ನಾಣ್ಯಗಳ ಅಧ್ಯಯನ ನಾಣ್ಯಶಾಸ್ತ್ರ. ಲಿಪಿಗಳ ಅಧ್ಯಯನ ಲಿಪಿಶಾಸ್ತ್ರ. ಶಾಸನಗಳ ಅಧ್ಯಯನ ಶಾಸನಶಾಸ್ತ್ರ. ಈ ಮೂರು ಶಾಸ್ತ್ರಗಳು ಇತಿಹಾಸ ರಚನೆಯಲ್ಲಿ ಒಂದಕ್ಕೊಂದು ಪೂರಕವಾಗಿರುತ್ತವೆ. ಇತರ ಆಕರಗಳಿಂದ ತಿಳಿಯದೇ ಇರುವ ವಿಷಯವನ್ನು ತಿಳಿಸುವಲ್ಲಿ ಈ ಮೂರು ಶಾಸ್ತ್ರೀಯ ಅಧ್ಯಯನಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಇತಿಹಾಸ ರಚನೆಯಲ್ಲಿ ನಾಣ್ಯಶಾಸ್ತ್ರ-ಲಿಪಿಶಾಸ್ತ್ರ ಮತ್ತು ಶಾಸನಶಾಸ್ತ್ರದ ಸಂಬಂಧವನ್ನು ನಿರೂಪಿಸು ವುದೇ ಈ ಲೇಖನದ ಉದ್ದೇಶ.

ದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸ ರಚನೆಯಲ್ಲಿ ನಾಣ್ಯಶಾಸ್ತ್ರದ ಪಾತ್ರ ಅತೀಮಹತ್ವದ್ದು. ಶಾಸನಗಳು ಮತ್ತು ಸಾಹಿತ್ಯಿಕ ಗ್ರಂಥಗಳು ತಿಳಿಸುವ ಇತಿಹಾಸವನ್ನು ಹೆಚ್ಚಿನ ರೀತಿಯಲ್ಲಿ ಸ್ಪಷ್ಟೀಕರಿಸಲು ನಾಣ್ಯಗಳು ಮೂಲ ಆಕರಗಳಾಗಿವೆ. ನಾಣ್ಯಗಳು ಸಿಗದೇ ಇದ್ದಲ್ಲಿ ಭಾರತ ಮತ್ತು ಬ್ಯಾಕ್ಟ್ರಿಯಾದ ಸಂಬಂಧವೇ ತಿಳಿಯುತ್ತಿರಲಿಲ್ಲ. ಗುಪ್ತರ ಕಾಲದ ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳು ಗುಪ್ತರ ಕಾಲ ಸ್ವರ್ಣಯುಗವೆಂಬುದನ್ನು ಸ್ಪಷ್ಟೀಕರಿಸುತ್ತದೆ. ನಾಣ್ಯಗಳ ಮೇಲಿನ ಬರಹದಿಂದಲೇ ೩೨ ಅರಸರ ಹೆಸರುಗಳು ತಿಳಿದಿವೆ. ಅಂದಿನ ಕಾಲದ ಸ್ಥಿತಿಗತಿಗಳನ್ನು ಕಲೆ, ಉಡುಪು, ಜನ-ಜೀವನ, ಭಾಷೆ ಲಿಪಿಯನ್ನು ತಿಳಿಸುವ ದಿಸೆಯಲ್ಲಿ ಈ ಅಧ್ಯಯನಗಳು ಒಂದಕ್ಕೊಂದು ಪೂರಕ ಮಾಹಿತಿಯನ್ನು ನೀಡುತ್ತವೆ. ಲಿಪಿಶಾಸ್ತ್ರ, ಶಾಸನ ಶಾಸ್ತ್ರಗಳ ಅಧ್ಯಯನವಿಲ್ಲದೇ ನಾಣ್ಯಶಾಸ್ತ್ರದ ಅಧ್ಯಯನ ಪೂರ್ಣವಾಗುವುದಿಲ್ಲ. ಪ್ರಸ್ತುತ ಈ ಲೇಖನ ಪ್ರಾಚೀನ ಕರ್ನಾಟಕಕ್ಕೆ ಸೀಮಿತವಾಗಿರಿಸಿದೆ.

ಕರ್ನಾಟಕದಲ್ಲಿ ನಾಣ್ಯದ ಬಳಕೆ ಎಂದು ಆರಂಭವಾಯಿತು? ಎಂದು ಹೇಳುವುದು ಕಷ್ಟ. ಆದರೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಮುದ್ರಾಂಕಿತ ನಾಣ್ಯಗಳೇ ಅತ್ಯಂತ ಪ್ರಾಚೀನ ನಾಣ್ಯಗಳಾಗಿವೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಯಾವುದೇ ಲಿಪಿಗಳು ಕಾಣದೇ ಬೆಟ್ಟ, ನದಿ, ಮರ, ಸ್ವಸ್ತಿಕ, ಶ್ರೀವತ್ಸ ಚಿನ್ಹೆಗಳು ನಾಣ್ಯಗಳ ಮೇಲೆ ಮುದ್ರಿತವಾಗಿವೆ. ಇಂತಹ ನಾಣ್ಯಗಳು ಬನವಾಸಿ, ವಡಗಾಂಮಾಧವಪುರ ಉತ್ಖನನಗಳಲ್ಲಿ ದೊರಕಿವೆ. ರಾಯಚೂರು ಜಿಲ್ಲೆಯ ಚಿಕ್ಕಸಿಂದೋಗಿ ಎಂಬಲ್ಲಿ ೫೫೩೪ ಮುದ್ರಿತ ಮಾಡಿದ ನಾಣ್ಯಗಳು ಚಿಕ್ಕ ಪಾತ್ರೆಯಲ್ಲಿ ಕಂಡುಬಂದವು. ತಾಮ್ರದ ಪಾತ್ರೆಯ ಮೇಲೆ ‘ಚಂತಸ’ ಎಂಬ ಬ್ರಾಹ್ಮಿ ಲಿಪಿಯಿದೆ. ಶ್ರೀವತ್ಸ ಮತ್ತು ನಂದಿ ಪಾದಗಳಿವೆ. ‘ಚಂತಸ’ ಎಂದರೆ ಚಂತನಿಗೆ ಸೇರಿದ್ದದ್ದೆಂದು ಅರ್ಥ. ಇವು ಮೌರ್ಯರ ಕಾಲದ ನಾಣ್ಯವನ್ನು ಹೋಲುತ್ತವೆ. ದೊರಕಿರುವ ನಾಣ್ಯಗಳು ಇಲ್ಲಿ ಬಳಕೆಯಿಲ್ಲಿದ್ದವೆಂಬುದು ಸ್ಪಷ್ಟವಾಗುತ್ತದೆ.

ನಾಣ್ಯವು ಗತಕಾಲದ ಅವಶೇಷವಾದರೂ ಅಂದಿನ ಕಾಲದ ಸಂಕೇತವಾಗಿದೆ. ನಾಣ್ಯದ ಮುಂಭಾಗ ಮತ್ತು ಹಿಂಭಾಗದಲ್ಲಿರುವ ರಾಜ ಮತ್ತು ಲಿಪಿಯನ್ನೊಳಗೊಂಡ ಶಾಸನ ಇತಿಹಾಸ ಮತ್ತು ಭಾಷೆಗೆ ಸಂಬಂಧಿಸಿದ್ದಾಗಿದೆ. ಕರ್ನಾಟಕದ ಪ್ರಾಚೀನ ಇತಿಹಾಸಕ್ಕೆ ಸೀಮಿತವಾಗಿ ನೋಡಿದರೆ, ಸಾತವಾಹನರ ರಾಜಕೀಯ ಇತಿಹಾಸವು ತೊಡಕಿನಿಂದ ಕೂಡಿದೆ. ಸಾತವಾಹನರ ಕಾಲದ ನಾಣ್ಯಗಳು ವೃತ್ತಾಕಾರದಲ್ಲಿ ತಾಮ್ರ, ಸೀಸ ಮತ್ತು ಪೋಟಿನ್‌ನಿಂದ ಮಾಡಲ್ಪಟ್ಟವುಗಳಾಗಿವೆ. ಇವುಗಳ ಮೇಲೆ ಆನೆ, ಸಿಂಹ, ಕುದುರೆ, ಬೆಟ್ಟ, ಉಜ್ಜಯಿನಿ ಚಿನ್ಹೆ ಮತ್ತು ಹಿಂಭಾಗದಲ್ಲಿ ಬ್ರಾಹ್ಮಿಲಿಪಿ ಇರುತ್ತದೆ.

ಸನ್ನತಿಯಲ್ಲಿ ದೊರೆತ ನಾಣ್ಯಗಳ ಮೇಲೆ ಸಾತವಾಹನರ ಕಾಲದ ಆರಂಭದ ದೊರೆಗಳ ಹೆಸರಿದೆ. ಮುಂಭಾಗದಲ್ಲಿ ಮೂರು ಕಮಾನುಗಳ ಬೆಟ್ಟ, ಧ್ವಜ ಮತ್ತು ಸುತ್ತಲೂ ರಾಞೂ ಸಿರಿ ಸಾತವಾಹನ ಎಂದಿದೆ. ಎರಡನೇ ಸಾತಕರ್ಣಿಯ ನಾಣ್ಯಗಳು ಸನ್ನತಿ ಮತ್ತು ಹಿಪ್ಪರಗಿ ಯಲ್ಲಿ ದೊರೆತಿದ್ದು ಇದೂ ಕೂಡ ಮೇಲಿನ ನಾಣ್ಯದ ಲಕ್ಷಣ ಹೊಂದಿದೆ. ನಾಣ್ಯಗಳ ಮೇಲೆ ಮೂರು ಕಮಾನುಗಳ ಬೆಟ್ಟ ‘ಪುಳು ಮಾವಿಸ’ ಎಂಬ ಬ್ರಾಹ್ಮಿ ಲಿಪಿಯಿದೆ. ಹಿಂಭಾಗದಲ್ಲಿ ಉಜ್ಜಯಿನಿ ಚಿನ್ಹೆಯಿದೆ.

ಸಾತವಾಹನ ದೊರೆ ಗೌತಮಿಪುತ್ರ ಸಾತಕರ್ಣಿಯು ನಹಪಾಣ ರಾಜನನ್ನು ಸೋಲಿಸಿದ ಜ್ಞಾಪಕವಾಗಿ ಆತನ ರಾಜ್ಯದಲ್ಲಿದ್ದ ನಾಣ್ಯವನ್ನು ಹಿಂತೆಗೆದು ಅವುಗಳ ಮೇಲೆ ತನ್ನ ಹೆಸರನ್ನು ಬರೆಯಿಸಿದನು. ಯಜ್ಞಶ್ರೀ ಸಾತಕರ್ಣಿಯ ನಾಣ್ಯಗಳ ಮೇಲೆ ಹಡಗು ಚಿತ್ರಣವಿರುವುದರಿಂದ ಅಂದು ನೌಕಾಯಾನವಿತ್ತೆಂಬುದು ಸ್ಪಷ್ಟವಾಗುತ್ತದೆ. ಸಾತವಾಹನರ ಮಂಡಲಾಧಿಕಾರಿಗಳ ಮಹಾರಥಿಗಳ ಮತ್ತು ಆನಂದ ಗೋತ್ರದ ರಾಜರುಗಳ ನಾಣ್ಯಗಳು ಕರ್ನಾಟಕದಲ್ಲಿ ಬನವಾಸಿ ಮತ್ತು ಕಾರವಾರಗಳಲ್ಲಿ ದೊರೆತಿವೆ. ಮುಂಭಾಗದಲ್ಲಿ ಎತ್ತಿನ ಚಿತ್ರ ಹಿಂಭಾಗದಲ್ಲಿ ಬೇಲಿ ಯೊಳಗಿನ ವೃಕ್ಷ ಇವುಗಳ ಮೇಲೆ ಚುಟುಕುಲಾನಂದ, ಮುಂದಾನಂದ ರಾಜರ  ಹೆಸರುಗಳು ಬ್ರಾಹ್ಮಿ ಲಿಪಿಯಲ್ಲಿವೆ. ಈ ನಾಣ್ಯ ಸೀಸದಿಂದ ಮಾಡಲ್ಪಟ್ಟಿದೆ.

ಪ್ರಾರಂಭಿಕ ಕಾಲದಲ್ಲಿ ಕರ್ನಾಟಕ ರೋಮಿನೊಡನೆ ವಿಶೇಷ ಸಂಬಂಧ ಹೊಂದಿತ್ತು. ರೋಮ ದೇಶದ ಸ್ತ್ರೀಯರಿಗೆ ಇಲ್ಲಿನ ಪಚ್ಛೆ ಮೆಚ್ಚಿಗೆಯಾಗಿತ್ತು. ರೋಮನ್ನರು ತಮ್ಮ ನಾಣ್ಯಗಳನ್ನು ಕೊಟ್ಟು ಪಚ್ಚೆಯನ್ನು ಖರೀದಿಸುತ್ತಿದ್ದರು. ಕರ್ನಾಟಕ ರೋಮಿಗೆ ಮೆಣಸನ್ನು ರಫ್ತು ಮಾಡುತ್ತಿತ್ತು. ವ್ಯಾಪಾರ ಸಂಬಂಧಕ್ಕೆ ಸಾಕ್ಷಿಯಾಗಿ ರೋಮನ್ನರ ನಾಣ್ಯಗಳು ಯಶವಂತ ಪುರದಲ್ಲಿ, ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣ ಪ್ರದೇಶದಲ್ಲಿ ಮತ್ತು ಚಂದ್ರವಳ್ಳಿ ಭೂಶೋಧನೆಯಲ್ಲಿ ದೊರಕಿವೆ. ಮುಂಭಾಗದಲ್ಲಿ ರಾಜನ ಚಿತ್ರ ಮತ್ತು ಹಿಂಭಾಗದಲ್ಲಿ ಬರಹವಿದೆ. ಅಗಸ್ತ್ಯ, ಟೈಬೇರಿಯಸ್ ಮತ್ತು ಕ್ಯಾಲಿಗುಲ ರಾಜರ ನಾಣ್ಯಗಳು ಕರ್ನಾಟಕದಲ್ಲಿ ದೊರಕಿರುವುದು ವಿಶೇಷತೆಯಾಗಿದೆ.

ಕದಂಬರು ಪದ್ಮಟಂಕವೆಂಬ ಚಿನ್ನದ ನಾಣ್ಯವನ್ನು ಬಳಕೆಗೆ ತಂದರು. ಇದು ಬಟ್ಟಲಿನಾ ಕಾರದಲ್ಲಿರುತ್ತದೆ. ಮಧ್ಯದಲ್ಲಿ ಪದ್ಮ, ಹಿಂಭಾಗದಲ್ಲಿ ಸಿಂಹ, ಇದರ ಸುತ್ತಲೂ ಬಿಲ್ಲು, ಶಂಖದ ಮುದ್ರೆಗಳಿವೆ. ಈ ನಾಣ್ಯಗಳಲ್ಲಿ ಬರವಣಿಗೆ ಇರದಿದ್ದರಿಂದ ಇದು ಕದಂಬರ ನಾಣ್ಯವೇ? ಏಕೆಂದರೆ ಇವರ ಕಾಲದ ಶಾಸನಗಳಲ್ಲಿ ಪದ್ಮಟಂಕದ ಉಲ್ಲೇಖನ ಬದಲಾಗಿ ಗದ್ಯಾಣ, ನಿಷ್ಟ ನಾಣ್ಯದ ಉಲ್ಲೇಖ ಬರುತ್ತದೆ.

ತಲಕಾಡನ್ನು ಆಳಿದ ಗಂಗ ಅರಸರು ಚಿನ್ನ ಮತ್ತು ತಾಮ್ರದ ನಾಣ್ಯಗಳನ್ನು ಬಳಕೆಗೆ ತಂದರು. ಗಂಗರ ಕಾಲದ ನಾಣ್ಯಗಳಲ್ಲಿ ೨ ಪ್ರಕಾರಗಳಿವೆ. ಮೊದಲನೆಯದು ಬರಹವಿಲ್ಲದ್ದು, ಎರಡನೆಯದು ಬರಹವುಳ್ಳದ್ದು. ಬರಹವಿಲ್ಲದ ನಾಣ್ಯಗಳಲ್ಲಿ ೬೦, ೬, ೧೫ ಗ್ರೇನ್ ತೂಕದ್ದಿವೆ. ಮುಂಭಾಗದಲ್ಲಿ ಅಲಂಕೃತ ಆನೆ, ಹಿಂಭಾಗದಲ್ಲಿ ಪುಷ್ಪದ ಚಿತ್ರಣ. ‘ದೇವ’ ಎಂಬ ಕನ್ನಡ ಲಿಪಿ ಇದೆ. ಒಂದೂವರೆ ಗ್ರೇನ್ ಚಿನ್ನದ ನಾಣ್ಯವನ್ನು ಅಚ್ಚು ಹಾಕಿಸಲಾಯಿತು. ಮುಂಭಾಗದಲ್ಲಿ ಆನೆಯ ಚಿತ್ರಣ ಇದ್ದು, ‘ಅಂಕುಶ’ ಎಂಬ ಕನ್ನಡ ಲಿಪಿಯ ಶಾಸನವಿದೆ. ಇತ್ತೀಚಿಗೆ ದೊರೆತ ಶ್ರೀ ಪುರುಷನಿಗೆ ಸೇರಿದ ನಾಣ್ಯ ಅಳತೆ ೦.೬” ಗ್ರೇನ್, ತೂಕ ೬೨ ಗ್ರೇನ್ ಇದೆ. ಮುಂಭಾಗದಲ್ಲಿ ನಿಂತಿರುವ ಆನೆ, ಹಿಂಭಾಗದಲ್ಲಿ ಎರಡು ಸಾಲುಗಳುಳ್ಳ ‘ಶ್ರೀಪುರುಷ’ ಎಂಬ ಬರಹವಿದೆ.

ಬಾದಾಮಿ ಚಲುಕ್ಯರ ಕಾಲದ ಶಾಸನಗಳಲ್ಲಿ ಗದ್ಯಾಣ, ವರಹ, ಪಣ, ಹಾಗ, ವೀಸ ಮತ್ತು ಬೇಳೆ ಎಂಬ ನಾಣ್ಯಗಳು ಇದ್ದವೆಂಬುದನ್ನು ಶಾಸನಗಳು ಉಲ್ಲೇಖಿಸಿವೆ. ಇವರ ಕಾಲದಲ್ಲಿ ‘ವರಹ’ ಎಂಬ ನಾಣ್ಯ ಹೆಚ್ಚು ಪ್ರಚಲಿತವಾಗಿತ್ತು. ಇವರ ರಾಜಲಾಂಛನ ವರಹವಾಗಿರುವುದರಿಂದ ವರಹ ಚಿಹ್ನೆಯನ್ನೊಳಗೊಂಡ ನಾಣ್ಯಗಳು ಹೆಚ್ಚು ಪ್ರಸಿದ್ದಿ ಪಡೆಯಿತು. ೪೫ ಗ್ರಾಂ ತೂಕವಿರುವ ಒಂದು ನಾಣ್ಯದ ಮುಂಭಾಗದಲ್ಲಿ ಕಾಲನ್ನು ಮೇಲಕ್ಕೆ ಎತ್ತಿರುವ ಸಿಂಹವಿದೆ. ಹಿಂಭಾಗದಲ್ಲಿ ದೀಪ ಮತ್ತು ಶಂಖವಿದೆ. ಕ್ರಿ.ಶ. ೬ನೇ ಶತಮಾನದ ಕನ್ನಡ ಲಿಪಿಯಲ್ಲಿ ‘ಶ್ರೀ ಪೃಥ್ವಿ’ ಎಂಬ ಬರಹವಿದೆ. ‘ಶ್ರೀ ಪ್ರಿಥಿವೀ ವಲ್ಲಭ’ ಎಂಬುದು  ಮೊದಲನೇ ಪುಲಕೇಶಿಯ ಬಿರುದಾಗಿದೆ. ಹಾಗಾಗಿ ಈ ನಾಣ್ಯ ಮೊದಲನೇ ಪುಲಕೇಶಿಗೆ ಸೇರಿದ್ದಾಗಿದೆ. ಇನ್ನೊಂದು ನಾಣ್ಯದ ಮೇಲೆ ವೃಷಭ, ರಣವಿಕ್ರಮ ಎಂಬ ಬರಹವಿದೆ. ಹಿಂಭಾಗದಲ್ಲಿ ಕಳಶ ಮತ್ತು ದೀಪಸ್ತಂಬವಿದೆ. ಈ ಬಿರುದು ಮೊದಲನೇ ಪುಲಕೇಶಿಗೆ ಸೇರಿದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಇನ್ನೊಂದು ನಮೂನೆಯ ನಾಣ್ಯ ದೊರಕಿದ್ದು ಮುಂಭಾಗದಲ್ಲಿ ಶಂಕ, ಚಕ್ರ, ಧನಸ್ಸು ಮತ್ತು ‘ಶ್ರೀ’ ಎಂಬ ಬರಹವಿದೆ. ಮತ್ತೊಂದು ಕಡೆ ವರಹ ಚಿನ್ಹೆ, ಇರುವುದರಿಂದ ಇದು ಬಾದಾಮಿ ಚಲುಕ್ಯರ ನಾಣ್ಯವೆಂಬು ದಂತೂ ಸ್ಪಷ್ಟ. ಮೊದಲನೇ ವಿಕ್ರಮಾದಿತ್ಯನ ಚಿನ್ನದ ನಾಣ್ಯ ೧೧೭ ಗ್ರೇಸ್ ತೂಕವಿದ್ದು, ಮುಂಭಾಗದಲ್ಲಿ ವರಹ ಮತ್ತು ಹಿಂಭಾಗದಲ್ಲಿ ಶ್ರೀ ವಿಕ್ರಮ ಮಹಾರಾಜ ಎಂಬ ಬರವಣಿಗೆ ಇರುವುದು ವಿಶೇಷತೆಯಾಗಿದೆ.

ರಾಷ್ಟ್ರಕೂಟರು ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಅಮೂಲ್ಯ ಕೊಡುಗೆ ನೀಡಿದರು. ಇವರ ಕಾಲದಲ್ಲಿ ವಿವಿಧ ರೀತಿಯ ನಾಣ್ಯಗಳಿದ್ದವೆಂಬುದನ್ನು ಶಾಸನಗಳು ಮಾಹಿತಿ ನೀಡುತ್ತವೆ. ದ್ರಮ್ಮ, ಸುವರ್ಣ, ಗದ್ಯಾಣ, ಕಳಂಜು, ಕಾಸುಗಳೆಂಬ ನಾಣ್ಯಗಳು ಅವರ ಕಾಲದಲ್ಲಿ ಬಳಕೆಯಲ್ಲಿದ್ದವೆಂಬುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಗದ್ಯಾಣವೆಂಬುದು ಕರ್ನಾಟಕದಲ್ಲಿದ್ದ ಅತ್ಯಂತ ಗರಿಷ್ಟ ನಾಣ್ಯ. ರಾಷ್ಟ್ರಕೂಟರ ಶಾಸನಗಳ ಆಧಾರದಲ್ಲಿ ಈ ನಾಣ್ಯ ಕೋಷ್ಠಕ ರಚಿಸಲಾಗಿದೆ.

ದ್ರಮ್ಮ=ಸುವರ್ಣ=ಗದ್ಯಾಣ=೯೬ ಗ್ರೇನ್
೧ ಗದ್ಯಾಣ=೨ ಕಳಂಜು=೯೬ ಗ್ರೇನ್
೨೦ ಕಾಸು=೭ ಕಳಂಜು, ೧ ಕಾಸು=೧೫ ಗ್ರೇನ್
೧ ಕಳಂಜು=೨೦ ಮಂಜಡಿ, ೧ ಮಂಜಡಿ=೨.೮ ಗ್ರೇನ್
೧ ಕಾಸು=೧೨ ಅಕ್ಕಂ, ೧ ಅಕ್ಕಂ=೧.೫ ಗ್ರೇನ್

ಮುಕುಂದ ಪ್ರಭುರವರ ಬಳಿಯಿದ್ದ ಒಂದು ಚಿನ್ನದ ನಾಣ್ಯದ ಮೇಲೆ ಅಲಂಕೃತ ಆನೆ ಹಿಂಭಾಗದಲ್ಲಿ ಶ್ರೀ ಛಲಕೆ ನಲ್ಲಾತ ಎಂಬ ಕನ್ನಡ ಬರಹವಿದೆ. ರಾಷ್ಟ್ರಕೂಟ ೩ನೇ ಕೃಷ್ಣನಿಗೆ ಛಲಕೆ ನಲ್ಲಾತ ಎಂಬ ಬಿರುದಿದೆ. ಬಾಗಳಿ ಮತ್ತು ಸೊರಟೂರು ಶಾಸನಗಳಲ್ಲಿ ಈ ಬಿರುದು ಉಲ್ಲೇಖಿತವಾಗಿದೆ. ರಾಷ್ಟ್ರಕೂಟ ನಾಲ್ಕನೇ ಗೋವಿಂದನಿಗೆ ಸೇರಿದ ಚಿನ್ನದ ನಾಣ್ಯವನ್ನು ನಿತ್ಯಾನಂದ ಪ್ರಭುವರು ಪ್ರಕಟಿಸಿದ್ದಾರೆ. ಮುಂಭಾಗದಲ್ಲಿ ಮುಂಗಾಲನ್ನು ಎತ್ತಿಕೊಂಡಿರುವ ಸಿಂಹ, ಹಿಂಭಾಗದಲ್ಲಿ ‘ಶ್ರೀ ನನ್ನಿವೆಡಂಗ’ ಎಂಬ ಕನ್ನಡ ಬರಹವಿದೆ. ರಾಷ್ಟ್ರಕೂಟ ೪ನೇ ಗೋವಿಂದನಿಗೆ ‘ಪ್ರಭೂತವರ್ಷ’, ‘ನನ್ನಿವೆಡಂಗ’ ಬಿರುದಿತ್ತೆಂಬುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಹೀಗಾಗಿ ಈ ನಾಣ್ಯ ೪ನೇ ಗೋವಿಂದನ ಕಾಲಕ್ಕೆ ಸೇರಿದ್ದಾಗಿದೆ.

ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ದ್ರಮ್ಮ, ಗದ್ಯಾಣ, ವರಹ, ಪಣ, ಹೊನ್ನು, ಹಾಗ, ವೀಸ, ಬೆಳೆ, ಗುಳಿಕೆ, ಕಾಗಿನಿಯನ್ನು ‘ಕಾಣಿ’ ಎಂತಲೂ ಕರೆಯುತ್ತಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಚಿನ್ನ, ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳು ದೊರಕುತ್ತವೆ. ಈ ಕಾಲದ ಅನೇಕ ಶಾಸನಗಳು ಟಂಕಸಾಲೆಗಳ ಹೆಸರನ್ನು ತಿಳಿಸಿರುವುದು ಇದೊಂದು ವಿಶೇಷತೆಯೇ ಸರಿ. ಉದಾ. ಲೊಕ್ಕಿಗದ್ಯಾಣ, ಲೊಕ್ಕಿಪೊನ್ ಎಂಬ ಶಬ್ದ ಶಾಸನಗಳಲ್ಲಿವೆ. ಅಂದರೆ ಬೇರೆ ಬೇರೆಡೆಯಲ್ಲಿ ಅಚ್ಚಾದ ನಾಣ್ಯಗಳನ್ನು ಇದರ ಭಿನ್ನತೆ ತೋರಿಸಲು ಈ ರೀತಿ ಬರೆದಿರುವ ಸಾಧ್ಯತೆ ಇದೆ. ಶಾಸನಗಳಿಂದ ಆಧರಿಸಿ ಚಾಲುಕ್ಯರ ಕಾಲದ ನಾಣ್ಯಗಳ ಮೌಲ್ಯವನ್ನು ಈ ರೀತಿ ವಿಂಗಡಿಸಬಹುದು.

೧ ಗದ್ಯಾಣ = ೧೦ ಪಣ
೧ ಪಣ = ೪ ಬಾಗ
೧ ಬಾಗ = ೪ ವೀಸ
೧ ವೀಸ = ೨ ಬೇಳೆ

ಕಲ್ಯಾಣ ಚಾಲುಕ್ಯರ ಕಾಲದ ನಾಣ್ಯಗಳು ‘ಪಂಚಮಾರ್ಕ’ ನಮೂನೆಗೆ ಸೇರಿದೆ. ನಾಣ್ಯಗಳ ಮೇಲೆ ಅನೇಕ ಚಿನ್ಹೆಗಳನ್ನು ಪಂಚ ಮಾಡಲಾಗಿದೆ. ಈ ನಾಣ್ಯಗಳ ಮೇಲೆ ಶ್ರಿ ಎಂಬ ಬರಹ, ಕತ್ತಿ, ಯಜ ಎಂಬ ಬರಹ ಪಂಚ್ ಮಾಡಿದೆ. ಹಿಂಭಾಗದಲ್ಲಿ ಚಿನ್ಹೆ ಇಲ್ಲ. ಎರಡನೆಯ ನಮೂನೆಯಲ್ಲಿ ೯ ಪಂಚ್ ಚಿನ್ಹೆಗಳಿವೆ. ಮಧ್ಯದಲ್ಲಿ ಗೋಪುರದ ಚಿತ್ರಣವಿದೆ. ಪಕ್ಕದಲ್ಲಿ ಚಕ್ರ ಮತ್ತು ‘ಶ್ರೀ’ ಅಕ್ಷರವಿದೆ. ಸುತ್ತಲೂ ‘ಜಗದೇಕಮಲ್ಲ’ ಎಂಬ ಕನ್ನಡ ಲಿಪಿಯಿದೆ. ಹಿಂಭಾಗದಲ್ಲಿ ಯಾವುದೇ ಲಿಪಿಯಿಲ್ಲ. ಜಯಸಿಂಹ ಜಗದೇಕ ಮಲ್ಲನ ಎರಡು ನಮೂನೆಯ ನಾಣ್ಯಗಳು ದೊರೆತಿದ್ದು ಒಂದರಲ್ಲಿ ೫ ಸಿಂಹದ ಮುದ್ರೆಗಳು ಭರ್ಚಿ, ಹಿಂಭಾಗದಲ್ಲಿ ಶಾಸನ ಇದೆ. ಇನ್ನೊಂದು ನಮೂನೆಯಲ್ಲಿ ಗೋಪುರ, ಮೇಲೆ ಚಕ್ರ ಮತ್ತು ಕನ್ನಡ ಲಿಪಿಯಲ್ಲಿ ಜಗದೇಕಮಲ್ಲ ಎಂಬ ಶಾಸನವಿದೆ. ಹಿಂಭಾಗದಲ್ಲಿ ಯಾವುದೇ ಲಿಪಿಯಿಲ್ಲ. ಮೊದಲನೇ ಸೋಮೇಶ್ವರನ ನಾಣ್ಯದಲ್ಲಿ ಐದು ಸಿಂಹ ಮತ್ತು ತ್ರೈಲೋಕ್ಯ ಮಲ್ಲನೆಂಬ ಶಾಸನ ಇದೆ. ಇಮ್ಮಡಿ ಸೋಮೇಶ್ವರನ ನಾಣ್ಯದ ಮುಂಭಾಗದಲ್ಲಿ ೯ ಪಂಚ ಚಿನ್ಹೆಯಿದೆ. ೪ ತಾವರೆ ಹೂಗಳು, ‘ಶ್ರೀ’ ಅಕ್ಷರ ಸೂರ್ಯ, ಚಂದ್ರ ಮತ್ತು ಭುವನೈಕ ಮಲ್ಲ ಎಂಬ ಕನ್ನಡ ಲಿಪಿಯಿದೆ. ಇಮ್ಮಡಿ ಸೋಮೇಶ್ವರನಿಗೆ ಭುವನೈಕಮಲ್ಲ ಎಂಬ ಬಿರುದು ಇದ್ದಿತು. ಮುಕುಂದ ಪ್ರಭುರವರು ಶೋಧಿಸಿದ ಮಾಚಿ ಭೂಪಾಲನ ಬೆಳ್ಳಿಯ ನಾಣ್ಯದಲ್ಲಿ ಮುಂಭಾಗದಲ್ಲಿ ಅಂಕುಶ ಹಿಡಿದಿರುವ ಸಿಂಹ, ಹಿಂಭಾಗದಲ್ಲಿ ನಾಗರಿಯಲ್ಲಿ ‘ಮಾಚಿ ಭೂಪಾಲ’ ಎಂದಿದೆ. ಇವನು ಸೋಮೇಶ್ವರನ ಸಾಮಂತನಾಗಿದ್ದನು ಎಂದಿದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅತಿ ಪ್ರಸಿದ್ಧನಾದವನು ಆರನೇ ವಿಕ್ರಮಾದಿತ್ಯ. ಆರನೇ ವಿಕ್ರಮಾದಿತ್ಯನ ಚಿನ್ನದ ನಾಣ್ಯಗಳಲ್ಲಿ ೯ ಮುದ್ರಾಂಕಿತ ಚಿನ್ಹೆಗಳಿವೆ. ಒಂದರಿಂದ ಐದರವರೆಗೆ ಐದು ಚಿನ್ನದ ನಾಣ್ಯಗಳು ಉಂಟು. ಶ್ರೀ ಅಕ್ಷರ, ಸೂರ್ಯ, ಚಂದ್ರ, ಕೊನೆಯ ಮುದ್ರಾಂಕಿತ ದಲ್ಲಿ ‘ಭುಜಬಲ’ ಎಂಬ ಕನ್ನಡ ಲಿಪಿಯಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿನ ಅಯ್ಯಣನ ನಾಣ್ಯ, ದಶವರ್ಮನ ನಾಣ್ಯಗಳನ್ನು, ಚಾಲುಕ್ಯರ ನಾಣ್ಯಗಳು ಹೋಲುತ್ತವೆ. ಇವರ ಕಾಲದ ನಾಣ್ಯಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ.

ಕಲ್ಯಾಣ ಚಾಲುಕ್ಯರ ಸಮಕಾಲೀನರಾದ ಕಳಚೂರಿ ಅರಸರುಗಳ ನಾಣ್ಯಗಳು ವಿಶೇಷವಾಗಿ ದೊರಕಿಲ್ಲ. ದೊರಕಿರುವ ಈ ಮನೆತನದ ನಾಣ್ಯಗಳು ೫೫ ಗ್ರೆನ್ ತೂಕವಿದ್ದು ನಾಣ್ಯದ ಮೇಲೆ ‘ಮುರಾರಿ’ ಎಂಬ ಬರಹವಿದೆ. ಇದು ರಾಯಮುರಾರಿ ಸೋವಿದೇವನ ಕಾಲದ್ದಾಗಿರ ಬೇಕು. ಇವರ ನಂತರ ಬಂದ ಹೊಯ್ಸಳರು ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಹೊಯ್ಸಳರ ಶಾಸನಗಳಲ್ಲಿ ಸಿಕ್ಕ ಆಧಾರದಿಂದ, ನಿಷ್ಕ, ಗದ್ಯಾಣ, ಹೊನ್ನು, ತಾರ, ಪಣ, ಹಾಗ, ವೀಸ, ಬೇಳೆ, ಕಾಣಿ ಮತ್ತು ವರಿಷ್ಠ ಚಿನ್ನದ ನಾಣ್ಯ, ಗದ್ಯಾಣ. ಇದರ ತೂಕ ೬೨ ಗ್ರೇನ್. ಶಾಸನದಲ್ಲಿ ಸಿಕ್ಕ ಕೆಲವು ಮಾಹಿತಿಗಳ  ಆಧಾರದಿಂದ ನಾಣ್ಯಶಾಸ್ತ್ರ ಅಧ್ಯಯನಕ್ಕೆ ಮಹದುಪಕಾರವಾಗಿದೆ. ಕ್ರಿ.ಶ. ೧೨೯೮ರಲ್ಲಿ ಬೇಲೂರಿನಲ್ಲಿ ಸಿಕ್ಕ ಶಾಸನದಲ್ಲಿ ದಾನಗಳು ಗದ್ಯಾಣ ಮತ್ತು ಪಣಗಳಲ್ಲಿ ಉಲ್ಲೇಖಿತವಾಗಿರುವುದು ಒಂದು ವಿಶೇಷತೆಯಾಗಿದೆ. ಉದಾ.

ಪೆರುಮಾಲೆ ದಂಡನಾಯಕ ೧ಗ
ಸೇನಬೋವ ಸೋಮಣ್ಣ ೧ಗ
ಅಜನಣ್ಣ ೧ಗ
ಕರಿಯ ಉಟಣ್ಣ ೧ಗ
ಗೋವಿನದೇವ ೨ಗ ೫ಪ
ಕೃಷ್ಣಯ್ಯ ೧ಗ ೫ಪ
ಅಳಿಯ ವರದಣ್ಣ ೧ಗ ೫ಪ
ಪೊನ್ನಣ್ಣ ೧ಗ ೫ಪ
ಸಿಂಗಣ್ಣ ೧ಗ ೫ಪ
ಕೇಶವ ದೇವ ೧ಗ ೫ಪ
ನಾಗಭಟ್ಟ ೧ಗ ೫ಪ
ಕೇತಯ್ಯ ೧ಗ ೫ಪ
ಅರಮಯ್ಯ ೧ಗ ೫ಪ
ಇತರರು ೧ಗ ೫ಪ
ಒಟ್ಟು ೧೧ಗ ೪೦ಪ ೧೫ಗ

ಶಾಸನದಲ್ಲಿ ಒಟ್ಟು ೧೫ ಗದ್ಯಾಣಗಳೆಂದು ತಿಳಿಸಿರುವುದರಿಂದ ಒಂದು ಗದ್ಯಾಣಕ್ಕೆ ೧೦ ಪಣ ಎಂದು ನಿರ್ಧರಿಸಬಹುದು. ನರಸಿಪುರ ಗ್ರಾಮದ ಶಾಸನದಲ್ಲಿ ೩ ಗದ್ಯಾಣಗಳಿಗೆ ಗದ್ಯಾಣ ಒಂದಕ್ಕೆ ಪ್ರತಿ ತಿಂಗಳಿಗೆ ಒಂದು ಹಾಗದಂತೆ ಒಂದು ವರ್ಷಕ್ಕೆ ಒಂಬತ್ತು ಪಣ ಬಡ್ಡಿಯಾಗುತ್ತದೆ ಎಂದಿದೆ. ಹೀಗೆ ಶಾಸನಗಳ ಆಧಾರದಲ್ಲಿ ಹಾಗ, ವೀಸ, ಬೇಳೆ ನಾಣ್ಯದ ಬೆಳೆಯನ್ನು ನಿರ್ಧರಿಸಲಾಗಿದೆ.

ಕಲ್ಯಾಣ ಚಾಲುಕ್ಯರ ನಾಣ್ಯಗಳು ಮುದ್ರಾಂಕಿತ ನಾಣ್ಯಗಳೆಂಬ ಗುಂಪಿಗೆ ಸೇರಿದರೆ, ಹೊಯ್ಸಳರು ದ್ವಿಮುದ್ರೆಗಳಿಂದ ನಾಣ್ಯಗಳನ್ನು ಟಂಕಿಸಿದರೂ ಹೊಯ್ಸಳರ ಕಾಲದಲ್ಲಿ ಚೋಳರ ನಾಣ್ಯದ ತೂಕ ಅನುಸರಿಸಿರುವುದು ವಿಶೇಷತೆ. ವಿಷ್ಣುವರ್ಧನನು ತಲಕಾಡನ್ನು ಗೆದ್ದ ಸ್ಮರಣೆಗಾಗಿ ‘ತಲಕಾಡುಗೊಣ್ಡ’ ಎಂಬ ಬರಹದ ಚಿನ್ನದ ನಾಣ್ಯವನ್ನು ಮುದ್ರಿಸಿದನು. ಇದರ ಮುಂಭಾಗದಲ್ಲಿ ಎಡಗಾಲು ಮೇಲೆತ್ತಿದ ಸಿಂಹವಿದೆ. ಅದರ ಮುಂದೆ ಚಕ್ರಧ್ವಜವಿದೆ. ಎರಡನೆಯ ನಾಣ್ಯದ ಮುಂಭಾಗದಲ್ಲಿ ಬಲಗಡೆ ಮುಖ ಮಾಡಿದ ಸಿಂಹವಿದ್ದು ಅದರ ಮೇಲೆ ‘ಚಾಮುಂಡಿ’ ಹಿಂಭಾಗದಲ್ಲಿ ‘ನೋಳಂಬವಾಡಿ ಗೊಂಡ’ ಎಂಬ ಶಾಸನವಿದೆ. ವಿಷ್ಣುವರ್ಧನನು ನೊಳಂಬರನ್ನು ಸೋಲಿಸಿದ ಸ್ಮರಣಾರ್ಥ ಈ ಹಣವನ್ನು ಚಲಾವಣೆಗೆ ತಂದನು. ಮೂರನೆಯ ನಮೂನೆಯ ನಾಣ್ಯದ ಮುಂಭಾಗದಲ್ಲಿ ಸಿಂಹ ಹಿಂಭಾಗದಲ್ಲಿ ‘ಶ್ರೀಮಲಪರೊಳು ಗಣ್ಡ’ ಎಂಬ ಶಾಸನವಿದೆ. ಎರಡನೆಯ ನರಸಿಂಹನ ನಾಣ್ಯಗಳಲ್ಲಿ    ಶ್ರೀ ಪ್ರತಾಪ ನರಸಿಂಹ ಎಂಬ ಬರಹವಿದ್ದು, ಚಾಮುಂಡಿ ಚಿತ್ರಣವಿದೆ.

ಇತ್ತೀಚಿಗೆ ರಾಣಿ ಶಾಂತಲಾದೇವಿಯ ನಾಣ್ಯಗಳು ಶೋಧಿಸಲ್ಪಟ್ಟಿದೆ. ಮುಂಭಾಗದಲ್ಲಿ ಶ್ರೀರಾಮ, ಸೀತೆ, ಹನುಮಂತ ಹಿಂಭಾಗದಲ್ಲಿ ‘ಶ್ರೀ ಈಸಪುರ’ ಎಂದಿದೆ. ಮೇಲ್ಭಾಗದಲ್ಲಿ ಶ್ರೀ ರಾಮನ ಮುಖವಿದ್ದು, ಇದು ಶ್ರೀರಾಮ ಗದ್ಯಾಣವಾಗಿದೆ. ಶಾಂತಲಾದೇವಿ ಈಶಪುರ ಅಂದರೆ ಈಗಿನ ಈಸೂರಿನಲ್ಲಿನ ರಾಮೇಶ್ವರ ದೇವಾಲಯ ನಿರ್ಮಿಸಿದಳು. ಇದರಿಂದ ಶ್ರೀರಾಮನ ಚಿತ್ರವಿರುವುದರಿಂದ ಇದನ್ನು ಶ್ರೀರಾಮ ಗದ್ಯಾಣವೆಂದು ಕರೆಯುತ್ತಾರೆ. ಮೊದಲನೇ ನರಸಿಂಹನ ಕಾಲಕ್ಕೆ ಸೇರಿದ ನಾಣ್ಯಗಳು ದೊರೆತಿವೆ. ಮುಂಭಾಗದಲ್ಲಿ ಸಿಂಹ ವಾಹಿನಿಯಾದ ದುರ್ಗ, ಕೈಗಳಲ್ಲಿ ಆಯುಧ ಹಿಡಿದಿವೆ. ಹಿಂಭಾಗದಲ್ಲಿ ಶಾಸನ ‘ಶ್ರೀ ಪ್ರತಾಹ ನರಸಿಂಹ’ ಎಂದಿದೆ.

ದೇವಗಿರಿಯ ಯಾದವರು ಅಥವಾ ಸೇವುಣರು ಹೊಯ್ಸಳರ ಸಮಕಾಲೀನರು. ಹೊಯ್ಸಳ ರೊಡನೆ ಹೋರಾಡಿ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳನ್ನು ವಶಪಡಿಸಿಕೊಂಡು ದೇವಗಿರಿಯಿಂದ ರಾಜ್ಯವಾಳಿದರು. ನಿಷ್ಕೆ, ಗದ್ಯಾಣ, ಹೊಸಸುವರ್ಣ, ಪಣ, ಚವುಲ, ಕಾಕಿನಿ, ದೂರ, ಖಾಗ, ಟಂಕ, ಬೇಳೆ, ವೀಸ, ಅರವೀಸ ನಾಣ್ಯಗಳು ಇವರ ಕಾಲದ ಶಾಸನಗಳಲ್ಲಿ ಉಲ್ಲೇಖಿತವಾಗಿದೆ. ಇವರ ಕಾಲದ ಚಿನ್ನದ ನಾಣ್ಯಗಳ ಮುಂಭಾಗದಲ್ಲಿ ಪದ್ಮ ಸುತ್ತಲೂ ಶಂಖ, ಚಕ್ರ, ಹಿಂಭಾಗದಲ್ಲಿ ಬಲ್ಲಮ, ಸಿಂಘಣ, ಕನ್ಹಪ, ಮಹಾದೇವ, ಚಂದ್ರರ ಹೆಸರುಳ್ಳ ನಾಣ್ಯಗಳು ದೊರಕಿವೆ.

ಒಟ್ಟಾರೆ ಪ್ರಾಚೀನ ಕಾಲದಿಂದ ಹೊಯ್ಸಳ ಯಾದವರವರೆಗಿನ ಈವರೆಗಿನ ಅಧ್ಯಯನ ಮಾಡಿ ನೋಡಿದರೆ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ. ನಾಣ್ಯಶಾಸ್ತ್ರದ ಅಧ್ಯಯನಕ್ಕೆ ಶಾಸನಶಾಸ್ತ್ರ ಮತ್ತು ಲಿಪಿಶಾಸ್ತ್ರ ವಿಶೇಷವಾಗಿ ಬೆಳಕನ್ನು ಚೆಲ್ಲಿವೆ. ನಾಣ್ಯಶಾಸ್ತ್ರದ ಅರಿವು ಮೂಡಿಸಲು ಶಾಸನಶಾಸ್ತ್ರ ಪ್ರಧಾನ ಪಾತ್ರವಹಿಸುತ್ತದೆ. ಉದಾ. ಹೊಯ್ಸಳರ ಮತ್ತು ಯಾದವರವರೆಗಿನ ನಾಣ್ಯಗಳಲ್ಲಿ ಯಾವ ನಾಣ್ಯಗಳ ಮೇಲೂ ನಾಣ್ಯಗಳ ಹೆಸರು ಕಾಣುವುದಿಲ್ಲ. ಆದರೆ ಶಾಸನಗಳು ವರಹ, ಗದ್ಯಾಣ, ಪೊನ್, ತಾರ ಹೀಗೆ ಹಲವು ನಾಣ್ಯಗಳ ಹೆಸರನ್ನು ಸೂಚಿಸುತ್ತದೆ. ನಾಣ್ಯಗಳ ಮೇಲೆ ಲಿಪಿ ಇರುವುದರಿಂದ ಈ ಕಾಲದ ಲಿಪಿ ಜ್ಞಾನವು ಸಿಗುತ್ತದೆ. ಶಾಸನಗಳಲ್ಲಿ ಟಂಕಸಾಲೆಗಳನ್ನು ‘ಕಮ್ಮಟ’ ಎಂದು ಕರೆಯಲಾಗಿದೆ. ಟಂಕಶಾಲೆಯ ಮುಖ್ಯಸ್ಥನ್ನು ‘ಟಂಕಕಾರ’ ಎಂದು ಕರೆಯಲಾಗಿದೆ. ಟಂಕಶಾಲೆಯಲ್ಲಿ ಬಳಸು ತ್ತಿದ್ದ ಆಣಿ, ಅಚ್ಚಿನ ಮೊಳೆ, ಉಂಡಿಗೆ, ಉಂಡಿಗೆ ಹಾಗ ಮುಂತಾದ ತಾಂತ್ರಿಕ ಪದವನ್ನು ತ್ರಿಭುವನಮಲ್ಲನ ಸೂಡಿ ಶಾಸನ ಉಲ್ಲೇಖಿಸುತ್ತದೆ. ನಾಣ್ಯಗಳನ್ನು ರಾಜವಂಶಗಳ ಹೆಸರಿ ನಿಂದಲೂ ಗುರುತಿಸಲಾಗುತ್ತಿತ್ತು. ಉದಾ. ಗಂಗನ ಗದ್ಯಾಣ, ಕಂಠೀರಾಯ ಪಣ ಇತ್ಯಾದಿ.

ನಾಣ್ಯ ಅಧ್ಯಯನದಿಂದ ನಾಣ್ಯದ ಮೌಲ್ಯ ತಿಳಿಯುವುದು ಕಷ್ಟ. ಆದರೆ ಶಾಸನಗಳು ಪ್ರಾಸಂಗಿಕವಾಗಿ ಇದರ ಕುರಿತು ಮಾಹಿತಿ ನೀಡುತ್ತದೆ. ಉದಾ. ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಮೇಲೆ ಹೇಳಿದಂತೆ ನಾಣ್ಯಗಳ ಮೌಲ್ಯ ನೀಡಲಾಗಿದೆ. ಶಾಸನಗಳಲ್ಲಿ ಟಂಕಸಾಲೆ ಗಳಿದ್ದ ಹೆಸರನ್ನೂ ತಿಳಿಸಲಾಗಿದೆ. ಉದಾ. ಬಾರಕೂರಿನ ಗದ್ಯಾಣ, ಮಂಗಳೂರು ಗದ್ಯಾಣ, ಲೊಕ್ಕಿಗುಂಡಿ ಗದ್ಯಾಣ, ಬ್ರಾಹ್ಮಣರಿಗಾಗಲಿ ದೇವರಿಗಾಗಲಿ ದಾನ ನೀಡುವಾಗ, ಆರ್ಥಿಕ ವ್ಯವಹಾರಗಳಲ್ಲಿ, ತೆರಿಗೆ ನೀಡುವಾಗ, ಭೂಮಿ ಕೊಳ್ಳುವಾಗ ನಾಣ್ಯವನ್ನು ಯಾವ ರೀತಿ ನೀಡುತ್ತಿದ್ದರೆಂಬ ಬಗ್ಗೆ ಪ್ರಾಸಂಗಿಕವಾಗಿ ಶಾಸನಗಳು ಮಾಹಿತಿಯನ್ನು ನೀಡುತ್ತವೆ.

ಹೀಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ನಾಣ್ಯಶಾಸ್ತ್ರ ಮತ್ತು ಶಾಸನಶಾಸ್ತ್ರ ಬೆಳಕನ್ನು ಚೆಲ್ಲಿವೆ. ಇತಿಹಾಸ ರಚನೆಯನ್ನು ದೃqsಕರಿಸುವಲ್ಲಿ ಈ ಎರಡು ಅಧ್ಯಯನಗಳು ಒಂದಕ್ಕೊಂದು ಪೂರಕವಾಗಿವೆ. ನಾಣ್ಯಶಾಸ್ತ್ರ ಪ್ರತ್ಯೇಕವಾದ ಅಧ್ಯಯನವೆಂದಾದರೂ ಶಾಸನಶಾಸ್ತ್ರವಿಲ್ಲದೇ ನಾಣ್ಯಶಾಸ್ತ್ರದ ಅಧ್ಯಯನ ಪೂರ್ಣವಾಗುವುದಿಲ್ಲ. ಏಕೆಂದರೆ ನಾಣ್ಯಗಳ ಹೆಸರು, ನಾಣ್ಯಗಳ ಮೇಲೆ ಬರೆಯಲಾದ ರಾಜರ ಹೆಸರುಗಳನ್ನು ಶಾಸನಗಳು ತಿಳಿಸುತ್ತವೆ. ದಾನಗಳನ್ನು ಕೊಡವಾಗ, ತೆರಿಗೆಗಳನ್ನು ತಿಳಿಸುವಾಗ, ನಾಣ್ಯದ ಮೌಲ್ಯತೆಯನ್ನು ಹೇಳುವಾಗ, ಧಾರ್ಮಿಕ, ಆರ್ಥಿಕ ವ್ಯವಹಾರಗಳಲ್ಲಿ ಬಳಸುತ್ತಿದ್ದ ನಾಣ್ಯಪದ್ಧತಿಯನ್ನು ತಿಳಿಯಲು ಶಾಸನಗಳಿಂದ ಮಹದುಪಕಾರವಾಗಿವೆ. ಇತಿಹಾಸ ರಚನೆಗೆ ಅದರಲ್ಲೂ ಹೆಚ್ಚಾಗಿ ನಾಣ್ಯಇತಿಹಾಸ ರಚನೆಗೆ ಸಂಶೋಧಕರು ಶಾಸನ ಶಾಸ್ತ್ರವನ್ನು ಅವಲಂಬಿಸುವುದು ಅತಿ ಅವಶ್ಯಕ. ಪ್ರಾಚೀನ ಕರ್ನಾಟಕದ ನಾಣ್ಯಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಎಲ್ಲಾ ಅರಸರ ನಾಣ್ಯಗಳೂ ಈವರೆಗೆ ದೊರೆತಿಲ್ಲ, ಅಧ್ಯಯನ ಮಾಡಬೇಕಾದದ್ದು ಇನ್ನೂ ಸಾಕಷ್ಟಿದೆ. ಮೇಲೆ ನೀಡಿರುವುದು ಪ್ರಾಚೀನ ಕರ್ನಾಟಕದ ಉದಾಹರಣೆ ಮಾತ್ರವಾಗಿದೆ. ಉತ್ಖನನ, ಅನ್ವೇಷಣೆ ಮತ್ತು ಅಧ್ಯಯನ ಮಾಡುತ್ತ ಹೋದಲ್ಲಿ ಇನ್ನೂ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತವೆ. ಶಾಸನಶಾಸ್ತ್ರ ಮತ್ತು ಲಿಪಿಶಾಸ್ತ್ರವಿಲ್ಲದೆ ನಾಣ್ಯಶಾಸ್ತ್ರದ ಅಧ್ಯಯನ ಪೂರ್ಣವಾಗಲಿಕ್ಕಿಲ್ಲ.

ಗ್ರಂಥಋಣ

೧. ಎ.ವಿ. ನರಸಿಂಹಮೂರ್ತಿ, ಕರ್ನಾಟಕ ನಾಣ್ಯ ಪರಂಪರೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೩.

೨. ಎಸ್. ಕಂಠಶಾಸ್ತ್ರಿ, ಪುರಾತತ್ವ ಶೋಧನೆ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೫.

೩. ಎಪಿಗ್ರಾಫಿಯಾ ಕರ್ನಾಟಕ ಸಂಪುಟ-೫, ಬೇಲೂರು ೨೫೦, ೧೫೯, ೧೬೦.

೪. ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಶನ್ಸ್, ಸಂಪುಟ ೯-೧,  ಪು. ೧೬೪.