ನಮ್ಮ ದೇಶದ ಇತಿಹಾಸ ಪುನರ್ರಚನೆಗೆ ಶಾಸನಗಳು ಬಹುಮುಖ್ಯವಾದ ಆಕರಗಳಲ್ಲಿ ಒಂದಾಗಿವೆ. ಮೌರ್ಯ ಚಕ್ರವರ್ತಿ ಅಶೋಕ (ಕ್ರಿ.ಪೂ.ಸು. ೨೭೩-೨೩೪)ನ ಕಾಲದಿಂದ ಕೆಳದಿ ಅರಸುಮನೆತನ ಒಟ್ಟಾರೆ ವಿಜಯನಗರೋತ್ತರ ನಾಯಕರ ಕಾಲದ ಕೊನೆಯವರೆಗಿನ ಶಾಸನಗಳ ಸಂಖ್ಯೆ ಸಾವಿರಾರು. ಇದುವರೆಗೆ ಕರ್ನಾಟಕದಲ್ಲಿಯೇ ೨೫,೦೦೦ಕ್ಕೂ ಹೆಚ್ಚು ಶಾಸನಗಳು ಉಪಲಬ್ಧವಾಗಿದೆ. ಈ ಶಾಸಗಳ ವ್ಯವಸ್ಥಿತ ವಿಶ್ಲೇಷಣೆ ಮತ್ತು ಅಧ್ಯಯನಗಳಿಂದ ಆಯಾ ಪ್ರದೇಶದ ಆಯಾ ಕಾಲದ ಅರಸುಮನೆತನಗಳು ರಾಜ್ಯವಿಸ್ತಾರ, ಆಡಳಿಕ್ರಮ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸಂಗತಿಗಳು. ಲಿಪಿ, ಭಾಷೆಗಳ ಬೆಳವಣಿಗೆ ವಿಷಯ ಗಳನ್ನು ತಿಳಿಯಲು ಸಾಧ್ಯವಾಗಿದೆ.

ಶಾಸನಗಳಂತೆ ಆಯಾಯ ಪ್ರದೇಶದ ಆಯಾಯ ಕಾಲದ ಜನಸಮುದಾಯಗಳ ದೈನಂದಿಕ ಜೀವನಕ್ಕೆ ಸಂಬಂಧಿಸಿದ ವಿವಿಧ ಪ್ರಕಾರಗಳ ವಸ್ತುಗಳ ವಾಸ್ತು ನಿರ್ಮಿತಿಗಳು ಶಿಲ್ಪಗಳ ಮೊದಲಾದ ಪುರಾತತ್ವ ಅವಶೇಷಗಳೂ ಮುಖ್ಯ ಆಕರಗಳಲ್ಲಿ ಒಂದಾಗಿವೆ. ಶಾಸನಗಳು ಬರವಣಿಗೆಯ ತಂತ್ರ. ಸಾಮಾನ್ಯವಾಗಿ ಬಳಕೆಗೆ ಬಂದಂದಿನಿಂದ ಜನಸಮುದಾಯಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಸಿದರೆ ಇತರ ಪುರಾತತ್ವ ಆಕರಗಳು ಯಥಾಸ್ಥಿತಿಯ ನಗರ, ಗ್ರಾಮ ವಿನ್ಯಾಸ ನಾನಾ ಪ್ರಕಾರದ ನಿರ್ಮಿತಿಗಳ ನಿರ್ಮಾಣ ತಂತ್ರ, ಕೈಗಾರಿಕಾ ತಂತ್ರಗಳು ಮೊದಲಾದ ಸಿದ್ಧವಸ್ತುಗಳ ಬಗ್ಗೆ ತಿಳಿಯಲು ಸಾಧ್ಯವಾಗುವುದಲ್ಲದೆ ಮಾನವರು ಈ ಭೂಮಿಯ ಮೇಲೆ ಕಾಣಿಸಿದಂದಿನಿಂದ ಬರವಣಿಗೆಯ ತಂತ್ರವನ್ನು ಕಲ್ಪಿಸಿಕೊಳ್ಳುವ ದೀರ್ಘ ಕಾಲೀನ ಅವರ ದೈಹಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ತಿಳಿಸುತ್ತವೆ. ಶಾಸನಗಳೂ ಕೂಡ ಇಂತಹ ಪುರಾತತ್ವ ಆಕರಗಳಲ್ಲಿ ಒಂದು ಎಂಬುದನ್ನು ಮರೆಯಬಾರದು. ಉದಾ ಹರಣೆಗೆ ಸಿಂಧೂ-ಸರಸ್ವತಿಯ ನಾಗರಿಕತೆಯ ಲಿಪಿಯು ನಮಗೆ ತಿಳಿದಿರುವುದು ಈ ನಾಗರಿಕತೆಯ ಪುರಾತತ್ವ ನೆಲೆಗಳ ಉತ್ಖನನದಿಂದ. ಹಾಗೆಯೇ ಇದಕ್ಕೆ ಪೂರಕವಾಗಿ ಮಹತ್ವದ ಪುರಾತತ್ವ ನೆಲೆಗಳ ಶೋಧನೆಗೆ ವಾಸ್ತುನಿರ್ಮಿತಿಗಳ, ಶಿಲ್ಪಗಳ ಸೃಷ್ಟಿಕರ್ತರನ್ನು ಗುರುತಿಸುವಲ್ಲಿ ಮತ್ತು ಅವುಗಳ ಕಾಲಮಾನವನ್ನು ಗೊತ್ತುಮಾಡುವಲ್ಲಿ ಶಾಸನಗಳು ನೆರವಾಗುತ್ತವೆ. ಪ್ರಸ್ತುತ ಲೇಖನದಲ್ಲಿ ಪುರಾತತ್ವ ಆಕರಗಳ ನೆಲೆಗಳ ಅಧ್ಯಯನದಲ್ಲಿ ಶಾಸನಗಳು ಹೇಗೆ ನೆರವಾಗುತ್ತವೆ ಎಂಬುದನ್ನು ಇಲ್ಲಿ ವಿವೇಚಿಸಲಾಗಿದೆ.

ಬ್ರಹ್ಮಗಿರಿಯಲ್ಲಿ (ಸಿದ್ಧಾಪುರ, ಚಿತ್ರದುರ್ಗ ಜಿಲ್ಲೆ) ಮೌರ್ಯ ಚಕ್ರವರ್ತಿ ಅಶೋಕನ ಕಿರುಬಂಡೆ ಶಾಸನವು

[1] ಇರುವುದು ಇತಿಹಾಸಜ್ಞರಿಗೆ ತಿಳಿದ ವಿಷಯ. ಈ ಶಾಸನದಲ್ಲಿ ಪುರಾತತ್ವ ಅಧ್ಯಯನಕ್ಕೆ ಅನುಕೂಲವಾದ ಕೆಲವೇ ಸಂಗತಿಗಳಿವೆ. ಮೊದಲನೆಯದಾಗಿ ಕಾಬೂಲ್, ಕಾಂದಹಾರ ಸೇರಿದಂತೆ ವಾಯವ್ಯ ಗಡಿ ಪ್ರದೇಶಗಳನ್ನು ಹೊರತುಪಡಿಸಿ, ಅಶೋಕನ ಇತರ ಎಲ್ಲ ಶಾಸನಗಳು ಬ್ರಾಹ್ಮಿಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿರುವುದು ಕೂಡ ಇತಿಹಾಸ ತಿಳಿದವರಿಗೆ ಗೊತ್ತಿರುವ ವಿಷಯ. ಬ್ರಹ್ಮಗಿರಿ ಶಾಸನದಲ್ಲಿ ಮಾತ್ರ ಕೊನೆಯ ಸಾಲಿನಲ್ಲಿ “ಚಪಡೆನ ಲಿಪಿಕರೇಣ” ಎಂಬ ಎರಡು ಪದಗಳಿದ್ದು ಲಿಪಿಕರೇಣ ಎಂಬ ಕೊನೆಯ ಪದ ಖರೋಷ್ಠಿ ಲಿಪಿಯಲ್ಲಿದೆ. ಇದು ವಾಯವ್ಯ ಸರಹದ್ದಿನ ಪ್ರಾಂತಗಳಲ್ಲಿ ಮತ್ತು ಮಧ್ಯ ಏಷಿಯಾದಲ್ಲಿ ಬ್ರಾಹ್ಮಿಲಿಪಿಯೊಡನೆ ಕ್ರಿ.ಪೂ. ೩ನೇ ಶತಮಾನದಿಂದ ಕ್ರಿ.ಶ. ೩ನೇ ಶತಮಾನ ದವರೆಗೆ ಬಳಕೆಯಲ್ಲಿದ್ದಿತು. ಪ್ರಾಚೀನ ಭಾರತದ ಉಳಿದ ಭಾಗದಲ್ಲೆಲ್ಲಿಯೂ ಈ ರೀತಿಯ ಲಿಪಿ ಬಳಕೆಯಲ್ಲಿದ್ದುದು ಇದುವರೆಗೆ ಬೆಳಕಿಗೆ ಬಂದಿಲ್ಲ. ಆದ್ದರಿಂದ ಬ್ರಹ್ಮಗಿರಿಯಲ್ಲಿ ಈ ಲಿಪಿಯ ಬಳಕೆ ತುಂಬಾ ಕುತೂಹಲಕಾರಿಯಾಗಿದೆ. ಆ ಪ್ರದೇಶದ ಜನರಿಗೆ ಆ ಕಾಲದಲ್ಲಿ ಅಲ್ಪಸ್ವಲ್ಪ ಈ ಲಿಪಿ ಗೊತ್ತಿತ್ತೆ? ಇಲ್ಲವೇ ಲಿಪಿಕಾರನೇ ತನ್ನ ಬಹು ಲಿಪಿಜ್ಞಾನದ ಹೆಗ್ಗಳಿಕೆ ಯನ್ನು ತೋರಿಸಲು ಈ ಲಿಪಿಯನ್ನು ಉಪಯೋಗಿಸಿದನೇ? ಉತ್ತರವನ್ನು ಕಂಡು ಹಿಡಿಯ ಬೇಕಾಗಿದೆ.

ಎರಡನೆಯದಾಗಿ ಅಶೋಕನ ಕೆಲವು ಶಾಸನಗಳಲ್ಲಿ ತಮ್ಮ ಸಾಮ್ರಾಜ್ಯದಲ್ಲೆಲ್ಲ ಒಟ್ಟಾರೆ ಸುಮಾರು ೨೫೬ ದಿನಗಳ ಪರ್ಯಂತ ಸುತ್ತಾಡಿ ಜನಸಾಮಾನ್ಯರಿಗೆ ಮೂಲಭೂತ ನೀತಿ, ಧರ್ಮ ತಿಳುವಳಿಕೆಯನ್ನು ಕೊಟ್ಟಿರುವ ಸಂಗತಿ ಇದೆ. ಅವನ ತಿರುಗಾಟದ ದಿನಗಳ ಸಂಖ್ಯೆ ಯನ್ನು ಇತರ ಶಾಸನಗಳಲ್ಲಿ ಪದಗಳಲ್ಲಿ ಸೂಚಿಸಲಾಗಿದೆ. ಬ್ರಹ್ಮಗಿರಿಯಲ್ಲಿ ಇದನ್ನು ಸಂಖ್ಯೆ ಯಲ್ಲಿ ಸೂಚಿಸಿರುವುದು ಗಮನಾರ್ಹ. ಇದರಲ್ಲಿ ೨೦೦, ೫೦, ೬ ಈ ಸಂಖ್ಯೆಗಳನ್ನು ಪ್ರತ್ಯೇಕ, ಪ್ರತ್ಯೇಕ ಸಂಖ್ಯಾ ಸಂಕೇತಗಳಿಂದ ಸೂಚಿಸಲಾಗಿದೆ ಅಂದರೆ ಈ ಸಂಕೇತಗಳ ಮೌಲ್ಯಗಳನ್ನು ಬರೆದಲ್ಲಿ ಅದನ್ನು ಹೀಗೆ ಓದಬಹುದು: ಇನ್ನೂರು, ಐವತ್ತು, ನಾಲ್ಕು ಇದು ಪದ ಸಂಖ್ಯಾ ವಾಚಕ. ಪದ ಸಂಖ್ಯಾವಾಚಕ ಪದ್ಧತಿ ಋಗ್ವೇದ ಕಾಲದಿಂದ ಸುಮಾರು ೧ನೇ ಶತಮಾನ ದವರೆಗೂ ಬಳಕೆಯಲ್ಲಿದ್ದಿತು. ಆದರೆ ಏಕದಶಕ ಮತ್ತು ಶತಕ ಸ್ಥಾನಗಳ ಸಂಖ್ಯೆಗಳ ಮೌಲ್ಯ ಗಳನ್ನು ಪ್ರತ್ಯೇಕ, ಪ್ರತ್ಯೇಕ ಸಂಕೇತದಿಂದಲೂ ಸೂಚಿಸುವ ಪದ್ಧತಿ ಮೌರ್ಯರ ಕಾಲ ದಿಂದಲೂ ಹಿಂದಿನಿಂದ ಇದ್ದಿತೆಂಬ ಸಂಗತಿ ಈ ಶಾಸನದಿಂದ ಅರಿವಾಗುತ್ತದೆ. ಆದರೆ ಸ್ಥಾನ ದಿಂದ ಈ ಸಂಖ್ಯೆಗಳ ಮೌಲ್ಯವನ್ನು ಗುರುತಿಸದೇ ಪ್ರತಿಯೊಂದು ಸ್ಥಾನದ ಅಂಕಿಗಳ ಮೌಲ್ಯಕ್ಕೂ ಒಂದೊಂದು ಸಂಕೇತವನ್ನು ಮಾಡಿಕೊಂಡಿರುವುದು ಗಮನಿಸಬೇಕಾದುದು. ಅಂದರೆ ೨೦೦ಕ್ಕೆ ಒಂದು ಸಂಕೇತ, ೫೦ಕ್ಕೆ ಒಂದು ಸಂಕೇತ ಈ ಶಾಸನದಲ್ಲಿ ಇದ್ದುದರಿಂದ ೨೦,೩೦,೪೦ ಹಾಗೆಯೇ ೨೦೦,೩೦೦,೪೦೦ ಮೊದಲಾದ ಸಂಖ್ಯೆಗಳಿಗೆ ಪ್ರತ್ಯೇಕ ಒಂದೊಂದು ಸಂಕೇತವಿದ್ದಿರಬೇಕು.


ಚಿತ್ರ
: ಬ್ರಹ್ಮಗಿರಿ ಮೊದಲಿನ ಮೂರು ಸಾಲುಗಳು, ಸಂಖ್ಯಾಸಂಕೇತಗಳು

 

ಮೂರನೆಯದಾಗಿ ಶಾಸನವಿರುವ ನೆಲೆಯ ಹೆಸರು ಅದು ‘ಇಸಿಲಾ’. ಈ ಇಸಿಲಾ ನಾಮಪದ ಸಂಸ್ಕೃತ ಇಲ್ಲವೆ ದ್ರಾವಿಡ ಭಾಷೆಯದು ಎನ್ನುವುದರ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಕನ್ನಡ ವಿದ್ವಾಂಸರು ಇದು ದ್ರಾವಿಡ ಭಾಷೆಯ ಪದ ಮತ್ತು ಕನ್ನಡ ಎಂಬ ಅಭಿಪ್ರಾಯ ವನ್ನು ಮಂಡಿಸಿದ್ದಾರೆ. ‘ಇಸಿಲ’ ಎಂದರೆ ಕೋಟೆ. ಬ್ರಹ್ಮಗಿರಿಯ ಪ್ರದೇಶದ ಸುತ್ತಲೂ ಕೋಟೆಯಂತೆ ಬೆಟ್ಟದ ಸಾಲು ಇರುವುದರಿಂದ ಅಲ್ಲಿಯ ಪರಿಸರಕ್ಕನುಗುಣವಾಗಿ ಆ ಹೆಸರು ಬಂದಿರಬೇಕೆಂದು ವಾದ. ಒಟ್ಟಿನಲ್ಲಿ ಈ ಅಭಿಪ್ರಾಯಗಳಂತೆ ಆ ಪ್ರದೇಶದಲ್ಲಿ ಕನ್ನಡ ಭಾಷೆ ಬಳಕೆಯಲ್ಲಿದ್ದು ಮತ್ತು ಅದರ ಪ್ರಾಚೀನತೆಯನ್ನು ಈ ಶಾಸನ ತೋರಿಸುತ್ತದೆ ಎಂದು ಅಭಿಪ್ರಾಯವಿದೆ.[2] ಆದರೆ ಇತ್ತೀಚೆಗೆ ಇಸಿಲಾ ಪದವು ಕನ್ನಡ ಪದವಾಗಿರುವ ಬಗ್ಗೆ ನನಗೆ ಸ್ವಲ್ಪ ಅನುಮಾನವಾಗಿದೆ. ಅದಕ್ಕೆ ಕಾರಣ ಹೀಗಿದೆ. ತುಂಗಾನದಿಯ ಎಡದಂಡೆಯ ಮೇಲಿರುವ ಶಿವಮೊಗ್ಗ ನಗರದಲ್ಲಿಯ ಬಲದಂಡೆಯ ಮೇಲಿರುವ ಇಸ್ಲಾಪುರದಲ್ಲಿ ಅರಕೇಶ್ವರ ಎಂಬ ದೇವಾಲಯವಿದೆ. ಈಚೆಗೆ ಇಸ್ಲಾಪುರ ಹೆಸರು ಹೋಗಿ ವಿದ್ಯಾನಗರ ವೆಂದಾಗಿದೆ. ಈ ದೇವಸ್ಥಾನಕ್ಕೆ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಕಾಲದಲ್ಲಿ ಭೂದಾನ ಮಾಡಿದ ವಿಷಯ ಒಂದು ಶಾಸನದಲ್ಲಿದೆ.[3] ಆ ಶಾಸನದಲ್ಲಿ ‘ಈಶ್ವರ ಪುರ’ ಎಂದಿದೆ, ಅಂದರೆ ಆಡುಮಾತಿನ ಸ್ಥಳದ ಹೆಸರಾದ ಇಸ್ಲಾಪುರ ಸಂಸ್ಕೃತೀಕರಣಗೊಂಡು ಈಶ್ವರಪುರವಾಗಿದೆ. ಇಂತಹ ಸಂಸ್ಕೃತೀಕರಣ ವಿಜಯನಗರ ಶಾಸನಗಳಲ್ಲಿ ಅಲ್ಲಲ್ಲಿ ಇವೆ. ಉದಾಹರಣೆಗೆ: ಇಟ್ಟಿಗೆ, ಇಷ್ಟಿಕಾಪುರ, ಹಾಡುವಳ್ಳಿ ಸಂವೀತಪುರ ಮೊದಲಾದವುಗಳು. ಈಗ ‘ಇಸ್ಲಾ’ ಈಶ್ವರ ಆಗುವುದಕ್ಕೆ ಸಾಧ್ಯವೇ? ನೋಡೋಣ. ಸಂಸ್ಕೃತ ಈಶ್ವರ ಪದ ಪ್ರಾಕೃತ ಭಾಷೆಯಲ್ಲಿ ಈಸರ ಆಗುವುದು. ಈಗಲೂ ಪಂಜಾಬಿ ಭಾಷೆಯಲ್ಲಿ ಈ ಸಂಸ್ಕೃತ ಪದ ಇಸ್ಸಾರ ಆಗಿದೆ. ಉದಾಹರಣೆಗೆ ಟಿ.ಪಿ. ಇಸ್ಸಾರ ಎಂಬ ಒಬ್ಬ ಐ.ಎ.ಎಸ್. ಅಧಿಕಾರಿ ನಮ್ಮಲ್ಲಿದ್ದರು. ಅವರೇ ಹೇಳಿದ ಪ್ರಕಾರ ಇಸ್ಸಾರ ಈಶ್ವರ ಪದದ ತದ್ಭವ. ಸಂಸ್ಕೃತ ಭಾಷೆಯ ‘ರ’ ಕಾರಕ್ಕೆ ಪ್ರಾಕೃತ ಭಾಷೆಯಲ್ಲಿ ‘ಲ’ ಕಾರ ಬರುವುದು ಸಹಜ. ಉದಾಹರಣೆಗೆ ಅಶೋಕನ ಶಾಸನಗಳಲ್ಲಿಯೇ ರಾಜಾ ಮತ್ತು ಲಾಜಾ ಎರಡೂ ಪದಗಳಿವೆ. ಆದ್ದರಿಂದ ಈಶ್ವರ>ಇಸ್ಸಾರ> ಇಸ್ಸಾಲ>ಇಸಲ>ಇಸಿಲ>ಇಸಿಲ>ಇಸ್ಲಾ ಆದ್ದರಿಂದ ಇಸ್ಲಾ ಪದನಾಮ ವನ್ನು ಸಂಸ್ಕೃತ ಪಂಡಿತರು ಚೆನ್ನಾಗಿ ಅರಿತೇ ಈಶ್ವರವೆಂದು ಶಾಸನದಲ್ಲಿ ಉಪಯೋಗಿಸಿರುವ ಸಾಧ್ಯತೆಯಿದೆ. ಅಂದರೆ ಸಂಸ್ಕೃತ ಈಶ್ವರ ಪದದ ತದ್ಭವವೇ ಇಸಲಾ>ಇಸಿಲಾ ಆಗಬಹು ದೆಂದು ನನ್ನ ಅನುಮಾನ. ಇನ್ನು ಇಸಲ>ಇಸಿಲಾ ಪ್ರಾಚೀನ ಪ್ರಾಕೃತ ಭಾಷೆಗಳಲ್ಲಿ ಪ್ರಯೋಗ ದಲ್ಲಿತ್ತೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಆದ್ದರಿಂದ ಭಾಷಾತಜ್ಞರು ಇದನ್ನು ವಿಶ್ಲೇಷಿಸ ಬೇಕಾಗಿದೆ.

ಅಶೋಕನ ಶಾಸನದಲ್ಲಿ ಹೇಳಿರುವಂತೆ ಇಸಿಲಾದಲ್ಲಿ ಆ ಚಕ್ರವರ್ತಿಯ ಮಹಾಮಾತ್ರರು ಅಲ್ಲಿದ್ದು ಅದು ಅವರ ಕಾರ್ಯಕ್ಷೇತ್ರದ ಕೇಂದ್ರವಾಗಿತ್ತು. ಅಂತಹ ಉನ್ನತಮಟ್ಟದ ಅಧಿಕಾರಿಗಳ ಕೇಂದ್ರವಾಗಿರಬೇಕಾದರೆ ಅದು ಆ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗು ವಂತಹ ಕನಿಷ್ಠ ಸೌಲಭ್ಯಗಳಿಂದಾದರೂ ಕೂಡಿದ್ದಾಗಿರಬೇಕು. ಆದ್ದರಿಂದ ಬಹುಶಃ ಅದು ಆ ಭಾಗದಲ್ಲೆಲ್ಲಾ ಒಂದು ಪ್ರಧಾನ ಸ್ಥಳವಾಗಿದ್ದಿರಬೇಕು. ಹೀಗೆ ವಿವೇಚಿಸಿದ ಹಿಂದಿನ ಮೈಸೂರು ಸಂಸ್ಥಾನ (ಇಂದಿನ ದಕ್ಷಿಣ ಕರ್ನಾಟಕ)ದ ಪುರಾತತ್ವ ಇಲಾಖೆಯ ನಿರ್ದೇಶಕ ರಾಗಿದ್ದ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಮ್.ಹೆಚ್. ಕೃಷ್ಣರವರು ಈ ಹೆಸರಿನ ಜಾಡನ್ನೇ ಹಿಡಿದು ಆ ಪ್ರದೇಶದಲ್ಲಿ ಪುರಾತತ್ವ ಅನ್ವೇಷಣೆ ಕೈಗೊಂಡರು. ತತ್ಪರಿಣಾಮವಾಗಿ ಆ ಪ್ರದೇಶದಲ್ಲಿ ಸೂಕ್ಷ್ಮ ಶಿಲಾಯುಗ ಹಂತದಿಂದ ಬಾದಾಮಿ ಚಲುಕ್ಯರ ಹಂತದವರೆಗಿನ ಜನಸಮುದಾಯಗಳ ನಿರಂತರ ಜೀವನದ ನೆಲೆಯಾಗಿತ್ತೆಂದು ಅನ್ವೇಷಣೆ[4] ಮತ್ತು ಉತ್ಖನನ ದಿಂದ[5] ಸ್ಪಷ್ಟವಾಯಿತು. ನಂತರ ಇವರ ಅನ್ವೇಷಣೆ ಮತ್ತು ಉತ್ಖನನ ಸಂಶೋಧನೆಯ ಮಹತ್ವವನ್ನು ಅರಿತು ಮತ್ತೆ ಅದೇ ನೆಲೆಯನ್ನು ಆಗಿನ ಕೇಂದ್ರ ಸರಕಾರದ ಪುರಾತತ್ವ ಇಲಾಖೆಯ ಮಹಾನಿರ್ದೇಶಕ ಮಾರ್ಟಿಮರ ವ್ಹೀಲರ ವೈಜ್ಞಾನಿಕ ಉತ್ಖನನವನ್ನು[6] ನಡೆಸಿ ಅದುವರೆಗೆ ದಕ್ಷಿಣ ಭಾರತದಲ್ಲಿ ಗೊತ್ತಿರದ ಪೂರ್ವಭಾವಿ ಇತಿಹಾಸದ ಕಾಲದ ಎರಡು ಅನುಕ್ರಮ ಹಂತಗಳನ್ನು ಸಾತವಾಹನ ಕಾಲದ ಸಾಂಸ್ಕೃತಿಕ ಹಂತಗಳನ್ನು ಹಾಗೂ ಅವುಗಳ ಸ್ಥೂಲ ಲಕ್ಷಣಗಳನ್ನು ಬೆಳಕಿಗೆ ತಂದರು. ಇಂದಿಗೂ ದಕ್ಷಿಣ ಭಾರತದ ಪುರಾತತ್ವ ಸಂಶೋಧನೆ ಯಲ್ಲಿ ಬ್ರಹ್ಮಗಿರಿ ತನ್ನ ಮಹತ್ವದ ಸ್ಥಾನವನ್ನು ಉಳಿಸಿಕೊಂಡಿದೆ.


ಚಿತ್ರ
ಬ್ರಹ್ಮಗಿರಿ : ನೂತನ ಶಿಲಾಇತಿಹಾಸ ಕಾಲದ ಜನ ವಾಸ್ತವ್ಯದ ನೆಲೆ (ಬಾಣದ ಗುರು ಇಟ್ಟಿಗೆ ದೇವಾಲಯವಿದ್ದ ನೆಲೆ)

 


ಚಿತ್ರ
ಬ್ರಹ್ಮಗಿರಿ : ಗಜಪ್ರಷ್ಠ ವಿನ್ಯಾಸದ ಇಟ್ಟಿಗೆ ದೇವಾಲಯ

 


ಚಿತ್ರ
ಬೆಸನಗರ (ಮಧ್ಯಪ್ರದೇಶ) : ಅಂಡಾಕೃತಿ ವಿನ್ಯಾಸದ ವಾಸುದೇವ (ವಿಷ್ಣು) ದೇವಾಲಯದ ತಳಪಾಯ

 

ಭೋಪಾಲ್ (ಮಧ್ಯಪ್ರದೇಶ) ನಗರದ ಈಶಾನ್ಯ ದಿಕ್ಕಿಗಿರುವ ಬೆಸನಗರದಲ್ಲಿ ಕ್ರಿ.ಪೂ. ೨ನೇ ಶತಮಾನದ ಸ್ತಂಭ ಶಾಸನವು[7] ಇರುವುದು ಗೊತ್ತಿರುವ ವಿಷಯ. ಸ್ತಂಭವು ವಿಷ್ಣು ದೇವಾಲಯದ ಮುಂದಿರುವಂತಹ ಅಪರೂಪದ ಗರುಡಧ್ವಜ. ಅಶೋಕ ಸ್ತಂಭದ ಮಾದರಿ ಯನ್ನು ಹೋಲುತ್ತದೆ. ಇದನ್ನು ಸ್ಥಾಪಿಸಿದವನು ಪರಮ ‘ಭಾಗವತ’ನೆಂದು ತನ್ನನ್ನು ಕರೆದು ಕೊಂಡ ಗ್ರೀಕ್ ರಾಯಭಾರಿ ಹೆಲಿಯೋಡೋರಸ್. ಆದರೆ ಈ ಸ್ತಂಭದ ಸುತ್ತ ಎಲ್ಲಿಯೂ ಯಾವುದೇ ದೇವಾಲಯವಿಲ್ಲ. ಆದರೂ ಕೂಡಾ ಗರುಡ ಧ್ವಜವಿದ್ದುದರಿಂದ ವಿಷ್ಣು ದೇವಾಲಯವಿದ್ದಿರಬೇಕೆಂದು ತರ್ಕಿಸಿ ಆ ನೆಲೆಯಲ್ಲಿ ಎರಡು ಸಲ ಉತ್ಖನನ[8] ಮಾಡಲಾಯಿತು. ಎರಡನೇ ಉತ್ಖನನದಲ್ಲಿ ಸ್ತಂಭನೆಟ್ಟ ಕಾಲದಲ್ಲಿದ್ದ ಅಂಡಾಕೃತಿಯ ವಿನ್ಯಾಸದ ಇಟ್ಟಿಗೆಯ ಒಂದು ವಿಷ್ಣು ದೇವಾಲಯದ ಅವಶೇಷಗಳು ಬೆಳಕಿಗೆ ಬಂದವು. ನಮ್ಮ ದೇಶದಲ್ಲಿ ಇದೇ ಅತ್ಯಂತ ಪ್ರಾಚೀನ ವಿಷ್ಣು ದೇವಾಲಯ. ಇದರ ತಳವಿನ್ಯಾಸವೂ ಅಪರೂಪದ್ದೇ ಪ್ರಾಚೀನ ವಾಸ್ತುಶಿಲ್ಪ ಗ್ರಂಥಗಳಲ್ಲಿ ಇದನ್ನು ‘ವೇಸರ’ವೆಂದು ಗುರುತಿಸಲಾಗಿದೆ. ಅಂದರೆ ಹಿಗ್ಗಿದ ವೃತ್ತ ಎಂದರ್ಥ. ಸಾಮಾನ್ಯವಾಗಿ ವಿಷ್ಣುವಿನ ಮೂರ್ತಿ ಪರಿಕಲ್ಪನೆಗಳಲ್ಲಿ ಒಂದಾದ ಶೇಷಶಾಯಿ ವಿಷ್ಣುವಿನ ಮೂರ್ತಿಗೆ ಈ ಪ್ರಕಾರದ ಗರ್ಭಗೃಹ ವಿನ್ಯಾಸವಿರಬೇಕಾಗುತ್ತದೆ, ಇಲ್ಲವೆ ಪಂಚವೀರ ಅಂದರೆ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ,  ಅನಿರುದ್ಧ ಮತ್ತು ಸಾಂಬ ಈ ಐದು ಮೂರ್ತಿಗಳ ಒಂದು ಸಾಲಿನಲ್ಲಿ ಸ್ಥಾಪನೆಗೆ ಇಂತಹ ವಿನ್ಯಾಸ ಅವಶ್ಯಕತೆ ಇದೆ. ಪಂಚವೀರರ ಮೂರ್ತಿಸ್ಥಾಪನೆ ಮತ್ತು ಪೂಜೆ ಸು. ಕ್ರಿ.ಪೂ. ೨ನೇ ಶತಮಾನದಿಂದಲೇ ಅಲ್ಲಲ್ಲಿ ಪ್ರಚಲಿತವಿದ್ದುದು ಶಾಸನಗಳಿಂದ ಮತ್ತು ಉತ್ಖನನಗಳಿಂದ ತಿಳಿದಿದೆ. ಉದಾಹರಣೆಗೆ ನಾರಾಯಣವಾಟಿಕ ಮತ್ತು ‘ಮೋರ’[9] ಬಾವಿ (ಮಥುರ ಹತ್ತಿರ) ಶಾಸನಗಳು. ಈ ಶಾಸನದ ಇನ್ನೊಂದು ಮಹತ್ವದ ಸಂಗತಿ ಎಂದರೆ ಇದರ ಕೊನೆಯಲ್ಲಿ ಬರುವ ಒಂದು ಅಮೃತ ವಾಕ್ಯ. ಇದು ಮಹಾಭಾರತ ಕಾವ್ಯದ ೫ನೆಯ ಪರ್ವ ೪೩ನೇ ಸರ್ಗ, ೩೩ ನೇಶ್ಲೋಕದಂತಿದೆ. ‘ದಮಸ್ತ್ಯಾಗೋಪ್ರಮಾದಶ್ಚ ಏತೇಶ್ವಮೃತಮಹಿತಂ’. ಪ್ರಾಯಶಃ ಈ ಸುಭಾಷಿತವು ಜನಪ್ರಿಯವಾಗಿದ್ದು ಕಾವ್ಯ-ಶಾಸನಗಳಲ್ಲಿ ಬಳಸಲಾಗುತ್ತಿತ್ತೆಂದು ಕಾಣುತ್ತದೆ ಅಥವಾ ಇದನ್ನು ಮಹಾಭಾರತದಿಂದ ಆಯ್ದುಕೊಂಡಿದ್ದರೆ ಕಾವ್ಯದ ಪ್ರಾಚೀನತೆಯನ್ನು ಸೂಚಿಸಬಹುದು.

ಬನವಾಸಿಯ ಶಿವಸ್ಕಂದ ನಾಗಶ್ರೀಯ ನಾಗಪ್ರತಿಮಾ ಶಾಸನ,[10] ಸಾತವಾಹನ ಅರಸು ವಾಸಿಷ್ಠಿಪುತ್ರ ಪುಳಮಾವಿಯ ವಾಸನ ಶಾಸನ[11] ಮತ್ತು ಆದಿಕದಂಬ ಅರಸು ಶಾಂತಿವರ್ಮನ ಕಾಲದ ತಾಳಗುಂದ ಸ್ತಂಭ ಶಾಸನವು[12] ಆಯಾಯ ಕಾಲದ ಶೈವ ಬೌದ್ಧ ಧರ್ಮದ ಸಂಗತಿಗಳ ಬಗ್ಗೆ ಅಲ್ಪಮಾಹಿತಿಯನ್ನು ಕೊಡುವುದಲ್ಲದೆ ಶೈವ ದೇವಾಲಯಗಳ ನಿರ್ಮಾಣ ಮತ್ತು ಅವುಗಳ ಹೆಸರು ಹಾಗೂ ಬೌದ್ಧ ಧರ್ಮದ ಮುಚಲಿಂದ ನಾಗಪ್ರತಿಮೆ ಶಿಲ್ಪ ಮತ್ತು ಶಿವಸ್ಕಂದ ನಾಗಶ್ರೀ ರಾಜಕುಮಾರಿಯು ಕಟ್ಟಿಸಿದ ವಿಹಾರ ಮತ್ತು ತಟಾಕಗಳ ಬಗ್ಗೆ ಉಲ್ಲೇಖಗಳಿವೆ. ತಾಳಗುಂದದಲ್ಲಿ ಸ್ತಂಭ ಶಾಸನವಿರುವ ಪ್ರಣವೇಶ್ವರ ದೇವಾಲಯದ ವಾಸ್ತುನಿರ್ಮಿತಿಯಲ್ಲಿ ಅಂತರಾಳ ಮತ್ತು ಗರ್ಭಗೃಹದ ದ್ವಾರಬಂಧಗಳು ಆದಿ ಕದಂಬ ಕಾಲದವು. ಭಗವನ್ ‘ಭವ’ ಸಿದ್ಧಾಯತನಕ್ಕೆ ಸಾಕತರ್ಣಿ ಅರಸನು ಬಂದಿದ್ದನಂತೆ. ಅಂದರೆ ೧-೨ನೆಯ ಶತಮಾನದ ಹೊತ್ತಿಗಾಗಲೆ ಈ ಸಿದ್ಧಾಯತನವಿದ್ದಿತ್ತು. ೧೯೭೫ರಲ್ಲಿ ನಾನು ಈ ನೆಲೆಯನ್ನು ಪರಿಶೀಲಿಸಿ ದಾಗ, ಈ ಶಿಲಾದೇವಾಲಯವು ಅಲ್ಲಿಯೆ ಇದ್ದ ಹಿಂದಿನ ಇಟ್ಟಿಗೆ ದೇವಾಲಯದ ಅವಶೇಷ ಗಳ ಮೇಲಿರುವುದು ಸ್ಪಷ್ಟವಾಯಿತು. ಇದರಂತೆಯೆ ಬನವಾಸಿಯ ೧೧ನೇ ಶತಮಾನದ ಕರ್ಮೇಶ್ವರ ಶಿಲಾದೇವಾಲಯದ ಲಿಂಗ ಮತ್ತು ನಂದಿ ಶಿಲ್ಪಗಳು ಆದಿಕದಂಬ ಕಾಲದ್ದಾಗಿವೆ. ಅದರಡಿಯಲ್ಲಿ ೧-೨ನೇ ಶತಮಾನದ ಇಟ್ಟಿಗೆ ನಿರ್ಮಿತಿಯ ಅವಶೇಷಗಳಿವೆ. ಇವೆಲ್ಲವನ್ನು ಗಮನಿಸಿ ಆಯಾಯ ನೆಲೆಯ ಆಯಕಟ್ಟಿನ ಭಾಗದಲ್ಲಿ ಉತ್ಖನನ ಮಾಡಿದರೆ, ಶೈವ ದೇವಾಲಯ ಬೌದ್ಧ ವಿಹಾರ ಮತ್ತು ತಟಾಕಗಳು ಬೆಳಕಿಗೆ ಬರಬಹುದು ಇದಕ್ಕೆ ಉತ್ತಮ ಉದಾಹರಣೆ ಗುಡ್ನಾಪುರದ ಕದಂಬ ರವಿವರ್ಮನ ಶಾಸನ ಮತ್ತು ಅದರಲ್ಲಿಯ ಉಲ್ಲೇಖ ಗಳನ್ನು ಅನುಲಕ್ಷಿಸಿ ನಡೆಸಿದ ಉತ್ಖನನ ಇದನ್ನು ಮುಂದೆ ಹೇಳಲಾಗುವುದು.

ವಡಗಾಂವ ಮಾಧವಪುರದ ಷಟ್‌ಕೋನ ಸ್ತಂಭ ಶಾಸನವನ್ನು[13] ಸುಪ್ರಸಿದ್ಧ ಶಾಸನತಜ್ಞ ಶಂಕರನಾರಾಯಣ ಅವರು ಮತ್ತೊಮ್ಮೆ ಅಧ್ಯಯನ ಮಾಡಿದಾಗ ಹಿಂದೆ ಪಂಚಮುಖಿಯವರು ತಿಳಿಸಿದಂತೆ ಸಾಕೇತದಿಂದ ಬಂದ ಸೋಮಯಶಸ್ಸ ಎಂಬ ಬ್ರಾಹ್ಮಣನು ಅಲ್ಲಿ ಅಗ್ನಿಷ್ಠೋಮ ಮೊದಲಾದ ಯಜ್ಞಗಳನ್ನು ಮಾಡಿದ ವಿಷಯವನ್ನಲ್ಲದೆ, ಆ ಸ್ತಂಭವನ್ನು ಸ್ಥಾಪನೆ ಮಾಡಿದ ದಿನವನ್ನು ಉಲ್ಲೇಖವಿರದ ಒಂದು ಶಕೆಯ ಆರಂಭವಾದಂದಿನಿಂದ ಆ ಸ್ತಂಭ ನೆಡುವವರೆಗಿನ ಕಾಲದ ದಿನಗಳನ್ನು ಹತ್ತು ಸಾವಿರ, ಎಂಭತ್ತು, ಎರಡು ದಿನಗಳು ಎಂದಿದೆ. ಶಾಸನದ ಲಿಪಿಯ ಅಜಮಾಸು ಕಾಲಮಾನವನ್ನು ಮತ್ತು ದಿನಗಳ ಹೊಂದಾಣಿಕೆಯನ್ನು ಪರೀಕ್ಷಿಸಿದಾಗ ಅದು ಶಕ ವರ್ಷ ಆರಂಭದ ಕಾಲಕ್ಕೆ ಸರಿ ಹೋಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಈ ಶಕೆ ಎಣಿಕೆಯ ಪ್ರಾಚೀನತೆ ಇದರಿಂದ ಸ್ಪಷ್ಟವಾಯಿತು. ಈ ಭಾಗದಲ್ಲಿ ವೈದಿಕ ಸಂಸ್ಕೃತಿಯೂ ಮುಂದುವರೆದು ಅಭಿವೃದ್ದಿಯಲ್ಲಿತ್ತೆಂಬುದಕ್ಕೆ ಶಾಸನ ಸಹಿತ ಈ ಯೂಪ ಸ್ತಂಭವೇ ಸಾಕ್ಷಿ. ಈ ಸ್ತಂಭವಿದ್ದ ಪ್ರದೇಶದ ಪುರಾತತ್ವ ಉತ್ಖನನದಿಂದ ಶಾಸನದ ಕಾಲದಲ್ಲಿ ಅಲ್ಲಿ ಒಂದು ದೊಡ್ಡ ಚೆನ್ನಾಗಿ ಬೆಳೆದ ಸಮೃದ್ಧ ನಗರವೇ ಇದ್ದಿತೆಂದು ವಿಶದವಾಗಿದೆ.

ಗುಡ್ನಾಪುರದ ಕಂದಬ ರವಿವರ್ಮನ ಸ್ತಂಭ ಶಾಸನವು[14] ಪುರಾತತ್ವ ಸಂಶೋಧನೆಯಲ್ಲಿ ಮಹತ್ವದ್ದಾಗಿದೆ. ಇದರಲ್ಲಿ ರವಿವರ್ಮನು ಆ ನೆಲೆಯಲ್ಲಿ ಮನ್ಮಥ ದೇವತೆಗೆ ಒಂದು ‘ವೇಶ್ಮ’ (= ದೇವಗೃಹ) ಕಟ್ಟಿಸಿದ ಉಲ್ಲೇಖವಿದೆ. ಈ ದೇವಗೃಹದ ಬಲಬದಿಗೆ ರಾಜನ ಅರಮನೆ, ಎಡಬದಿಗೆ ಅಂತಃಪುರದ ಮುಂದೆ ಎರಡು ನಾಟ್ಯಶಾಲೆಗಳಿದ್ದವೆಂದು ಹೇಳಿದೆ. ಈ ವಿಷಯವನ್ನು ಗಮನಿಸಿ ಪುರಾತತ್ವ ಸರ್ವೇಕ್ಷಣ ಇಲಾಖೆಯು ನೆಲೆಯಲ್ಲಿ ಉತ್ಖನನ ಮಾಡಲಾಗಿ ವಿಸ್ತಾರವಾದ ಪ್ರದಕ್ಷಿಣ ಪಥ ಪ್ರಾಕಾರ ಮನ್ಮಥ ದೇವಾಲಯ, ಅರಮನೆಯ ಭಾಗಗಳು ನಾಟ್ಯಮಂದಿರ ಅವಶೇಷಗಳು ಬೆಳಕಿಗೆ ಬಂದವು. ಈ ರೀತಿ ಪ್ರಾಚೀನ ಅರಮನೆಯು ಅದರ ವಿನ್ಯಾಸ ಮತ್ತು ವಾಸ್ತುರಚನೆ ತಿಳಿದುಬರುತ್ತಿರುವುದು ದಕ್ಷಿಣ ಭಾರತದಲ್ಲೇ ಇದೇ ಮೊದಲು. ಸುಪ್ರಸಿದ್ಧ ಭರತನಾಟ್ಯ ವಿದ್ವಾಂಸರಾದ ಆರ್. ಸತ್ಯನಾರಾಯಣ ಅವರು ನಾಟ್ಯಮಂದಿರದ ಅವಶೇಷಗಳನ್ನು ಪರಿಶೀಲಿಸಿ ಅದು ಭರತ ನಾಟ್ಯಶಾಸ್ತ್ರದಲ್ಲಿಯ ವಿವರಣೆ ಗನುಗುಣವಾಗಿ ಕಟ್ಟಲಾಗಿದೆಯೆಂದು ಅಭಿಪ್ರಾಯಪಟ್ಟರೆಂದು ಹೇಳಲಾಗಿದೆ.

ಈ ಅಪರೂಪದ ಮಹತ್ವದ ಶೋಧನೆಗಳ ಜೊತೆಗೆ ಪ್ರಥಮವಾಗಿ ೧ ರಿಂದ ೯ರ ತನಕ ಸಂಖ್ಯಾ ಸಂಕೇತಗಳು ತಿಳಿದು ಬಂದಿರುವುದು ಈ ಶಾಸನದಿಂದಲೇ.

ಸಾತವಾಹನ ಮತ್ತು ಆದಿ ಕದಂಬರ ಕಾಲದ ವಾಸ್ತು ಮತ್ತು ಮೂರ್ತಿ ಶಿಲ್ಪಗಳ ಬಗ್ಗೆ ಅಷ್ಟಾಗಿ ಸ್ಮಾರಕಗಳು ಹಾಗೂ ಲೌಕಿಕ ನಿರ್ಮಿತಿಗಳಂತೂ ದೊರೆಯದಿದ್ದ ಕಾರಣ ಶಾಸನ ಗಳಲ್ಲಿ ಇಂತಹ ಉಲ್ಲೇಖಗಳು ಮತ್ತು ಉತ್ಖನನಗಳು ಫಲಕಾರಿಯಾಗಬಲ್ಲವು.


ಚಿತ್ರ
ಗುಡ್ಣಾಪುರ : ಕದಂಬ ರವಿವರ್ಮನು ಕಟ್ಟಿಸಿದ ಮನ್ಮಥ ದೇವಗ್ರಹದ ಅವಶೇಷಗಳು


ಚಿತ್ರ
ಗುಡ್ಣಾಪುರ : ಕದಂಬ ರವಿವರ್ಮನ ಶಾಸನ ರಿಂದ ೯ರ ಸಂಖ್ಯಾಸಂಕೇತಗಳು

 

ಇನ್ನೊಂದು ಮಹತ್ವದ ಶೋಧನೆ ಎಂದರೆ ಕಂಧಾರ (ನಾಂದೇಡ ಜಿ. ಮಹಾರಾಷ್ಟ್ರ) ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನ ಶಾಸನ[15] ಇದರಲ್ಲಿ ಆ ಕಾಲದ ಪ್ರಮುಖ ನಿರ್ಮಿತಿಗಳ ಉಲ್ಲೇಖಗಳಿವೆ ಅದು ಹೀಗಿದೆ –

೧. ಜನರಿಗೆ ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸಿಕೊಡಲು ಕಟ್ಟಿಸಿದ ಸರ್ವಲೋಕಾ ಶ್ರಯ ಮಂಟಪ.

೨. ಬೇಸಿಗೆಯ ಬಿಸಿಲಿನ ತಾಪ ತಣಿಸಿಕೊಳ್ಳಲು ಜನರಿಗೆ ಐದು ಕಡೆಗಳಲ್ಲಿ;
ಅ. ಅರಮನೆಯ ಮಕರ ತೋರಣ ದ್ವಾರದ ಹತ್ತಿರ
ಇ. ಮಂಡಲ ಸಿದ್ದಿ ವಿನಾಯಕ ದೇವರ ಗುಡಿ ಮತ್ತು ಯಕ್ಷದ್ವಾರ
ಈ. ನೃತ್ಯಗಾತಿ ವೃಂದದ ಮುಖ್ಯಸ್ಥನ ಮನೆ ಇದ್ದ ಭಾಗದಲ್ಲಿಯ ಕಾಮದೇವತಾಯನದ ಬಳಿ
ಉ. ಕಾಲಪ್ರಿಯ ದೇವಾಲಯದ ಬಳಿ ಮತ್ತು
ಒ. ಸರ್ವಲೋಕಾಶ್ರಯ ಮಂಟಪದ ಬಳಿ ಅರವಟ್ಟಿಗೆಗಳು.

೩. ಚಳಿಗಾಲದಲ್ಲಿ ನಿರ್ಗತಿಕರಿಗೆ ತೀವ್ರ ಚಳಿಯಿಂದ ರಕ್ಷಿಸಿಕೊಳ್ಳಲು ಐದು ಕಡೆಗಳಲ್ಲಿ;
ಅ. ಸರ್ವಲೋಕಾಶ್ರಯ ಮಂಟಪ
ಆ. ಮಂಡಲ ಸಿದ್ದಿ ವಿನಾಯಕ
ಇ. ಕಾಲಪ್ರಿಯ ದೇವಾಲಯದ ಬಳಿ ಎರಡು
ಈ. ಜಗತ್ತುಂಗ ಸಮುದ್ರವೆಂಬ ಕೆರೆಯ ಹತ್ತಿರದ ನಗರೇಶ್ವರ ದೇವಾಲಯದ ಬಳಿ ಮತ್ತು
ಉ. ನಗರದ ಉತ್ತರ ಭಾಗದಲ್ಲಿಯ ಬಂಕೇಶ್ವರ ದೇವಾಲಯದ ಬಳಿ ಅಗ್ಗಿಷ್ಟಿಕೆಗಳ ವ್ಯವಸ್ಥೆ ಹಾಗೂ ಇತರ ವಿಷಯಗಳು ಇವೆ.

ಇಲ್ಲಿ ಡೆಕ್ಕನ ಕಾಲೇಜ ಪೋಸ್ಟ್ ಗ್ರ್ಯಾಜುಯೇಟ್ ಆಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪುರಾತತ್ವ ವಿಭಾಗವು ಪುರಾತತ್ವ ಉತ್ಖನನ ಮಾಡಿದಾಗ ಇಡೀ ದೇಶದಲ್ಲಿಯೇ ಎಲ್ಲೂ ಕಂಡುಬರದ ‘ವಾಸ್ತುಪುರುಷನ’ ಬೃಹದಾಕೃತಿಯ ವಿನ್ಯಾಸವು ಬೆಳಕಿಗೆ ಬಂದಿತು. ಇದೊಂದು ಅನನ್ಯ ಶೋಧನೆ.

ಕಂಧಾರದಿಂದ ಸುಮಾರು ೨ ಕಿ.ಮೀ. ದೂರದಲ್ಲಿಯ ಮಾನಸಪುರಿಯಲ್ಲಿ ನಡೆಸಿದ ಈ ಉತ್ಖನನದಲ್ಲಿ[16] ನೆಲೆದ ಮೇಲೆ ಮಲಗಿದಂತಿರುವ ಒಂದು ಅತ್ಯಂತ ಅಪರೂಪದ ಮಾನವಾ ಕೃತಿಯ ಕಲ್ಲಿನ ರಚನೆಯು ಕಂಡು ಬಂದಿತು. ಅದು ಸು. ೨೩ ಮೀ. ಉದ್ದ ೭ ಮೀ. ಅಗಲ ಆಕೃತಿಯ ಸು. ೩೭ ಮೀ. ಉದ್ದ ೩೩ ಮೀ. ಅಗಲದ ಆಯತಾಕಾರದ ಕಲ್ಲಿನ ಪೌಳಿಗೋಡೆ ಯಿಂದ ಆವೃತವಾದ ನೆಲೆಯಲ್ಲಿದ್ದಿತು. ಪೂರ್ವದಲ್ಲಿ ಪ್ರವೇಶದ್ವಾರವಿತ್ತು. ಇದು ಬಹು ಮಟ್ಟಿಗೆ ಪ್ರಾಚೀನ ವಾಸ್ತು ಗ್ರಂಥಗಳಲ್ಲಿಯ ವಾಸ್ತು ಪುರುಷನ ವರ್ಣನೆಗೆ ಸರಿ ಹೊಂದುತ್ತದೆ. ಸು. ೬.೩೫ ಮೀ ಉದ್ದ ಮತ್ತು ೪.೮೫ ಮೀ ತಲೆಯು ವಾಯವ್ಯ ದಿಕ್ಕಿಗಿದೆ. ಕಾಲುಗಳು ೧೦.೮೮ ಮೀ. ಉದ್ದ ತೊಡೆಯ ಭಾಗ ೨.೨೦ ಮೀ. ಅಗಲ ಆಗ್ನೇಯ ದಿಕ್ಕಿಗಿವೆ.

ಈ ನಿರ್ಮಿತಿಯ ಎಡಕ್ಕೆ ಉತ್ತರ ಬದಿಗೆ ೧೦.೪೦ ಮೀ. ಉದ್ದ ೩.೨೫ ಮೀ. ಅಗಲದ ಒಂದು ಕಲ್ಲಿನ ಕಟ್ಟೆ ಇದೆ. ಇದರ ಪಶ್ಚಿಮ ಅಂಚು ಸ್ವಲ್ಪ ಬಾಗಿದೆ. ಇಲ್ಲಿ ಬಹುಶಃ ಯೋಗೇಶ್ವರಮೂರ್ತಿ ಇದ್ದಿರಬಹುದೆಂದು ಉತ್ಖನನಕಾರರ ಅಭಿಪ್ರಾಯ. ಇದರಲ್ಲಿಯ ಬೃಹತ್ ಮೂರ್ತಿಯು ಏಕಶಿಲೆಯದಾಗಿರದೆ  ಪ್ರಮಾಣಬದ್ಧವಾಗಿ ಕೆತ್ತಿದ ಹಲವಾರು ಶಿಲಾಭಾಗಗಳು ಪ್ರಮಾಣಬದ್ಧ ಗೂಟ ಮತ್ತು ಗುಳಿಗಳ ತಂತ್ರದಿಂದ ಜೋಡಿಸಲ್ಪಟ್ಟಿದ್ದಾಗಿ ಕಾಣುತ್ತದೆ. ಬಹುಶಃ ಇದು ಶಾಸನದಲ್ಲಿ ಉಲ್ಲೇಖಿತವಾದ ಮೂರ್ತಿಯಾಗಿದ್ದಿರಬಹುದೆಂದು ಅಭಿಪ್ರಾಯ. ಸು. ೧೭ ಮೀ. ಎತ್ತರದ ಈ ದ್ವಿಭುಜಮೂರ್ತಿಯ ಕೈಗಳಲ್ಲಿ ಖಡ್ಗ ಮತ್ತು ಬೀಜಪೂರಕಗಳಿವೆ. ಇದರ ಹತ್ತಿರವೇ ಕಾಲಭೈರವನ ಪತ್ನಿ ಯೋಗೇಶ್ವರಿಮೂರ್ತಿಯ ಅವಶೇಷಗಳಿದ್ದವು.


ಚಿತ್ರ
ಕಂಧಾರ್ (ನಾಂದೇಡ್ ಜಿಲ್ಲೆ, ಮಹಾರಾಷ್ಟ್ರ) : ವಾಸ್ತುಪುರುಷ (?) ಬೃಹತ್ ವಿನ್ಯಾಸ

ಶಾಸನಗಳಲ್ಲಿಯ ಉಲ್ಲೇಖಗಳಿಂದ ಪೂರ್ವಭಾವಿ ಇತಿಹಾಸ ಸಂಸ್ಕೃತಿಯ ಕೊನೆಯ ಹಂತ ಆದಿ ಕಬ್ಬಿಣ ಯುಗದ ಬೃಹತ್ ಶಿಲಾ ಸಂಸ್ಕೃತಿಯ ನೆಲೆಗಳನ್ನೂ ಗುರುತಿಸಬಹುದು. ಉದಾಹರಣೆಗೆ ಬಿದಿರೂರಿನ ಆದಿ ಗಂಗ ಅರಸು ಭೂವಿಕ್ರಮನ ಶಕವರ್ಷ ೫೫೬ (= ಕ್ರಿ.ಶ. ೬೩೪) ಶಾಸನದಲ್ಲಿ[17] ಆ ಪ್ರದೇಶದಲ್ಲಿದ್ದ ಪ್ರಾಚೀನ ‘ಮೊರಿಯರ್ಮ್ಮಾಳ’ ನೆಲೆಯನ್ನು ದಾನ ಮಾಡಿದ ಭೂಮಿಯ ಒಂದು ಗಡಿಯನ್ನಾಗಿ ಸೂಚಿಸಿದೆ. ಆ ಪ್ರಾಚೀನ ನೆಲೆ ಸು. ಕ್ರಿ.ಪೂ. ೮೦೦-೫೦೦ ಅವಧಿಯ ಆದಿ ಕಬ್ಬಿಯುಗದ ಬೃಹತ್ ಶಿಲಾಸಂಸ್ಕೃತಿಯ ಶವ ಸಂಸ್ಕಾರದ ಸ್ಥಳ. ಅದರಲ್ಲಿ ಸಾಮಾನ್ಯವಾಗಿ ನೂರಾರು ಕಲ್ಗೋರಿಗಳಿರುತ್ತವೆ. ಈ ಶಾಸನ ದಂತೆಯೆ ಆನೆ ಕನ್ನಂಬಾಡಿ ಹೊಯ್ಸಳ ವೀರನರಸಿಂಹ ಅರಸನ ಶಕವರ್ಷ ೧೧೪೧ (=ಕ್ರಿ.ಶ. ೧೨೧೯) ತಾಮ್ರ ಶಾಸನದಲ್ಲಿಯೂ[18] ಇಂಥ ಉಲ್ಲೇಖವಿದೆ. ಈ ಪ್ರಕಾರದ ಪ್ರಾಚೀನ ನೆಲೆ ಗಳನ್ನು ಸಮಕಾಲೀನ ಜನರು ‘ಮೋರಿಯರ ಮನೆ’ಗಳೆಂದು ಕರೆಯುತ್ತಿದ್ದರೆಂಬುದೂ ಗೊತ್ತಾಗುತ್ತದೆ.

ಹೀಗೆ ಶಾಸನಗಳಲ್ಲಿಯ ಇಂಥ ಉಲ್ಲೇಖಗಳಿಂದ ಪುರಾತತ್ವ ನೆಲೆಗಳ ಶೋಧನೆ ಮತ್ತು ಅಧ್ಯಯನಗಳಿಗೆ ಸಹಾಯ ಮತ್ತು ಪೂರಕವಾಗಿರುವುದಕ್ಕೆ ಹಲವಾರು ಉದಾಹರಣೆಗಳಿವೆ.[1] ಸರಕಾರ್ ಡಿ.ಸಿ., ಇನ್ಸ್‌ಕ್ರಿಪ್ಶನ್ಸ್ ಆಫ್ ಅಶೋಕ, ೧೯೭೫, ಪು. ೨೮.

[2] ನಾಯಕ ಹಾ.ಮಾ. (ಸಂ.), ೧೯೭೪, ಕನ್ನಡ ಸಾಹಿತ್ಯ ಚರಿತ್ರೆ. ಸಂ. ೧, ಮೈಸೂರು ವಿಶ್ವವಿದ್ಯಾಲಯ, ಮೈಸೂರು. ಪು. ೨೫೯-೬೦.

[3] ಎ.ಕ. ಸಂ. ೭., ಶಾ.ಸಂ. ೨೬, (ತಾಮ್ರಪಟ ಶಾಸನ).
“೨೪೮….. ನೈರುತ್ಯದಲು
೨೪೯. ಕುಸುಗೂರುಗಡಿಯ ಹಳ್ಳ ವಾಯುವ್ಯದಲು ಯ. ಕನ ಆಲದ ಅರ್ಕೆ
೨೫೦. ಶ್ವರದೇವರು ಬಡಗಲು ಈಶ್ವರಪುರದ ಊರಬಳಿಯ ಹತ್ತಿರಿ
೨೫೧. ಣ ಹುಣಸೇಮರ ಈಶಾನ್ಯದಲು ಈಶ್ವರಪುರದ ಹೊಲವೇರಿಯ
೨೫೨ ಚಿಕ್ಕಕುಂಟೆಯ ಒತ್ತಿರಿಣ ಬದಹು ಮೂಡಲು ಹರಿಗೆಯ ಹೊ.“

[4] ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ (ಕರ್ನಾಟಕ ಸರ್ಕಾರ) ವಾರ್ಷಿಕ ವರದಿ, ೧೯೪೨, ಪು. ೧೧೦-೧೦೯.

[5] ಅದೇ ಕಡೆ.

[6] ಏನ್ಷಿಯೆಂಟ್ ಇಂಡಿಯಾ, ಸಂ. ೪, ಪು. ೧೮೧-೩೧೯.

[7] ಕೃಷ್ಣನ್ ಕೆ.ಜಿ., (ಸಂ.  , ೧೯೮೦, ಉಟ್ಟಂಕಿತ ಸಂಸ್ಕೃತ ವಿದ್ಯಾರಣ್ಯ ಎಪಿಗ್ರಾಫ್ಸ್, ಉಟ್ಟಂಕಿತ ವಿದ್ಯಾರಣ್ಯ ಟ್ರಸ್ಟ್, ಮೈಸೂರು, ಶಾ.ಸಂ. ೪೮.

[8] ಇಂಡಿಯನ್ ಆರ‍್ಕಿಯಾಲಜಿ, ಎ ರಿವ್ಯೂ, ೧೯೭೫-೭೬, ಪು. ೩೦೧-೩೧, ೭೬-೭೭, ಪು. ೩೩-೩೪.

[9] ಕೃಷ್ಣನ್ ಕೆ.ಜಿ. (ಸಂ.), ಅದೇ ಕಡೆ ಶಾ.ಸಂ. ೭೫.
ಮಥುರಾ ಹತ್ತಿರದ ಮೋರ ಬಾವಿಯಲ್ಲಿರುವ ಈ ಶಾಸನದಂತೆ, ತೋಷನಿಂದ ನಿರ್ಮಿಸಲ್ಪಟ್ಟ ಅಪರೂಪದ ಶಿಲಾ ದೇವಾಲಯದಲ್ಲಿ ವೃಷ್ಟಿಕುಲದ ವಾಸುದೇವ-ಸಾಂಬ ಪಂಚವೀರರ ಮೂರ್ತಿಗಳನ್ನು ಸ್ಥಾಪಿಸಿದ ವಿಷಯವಿದೆ.

[10] ಅದೇ ಕಡೆ ಶಾ.ಸಂ. ೧೮೪ ಶಾಸನವು ಮುಚಲಿಂದ ನಾಗ ಶಿಲ್ಪದ ಅಂಚಿನಲ್ಲಿ ವಿಹಾರ ತಟಾಕಗಳ ನಿರ್ಮಾಣದ ವಿಷಯವಿದೆ, ನಾಗಮೂರ್ತಿಯನ್ನು ಮಾಡಿದ ಶಿಲ್ಪಿ ಬನವಾಸಿಯ ಶಿಲ್ಪಿ ಮೋರಕನ ಶಿಷ್ಯ ನಟಕನೆಂದಿರುವುದೂ ಗಮನಾರ್ಹ.

[11] ಅದೇ., ಶಾ.ಸಂ. ೧೭೭, ಚಂಡಶಿವ ದೇವಾಲಯದ ನಿರ್ಮಾಣ.

[12] ಗೋಪಾಲ್ ಬಿ.ಆರ್., ೧೯೮೯, ಕಾರ್ಪಸ್ ಆಫ್ ಕದಂಬ ಇನ್‌ಸ್ಕ್ರಿಷ್ಯನ್ಸ್, ಸಂ. ೧ ಕದಂಬ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡಿಸ್.
ಶಾಸನದಲ್ಲಿ ಮನ್ಮಥ ದೇವಾಲಯ ಮತ್ತು ಅರಮನೆ ಮೊದಲಾದವುಗಳಿಗೆ ಉಲ್ಲೇಖ ಈ ಕೆಳಗಿನಂತಿದೆ.
“ಸಾಲು ೧೨ …………ತೇನವೇಶ್ಮಮನ್ಮಥಸ್ಯೇದಂ. ರವಿಣಾ ಕ್ಷಿತೀಂದ್ರೇಣ ಕಾರಿತಂ ||
ಸಾಲು ೧೩ ………..ದಕ್ಷಿಣೇಶ್ಯ. ರಾಜವಾಸಗೃಹಂ (ವಾ) ಮೇ ತಥಾಂಥಃ (ಪು)ರೋಲ್ಲಸತ್
ನೃತ್ಯಶಾಲೆದ್ವೆಪುನರಸೌಮ್ಯೇ ಪ್ರಾಗ್ಭಾಗಮಾಶ್ರಿತ್ಯ ವಿಷ್ಠಿತೆ”……….|

[13] ಕೃಷ್ಣನ್ ಕೆ.ಜಿ., ಅದೇ: ಶಾ.ಸಂ. ೧೦೯, ಶಾಸನವಿರುವ ಸ್ತಂಭವು ಬಹುಮಟ್ಟಿಗೆ ಯೂಪ ಸ್ತಂಭವಿರಬೇಕು.

[14] ರಮೇಶ ಕೆ.ವಿ. ಮತ್ತು ಇತರರು, ಶ್ರೀ ಕಂಠಿಕಾ, ಡಾ. ಎಸ್. ಶ್ರೀಕಂಠಶಾಸ್ತ್ರಿ ಅಭಿನಂದನ ಗ್ರಂಥ, ವೀತಾ ಬುಕ್ ಹೌಸ್, ಮೈಸೂರು, ಪು. ೬೧-೭೨. ಈ ಲೇಖನದಲ್ಲಿ ಶಾಸನದಲ್ಲಿಯ ಸಂಖ್ಯೆಗಳ ಚಿತ್ರವನ್ನು ಕೊಡಲಾಗಿದೆ.

[15] ರಿತ್ತಿ ಎಸ್. ಹೆಚ್. ಮತ್ತು ಶೆಲ್ಕೆ ಜಿ.ಸಿ., ೧೯೬೮, ಇನ್‌ಸ್ಕ್ರಿಪ್ಯನ್ಸ್ ಫ್ರಂ ನಾಂದೇಡ ಡಿಸ್ಟ್ರಿಕ್ಟ್ ಶಾ.ಸಂ.೨. ಸ್ತಂಭದ ಮೂರನೇ ಮುಖದ ಮೇಲಿನ ಶಾಸನದ ಭಾಗ ಇಂತಿದೆ.
ತಥಾ ಪ್ರಸಿದ್ಧ ಕ್ಷೇತ್ರಪಾಲ ಸಮೀಪೆ ಸುವಿಹಿತಪ್ರವರಣಾಸ್ತಾರಣದಿಪರಿಕರಃ ಸರ್ವ್ವಲೋಕಾ ಶ್ರಯನಾಮಾ ಮಂಡಪಃ ತಥಾ ರಾಜಗ್ರಹಾಂತರ್ವ್ವವೃತ್ತಿ ಮಕರತೋರಣಿ |
ಮ……. ಸಿದ್ದಿವಿನಾಯಕ ಮಂಡಿತ ಯಕ್ಷದ್ವಾರೇ ಪ್ರಧಾನ ರಾಜವಿಲಾಸೀನೀಪಾರಕಸನ್ನಿಹಿತ ಕಾಮ ದೇವಾಯತನ ಪುರೋಭಾಗೇ |
ಕಲಿಕಾಲೇಪಿ ಸಕಲ ಲೋಕ ಪ್ರತ್ಯಕ್ಷದಿವ್ಯ ಶಕ್ತೇರ್ಭಗವತಃ ಶ್ರೀ ಕಾಲಪ್ರಿಯಸ್ಯ ಪ್ರಾಂಗಣೆ ಪ್ರತೀತೆಚ ಸರ್ವ್ವಲೋಕಾಶ್ರಯಮಂಡಪೆ || ಇತಿ ಪಂಚಸುಸ್ತಾನೇಷು ಗ್ರೀಷ್ಮಸಂತಾಪನಿರಸನ ಕ್ಷಮಾಃ ಧರ್ಮ್ಮನರಪತಿ ವಿಲಾಸಕಾಯಮಾನಮಹೀಮ ಸ್ಪೃಶಃ ಪ್ರಪಾಃ |

ತಥಾ ಮಂಡಲ ಸಿದ್ದಿಪ್ರಾಂಗಣೇ ಸರ್ವ್ವಲೋಕಾಶಯ ಮಂಡಪೆ
ಕಾಲಪ್ರಿಯ ಸಮೀಪ ಪ್ರದೇಶದ್ವಯೆ

ಜಗತ್ತುಂಗ ಸಮುದ್ರಸ್ಯ ಪಾಲೀ ಪ್ರತಿಷ್ಠಿತ ಸಗವೇ (ರೇ) ಶ್ವರಪುರೋಭಾಗೆ ಉದೀಚ್ಯ ದಿಗ್ವರ್ತ್ತಿಬಂಕೇಶ್ವರ ಸಮೀಪೆ…..”

[16] ಇಂಡಿಯನ್ ಆರ‍್ಕಿಯಾಲಜಿ, ಎ ರಿವ್ಯೂ, ೧೯೮೩-೮೪, ಪು. ೫೮-೫೯.

[17] ಎಪಿಗ್ರಾಫಿಯ ಕರ್ನಾಟಿಕಾ ಸಂಪುಟ-೭, ಶಾಸನ ಸಂಖ್ಯೆ ೨೬ (ತಾಮ್ರಪಟ ಶಾಸನ).
ರಮೇಶ, ಕೆ.ವಿ., (ಸಂ.), ೧೯೮೪, ಇನ್‌ಸ್ಕ್ರಪ್ಯನ್ಸ್ ಆಫ್ ದಿ ವೆಸ್ಟರ್ನ್ ಗಂಗಾಸ್, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಮತ್ತು ಆಗಮ ಕಲಾ ಪ್ರಕಾಶನ, ದೆಹಲಿ, ಶಾ.ಸಂ. ೨೯.

[18] ನಾಗರಾಜರಾವ್, ಎಂ.ಎಸ್. ಮತ್ತು ರಮೇಶ ಕೆ.ವಿ. (ಸಂ.), ೧೯೮೫, ಕಾಪರ್ ಪ್ಲೇಟ್ ಇನ್‌ಸ್ಕ್ರಿಪ್ಯನ್ಸ್ ಫ್ರಂ ಕರ್ನಾಟಕ; ರೀಸೆಂಟ್ ಡಿಸ್ಕವರೀಸ್, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಮೈಸೂರು.