. ಬುಡಕಟ್ಟುಗಳು ಎಂದರೆ ಯಾರು?

ಜಗತ್ತಿನ ಯಾವುದೇ ಭಾಗಕ್ಕಿಂತ ಹೆಚ್ಚು ಬುಡಕಟ್ಟು ಜನರು ಭಾರತದಲ್ಲಿದ್ದಾರೆ. ಒಟ್ಟು ಜನಸಂಖ್ಯೆಯ ಸುಮಾರು ಏಳು ಪ್ರತಿಶತ ಜನರು – ಅಂದರೆ ಏಳುಕೋಟಿಗಿಂತಲೂ ಹೆಚ್ಚು ಜನರು – ಇಲ್ಲಿದ್ದಾರೆ. ದೇಶದ ಉಳಿದ ಕೆಲವು ರಾಜ್ಯಗಳಿಗೆ ಹೋಲಿಸಿ ನೋಡಿದರೆ ಕರ್ನಾಟಕದಲ್ಲಿ ಇವರ ಸಂಖ್ಯೆ ಕಡಿಮೆ. ಇಲ್ಲಿ ಸುಮಾರು ೩೦ ಲಕ್ಷ ಬುಡಕಟ್ಟು ಜನರಿದ್ದಾರೆ ಎಂದು ಅಂದಾಜಿದೆ.

ಸಂವಿಧಾನದಲ್ಲಿ ಬುಡಕಟ್ಟುಗಳೆಂದರೆ ಯಾರು ಎಂದು ನಿರ್ದುಷ್ಟವಾಗಿ ವ್ಯಾಖ್ಯಾನ ಕೊಟ್ಟಿಲ್ಲ. ಅವರನ್ನು ‘ಪರಿಶಿಷ್ಟ ಜನಾಂಗ’ (ಶೆಡ್ಯೂಲ್ಡ ಟ್ವ್ರಾಬ್‌) ಎಂದು ಕರೆಯಲಾಗಿದೆ. ಅವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರು ಎಂದು ಪರಿಗಣಿಸಿ ಅವರಿಗಾಗಿ ಕೆಲವು ಸವಲತ್ತುಗಳನ್ನೂ ರಕ್ಷಣೆಗಳನ್ನೂ ಒದಗಿಸಲಾಗಿದೆ.

೧೯೬೧ರಲ್ಲಿ ರಚಿತವಾದ ಧೇಬರ್ ಆಯೋಗದ ವರದಿಯಂತೆ ಬುಡಕಟ್ಟುಗಳೆಂದರೆ ಗುಡ್ಡಗಾಡು, ಅರಣ್ಯ, ಗುಹೆ, ಕಣಿವೆ ಮತ್ತಿತರ ಪ್ರತ್ಯೇಕಿತ ನೆಲಗಳಲ್ಲಿ ಒಟ್ಟಾಗಿ ವಾಸಿಸುವ ಸಮುದಾಯಗಳು. ಇವರು ಆಹಾರ ಸಂಗ್ರಹಣೆ, ಬೇಟೆ ಮತ್ತು ಆದಿಮ ಕೃಷಿಯನ್ನು ಅವಲಂಬಿಸಿರುವ ಜನರು. ಬುಡಕಟ್ಟುಗಳು ಚಿಕ್ಕಗಾತ್ರದ ಸಮುದಾಯಗಳಾಗಿದ್ದು ಹಿಂದುಳಿದ ತಂತ್ರಜ್ಞಾನವನ್ನು ಬಳಸುತ್ತವೆ. ಇಂಥ ಸಮುದಾಯಗಳಿಗೆ ತಮ್ಮದೇ ಆದ ಸಂಸ್ಕೃತಿ, ಭಾಷೆ, ಆಚಾರ ವಿಚಾರ, ದೈವ, ಸಂಪ್ರದಾಯ, ಊಟ ಉಡಿಗೆ, ಮಂತ್ರಮಾಟ ವಿಧಾನಗಳಿವೆ. ಕೆಲವೊಮ್ಮೆ ಉತ್ತರ ಕನ್ನಡದ ಸಿದ್ಧಿಗಳಂತೆ ಅಥವಾ ಆಸಾಮಿನ ನಾಗಾ ಜನರಂತೆ ಇವರಿಗೆ ವಿಶಿಷ್ಟ ಶಾರೀರಕ ಲಕ್ಷಣಗಳೂ ಇರಬಹುದು. ಅಥವಾ ನೆರೆಹೊರೆಯ ಗ್ರಾಮೀಣ ಜನಪದರ ಅಥವಾ ನಗರವಾಸಿಗಳ ಶಾರೀರಿಕ ಲಕ್ಷಣಗಳನ್ನೇ ಅವರು ಹೊಂದಿರಬಹುದು. ಆದರೆ ಪರಿಶಿಷ್ಟ ಜಾತಿಗಳಂತೆ ಸಾಂಪ್ರದಾಯಿಕ ಜಾತಿ ವ್ಯವಸ್ಥೆಯಲ್ಲಿ ಇವರು ಸೇರಿದವರಲ್ಲ.

 . ಕರ್ನಾಟಕದ ಬುಡಕಟ್ಟುಗಳು ಯಾವುವು?

 

ಕರ್ನಾಟಕದ ಬುಡಕಟ್ಟಗಳೆಂದರೆ ಕರ್ನಾಟಕದಲ್ಲಿ ವಾಸಿಸುವ ಬುಡಕಟ್ಟುಗಳು ಎಂದು ಮಾತ್ರ ಹೇಳಬಹುದು. ಅವುಗಳಲ್ಲಿ ಹಲವು ಕರ್ನಾಟಕಕ್ಕೆ ವಿಶಿಷ್ಟವಾದ ಸಮುದಾಯಗಳೆನ್ನುವಂತಿಲ್ಲ ಅಥವಾ ಕರ್ನಾಟಕದ ಮೂಲನಿವಾಸಿಗಳು ಅಥವಾ ಕರ್ನಾಟಕಕ್ಕೆ ಸೀಮಿತವಾದ ಸಮುದಾಯಗಳೆನ್ನುವಂತಿಲ್ಲ.  ಉದಾಹರಣೆಗೆ, ಕರ್ನಾಟಕದಲ್ಲಿ ಲಂಬಾಣಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಅವರು ನೆರೆಯ ಆಂಧ್ರ, ಮಹಾರಾಷ್ಟ್ರ, ಗುಜರಾತ, ರಾಜಸ್ತಾನಗಳಲ್ಲಿಯೂ ವ್ಯಾಪಕವಾಗಿ ಹರಡಿದ್ದಾರೆ.

ಕರ್ನಾಟಕದಲ್ಲಿ ಕಂಡು ಬರುವ ಮುಖ್ಯ ಬುಡಕಟ್ಟು ಸಮುದಾಯಗಳೆಂದರೆ ಇವು: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಸಿದ್ಧಿಗಳು, ಕಚ್ಚೆಗೌಳಿಗರು, ಗೊಂಡರು, ಹಾಲಕ್ಕಿ ಒಕ್ಕಲಿಗರು ಗಾಮೊಕ್ಕಲು, ಮುಕ್ರಿಗಳು ಇವರೆಲ್ಲ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡುಬಿ, ಕೊರಗ, ಮನ್ಯ, ಕುಡಿಯ, ಮೇರ, ಹಸಲ ಇತ್ಯಾದಿ ಬುಡಕಟ್ಟುಗಳು ವಾಸವಾಗಿದ್ದಾರೆ. ಮೈಸೂರು ಜಿಲ್ಲೆಯ ಬೆಟ್ಟ ಪ್ರದೇಶಗಳಲ್ಲಿ ಸೋಲಿಗ, ಜೇನುಕುರುಬ, ಕಾಡುಕುರುಬರು ವಾಸಿಸುತ್ತಾರೆ. ಕಾಡುಗೊಲ್ಲರು, ಮ್ಯಾಸಬೇಡರು ಚಿತ್ರದುರ್ಗ-ತುಮಕೂರು ಜಿಲ್ಲೆಗಳಲ್ಲಿರುವ ಪ್ರಮುಖ ಬುಡಕಟ್ಟುಗಳು, ಶಿವಮೊಗ್ಗ ಜಿಲ್ಲೆಯಲ್ಲಿ ಗೌಳಿಗರು ಮತ್ತು ಮೇದರು; ಕೊಡಗು ಜಿಲ್ಲೆಯಲ್ಲಿ ಎರವ, ಪಣಿಯ ಮತ್ತು ಜೇನುಕುರುಬರು; ಬೆಂಗಳೂರು ಜಿಲ್ಲೆಯಲ್ಲಿ ಇಲ್ಲಿಗ-ಇರುಳಿಗರು; ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೌಡಾಲು ಜನರು; ತುಮಕೂರು ಕೋಲಾರಗಳಲ್ಲಿ ಅಡವಿ ಚೆಂಚರು ಮತ್ತು ಹೆಳವರು ಪ್ರಮುಖರು. ಸುಮಾರು ಎರಡು ಲಕ್ಷ ಜನಸಂಖ್ಯೆ ಹೊಂದಿರುವ ಲಂಬಾಣಿ ಬುಡಕಟ್ಟಿನವರು (ಈಗ ಪರಿಶಿಷ್ಟ ಜಾತಿ ಎಂದು ನಮೂದು ಪಡೆದಿರುವ ಜನರು) ಕಲ್ಬುರ್ಗಿ, ಬಿಜಾಪೂರ ಶಿವಮೊಗ್ಗ ಜಿಲ್ಲೆಗಳಲ್ಲೂ ಹೈದರಾಬಾದ ಕರ್ನಾಟಕದ ಇತರ‍ಜಿಲ್ಲೆಗಳಲ್ಲೂ ಕಂಡುಬರುತ್ತಾರೆ. ಬೀದರ, ಕಲ್ಬುರ್ಗಿ, ರಾಯಚೂರ ಜಿಲ್ಲೆಗಳಲ್ಲಿ ರಾಜಗೊಂಡರು ಚದುರಿದಂತೆ ಕಂಡುಬರುತ್ತಾರೆ.

ಇವರೆಲ್ಲ ಹೆಚ್ಚುಕಡಿಮೆ ಶಾಶ್ವತವಾಗಿ ಒಂದೆಡೆ ನೆಲೆನಿಲ್ಲುವ ಬುಡಕಟ್ಟುಗಳಾದರೆ, ಕರ್ನಾಟಕದಲ್ಲಿ ಹಲವು ಅಲೆಮಾರಿ ಮತ್ತು ಅರೆ-ಅಲೆಮಾರಿ ಜನಾಂಗಗಳೂ ಇವೆ, ಇಂಥ ಸಂಚಾರಿಗಳಲ್ಲಿ ಕಿನ್ನರ ಜೋಗಿ, ಹಕ್ಕಿಪಿಕ್ಕಿ, ಕೊರಮ, ದೊಂಬ, ಸುಡುಗಾಡ ಸಿದ್ಧ, ಟೋಕ್ರೆ ಕೋಳಿ, ಬುಡಬುಡಕೆ, ದುರುಗಾಮುರುಗಿ, ಹಗಲುವೇಷ, ಕುರುಮಾಮಾ, ಹರಿಣಶಿಕಾರಿ ಇವರ ಹೆಸರುಗಳನ್ನು ಎತ್ತಿ ಹೇಳಬಹುದು.

 

. ಬುಡಕಟ್ಟು ನ್ಯಾಯಾಲಯಗಳ ರೂಪರಚನೆ

ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ತಮ್ಮ ಜನರಿಗಾಗಿಯೇ ರಚಿಸಿಕೊಂಡಿರುವ ಸ್ಥಳೀಯ ನ್ಯಾಯಾಲಯಗಳಿವೆ. ಅವುಗಳನ್ನು ಕಟ್ಟೆಮನೆ, ನ್ಯಾಯದ ಕಟ್ಟೆ, ನ್ಯಾಯದ ಮನೆ, ದೈವದ ಮನೆ, ದೈವದ ಚಾವಡಿ, ನ್ಯಾಯ ಪಂಚಾಯತಿ, ಪಂಚಾಯತಿ ಕಟ್ಟೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಬುಡಕಟ್ಟಿನ ವಿಶಿಷ್ಟ ಭಾಷೆಯಲ್ಲಿ ಅದಕ್ಕೊಂದು ಸ್ಥಳೀಯ ಹೆಸರಿರಬಹುದು, ಉದಾಹರಣೆಗೆ, ಲಂಬಾಣಿಗಳು ಅದನ್ನು ತಮ್ಮ ಭಾಷೆಯಲ್ಲಿ ನಸಾಬ್‌(ಸಭೆ, ಪಂಚಾಯಿತಿ) ಎಂದೋ, ನೇವ್ ನಸಾಬ್‌ಅಥವಾ ಗೋರ್ ಪಂಚಾಯತ್‌ಎಂದೋ ಕರೆಯುತ್ತರೆ. ಕೆಲವೊಮ್ಮೆ ಈ ಸಮುದಾಯಗಳಲ್ಲಿ ನಮ್ಮ ಮುನಸಿಫ್‌ಕೋರ್ಟುಗಳಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ವರೆಗೆ ಶ್ರೇಣಿ ಕ್ರಮದಲ್ಲಿರುವ-ಅಂದರೆ ಒಂದರ ಮೇಲೆ ಇನ್ನೊಂದು ಎಂಬಂತಿರುವ – ವ್ಯವಸ್ಥೆಯಿದೆ. ಒಂದು ಉದಾಹರಣೆ ಕೊಡುವುದಾದರೆ ಚಿತ್ರದುರ್ಗದ ಕಾಡುಗೊಲ್ಲರಲ್ಲಿ ಹಟ್ಟಿ, ಕಣತಿ, ಅಂಬು, ಗುಡಿಕಟ್ಟುಗಳಿದ್ದು ಅಂತಿಮವಾಗಿ ಇಡೀ ಸಮುದಾಯಕ್ಕೆ ಒಂದು ಕಟ್ಟೆಮನೆ ಇದೆ. ಇದು ಬುಡಕಟ್ಟಿನ ಸುಪ್ರೀಮ್‌ಕೋರ್ಟಿನಂತಿದೆ.

ಎಲ್ಲ ಬುಡಕಟ್ಟುಗಳ ನ್ಯಾಯತೀರ್ಮಾನ ವ್ಯವಸ್ಥೆಯಲ್ಲಿ ಕಾಣುವ ಕೆಲವು ಸಾಮಾನ್ಯ ಲಕ್ಷಣಗಳನ್ನೀಗ ಚರ್ಚಿಸಬಹುದು. ಸಮುದಾಯಗಳು ಸಣ್ಣದಿರಲಿ ಅಥವಾ ದೊಡ್ಡದಿರಲಿ, ತಂಟೆ-ತಗಾದೆ ತಪ್ಪುನೆಪ್ಪುಗಳನ್ನು ವಿಚಾರಿಸಿ ತಪ್ಪಿತಸ್ಥರನ್ನು ಶಿಕ್ಷಿಸಲು ಒಂದು ನ್ಯಾಯತೀರ್ಮಾನ ವ್ಯವಸ್ಥೆ ಇರುತ್ತದೆ. ಸ್ಥಳೀಯವಾಗಿ ಅದಕ್ಕೊಂದು ಹೆಸರು ಇರುತ್ತದೆ, ನೇವ್‌ನಸಾಬ, ಗೋರ್ ಪಂಚಾಯತ, ಸಭಾ, ಪಂಚಾಯ್ತಿ ಹೀಗೆ ಏನಾದರೊಂದು ಹೆಸರು ಇರಬಹುದು. ಚಿಕ್ಕಗಾತ್ರದ ಸರಳ ಸಮಾಜಗಳಲ್ಲಿ ಶ್ರೇಣಿಕ್ರಮದ ಕಟ್ಟೆಮನೆಗಳಿಲ್ಲ. ಅಲ್ಲಿ ನಾಯಕನೇ ಎಲ್ಲ ವ್ಯವಹಾರಗಳ ಜೊತೆಗೆ ನ್ಯಾಯತೀರ್ಮಾನವನ್ನೂ ನೋಡಿಕೊಳ್ಳುತ್ತಾನೆ. ಉದಾಹರಣೆಗೆ, ಹಾವು ಹಿಡಿಯುವ ಯಾನಾಡಿಗಳು ಆಂಧ್ರಮೂಲದವರಿದ್ದು ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರಗಳಲ್ಲಿ ಹರಡಿಕೊಂಡಿದ್ದಾರೆ. ಇವರಲ್ಲಿ ನಾಯಕ ಅಥವಾ ಯಜಮಾನನೇ ಎಲ್ಲಾ ನ್ಯಾಯ ತೀರ್ಮಾನ ಮಾಡುತ್ತಾನೆ. ಬೇರೆ ನ್ಯಾಯವ್ಯವಸ್ಥೆಗಳಿಲ್ಲ. ಕ್ವಚಿತ್ತಾಗಿ ಕೆಲವು ಸಮುದಾಯಗಳಲ್ಲಿ ಸ್ವಂತ ಕಟ್ಟೆಮನೆಗಳು ಇಲ್ಲದೇ ಇರಬಹುದು. ಆಗ ಹತ್ತಿರದ ಇನ್ನೊಂದು ಸಮುದಾಯದ ಕಟ್ಟೆಮನೆಗೆ ನ್ಯಾಯ ಕೊಂಡೊಯ್ಯುತ್ತಾರೆ. ಉದಾಹರಣೆಗೆ, ದೊಕ್ಕಲು ಮಕ್ಕಳು ತಮ್ಮ ಕಟ್ಟೆಮನೆಗೆ ಹತ್ತಿರದಲ್ಲಿರುವ ಹಕ್ಕಿಪಿಕ್ಕಿಗಳು, ಬುಡಬುಡಕಿಗಳಲು, ಕೊರಚರು ಬಂದು ನ್ಯಾಯತೀರ್ಮಾನ ಮಾಡಿಕೊಳ್ಳುತ್ತಾರೆಂದು ಹೇಳುತ್ತಾರೆ. ಆದರೆ ಚಿತ್ರದುರ್ಗದ ಕಾಡುಗೊಲ್ಲರು ವಿವಿಧ ರೀತಿಯ ಶ್ರೇಣಿಕ್ರಮದ ಕಟ್ಟೆಮನೆಗಳನ್ನು ಹೊಂದಿದ್ದಾರೆ. ನಾಲ್ಕನೆಯ ರೀತಿಯೊಂದಿದೆ, ಅದನ್ನು ಪ್ರಾದೇಶಿಕ ಕಟ್ಟೆಮನೆ ಎನ್ನಬಹುದು. ಉದಾಹರಣೆಗೆ, ಸುಡಗಾಡು ಸಿದ್ಧರಲ್ಲಿ ಗೋಲಕಂಡ, ಹರಪನಹಳ್ಳಿ, ಗದ್ವಾಲಗಳಲ್ಲಿ ಪ್ರಾದೇಶಿಕ ಕಟ್ಟೆಮನೆಗಳಿವೆ, ಹಾಗೆಯೇ ಡೊಕ್ಕಲು ಮಕ್ಕಳು ಇಡೀ ಸಮುದಾಯದ ಅನುಕೂಲಕ್ಕಾಗಿ ನಾಲ್ಕು ಕಡೆಗಳಲ್ಲಿ ತಮ್ಮ ಕಟ್ಟೆಮನೆಗಳನ್ನು ಮಾಡಿಕೊಂಡಿದ್ದಾರೆ. ಹಿಂದೆ ಇವರಲ್ಲಿ ಏಳುಹಳ್ಳಿ, ತಾಲ್ಲೂಕು, ಜಿಲ್ಲೆ ಪ್ರಾಂತ್ಯಗಳಿಗೆ ಒಂದರಂತೆ ಕಟ್ಟೆಮನೆ ಇತ್ತಂತೆ. ಆದರೆ ಈಗೀಗ ಮುದುಗಲ್‌, ಚಿಕ್ಕ ಮ್ಯಾಗಳಗೇರಿ, ಚಿಂತಾಮಣಿ, ಆಧೋನಿ ಹೀಗೆ ನಾಲ್ಕೇ ನಾಲ್ಕು ಪ್ರಾದೇಶಿಕ ಕಟ್ಟೆಮನೆಗಳಿದ್ದು ಅವುಗಳಲ್ಲಿ ಯಾವ ಕಟ್ಟೆಮನೆಗಾದರೂ ಹೋಗಿ ನ್ಯಾಯ ಪಡೆಯಬಹುದು ಎಂದು ಕೆಕೆಪುರ ಹೇಳುತ್ತಾರೆ.

 . ಕೆಲವು ಕಟ್ಟೆಮನೆಗಳು

 

ನಾವೀಗ ನಮ್ಮ ಬುಡಕಟ್ಟುಗಳಲ್ಲಿ ಹೆಚ್ಚು ಪರಿಚಿತವಾಗಿರುವ ಕೆಲವು ಕಟ್ಟೆಮನೆಗಳ ವೈಖರಿಯನ್ನು ನೋಡೋಣ. ಮೊದಲಿಗೆ ಚಿತ್ರದುರ್ಗದ ಕಾಡುಗೊಲ್ಲರು. ಅವರ ಸಾಮಾಜಿಕ ಸಂಘಟನೆಯಲ್ಲಿ ಅತಿ ಸಣ್ಣ ಸ್ಥಳೀಯ ಗುಂಪೆಂದರೆ ಹಟ್ಟಿ. ಹಟ್ಟಿಯ ಜಗಳ ತಂಟೆ ತಕರಾರುಗಳನ್ನು ಹಟ್ಟಿಯ ಹಿರಿಯರೇ ಬಗೆಹರಿಸುತ್ತಾರೆ. ಹಲವಾರು ಹಟ್ಟಿಗಳು ಸೇರಿ ಒಂದು ಕಣತಿ, ಅನೇಕ ಕಣತಿಗಳು ಸೇರಿ ಒಂದು ಅಂಬು ಅನೇಕ ಅಂಬುಗಳು ಸೇರಿ ಒಂದು ಗುಡಿಕಟ್ಟು, ಹಲವು ಗುಡಿಕಟ್ಟುಗಳು ಸೇರಿ ಒಂದು ಕಟ್ಟೆಮನೆ ರಚನೆಯಾಗುತ್ತದೆ. ಹಟ್ಟಿ, ಕಣತಿ, ಅಂಬು, ಗುಡಿಕಟ್ಟುಗಳಲ್ಲಿ ನ್ಯಾಯ ತೀರ್ಮಾನವೊಂದೇ ಅಲ್ಲದೆ ಜನರ ಹಲವಾರು ಕಾರ್ಯಚಟುವಟಿಕೆಗಳ  ಉಸ್ತುವಾರಿ ನಡೆಯುತ್ತದೆ. ಆದರೆ ಇವರ ಕಟ್ಟೆಮನೆಗಳಿಗೆ ನ್ಯಾಯತೀರ್ಮಾನವೊಂದೇ ಕೆಲಸ, ಇಲ್ಲಿ ಕಣತಿ, ಅಂಬು, ಗುಡಿಕಟ್ಟುಗಳಲ್ಲಿ ತೀರ್ಮಾನವಾಗದ ಪ್ರಕರಣಗಳನ್ನು ಮಾತ್ರ ಕಟ್ಟೆಮನೆಯಲ್ಲಿ ತೀರ್ಮಾನ ಮಾಡುತ್ತಾರೆ. ಈ ತೀರ್ಮಾನಗಳನ್ನು ಜಾರಿಗೊಳಿಸುವುದು ಗುಡಿಕಟ್ಟಿನ ಕೆಲಸ. ಕಾಡುಗೊಲ್ಲರ ಕಟ್ಟೆಮನೆಗಳ ವಿಶೇಷವೆಂದರೆ ನ್ಯಾಯ ತೀರ್ಮಾನಕ್ಕೆ ಫಿರ್ಯಾದಿ ಮತ್ತು ಆಪಾದಿತರಿಬ್ಬರೂ ಕಟ್ಟೆಮನೆಗೆ ಹೋಗಬೇಕೆಂದಿಲ್ಲ. ವ್ಯಾಜ್ಯ ನಡೆದ ಗುಡಿಕಟ್ಟಿನವರು ಬುಡಕಟ್ಟಿನ ಮೂರು ಕಟ್ಟೆಮನೆಗಳಿಂದ ಒಬ್ಬೊಬ್ಬ ಪ್ರತಿನಿಧಿಯನ್ನು ಕರೆಸಿಕೊಂಡು, ತಮ್ಮ ಗುಡಿಕಟ್ಟಿನಲ್ಲೇ ತೀರ್ಮಾನಮಾಡಬಹುದೆಂದು ಕಾಡುಗೊಲ್ಲ ಬುಡಕಟ್ಟು ಅಧ್ಯಯನ ಮಾಡಿದ ತೀ.ನಂ. ಶಂಕರನಾರಾಯಣ ಹೇಳಿದ್ದಾರೆ.

ಈಗಾಗಲೇ ಹೇಳಿದಂತೆ ಸುಡುಗಾಡು ಸಿದ್ಧರಲ್ಲಿ ಪ್ರಾದೇಶಿಕ ಕಟ್ಟೆಮನೆಗಳ ವ್ಯವಸ್ಥೆಯಿದೆ. ಅವರು ಗೋಲಕಂಡಕಟ್ಟೆ, ಹರಪನಹಳ್ಳಿ ಕಟ್ಟೆ, ಗದ್ವಾಲ ಕಟ್ಟೆ ಎಂದು ಪ್ರಾದೇಶಿಕವಾಗಿ ವಿಭಜನೆ ಮಾಡಿಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ಮಾವಿನ ಹಳ್ಳಿ, ಕಲ್ಲೇಸ್ವಾಮಿನ ಹಳ್ಳಿ, ಕಡೂರು ತಾಲೂಕಿನ ಅಂಚೆಸೋಮನ ಹಳ್ಳಿ, ಮತ್ತಿಘಟ್ಟಿ ಬಕ್ಕಪ್ಪನ ಕೊಪ್ಪಲಿನಲ್ಲಿ ಅವರ ಕಟ್ಟೆಮನೆಗಳಿವೆ.

ಲಂಬಾಣಿ ಬುಡಕಟ್ಟಿನಲ್ಲಿ ಸ್ಥಳೀಯ ಗುಂಪಾದ ತಾಂಡಾಗಳಲ್ಲಿ ಗುಂಪಿನ ನಾಯಕ ಮತ್ತು ಇತರ ಹಿರಿಯರು ಕೂಡಿ ನ್ಯಾಯ ತೀರ್ಮಾನ ಮಾಡುವರು. ಅವರ ತೀರ್ಪು ತೃಪ್ತಿಕೊಡದಿದ್ದರೆ, ಬೇರೆ ಬೇರೆ ತಾಂಡಾಗಳ ಪರಿಣತ ನಾಯಕರುಗಳನ್ನು ‘ಜೋಡಿಬಿಟ್ಟು’ ಕರೆದುಕೊಂಡು ನ್ಯಾಯ ತೀರ್ಮಾನ ಮಾಡುತ್ತಾರೆ. ಹೀಗೆ ಇದೊಂದು ಮೇಲ್ಮನವಿ ನ್ಯಾಯವ್ಯವಸ್ಥೆ ಎನ್ನಬಹುದು.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಗೊಂಡರ ಹೆಚ್ಚಿನ ತಮಟೆ ತಕರಾರು ವ್ಯಾಜ್ಯಗಳು ಊರಿನ ನೆರೆಗೊಂಡನ ಬಳಿಗೆ ಹೋಗಿ ತೀರ್ಮಾನವಾಗುತ್ತದೆ. ಆದರೆ ವಾದಿಗೆ ಅಂಥ ತೀರ್ಮಾನ ಒಪ್ಪಿಗೆಯಾಗದಿದ್ದರೆ ಆತ ಸೀಮೆಗೊಂಡನಲ್ಲಿಗೆ ಹೋಗಿ ನ್ಯಾಯ ಕೇಳಬಹುದಾಗಿದೆ. ಅದೇ ಜಿಲ್ಲೆಯ ಗಾಮೊಕ್ಕಲು ಜನರಲ್ಲಿ ವರ್ಷಕ್ಕೊಮ್ಮೆ ಗ್ರಾಮಕೂಟ ನಡೆಯುತ್ತದೆ. ಇಲ್ಲಿ ಜನರ ತಂಟೆ ತಕರಾರುಗಳನ್ನು ಗ್ರಾಮಕೂಟದ ಬುದುವಂತ ಎಂಬ ಮುಖ್ಯಸ್ಥನೂ ಇತರ ಬುದುವಂತರೂ ಸೇರಿ ತೀರ್ಮಾನಿಸುತ್ತಾರೆ. ಅಲ್ಲಿ ಬಗೆಹರಿಯದ ವ್ಯಾಜ್ಯಗಳು ಸೀಮಾಕೂಟದ ಬಳಿಗೆ ಬರುತ್ತವೆ. ಆ ಸೀಮಾಕೂಟದ ಬುದುವಂತನು ಗ್ರಾಮ ಬುದುವಂತರ, ಪಂಚರ ಮತ್ತು ಜಾತಿಯ ಹಿರಿಯರ ಸಲಹೆ ಪಡೆದು ಎಲ್ಲರ ಒಮ್ಮತದ ತೀರ್ಮಾನವನ್ನು ಕೊಡುತ್ತಾನೆ. ಇದನ್ನು ಎರಡೂ ಪಕ್ಷಗಳವರು ಒಪ್ಪಿಕೊಳ್ಳಲೇ ಬೇಕು.

ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರಲ್ಲಿಯೂ ಸ್ಥಳೀಯವಾಗಿ ಅಂದರೆ ಅವರವರ ಹಟ್ಟಿಯಲ್ಲಿಯೇ ನ್ಯಾಯತೀರ್ಮಾನವಾಗುವುದು. ಹಟ್ಟಿಯ ಯಜಮಾನ ಮತ್ತು ಪಂಚಾಯ್ತಿ ದೈವದವರು ವ್ಯಾಜ್ಯ ಬಗೆಹರಿಸುವರು. ಅಲ್ಲಿ ಬಗೆಹರಿಯದ ವ್ಯಾಜ್ಯಗಳು ಆರೇಳು ಹಟ್ಟಿಗಳಿಗೆ ಒಂದರಂತೆ ಇರುತ್ತಿದ್ದ ಕಟ್ಟೆಮನೆಗಳಲ್ಲಿ ತೀರ್ಮಾನವಾಗುತ್ತಿದ್ದವು. ಜಿಲ್ಲೆಯಲ್ಲಿ ಮ್ಯಾಸಬೇಡರ ಹನ್ನೆರಡು ಕಟ್ಟೆಮನೆಗಳಿದ್ದರೂ ಗೋನೂರು, ನನ್ನಿವಾಳ ಮತ್ತು ನಾಯಕನಹಟ್ಟಿ ಈ ಮೂರು ಪ್ರಮುಖವೆನ್ನಿಸಿಕೊಂಡಿವೆ. ಉಳಿದ ಒಂಬತ್ತು ಕಟ್ಟೆಮನೆಗಳಲ್ಲಿ ಇತ್ಯರ್ಥವಾಗದ ವ್ಯಾಜ್ಯಗಳು ಇಲ್ಲಿ ಇತ್ಯರ್ಥವಾಗುತ್ತಿದ್ದವು. ಹೀಗೆ ಸ್ಥಳೀಯ ಹಟ್ಟಿಗಳಲ್ಲಿ ತೀರ್ಮಾನವಾಗದಿದ್ದರೆ ಹಲವು ಹಟ್ಟಿಗಳಿಂದ ಕೂಡಿದ ಸೀಮೆಯ ಕಟ್ಟೆಮನೆಗಳಲ್ಲಿ ಅಂತಿಮ ತೀರ್ಮಾನವಾಗುತ್ತಿತ್ತು.

ಹೀಗೆ ಹೆಚ್ಚುಕಡಿಮೆ ಎಲ್ಲ ಸಣ್ಣ ದೊಡ್ಡ ಸಮುದಾಯಗಳಲ್ಲೂ ತಮ್ಮ ತಂಟೆ ತಗಾದೆ ಜಗಳಗಳನ್ನು ಬಗೆಹರಿಸಿಕೊಳ್ಳಲು, ತಪ್ಪುನೆಪ್ಪುಗಳನ್ನು ಶಿಕ್ಷಿಸಲು ಬುಡಕಟ್ಟು ನ್ಯಾಯಾಲಯಗಳಿದ್ದವು ಎನ್ನಬಹುದು. ಅಂಥ ಕಟ್ಟೆಮನೆ ಅಥವಾ ಸ್ಥಳೀಯ ನ್ಯಾಯದಾನ ವ್ಯವಸ್ಥೆ ಇಲ್ಲದ ಸಮುದಾಯಗಳು ಕ್ವಚಿತ್ತಾಗಿ ತಮ್ಮ ನೆರೆಹೊರೆಯಲ್ಲಿರುವ ಕಟ್ಟೆಮನೆಯಲ್ಲಿ ನ್ಯಾಯ ಪಡೆಯಲು ಹೋಗುವುದು ರೂಢಿಯಲ್ಲಿತ್ತು. ಪ್ರಸ್ತುತ ಉಪನ್ಯಾಸದಲ್ಲಿ ಕರ್ನಾಟಕದ ಕೆಲವು ಪ್ರಮುಖ ಬುಡಕಟ್ಟುಗಳ ನ್ಯಾಯ ತೀರ್ಮಾನ ವ್ಯವಸ್ಥೆಯನ್ನು ಮಾತ್ರ ಸಮೀಕ್ಷೆ ಮಾಡೋಣ.

  . ನ್ಯಾಯ ತೀರ್ಮಾನ ಮಾಡುವವರು ಯಾರು? ಜಾರಿಗೊಳಿಸುವವರು ಯಾರು?

 

ಬುಡುಕಟ್ಟುಗಳ ಪ್ರತಿಯೊಂದು ಹಟ್ಟಿ, ಹಾಡಿ ಅಥವಾ ತಾಂಡಾ ಅಥವಾ ಇಂಥ ಒಂದೊಂದು ಸ್ಥಳೀಯ ಗುಂಪಿಗೂ ಒಬ್ಬ ಯಜಮಾನ ಇರುತ್ತಾನೆ. ಅವನನ್ನು ನಾಯಕ, ಗೌಡ, ನಾಡಗೌಡ, ಬುದುವಂತ, ಪಂಚರು, ಜಾಂತಾಗಡಿ, ಹಿರಿಯ-ಪೆದ್ದ, ಮನುಷಡು, ಮುಖಿಯಾ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಈತ ಮತ್ತು ಬುಡಕಟ್ಟಿಗೆ ಸೇರಿದ ಇತರ ಕೆಲವು ಹಿರಿಯರು ಬುಡಕಟ್ಟಿನ ನ್ಯಾಯ ತೀರ್ಮಾನದಲ್ಲಿ ಹಕ್ಕುದಾರರು. ದೈವದವರು ಅಥವಾ ಪಂಚಾಯತಿಯವರು ಎಂದು ಕರೆಯಿಸಿಕೊಳ್ಳುವ ಹಿರಿಯರು ಇದರಲ್ಲಿ ಭಾಗವಹಿಸುವುದೂ ಇದೆ. ಅವಶ್ಯ ಬಿದ್ದಾಗ ಹಟ್ಟಿಯ ಎಲ್ಲ ಕುಟುಂಬಗಳ ಒಬ್ಬೊಬ್ಬ ಹಿರಿಯ ಸದಸ್ಯನನ್ನು ನ್ಯಾಯ ತೀರ್ಮಾನದಲ್ಲಿ ಭಾಗವಹಿಸಲು ಕರೆಯುವ ಪದ್ಧತಿ ಹಲವು ಸಮುದಾಯಗಳಲ್ಲಿ ರೂಢಿಯಲ್ಲಿದೆ.

ಹೆಳವರ ಕಟ್ಟೆಮನೆ ಸಂಘಟನೆಯಲ್ಲಿ ದೈವದವರು, ಸಮಾಜದವರು, ಪಂಚರು ಎಂದು ಕರೆಯಿಸಿಕೊಳ್ಳುವ ಹಿರಿಯರು ನ್ಯಾಯತೀರ್ಮಾನ ಮಾಡುತ್ತಾರೆ. ಕಟ್ಟೆ ಮನೆಗೆ ಅವರ ದೃಷ್ಟಿಯಲ್ಲಿ ನ್ಯಾಯದೇವತೆಯ ಸ್ಥಾನವಿದೆ. ದೈವದವರೇ ಅವರಿಗೆ ದೇವರು, ಮತ್ತು ಅವರೇ ಅಂತಿಮ ನಿರ್ಣಯ ಮಾಡುವವರು.

ಕಾಡಿನಲ್ಲಿ ವಾಸಿಸುವ ಬೇಟೆಗಾರರೂ ಹಾವು ಹಿಡಿಯುವವರೂ ಆದ ಯಾನಾಡಿಗಳು ಕೆಲವು ಬುಡಕಟ್ಟುಗಳಲ್ಲಿರುವಂಥ ಶ್ರೇಣೀಕೃತ ಕಟ್ಟೆಮನೆಗಳನ್ನು ಕಟ್ಟಿಕೊಂಡಿಲ್ಲ. ಅವರಲ್ಲಿ ಗುಂಪಿನ ಮುಖ್ಯಸ್ಥನೇ ಎಲ್ಲ ನಿಯಮಗಳನ್ನು ಹೇಳುತ್ತಾನೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡುತ್ತಾನೆ. ಅವನೇ ಕುಲಪಂಚಾಯಿತಿಯ ಮುಖ್ಯಸ್ಥನೂ ಹೌದು. ಮದುವೆ, ವಿವಾಹ ವಿಚ್ಛೇದನ, ಪುನರ್ವಿವಾಹ, ಅನೈತಿಕ ಸಂಬಂಧ ಮುಂತಾದ ಸಮಸ್ಯೆಗಳು ತಲೆದೋರಿದಾಗ ಅವನು ಹಟ್ಟಿಯ ಕುಲಪಂಚಾಯಿತಿಯ ಸಹಾಯದೊಂದಿಗೆ ಪರಿಹಾರ ಹುಡುಕುತ್ತಾನೆಂದು ಟಿ. ನಾರಾಯಣ ಹೇಳುತ್ತಾರೆ.

ಮೈಸೂರು ಜಿಲ್ಲೆಯ ಬೆಟ್ಟಗಳಲ್ಲಿರುವ ಸೋಲಿಗರ ಪೋಡುಗಳಲ್ಲಿ ನ್ಯಾಯಮಾಡುವ ಕಟ್ಟೆಮನೆಗಳಿವೆ. ಇವುಗಳಿಗೆ ಎರಡು ಪ್ರಭಾವಿ ಕುಲಗಳಾದ ಹಳೇರು ಮತ್ತು ಚಲಿಕಿರಿ ಕುಲಗಳಿಗೆ ಸೇರಿದ ಹಿರಿಯರು ‘ಯಜಮಾನ’ ರಾಗಬಹುದು. ಯಜಮಾನನಿಗೆ ಸಹಾಯಮಾಡಲು ಏಳು ಪೋಡುಗಳಿಗೆ ಒಬ್ಬರಂತೆ ಒಬ್ಬ ಪಟ್ಟಿವಾಲ ಅಥವಾ ಪಟೇಲ ಹಾಗೂ ಒಬ್ಬ ಚಲುವಾದಿ ಇರುತ್ತಾರೆ. ಯಜಮಾನನ ಆಜ್ಞೆಯಂತೆ ಅಪರಾಧಿಗಳನ್ನು ಕಟ್ಟೆಮನೆಗೆ ಕರೆತರುವುದು ಅವರ ಕೆಲಸ. ಹಿರಿಯರು ಶಿಕ್ಷೆ ವಿಧಿಸಿದಾಗ ಅದರಂತೆ ಅಪರಾಧಿಯನ್ನು ಥಳಿಸುವುದು ಕೋಲಕಾರರ ಕೆಲಸ.

ಉತ್ತರ ಕನ್ನಡ ಜಿಲ್ಲೆಯ ಗಾಮೊಕ್ಕಲು ಜನರ ಹಳ್ಳಿಗಳ ಮುಖಂಡರಿಗೆ ಯಜಮಾನ, ಬುದುವಂತ ಅಥವಾ ಪಟಗಾರ ಎಂದು ಕರೆಯುತ್ತಾರೆ. ನ್ಯಾಯತೀರ್ಮಾನದ ಕೆಲಸದಲ್ಲಿ ಐದು ಮಂದಿ ಚುರುಕು ಬುದ್ಧಿಯ ಪಂಚರು ಸಹಾಯ ಮಾಡುತ್ತಾರೆ. ಇತರ ಅನೇಕ ಬುಡಕಟ್ಟುಗಳಲ್ಲಿರುವಂತೆ ಗಾಮೊಕ್ಕಲುಗಳ ಮುಖ್ಯಸ್ಥನಾದ ಬುದುವಂತನಿಗೆ ಸಹಾಯ ಮಾಡಲು ಕೋಲ್ಕಾರರೆಂಬ ಸಹಾಯಕರಿದ್ದಾರೆ. ಕುಮಟಾ ಹೊನ್ನಾವರ ಕಡೆಗಳಲ್ಲಿರುವ ಮುಕ್ರಿ ಜನಾಂಗದಲ್ಲಿ ಕೂಡ ಬುದುವಂತ ಮತ್ತು ಕೋಲ್ಕಾರ ನ್ಯಾಯ ನಿರ್ಣಯ ಕೆಲಸ ನಿರ್ವಹಿಸುತ್ತಾರೆ.

ಲಂಬಾಣಿ ಜನರಲ್ಲಿ ನ್ಯಾಯನಿರ್ಣಯವನ್ನು ಅವರ ‘ನೇವ್‌ನಸಾಬ್‌’ ಅಥವಾ ನ್ಯಾಯ ಸಭಾ ನೋಡಿಕೊಳ್ಳುತ್ತದೆ. ಸಣ್ಣರಾಮ ಅವರು ಲಂಬಾಣಿಗರ ನ್ಯಾಯ ಪಂಚಾಯತಿಗಳ ರಚನೆಯ ಬಗ್ಗೆ ಹೀಗೆ ಹೇಳುತ್ತಾರೆ: ‘ಪಂಚಾಯಿತಿಗಳು ತಮ್ಮದೇ ಆದ ಅಲಿಖಿತ ಸಂವಿಧಾನವನ್ನು ಹೊಂದಿರುತ್ತವೆ. ಲಂಬಾಣಿ ತಾಂಡಗಳ  ಅಲಿಖಿತ ಸಂವಿಧಾನದಲ್ಲಿ ನಾಯಕ, ಕಾರಭಾರಿ, ಢಾವರುಗಳು ಮುಖ್ಯಸ್ಥರಾಗಿರುತ್ತಾರೆ. ಅವರೊಂದಿಗೆ ತಾಂಡಾದ ಹಿರಿಯರು, ಬುದ್ಧಿವಂತರು ಸಹ ಇರುತ್ತಾರೆ. ತಾಂಡಾದ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವುದು, ನಿರ್ಣಯಗಳನ್ನು ತೆಗೆದುಕೊಳ್ಳುವುದು, ಡಾವಸಾಣರ ಸಮಿತಿಗೆ ಸೇರಿರುತ್ತದೆ. ಆದರೆ ಸಭೆ ಸೇರದೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ. ಸಭೆಯಲ್ಲಿ ತಾಂಡಾದ ಜನರು ಡಾವ್‌ಸಾಣರ ತೀರ್ಮಾನಗಳಿಗೆ ಬದ್ಧರಾಗಿರುತ್ತಾರೆ ಮತ್ತು ಒಪ್ಪಿಗೆ ಕೊಡುತ್ತಾರೆ’.

ಮರಾಠಿ ಮಾತನಾಡುವ ಕಚ್ಚೆಗೌಳಿಗರಲ್ಲಿ ನ್ಯಾಯ ಪಂಚಾಯಿತಿ ವಾಡೆಯ ಹಿರಿಯರನ್ನು ಒಳಗೊಂಡಿರುತ್ತದೆ. ಇವರಲ್ಲಿ ಒಬ್ಬನು ಮುಖ್ಯಸ್ಥನಾಗಿದ್ದು ಅವನಿಗೆ ‘ಜಾಂತಾಗಡಿ’ ಎಂಬ ಹೆಸರಿದೆ. ಪಂಚಾಯತದಾರರಿಗೆ ‘ಜಾಂತಾ ಲೋಕ್‌’ ಎನ್ನುತ್ತಾರೆ. ಜಾಂತಾಗಡಿಗೆ ಸಹಾಯ ಮಾಡಲು ವಾಡೆಗೊಬ್ಬ ಪಟೇಲನಿರುತ್ತಾನೆ. ಇವನು ಸಾಮಾನ್ಯವಾಗಿ ಕೋಳಿಕಾರ್ ಕುಳಿಗೆ ಸೇರಿದವನು. ಹಿಂದೆ ಶ್ರೇಷ್ಠ ಕುಳಿಯಾದ ಯಡಿಗ್ಯಾ ಹಿರಿಯನ ಮನೆಯಲ್ಲಿ ನ್ಯಾಯ ಪಂಚಾಯಿತಿ ನೆರೆಯುತ್ತಿದ್ದರೆ ಈಗ ಅದು ಊರಿನ ಗುಡಿಯ ಮುಂದೆ ನೆರೆಯುವುದು ಸಾಮಾನ್ಯವಾಗಿದೆ.

ಶಿರಾಲಿಯ ಗೊಂಡರಲ್ಲಿ ಪ್ರತಿಯೊಂದು ನೆರೆಗೆ ಅಥವಾ ಊರಿಗೆ ಒಬ್ಬ ನೆರೆಗೊಂಡ ಇರುತ್ತಾನೆ. ಈತನೇ ಮುಖ್ಯ ಪಂಚಾಯತದಾರ. ಹತ್ತು ಹನ್ನೊಂದು ಊರುಗಳಿಗೆ ಒಂದು ಸೀಮೆ ಎಂದು ಕರೆಯುತ್ತಾರೆ. ಸೀಮೆಗೆ ಸೀಮೆಗೌಡ ಮುಖ್ಯಸ್ಥ. ನ್ಯಾಯತೀರ್ಮಾನದ ಕೆಲಸದಲ್ಲಿ ಈ ಗೊಂಡರಿಗೆ ಸಹಾಯ ಮಾಡಲು ಕೇರಿಗೆ ಒಬ್ಬರನ್ನು ಕರೆಸಿ ಅವರ ಸಲಹೆ ಪಡೆಯುತ್ತಾರೆ. ವ್ಯಾಜ್ಯದ ವಿಷಯ ಎರಡು ನೆರೆಗಳಿಗೆ ಸಂಬಂಧ ಪಟ್ಟಿದ್ದರೆ ಎರಡೂ ನೆರೆಗಳ ಹಿರಿಯರನ್ನು ‘ತಿಳಿದ ವರನ್ನು ಸಭೆಗೆ ಕರೆಯಿಸಿ ನ್ಯಾಯ ತೀರ್ಮಾನ ಮಾಡುತ್ತಾರೆ.

ದೊಕ್ಕಲು ಮಕ್ಕಳು ಎಂಬ ಅಲೆಮಾರಿ ಜನಾಂಗದ ಅಧ್ಯಯನ ಮಾಡಿದ ಕೆಕೆಪುರ ಅವರು ಹೇಳುವಂತೆ ಅವರ ಕಟ್ಟೆಮನೆಗಳು ‘ಏಳು ಹಳ್ಳಿ, ತಾಲೂಕು, ಜಿಲ್ಲೆ, ಪ್ರಾಂತ ಮಟ್ಟದವಾಗಿರುತ್ತವೆ. ಇಲ್ಲಿ ಇಡೀ ಜನಸಮುದಾಯದ ಗೌಡ-ಗಣಾಚಾರಿ ಹಾಗೂ ಪೂಜಾರಿ ಇರುವರಲ್ಲದೆ ಒಂದೊಂದು ವಸತಿಗೆ ಸೇರಿದ ಐದು ಜನ, ಏಳು ಜನ, ಒಂಭತ್ತು ಜನ, ಹನ್ನೊಂದು ಜನರಿಂದ ಕೂಡಿದ ‘ದೈವದವರು’ ಇರುತ್ತಾರೆ. ಇದು ಆಯಾ ವಸತಿಗಳ ಸ್ಥಳೀಯ ನ್ಯಾಯ ಪಂಚಾಯಿತಿಗಿಂತಲೂ ತುಂಬಾ ಪ್ರಭಾವಶಾಲಿಯಾಗಿರುತ್ತದೆ. ಇದು ಈ ಜನಸಮುದಾಯದ ಅಂತಿಮ ನ್ಯಾಯಸ್ಥಾನವಾಗಿರುತ್ತದೆ’.

ಇಲ್ಲಿಗರಲ್ಲಿ ನ್ಯಾಯ ನಿರ್ಣಯ ಮಾಡುವ ಕೆಲಸ ನಾಡ ಗೌಡ, ಕಟ್ಟುಗೌಡ ಮತ್ತು ಕೋಲಕಾರ ಈ ಮೂವರದು. ಇವರಲ್ಲಿ ನಾಡಗೌಡನೇ ಪ್ರಮುಖನಾಗಿದ್ದು ಹೆಚ್ಚು ಅಧಿಕಾರ ಮತ್ತು ಗೌರವ ಹೊಂದಿರುತ್ತಾನೆ. ಕಟ್ಟುಗೌಡನಿಗೂ ಅಧಿಕಾರವಿದೆ. ಆದರೆ ಆತ ನಾಡಗೌಡನಿಗೆ ವಿಧೇಯ. ಕೋಲಕಾರ ಈ ಇಬ್ಬರು ಗೌಡರಿಗೆ ಸೇವಕನಂತಿದ್ದು ಅವರು ಹೇಳಿದಂತೆ ಕೇಳುತ್ತಾನೆ. ಕಂಬಾಳು ಅವರು ಹೇಳುವಂತೆ ಗೌಡದ್ವಯರ ಆಜ್ಞೆಗಳನ್ನು ತನ್ನ ಕುಲದವರಿಗೆ ತಿಳಿಸುವುದು ಅವನ ಕೆಲಸ. ಆತ ನ್ಯಾಯಕ್ಕೆ ಜನರನ್ನು ಕೂಡಿಸುತ್ತಾನೆ. ದೇವರ ಪೂಜೆ ಮುಂತಾದ ಕಾರ್ಯಗಳ ಬಗ್ಗೆ ಕುಲಬಂಧುಗಳಿಗೆ ಸುದ್ಧಿಮುಟ್ಟಿಸುತ್ತಾನೆ. ಅಪರಾಧಿಗೆ ಬಡಿಯುವುದು, ದಂಡದ ಹಣ ವಸೂಲಿ ಮಾಡುವುದು ಮುಂತಾದ ಶಿಕ್ಷೆಗಳನ್ನು ವಿಧಿಸಿದ ಸಂದರ್ಭಗಳಲ್ಲಿ ಅಂಥ ಶಿಕ್ಷೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯೂ ಅವನದೇ.

ಸುಡುಗಾಡು ಸಿದ್ಧರ ನ್ಯಾಯ ತೀರ್ಮಾನ ಎರಡು ಹಂತಗಳಲ್ಲಿ ನಡೆಯುತ್ತದೆ. ಸುಡುಗಾಡು ಸಿದ್ಧರ ಹಟ್ಟಿಯ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುವವನು ಹಟ್ಟಿಯ ನಾಯಕ. ನ್ಯಾಯ ನಿರ್ಣಯದಲ್ಲೂ ಅವನಿದ್ದಾನೆ. ಆದರೆ ಅವನೊಬ್ಬನೇ ಅಲ್ಲ, ನ್ಯಾಯ ನಿರ್ಣಯಕ್ಕಾಗಿ ಜಾತಿ ಪಂಚಾಯತಿ ಇದೆ. ಇದರಲ್ಲಿ ಸಮಾಜದ ಯಜಮಾನನಲ್ಲದೆ ಬುದ್ಧಿವಂತ, ತೆಲಿಗಾರ ಇವರೂ ಇದ್ದಾರೆ. ಈ ಬುಡಕಟ್ಟಿನವರು ತಮ್ಮ ಸಣ್ಣ ಪುಟ್ಟ ವ್ಯವಹಾರಗಳನ್ನು ವ್ಯಾಜ್ಯಗಳನ್ನು ತಮ್ಮ ಹಟ್ಟಿಯಲ್ಲಿಯೇ ಬಗೆಹರಿಸಿಕೊಳ್ಳುತ್ತಾರೆ. ಗಂಭೀರ ಪ್ರಕರಣಗಳನ್ನು ಮಾತ್ರ ತಮ್ಮ ಪ್ರಾದೇಶಿಕ ಕಟ್ಟೆಮನೆಗಳಿಗೆ ಒಯ್ಯುತ್ತಾರೆ (ಖಂಡೋಬಾ).

ಕೊರಮರಲ್ಲಿಯೂ ಸಣ್ಣಪುಟ್ಟ ಜಗಳ ವ್ಯಾಜ್ಯಗಳಾದರೆ ಹಟ್ಟಿಯ ಯಜಮಾನನೇ ಅದನ್ನು ಬಗೆಹರಿಸುತ್ತಿದ್ದ. ಹೊಡೆದಾಟ ಬಡಿದಾಟಗಳಾದರೆ ಅಥವಾ ಕುಲಕ್ಕೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಬೇಕಾದರೆ ಮನೆಗೊಬ್ಬರಂತೆ ಹಿರಿಯರು ಒಂದೆಡೆ ಸೇರಿ ಪಂಚಾಯತಿ ಮಾಡುತ್ತಿದ್ದರು. ಯಜಮಾನನ ಮಾತಿಗೆ ಎಲ್ಲರೂ ಗೌರವ ಕೊಡುತ್ತಿದ್ದರು. ಒಂದು ವೇಳೆ ನ್ಯಾಯ ಬಗೆಹರಿಯದೇ ಹೋದರೆ ಎರಡು ಮೂರು ದಿನಗಳ ವರೆಗೂ ಪಂಚಾಯತಿ ಮುಂದುವರೆಯುತ್ತಿತ್ತು. ಆಗಲೂ ಬಗೆಹರಿಯದಿದ್ದರೆ ನಾಡಿಗೆ ಒಯ್ಯುತ್ತಿದ್ದರು. ಅಂದರೆ ಒಂದು ದಿನ ಗಡವು ಮಾಡಿ ಬೇರೆ ಹಟ್ಟಿ ಅಥವಾ ಕಟ್ಟೆಯ ಯಜಮಾನರನ್ನು ಕರೆಸಿ ಪಂಚಾಯತಿ ಮಾಡುತ್ತಿದ್ದರು. ಅಪರಾಧಿ ಫಿರ್ಯಾದಿ ಇಬ್ಬರಿಂದಲೂ ಮೊದಲೇ ಸ್ವಲ್ಪ ಹಣವನ್ನು ಮುಂಗಡವಾಗಿ ತೆಗೆದುಕೊಳ್ಳುತ್ತಿದ್ದರು. ಪಂಚಾಯತಿಗೆ ಸೇರಿದ ಎಲ್ಲ ಜನರ ಖರ್ಚನ್ನು ಮುಂಗಡದಿಂದ ಭರಿಸುತ್ತಿದ್ದರು. ಎಲೆ ಅಡಿಕೆ, ತಂಬಾಕು, ಸಂಜೆಗೆ ಕುಡಿಯಲು ಸೇಂದಿ, ಊಟಕ್ಕೆ ಮಾಂಸದ ಅಡುಗೆ ಈ ಎಲ್ಲ ಖರ್ಚನ್ನು ನೋಡಿಕೊಳ್ಳಬೇಕಾಗಿತ್ತು. ನ್ಯಾಯ ಬಗೆಹರಿದ ಮೇಲೆ ತಪ್ಪಿತಸ್ಥನಿಂದ ಎಲ್ಲ ಖರ್ಚನ್ನು, ಜೊತೆಗೆ ದಂಡವನ್ನು ವಸೂಲಿ ಮಾಡುತ್ತಿದ್ದರು. ಅಪರಾಧಿ ಜನಾಂಗವೆಂದು ಕುಖ್ಯಾತಿ ಪಡೆದಿದ್ದ ಇವರು ಮೊದಮೊದಲು ಗುಪ್ತಸ್ಥಳಗಳಲ್ಲಿ ಸೇರಿ ನ್ಯಾಯ ಬಗೆಹರಿಸುತ್ತಿದ್ದರು. ಆದರೆ ನಾಡಿನ ಸಂಪರ್ಕ ಹೊಂದಿದ ಮೇಲೆ ಇವರ ಪಂಚಾಯಿತಿಗಳು ಸಾಮಾನ್ಯವಾಗಿ ತಾವಿರುವ ಊರು ಮತ್ತು ಹಟ್ಟಿಯ ಹೊರಗೆ ನಡೆಯುವುದು ಪ್ರಾರಂಭವಾಯಿತೆಂದು ಬಿ.ಪಿ. ರಾಮಯ್ಯ ಹೇಳುತ್ತಾರೆ.

ಹೀಗೆ ಬಹುತೇಕ ಬುಡಕಟ್ಟುಗಳಲ್ಲಿ ಕಟ್ಟೆಮನೆಗಳಿದ್ದು ಹಟ್ಟಿಯ ಮಟ್ಟದಲ್ಲಿ ಅದರ ಮುಖಂಡ ಅಥವಾ ನಾಯಕನು ತಾನೊಬ್ಬನೆ ಅಥವಾ ಕೆಲವು ಹಿರಿಯರ ಅಥವಾ ಪಂಚರ ಸಹಾಯದಿಂದ ನ್ಯಾಯ ಬಗೆಹರಿಸಿದರೆ, ಪ್ರಾದೇಶಿಕ ಮಟ್ಟದಲ್ಲಿ ಸಮಾಜದ ಹಿರಿಯನು ಅಥವಾ ನಾಡಗೌಡನು ಹಲವು ಹಟ್ಟಿಗಳನ್ನು ಪ್ರತಿನಿಧಿಸುವ ಹಿರಿಯರ ಸಮಕ್ಷಮ ಹಾಗೂ ಅವರ ಸಹಕಾರದೊಂದಿಗೆ ನ್ಯಾಯ ತೀರ್ಮಾನ ಮಾಡುತ್ತಾನೆ. ಸಣ್ಣಪುಟ್ಟ ವ್ಯವಹಾರಗಳು ಹಟ್ಟಿಯ ಮಟ್ಟದಲ್ಲಿಯೇ ಮುಕ್ತಾಯಗೊಂಡರೆ, ಗಂಭೀರ ಪ್ರಕರಣಗಳು ಮತ್ತು ಎರಡೂ ಪಕ್ಷಗಳಿಗೆ ಸಮಾಧಾನ ತರದೇ ಹೋದ ಪ್ರಕರಣಗಳು ಕಟ್ಟೆಮನೆಯಲ್ಲಿ ಇತ್ಯರ್ಥವಾಗುತ್ತವೆ. ಅಲ್ಲಿಯ ನಿರ್ಣಯವೇ ಅಂತಿಮ ನಿರ್ಣಯ. ಅದನ್ನು ಧಿಕ್ಕರಿಸುವವರಿಗೆ ನಿಶ್ಚಯವಾಗಿಯೂ ಶಿಕ್ಷೆಯುಂಟು. ಇಂಥ ಬಿಗುವಿನ ನಿಲುವಿನಿಂದಾಗಿಯೇ ಜನರಿಗೆ ಕಟ್ಟಿಮನೆಯ ಬಗ್ಗೆ ಹೆದರಿಕೆ ಉಳಿದುಕೊಂಡಿರುತ್ತದೆ.

 . ಕಾರ್ಯಕಲಾಪ ನಡೆಯುವ ಸ್ಥಳ, ನಡಾವಳಿ, ಸಭೆಯ ವೈಶಿಷ್ಟ್ಯ ಇತ್ಯಾದಿ

 

ಬುಡಕಟ್ಟು ನ್ಯಾಯಾಲಯಗಳ ಕಾರ್ಯಕಲಾಪ ನಡೆಯುವ ಸ್ಥಳ, ನಡಾವಳಿ, ಸಭೆಯ ವೈಶಿಷ್ಟ್ಯ, ಖರ್ಚು ಭರಣದ ವಿಧಾನ ಇತ್ಯಾದಿ ವಿಷಯಗಳ ಬಗ್ಗೆ ಈಗ ಸಂಕ್ಷಿಪ್ತವಾಗಿ ಚರ್ಚಿಸಬಹುದು.

ಡಾ. ಕೆಕೆಪುರ ದೊಕ್ಕಲು ಮಕ್ಕಳ ಕಟ್ಟೆಮನೆಯ ನಡಾವಳಿಯ ವೈಶಿಷ್ಟ್ಯದ ಬಗ್ಗೆ ಹೀಗೆ ಹೇಳಿದ್ದಾರೆ: ಕಟ್ಟೆಮನೆಯಲ್ಲಿ ಕತ್ತಾಳೆ: ನಾರಿನಿಂದ ಮಾಡಿದ ಹಗ್ಗವೊಂದಿರುತ್ತದೆ’ ಅದು ಮೂರು ಮಾರು, ಐದು ಮಾರು ಇಲ್ಲವೆ ಒಂಬತ್ತು ಮಾರು ಉದ್ದವಿರಬೇಕೆಂದು ನಿಯಮವಿದೆ. ಇಂಥ ಹಗ್ಗವನ್ನು ತಮ್ಮ ಸುತ್ತಲೂ ಹರಡಿ ಅದರ ಮಧ್ಯದಲ್ಲಿ ಕುಳಿತು ಕಟ್ಟೆಮನೆ ಕಾರ್ಯಕಲಾಪಗಳನ್ನು ನಡೆಸುತ್ತಾರೆ. ಇದು ವಂಶಪಾರಂಪರ್ಯವಾಗಿ ಬಂದ ಪರಿಪಾಠವಾಗಿದೆ. ಕಟ್ಟೆಮನೆಯಲ್ಲಿ ನ್ಯಾಯಪಡೆದು ಗೆದ್ದವರು ಕಟ್ಟೆಮನೆಯ ಸದಸ್ಯರಿಗೆ ಹೆಂಡ ಸರಾಯಿ ಕುಡಿಸಬೇಕಾದುದು, ಮಾಂಸದೂಟ ಮಾಡಿಸಬೇಕಾದುದು, ಹಾಗೆಯೇ ಬೇರೆಡೆಯಿಂದ ಬಂದು ಹೋಗುವ ಸದಸ್ಯರ ಖರ್ಚುವೆಚ್ಚ ನೋಡಿಕೊಳ್ಳಬೇಕಾದುದೊಂದು ವಿಶೇಷತೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬುಡಕಟ್ಟಾದ ಗೊಂಡರಲ್ಲಿ ನ್ಯಾಯನಿರ್ಣಯ ಇಂಥದೇ ಜಾಗದಲ್ಲಿ ನಡೆಯಬೇಕೆಂಬ ಕಟ್ಟುನಿಟ್ಟಿಲ್ಲ. ಯಾವ ವಿಷಯದ ಬಗ್ಗೆ ನ್ಯಾಯ ನಡೆಯುತ್ತದೆ ಎಂಬ ಬಗ್ಗೆ ವಿಚಾರಿಸಿ ಯೋಗ್ಯ ಸ್ಥಳ ನಿಶ್ಚಯಿಸುತ್ತಾರೆ. ಊರಿನ ದೇವರಿಗೆ ಸಂಬಂಧಪಟ್ಟ ನ್ಯಾಯವಿದ್ದರೆ ಗುಡಿಯಲ್ಲಿ ಸಭೆ ಕರೆಯುತ್ತಾರೆ. ಒಂದು ಕುಟುಂಬದೊಳಗಿನ ನ್ಯಾಯವಿದ್ದರೆ ನೆರೆಗೊಂಡನ ಮನೆಯಲ್ಲಿ ಅಥವಾ ಇನ್ನೊಬ್ಬ ಹಿರಿಯಗೊಂಡನ ಮನೆಯಲ್ಲಿ ಸಭೆ ಕರೆಯುತ್ತಾರೆ. ಸೀಮೆಗೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಸೀಮೆಗೊಂಡನ ಊರಿನಲ್ಲಿ ಅವನ ಮನೆ ಅಥವಾ ದೇವರ ಮನೆಯಲ್ಲಿ ತೀರ್ಮಾನಿಸುತ್ತಾರೆ. ನ್ಯಾಯದಾನದ ಹೊತ್ತಿನಲ್ಲಿ ನೆರೆಗೊಂಡನಲ್ಲದೆ ಊರಿನ ಹಿರಿಯರನ್ನು ಕರೆಸುವುದಿದೆ. ಇಡೀ ಊರಿಗೆ ಸಂಬಂಧಪಟ್ಟ ಪಂಚಜಾಯತಿಯಲ್ಲಿ ಅನುಭವಿಕರು ತಮ್ಮ ಅನುಭವ ಮಂಡಿಸುತ್ತಾರೆ. ಸಾಮಾನ್ಯವಾಗಿ ಅವರ ಅಭಿಪ್ರಾಯವನ್ನೇ ನೆರೆಗೊಂಡ ಅಥವಾ ಸೀಮೆಗೊಂಡ ಒಪ್ಪಿಕೊಳ್ಳುತ್ತಾನೆ. ಭಿನ್ನಾಭಿಪ್ರಾಯವಿದ್ದರೆ ಚರ್ಚೆಯಾಗಿ ಕೊನೆಗೆ ಏಕಾಭಿಪ್ರಾಯ ಮೂಡುತ್ತದೆ. ನೆರೆಗೊಂಡನ ನಿರ್ಣಯವನ್ನು ವಾದಿ ಒಪ್ಪದಿದ್ದರೆ ವ್ಯಾಜ್ಯ ಸೀಮೆಗೊಂಡನಲ್ಲಿಗೆ ಹೋಗಿ ಇತ್ಯರ್ಥವಾಗುತ್ತದೆ. ಶಿಕ್ಷೆ ಕೊಡಲು ನಿರ್ಣಯವಾದರೆ ‘ಜಾತಿ ಕಟ್ಟು’ ವಿಧಿಸುತ್ತಾರೆ. ಹೀಗಾದವರಿಗೆ ಬೇರೆ ಕುಟುಂಬಗಳೊಡನೆ ವಿವಾಹ ಆದಿಯಾಗಿ ಸಂಬಂಧಗಳು ಕಡಿದುಹೋಗುತ್ತವೆ ಎಂದು ಶ್ರೀಮತಿ ಶಾಂತಿನಾಯಕ ಹೇಳುತ್ತಾರೆ.

ಸಿದ್ಧಗಂಗಯ್ಯ ಕಂಬಾಳು ಅವರು ಇಲ್ಲಿಗರ ಒಂದು ನ್ಯಾಯ ಪ್ರಸಂಗವನ್ನು ಕೊಟ್ಟಿದ್ದಾರೆ. ಅದು ಇಲ್ಲಿಗರ ಕಟ್ಟೆಮನೆಯ ನಡಾವಳಿಯನ್ನು ಬಹು ಸುಂದರವಾಗಿ ಚಿತ್ರಿಸುತ್ತದೆ.:

‘ಹರೆಯದ ಹುಡುಗನೊಬ್ಬ ಕಾಡಿನ ನಡುವೆ ತನ್ನದೇ ಕುಲದ ಹರೆಯದ ಹುಡುಗಿಯನ್ನು ಕೆಡಿಸಲು ಯತ್ನಿಸಿದ. ಹುಡುಗಿ ತನ್ನಪ್ಪನಿಗೆ ಹೇಳಿದಳು. ಹುಡುಗಿಯ ಅಪ್ಪ ಕೋಪಾವಿಷ್ಠನಾಗಿ ಕುಡುಗೋಲು ಝಳಪಿಸಿಕೊಂಡು ಹಾದರಿಗ ಹುಡುಗನಿಗಾಗಿ ಹುಡುಕಿದ. ಹುಡುಗ ಬಚ್ಚಿಟ್ಟುಕೊಂಡ. ಹುಡುಗಿಯ ಅಪ್ಪ ನಾಡಗೌಡನಿಗೆ ನ್ಯಾಯಕೊಟ್ಟ. ನಾಡಗೌಡ ಕರಿಕಂಬಳಿ ಗದ್ದಿಗೆ ಹಾಸಿ ಉತ್ತರಾಭಿಮುಖವಾಗಿ ಕುಳಿತ (ಕಂಬಳಿಯ ಮೇಲೆ ಕೂರಬಾರದಂತೆ). ಕೋಲಕಾರನನ್ನು ಕೂಗಿಸಿದ. ಆತ ಬಂದ. ನಾಡಗೌಡನ ಮಾತಿನಂತೆ ಕಟ್ಟುಗೌಡನನ್ನು ಕೋಲಕಾರ ಕರೆತಂದು ಪೂರ್ವಾಭಿಮುಖವಾಗಿ ಕೂರಿಸಿದ. ನಾಡಗೌಡ-ಕಟ್ಟುಗೌಡ ನ್ಯಾಯಪ್ರಸಂಗದ ಬಗ್ಗೆ ಅವರದ್ದೇ ಆದ ಭಾಷೆಯಲ್ಲಿ ಮಾತಾಡಿಕೊಂಡರು ಕೋಲಕಾರ ಅಪರಾಧಿಯನ್ನು ತಂದು ನಿಲ್ಲಿಸಿದ. ನ್ಯಾಯದ ಹೇಳಿಕೆ ಕೇಳಿಕೆಗಳೆಲ್ಲ ಇಲ್ಲಿಗರ ಭಾಷೆಯಲ್ಲಿಯೇ ನಡೆಯಿತು. ನಾಡಗೌಡ ಅಪರಾಧಿಯ ಅಕೃತ್ಯಗಳ ಬಗ್ಗೆ ಮಾತಿನ ತನಿಖೆ ನಡೆಸಿದ, ಹುಡುಗ ಒರಟೊರಟಾಗಿ ಉತ್ತರಿಸಿದ.

ಕೋಲಕರ ಹುಣಸೇ ಸೆಬ್ಬೆಯಲ್ಲಿ ಹುಡುಗನಿಗೆ ಬಡಿದ. ಪೆಟ್ಟು ತಾಕಿದ ಕೂಡಲೇ ಅಪರಾಧಿ ಹುಡುಗ ಕಂಬಳಿ ಗದ್ದಿಗೆಗೆ ಅಡ್ಡಬಿದ್ದು ತಪ್ಪು ಒಪ್ಪಿಕೊಂಡ. ಹುಡುಗಿಯ ತಂದೆ, ತನ್ನ ಮಗಳನ್ನು ಅಪರಾಧಿ ಹುಡುಗ ಮುಟ್ಟಿ ಎಳೆದಾಡಿದ್ದಾನೆ. ಕೆಡಿಸಿದನೋ ಬಿಟ್ಟನೋ ಆತನೇ ಅಮಾಯಕ ಮಗಳನ್ನು ಮದುವೆಯಾಗಲಿ ಎಂದ. ಅಪರಾಧಿ ಹುಡುಗ, ನಾನೇನೂ ಕೆಡಿಸಿಲ್ಲ. ಹೊಡೆಯೋಕೆ ಮುನ್ನ ಹಂಗಂತ ಕೇಳಿದರೆ ಒಪ್ಪುತ್ತಿದ್ದೆ. ನಾನೊಲ್ಲೆ ಎಂದ. ‘ನಾಳೆ ನಿನ್ನ ಮಗಳನ್ನು ಯಾರು ಕೈಹಿಡಿತಾರೆ’ ಎಂದು ಹುಡುಗಿಯ ಅಪ್ಪ ಬಾಯಿಮಾಡಿದ, ಕೆಡಿಸಿಲ್ಲ, ಅಂತ ಆಣೆ ಇಟ್ಟವನೆ, ನಿನ್ನ ಮಗಳನ್ನು ಮುಟ್ಟಿ ಎಳೆದಾಡಿದ್ದು ತಪ್ಪು (ಅವನಿಗೆ) ದಂಡ ಹಾಕಿ, ದಂಡದ ದುಡ್ಡು ನಿನಗೇ ಕೊಡೆಸುತ್ತೇವೆ, ಅಂದ ನಾಡಗೌಡ. ಕಟ್ಟುಗೌಡ ಆಗಲಿ ಎಂದ. ನಾಡಗೌಡ ಕಟ್ಟುಗೌಡರಿಬ್ಬರ ಮಾತುಗಳನ್ನು ಕೋಲಕಾರ ಗಟ್ಟಿಯಾಗಿ ಕೂಗಿ ಕೇಳಿ ಜನ ಒಪ್ಪಬೇಕು ಎಂದ. ಜನ ಆಗಲಿ ಆಗಲಿ ಎಂದರು. ನಾಡಗೌಡ ಹುಡುಗನಿಗೆ ಹನ್ನೊಂದು ರೂಪಾಯಿ ದಂಡ ಹಾಕಿದ, ದಂಡಕೊಡದಿದ್ದರೆ ನೂರು ಹುಣಸೆ ಸಬ್ಬೆ ಏಟು ಎಂದ. ಹುಡುಗ ವಾಯಿದೆ ಕೇಳಿ ದಂಡ ಕೊಡಲು ಒಪ್ಪಿದ. ಹುಡುಗನ ಪರವಾಗಿ ನಾಡಗೌಡನ ವಿರುದ್ಧವಾಗಿ ಯಾರೂ ತುಟಿ ಬಿಚ್ಚಲಿಲ್ಲ. ದೌರ್ಜನ್ಯಕ್ಕೊಳಗಾದ ಹುಡುಗಿಯನ್ನು ಜನರೆಲ್ಲ ಸಾಂತ್ವನಗೊಳಿಸಿದರು.

ನ್ಯಾಯ ತೀರ್ಮಾನವಾದ ನಂತರ ನೌಡಗೌಡ ಕರಿಕಂಬಳಿ ಗದ್ದುಗೆಗೆ ನಾಲ್ಕು ಮೂಲೆಗಳನ್ನೂ ಬಿಡದೆ ಹೂವು-ಪತ್ರೆ, ಈಬತ್ತಿ ಹಚ್ಚಿ ಹಣ್ಣು ಮುರಿದು ಕಡ್ಡಿ ಹಚ್ಚಿ ಪೂಜೆ ಮಾಡಿದ.. ಕಂಬಳಿ ಮಡಿಸಿ ಹೆಗಲಿಗೇರಿಸಿಕೊಂಡು ನಡೆದ.

ಲಂಬಾಣಿಗರ ಕಟ್ಟೆಮನೆ ಸೇರುವ ವಿಧಾನ, ಸ್ಥಳ, ಸಭಾ ವೈಶಿಷ್ಟ್ಯಗಳ ಬಗ್ಗೆ ಡಾ. ಸಣ್ಣರಾಮ ಹೀಗೆ ಹೇಳುತ್ತಾರೆ.:

‘ಹಬ್ಬ ಹರಿದಿನಗಳನ್ನಾಚರಿಸುವ ದಿನವನ್ನು ನಿರ್ಧರಿಸಲು, ಕಾಲರಾ, ಪ್ಲೇಗು ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುತ್ತಿರುವಾಗ ಕಟ್ಟುಕಟ್ಟಲೆಗಳನ್ನು ರೂಪಿಸಲು ಅಥವಾ ತಾಂಡದ ಹಿತಕ್ಕಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಇನ್ನಾವುದೇ ಸಂದರ್ಭಗಳಲ್ಲಿ ನಾಯಕನು ಹಿರಿಯರೊಂದಿಗೆ ಚರ್ಚಿಸಿ, ಢಾಲ್ಯಾನನ್ನು ಕರೆದು ಮನೆಗೊಬ್ಬರಂತೆ ಸೇವಾಭಾಯನ ಗುಡಿಯಲ್ಲಿ ಸೇರುವಂಥೆ ಸಾರಿಬರಲು ಅಪ್ಪಣೆ ಮಾಡುತ್ತಾನೆ. ವೈಯಕ್ತಿಕ ಸಮಸ್ಯೆಗಳಿದ್ದರೆ, ನೊಂದವನು ತಾಂಡಾದ ನಾಯಕನಿಗೆ ವಿಷಯವನ್ನು ತಿಳಿಸಿ ನ್ಯಾಯ ದೊರಕಿಸಿಕೊಡಲು ಮನವಿ ಮಾಡಿಕೊಳ್ಳುತ್ತಾನೆ. ನಾಯಕನು ಕಾರಭಾರಿ, ಡಾವ್‌ರೊಂದಿಗೆ ಚರ್ಚಿಸಿ ಸಭೆಯನ್ನು ನಿರ್ಧರಿಸಿ ಸಭೆ ಕರೆಯುತ್ತಾರೆ. ಅಂತಹ ವೈಯಕ್ತಿಕ ಪ್ರಕರಣಗಳಲ್ಲಿ ಸಭೆಯ ಖರ್ಚು ವೆಚ್ಚವನ್ನು ಫಿರ್ಯಾದುದಾರನೇ ಭರಿಸಬೇಕಾಗುತ್ತದೆ. ಇದನ್ನು ‘ಖರ್ಚುಫೂಲೇರೋ’ ಎಂದು ಕರೆಯುತ್ತಾಋಎ. ತಪ್ಪಿತಸ್ಥರಿಂದ ದಂಡ ವಸೂಲು ಮಾಡಿ ಇದನ್ನು ಭರಿಸಿದವನಿಗೆ ಕೊಡುತ್ತಾರೆ.

ಮೂಲದಲ್ಲಿ ಲಂಬಾಣಿ ಜನಾಂಗ ನ್ಯಾಯ ತೀರ್ಮಾನಿಸಲು ಆಲದ ಮರದ ಕೆಳಗಡೆ ಸಭೆ ಸೇರುತ್ತಿದ್ದರು. ಅವರ ಮೌಖಿಕ ಸಾಹಿತ್ಯದಲ್ಲಿ ಇದಕ್ಕೆ ನೂರಾರು ಆಧಾರಗಳು ಸಿಗುತ್ತವೆ. ಆಲದ ಮರವನ್ನು ಲಂಬಾಣಿ ಭಾಷೆಯಲ್ಲಿ ‘ವಡೇರ್ ಛಾಡ್‌’ ಎಂದು ಕರೆಯುತ್ತಾರೆ. .. ಅಲೆಮಾರಿ ಬುಡಕಟ್ಟಿನ ಲಂಬಾಣಿಗಳು ನೂರಾರು ಜನರು ಒಟ್ಟಿಗೆ ಆಲದ ಮರದ ನೆರಳಲ್ಲಿ ಕುಳಿತು ಸಭೆ ನಡೆಸಲು ಅನುಕೂಲವಾಗಿರುತ್ತದೆ. ಆಲದ ಮರಗಳು ತಾಂಡಾಗಳನ್ನು ಬಿಟ್ಟು ಹೊರಗಿರುವುದರಿಮದ ತಾಂಡಾದ ಹೊರಗಡೆ ಸಭೆ ಸೇರಿದರೆ ನಿಷ್ಪಕ್ಷಪಾತವಾದ ತೀರ್ಪುಕೊಡಲು ಸಾಧ್ಯವಾಗುತ್ತದೆಂಬುದು ಇವರ ಸಾಮಾನ್ಯ ತಿಳುವಳಿಕೆ. ತಾತ್ಕಾಲಿಕ ಶಿಬಿರಗಳಲ್ಲಿ ಲಂಬಾಣಿಗಳು ವಾಸಿಸುತ್ತಿದ್ದುದರಿಂದ ನೂರಾರು ಜನರು ಒಟ್ಟಿಗೆ ಕುಳಿತುಕೊಳ್ಳುವಷ್ಟು ವಿಶಾಲವಾದ ಮನೆಗಳು ತಾಂಡದಲ್ಲಿ ಇರದಿರುವುದು, ಇವೇ ಮೊದಲಾದ ಹಲವಾರು ಕಾರಣಗಳಿಂದ ಲಂಬಾಣಿಗಳು ಆಲದ ಮರದ ನೆರಳನ್ನು ಸಭೆ ನಡೆಸಲು ಆಯ್ಕೆ ಮಾಡಿಕೊಳ್ಳುತ್ತಿದ್ದಿರಬೇಕು.’

ಲಂಬಾಣಿ ಬುಡಕಟ್ಟಿನ ಪಂಚಾಯತಿಯು ಅತ್ಯಂತ ಶಿಸ್ತಿನಿಂದ ಕೂಡಿರುತ್ತದೆ. ನಾಯಕರಾದಿ ಯಾರೇ ಆಗಲಿ ವಿಷಯವನ್ನು ಕುರಿತು ಮಾತನಾಡಲಿಚ್ಚಿಸಿದರೆ ಸಭೆಯಲ್ಲಿ ಕುಳಿತ ಹಿರಿಯರನ್ನು ಉದ್ದೇಶಿಸಿ ಅವರ ಅಪ್ಪಣೆಯನ್ನು ಪಡೆದುಕೊಂಡ ನಂತರವೇ ತಮ್ಮ ಅಭಿಪ್ರಾಯವನ್ನು ಮಂಡಿಸಬೇಕು. ಒಬ್ಬರು ಮಾತಾಡುತ್ತಿರುವಾಗ ಮಧ್ಯದಲ್ಲಿ ಬೇರೆಯವರು ಪ್ರವೇಶ ಮಾಡಕೂಡದು. ಸಭಾಮಧ್ಯದಲ್ಲಿ ಎದ್ದುಹೋಗಲೇಬೇಕಾದ ಸಂದರ್ಭ ಒದಗಿ ಬಂದರೆ ಹಿರಿಯರ ಅಪ್ಪಣೆ ಪಡೆದು ಹೋಗಬೇಕು. ಸಭೆಯ ಮಧ್ಯದಲ್ಲಿ ಹೊಸಬರು ಪ್ರವೇಶಿಸುವಾಗ ರಾಮಾ ರಾಮ್‌ಎಂದು ಬಳಗವನ್ನುದ್ದೇಶಿಸಿ ಪರಿಚಯಿಸಿಕೊಂಡ ಮೇಲೆಯೇ ಆಸೀನರಾಗಬೇಕು. ಸಭೆಯಲ್ಲಿ ಪಾಲ್ಗೊಳ್ಳುವವರೆಲ್ಲರ ತಲೆಯ ಮೇಲೆ ಪೇಟವಿರಲೇಬೇಕು. ಹೀಗೆ ಹಲವಾರು ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಾರೆ. ಈ ಬಗೆಯ ಶಿಸ್ತುಪಾಲನೆ, ಸಭೆಯ ಘನತೆ ಮತ್ತು ಗಾಂಭೀರ್ಯವನ್ನು ಹೆಚ್ಚಿಸುತ್ತದೆ. ತಪ್ಪಿತಸ್ಥರಿಗೆ ಭಯವನ್ನು ಮೂಡಿಸಿ, ಸಭೆಯ ನಿರ್ಣಯವನ್ನು ಒಪ್ಪುವ ಹಾಗೆ ಮಾನಸಿಕ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಗುತ್ತದೆ.

ಲಂಬಾಣಿಗರ ತೀರ್ಪು ನಿಷ್ಪಕ್ಷದಾತವಾಗಿ ನಡೆಯಲು ಅವರು ಅನುಸರಿಸುವ ಮಾರ್ಗದ ಬಗ್ಗೆ ಪಿ.ಕೆ ಖಂಡೋಬಾ ಹೇಳಿದ್ದಾರೆ. ನ್ಯಾಯಸ್ಥಾನದಲ್ಲಿ ಯಾರೊಬ್ಬರ ಪರವಹಿಸಿ ಮಾತನಾಡದೆ ನಿರ್ಣಯವಾಗಬೇಕು. ದೀರ್ಘಾಲೋಚನೆ ಮಾಡಿ ಸಂಶಯ ನಿವಾರಿಸಿಕೊಳ್ಳಬೇಕು. ಸಮಸ್ಯೆ ಜಟಿಲವೆಂದು ಕಂಡುಬಂದರೆ ಅಥವಾ ಸುಲಭವಾಗಿ ಇತ್ಯರ್ಥವಾಗದೇ ಹೋದರೆ ಸುತ್ತಲಿನ ತಾಂಡಾಗಳಿಂದ ಅನುಭವಿಕ ನಾಯಕರನ್ನು ಕರೆಸಿ ನಿರ್ಣಯದಲ್ಲಿ ಸಹಾಯ ಕೇಳುತ್ತಾರೆ. ಇದು ಯೋಗ್ಯ ನಿರ್ಣಯಕ್ಕೆ ದಾರಿ ಮಾಡಿಕೊಡುತ್ತದೆ. ಈ ವಿಧಾನ ಈಗಲೂ ಕೆಲವಡೆಗಳಲ್ಲಿ ಇದೆ ಎಂದು ಅವರು ಹೇಳುತ್ತಾರೆ. ಕಟ್ಟೆಮನೆಯ ಯಜಮಾನ ಮತ್ತು ಪ್ರಮುಖರು ಹಾಗೂ ಸಮುದಾಯದ ಹಿರಿಯರು ಸೇರಿಕೊಂಡು ನ್ಯಾಯ ಪರಿಹರಿಸುತ್ತಾರೆ. (ಪವಾರ: ಪುಟ ೧೫೯)

ಅಲೆಮಾರಿ ಕೊರವರಲ್ಲಿ ಕುಲಸಭೆಯು ನ್ಯಾಯ ನಿರ್ಣಾಯಕ ಸಭೆ. ಅದರ ಮುಖ್ಯಸ್ಥ ಪೆರುಮನುಷ್ಯನ್‌, ಅಂದರೆ ಹಿರಿಯ ಮನುಷ್ಯ. ನ್ಯಾಯ ನಿರ್ಣಯದಲ್ಲಿ ಓಕಾಳಿ ಎಂಬ ವಾದಗಾರರು ಭಾಗವಹಿಸುತ್ತಾರೆ. ಕುಲಸಭೆಯ ತೀರ್ಮಾನವೇ ಕೊನೆಯದು. ಕೊರವರ ಜಗಳಕ್ಕೆ ಕೊನೆಯಿಲ್ಲ ಎಂಬ ಅಪಖ್ಯಾತಿಯುಂಟು. ಕುಲಸಭೆಯಲ್ಲಿ ನ್ಯಾಯ ಬಗೆಹರಿಯದಿದ್ದರೆ ಹೊರಗಿನ ಹೆಚ್ಚು ಅನುಭವಿಕ ಓಕಾಳಿಗಳಿದ್ದಲ್ಲಿ ಹೋಗಿ ನ್ಯಾಯ ತೀರ್ಮಾನ ಪಡೆಯುವರು. ಇನ್ನೊಂದು ಅಲೆಮಾರಿ ಜನಾಂಗವಾದ ಡೊಂಬರಿಗೆ ಕಸರತ್ತು ಮಾಡುವ ತಮ್ಮ ಹುಡಿಗಿಯರು ಆಸ್ತಿಯಿದ್ದಂತೆ. ಅವರು ದಾರಿ ತಪ್ಪಿದರೆ ಕುಲದ ಮುಖ್ಯಸ್ಥನಾದ ನಾಯಕ (ಅಥವಾ ನಾಯ್ಡು) ಎಂಬಾತನಿಗೆ ದೂರು ಒಯ್ಯುತ್ತಾರೆ. ನಾಯಿಕನ ತೀರ್ಮಾನವನ್ನು ಎಲ್ಲರೂ ಒಪ್ಪುತ್ತಾರೆ.

ಕಾಡುಗೊಲ್ಲರ ನ್ಯಾಯ ತೀರ್ಮಾನದ ವೈಖರಿಯನ್ನು ನೋಡಬೇಕಾದರೆ ಒಂದು ಹಟ್ಟಿಯ ಇಬ್ಬರು ತಾವೇ ಗುಡಿಯ ಪೂಜಾರಿ ಪಟ್ಟಕ್ಕೆ ಹಕ್ಕುದಾರರೆಂದು ಜಗಳ ನಡೆಸಿ ಹಟ್ಟಿಯ ಪಂಚಾಯತುದಾರರಿಂದ ಛೀಮಾರಿ ಹಾಕಿಸಿಕೊಂಡ ಪ್ರಕರಣವನ್ನು  ನೋಡಬಹುದು. ಡಾ.ತೀ. ನಂ.ಶಂಕರನಾರಾಯಣರು ವರದಿ ಮಾಡಿದ ಆ ಪ್ರಕರಣ ಹೀಗಿದೆ.:

ಒಂದು ಹಟ್ಟಿಯಲ್ಲಿ ಒಂದು ದೇವರು; ಆ ದೇವರ ಪೂಜಾರಿ ಯಾರು ಆಗಬೇಕು ಎಂಬ ವಿಚಾರದಲ್ಲಿ ಇಬ್ಬರಿಗೆ ಜಗಳ ಆರಂಭವಾಗುತ್ತದೆ. ಅವರ ಜಗಳದ ವೈಖರಿ ಹೀಗಿದೆ:

“ನಾನು ಕಣೋ ಈ ದೇವರ ಪಟ್ಟದ ಪೂಜಾರಿ” ಅಂತ ಒಬ್ಬ.

“ನಾನು ಕಣಲೇ ಈ ದೇವರ ಪಟ್ಟದ ಪೂಜಾರಿ” ಅಂತ ಇನ್ನೊಬ್ಬ.

“ನಮ್ಮ ತಾತನ ಕಾಲದಾಗೆ ಒಂದು ಹಿಂಡು ಕುರಿ ಮಾರಿ ದೇವರಿಗೆ ಒಡವೆ ಮಾಡಿಸೈತೆ ಕಣೋ”

“ಹೂ, ಮಾಡಿಸೈತೆ, ಕುರುತಿಲ್ಲ ಕೂನಿಲ್ಲ, ಮಾದರ್ ಛೋದ್‌ನಮ್ಮ ಹೊಲ ಗೇಯೋ ಹೋರೀಮಾರಿ ಈ ದೇವರಿಗೆ ಒಡವೆ ಮಾಡಿಸಯ್ತೆ ಕಣಲೇ”

“ಅದೇನಲ್ಲಾ ಹಂಗೆ ಕೂಗ್ತೀಯ. ನಮ್ಮ ಹೆಂಡರ ಕೊಳ್ಳಗಳ ಮಂಗಳ ಸೂಸ್ತ್ರ ಹಾಕಿ, ಆ ದೇವರಿಗೆ ಒಡವೆ ಮಾಡಿಸಯ್ತೆ ಕಣಲಾ”

“ಓಹೋ ಮುಚ್ಚಲೇ. ಮಾಡಸವ್ನೆ ಇವನು ಬೋಳಿಮಗ. ಏನಲಾ ಬಲೇ ಕೂಗ್ತಿಯಾ”

“ಮುಚ್ಚಲೇ ಅಂತ ಏನೋ ಅದು ಬಲು ಅಂತೀಯ. ಏನಲಾ ಮುಚ್ಚೋದು?”

“ದೇವರು ಮುಟ್ಟಿನೋಡಲಾ ಹಂಗಿದ್ದರೆ”

“ಮುಟ್ಟದೆ ಏನಾಗೈತಲಾ”

“ಏಯ್‌, ಅಲ್ಲಿ ಸಗಣಿ ಬಾಸ್ತಾ ಇದ್ಯಲ್ಲೋ, ಮೊದಲು ಕೈ ತೊಳಕೊಂಡು ದೇವರು ಮುಟ್ಟೋ” – ಸರಿ, ಹೀಗೆ ಜಗಳ ಮುಂದುವರಿದು ಕೈಕೈ ಮಿಲಾಯಿಸುವ ಮಟ್ಟಕ್ಕೆ ಬಂದಾಗ ಹತ್ತಿರ ಇದ್ದವರು ಅವರನ್ನು ತಡೆಹಿಡಿದು ನಿಲ್ಲಿಸುತ್ತಾರೆ. ಹಟ್ಟಿಯ ಜನವೆಲ್ಲಾ ಸೇರುತ್ತಾರೆ. ಹಟ್ಟಿಯ ಯಜಮಾನರು, ಗೌಡರು ಮತ್ತು ಇತರ ಹಿರಿಯರು ಬಂದು ಸೇರುತ್ತಾರೆ. ಒಂದು ಕರಗದಲ್ಲಿ ಹಾಲನ್ನೂ ಇನ್ನೊಂದು ಕರಗದಲ್ಲಿ ಕುರಪಿಚಕಿಯನ್ನೂ ತಂದಿಡುತ್ತಾರೆ. ಜಗಳ ಆಡಿದ ಇಬ್ಬರನ್ನೂ ಒಂದು ಕಡೆ ನಿಲ್ಲಿಸುತ್ತಾರೆ. “ದೆಯ್ಯದೇವರ ಆಣೆ, ಗುರುಹಿರಿಯರ ಸಾಕ್ಷಿ ಆಣೆ, ತಂದೆ-ತಾಯಿ ಪಾದಸಾಕ್ಷಿ ಆಣೆ, ಸೂರ್ಯ ಚಂದ್ರರ ಪಾದಸಾಕ್ಷಿ ಆಣಿ, ನೀನೆ ಏನಲಾ ಈ ದೇವರ ಪೂಜರಿ?” ಅಂತ ಹಿರಿಯರು ಕೇಳುತ್ತಾರೆ. “ನಾನಲ್ದೆ ಇನ್ಯಾರೋ” ಎಂದು ಮೊದಲನೆಯವನು ಹೇಳುತ್ತಾನೆ. “ಹಂಗಾದರೆ ಈ ಹಾಲಿನ ಕರಗ ಮುಟ್ಟಿ ಪ್ರಮಾಣ ಮಾಡಲಾ ಅಂತ ಹಿರಿಯರು ಹೇಳುತ್ತಾರೆ……’ (ತೀನಂಶಂ ಪುಟ:೨೯-೩೦) ನಾನ್ಯಾಕೆ ಎಂದು ಅವರು ಜಗಳ ಮುಂದುವರಿಸುತ್ತಾರೆಯೇ ಹೊರತು ಪ್ರಮಾಣ ಮಾಡುವುದಿಲ್ಲ. ಪೂಜಾರಿಕೆ ಅವರಿಬ್ಬರಿಗಳ ಸೇರುವುದಿಲ್ಲವೆಂದು ಹಿರಿಯರು ತೀರ್ಮಾನಿಸುತ್ತಾರೆ. ಇಬ್ಬರಿಗೂ ದಂಡಬೀಳುತ್ತದೆ. ದಡ್ಡತನದಿಂದ ಜಗಳವಾಡಿದ್ದಕ್ಕೆ ಇಬ್ಬರೂ ದಂಡತೆತ್ತು ತೆಪ್ಪಗಾಗುತ್ತಾರೆ. ತೆಪ್ಪಗಾಗದಿದ್ದರೆ ಹೇಗೆ? ಅವರು ಕಟ್ಟೆ ಮನೆಗೆ ಹೋಗಬೇಕಾಗುತ್ತದೆ. ಅಲ್ಲಿನ ತೀರ್ಮಾನ ಮೀರುವಂತಿಲ್ಲ. ದಂಡತೆತ್ತ ಮೇಲೆ ತೆಪ್ಪಗಾಗುವುದೇ ಉತ್ತಮ ಎಂದು ಜಗಳ ಅಲ್ಲಿಗೇ ನಿಲ್ಲಿಸುತ್ತಾರೆ.

ಒಟ್ಟಿನಲ್ಲಿ, ಕಟ್ಟೆಮನೆಗಳ ಹಿರಿಯರು ಸಭೆಗಳಲ್ಲಿ ಫಿರ್ಯಾದುದಾರರ ಅಥವಾ ಆಪಾದಿತರ ದರ್ಪ ದುರಹಂಕಾರವನ್ನು ಮೆಚ್ಚುವುದಿಲ್ಲ. ಸಭೆಯನ್ನು ಕಡೆಗಣಿಸುವವರ ಬಗ್ಗೆ ಕಠಿಣ ಧೋರಣೆ ತಾಳುತ್ತಾರೆ. ಒಣಜಗಳವನ್ನು ಮೆಚ್ಚುವುದಿಲ್ಲ. ಯಾರೇ ಆಗಲಿ ಒಬ್ಬನ ಪರವಗಿ ವಾದಿಸುವದು ಒಳ್ಳೆಯದಲ್ಲ ಎಂದು ತಿಳಿಯುತ್ತಾರೆ.

ನ್ಯಾಯ ತೀರ್ಮಾನ ನಡೆಯುವ ಸ್ಥಳವನ್ನು ಕತ್ತಾಳೆನಾರಿನ ಹಗ್ಗ ಸುತ್ತುವ ಮೂಲಕ ಅಥವಾ ಕರಿಕಂಬಳಿ ಹಾಸುವ ಮೂಲಕ ಅಥವಾ ಆಲದ ಮರದ ಕೆಳಗೆ ಸಭೆಕರೆಯುವ ಮೂಲಕ ಅಥವಾ ಪೂರ್ವಾಭಿಮುಖವಾಗಿ ಕೂಡ್ರುವ ಮೂಲಕ ಪವಿತ್ರಗೊಳಿಸಲು ಯತ್ನಿಸುವರು. ಇವೆಲ್ಲ ಜನರು ಕಟ್ಟೆಮನೆಗೆ ವಿಧೇಯರಾಗಿರಬೇಕೆಂದು ಮಾಡುವ ಯತ್ನಗಳು. ‘ಹುಟ್ಟಿದ ಹಳ್ಳಿ’ಯ ಯಜಮಾನರು ಆರೋಪಿಗೆ ‘ನೀನು ಕಟ್ಟೆಮನೆ, ಗುರುಮನೆ ಮತ್ತು ಅರಮನೆಗಳಿಗೆ ವಿಧೇಯನೋ ಅವಿಧೆಯನೋ?’ ಎಂದು ಕೇಳಿದ ಹಾಗೆ ಆರೋಪಿ ಮತ್ತು ಫಿರ್ಯಾದುದಾರರು ಮೊದಲು ಕಟ್ಟೆಮನೆಯ ಬಗ್ಗೆ ವಿಧೇಯರಾಗಿರುವುದನ್ನು ಖಚಿತ ಪಡಿಸಿಕೊಳ್ಳಲು ಆತುರರಿರುವಂತೆ ಕಾಣುತ್ತದೆ (ನೋಡಿ: ಅರ್ಚಕ ಬಿ. ರಂಗಸ್ವಾಮಿ: ಹುಟ್ಟಿದ ಹಳ್ಳಿ)

ಭಾರತದ ಬಹುತೇಕ ಬುಡಕಟ್ಟು ಸಮುದಾಯಗಳಲ್ಲಿ ಇರುವಂತೆ ಕರ್ನಾಟಕದ ಬುಡಕಟ್ಟುಗಳಲ್ಲಿಯೂ ನ್ಯಾಯ ತೀರ್ಮಾನ ನಡೆಯುವುದು ಸಂಜೆಯಲ್ಲಿ. ಹಗಲಿಡೀ ಈ ಜನರು ಬೇಟೆ, ಎತ್ತುವಳಿಗಾಗಿ ಊರೂರು ಅಲೆಯುವುದು, ಡೊಂಬರಾಟ ಮಾಡುತ್ತ ಅಥವಾ ಹಕ್ಕಿ ಆಡಿಸುತ್ತ ಅಲೆಯುವುದು, ಬೇಸಾಯ, ಕಾಡು ಉತ್ಪನ್ನಗಳ ಸಂಗ್ರಹ ಮತ್ತಿತರ ಕೆಲಸ ಕಾರ್ಯಗಳಿಗೆ ಅನುಕೂಲವೆನಿಸುವುದು ಸಹಜ.