. ನ್ಯಾಯ ತೀರ್ಮಾನಕ್ಕೆ ಬರುವ ಪ್ರಕರಣಗಳು

ಕಟ್ಟೆಮನಗೆ ಬರುವ ನ್ಯಾಯ ಪ್ರಕರಣಗಳು ಯಾವುವು ಎಂಬುದನ್ನು ನೋಡೋಣ. ಜನರ ನಡುವಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು, ಒಬ್ಬರಿಗೊಬ್ಬರು ಮೆಟ್ಟಿನಲ್ಲಿ ಹೊಡೆಯುವುದು, ಹೊಡೆಸಿಕೊಳ್ಳುವುದು, ಜೈಲಿನಲ್ಲಿದ್ದು ಬರುವುದು, ತಮ್ಮ ಶ್ರೇಣಿಗಿಂತ ಕೀಳೆಂದು ಭಾವಿಸಿದವರ ಮನೆಯಲ್ಲಿ ಉಣ್ಣುವುದು, ಅಂಥವರೊಂದಿಗೆ ದೈಹಿಕ ಸಂಪರ್ಕ ಹೊಂದುವದು, ಒಂದು ಹೆಣ್ಣಿನೊಡನೆ ಅಕ್ರಮ ಸಂಪರ್ಕ ಹೊಂದುವುದು, ಗುಂಪಿನ ಹಿರಿಯರು ವಿಧಿಸಿದ ಶಿಕ್ಷೆದಂಡಗಳನ್ನು ಒಪ್ಪದೇ ಇರುವುದು-ಇವೆಲ್ಲ ಲಂಬಾಣಿ ತಾಂಡಗಳಲ್ಲಿ ಕಂಡುಬಂದ ಅಪರಾಧ ಪ್ರಕರಣಗಳು. ಕಾಡುಗೊಲ್ಲರು ಮಾಡಿದ ತಪ್ಪುನೆಪ್ಪುಗಳು ಯಾವುವು ಎಂದು ಒಬ್ಬ ವಕ್ತೃ ಹೀಗೆ ಹೇಳಿದ್ದಾನೆ: ‘ಉಗುಳಬಾರದವರು ಉಗಿದರು, ಮೆಟ್ಟಿನಿಂದ ಹೊಡೆದರು, ಗಂಡಸತ್ತ ಮುಂಡೆ ಬಸಿರು ಮಾಡಿದರು, ಉಣ್ಣಬಾರದವರ ಮನೆಯಾಗೆ ಉಂಡರು, ಮಾದಿಗರವಳನ್ನು ರಖಾವು ಮಾಡಿಕೊಂಡು, ಅವಳ ಕೈಯಾಗೆ ತಿಂದರು ……….. ’(ತೀನಂ ಶಂ: ಪುಟ ೩೦). ಇದರ ಅರ್ಥ ಯಾರ್ಯರಿಂದಲೋ ಛೀಮಾರಿ ಹಾಕಿಸಿಕೊಂಡದ್ದು ಅಪರಾಧ, ಮೆಟ್ಟಿನಿಂದ ಹೊಡೆಸಿಕೊಂಡು ಅವಮಾನಿತರಾದದ್ದು ಅಪರಾಧ, ವಿಧವೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಅವಳಿಗೆ ಬಸಿರು ಮಾಡಿದ್ದು ಅಪರಾಧ, ಮಾದಿಗರ ಹೆಣ್ಣನ್ನು ಉಪಪತ್ನಿಯಾಗಿ ಇಟ್ಟುಕೊಂಡಿದ್ದು ಅಪರಾಧ, ಅವಳು ಮಾಡಿದ ಅಡಿಗೆ ಉಂಡದ್ದು ಅಪರಾಧ-ಇವೆಲ್ಲ ಶಿಕ್ಷೆಗೆ ಅರ್ಹವಾಗುವ ಅಪರಾಧಗಳು.

ಹೆಳವರ ಬುಡಕಟ್ಟಿನಲ್ಲಿ ಹೆಣ್ಣುಗಂಡಿನ ಮನಸ್ತಾಪ, ಪರಪುರುಷನ ಜೊತೆಗೆ ಲೈಂಗಿಕ ಸಂಬಂಧ, ವ್ಯಭಿಚಾರ, ದುಡ್ಡು ಮತ್ತು ಕಾಳುಕಡಿಯ ಆಸೆಗಾಗಿ ಬೇರೆ ಹೆಳವರಿಗೆ ಸೇರಿದ ಭಿಕ್ಷದ ಹಕ್ಕಿನ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುವುದು, ಕುಲಗೆಡುವುದು, ಜಾತಿಗೆಡುವುದು, ಮನೆತನಕ್ಕೆ ಕೆಟ್ಟ ಹೆಸರು ತರುವುದು ಮುಂತಾದ ಪ್ರಕರಣಗಳು ಕಟ್ಟೆಮನೆಗೆ ಬರುತ್ತವೆ.

ದೊಕ್ಕಲುಮಕ್ಕಳಲ್ಲಿ ಗಂಡ-ಹೆಂಡಿರ ಜಗಳ, ಕುಟುಂಬಗಳ ಕಲಹ, ಅಣ್ಣತಮ್ಮಂದಿರ ನ್ಯಾಯ, ವಿವಾಹದ ಬಗ್ಗೆ ತಕರಾರು, ಅನೈತಿಕ ಸಂಬಂಧಗಳು, ಕೂಡಿಕೆ ಪದ್ಧತಿ ಇವುಗಳಲ್ಲದೇ ತಮ್ಮ ಹಕ್ಕಿನ ಕೇರಿಯಲ್ಲಿ ಮತ್ತೊಬ್ಬ ದೊಕ್ಕಲುಮಕ್ಕಳು ಪಡೆದ ವಿಶಿಷ್ಟ ಭಿಕ್ಷೆ ಎತ್ತುವಳಿ, ಕೊಟ್ಟ ಮಾತಿಗೆ ತಪ್ಪಿನಡೆಯುವುದು, ಕುಲಸ್ಥರನ್ನು ನಿಂದಿಸುವುದು ಅಥವಾ ವಂಚಿಸುವದು, ಸಮಾಜದ ನಡವಳಿಕೆ ಪಾಲಿಸದಿರುವುದು, ಬೇರೆ ಕುಲದವರೊಡನೆ ನಡೆದ ವ್ಯಾಜ್ಯ ಇತ್ಯಾದಿ ಪ್ರಕರಣಗಳು ನ್ಯಾಯ ತೀರ್ಮಾನಕ್ಕೆ ಬರುತ್ತವೆ. ಇಲ್ಲಿಗರಲ್ಲಿ ಹಾದರ, ಜಗಳ, ಕೌಟುಂಬಿಕ ಕಲಹ, ಒಡಕು ಇತ್ಯಾದಿ ಸಮಸ್ಯೆಗಳು ಪ್ರಮುಖವಾಗಿದ್ದು ಕಟ್ಟೆಮನೆಯನ್ನು ಪ್ರವೇಶಿಸುತ್ತವೆ. ಆಸ್ತಿ-ಪಾಸ್ತಿ, ಹಣ ಇಲ್ಲದ ಗುಹಾವಾಸಿಗಳಾದ ಇಲ್ಲಿಗರ ಅಪರಾಧಗಳೇನಿದ್ದರೂ ಲೈಂಗಿಕ ಸಂಬಂಧಗಳಿಗೆ, ಬೇಟೆ-ಊಟದ ವಿಷಯಗಳಿಗೆ ನೇರವಾಗಿ ಸಂಬಂಧಿಸಿದವು (ಕಂಬಾಳು:ಪುಟ ೩೩).

ತೊಗಲು ಗೊಂಬೆಯನ್ನಾಡಿಸುತ್ತ ಊರೂರು ಅಲೆಯುವ ಅಲೆಮಾರಿ ಜನಾಂಗವಾದ ಕಿಳ್ಳಿಕ್ಯಾತರು ಒಂದೊಂದು ಕುಟುಂಬಕ್ಕೆ ಇಂತಿಷ್ಟು ಹಳ್ಳಿಗಳೆಂದು ಹಂಚಿಕೊಂಡಿರುತ್ತಾರೆ. ಇನ್ನೊಬ್ಬರ ಪ್ರದೇಶದಲ್ಲಿ ಆಟವನ್ನು ಪ್ರದರ್ಶಿಸುವುದು ತಪ್ಪು. ಹಾಗೆ ತಪ್ಪು ಮಾಡಿದ ಕುಟುಂಬದ ವಿರುದ್ಧ ಅವರ ಸಮಾಜದ ಮುಖಂಡನಾದ ‘ಗೌಡ’ನಿಗೆ ದೂರುಕೊಟ್ಟಾಗ ಗೌಡ ಆ ಕುಟುಂಬಕ್ಕೆ ದಂಡ ವಿಧಿಸುತ್ತಾನೆ. ಅವರು ದೊಡ್ಡ ಅಪರಾಧವೆಂದು ತಿಳಿಯುವ ಇನ್ನೊಂದು ವಿಷಯ ಚಪ್ಪಲಿಯಿಂದ ಹೊಡೆಯುವುದು ಅಥವಾ ಹೊಡೆಯಿಸಿಕೊಳ್ಳುವುದು. ಇಂಥ ತಪ್ಪು ಮಾಡಿದವರಿಗೆ ಗೌಡ ಹಾಗೂ ಪಂಚರು ಕುಲದೇವತೆಯ ಎದುರಿಗೆ ಕರೆದು ಇಬ್ಬರನ್ನೂ ಶಿಕ್ಷಿಸುತ್ತಾರೆ.

ಡೊಂಬರಲ್ಲಿ ಮದುವೆಯಾದ ಹೆಣ್ಣು ಪರಪುರುಷನೊಡನೆ ಅನೈತಿಕ ಸಂಬಂಧ ಹೊಂದಿದ್ದರೆ, ಮದುವೆಯಾಗದವಳು ಅನೈತಿಕ ಸಂಬಂಧ ಬೆಳೆಸಿ ಮಕ್ಕಳನ್ನು ಹಡೆದರೆ, ರಡ್ಡಿ, ನಾಯ್ಡು, ನಾಯಕ ಎಂದು ಕರೆಯಿಸಿಕೊಳ್ಳುವ ಗುಂಪಿನ ಮುಖ್ಯಸ್ಥರಿಗೆ ದೂರು ಹೋಗುತ್ತದೆ. ಅವರು ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಶುದ್ಧೀಕರಿಸಿದ ಮೇಲೆ ಅವರನ್ನು ಮತ್ತೆ ಕುಲದಲ್ಲಿ ಸೇರಿಸಿಕೊಳ್ಳುತ್ತಾರೆ. ಇಡೀ ಡೊಂಬ ಕುಟುಂಬ ಭಾಗವಹಿಸುವ ಆಟದಲ್ಲಿ ಡೊಂಬರ ಹುಡುಗಿಯರು ಆಕರ್ಷಣೆಯ ಕೇಂದ್ರವಾಗಿರುವುದರಿಂದ ಆ ಹುಡುಗಿಯರೇ ಕುಟುಂಬದ ಆಸ್ತಿ, ವರಮಾನಕ್ಕೆ ಮೂಲ. ಆದುದರಿಂದ ಅವರು ಪರಭಾರೆಯಾಗದಂತೆ ತುಂಬಾ ಜಾಗ್ರತೆ ವಹಿಸುವರು.

ಹೀಗೆ ಕಟ್ಟೆಮನೆಗೆ ಬರುವ ಪ್ರಕರಣಗಳ ಈ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೆರಡು ಸಂಗತಿಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಮೊದಲನೆಯದು, ಈ ಸಮುದಾಯಗಳಲ್ಲಿ ಸಾಮಾನ್ಯವಾಗಿ ಆಸ್ತಿಹಣದ ಬಗ್ಗೆ ಉದ್ಭವಿಸುವ ತಂಟೆ-ತಕರಾರುಗಳು ಕಡಿಮೆ. ಇದಕ್ಕೆ ಕಾರಣ ಸ್ಪಷ್ಟವಿದೆ. ಆ ಜನರಲ್ಲಿ ಸಮಸ್ಯೆಗಳಾಗಿ ಕಾಡುವಷ್ಟು ಹಣ, ಆಸ್ತಿಗಳು ಇಲ್ಲ. ಇರುವಷ್ಟನ್ನು ಅವರ ಸಮುದಾಯದ ಕಟ್ಟಳೆಗಳು ಹಾಗೂ ಹಿರಿಯರ ಹದ್ದಿನ ಕಣ್ಣುಗಳು ಕಾಯಬಲ್ಲವು. ಎರಡನೆಯ ಸಂಗತಿಯೆಂದರೆ ಈ ಪ್ರತ್ಯೇಕಿತ ಸಮುದಾಯಗಳಲ್ಲಿ ಕುಟುಂಬ ಹಾಗೂ ಸಮುದಾಯದ ಒಗ್ಗಟ್ಟನ್ನು ಉಳಿಸಿಕೊಳ್ಲುವುದು ಮುಖ್ಯ ವಿಷಯವಾಗಿರುತ್ತದೆ. ಅಂಥ ಒಗ್ಗಟ್ಟನ್ನು ಭಂಗಗೊಳಿಸುವ ಕುಟುಂಬ ಕಲಹ, ಹೆಣ್ಣಿನ ಕಳಂಕಿತ ಶೀಲ, ಹಿರಿಯರ ಬಗ್ಗೆ ಅನಾದರ, ಕುಲದ ಹಿರಿಯರು ವಿಧಿಸಿದ ಶಿಕ್ಷೆ ದಂಡಗಳನ್ನು ಧಿಕ್ಕರಿಸುವುದು ಇವೆಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನೋಡಬಹುದು.

 

. ಅಪರಾಧ ಶೋಧನೆ, ಪರಿಣಾಮಕಾರಿ ತೀರ್ಮಾನ

ನ್ಯಾಯ ನಡೆಸುವ ಹಿರಿಯರು ಎರಡೂ ಪಕ್ಷಗಳು ಒಪ್ಪುವಂತಹ ತೀರ್ಮಾನಕ್ಕೆ ಬರುವದು ಹೇಗೆ? ಬುಡಕಟ್ಟು ಸಮುದಾಯಗಳಲ್ಲಿ ಅಪರಾರ್ಧ ಶೋಧನೆಯ ಸಾಧನಗಳು ಸೀಮಿತವಾಗಿರುವಾಗ ನ್ಯಾಯತೀರ್ಮಾನ ಸುಲಭ ಸಾಧ್ಯವೇ ಎಂಬ ಪ್ರಶ್ನೆಗಳು ಏಳುತ್ತವೆ. ಪರ ಮತ್ತು ವಿರೋಧವಾಗಿ ವಾದಿಸುವ ನ್ಯಾಯವಾದಿಗಳು ಇಲ್ಲದಿರುವಾಗ ಸತ್ಯಾನ್ವೇಷಣೆ ಸುಲಭವಲ್ಲ, ಕಾಯಿದೆಯ ಜ್ಞಾನವಿಲ್ಲದ ನಿರ್ಣಯಕಾರರು. ವಸ್ತುನಿಷಠ ನ್ಯಾಯನಿರ್ಣಯ ಮಾಡುವುದು ಕೂಡ ಸುಲಭವಲ್ಲ ಎನ್ನೋಣ. ಆದರೆ ಇಲ್ಲಿ ನ್ಯಾಯ ನಿರ್ಣಯ ಮಾಡುವ ಹಿರಿಯರಿಗೆ ಕೆಲವು ಅನುಕೂಲಗಳಿವೆ. ಅವರು ಎರಡೂ ಪಕ್ಷಗಳನ್ನು ಬಲ್ಲವರು. ತಪ್ಪು ಎಲ್ಲಿ ಆಗಿದೆ, ಯಾರಿಂದ ಆಗಿದೆ ಎಂದು ಸುಲಭವಾಗಿ ಗ್ರಹಿಸಬಲ್ಲರು. ಅವರು ಸ್ಥಳೀಯರಾಗಿದ್ದು ನ್ಯಾಯಕ್ಕೆ ಬಂದ ಎರಡೂ ಪಕ್ಷದವರು ತಮ್ಮ ಸಮುದಾಯಕ್ಕೆ ಸೇರಿದವರೇ ಆಗಿರುವುದರಿಂದ ಯಾರಿಗೂ ಅನ್ಯಾಯವಾಗಬಾರದು ಎಂಬ ಸದಸದ್ವಿವೇಕ ಇರುವವರು. ಅವರಿಗೆ ಸಾಕ್ಷಿ ಪುರಾವೆಗಳಿಗಿಂತ ಎರಡೂ ಪಕ್ಷಗಳಿಗೆ ಉಚಿತ ನ್ಯಾಯ ದೊರೆತು ತಮ್ಮ ಸಮುದಾಯ ಅಬಾಧಿತವಾಗಿ ಉಳಿಯುವದು ಮುಖ್ಯ. ಇಂಥ ಸಂದರ್ಭಗಳಲ್ಲಿ ಈ ಹಿಂದೆ ಹೇಗೆ ನ್ಯಾಯ ನಿರ್ಣಯವಾಗಿದೆ ಎಂಬ ವಿಚಾರ ಅವರಿಗೆ ಸ್ವಂತ ಅನುಭವದಿಂದ ಹಾಗೂ ಪರಂಪರೆಯ ಜ್ಞಾನದಿಂದ ಸುಲಭವಾಗಿ ವೇದ್ಯವಾಗಿರುತ್ತದೆ. ತಮ್ಮ ಕಟ್ಟೆಮನೆ ಅಥವಾ ನ್ಯಾಯ ಪಂಚಾಯಿತಿಯನ್ನು ಅನೇಕ ಬುಡಕಟ್ಟುಗಳು ದೈವದ ಮನೆಯೆಂದು ಕರೆಯುವದು ಮಾತ್ರವಲ್ಲ, ಹಾಗೆಂದೇ ಭಾವಿಸುತ್ತಾರೆ. ಗುಂಪಿನ ಮುಖ್ಯಸ್ಥನನ್ನು ಹೆಚ್ಚಿನ ಗೌರವದಿಂದ ನೋಡುವುದು ಅಂಥ ಸಮುದಾಯಗಳ ಒಂದು ಪ್ರಮುಖ ಗುಣ. ಬಹುತೇಕ ಸಂದರ್ಭಗಳಲ್ಲಿ ತಮ್ಮ ಗುಂಪಿನ ಮುಖಂಡನಿಗೆ ಅತಿಮಾನುಷ ಶಕ್ತಿಗಳಿವೆಯಂದು ಅವರು ನಂಬುತ್ತಾರೆ. ಈ ವಿಚಾರಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಅವರ ನ್ಯಾಯನಿರ್ಣಯದ ಬಗ್ಗೆ ದೃಷ್ಟಿ ಹರಿಸೋಣ.

ನಮ್ಮ ರಾಜ್ಯದಲ್ಲಿರುವ ಲಂಬಾಣಿಗರ ನಿಷ್ಪಕ್ಷಪಾತತನ ಮತ್ತು ನ್ಯಾಯಪರತೆಯ ಬಗ್ಗೆ ಡಾ. ಸಣ್ಣರಾಮ ಹೀಗೆ ಬರೆಯುತ್ತಾರೆ: ‘ಲಂಬಾಣಿ ಜನಾಂಗದ ನಾಯಕರುಗಳು ಪ್ರಾಮಾಣಿಕರೂ ನ್ಯಾಯಪರರೂ ಆಗಿರುತ್ತಾರೆ. ತಮ್ಮ ಜೀವನಾನುಭವ, ಬುದ್ಧಿವಂತಿಕೆ ಮತ್ತು ಜಾಣ್ಮೆಯಿಂದ ಅಪರಾಧವನ್ನು ಶೋಧಿಸುತ್ತಾರೆ. ನಿರಪರಾಧಿಗಳಿಗೆ, ಯಾವುದೇ ಕಾರಣಕ್ಕೂ ಶಿಕ್ಷೆಯಾಗಬಾರದೆಂಬುದು ಲಂಬಾಣಿ ನಾಯಕರುಗಳು ಪಾಲಿಸಿಕೊಂಡು ಬಂದ ಆದರ್ಶವಾಗಿದೆ. ಆದ್ದರಿಂದ ಅಪರಾಧ ಶೋಧನೆ ಮಾಡುವ ಸಂದರ್ಭಗಳಲ್ಲಿ ಅನೇಕ ಸಾಮತಿ ಒಗಟುಗಳನ್ನು ಹೇಳಿ ಅಪರಾಧಿಯ ಮನಸ್ಸಿನ ಮೇಲೆ ನೈತಿಕ ಒತ್ತಡವನ್ನು ಹೇರಿ ಸತ್ಯ ಹೊರತರಲು ಪ್ರಯತ್ನಿಸುತ್ತಾರೆ …. ದರ್ಪದಿಂದ ಮೆರೆಯುವವರನ್ನು ಅತ್ಯಂತ ಜಾಣ್ಮೆಯಿಂದ ಮಾತಿನ ಮೋಡಿಯಲ್ಲಿ ಕಟ್ಟಿಹಾಕಿ ಸಭೆಯು ಕೊಡುವ ತೀರ್ಪಿಗೆ ಬದ್ಧರಾಗುವಂತೆ ಮಾಡುವಲ್ಲಿ ಅವರ ನಾಯಕರು ಸಿದ್ಧಹಸ್ತರು.’ (ಸಣ್ಣರಾಮ ಪು:೨೮೦) ಬಹಳ ದರ್ಪದ ಒಬ್ಬ ಪಂಡನಾಯಕನು ಬಳಗದವರು ವಿಧಿಸಿದ ದಂಡವನ್ನೊಪ್ಪದೆ ಕಟ್ಟೆಮನೆಯಲ್ಲಿ ತಾನು ಹುಲಿ, ತನ್ನನ್ನು ಮೀರಿಸುವ ನಾಯಕರು ಇಲ್ಲಿ ಯಾರಿದ್ದೀರಿ ಎಂದು ಗರ್ಜಿಸುತ್ತಾನೆ. ಅವನ ವಿರುದ್ಧ ಸೊಲ್ಲೆತ್ತಲು ಪಂಚಾಯತದಾರರಿಗೆ ಧೈರ್ಯಸಾಲದೇ ಹೋದಾಗ ಒಬ್ಬ ನಾಯಕ ಚಾಣಾಕ್ಷತನದಿಂದ ‘ಹುಲಿ ತಿನ್ನುವದು ದನವನ್ನು. ಈತ ಹುಲಿ ಎಂದ ಮೇಲೆ ಈತ ದನವನ್ನು ತಿನ್ನುವವನು ಎಂದ ಹಾಗಾಯಿತು. ಲಂಬಾಣಿಗರ ಕಾಯ್ದೆಯಂತೆ ದನ ತಿನ್ನುವವರಿಗೆ ದಂಡವಾಗಬೇಕು. ಈ ಪುಂಡನಿಗೆ ಜಾತಿಯಿಂದ ಬಹಿಷ್ಕಾರ ಹಾಕೋಣ’ ಎಂದು ತರ್ಕಮಾಡಿದ್ದಕ್ಕೆ ಪಂಚಾಯಿತಿ ಒಪ್ಪಿತು. ಕೊನೆಗೆ ದಂಡಹಾಕಿ ಪುಂಡನಾಯಕನನ್ನು ಹದ್ದುಬಸ್ತಿಗೆ ತಂದಿತು. ಒಟ್ಟಿನಲ್ಲಿ ಲಂಬಾಣಿಗರ ಸಭೆಯಲ್ಲಿ ಮಾತಿನ ಜಾಣತನಕ್ಕೆ ಬೆಲೆಯುಂಟು, ದರ್ಪಕ್ಕೆ ಎಡೆಯಿಲ್ಲ ಎಂದಂತಾಯಿತು. ಹೀಗೆ ಲಂಬಾಣಿ ಪಂಚಾಯಿತಿಗಳು ಸೌಹಾರ್ದ ವಾತಾವರಣದಲ್ಲಿ ನ್ಯಾಯದಾನ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳುತ್ತಾರೆ.

ಕೊರಮರ ನ್ಯಾಯಕ್ಕೆ ಕೊನೆಯಿಲ್ಲ ಎಂಬುದು ಗಾದೆಮಾತು. ಒಂದು ವೇಳೆ ನಿಜವಾಗಿಯೂ ನ್ಯಾಯ ಬಗೆಹರಿಯದೇ ಹೋದರೆ ಕೆಲವು ದಿವ್ಯಗಳನ್ನೇರ್ಪಡಿಸಿ ನಿರ್ಣಯಿಸುತ್ತಿದ್ದರು. ಕೆಲವು ಸಲ ಹಾರೆಯೊಂದನ್ನು ಕೆಂಪಗೆ ಕಾಸಿ ಪಂಚಾಯತಿ ಹೂಡಿದ ಇಬ್ಬರ ಕೈಯಿಂದಲೂ ಈಜಿಸಲಾಗುತ್ತಿತ್ತು. ಹೀಗೆ ಈಜಿದ ಆ ಇಬ್ಬರಿಗೆ ಸ್ವಲ್ಪ ಭತ್ತವನ್ನು ಕೊಟ್ಟು ತಿಕ್ಕಿತಿಕ್ಕಿ ಅಕ್ಕಿಮಾಡಲು ಹೇಳುತ್ತಿದ್ದರು. ಮೊದಲು ಅಕ್ಕಿಮಾಡಿದವರು ಗೆದ್ದಂತೆ. ಕೆಲವೊಮ್ಮೆ ಎರಡು ಮಡಿಕೆಗಳನ್ನು ತರಿಸಿ, ಒಂದೇ ಪ್ರಮಾಣದ ಹಾಲನ್ನು ಕೊಟ್ಟು, ಒಂದೇ ಅಳತೆಯ ಎರಡು ಒಲೆಗಳನ್ನು ಹೂಡಿ ಹಾಲುಕಾಯಿಸಲು ಹೇಳುತ್ತಿದ್ದರು. ಯಾರ ಹಾಲು ಮೊದಲು ಉಕ್ಕುತ್ತದೆಯೋ ಅವರು ಗೆದ್ದಂತೆ. ಇಂಥದೇ ದಿವ್ಯಗಳು ಆಂಧ್ರದ ಕೊರಮರಲ್ಲಿಯು ಇತ್ತೆಂದು ವಿ. ರಾಘವಯ್ಯ ಹೇಳಿದ್ದಾರೆ.

ಹೆಳವರ ದೃಷ್ಟಿಯಲ್ಲಿ ಯಾರೂ ಕಟ್ಟೆಮನೆಯನ್ನು ಮೀರಿ ನಡೆಯಬಾರದು. ಅದು ನ್ಯಾಯದೇವತೆಯ ಸ್ಥಾನ. ದೈವದವರೇ-ಅಂದರೆ ನ್ಯಾಯ ತೀರ್ಮಾನಮಾಡುವ ಹಿರಿಯರೇ-ಅವರ ದೇವರು. ಅವರೇ ಅಂತಿಮ ನಿರ್ಣಯ ಮಾಡುವವರು.  ಇಲ್ಲಿಗರಲ್ಲಿ ನ್ಯಾಯನಿರ್ಣಯ ಸಂದರ್ಭದಲ್ಲಿ ಹೇಗೆ ನಾಡಗೌಡ ಕರಿಕಂಬಳಿ ಗದ್ದುಗೆಗೆ ನಾಲ್ಕು ಮೂಲೆಗಳನ್ನು ಬಿಡದೆ ಹೂವು-ಪತ್ರೆ, ಈಬತ್ತಿಹಚ್ಚಿ ಹಣ್ಣು ಮುರಿದು, ಕಡ್ಡಿ ಹಚ್ಚಿ ಪೂಜೆಮಾಡುತ್ತಾನೆಂಬುದನ್ನು ನೋಡಿದ್ದೇವೆ. ಇದು ಕಟ್ಟೆಮನೆಗೆ ದೈವತ್ವವನ್ನು ತಂದುಕೊಡುವ ಪ್ರಯತ್ನ. ದೊಕ್ಕಲುಮಕ್ಕಳು ತಮ್ಮ ಕಟ್ಟೆಮನೆಯ ನ್ಯಾಯ ತೀರ್ಮಾನಗಳ ಬಗ್ಗೆ ದೃಢವಾದ ನಂಬಿಕೆ ವಿಶ್ವಾಸಗಳನ್ನು ಹೊಂದಿರುತ್ತಾರೆ. ಸುಳ್ಳು, ಖೊಟ್ಟಿ ಪುರಾವೆಗಳಿಗೆ ಅಲ್ಲಿ ಸ್ಥಾನವಿಲ್ಲ ಎಂದು ಅವರು ತಿಳಿಯುತ್ತಾರೆ. ಕಟ್ಟೆಮನೆಯಲ್ಲಿ ಆಡುವ ಮಾತುಗಳೆಲ್ಲ ದೈವದೆದುರು ಆಡುವಂಥ ಮಾತುಗಳೆಂಬುದು ಅವರ ವಿಶ್ವಾಸ. “ಈ ಕಾರಣಕ್ಕಾಗಿಯೇ ದೂರು ಸಲ್ಲಿಸುವವರು “ನ್ಯಾಯ ಸ್ಥಾನದಲ್ಲಿ ಪ್ರಮಾಣಮಾಡಿ ಹೇಳುವುದೆಂದರೆ …… “ದೈವಸ್ಥಾನದಲ್ಲಿ ಕುಳಿತು ನಾಲಿಗೆ ನುಡಿಯುವುದೇನೆಂದರೆ …..” ಎಂದು ಮಾತನ್ನಾರಂಭಿಸುತ್ತಾರೆ. ಹಾಗೆಯೇ “ಕುಲಸ್ಥರ ತೀರ್ಮಾನವೇ ಅಂತಿಮ ತೀರ್ಮಾನ” ಎಂಬುದನ್ನು ಒಪ್ಪಿಕೊಂಡಿದ್ದಾರೆ. ಭೂಮಿಗೆ ಬಡಿದು ಆಣೆ ಮಾಡುವ, ದೇವರ ಮುಂದೆ ಎಣ್ಣೆ ದೀಪ ಹಚ್ಚಿ ಆಣೆಮಾಡುವ, ಮಕ್ಕಳ ತಲೆ ಮೇಲೆ ಕೈಯಿಟ್ಟು ಪ್ರಮಾಣ ಆಣೆ ಮಾಡುವ ತೀರ್ಮಾನ ಯಾವತ್ತು ನ್ಯಾಯಯುತವಾದುದೆ ಎಂಬುದು ದೊಕ್ಕಲ ಮಕ್ಕಳ ದೃಢವಾದ ನಂಬಿಗೆಯಾಗಿದೆ. ಆದ್ದರಿಂದ ತಾವು ಇಂದಿಗೂ ಅನ್ಯರ ಮುಂದೆ ನ್ಯಾಯಕೋರಿ ತಲೆಬಾಗಿಲ್ಲ, ಪೋಲಿಸ್‌ಠಾಣೆಯ ಬಾಗಿಲಿಗೆ ಅಡ್ಡಾಡಿಲ್ಲ ಎಂಬುಗಾಗಿ ತಮ್ಮ ಹೆಗ್ಗಳಿಕೆ ಹೇಳಿಕೊಳ್ಳುತ್ತಾರೆ…..” (ಕೆಕೆಪುರ:ಪುಟ ೫೧). ತಮ್ಮ ಕೆಟ್ಟೆಮನೆಗಳು ಕೊಡುವ ನ್ಯಾಯದ ಶ್ರೇಷ್ಠತೆಯ ಬಗೆಗೆ ಇವರಿಗೆ ಅಚಲ ವಿಶ್ವಾಸವಿದೆ. ತಮ್ಮವರ ಇಂಥ ಶ್ರೇಷ್ಠ ನ್ಯಾಯನಿರ್ಣಯದಿಂದಾಗಿ ಕೊರಚರು, ಕೊರಮರು, ಹಕ್ಕಿ ಪಕ್ಕಿ, ಬುಡಬುಡಕೆ, ಚೆಲುವಾದಿ ಹಾಗೂ ಕಾಡುಕುರುಬರು ನ್ಯಾಯ ಕೋರಿ ತಮ್ಮ ಕಟ್ಟೆಮನೆಗೆ ಬಂದಿದ್ದಾರೆ ಎಂದು ದೊಕ್ಕಲು ಮಕ್ಕಳು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಇಂಥದೇ ಅಭಿಮಾನ ಹೊಂದಿದ ಸುಡುಗಾಡುಸಿದ್ಧರು ತಮ್ಮ ಕಟ್ಟೆಮನೆ ತೀರ್ಪು ಸುಪ್ರೀಂ ಕೋರ್ಟಿನ ತೀರ್ಪಿನಂತೆ ಎಂದು ಭಾವಿಸುತ್ತಾರೆ. ದೇಶದ ಇತರ ಬುಡಕಟ್ಟುಗಳಲ್ಲಿಯೂ ತಮ್ಮ ನ್ಯಾಯನಿರ್ಣಯದ ಬಗೆಗೆ ಇದೇ ರೀತಿಯ ಅಭಿಮಾನ ಕಂಡುಬರುತ್ತದೆ ಎಂದು ವಿ.. ರಾಘವಯ್ಯ ಅಭಿಪ್ರಾಯ ಪಡುತ್ತಾರೆ. (ನೋಡಿ: ವಿ. ರಾಘವಯ್ಯ: ಬುಡಕಟ್ಟು ನ್ಯಾಯ). ಹೀಗೆ ಈ ಎಲ್ಲ ಬುಡಕಟ್ಟುಗಳು ತಮ್ಮ ಕಟ್ಟೆಮನೆಗಳ ನ್ಯಾಯ ನಿಷ್ಪಕ್ಷಪಾತತನದ್ದು, ಸಾಧುವಾದುದು ಎಂದು ತಿಳಿದುಕೊಂಡಿರುವುದರಿಂದಲೇ ಅವರು ಕೋರ್ಟಿನ ನ್ಯಾಯಕ್ಕೆ ಮೊರೆಹೋಗುವುದಿಲ್ಲ.

ಕಾಡುಗೊಲ್ಲರ ಹಿರಿಯರು ವೃಥಾ ಕಾದಾಡುವ, ಬೈದಾಡುವ, ಹಿರಿಯರನ್ನು ನಿರ್ಲಕ್ಷಿಸುವ, ಸತ್ಯಕ್ಕೆ ಕಿಮ್ಮತ್ತು ಕೊಡದೇ ಇರುವ ಸದಸ್ಯರ ಬಗ್ಗೆ ಕಠಿಣವಾಗಿಯೇ ವರ್ತಿಸುತ್ತಾರೆ. ನ್ಯಾಯ ತೀರ್ಮಾನವನ್ನು ಯಾರೂ ಲಘುವಾಗಿ ಕಾಣಬಾರದೆಂಬುದು ಅವರ ಧೋರಣೆ. ಕಟ್ಟೆಮನೆಯ ಹಿರಿಯರು ಜಗಳಕೋರರಾದ ಇಬ್ಬರೂ ಪೂಜಾರಿಗಳಿಗೆ ಬುದ್ಧಿಕಲಿಸಿದ ಪ್ರಸಂಗವನ್ನು ಈಗಾಗಲೇ ಕೊಡಲಾಗಿದೆ. ಇವೆಲ್ಲವುಗಳಿಂದ ‘ನೀನು ಕಟ್ಟೆಮನೆಯ ನ್ಯಾಯವನ್ನು ರಕ್ಷಿಸು; ನಿನ್ನನ್ನು ಕಟ್ಟೆಮನೆಯ ನ್ಯಾಯ ರಕ್ಷಿಸುತ್ತದೆ’ ಎಂಬುದನ್ನು ನೀನು ಧರ್ಮವನ್ನು ರಕ್ಷಿಸು; ಧರ್ಮವು ನಿನ್ನನ್ನು ರಕ್ಷಿಸುವುದು ಎಂಬಂತೆ) ಹೇಳಿದಂತಾಯಿತು.

ಇನ್ನು ಸತ್ಯಾನ್ವೇಷಣೆಗಾಗಿ ಅವರು ಬಳಸುವ ವಿಧಾನಗಳನ್ನು ಸಂಕ್ಷಿಪ್ತವಾಗಿ ವಿವೇಚಿಸಬಹುದು. ಹಲವು ಬುಡಕಟ್ಟುಗಳಲ್ಲಿ ಪಕ್ಷಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಸತ್ವಪರೀಕ್ಷೆ, ಪ್ರಮಾಣ, ದ್ವಂದ್ವಯುದ್ಧ ಮತ್ತು ಇತರ ವಿಧಾನಗಳನ್ನು ಬಳಸುತ್ತಾರೆ. ಈ ವಿಧಾನಗಳು ತಪ್ಪಿಸ್ಥರ ಮೇಲೆ ದೇವರ ಕೋಪ ಉಂಟಾಗಲೆಂದೂ, ಮುಗ್ಧರಿಗೆ ಅನುಗ್ರಹ ಸಿಗಲೆಂದೂ ರೂಪಿತವಾಗಿವೆ. ಅವು ಫಿರ್ಯಾದುದಾರ ಮತ್ತು ಆಪಾದಿತ ಇಬ್ಬರೂ ಕಟ್ಟೆಮನೆಗಳ ನ್ಯಾಯ ತೀರ್ಮಾನವನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ. ಸತ್ಯವನ್ನು ಹೊರಗೆಡಹಲು ಲಂಬಾಣಿಗರಲ್ಲಿ-ಇತರನೇಕ ಜಾತಿ ಜನಾಂಗಗಳಲ್ಲಿ ಇರುವಂತಯೇ-ಹಲವು ವಿಧಾನಗಳು ಬಳಕೆಯಲ್ಲಿವೆ. ದೇವರ ಮುಂದೆ ಪ್ರಮಾಣ ಮಾಡಿಸುವುದು, ಆಕಳಬಾಲ ಹಿಡಿದು ಆಣೆ ಮಾಡಿಸುವದು, ಧರ್ಮಸ್ಥಳ ತಿರುಪತಿಗಳಿಗೆ ಕಟ್ಟಳೆ ಕೊಡುವುದು ಮುಂತಾದ ವಿಧಾನಗಳಿವೆ. ಇವಲ್ಲದೆ ಮಕ್ಕಳ ತಲೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿಸುವುದು, ದೀಪವನ್ನು ತಲೆಯ ಮೇಲೆ ಇಟ್ಟುಕೊಂಡು ಪ್ರಮಾಣ ಮಾಡುವುದು, ದೇವರ ಗುಡಿಯ ಗಂಟೆ ಬಾರಿಸುವುದು, ಕಾಸಿದ ಕಬ್ಬಿಣದ ಗುಂಡನ್ನು ಕೈಯಲ್ಲಿ ಹಿಡಿಸುವುದು, ಸೇವಾಭಾಯಾರ ಧ್ವಜವನ್ನು ಹಿಡಿದುಕೊಂಡು ಪ್ರಮಾಣ ಮಾಡಿಸುವುದು-ಇವೇ ಮುಂತಾದ ಆಣೆ, ಪ್ರಮಾಣ, ದಿವ್ಯಗಳನ್ನು ಅವರು ಬಳಸುತ್ತಾರೆ.

ಕಾಡುಗೊಲ್ಲರ ಕಟ್ಟೆಮನೆಗಳಲ್ಲಿ ನ್ಯಾಯ ನಿರ್ಣಯ ಸಂದರ್ಭದಲ್ಲಿ ಕೆಲವೊಮ್ಮೆ ಫಿರ್ಯಾದಿ ಮತ್ತು ಆರೋಪಿಗಳಿಬ್ಬರಿಗೂ ಕುಲದ ದೈವವಾದ ಜುಂಜಪ್ಪನ ಹೆಸರಿನಲ್ಲಿ ಅಥವಾ ಪವಿತ್ರ ಕುರಿಯ ಹೆಸರಿನಲ್ಲಿ ಆಣೆಮಾಡಲು ಹೇಳುತ್ತಾರೆ. ಹಾದರದಂತಹ ಗುರುತರ ಆರೋಪವಿದ್ದರೆ ಆರೋಪಿಯು ಕಾಸಿದ ಕಬ್ಬಿಣದ ಶಲಾಖೆಯೊಂದನ್ನು ಕೈಯಲ್ಲಿ ಹಿಡಿದುಕೊಳ್ಳುವ ದಿವ್ಯವನ್ನು ಎದುರಿಸಬೇಕಾಗಿತ್ತು. ಅಲೆಮಾರಿಗಳಾದ ಕೊರವರು ಅಪರಾಧಿಯನ್ನು ಕಂಡುಹಿಡಿಯಲು ಪ್ರತ್ಯೇಕವಾಗಿ ಅಕ್ಕಿ ಕುದಿಸುವುದು, ಕಾಯ್ದ ಎಣ್ಣೆಯಿಂದ ಕಾಸು ತೆಗೆಯುವದು, ದೇವರೆದುರು ದುಡ್ಡಿಟ್ಟ ತೆಗೆದುಕೊಳ್ಳುವುದೇ ಮೊದಲಾದ ದಿವ್ಯ ಪರೀಕ್ಷೆಗಳನ್ನು ಬಳಸುತ್ತಾರೆ.

ಕಟ್ಟೆಮನೆಯ ತೀರ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡುವ ಇತರ ಉಪಾಯಗಳೂ ಇವೆ. ಇಂಥ ಒಂದು ಉಪಾಯವೆಂದರೆ ತಮ್ಮ ಕಟ್ಟೆಮನೆಗಳನ್ನು ಬಿಟ್ಟು ನ್ಯಾಯಕೇಳಲು ಹೊರಗೆ ಹೋದರೆ ಅಂಥವರನ್ನು ಕುಲದಿಂದ ಬಹಿಷ್ಕರಿಸುವುದು. ಸುಡುಗಾಡು ಸಿದ್ಧರು ಇಂಥ ಬಹಿಷ್ಕಾರ ಹಾಕುತ್ತಾರೆ. ದೊಕ್ಕಲುಮಕ್ಕಳು ತಮ್ಮ ಕಟ್ಟೆಮನೆಗಳ ತೀರ್ಮಾನ ಎಷ್ಟು ನ್ಯಾಯಯುತವಾಗಿದೆಯೆಂದರೆ ತಾವೆಂದೂ ಪೋಲಿಸ್‌ಠಾಣೆಯ ಬಾಗಿಲಿಗೆ ಅಡ್ಡಾಡಿಲ್ಲ ಎನ್ನುತ್ತಾರೆ. ಇಂಥ ಭಾವನೆಗಳು ಜನರು ತಮ್ಮ ಕಟ್ಟೆಮನೆಗಳು ನೀಡಿದ ತೀರ್ಪನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುವಂತೆ ಮಾಡುತ್ತವೆ.

 

. ವಿಧಿಸುವ ಶಿಕ್ಷೆಗಳು

ವಿವಿಧ ಬುಡಕಟ್ಟುಗಳು ಯಾವುದು ಅಪರಾಧ ಕೃತ್ಯ ಎಂಬ ಬಗೆಗೆ ಒಮ್ಮತ ಹೊಂದಿಲ್ಲ. ಹಾಗೆಯೇ ಅಪರಾಧಗಳಿಗೆ ಯಾವ ಶಿಕ್ಷೆ ವಿಧಿಸಬೇಕೆಂಬ ಬಗೆಗೂ ಒಮ್ಮತ ಹೊಂದಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಮಾತ್ರ ಎಲ್ಲ ಬುಡಕಟ್ಟು ಸಹಮತ ಹೊಂದಿರುವುದನ್ನು ಕಾಣಬಹುದು. ಮುಖ್ಯವಾದ ಒಂದು ವಿಷಯವನ್ನು ಎತ್ತಿ ಹೇಳುವುದಾದರೆ, ಯಾವ ಕಟ್ಟೆಮನೆಯೂ ಮರಣದಂಡನೆಯನ್ನು ವಿಧಿಸುವುದಿಲ್ಲ. ಇದಕ್ಕೆ ಕಾರಣವೆಂದರೆ ಜನರ ಪ್ರಾಣ ತೆಗೆಯುವ ಹಕ್ಕು ತಮಗಿಲ್ಲವೆಂದೂ, ತಮ್ಮ ಗುಂಪಿನ ಸದಸ್ಯನೊಬ್ಬನಿಗೆ ತಾವು ಶಿಕ್ಷೆಗಾಗಿ ಶಿಕ್ಷೆ ವಿಧಿಸುವುದಿಲ್ಲ, ಅವನು ಯೋಗ್ಯ ಶಿಕ್ಷೆ ಹೊಂದಿ ಮತ್ತೆ ಯೋಗ್ಯ ಸದಸ್ಯನಾಗಿ ಬಾಳಬೇಕೆಂಬುದು ತಮ್ಮ ಉದ್ದೇಶವೆಂದೂ ಆ ಹಿರಿಯರು ಹೇಳುತ್ತಾರೆ. ಇದಕ್ಕಾಗಿಯೇ ಕುಲದ ಕಟ್ಟಳೆಗಳನ್ನು ಮೀರಿದವರಿಗೆ ದಂಡ ವಿಧಿಸಿ, ಶುದ್ಧಿ ಕ್ರಿಯೆಗಳ ನಂತರ ಅವರನ್ನು ಕುಲದೊಳಗೆ ಕರೆದುಕೊಳ್ಳುತ್ತಾರೆ. ಬಹಳ ಗುರುತರ ಅಪರಾಧ ಮಾಡಿದವನನ್ನು ಬುಡಕಟ್ಟಿನಿಂದ ಬಹಿಷ್ಕರಿಸುವುದೇ ಅವರು ವಿಧಿಸುವ ಅತಿ ಕಠಿಣ ಶಿಕ್ಷೆ, ದಂಡ ಕಟ್ಟಿಸುವುದು, ಅಪರಾಧಿಯಿಂದ ಬಳಗಕ್ಕೆಲ್ಲ ಊಟ ಹಾಕಿಸುವುದು, ದೇವರೆದುರಿಗೆ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವಂತೆ ಮಾಡುವುದು, ಸೆಬ್ಬೆಯೇಟು ಹೊಡೆಯುವುದು ಶುದ್ಧೀಕರಣ ಮಾಡಿಸುವುದು ಇತ್ಯಾದಿಗಳು ಪ್ರಮುಖ ಪ್ರಕಾರದ ಶಿಕ್ಷೆಗಳು. ಇಲ್ಲಿ ಕರ್ನಾಟಕದ ಕೆಲವು ಬುಡಕಟ್ಟುಗಳ ಕಟ್ಟೆಮನೆಗಳು ವಿಧಿಸುವ ಶಿಕ್ಷೆಯನ್ನು ಸ್ಥೂಲವಾಗಿ ಸಮೀಕ್ಷಿಸಲಾಗಿದೆ.

ಇಲ್ಲಿಗರ ನಾಡಗೌಡನು ಅಪರಾಧಿಗೆ ಕೋಲಕಾರನಿಂದ ಸೆಬ್ಬೆಯೇಟು ಹಾಕಿಸುತ್ತಾನೆ. ಕಂಬಳಿ ಗದ್ದಿಗೆಗೆ ಅಡ್ಡಬೀಳಲು ಹೇಳುತ್ತಾನೆ. ತಪ್ಪು ದಂಡ ಕೊಡಿಸುತ್ತಾನೆ. ಉತ್ತರ ಕರ್ನಾಟಕದ ಹೆಳವರಲ್ಲಿ ಪತಿಪತ್ನಿಯರಲ್ಲಿ ವೈಮನಸ್ಸು ಉಂಟಾದಾಗ, ಪರಪುರುಷರ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡಾಗ, ವಿವಾಹ ಮುರುಗಡೆ ಆದ ದೂರು ಬಂದಾಗ ಸಮಾಜದ ಜನರು ಪಂಚಾಯತಿ ಕರೆದು ನ್ಯಾಯ ಮಾಡುತ್ತಾರೆ. ಇವರಲ್ಲಿ ‘ಚಿಲಮಿ ದಂಡ’ ಎಂಬ ಒಂದು ದಂಡವಿದೆ. ನ್ಯಾಯದ ಕಟ್ಟೆಯಲ್ಲಿ ಪತಿ ಪತ್ನಿಯರ ಸಂಬಂಧ ಕಡಿದ ಮೇಲೆ ಹಾಕುವ ದಂಡ ಇದು. ಹಿರಿಯರಿಗೆ ಚಿಲಮಿ ತಂಬಾಕು ಕೊಡುತ್ತಾರೆಂದು ಈ ಹೆಸರು. ‘ಹೆಡಬರತಿ ದಂಡ’ ಎಂದರೆ ತಮ್ಮ ಚಿಪ್ಪೋಡುಗಳಲ್ಲಿ ಬರೆಯಿಸಿದ ಮನೆಗಳೆಲ್ಲದೆ ಬೇರೆ ಮನೆಗಳಲ್ಲಿ ವಿಶಿಷ್ಟ ಎತ್ತುವಳಿ ಪಡೆದಿದ್ದರೆ ರೂ ೧೨೫ ದಂಡ ಹಾಗೂ ಹಟ್ಟಿಯವರಿಗೆಲ್ಲ ಊಟ ಹಾಕಬೇಕೆಂಬುದು ಹೆಡಬರತಿ ದಂಡ. ಹೆಳವನೊಬ್ಬ ಅನ್ಯಾಯಕ್ಕೆ ಒಳಗಾಗಿದ್ದರೆ ನ್ಯಾಯ ಕಟ್ಟೆಗೆ ಹೋಗಿ ಪಂಚರ ಮಧ್ಯದಲ್ಲಿ ಒಂದು ಬೆಳ್ಳಿ ಅಥವಾ ಬಂಗಾರದ ಆಭರಣ ಅಥವಾ ಒಂದು ಕಡ್ಡಿ ಇಟ್ಟು ತನಗಾದ ಅನ್ಯಾಯ ವಿವರಿಸುತ್ತಾನೆ. ಆಪಾದಿತನು ಕೂಡಾ ಒಂದು ಕಡ್ಡಿಯಿಡುತ್ತಾನೆ. ಹೀಗೆ ವಿಚಾರಣೆ ಮುಗಿಯುವ ವರೆಗೆ ಇಬ್ಬರೂ ಕಡ್ಡಿಯಿಟ್ಟು ವಾದ ಮಾಡುತ್ತಾರೆ. ನ್ಯಾಯ ನಿರ್ಣಯದಲ್ಲಿ ಸೋತವನು ಇಬ್ಬರೂ ಇಟ್ಟ ಕಡ್ಡಿಗೆ ನಾಲ್ಕು ರೂಪಾಯಿಯಂತೆ ಲೆಕ್ಕಹಾಕಿ ದಂಡಕೊಡುತ್ತಾನೆ. ಇದು ಕಡ್ಡಿ ದಂಡ. ಕುಲಗೆಟ್ಟವಳನ್ನು ಕಟ್ಟೆಮನೆಗೆ  ಎಳೆದಿದ್ದರೆ ಅವಳು ತಪ್ಪಿತಸ್ಥಳೆಂದು ತೀರ್ಮಾನವಾದಾಗ ಹೋಮದ ಬೆಂಕಿಯಲ್ಲಿ ಕಾಯಿಸಿದ ಚಿನ್ನ ಮತ್ತು ಬೆಳ್ಳಿಯ ಕಡ್ಡಿಗಳಿಂದ ಅವಳ ನಾಲಿಗೆ ಸುಡಿಸಿ ಶುದ್ಧಿ ಮಾಡಿ ಕುಲದೊಳಗೆ ಕರೆದುಕೊಳ್ಳುವರು. ಇತರ ವಿಚಾರಗಳಲ್ಲಿ ಹಗುರವಾದ ಶಿಕ್ಷೆವಿಧಿಸುವ ಹೆಳವರು ಹೆಣ್ಣು-ಗಂಡುಗಳ ವಿಚಾರ ಬಂದಾಗ ಸ್ವಲ್ಪ ಕಠಿಣವಾಗಿಯೇ ಶಿಕ್ಷಿಸುವರು (ಪವಾರ: ೧೫೯-೧೬೧).

ಕಾಡುಗೊಲ್ಲರು ವಿಧಿಸುವ ಶಿಕ್ಷೆ ಸಾಮಾನ್ಯವಾಗಿ ಸೌಮ್ಯರೂಪದ್ದು. ಅವುಗಳನ್ನು ಒಬ್ಬ ವತ್ತೃ ಹೀಗೆ ವರ್ಣಿಸಿದ್ದಾನೆ: ‘ಚಿಕ್ಕದುಡ್ಡಿನ ತಪ್ಪು, ಅರೆದುಡ್ಡಿನ ತಪ್ಪು, ಮೂರು ಹಣದ ತಪ್ಪು, ಆರು ಹಣದ ತಪ್ಪು, ಹನ್ನೆರಡು ಹಣದ ತಪ್ಪು, ಇಪ್ಪತ್ನಾಲ್ಕು ಹಣದ ತಪ್ಪು, ದಗಸೋಲು, ಕುರಿಬತ್ಯೇವು, ಗಡ್ಡ ಮಂಡೆ ತೆಗೆಯೋದು, ಅರಳಿ ಎಲೇಲಿ ನಾಲಿಗೆ ಕುಯ್ಯೋದು, ಬೇವಿನ ಕಡ್ಡೀಲಿ ನಾಲಿಗೆ ಸುಡೋದು, ಹಂದಿದೋಣಿಗೆ ನಾಯಿದೋಣಿಗೆ ಮಜ್ಜಿಗೆ ಹುಯ್ಯೋದು, ಕಳ್ಳೆ ತಪ್ಪು, ಕಪ್ಪಿನ ತಪ್ಪು, ಬೆಳಗೆ ಸಾಲು-ಈ ದಂಡಾ ಎಲ್ಲ ತಗಾಬೇಕು’ (ತೀನಂಶಂ:ಪುಟ ೩೦). ಹೀಗೆ ಕೆಲವು ದುಡ್ಡಿನ ರೂಪದ ದಂಡಗಳೂ ಕೆಲವು ದೈಹಿಕ ಹಾಗೂ ಮಾನಸಿಕ ಶಿಕ್ಷೆಗಳೂ ಕಾಡುಗೊಲ್ಲರಲ್ಲಿ ಪ್ರಚಲಿತವಿವೆ.

ಲಂಬಾಣಿಗಳಲ್ಲಿ ಅಪರಾಧಿಗಳಿಗೆ ಆದಷ್ಟು ಸೌಮ್ಯರೂಪದ ಶಿಕ್ಷೆ ಕೊಡುತ್ತಾರೆ. ಹಿಂದೆ ಐದು, ಹನ್ನೆರಡು, ಮೂವತ್ತು ರೂಪಾಯಿ ದಂಡ ಹಾಕಿ ಅದನ್ನು ವಿವಿಧ ಕುಲಗಳಿಗೆ ಹಂಚುವ ಕ್ರಮವಿದ್ದ ಹಾಗೆ ಕಾಣುತ್ತದೆ. ಆದರೆ ಮುಂದಿನ ದಿನಗಳಲ್ಲಿ ದಂಡದಿಂದ ಬಂದ ಹಣದಿಂದ ಪಂಚಾಯತಿ ಹಿರಿಯರ ಸರಾಯಿಗೆಂದು ಬಳಸಿದರೆ, ಇತ್ತೀಚಿನ ಸುಧಾರಣೆಯ ಸಂದರ್ಭದಲ್ಲಿ ತಮ್ಮ ತಾಂಡಾದ ಅಭಿವೃದ್ಧಿಗಾಗಿ ಬಳಸುವುದು ಪ್ರಾರಂಭವಾಗಿದೆ. ಸಣ್ಣಪುಟ್ಟ ತಪ್ಪುಗಳಿಗೆ ವಿಧಿಸುವ ಕೆಲವು ಶಾರೀರಿಕ ಶಿಕ್ಷೆಗಳೆಂದರೆ ದೇವರ ಗುಡಿಯ ಮುಂದೆ ಮೂಗನ್ನು ಉಜ್ಜುವಂತೆ ಮಾಡುವುದು, ಅಪರಾಧಿಗೆ ಹುಣಿಸೆ ಚುಂಗಿನಿಂದ ಹೊಡೆಯುವುದು ಇತ್ಯಾದಿ. ಸಣ್ಣಪುಟ್ಟ ಜಗಳಗಳಾದರೆ ಹಟ್ಟಿಯ ಹಿರಿಯರು ಇಬ್ಬರನ್ನೂ ಕರೆದು ಬುದ್ಧಿವಾದ ಹೇಳಿ ಕಳಿಸುತ್ತಿದ್ದರು. ಇಬ್ಬರು ಜಗಳವಾಡುತ್ತಿದ್ದಾಗ ಅವರ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ಅಲ್ಲಿದ್ದವರು ಯಾರು ಹೇಳಿದರೂ ಕೇಳದಿದ್ದಾಗ, ಅಲ್ಲಿ ನೆರೆದ ಯಜಮಾನನೊಬ್ಬ ತನ್ನ ತಲೆಗೆ ಸುತ್ತಿದ ಪೇಟಾದ ವಸ್ತ್ರವನ್ನು ಬಿಚ್ಚಿ ಅದರ ಒಂದು ತುದಿಯನ್ನು ತನ್ನ ಕೈಯಲ್ಲಿಟ್ಟುಕೊಂಡು, ಜಗಳಾಡುವ ಇಬ್ಬರ ನಡುವೆ ಉದ್ದಕ್ಕೂ ಎಸೆಯುತ್ತಾನೆ. ಇದು ಇಬ್ಬರೂ ಎದುರಾಳಿಗಳಿಗೆ ಅವರು ಕಾನೂನು ಅನುಸರಿಸಬೇಕೆಂದು ನೆನಪುಮಾಡಿಕೊಡುತ್ತದೆ. ನಂತರ ಮಧ್ಯಸ್ಥಿಕೆ ನಡೆಯುತ್ತದೆ. ಅದು ಬಗೆಹರಿಯದೆ ಜಗಳ ಮುಂದುವರಿಸಿದರೆ ಅದು ಗಂಭೀರ ಅಪರಾಧ. ಕಟ್ಟೆಮನೆಯವರು ಅದನ್ನು ಶಿಕ್ಷಿಸುತ್ತಾರೆ. (ವಿ.ರಾಘವಯ್ಯ :ಪುಟ ೭೧). ಬಸವರಾಜ ನೆಲ್ಲಿಸರ ಅವರು ಕೂಡ ಕರ್ನಾಟಕದ ಲಂಬಾಣಿಗಳಲ್ಲಿ ಇಂಥ ಕಲಹ ಪರಿಹಾರ ಮತ್ತು ಶಿಕ್ಷೆಯ ಕ್ರಮದ ಬಗ್ಗೆ ವರದಿ ಮಾಡಿದ್ದಾರೆ (ನೆಲ್ಲಿಸರ:೧೯೮೦).

ಹಲವು ಬುಡಕಟ್ಟುಗಳಲ್ಲಿ ಕಾಣುವಂತೆ ಲಂಬಾಣಿಗರಲ್ಲಿಯೂ ‘ಸಾಮೂಹಿಕವಾಗಿ ಬಳಸುವ ನೀರು ಮತ್ತು ಹುಕ್ಕಾ ಗುಡಗಡಿಗಳನ್ನು ಬಳಸದಂತೆ ತಡೆಯುವ ಶಿಕ್ಷೆ ಕಠಿಣ ಶಿಕ್ಷೆಯೇ ಆಗಿದೆ. ಲಂಬಾಣಿಗಳಲ್ಲಿ ಬಳಗದ ಬಹಿಷ್ಕಾರದ ಶಿಕ್ಷೆ ಅಷ್ಟೇ ತೀವ್ರವಾದ ಶಿಕ್ಷೆಯಾಗಿದೆ. ಈ ಶಿಕ್ಷೆದಗೆ ಗುರಿಯಾದವರಿಗೆ ನೀರು, ಬೆಂಕಿಯನ್ನು ಕೊಡುವುದಿಲ್ಲ. ಹುಕ್ಕಾ ಕೊಡುವಂತಿಲ್ಲ. ಅವರೊಂದಿಗೆ ತಾಂಡಾದ ಇತರರು ಮಾತನಾಡುವಂತಿಲ್ಲ. ಬೇರೆ ತಾಂಡಾಗಳಲ್ಲಿ ವಾಸಿಸುವ ಸಂಬಂಧಿಕರಾರೂ ಅವರ ಮನೆಗೆ ಬರುವಂತಿಲ್ಲ. ಕೊನೆಗೆ ಅಂಥವರ ಮನೆಯಲ್ಲಿ ಸತ್ತರೆ ಶವಸಂಸ್ಕಾರಕ್ಕೂ ಯಾರೂ ಹೋಗುವುದಿಲ್ಲ. ತಮ್ಮದೇ ಆದ ಸಾಮಾಜಿಕ ವ್ಯವಸ್ಥೆಯ ಅಡಿಯಲ್ಲಿ ಬದುಕುವ ಲಂಬಾಣಿಗಳಿಗೆ ಬಳಗದಿಂದ ಬಹಿಷ್ಕಾರದ ಶಿಕ್ಷೆಯು ಅತ್ಯಂತ ಕಠಿಣ ಶಿಕ್ಷೆಯೇ ಆಗಿದೆ. (ಸಣ್ಣರಾಮ:ಪುಟ ೨೮೪). ಅವರಲ್ಲಿ ಪ್ರಾಣದಂಡನೆಯ ಶಿಕ್ಷೆ ಇಲ್ಲ.. ಉತ್ತರ ಕನ್ನಡದ ಮುಕ್ರಿ ಜನರಲ್ಲಿ, ಗಾಮೊಕ್ಕಲುಗಳಲ್ಲಿ, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ಹರಡಿರುವ ಸೋಲಿಗರಲ್ಲಿ ಬಹಿಷ್ಕಾರವೇ ಕಠಿಣಶಿಕ್ಷೆಯೆನಿಸುವುದು.

ಡಾ.ಬಿ.ಪಿ. ರಾಮಯ್ಯನವರ ಪ್ರಕಾರ (ಬಿ.ಪಿ. ರಾಮಯ್ಯ: ಪುಟ ೧೫೪) ಕೊರಮರಲ್ಲಿ ತಮಗಿಂತ ಕೀಳುಜಾತಿಯ ಹೆಣ್ಣನ್ನು ಕೂಡಿಕೊಂಡು ಅವರ ಮನೆಯಲ್ಲಿ ಊಟ ಮಾಡಿದರೆ, ಮತ್ತೊಬ್ಬನ ಹೆಂಡತಿಯನ್ನು ಕೂಡಿಕೊಂಡರೆ, ಹೊತ್ತುಕೊಂಡು ಹೋದರೆ, ಕುಲದ ಚೌಕಟ್ಟು ಮೀರಿ ನಡೆದರೆ ಅಂಥವರನ್ನು ಕುಲದ ಹೊರಗೆ ಇಡುತ್ತಿದ್ದರು. ಅಂಥವರಿಗೆ ನೀರನ್ನಾಗಲಿ, ಬೆಂಕಿಯನ್ನಾಗಲಿ ಇತರರು ಕೊಡುವಂತಿಲ್ಲ. ಸಾವುನೋವಿಗೆ ಹೋಗುವಂತಿಲ್ಲ. ಮಾತನಾಡಿಸುವಂತೆಯೂ ಇಲ್ಲ. ಹೀಗೆ ಕುಲದಿಂದ ಹೊರಗಿರುವುದೆಂದರೆ ಬದುಕಿದ್ದೂ ಸತ್ತಂತೆ. ಆದ್ದರಿಂದ ಎಷ್ಟೇ ದಂಡ ಕೊಟ್ಟಾದರೂ ಕುಲಕ್ಕೆ ಸೇರುತ್ತಿದ್ದರು. ಜಾತಿಗೆಟ್ಟ ಹೆಣ್ಣನ್ನು ಕುಲಕ್ಕೆ ತೆಗೆದುಕೊಳ್ಳುವಾಗ ಅವಳ ನಾಲಿಗೆಯನ್ನು ಹಸುವಿನ ಗಂಜಳದಿಂದ ತೊಳೆದೋ ಇಲ್ಲವೇ ಬೇವಿನ ಕಡ್ಡಿಯ ಬೆಂಕಿಯಿಂದ ನಾಲಿಗೆ ಸುಟ್ಟೋ ಶುದ್ಧಿಗೊಳಿಸುತ್ತಿದ್ದರು. ಕುಲದೊಳಗೆ ಬರುವಾಗ ಕುಲದವರಿಗೆ ದಂಡ ಮತ್ತು ಊಟ ಕೊಡಬೇಕು.

ದೊಕ್ಕಲು ಮಕ್ಕಳಲ್ಲಿ ಆಚರಣೆಯಲ್ಲಿರುವ ಶಿಕ್ಷೆಯ ವಿಧಾನಗಳನ್ನು ಡಾ. ಕೆಕೆಪುರ ವಿವರವಾಗಿ ಕೊಟ್ಟಿದ್ದಾರೆ. ಕುಲಸ್ಥರಿಗೆ ತಿಳಿಸದೆ ವಿವಾಹ ಸಂಬಂಧ ಕುದುರಿಸಿದರೆ ತಪ್ಪಿತಸ್ಥರು ದಂಡವೆಂದು ಐದು ಎಲೆ, ಐದು ಅಡಿಕೆಯನ್ನು ಕುಲಸ್ಥರ ಕೈಗೆ ಕೊಡಬೇಕಲ್ಲದೆ ಎಲ್ಲರಿಗೆ ಚಹಾ ಪಾನೀಯದ ವ್ಯವಸ್ಥೆ ಮಾಡಬೇಕು. ಗಂಡ ಬಿಟ್ಟವಳಿಗೆ, ಹೆಂಡತಿ ಬಿಟ್ಟವನಿಗೆ ಶಿಕ್ಷೆಯುಂಟು. ಸಂಬಂಧ ಕಡಿದುಕೊಂಡ ಗಂಡನು ಮಾಜಿ ಹೆಂಡತಿ ಮಕ್ಕಳಿಗೆ ಜೀವನಾಂಶಕ್ಕೆಂದು ಭಿಕ್ಷೆಯ ಹಳ್ಳಿಗಳನ್ನು, ಕುರಿಮೇಕೆ ಹಂದಿಗಳನ್ನು ಬಿಟ್ಟುಕೊಡಬೇಕು. ಸಂಬಂಧ ಕಡಿದುಕೊಂಡ ಹೆಂಡತಿಯು ತಾನು ತೆಗೆದುಕೊಂಡಿದ್ದ ತೆರವು, ಕನ್ಯಾ ಶುಲ್ಕ ಮರಳಿಸಬೇಕು. ಎಲ್ಲ ಪ್ರಕರಣಗಳಲ್ಲಿ ಕುಲಸ್ಥರ ಖರ್ಚು ಕೊಡಬೇಕಾಗುತ್ತದೆ.

ಕುಲದ ಕಟ್ಟುಪಾಡುಗಳಿಗೆ ವ್ಯತಿರಿಕ್ತವಾಗಿ ನಡೆಯುವವರಿಗೆ, ಅಗಮ್ಯಗಮನ ಮಾಡುವವರಿಗೆ ಸರಪಂಚರು ನ್ಯಾಯದ ಕಟ್ಟೆಗೆ ಕರೆಸಿ ಪಾಲುಕಟ್ಟುವ ದಂಡ ವಿಧಿಸುತ್ತಾರೆ. ಪಾಲುಕಟ್ಟುವ ದಂಡವೆಂದರೆ ಊರುಕೇರಿಗಳ ಹಬ್ಬದ ಸಮಯದಲ್ಲಿ ಭಕ್ತಾದಿಗಳು ಸಲ್ಲಿಸಿದ ಕಾಣಿಕೆ, ಹರಕೆ, ಹಣ್ಣುಹಂಪಲು ಕಾಳುಕಡಿಗಳನ್ನು ಹಂಚುವಾಗ ಅಥವಾ ಹರಕೆಗೆ ಬಿಟ್ಟ ಕೋಣ, ಓತ, ಗೂಳಿ, ಟಗರು, ಹುಂಜದ ಮಾಂಸವನ್ನು ಪಾಲುಮಾಡುವಾಗ ಅಪರಾಧಿ ವ್ಯಕ್ತಿಗೆ ಸಾಮಾನ್ಯವಾಗಿ ಸಲ್ಲಿಸುವ ಪಾಲನ್ನು ಕೊಡದೇ ಇರುವುದು. ತಮ್ಮ ಜಾತಿ ಕುಲಸ್ಥರನ್ನು ಮದುವೆಗೆ ಕರೆಯದಿದ್ದರೆ, ಚಪ್ಪಲಿಯಿಂದ ಹೊಡೆಯುವುದು ಅಥವಾ ಹೊಡೆಸಿಕೊಳ್ಳುವುದು ಮುಂತಾದ ತಪ್ಪುಗಳನ್ನು ಮಾಡಿದ್ದರೆ ಅದಕ್ಕೆ ದಂಡವುಂಟು. ಆಗಮ್ಯ ಗಮನಕ್ಕೆ, ಕುಲದಿಂದ ಬಹಿಷ್ಕಾರ ಹೊಂದಿದವರೊಡನೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಅತಿ ಕಠಿಣವಾದ ಶಿಕ್ಷೆ ವಿಧಿಸುತ್ತಾರೆ. ಇಂಥ ಶಿಕ್ಷೆಯೆಂದರೆ ಸಾಮಾಜಿಕ ಬಹಿಷ್ಕಾರ, ಅಂದರೆ ಕುಲದಿಂದ ಹೊರಗಿಡುವುದು. ಅಂಥವರ ಜೊತೆಗೆ ಅನ್ನ-ನೀರು -ಬಟ್ಟೆ ಕೊಡುವುದು ಹಾಗೂ ತೆಗೆದುಕೊಳ್ಳುವುದು, ಮಾತುಕತೆ, ಇತರ ಕೊಡುಕೊಳ್ಳವು ವ್ಯವಹಾರ ಇವೆಲ್ಲವೂ ನಿಷಿದ್ಧ. ಯಾವುದೇ ಸಭೆಗೆ, ಕಾರ್ಯಕಲಾಪಗಳಿಗೆ ಆಮಂತ್ರಣವಿಲ್ಲ. ಇದರರ್ಥ ಅಪರಾಧಿಗೆ ಅವನ ಸಾಮಾಜಿಕ ಸಂಬಂಧ ಇಲ್ಲದಂತೆ ಮಾಡುವುದು, ದೈವದ ಅಪ್ಪಣೆ ಇಲ್ಲದೆ ಮದುವೆಯಾದರೆ, ಗೋತ್ರ ನಿಯಮ ಮೀರಿದರೆ, ಅಣ್ಣನ ಹೆಂಡತಿಯನ್ನು ಮದುವೆಯಾದರೆ, ಮದುವೆ ನಿಶ್ಚಯವಾದ ಮೇಲೆ ಕಾರಣಾಂತರಗಳಿಂದ ನಿಲ್ಲಿಸಿದರೆ ಸಾಮಾಜಿಕ ಬಹಿಷ್ಕಾರ ಹಾಕಬಹುದು.

ದೊಕ್ಕಲು ಮಕ್ಕಳಲ್ಲಿ ‘ಯಾರನ್ನಾದರೂ ಚಪ್ಪಲಿಯಿಂದ ಹೊಡೆಯುವುದು, ಮನೆ ತೂರಿ ಅತ್ಯಾಚಾರವೆಸಗುವುದೂ ಕೂಡಾ ತೀರಾ ಅಪರಾಧವಾಗಿ ಪರಿಗಣಿತವಾಗುತ್ತದೆ. ಅಂಥವರನ್ನು ಬೇವಿನ ಮರಕ್ಕೆ ಕಟ್ಟಿ, ಎಲೆ-ಅಡಿಕೆಯ ಎಂಜಲು ಉಗುಳಿ, ತಲೆ ಬೋಳಿಸಿ, ಕತ್ತೆಯ ಮೇಲೆ ಮೆರವಣಿಗೆ ಮಾಡುವರು. ಸಣ್ಣ ಸಣ್ಣ ತಪ್ಪುಗಳಿಗೆ, ದೊಡ್ಡ ದೊಡ್ಡ ಶಿಕ್ಷೆ, ದಂಡನೆ ಇರುವುದರಿಂದ ಸಮಾಜದಲ್ಲಿ ತುಂಬಾ ಭಯ, ಒಕ್ಕಟ್ಟು ಕಂಡು ಬರುವುದು. ಇವರು ಇಡೀ ವ್ಯವಸ್ಥೆಯ ಕಟ್ಟುಪಾಡುಗಳಿಗೆ ಬದ್ಧರಾಗಿ ನಡೆದುಕೊಳ್ಳುವರು. ಅಡಿಕೆ ಕತ್ತರಿಯಲ್ಲಿ ಸಿಕ್ಕುವದೂ ಒಂದೇ, ದೈವದವರ ಬಾಯಿಗೆ ಬೀಳುವುದೂ ಒಂದೇ ಎಂದು ತಿಳಿದಿರುವ ಇವರು ಸಮಾಜ ವಿಧಿಸಿರುವ ಕಾನೂನು, ನಿಯಮ, ಶಿಸ್ತಿಗೆ ಬದ್ಧರಾಗಿ ನಡೆದುಕೊಂಡು ಹೋಗುವುದನ್ನು ಇಂದಿಗೂ ಕಾಣಬಹುದಾಗಿದೆ’ (ಕೆಕೆಪುರ :ಪುಟ ೧೧೫).

ಸೋಲಿಗರಲ್ಲಿಯೂ ಚಪ್ಪಲಿಯಿಂದ ಹೊಡೆಯುವುದು, ಹೊಡೆಸಿಕೊಳ್ಳುವುದು, ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಧಮಕಿ ಹಾಕುವುದೂ, ಚಪ್ಪಲಿ ಕಾಲಿನಿಂದ ಹಿಡಿಯುವುದೂ ಶಿಕ್ಷಾರ್ಹವಾದ ಅಪರಾಧಗಳು. ಇದು ಕುಲದ ಮರ್ಯಾದೆಯ ಪ್ರಶ್ನೆ ಎನ್ನುತ್ತಾರೆ. ಈ ಎಲ್ಲ ತಪ್ಪಿತಸ್ಥರಿಂದಲೂ ತಪ್ಪು ದಂಡ ಪಡೆಯುತ್ತಾರೆ. ಅವಿವಾಹಿತಳು ಬಸುರಿಯಾದರೆ ತಪ್ಪು ಮಾಡಿದವನು ಅವಳನ್ನು ದಂಡತೆತ್ತು ಮದುವೆಯಾಗುವಂತೆ ಸೋಲಿಗರ ಯಜಮಾನ ಹೇಳುತ್ತಾನೆ. ವ್ಯಭಿಚಾರಿಗಳಿಗೆ ಕಠಿಣವಾದ ಶಿಕ್ಷೆಯುಂಟು, ಕೋಲಕಾರನಿಂದ ಸೆಬ್ಬೆಯೇಟು ಹೊಡೆಸುತ್ತಾರೆ. ಯಜಮಾನನು ತೀರ್ಮಾನಿಸಲಾಗದ ಪ್ರಕರಣಗಳನ್ನು ಪಟ್ಟಗಾರನು ತೀರ್ಮಾನಿಸಿಬಲ್ಲ. ತಪ್ಪಿತಸ್ಥರನ್ನು ಕುಲದಿಂದ ಹೊರಗೆ ಹಾಕುತ್ತಾರೆ. ಒಂದು ವೇಳೆ ಹೀಗೆ ಬಹಿಷ್ಕೃತನಾದವನು ಹಿರಿಯರ ಕ್ಷಮೆ ಕೇಳಿದರರೆ ಕೆಲವು ದಂಡಗಳನ್ನು ಧಾರ್ಮಿಕ ವಿಧಿಗಳನ್ನು ಅನುಸರಿಸಿ ಕುಲದೊಳಗೆ ಸೇರಿಸಿಕೊಳ್ಳವುದೂ ಉಂಟು.

ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಸಿಸುವ ಗೌಳಿಗ ಬುಡಕಟ್ಟಿನವರಲ್ಲಿ ಅತ್ಯಂತ ಕಠಿಣ ಶಿಕ್ಷೆಯೆಂದರೆ ಬಹಿಷ್ಕಾರ, ವಿವಾಹಿತ ಹೆಣ್ಣು ಅವಿವಾಹಿತ ಗಂಡಿನೊಡನೆ ಸಂಪರ್ಕಬೆಳೆಸಿದರೆ, ವಿಧವೆ ಬಸುರಾದರೆ ದಂಡಹಾಕುವುದಲ್ಲದೆ ವಿವಿಧ ರೀತಿಯ ಶುದ್ಧೀಕರಣ ಕ್ರಿಯೆಗಳಿಗೆ ಒಳಪಡಬೇಕೆಂದು  ನಿಯಮವಿದೆ.

 

೧೦. ಬದಲಾವಣೆಗಳು

ಹೊರಗಿನ ಅನೇಕ ಪ್ರಭಾವಗಳು ಹಲವು ಬುಡಕಟ್ಟುಗಳ ಕಟ್ಟೆಮನೆಯ ಪಾತ್ರವನ್ನು ಕುಗ್ಗಿಸವೆ ಎಂಬ ಗುಮಾನಿ ಇದೆ. ಆದರೂ ಅನೇಕ ಬುಡಕಟ್ಟುಗಳ ಕಟ್ಟೆಮನೆಗಳಲ್ಲಿ ಮೂಲಭೂತ ಬದಲಾವಣೆಗಳಾಗಿಲ್ಲ ಎಂಬುದು ವಿದ್ವಾಂಸರ ಮತ. ಅವರೆನ್ನುವಂತೆ ಹೀಗೆ ಬದಲಾವಣೆ ಹೊಂದದೇ ಇರಲು ಒಂದು ಮುಖ್ಯ ಕಾರಣವೆಂದರೆ ಕಟ್ಟೆಮನೆಗಳು ಕೇವಲ ನ್ಯಾಯನಿರ್ಣಯ ಮಾಡುವ ವ್ಯವಸ್ಥೆಗಳಾಗಿ ಉಳಿದಿಲ್ಲ. ದೊಕ್ಕಲುಮಕ್ಕಳ ಕಟ್ಟೆಮನೆಯ ಬಗ್ಗೆ ಹೇಳುವುದಾದರೆ ಅದು ಈಗ ಇಡೀ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ವ್ಯವಸ್ಥೆಗಳಾಗಿ ಹೊರಹೊಮ್ಮಿದೆ. ಅದು ಸ್ಥಳೀಯ ಕೇರಿಗಳಲ್ಲಿನ ನ್ಯಾಯಸ್ಥರ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಕೇರಿಯ ಹಬ್ಬ, ಜಾತ್ರೆ, ಉತ್ಸವಗಳನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಸಮುದಾಯದ ಒಗ್ಗಟ್ಟು ಕಾಪಾಡುವ ಕೆಲಸ ಮಾಡುತ್ತದೆ. ಇವೆಲ್ಲ ಅಂಶಗಳಿಂದ ಕಟ್ಟೆಮನೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.

ಡಾ. ಸಣ್ಣರಾಮ ಹೇಳುವಂತೆ ಲಂಬಾಣಿಗರು ಪ್ರಮುಖವಾಗಿ ಕ್ಷಾತ್ರ ತೇಜಸ್ಸಿನ ಜನರು. ಅವರನ್ನು ಒಂದು ತಾಂಡಾದ ಚೌಕಟ್ಟಿನಲ್ಲಿ ಸೌಹಾರ್ದತೆಯಿಂದ ಕಟ್ಟಿ ಇಡುವದು ಪ್ರಯಾಸದ ಕೆಲಸ. ಆದರೆ ತಾವಿರುವ ಸ್ಥಳದಲ್ಲಿಯೇ ಸೂಕ್ತ ತೀರ್ಮಾನಗಳನ್ನು ನೀಡುವ ಮೂಲಕ, ಅಂದರೆ ನ್ಯಾಯ ನಿರ್ಣಯದಲ್ಲಿ ನಿಷ್ಪಕ್ಷಪಾತತನವನ್ನು ಉಳಿಸಿಕೊಳ್ಳುವ ಮೂಲಕ, ಲಂಬಾಣಿ ಪಂಚಾಯತಿಗಳು ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡು ಅವರ ಐಕ್ಯತೆಗೆ ಹಾಗೂ ಸಾಮಾಜಿಕ ವಿಕಾಸಕ್ಕೆ ಸಹಕಾರಿಯಾಗಿ ಉಳಿದಿವೆ. ಆದರೆ ಅವರೇ ಹೇಳುವಂತೆ ಬದಲಾವಣೆಯ ಗಾಳಿ ತಾಂಡಾಗಳ ಮೇಲೂ ಬೀಸಿದೆ. ಜನರು ನ್ಯಾಯಕ್ಕಾಗಿ ಕೋರ್ಟುಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದು ಇತರತ್ರವೂ ಕಂಡು ಬರುವ ಸಂಗತಿ. ಆಧುನಿಕ ಪ್ರಭಾವಗಳಿಗೆ ತೆರೆದುಕೊಂಡ ಇತರ ಬುಡಕಟ್ಟುಗಳು ಕೂಡಾ ಬದಲಾವಣೆಯ ಸುಳಿಯಲ್ಲಿ ಸಿಲುಕಿವೆ. ಹೊರಗಿನವರ ಸಹಾಯ ಕೇಳುತ್ತಿವೆ. ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆಯ ಗೊಂಡರಲ್ಲಿ ಮದುವೆ, ಹರಿದಿನ, ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ತಕರಾರುಗಳಿದ್ದರೆ ಅವುಗಳನ್ನು ಈಗಲೂ ಹಿಂದಿನಂತೆ ನೆರೆಗೊಂಡ ಅಥವಾ ಸೀಮೆಗೊಂಡ ಪರಿಹರಿಸುತ್ತಾನೆ. ಆದರೆ ಇತರ ವಿಷಯಗಳನ್ನು ಇತ್ಯರ್ಥ ಪಡಿಸುವ ಕಾರ್ಯದಲ್ಲಿ ಈಗ ಹೊರಗಿನ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಭಾಗವಹಿಸುತ್ತಾರೆ.

ಆದರೆ ಈ ನಡುವೆ ಸಿವಿಲ್‌ಮತ್ತು ಕ್ರಿಮಿನಲ್‌ಕೋರ್ಟುಗಳಿಗೆ ಎಡತಾಕುವುದನ್ನು ಕಲಿತಿದ್ದಾರೆ. ಹೀಗೆ ಇವರದು ಎರಡು ದೋಣಿಗಳಲ್ಲಿ ಕಾಲಿಟ್ಟು ಹೋಗುವ ಪ್ರಯಾಣ, ಹೆದರಿಕೆಯ ಮಾತೆಂದರೆ ಇಂಥ ಪ್ರಯಾಣ ಕೆಲದೂರ ಸಾಗಲು ಮಾತ್ರ ಸಾಧ್ಯ. ಬುಡಕಟ್ಟುಗಳ ಸಮಗ್ರ ಬದುಕಿನಲ್ಲಿ ಶಿಥಿಲತೆಯುಂಟಾದರೆ ಕಟ್ಟೆಮನೆಗಳಿಗೆ ಅದರ ಆಘಾತ ಆಗದೇ ಇರುವುದು ಸಾಧ್ಯವಿಲ್ಲ.

ಹಿಂದೆ ಕುಲದ ಕಟ್ಟಳೆಗಳನ್ನು ಧಿಕ್ಕರಿಸಿದರೆ ಬುಡಕಟ್ಟುಗಳು ತೀವ್ರವಾದ ಹಾಗೂ ಕೆಲವೊಮ್ಮೆ ಕ್ರೂರವಾದ ದಂಡನೆ ವಿಧಿಸುತ್ತಿದ್ದವು. ಆ ಕಾಲದಲ್ಲಿ ಜನರು ಸಾರ್ವಜನಿಕ ಅಭಿಪ್ರಾಯ ಹಾಗೂ ದೇವರ ಕೋಪಕ್ಕೆ ಹೆದರಿ ಕಟ್ಟೆಮನೆಗಳ ನ್ಯಾಯವನ್ನು ಚಾಚೂತಪ್ಪದೆ ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗೆಯೇ ಆಪಾದಿತರು ದಿವ್ಯಗಳನ್ನು ಎದುರಿಸಬೇಕಾದ ಸಂದರ್ಭಗಳೂ ಇದ್ದವು. ಆದರೆ ಕಾಲಕ್ರಮೇಣ ದೇವರಿಗೆ ಹೆದರುವವರು ಹಾಗೂ ದಿವ್ಯಗಳನ್ನು ಎದುರಿಸುವವರ ಸಂಖ್ಯೆ ಕುಗ್ಗಿದೆ. ಕಾಡುಗೊಲ್ಲರಲ್ಲಿ ಪರಸ್ತ್ರೀ ಸಂಗ ಅಥವಾ ಪರಪುರುಷ ಸಂಗದ ಆರೋಪ ಹೊತ್ತವರು, ಕಾಸಿದ ಕಬ್ಬಿಣದ ಸಲಾಕೆ ಹಿಡಿಯುವ ಅಗ್ನಿದಿವ್ಯವನ್ನು ಎದುರಿಸಬೇಕಾಗುತ್ತಿತ್ತು. ಆದರೆ ಮುಂದೆ ಇಂಥ ಪ್ರಕರಣಗಳು ವಿಪರೀತ ಹೆಚ್ಚಿದ ಕಾರಣ ಅಗ್ನಿದಿವ್ಯವನ್ನು ಅವರು ಕೈಬಿಡಬೇಕಾಯಿತು. ವೀಕ್ಷಕರು ಹೇಳುವಂತೆ ಕಾಡುಗೊಲ್ಲರು ತಮ್ಮ ಕಟ್ಟೆಮನೆಗಳಿಗೆ ಹಿಂದಿನಂತೆ ಗೌರವ ತೋರಿಸುತ್ತಿಲ್ಲ. ಕೋರ್ಟಿಗೆ ಹೋಗುವುದು ಹೆಚ್ಚಿದೆ.

ತೀ.ನಂ. ಶಂಕರನಾರಾಯಣರು ಸುಮರು ೩೦ ವರ್ಷಗಳ ಹಿಂದೆ ‘ಈಚೆಗೆ ಕಟ್ಟೆಮನೆಯ ನ್ಯಾಯ ತೀರ್ಮಾನಕ್ಕೆ ಮೊದಲು ಕೊಡುತ್ತಿದ್ದ ಗೌರವವನ್ನು ಕಾಡುಗೊಲ್ಲರು ಕೊಡುತ್ತಿಲ್ಲ; ಕೋರ್ಟುಗಳಿಗೆ ಹೋಗುವುದು ಹೆಚ್ಚಿದೆ. ಇಷ್ಟಾದರೂ ಇಂದಿಗೂ ಕಟ್ಟೆಮನೆಗಳಲ್ಲಿಯೇ ತಮ್ಮ ಜಗಳಗಳಿಗೆ ನ್ಯಾಯ ದೊರಕಿಸಿಕೊಳ್ಳುವವರೂ ಸಾಕಷ್ಟು ಜನ ಇದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದರು. ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಕಾಡುಗೊಲ್ಲರ ಪರಿಸ್ಥಿತಿ. ಇತ್ತೀಚಿನ ವರ್ಷಗಳಲ್ಲಿ ಅವರಲ್ಲಿ ಕಟ್ಟೆಮನೆ ತೀರ್ಮಾನಕ್ಕೆ ಕೊಡುವ ಗೌರವ ಇನ್ನಿಷ್ಟು ತಗ್ಗಿರಬೇಕೆಂದು ಊಹಿಸಿದರೆ ತಪ್ಪಾಗಲಾರದು. ಇದೇ ಬುಡಕಟ್ಟಿನ ಬಗೆಗೆ ಬರೆಯುತ್ತ ಡಾ. ಕೃಷ್ಣಮೂರ್ತಿ ಹನೂರ ಅವರು ‘ಆಧುನಿಕ ವಿದ್ಯಮಾನ ಮತ್ತು ವಿದ್ಯಾಭ್ಯಾಸಗಳಿಂದಾಗಿ ಅವರ ಅನೇಕ ಹಟ್ಟಿಗಳಲ್ಲಿ ಬುಡಕಟ್ಟು ಪದ್ಧತಿಗಳು ಅರ್ಥ ಕಳೆದುಕೊಳ್ಳುತ್ತಿವೆ. ಯಾವುದೇ ವ್ಯಾಜ್ಯ, ವೈಮನಸ್ಸು, ಜಗಳ ಇವು ಕಟ್ಟೆಮನೆಯ ಮೆಟ್ಟಿಲು ಹತ್ತದೆ ಕೋರ್ಟು ಕಚೇರಿ ಕಡೆ ನಡೆದಿರುವುದೂ ಉಂಟು. ದೇವರ ಪೂಜಾರಿಕೆಯಲ್ಲೆ ಪೂಜಾರಿಗಳಿಗೆ ಜಗಳ ಹತ್ತಿ ಅವು ಕೋರ್ಟಿಗೆ ಹೋಗಿ ಇತ್ಯರ್ಥವಾಗುವುದುಂಟು. ‘ಒಟ್ಟಿನಲ್ಲಿ ನಂಟುಗಳೂ ನಿಯಂತ್ರಣಗಳೂ ಸಡಿಲವಾಗಿವೆಯೆನ್ನಬಹುದು.

ಹೆಚ್ಚುಕಡಿಮೆ ಇದೇ ಪರಿಸ್ಥಿತಿ ಲಂಬಾಣಿಗರಲ್ಲಿ ಕಂಡು ಬರುತ್ತಿದೆಯೆಂದು ಡಾ. ಖಂಡೋಬಾ, ಡಾ.ಡಿ.ಬಿ. ನಾಯಕ ಹಾಗೂ ಡಾ. ಸಣ್ಣರಾಮ ಹೇಳಿದ್ದಾರೆ. ಲಂಬಾಣಿಗರು ಹಿಂದಿಗಿಂತ ಹೆಚ್ಚಾಗಿ ಕೋರ್ಟಿಗೆ ಹೋಗುತ್ತಿದ್ದಾರೆ; ಕೋರ್ಟಿಗೆ ಹೋಗುವ ಸದಸ್ಯರ ಮೇಲೆ ಹಿಂದಿನಂತೆ ನಿಷೇಧ ಹೇರುವುದು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯವಿದೆದ. ಕೊರಮರಲ್ಲಿ ಇತ್ತೀಚೆಗೆ ತಮ್ಮ ಬುಡಕಟ್ಟಿನಲ್ಲಿಯೇ ನ್ಯಾಯ ನಿರ್ಣಯ ಆಗದಿದ್ದರೆ ಇತರ ಜನಾಂಗದ ಹಿರಿಯರ ನೆರವನ್ನು ಪಡೆಯುವ ಪರಿಪಾಠ ಕಂಡು ಬರುತ್ತಿದೆ. ಕೋರ್ಟು-ಕಚೇರಿಗಳಿಗೆ ಹೋಗುವ ಪ್ರವೃತ್ತಿಯೂ ಕಂಡು ಬರುತ್ತಿದೆ ಎನ್ನುತ್ತಾರೆ ಡಾ. ಬಿ.ಪಿ. ರಾಮಯ್ಯ. ಬುಡಕಟ್ಟು ಜನಾಂಗ ಹರಿದುಹಂಚಿ ಹೋದಾಗ, ಇತರ ಸಮಾಜಗಳೊಡನೆ ಸಮೀಕರಣಗೊಂಡಾಗ ಹೀಗಾಗುವುದು ಅನಿವಾರ್ಯ ಎಂಬುದು ಅವರ ಅಭಿಪ್ರಾಯ.

ಇತ್ತೀಚಿನ ದಿನಗಳಲ್ಲಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಕೈಕೊಂಡ ಸರಕಾರದ ಹಲವು ಯೋಜನೆಗಳಿಂದ ಹೆಳವರ ಪರಿಸ್ಥಿತಿಗಳು ಸುಧಾರಿಸುತ್ತಿವಿಯೆಂದೂ, ಆದರೆ ಕಟ್ಟುಕಟ್ಟಳೆ ನಿಷೇಧಗಳು ತುಂಬಾ ಸಡಿಲಾಗುತ್ತಿವೆಯೆಂದೂ, ಇತರ ಸಮುದಾಯದವರಂತೆಯೇ ಹೆಳವರು ಹೊಸ ಜೀವನದ ಬೆಳಕು ಕಾಣಲು ಹವಣಿಸುತ್ತಿದ್ದಾರೆಂದೂ ಡಾ. ಹರಿಲಾಲ ಪವಾರ ತಿಳಿಸುತ್ತಾರೆ. ಸುಡುಗಾಡು ಸಿದ್ಧರಾದಿಯಾಗಿ ಹಲವು ಶಾಶ್ವತ ನೆಲೆಗಳ, ಅಲೆಮಾರಿ ಹಾಗೂ ಅರೆ-ಅಲೆಮಾರಿ ಸಮುದಾಯಗಳ ಪರಿಸ್ಥಿತಿಗಳೂ ಬದಲಾಯಿಸುತ್ತಿವೆ ಎನ್ನುತ್ತಾರೆ.

ಅಷ್ಟಾಗಿ ಬದಲಾಗದೇ ಇರುವ ಕಿರಿಯ ಬುಡಕಟ್ಟುಗಳೂ ಕ್ವಚಿತ್ತಾಗಿ ಉಳಿದುಕೊಂಡಿವೆ. ಉದಾಹರಣೆಗೆ ಹಿಂದುಳಿದ ಇಲ್ಲಿಗರು ದೀರ್ಘಕಾಲ ಗುಡ್ಡಾನಡಿನ ಗುಹಾವಾಸಿಗಳಾಗಿದ್ದು ಹೊರಗಿನವರ ಸಂಪರ್ಕವಿಲ್ಲದೆ ಪ್ರತ್ಯೇಕವಾಗಿ ಉಳಿದುಕೊಂಡಿದ್ದರಿಂದ ವೈದಿಕ ಧರ್ಮದ ಪ್ರಭಾವದಿಂದಲೂ, ಕ್ರೈಸ್ತ ಪಾದ್ರಿ ಮತ್ತು ಧರ್ಮಪ್ರಚಾರಕರಿಂದಲೂ, ಆಂಗ್ಲ ಆಡಳಿತಗಾರರ ಕಣ್ಣಿನಿಂದಲೂ ದೂರ ಉಳಿಯುವುದು ಸಾಧ್ಯವಾಯಿತು. .ಈ ಹೊರಗಿನವರು ಅವರ ಕಟ್ಟೆಮನೆಗಳ ಮೇಲೆ ಪ್ರಭಾವ ಬೀರಲಿಲ್ಲ. ಹೀಗಾಗಿ ಅವಿನ್ನೂ ಶತಾಯುಗತಾಯ ಉಳಿದುಕೊಂಡಿವೆ ಎನ್ನುತ್ತಾರೆ. ಆದರೆ ದೂರ ಭವಿಷ್ಯತ್ತಿನಲ್ಲಿ ಏನಾಗುತ್ತದೋ ಹೇಳಲಾಗದು.