ಕರ್ನಾಟಕ – ನೇಪಾಳಗಳ ಸಾಂಸ್ಕೃತಿಕ ಸಂಬಂಧ ಕುರಿತಾದ, ಒಂದು ರೀತಿಯಲ್ಲಿ ಸ್ವಲ್ಪ ಮಹತ್ವಾಕಾಂಕ್ಷೆಯ ಯೋಜನೆ ಎಂದು ಕರೆಯಬಹುದಾದ ನನ್ನ ಅಧ್ಯಯನದ ಫಲವಾದ ಈ ಮಾನೋಗ್ರಾಫನ್ನು (monograph) ಓದುಗರ ಕೈಗೆ ನೀಡುತ್ತಿದ್ದೇನೆ. ಆ ವಿಷಯದ ಬಗ್ಗೆ ನಾನು ಓದಿದ್ದನ್ನೆಲ್ಲವನ್ನು, ಓದಿ ಟಿಪ್ಪಣಿ ಮಾಡಿಕೊಂಡದ್ದೆಲ್ಲವನ್ನು ಬರಹಕ್ಕಿಳಿಸಿದ್ದರೆ ಹಲವು ನೂರು ಪುಟಗಳ ಬೃಹತ್‌ಕೃತಿಯಾಗುತ್ತಿತ್ತು. ಆದರೆ ನನ್ನ ಮುಂದೆ ಒಂದು ಖಚಿತ ಸಮಸ್ಯೆಯಿದ್ದುದರಿಂದ ಇಡೀ ನನ್ನ ಬರಹ ಆ ವಿಷಯ ಅಥವಾ ಸಮಸ್ಯೆಯನ್ನು ಕೇಂದ್ರೀಕರಿಸಿಕೊಂಡು ಸಾಗಿರುವುದನ್ನು ಓದುಗರು ಊಹಿಸಿಕೊಳ್ಳಬಹುದು. ಮುಖ್ಯ ವಿಷಯಕ್ಕೆ ಪೋಷಕವಾದ ಹಲವು ಅಂಶಗಳನ್ನು ನಾನು ಅನುಬಂಧಗಳಲ್ಲಿ ನೀಡಿದ್ದೇನೆ. ನಾನು ಟಿಪ್ಪಣಿ ಮಾಡಿಕೊಳ್ಳುವಾಗ ಒಂದೆರಡು ಕೃತಿಗಳ ಪುಟಗಳನ್ನು ಗುರುತು ಮಾಡಿಕೊಳ್ಳದೇ ಇದ್ದುದರಿಂದ ಆ ಕೃತಿಗಳನ್ನು ಹಾಗೇ ಹೆಸರಿಸಿದ್ದೇನೆ: ಪುಟಗಳನ್ನು ಅಲ್ಲಿ ನಮೂದಿಸಿರದಿದ್ದರೆ ಅದೊಂದು ಕೊರತೆಯೆಂದು ಭಾವಿಸಿ ಓದುಗರು ಮನ್ನಿಸಬೇಕಾಗಿ ಕೋರುತ್ತದೆ.

ಈ ಮಾನೋಗ್ರಾಫಿಗಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಎರಡು ವಾರಗಳ ನೇಪಾಳದ ಪ್ರವಾಸವಂತೂ ಸರಿಯೇ. ಬೆಂಗಳೂರಿನ (ಮಿಥಿಕ್‌ಸೊಸೈಟಿ, ಗೆಜೆಟಿಯರ್‌ಕಚೇರಿ, ಇಂಡಿಯನ್‌ಕೌನ್ಸಿಲ್‌ಫಾರ್‌ಹಿಸ್ಟಾರಿಕಲ್‌ರಿಸರ್ಚ್, ಬೆಂಗಳೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು, ಇಂಡಿಯನ್‌ಇನ್‌ಸ್ಟಿಟ್ಯೂಟ್‌ಆಫ್‌ವರ್ಲ್ಡ್ ಕಲ್ಚರ್‌), ಮೈಸೂರಿನ (ಮೈಸೂರು ವಿಶ್ವವಿದ್ಯಾಲಯ, ಕೇಂದ್ರ ಶಾಸನ ಶಾಸ್ತ್ರ ಇಲಾಖೆ), ಕಾಠಮಾಂಡೊದ (ತ್ರಿಭುವನ ವಿಶ್ವವಿದ್ಯಾಲಯ, ನ್ಯಾಷನಲ್‌ಆರ್ಕೈವ್ಸ್‌) ಗ್ರಂಥಾಲಯಗಳನ್ನು ಬಳಸಿಕೊಂಡಿದ್ದೇನೆ. ಆ ಎಲ್ಲ ಗ್ರಂಥಾಲಯಗಳ ಪದಾಧಿಕಾರಿಗಳ ಸಹಕಾರವನ್ನು ನಾನು ಕೃತಜ್ಞತೆಯಿಂದ ನೆನೆಯುತ್ತೇನೆ. ಶ್ರೀ ಎಸ್‌. ಶಿವಣ್ಣ ತಮ್ಮಲ್ಲಿರುವ ಹಲವು ಕೃತಿಗಳನ್ನು ಓದಲು ನೀಡುದುದಲ್ಲದೆ ಈ ಕೃತಿಯ ಗ್ರಂಥಸೂಚಿ, ಶಬ್ದಸೂಚಿ ರಾಮಾಚಾರ್ಯ, ಆಗುಂಬೆ ಎಸ್‌. ನಟರಾಜ್‌, ಡಾ. ಸೂರ್ಯನಾಥ ಕಾಮತ್‌, ಡಾ. ಎಸ್‌. ನಾಗರಾಜ್‌ಇವರು ತಮ್ಮ ಬಳಿಯಿದ್ದ ಗ್ರಂಥಗಳನ್ನು ಎರವಲು ನೀಡಿ ಸಹಾಯ ಮಾಡಿದ್ದಾರೆ.

ಇಲ್ಲಿ ವಿಶೇಷವಾಗಿ ಸ್ಮರಿಸಬೇಕಾದ ಒಂದು ಹೆಸರು: ಕಾಠಮಾಂಡೊದ ತ್ರಿಭುವನ ವಿಶ್ವವಿದ್ಯಾಲಯದ ಕೇಂದ್ರ ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕ ಡಾ. ಜಗದೀಶಚಂದ್ರ ಶರ್ಮ ರೆಗ್ಮಿಯವರದ್ದು. ಅವರೊಬ್ಬ ಹಿರಿಯ ವಿದ್ವಾಂಸರೆಂದು ಅಲ್ಲಿನ ವಿದ್ವಾಂಸರ ಬಾಯಿಂದ ಕೇಳಿದ ನಾನು ಅವರಿಗೆ ದೂರವಾಣಿ ಮಾಡಿ ನೇಪಾಳಕ್ಕೆ ನಾನು ಬಂದಿರುವ ಉದ್ದೇಶವನ್ನು ತಿಳಿಸಿದಾಗ, ನಾನು ಕಾಠಮಾಂಡೊ ಬಿಡುವ ಹಿಂದಿನ ದಿನ ಸಂಜೆ ಅವರು ನನ್ನ ಕೊಠಡಿಗೆ ಬಂದು, ತಮ್ಮ Nepal – India Cultural Relations (A Historical Cultural Retrospect through Historical Times) ಎಂಬ ಅಪ್ರಕಟಿತ ಕೃತಿಯ ಹಸ್ತಪ್ರತಿಯನ್ನು (ಪುಟಗಳು ೧೯೮) ನೀಡಿದರು. ಅದನ್ನು ತೆಗೆದು ಕಣ್ಣು ಹಾಯಿಸುತ್ತಿದ್ದಂತೆ, ವಿಶೇಷವಾಗಿ ಪಶುಪತಿ ದೇವಾಲಯ ಮತ್ತು ಕರ್ನಾಟಕಗಳಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿ ಕಾಣಿಸಿತು. ಅದರ ಕೆಲವು ಪುಟಗಳನ್ನು ನೆರಳಚ್ಚು ಮಾಡಿಸಿಕೊಳ್ಳಬೇಕೆಂಬ ನನ್ನ ಆಶಯವನ್ನು ವ್ಯಕ್ತಪಡಿಸುತ್ತಿದ್ದಂತೆ ಅವರು ಇಡೀ ಹಸ್ತಪ್ರತಿಯನ್ನೇ ನನಗಿತ್ತು ಅದರ ಮಾಹಿತಿಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಸೂಚಿಸಿದ್ದು ನನಗೆ ಆಶ್ಚರ್ಯವಾಯಿತು. ಅದನ್ನು ಭಾರತದಲ್ಲಿ ಯಾರಾದರೂ ಪ್ರಕಟಿಸಲು ಮುಂದೆ ಬಂದರೆ ಸಂತೋಷ ಎಂದರು. ಆ ಕೃತಿಗೆ ನೇಪಾಳದ ಭಾರತೀಯ ರಾಯಭಾರಿ ಕಚೇರಿಯ “ಬಿ.ಪಿ. ಕೊಯಿರಾಲ ಇಂಡಿಯ – ನೇಪಾಲ ಫೌಂಡೇಷನ್‌” ಧನಸಹಾಯ ನೀಡಿದೆ. ಆ ಕೃತಿ ಇಂಗ್ಲಿಷ್‌ನಲ್ಲಿರುವುದರಿಂದ ಅದರ ಪ್ರಕಟಣೆಗೆ ನಾನು ಪ್ರಯತ್ನಿಸುವುದು ಸ್ವಲ್ಪ ಕಷ್ಟಸಾಧ್ಯವೇ. ಆ ಕೃತಿಯನ್ನು ಈ ನನ್ನ ಮಾನೋಗ್ರಾಫಿನಲ್ಲಿ ಅಲ್ಲಲ್ಲಿ ಬಳಸಿಕೊಂಡು ಸ್ಮರಿಸಿದ್ದೇನೆ. ಆ ವಿದ್ವಾಂಸರ ಸೌಜನ್ಯ, ಸಹಕಾರ ಇವು ನಾನು ಮರೆಯಲಾಗದ ಅನುಭವ.

ಅಂತೆಯೇ ಕಾಠಮಾಂಡೊದ ಸಾಹಿತಿ, ಸಮಾಜ ಕಾರ್ಯಕರ್ತ ಶ್ರೀ ಭರತ್‌(ಮಣಿ) ಜಂಗಂ, ಡಾ. ಮಾಲಾ ಮಲ್ಲ ಇಬ್ಬರೂ ನನ್ನ ನೇಪಾಳ ಪ್ರವಾಸ ಸಂದರ್ಭದಲ್ಲಿ ಬಹು ಸ್ನೇಹದಿಂದ ಸಹಕರಿಸಿದರು. ಶ್ರೀ ಜಂಗಂ ಮತ್ತು ಭಕ್ತಪುರದ ಇತಿಹಾಸಜ್ಞ ಡಾ. ಪುರುಷೋತ್ತಮಲೋಚನ ಶ್ರೇಷ್ಠ ಅವರು ತಮ್ಮ ಬರಹಗಳ ಮೇಲಚ್ಚುಗಳನ್ನು ನೀಡಿದರು. ಕಾಠಮಾಂಡೊದ ತ್ರಿಭುವನ ವಿಶ್ವವಿದ್ಯಾಲಯದ ನೇಪಾಲಿ – ಏಷಿಯನ್‌ಅಧ್ಯಯನ ಸಂಸ್ಥೆಯು ತ್ರಿಭುವನ ವಿಶ್ವವಿದ್ಯಾಲಯದಲ್ಲಿ ನನ್ನ ವಿಶೇಷ ಉಪನ್ಯಾಸವೊಂದಕ್ಕೆ (Social Dimensions of Bhakti Movements in South Asia) ವ್ಯವಸ್ಥೆ ಮಾಡಿದುದನ್ನು (೨೩.೯.೨೦೦೨) ನಾನು ಸ್ಮರಿಸುವುದಲ್ಲದೆ, ಆ ಉಪನ್ಯಾಸ ವ್ಯವಸ್ಥೆಗೆ ಕಾರಣಕರ್ತರಾದ ಅಂದಿನ (೨೦೦೦ – ೦೧) ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಸಿದ್ಧಪ್ಪನವರ ಸಹಕಾರವನ್ನೂ ಸ್ಮರಿಸುತ್ತೇನೆ.

ನನ್ನ ನೇಪಾಳದ ಪ್ರವಾಸಕ್ಕೆ ಧನಸಹಾಯ ನೀಡಿದ ಕರ್ನಾಟಕ ಸರ್ಕಾರಕ್ಕೆ, ಅದರಲ್ಲೂ ಮಾನ್ಯ ಸಂಸ್ಕೃತಿ ಸಚಿವೆ ಶ್ರೀಮತಿ ರಾಣಿ ಸತೀಶರಿಗೆ ಹಾಗೂ ಅವರ ಆಪ್ತಕಾರ್ಯದರ್ಶಿ ಡಾ. ಎ. ಆರ್‌. ಮಂಜುನಾಥ್‌ಅವರಿಗೆ, ಬೆಂಗಳೂರಿನ ನಿರ್ಮಾಣ್‌ಷೆಲ್ಟರ್ಸ್‌ನ ಶ್ರೀ ವಿ. ಲಕ್ಷ್ಮೀನಾರಾಯಣ ಅವರಿಗೆ, ಮೈಸೂರಿನ ಸುತ್ತೂರು ಮಹಾಸಂಸ್ಥಾನದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಗೆ ನಾನು ವಿಶೇಷವಾಗಿ ಋಣಿಯಾಗಿದ್ದೇನೆ.

ನೇಪಾಳದಲ್ಲಿ ನನ್ನ ವಾಸ್ತವ್ಯದ ಎಲ್ಲ ಏರ್ಪಾಟು ಮಾಡಿದ ಬೆಂಗಳೂರಿನ ನನ್ನ ಪಕ್ಕದ ಮನೆಯ ನೇಪಾಳ ಮೂಲದ ಶ್ರೀಮತಿ ಅನಿತ ಸಂಜಯ್‌, ಕಾಠಮಾಂಡೊದ ಅವರ ಬಂಧು ಶ್ರೀಮತಿ ಅರ್ಚನಾ ಸುರೇಂದ್ರ ಅವರಿಗೆ ನಾನು ನನ್ನ ಕೃತಜ್ಞತೆ ಹೇಳಲೇಬೇಕು. ನೇಪಾಳಕ್ಕೆ ಹೋಗುವ ಮುನ್ನ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ಪಶುಪತಿ ದೇವಾಲಯದ ನಿವೃತ್ತ ಪ್ರಧಾನ ಅರ್ಚಕರಾದ ಶ್ರೀ ರಾವಲ್‌ಅನಂತಕೃಷ್ಣ ಸೋಮಯಾಜಿಯವರ, ಕಾಠಮಾಂಡೊದಲ್ಲಿ ತಮ್ಮ ಮನೆಗೆ ನನ್ನನ್ನು ಬರಮಾಡಿಕೊಂಡು ಅದರಿಂದ ಕಂಡ ಈಗಿನ ಪ್ರಧಾನ ಅರ್ಚಕರಾದ ಶ್ರೀ ಮಹಾಬಲೇಶ್ವರ ಭಟ್‌ಅವರ ಉಪಕಾರ ಮಾತನ್ನು ಮೀರಿದ್ದು. ಅವರಿಬ್ಬರಿಂದಲೂ ನನಗೆ ಹಲವು ವಿಷಯಗಳು ತಿಳಿದವು. ಅಂತೆಯೇ ಕಾಠಮಾಂಡೊದಲ್ಲಿ ಶ್ರೀ ಮೈಥಿಲಿ ಕುಮಾರ ಝ, ಬೆಂಗಳೂರಿನಲ್ಲಿ ಭೇಟಿಯಾಗಲು ಸಾಧ್ಯವಾದ ಕಾಠಮಾಂಡೊದ ಶ್ರೀಶ್ರೀದೇವ ಬೈದ್ಯ, ಶ್ರೀಮತಿ ಪದ್ಮಿನಿ ಬೈದ್ಯ ಇವರೆಲ್ಲ ನನಗೆ ಹಲವು ಉಪಯುಕ್ತ ವಿಷಯ ತಿಳಿಸಿದರು. ಕಾಠಮಾಂಡೊ, ಭಕ್ತಪುರಗಳಿಗೆ ತಾವೇ ಸ್ವತಃ ಹೋಗಿ ನನಗೆ ಅಲ್ಲಿನ ಪ್ರಮುಖ ಜಾಗಗಳ, ಶಿಲ್ಪಗಳ, ಗುಡಿಗಳ ಚಿತ್ರಗಳನ್ನು ತೆಗೆದು ಕಳುಹಿಸಿಕೊಟ್ಟ ಶ್ರೀ ಶ್ರೀದೇವ ಬೈದ್ಯರ ಸೋದರ ಶ್ರೀ ಸುಂದರ ದೇವ್‌ಬೈದ್ಯರಿಗೆ ನಾನು ಋಣಿಯಾಗಿದ್ದೇನೆ. (ನನ್ನ ಜೊತೆ ಭಕ್ತಪುರಕ್ಕೆ ಬಂದು ಅಲ್ಲಿ ಶ್ರೀ ಭರತ್‌ಜಂಗಂ ಹಲವು ಚಿತ್ರಗಳನ್ನು ತೆಗೆದರೂ ಅವು ಕ್ಯಾಮರಾ ದೋಷದಿಂದಾಗಿ ದುರದೃಷ್ಟವಶಾತ್‌ಮೂಡಿಬರಲಿಲ್ಲ.) ಕಾಠಮಾಂಡೊದ ಜೈನ ಭವನದ ಇಡೀ ಸಿಬ್ಬಂದಿ ನನ್ನನ್ನು ಬಹು ಆದರಿಂದ ಕಂಡಿತು. ಅವರಲ್ಲಿ ಮ್ಯಾನೇಜರ್‌ಮಾತ್ರವಲ್ಲ, ಕಚೇರಿ ಸಿಬ್ಬಂದಿ, ಅಡುಗೆ ಮನೆಯ ಸಿಬ್ಬಂದಿ, ಕೊಠಡಿಯ ಕಸ ಗುಡಿಸುವ, ಕಕ್ಕಸ್ಸು ತೊಳೆಯುವ ಎಲ್ಲರೂ ನನಗೆ ಆತ್ಮೀಯರಾಗಿ ಬಿಟ್ಟಿದ್ದರು. ಅವರೆಲ್ಲರ ಹೆಸರುಗಳನ್ನು ಬರೆದುಕೊಳ್ಳೆ ಆ ಮೇಲೆ ಪೇಚಾಡಿದೆ: ಅವು ಮರೆತುಹೋಗಿವೆ. (ಕೊಯಿರಾಲ –ಮಾಜಿ ಪ್ರಧಾನಿ ಹೆಸರಿನ ‘ಕಾಫಿ ಹುಡುಗ’: ಇದು ಮಾತ್ರ ನೆನಪಿದೆ). ಜೈನಭವನದಲ್ಲಿ ಪ್ರತಿ ದಿನ ಬೆಳಿಗ್ಗೆ ಆರರ ಹೊತ್ತಿಗೆ ಅಲ್ಲಿಂದ ಪಂನಮಸ್ಕಾರ ಮಂತ್ರಗಳ, ಸ್ತೋತ್ರಗಳ ಧ್ವನಿ ಮುದ್ರಿತ ವಾಣಿ ಕೇಳುತ್ತ ಎಚ್ಚರಗೊಳ್ಳುತ್ತಿದ್ದೆ. ಬೆಳಿಗ್ಗೆ ಎಂಟೂವರೆ, ಒಂಬತ್ತರ ಹೊತ್ತಿಗೆ ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು ತೀರ್ಥಂಕರರಿಗೆ ನಮಸ್ಕರಿಸಲು ಪೂಜಾಭವನಕ್ಕೆ ಹೋದರೆ ಅಲ್ಲಿ ಭಕ್ತರು ಹಾಡುತ್ತ, ಮೆತ್ತಗೆ ಕುಣಿಯುತ್ತ ಇದ್ದ ದೃಶ್ಯವನ್ನು ನಾನು ಮರೆಯಲಾರೆ. ಸಂಜೆಯ ಹೊತ್ತೂ ಇದೇ ಅನುಭವವಾಗುತ್ತಿತ್ತು. ನನಗೆ ಸಹಜವಾಗಿಯೇ ಶ್ರವಣ ಬೆಳ್ಗೊಳದಲ್ಲಿ ಕಳೆದ ದಿನಗಳು ಜ್ಞಾಪಕಕ್ಕೆ ಬರುತ್ತಿದ್ದವು. ಜೈನಭವನದ ಪಕ್ಕದ ಟೆಲಿಫೋನ್‌ಬೂತಿನ ವ್ಯಕ್ತಿಯೂ ಅಷ್ಟೇ : ಅವರೆಲ್ಲರ ಸ್ನೇಹವನ್ನು ನಾನು ನೆನಪಿಸಿಕೊಳ್ಳದಿದ್ದರೆ ತಪ್ಪಾಗುತ್ತದೆ. ನೇಪಾಳದ ಡಾ. ಮಾಲಾ ಮಲ್ಲರನ್ನು ಪರಿಚಯಿಸಿದ ಬೆಂಗಳೂರಿನ ಡಾ. ಕೆ. ಎಸ್‌. ಅರುಣಿಯವರನ್ನೂ ಅಷ್ಟೇ.

ನೇಪಾಳದಿಂದ ವಾಪಸಾದ ಮೇಲೆ ಪತ್ರಿಕಾಗೋಷ್ಠಿ ಮೂಲಕ, ದೂರದರ್ಶನದ ಬೇರೆ ಬೇರೆ ವಾಹಿನಿಗಳ ಮೂಲಕ, ಲೇಖನಗಳ ಮೂಲಕ, ಕನಿಷ್ಠ ಏಳು ಉಪನ್ಯಾಸಗಳ ಮೂಲಕ (ಬೆಂಗಳೂರು, ತುಮಕೂರು, ಧಾರವಾಡ, ಗುಲ್ಬರ್ಗಾ) ಅಲ್ಲಿನ ನನ್ನ ಶೋಧಗಳನ್ನು ಅನುಭವಗಳನ್ನು ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ವಿದ್ವಾಂಸರಿಗೆ ತಿಳಿಸಿದೆ. ಸಾಕಷ್ಟು ಪ್ರಚಾರವೂ ದೊರೆಯಿತು. ಬೆಂಗಳೂರಿಗೆ ಬಂದಿದ್ದ ಶ್ರೀ ಶ್ರೀದೇವ ಬೈದ್ಯ ದಂಪತಿಗಳನ್ನು ಶ್ರೀಮತಿ ರಾಣಿ ಸತೀಶರಿಗೆ ಪರಿಚಯ ಮಾಡಿಕೊಟ್ಟು ನೇಪಾಳಕ್ಕೆ ಕರ್ನಾಟಕದಿಂದ ಒಂದು ಸಾಂಸ್ಕೃತಿಕ ತಂಡವನ್ನು ಕಳುಹಿಸಲು ಮನವಿ ಮಾಡಿದಾಗ ಮಂತ್ರಿಗಳು ಒಪ್ಪಿದರು: ಅದು ಬೇಗ ಕಾರ್ಯಗತವಾಗಲಿ ಎಂದು ಹಾರೈಸೋಣ. ಬೆಂಗಳೂರಲ್ಲಿ ಈ ಮಾನೊಗ್ರಾಫನ್ನು ಬರೆಯಲಾರಂಭಿಸುವ ಪ್ರಯತ್ನವು ದಿನದಿಂದ ದಿನಕ್ಕೆ ಮುಂದುವರಿದು ಒಳಗೇ ಚಡಪಡಿಕೆ ಆರಂಭವಾಯ್ತು. ಕೊನೆಗೊಮ್ಮೆ ನಿರ್ಧಾರ ಮಾಡಿ ಮೈಸೂರಿಗೆ ಟಿಪ್ಪಣಿಗಳ ಸಮೇತ ಹೋಗಿ ಅಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಹಾಸಂಸ್ಥಾನದ ಅತಿಥಿ ಗೃಹದಲ್ಲಿ ತಂಗಿ ಏಳು ದಿನ ಬೆಳಗಿನಿಂದ ರಾತ್ರಿಯವರೆಗೆ ಟಿಪ್ಪಣಿಗಳನ್ನು ಒಂದು ಕ್ರಮಕ್ಕೆ ತಂದು ಈ ಮಾನೊಗ್ರಾಫಿನ ಅರ್ಧದಷ್ಟನ್ನು ಬರೆದು ಮುಗಿಸಿದೆ. ಅತ್ಯಂತ ಪ್ರಶಾಂತ ಸ್ಥಳ; ಬೆಟ್ಟದ ಬುಡದ ಮೆಟ್ಟಲಿಂದ ಶ್ರೀಮಠಕ್ಕೆ ಕೇವಲ ನಾಲ್ಕು ನಿಮಿಷ ನಡಗೆ; ನಾನಿದ್ದ ಕೊಠಡಿಯ ಹಿಂಭಾಗಕ್ಕೆ ಹತ್ತಡಿ ದೂರಕ್ಕೆ ‘ಹಿಂದೂಗಳ ಹೂಳುವ ಸ್ಮಶಾನ’ದ ಪೌಳಿ; ಮುಂಭಾಗದಲ್ಲಿ ಅತ್ಯಂತ ಸುಂದರ ಕಲ್ಲ ಕೊಳ; ವಿಶಾಲವಾದ ಬಯಲು; ಹೂ ಹಣ್ಣುಗಳಿಂದ ತುಂಬಿದ ಗಿಡಮರಗಳು; ಅಲ್ಲೇ ಒಂದೆಡೆ ಎರಡು ಆನೆಗಳು, ತಂತಿ ಬೇಲಿಯ ಒಳಗೆ ಜಿಂಕೆ, ಮೊಲ, ಬಾತುಕೋಳಿ ಹಕ್ಕಿಗಳು. ಪೂಜ್ಯರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಮಠದ ಮ್ಯಾನೇಜರ್‌ಎಂ. ಶಿವಸ್ವಾಮಿ, ಅಸಿಸ್ಟೆಂಟ್‌ಮ್ಯಾನೇಜರುಗಳಾದ ಬಿ. ಶಿವರಾಮ್‌, ಕೆ. ಎಸ್‌. ಮಹಾದೇವನ್‌ಆಗಿ ಅವರಾದಿಯಾಗಿ ಅಲ್ಲಿನ ಅಡುಗೆ ಮನೆಯ ಸಿಬ್ಬಂದಿ ಎಲ್ಲರೂ ಬಹು ಪ್ರೀತಿ ಆದರದಿಂದ ಕಂಡರು. ಆ ವಾತಾವರಣ ನನ್ನನ್ನು ಗೆದ್ದುಬಿಟ್ಟಿತ್ತು : ಒಂದು ವಾರದ ಬಳಿಕ ನಾನು ಬೆಂಗಳೂರಿಗೆ ವಾಪಸಾದಾಗ ಬೆಂಗಳೂರನ್ನು ನನ್ನ ಮನಸ್ಸು ತಿರಸ್ಕರಿಸಿತೋ ಅಥವಾ ನನ್ನನ್ನು ಬೆಂಗಳೂರು ತಿರಸ್ಕರಿಸಿತೋ ಅಂತೂ ಬೆಂಗಳೂರಿಗೆ ಬರಲೇಬೇಕಾಗಿತ್ತು, ಬಂದೆ (ನೇಪಾಳದಿಂದ ಭಾರತಕ್ಕೆ ಬಂದಾಗ ಆದ ಅನುಭವ ಮರುಕಳಿಸಿತು). ಪೂಜ್ಯಶ್ರೀ ಸ್ವಾಮೀಜಿಯವರಿಗೆ ಶ್ರೀಮಠದ ಸಿಬ್ಬಂದಿಗೆ ನಾನು ಬಹುವಾಗಿ ಋಣಿ. ನನ್ನ ನೇಪಾಳದ ಪ್ರವಾಸದ ಬಗ್ಗೆ ಬಹು ಆಸಕ್ತಿ ತೋರಿದವರು ಧಾರವಾಡದ ಹಿರಿಯರು ಡಾ. ಜಿ. ಎಸ್‌. ದೀಕ್ಷಿತ್‌ಅವರ ಪ್ರೀತಿಯನ್ನು, ಈ ಮಾನೊಗ್ರಾಫ್‌ಬಗ್ಗೆ ಆಗಾಗ್ಗೆ ವಿಚಾರಿಸುತ್ತಿದ್ದ ಡಾ. ಎಚ್‌. ಎಂ. ಮರುಳಸಿದ್ಧಯ್ಯನವರ ಸ್ನೇಹವನ್ನು ನಾನು ಸ್ಮರಿಸಲೇಬೇಕು.

“ಪಂಪ ಪ್ರಶಸ್ತಿ” ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಏರ್ಪಡಿಸಿದ ಅಭಿನಂದನ ಸಮಾರಂಭಕ್ಕೆ ಹಲವು ವರ್ಷಗಳ ಬಳಿಕ ಇದೇ ಫೆಬ್ರವರಿಯಲ್ಲಿ ನಾನು ಹಂಪಿಗೆ ಹೋಗಿ, ವಿರೂಪಾಕ್ಷನ ದರ್ಶನ ಮಾಡಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಆಶಯವನ್ನು ನಾನು ನನ್ನ ಮಿತಿಯಲ್ಲೇ ಮುಂದುವರಿಸುವ ಸಂಕಲ್ಪವನ್ನು ಮಾಡಿದೆ. ಹಂಪಿಯಲ್ಲಿ ಹಿಪ್ಪಿಗಳಿಂದ ಆಗುತ್ತಿರುವ ಹೊರ, ಒಳ ವಾತಾವರಣ ದೂಷಣೆಯನ್ನು ಕಂಡು ಮನಸ್ಸು ನೊಂದಿತು. (ಮುಂದೆ ೨೩.೩.೨೦೦೩ ರಂದು ಬೆಂಗಳೂರಿನಿಂದ ನಾವು ಕೆಲವರು ಹಂಪಿಯ ಸ್ಥಳೀಯರ ಬೆಂಬಲ ಪಡೆದು ಆ ಬಗ್ಗೆ ಹಂಪಿಯಲ್ಲೇ ಪ್ರತಿಭಟನೆ ಮಾಡಿದಾಗ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಆ ಬಗ್ಗೆ ಆಗಬೇಕಾದ್ದು ಸಾಕಷ್ಟಿದೆ.) ಮಿತ್ರರಾದ ಕುಲಪತಿ ಡಾ. ಎಚ್‌. ಜೆ. ಲಕ್ಕಪ್ಪಗೌಡರ ಮನೆಯಲ್ಲಿ ನಾವೆಲ್ಲ ಸೇರಿದಾಗ, ನೇಪಾಳದ ನನ್ನ ಕಿರುಕೃತಿಯನ್ನು ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಲು ಸಿದ್ಧವೆಂದು ಸೂಚನೆ ಬಂದೊಡನೆ ನಾನು ಸಂತೋಷದಿಂದ ಒಪ್ಪಿದುದರ ಫಲ ಈ ಪ್ರಕಟಣೆ. ಕನ್ನಡ ವಿಶ್ವವಿದ್ಯಾಲಯವು ಈ ಕಿರುಕೃತಿಯನ್ನು ಪ್ರಕಟಿಸುತ್ತಿರುವುದು ನನಗೆ ಸಂತೋಷದ ವಿಷಯ ಮಾತ್ರವಲ್ಲ, ಹೆಮ್ಮೆಯ ವಿಷಯವೂ ಹೌದು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್‌. ಜೆ. ಲಕ್ಕಪ್ಪಗೌಡರಿಗೆ ಕುಲಸಚಿವ ಡಾ. ಕೆ. ವಿ. ನಾರಾಯಣರಿಗೆ ಪ್ರಸಾರಾಂಗದ ನಿರ್ದೇಶಕ ಡಾ. ಹಿ. ಚಿ. ಬೋರಲಿಂಗಯ್ಯನವರಿಗೆ ನಾನು ಆಭಾರಿಯಾಗಿದ್ದೇನೆ. ಈ ಕೃತಿಯನ್ನು ಸುಂದರವಾಗಿ ಅಚ್ಚು ಮಾಡಿರುವ ಸ್ನೇಹಾ ಪ್ರಿಂಟರ್ಸ್‌ಮುದ್ರಣಾಲಯದ ಡಾ. ಎಸ್‌. ವಿದ್ಯಾಶಂಕರ ಅವರಿಗೆ, ಅವರ ಮಕ್ಕಳಾದ ಶ್ರೀಮತಿ ವಿ. ಪ್ರಿಯದರ್ಶಿನಿ, ವಿ. ಮಹೇಶ್‌, ವಿ. ಕಾರ್ತಿಕ್‌ಅವರಿಗೆ, ಅಚ್ಚುಕಟ್ಟಾಗಿ ಡಿ.ಟಿ.ಪಿ. ಮಾಡಿರುವ ಚಿ|| ಎಂ. ಮಹೇಶ್‌ಗೆ ನನ್ನ ಹಾರ್ದಿಕ ಕೃತಜ್ಞತೆಗಳು.

ಈ ಮಾನಗ್ರಾಫ್‌ಹಿಂದೆ ನನ್ನ ಶ್ರಮವಿರುವುದು ನಿಜ; ಅದರ ಬಹುಮುಖಿ ಅನುಭವದ ಸಮಗ್ರ ನಿರೂಪಣೆಯನ್ನು ನಾನು ದಾಖಲಿಸಿದರೆ ಅದು ಯುವ ಸಂಶೋಧಕರಿಗೆ ಸಹಾಯಕವಾದರೂ ಆಗಬಹುದು. ಅದಕ್ಕಿಂತ ಮುಖ್ಯವಾಗಿ ಹೇಳಬೇಕಾದುದೆಂದರೆ, ನನ್ನ ಕೆಲವು ಮಾನಸಿಕ ಯಾತನೆಗಳನ್ನು ಮರೆಯಲಿಕ್ಕೂ ಈ ಕೃತಿರಚನೆ ಸಹಾಯ ಮಾಡಿತು. ನನ್ನ ಕೃತಿಯ ಮಿತಿಯೆಂದರೆ ನಾನು ನೇಪಾಲಿ ಹಿಂದಿ ಸಂಸ್ಕೃತ ಭಾಷೆಗಳಲ್ಲಿರುವ ಕೃತಿಗಳನ್ನೇ ಮೂಲದಲ್ಲಿ ಓದಲು ಸಾಧ್ಯವಿರಲಿಲ್ಲ. ಕೆಲವು ನೇಪಾಲಿ ಭಾಷೆಯ ಲೇಖನ ಹಾಗೂ ಕೃತಿಗಳನ್ನು ಓದಿ ಅವುಗಳ ಸಾರಾಂಶವನ್ನು ತಿಳಿಸಿ ಸಹಾಯ ಮಾಡಿದ್ದಾರೆ. ಡಾ. ಪ್ರಭಾಶಂಕರ್‌‘ಪ್ರೇಮಿ’ ಡಾ. ವಿಮಲಾ ನಾಯ್ಡು ಹಾಗೂ ಡಾ. ವಿಜಯಾ ಸುಬ್ಬರಾಜ್‌. ಆದರೆ ವಿದ್ವಾಂಸರ ಬರಹಗಳನ್ನು ಶಾಸನಗಳನ್ನು ಮೂಲ ಕೃತಿಗಳನ್ನು (ಸಂಸ್ಕೃತ, ನೇಪಾಲಿ, ಹಿಂದಿ) ಅವುಗಳ ಮೂಲ ಭಾಷೆಯಲ್ಲೇ ಓದಿ ವಿಷಯ ಸಂಗ್ರಹ ಮಾಡಿದ್ದರೆ ಆಗ ಈ ಕೃತಿ ಇನ್ನಷ್ಟು ಅಧಿಕೃತವಾಗುತ್ತಿತ್ತು. ಎಂದರೆ ನಾನು ಮಾಡಿರುವ ಕೆಲಸವು ಮುಂದುವರಿಯುವ ಅಗತ್ಯವಿದೆ. ನನ್ನ ತೃಪ್ತಿ ಎಂದರೆ ಇದು: ನನ್ನ ಸಂಶೋಧನಾಶಕ್ತಿ, ನಾಡು ರಾಷ್ಟ್ರಗಳ ಬಗ್ಗೆ ಇರುವ ಪ್ರೇಮಗಳಿಂದಾಗಿ ಕರ್ನಾಟಕದ ಉದ್ದಗಲಕ್ಕೂ ಹೋಗಿಬಂದಿದ್ದೇನೆ; ಕರ್ನಾಟಕದ ಆಚೆಯ ಆಂಧ್ರಕ್ಕೆ ಹೋಗಿ ಅಲ್ಲಿರುವ ಪಂಪನ ತಮ್ಮ ಜಿನವಲ್ಲಭನ ಶಾಸನದ ಬಗ್ಗೆ ಸಮೀಕ್ಷೆ ನಡೆಸಿದ್ದೇನೆ; ಭಾರತದ ಆಚೆಯ ನೇಪಾಳಕ್ಕೂ ಹೋಗಿ ಅಲ್ಲಿಯೂ ಸಮೀಕ್ಷೆ ನಡೆಸಿದ್ದೇನೆ. ನನ್ನ ತೃಪ್ತಿಯ ಹಿಂದಿರುವ ತೀವ್ರ ಅತೃಪ್ತಿ ಸ್ಪಷ್ಟವಿದೆ. ಒಂದು ಕಾಲಕ್ಕೆ ಕನ್ನಡ ನಾಡೇ ಆಗಿದ್ದು, ಈಗ ಕೈತಪ್ಪಿ ಹೋಗಿರುವ ಮಹಾರಾಷ್ಟ್ರ, ಗೋವಾ, ಆಂಧ್ರ, ತಮಿಳುನಾಡು, ಕೇರಳಗಳ ಗಡಿಗಳಿಗೆ ಹೋಗಿ ಅಲ್ಲಿನ ಕನ್ನಡ ಸಂಸ್ಕೃತಿಯ ಪಳೆಯುಳಿಕೆಗಳನ್ನು ಮಾತ್ರವಲ್ಲ, ಭಾರತದ ಬೇರೆ ಬೇರೆಡೆ ಕನ್ನಡ ದೊರೆಗಳು ಆಳಿದ ಜಾಗಗಳಿಗೇ ಹೋಗಿ ಅಲ್ಲಿ ಸಮೀಕ್ಷೆಗಳನ್ನು ನಡೆಸುವ ಅಗತ್ಯವಿದೆ. ಇದು ಸಂಪೂರ್ಣ ತನ್ಮಯತೆ, ನಿಷ್ಠೆ, ಶ್ರಮಗಳನ್ನು ನಿರೀಕ್ಷಿಸುವ ಕೆಲಸ. ಹೊಸ ಹೊಸ ಕ್ಷೇತ್ರಗಳಿಗೆ ಪ್ರವೇಶಿಸಿ ಹೊಸ ಹೊಸ ಸಂಗತಿಗಳನ್ನು ಗುರುತಿಸುವ, ಹೊಸ ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡುವ ಕೆಲಸವಾಗಬೇಕಾಗಿದೆ. ನನ್ನ ಈ ಕಿರುಕೃತಿ ಕರ್ನಾಟಕದ ಬಗೆಗಿನ ನಮ್ಮ ಅರಿವನ್ನು ಮಾತ್ರವಲ್ಲ, ನಮ್ಮ ದೃಷ್ಟಿ ವ್ಯಾಪ್ತಿಯನ್ನು ಹೆಚ್ಚಿಸಿದೆ. ‘ಕಾವೇರಿಯಿಂದ ಗೋದಾವರಿ’ವರೆಗಿನ ಕರ್ನಾಟಕ ಪ್ರಸಿದ್ಧ ಜೊತೆಗೆ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಇನ್ನೂ ದೂರಕ್ಕೆ ಕರ್ನಾಟಕ ಸಂಸ್ಕೃತಿ ಪಸರಿಸಿತ್ತು, ತನ್ನ ಪ್ರಭಾವವನ್ನು ವಿಸ್ತರಿಸುತ್ತ ಭಾರತೀಯ ಸಂಸ್ಕೃತಿಗೆ ಅನನ್ಯ ಕೊಡುಗೆಗಳನ್ನು ನೀಡಿತ್ತು ಎಂಬ ಅರಿವನ್ನಾದರೂ ಈ ಮಾನೊಗ್ರಾಫ್‌ತಂದುಕೊಡುವುದಾದರೆ, ಹೆಚ್ಚಿನ ಸಂಶೋಧನೆಗೆ ಪ್ರಚೋದನೆ ನೀಡುವುದಾದರೆ ನನ್ನ (ಅಥವಾ ಯಾವುದೇ ಲೇಖಕನ) ಪ್ರಯತ್ನ ಸಾರ್ಥಕವಾದಂತೆ ಅಲ್ಲವೇ!

ಕೊನೆಯದಾಗಿ ನೇಪಾಳದಂತಹ ಚಿಕ್ಕ ರಾಷ್ಟ್ರದಿಂದ ಇಂದಿನ ಭಾರತ ಅಥವಾ ಕರ್ನಾಟಕ ಕಲಿಯಬೇಕಾದ ಒಂದು ಸಂಗತಿ. ಕಾಠಮಾಂಡೊ; ಅದಕ್ಕೆ ಆರು, ಹತ್ತು ಕಿಲೋಮೀಟರು ದೂರದ ಪಾಟಣ್‌, ಭಕ್ತಪುರ ಈ ನಗರಗಳ ಸ್ಮಾರಕಗಳನ್ನು ಯುನೆಸ್ಕೊ ತನ್ನ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸಿದೆ. ಕಾಠಮಾಂಡೊದ ಪಶುಪತಿನಾಥ ದೇವಾಲಯಕ್ಕೆ ದಿನವೂ ಸಾವಿರಾರು ಭಕ್ತರ ಭೇಟಿ, ಪಕ್ಕದೇ ನದಿ ದಡದಲ್ಲಿ ಸದಾ ಚಿತೆಗಳ ಬೆಂಕಿ, ಹೊಗೆ. ಇಷ್ಟಿದ್ದರೂ ಆ ಮೂರು ನಗರಗಳ ಸ್ಮಾರಕಗಳನ್ನು ನೇಪಾಳ ಸರ್ಕಾರವು ಯುನೆಸ್ಕೋ ವಿಧಿಸಿರುವ ನಿಯಮಗಳಿಗನುಗುಣವಾಗಿ ಶುಭ್ರತೆಯನ್ನು, ಐತಿಹಾಸಿಕ ವಾತಾವರಣವನ್ನು ಕಾಪಾಡಿದೆ. ನೇಪಾಳದ ಮೂರರಷ್ಟಿರುವ ಕರ್ನಾಟಕದ ಎರಡು ಜಾಗಗಳನ್ನು ಮಾತ್ರ (ಹಂಪಿ, ಪಟ್ಟದಕಲ್‌) ಯುನೆಸ್ಕೋ ತನ್ನ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ. ಹಂಪಿಯ ವಾತಾವರಣವನ್ನು ಹಾಳು ಮಾಡಲು ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದರ ಫಲವಾಗಿ, ಹಂಪಿಯನ್ನು ಯುನೆಸ್ಕೋ ತನ್ನ ‘ಅಪಾಯದ ಪಟ್ಟಿ’ಯಲ್ಲಿ ಸೇರಿಸಿದೆ: ಅದರ ನಿಯಮಗಳನ್ನು ಪಾಲಿಸದಿದ್ದರೆ ಮುಂದೊಮ್ಮೆ ಯುನೆಸ್ಕೊ ತನ್ನ ಪ್ರತಿಷ್ಠಿತ ವಿಶ್ವಪರಂಪರೆ ಪಟ್ಟಿಯಿಂದ ಹಂಪಿಯನ್ನು ತೆಗೆದು ಹಾಕಬಹುದು.

ಈ ಮಾತುಗಳೊಡನೆ ಈ ಕಿರುಕೃತಿಯನ್ನು ವಿದ್ವಾಂಸರ, ಕನ್ನಡಾಭಿಮಾನಿಗಳ, ಸಂಸ್ಕೃತಿ ಪ್ರೇಮಿಗಳ ಕೈಗೆ ವಿನಯದಿಂದ ಒಪ್ಪಿಸುತ್ತಿದ್ದೇನೆ.

ಎಂ. ಚಿದಾನಂದ ಮೂರ್ತಿ
ಬೆಂಗಳೂರು
೨೮.೮.೨೦೦೩