ಪ್ರಸ್ತಾವನೆ

ಭಾರತದ ಲಿಪಿಯ ಚರಿತ್ರೆಯಲ್ಲಿ ಮೋಡಿ ಲಿಪಿಗೆ ಮಹತ್ವದ ಸ್ಥಾನವಿದೆ. ಅರಬ್ಬೀ ವರ್ಣಮಾಲೆಯಿಂದ ರಚಿತವಾದ ಮೋಡಿ ಲಿಪಿ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಬಳಕೆಯಾಗುತ್ತ ಬಂದಿದೆ. ಮೋಡಿ ಲಿಪಿಯನ್ನು ವಕ್ರವಾದ ನಂದಿ ನಾಗರಿ ಲಿಪಿಯೆಂದು ಕರೆಯಲಾಗುತ್ತದೆ. ಮರಾಠಿ ಮೋಡಿಯೆಂದು ಪ್ರಚಾರದಲ್ಲಿರುವ ಮೋಡಿ ಲಿಪಿಯನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಐತಿಹಾಸಿಕ ದಾಖಲೆಗಳಲ್ಲಿ, ಕಡತಗಳಲ್ಲಿ ಕಾಣುತ್ತೇವೆ.

ಚರಿತ್ರೆ

ಮೋಡಿ ಲಿಪಿಯನ್ನು ಮೊಟ್ಟಮೊದಲು ದೇವಗಿರಿಯ ದಿವಾನರಾದ ಹೇಮಾದ್ರಿ ಅಥವಾ ಹೇಮಾಡಪಂತ ಇವರು ಶೋಧಿಸಿದರೆಂದು ತಿಳಿದುಬರುತ್ತದೆ. ಕ್ರಿ.ಶ. ಸುಮಾರು ೧೨೬೦ರಲ್ಲಿ ಇವರು ಯಾದವ ಅರಸರಾದ ಮಹಾದೇವ ಮತ್ತು ರಾಮಚಂದ್ರ ಇವರ ಮಂತ್ರಿಗಳಾಗಿದ್ದರು. ಆದರೆ ಯಾದವರ ಕಾಲದ ಶಾಸನಗಳಲ್ಲಿ ಮೋಡಿ ಲಿಪಿಯ ಬಳಕೆ ವಿಶೇಷವಾಗಿ ಆಗಲಿಲ್ಲ. ಆದರೆ ಛತ್ರಪತಿ ಶಿವಾಜಿ ಕಾಲದ ಕಾರಕೂನರಾದ ಚಂದ್ರಸೇನೀಯ ಕಾಯಸ್ಥ ಪ್ರಭುಗಳು ಈ ಲಿಪಿಯನ್ನು ಬಳಸಿದ್ದರಿಂದ ಇದಕ್ಕೆ ರಾಷ್ಟ್ರೀಯ ಸ್ವರೂಪ ದೊರಕಿತು. ನಂತರ ಪೇಶ್ವೆಯರ ಕಾಲದಲ್ಲಿ ಎಲ್ಲ ಸರಕಾರೀ ಕಾಗದ ಪತ್ರಗಳು ದಾಖಲೆಗಳು ಮೋಡಿ ಲಿಪಿಯಲ್ಲೇ ಬರೆಯ ಲ್ಪಟ್ಟವು.

ಆಗಿನ ಕಾಲದಲ್ಲಿ ಬಾಲಬೋಧಕ್ಕಿಂತ ಈ ಲಿಪಿ ಬಳಸಿ ಮಜಕೂರುಗಳನ್ನು ತ್ವರಿತವಾಗಿ ಬರೆಯಲು ಸಾಧ್ಯವಾಗುತ್ತಿತ್ತು. ಮೋಡಿ ಲಿಪಿಯ ಬಳಕೆಯ ಮತ್ತೊಂದು ಉದ್ದೇಶವೇನೆಂದರೆ ವೈಯಕ್ತಿಕ ಹಾಗೂ ಗೌಪ್ಯ ವಿಷಯಗಳನ್ನು ಲಿಖಿತ ರೂಪದಲ್ಲಿ ಅಳವಡಿಸಲು ಬಳಸುವದು, ಯುದ್ಧಕಾಲದಲ್ಲಿ ವೈರಿಗಳಿಗೆ ರಾಜಮನೆತನದ ವ್ಯವಹಾರಗಳು ಸುಲಭವಾಗಿ ಗೊತ್ತಾಗಬಾರ ದೆಂಬ ಉದ್ದೇಶದಿಂದಲೂ ಮೋಡಿ ಲಿಪಿ ಪ್ರಚಾರಕ್ಕೆ ಬಂದಿರುವ ಸಾಧ್ಯತೆ ಇದೆ.

ಮೋಡಿ ಲಿಪಿಯ ವರ್ಣಮಾಲೆ

ಮೋಡಿ ಲಿಪಿಯಲ್ಲಿ ೪೮ ಅಕ್ಷರಗಳಿವೆ. ಇವುಗಳಲ್ಲಿ ೧೨ ಸ್ವರಗಳು, ೩೬ ವ್ಯಂಜನಗಳಿವೆ. ಇದರಲ್ಲಿ ಸಂಯುಕ್ತಾಕ್ಷರಗಳಿರುವುದಿಲ್ಲ. ಅದಕ್ಕೆ ಬದಲಾಗಿ ಬರವಣಿಗೆ ಮಾಡುವಾಗ ನೇರವಾಗಿ ಸರಳರೇಖೆಗಳನ್ನು ಎಳೆದು ಬರೆಯಲಾಗುತ್ತದೆ. ಇದರಲ್ಲಿ ಪೂರ್ಣವಿರಾಮ, ಅಲ್ಪವಿರಾಮ ಇತ್ಯಾದಿಗಳೂ ಇರುವುದಿಲ್ಲ. ಮರಾಠಿ, ಅರೇಬಿಕ್, ಪರ್ಶಿಯನ್ ಮಿಶ್ರಿತ ಭಾಷೆ ಅಲ್ಲಲ್ಲಿ ಕನ್ನಡ ಪದಗಳ ಬಳಕೆಯಾಗಿದೆ. ಇಸವಿ, ತಾರೀಖು ಇತ್ಯಾದಿಗಳನ್ನು ಅರೇಬಿಕ್ ಪದ್ಧತಿಯಲ್ಲಿ ನಮೂದಿಸಲಾಗುತ್ತದೆ. ಅದನ್ನು ಕ್ರಿಸ್ತಶಕಕ್ಕೆ ರೂಪಾಂತರಿಸುವಾಗ ಅಗತ್ಯವಿದ್ದ ತಖ್ತೆಯನ್ನು ಬಳಸಬೇಕಾಗುತ್ತದೆ (ನೋಡಿ : ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆ, ಧಾರವಾಡದಿಂದ ಪ್ರಕಟವಾದ ಆರ್.ಎಸ್. ಪಂಚಮುಖಿ ಯವರ “ಜಂತ್ರಿ”).

 


ಚಿತ್ರ ೦೧: ಮೋಡಿ ಲಿಪಿಯಲ್ಲಿನ ಸ್ವರಗಳು ಮತ್ತು ವ್ಯಂಜನಗಳು

 

ಮೋಡಿ ಲಿಪಿಯಲ್ಲಿ ಅಕ್ಷರಗಳ ಅಕಾರಾಂತ ವನ್ನು ಆಕಾರಂತವನ್ನಾಗಿ ಮಾಡಲಿಕ್ಕೆ ವಿವಿಧ ಪದ್ಧತಿಗಳಿವೆ. ದೇವನಾಗರಿ ಲಿಪಿಯ ಅಕ್ಷರ ಗಳಂತೆ ಮುಂದೆ ಗೆರೆಯನ್ನು ಕೊಡದೆ ಬೇರೆ ರೀತಿಯಿಂದ ಅಕಾರಾಂತವಾಗಿ ಮಾಡುತ್ತಾರೆ (ಚಿತ್ರ೩). ಹಾಗೆಯೇ ಉಕಾರ, ಈಕಾರ ಮತ್ತು ಔಕಾರಗಳನ್ನು ಬೇರೆ ಬೇರೆ ರೀತಿಯಿಂದ ಬರೆಯುವ ಪದ್ಧತಿಯಿದೆ.

ಮುದ್ರಿತ ಮೋಡಿಯನ್ನು ಓದುವದು ಸುಲಭ. ಆದರೆ ಕೈಯಿಂದ ಬರೆದ ಮೋಡಿ ಯನ್ನು ಓದುವದು ಕಠಿಣ. ಯಾಕೆಂದರೆ ಕೈ ಬರಹದಲ್ಲಿ ಅಕ್ಷರಗಳ ಗಂಟುಗಳನ್ನು ಅಥವಾ ಪೊಳ್ಳಾದ ಗಂಟುಗಳನ್ನು ಸರಿಯಾಗಿ ಕೊಡುವ ದಿಲ್ಲ. ಹಾಗೆಯೇ ಕೆಲವು ಅಕ್ಷರಗಳು ನೋಡಲು ಒಂದೇ  ತರಹ ಕಾಣಿಸುತ್ತವೆ. ಆದರೆ ಅವುಗಳ ನಡುವೆ ಸ್ವಲ್ಪ ಸ್ವಲ್ಪ ವ್ಯತ್ಯಾಸ ಕಂಡುಬರುತ್ತವೆ. ಈ ಕಳಗಿನ ಪೇಶ್ವೆ ಕಾಲದ ಒಂದು ಮೋಡಿ ಪತ್ರದ ಪ್ರತಿಯನ್ನು ನೋಡಿದರೆ ಆಗಿನ ಕಾಲದಲ್ಲಿ ಮೋಡಿಯನ್ನು ಹೇಗೆ ಬರೆಯುತ್ತಿ ದ್ದರೆಂಬ ಬಗ್ಗೆ ಕಲ್ಪನೆ ಬರುತ್ತದೆ.

ಮೋಡಿ ಲಿಪಿಯ ಆಕರ ಸಾಮಗ್ರಿ

ಪುಣೆಯ ಪತ್ರಾಗಾರವು ಮೋಡಿ ದಾಖಲೆಗಳ ಗಣಿಯಾಗಿದೆ. ಮರಾಠರು ಹಾಗೂ ಪೇಶ್ವೆಯರು ೧೭ನೇ ಹಾಗೂ ೧೮ನೇ ಶತಮಾನದಲ್ಲಿ ಉತ್ತರ ಕರ್ನಾಟವನ್ನು ವಶಪಡಿಸಿ ಕೊಂಡು ಆಡಳಿತ ನಡೆಸಿದ ಆ ಕಾಲದ ದಾಖಲೆಗಳು ಕರ್ನಾಟಕ ಜಮಾವ ಎಂಬ ವಿಭಾಗದಲ್ಲಿ ರುಮಾಲುಗಳಲ್ಲಿ ಸಂಗ್ರಹಿಸಿಡಲಾಗಿದೆ. ಮರಾಠಿ ಮೋಡಿ ದಾಖಲೆಗಳನ್ನು ಆರು ವಿಭಾಗ ಗಳನ್ನಾಗಿ ವಿಂಗಡಿಸಲಾಗಿದೆ. ೧. ಶಾಹು ದಫ್ತರ್ ೨. ಪೇಶವಾ ದಫ್ತರ್ ೩. ಆಂಗ್ರೆ ದಫ್ತರ್ ೪. ಸಾತಾರಾ ಮಹಾರಾಜಾ ದಫ್ತರ್ ೫. ಜಮಾವ ದಫ್ತರ್ ೬. ಕರ್ನಾಟಕ ದಫ್ತರ್ ಇದರ ಹೊರತಾಗಿ ಪ್ರಿ ಬ್ರಿಟಿಷ್ ರೆಜೀಮ್ ಪೇಪರ‍್ಸ್, ಹಕ್ ಕಮೀಷನ್ ಪೇಪರ‍್ಸ್, ಜಕಾತ ಪೇಪರ‍್ಸ್ ಎಂಬ ವಿಭಾಗಗಳಿವೆ. ಉದಾ. ರೋಜಕೀರ್ದ (ಪೇಶ್ವೆಯರ ಡಾಯರಿಗಳು) ಘಡ್ನಿ (ಲೆಕ್ಕಪತ್ರ), ಪಥಕೆ (ಮಿಲಿಟರಿ ವಿವರಗಳು) ಪಾಗಾ (ಕುದುರೆ ಹಾಗೂ ಅಶ್ವಶಾಲೆ), ತಾಳೇಬಂದ (ಆಯವ್ಯಯ ಪಟ್ಟಿ, ದೆಹೆಝಾಡಾ (ಗ್ರಾಮಗಳ ವಿವರ), ಕೈಫಿಯತ್ತು (ಪ್ರಶ್ನಾವಳಿ ಗಳು ಉತ್ತರಗಳು), ಅಕಬರಾತ್ (ಸುದ್ದಿ ಪತ್ರಗಳು) ಇತ್ಯಾದಿ ಇವು ಮಹತ್ವದ ಚಾರಿತ್ರಿಕ ವಿಷಯಗಳನ್ನೊಳಗೊಂಡಿವೆ ಹಾಗೂ ಸಂಶೋಧಕರಿಗೆ ಬಹಳ ಉಪಯುಕ್ತವಾಗಿವೆ.

ಚಿತ್ರ-೨: ಪೇಶವೆ ಕಾಲದ ಮೋಡಿ ಪತ್ರದ ಮಾದರಿ

 


ಚಿತ್ರ-೩: ಮೋಡಿ ಲಿಪಿಯ ಅಕ್ಷರಗಳ ವೈವಿಧ್ಯತೆ

 

ಮೋಡಿ ಲಿಪಿಯ ಅಧ್ಯಯನ

ಉತ್ತರ ಕರ್ನಾಟಕದ ಇತಿಹಾಸ ರಕ್ಷಣೆಯ ದಾರಿಯಲ್ಲಿ ಮೋಡಿ ದಾಖಲೆಗಳ ರಕ್ಷಣೆ ಮತ್ತು ಅಭ್ಯಾಸದ ಅವಶ್ಯಕತೆ ಈಗ ಬಹುವಾಗಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರಗಳ ಮಧ್ಯಯುವೀನ ಇತಿಹಾಸದಿಂದ ಅರ್ವಾಚೀನ ಇತಿಹಾಸದವರೆಗಿನ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಆಕರಗಳು ಸುದೈವಕ್ಕೆ ನಮಗೆ ಇಂದಿಗೂ ಆಕರಗಳಂತೆ ಉಳಿದುಕೊಂಡಿದ್ದು ಅವುಗಳ ಸಂಶೋಧನೆ ಆಗಬೇಕಾದ ಅಗತ್ಯವಿದೆ. ಮೋಡಿ ಲಿಪಿಯ ಚಾರಿತ್ರಿಕ ದಾಖಲೆಗಳು ಭಾರತೀಯ ಇತಿಹಾಸ ಸಂಶೋಧನೆಯ ಅಧ್ಯಯನಕ್ಕೆ ಅಮೂಲ್ಯ ಆಕರವಾಗಿದೆ.

ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮೋಡಿ ಲಿಪಿಗೆ ಸಂಬಂಧಿಸಿದ ಪರಿಣಿತ ಸಂಶೋಧಕರು ವಿರಳವಾಗಿದ್ದು ಈ ನಿಟ್ಟಿನಲ್ಲಿ ಮೋಡಿ ಲಿಪಿ ಬಲ್ಲ ತಜ್ಞರನ್ನು ಬಹುಬೇಗನೆ ನಿಯುಕ್ತಿಗೊಳಿಸಬೇಕು. ಇದರಿಂದ ನಶಿಸುತ್ತಿರುವ ಮತ್ತು ಅವಜ್ಞೆಗೆ ಗುರಿಯಾದ ಐತಿಹಾಸಿಕ ದಾಖಲೆಗಳನ್ನು ಅಧ್ಯಯನ ಮಾಡಲು ವಿಶೇಷ ಉತ್ತೇಜನ ನೀಡಿದಂತಾಗುತ್ತದೆ. ಮೋಡಿ ಲಿಪಿಯ ಅಧ್ಯಯನದಿಂದ ಮಧ್ಯಕಾಲೀನ ಚಾರಿತ್ರಿಕ ದಾಖಲೆಗಳನ್ನು, ಭೂ ದಾಖಲೆಗಳನ್ನು, ಧಾರ್ಮಿಕ ಸಂಸ್ಥೆಗಳ ಕಡತಗಳನ್ನು ಅವಲೋಕಿಸಿ ಅದರಲ್ಲಿರುವ ಚಾರಿತ್ರಿಕ ಮಹತ್ವದ ಸಂಗತಿಗಳನ್ನು ಶೋಧಿಸಿ, ಪ್ರಚುರಪಡಿಸಲು ನೆರವು ನೀಡುತ್ತದೆ. ವಿಶ್ವವಿದ್ಯಾಲಯ ಮತ್ತು ರಾಜ್ಯ ಪತ್ರಾಗಾರ ಇಲಾಖೆ ಮೋಡಿ ಲಿಪಿಯ ಪ್ರಾಯೋಗಿಕ ತರಬೇತಿ, ಕಮ್ಮಟಗಳನ್ನು ಏರ್ಪಡಿಸಿ ಯುವ ಸಂಶೋಧಕರಿಗೆ ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ. ಮೋಡಿ ಲಿಪಿಯ ಅಧ್ಯಯನ ಚರಿತ್ರೆಯ ವಿದ್ಯಾರ್ಥಿಗಳಿಗೆ ನಮ್ಮ ಲಿಪಿಯ ಅಧ್ಯಯನದ ಭಾಗವಾಗಿ ಬೋಧನ ವಿಷಯವಾಗಬೇಕು.