ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗ ಶಾಸನಗಳ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ವಿಚಾರ ಸಂಕಿರಣ ಮತ್ತು ಕಮ್ಮಟ ನಡೆಸುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆ ಮತ್ತು ಕರ್ನಾಟಕ ಪುರಾತತ್ವ ಮತ್ತು ವಸ್ತುಸಂಗ್ರಹಾಲಯದ ನಿರ್ದೇಶನಾಲಯದ ಸಹಯೋಗದೊಂದಿಗೆ ‘ಕರ್ನಾಟಕದ ಶಾಸನ ಸಂಶೋಧನೆ’ ಎಂಬ ಕಮ್ಮಟವನ್ನು ಕರ್ನಾಟಕ ವಿಶ್ವವಿದ್ಯಾಲಯದ ಭಾರತೀಯ ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದಲ್ಲಿ ಪ್ರಾಯೋಜಿಸಲಾಗಿತ್ತು. ಕಮ್ಮಟವನ್ನು ಏರ್ಪಡಿಸುವ ಸಲುವಾಗಿ ಅಂದು ಡಾ. ರಘುನಾಥ ಭಟ್ಟರವರನ್ನು ಭೇಟಿ ಮಾಡಿದಾಗ ಅವರು ಸಂತೋಷದಿಂದಲೇ ಒಪ್ಪಿ ನಮ್ಮ ಹವ್ಯಕ ಭಾಷೆಯಲ್ಲೇ ‘ತಕಳ ಕಮ್ಮಟ ಚೆನ್ನಾಗಿ ಮಾಡ್ವ’ ಎಂತಲೇ ಹೇಳಿದರು. ಕಮ್ಮಟದ ರೂಪರೇಷೆಗಳು ಸಿದ್ಧಗೊಳ್ಳುತ್ತಿರುವಾಗಲೇ ಡಾ. ರಘುನಾಥ ಭಟ್ಟರು ಅಕಾಲಿಕ ಮರಣವು ತುಂಬಲಾರದ ನಷ್ಟ ಎಂದೆನಿಸಿತು. ದಿವಂಗತ ಡಾ. ರಘುನಾಥ ಭಟ್‌ರವರ ನಂತರ ಪ್ರಭಾರಿ ನಿರ್ದೇಶಕರಾಗಿ ಬಂದ ಪ್ರೊ. ಆರ್.ಎಂ. ಷಡಕ್ಷರಯ್ಯರವರನ್ನು ಭೇಟಿ ಮಾಡಿದಾಗ, ಯಾವುದೇ ಕೊರತೆಯಿಲ್ಲದೆ ಅದೇ ಭಾವನೆಯಲ್ಲಿ ಈ ಕಮ್ಮಟವನ್ನು ನಡೆಸಲು ಒಪ್ಪಿಕೊಂಡರು. ಹೀಗಾಗಿ ದಿನಾಂಕ ೨೪.೩.೨೦೦೪ರಂದು ಕಮ್ಮಟದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಂದಿನ ಹಂಗಾಮಿ ಕುಲಪತಿ ಡಾ. ಕೆ.ವಿ. ನಾರಾಯಣರವರು ಈ ಕಮ್ಮಟದ ಉದ್ಘಾಟನೆ ಮಾಡಿದರು. ಡಾ. ಶ್ರೀನಿವಾಸ ರಿತ್ತಿ ಅವರು ಆಶಯ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಅಂದಿನ ಕರ್ನಾಟಕ ಪುರಾತತ್ವ ಇಲಾಖೆ ನಿರ್ದೇಶಕರಾದ ಶ್ರೀ ಕೆ.ಆರ್. ರಾಮಕೃಷ್ಣ ಮತ್ತು ಅಧ್ಯಕ್ಷತೆ ಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಖಾಜಾ ಪೀರ್‌ರವರು ವಹಿಸಿದ್ದರು. ಹೀಗೆ ೨೪.೩.೨೦೦೪ ರಿಂದ ೨೬.೩.೨೦೦೬ರವರಿಗೆ ಕಮ್ಮಟದಲ್ಲಿ ಮಂಡಿತ ವಾದ ಲೇಖನಗಳ ಗ್ರಂಥರೂಪವೇ ‘ಕರ್ನಾಟಕ ಶಾಸನ ಸಂಶೋಧನೆ’ಯಾಗಿದೆ.

ಕರ್ನಾಟಕ ಶಾಸನ ಸಂಶೋಧನೆಯಲ್ಲಿ ಒಟ್ಟು ಹದಿನಾರು ಲೇಖನಗಳಿವೆ. ಮೊದಲನೆಯ ಲೇಖನ ಕನ್ನಡ ಲಿಪಿ ಬೆಳವಣಿಗೆಯಾಗಿದೆ. ಇಲ್ಲಿ ಕನ್ನಡ ಲಿಪಿಯ ಬೆಳವಣಿಗೆಯ ಹಂತಗಳನ್ನು ಚಿತ್ರಮುಖೇನ ಅರಿವು ಮೂಡಿಸಲಾಗಿದೆ. ಎರಡನೇ ಲೇಖನ ಕರ್ನಾಟಕದ ಪ್ರಾಕೃತ ಶಾಸನಗಳ ನ್ನೊಳಗೊಂಡಿದೆ. ಕರ್ನಾಟಕ ಪ್ರಾಕೃತ ಸಾಹಿತ್ಯ, ಪಾಶ್ಚಾತ್ಯ ಭಾಷೆಯ ಮುಖ್ಯ ಅಕ್ಷರಗಳನ್ನು ಉದಾಹರಣೆ ಸಹಿತವಾಗಿ ವಿವರಿಸಿ, ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳನ್ನು ನಕಾಶೆಯ ಮೂಲಕ ತೋರಿಸುವುದರೊಂದಿಗೆ ಎಲ್ಲಾ ಪ್ರಮುಖ ಪ್ರಾಕೃತ ಶಾಸನಗಳನ್ನು ಒಂದೆಡೆ ಸೆರೆ ಹಿಡಿದಿರುವುದು ಈ ಲೇಖನದ ವಿಶೇಷತೆಯಾಗಿದೆ. ಮೂರನೇ ಲೇಖನ ಸಂಸ್ಕೃತ ಮತ್ತು ಕರ್ನಾಟಕದ ಶಾಸನಗಳನ್ನೊಳಗೊಂಡಿದೆ. ಕರ್ನಾಟಕದ ಶಾಸನ ಸಂಶೋಧನೆಯಲ್ಲಿ ಸಂಸ್ಕೃತದ ಪ್ರಮುಖ ಪಾತ್ರವನ್ನು, ಶಾಸನ ಮತ್ತು ಸಂಸ್ಕೃತ ಸಾಹಿತ್ಯಕ್ಕಿರುವ ಸಂಬಂಧದ ಮಜಲುಗಳನ್ನು ಮತ್ತು ಈ ಕ್ಷೇತ್ರದಲ್ಲಿರುವ ಸಂಶೋಧನೆಗೆ ಇರುವ ಅವಕಾಶವನ್ನು ಉದಾಹರಣೆ ಸಹಿತ ಈ ಲೇಖನದಲ್ಲಿ ವಿವರಿಸಲಾಗಿದೆ. ಲೇಖನ ನಾಲ್ಕು ಮತ್ತು ಐದು ಶಾಸನಗಳ ಭಾಷೆಯಾಗಿದೆ. ಭಾಷೆಗಳಲ್ಲಿನ ದೇಸಿ ಮಾರ್ಗದಲ್ಲಿ ಹಲ್ಮಿಡಿ, ಕಂಪ್ಲಿ ಮತ್ತು ಕೆಲಗುಂದ್ಲಿ ಶಾಸನಗಳನ್ನು ಮಾದರಿಯಾಗಿ ತೋರಿಸಲಾಗಿದೆ. ಶಾಸನಗಳ ಶಿಷ್ಟರೂಪ ಮತ್ತು ದೇಸಿರೂಪಗಳನ್ನು ಈ ಲೇಖನಗಳಲ್ಲಿ ಅಳವಡಿಸಿದೆ. ಲೇಖನ ಆರರಲ್ಲಿ ಶಾಸನಗಳನ್ನು ಓದಬೇಕಾದ ಕ್ರಮ, ಭಾಷೆ ವರ್ಗೀಕರಣ ಕುರಿತಿದೆ. ಏಳನೇ ಲೇಖನವಾದ ಕರ್ನಾಟಕ ಶಾಸನಗಳು ಈ ಲೇಖನದಲ್ಲಿ ಕದಂಬರ ಕಾಲದಿಂದ ಹಿಡಿದು ವಿಜಯನಗರ ಕಾಲದವರೆಗೂ ಸಮೀಕ್ಷೆ ಮಾಡಲಾಗಿದೆ. ಒಟ್ಟು ಐದು ಹಂತಗಳಲ್ಲಿ ಶಾಸನಗಳ ಸಮೀಕ್ಷೆ ಮಾಡಿ ಕದಂಬರ ಕಾಲದಿಂದ ಬಾದಾಮಿ ಚಲುಕ್ಯರ ಶಾಸನಗಳಿಗೆ ಹೆಚ್ಚು ಒತ್ತುಕೊಡಲಾಗಿದೆ. ಲೇಖನ ಎಂಟರಲ್ಲಿ ವಿಜಯನಗರ ಕಾಲದ ಕೆಲವು ಮಹತ್ವ ಶಾಸನಗಳನ್ನು ಪರಿಶೀಲಿಸಲಾಗಿದೆ. ಆಲದಹಳ್ಳಿ, ಶೃಂಗೇರಿ, ಶ್ರವಣಬೆಳಗೊಳ, ಹಂಪಿಯ ಎರಡು ಶಾಸನ ಗಳು, ಶ್ರೀ ಕೃಷ್ಣದೇವರಾಯನ ತಿರುಪತಿ, ಶ್ರೀಶೈಲ, ಕಾಂಚಿ ಮತ್ತು ಅಹೋಬಲಂ, ಕಾಳಹಸ್ತಿ ಶಾಸನಗಳ ಮಹತ್ವವನ್ನು ಈ ಲೇಖನದಲ್ಲಿ ಹೇಳಲಾಗಿದೆ. ಲೇಖನ ಒಂಬತ್ತರಲ್ಲಿ ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಸಂಶೋಧನಾ ಪಾತ್ರವನ್ನು ಮತ್ತು ಕೊಡುಗೆಯನ್ನು ವಿವರಿಸ ಲಾಗಿದೆ. ಇಲ್ಲಿ ದೇವಾಲಯದ ನಿರ್ಮಾಣದ ಪ್ರೇರಣೆಯನ್ನು ಶಾಸನಗಳಲ್ಲಿ ಗ್ರಹಿಸ ಬೇಕೆಂಬುದನ್ನು ತೋರಿಸಿರುವುದು ಈ ಲೇಖನದ ಇನ್ನೊಂದು ಮಹತ್ವದ ಹೆಜ್ಜೆ. ಲೇಖನ ಹತ್ತರಲ್ಲಿ ಶಾಸನಗಳು ಮತ್ತು ಪುರಾತತ್ವ ಕುರಿತಂತಿದೆ. ಶಾಸನ ಪುರಾತತ್ವದ ಒಂದು ಟೊಂಗೆಯೆನಿಸಿ ಶಾಸನಗಳನ್ನು ಆಧರಿಸಿ ಪುರಾತತ್ವ ಉತ್ಖನನ ಮಾಡುವುದು ಹೇಗೆ ಸಹಕಾರಿ ಯಾಗಬಲ್ಲದು ಎಂಬುದನ್ನು ಗುಡ್ನಾಪುರ ಶಾಸನವನ್ನು ಉದಾಹರಿಸಿದ್ದಾರೆ. ಶಾಸನದಲ್ಲಿನ ೧ ರಿಂದ ೯ರ ವರೆಗಿನ ಸಂಖ್ಯಾ ಸಂಕೇತವನ್ನು ಛಾಯಾಚಿತ್ರದ ಮೂಲಕ ತೋರಿಸಲಾಗಿದೆ. ಲೇಖನ ಹನ್ನೊಂದು ಶಾಸನಶಾಸ್ತ್ರ ಮತ್ತು ನಾಣ್ಯಶಾಸ್ತ್ರದ ಸಂಬಂಧ ಕುರಿತಂತಿದೆ. ಲೇಖನ ಹನ್ನೆರಡರಲ್ಲಿ ಮೋಡಿ ಲಿಪಿ, ವಿನ್ಯಾಸ ಸಂಶೋಧನಾ ಮಾರ್ಗದ ಅಗತ್ಯತೆಯನ್ನು ತೋರಿಸಿ ಮೋಡಿಲಿಪಿಯಲ್ಲಿ ಸ್ವರ, ವ್ಯಂಜನದ ಛಾಯಾಚಿತ್ರ ನೀಡಿ ಉದಾಹರಣೆ ಸಹಿತ ವಿವರಿಸ ಲಾಗಿದೆ. ಲೇಖನ ಹದಿಮೂರರಲ್ಲಿ ಶಾಸನಗಳ ಅಧ್ಯಯನದಲ್ಲಿ ಗಣಕಯಂತ್ರದ ಬಳಕೆ ಕುರಿತಂತಿದೆ. ಭಾರತೀಯ ಲಿಪಿಗಳ ಪ್ರಾಚೀನತೆ, ಕನ್ನಡ ಲಿಪಿಯ ಪ್ರಾಚೀನತೆ ಮತ್ತು ವಿಕಾಸ, ಗಣಕಯಂತ್ರದ ಸೌಲಭ್ಯವನ್ನು ಶಾಸನಗಳಿಗೆ ಉಪಯೋಗಿಸುವ ಬಗೆಯನ್ನು ಈ ಅಧ್ಯಾಯದಲ್ಲಿ ಸೆರೆಹಿಡಿಯಲಾಗಿದೆ. ಹಲ್ಮಿಡಿ ಶಾಸನವನ್ನು ಉದಾಹರಿಸಿ ಅದರ ಬದಲಿಸಿದ ಪ್ರತಿಯನ್ನು ಛಾಯಾಚಿತ್ರದ ಮೂಲಕ ತೋರಿಸಿರುವುದು ಈ ಅಧ್ಯಾಯದ ವಿಶೇಷತೆಯಾಗಿದೆ. ಲೇಖನ ಏಳು ಶಾಸನ ಶಿಲ್ಪಗಳು. ಇಲ್ಲಿಶಾಸನ ಶಿಲ್ಪಗಳ ವರ್ಗೀಕರಣದ ಸಮೀಕ್ಷೆ ಮಾಡಲಾಗಿದೆ. ಲೇಖನ ಹದಿನೈದರಲ್ಲಿ ಶಾಸನ ಶಿಲ್ಪಗಳು-ಸಂಶೋಧನಾ ವಿಧಾನವಾಗಿದೆ. ಈ ಲೇಖನದಲ್ಲಿ ಶಾಸನೋಕ್ತ ಕುಶಲ ಕಲಾಕಾರರನ್ನು ಗುರುತಿಸುವ ವಿಧಿ ವಿಧಾನ ಮತ್ತು ಸಮಸ್ಯೆಗಳನ್ನು ಉದಾಹರಿಸುವ ವಿಧಾನದ ಕುರಿತಂತಿದೆ. ಲೇಖನ ಹದಿನಾರರಲ್ಲಿ ಸಂಶೋಧನೆ ಯಲ್ಲಿ ಪ್ರಾದೇಶಿಕ ಶಾಸನಗಳ ಅಧ್ಯಯನದ ಮಹತ್ವವನ್ನು ಹೇಳಲಾಗಿದೆ.

ಈ ಜ್ಞಾನದೀವಿಗೆ ಗ್ರಂಥರೂಪದಲ್ಲಿ ಹೊರಬಂದಿರುವುದು ನನ್ನೊಬ್ಬನಿಂದಲ್ಲ. ಅಂದು ಈ ಕಮ್ಮಟ ನಡೆಯಲು ಮೊದಲು ಸಹಕರಿಸಿದವರು ದಿವಂಗತ ಡಾ. ರಘುನಾಥ ಭಟ್‌ರವರು. ಅವರಿಗೆ ನನ್ನ ಹೃತ್ಪೂರ್ವಕ ಗೌರವಾರ್ಪಣೆ. ಅವರ ನಂತರ ಬಂದ ಡಾ. ಎಂ. ಷಡಕ್ಷರಯ್ಯ ನವರು ಯಾವುದೇ ಕೊರತೆಯಿಲ್ಲದೆ ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ. ಕನ್ನಡ ವಿಶ್ವ ವಿದ್ಯಾಲಯದ ಅಂದಿನ ಪ್ರಭಾರ ಕುಲಪತಿ ಡಾ. ಕೆ.ವಿ. ನಾರಾಯಣ ಅವರಿಗೆ, ಆಗಿನ ಕರ್ನಾಟಕ ಪುರಾತತ್ವ ನಿರ್ದೇಶಕರಾದ ಶ್ರೀ ಕೆ. ರಾಮಕೃಷ್ಣರವರು ಸಕಾಲಕ್ಕೆ ಹಣಕಾಸು ನೆರವು ನೀಡಿ ಸಹಕರಿಸಿದ್ದಾರೆ. ಡಾ. ಶ್ರೀನಿವಾಸ ರಿತ್ತಿಯವರು ಕಮ್ಮಟದ ಆಶಯ ಭಾಷಣ ಮತ್ತು ಸಮಾರೋಪ ಭಾಷಣವನ್ನು ಡಾ. ಎಸ್. ರಾಜಶೇಖರ್‌ರವರು ಮಾಡಿದರು.

ಸಮಾರೋಪದ ಅತಿಥಿಗಳಾಗಿ ಡಾ. ಅ. ಸುಂದರ, ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ತೇಜಸ್ವಿ ಕಟ್ಟಿಮನಿಯವರು ವಹಿಸಿ ಕಮ್ಮಟದಿಂದ  ಆದ ಪ್ರಯೋಜನವನ್ನು ತಿಳಿಸಿ ವಿವರಿಸಿದ್ದಾರೆ. ಮಂಡಿತವಾದ ಲೇಖನಗಳು ಈ ಗ್ರಂಥರೂಪ ದಲ್ಲಿ ಬರಲು ಹಲವರ ಪಾತ್ರವಿದೆ. ಡಾ. ಹಿ.ಚಿ. ಬೋರಲಿಂಗಯ್ಯ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರವರು ಆಡಳಿತಾಂಗದಿಂದ ಎಲ್ಲ ರೀತಿಯ ನೆರವು ನೀಡಿದ್ದಾರೆ. ಬೇಕೆಂದೆನಿಸಿ ದಾಗಲೆಲ್ಲಾ ಡಾ. ಶ್ರೀನಿವಾಸ ಪಾಡಿಗಾರ, ಡಾ. ಸಿ.ಎಸ್. ವಾಸುದೇವನ್‌ರವರ ಸಹಕಾರ ಪಡೆದಿದ್ದೇನೆ. ಒಟ್ಟು ಪುಸ್ತಕದ ವಿನ್ಯಾಸವನ್ನು ರೂಪಿಸಿದ ಹಾಗೂ ತಾಂತ್ರಿಕವಾಗಿ ಸಹಕರಿಸಿದವರು ಪ್ರಸಾರಾಂಗದ ಮಿತ್ರ ಶ್ರೀ ಕೆ.ಎಲ್. ರಾಜಶೇಖರ್ ಅವರು. ಡಿ.ಟಿ.ಪಿ. ಮಾಡಿದ ಪ್ರಸಾರಾಂಗದ ಗಣಕ ಕೇಂದ್ರದ ಶ್ರೀ ಜೆ. ಶಿವಕುಮಾರ, ಮುಖಪುಟ ವಿನ್ಯಾಸವನ್ನು ಮಾಡಿದ ಶ್ರೀ ಕೆ.ಕೆ. ಮಕಾಳಿಯವರಿಗೆ ಮತ್ತು ಕಮ್ಮಟಕ್ಕೆ ಬಂದು ಲೇಖನ ಮಂಡಿಸಿದ ಎಲ್ಲಾ ವಿದ್ವಾಂಸರಿಗೂ ಹಾಗೂ ಪ್ರಸಾರಾಂಗದ ಮೂಲಕ ಪ್ರಕಟಿಸಲು ಅನುವು ಮಾಡಿದ ನಿರ್ದೇಶಕರಾದ ಡಾ. ಎ. ಮೋಹನ್ ಕುಂಟಾರ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಕೆ.ಜಿ. ಭಟ್ಸೂರಿ