ ಘಟನೆ ದಾಖಲಾಗಿರುವುದೂ ಪ್ರಸಿದ್ಧವೇ. ಆದರೆ ಒಂದು ಕಥಾಂತರದ ಪ್ರಕಾರ, ಬಹುಶಃ ಶ್ವೇತಾಂಬರ ಸಂಪ್ರದಾಯದ ಕಥೆಯ ಪ್ರಕಾರ ಕ್ಷಾಮ ಮುಗಿದ ಮೇಲೆ ಭದ್ರಬಾಹುವು ಉತ್ತರ ಭಾರತಕ್ಕೆ ತನ್ನ ಶಿಷ್ಯರ ಸಮೇತ ಹಿಂದಿರುಗಿದನು. ಅವನ ಗೈರುಹಾಜರಿಯಲ್ಲಿ ವಿದ್ವಾಂಸರು ಜೈನಶಾಸ್ತ್ರದ ಹನ್ನೆರಡು ಉಪಾಂಗಗಳನ್ನು ಹತ್ತು ‘ಪೈನ್ನ’ (ಪ್ರಕೀರ್ಣ)ಗಳನ್ನು ವರ್ಗೀಕರಿಸಿದುದು ಭದ್ರಬಾಹುವಿಗೆ ಸಮ್ಮತವಾಗಲಿಲ್ಲವಾದ ಕಾರಣದಿಂದ (Bihar through the Ages ನೋಡಿ) ಜೈನ ಸಮುದಾಯದ ಮುಖ್ಯಸ್ಥ ಸ್ಥಾನವನ್ನು ಅವನು ಬಿಟ್ಟುಕೊಟ್ಟು ನೇಪಾಳಕ್ಕೆ ಹೋಗಿ ಅಲ್ಲಿ ತನ್ನ ಕೊನೆಯ ದಿನಗಳನ್ನು ತಪಸ್ಸಿನಲ್ಲಿ (penitence) ಕಳೆದನು.[5] ಭದ್ರಬಾಹುವಿನ ವೈಯಕ್ತಿಕ ಗ್ರಂಥವೆಂದರೆ “ಕಲ್ಪಸೂತ್ರ”. ಕರ್ನಾಟಕಕ್ಕೂ ನೇಪಾಳಕ್ಕೂ ಐತಿಹಾಸಿಕವಾಗಿ ಸಂಬಂಧ ಕಲ್ಪಿಸುವ ಈ ಘಟನೆಯೇ ಅತ್ಯಂತ ಪ್ರಾಚೀನವಾದುದು. (ಈ ಸಂಗತಿಯ ಐತಿಹಾಸಿಕತೆ ಸ್ವಲ್ಪ ಪ್ರಶ್ನಾರ್ಹ).

“ಕರ್ನಾಟ” ವಂಶ

ಬಾದಾಮಿ ಚಾಲುಕ್ಯರ ಬಳಿಕ ಆಳಿದ ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ದೊರೆಗಳು ಮಧ್ಯ, ಉತ್ತರ ಭಾರತದ ಹಲವು ಭಾಗಗಳನ್ನು ಗೆದ್ದು ಅಲ್ಲಿ ತಮ್ಮ ವಂಶಗಳನ್ನು ಸ್ಥಾಪಿಸಿದ ವಿಷಯಗಳನ್ನು ಹಿಂದೆ ನೋಡಿದ್ದೇವೆ. ಆದರೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಡೆದ ಘಟನೆ ಬಿಹಾರ ನೇಪಾಳಗಳ ರಾಜಕೀಯ ಸಾಂಸ್ಕೃತಿಕ ಚರಿತ್ರೆಯಲ್ಲಿ, ಸಿ.ಪಿ.ಎನ್‌. ಸಿನ್ಹಾ ಮಾತಿನಲ್ಲಿ ಹೇಳುವುದಾದರೆ ಒಂದು ‘turning point’, ಅದು ನಡೆದುದು ಕ್ರಿ. ಶ. ೧೦೯೭ರಲ್ಲಿ, ಆರನೆಯ ವಿಕ್ರಮಾದಿತ್ಯನ ಆಳಿಕೆಯ ಅವಧಿಯಲ್ಲಿ.[6]

ರಾಷ್ಟ್ರಕೂಟರನ್ನು ಹಿಮ್ಮೆಟ್ಟಿಸಿ ಸ್ವತಂತ್ರವಾಗಿ ಆಳಲು ಆರಂಭಿಸಿದ ಕಲ್ಯಾಣ ಚಾಲುಕ್ಯರಲ್ಲಿ ಕ್ರಮವಾಗಿ ಇಮ್ಮಡಿ ತೈಲ, ‘ಇಱೆವ ಬೆಡಂಗ’ ಸತ್ಯಾಶ್ರಯ, ಐದನೆಯ ವಿಕ್ರಮಾದಿತ್ಯ, ಇಮ್ಮಡಿ ಜಯಸಿಂಹ, ಒಂದನೆಯ ಸೋಮೇಶ್ವರರು ಆಳಿದರು. ಒಂದನೆಯ ಸೋಮೇಶ್ವರನೇ ಕ್ರಿ. ಶ. ೧೦೪೮ರ ಸರಿಸುಮಾರಿನಲ್ಲಿ ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡದ್ದು. ಅವನ ಮಗನೇ ಆರನೆಯ ವಿಕ್ರಮಾದಿತ್ಯ (೧೦೭೬ – ೧೧೨೬). ಚಾಲುಕ್ಯರಲ್ಲಿ ಈ ತಂದೆ ಮಕ್ಕಳೇ ಅತ್ಯಂತ ಪ್ರಬಲರು ಮತ್ತು ಪ್ರಖ್ಯಾತರು. ಇವರ ಕಾಲದಲ್ಲಿ ಚಾಲುಕ್ಯ ಸಾಮ್ರಾಜ್ಯದ ಕೀರ್ತಿಯು ಉತ್ತರ ಭಾರತದಲ್ಲೆಲ್ಲಾ ಹಬ್ಬಿತು. ಆರನೆಯ ವಿಕ್ರಮಾದಿತ್ಯನು ಆಂಧ್ರ, ದ್ರಾವಿಡ, ನೇಪಾಲ ದೊರೆಗಳನ್ನು ತನ್ನ ಪದಾಕ್ರಾಂತರನ್ನಾಗಿ ಮಾಡಿಕೊಂಡ ವಿಷಯ ಅವನ ಹಲವು ಶಾಸನಗಳಲ್ಲಿದೆ. ಅವನು ಬಿಹಾರ ಪ್ರಾಂತವನ್ನು ಗೆದ್ದು ಅಲ್ಲಿ ಚಾಳುಕ್ಯರ ಪ್ರತಿನಿಧಿಯಾಗಿ ನಾನ್ಯದೇವನನ್ನು ನೇಮಿಸಿದನು. ಆ ಮುಂಚೆ ಬಂಗಾಳ ಪ್ರಾಂತವನ್ನು ಗೆದ್ದು ಅಲ್ಲಿ ಚಾಳುಕ್ಯರ ಪ್ರತಿನಿಧಿಯಾಗಿ ಸಾಮಂತಸೇನನನ್ನು ನೇಮಿಸಲಾಗಿತ್ತು. ಇವರೇ ಕ್ರಮೇಣ ಸ್ವತಂತ್ರವಾದ ಮಿಥಿಲೆಯ ‘ಕರ್ನಾಟ’ ವಂಶದ, ಬಂಗಾಳದ ‘ಸೇನ’ ವಂಶದ ಮೂಲಪುರುಷರು. ಸು. ೧೧೫೮ರ ವಲ್ಲಾಲ ಸೇನನು (<ಬಲ್ಲಾಳ) ಚಾಲುಕ್ಯ ರಾಜಕುಮಾರಿಯನ್ನು ಮದುವೆಯಾಗಿದ್ದನು.[7]

ನೇಪಾಳದಿಂದ ಹರಿದು ಬರುವ ಗಂಡಕಿ, ಕೋಶಿ ನದಿಗಳು ಬಿಹಾರದಲ್ಲಿ ಗಂಗಾನದಿಯನ್ನು ಸೇರುತ್ತವೆ. ಬಿಹಾರದ ಪೂರ್ವದಲ್ಲಿ ಕೋಶಿ, ಪಶ್ಚಿಮ ಭಾಗದಲ್ಲಿ ಗಂಡಕಿ, ದಕ್ಷಿಣದಲ್ಲಿ ಗಂಗಾನದಿಗಳ ಮಧ್ಯದ ಭೂ ಭಾಗವೇ ಇತಿಹಾಸ ಪ್ರಸಿದ್ಧ ವಿದೇಹ ಅಥವಾ ಮಿಥಿಲಾ: ಆಧುನಿಕ ಕಾಲದಲ್ಲಿ ಅದನ್ನು ತಿರಹುತ್‌ಎಂದೂ ಕರೆಯುತ್ತಾರೆ. ಆ ಪ್ರದೇಶವನ್ನಾಳಿದವನೇ ವಿಕ್ರಮಾದಿತ್ಯನ ಪ್ರತಿನಿಧಿ ನಾನ್ಯದೇವ. ಕ್ರಿ. ಶ. ೧೦೯೭ರಲ್ಲಿ ಅವನು ಸ್ಥಾಪಿಸಿದ “ಕರ್ನಾಟ” ವಂಶವು ಮುಂದಿನ ಇನ್ನೂರೈವತ್ತು ವರ್ಷಗಳಲ್ಲಿ ಆ ಭಾಗದ ಸಾಮಾಜಿಕ ಧಾರ್ಮಿಕ ಜೀವನದಲ್ಲಿ ಬಹುದೊಡ್ಡ ಗುಣಾತ್ಮಕ ಬದಲಾವಣೆಯನ್ನು ತಂದಿತು.

ಈ ನಾನ್ಯದೇವನು ಬಹುಶಃ ಹುಟ್ಟಿನಿಂದ ಬ್ರಾಹ್ಮಣನಾಗಿದ್ದು, ಸೇನಾ ದಂಡನಾಯಕನಾಗಿ ಆರನೆಯ ವಿಕ್ರಮಾದಿತ್ಯನ ಆಪ್ತನಾಗಿ ಕೆಲಸ ಮಾಡುತ್ತಿದ್ದಿರಬಹುದು. ಆರನೆಯ ವಿಕ್ರಮಾದಿತ್ಯನ ಮಗ ಮೂರನೆಯ (ಭೂಲೋಕಮಲ್ಲ) ಸೋಮೇಶ್ವರನ ಕಾಲದ ಕ್ರಿ. ಶ. ೧೧೨೭ರ ಶಾಸನದಲ್ಲಿ ಚಕ್ರವರ್ತಿಯ ಪಟ್ಟಾಭಿಷೇಕ ಕಾಲದಲ್ಲಿ ನನ್ನಯಭಟ್ಟ ಎಂಬ ಜ್ಯೋತಿಷಿಗೆ ದಾನವನ್ನು ನೀಡಲಾಗಿದೆ. (B. R. Gopal : The Chalukyas of Kalyan, P.7), ನಾನ್ಯ (ನಿನ್ನಿ) ದೇವನೂ ನನ್ನಯಭಟ್ಟನೂ ಬಂಧುಗಳಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಾನ್ಯದೇವ ಬಹುಶಃ ಒಬ್ಬ ಬ್ರಹ್ಮಕ್ಷತ್ರಿಯ.

ದಾಖಲೆಗಳು ನಾನ್ಯದೇವನನ್ನು ‘ಕರ್ನಾಟಕ ಕುಲ ಭೂಷಣ’ ಎಂದೇ ಕರೆದಿವೆ. (ಅವನನ್ನು ಒಂದು ವಂಶಾವಳಿಯು ‘ದೋಯ’ ಎಂದಿದೆ.) ಕನ್ನಡಿಗನಾದ ಅವನ ನಿಜವಾದ ಹೆಸರು ನನ್ನಿದೇವ. ‘ನನ್ನಿ’ ಎಂದರೆ ಕನ್ನಡದಲ್ಲಿ ಪ್ರೀತಿ, ಪ್ರಾಮಾಣಿಕತೆ ಎಂದರ್ಥ. “ನನ್ನಯ್ಯ” ಎಂಬಂತಹ ಹೆಸರುಗಳ ಮೂಲದಲ್ಲಿರುವ ಪದ “ನನ್ನಿ”ಯೇ.[8] “ನನ್ನಿ” ಪದದ ಜಾಗದಲ್ಲಿ ಅದರ ಸಮೀಪದ ಸಂಸ್ಕೃತ ‘ನಾನ್ಯ’ವನ್ನು ಸೇರಿಸಲು ಕಾರಣ, ಅವನು ಆಳಲು ಆರಂಭಿಸಿದ ಪ್ರದೇಶವು ಸಂಸ್ಕೃತದ ಸೋದರ ಭಾಷೆಗಳಾದ ಹಿಂದಿ ಇತ್ಯಾದಿ ಭಾಷಾ ಪ್ರದೇಶವಾಗಿದ್ದುದು. ಅವನ ಇನ್ನೊಂದು ಹೆಸರು “ನಾನ್ಯುಪದೇವ” ಎಂಬುದು “ನನ್ನಿಯಪ್ಪ ದೇವ” ಎಂಬುದರ ಸಂಸ್ಕೃತೀಕೃತ ರೂಪ. ನಾನ್ಯದೇವ ಮತ್ತು ಅವನ ಮುಂದಿನ ರಾಜರನ್ನು ದಾಖಲೆಗಳಲ್ಲಿ “ಕರ್ಣಾಟ ಚೂಡಾಮಣಿ”ಗಳೆಂದು “ಕರ್ಣಾಟ ವಂಶೋದ್ಭವ”ರೆಂದು “ಕರ್ಣಾಟಾಧಿಪ”ರೆಂದೇ ಕರೆದಿದೆ. ನಾನ್ಯದೇವನು ಬಿಹಾರದ ಪಾಲರನ್ನು ಗೆದ್ದು ರಾಜ್ಯವನ್ನು ವಿಸ್ತರಿಸಿಕೊಂಡು ತನ್ನ ಆಳಿಕೆಯನ್ನು ದೃಢಪಡಿಸಿಕೊಂಡನು.

ಕ್ರಿ. ಶ. ೧೦೯೭ – ೧೧೪೭ರವರೆಗೆ ಆಳಿದ ನಾನ್ಯದೇವನ ಮೊದಲ ರಾಜಧಾನಿ ಕೋಯಿಲಿ ನಾನ್‌ಪುರ (ಈ ‘ಕೋಯಿಲ್‌’ ಎಂಬುದು ದೇವಾಲಯ ಎಂಬರ್ಥದ ದ್ರಾವಿಡದ ಕೋಯಿಲ್‌ಇರಬಹುದು); ಬಳಿಕ ಅವನು ಸಿಮ್ರೌನ್‌ಗಡದಲ್ಲಿ ಕೋಟೆ ಕಟ್ಟಿ ಅಲ್ಲಿಗೆ ತನ್ನ ರಾಜಧಾನಿಯನ್ನು ವರ್ಗಾಯಿಸಿದನು. ಸಿಮ್ರೌನ್‌ಗಡವು ದಕ್ಷಿಣ ನೇಪಾಳದಲ್ಲಿ, ಭಾರತದ ಗಡಿಯಾಚೆ ಹತ್ತು ಕಿಲೋಮೀಟರ್‌ದೂರದಲ್ಲಿದೆ. ಕರ್ನಾಟ ರಾಜರ ವಿಶೇಷಣಗಳಲ್ಲಿ, ನೇಪಾಳದ ಹಸ್ತಪ್ರತಿಗಳಲ್ಲಿ ಉಲ್ಲೇಖವಾಗಿರುವಂತೆ “ಪರಮೇಶ್ವರ, ಪರಮ ಭಟ್ಟಾರಕ” ಎಂಬುವೂ ಗಮನಾರ್ಹ. ಇವು ಕಲ್ಯಾಣ ಚಾಲುಕ್ಯ ಚಕ್ರವರ್ತಿಗಳ ವಿಶೇಷಣಗಳೂ ಆಗಿದ್ದುದು ಪ್ರಸಿದ್ಧವೇ. ನಾನ್ಯದೇವನು ೧೧೨೦ ರಲ್ಲಿ. ಮತ್ತೆ ೧೧೪೧ ರಲ್ಲಿ ನೇಪಾಳದ ಮೇಲೆ ಧಾಳಿ ಮಾಡಿ ಭಕ್ತಪುರ ಮತ್ತು ಪಾಟಣ್‌ಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡನು. ಈ ನಗರಗಳು ಕಾಠಮಾಂಡೊಗೆ ಹದಿನೈದು, ಹತ್ತು ಕಿಲೋ ಮೀಟರ್‌ಅಂತರದಲ್ಲಿವೆ.

ವಿದ್ವಾಂಸ ನಾನ್ಯದೇವನು ಭರತನ ನಾಟ್ಯಶಾಸ್ತ್ರದ ಮೇಲೆ ‘ಭರತ ಭಾಷ್ಯ’ ಎಂಬ ಭಾಷ್ಯ ಬರೆದಿದ್ದಾನೆ. ಸರಸ್ವತಿ ಹೃದಯಾಲಂಕಾರ ಎಂಬ ಹೆಸರಿನ ಈ ಗ್ರಂಥದ ಅಂತ್ಯದಲ್ಲಿ ತನ್ನನ್ನು “ಕರ್ಣಾಟ ಕುಲ ಭೂಷಣ” ಎಂದು ಕರೆದುಕೊಂಡಿದ್ದಾನೆ. ಅದರಲ್ಲಿ ‘ಕರ್ಣಾಟ – ಭಾಷಾ – ದೇಶೀರಾಗ”ಗಳ ಮತ್ತು ಇತರ ರಾಗಗಳ ಹೆಸರುಗಳನ್ನು ಹೇಳುತ್ತಾನೆ. “Nanyadeva and his `Karnata – bhasa – viduh’ or musical followers (of Karnataka) gave tremendous impetus to music and probably encouraged the use of ‘ಭಾಷಾ’ or vernacular of the land’’ (vijayakanta Misra : Cultural Heritage of Mithila, P. 216.)” (ಮಿಥಿಲೆಯ ಸಂಗೀತ ಪರಂಪರೆ ಮುಂದೆ ಹರಿಸಿಂಹದೇವನ ಕಾಲಕ್ಕೆ ನೇಪಾಳಕ್ಕೂ ಹರಿಯಿತು.) ವಿಶೇಷವಾಗಿ ಸಂಗೀತ ಭಾಗದಲ್ಲಿ ಅವನು ‘ಮಾರ್ಗ’, ‘ದೇಶಿ’ ಎಂಬ ಎರಡು ಬಗೆಯ ಸಂಗೀತ ಶೈಲಿಗಳನ್ನು ವರ್ಣಿಸಿದ್ದಾನೆ. (ಈ ಪರಿಭಾಷೆ ಆ ಕಾಲಕ್ಕೆ ಕರ್ಣಾಟಕದಲ್ಲಿ ಪರಿಚಿತವಾಗಿತ್ತು.) ನಾನ್ಯದೇವನ ಕೃತಿ ಮಿಥಿಲೆ ಪ್ರದೇಶದ ಸಂಗೀತ ನರ್ತನ ಕಲೆಯ ವಿಕಾಸಕ್ಕೆ ನಾಂದಿ ಹಾಡಿತು; ಭದ್ರಬುನಾದಿಯನ್ನು ಹಾಕಿತು. ಅವನ “ಸರಸ್ವತೀ ಹೃದಯಾಲಂಕಾರ” ಭಾಷ್ಯದಲ್ಲಿ ಕೊಟ್ಟಿರುವ ‘ದೇಶಿ’ ರಾಗಗಳು ವಾಸ್ತವವಾಗಿ ಕರ್ನಾಟಕ ಸಂಗೀತದ ರಾಗಗಳೇ ಆಗಿವೆ. ಆಧುನಿಕ ಪೂರ್ವ ಭಾರತದಲ್ಲಿ ಪ್ರಚುರವಿದ್ದ ಹಿಂದೂ ಕಾನೂನಿಗಾಗಿ (ದತ್ತು ಸ್ವೀಕಾರ, ಪಿತ್ರಾರ್ಜಿತ ಆಸ್ತಿ, ಆಸ್ತಿ ವಿಭಜನೆ ಇತ್ಯಾದಿಗಳು) ಅವಲಂಬಿಸುತ್ತಿದ್ದ ಏಕೈಕ ಧರ್ಮಶಾಸ್ತ್ರ ಗ್ರಂಥ ಕಲ್ಯಾಣ ಚಾಲುಕ್ಯರ ಕಾಲದ ವಿಜ್ಞಾನೇಶ್ವರನ ‘ಮಿತಾಕ್ಷರಾ’. ಇದು ಯಜ್ಞವಲ್ಕ್ಯ ಸ್ಮೃತಿಗೆ ಬರೆದ ಟೀಕೆಯಾದರೂ, ತನಗಿಂತ ಹಿಂದಿನ ಕೃತಿಕಾರರ ಅಭಿಪ್ರಾಯಗಳನ್ನು “ತರ್ಕಬದ್ಧವಾಗಿ ಸಂಗ್ರಹಿಸಿ, ವಿಮರ್ಶಿಸಿ ಅಂತ್ಯದಲ್ಲಿ ತನ್ನದೇ ಆದ ಅಭಿಪ್ರಾಯವನ್ನು ನೀಡಿದ್ದಾನೆ” (ಇಮ್ಮಡಿ ಶಿವಬಸವ ಸ್ವಾಮಿಗಳು: ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ, ಪು. ೧೯೯). ಬಂಗಾಳವನ್ನು ಹೊರತುಪಡಿಸಿದರೆ ಇಡೀ ಭಾರತದಲ್ಲಿ ಅಧಿಕೃತ ಕಾನೂನು ಗೃಂಥವೆಂದು ಪರಿಗಣಿತವಾಗಿದ್ದದ್ದು ಇದೇ. ವಿಜ್ಞಾನೇಶ್ವರನ ‘ಮಿತಾಕ್ಷರಾ’[9] ಇಡೀ ಭಾರತದಲ್ಲಿ ಪ್ರಚುರವಾಗಲು ಅದರ ಶ್ರೇಷ್ಠತೆಯ ಜೊತೆಗೆ, ಅವನಿಗೆ ಆಶ್ರಯ ನೀಡಿದ್ದ ಆರನೆಯ ವಿಕ್ರಮಾದಿತ್ಯನ ಪ್ರತಿನಿಧಿಯಾಗಿ ಉತ್ತರ ಭಾರತವನ್ನು ಆಳಿದ ನಾನ್ಯದೇವನೂ ಕಾರಣವಿರುವಂತಿದೆ. (ಬಂಗಾಳದಲ್ಲಿ ಮಾತ್ರ ಪ್ರಚಲಿತವಿದ್ದುದು ಜೀಮೂತವಾಹನನ ‘ದಾಯಭಾಗ’ – ಅದೂ ಕರ್ನಾಟಕದ ದೊರೆಗಳಾದ ಸೇನರ ಆಶ್ರಯದಲ್ಲೇ ರಚಿತವಾದುದೆಂಬುದು ಗಮನಾರ್ಹ).

ನಾನ್ಯದೇವನ ಹಿರಿಯ ಮಗ ಮಲ್ಲದೇವನು ನೇಪಾಳವನ್ನೂ, ಕಿರಿಯ ಮಗ ಗಂಗದೇವನು (೧೧೪೭ – ೮೮) ಮಿಥಿಲೆಯನ್ನೂ ಆಳಿದರು. ಮಲ್ಲದೇವನು ಆಶ್ರಯವಿತ್ತಿದ್ದ ವರ್ಧಮಾನ ಉಪಾಧ್ಯಾಯನು ಸ್ಮೃತಿಗಳನ್ನು ಕುರಿತು ಬರೆದಿದ್ದಾನೆ. ಅವನ ಬರವಣಿಗೆಗಳಲ್ಲಿ ಬರುವ ಒಬ್ಬ “ಕರ್ಣಾಟ ಲಲಾಟ”ನನ್ನು ಇನ್ನೂ ಗುರುತಿಸಲಾಗಿಲ್ಲ. ಅವರ ಬಳಿಕ ಬಂದ ನರಸಿಂಹ ದೇವನು ದಾಖಲೆಗಳಲ್ಲಿ “ಕರ್ಣಾಟಾನ್ವಯ ಭೂಷಣ”ನೆನ್ನಿಸಿಕೊಂಡಿದ್ದರೂ “ಕರ್ಣಾಟ” ರಾಜ್ಯವು ಅವನ ಕಾಲದಲ್ಲಿ ದುರ್ಬಲಗೊಂಡಿತು. ದೆಹಲಿ ಸುಲ್ತಾನ ಷಹಾಬುದ್ದೀನ್ ಮಹಮ್ಮದ್ ಘೋರಿಯನ್ನು ಅವನು ಎದುರಿಸಿದನಾದರೂ ಅವನಿಗೆ ಕಪ್ಪ ಕಾಣಿಕೆ ಕೊಟ್ಟು ಮಿಥಿಲೆಯನ್ನು ತನ್ನ ವಶದಲ್ಲಿ ಉಳಿಸಿಕೊಂಡನು.

ರಾಮಸಿಂಹದೇವನನ್ನು (೧೨೨೭ – ೧೨೮೫) ಕ್ರಿ.ಶ. ೧೨೪೪ರ ನೇಪಾಳದ ಶಾಸನದಲ್ಲಿ “ಅಪ್ಪು ರಾಮಸಿಂಹದೇವ”ನೆಂದಿದೆ.[10] ಸಮರ್ಥನೂ ಉದಾರಿಯೂ ಸಾಹಿತ್ಯಪ್ರೇಮಿಯೂ ಆಗಿದ್ದ ಅವನ ಕಾಲದಲ್ಲಿ ಮಿಥಿಲೆಯು ಸಂಸ್ಕೃತ ವಿದ್ವಾಂಸರಿಗೆ ತಾಣವಾಯಿತು; ಹಲವು ತತ್ವಶಾಸ್ತ್ರ ಕೃತಿಗಳು ಅವರಿಂದ ರಚಿತವಾದವು. ಅವನಲ್ಲಿ ಬೌದ್ಧ, ಹಿಂದೂ ಧರ್ಮಗಳ ಸಮನ್ವಯವಿತ್ತು. ಬೌದ್ಧರು ಕಾಳಿ ಶಿವನಿಗೆ ಗೌರವ ಸಲ್ಲಿಸಿದರೆ ಶ್ರೀಮಂತ ಹಿಂದೂಗಳು ಬೌದ್ಧರಿಗೆ ದತ್ತಿಗಳನ್ನು ನೀಡಿದರು. ಟಿಬೆಟಿನ ಬೌದ್ಧ ಗುರು ಧರ್ಮಸ್ವಾಮಿಯು ಅವನ ರಾಜಧಾನಿ “ಪ – ತ”ವನ್ನು (ಸಿಮ್ರೌನ್‌ಗಡ) ವರ್ಣಿಸುತ್ತ ಅಲ್ಲಿ ಆರು ಲಕ್ಷ ಮನೆಗಳು, ಊರ ಸುತ್ತ ಏಳು ಪೌಳಿ ಗೋಡೆಗಳ ಕೋಟೆ ಇದ್ದುದನ್ನು ಹೇಳುತ್ತಾನೆ. ಕೋಟೆಯಿಂದ ಹೊರಗಡೆ ಅರಮನೆಯಿದ್ದರೂ ಅದರ ಸುತ್ತ ಮರಗಳು ಹನ್ನೆರಡು ಕಂದಕಗಳು ಅದರ ರಕ್ಷಣೆಗಿದ್ದುವು. (ಚಿತ್ರ ೪೦ – ೪೧). “ತುರುಷ್ಕ”ರ ಭಯವು ಆ ಭದ್ರತೆಗೆ ಕಾರಣ. ಬಿಹಾರವು ಅಂದು ಮುಸ್ಲಿಮರ ಕೈಯಲ್ಲಿದ್ದರೂ ಅದರ ಉತ್ತರ ಭಾಗದಲ್ಲಿದ್ದ ಮಿಥಿಲೆಯನ್ನು ಅವರ ಆಕ್ರಮಣದಿಂದ ರಾಮಸಿಂಹದೇವನು ಮುಕ್ತಗೊಳಿಸಿದ್ದನು. ಸಮಕಾಲೀನನಾಗಿದ್ದ ಧರ್ಮಸ್ವಾಮಿಯ ಪ್ರಕಾರ, “ಮುಸ್ಲಿಮರ ಖಡ್ಗದ ಮೊನಚನ್ನು ಮೊಂಡುಗೊಳಿಸಿದ” ಯಶಸ್ವಿ ದೊರೆ.[11] ಶ್ರೀಕರ ಎಂಬ ವಿದ್ವಾಂಸನ ಅಮರಕೋಶದ ಟೀಕೆಯು ಇವನ ಕಾಲದಲ್ಲಿ ರಚಿತವಾಯಿತು. ಪೃಥ್ವೀಧರ, ರತ್ನೇಶ್ವರ, ಚಿತ್ರಧವ ಮೊದಲಾದ ವಿದ್ವಾಂಸರು ಅವನ ಆಶ್ರಯವನ್ನು ಪಡೆದಿದ್ದರು. ಬೌದ್ಧನಾಗಿದ್ದ ಧರ್ಮಸ್ವಾಮಿಯ ಪಾಂಡಿತ್ಯಕ್ಕೆ ಮಾರುಹೋದ ರಾಮಸಿಂಹದೇವನು ಅವನನ್ನು ತನ್ನ ಪುರೋಹಿತನಾಗಿರಲು ಪ್ರಾರ್ಥಿಸಿಕೊಂಡದ್ದು ಗಮನಾರ್ಹ.

ಇವನ ನಂತರದ ದೊರೆ ಶಕ್ತಿಸಿಂಹದೇವ ಅಥವಾ ಶುಕ್ರಸಿಂಹ ದೇವನು ಪ್ರಜೆಗಳ ಬಗ್ಗೆ ನಿರ್ಲಕ್ಷ್ಯ ಮನೋಧರ್ಮದವನಾಗಿದ್ದು ಅವನನ್ನು ನಿಯಂತ್ರಿಸಲು ಅವನ ಮಂತ್ರಿಯೇ ಏಳು ಜನ ಪ್ರತಿಷ್ಠಿತರ ಮಂಡಲಿಯನ್ನು ಸ್ಥಾಪಿಸಿದ್ದು ಒಂದು ವಿಶೇಷ ಕುತೂಹಲಜನಕ ವಿಷಯ. ಇವನ ಕಾಲದಲ್ಲಿ “ಕರ್ನಾಟ” ರಾಜ್ಯದ ವೈಭವ ಕೆಳಗಿಳಿಯಿತು.

ಹಾಗೆ ಕೆಳಗಿಳಿದುದನ್ನು ಮತ್ತೆ ಮೇಲಕ್ಕೆ ಕೊಂಡೊಯ್ದ ದೊರೆ ಅವನ ನಂತರದ ಹರಿಸಿಂಹದೇವ. ೧೨೮೩ – ೮೪ರಲ್ಲಿ ಪಟ್ಟಕ್ಕೆ ಬಂದು ಮುಂದೆ ಐವತ್ತು ವರ್ಷಗಳವರೆಗೆ ಆಳಿದ ಹರಿಸಿಂಹದೇವನ್ನು ಶಾಸನಗಳು, ಸಾಹಿತ್ಯಕೃತಿಗಳು “ಕರ್ನಾಟ ಕುಲ ಸಂಭವ”, “ಕರ್ನಾಟ ವಂಶೋದ್ಭವ”, “ಕಾರ್ನಾಟ ಚೂಡಾಮಣಿ” ಎಂದು ಮುಂತಾಗಿ ಕರೆದಿವೆ. (ಚಿತ್ರ – ೩) “ಕರ್ನಾಟ” ವಂಶದ ದೊರೆಗಳಲ್ಲೆಲ್ಲ ಇವನು ಪ್ರಖ್ಯಾತ. ಜ್ಯೋತಿರೀಶ್ವರ ಠಾಕೂರನ “ಧೂರ್ತ ಸಮಾಗಮ” ಎಂಬ ನಾಟಕದಲ್ಲಿ ಅವನನ್ನು “ಹಿಂದೂಪತಿ”ಯೆಂದು ಉಮಾಪತಿಯ “ಪಾರಿಜಾತ ಹರಣ ನಾಟಕ”ದಲ್ಲಿ “ಹಿಂದೂಪತಿ ಹರಿಸಿಂಹ”ನೆಂದು ಸಂಬೋಧಿಸಿದೆ. ಅವನಿಗೂ ದೇವಗಿರಿ ಯಾದವ ದೊರೆ ರಾಮಚಂದ್ರನಿಗೂ ಹದಿನಾಲ್ಕನೇ ಶತಮಾನದ ಪೂರ್ವಾರ್ಧದಲ್ಲಿ ಪತ್ರ ವ್ಯವಹಾರ ನಡೆದಿರುವುದಕ್ಕೆ ದಾಖಲೆಯಿದೆ. ಅವನ ಬಹುದೊಡ್ಡ ಸಾಧನೆಯೆಂದರೆ, ಮಿಥಿಲೆಯ ಮೇಲೆ ದಂಡೆತ್ತಿ ಬಂದ ಮುಸ್ಲಿಮರ ದಾಳಿಗಳನ್ನು ಯಶಸ್ವಿಯಾಗಿ ತಡೆದುದು. “ದಾನರತ್ನಾಕರ”ವು ಹೇಳುವಂತೆ “ಮ್ಲೇಚ್ಛ”ರ ದವಡೆಗಳಲ್ಲಿ ಸಿಲುಕಿದ್ದ ಮಿಥಿಲೆಯನ್ನು ರಕ್ಷಿಸಿದವನು ಹರಿಸಿಂಹದೇವ. ಅವನ ರಾಜಧಾನಿಯ ಮೇಲೆ ದಂಡೆತ್ತಿ ಬಂದ ದೆಹಲಿಯ ಘಿಯಾಸುದ್ದೀನ್ ತುಘಲಕನ ಸೈನ್ಯವನ್ನು ಹಿಮ್ಮೆಟ್ಟಿಸಿದ್ದೇ “ಕವಿಶೇಖರಾಚಾರ್ಯ” ಬಿರುದಿನ ಜ್ಯೋತಿರೀಶ್ವರನ[12] “ಧೂರ್ತ ಸಮಾಗಮ” ಎಂಬ ನಾಟಕದ ವಸ್ತು.[13] ಆ ನಾಟಕವನ್ನು ಮ್ಲೇಚ್ಛರ ಮೇಲೆ ಗಳಿಸಿದ ವಿಜಯದ ಸ್ಮರಣಾರ್ಥವಾಗಿ ಬರೆಯಲಾಗಿತ್ತು. ಅದನ್ನು ಹರಿಸಿಂಹದೇವ ತನ್ನ ಅರಮನೆಯ ರಂಗಸ್ಥಳದ ಮೇಲೆ ವೀಕ್ಷಿಸಿದನು. ಘಿಯಾಸುದ್ದೀನ್ ತುಘಲಕನನ್ನು ಅಲ್ಲಿ ‘ಸುರತ್ರಾಣ’ (Sultan) ಎಂದು ಕರೆದಿದೆ. ಹರಿಸಿಂಹದೇವನು ತನ್ನ ಮಿಥಿಲೆ ರಾಜ್ಯವನ್ನು ಸುತ್ತುವರಿದಿದ್ದ ಮುಸ್ಲಿಮರಿಂದಾಗಿ ತನ್ನ ರಾಜ್ಯವನ್ನು ಹೆಚ್ಚು ವಿಸ್ತರಿಸಲು ಸಾಧ್ಯವಿರಲಿಲ್ಲವಾದ ಕಾರಣ ಅವನು ನೇಪಾಳದತ್ತ ಗಮನ ಹರಿಸಿ ಅಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವತ್ತ ಲಕ್ಷ್ಯವನ್ನಿತ್ತನು. ಆಗ ನೇಪಾಳದಲ್ಲಿ “ಮಾತ್ಸ್ಯ ನ್ಯಾಯ”ವಿತ್ತು (anarchy). ಕ್ರಿ.ಶ. ೧೩೧೧ರಲ್ಲಿ ಅವನು ನೇಪಾಳದ ಮೇಲೆ ಧಾಳಿ ಮಾಡಿ ಅದನ್ನು ತನ್ನ ರಾಜ್ಯದ ಭಾಗವಾಗುವಂತೆ ಮಾಡಿದನು. ಸುತ್ತಮುತ್ತಲೂ ಮುಸ್ಲಿಂ ದೊರೆಗಳಿಂದ ಆವೃತವಾಗಿದ್ದ ಹರಿಸಿಂಹದೇವನ ಮಿಥಿಲೆ ರಾಜ್ಯವು ಸಹಜವಾಗಿಯೇ “the only refuge of Hindus and Hinduism” ಎಂಬ ಖ್ಯಾತಿಗೆ ಗುರಿಯಾಗಿದೆ.

ಕ್ರಿ.ಶ. ೧೩೨೪ರಲ್ಲಿ ಮತ್ತೆ ಮುಸ್ಲಿಂ ಧಾಳಿ ನಡೆದಾಗ ಹರಿಸಿಂಹದೇವನು ಸೋತು ನೇಪಾಳಕ್ಕೆ ಹೋಗಿ ಅಲ್ಲಿ ನೆಲೆಸಬೇಕಾಯ್ತು. ಸುಂದರ ದೇವಾಲಯಗಳಿಂದ ಶಿಲ್ಪಗಳಿಂದ ಅರಮನೆ ಕೋಟೆ ಗೋಪುರಗಳಿಂದ ನಳನಳಿಸುತ್ತಿದ್ದ ಸಿಮ್ರೌನ್‌ಗಡ ನಗರವನ್ನು ಮುಸ್ಲಿಂ ಸೈನ್ಯವು ಹಾಳುಗೆಡವಿತು. ಈಗ ಅದೊಂದು ಕೆಲವೇ ಮನೆ ಗುಡಿಸಲುಗಳಿರುವ ಚಿಕ್ಕ ಗ್ರಾಮವಾದರೂ ಅಲ್ಲಿ ಎಲ್ಲಿ ನೋಡಿದರೂ ಸೂಕ್ಷ್ಮ ಕೆತ್ತನೆಯ ಭಗ್ನ ದೇವಾಲಯ, ಶಿಲ್ಪ ಮೂರ್ತಿಗಳು ಕಾಣಸಿಗುತ್ತವೆ. ಏಳು ಕಿಲೋ ಮೀಟರ್ ಸುತ್ತಳತೆಯ ಕೋಟೆಯ (ಚಿತ್ರ ೪೦, ೪೧) ಸುತ್ತಮುತ್ತ ಅರಣ್ಯ ಪ್ರದೇಶ, ವ್ಯವಸಾಯ ಯೋಗ್ಯ ಭೂಮಿ ಇದೆ. ಸುತ್ತಮುತ್ತ ಫಲವತ್ತಾದ ಜೋಳದ ಹೊಲಗಳಿವೆ; ಎಲ್ಲೆಲ್ಲೂ ಮಣ್ಣಲ್ಲಿ ಬತ್ತದ ತೆನೆಗಳು ಕಾಣಸಿಗುತ್ತವೆ.[14] ದೇವಾಲಯಗಳ ಪಕ್ಕದಲ್ಲಿನ ದಿಬ್ಬಗಳಲ್ಲಿ ಹಲವು ಪ್ರಾಚೀನ ಸ್ಮಾರಕಗಳು ಹುದುಗಿವೆ. ಸುಂದರ ಭಗ್ನ ವಿಷ್ಣು, ಮಹಿಷಾಸುರ ಮರ್ದಿನಿ, ಸೂರ್ಯ, ಕಂಕಾಲಿ, ಅಷ್ಟಭುಜ ದೇವಿ, ಬ್ರಹ್ಮ, ಹರಿಹರ, ನವಗ್ರಹ ಮೂರ್ತಿಗಳು ಅಲ್ಲಿ ದೊರಕಿವೆ. ಸುಂದರ ಪಟ್ಟಿಕಾ ಶಿಲ್ಪಗಳನ್ನು ಕಾಣಬಹುದು. (ಚಿತ್ರ ೫ಎ, ೫ಬಿ, ೬, ೭) ಭಗ್ನಕೋಟೆ, ಸುಂದರ ಶಿಲ್ಪಗಳು, ದೇವಾಲಯಗಳು ತಕ್ಕಮಟ್ಟಿಗೆ ಕರ್ನಾಟಕದ ಹಂಪಿಯನ್ನು ಸಹಜವಾಗಿ ನೆನಪಿಸುತ್ತವೆ. ಸಮೀಪದಲ್ಲೇ ಹರಿಹರಪುರವೆಂಬ ಗ್ರಾಮವಿದೆ.[15]

ಹದಿನೆಂಟನೇ ಶತಮಾನದಲ್ಲಿ ಕಷಿಯಾನಿ ಡಿ ಮಚೆರತ ಎಂಬ ರೋಮನ್ ಕೆಥೊಲಿಕ್ ಪಾದ್ರಿಯು ಸಿಮರೌನ್‌ಗಡದ ಸ್ಮಾರಕಗಳನ್ನು ಪರಿಶೀಲಿಸಿ ಸಿದ್ಧಪಡಿಸಿದ ನಕ್ಷೆಯನ್ನು ಭಕ್ತಪುರದ ಕಲ್ಲಿನ ಮೇಲೆ ಕೆತ್ತಲಾಗಿದೆ.[16] ಆ ನಗರದ ಇಕ್ಕಟ್ಟಾದ ಓಣಿಗಳು, ಸುತ್ತುವರಿದ ಎತ್ತರದ ಏಳು ಗೋಡೆಗಳು, ಅವುಗಳ ಮಧ್ಯೆ ಕಾಲುವೆಗಳು (ಚಿತ್ರ ೪೦ – ೧), ಒಂದೇ ಒಂದು ಬಾಗಿಲಿನಿಂದ ಪ್ರವೇಶಿಸಬೇಕಾದ ನಾಲ್ಕು ಕೋಟೆಗಳನ್ನು ಆ ಪಾದ್ರಿ ವಿವರಿಸಿದ್ದಾನೆ. ಆ ಕೋಟೆಯ ದಕ್ಷಿಣದ ತುದಿಯು ಭಾರತದಲ್ಲಿದೆ. ಪುರಾತತ್ವ ಶೋಧಜ್ಞರ ಪ್ರಕಾರ ಸಿಮಲ್ (ಸಿಮರ್) ಅಥವಾ ಹತ್ತಿ ಮರಗಳು (Cottan tree) ಹೆಚ್ಚು ಬೆಳೆಯುವ ಪ್ರದೇಶವಾದ್ದರಿಂದ ಊರಿಗೆ ಆ ಹೆಸರು ಬಂದಿದೆ (ಸಿಮರ್ + ಬನ್ + ಗಡ್). ಆ ಪ್ರದೇಶವನ್ನು ವಿ(ಬಿ)ದೇಹ, ಮಿಥಿಲ, ತಿರಭುಕ್ತಿ (ತಿರ್ಹುತ್), ಬೃಹದಾರಣ್ಯ, ನೈಮಿಕಾನನ, ಜಾನಕೀ ಜನ್ಮಭೂಮಿ, ಶಾಂಭವಿ, ಸ್ವೊರ್ಣಲಂಶಲ್, ಜ್ಞಾನಕ್ಷೇತ್ರ, ಕ್ರಿಯಾಪೀಠ ಮತ್ತು ತಪೂವನ ಎಂಬ ಭಿನ್ನ ಹೆಸರುಗಳಿಂದ ಕರೆಯಲಾಗುತ್ತಿದೆ.

ಸುಲ್ತಾನ್ ಘಿಯಾಸುದ್ದೀನನು ಸಿಮ್ರೌನ್‌ಗಡ ನಗರದ ಅಮೂಲ್ಯ ಕಲಾ ಸಂಪತ್ತಿನ ದೇವಾಲಯ, ಶಿಲ್ಪಗಳನ್ನು, ಕಲಾಕೃತಿಗಳನ್ನು ನಾಶಪಡಿಸಿ ಇಡೀ ನಗರವನ್ನು ಹಾಳುಗೆಡವಿದನು. ಸಾವಿರಾರು ಹಿಂದುಗಳ ನರಮೇಧ ಅವ್ಯಾಹತವಾಗಿ ನಡೆಯಿತು. ಸಿಮ್ರೌನ್‌ಗಡದ ಸುತ್ತಮುತ್ತ ಇರುವ ಲಕ್ಷ್ಮೀಪುರ, ಕೊತ್ಯಾಲಿ, ಭಗವಾನ್‌ಪುರ, ದೇವಪುರ, ಹರಿಹರಪುರ, ಉಜಿಡಿ, ಕಚೋರ್ಬ, ಅಮೃತಗಂಜ್, ಗೋಳಗಂಜ್, ಖಜಹನಿ, ನಾಯಕ ತೋಲ್ ಮತ್ತು ಝಮರಿ ಊರುಗಳಲ್ಲಿ ದೇವ, ದೇವಿಯರ ಸುಸ್ಥಿತಿಯಲ್ಲಿರುವ ಅಥವಾ ಭಗ್ನಗೊಂಡ ಶಿಲ್ಪಗಳನ್ನು ಕಾಣಬಹುದು. ಅಲ್ಲಿ ಚತುರ್ಮುಖ ಲಿಂಗವು ದೊರಕಿದೆ. ಒಡೆದ ಮಡಕೆ ಚೂರುಗಳು, ಹಳೆಯ ಇಟ್ಟಿಗೆಗಳು ಎಲ್ಲ ಕಡೆ ಚೆಲ್ಲುವರಿದಿವೆ. ಅಲ್ಲಿನ ಅವಶೇಷಗಳಲ್ಲಿ ಹಿಂದೂ ಸಂಬಂಧಿ ಅಲ್ಲದೆ, ಬೌದ್ಧ ಮೂರ್ತಿಗಳೂ ಇತರ ಅವಶೇಷಗಳೂ ಮುಸ್ಲಿಮರ ನಾಣ್ಯಗಳೂ ದೊರಕಿವೆ. ೧೧ – ೧೩ನೇ ಶತಮಾನಗಳ ಮಧ್ಯಕ್ಕೆ ಸೇರುವ ಐವತ್ತೆರಡು “ಗಂಡ”ಗಳಲ್ಲಿ (೧ ಗಂಡ = ೪ ಕೊಳ) ಬಹುತೇಕ ಕೊಳಗಳು ಮಾಯವಾಗಿವೆ ಅಥವಾ ಮಣ್ಣಿನಿಂದ ಮುಚ್ಚಿ ಹೋಗಲಿವೆ.

ಹರಿಹರಪುರದ ದಕ್ಷಿಣಕ್ಕೆ ಕಲಾತ್ಮಕ ಕೆತ್ತನೆಯ ಒಂದು ದೊಡ್ಡ ಬಂಡೆಯನ್ನು “ತಿಜೋರಿ ಬಕಸ್” (Box of Treasure) ಎಂದು ಕರೆಯುತ್ತಾರೆ. ಅದರ ಕೆಳಗೆ ಅಪಾರ ಐಶ್ವರ್ಯವಿತ್ತೆಂದು ಜನರ ನಂಬಿಕೆ. ಅಮೃತಗಂಜ್ ಹಳ್ಳಿಯ ಸಮೀಪದ ಖಜಹನಿ ಊರಲ್ಲಿ (=ಖಜಾನೆ) ರಾಜರು ತಮ್ಮ ಸಂಪತ್ತನ್ನು ಇಡುತ್ತಿದ್ದರೆಂದು ನಂಬಲಾಗಿದೆ. ಅಲ್ಲಿ ಅಗೆಯುವಾಗ ಕೆಲವರಿಗೆ ಮಣಗಟ್ಟಲೆ ಚಿನ್ನ ಸಿಕ್ಕಿದೆ. ಆ ಪ್ರದೇಶದ ಹಲವು ಸುಂದರ ಮೂರ್ತಿಗಳನ್ನು ವಿದೇಶಗಳಿಗೆ ಒಯ್ಯಲಾಗಿದೆ. ಕೆಲವನ್ನು ಕಾಠಮಾಂಡೊದ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ಇಡಲಾಗಿದೆ.[17]

ಇಲ್ಲಿಯ ಹಲವು ಸುಂದರ ಶಿಲ್ಪಗಳನ್ನು ರೂಪಿಸಿದವರು ದಕ್ಷಿಣ ಭಾರತದ (ಕರ್ನಾಟಕದ) ಶಿಲ್ಪಿಗಳೆಂದು ವಿದ್ವಾಂಸರು ಭಾವಿಸಿದ್ದಾರೆ.[18] ಆ ಪ್ರದೇಶದಲ್ಲಿ “Gadhimai” ಹೆಸರಿನ ಅತ್ಯಂತ ಪ್ರಸಿದ್ಧ ಸ್ತ್ರೀ ದೇವತಾ ಕೇಂದ್ರ ಅಥವಾ ಶಕ್ತಿಪೀಠವಿದೆ.

ಸುಮಾರು ನಲವತ್ತು ಚದರ ಕಿಲೋಮೀಟರ್ ವ್ಯಾಪ್ತಿಯುಳ್ಳ ಸಿಮ್ರೌನ್‌ಗಡ್ ಪ್ರಾಚೀನ ನಿವೇಶನವು ತನ್ನ ಭವ್ಯ ಪರಂಪರೆಯನ್ನು ಸಾರುವ ಅವಶೇಷಗಳಿಂದ ತುಂಬಿದೆ; ಅದು ನಮಗೆ ಸಹಜವಾಗಿಯೇ “ಹಂಪಿ”ಯನ್ನು ನೆನಪಿಸುತ್ತದೆ. ಸಿಮರೌನ್‌ಗಡವನ್ನು “ನೇಪಾಳದ ಹಂಪಿ”ಯೆಂದು ಕರೆಯಬಹುದು. ಎರಡೂ ಶ್ರೇಷ್ಠ ಸಂಸ್ಕೃತಿಗಳನ್ನು ಬೆಳಸಿದ ಕೇಂದ್ರಗಳು, ಎರಡನ್ನೂ ಆಳಿದವರು ಕರ್ನಾಟರೇ – ಸಿಮ್ರೌನ್‌ಗಡದ ದೊರೆಗಳು “ಕರ್ನಾಟ”ರೆಂದೇ ಪ್ರಸಿದ್ಧ; ಹಂಪಿಯ ವಿಜಯನಗರ ಸಾಮ್ರಾಜ್ಯದ ದೊರೆಗಳಂತೂ ತಮ್ಮನ್ನು “ಕರ್ನಾಟಕ ರಾಜ್ಯ ರಮಾ ರಮಣ”ರೆಂದೇ ಕರೆದುಕೊಂಡರು. ಎರಡನ್ನೂ ಹಾಳು ಮಾಡಿದವರು ಮುಸ್ಲಿಮರು; ಎರಡೂ ಪ್ರದೇಶಗಳಲ್ಲಿ ಹಿಂದೂಗಳ ಬರ್ಬರ ಹತ್ಯೆ ನಡೆಸಿದವರು ಅವರು. ಹಂಪಿಯ ಪ್ರಾಚೀನ ನಿವೇಶನವು ಸುಮಾರು ನೂರು ಚದರ ಕಿಲೋಮೀಟರ್ ವ್ಯಾಪ್ತಿಯುಳ್ಳದ್ದು. ಎರಡಕ್ಕೂ ಇರುವ ದಟ್ಟ ಹೋಲಿಕೆ ಎದ್ದು ಕಾಣುತ್ತದೆ. ಹಂಪಿಗಿಂತ ಸಿಮರೌನ್‌ಗಡವು ಹೆಚ್ಚು ಹಾಳಾಗಿದೆಯೆಂಬ ಮಾತು ನಿಜ. ಸಿಮರೌನ್‌ಗಡದ ಮೂರ್ತಿ ಶಿಲ್ಪವು ಹಂಪಿಯ ಮೂರ್ತಿ ಶಿಲ್ಪಕ್ಕಿಂತ ಸುಂದರ.

ಹರಿಸಿಂಹದೇವನ ಕಾಲದಲ್ಲಿ ಮಿಥಿಲೆಯನ್ನು ಹೊರತುಪಡಿಸಿ ಇಡೀ ಉತ್ತರ ಭಾರತ ಮುಸ್ಲಿಮ್ ದೊರೆಗಳ ವಶವಾಗಿತ್ತು. ಹೀಗಾಗಿ ಅವನನ್ನು “ಒಂದು ರೀತಿಯಲ್ಲಿ ಉತ್ತರ ಭಾರತದ ಕೊನೆಯ ದೊಡ್ಡ ಹಿಂದೂ ದೊರೆ” (“In a way, he was the last great Hindu King of North India”) ಎಂದು ಬಣ್ಣಿಸಲಾಗಿದೆ.[19] ಸಿಮ್ರೌನ್‌ಗಡದ ಅವಶೇಷಗಳು ಹಿಂದೂ ಮುಸ್ಲಿಮ್ ಘರ್ಷಣೆಗಳ ಸಂಕೇತವೂ ಹೌದು. “….the ruins over ther (are) the living tales of five centuries of incessant struggle between the Muslim bigotry and the Hindu retaliations.”[20]

ಹರಿಸಿಂಹದೇವನನ್ನು “ಅತಿದೊಡ್ಡ ಸಮಾಜ ಸುಧಾರಕ” ಎಂದು ಕರೆದಿದ್ದಾರೆ.[21] ಮಿಥಿಲೆಯ ಸಮಾಜದ ಕಟ್ಟಳೆಗಳನ್ನು ರೂಪಿಸಿದವನು ಅವನು. “ಕುಲೀನತಾ”[22] ವ್ಯವಸ್ಥೆಯನ್ನು ಅವನು ರೂಢಗೊಳಿಸಿದ್ದು ಅದು ಇಂದಿಗೂ ಬಿಹಾರದಲ್ಲಿ ಜಾರಿಯಲ್ಲಿದೆ. ಇಂದಿಗೂ ಬಿಹಾರದ ಬ್ರಾಹ್ಮಣರು, ಕಾಯಸ್ಥರು “ವಂಶ ವೃಕ್ಷ”ಗಳನ್ನು ಕಾಪಾಡಿಕೊಂಡು ಬರುತ್ತಾರೆ. ನೇಪಾಳದಲ್ಲೂ ಅಷ್ಟೇ. (ಚಿತ್ರ ೪)

ಹರಿಸಿಂಹದೇವನ ಕಾಲದಲ್ಲಿ ಮೈಥಿಲೀ ಬ್ರಾಹ್ಮಣರನ್ನು ಶ್ರೋತ್ರಿಯ, ಜೋಗ್ಯ, ಪಂಜಿಬದ್ಧ ಮತ್ತು ಜೈಬರ್ ಎಂದು ನಾಲ್ಕು ವರ್ಗೀಕರಣ ಮಾಡಲಾಯ್ತು. (ಇದಕ್ಕೆ ‘ನಾಗರ್’ ಎಂಬುದನ್ನೂ ಸೇರಿಸುತ್ತಾರೆ.) ಹತ್ತೊಂಬತ್ತನೇ ಶತಮಾನದವರೆಗೆ ಇವರಲ್ಲಿ ಕೆಲವರು ನಲವತ್ತು ಐವತ್ತು ಮದುವೆ ಮಾಡಿಕೊಳ್ಳಬಹುದಿತ್ತು. ಈ ಮೈಥಿಲಿ ಬ್ರಾಹ್ಮಣರು, ಅದರಲ್ಲೂ ಎಲ್ಲರಿಗಿಂತ ಶ್ರೇಷ್ಠರೆಂದು ಭಾವಿಸುವ ಶ್ರೋತ್ರಿಯ ಬ್ರಾಹ್ಮಣರು ತಾವು ಮೂಲತಃ ಕರ್ನಾಟಕದವರೆಂದು ಇಂದಿಗೂ ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ. ನಾನು ಕಾಠಮಾಂಡೊದಲ್ಲಿ ಭೇಟಿ ಮಾಡಿದ ಮಿಥಿಲೇಶ ಕುಮಾರ ಝಾ ಎಂಬುವವರು ಹೇಳುವ ಪ್ರಕಾರ, ಕರ್ನಾಟಕದಲ್ಲಿ ಅವರು ಪ್ರತ್ಯಕ್ಷ ಕಂಡ ಬ್ರಾಹ್ಮಣರ ಉಪನಯನ ಸಂಸ್ಕಾರದ ವಿಧಿಗಳಿಗೂ ಬಿಹಾರದ ಮೈಥಿಲಿ ಬ್ರಾಹ್ಮಣರ ಉಪನಯನ ಸಂಸ್ಕಾರದ ವಿಧಿಗಳಿಗೂ ಬಹು ಹತ್ತಿರದ ಹೋಲಿಕೆಗಳಿವೆ. ಬ್ರಾಹ್ಮಣರಂತೆಯೇ ‘ಕಾಯಸ್ಥ’ರಲ್ಲೂ[23] ನಾಲ್ಕು ವರ್ಗಗಳನ್ನು ಏರ್ಪಡಿಸಲಾಯ್ತು.

೧. ಒಂದನೇ ವರ್ಗ – ನಾನ್ಯದೇವನ ಜೊತೆ ಆರಂಭದಲ್ಲೇ ಕರ್ನಾಟಕದಿಂದ ಬಂದ ಶ್ರೀಧರದಾಸನೂ ಸೇರಿದಂತೆ ಹನ್ನೆರಡು ಜನ ಕಾಯಸ್ಥರು;

೨. ಎರಡನೇ ವರ್ಗ – ಮಿಥಿಲೆಯಲ್ಲಿ “ಕರ್ನಾಟ” ವಂಶ ಸ್ಥಾಪನೆಗೊಂಡ ಮೇಲೆ ಕರ್ನಾಟಕದಿಂದ ಕರೆಯಿಸಿಕೊಂಡ ಇಪ್ಪತ್ತು ಕುಟುಂಬಗಳು;

೩. ಮೂರನೇ ವರ್ಗ – ಆಮೇಲೆ ಮಿಥಿಲೆಗೆ ಬಂದ ಮೂವತ್ತು ಕುಟುಂಬಗಳು;

೪. ಕರ್ನಾಟ ವಂಶದವರ ಕಾಲದಲ್ಲಿ ಕೊನೆಯದಾಗಿ ಬಂದವರು. ಶ್ರೀಧರದಾಸನ ವಂಶಸ್ಥನಾದ ಸೂರ್ಯಕರ ಠಾಕೂರನು “ಪಂಜಿ” ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿದವನು. ನಾನ್ಯದೇವನ ಜೊತೆ ಬಂದ ಹನ್ನೆರಡು ಕಾಯಸ್ಥರ ಕುಟುಂಬಗಳು ಹೀಗಿವೆ – ಲಕ್ಷ್ಮೀಶ್ವರ, ಪ್ರಭಾಕರ, ದೇವಿ, [24] ಪುಣ್ಯಕರ ದೇವ, ಶ್ರೀಕರ, ಶ್ಯಾಮ, ಸಲಖನ ದೇವ, ಶ್ರೀಪತಿ (ಶ್ರೀಧರ), ಶ್ರೀವಾಮ, ಹರಿಹರ, ರತಿಕರ ಮತ್ತು ರತ್ನದೇವ. ಇವರಲ್ಲಿ ಕೊನೆಯವನಾದ ರತ್ನದೇವನೇ ಮಿಥಿಲೆಯ ‘ಕರ್ಣ’[25] ಕಾಯಸ್ಥರ ಮೂಲಪುರುಷ.

ಹರಿಸಿಂಹನ ಕಾಲದಲ್ಲಿ ‘ಸ್ಮೃತಿ’ ಗ್ರಂಥಗಳು ರಚಿತವಾದುವು. ಅವುಗಳಲ್ಲಿ ಆಯಾ ಜಾತಿಯ ಜನರು ತಮಗೆ ವಿಧಿಸಿರುವ ಕಟ್ಟುಪಾಡುಗಳಿಗೆ ಬದ್ಧರಾಗಿರಲು ಸೂಚಿಸಲಾಗಿದೆ. ಆಧುನಿಕ ಪೂರ್ವ ಭಾರತದ ಸಂಸ್ಕೃತದ ವಿದ್ವತ್ತೆಂದರೆ ಮೈಥಿಲಿ ಬ್ರಾಹ್ಮಣರ ವಿದ್ವತ್ತೆಂದೇ ಜನಜನಿತವಾಗಿದ್ದಿರಲು ಕಾರಣ ಕರ್ನಾಟಕದ ದೊರೆಗಳು ಮತ್ತು ಅವರ ಜೊತೆ ಮಿಥಿಲೆಗೆ ಹೋದ ಕರ್ನಾಟಕದ ಬ್ರಾಹ್ಮಣರು. ಕರ್ನಾಟ ದೊರೆಗಳ ಕಾಲದಲ್ಲಿ ಮೈಥಿಲಿ ಸಾಹಿತ್ಯವೂ ಅರಳಿತು.

ನಾನ್ಯದೇವನ ಭರತಭಾಷ್ಯದ ವಿಷಯ ನೋಡಿದ್ದೇವೆ. ಹರಿಸಿಂಹದೇವನ ಕಾಲದ ಮಿಥಿಲೆಯ ವಿದ್ವಾಂಸ ಜ್ಯೋತಿರೀಶ್ವ ಠಾಕೂರನ ‘ವರ್ಣರತ್ನಾಕರ’ದಲ್ಲಿ ಹಲವು ರಾಗಗಳ ಹೆಸರಿದ್ದು ಅವುಗಳಲ್ಲಿ ‘ಕರ್ನಾಟ’ ಎಂಬುದೂ ಒಂದು. ಅವನ ಕಾಲದಲ್ಲಿ ರಚಿತವಾದ ಗೋವಿಂದ ಠಾಕೂರನ “ಗೋವಿಂದ ಮಾನಸೋಲ್ಲಾಸ”, ಅವನ ತಮ್ಮ ಚಂದ್ರೇಶ್ವರ ಠಾಕೂರನ “ಶೈವಮಾನಸೋಲ್ಲಾಸ”ಗಳು ಆರನೇ ವಿಕ್ರಮಾದಿತ್ಯ ಮಗ ಮೂರನೆಯ ಸೋಮೇಶ್ವರನ “ಮಾನಸೋಲ್ಲಾಸ” (ಅಥವಾ ಅಭಿಲಷಿತಾರ್ಥ ಚಿಂತಾಮಣಿ) ಎಂಬ ಕೃತಿಯನ್ನು ಮಾದರಿಯಾಗಿ ಹೊಂದಿರುವುದು ಸ್ಪಷ್ಟ. ಅವನ ಕಾಲದಲ್ಲಿ ವಿದ್ಯಾರ್ಥಿಗಳಿಗೆ “ಶಲಾಕಾ ಪರೀಕ್ಷಾ” ಎಂಬ ಹೆಸರಿನ ಪರೀಕ್ಷೆ ಇತ್ತು; ಆ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಮಾತ್ರ ವಿದ್ಯಾರ್ಥಿಯನ್ನು ಒಬ್ಬ ತಜ್ಞನೆಂದು ಭಾವಿಸಲಾಗುತ್ತಿತ್ತು. ಒಂದು ಕೃತಿಯ ಯಾವುದೇ ಪುಟದಲ್ಲಿ ವಿದ್ವಾಂಸರು ಕಡ್ಡಿ ಇಟ್ಟು ತೋರಿಸಿದರೆ ಆ ಪುಟದಲ್ಲಿರುವುದನ್ನು ಆ ವಿದ್ಯಾರ್ಥಿ ಓದಿ ವಿವರಿಸುವುದೇ “ಶಲಾಕಾ ಪರೀಕ್ಷಾ”. ಹರಿಸಿಂಹದೇವನು ಜನಗಳಿಗಾಗಿ ಹಲವು ದೇವಾಲಯಗಳನ್ನು ಕಟ್ಟಿಸಿ ಕೆರೆಗಳನ್ನು ಅಗಳಿಸಿದನು. ಅವನ ಜೊತೆ ಸ್ವತಂತ್ರ ಹಿಂದೂ ರಾಜ್ಯದ ಕೊನೆಯ ಗುರುತು ಭಾರತದಿಂದ ಮಾಯವಾಯಿತು. (“…With his departure the last semblance of independent Hindu kingdom went out of existence” – Sinha).

ಆಕಸ್ಮಿಕವಾದರೂ ತೀರ ಸ್ವಾರಸ್ಯದ ಸಂಗತಿಯಿದು : ಕ್ರಿ.ಶ. ೧೩೨೪ರಲ್ಲಿ ಉತ್ತರ ಭಾರತದಲ್ಲಿ ಹಿಂದೂ ರಾಜ್ಯವನ್ನು ಸಂರಕ್ಷಿಸಿಕೊಳ್ಳಲು “ಕರ್ನಾಟ” ರಾಜರು ವಿಫಲರಾದರೂ, ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಮುಸ್ಲಿಮರಿಂದ ಹಿಂದೂ ಸಂಸ್ಕೃತಿಯು ವಿನಾಶಗೊಳ್ಳುವುದನ್ನು ತಪ್ಪಿಸಲು, ಸನಾತನ ಸಂಸ್ಕೃತಿಯನ್ನು ರಕ್ಷಿಸಲು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯವು ಆರಂಭವಾಯಿತು. ಅದರ ಹಿನ್ನೆಲೆ ಸ್ಥೂಲವಾಗಿ ಹೀಗಿದೆ. ಅಲ್ಲಾವುದ್ದೀನ್ ಖಿಲ್ಜಿಯು ದೇವಗಿರಿಯ ಮೇಲೆ ದಾಳಿ ಮಾಡಿದ್ದು ೧೨೯೬ರಲ್ಲಿ. ಮಲ್ಲಿಕ್ ಕಾಫರನು ತನ್ನ ಸೈನ್ಯ ಸಮೇತ ದಕ್ಷಿಣ ಭಾರತದ ಮೇಲೆ ದಾಳಿ ಮಾಡಿ, ಸೇಉಣರ (ಯಾದವರ) ರಾಜಧಾನಿ ದೇವಗಿರಿಯನ್ನು ಕ್ರಿ.ಶ. ೧೩೧೧ರಲ್ಲಿ ಲೂಟಿ ಮಾಡಿ ಅದನ್ನು ನಾಶಪಡಿಸಿದನು. ಆ ಸೈನ್ಯವು ಇನ್ನೂ ದಕ್ಷಿಣಕ್ಕೆ ಬಂದು ಹೊಯ್ಸಳರ ರಾಜಧಾನಿ ದೋರ ಸಮುದ್ರದ ಮೇಲೆ ದಾಳಿ ಮಾಡಿ ಅದನ್ನು ನಾಶಪಡಿಸಿತು. ಹೊಯ್ಸಳರ ದೊರೆ ಮೂರನೆಯ ಬಲ್ಲಾಳನು ಸೋಲನ್ನು ಒಪ್ಪಿಕೊಂಡು ತನ್ನ ಸೈನ್ಯ ಸಮೇತ ಮುಸ್ಲಿಮ್ ಸೈನ್ಯ ಸಹಾಯಾರ್ಥ ತಮಿಳುನಾಡಿನ ಮದುರೆಗೆ ಹೋದನು. ಮದುರೆಯು ಮುಸ್ಲಿಮರ ವಶವಾಯಿತು. ೧೩೧೮ರಲ್ಲಿ ಸೇಉಣ ವಂಶವು ಕೊನೆಗೊಂಡಿತು. ಸೇಉಣರ ಅಧೀನ ರಾಜನಾಗಿದ್ದ ಹಂಪಿ ಪಕ್ಕದ ಕಂಪಿಲಿರಾಜನು ಬಲ್ಲಾಳನ ವಿರುದ್ಧ ನಿಂತನು. ೧೩೨೭ರಲ್ಲಿ ಮೊಹಮ್ಮದ್ ಬಿನ್ ತುಘಲಕನ ದಂಡಯಾತ್ರೆಯು ಮತ್ತೆ ದೋರ ಸಮುದ್ರದ ಮೇಲೆ ನಡೆಯಿತು. ಬಲ್ಲಾಳನು ಮುಸ್ಲಿಮರಿಗೆ ಅಧೀನವಾಗಿದ್ದುದನ್ನು ತಿರಸ್ಕರಿಸಿ ಸ್ವತಂತ್ರನಾಗಲು ಆಗಲೇ ಯತ್ನಿಸಿದ್ದನು. ದೋರ ಸಮುದ್ರವನ್ನು ಎರಡನೆಯ ಬಾರಿಗೆ ಲೂಟಿ ಮಾಡಲಾಯ್ತು. ಬಲ್ಲಾಳನು ತಮಿಳುನಾಡಿಗೆ ಹೋಗಿ ತಿರುವಣ್ಣಾಮಲೈ ಸೇರಿ ಅಲ್ಲಿಂದ ದೆಹಲಿ ಸುಲ್ತಾನನನ್ನು ಎದುರಿಸಲು ಯತ್ನಿಸಿದನು. ದೇವಗಿರಿ ಸೇಉಣರು, ಓರಂಗಲ್ಲಿನ ಕಾಕತೀಯರು, ಕಂಪಿಲಿ ದೊರೆಗಳು, ಮದುರೆಯ ಪಾಂಡ್ಯರೆಲ್ಲ ಮುಸ್ಲಿಮ್ ಧಾಳಿಗೆ ಸೋತರು. ಹಿಂದೂ ದೇವಾಲಯ, ಧರ್ಮ ಗ್ರಂಥಗಳು ಬಹುಸಂಖ್ಯೆಯಲ್ಲಿ ಹಾಳಾದವು. ಲೆಕ್ಕವಿಲ್ಲದಷ್ಟು ಮತಾಂತರಗಳಾದವು. ಬಲ್ಲಾಳ ಒಬ್ಬನೇ ‘ಹಿಂದೂ’ ರಾಜನಾಗಿ ಉಳಿದನು; ಅವನು ಕಟ್ಟಿದ ಹೊಸ ರಾಜಧಾನಿ ‘ಹೊಸ ಪಟ್ಟಣ’ವೇ ಮುಂದೆ ವಿಜಯನಗರವೆನ್ನಿಸಿತು. ವಿದ್ಯಾರಣ್ಯರ ಆಶೀರ್ವಾದದಿಂದ ಹಕ್ಕ ಬುಕ್ಕರ ಮೂಲಕ ಕ್ರಿ.ಶ. ೧೩೩೬ರಲ್ಲಿ ಸನಾತನ ಸಂಸ್ಕೃತಿಯ ಸಂರಕ್ಷಣೆಗಾಗಿ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯ ಉದಯವಾಗದಿದ್ದಲ್ಲಿ ದಕ್ಷಿಣ ಭಾರತದಿಂದ ಹಿಂದೂ ಸಂಸ್ಕೃತಿ ನಿರ್ನಾಮವಾಗುತ್ತಿತ್ತು.

ಹರಿಸಿಂಹದೇವನು ಕ್ರಿ.ಶ. ೧೩೨೪ರಲ್ಲಿ ದಿಲ್ಲಿ ಸುಲ್ತಾನನಿಗೆ ಸೋತು ಮಧ್ಯ ನೇಪಾಳಕ್ಕೆ ಹೋಗಿ ಅಲ್ಲಿ ಭತಗಾಂವ್‌ನಲ್ಲಿ (ಭದಗಾಂವ್; ಈಗಿನ ಭಕ್ತಪುರ) ನೆಲೆಸಿ ಅಲ್ಲಿಂದ ಆಳಲು ಆರಂಭಿಸಿದನು. ಅವನ ಜೊತೆ ಸಿಮರೌನ್‌ಗಡದಿಂದ ಬಂದ ದೇವಭಾಜು, ಭಂಡೇಲ್, ಆಚಾರ್ಯ, ವೈದ್ಯ, ಧೋಬಿ, ಖರ‍್ಗೆ(ಡ್ಗೆ) ಜಾತಿಗಳ ಜನರು ಈಗಲೂ ಅಲ್ಲಿದ್ದಾರೆ. ಅವನು ತನ್ನ ರಾಜಧಾನಿ ಶತ್ರುಗಳಿಗೆ ಪತನವಾದಾಗ, ಅಲ್ಲಿಂದ ತಲೇಜು ಭವಾನಿ ದೇವತೆಯ ವಿಗ್ರಹವನ್ನು ತಂದು ಭಕ್ತಪುರದಲ್ಲಿ ಸ್ಥಾಪಿಸಿದನು. ಈ ತಲೇಜು ಭವಾನಿ ಯಾರೂ ಅಲ್ಲ, ಈಗಿನ ಮಹಾರಾಷ್ಟ್ರದ ತುಳಜಾ ಭವಾನಿ. ವಾಸ್ತವವಾಗಿ ತುಳಜಾ ಭವಾನಿ ದೇವಾಲಯವಿರುವ ತುಳಜಾಪುರವು (ಒಸ್ಮಾನಾಬಾದ್ ಜಿಲ್ಲೆ) ಹಿಂದೊಮ್ಮೆ ಅಪ್ಪಟ ಕನ್ನಡ ಪ್ರದೇಶವಾಗಿದ್ದು, ಆ ದೇವಿ ಕರ್ನಾಟಕ ಚಾಲುಕ್ಯರ ಕಾಲದಲ್ಲೂ ಪ್ರಸಿದ್ಧಳಾಗಿದ್ದು ನಾನ್ಯದೇವನ ಮನೆದೈವವಾಗಿದ್ದಳೆಂದು ತೋರುತ್ತದೆ. (ತುಳಜಾ ಬಗ್ಗೆ ಪು. ೪೩ – ೫೦ ನೋಡಿ). ಆ ಕಾರಣದಿಂದಲೇ ನಾನ್ಯದೇವನು ಅವಳ ವಿಗ್ರಹವನ್ನು ಸಿಮರೌನ್‌ಗಡದಲ್ಲಿ ಸ್ಥಾಪಿಸಿ ದೇವಾಲಯ ಕಟ್ಟಿಸಿ ಅವಳ ಆರಾಧನೆ ಮಾಡುತ್ತಿದ್ದನು. ಈಗಲೂ ಹರಿಸಿಂಹದೇವನು ಭಕ್ತಪುರದಲ್ಲಿ ಕಟ್ಟಿಸಿದ ಮೂಲ ತುಳಜಾ ಭವಾನಿಯ ಭವ್ಯ ದೇವಾಲಯವಿದ್ದು, ಅದರ ಗರ್ಭಗುಡಿಯ ಬಾಗಿಲು ಸದಾ ಮುಚ್ಚಿರುತ್ತದೆ. ವರ್ಷಕ್ಕೊಮ್ಮೆ ದಸರಾ ಸಮಯದಲ್ಲಿ ಒಂದು ದಿನ ಅಲ್ಲಿ ತಲೇಜು ದೇವಿಯ ಪೂಜೆ ಮಾಡಲಾಗುತ್ತದೆ. ಅಲ್ಲಿ ದೇವಿಯ ವಿಗ್ರಹವಿಲ್ಲದಿದ್ದರೂ ಸಾಂಕೇತಿಕವಾಗಿ ಕಳಶ ಇಡುತ್ತಾರೆ. ಆ ಒಂದು ದಿನ ಮಾತ್ರ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ಮತ್ತು ಅಂದು ಮಾತ್ರ ಪೂಜೆ. ಆ ದೇವಾಲಯದ ಗರ್ಭಗುಡಿ ವರ್ಷವಿಡೀ ಮುಚ್ಚಿರುವುದರಿಂದ ಆ ದೇವತೆಯನ್ನು ‘ನಿಗೂಢ ದೇವತೆ’ಯೆಂದೇ (Mysterious Goddess) ಆಧುನಿಕ ಬರಹಗಳಲ್ಲಿ ವರ್ಣಿಸಲಾಗುತ್ತದೆ. ಭಕ್ತಪುರದ ಅರಮನೆ ಆವರಣದ ತಲೇಜು ಭವಾನಿ ದೇವಾಲಯದ ಹಿಂಭಾಗದಲ್ಲಿ ಕಾಷ್ಠಶಿಲ್ಪಗಳ ಪಟ್ಟಿಯಿದ್ದು ಅದರಲ್ಲಿ ನಾನ್ಯದೇವನಿಂದ ಹರಿಸಿಂಹದೇವನವರೆಗಿನ ಎಲ್ಲ ರಾಜರ ಚಿಕ್ಕ ಮೂರ್ತಿಗಳನ್ನು ಕೆತ್ತಿ, ಪ್ರತಿ ಶಿಲ್ಪದ ಕೆಳಗೆ ಆಯಾ ರಾಜರ ಹೆಸರನ್ನೂ ತೋರಿಸಿರುವುದು ಸ್ವಾರಸ್ಯವಾಗಿದೆ.[26] ಕಾಠಮಾಂಡೊ, ಪಾಟಣ್ ನಗರಗಳಲ್ಲಿಯೂ ಅರಮನೆಗಳ ಆವರಣದಲ್ಲಿ ತಲೇಜು ಭವಾನಿ ದೇವಾಲಯಗಳಿವೆ. ತುಳಜಾ ಭವಾನಿಯು ಮಹಾರಾಷ್ಟ್ರದ ಶಿವಾಜಿಯ ಆಪ್ತ ದೈವ, ಸ್ಫೂರ್ತಿದೇವತೆಯೆಂಬುದು ಪ್ರಸಿದ್ಧ.

ಹರಿಸಿಂಹದೇವನ ಬಳಿಕ ನೇಪಾಳವನ್ನು ಅವನ ವಂಶಸ್ಥರು ಬೇರೆ ಬೇರೆಡೆ ಇನ್ನೂರು ವರ್ಷ ಆಳಿದರು. ಅವನ ವಂಶಸ್ಥನಾಗಿದ್ದ ಮತಿ ಸಿಂಹದೇವನನ್ನು ನೇಪಾಳದ ಅಧಿಕೃತ ದೊರೆಯೆಂದು ಚೀನೀ ಚಕ್ರವರ್ತಿ ಮಾನ್ಯ ಮಾಡಿದ್ದನು. ಕೊನೆಯವನಾದ ಶಾಮಸಿಂಹ ದೇವನ ಬಳಿಕ ನೇಪಾಳವನ್ನು ಆಳಿದವರು ಮಲ್ಲರು: ಇವರನ್ನು “ಕರ್ನಾಟ ಮಲ್ಲ”ರೆಂದೇ ಕರೆದರೂ ಮಲ್ಲ ದೊರೆಗಳು ಮೂಲತಃ ನೇಪಾಳಿಗಳು; ನೆವಾರಿ ಪಂಗಡದವರು. ಕರ್ನಾಟ ವಂಶದ ದೊರೆಗಳು ಆಡಳಿತದಲ್ಲಿ ಬ್ರಾಹ್ಮಣರಿಗೆ ಮತ್ತು ಕಾಯಸ್ಥರಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದರೂ ಒಟ್ಟು ರಾಜ್ಯದ, ನಗರ ಹಳ್ಳಿ ಎಂಬ ಭೇದವಿಲ್ಲದೆ ಮೇಲ್ಜಾತಿ ಕೀಳ್ಜಾತಿ ಎಂಬ ಭೇದವಿಲ್ಲದೆ ಎಲ್ಲರ ಹಿತವನ್ನೂ ರಕ್ಷಿಸುವ ಹೊಣೆ ಹೊತ್ತಿದ್ದರು.

ಉತ್ತರ ಭಾರತವು ೧೨ – ೧೩ನೇ ಶತಮಾನಗಳಲ್ಲಿ ಮುಸ್ಲಿಮರ ತೀವ್ರ ದಾಳಿಗೆ ಒಳಗಾಗಿ ಹಿಂದೂ ದೇವಾಲಯಗಳು, ಧರ್ಮ ಗ್ರಂಥಗಳು ಬಹುಸಂಖ್ಯೆಯಲ್ಲಿ ನಾಶವಾದವು; ಮತಾಂತರಕ್ಕೆ ಒಪ್ಪದ ಬಹುಸಂಖ್ಯೆಯ ಹಿಂದೂಗಳು ಹತರಾದರು. ಇದರಿಂದಾಗಿ ಹಿಂದೂಗಳೂ ಬೌದ್ಧರೂ ತಮ್ಮನ್ನು ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳಲು ಭಾರತದಿಂದ ದುರ್ಗಮ ಪ್ರದೇಶವಾದ ನೇಪಾಳಕ್ಕೆ ಓಡಿಹೋಗಿ ರಕ್ಷಣೆ ಪಡೆದರು. ಅವರ ಜೊತೆ ಅಮೂಲ್ಯವಾದ ಹಿಂದೂ ಬೌದ್ಧ ಧರ್ಮಗ್ರಂಥಗಳು ನೇಪಾಳವನ್ನು ಸೇರಿದವು. ಕಾಠಮಾಂಡೊದ National Archieves ಸಂಗ್ರಹದಲ್ಲಿ ಅತ್ಯಮೂಲ್ಯ ಅಪೂರ್ವ ಹಸ್ತಪ್ರತಿಗಳು ಸಂಗ್ರಹಗೊಂಡಿರುವುದನ್ನು ಕಾಣಬಹುದು. ‘ಹಿಂದೂ ದೊರೆ’ ಹರಿಸಿಂಹದೇವನು ನೇಪಾಳಕ್ಕೆ ಹೋಗಿ ಅಲ್ಲಿಂದ ಆಳಲು ಆರಂಭಿಸಿದ ಮೇಲಂತೂ ಅಲ್ಲಿ ಭಾರತದ ಹಿಂದೂಗಳಿಗೆ ಹೆಚ್ಚಿನ ರಕ್ಷಣೆ ದೊರೆಯಿತು ಎಂಬುದನ್ನು ಹೇಳಬೇಕಾಗಿಲ್ಲ. ಮಲ್ಲವಂಶದ ಪದ್ಮಲ್ಲದೇವಿ ಮತ್ತು ದೇವಲ ದೇವಿಯರ[27] ಕಾಲದಲ್ಲಿ (೧೪ನೇ ಶ.) ಬಂಗಾಳದ ಸುಲ್ತಾನ್ ಷಂಸುದ್ದೀನ್ ನೇತೃತ್ವದಲ್ಲಿ ಮುಸ್ಲಿಮ್ ಸೇನೆ ನೇಪಾಲಕ್ಕೆ ನುಗ್ಗಿ ದಾಳಿ ಮಾಡಿದಾಗ ಪಾಟಣ್ ನಗರ ಭಸ್ಮೀಕೃತವಾಯಿತು; ಭಕ್ತಪುರದಲ್ಲಿ ಹಲವು ಮನೆಗಳು ಒಂದು ದೇವಾಲಯ ನಾಶವಾದವು. ಜನರು ಧೈರ್ಯದಿಂದ ಎದುರಿಸಿದ್ದರಿಂದ ಮುಸ್ಲಿಮ್ ಸೈನ್ಯ ವಾಪಸಾಗಬೇಕಾಯಿತು. ಮುಸ್ಲಿಮರು ಪಶುಪತಿ ಮಹಾದೇವನ ವಿಗ್ರಹವನ್ನು ವಿರೂಪಗೊಳಿಸಿದ್ದು ಅದೇ ಸಂದರ್ಭದಲ್ಲಿಯೇ. ಇಂದಿಗೂ “ವಿಶ್ವದ ಏಕೈಕ ಹಿಂದೂ ರಾಷ್ಟ್ರ” ಎಂದು ನೇಪಾಳ ಹೇಳಿಕೊಳ್ಳುವಲ್ಲಿ ಐತಿಹಾಸಿಕವಾಗಿ “ಕರ್ನಾಟ” ದೊರೆಗಳ ಪಾತ್ರ ನಗಣ್ಯವಾದುದು ಖಂಡಿತ ಅಲ್ಲ.

ಮಿಥಿಲೆಯವರ ಬಗ್ಗೆ ಒಂದು ಸಾಂಪ್ರದಾಯಿಕ ಹೇಳಿಕೆ ಹೀಗಿದೆ –

            ಅಂತಃ ಶಾಕ್ತಾ ಬಹಿಃ ಶೈವಾಃ
ಸಭಾಮಧ್ಯೇ ತು ವೈಷ್ಣವಾಃ ||

ಅಂತರಂಗದಲ್ಲಿ ಶಕ್ತಿ ಪೂಜಕರು (ಶಾಕ್ತರು); ಬಹಿರಂಗದಲ್ಲಿ ಶೈವರು; ಸಭಾ ಮಧ್ಯದಲ್ಲಿ ವೈಷ್ಣವರು. ಕರ್ನಾಟಕದ ದೊರೆಗಳು ಶಾಕ್ತರೂ ಶೈವರೂ ವೈಷ್ಣವರೂ ಏಕಕಾಲಕ್ಕೆ ಆಗಿದ್ದರು ಎಂಬುದರ ದ್ಯೋತಕ ಇದು.

ಮಲ್ಲರು :

ಮಲ್ಲ ದೊರೆಗಳು ನೇಪಾಳದಲ್ಲಿ ಮೊದಲಿಂದ ಇದ್ದವರಾದರೂ, ಅವರ ಚರಿತ್ರೆ ಸುಮಾರು ೧೨೦೦ ರಿಂದ ಅರಿಮಲ್ಲ (ಅಥವಾ ಅರಿದೇವ)ನಿಂದ ಆರಂಭವಾಗುತ್ತದೆ. ಅವನ ಮಗ ಅಭಯ ಮಲ್ಲನು (೧೨೩೬ – ೫೫) ಕಲೆ ಸಾಹಿತ್ಯಗಳನ್ನು ಬಹುವಾಗಿ ಪ್ರೋತ್ಸಾಹಿಸಿದನು. ಅವನ ಕಾಲದಲ್ಲಿ ಆದ ಭೂಕಂಪದಿಂದ, ಕ್ಷಾಮ ಡಾಮರಗಳಿಂದ ಜನರು ಸಂತ್ರಸ್ತರಾದಾಗ, ಅವನು ಶಾಂತ್ಯರ್ಥವಾಗಿ ಲಕ್ಷಹೋಮವನ್ನು ನಡೆಯಿಸಿ ಪಶುಪತಿ ಮಹಾದೇವನಿಗೆ ‘ಮಹಾಸ್ನಾನ’ ಮಾಡಿಸುವ ವ್ಯವಸ್ಥೆಯನ್ನು ಆರಂಭಿಸಿದನು. ಇವನ ಬಳಿಕ ಆಳಿದ ಜಯದೇವ, ಆನಂದದೇವರು ಅನುಕ್ರಮವಾಗಿ ಕಾಠಮಾಂಡೊ ಭಕ್ತಪುರಗಳಲ್ಲಿ ಆಳುತ್ತಿದ್ದರು. ಆನಂದದೇವನ ಕಾಲದಲ್ಲಿ ಪನೌತಿ, ಬನೆಪ, ಧೂಲಿಖೇಲ್ ಇವೇ ಮೊದಲಾದ ಪಟ್ಟಣಗಳು ನಿರ್ಮಾಣವಾದವು. ಜಯಸಿಂಹಮಲ್ಲನು (೧೨೭೧ – ೭೪) ಕುಬ್ಲಾಖಾನನ ಕೋರಿಕೆಯ ಮೇರೆಗೆ ಟಿಬೆಟ್‌ನಲ್ಲಿ ಸ್ತೂಪ ರಚಿಸಲು ಅರ‍್ನಿಕೋ ಎಂಬ ಕಲಾವಿದನನ್ನು ಕಳುಹಿಸಿದನು. ಕಲಾವಿದ ಅರ‍್ನಿಕೋನಿಂದಾಗಿ ಪಗೋಡ ಶೈಲಿಯ ವಾಸ್ತುವು ಜನಪ್ರಿಯವಾಯಿತು. ಜಯರುದ್ರಮಲ್ಲನ ಕಾಲದಲ್ಲಿ (೧೩೨೪) ಹರಿಸಿಂಹದೇವನು ಮಿಥಿಲೆಯನ್ನು ಕಳೆದುಕೊಂಡು ನೇಪಾಳಕ್ಕೆ ಭಕ್ತಪುರದಲ್ಲಿ ಬಂದು ನೆಲೆಸಿದನು. ಅಲ್ಲಿ ಆಳುತ್ತಿದ್ದ ಮಲ್ಲ ವಂಶದ ದೊರೆಗಳು ಬಹು ಹಿಂದೆಯೇ ಮಿಥಿಲೆಯ “ಕರ್ನಾಟ” ರಾಜರ ಸಾರ್ವಭೌಮತ್ವವನ್ನು ಒಪ್ಪಿಕೊಂಡಿದ್ದರು. ಜಯರುದ್ರಮಲ್ಲನ ತಾಯಿ ಪದ್ಮಲ್ಲದೇವಿ, ಹೆಂಡತಿ ದೇವಲ ದೇವಿ. ವಿಧವೆ ದೇವಲ ದೇವಿಯ ಕಾಲದಲ್ಲೇ ಬಂಗಾಳದ ಸುಲ್ತಾನ ಷಂಸುದ್ದೀನನು ೧೩೪೯ರಲ್ಲಿ ಕಾಠಮಾಂಡೊದ ಪಶುಪತಿ ಮತ್ತು ಸ್ವಯಂಭೂ ಬೌದ್ಧ ವಿಹಾರಗಳನ್ನು ಲೂಟಿ ಮಾಡಿದ್ದು. ದೇವಲ ದೇವಿ ತನ್ನ ಮೊಮ್ಮಗಳು ರಾಜಲ್ಲದೇವಿಯನ್ನು (ಈಕೆಯ ಹೆಸರು ‘ಬಿಜ್ಜಲದೇವಿ’ ಎಂದೂ ದಾಖಲಾಗಿದೆ – ಇದೇ ಸರಿ ಇರಬಹುದು) ಪಶ್ಚಿಮ ನೇಪಾಳದ ಮಲ್ಲ ವಂಶದ ಜಯಸ್ಥಿತಿ ಮಲ್ಲನಿಗೆ ಕೊಟ್ಟು, ಅವನನ್ನು ರಾಜನನ್ನಾಗಿ ಮಾಡಿ ಭಕ್ತಪುರವನ್ನು ಆಳುವಂತೆ ಮಾಡಿದಳು. ರಾಜಲ್ಲದೇವಿಯು “ಕರ್ನಾಟ” ದೊರೆ ಜಗತ್‌ಸಿಂಹನ ಮಗಳು.

ದೇವಲ ದೇವಿಯು “ಕರ್ನಾಟ” ರಾಜ ವಂಶದವಳು ಎಂಬುದು ಅವಳ ಹೆಸರಿನಿಂದಲೇ ಸೂಚಿತವಾಗುತ್ತದೆ. ಅವಳ ಮೊಮ್ಮಗಳು ರಾಜಲ್ಲದೇವಿ; ಭಕ್ತಪುರದಿಂದ ಆಳಿದ ಅತ್ಯಂತ ಪ್ರಖ್ಯಾತ ದೊರೆ ಜಯಸ್ಥಿತಿ ಮಲ್ಲನ (೧೩೫೪ – ೯೫) ಪತ್ನಿ.

ಜಯಸ್ಥಿತಿ ಮಲ್ಲನು ದೇಶದ ಶಾಂತಿಗೆ ಅಡ್ಡಿಮಾಡುತ್ತಿದ್ದ ಮದೋನ್ಮತ್ತ ಸ್ಥಳೀಯ ಮುಖ್ಯರನ್ನು ಸದೆ ಬಡಿದು ಕಾಠಮಾಂಡೊ ಕಣಿವೆಯಲ್ಲಿ ಶಾಂತಿಯನ್ನು ವ್ಯವಸ್ಥಿತ ಆಡಳಿತವನ್ನು ನೆಲೆಗೊಳಿಸಿದನು. ಸಾಂಪ್ರದಾಯಿಕ ಹಿಂದೂ ಚೌಕಟ್ಟಿನಲ್ಲಿ ನೇಪಾಳಿ ಸಮಾಜವನ್ನು ರೂಪಿಸಿದನು. ಜಾತಿ ವ್ಯವಸ್ಥೆ, ಭೂಮಿಯ ಅಳತೆ, ತೂಕಗಳು ಇತ್ಯಾದಿಗಳನ್ನು ಕಾನೂನಿಗೆ ಒಳಪಡಿಸಿದನು. ಹಲವು ದೇವಾಲಯಗಳ ನಿರ್ಮಾಪಕನೂ ಆದನು. ವಿದ್ವಾಂಸರನ್ನು ಪ್ರೋತ್ಸಾಹಿಸಿದ್ದಲ್ಲದೆ, ಸ್ವತಃ ಶೈವನಾಗಿದ್ದರೂ ಹಲವು ಬೌದ್ಧ ಮಂದಿರಗಳಿಗೆ ಉದಾರವಾಗಿ ದತ್ತಿಗಳನ್ನೂ ನೀಡಿದನು.

ಅವನು ತಂದ ಸಾಮಾಜಿಕ ಸುಧಾರಣೆಗಳಲ್ಲಿ ಮುಖ್ಯವಾದವು ಇವು: ಬ್ರಾಹ್ಮಣರನ್ನು ಪಂಚ ಗೌಡ, ಪಂಚ ದ್ರಾವಿಡರೆಂದು ವರ್ಗೀಕರಿಸಿದ್ದು (‘ದ್ರಾವಿಡ’ ಎಂಬುದು ಸಹಜವಾಗಿಯೇ ದಕ್ಷಿಣ ಭಾರತವನ್ನು ನೆನಪಿಸುತ್ತದೆ).

ಪಂಚ ಗೌಡ
ಸಾರಸ್ವತ್ ಗೌಡ್ ಕನೋಜ್ ಮೈಥಿಲಿ ಉತ್ಕಲ್

 

ಪಂಚ ದ್ರಾವಿಡ
ಮಹಾರಾಷ್ಟ್ರ ತ್ರೈಲಿಂಗ್ (ಆಂಧ್ರ) ದ್ರಾವಿಡ (ತಮಿಳುನಾಡು) ಕರ್ನಾಟಕ ಗೂರ್ಜರ (ಗುಜರಾತ್)

ನೆವಾರಿ ಸಮಾಜವನ್ನು ಆಚಾರ್ಯ, ವೈದ್ಯ, ಶ್ರೇಷ್ಠ, ದೈವಜ್ಞರೆಂದು ವರ್ಗೀಕರಿಸಿದನು. ಉಳಿದವರನ್ನು ಮೂವತ್ತಾರು ಜಾತಿಗಳನ್ನಾಗಿ ವರ್ಗೀಕರಿಸಿ, ಬೀದಿ ಗುಡಿಸುವವರನ್ನು ಚಪ್ಪಲಿ ಹೊಲೆಯುವವರನ್ನು ಅಸ್ಪ್ರಶ್ಯರೆಂದು ಘೋಷಿಸಿದನು. ಬೇರೆ ಬೇರೆ ಜಾತಿಯವರು ತಮ್ಮ ಜಾತಿಗೆ ನಿಗದಿಯಾದ ವಸ್ತ್ರವನ್ನುಡಬೇಕು. ಕಟುಕರು ಉದ್ದನೆಯ ತೋಳಿನ ನಿಲುವಂಗಿ ಹಾಕಬೇಕು. ಬೀದಿ ಗುಡಿಸುವವರು ಬರಿಗಾಲು, ಬರಿದಲೆಗಳಲ್ಲಿ ಓಡಾಡಬೇಕು. ಕಿವಿಗೆ ಏನೂ ಧರಿಸಕೂಡದು. ಮೇಲ್ಜಾತಿಯವರಿಗೆ ಅವರು ಗೌರವ ಕೊಡಬೇಕು. ಅವನು ಕಾಠಮಾಂಡೊ ಸಮೀಪದ ಗೋಕರ್ಣದ ಗೋಕರ್ಣೇಶ್ವರ ದೇವಸ್ಥಾನದ ದೈನಂದಿನ ಪೂಜೆಗೆ ಸರಿಯಾದ ವ್ಯವಸ್ಥೆಯನ್ನು ಮಾಡಿದನು. (“ಗೋಕರ್ಣ” ಕ್ಷೇತ್ರವು ಕಾಠಮಾಂಡೊಗೆ ಐದಾರು ಕಿಲೋ ಮೀಟರ್ ದೂರದಲ್ಲಿದೆ; ಮತ್ತು ಆ ಹೆಸರು ಕರ್ನಾಟಕದ ಗೋಕರ್ಣ ಕ್ಷೇತ್ರದ ಅನುಸರಣೆಯೆಂಬ ಅಭಿಪ್ರಾಯವಿದೆ.)

ಮುಂದೆ ಆಳಿದ ಮಲ್ಲ ದೊರೆಗಳಲ್ಲಿ ಯಕ್ಷಮಲ್ಲನು (೧೪೨೮ – ೮೩) ವೈಷ್ಣವನಾಗಿದ್ದರೂ ಅಷ್ಟೇ ಶ್ರದ್ಧೆ ಪಶುಪತಿನಾಥನಲ್ಲಿಯೂ ಇದ್ದಿತು. ಅವನ ಕಾಲದಲ್ಲಿಯೇ ಪಶುಪತಿ ದೇವಾಲಯದ ಅರ್ಚನೆಯು ದಕ್ಷಿಣ ಭಾರತದ (ಕರ್ನಾಟಕದ) “ಭಟ್ಟ ಬ್ರಾಹ್ಮಣ”ರಿಂದಲೇ ನಡೆಯಬೇಕೆಂಬ ಪದ್ಧತಿಯು ಆರಂಭವಾದುದು. ಅವನೇ ಕರ್ನಾಟಕದಿಂದ “ಭಟ್ಟ ಬ್ರಾಹ್ಮಣ”ರನ್ನು ಮೊದಲು ಆಹ್ವಾನಿಸಿ ಕರೆಯಿಸಿಕೊಂಡವನು; ಆ ಪದ್ಧತಿ ಇನ್ನೂ ಈಗಲೂ ಮುಂದುವರಿದಿದೆ[28] (ವಿವರಣೆಗಳಿಗೆ, ಪು. ೩೬ – ೪೨). ಇದಕ್ಕೆ ಕಾರಣ, ನೇಪಾಳದಲ್ಲಿ ಹಿಂದೂ, ಬೌದ್ಧ ದೇವಾಲಯಗಳಲ್ಲಿ ಮದ್ಯ, ಮಾಂಸಗಳನ್ನು ದೇವತೆಗಳಿಗೆ ಅರ್ಪಿಸುವ ವಾಮಾಚಾರ ಪದ್ಧತಿಯು ಪ್ರಭಲವಾಗುತ್ತ ಬಂದುದು. ಕರ್ನಾಟಕದ ಅರ್ಚಕರಿಂದಾಗಿ ಪಶುಪತಿ ದೇವಾಲಯದಲ್ಲಿ ಸಾತ್ವಿಕ ಪೂಜಾ ವಿಧಾನವು ನೆಲೆಗೊಂಡಿತು.[29] ಯಕ್ಷ ಮಲ್ಲನು ಮುಂದೆ ತನ್ನ ರಾಜ್ಯವನ್ನು ನಾಲ್ಕು ಭಾಗಗಳಾಗಿ ಮಾಡಿ (ಭಕ್ತಪುರ, ಕಾಠಮಾಂಡೊ, ಪಾಟಣ್ ಮತ್ತು ಬನೇಪ) ತನ್ನ ನಾಲ್ಕು ಮಕ್ಕಳಿಗೆ ಹಂಚಿಕೊಟ್ಟನು.

ಮುಂದೆ ಭಕ್ತಪುರದಿಂದ ಆಳಿದ ಜಗಜ್ಯೋತಿ ಮಲ್ಲನು (೧೬೧೩ – ೩೭) ಅಲ್ಲಿ ಭೈರವ ದೇವಾಲಯ ಕಟ್ಟಿಸಿ “ಅಧಿ ಭೈರವ್ ಜಾತ್ರಾ” ಆರಂಭಿಸಿದನು. (ಚಿತ್ರ ೩೭) ಹರಗೌರಿ ವಿವಾಹ, ಸಂಗೀತಸಾರ ಇತ್ಯಾದಿ ಸಂಸ್ಕೃತ ಕೃತಿಗಳನ್ನೂ ರಚಿಸಿದನು. ಜಿತಮಿತ್ರನು (೧೬೭೩ – ೯೬) ಸಂಸ್ಕೃತದಲ್ಲಿ ಜೈಮಿನಿ ಭಾರತ, ಅಶ್ವಮೇಧ ನಾಟಕ ಬರೆದನು. ಭಕ್ತಾಪುರದ ದರ್ಬಾರ್ ಕಟ್ಟಡ ಇವನ ಕಾಲದ್ದು. ಇವನ ಬಳಿಕ ಬಂದ ಭೂಪತೀಂದ್ರನ ಕಾಲದ್ದು ಐವತ್ತೈದು ಕಿಟಕಿಗಳ ಭಕ್ತಪುರದ ಅರಮನೆ; ಅದೊಂದು ಮರೆಯಲಾರದ ಸ್ಮಾರಕವಾಗಿ ಪರಿಣಮಿಸಿದೆ, ನೇಪಾಳದಲ್ಲಿ.

ಲಲಿತಪುರದಿಂದ (ಪಾಟಣ್) ಆಳಿದ ಸಿದ್ಧ ನರಸಿಂಹ ಮಲ್ಲನು (೧೬೧೮ – ೧೬೯೫) ತನ್ನ ವಂಶ ದೇವತೆ ತಲೇಜು ದೇವಾಲಯವನ್ನು ಅಲ್ಲಿ ಕಟ್ಟಿಸಿದನು. ಯೋಗನರೇಂದ್ರ ಮಲ್ಲನು (೧೬೮೪ – ೧೭೦೫) ಸತ್ತಾಗ ಅವನ ಇಪ್ಪತ್ತೊಂದು ಸತಿಯರು ಸಹಗಮನ ಮಾಡಿದರು.

ಕಾಠಮಾಂಡೊದಿಂದ ಆಳಿದ ಪ್ರತಾಪಮಲ್ಲನಿಗೆ (೧೬೪೧ – ೭೪) ಹದಿನೈದು ಭಾಷೆ ಗೊತ್ತಿದ್ದವು. ಅಲ್ಲಿನ ಹನುಮಾನ್ ಧೋಕಾದಲ್ಲಿ (Hanuman Gate) ಹಲವು ಭಾಷೆಗಳ ಶಿಲಾಶಾಸನಗಳಿವೆ. ಪಾರ್ಥಿಬೇಂದ್ರ ಮಲ್ಲನ (೧೬೮೧ – ೮೭) ಹಲವು ಪದ್ಯಗಳು ಶಾಸನಗಳಲ್ಲಿ ಉತ್ಕೀರ್ಣವಾಗಿವೆ. ಕಾಠಮಾಂಡೊದ ಕೊನೆಯ ದೊರೆ ಜಯಪ್ರಕಾಶ ಮಲ್ಲನು (೧೭೩೪ – ೬೮) ತನ್ನ ರಾಜ್ಯ ಉಳಿಸಿಕೊಳ್ಳಲು ಗೋರ್ಖರ ವಿರುದ್ಧ ಇಂಗ್ಲಿಷರ ಸಹಾಯವನ್ನು ಬೇಡಿ ಪಡೆದರೂ ಪ್ರಯೋಜನವಾಗಲಿಲ್ಲ. ಪೃಥ್ವೀನಾರಾಯಣ ಶಹನು ಅವನನ್ನು ಸೋಲಿಸಿ ಏಕೀಕೃತ ನೇಪಾಳ ರಾಜ್ಯಕ್ಕೆ ಕಾರಣಕರ್ತನಾದನು. ಅವನಿಂದ ಶಹ ವಂಶ ಆರಂಭವಾಗಿ ಇಂದಿಗೂ ಮುಂದುವರಿದಿದೆ (ಅದರ ಚರಿತ್ರೆ ಹಿಂದೆಯೇ ಬಂದಿದೆ).

ಪಾಶ್ಚಾತ್ಯ ಸಂಸ್ಕೃತಿಯ ವಿರೋಧಿಯಾಗಿದ್ದ ಪೃಥ್ವೀನಾರಾಯಣ ಶಹನು ಕ್ರೈಸ್ತ ಪಾದ್ರಿಗಳಿಗೆ ನೀಡಿದ್ದ ಆಶ್ರಯವನ್ನು ರದ್ದುಪಡಿಸಿದ ವಿಷಯವನ್ನಾಗಲೇ ನೋಡಿದ್ದೇವೆ. ಅಂದಿನ ೧೮ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಮಾತೊಂದು ಹೀಗಿದೆ – “…With the Bible comes the bayonet; with the merchant comes the musket (ಕೋವಿ)”. ವಿಶ್ವದ ಶ್ರೇಷ್ಠರಲ್ಲೊಬ್ಬನಾದ ಆ ದೊರೆ ಅಪಾರ ರಾಷ್ಟ್ರೀಯವಾದಿ; ನೇಪಾಳಿಗಳಲ್ಲಿ ಆತ್ಮವಿಶ್ವಾಸ ಬೆಳೆಸಿದವನು ಅವನೇ. ಅವನ ಮಾತೊಂದು ಹೀಗಿದೆ – “ಇದು (ನೇಪಾಳ) ನನ್ನ ತೋಟ; ಇಲ್ಲಿ ನಾಲ್ಕು ಜಾತಿಗಳು, ಮೂವತ್ತಾರು ಉಪಜಾತಿಗಳು ಅರಳುತ್ತವೆ.”[30]

“ಸೋಲಂಕಿ” (ನೋಡಿ – ಗುಜರಾತಿನ ಚೌಲುಕ್ಯ ಅಥವಾ ಸೋಲಂಕಿ) ಎಂಬ ಹೆಸರಿನ ಚಿಕ್ಕ ರಾಜ ಮನೆತನವು ಹದಿನಾಲ್ಕನೇ ಶತಮಾನದಲ್ಲಿ ಕಾಠಮಾಂಡೊ ದಕ್ಷಿಣದಲ್ಲಿ ಆಳಿದುದು ದಾಖಲಾಗಿದೆ (Jagadisha Chandra Sharma Regmi: Nepal – India Cultural Relations. ಅಪ್ರಕಟಿತ ಕೃತಿ). ಕಾಠಮಾಂಡೊ ಪರಿಸರದಲ್ಲಿ ಸೋಲಂಕಿ ವಂಶದ ಜೈತಸಿಂಗ್, ಜೀವಸಿಂಗ್ ಎಂಬುವವರು ಕ್ರಿ.ಶ. ೧೩೩೫ರಲ್ಲಿ ಆಳಿದುದು ದಾಖಲಾಗಿದೆ. “ಸೋಲಂಕಿ”ಗಳು ಕ್ರಮೇಣ ನೆವಾರಿ ಜನರಲ್ಲಿ ವಿಲೀನಗೊಂಡರು. ಸೋಳಂಕಿ ಎಂಬುದು ಚಾಲುಕ್ಯ ಪದದ ತದ್ಭವವೆಂಬುದು ಪ್ರಸಿದ್ಧವೇ.

ಒಂದು ವಿಶೇಷ ಅನುಭವ :

ನೇಪಾಳವನ್ನು ಹಿಂದಿನಿಂದ ಆಳುತ್ತಿದ್ದ “ಮಲ್ಲ”ರು ನೆವಾರಿ ಪಂಗಡದವರು ಮತ್ತು ನೇಪಾಳಕ್ಕೆ ಅವರು ಸ್ಥಳೀಯರು; ಸ್ಪಷ್ಟವಾಗಿ ಹೇಳುವುದಾದರೆ ನೇಪಾಳಿ ದೇಶೀಯರು. “ಕರ್ನಾಟ”ರು ಹೊರಗಿನವರು, ಕರ್ನಾಟಕದಿಂದ ನೇಪಾಳಕ್ಕೆ (ಮತ್ತು ಬಿಹಾರಕ್ಕೆ) ಹೋದವರು. ನಾನ್ಯದೇವನ ವಂಶಸ್ಥರು ತಮ್ಮನ್ನು “ಕರ್ನಾಟ”ರೆಂದು ಕರೆದುಕೊಳ್ಳಲು ವಿವರಣೆ ಬೇಕಾಗಿಲ್ಲ. ಆದರೆ ಹದಿನಾಲ್ಕನೇ ಶತಮಾನದಿಂದ ಈಚೆಗೆ ಆಳಿದ ಮಲ್ಲ ದೊರೆಗಳು ತಮ್ಮನ್ನು “ಕರ್ನಾಟ”ರೆಂದು “ಕರ್ನಾಟ ಮಲ್ಲ”ರೆಂದು ಕರೆದುಕೊಳ್ಳಲು ಕಾರಣ ಸ್ವಾರಸ್ಯವಾಗಿದೆ (ಹದಿನಾಲ್ಕನೇ ಶತಮಾನಕ್ಕೆ ಮುನ್ನ ಅವರು ಹಾಗೆಂದು ಕರೆದುಕೊಳ್ಳಲಿಲ್ಲ).

ನಾನ್ಯದೇವನು ಸಿಮ್ರೌನ್‌ಗಡದಿಂದ ಆರಂಭಿಸಿ ಹೆಚ್ಚು ಕಡಿಮೆ ಇಡೀ ನೇಪಾಳದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದ ವಿಷಯವನ್ನು ನೋಡಿದ್ದೇವೆ. “ಕರ್ನಾಟ”ರ ಅಧಿಪತ್ಯವನ್ನು ಒಪ್ಪಿಕೊಂಡು ನೇಪಾಳದ ಬೇರೆ ಬೇರೆ ಭಾಗಗಳನ್ನು ಮಲ್ಲ ಇತ್ಯಾದಿ ಅಧೀನ ರಾಜರು ಆಳಿದರು. ಸಿಮ್ರೌನ್‌ಗಡದ ಪತನದ ನಂತರ ಹರಿಸಿಂಹದೇವನು ನೇಪಾಳಕ್ಕೆ ಹೋಗಿ ಭಕ್ತಪುರದಲ್ಲಿ ನೆಲೆಸಿದಾಗ ಅಲ್ಲಿ ಆಳುತ್ತಿದ್ದ ಸಾಮಂತರು ಮಲ್ಲರು. ಮುಂದೆ, “ಕರ್ನಾಟ” ರಾಜಕುಮಾರಿ ರಾಜಲ್ಲದೇವಿಯನ್ನು ಮದುವೆಯಾದ ಜಯಸ್ಥಿತಿ ಮಲ್ಲನ ತರುವಾಯ ಮಲ್ಲರು ತಮ್ಮನ್ನು “ಕರ್ನಾಟ”ರೆಂದೇ ಕರೆದುಕೊಳ್ಳಲು ಕಾರಣ, “ಕರ್ನಾಟ” ವಂಶ ಪಡೆದಿದ್ದ ರಾಜಕೀಯ, ಸಾಂಸ್ಕೃತಿಕ ಶ್ರೇಯಸ್ಸು. (ಜಯಸ್ಥಿತಿ ಮಲ್ಲನು ತನ್ನ ಪೂರ್ವಜರು ಕರ್ನಾಟಕದವರೆಂದೇ ನಂಬಿದ್ದನೆಂಬ ಮಾತನ್ನು ಇತಿಹಾಸಕಾರರು ಆಡಿದ್ದಾರೆ). ಕರ್ನಾಟ ವಂಶದ ರಾಜಕುಮಾರಿಯನ್ನು ಮದುವೆಯಾದ ಮಲ್ಲ ದೊರೆಗಳು ತಮ್ಮನ್ನು “ಕರ್ನಾಟ”ರೆಂದೇ ಕರೆದುಕೊಳ್ಳಲು ಹೆಮ್ಮೆ ಪಟ್ಟರು. ಸಾಮಾನ್ಯವಾಗಿ ಹೆಣ್ಣು ತಾನು ಮದುವೆಯಾದ ಗಂಡಿನ ವಂಶದ ಹೆಸರನ್ನು ಪಡೆಯುತ್ತಾಳೆ; ಆದರೆ ಇಲ್ಲಿ ಗಂಡು ತಾನು ಮದುವೆಯಾದ ಹೆಣ್ಣಿನ ವಂಶದ ಹೆಸರನ್ನು ತಳೆದಿರುವುದು ಒಂದು ವಿಶೇಷ.

ನಾನು ಕಾಠಮಾಂಡೊ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನ್ನನ್ನು ಸ್ವಾಗತಿಸಲು ಬಂದಿದ್ದ ಡಾ. ಮಾಲಾ ಮಲ್ಲ ಎಂಬಾಕೆ ತ್ರಿಭುವನ ವಿಶ್ವವಿದ್ಯಾಲಯದ ಇತಿಹಾಸ – ಪುರಾತತ್ವ ವಿಭಾಗದ ಪ್ರಾದ್ಯಾಪಕಿ; ಪುಣೆಯ ಡೆಕನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು ಇಂಡಾಲಜಿಯಲ್ಲಿ ಪರಿಣತಿ ಪಡೆದವರು.[31] ನೇಪಾಳದಲ್ಲಿ ನನಗೆ ದೊರೆತ ಅವರ ಸಹಕಾರ ಸ್ಮರಣೀಯವಾದುದು. ಒಮ್ಮೆ ಅವರ ಜೊತೆ ಮಾತನಾಡುತ್ತಿರುವಾಗ ಅವರು “ಭಕ್ತಪುರವನ್ನು ಆಳಿದ ಮಲ್ಲ ದೊರೆಗಳ ವಂಶಸ್ಥಳು ನಾನು” ಎಂದು ಹೇಳಿಕೊಂಡಾಗ ನನಗೆ ಆಶ್ಚರ್ಯವಾಯಿತು. ಆಕೆಯ ತಂದೆ ಡಾ. ಪ್ರಧಾನಾಂಗ್ ತ್ರಿಭುವನ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಧ್ಯಾಪಕರಾಗಿದ್ದು, ಕೆಲಕಾಲ ನೇಪಾಳ ಸರ್ಕಾರದಲ್ಲಿ ಆರ್ಥಿಕ ಸಚಿವರಾಗಿಯೂ ಕೆಲಸ ಮಾಡಿದವರು. ಅವರು ನನ್ನನ್ನು ಮನೆಗೂ ಕರೆದೊಯ್ದು ತಮ್ಮ ತಂದೆಯವರ ಪರಿಚಯ ಮಾಡಿಕೊಟ್ಟರು. ಅವರ ಹಿಂದಿನ ವಂಶಸ್ಥರು ಕರ್ನಾಟಕದವರಲ್ಲದಿದ್ದರೂ, ತಾವು “ಕರ್ನಾಟ”ರೆಂದೇ ಕರೆದುಕೊಂಡ ಭಕ್ತಪುರದ ಮಲ್ಲ ವಂಶದ ದೊರೆಗಳ ವಂಶಸ್ಥಳು ಆಕೆ ಎಂಬುದು ನನಗೆ ಬಹು ಹರ್ಷವನ್ನು ತಂದಿತು. (ಚಿತ್ರ ೫ ನೋಡಿ). ನೇಪಾಳದ ನೆವಾರಿಗಳಲ್ಲಿ “ಕರ್ನಾಟ” ಎಂಬ ಹೆಸರಿನ ಒಂದು ಉಪಜಾತಿಯೇ ಇದೆ. (ಮುಂದೆ ನೋಡಿ).

ಕಾಠಮಾಂಡೊದಲ್ಲಿ ನೇಪಾಳಿಯೊಬ್ಬರನ್ನು ಮದುವೆಯಾಗಿ ಅಲ್ಲೇ ನೆಲೆಸಿರುವ ಬೆಂಗಳೂರಿನ ಪದ್ಮಿನಿ ಬೈದ್ಯ ಎಂಬುವವರ ವಿಷಯ ತಿಳಿದು ಅವರನ್ನು ದೂರವಾಣಿ ಮೂಲಕ ಕಾಠಮಾಂಡೊದಲ್ಲಿ ಸಂಪರ್ಕಿಸಿದೆ. ಅವರಿಗೆ ಅನ್ಯ ಕೆಲಸದ ನಿಮಿತ್ತ ನಾನಿದ್ದಲ್ಲಿಗೆ ಬರಲಾಗಲಿಲ್ಲ. ಕಾಠಮಾಂಡೊದಿಂದ ನಾನು ಬೆಂಗಳೂರಿಗೆ ವಾಪಸಾದ ಎರಡು ಮೂರು ತಿಂಗಳಲ್ಲಿ ಅವರು ಬೆಂಗಳೂರು ಮಲ್ಲೇಶ್ವರದಲ್ಲಿರುವ ತಮ್ಮ ತಾಯಿಯ ಮನೆಗೆ ಬಂದು ನನಗೆ ತಿಳಿಸಿದಾಗ ಅವರನ್ನು ಭೇಟಿ ಮಾಡಲು ಹೋದೆ. ಅವರ ಗಂಡ ಶ್ರೀದೇವ್ ಬೈದ್ಯ ಕೂಡ ಬಂದಿದ್ದರು. ಅವರಿಬ್ಬರೂ ಪರಸ್ಪರ ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದು ಶಾಸ್ತ್ರೋಕ್ತವಾಗಿ ಮದುವೆ ಆದವರು. ಅವರಿಬ್ಬರ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಬೈದ್ಯ ಹೇಳಿದರು – ತಾವು ಭಕ್ತಪುರದ ರಾಜಾ ಹರಿಸಿಂಹದೇವನ ವಂಶಸ್ಥರೆಂದೂ ತಮ್ಮ ಬಳಿ ಇರುವ “ವಂಶಾವಳಿ”ಯಿಂದ (ಚಿತ್ರ ೪) ಅದು ಸ್ಪಷ್ಟವೆಂದೂ ಹೇಳಿದಾಗ ನನಗಾದ ಆನಂದ ಅವರ್ಣನೀಯ. ತಮ್ಮ ಬಳಿ ಇದ್ದ ಪುಟ್ಟ ಗಣಕ ಯಂತ್ರದಲ್ಲಿ ಅದು ದಾಖಲಾಗಿರುವುದನ್ನು ತೋರಿಸಿದರಲ್ಲದೆ, ಮುಂದೆ ಅದರ ಪ್ರತಿಯನ್ನು ಕಾಠಮಾಂಡೊದಿಂದ ನನಗೆ ತರಿಸಿಕೊಟ್ಟರು. (ಮೂಲ ವಂಶಾವಳಿಯ ಕಾಗದದ ಪ್ರತಿಯ ಗಾತ್ರ ೨೦” x ೩೦”). “ಬೈದ್ಯ” ಎಂಬುದು ಅವರ ಅಜ್ಜ ಇಡೀ ನೇಪಾಳಕ್ಕೆ ಮೊದಲ ಎಂ.ಬಿ.ಬಿ.ಎಸ್. ಪದವೀಧರರಾಗಿ ನೇಪಾಳದ ರಾಜರ ವೈದ್ಯರಾಗಿ ಕೆಲಸ ಮಾಡಿದುದರ ಸೂಚನೆ ಎಂದರು. ಅವರ ಹೆಸರಿನ “ದೇವ” ಎಂಬುದು ಸ್ಪಷ್ಟವಾಗಿತ್ತು; ನಾನ್ಯದೇವನ ವಂಶಸ್ಥರೆಲ್ಲರೂ “ದೇವ” ಎಂದು ಕೊನೆಯಾಗುವ ಹೆಸರುಗಳನ್ನು ಪಡೆದಿದ್ದುದು ಸ್ಪಷ್ಟವಾಗಿದೆ. (ಬೈದ್ಯ ದಂಪತಿಗಳ ಚಿತ್ರ. ೨ ನೋಡಿ : ಜೊತೆಗೆ ವಂಶಾವಳಿಯ ಚಿತ್ರವನ್ನೂ ನೋಡಿ). ಒಂದು ವಂಶದಲ್ಲಿ ಗಂಡು ಮಗು ಆದ ತಕ್ಷಣ ಆ ಮಗುವಿನ ಹೆಸರನ್ನು ವಂಶಾವಳಿಗೆ ಸೇರಿಸುತ್ತಾರೆ: ಹೀಗೆ ‘ವಂಶಾವಳಿ’ಗಳನ್ನು ಉಳಿಸಿಕೊಂಡು ಬರುವ ಪದ್ಧತಿ ನೇಪಾಳ, ಬಿಹಾರದಲ್ಲಿದೆ. ಇದಕ್ಕೆ ಮತ್ತೆ ಕಾರಣ, ಕರ್ನಾಟಕದ ದೊರೆಗಳೇ. ‘ಕುಲೀನತಾ’ ವ್ಯವಸ್ಥೆಯು ಕಟ್ಟುನಿಟ್ಟಾಗಿ ಜಾರಿಗೆ ಬರಲು ಎಲ್ಲ ವಂಶಗಳ ವಂಶಾವಳಿಗಳು ಲಭ್ಯವಿರಬೇಕು ತಾನೇ!

ಶ್ರೀದೇವ ಬೈದ್ಯರಿಗೆ ಹರಿಸಿಂಹದೇವನು ಕರ್ನಾಟಕದ ನಾನ್ಯದೇವನ ‘ಕರ್ನಾಟ’ ವಂಶದ ಕೊನೆಯ ದೊರೆ, ಭಕ್ತಪುರದಲ್ಲಿ ಆಳಿದವನು ಅವನೇ ಎಂದು ನಾನು ಹೇಳಿದಾಗ ಅವರಿಗೆ ಅತ್ಯಂತ ಸಂತೋಷವಾಯಿತು. ನಾನ್ಯದೇವನಿಂದ ಹರಿಸಿಂಹದೇವನವರೆಗಿನ ರಾಜರ ಪಟ್ಟಿಯನ್ನು ನಾನು ಅವರಿಗೆ ಒದಗಿಸಿದೆ. ಶ್ರೀದೇವ ಬೈದ್ಯರು ನೆವಾರಿ ಜನಾಂಗದ “ಮಲ್ಲ” ಜಾತಿಯ ಶೈವರು; “ಶಕ್ತಿ” ಅವರ ಕುಲದೇವತೆ; ಕಾಶ್ಯಪಗೋತ್ರದ ಛೇತ್ರಿಯವರು (ಕ್ಷತ್ರಿಯರು). ಭಕ್ತಪುರದಿಂದ ಅವರ ಹಿಂದಿನವರು ಕಾಠಮಾಂಡೊಗೆ ಬಂದದ್ದು ದಂಡಪಾಣಿ ದೇವನ ಕಾಲದಲ್ಲಿ.

ಕರ್ನಾಟಕದ ದೃಷ್ಟಿಯಿಂದ ಇದೊಂದು ಅತ್ಯಂತ ಮಹತ್ವದ ಸಂಗತಿ ತಾನೇ! ಕ್ರಿ.ಶ. ೧೦೯೭ರಲ್ಲಿ ನೇಪಾಳಕ್ಕೆ ಹೋಗಿ ಅಲ್ಲಿ ಆಳಿದ ಕರ್ನಾಟಕದ ಶ್ರೇಷ್ಠ ರಾಜನೊಬ್ಬನ ವಂಶಸ್ಥರು ಈಗಲೂ ಇರುವ ಸಂಗತಿ, ಕರ್ನಾಟ ವಂಶದ ಸ್ತ್ರೀಯೊಬ್ಬಳನ್ನು ಮದುವೆಯಾದ ಕಾರಣದಿಂದ ತಮ್ಮನ್ನು “ಕರ್ನಾಟ”ರೆಂದೇ ಕರೆದುಕೊಂಡ ಮಲ್ಲವಂಶದ ದೊರೆಗಳ ವಂಶಸ್ಥರಾಗಲಿ ಈಗಲೂ ಇರುವ ಸಂಗತಿ ಸಂಭ್ರಮಪಡುವ ವಿಷಯವಲ್ಲವೇ? ಆ ಎರಡೂ ಕುಟುಂಬಗಳು ಮೂಲತಃ ಭಕ್ತಪುರದವರಾಗಿದ್ದು ಈಗ ಕಾಠಮಾಂಡೊದಲ್ಲಿ ನೆಲೆಸಿವೆ.[32]

ವಂಶಾವಳಿ :

[ನಾನ್ಯದೇವ
ಮಲ್ಲದೇವ
ಗಂಗದೇವ
ನರಸಿಂಹದೇವ
ರಾಮಸಿಂಹದೇವ
ಶಕ್ತಿ(ಶುಕ್ರ)ಸಿಂಹದೇವ][33] ಹರಿಸಿಂಹದೇವ ಮಲ್ಲ
ಗೋವಿಂದಾನಂದ ದೇವ
ಶ್ರೀಧರಾನಂದ ದೇವ
ಅಚ್ಯುತಾನಂದ ದೇವ
ದುಲ್ಮಾನಂದ ದೇವ
ನಾರಾಯಣಾನಂದ ದೇವ
ವಸುದೇವಾನಂದ ದೇವ
ಕುಶಲಾನಂದ ದೇವ
ಬ್ರಹ್ಮಾನಂದ ದೇವ
ಜೇಬ್ರಾನಂದ ದೇವ
ಅಮೃತಾನಂದ ದೇವ
ದಂಡಪಾಣಿ ದೇವ
ರಾಮದಾಸ್ ದೇವ್ ಬೈದ್ಯ
ಡಾ. ರತ್ನದಾಸ್ ದೇವ್ ಬೈದ್ಯ, ಎಂ.ಬಿ.ಬಿ.ಎಸ್.[34] ಡಾ. ರಘುವರ್ ದೇವ್ ಬೈದ್ಯ, ಎಂ.ಬಿ.ಬಿ.ಎಸ್.
ಶ್ರೀದೇವ್ ಬೈದ್ಯ
ಸಂಜಯ ದೇವ್ ಬೈದ್ಯ
ಶ್ರೇಯ[35]

ಮೇಲಿನ ವಂಶಾವಳಿ ದಾಖಲೆಯ (ಚಿತ್ರ ೪) ಬಲಗಡೆ ಸೂರ್ಯನ ಚಿತ್ರವನ್ನು ಗಮನಿಸಬಹುದು. ನಾನ್ಯದೇವನ ವಂಶಾವಳಿಗಳಲ್ಲಿ ಅವನನ್ನು ‘ಸೂರ್ಯವಂಶಿ’ಯೆಂದು ಕರೆದಿರುವುದನ್ನು ವಿದ್ವಾಂಸರು ಗಮನಿಸಿದ್ದಾರೆ. ಆದ್ದರಿಂದ ಮೇಲಿನ ವಂಶಾವಳಿಯ ದಾಖಲೆಯು ಅಷ್ಟರಮಟ್ಟಿಗೆ ನೈಜವಾದುದೆಂದೂ, ಅದರಲ್ಲಿ ಹರಿಸಿಂಹದೇವ ಮಲ್ಲನಿಂದ ವಂಶಾವಳಿಯು ಆರಂಭವಾಗಿದ್ದರೂ ಅದು ನಾನ್ಯದೇವನ ಮುಂದುವರಿದ ವಂಶಾವಳಿಯೇ ಆಗಿದೆಯೆಂಬುದನ್ನು ನಂಬಬಹುದು. ಈ ವಂಶಾವಳಿಯ ಹೆಸರುಗಳೆಲ್ಲ ಕರಾರುವಾಕ್ಕಾಗಿವೆಯೆಂಬುದನ್ನು ಹೇಳುವುದು ಕಷ್ಟ. ಒಂದೇ ವಂಶದ ಬೇರೆ ಬೇರೆ ವಂಶಾವಳಿಗಳಲ್ಲಿ ಸ್ವಲ್ಪ ಭಿನ್ನತೆಯಿರುವುದನ್ನು ವಿದ್ವಾಂಸರು ಗಮನಿಸಿದ್ದಾರೆ. ಒಬ್ಬ ತಂದೆಯ ಹಿರಿಯ ಮಗನಿಂದ ಒಂದು ವಂಶಾವಳಿ ಮುಂದುವರಿದಿದ್ದರೆ ಇನ್ನೊಂದು ವಂಶಾವಳಿ ಅವನ ಇನ್ನೊಬ್ಬ ಮಗನಿಂದ ಮುಂದುವರಿದಿರಬಹುದು. ಯಾವುದೋ ಅವಧಿಯ ವ್ಯಕ್ತಿಯ ಹೆಸರು ದಾಖಲಾಗದಿರಬಹುದು; ಪ್ರತಿ ಮಾಡುವವರು ತಪ್ಪು ಮಾಡಿರಬಹುದು. ಆದರೆ, ಮೇಲಿನ ವಂಶಾವಳಿಯ ಸ್ವಾರಸ್ಯವೆಂದರೆ ಅದು ನೀಡುವ ಹರಿಸಿಂಹ ದೇವನ ಕಾಲ. ಅದು ನೀಡುವ ನೇಪಾಲಿ ಸವಂತ್ ೪೪೪ ಎಂಬುದು ಕ್ರಿ.ಶ. ೧೩೨೪ಕ್ಕೆ ಸರಿಹೋಗುತ್ತದೆ. ನಾವಾಗಲೇ ನೋಡಿರುವಂತೆ ಅದು ಹರಿಸಿಂಹದೇವನ (ಅಥವಾ ಉತ್ತರ ಭಾರತದ) ಚರಿತ್ರೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ವರ್ಷ; ಆ ವರ್ಷವೇ ಅವನು ಸಿಮ್ರೌನ್‌ಗಡ ತ್ಯಜಿಸಿ ನೇಪಾಳಕ್ಕೆ ಬಂದುದು; ಮತ್ತು ಅದು ಉತ್ತರ ಭಾರತದ ಕೊನೆಯ ದೊಡ್ಡ ಹಿಂದೂ ರಾಜ್ಯದ ಕೊನೆಯ ವರ್ಷವೂ ಹೌದು.

ಮತ್ತೆ ಒತ್ತಿ ಹೇಳಬಯಸುತ್ತೇನೆ : ಒಂಬೈನೂರು ವರ್ಷಗಳ ಹಿಂದೆ ಕರ್ನಾಟಕದಿಂದ ಬಿಹಾರ ನೇಪಾಳಗಳಿಗೆ ಹೋದ ರಾಜನೊಬ್ಬನ ವಂಶಸ್ಥರ ವಂಶಾವಳಿ ದೊರಕಿರುವುದು ಮತ್ತು ಈಗಲೂ ಆ ರಾಜನ ವಂಶಸ್ಥರಿರುವುದು (ಚಿತ್ರ ೨) ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಸಂಗತಿ.

 

[1] ಇದು ಆ ಕಾಲಕ್ಕೆ ಪ್ರಚಲಿತವಿದ್ದ ವಿಶ್ವದ ದೇಶದ ದೇಶಗಳ ಸಾಂಪ್ರದಾಯಿಕ ಪಟ್ಟಿ. ಇದರಲ್ಲಿ ಬರಮ (ಬರ್ಮ), ಚೈನ (ಚೀನಾ), ಯವನ (ಗ್ರೀಸ್‌), ತುರುಷ್ಕ ತುರುಷ್ಕ (ತುರ್ಕಿ) ಇತ್ಯಾದಿಗಳನ್ನು ಗಮನಿಸಬಹುದು.

[2] ಕನ್ನಡ ನಿಘಂಟು, ಸಂಪುಟ ೫. ಪು. ೪೯೬೭. ಹೋಲಿಸಿ ನೋಡಿ ; “Indian historical sources are abound in chamar, musk, medicinal hurbs and minerals, woolen blankets of Nepal origin, and suggest a brisk business of these commodities in India’’ –Jagadish Chandra Sharma Regmi: Nepal – India Cultural Relations, P.8 (ಅಪ್ರಕಟಿತ ಕೃತಿ).

[3] ಕಾಶ್ಮೀರದಿಂದ ಬಸವಣ್ಣನವರು ಜಂಗಮರನ್ನು ಕರೆಯಿಸಿಕೊಂಡರೆಂದೂ ಕತೆ ಇದೆ. ಇಂದಿಗೂ ಕಾಶ್ಮೀರದಲ್ಲಿ ಲಿಂಗಧಾರಿ ಜಂಗಮರು ಇದ್ದಾರೆ. ಅಂತಹ ಶಿವಾರ್ಚಕ ಜಂಗಮರನ್ನು ಭೇಟಿ ಮಾಡಿ ಬಂದಿರುವ ಶ್ರೀ ಗುರುಮೂರ್ತಿ ಎಂಬುವವರು ಆ ವಿಷಯ ತಿಳಿಸಿದ್ದಾರೆ. ಕೆ. ಎಸ್‌. ಸಿಂಗ್‌ಅವರ India’s Communities ಎಂಬ ಕೃತಿಯಲ್ಲಿ ಭಾರತಾದ್ಯಂತ ‘ಜಂಗಮ’ ಜಾತಿ ಜನರು ಇರುವುದು ದಾಖಲಾಗಿದೆ. ನೋಡಿ ಅನುಬಂಧ : ೫.

[4] Netra B. Thapa : A Short History of Nepal, P 28.

[5] Sushila Tyagi : Indo – Nepalese Relations, P. 35 – 6.

[6] C.P.N. Sinha : Mithila under the Karnatas (1097 – 1325 A. D.), p.2. ಇದನ್ನು ಪ್ರೊ. ಸದಾನಂದ ಕನವಳ್ಳಿಯವರು “ಮಿಥಿಲೆಯನ್ನಾಳಿದ ಕರ್ನಾಟರು” ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

[7] The struggle for Empire (Ed: R. C. Majumdar), P. 35.

[8] “ಚಲದೊಳ್‌ದುರ್ಯೋಧನನ್‌, ನನ್ನಿಯೊಳ್‌ಇನತನಯನ್‌” –ಪಂಪನ ಪ್ರಕಾರ ದುರ್ಯೋಧನನು ಚಲಕ್ಕೆ, ಕರ್ಣನು ಪ್ರಾಮಾಣಿಕತೆಗೆ ಪ್ರಸಿದ್ಧರು. ನನ್ನಯ್ಯ, ನನ್ನಿ ಚೋಡದೇವ, ನನ್ನಿ ನೊಳಂಬ, ನನ್ನಿಯ ಗಂಗ, ನನ್ನಿ ಕರ್ತಾರ ಬೞರ, ನನ್ನ ಚಂಗಾಳ್ವ, ನನ್ನಿ ಶಳುಕ್ಕಿ ರಾಜಮಲ್ಲ, ನನ್ನಿಯ ಸಿಂದ ಇವೇ ಮೊದಲಾದ ವ್ಯಕ್ತಿನಾಮಗಳು ಕರ್ನಾಟಕದಲ್ಲಿ ಹಿಂದೆ ಪ್ರಚಲಿತವಾಗಿದ್ದವು. ಸಿದ್ಧರಾಮನ ಸೊನ್ನಲಿಗೆಯ ದೊರೆ ನನ್ನಪ್ಪ. “ನನ್ನಿ” ಪದದ ಮೂಲ ಸುಂದರ, ಒಳ್ಳೆಯ, ಶ್ರೇಷ್ಠ ಎಂಬರ್ಥಗಳ “ನಲ್‌”.

[9] ಗುಲ್ಬರ್ಗ ಜಿಲ್ಲೆಯ ಮತ್ತೂರು ಗ್ರಾಮದ ೧೧೨೩ರ ಶಾಸನೋಕ್ತ ವಿಜ್ಞಾನದೇವನು ಕೌಶಿಕ ಗೋತ್ರದವನು; ಮಿತಾಕ್ಷರಾ ಕರ್ತೃ ವಿಜ್ಞಾನೇಶ್ವರನು ಭಾರದ್ವಾಜ ಗೋತ್ರದವನಾದ ಕಾರಣ ಇಬ್ಬರೂ ಬೇರೆ ಬೇರೆ ಎಂಬ ವಾದವಿದೆ. (ಎಸ್. ಗುರುರಾಜಾಚಾರ್: `Vijnaneshvara and Contemporary Society’. The Chalukyas of Kalyana. Ed: M.S. Nagaraja Rao ಕೃತಿಯಲ್ಲಿ.)

[10] “ಅಪ್ಪು” ಎಂಬುದು ಸ್ವಾಭಾವಿಕವಾಗಿಯೇ ಕನ್ನಡದ “ಅಪ್ಪ”ವನ್ನು ಜ್ಞಾಪಕಕ್ಕೆ ತರುತ್ತದೆ. “ಅಪ್ಪಿದೇವಯ್ಯ” ಎಂಬ ವಚನಕಾರನಿದ್ದನು. (ಅಂಕಿತ: ಈಶ್ವರೀಯ ವರದ ಮಹಾಲಿಂಗ). ಸಂಕೀರ್ಣ ವಚನ ಸಂಪುಟ. VI, ಪು. ೧೦೪. ಇದನ್ನು ನನ್ನ ಗಮನಕ್ಕೆ ತಂದವರು ಡಾ. ಎನ್.ಎಸ್. ತಾರಾನಾಥ್.

[11] C.P.N. Sinha : Mithila under the Karnatas, P.7.

[12] ‘ಮಹೀಶಾಸನ’ ವಂಶದ ಜ್ಯೋತಿರೀಶ್ವರನ ಊರು “ಪಲ್ಲೀ ಜನ್ಮ”, ತಂದೆ ಧೀರಸಿಂಹ, ಅಜ್ಜ ರಾಮೇಶ್ವರ. ನಾಟಕದ ಪಾಠವು “ಓಂ ನಮೋ ಭೈರವಾಯ” ಎಂದು ಆರಂಭವಾಗುತ್ತದೆ. (Ed: Mahamahopadhyaya Haraprasada Sastri : A Catalogue of Palm – leaf Manuscripts and selected paper Manuscripts. National Archieves, Nepal.) “ಧೂರ್ತಸಮಾಗಮ” ಹಸ್ತಪ್ರತಿಯ ಸಂಖ್ಯೆ ೧೫೩೬. (ಹಸ್ತಪ್ರತಿ ಪುಷ್ಪಿಕೆಯ ಅಚ್ಚಾದ ಹಾಳೆಯಲ್ಲಿ “ಕಾರ್ಣಾಟ ಚೂಡಾಮಣಿ” ಗಮನಿಸಿ. ಚಿತ್ರ ಸಂಖ್ಯೆ. ೩)

[13] ಆ ನಾಟಕದ ಹಸ್ತಪ್ರತಿ ಕಾಠಮಾಂಡೋದ ರಾಷ್ಟ್ರೀಯ ಪತ್ರಾಗಾರದಲ್ಲಿದೆ (National Archieves). ಆ ಪತ್ರಾಗಾರವು ಒಂದು ಅದ್ಭುತ ಸಂಗ್ರಹ. ಉತ್ತರ ಭಾರತವು ಮುಸ್ಲಿಮರ ವಶವಾದಾಗ ಅನೇಕ ವಿದ್ವಾಂಸರು, ಸಂಪ್ರದಾಯ ಪ್ರಿಯರು ನೇಪಾಳಕ್ಕೆ ತಮ್ಮ ಬಳಿಯಿದ್ದ ಹಸ್ತಪ್ರತಿ ಒಯ್ದರು: ಅದರ ಒಂದು ಭಾಗ ಅದು.

[14] ಆಗುಂಬೆ ಎಸ್. ನಟರಾಜ್ : ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು, ಪು. ೪.

[15] ಮೋಹನ ಪ್ರಸಾದ್ ಖನಾಲ್ : ಸಿಮರೌನ್ ಗಡ ಕೀ ಇತಿಹಾಸ್ (ನೇಪಾಳಿ) – ಇದರ ಕೆಲವು ಭಾಗಗಳನ್ನು ಓದಿ ವಿವರಿಸಿದವರು ಡಾ. ವಿಜಯಾ ಸುಬ್ಬರಾಜ್.

[16] “ಸಿಮರೌನ್‌ಗಡ ವಿಷಯಕ್ ಸಂಗೋಷ್ಠೀ” (ನೇಪಾಲಿ. ಸಂಯೋಜಕ್ : ಡಾ. ರಾಮದಯಾಲ್ ರಾಕೇಶ್), ಪು. ೧೧೮ – ೨೦.

[17] ಅವುಗಳನ್ನು ನೇಪಾಳದ National Museum ಸಂಗ್ರಹಾಲಯದಲ್ಲಿ ನಾನು ನೋಡಿದ್ದೇನೆ. ಆ ಮ್ಯೂಜಿಯಮ್ಮಿನ ಸಹಾಯಕ ಅಧಿಕಾರಿ ನಿರನ್ ಕುಮಾರ್ ರಾಜ್ ಬಂಶಿಯು ನೆವಾರಿ ಜನಾಂಗದ “ಕರ್ನಾಟ” ಜಾತಿಯವರೆಂದು ಅವರ ಮಾತಿನಿಂದಲೇ ತಿಳಿಯಿತು. ಆ ಮ್ಯೂಜಿಯಮ್ಮಿನ ಕಲಾಕೃತಿಗಳು ಅದ್ಭುತ. ಲೋಹದ “ಸಿಂಹ ಸಿಂಹ ಸಿಂಹ ವಾಹನಿ ಲೋಕೇಶ್ವರ”ನ ಎರಕದ ಮೂರ್ತಿಯಾಗಲಿ, ನಾಲ್ಕಡಿ ಎತ್ತರದ ಸೂರ್ಯ, ಉಮಾ ಮಹೇಶ್ವರ, ವಿಷ್ಣು ಶಿಲಾಮೂರ್ತಿಗಳಾಗಲಿ ಅನನ್ಯ ಕುಸುರಿ ಕಲೆಯ ಪ್ರತೀಕ. ಬುದ್ಧ ಮಾಯಾದೇವಿಯ ವಿಗ್ರಹ, ಅಂತೆಯೇ ವಿಷ್ಣುವಿನ ವಿಶ್ವರೂಪ ದರ್ಶನ ಇವುಗಳ ಚೆಲುವು ಎಣೆಯಿಲ್ಲದ್ದು. ಬಲಿ, ಬಾಮನ್, ತ್ರಿವಿಕ್ರಮರ ಶಿಲ್ಪವನ್ನು ನೋಡಿಯೇ ಸವಿಯಬೇಕು.

[18] ಸಿಮರೌನ್‌ಗಡ ವಿಷಯಕ್ ಸಂಗೋಷ್ಠೀ, ಪು. ೧೨೨. ಸಿಮ್ರೌನ್‌ಗಡ ಪ್ರದೇಶದ ಶಿಲ್ಪಗಳಲ್ಲಿ ಹಲವನ್ನು ರೂಪಿಸಿದವರು ಕರ್ನಾಟಕದವರು ಎಂಬ ವಿಷಯವನ್ನು ನನಗೆ ಖಚಿತಪಡಿಸಿದವರು ಡಾ. ಚಂದ್ರಪ್ರಸಾದ್ ತ್ರಿಪಾಠಿ (ಕಾಠಮಾಂಡೋದ ಪುರಾತತ್ವ ಇಲಾಖಾ ವಿದ್ವಾಂಸರು). ಅವರು ನ್ನ ಜೊತೆ ಮಾತನಾಡುತ್ತ, ಸಿಮ್ರೌನ್‌ಗಡದ ಭೂಶೋಧಗಳಲ್ಲಿ ತಾವೂ ಕೆಲಸ ಮಾಡಿದುದನ್ನು ವಿವರಿಸಿದರು. “ಸಿಮರೌನ್‌ಗಡ ವಿಷಯಕ್ ಸಂಗೋಷ್ಠೀ” ಎಂಬ ನೇಪಾಲಿ ಕೃತಿಯ (ಸಂಯೋಜಕ. ರಾಮದಯಾಳ್ ರಾಕೇಶ್) ಕೊನೆಯಲ್ಲಿ ಬರುವ ಇಂಗ್ಲಿಷ್ ಲೇಖನದ ಕೆಲವು ಭಾಗಗಳು ಹೀಗಿವೆ – “ಸುಲ್ತಾನ್ ಘಿಯಾಸುದ್ದೀನ್ (Tugalak Dynasty of Delhi) defeated King ಹರಿಸಿಂಹ ದೇವ in war in 1324 A.D. and brought to an end the 229 years of ಕರ್ನಾಟ dynasty which was considered a golden age in view of the economic, political, religious and artistic development of the time…ಸುಲ್ತಾನ್ ಘಿಯಾಸುದ್ದೀನ್ was not content with the capturing of ಸಿಮ್ರೌನ್‌ಗಡ್, but also destroyed the town demolishing monuments of archaeological importance including shrines and temples and artifacts which were second to none…(ಸಿಮ್ರೌನ್‌ಗಡ್) was the shelter house of famous artists and sculpturists of South India.” (p. 118 – 9)

[19] Sinha : Mithila under the Karnatas, P.83.

[20] ಅದೇ, ಪು. ೯೨.

[21] ಅದೇ.

[22] ಗಂಡು – ಹೆಣ್ಣುಗಳ ಮಧ್ಯೆ ವಿವಾಹ ವ್ಯವಸ್ಥೆಯಾಗಲು ಅದರ ಹಿಂದಿನವರು ಏಳು ತಲೆಮಾರುಗಳವರೆಗೆ ಯಾವುದೇ ರೀತಿಯ ಬಂಧುಗಳೂ ಆಗಿರಕೂಡದು.

[23] ‘ಕಾಯಸ್ಥ’ರು ಮುಖ್ಯವಾಗಿ ರಾಜನ ಬಳಿ ಅಧಿಕಾರಿಗಳಾಗಿದ್ದವರು: ಉದಾ.ಗೆ ಖಜಾನೆಯಲ್ಲಿ, ರೆವಿನ್ಯೂ ದಾಖಲೆಗಳ ಕಚೇರಿಯಲ್ಲಿ ಇತ್ಯಾದಿ. ಸೇನಬೋವ (ಶಾನಭೋಗ)ಕ್ಕೆ ‘ಕಾಯಸ್ಥ’ ‘ಅಕ್ಷರಜೀವಕ’ ಎಂದೇ ಅರ್ಥ ಹೇಳಿದೆ, ಕನ್ನಡ ಹಲಾಯುಧದಲ್ಲಿ.

[24] ಈ ಹೆಸರು ತಪ್ಪಾಗಿ ಅಚ್ಚಾಗಿದೆಯೆಂದು ತೋರುತ್ತದೆ.

[25] ‘ಕರ್ಣ’ ಎಂಬ ವಂಶನಾಮವನ್ನು ಹೆಸರುಗಳ ಅಂತ್ಯದಲ್ಲಿ ಸೇರಿಸಿಕೊಳ್ಳುವ ಈ ಕಾಯಸ್ಥರು ಇಂದಿಗೂ ತಮ್ಮ ಮೂಲ ನಾಡು ಕರ್ನಾಟಕವೆನ್ನುತ್ತಾರೆಂಬುದನ್ನು ಖಚಿತಪಡಿಸಿಕೊಂಡಿದ್ದೇನೆ. “ಕರ್ಣ” ಎಂದರೆ ಕರಣ, clerk ಎಂದರ್ಥ. ನೋಡಿ – “ಕರಣಿಕ”.

[26] ಇದನ್ನು ನನಗೆ ತೋರಿಸಿದವರು ಭಕ್ತಪುರದ ನಿವಾಸಿ, ಯುವ ಸಂಶೋಧಕ ಡಾ. ಪುರುಷೋತ್ತಮ ಲೋಚನ ಶ್ರೇಷ್ಠ. ಅವರು ಭಕ್ತಪುರದ ಜಂಗಂ ಮಠಗಳ ಬಗ್ಗೆ ಬರೆದಿರುವುದು ಮುಂದೆ ಪ್ರಸ್ತಾಪಗೊಳ್ಳುತ್ತದೆ.

[27] ಈ ಹೆಸರುಗಳು ನಮಗೆ ಸಹಜವಾಗಿಯೇ ಕರ್ನಾಟಕದ ಹೆಸರುಗಳನ್ನು ನೆನಪಿಗೆ ತರುತ್ತವೆ. ಉದಾ.ಗೆ ಶಾಂತಲ, ಸುಗ್ಗಲೆ, ಕಂಚಲದೇವಿ, ಮೈಳಲದೇವಿ, ನಾಗಲದೇವಿ, ಭಾಗಲ ಮಹಾದೇವಿ, ಸಾವಳದೇವಿ. ಅಂತೆಯೇ, ನೇಪಾಳದ ವಂಶಾವಳಿಗಳಲ್ಲಿ (೧೨೯೪ – ೧೩೧೧) ಕಂಡು ಬರುವ “ವೀರಮ್ಮ ದೇವಿ”ಯ ಹೆಸರು; ಇವಳು ಜಯಶಕ್ತಿ ದೇವನ ಯುವರಾಜ್ಞಿ. ಅವಳ ಹಲವು ಧಾರ್ಮಿಕ ಕಾರ್ಯಗಳನ್ನು ದಾಖಲೆಗಳು ಕೊಂಡಾಡಿವೆ. ‘ಗೋಪಾಲರಾಜ ವಂಶಾವಳಿ’ಯಲ್ಲಿ ಕಂಡುಬರುವ ರುದ್ರಮದೇವಿಯು ರಾಜದೇವನ (ಸು. ೧೩೪೭) ಪತ್ನಿ; ಇವೆರಡೂ ಕರ್ನಾಟಕದ ಹೆಸರುಗಳನ್ನು ಜ್ಞಾಪಿಸುತ್ತವೆ (Jadish Chandra Sharma Regmi : Nepal India Cultural Relations, P. 19. ಅಪ್ರಕಟಿತ).

[28] Netra B. Thapa : A Short History of Nepal, P. 45.

[29] ಇದನ್ನು ನನಗೆ ತಿಳಿಸಿದವರು ಪಶುಪತಿ ದೇವಾಲಯದ ಈಗಿನ ‘ಮೂಲಭಟ್ಟ’ರಾದ ಶ್ರೀ ಮಹಾಬಲೇಶ್ವರ ಭಟ್ಟರು : ಇವರು ದಕ್ಷಿಣ ಕನ್ನಡ ಜಿಲ್ಲೆಯವರು.

[30] Netra B. Thapa : A Short History of Nepal, P. 4 – 5.

[31] ಅವರನ್ನು ಪರಿಚಯಿಸಿದವರು ಪುಣೆಯಲ್ಲಿ ಅವರ ಸಹಾಧ್ಯಾಯಿಯಾಗಿದ್ದು ಈಗ ಬೆಂಗಳೂರಿನಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್‌ನ ಉಪ ನಿರ್ದೇಶಕರಾಗಿರುವ ಡಾ. ಎಸ್.ಕೆ. ಅರುಣಿಯವರು.

[32] ಶ್ರೀಮತಿ ಪದ್ಮಿನಿ ಮತ್ತು ಶ್ರೀದೇವ ಬೈದ್ಯರನ್ನು ಕರ್ನಾಟಕ ಸರ್ಕಾರದ ಸಂಸ್ಕೃತಿ ಸಚಿವೆಯವರಿಗೆ ಪರಿಚಯ ಮಾಡಿಸಿದ್ದಲ್ಲದೆ, ಹಂಪಿ ಸಂರಕ್ಷಣೆ ಕುರಿತಂತೆ ನಡೆದ ಚಳವಳಿ ಸಭೆಗೆ ಅವರನ್ನು ಕರೆದು ಅಲ್ಲಿ ಸಾರ್ವಜನಿಕರಿಗೆ ಸಮೂಹ ಮಾಧ್ಯಮದವರಿಗೆ ಪರಿಚಯ ಮಾಡಿಕೊಡಲಾಯ್ತು.

[33] ಮೇಲಿನ ಆರು ಹೆಸರುಗಳು ಇತಿಹಾಸದ ಕೃತಿಗಳಿಂದ. ಮುಂದಿನವು ವಂಶಾವಳಿಯಿಂದ. ಹರಿಸಿಂಹದೇವನ ಹೆಸರು ಎರಡರಲ್ಲೂ ಉಂಟು.

[34] ಇವರು ನೇಪಾಳದ ಪ್ರಪ್ರಥಮ ಎಂ.ಬಿ.ಬಿ.ಎಸ್. ಪದವೀಧರರು ಮತ್ತು ನೇಪಾಳದ ದೊರೆಗಳ ರಾಜ ವೈದ್ಯರಾಗಿದ್ದವರು.

[35] “ಶ್ರೇಯ” ಶ್ರೀದೇವ್ ಬೈದ್ಯರ ಮೊಮ್ಮಗು. ಶ್ರೀದೇವ್ ಬೈದ್ಯ ನಮಗೆ ಕೊಟ್ಟಿರುವ ವಂಶಾವಳಿಯು “ಹರಿಸಿಂಹಮಲ್ಲ(ದೇವ)”ನಿಂದ ಆರಂಭವಾಗುತ್ತದೆ. ಸ್ವಾರಸ್ಯವೆಂದರೆ ಈ ವಂಶಾವಳಿಯು ನೇಪಾಳಿ ಸಂವತ್ ೪೪೪ ಎಂಬ ತೇದಿ ಕೊಡುತ್ತದೆ; ಇದು ಕ್ರಿ.ಶ. ೧೩೨೪ಕ್ಕೆ ಸರಿ ಹೊಂದುತ್ತದೆ. ಹರಿಸಿಂಹದೇವನು ಭಕ್ತಪುರದಿಂದ ಆಳಲು ಆರಂಭಿಸಿದ್ದು ಅದೇ ವರ್ಷದಿಂದ ಎಂಬುದು ಇತಿಹಾಸ ಪ್ರಸಿದ್ಧ. (ನೋಡಿ, ಪು. ೨೪)