‘ಶಾಸನ ಶಿಲ್ಪ’ದ ಬಗೆಗೆ ಚರ್ಚಿಸಲು ಹೊರಟಾಗ, ಶಿಲ್ಪಕೃತಿಗಳ ಜೊತೆಗೆ ಸರಿ ಸಮಾನವಾಗಿ ಶಾಸನಶಿಲ್ಪಗಳು ಸ್ಪರ್ಧಿಸಬಲ್ಲವೆ? ಎಂದು ಯೋಚಿಸಬೇಕಾಗುತ್ತದೆ. ಯೋಚಿಸುತ್ತಾ ಹೋದಂತೆ ಶಾಸನ ಶಿಲ್ಪಗಳು ಹಾಗೂ ಶಿಲ್ಪ ಕೃತಿಗಳು ವಿಭಿನ್ನವಾದ ನೆಲೆಯಲ್ಲಿ ನಿಲ್ಲುತ್ತವೆ ಎಂಬ ಅಂಶ ಸ್ಪಷ್ಟವಾಗಿ ಅರಿವಿಗೆ ಮೂಡುತ್ತದೆ. ಇಲ್ಲಿನ ವಿಭಿನ್ನ ನೆಲೆಗಳು ಎಂದರೆ ಅವು ಹುಟ್ಟುವ ಕಾರಣ, ಪ್ರೇರಣೆ ಹಾಗೂ ಪ್ರಯೋಜನ ಬೇರೆ ಬೇರೆಯಾಗಿವೆ ಎಂದು ಅರ್ಥ. ಆದರೆ ಇವೆರಡು ರೂಪಗಳು ಸಂಪೂರ್ಣ ವಿಭಿನ್ನವಾದವುಗಳು ಎಂದು ಕಡ್ಡಿ ತುಂಡಾಗುವಂತೆ ಹೇಳುವ ಹಾಗಿಲ್ಲ. ಏಕೆಂದರೆ ಶಾಸನಶಿಲ್ಪ ಹಾಗೂ ಶಿಲ್ಪಕೃತಿಗಳನ್ನು ಸೂಕ್ಷ್ಮವಾಗಿ ತೌಲನಿಕ ದೃಷ್ಟಿಯಿಂದ ಪರಿಶೀಲಿಸಿದರೆ ಇವೆರಡೂ ಒಂದೇ ಮಾಧ್ಯಮದಿಂದ ಕೂಡಿವೆ ಎಂಬ ಅಂಶ ಮುಖ್ಯವಾಗಿ ಗಮನಕ್ಕೆ ಬರುತ್ತದೆ. ಮಾಧ್ಯಮವೆಂದರೆ ಬಾಹ್ಯರೂಪ ವನ್ನು ನೀಡಲು ಶಿಲ್ಪಿಯಾಗಲಿ ಕಲಾವಿದನಾಗಲಿ ಬಳಸುವ ವಸ್ತು ಎಂದು ಅರಿಯಬೇಕು. ಹೀಗೆ ಎರಡೂ ಒಂದೇ ಮಾಧ್ಯಮದಿಂದ ಕೂಡಿದರೂ ಇವುಗಳ ಹಿನ್ನೆಲೆಯಲ್ಲಿ ವಿಭಿನ್ನವಾದ ಸಾಂಸ್ಕೃತಿಕ ಕಾರಣಗಳು ಕೆಲಸ ಮಾಡುತ್ತವೆ. ಈ ದೃಷ್ಟಿಯಿಂದ ಶಿಲ್ಪಕೃತಿಗಳ ಅಧ್ಯಯನದಂತೆ, ಶಾಸನಶಿಲ್ಪಗಳ ಅಧ್ಯಯನವೂ ಅವಶ್ಯವಾದುದು ಎಂಬುದೇ ನಮ್ಮ ತಿಳಿವು. ಇಲ್ಲಿ ಯಾವುದು ಮೇಲು? ಯಾವುದು ಕೀಳು? ಎಂಬ ಮೌಲ್ಯಮಾಪನಕ್ಕೆ ಅವಕಾಶ ನೀಡಬಾರದು. ಒಂದು ವಿಧದಲ್ಲಿ ನೋಡಿದರೆ ಸಮುದಾಯದಿಂದ ಸೃಷ್ಟಿಯಾಗುವ, ರೂಪುಗೊಳ್ಳುವ ಕ್ರಿಯೆಗಳಿಗೆ ಅವುಗಳದ್ದೇ ಆದ ಸಾಂಸ್ಕೃತಿಕ ಮಹತ್ವವಿರುತ್ತದೆ. ಈ ಸಾಂಸ್ಕೃತಿಕ ಮಹತ್ವಗಳು ಸಾಂಸ್ಕೃತಿಕ ಕೊಡುಗೆಗಳಾಗಿ ಪರಿಣಮಿಸುತ್ತವೆ.

ಪ್ರತಿಯೊಂದು ಕೃತಿಯ ರೂಪುಗೊಳ್ಳುವಿಕೆಯ ಹಿಂದೆ ಅನೇಕ ಪ್ರೇರಣೆಗಳು ಕೆಲಸ ಮಾಡುತ್ತಿರುತ್ತವೆ. ಅದು ಪ್ರಕೃತಿಯಾಗಬಹುದು, ಕಲಾವಿದನ ಅನುಭವವಾಗಬಹುದು ಅಥವಾ ಅದುಮಿಡಲಾಗದ ಪ್ರತಿಭಾ ಹೊಳಹುಗಳಾಗಬಹುದು. ಇವೆಲ್ಲದರ ಸಕ್ರಿಯ ಪಾತ್ರಗಳ ಕಾರಣದಿಂದ ಒಂದು ಕೃತಿ ರೂಪುಗೊಳ್ಳುತ್ತದೆ. ಶಾಸನಶಿಲ್ಪದ ರೂಪುಗೊಳ್ಳುವಿಕೆಗೂ ಹಲವಾರು ಪ್ರೇರಣೆಗಳು ಕೆಲಸ ಮಾಡಿವೆ. ಇವೆಲ್ಲಕ್ಕಿಂತ ಮೊದಲು ಶಿಲ್ಪಕೃತಿಗೂ ಶಾಸನ ಶಿಲ್ಪಕ್ಕೂ ಇರುವ ಹೋಲಿಕೆ ವ್ಯತ್ಯಾಸಗಳನ್ನು ಗಮನಿಸುವುದು ಒಳ್ಳೆಯದು.

ಶಾಸನಶಿಲ್ಪವು ತಾಂತ್ರಿಕ ದೃಷ್ಟಿಯಂದ ‘ಉಬ್ಬುಶಿಲ್ಪ’ದ ಗುಂಪಿಗೆ ಸೇರಿದುದಾಗಿದೆ. ಚಪ್ಪಟೆಯಾದ ಹಿನ್ನೆಲೆಯಿಂದ ಮುಂದಕ್ಕೆ ಉಬ್ಬಿದಂತೆ ಕಾಣುವ ಶಿಲ್ಪವೇ ಉಬ್ಬು ಶಿಲ್ಪವೆನ್ನಿಸಿ ಕೊಂಡಿದೆ. ನಮ್ಮ ಪ್ರಾಚೀನ ಶಿಲ್ಪಶಾಸ್ತ್ರ ಗ್ರಂಥಗಳಾದ ಮಾನಸಾರ, ಮಯಮತ, ಅಂಶುದ್ಭೇ ದಾಗಮ, ಶಿಲ್ಪ ಸಂಗ್ರಹ ಮೊದಲಾದವುಗಳು ಉಬ್ಬು ಶಿಲ್ಪದ ಬಗೆಗೆ ಏನನ್ನೂ ಹೇಳಿಲ್ಲ.* ಅವು ಉಬ್ಬು ಶಿಲ್ಪವನ್ನು ಶಿಲ್ಪದಿಂದ ಅಥವಾ ದುಂಡು ಶಿಲ್ಪದಿಂದ ಬೇರ್ಪಡಿಸಿ ನೋಡಲಿಲ್ಲ. ಕಾರಣ ಅವುಗಳ ಗಮನವೆಲ್ಲ ಕೇಂದ್ರೀಕೃತವಾಗಿದ್ದು ದೇವಾನುದೇವತೆಗಳ ಮೇಲೆಯೇ-ಗಣಪತಿ, ವಿಷ್ಣು ಮೊದಲಾದ ದೇವತೆಗಳ ಎತ್ತರ, ಅಳತೆ, ಕಿರೀಟದ ಪ್ರಮಾಣ, ಅವರು ನಿಂತ ಭಂಗಿ, ಹಿಡಿದಿರುವ ಆಯುಧಗಳು, ಧರಿಸುವ ಉಡುಗೆಗಳು, ಅವರ ವಾಹನಗಳು ಮುಂತಾದುವನ್ನು ಲಕ್ಷಣ ಸಮೇತ ವಿವರಿಸಿವೆ. ಶಿಲ್ಪಶಾಸ್ತ್ರದ ರಾಜಗ್ರಂಥವಾದ ‘ಮಾನಸಾರ’ ದಲ್ಲಿಯೂ ಕೂಡ ಉಬ್ಬುಶಿಲ್ಪದ ಬಗೆಗೆ ಪ್ರಸ್ತಾಪವಿಲ್ಲ. ಇದಕ್ಕೆ ಕಾರಣ ಆ ಕಾಲದಲ್ಲಿ ಶಿಲ್ಪಕ್ಕೂ, ಉಬ್ಬುಶಿಲ್ಪಕ್ಕೂ ವಸ್ತು ಮತ್ತು ಮಾಧ್ಯಮ ಒಂದೇ ಆಗಿದ್ದುದು. ಆದರೆ ಕಾಲ ಬದಲಾದಂತೆ ವಸ್ತು ಮತ್ತು ಮಾಧ್ಯಮಗಳು ವೈವಿಧ್ಯತೆಯನ್ನು ಪಡೆದುವು. ವಿಫುಲವಾದ ತಂತ್ರಗಳು ಬೆಳೆದು ಬಂದವು. ಹೀಗಾಗಿ ಶಿಲ್ಪಶಾಸ್ತ್ರವು ಹೊಸ ಹೊಸ ರೂಪವನ್ನು ಆಯಾಮ ವನ್ನು ಪಡೆಯಿತು. ಸಂಪ್ರದಾಯಿಕ ಶಿಲ್ಪಕಲೆ ಇಂದು ಹೊಸ ಹೊಸ ದೃಷ್ಟಿಕೋನವನ್ನು ಪಡೆಯುತ್ತಿದೆ. ಇದರಿಂದಾಗಿ ಉಬ್ಬುಶಿಲ್ಪದ ಲಕ್ಷಣ ಮತ್ತು ಪ್ರಯೋಜನಗಳನ್ನು ಹಿಂದಿ ಗಿಂತಲೂ ಇಂದು ವಿವರವಾಗಿ ಚರ್ಚಿಸಲು ಹಾಗೂ ವಿವೇಚಿಸಲು ಅವಕಾಶವಿದೆ.

ಶಿಲ್ಪ ಅಥವಾ ದುಂಡುಶಿಲ್ಪ ಸ್ವತಂತ್ರವಾದ ಕೃತಿಯಾಗಿರುತ್ತದೆ. ತನ್ನದೇ ಆದ ಹೊರಗನ್ನು ಪಡೆದಿರುತ್ತದೆ. ಅದನ್ನು ಯಾವ ಬದಿಯಿಂದಲಾದರೂ ನಿಂತು ನೋಡಬಹುದು. ಅಥವಾ ಶಿಲ್ಪ ಕೃತಿಯನ್ನೇ ಯಾವ ಕಡೆಗೆ ಬೇಕಾದರೂ ತಿರುಗಿಸಿ ನೋಡಬಹುದು. ಆದರೆ ಉಬ್ಬು ಶಿಲ್ಪವು ಹೀಗಿರುವುದಿಲ್ಲ. ಇದನ್ನು ಎದುರಿನಿಂದ ಮಾತ್ರ ನೋಡಬೇಕು. ಗೋಡೆ, ಶಿಲೆ ಅಥವಾ ಬಳಕೆಯಾಗಿರುವ ಮಾಧ್ಯಮದ ಹಿನ್ನೆಲೆಯೊಂದಿಗೆ ಸ್ವಲ್ಪ ಮುಂದಕ್ಕೆ ಚಾಚಿರುತ್ತದೆ. ಕೈಗಳನ್ನು, ಆಯುಧಗಳನ್ನು ಇತರೆ ಭಾಗಗಳನ್ನು ಶಿಲ್ಪದ ರೀತಿ ನಿರ್ಮಿಸಲಾಗುವುದಿಲ್ಲ. ಇಲ್ಲಿ ಕೈಗಳು, ಆಯುಧಗಳು, ದೇಹದ ಹಿಂಭಾಗವು ಹಿನ್ನೆಲೆಗೆ ಅಂಟಿಕೊಂಡಿರುತ್ತದೆ. ಉಬ್ಬುಶಿಲ್ಪ ನಿರ್ಮಾಣವು ಶಿಲ್ಪಿಯ ಅಥವಾ ಕಲಾವಿದನ ಶ್ರಮ ಹಾಗೂ ಸಮಯವನ್ನು ಉಳಿಸುತ್ತದೆ.

ದುಂಡುಶಿಲ್ಪ ಅಥವಾ ಶಿಲ್ಪಕಲಾ ಕೃತಿಗಳಿಗೆ ನಿರ್ಮಾಣದ ಕಾರಣವಾಗಿ ಹಲವಾರು ಮಿತಿಗಳುಂಟಾಗಿವೆ, ಈ ರೂಪದಲ್ಲಿ ಯಾವುದಾದರೂ ಒಂದು ಘಟನೆಯನ್ನು ಮಾತ್ರ ನಿರೂಪಿಸಬಹುದು. ಅಂದರೆ ವ್ಯಕ್ತಿಯೋ, ದೇವರೋ, ಯಾವುದೇ ಆಗಲಿ ಆ ಒಂದು ಭಂಗಿಯನ್ನು ಮಾತ್ರ ತೋರಿಸಬಹುದು. ಆದರೆ ಉಬ್ಬುಶಿಲ್ಪದ ತಂತ್ರದಲ್ಲಿ ಹೋರಾಟದ ಭಂಗಿಯಲ್ಲಿ ನಿಂತಿರುವ ವ್ಯಕ್ತಿಯ ಜೊತೆ ಅವನ ಹಿಂಬಾಲಕರನ್ನು, ಎದುರಾಳಿಗಳನ್ನು, ಹೋರಾಟದ ಹಲವು ದೃಶ್ಯಗಳನ್ನು ಸಮರ್ಪಕವಾಗಿ ನಿರೂಪಿಸಬಹುದು. ಅಂದರೆ ಈ ತಂತ್ರ ಚಿತ್ರಕಲೆಗೆ ಸಮನಾಗಿ ನಿಲ್ಲುತ್ತದೆ. ಅಲ್ಲಿ ಬೇಕಾದ ವಿವಿಧ ಬಣ್ಣಗಳ ಹಚ್ಚುವಿಕೆಯಿಂದ ದೃಶ್ಯ ಪರಿಣಾಮಕಾರಿಯಾಗುವಂತೆ ಮಾಡಿದರೆ, ಇಲ್ಲಿ ಶಿಲ್ಪಿಯು ತನಗೆ ಬೇಕಾದ ದಪ್ಪ ತೆಳುವಿನ ಕೆತ್ತನೆಯಿಂದ ದೃಶ್ಯ ಪರಿಣಾಮಕಾರಿಯಾಗುವಂತೆ ನಿರ್ಮಿಸುತ್ತಾನೆ. ಬೇಗೂರಿನ ವೀರಗಲ್ಲು, ದೊಡ್ಡ ಹುಲ್ಲೂರಿನ ವೀರಗಲ್ಲುಗಳು (ಕ್ರಿ.ಶ. ೯ನೇ ಶತಮಾನ) ಇದಕ್ಕೆ ಅತ್ಯುತ್ತಮ ನಿದರ್ಶನಗಳಾಗಿವೆ.

ನಾವು ಯಾವುದೇ ವಾಸ್ತುಶಿಲ್ಪ ಕೇಂದ್ರವನ್ನು ವೀಕ್ಷಿಸಿದರೆ ಎರಡು ಅಂಶಗಳನ್ನು ಕಾಣ ಬಹುದು, ಒಂದು ಗೋಡೆಗಳ ಮೇಲೆ ಕೆತ್ತಿರುವ ಉಬ್ಬುಶಿಲ್ಪಗಳು, ಎರಡು ಅದಕ್ಕೆ ಹಿನ್ನೆಲೆಯಾಗಿ ಭದ್ರತೆಯೊದಗಿಸಿರುವ ಗೋಡೆಗಳು, ಇದು ಏಕಕಾಲಕ್ಕೆ ಗೋಡೆಯೂ ಹೌದು, ಶಿಲ್ಪಗಳೂ ಹೌದು, ಈ ಒಂದು ತಂತ್ರ ಬಳಕೆಯಲ್ಲಿಲ್ಲದಿದ್ದರೆ ವಾಸ್ತುಶಿಲ್ಪ ಕೇಂದ್ರಗಳನ್ನು ಊಹಿಸುವುದೂ ಅಸಾಧ್ಯವಾಗುತ್ತದೆ. ನಮ್ಮ ನಾಡಿನ ನೂರಾರು ದೇವಾಲಯ ಗಳು ಲೋಕ ಪ್ರಸಿದ್ಧವಾಗಿರುವುದು ಈ ತಂತ್ರದಿಂದಲೇ. ಅದಿಷ್ಠಾನ, ಗೋಡೆ, ಮಾಳಿಗೆ, ಭುವನೇಶ್ವರಿ, ಬಾಗಿಲುವಾಡ, ಜಾಲಂದ್ರ, ಕಂಬಗಳು ಇವೆಲ್ಲವೂ ಉಬ್ಬುಗೆತ್ತನೆಗೆ ಮಾಧ್ಯಮ ಗಳಾದವು.

ಶಿಲ್ಪಕ್ಕೂ ಶಾಸನಶಿಲ್ಪಕ್ಕೂ ಮಾಧ್ಯಮ ಒಂದೇ, ಅದು ಶಿಲೆ. ಶಿಲ್ಪ ತಯಾರಿಕೆಯಲ್ಲಿ ಲೋಹದ ಬಳಕೆಯಿದ್ದರೂ ಕೂಡ ಶಾಸನಶಿಲ್ಪ ತಯಾರಿಕೆಯಲ್ಲಿ ಲೋಹದ ಬಳಕೆಯಾಗಿಲ್ಲ. ತಾಮ್ರಶಾಸನಗಳಲ್ಲಿ ಹಲವಾರು ರೀತಿಯಲ್ಲಿ ರೇಖಾ ಚಿತ್ರಗಳು, ನಕ್ಷೆಗಳು ಮಾತ್ರ ಕಂಡು ಬರುತ್ತವೆ. ಶಾಸನದ ಹಾಳೆಗಳು ಒಂದಕ್ಕಿಂತ ಹೆಚ್ಚಾಗಿದ್ದಲ್ಲಿ ಅವುಗಳನ್ನು ಕೂಡಿಸಲು ರಾಜಮುದ್ರೆಯುಳ್ಳ ಬಳೆಯನ್ನು ಹಾಕಲಾಗಿರುತ್ತದೆ. ಶಿಲ್ಪಗಳಿಗೆ ಹಾಗೂ ಶಾಸನ ಶಿಲ್ಪಗಳಿಗೆ ಮಾಧ್ಯಮವು ಒಂದೇ ಆದರೂ ತಂತ್ರಗಳು ಬೇರೆ ಬೇರೆಯಾಗಿರುತ್ತದೆ. ಶಿಲ್ಪವನ್ನು ನಾಲ್ಕೂ ಕಡೆಯಿಂದ ನೋಡುವಂತೆ ಶಾಸನಶಿಲ್ಪಗಳನ್ನು ನೋಡಲಾಗುವುದಿಲ್ಲ. ಶಿಲ್ಪದಲ್ಲಿ ಒಂದು ಆಕೃತಿಯನ್ನು ಮಾತ್ರ ಕೆತ್ತಲಾಗಿರುತ್ತದೆ. ಶಾಸನ ಶಿಲ್ಪದಲ್ಲಿ ಏಕ ಕಾಲಕ್ಕೆ ಒಂದು ಘಟನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಚಿತ್ರಿಸಬಹುದು. ಹಂತ ಹಂತಗಳಲ್ಲಿ ಘಟನೆಯ ಪೂರ್ಣಚಿತ್ರವನ್ನು ನೀಡಬಹುದು (ಉಬ್ಬುಶಿಲ್ಪಕ್ಕೆ ಮಾತ್ರ ಈ ಸಾಧ್ಯತೆ ಇದೆಯೆಂದು ಮೊದಲೇ ಗಮನಿಸಲಾಗಿದೆ). ನಮ್ಮ ಭಾರತೀಯ ಶಿಲ್ಪಗಳು ಧಾರ್ಮಿಕವಾದ ಪ್ರೇರಣೆ ಹಾಗೂ ಪ್ರಭಾವದಿಂದ ಮೂಡಿ ಬಂದಂಥವುಗಳಾಗಿವೆ. ಅವಕ್ಕೆ ಮಡಿ-ಮೈಲಿಗೆಗಳು ಜಾಸ್ತಿ. ಶಾಸನ ಶಿಲ್ಪಗಳಾದರೋ ಸಾಮಾನ್ಯ ಜನರ ಸ್ವತ್ತು, ಜನರ ಬದುಕಿನೊಂದಿಗೇ ಬೆಳೆದುಬಂದು ಉಳಿದಿರುತ್ತವೆ. ಹೀಗಾಗಿ ಜನಾಂಗದಿಂದ ಜನಾಂಗಕ್ಕೆ ಇವನ್ನು ನೋಡುವ ಮತ್ತು ನಿರ್ಮಿಸುವ ದೃಷ್ಟಿ ಬೇರೆ ಬೇರೆಯಾಗಿರುತ್ತದೆ. ಕೆಲವು ವೇಳೆ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲೂ ಕಷ್ಟಪಡಬೇಕಾಗುತ್ತದೆ. ಈ ಕಾರಣದಿಂದಲೇ ನೂರಾರು ಶಾಸನ ಶಿಲ್ಪಗಳು ರಸ್ತೆ ಬದಿಯಲ್ಲಿ, ಹಳ್ಳ ಕೊಳ್ಳಗಳಲ್ಲಿ ಕಾಣಸಿಗುತ್ತವೆ. ಹಾಗೆಯೇ ಪೂಜೆಗೊಳ್ಳುತ್ತಿರುವ ಶಾಸನ ಶಿಲ್ಪಗಳೂ ಉಂಟು. ಶಿಲ್ಪಗಳ ಧಾರ್ಮಿಕ ಆಚರಣೆಯ ಕುರುಹುಗಳನ್ನು ಅವನ್ನು ನೋಡುವ ಮತ್ತು ಆರಾಧಿಸುವ ದೃಷ್ಟಿಗಳೇ ಬೇರೆ ಬೇರೆಯಾಗಿರುತ್ತದೆ. ಶಾಸನ ಶಿಲ್ಪಗಳು ಜನಾಂಗದ ನಡುವೆ ಮೂಡಿಬಂದಿರುವ, ಕಾಲದಿಂದ ಕಾಲಕ್ಕೆ ನಿರ್ಮಾಣಗೊಂಡು ಸಮುದಾಯದ ನಡುವೆ ಸೇರಿಕೊಂಡಿರುವ ಐತಿಹಾಸಿಕ ಕುರುಹುಗಳು. ಶಾಸನಗಳು ಹಾಗೂ ಶಾಸನಶಿಲ್ಪಗಳ ಅಧ್ಯಯನದ ನೆರವಿನಿಂದ ಒಂದು ಸಂಪ್ರದಾಯದ, ನಂಬಿಕೆಯ, ಘಟನೆಗಳ ಇತಿಹಾಸವನ್ನು ಅರಿತುಕೊಳ್ಳಬಹುದು. ಶಿಲ್ಪವು ಮೂಲತಃ ಕಲೆಯ ಮನಸ್ಸಿನಿಂದ ಹುಟ್ಟಿ ಧಾರ್ಮಿಕ ಚೌಕಟ್ಟ ನಲ್ಲಿ ಬೆಳೆದಿವೆ. ಇವು ಭಕ್ತಿಯನ್ನು ಉದ್ದೀಪನಗೊಳಿಸುತ್ತವೆ. ಶಾಸನಶಿಲ್ಪವು ಸಾಮಾಜಿಕ ಕಳಕಳಿಯಿಂದ ಹುಟ್ಟಿದಂತವು. ಇವುಗಳಲ್ಲಿ ಧಾರ್ಮಿಕ ಅಂಶಗಳಿದ್ದರೂ ಕೂಡ ಅವು ಗೌಣವಾಗುತ್ತದೆ. ಈ ಕಾರಣದಿಂದ ಅವು ಮೊದಲಿಗೆ ಐತಿಹಾಸಿಕ ಆಕರಗಳು ನಂತರ ಕಲಾ ಪ್ರಕಾರಗಳು.

ಶಾಸನಶಿಲ್ಪ ತಯಾರಿಕೆಯ ಕಾಲದಲ್ಲಿ ನೆರವಾಗುವ ಅಂಶಗಳಾವುವೆಂದರೆ, ನಡೆದ ಘಟನೆಯ ವಿವರ ಮತ್ತು ಶಿಲಾಫಲಕದಲ್ಲಿ ಇರುವ ಅವಕಾಶ. ಜಾಗವು ಕಡಿಮೆ ಇದ್ದು ಘಟನೆಯು ಉನ್ನತವಾಗಿದ್ದರೆ ಶಿಲ್ಪಿಗೆ ಬಹಳ ಕಷ್ಟವಾಗುತ್ತದೆ. ಘಟನೆಯನ್ನು ದಾಖಲಿಸು ವಷ್ಟು ಉದ್ದ, ಅಗಲ, ಗಾತ್ರದ ಶಿಲೆಯನ್ನು ಅವನು ಸಿದ್ಧತೆ ಮಾಡಿಕೊಳ್ಳಬೇಕಾ ಗುತ್ತದೆ. ಈ ಕಾರಣದಿಂದಲೇ ಒಂದು ಹಂತದ ಶಾಸನ ಶಿಲ್ಪದಿಂದ ಮೊದಲ್ಗೊಂಡು ಆರು-ಏಳು ಹಂತದ ಶಾಸನ ಶಿಲ್ಪಗಳವರೆಗೂ ನೋಡಲು ದೊರೆಯುತ್ತವೆ. ಇಲ್ಲಿ ಘಟನೆಯನ್ನು  ಆರಂಭದಿಂದ ಕೊನೆಯವರೆಗೂ ಹಂತ ಹಂತವಾಗಿ ನಿರೂಪಿಸಲಾಗಿರುತ್ತದೆ.

ನಮ್ಮ ನಾಡಿನಲ್ಲಿ ಶಿಲ್ಪಗಳು ಸೃಷ್ಟಿಯಾಗಿದ್ದು ಪೂಜೆಗೊಳ್ಳಲೆಂದೇ ವಿನಹ ಕಲಾ ಪ್ರದರ್ಶನಕ್ಕಾಗಿ ಸೃಷ್ಟಿಯಾದದ್ದು ಕಡಿಮೆ. ಶಾಸನಶಿಲ್ಪಗಳು ಹುಟ್ಟಿದ್ದು ವಿಷಯವನ್ನು ದಾಖಲಿಸಲು ಮತ್ತು ಜನರ ರೀತಿ-ನೀತಿಗಳನ್ನು ದಾಖಲಿಸಲು ಜನಪದ ನಂಬಿಕೆಗಳ ಮೇಲೆ ಶಾಸನಶಿಲ್ಪಗಳು ವಿಕಸಿತವಾದವು. ಈ ನಂಬಿಕೆಗಳು, ಆಚರಣೆಗಳು ಸಂಕೇತಗಳ ಮುಖಾಂತರ ಶಾಸನಶಿಲ್ಪಗಳಲ್ಲಿ ವ್ಯಕ್ತವಾದವು.

ಶಿಲ್ಪಗಳಿಗೆ ಪುರಾಣಗಳಿಂದ, ಕಾವ್ಯಗಳಿಂದ, ಕಲ್ಪನೆಯಿಂದ ವಸ್ತುಗಳು ದೊರಕಿದರೆ, ಶಾಸನಶಿಲ್ಪಕ್ಕೆ ಜನರ ನಿತ್ಯದ ಬದುಕೇ ಪ್ರೇರಣೆಯಾಗಿ ಅದೇ ಮೂಲ ವಸ್ತುವಾಗಿವೆ. ಉನ್ನತ ಮೌಲ್ಯಗಳು ನಂಬಿಕೆಗಳು, ಆಚರಣೆಗಳು ಮುಂದಿನ ಪ್ರಜೆಗಳಿಗೆ ಮಾದರಿಯಾಗಲಿ ಎಂಬ ಆಶಯ ಭಾವನೆ ಶಾಸನಶಿಲ್ಪದ ಹಿಂದಿದೆ.

ಶಿಲ್ಪಕೃತಿಗಳು ಒಂದು ರೀತಿಯಲ್ಲಿ ನಿಯಂತ್ರಿತ ವ್ಯವಸ್ಥೆಯಿಂದ ರೂಪುಗೊಂಡಿವೆ, ಇವನ್ನು ನಿಯಂತ್ರಿಸಲು ಹಲವಾರು ಶಾಸ್ತ್ರಕೃತಿಗಳು ರಚನೆಯಾಗಿವೆ. ಅವು ಒಂದು ಶಿಲ್ಪವು ಹೀಗೇ ಇರಬೇಕು ಎಂದು ನಿರ್ಧರಿಸಿವೆ. ಆದರೆ ಶಾಸನಶಿಲ್ಪ ರಚನಕಾರನಿಗೆ ಯಾವ ನಿಯಂತ್ರಣವೂ ಇರುವುದಿಲ್ಲ. ನಿಯಂತ್ರಣವಿದ್ದರೆ ಅದು ಶಿಲೆಯಲ್ಲಿರುವ ಸ್ಥಳಾವಕಾಶದ್ದು ಮಾತ್ರ. ಹೀಗಾಗಿ ಒಂದೊಂದು ಶಾಸನಶಿಲ್ಪವೂ ವೈಶಿಷ್ಟ್ಯತೆಯಿಂದ ಕೂಡಿರುತ್ತದೆ. ಆಯಾ ಕಾಲದ ಆಚರಣೆಗಳನ್ನು, ವೇಷ-ಭೂಷಣಗಳನ್ನು ತಿಳಿಯಲು ಶಾಸನಶಿಲ್ಪಗಳು ನೇರವಾಗಿ, ಅಧಿಕೃತ ದಾಖಲೆಗಳಾಗಿ ನಿಲ್ಲುತ್ತವೆ.

ಪ್ರಾಚೀನ ಕರ್ನಾಟಕದಲ್ಲಿ ಬಲಗೈ ನೀಡುವ ದಾನ ಎಡಗೈಗೆ ತಿಳಿಯಬಾರದು ಎಂಬ ಮನೋಧರ್ಮದ ಜನಗಳಿದ್ದರು. ಈ ರೀತಿಯ ಮನೋಧರ್ಮದ ನಡುವೆಯೂ ಶಾಸನ ನೆಡುವ ಪದ್ಧತಿ ಬೆಳೆದು ಬಂದುದು ಆಶ್ಚರ್ಯವಾಗಿದೆ. ಈ ರೀತಿ ಬೆಳೆದು ಬಂದುದು ಕಾಲ ಕ್ರಮೇಣ ತನ್ನ ಸ್ವರೂಪದಲ್ಲಿ ಹಲವಾರು ಬದಲಾವಣೆಗಳನ್ನು ಒಳಗೊಂಡಿತು. ಬರವಣಿಗೆ ಗಿಂತಲೂ ಚಿತ್ರಗಳು ಪ್ರಭಾವಶಾಲಿಯಾದುವು. ಎಷ್ಟೋ ಶಾಸನಗಳಲ್ಲಿ ಕೇವಲ ಶಿಲ್ಪ ಮಾತ್ರವಿರುತ್ತದೆ. ಬರವಣಿಗೆಯೇ ಇರುವುದಿಲ್ಲ. ಬರವಣಿಗೆಯಲ್ಲಿ ಹೇಳಲಾರದ್ದನ್ನು ಶಿಲ್ಪಗಳ ಮುಖಾಂತರವೇ ಹೇಳಲಾಗಿದೆ ಎಂಬ ಭಾವನೆ ಇದಕ್ಕೆ ಕಾರಣ. ವೈವಿಧ್ಯತೆಯ ದೃಷ್ಟಿ ಯಿಂದಲೂ ಸಂಖ್ಯೆಯ ದೃಷ್ಟಿಯಿಂದಲೂ ಶಾಸನಶಿಲ್ಪಗಳು ನಮ್ಮಲ್ಲಿ ವಿಶೇಷವಾಗಿ ದೊರೆಯುತ್ತವೆ. ಈ ರೀತಿಯಾಗಿ ಶಾಸನ ಶಿಲ್ಪವು ಪ್ರಮುಖ ಸ್ಥಾನವನ್ನು ಹೇಗೆ ಪಡೆಯಿತು?, ಅದರ ಹಿಂದಿದ್ದ ಉದ್ದೇಶವೇನು? ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಸರಳವಲ್ಲ. ಮೇಲುನೋಟಕ್ಕೆ ಶಾಸನಗಳ ಉದ್ದೇಶವೇ ಅದರಲ್ಲಿನ ಶಿಲ್ಪದ ಉದ್ದೇಶವಾಗಿದೆ ಎಂದು ಹೇಳಿ ಬಿಡಬಹುದು. ಆದರೆ ಆಳವಾಗಿ ಯೋಚಿಸಿ ನೋಡಿದರೆ ಶಾಸನಗಳ ಉದ್ದೇಶಕ್ಕಿಂತ ಭಿನ್ನವಾದ ಉದ್ದೇಶವನ್ನು ಶಾಸನಶಿಲ್ಪ ಹೊಂದಿದೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಶಾಸನಗಳ ಅವಿಭಾಜ್ಯ ಅಂಗವಾಗಿ ಬೆಳೆದ ಶಾಸನಶಿಲ್ಪದ ಉದ್ದೇಶಗಳನ್ನು ಅದರ ಬೆಳವಣಿಗೆಗೆ ಕಾರಣಗಳನ್ನು ಯೋಚಿಸಿದಾಗ ಹಲವಾರು ಅಂಶಗಳು ಗೋಚರವಾಗುತ್ತವೆ.

ಶಾಸನಗಳಲ್ಲಿ ಶಿಲ್ಪವು ಮೂಡಿಬರಲು ಮುಖ್ಯ ಕಾರಣವೆಂದರೆ, ಅನಕ್ಷರಸ್ಥರಿಗೂ ಅರಿವಾಗಲಿ ಎಂಬುದು. ಈಗಿನ ಕಾಲದಲ್ಲಿ ಬಯಸಿದರೆ ಯಾರು ಬೇಕಾದರೂ ಅಕ್ಷರ ಕಲಿಯಬಹುದು. ಆದರೆ ಪ್ರಾಚೀನ ಕಾಲದಲ್ಲಿ ಈ ಸ್ಥಿತಿ, ಅನುಕೂಲಗಳು ಇರಲಿಲ್ಲವೆಂಬುದು ಸರ್ವವೇದ್ಯವಾಗಿದೆ. ಸಾಮಾನ್ಯ ಜನರೂ ಕೂಡ ನಮ್ಮ ಉದ್ದೇಶವನ್ನು ಅರಿಯಲಿ ಎಂಬ ಕಾರಣದಿಂದ ಅಕ್ಷರದ ಜೊತೆ ಶಿಲ್ಪವನ್ನು ಕೆತ್ತಲು ಪ್ರಾರಂಭಿಸಿದರು. ಶಿಲ್ಪಿಗಳಿಗೆ ನಿಜ ವಾಗಿಯೂ ಸವಾಲಾಗಿ ನಿಂತದ್ದು ಸ್ಮಾರಕ ಶಿಲೆಗಳು, ವೀರನ ತ್ಯಾಗ, ಬಲಿದಾನ, ಮಹಾಸತಿ ಯರ ಆದರ್ಶ ಗುಣ, ಭಕ್ತರ ಪಾರಮಾರ್ಥಿಕ ಗುಣಗಳನ್ನು ಎಲ್ಲರಿಗೂ ಅರಿವಾಗುವಂತೆ ಹೇಳಬೇಕಾಗುತ್ತಿತ್ತು. ಅಲ್ಲದೆ ಸಮಾಜದಲ್ಲಿ ಬಹುಪಾಲು ಸಂಖ್ಯೆಯನ್ನು ಹೊಂದಿದ್ದ ಅನಕ್ಷರಸ್ಥರಿಗೂ ಮೇಲಿನ ಅಂಶಗಳು ತಿಳಿಯಬೇಕಾಗುತ್ತಿತ್ತು. ಹೀಗಾಗಿ ಸ್ಮಾರಕ ಶಿಲೆಗಳಲ್ಲಿ ಶಿಲ್ಪವು ಬೇಗ ಬೇಗ ವಿಕಸನ ಹೊಂದಿತು. ಆದರೆ ದಾನ ಶಾಸನಗಳಲ್ಲಿ ಶಿಲ್ಪವು ನಿಯಂತ್ರಣ ಕ್ಕೊಳಪಟ್ಟಿತು. ಅಲ್ಲದೆ ದಾನ ನೀಡಿದ ಅದನ್ನು ಪಡೆದ ವಿವರಗಳನ್ನು ಚಿತ್ರಗಳಲ್ಲಿ ಬಿಡಿಸಿ ಡುವುದು ಅಸಾಧ್ಯದ ಮಾತು. ತಾಂತ್ರಿಕವಾಗಿ ಬಹಳ ತೊಂದರೆದಾಯಕವಾದುದು. ದಾನ ಶಾಸನಗಳಲ್ಲಿ ಭೂಮಿ, ಧನ, ಕನಕಗಳನ್ನು ದಾನ ನೀಡಿದ ವಿವರಗಳೇ ಹೆಚ್ಚು. ಈ ಅಂಶ ಗಳನ್ನು ಶಿಲ್ಪಿ ಹೇಗೆ ಕಂಡರಿಸುವುದು? ಹೀಗಾಗಿ ದಾನ ಶಾಸನಗಳಲ್ಲಿ ಸಂಕೇತಗಳಿಗೆ, ಚಿಹ್ನೆ ಗಳಿಗೆ ಹೆಚ್ಚು ಅವಕಾಶವುಂಟಾಯಿತು. ಅದರಲ್ಲೂ ಧಾರ್ಮಿಕ ಅಂಶಗಳನ್ನು ಪ್ರತಿಬಿಂಬಿಸುವ ಚಿಹ್ನೆಗಳಿಗೆ, ಸಂಕೇತಗಳಿಗೆ ಹೆಚ್ಚು ಅವಕಾಶವಾಯಿತು. ತಾವು ನೀಡಿದ ದಾನವು ಸೂರ್ಯ, ಚಂದ್ರರು ಇರುವವರೆಗೂ ಇರಲಿ ಎಂದು ಸೂರ್ಯ, ಚಂದ್ರರ ಚಿತ್ರವನ್ನು, ದಾನವನ್ನು ಅಪಹರಿಸಿದರೆ ಅಥವಾ ದಾನಿಗಳಿಗೆ ತೊಂದರೆ ಉಂಟು ಮಾಡಿದಾಗ ಮಹಾ ಪಾಪ ಉಂಟಾಗು ತ್ತದೆ ಎಂಬುದನ್ನು ಹಸು, ಕರು ಮತ್ತು ಖಡ್ಗದ ಚಿತ್ರಗಳಿಂದಲೂ ಅರ್ಥವಾಗುವಂತೆ ಹೇಳಲು ಪ್ರಯತ್ನಿಸಿದರು. ಅಕ್ಷರಸ್ಥರಿಗೆ ಅರವತ್ತು ಸಹಸ್ರ ವರ್ಷ ಕ್ರಿಮಿಯಾಗಿ ಹುಟ್ಟುತ್ತೀರಿ ಎಂದು ಹೆದರಿಸಿದರೆ, ಅನಕ್ಷರಸ್ಥರಿಗೆ ಹಸು, ಕರು, ಕತ್ತಿ ಮತ್ತು ಧಾರ್ಮಿಕ ಚಿಹ್ನೆಗಳನ್ನು ಬಳಸುವುದರ ಮುಖಾಂತರ ಹೆದರಿಸುತ್ತಿದ್ದರು. ಇಂದಿಗೂ ಸಾರ್ವಜನಿಕರು ಶಾಸನ ಪ್ರಕಾರ ಗಳನ್ನು ಗುರುತಿಸುವುದು ಅವುಗಳ ಮೇಲಿರುವ ಚಿತ್ರಗಳಿಂದಲೇ, ಹೀಗೆ ಅಕ್ಷರ ತಿಳಿಯ ದವರೂ ಕೂಡ ಶಿಲ್ಪಗಳನ್ನು ನೋಡಿ ಅರ್ಥ ಮಾಡಿಕೊಳ್ಳಲಿ, ಅದರಲ್ಲಿ ವ್ಯಕ್ತವಾದ ಮೌಲ್ಯವನ್ನು ತಿಳಿಯಲಿ ಎಂಬ ಘನ ಉದ್ದೇಶದಿಂದ ಶಾಸನಶಿಲ್ಪಕ್ಕೆ ಪ್ರಾಮುಖ್ಯತೆ ನೀಡಲಾಯಿತು. ಕಾಲಕ್ರಮೇಣ ಅಕ್ಷರಸ್ಥರೂ ಇದಕ್ಕೆ ಒಲವು ತೋರಿಸಿದ್ದರಿಂದ ಬರವಣಿಗೆ ಕಡಿಮೆಯಾಗುತ್ತಾ ಶಿಲ್ಪಗಳೇ ಪ್ರಧಾನವಾದವು. ಈ ಕಾರಣದಿಂದಲೇ ನಮಗೆ ನೂರಾರು ಬರಹವಿಲ್ಲದ ಸುಂದರವಾದ ಶಾಸನ ಶಿಲ್ಪಗಳು ದೊರೆಯುತ್ತವೆ. ಮಧ್ಯವರ್ತಿಗಳ ಸಹಾಯ ವಿಲ್ಲದೆ ಶಾಸನದ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ದಾರಿಯನ್ನು ಈ ಶಿಲ್ಪ ಗಳು ತೋರಿಸಿದವು.

ಹೇಳಬೇಕಾದ ವಿಷಯಗಳನ್ನು ಅತ್ಯುಜ್ವಲವಾಗಿ ಹೇಳಲು ಒಂದು ತಂತ್ರವಾಗಿಯೂ ಶಾಸನಶಿಲ್ಪಗಳು ಬಳಕೆಗೊಂಡವು. ಯಾವುದೇ ಕಲಾಕಾರನು ಒಂದು ಕಲಾಕೃತಿಯನ್ನು ರಚಿಸುವಾಗ ಹಲವು ತಂತ್ರಗಳನ್ನು ಬಳಸುತ್ತಾನೆ. ಆಗಲೇ ಅವನ ಕಲಾಕೃತಿಗೆ ಹೊಸ ಅರ್ಥ ಬರುವುದು. ಬರವಣಿಗೆಯಲ್ಲಿ ಹೇಳುವುದನ್ನು ಚಿತ್ರಗಳ ಮುಖಾಂತರ ಹೇಳಿದರೆ ಅದು ಇನ್ನೂ ಚೆನ್ನಾಗಿ ಮನಸ್ಸಿಗೆ ನಾಟುತ್ತದೆ ಎಂಬ ಮತ್ತೊಂದು ಉದ್ದೇಶವೂ ಶಾಸನ ಶಿಲ್ಪವು ಮೂಡಲು ಕಾರಣವಾಯಿತು. ಜನರನ್ನು ಆಕರ್ಷಿಸುವ ಒಂದು ತಂತ್ರವಾಗಿ ಶಾಸನ ಶಿಲ್ಪ ಬಳಕೆಗೊಂಡಿತು. ಚಿತ್ರಗಳಿವೆ ಎಂದರೆ ಬಹಳ ಕುತೂಹಲದಿಂದ ಗಮನಿಸುತ್ತಾರೆ. ಮಕ್ಕಳಿಗೆ ಚಿತ್ರಗಳ ಮುಖಾಂತರ ವಿದ್ಯೆ ಕಲಿಸುವ ಉಪಾಯವನ್ನು ಇಲ್ಲಿ ಸ್ಮರಿಸಬಹುದು. ಮನಃ ಪಟಲದ ಮೆಲೆ ಚಿತ್ರಗಳು ಮಾಡುವಷ್ಟು ಪ್ರಭಾವವನ್ನು ಬರವಣಿಗೆ ಮಾಡುವುದಿಲ್ಲ. ಒಂದು ಕಾವ್ಯವನ್ನಾಗಲಿ ಅಥವಾ ಕಾದಂಬರಿಯನ್ನಾಗಲಿ ಓದಿದಾಗ ಉಂಟಾಗುವ ಪರಿಣಾಮಕ್ಕಿಂತಲೂ, ಆ ಕಾವ್ಯ ಅಥವಾ ಕಾದಂಬರಿಯನ್ನು, ಸಿನಿಮಾ ಅಥವಾ ನಾಟಕದ ರೂಪದಲ್ಲಿ ನೋಡಿದಾಗ ಹೆಚ್ಚು ಪರಿಣಾಮ ಬೀರುತ್ತದೆ. ಕೆಲವು ವೇಳೆ ಶಾಶ್ವತ ಪರಿಣಾಮವನ್ನು ಬೀರುತ್ತದೆ. ಮಹಾಪುರುಷರ ಘಟನೆಗಳನ್ನು ಇಂದಿಗೂ ನಾವು ಮರೆಯದೆ ಇರುವುದು ಅವುಗಳನ್ನು ಹೆಚ್ಚಾಗಿ ದೃಶ್ಯ ಮಾಧ್ಯಮದಲ್ಲಿ ನೋಡಿರುವುದರಿಂದ, ಶಾಸನಗಳಲ್ಲೂ ಇದೇ ತಂತ್ರವನ್ನು ಬಳಸಲಾಯಿತು.

ತಾವು ಹಾಕಿಸುವ ಶಾಸನಗಳು ಅಂದವಾಗಿ ಕಾಣಬೇಕೆಂಬ ಉದ್ದೇಶವೂ ಕೂಡ ಶಾಸನ ಗಳಲ್ಲಿ ಶಿಲ್ಪಗಳು ಮೂಡಲು ಕಾರಣವಾಯಿತು. ಒಂದು ನಿಯಮಿತ ಆಕಾರವನ್ನು, ರೂಪ ವನ್ನು ಪಡೆಯಲು ಇದೇ ಕಾರಣ. ಸೂರ್ಯಚಂದ್ರರ ನಂತರ ಪ್ರಭಾವಳಿಗಳು ಬಳ್ಳಿಗಳ ಕಮಾನುಗಳು ಕಾಣಿಸಿಕೊಂಡವು.

ಶಾಸನಗಳು ಜನಪ್ರಿಯವಾದಂತೆಲ್ಲಾ ಶಿಲ್ಪಿಗಳಿಗೂ ಅದರ ವಿನ್ಯಾಸದ ಬಗೆಗೆ ಆಸಕ್ತಿ ಮೂಡತೊಡಗಿತು. ದೇವಾಲಯಗಳ ನಿರ್ಮಾಣದಂತೆ ಶಾಸನ ನಿರ್ಮಾಣವು ಒಂದು ಧಾರ್ಮಿಕ ಚಟುವಟಿಕೆಯ ಪ್ರೇರಣೆ ಪಡೆಯಿತು. ಶಾಸನ ಹಾಕಿಸುವುದು, ಅದನ್ನು ರಕ್ಷಿಸುವುದು ಪುಣ್ಯದ ಕೆಲಸ ಎಂಬ ಭಾವನೆ ಬೆಳೆಯಿತು. ಇದರಿಂದ ಶಿಲ್ಪಿಗಳು ಈ ಕಾರ್ಯಕ್ಕೂ ಹೆಚ್ಚು ಮಹತ್ವ ಕೊಡತೊಡಗಿದರು. ಶಾಸನ ನಿರ್ಮಾಣದಿಂದ ಶಿಲ್ಪಿಗಳಿಗೂ ಕೀರ್ತಿ ಗೌರವಗಳು ಉಂಟಾಗತೊಡಗಿತು. ಈ ಎಲ್ಲ ಕಾರಣದಿಂದ ತಮ್ಮ ಕಲಾ ಪ್ರತಿಭೆಯನ್ನು ಸಮರ್ಥವಾಗಿ ಶಾಸನಗಳೆಂಬ ಮಾಧ್ಯಮದ ಮೂಲಕ ವ್ಯಕ್ತಪಡಿಸಿದರು. ಯಾವ ಶಿಲ್ಪಿಯು ಶಾಸನ ನಿರ್ಮಾಣ ವನ್ನು ಒಂದು ಸವಾಲಾಗಿ ಸ್ವೀಕರಿಸುತ್ತಿದ್ದನೋ ಅಂತಹವನಿಂದ ರೂಪುಗೊಂಡ ಶಾಸನಶಿಲ್ಪ ಗಳು ಸೊಗಸಾಗಿವೆ. ಇದೂ ಒಂದು ಹೊಟ್ಟೆಪಾಡು, ಸಂಪ್ರದಾಯ ಎಂಬ ಮನೋಭಾವನೆಯ ಶಿಲ್ಪಿಗಳಿಂದ ರೂಪುಗೊಂಡ ಶಾಸನವು ಯಾವ ವಿಶೇಷತೆಯನ್ನೂ ಹೊಂದದೆ ಸಾಮಾನ್ಯ ವಾಗಿವೆ.

ಜನಸಾಮಾನ್ಯರಿಗೆ ಮೊದಲು ಗೋಚರವಾಗುವುದು ಶಾಸನಗಳಲ್ಲಿರುವ ಶಿಲ್ಪಗಳು. ಅದರಲ್ಲೂ ದೇವತಾ ಶಿಲ್ಪಗಳಿದ್ದರೆ ಅವನ್ನು ಪೂಜಿಸುವ ಆಸಕ್ತಿ ಹೊಂದಿರುತ್ತಾರೆ. ಕೆಲವರು ಅದು ದೇವತೆಗಳ ಶಿಲ್ಪವೇ ಎಂದು ಭಾವಿಸಿ ಪೂಜಾಕಾರ್ಯ ನಿರತರಾಗಿರುತ್ತಾರೆ. ವೀರಗಲ್ಲು ಗಳ ಶಿಲ್ಪದಲ್ಲಿ ಕಂಡುಬರುವ ಕುದುರೆ, ಆನೆ, ಹೋರಾಟ ಇತರ ಶಿಲ್ಪಗಳನ್ನು ತಮ್ಮ ಜ್ಞಾನಕ್ಕೆ ನಿಲುಕಿದಷ್ಟು ವಿವರಿಸುತ್ತಾರೆ. ಈ ವಿವರಣೆಯಲ್ಲಿ ಪರಂಪರಾಗತ ಹೇಳಿಕೆ, ಮೂಢ ನಂಬಿಕೆಗಳೂ ಸೇರಿರುತ್ತವೆ. ವಿದ್ಯಾವಂತರಲ್ಲೂ ಈ ಬಗ್ಗೆ ತಿಳಿಯುವ ಕುತೂಹಲ ಕಡಿಮೆಯೇ ಇರುತ್ತದೆ. ಅಧ್ಯಯನದ ದೃಷ್ಟಿಯಿಂದ ಶಾಸನ ಶಿಲ್ಪಗಳನ್ನು ಅನೇಕ ರೀತಿಯಲ್ಲಿ ವಿಭಾಗಿಸ ಬಹುದು. ಆದರೂ ಶಾಸನ ಶಿಲ್ಪಗಳ ವಿಭಾಗ ಕ್ರಮದಲ್ಲಿ ಹಲವಾರು ಸಮಸ್ಯೆಗಳಿವೆ. ಯಾವ ರೀತಿಯ ವಿಭಾಗವೂ ಸಮರ್ಪಕವಾಗಿ ಎನ್ನಲಾಗುವುದಿಲ್ಲ. ಕಾಲ, ರಾಜವಂಶ, ಭೌಗೋಳಿಕ, ಭಾಷೆ ಮತ್ತು ವಿಷಯದ ಆಧಾರದಲ್ಲಿ ಶಾಸನ ಶಿಲ್ಪಗಳನ್ನು ವಿಭಾಗಿಸಬಹುದು. ಇವುಗಳಲ್ಲಿ ವಿಷಯದ ಆಧಾರವೇ ಅತ್ಯಂತ ಸಮರ್ಪಕವಾದುದು. ವಿಷಯದ ಆಧಾರದಿಂದ ಶಾಸನ ಶಿಲ್ಪಗಳನ್ನು ಈ ಕೆಳಗಿನಂತೆ ವಿಭಜಿಸಬಹುದು.

ದಾನ ಶಾಸನಗಳ ಶಿಲ್ಪ

ಜೈನ ದಾನಶಾಸನಗಳ ಶಿಲ್ಪ
ಶೈವ ದಾನಶಾಸನಗಳ ಶಿಲ್ಪ
ಶಿವಲಿಂಗದ ಚಿತ್ರ
ಶಿವಲಿಂಗ, ಆಕಳು ಮತ್ತು ನಂದಿಯ ಶಿಲ್ಪ
ಮಂಟಪ, ಭಕ್ತ, ಶಿವಲಿಂಗ, ನಂದಿಯ ಶಿಲ್ಪ
ವೈಷ್ಣವ ದಾನಶಾಸನಶಿಲ್ಪ
ಶಂಖ, ಚಕ್ರ ಮತ್ತು ನಾಮದ ಶಿಲ್ಪ
ವೈಷ್ಣವ ದೇವತೆಗಳ ಶಿಲ್ಪ
ವಾಮನನ ಶಿಲ್ಪ

ಗೋಸಹಸ್ರ ದಾನಶಾಸನ ಶಿಲ್ಪ
ಕಮಲದ ಶಿಲ್ಪ
ಕಳಸದ ಶಿಲ್ಪ
ಆನೆಯ ಶಿಲ್ಪ
ನೇಗಿಲು ಹೂಡಿದ ಜೋಡೆತ್ತಿನ ಶಿಲ್ಪ
ಗಣಪತಿಯ ಶಿಲ್ಪ
ಪಂಚತಂತ್ರ ಕಥೆಯ ಶಿಲ್ಪ

ವೀ ಶಾಸನಗಳ ಶಿಲ್ಪ
ವ್ಯಕ್ತಿ-ವ್ಯಕ್ತಿಯ ಹೋರಾಟದ ಶಿಲ್ಪ
ತುರುಗೋಳ್ ಶಿಲ್ಪ
ಪೆಣ್ಬುಯ್ಯಲ್ ಶಿಲ್ಪ
ಉರಳಿವು, ಗಡಿಕಾಳಗ ಶಿಲ್ಪ
ಕಳ್ಳರೊಡನೆ ಹೋರಾಟದ ಶಿಲ್ಪ
ವ್ಯಕ್ತಿ-ಪ್ರಾಣಿಯ ಹೋರಾಟದ ಶಿಲ್ಪ
ಹಂದಿಬೇಟೆ ಶಿಲ್ಪ
ಹುಲಿಬೇಟೆ ಶಿಲ್ಪ
ಆನೆಬೇಟೆ ಶಿಲ್ಪ
ಹಾವುಬೇಟೆ ಶಿಲ್ಪ
ಮೊಸಳೆ ಹೋರಾಟ ಶಿಲ್ಪ
ಜಿಂಕೆಬೇಟೆ ಶಿಲ್ಪ

ಪ್ರಾಣಿ-ಪ್ರಾಣಿಯೊಡನೆ ಹೋರಾಟ ಶಿಲ್ಪ
ನಾಯಿ-ಹಂದಿ ಹೋರಾಟ ಶಿಲ್ಪ
ನಾಯಿ-ಹುಲಿ ಹೋರಾಟ ಶಿಲ್ಪ
ವೀರಸ್ಥಂಬಗಳ ಶಿಲ್ಪ

ಆತ್ಮಬಲಿ ಶಾಸನಗಳ ಶಿಲ್ಪ
ಧಾರ್ಮಿಕ ಬಲಿದಾನ ಶಾಸನಶಿಲ್ಪ
ಕಂಬಗಳ ಆಕಾರದ ನಿಸಿಧಿಶಿಲ್ಪ
ಫಲಕದ ಆಕಾರದ ನಿಸಿಧಿಶಿಲ್ಪ
ಫಲಕದ ಆಕಾರದ ಹಂತಗಳುಳ್ಳ ಶಿಲ್ಪ
ಪಾದಗಳ ಶಿಲ್ಪ
ಸೂರ್ಯಗ್ರಹಣದ ಸಾವಿನ ಶಿಲ್ಪ
ಹರಕೆ ಸಾವಿನ ಶಿಲ್ಪ
ಲೌಕಿಕ ಬಲಿದಾನದ ಶಾಸನಗಳ ಶಿಲ್ಪ
ಮಹಾಸತಿ ಶಾಸನಶಿಲ್ಪ
ಸಹಗಮನ ಶಿಲ್ಪ
ಅನುಗಮನ ಶಿಲ್ಪ
ಪೂರ್ಣ ಸತಿಶಿಲ್ಪ
ವೀರಮಾಸ್ತಿ ಶಿಲ್ಪ
ಹಂತಗಳ ವೀರಮಾಸ್ತಿಶಿಲ್ಪ
ಒಕ್ಕೈ ಮಾಸ್ತಿಶಿಲ್ಪ
ಬಹುಕೈ ಮಾಸ್ತಿಶಿಲ್ಪ
ವೇಳೆವಾಳಿ ಶಾಸನಶಿಲ್ಪ
ಕೀಳ್ಗುಂಟೆ ಶಾಸನಶಿಲ್ಪ
ಬೆಂಕಿಗೆ ಬೀಳುವ ಶಿಲ್ಪ
ಶೂಲದ ಮೇಲೆ ಬೀಳುವ ಶಿಲ್ಪ
ತಲೆ ಕಡಿಸಿಕೊಳ್ಳುವ ಶಿಲ್ಪ
ಸಿಡಿತಲೆ ಶಿಲ್ಪ
ಲೆಂಕರ ಶಿಲ್ಪ
ಸ್ವ-ಇರಿತ ಶಿಲ್ಪಗಳು

ಹೀಗೆ ಇನ್ನೂ ಹಲವು ಹತ್ತು ವಿಧದಲ್ಲಿ ಶಾಸನಶಿಲ್ಪಗಳನ್ನು ವಿಭಜಿಸಬಹುದು. ಈ ಮೇಲಿನ ಶಾಸನಶಿಲ್ಪಗಳ ಕ್ರಮಬದ್ಧ ಅಧ್ಯಯನದಿಂದ ಆಯಾ ಕಾಲದ ಸಾಂಸ್ಕೃತಿಕ ಬದುಕಿನ ಪರಿಚಯ ಮಾಡಿಕೊಳ್ಳಬಹುದು. ಉಡುಪುಗಳು, ಆಭರಣಗಳು, ಕೇಶವಿನ್ಯಾಸ ಯುದ್ಧ ಪದ್ಧತಿಗಳು, ಆಯುಧಗಳು, ವಾದ್ಯಗಳು, ಮೊದಲಾದ ಹಲವು ವಿಧವಾದ ವಿಷಯಗಳ ಬಗೆಗೆ ಬೇಕಾದಷ್ಟು ಮಾಹಿತಿ ಶಾಸನಶಿಲ್ಪಗಳಿಂದ ದೊರೆಯುತ್ತದೆ.

ಶಾಸನಗಳ ಮೇಲೆ ಧರ್ಮ ಹಾಗೂ ಸಂಸ್ಕೃತಿಯು ಪ್ರಭಾವ ಬೀರಿರುವುದರಿಂದ, ಅವೂ ಕೂಡ ಸಾಮಾಜಿಕ ಸ್ಥಿತಿಯನ್ನು ಪ್ರತಿಫಲಿಸುವುದರಿಂದ ಅವುಗಳಲ್ಲೂ ಸಾಂಕೇತಿಕ ಪ್ರಪಂಚ ವನ್ನು ಕಾಣಬಹುದು. ಶಿಲ್ಪದ ಮಾಧ್ಯಮದಲ್ಲಿ ಹಲವಾರು ಮಿತಿಗಳಿರುವುದರಿಂದ ಹೇಳ ಬೇಕಾದ ಎಲ್ಲ ವಿಷಯಗಳನ್ನು ಹೇಳಲು ಅಸಾಧ್ಯವಾಗಿ ಹೆಚ್ಚು ಅರ್ಥವ್ಯಾಪ್ತಿಯುಳ್ಳ ಸಾಂಕೇತಿಕ ಗುರುತುಗಳನ್ನು ಬಳಸತೊಡಗಿದರು. ತಮಗೆ ವಿವರಿಸಲಾಗದ ಆಧ್ಯಾತ್ಮಿಕ ವಿಷಯಗಳನ್ನು ಸಂಪ್ರದಾಯ ವಿವರಗಳನ್ನು ಮಾಡಿದರು. ವಿಶಾಲವಾದ ಅರ್ಥದಲ್ಲಿ ಹೇಳುವು ದಾದರೆ ಶಾಸನ ಹಾಕಿಸುವ ಕ್ರಿಯೆಯೇ ಸಾಂಕೇತಿಕ ಕ್ರಿಯೆಯಾಗಿದೆ.

ಶಿಲ್ಪ ಶೈಲಿಯನ್ನು ಕಾಲದ ಆಧಾರದಿಂದ ಅಥವಾ ರಾಜವಂಶದ ಆಧಾರದಿಂದ ಅಧ್ಯಯನ ಮಾಡುವಂತೆ ಶಾಸನ ಶಿಲ್ಪಗಳನ್ನೂ ಅಧ್ಯಯನ ಮಾಡಬಹುದು. ಆಯಾ ರಾಜವಂಶಗಳ ಕಾಲದಲ್ಲಿ ಪ್ರತ್ಯೇಕ ಶೈಲಿಯನ್ನು ಒಳಗೊಂಡಿತ್ತು. ವಾಸ್ತುಶಿಲ್ಪದ ಶೈಲಿಯ ಪ್ರಭಾವ ಶಾಸನ ಶಿಲ್ಪದ ಮೇಲೂ ಆಯಿತು. ಹೀಗಾಗಿ ಶಾಸನಶಿಲ್ಪಗಳನ್ನು ಕೂಡ ಗಂಗರ ಕಾಲ, ಚಾಲುಕ್ಯರ ಕಾಲ, ಹೊಯ್ಸಳರ ಕಾಲ, ವಿಜಯನಗರ ಕಾಲ ಎಂದು ಶೈಲಿಯನ್ನು ಗುರುತಿಸಬಹುದು. ಆಯಾ ರಾಜ ಮನೆತನದ ಅವಧಿಯಲ್ಲಿ ಕೆಲವೊಂದು ವಿಶಿಷ್ಟ ಲಕ್ಷಣಗಳನ್ನು ಶಾಸನ ಶಿಲ್ಪ ಗಳು ಹೊಂದಿವೆ.

ಶಾಸನಗಳು ಇಂದಿಗೂ ನಿರ್ಲಕ್ಷಿತ ಮಾಧ್ಯಮವಾಗಿದೆ. ಶಿಲ್ಪ ಕೃತಿಗಳನ್ನು ಅಧ್ಯಯನ ಮಾಡಿದಂತೆ ಶಾಸನಶಿಲ್ಪಗಳನ್ನು ಅಧ್ಯಯನ ಮಾಡುವ ಕಾರ್ಯ ಪ್ರಾರಂಭವಾಗಬೇಕಿದೆ. ನೂರಾರು ಉತ್ತಮ ಶಾಸನಶಿಲ್ಪಗಳು ಯಾವುದೇ ಶಿಲ್ಪಗಳಿಗಿಂತ ಕಡಿಮೆ ಇಲ್ಲದೆ ನಿರ್ಮಾಣ ವಾಗಿದೆ. ಇವುಗಳ ಅಧ್ಯಯನದಿಂದ ಕಲಾ ಪ್ರಪಂಚಕ್ಕೆ ಹಾಗೂ ಸಾಂಸ್ಕೃತಿಕ ಇತಿಹಾಸ ಪ್ರಪಂಚಕ್ಕೆ ಅಪಾರವಾದ ಲಾಭ ಉಂಟಾಗುತ್ತದೆ.

ಈ ಶಾಸನಗಳನ್ನು, ಅವುಗಳಲ್ಲಿರುವ ಶಿಲ್ಪಗಳನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅದು ಯಾವ ಉದ್ದೇಶಕ್ಕೆ ರೂಪುಗೊಂಡಿತೆಂಬ ಅರಿವುಂಟಾದರೆ ಅದನ್ನು ರಕ್ಷಿಸಬೇಕೆಂಬ ಕಾಳಜಿ ಮೂಡುತ್ತದೆ. ಚಾರಿತ್ರಿಕ ದಾಖಲೆಗಳಾಗಿ, ಕಲಾ ನಿರ್ಮಾಣಗಳಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಇವು ನಮ್ಮ ನಡುವೆ ಇವೆ. ಶಾಲಾ ಮಕ್ಕಳು, ಕಲಾ ಉಪಾಧ್ಯಾಯರು ಮುಂತಾದವರಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕಿದೆ.

 

 

 


* ನಾರದ ಶಿಲ್ಪದಲ್ಲಿ ಚಿತ್ರ, ಚಿತ್ರಾರ್ಥ, ಚಿತ್ರಾಭಾಸ ಎಂಬ ವರ್ಗೀಕರಣವಿದ್ದು ಇವು ಕ್ರಮವಾಗಿ ಶಿಲ್ಪ, ಉಬ್ಬುಶಿಲ್ಪ ಹಾಗೂ ಚಿತ್ರಕಲೆಯನ್ನು ಸೂಚಿಸುವ ವಿವರಣೆಯಿದೆ.