ಭಾರತೀಯ ಲಿಪಿಗಳ ಉಗಮ ಮತ್ತು ವಿಕಾಸ
ಭಾರತದಲ್ಲಿ ಎಡದಿಂದ ಬಲಕ್ಕೆ ಬರೆಯಲ್ಪಡುವ ಎಲ್ಲ ಭಾಷೆಗಳು ಕ್ರಿಸ್ತಪೂರ್ವ ೩ನೆಯ ಶತಮಾನದಲ್ಲಿ ಪ್ರಚಲಿತವಾಗಿದ್ದ, ಚಕ್ರವರ್ತಿ ಅಶೋಕನು ತನ್ನ ಶಿಲಾಲೇಖಗಳಲ್ಲಿ ಬಳಸಿದ ಬ್ರಾಹ್ಮಿಯಿಂದ ಹುಟ್ಟಿ ಬಂದಿವೆ ಎಂಬುದು ತೀರ್ಮಾನವಾಗಿ ಸುಮಾರು ಒಂದೂ ಮುಕ್ಕಾಲು ಶತಮಾನವೇ ಆಗುತ್ತ ಬಂದಿದೆ. ಬಲದಿಂದ ಎಡಕ್ಕೆ ಬರೆಯಲ್ಪಡುವ ಖರೋಷ್ಠಿ ಯಿಂದ ಹುಟ್ಟಿಬಂದ ಲಿಪಿಗಳನ್ನು ಈ ಲೇಖನ ಪರಿಧಿಯ ಹೊರಗೆ ಇಡಲಾಗಿದೆ. ಭಾರತೀಯ ಶಾಸನಗಳ ಅಧ್ಯಯನ ಜೇಮ್ಸ್ ಪ್ರಿನ್ಸೆಪ್ ಅವರಿಂದ ಪ್ರಾರಂಭಗೊಂಡು ಬುಹ್ಲರ್, ಕೀಲ್ಹೋರ್ನ್, ಬರ್ನೆಲ್, ಭಂಡಾರ್ಕರ್ ಮೊದಲಾದ ವಿದ್ವಾಂಸರಿಂದ ಬೆಳವಣಿಗೆ ಹೊಂದಿ ಇಂದಿನ ಶಾಸನ ತಜ್ಞರವರೆಗೆ ಅನೇಕ ವಿದ್ವಾಂಸರು ತಮಗೆ ಲಭ್ಯವಿರುವ ಸಾಮಗ್ರಿಯ ಆಧಾರದ ಮೇಲೆ ಭಾರತೀಯ ಲಿಪಿಗಳ ಬೆಳವಣಿಗೆಯನ್ನು ನಿರ್ವಿವಾದವಾಗಿ ನಿರೂಪಿಸಿದ್ದಾರೆ.
ಭಾರತೀಯ ಲಿಪಿಗಳ ಪ್ರಾಚೀನತೆ
ಕ್ರಿಸ್ತ ಪೂರ್ವ ೩ನೆಯ ಶತಮಾನದಲ್ಲಿ ಬ್ರಾಹ್ಮಿ ಲಿಪಿಯನ್ನು ಅದು ಅಶೋಕನು ತನ್ನ ಶಿಲಾಶಾಸನಗಳಲ್ಲಿ ಯಶಸ್ವಿಯಾಗಿ ಬಳಸಿದ ಮೇಲೆ ಆ ಲಿಪಿಯನ್ನು ಭಾರತದ ವಿವಿಧ ಭಾಗದವರೂ ಬಳಸಿದುದರಿಂದ ಇಂದಿನ ಭಾರತೀಯ ಲಿಪಿಗಳ ಜನನವಾಯಿತು (ಅನುಬಂಧ ೧ ಮತ್ತು ೨ ನೋಡಿ). ಅಲ್ಲಿ ‘ಅ’ ಮತ್ತು ‘ಕ’ ಅಕ್ಷರಗಳ ಬೆಳವಣಿಗೆಯನ್ನು ಸಿ. ಶಿವರಾಮ ಮೂರ್ತಿಯವರು ನಿರೂಪಿಸಿದ್ದಾರೆ.[3]
ಆ ಪಟಗಳಲ್ಲಿ ಕೆಳಗಿನ ಅಂಶಗಳನ್ನು ಗಮನಿಸಬಹುದು :
೧. ಕ್ರಿಸ್ತಪೂರ್ವ ೩ನೆಯ ಶತಮಾನದಿಂದ ಕ್ರಿಸ್ತಶಕ ೫ನೆಯ ಶತಮಾನದವರೆಗೆ ರಾಜ ಮನೆತನಗಳು ಬಳಸಿದ ಬ್ರಾಹ್ಮಿಯಲ್ಲಿ ಉತ್ತರ-ದಕ್ಷಿಣ ಎಂಬ ಪ್ರಭೇದಗಳು ಕಂಡು ಬರುವುದಿಲ್ಲ.
೨. ಕ್ರಿ.ಶ. ೬ನೆಯ ಶತಮಾನದಿಂದ ೧೬ನೆಯ ಶತಮಾನದವರೆಗೆ ಎರಡನೆಯ ಭಾಗದಲ್ಲಿ ಪ್ರಾದೇಶಿಕ ಲಕ್ಷಣಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಇಂದಿನ ಲಿಪಿಗಳ ಸ್ವರೂಪಗಳೂ ಅಲ್ಲಲ್ಲಿ ಮೂಡಿ ಬಂದಿವೆ. ಆದರೂ ೬ನೆಯ ಶತಮಾನದ ಹೊತ್ತಿಗೆ ಪ್ರಾದೇಶಿಕತೆಯ ಲಕ್ಷಣಗಳು ನಿಖರವಾಗಿ ಗೋಚರಿಸುವುದಿಲ್ಲ.
ತಮಿಳುನಾಡಿನ ಗುಹಾ ಶಾಸನಗಳೂ ಆಂಧ್ರ ಪ್ರದೇಶದ ಭಟ್ಟಿಪ್ರೋಲುವಿನಲ್ಲಿ ದೊರೆತ ಶಾಸನಗಳೂ ಹೆಚ್ಚು ಕಡಿಮೆ ಇದೇ ಕಾಲಕ್ಕೆ ಅಂದರೆ ಕ್ರಿ.ಪೂ. ೩ನೆಯ ಶತಮಾನದಲ್ಲಿ, ರಚಿತವಾದವುಗಳು ಎಂಬ ಅಭಿಪ್ರಾಯವಿದೆ. ಆದರೆ ಕೆಲವು ವಿದ್ವಾಂಸರು ಇವು ಒಂದು ಶತಮಾನದಷ್ಟು ಈಚಿನವು, ಅಂದರೆ ಕ್ರಿ.ಪೂ. ೨ನೆಯ ಶತಮಾನದಲ್ಲಿ ರಚಿತವಾದವುಗಳು ಇರಬೇಕು ಎಂಬ ಅಭಿಪ್ರಾಯವನ್ನು ಕೊಡುತ್ತಾರೆ. ಏಕೆಂದರೆ ಇವುಗಳಲ್ಲಿ ಕೆಲವೆಡೆ ‘ಅ’ಕಾರದ ಶಿರೋಲೇಖ ಕಾಣುತ್ತದೆ. ‘ಅ’ ಕಾರದ ಶಿರೋಲೇಖ ನಂತರದ ಬೆಳವಣಿಗೆಯಾದುದರಿಂದ ಇವು ನಂತರದವುಗಳು ಇರಬೇಕೆಂಬುದು ಅವರ ವಾದ. ನಿಖರವಾದ ದಿನಾಂಕ ತಿಳಿದು ಬಂದಿಲ್ಲವಾದ್ದರಿಂದ ಹೀಗೆ ಕಾಲಾನುಕ್ರಮದಲ್ಲಿ ವಿವರಿಸಲು ಮಾತ್ರ ಸಾಧ್ಯ.
ಮೇಲೆ ವಿವರಿಸಿದಂತೆ ೬ನೆಯ ಶತಮಾನಕ್ಕಿಂತ ಮೊದಲು ಪ್ರಾದೇಶಿಕತೆಯ ಅಚ್ಚು ಅಷ್ಟು ಸ್ಪಷ್ಟವಾಗಿ ಮೂಡಿಲ್ಲ ಎಂಬುದನ್ನು ಕೆಳಗಿನ ಉದಾಹರಣೆಯಿಂದ ಮನಗಾಣಬಹುದು. ೪ನೆಯ ಶತಮಾನದಲ್ಲಿ ಉತ್ತರದ ಗುಪ್ತರ ಮತ್ತು ದಕ್ಷಿಣದ ಪಲ್ಲವರ ಶಾಸನಗಳಲ್ಲಿಯ ವ್ಯತ್ಯಾಸಗಳು ಬಹುಶಃ ಏನೂ ಇಲ್ಲ ಎಂದೇ ಹೇಳಬೇಕು :
ಆದರೆ ೬ನೆಯ ಶತಮಾನದ ನಂತರ ಭಿನ್ನ ಪ್ರದೇಶಗಳಲ್ಲಿ ಅಕ್ಷರಗಳು ಭಿನ್ನ ರೂಪಗಳನ್ನು ಪಡೆದುಕೊಂಡವು ಎಂಬುದನ್ನು ನೋಡಬಹುದು. ಉದಾಹರಣೆಗೆ ಪಶ್ಚಿಮದ ಚಾಲುಕ್ಯರ, ಪೂರ್ವದ ಗಂಗರ, ಪೂರ್ವದ ಚಾಲುಕ್ಯರ ಮತ್ತು ಚೋಳರ ಶಾಸನಗಳಲ್ಲಿ ವ್ಯತ್ಯಾಸಗಳು ತುಂಬಾ ಕಂಡುಬರುತ್ತವೆ.
ಕನ್ನಡ ಲಿಪಿಯ ಪ್ರಾಚೀನತೆ ಹಾಗೂ ವಿಕಾಸ
ಕನ್ನಡದ ಅತ್ಯಂತ ಹಳೆಯ ಶಿಲಾಶಾಸನ ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ದೊರೆತಿದೆ. ಇದರ ಕಾಲ ಕ್ರಿ.ಶ. ೪೦೫ ರಿಂದ ೪೩೫. ಕದಂಬ ವಂಶದ ಕಾಕುಸ್ಥವರ್ಮನ ಕಾಲದ್ದೆಂದು ಗುರುತಿಸಲಾಗಿರುವ ಈ ಶಾಸನದಲ್ಲಿ ಕೇಕಯ ಮತ್ತು ಪಲ್ಲವರೊಡನೆ ಹೋರಾಡಿದ ವಿಜಯರಸನಿಗೆ ಎರಡು ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟುದನ್ನು ಉಲ್ಲೇಖಿಸಲಾಗಿದೆ. ಹಲ್ಮಿಡಿ ಶಾಸನದ ನಂತರ ೧೬-೧೭ನೆಯ ಶತಮಾನದವರೆಗೂ ಅನೇಕ ಕನ್ನಡ ಶಾಸನಗಳು ಲಭ್ಯವಾಗಿರುವುದರಿಂದ ಕನ್ನಡ ಲಿಪಿಯ ಇತಿಹಾಸವನ್ನು ಸಾಧಾರವಾಗಿ ನಿರೂಪಿಸಲು ಸಾಧ್ಯವಾಗಿದೆ.
ಕೆಳಗಿನ ಚಿತ್ರ ‘ಅ’ ಕಾರದ ಬೆಳವಣಿಗೆಯನ್ನು ಅಶೋಕನ ಬ್ರಾಹ್ಮಿ (ಕ್ರಿ.ಪೂ. ೩)ಯಿಂದ ಪ್ರಾರಂಭಿಸಿ ಶಾತವಾಹನ (ಕ್ರಿ.ಶ. ೨), ಕದಂಬ (ಕ್ರಿ.ಶ. ೪), ಗಂಗ (ಕ್ರಿ.ಶ. ೬), ಬಾದಾಮಿ ಚಲುಕ್ಯ (ಕ್ರಿ.ಶ. ೭), ರಾಷ್ಟ್ರಕೂಟ (ಕ್ರಿ.ಶ. ೯), ಕಲ್ಯಾಣ ಚಾಲುಕ್ಯ (ಕ್ರಿ.ಶ. ೧೧), ಹೊಯ್ಸಳ (ಕ್ರಿ.ಶ. ೧೩), ವಿಜಯನಗರ (ಕ್ರಿ.ಶ. ೧೫) ಮತ್ತು ಮೈಸೂರು ಅರಸರು (ಕ್ರಿ.ಶ. ೧೮) ಮೊದಲಾದ ರಾಜರ ಕಾಲಗಳಲ್ಲಿ ಚಿತ್ರಿಸುತ್ತದೆ.
ಕೆಳಗಿನ ಚಿತ್ರ ‘ಅ’ ಮತ್ತು ‘ಕ’ಗಳನ್ನು ಈ ಕಾಲನುಕ್ರಮದಲ್ಲಿ ನಿರೂಪಿಸುತ್ತದೆ. ಅಲ್ಲಿ ಬಾದಾಮಿ ಚಲುಕ್ಯರ ಕಾಲದಿಂದ ಅಂದರೆ ಕ್ರಿ.ಶ. ೭ನೆಯ ಶತಮಾನದಿಂದ ಅಕ್ಷರಗಳನ್ನು ಕನ್ನಡದವೆಂದು ಗುರುತಿಸಬಹುದಾಗಿದೆ ಎಂಬುದನ್ನು ಗಮನಿಸಬೇಕು (ಕೆಳಗಿನ ಚಿತ್ರಗಳು ಎ.ವಿ. ನರಸಿಂಹಮೂರ್ತಿಯವರ ‘ಕನ್ನಡ ಲಿಪಿಯ ಉಗಮ ಮತ್ತು ವಿಕಾಸ’ ಪುಸ್ತಕದ ಕೃಪೆಯಿಂದ).
ಬ್ರಾಹ್ಮಿ ಲಿಪಿಯ ಅವಸ್ಥಂತರಗಳಲ್ಲಿ ಕೆಲವೊಂದು ರಾಜಮನೆತನಗಳು ಬಳಸಿದ ಶೈಲಿಯನ್ನು ಗುರುತಿಸಬಹುದು. ಉದಾಹರಣೆಗೆ, ಅನೇಕ ರಾಜ ಮನೆತನಗಳು ೨ನೆಯ ಶತಮಾನದಿಂದ ಬಳಸಿದ್ದ ಚಿಕ್ಕ ಅಡ್ಡಗೆರೆ ರೂಪದ ‘ಶಿರೋಲೇಖ’ವು ೬ನೆಯ ಶತಮಾನದಲ್ಲಿ ವಾಕಾಟಕರ ಶಾಸನಗಳಲ್ಲಿ ಅದು ಚಿಕ್ಕ ‘ಚೌಕ’ವಾಯಿತು. ಕೆಳಗಿನ ಚಿತ್ರಗಳನ್ನು ನೋಡಬಹುದು :
ಲೇಖನ ಸಾಮಗ್ರಿ
ಬೌದ್ಧ ಧರ್ಮವನ್ನು ಸ್ವೀಕರಿಸಿದ ಮೇಲೆ ಬುದ್ಧನ ಸಂದೇಶವನ್ನು ಜನತೆಗೆ ಸಾರಲು ಚಕ್ರವರ್ತಿ ಅಶೋಕನು ತೊಡಗಿದ. ಆಗ ಹೆಚ್ಚು ಕಡಿಮೆ ಇಡೀ ಭಾರತವೇ ಅಶೋಕನ ಆಡಳಿತಕ್ಕೆ ಒಳಪಟ್ಟಿತ್ತು. ಚಿರಂತನವಾಗಿ ಬಾಳಬಲ್ಲ ಶಿಲೆಯೇ ಒಳ್ಳೆಯ ಮಾಧ್ಯಮವಾದು ದರಿಂದ ಎಲ್ಲೆಡೆ ಶಿಲಾ ಶಾಸನಗನಳನ್ನು ಸ್ಥಾಪಿಸಲು ನಿರ್ಧರಿಸಿದ. ಧರ್ಮದ ಪ್ರಚಾರವಲ್ಲದೇ ದಾನವನ್ನೂ ರಾಜಾಜ್ಞೆಯನ್ನೂ ಶಾಸನಗಳು ಹೊಂದಿದ್ದವು.
ಶಾಸನಗಳನ್ನು ಬರೆಯುವಾಗ ಮೊದಲು ಲಿಪಿಕಾರರು ಕಲ್ಲಿನ ಮೇಲೆ ಕಪ್ಪು ಬಣ್ಣದ ಮಸಿಯಿಂದ ಬರೆಯುತ್ತಿದ್ದರು. ಆಮೇಲೆ ಲಿಪಿಕಾರರು ಬರೆದಂತೆ ಶಿಲ್ಪಿಗಳು ಕೆತ್ತುತ್ತಿದ್ದರು. ಇದು ನಮಗೆ ಗೊತ್ತಾದ ಬಗೆ ಹೇಗೆಂದರೆ, ಒಂದು ಶಾಸನದಲ್ಲಿ ಮಸಿಯಲ್ಲಿ ಬರೆದ ಒಂದೆರಡು ಅಕ್ಷರಗಳು ಕೆತ್ತಲ್ಪಡದೇ ಹಾಗೇ ಉಳಿದುಕೊಂಡಿವೆ. ಪ್ರತಿಯೊಬ್ಬ ರಾಜನೂ ಲಿಪಿಕಾರರನ್ನೂ ಶಿಲ್ಪಿಗಳನ್ನೂ ಪೋಷಿಸುತ್ತಿದ್ದುದರಿಂದ ಅವರಿಗೆ ಶಿಲಾಶಾಸನಗಳನ್ನು ಸ್ಥಾಪಿಸುವ ಕಾರ್ಯ ಸುಲಭವಾಗಿರುತ್ತಿತ್ತು.
ನಂತರದ ಕಾಲದಲ್ಲಿ ತಾಮ್ರಪಟಗಳನ್ನು ಉಪಯೋಗಿಸುತ್ತಿದ್ದರು. ಹೆಚ್ಚು ಕಡಿಮೆ ಶಿಲೆಯಷ್ಟೇ ಬಾಳಬಹುದಾದ ತಾಮ್ರಪಟಗಳು ಹಿಡಿಯಲು, ಸಾಗಿಸಲು ಹೆಚ್ಚು ಅನುಕೂಲಕರ ವಾಗಿದ್ದುದರಿಂದ ಅವು ಪ್ರಚಲಿತವಾದವು. ಆವೀಗ ಕಲ್ಲನ್ನು ವಿರೂಪಗೊಳಿಸಿದಂತೆ ತಾಮ್ರಪಟ ಗಳನ್ನು ವಿರೂಪಗೊಳಿಸುವುದು ಸಾಧ್ಯವಾಗುತ್ತಿರಲಿಲ್ಲ. ರಕ್ಷಿಸಲು ಸುಲಭವಾಗಿದ್ದವು.
ಆಮೇಲಿನ ಕಾಲದಲ್ಲಿ ಪುಸ್ತಕಗಳನ್ನು ಬರೆಯಲು ತಾಳೆಗರಿಗಳು ಪ್ರಚಾರದಲ್ಲಿ ಬಂದವು. ತಾಳೆಗರಿಯ ಮೇಲೆ ಬರೆಯಲು ‘ಕಂಠ’ ಎಂಬ ಲೇಖನಿಯನ್ನು ಉಪಯೋಗಿಸುತ್ತಿದ್ದರು. ಅತ್ಯಂತ ಹಳೆಯ ತಾಳೆಗರಿಯ ಪುಸ್ತಕ ೧೨ನೆಯ ಶತಮಾನದ್ದಾಗಿದೆ. ಶಿಲೆ ಅಥವಾ ತಾಮ್ರಪಟದಷ್ಟು ಕಾಲ ತಾಳೆಗರಿಗಳು ಬಾಳುವಂಥವುಗಳಲ್ಲ. ಆದ್ದರಿಂದ ಅವುಗಳನ್ನು ಕಾಲಕಾಲಕ್ಕೆ ಹೊಸದಾಗಿ ಬರೆದು ಸಂರಕ್ಷಿಸಬೇಕಾಗುತ್ತಿತ್ತು. ಎಲ್ಲ ಕಾಲಗಳಲ್ಲೂ ತಾಳೆಗರಿಯ ಮೇಲೆ ಬರೆಯಬಲ್ಲ ನಿಪುಣ ಲಿಪಿಕಾರರು ಇದ್ದರು. ಈಗಲೂ ಕೂಡ ತಾಳೆಗರಿಗಳನ್ನು ರಕ್ಷಿಸಲು ಕೆಲವು ಗ್ರಂಥಾಲಯಗಳು ವಿಶೇಷ ವ್ಯವಸ್ಥೆಯನ್ನು ಮಾಡಿವೆ. ಅವುಗಳನ್ನೆಲ್ಲ ಸ್ಕ್ಯಾನ್ ಮಾಡಿ ಬೇರೆ ಮಾಧ್ಯಮಗಳಲ್ಲಿ ರಕ್ಷಿಸದಿದ್ದರೆ ಅವೆಲ್ಲ ನಾಶವಾಗಿ ಮುಂದಿನ ತಲೆಮಾರುಗಳಿಗೆ ಅತ್ಯಂತ ಮಹತ್ತ್ವದ ವಿಷಯಗಳು ದೊರಕದೇ ಹೋಗುವ ಭೀತಿಯಿದೆ.
೧೯ನೆಯ ಶತಮಾನದ ಪ್ರಾರಂಭದಲ್ಲಿ ಜರ್ಮನಿಯಿಂದ ಬಂದ ಕ್ರೈಸ್ತ ಪಾದ್ರಿಗಳು ಕನ್ನಡ ಮುದ್ರಣವನ್ನು ಆರಂಭಿಸಿದರು. ಅದಕ್ಕಾಗಿ ಮಂಗಳೂರಿನಲ್ಲಿ ಮುದ್ರಣಾಲಯಗಳನ್ನು ಸ್ಥಾಪಿಸಿದರು. ಕನ್ನಡ ಶಾಲೆಯ ಉಪಯೋಗಕ್ಕಾಗಿ ಕನ್ನಡ ಸಾಹಿತ್ಯ ಸಂಚಯಗಳನ್ನೂ, ಇತಿಹಾಸ, ಭೂಗೋಲ ಮೊದಲಾದವುಗಳನ್ನು ಕಲಿಸಲು ಬೇಕಾಗುವ ಪಠ್ಯಪುಸ್ತಕಗಳನ್ನು ಮುದ್ರಿಸಲು ತೊಡಗಿದರು. ಇದು ಒಂದು ರೀತಿಯಲ್ಲಿ ಕನ್ನಡ ಜೀವನವನ್ನೇ ಆಧುನೀಕರಿಸಿತು. ಆಗಿನ ಕಾಲದಲ್ಲಿ ಅಕ್ಷರಗಳ ಜೋಡಣೆ ಸೀಸದಿಂದ ತಯಾರಿಸಿದ ಮೊಳೆಗಳಿಂದ ಆಗುತ್ತಿತ್ತು. ಆ ಮೊಳೆಗಳ ಉದ್ದಗಲಗಳಿಗೆ ಮಿತಿಗಳಿದ್ದವೇನೋ. ಲಭ್ಯವಿದ್ದ ಸ್ಥಳದಲ್ಲೇ ಅಕ್ಷರಗಳನ್ನು ವಿನ್ಯಾಸ ಮಾಡಬೇಕಾಯಿತೆಂದು ತೋರುತ್ತದೆ. ಅದಕ್ಕಾಗಿ ಅಕ್ಷರಗಳ ಆಕಾರವನ್ನೂ ಸ್ವಲ್ಪ ಮಾರ್ಪಡಿಸಿಕೊಳ್ಳಬೇಕಾಯಿತು. ‘ಪೂ’ ವನ್ನು ‘ಪೂ’ ಎಂದೂ ‘ಹೂ’ವನ್ನು ‘ಹೂ’ ಎಂದೂ ಬಹುಶಃ ಇದೇ ಕಾರಣಕ್ಕಾಗಿ ಮಾರ್ಪಡಿಸಿಕೊಳ್ಳಬೇಕಾಯಿತೇನೋ! ‘ವೂ’ವನ್ನು ‘ಮಾ’ ಎಂದು ಮಾಡಿದ್ದರೆ ‘ಮಾ’ ಎಂದು ಓದಬಹುದಾದ ಭಯವಿದ್ದುದರಿಂದ ಅದೊಂದನ್ನು ಹಾಗೇ ಉಳಿಸಿಕೊಳ್ಳಬೇಕಾಯಿತು!! ವ, ಪ ಮತ್ತು ಹ ಕಾರಗಳಿಗೆ ಉ ಮತ್ತು ಊ ಸ್ವರಗಳ ಮಾತ್ರ ಗುರುತುಗಳನ್ನು ಕೆಳಗಿನಿಂದ ಪ್ರಾರಂಭಿಸುವ ಕ್ರಮ ಎಂದಿನಿಂದ ಪ್ರಾರಂಭವಾಯಿತು ಎನ್ನುವುದು ಸಂಶೋಧನೆಯಿಂದಲೇ ತಿಳಿದುಬರಬೇಕಾಗಿದೆ.
ಅಲ್ಲದೇ ಕೆಲವು ಅಕ್ಷರಗಳ ಸ್ವರೂಪವನ್ನು ಸ್ವಲ್ಪ ಮಾರ್ಪಡಿಸಬೇಕಾಯಿತೆಂದು ಕಾಣುತ್ತದೆ. ಕೆಳಗೆ ತೋರಿಸಿದ ಉದಾಹರಣೆಗಳಲ್ಲಿ ವಕಾರ ಪ್ರಾರಂಭವಾಗುವ ರೂಪಗಳನ್ನು ನೋಡಿ :
ಇದೇ ಪ್ರಕಾರ ಎ, ಏ, ಐ, ವ, ಮ, ಪ, ಫ, ಷ ಮತ್ತು ಘ ಅಕ್ಷರಗಳನ್ನೂ ಮಾರ್ಪಡಿಸ ಬೇಕಾಯಿತು. ಈ ಮಾರ್ಪಾಡುಗಳು ೨೦ನೆಯ ಶತಮಾನದ ಮಧ್ಯ ಭಾಗದವರೆಗೂ ಉಳಿದು ಕೊಂಡು ಬಂದವು.
ಹೀಗೆ ಕ್ರಿ.ಪೂ. ೩ನೆಯ ಶತಕದಿಂದ ೨೦ನೆಯ ಶತಕದವರೆಗೆ ಭಾರತದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿದ್ದ ಲಿಪಿಗಳಲ್ಲಿ ಮಾರ್ಪಾಡುಗಳು ಆಗುತ್ತಲೇ ಬಂದವು. ಕೆಲವು ಸ್ವಾಭಾವಿಕ ವಾಗಿದ್ದರೆ ಇನ್ನು ಕೆಲವು ಪರಿಸ್ಥಿತಿಯ ಒತ್ತಡಕ್ಕನುಸಾರವಾಗಿದ್ದವು. ಕನ್ನಡವೂ ಈ ಪ್ರಕ್ರಿಯಗೆ ಹೊರತಾಗಿರಲಿಲ್ಲ. ಕನ್ನಡ ಲಿಪಿಯ ಪ್ರಾಚೀನ ಇತಿಹಾಸವನ್ನು ಶಾಸನ ಮತ್ತು ಇತರ ಸಾಮಗ್ರಿಯ ಸಹಾಯದಿಂದ ಅಭ್ಯಸಿಸುವುದರ ಜೊತೆಗೆ ಸಮಕಾಲೀನ ಇತಿಹಾಸವನ್ನೂ ಅಭ್ಯಸಿಸಬೇಕಾದ ಅವಶ್ಯಕತೆ ಇದೆ.
ಗಣಕಯಂತ್ರ ಯುಗ
ಕಳೆದ ಶತಮಾನದ ಕೊನೆಯ ಭಾಗದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಗಣಕಯಂತ್ರಗಳು ಪ್ರಾರಂಭದಲ್ಲಿ ಅಷ್ಟು ಶಕ್ತಿಶಾಲಿಯಾಗಿರಲಿಲ್ಲ. ಅಲ್ಲದೇ ಅವುಗಳ ಬೆಲೆಯೂ ಸಾಮಾನ್ಯರ ಕೈಗೆ ಎಟುಕುವಂತಿದ್ದಿಲ್ಲ. ಹಿಗಾಗಿ ಗಣಕಯಂತ್ರದ ಮೇಲೆ ಸಂಶೋಧನೆಗಳೂ ಅಷ್ಟಾಗಿ ನಡೆಯುತ್ತಿದ್ದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಅಲ್ಲದೇ ಉಪಯೋಗಿಸುವವರ ಅನುಕೂಲಕ್ಕಾಗಿ ಸುಲಭದಲ್ಲಿ ಅಂದರೆ ವಿಶೇಷ ಗಣಕ ಪರಿಣತಿ ಇಲ್ಲದವರೂ ಕೂಡ ತಮಗೆ ಬೇಕಾದ ರೀತಿಯಲ್ಲಿ ಗಣಕವನ್ನು ದುಡಿಸಿ ಕೊಳ್ಳಲು ಬೇಕಾಗುವಂಥ ತಂತ್ರಾಂಶಗಳನ್ನು ರೂಪಿಸಲಾಗಿದೆ. ಅದರಿಂದ ಗಣಕವು ಏನೋ ಒಂದು ಗೂಢ ಪೆಟ್ಟಿಗೆ ಎಂಬ ಭಯ ಹೋಗಿಬಿಟ್ಟಿದೆ. ಈಮೇಲ್ ಮತ್ತು ಇಂಟರ್ನೆಟ್ಗಳ ಸೌಲಭ್ಯ, ಸೌಕರ್ಯ ಮೊದಲಾದವುಗಳ ಬಗ್ಗೆ ಗೊತ್ತಿದ್ದವರಿಗಂತೂ ಗಣಕವೊಂದು ವರದಾನ ವಾಗಿ ಪರಿಣಮಿಸಿದೆ. ವಿಶೇಷವಾಗಿ ಡಿಟಿಪಿಯಂತೂ ಮುದ್ರಣದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದೆ. ಲೇಖನ, ಪುಸ್ತಕಗಳನ್ನು ಬರೆಯುವುದು ಕೂಡ ತುಂಬಾ ಸುಲಭದ ಮತ್ತು ನಿರಾಯಾಸದ ಕೆಲಸವಾಗಿದೆ. ತಿದ್ದುಪಡಿಗಳನ್ನೂ ತತ್ಕ್ಷಣ ಮಾಡಬಹುದು. ಪ್ರಸ್ತುತ ಲೇಖನವನ್ನೇ ನೋಡಿದರೆ ಈ ಮಾತು ಮನದಟ್ಟಾಗಬಹುದು. ಎಲ್ಲಿಂದ ಬೇಕಾದರೂ ಸಾಮಗ್ರಿಯನ್ನು ತಂದು ಸ್ಕ್ಯಾನ್ ಮಾಡಿ ಲೇಖನದಲ್ಲಿ ಅಳವಡಿಸಿಕೊಳ್ಳಬಹುದು. ಲೇಖಕ ತನ್ನ ಕಲ್ಪನೆಗಳನ್ನು ನೇರವಾಗಿ ಹಾಳೆಗಳ ಮೇಲೆ ಇಳಿಸಿಬಿಡಬಹುದು. ಈ ವಿಧಾನದಿಂದ ಮೊದಲು ಹಿಡಿಯುತ್ತಿದ್ದ ವೇಳೆಯ ಹತ್ತನೆಯ ಒಂದು ಭಾಗದಷ್ಟು ವೇಳೆಯಲ್ಲಿ ಲೇಖನ ಅಥವಾ ಪುಸ್ತಕ ಸಿದ್ಧವಾಗಿ ಬಿಡುತ್ತದೆ. ಗಣಕಯಂತ್ರದ ಈ ಸೌಲಭ್ಯಗಳಲ್ಲದೇ, ಶಾಸನ ಅಧ್ಯಯನದಂಥ ಕಾರ್ಯಗಳಿಗೆ ಗಣಕಯಂತ್ರವನ್ನು ಹೇಗೆ ಅಣಿಗೊಳಿಸಬಹುದು ಎಂಬುದನ್ನು ನೋಡೋಣ.
ಗಣಕಗಳ ತಾಂತ್ರಿಕ ಸೌಲಭ್ಯವನ್ನು ಶಾಸನಗಳಿಗೆ ಉಪಯೋಗಿಸುವ ಬಗೆ
ಶಾಸನಗಳನ್ನು ಗಣಕದಲ್ಲಿ ಹಾಕಿ ಹೇಗೆ ಬೇಕೋ ಹಾಗೆ ಅವುಗಳನ್ನು ವರ್ಗೀಕರಿಸಿಕೊಂಡು ಬೇಕಾದಾಗ ಬೇಕಾದ ಶಾಸನದ ಮುಖವನ್ನು ಗಣಕದ ಪರದೆಯ ಮೇಲೆ ತೋರಿಸುವ ಸೌಕರ್ಯ ಈಗ ಲಭ್ಯವಿದ್ದೇ ಇದೆ. ಅಲ್ಲದೇ ಅದನ್ನು ಸಣ್ಣದು ಅಥವಾ ದೊಡ್ಡದು ಮಾಡ ಬಹುದು. ಕೂಲಂಕಷ ಅಧ್ಯಯನಕ್ಕಾಗಿ ಒಂದು ಅಕ್ಷರವನ್ನು ಮಾತ್ರವೇ ಇಡೀ ಪರದೆಯ ತುಂಬ ಮಾಡಿಯೂ ನೋಡಬಹುದು.
ಸಾಮಾನ್ಯವಾಗಿ ಶಾಸನಗಳು ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಅಕ್ಷರಗಳನ್ನೊಳ ಗೊಂಡಿರುತ್ತವೆ. ಏಕೆಂದರೆ ಶಾಸನಗಳನ್ನು ಕಲ್ಲಿನ ಮೇಲೊಂದರಂತೆ ಸಾಕಾಗುವಷ್ಟು ಹಾಕಿ, ಅಕ್ಷರಗಳಿದ್ದ ಸ್ಥಳದಲ್ಲಿ ಹಾಳೆ ಒಳಗೆ ಹೋಗುವಂತೆ ಡ್ಯಾಬರ್ ಮತ್ತು ಬ್ರಶ್ಯುಗಳಿಂದ ಬಡಿದು ಅಕ್ಷರಗಳಿಲ್ಲದ ಸ್ಥಳದಲ್ಲಿ ಕಪ್ಪು ಮಸಿಯನ್ನು ಬಟ್ಟೆಯ ಸಣ್ಣ ಮುದ್ದೆಯಿಂದ ಒತ್ತುತ್ತಾರೆ. ಹಾಗಾಗಿ ಈ ಪದ್ಧತಿಯಲ್ಲಿ ಶಾಸನಗಳ ಪ್ರತಿಗಳು (estampages) ಕಪ್ಪು ಹಿನ್ನೆಲೆಯಲ್ಲಿ ಬಿಳಿ ಅಕ್ಷರಗಳನ್ನೇ ಒಳಗೊಂಡಿರುತ್ತವೆ. ಬಿಳಿ ಹಿನ್ನೆಲೆಯಲ್ಲಿ ಕಪ್ಪು ಅಕ್ಷರಗಳು ಬೇಕಿದ್ದರೆ ಕಪ್ಪು ಹಾಳೆಗಳನ್ನೂ ಬಿಳಿ ಮಸಿಯನ್ನೂ ಉಪಯೋಗಿಸಬಹುದಿತ್ತು. ಕಪ್ಪು ಹಾಳೆ ಯೇನೋ ಸಿಗಬಹುದಾಗಿತ್ತು. ಆದರೆ ಬಿಳಿ ಮಸಿ ದುರ್ಲಭ. ಕಪ್ಪು ಹಿನ್ನೆಲೆಯಲ್ಲಿಯ ಬಿಳಿ ಅಕ್ಷರಗಳಿಗಿಂತ ಬಿಳಿ ಹಿನ್ನೆಲೆಯಲ್ಲಿಯ ಕಪ್ಪು ಅಕ್ಷರಗಳು ಹೆಚ್ಚು ಸ್ಪಷ್ಟತೆಯನ್ನು ಹೊಂದಿ ರುತ್ತವೆ ಎಂಬುದು ಎಲ್ಲರ ಅಭಿಪ್ರಾಯ. ವಾಹನಗಳ ನೋಂದಣಿ ಸಂಖ್ಯೆ ಬಿಳಿ ಹಿನ್ನೆಲೆಯಲ್ಲಿ ಕಪ್ಪು ಅಕ್ಷರಗಳಲ್ಲಿ ಇರಬೇಕು ಎಂದು ಸರಕಾರ ಇತ್ತೀಚೆ ಮಾಡಿದ ಆಜ್ಞೆಯ ಔಚಿತ್ಯವನ್ನು ಗಮನಿಸಬಹುದು. ಆದರೆ ಇಂದು ಬಿಳಿ ಮಸಿಯೂ ಸುಲಭವಾಗಿ ಲಭ್ಯವಿದೆ ಎಂಬುದಿರಲಿ, ಹಿಂದಿನ ಎಲ್ಲ ಶಾಸನಗಳ ಹಿನ್ನೆಲೆಯನ್ನು ಬಿಳಿ ಮಾಡಿ ಅಕ್ಷರಗಳನ್ನು ಕಪ್ಪು ಮಾಡುವುದು ಗಣಕಕ್ಕೆ ಬಹು ಸುಲಭ. ಹಾಗೆ ಮಾಡಿ ನೋಡಿದರೆ ಶಾಸನಗಳ ‘ಓದು’ ಸುಲಭವಾಗಬಹುದು (ಅನುಬಂಧ ೩ನ್ನು ನೋಡಿ. ಅಲ್ಲಿ ಹಲ್ಮಿಡಿ ಶಾಸನವನ್ನು ಪರಂಪರಾಗತ ಕಪ್ಪು ಹಿನ್ನೆಲೆಯಲ್ಲಿ ಬಿಳಿ ಅಕ್ಷರಗಳೊಡನೆ ತೋರಿಸಿ ಅದನ್ನೇ ಬಿಳಿ ಹಿನ್ನೆಲೆಯಲ್ಲಿ ಕಪ್ಪು ಅಕ್ಷರಗಳಿಗೆ ಪರಿವರ್ತಿಸಿ ತೋರಿಸಿದೆ). ಅಕ್ಷರಗಳಲ್ಲದೆ ತೆಗ್ಗುಗಳಲ್ಲಿಯೂ ಅಳಿಸಿ ಹಾಕಿದರೆ ಶಾಸನಗಳು ಹೆಚ್ಚು ಸ್ಪಷ್ಟ ವಾಗಿ ಮೂಡಿಬರುತ್ತವೆ. ಫೋಟೋಶಾಪ್ದಂಥ ತಂತ್ರಾಂಶದಿಂದ ಅದನ್ನೆಲ್ಲ ಸುಲಭವಾಗಿ ಅಳಿಸಿ ಹಾಕಬಹುದು. ಈ ಕೆಲಸವನ್ನು ಶಾಸನ ತಜ್ಞರಲ್ಲದವರೂ ಮಾಡಬಹುದು ಅಥವಾ ಗಣಕದಲ್ಲಿ ಸೂಕ್ತ ಫಿಲ್ಟರ್ ಸೌಕರ್ಯವನ್ನೂ ರೂಪಿಸಿಕೊಳ್ಳಬಹುದು. ಅಷ್ಟರಮಟ್ಟಿಗೆ ತಜ್ಞರ ಸಮಯ ಉಳಿಯುತ್ತದೆ. ತಜ್ಞರು ಶಾಸನದ ಪಾಠವನ್ನು ತಯಾರಿಸುವ ಕೆಲಸಲ್ಲಿ ಮಾತ್ರ ತೊಡಗಲು ಸಾಧ್ಯವಾಗುತ್ತದೆ.
ಗಣಕದಿಂದ ಹೆಚ್ಚಿನ ಕೆಲಸದ ನಿರೀಕ್ಷೆ
ಮೇಲಿನ ವಿವರಗಳಿಂದ ಗಣಕದಲ್ಲಿ ಶಾಸನಗಳ ಸಂಗ್ರಹ ಮತ್ತು ದಾಖಲೆ ಕಾರ್ಯವನ್ನು ಹೇಗೆ ಮಾಡಬಹುದು ಎಂಬುದರ ಕಲ್ಪನೆ ಬರುತ್ತದೆ. ಇನ್ನು ಮುಂದೆ ಗಣಕಗಳನ್ನು ಇನ್ನೂ ಹೆಚ್ಚಿನ ಕಾರ್ಯಕ್ಕಾಗಿ ಹೇಗೆ ಅಣಿಗೊಳಿಸಬಹುದು ಎಂಬುದನ್ನು ನೋಡಬಹುದು.
ಯಾವುದೇ ಲಿಖಿತ, ಮುದ್ರಿತ ಅಥವಾ ಛಾಯಾಚಿತ್ರ ರೂಪದ ದಾಖಲೆಯನ್ನು ಹೇಗಿದೆಯೋ ಹಾಗೆ ಗಣಕದೊಳಗೆ ಹಾಕಿ ಬಿಡುವುದು ಬಹು ಸುಲಭ. ಮುಖ್ಯ ಗಣಕ ಯಂತ್ರಕ್ಕೆ ಜೋಡಿಸಿರುವ ಸ್ಕ್ಯಾನರನಲ್ಲಿ ಪ್ರತಿ ಮಾಡಬೇಕಾದ ದಾಖಲೆಯನ್ನಿಟ್ಟರಾಯಿತು. ಅದು ಬೆಳಕಿನ ತೀವ್ರತೆಯನ್ನು ಗುರುತಿಸಿ ಅದರ ಪ್ರಕಾರ ಗಣಕಕ್ಕೆ ಸಾಮಗ್ರಿಯನ್ನು ಕಳಿಸುತ್ತದೆ. ಗಣಕವು ಬಂದ ಸಾಮಗ್ರಿಯನ್ನು ವ್ಯವಸ್ಥಿತವಾಗಿ ಹಿಡಿದಿಟ್ಟುಕೊಂಡು ತನ್ನ ಪರದೆಯ ಮೇಲೆ ಹಾಕಿ ತೋರಿಸುತ್ತದೆ. ಪ್ರತಿ ಇಂಚಿಗೆ ೩೦೦ ಚುಕ್ಕೆಗಳಂತೆ ಚುಕ್ಕೆಗಳ ಸಂಖ್ಯೆಯನ್ನು ಹೆಚ್ಚಿಸಿದ ರಾಯಿತು. ಈ ತಂತ್ರಜ್ಞಾನದ ತತ್ತ್ವವನ್ನು ಅಳವಡಿಸಿಕೊಂಡು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (Optical Character Recognition, ಸಂಕ್ಷೇಪದಲ್ಲಿ OCR) ಎಂಬ ತಂತ್ರಾಂಶವನ್ನು ರೂಪಿಸಲಾಯಿತು. ಸಾಮಾನ್ಯವಾಗಿ ಪ್ರಿಂಟಾದ ಅಥವಾ ಟೈಪ್ ಆದ ದಾಖಲೆಯನ್ನು ಓಸಿಆರ್ ಮೂಲಕ ಓದಬಹುದು. ಅಂದರೆ ಸ್ಕ್ಯಾನರ್ನಿಂದ ಬಂದ ಚಿತ್ರ ರೂಪೀ ಮಾಹಿತಿಯನ್ನು ಅರ್ಥ ಮಾಡಿಕೊಂಡು ಅದರ ಪಾಠವನ್ನು ಪರದೆಯ ಮೇಲೆ ತೋರಿಸಬಲ್ಲದು. ಯಾವ ರೀತಿಯ ಮಾಹಿತಿ ಬಂದಾಗ ಅದು ಯಾವ ಅಕ್ಷರ ಎಂಬ ಜ್ಞಾನವನ್ನು ಗಣಕಕ್ಕೆ ಮೊದಲೇ ಪೂರೈಸಿರಬೇಕಾಗುತ್ತದೆ. ಉದಾಹರಣೆಗೆ ಇಂಗ್ಲೀಷಿನಲ್ಲಿ ಟೈಪ್ ಆದ ಒಂದು ಪುಟವನ್ನು ಸ್ಕ್ಯಾನ್ ಮಾಡಿದ್ದೇವೆಂದು ತಿಳಿಯೋಣ. ‘ಸ್ಕ್ಯಾನ್ ಆಗಿ ಬಂದ ಚಿತ್ರದಲ್ಲಿ ಇರುವ ಅಕ್ಷರಗಳನ್ನು ಗುರುತಿಸು’ ಎಂದು ಹೇಳಿದರೆ ನೇರವಾಗಿ ಗಣಕ ದಲ್ಲಿಯೇ ಟೈಪ್ ಮಾಡಿರಬಹುದಾದ ಅಕ್ಷರಗಳಂತೆ ಬರೆಯುತ್ತದೆ. ಸಾಕಷ್ಟು ಸಂಶೋಧನೆ ಮಾಡಿ ಇಂಗ್ಲೀಷಿಗೆ ಈ ಸೌಲಭ್ಯವನ್ನು ರೂಪಿಸಿದ್ದಾರೆ. ಭಾರತೀಯ ಭಾಷೆಗಳಿಗೆ ಈ ಕಾರ್ಯ ಇನ್ನೂ ಆಗಬೇಕಾಗಿದೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೆಲುಗು ಲಿಪಿಯನ್ನು ಈ ರೀತಿಯಲ್ಲಿ ಓದುವುದಕ್ಕಾಗಿ ‘ದೃಷ್ಟಿ’ ಎಂಬ ಓಸಿಆರ್ ತಂತ್ರಾಂಶವನ್ನು ರೂಪಿಸಿದ್ದಾರೆ. ಸದ್ಯದಲ್ಲೇ ಕನ್ನಡ, ತಮಿಳು,ಮಲಯಾಳಂ ಮತ್ತು ಗುಜರಾತಿ ಭಾಷೆಗಳಿಗೆ ಆ ತಂತ್ರಾಂಶವನ್ನು ವಿಸ್ತರಿಸುವ ಯೋಜನೆಯಿದೆಯಂತೆ.[4]
ಸ್ಕ್ಯಾನರ್ನಲ್ಲಿ ಇಡುವ ಸಾಮಗ್ರಿಯನ್ನು ಅದರ ಚೌಕಟ್ಟಿಗೆ ಸಮಾನಾಂತರದಲ್ಲಿ ಇಡಬೇಕು. ಇಟ್ಟ ಸಾಮಗ್ರಿ ಸ್ವಲ್ಪವಾದರೂ ವಾಲಿದರೂ ಓಸಿಆರ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಕಾರಣಾಂತರದಿಂದ ವಾಲಿದಂತೆ ಇರುವ ಸಾಮಗ್ರಿಯನ್ನೂ ಸಮರ್ಪಕವಾಗಿ ಓದಲು ಬೇರೆ ತತ್ತ್ವಗಳನ್ನು ರೂಪಿಸಲಾಗಿದೆ.[5]
ಇದಲ್ಲದೇ ಅಕ್ಷರ ಗುರುತಿಸುವ ಶಾಸ್ತ್ರ (Character Recognition) ಎಂದೇ ಒಂದು ಶಾಸ್ತ್ರಾಂಗ ಹುಟ್ಟಿಕೊಂಡಿದೆ. ಅದಕ್ಕೆ ಬೇಕಾಗುವಂತೆ Pattern Recognition ಎಂಬ ವಿಶಾಲ ಶಾಸ್ತ್ರವು ಭೂಮಿಕೆಯನ್ನು ಸಿದ್ಧಗೊಳಿಸಿದೆ. ಹಾಲಂಡಿನಲ್ಲಿ Pattern Recognition Letters ಎಂಬ ಒಂದು ಪತ್ರಿಕೆಯನ್ನು ಎಲ್ಸೇವಿಯರ್ ಎಂಬ ಪ್ರಸಿದ್ಧ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿದೆ. ಆ ಪತ್ರಿಕೆಯ ಮೇ ೧೯೯೯ರ ಸಂಚಿಕೆಯಲ್ಲಿ ಬಂದ ಲೇಖನ ಈ ದಿಶೆಯಲ್ಲಿ ಮಹತ್ತ್ವದ ಹೆಜ್ಜೆಯಾಗಿದೆ. ಅಲ್ಲಿ ಕನ್ನಡ ವರ್ಣಮಾಲೆಯ ಮೂಲಾಕ್ಷರಗಳನ್ನೂ ವ್ಯಂಜನ ಗಳ ಗುಣಿತಾಕ್ಷರಗಳನ್ನೂ ವಿಶ್ಲೇಷಿಸಲಾಗಿದೆ. ಯಾವುದೇ ಅಕ್ಷರವನ್ನು ೩ ಗುಣಿಸು ೩, ಅಂದರೆ ೯ ಮನೆಗಳ ವಿಸ್ತಾರದಲ್ಲಿ ಗುರುತಿಸಬಹುದು. ಯ, ಝ ಮೊದಲಾದ ಮೂಲಾಕ್ಷರ ಗಳಿಗೂ ಕೂ, ಕೋ ಮೊದಲಾದ ಗುಣಿತಾಕ್ಷರಗಳಿಗೂ ೩ ಗುಣಿಸು ೩ರಕ್ಕಿಂತ ಹೆಚ್ಚು ಮನೆಗಳು ಬೇಕಾಗಬಹುದು. ಹೀಗೆ ಕನ್ನಡ ಅಕ್ಷರಗಳನ್ನು ಗುರುತಿಸಲು ಬೇಕಾಗುವ ಸಿದ್ಧತೆಯನ್ನು ಅಲ್ಲಿ ಚರ್ಚಿಸಲಾಗಿದೆ.[6]
ಮೈಸೂರು ವಿಶ್ವವಿದ್ಯಾನಿಲಯ ಕಂಪ್ಯೂಟರ್ ಸೈನ್ಸ್ ವಿಭಾಗವು ಕೈಗೆತ್ತಿಕೊಂಡಿರುವ ಎರಡು ಪಿಎಚ್.ಡಿ. ಅಧ್ಯಯನಗಳನ್ನು ಉಲ್ಲೇಖಿಸಬೇಕು. ಓಸಿಆರ್ ಮತ್ತು Pattern Recognition ತಂತ್ರಜ್ಞಾನ ಬಳಸಿ ಶಾಸನಗಳಲ್ಲಿ ಬರುವ ಅಕ್ಷರಗಳನ್ನು ಕಾಲ ಮತ್ತು ರಾಜಮನೆತನಗಳಿಗೆ ಅನುಗುಣವಾಗಿ ವಿಂಗಡಿಸುವ ಕಾರ್ಯ ಒಂದು. ಎರಡನೆಯದಾಗಿ ಯಾವುದೇ ಶಾಸನವನ್ನು ಕೊಟ್ಟರೂ ಅದು ಯಾವ ಕಾಲಕ್ಕೆ ಮತ್ತು ಯಾವ ರಾಜಮನೆತನಕ್ಕೆ ಸಂಬಂಧಿಸಿರಬಹುದು ಎಂಬುದನ್ನು ಗುರುತಿಸಿ ಹೇಳುವುದು. ಈ ಅಧ್ಯಯನಗಳಿಗೆ ಆಯ್ದ ಶಾಸನಗಳನ್ನೂ, ತಾಮ್ರಪಟಗಳನ್ನೂ ತಾಳೆಗರಿಯ ಪುಸ್ತಕಗಳನ್ನೂ ಎತ್ತಿಕೊಳ್ಳಲಾಗಿದೆ. ಒಂದೆರಡು ವರ್ಷಗಳಲ್ಲಿ ಅಧ್ಯಯನದ ಫಲಗಳು ದೊರೆಯಬಹುದು.[7]
ಟೋಕಿಯೋ ವಿದೇಶಾಧ್ಯಯನ ವಿಶ್ವವಿದ್ಯಾಲಯವು ೨೦೦೩ರ ಕೊನೆಯಲ್ಲಿ ಟೋಕಿಯೋದಲ್ಲಿ ನಡೆಸಿದ International Symposium on Indic Scripts: Past and Future ಎಂಬ ಕಾರ್ಯಾಗಾರದಲ್ಲಿ ನಾನೂ Development of Kannada Script and Preserving it for the Future ಎಂಬ ಲೇಖನವನ್ನು ಪ್ರಸ್ತುತ ಪಡಿಸಿದೆ.[8] ಅಲ್ಲಿ ಸೂಚಿಸಿದ ಕೆಲವು ಸಲಹೆಗಳನ್ನು ಪ್ರಸ್ತುತ ಲೇಖನದಲ್ಲೂ ಅವಗಾಹನೆಗಾಗಿ ಮುಂದೆ ಕೊಟ್ಟಿದ್ದೇನೆ.
ಈ ಸಂಶೋಧನೆಗಳ ಫಲಗಳು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಲು ಸಮಯ ಬೇಕು. ಆ ಪೂರ್ವದಲ್ಲಿ ಸಾಧ್ಯವಿದ್ದ ಕೆಲವು ಸುಧಾರಣೆಗಳನ್ನು ತರಬಹುದು. ಸಧ್ಯದ ಪರಿಸ್ಥಿತಿಯಲ್ಲಿ ಅಭ್ಯಾಸಕ್ಕೆ ಅಥವಾ ಪರಿಗಣನೆಗೆ ಯಾವುದೋ ಒಂದು ಶಾಸನ ಬೇಕಾದರೆ ಅದನ್ನು ಹುಡುಕುವುದು ತುಂಬಾ ಶ್ರಮದ ಕೆಲಸವಾಗಿದೆ. ಆದುದರಿಂದ ಮೊದಲನೆಯ ಹಂತದಲ್ಲಿ ಲಭ್ಯವಿರುವ ಶಾಸನಗಳನ್ನೆಲ್ಲ ರಾಜಮನೆತನಗಳಿಗನುಸಾರವಾಗಿ ಮತ್ತು ಕಾಲದ ಅನುಕ್ರಮದಲ್ಲಿ ವಿಂಗಡಿಸಿ ಗಣಕಗಳಲ್ಲಿ ಸಂಗ್ರಹ ಮಾಡಿ ಇಟ್ಟುಬಿಟ್ಟರೆ ಒಂದು ದೊಡ್ಡ ಕೆಲಸವಾಯಿತು. ಬೇಕಾದಾಗ ಬೇಕಾದ ಶಾಸನವನ್ನು ತತ್ಕ್ಷಣ ಎತ್ತಿಕೊಂಡು ಓದಬಹುದು. ಹೀಗೆ ಸಂಗ್ರಹಿಸಲಾದ ಶಾಸನಗಳನ್ನೆಲ್ಲ ಆರ್ಕೈವ್ ತರಹ ಮಾಡಿಬಿಟ್ಟರಂತೂ ಎಲ್ಲಿಂದ ಬೇಕಾದರೂ, ಯಾರು ಬೇಕಾದರೂ ನಿರ್ದಿಷ್ಟ ಶಾಸನವನ್ನು ಓದಬಹುದು. ಪ್ರಿಂಟ್ ಮಾಡಿಕೊಂಡು ದುರುಪಯೋಗ ಪಡಿಸಿಕೊಳ್ಳುವ ಭಯವಿದ್ದರೆ ‘ರೀಡ್ ಓನ್ಲಿ’ ಎಂದು ಮಾಡಿ ಪ್ರಿಂಟ್ ಸೌಕರ್ಯವನ್ನು ನಿಷೇಧಿಸಲೂ ಸಾಧ್ಯವಿದೆ.
ಎರಡನೆಯ ಹಂತದಲ್ಲಿ ಹೀಗೆ ವಿಂಗಡಿತ ಶಾಸನಗಳಲ್ಲಿ ಬರುವ ಅಕ್ಷರಗಳನ್ನೆಲ್ಲ ಓಸಿಆರ್ ಮುಖಾಂತರ ವಿಶ್ಲೇಷಿಸಿ ಆಯಾ ಕಾಲದ ಪ್ರಕಾರ ಮತ್ತು ಆಯಾ ರಾಜಮನೆತನಗಳ ಪ್ರಕಾರ ಲಿಪಿಯ ಲಕ್ಷಣಗಳನ್ನು ಗುರುತಿಸುವ ಕಾರ್ಯವಾಗಬೇಕು. ಈ ಲಕ್ಷಣಗಳು ಯಾವುದೇ ದತ್ತ ಸಾಮಗ್ರಿಯಲ್ಲಿ ಕೆಲಸ ಮಾಡುವಂತೆ ಆಗಬೇಕು. ಅಂದರೆ ಶಾಸನದ ಯಾವುದೇ ಬರಹವನ್ನು ಕೊಟ್ಟರೆ ಅದು ಯಾವ ಕಾಲದ್ದು ಮತ್ತು ಯಾವ ರಾಜಮನೆತನಕ್ಕೆ ಸೇರಿದ್ದು ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಬೇಕು.
ಮೂರನೆಯ ಹಂತದಲ್ಲಿ, ಹೊಸದಾಗಿ ಹುಡುಕಲಾದ ಶಾಸನವನ್ನು ಕೊಟ್ಟರೆ ತಂತ್ರಾಂಶವೇ ಅದನ್ನು ಓದಿ ಅದರ ಇತಿಹಾಸವನ್ನು ನಿಷ್ಕರ್ಷಿಸಲು ಸಾಧ್ಯವಾಗಬೇಕು. ಎರಡನೆಯ ಮತ್ತು ಮೂರನೆಯ ಹಂತಗಳ ಕೆಲಸವೆಂದರೆ ‘ಕೃತ್ರಿಮ ಜ್ಞಾನ’ (Artificial Intelligence)ದ ಅಭಿವೃದ್ದಿಯ ಕೆಲಸ. ಅದಕ್ಕೆ ಜನಸಹಾಯ ಧನಸಹಾಯ ತುಂಬಾ ಬೇಕು.
ಬಹುಶಃ ನಾಲ್ಕನೆಯ ಹಂತವನ್ನೂ ಇಲ್ಲಿ ಊಹಿಸಬಹುದು. ಮುದ್ರಿತ (ಅಥವಾ ಕೈಬರಹದ ಕೂಡ) ಲೇಖನವನ್ನು ಓದುವ (Text to Speech) ಮತ್ತು ಓದಿದ ಲೇಖನವನ್ನು ಬರೆಯುವ (Speech to Text) ತಂತ್ರಾಂಶಗಳ ಮೇಲೆ ತುಂಬಾ ಕಾರ್ಯ ಇತ್ತೀಚೆಗೆ ನಡೆಯುತ್ತಿದೆ. ಕನ್ನಡಕ್ಕೂ ತಕ್ಕಮಟ್ಟಿಗೆ ಕಾರ್ಯವಾಗಿದೆ. ಅದರ ನೆರವಿನಿಂದ ಯಾವುದೇ ಶಾಸನವನ್ನು ಓದಿ ಬಿಡಬಹುದು. ಅರ್ಥಾತ್ ಒಂದು ಶಾಸನದ ಪ್ರತಿಯನ್ನು ಯಂತ್ರದಲ್ಲಿ ಹಾಕಿ ‘ಓದು’ ಎಂದು ಆದೇಶ ಕೊಟ್ಟರೆ ತಂತ್ರಾಂಶ ಅದನ್ನು ಓದಿ ಬಿಡುತ್ತದೆ. ಅದೇ ಪ್ರಕಾರ ಒಂದು ವಿಷಯವನ್ನು ಕಂಪ್ಯೂಟರಿನ ಮೈಕ್ ಮುಂದೆ ಹೇಳಿದರೆ ಅದು ಬೇಕಾದ ಕಾಲದ, ಬೇಕಾದ ರಾಜಮನೆತನದ ಶಾಸನವನ್ನು ತಯಾರು ಮಾಡಿ, ಮುದ್ರಣ ಮಾಡಿಕೊಡ ಬಹುದು. ಇದೆಲ್ಲ ಬೇಕೇ? ಎಂಬ ಪ್ರಶ್ನೆ ಇರಲಿ. ಆದರೆ ಇದು ತಾಂತ್ರಿಕವಾಗಿ ಸಾಧ್ಯ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಎಲ್ಲ ಸಂಶೋಧನೆಗಳ ಪ್ರಾರಂಭದಲ್ಲಿ ಬೇಕು ಬೇಡಗಳನ್ನು ಗಮನಿಸುವುದು ಸಾಧ್ಯವಾಗುವುದಿಲ್ಲ. ಸಂಶೋಧನೆಗೆ ಸೀಮೆಯಿಲ್ಲ.
ಕೃತಜ್ಞತೆ : ಈ ಲೇಖನದಲ್ಲಿ ಶಾಸನಗಳ ವಿಷಯವನ್ನು ಚರ್ಚಿಸಲು ಸಾಧ್ಯವಾದುದು ಶ್ರೀ ರಾ. ಸ್ವಾ. ಪಂಚಮುಖಿ ಅವರು ನಿರ್ದೇಶಿಸುತ್ತಿದ್ದ School of Indian Paleography (೧೯೬೦)ಯನ್ನು ವಿದ್ಯಾರ್ಥಿಯಾಗಿ ಸೇರಿಕೊಂಡು ಶಾಸನಶಾಸ್ತ್ರವನ್ನು ಅವರಿಂದ ಕಲಿತುದರಿಂದ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.
ಅನುಬಂಧ–೧
ಅನುಬಂಧ–೨
ಅನುಬಂಧ–೩
ಕೃಪೆ : Deciphering our Glorious Past
Publishd by the Directorate of Epigraphy
Archaeological Survey of India, Mysore, 2002.
Leave A Comment