ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದವರಲ್ಲಿ ಶಿಲ್ಪಿಗಳು ಪ್ರಮುಖರಾದವರು. ಕ್ರಿ.ಪೂ. ಮೂರನೆಯ ಶತಮಾನದ ಅಶೋಕನ ಶಾಸನಗಳನ್ನು ಹಿಡಿದು ಇಂದಿನವರೆಗೂ ಶಾಸನಗಳನ್ನು ದೇವಾಲಯಗಳನ್ನು ನಾನಾ ವಿಧವಾದ ವಿಗ್ರಹಗಳನ್ನು, ಕೆರೆಗಳ ತೂಬುಗಳನ್ನು, ಗರುಡ ಗಂಬಗಳನ್ನು, ಸರಳಯಂತ್ರಗಳನ್ನು, ಯುದ್ಧೋಪಕರಣಗಳನ್ನು, ನಾಣ್ಯಗಳನ್ನು, ಹಡಗುಗಳನ್ನು, ಗೃಹೋಪಯೋಗಿ ವಸ್ತುಗಳನ್ನು, ಆಭರಣಗಳನ್ನು, ಕೃಷಿ ಉಪಕರಣಗಳನ್ನು ಒಟ್ಟಾರೆ ಪ್ರಾಚೀನ ನಾಗರಿಕತೆಯ ಅಗತ್ಯಗಳನ್ನು ಪೂರೈಸಿದವರು ಈ ಶಿಲ್ಪಿಗಳು. ಇವರನ್ನು ಶಾಸನದ ಪರಿಭಾಷೆಯಲ್ಲಿ ರೂವಾರಿಗಳೆಂದು ಕರೆದಿದ್ದಾರೆ.

ಭಾರತೀಯ ಶಿಲ್ಪಿಗಳು ಸಾಮಾನ್ಯವಾಗಿ ತಮ್ಮ ಹೆಸರು, ತಮ್ಮ ಪೂರ್ವಜರು, ಪರಂಪರೆ ಮುಂತಾದ ವಿವರಗಳನ್ನು ಎಲ್ಲಿಯು ಹೇಳಿಕೊಂಡಿಲ್ಲ. ತಮ್ಮ ಕಲಾಕೃತಿಯು ತಮ್ಮ ಶ್ರದ್ಧೆ ಮತ್ತು ಕಲಾ ತಪಸ್ಸಿನ ಛಲ ಎಂಬುದಾಗಿ ಅವರು ಭಾವಿಸಿದ್ದರು. ತಮ್ಮ ಕಲಾಕೃತಿಯ ಸೃಷ್ಠಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರು. ಈ ಕಲಾಕೃತಿಯೇ ತಮ್ಮನ್ನು ಚಿರಂಜೀವಿ ಯನ್ನಾಗಿ ಮಾಡುತ್ತದೆ ಎಂದು ಅವರು ಭಾವಿಸಿದ್ದರು. ಹೀಗಾಗಿ ಅವರು ಎಲ್ಲಿಯೂ ತಮ್ಮ ವೈಯಕ್ತಿಕ ವಿಷಯಗಳನ್ನು ನೀಡುವುದು ಅಹಂಕಾರದ ಪ್ರದರ್ಶನವಾಗುತ್ತದೆ ಎಂದು ಭಾವಿಸಿದ್ದರು. ಈ ಕಾರಣಕ್ಕಾಗಿಯೇ ಇರಬೇಕು ಅವರ ಬಗೆಗಿನ ವಿವರಗಳು ಹೆಚ್ಚಾಗಿ ದೊರೆಯುವುದಿಲ್ಲ. ಹೀಗೆಂದರೆ ಅವರ ವಿವರಗಳು ದೊರೆಯುವುದಿಲ್ಲವೆಂದಲ್ಲ. ಶಾಸನ ಗಳಲ್ಲಿ, ಮೂರ್ತಿಶಿಲ್ಪಗಳ ಕೆಳಭಾಗದಲ್ಲಿ ದೇವಾಲಯಗಳ ಕಂಬಗಳ ಮೇಲೆ, ವೀರಗಲ್ಲುಗಳ ಶಿಲ್ಪಗಳಲ್ಲಿ ಸಿಗುವುದುಂಟು. ಈ ರೂವಾರಿಗಳ ಹೆಸರಿನ ಹಿಂದೆ ಕಲ್ಲಕುಟಿಗ, ಕಲ್ಲಂಗಡಿದಾತ, ಕಂಡರಣೆಕಾರ, ಸರಸ್ವತಿ ಗಣಛಾತ್ರ, ಸರಸ್ವತಿ ಗಣಪುತ್ರ, ಸರಸ್ವತಿ ಗಣದಾಸಿ, ಶಾಸನಾ ಚಾರ್ಯ, ಸೂತ್ರಧಾರಿ, ವಿಶ್ವಕರ್ಮ, ಅಕ್ಕಸಾಲಿ, ಬಡಗಿ, ಶಿಲ್ಪಿ ಆಚಾರ್ಯ, ಕಮ್ಮಾರ, ಕಂಚಗಾರ ಮುಂತಾದ ವಿಶೇಷಣಗಳಿಂದ ಕರೆದಿದ್ದಾರೆ. ಇದಲ್ಲದೆ ಇವರ ಹೆಸರುಗಳ ಹಿಂದೆ ಓಜ, ಆಚಾರಿ, ಶಿಲ್ಪಿ ಎಂಬ ನಾಮಾಂಕಿತಗಳಿರುತ್ತವೆ. ಹೀಗೆ ಶಾಸನಗಳಲ್ಲಿ ಶಿಲ್ಪಗಳ ಮೇಲಿರುವ ಶಿಲ್ಪಗಳ ಹೆಸರುಗಳನ್ನು ಗುರುತಿಸಿಕೊಳ್ಳಬೇಕಾದುದು ಅವಶ್ಯಕ.

ಶಿಲ್ಪಿಗಳನ್ನು ಕುರಿತು ಈವರೆಗೆ ಅನೇಕ ಅಧ್ಯಯನಗಳು ಆಗಿವೆ. ಅವುಗಳಲ್ಲಿ ಕರ್ನಾಟಕ ಎಪಿಗ್ರಾಫಿ ಸಂಪುಟಗಳನ್ನು ಸಂಪಾದಿಸಿದ ಬಿ.ಎಲ್. ರೈಸ್‌ರವರು ಆ ಸಂಪುಟಗಳಲ್ಲಿ ಪ್ರಕಟವಾದ ಶಾಸನಗಳಲ್ಲಿ ಉಲ್ಲೇಖವಾಗಿರುವ ರೂವಾರಿಗಳನ್ನು ಕುರಿತು ಹೇಳಿದ್ದಾರೆ. ಅನಂತರ ಎನ್. ಅನಂತರಂಗಾಚಾರ್ಯರು, ಎಂ. ಶೇಷಾದ್ರಿ, ಎಸ್. ಶ್ರೀಕಂಠಶಾಸ್ತ್ರಿ, ಎಂ.ಎಂ. ಕಲಬುರ್ಗಿ, ಎ.ವಿ. ನರಸಿಂಹಮೂರ್ತಿ, ಎಂ.ಎಸ್. ನಾಗರಾಜರಾವ್, ಆರ್. ಶೇಷಾಶಾಸ್ತ್ರಿ. ಎಂ. ಚಿದಾನಂದಮೂರ್ತಿ, ಕೆ.ಎಸ್. ಕುಮಾರಸ್ವಾಮಿ, ಶ್ರೀನಿವಾಸ ರಿತ್ತಿ, ಜಿ.ಎಸ್. ದೀಕ್ಷಿತ, ಎ.ವಿ. ವೆಂಕಟರತ್ನಂ, ಎಸ್. ರಾಜಶೇಖರ, ಶ್ರೀನಿವಾಸ ಪಾಡಿಗಾರ ಮುಂತಾದ ಮಹನೀಯರು ಈ ನಿಟ್ಟಿನಲ್ಲಿ ಸಂಶೋಧನಾ ಲೇಖನಗಳನ್ನು ಅಥವಾ ತಮ್ಮ ಸಂಶೋಧನಾ ಪ್ರಬಂಧಗಳಲ್ಲಿ ಉಲ್ಲೇಖಿಸಿದ್ದಾರೆ.

ಎಸ್. ಶೆಟ್ಟರವರು ಅವರು ತಮ್ಮ ಸಹೋದ್ಯೋಗಿಗಳಾದ ಎಸ್. ರಾಜಶೇಖರ, ಎಚ್.ಬಿ. ಸುಂಕದ, ಪರಿಧಾ ಗಣಿಯಾರ, ಜಿ.ಆರ್. ಕುಪ್ಪಸ್ವಾಮಿ, ಜಿ.ಕೆ. ವೆಟಕಲ್ ಮುಂತಾದವರನ್ನು ಸೇರಿಸಿಕೊಂಡು ೧೯೮೨ರಲ್ಲಿ Memorial stones ಎನ್ನುವ ಗ್ರಂಥವನ್ನು ಪ್ರಕಟಿಸಿದರು. ಇದರಲ್ಲಿ ವೀರಗಲ್ಲುಗಳ ಮಹತ್ವವನ್ನು ಹೇಳುವದರೊಂದಿಗೆ Artists of Memorial stones in Karnataka : From Early Chalukya to Kadamba Times (6th – 10th Centuray A.D), Artists of Memorial Stones : Chalukya-Hoysala ಮತ್ತು Vijayanagara : Artists of Memorial stones ಎಂಬ ಉಪಯುಕ್ತವಾದ ಲೇಖನಗಳನ್ನು ಸೇರಿಸಿದ್ದಾರೆ. ಇದರಲ್ಲಿ ಶಿಲ್ಪಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಪರಿಚಯ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಈ ಗ್ರಂಥದಲ್ಲಿ ಸುಮಾರು ೩೧೪ ಜನ ಶಿಲ್ಪಿಗಳನ್ನು ಗುರುತಿಸಿರುವುದನ್ನು ಕಾಣುತ್ತೇವೆ.

ಇವರದೇ ಇನ್ನೊಂದು ಕೃತಿ Hoysala Temples ಎಂಬುವುದರಲ್ಲಿ ಇರುವ ೧೨ ಅಧ್ಯಾಯಗಳಲ್ಲಿ ಮೂರು ಅಧ್ಯಾಯಗಳನ್ನು ಶಿಲ್ಪಿಗಳಿಗೆ ಮೀಸಲಿಟ್ಟಿದ್ದಾರೆ. ಅವುಗಳಲ್ಲಿ ಅಧ್ಯಾಯ ಮೂರರಲ್ಲಿ “Artists and Craftsmen : their Social & Economic life” ಎಂಬುವದರಲ್ಲಿ ಶಿಲ್ಪಿಗಳು, ಅವರ ತರಬೆತಿ, ಅವರ ವ್ಯಾಸಂಗ, ಶಿಲ್ಪಿಗಳ ಸಂಘಗಳು, ಅವರಿಗೆ ದೊರೆತ ಪ್ರಶಸ್ತಿಗಳನ್ನು ಕುರಿತು ವಿವೇಚಿಸಿದ್ದಾರೆ. ನಾಲ್ಕನೆಯ ಅಧ್ಯಾಯದಲ್ಲಿ Feregrination of Artists ಎಂದು ಹೆಸರಿಸಿದ್ದು ಅದರಲ್ಲಿ ವಿವಿಧ ಪ್ರದೇಶಗಳಿಂದ ಬಂದಿರುವ ಶಿಲ್ಪಿಗಳನ್ನು ಕುರಿತು ಹೇಳಿದರೆ ಐದನೆಯದರಲ್ಲಿ The Artists at work ಎಂದು ಇದ್ದು ಅದರಲ್ಲಿ ಶಿಲ್ಪಿಗಳ ಕಾರ್ಯಗಳನ್ನು ಸಮೀಕ್ಷಿಸಿದ್ದಾರೆ. ಹೀಗೆ ಶಿಲ್ಪಿಗಳ ಬಗ್ಗೆ ಸುದೀರ್ಘವಾಗಿ ಬರೆದ ಕೀರ್ತಿ ಅವರಿಗೆ ಸಲ್ಲುತ್ತದೆ.

ನೆದರಲ್ಯಾಂಡ್ ದೇಶದ ಜಾನ್ ಬ್ರೋವರು ಎಂಬುವವರು ೧೯೮೮ರಲ್ಲ ಕೆಲವು ಜಾನಪದ ಕಥೆಗಳನ್ನು ಆಧರಿಸಿ ವಿಶ್ವಕರ್ಮ ಸಮಾಜವನ್ನು ಕುರಿತು ಜನಾಂಗಿಕ ಅಧ್ಯಯನ ವನ್ನು ಮಾಡಿರುತ್ತಾರೆ. ೧೯೯೦ರಲ್ಲಿ ಶಿಲ್ಪಿಗಳನ್ನು ಕುರಿತು ನೇರವಾಗಿ ಅಧ್ಯಯನ ಕೈಕೊಂಡವರ Kelleson Collyer ಮೇಲಬೋರ್ನ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಪಿಎಚ್.ಡಿ ಮಹಾಪ್ರಬಂಧ ‘The Hoysala Artists Their identity and styles ಒಂಭತ್ತು ಅಧ್ಯಾಯಗಳನ್ನು ಒಳಗೊಂಡಿರುವ ಈ ಮಹಾಪ್ರಬಂಧದಲ್ಲಿ, ಹೊಯ್ಸಳರ ಕಾಲದ ಕಲಾವಿದ ರನ್ನು ಸಾಕಷ್ಟು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ. ಆಯಾ ಕತುವಿನ ಕೃತಿಗಳ ಶೈಲಿಯನ್ನು ಅಧ್ಯಯನ ಮಾಡಿ ಸಮಿಕರಿಸಲಾಗಿದೆ. ಹೇರಳವಾಗಿ ಸಂಬಂಧಿತ ಕೃತಿಗಳ ಛಾಯಾಚಿತ್ರಗಳನ್ನು ನೀಡುತ್ತಾರೆ. ಶಿಲ್ಪಿಗಳ ಇತಿಹಾಸದಲ್ಲಿ ಇದೊಂದು ಮಹಾಕೃತಿಯಾಗಿದೆ.

೧೯೯೬ರಲ್ಲಿ ಪ್ರಕಟವಾಗಿರುವ ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರ್ಯರು ಈ ನಿಟ್ಟಿನಲ್ಲಿ ಪ್ರಕಟವಾಗಿರುವ ಮತ್ತೊಂದು ಪ್ರಮುಖವಾದ ಕೃತಿ. ಬೆಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಲ್ಲಿಸಲಾದ ಈ ಮಹಾಪ್ರಬಂಧವನ್ನು ರಚಿಸಿದವರು ಕೆ.ಎಸ್. ಕುಮಾರ ಸ್ವಾಮಿಯವರು. ಅವರೇ ಹೇಳುವಂತೆ “ವಿಷಯಕ್ಕೆ ಪ್ರಾದೇಶಿಕ ಮಿತಿಯನ್ನೇ ಆಗಲಿ, ಕಾಲದ ಮಿತಿಯನ್ನೇ ಆಗಲಿ, ಅರಸು ಮನೆತನದ ಮಿತಿಯನ್ನೇ ಆಗಲಿ, ಕಂಡರಣೆಕಾರರು, ಮೂರ್ತಿಶಿಲ್ಪಿಗಳು ಇತ್ಯಾದಿ ಯಾವುದೇ ಕ್ಷೇತ್ರದ ಮಿತಿಯನ್ನೇ ಆಗಲಿ ಹಾಕಿಕೊಂಡಿರು ವುದಿಲ್ಲ” (ಪುಟ ೩) ಇದರಲ್ಲಿ ಅವರು ಶಿಲ್ಪಿಗಳ ಪರಿಚಯವನ್ನು ಮಾಡಲು ಪ್ರಯತ್ನಿಸಿದ್ದಾರೆ. ಅವರ ಆರ್ಥಿಕ ಸ್ಥಿತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಶೈಕ್ಷಣಿಕ ವಿಚಾರಗಳನ್ನು ಪರಿಚಯ ಮಾಡುವುದರೊಂದಿಗೆ ಪ್ರಮುಖ ಶಿಲ್ಪಿಗಳಾದ ಸರ್ವಸಿದ್ದಿ ಆಚಾರ್ಯ, ರೇವಡಿ, ನರಸೊಬ್ಬ, ವಿಶ್ವಕರ್ಮಾಚಾರ್ಯ, ವಿಕ್ರಮಾದಿತ್ಯನ್, ಬಮ್ಮೋಜ ಮತ್ತು ಮನೆತನ, ಇಕ್ಕುಡಾಚಾರಿ, ಮಲ್ಲೋಜ ಮಾಣಿಯೋಜ, ದಾಸೋಜ, ನಾಣೋಜ, ಗಂಗಾಚಾರಿ ವರ್ಧಮಾನಾಚಾರಿ, ಕೇದಾರೋಜ ಮತ್ತು ಕಾಳಿದಾಸಿ, ಮಾಬ ದ್ರೋಹಘರಟ್ಟಾಚಾರಿ, ತಿಪ್ಪೆಣೋಜ, ಮಲ್ಲಿತಮ್ಮ, ಹೊನೋಜ, ಬೈಚೋಜ, ಬೀರೋಜ, ವೀರಣಾಚಾರ್ಯ ಮತ್ತು ವಂಶಾವಳಿ, ಕಾಳೋಜ ಮತ್ತು ಅನಕೋಜ, ಪೆಡಬಯಿರ ಓಜ ಮತ್ತು ಐನಬಯಿರಿ ಓಜ, ಗೊಳಿಯೋಜ ಮುಂತಾದವರನ್ನು ಅವರ ಕೃತಿಗಳನ್ನು ಪರಿಚಯಿಸಿದ್ದಾರೆ. ಮುಂದಿನ ಅಧ್ಯಾಯಗಳಲ್ಲಿ ಅವರ ಸಂಘಗಳು, ಅವರ ಆರ್ಥಿಕ ಸ್ಥಿತಿ, ಶೈಕ್ಷಣಿಕ ವಿಚಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಶಿಲ್ಪಿಗಳು ಕಾರ್ಯನಿರ್ವಹಿಸುತ್ತಿದ್ದ ಬಗೆಯನ್ನು ಚರ್ಚಿಸಿದ್ದಾರೆ.

ಶಾಸನೋಕ್ತ ಕುಶಲ ಕಲಾಕಾರರನ್ನು ಗುರುತಿಸುವ ವಿಧಿ ವಿಧಾನಗಳು ಹಾಗೂ ಸಮಸ್ಯೆಗಳು

ಎಂ.ಎಂ. ಕಲಬುರ್ಗಿಯವರು ತಮ್ಮ ಶಾಸನವ್ಯಾಸಂಗ ಕೃತಿಯಲ್ಲಿ ಕಂಡರಣೆಕಾರರನ್ನು ಗುರುತಿಸುವಲ್ಲಿ ಸಂಶೋಧಕನು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಸೂಚಿಸುತ್ತಾರೆ.

೧. ಕಂಡರಣೆಕಾರರು ವಿಷಯವನ್ನು ಸಂಗ್ರಹಿಸಬೇಕೆನ್ನುವವರು ಮಾಡಬೇಕಾದ ಮೊದಲ ಕಾರ್ಯವೇನೆಂದರೆ ಕವಿ ಮತ್ತು ಲಿಪಿಕಾರರಿಂದ ರೂವಾರಿಗಳನ್ನು ಬೇರ್ಪಡಿಸುವುದು.

೨. ಸಾಮಾನ್ಯವಾಗಿ ರೂವಾರಿಗಳ ಹೆಸರಿನ ಹಿಂದೇ ಕಲ್ಕುಟಿಗ, ಕಲ್ಲಂಕಡಿದಾತ, ಕಂಡರಣಿ ಕಾರ, ಸರಸ್ವತೀ ಗಣ, ಶಾಸನಾಚಾರ‍್ಯ, ಸೂತ್ರಧಾರಿ, ವಿಶ್ವಕರ್ಮ, ಅಕ್ಕಸಾಲಿ, ಬಿನ್ನಾಣಿ, ಬಡಿಗ, ಶಿಲ್ಪಿ, ಆಚಾರಿ, ಗವುಂಡ? ಕಮ್ಮಾರ, ಕಂಚುಗಾರ ಮತ್ತು ರೂವಾರಿ ಎಂಬ ವಿಶೇಷಣಗಳು ಬರುತ್ತವೆ. ಈ ವಿಶೇಷಣಗಳ ಮೂಲಕ ಅಕ್ಷರ ಶಿಲ್ಪಿಗಳನ್ನು ಅರಿಯಲು ಸಾಧ್ಯವಾಗುತ್ತದೆ.

೩. ಇದಲ್ಲದೆ ಇವರ ಹೆಸರುಗಳಿಗೆ ಓಜ, ಆಚಾರಿ, ಶಿಲ್ಪಿ ಎಂಬ ಉಪಸರ್ಗಗಳಿರುತ್ತವೆ.

೪. ಇದಲ್ಲದೆ ಕಂಡರಿಸು (ಕಂಡಳಿಸು, ಖಂಡರಿಸು) ಬೆಸರೆಯ, ಬೆಸೆ, ಹೊಯ್, ಪೊಯ್, ಕಲ್ಲಂಕಡಿ, ಕಲ್ಲಹೊಯಿ, ಕಲ್ಲಗೆಯಿ, ಶಿಲಾಕರ್ಮ, ತಿದ್ದು, ಸಮೆ, ಲಿಖಿತ, ಕೆಲಸ, ಶಿಲ್ಪ, ಬರೆಪ ಇತ್ಯಾದಿ ಪದಗಳು ಈ ಅಕ್ಷರ ಶಿಲ್ಪದ ಸೂಚನೆಗಳಾಗಿ ಕ್ರಿಯಾಪದ ಸ್ಥಾನದಲ್ಲಿ ಬಳಸಲ್ಪಟ್ಟಿರುತ್ತವೆ. ಹೀಗೆ ಹೆಸರಿನ ಹಿಂದಿನ ವಿಶೇಷಣ, ಹೆಸರಿನ ಸ್ವರೂಪ ಮತ್ತು ಕ್ರಿಯಾಪದಗಳ ಆಧಾರದಿಂದ ಶಾಸನಪಾಠವನ್ನು ಸಿದ್ಧಗೊಳಿಸುವ ಕವಿ, ಅಕ್ಷರ ಗಳನ್ನು ಮಾಡಿಸಿಕೊಡುವ ಲಿಪಿಕಾರರಿಂದ ರೂವಾರಿಗಳನ್ನು ಪ್ರತ್ಯೇಕಿಸಿಕೊಳ್ಳಲು ಸಾಧ್ಯ ವಾಗುತ್ತದೆ. ಈ ಬಗೆಯ ಪ್ರಯೋಗಗಳಿಗೆ ಹೊರತಾದ ಪ್ರಸಂಗಗಳಲ್ಲಿ ರೂವಾರಿಗಳನ್ನು ಗುರುತಿಸುವಲ್ಲಿ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಈ ಸೂತ್ರಗಳು ಕೇವಲ ಕಂಡರಣಿ ಕಾರರನ್ನು ಸೂಚಿಸುವುದಕ್ಕೆ ಮಾತ್ರ ಸೀಮಿತವಾಗಿರದೆ ವಾಸ್ತುಶಿಲ್ಪಗಳು ಮೂರ್ತಿ ಶಿಲ್ಪಿಗಳು, ಕೆರೆ, ಭಾವಿ, ತೂಬುಗಳನ್ನು ಮಾಡಿದ ಕೆಲಸಗಾರರು ಕಂಬಗಳನ್ನು ಕಡೆದವರು ಗಳನ್ನು ಗುರುತಿಸುವಲ್ಲಿ ಕೂಡ ಅನ್ವಯವಾಗುತ್ತವೆ. ಆದ್ದರಿಂದ ಈ ಎಲ್ಲ ಕೆಲಸ ಗಾರರನ್ನು ಗುರುತಿಸುವಾಗಲೂ ನಾವು ಈ ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ.

ಇವುಗಳಲ್ಲದೇ ದೇವಾಲಯಗಳನ್ನು ಕಟ್ಟಿದ ವಾಸ್ತುರೂವಾರಿಗಳನ್ನು ಹಾಗೂ ವಿಗ್ರಹ ಗಳನ್ನು ಮಾಡಿದ ಮೂರ್ತಿಶಿಲ್ಪಿಗಳನ್ನು ಗುರುತಿಸುವಾಗ ಕೆಲವು ಕ್ಲಿಷ್ಟವಾದ ಸಮಸ್ಯೆಗಳು ತೆಲೆದೋರುತ್ತದೆ. ಅವುಗಳನ್ನು ಗುರುತಿಸುವಾಗ ಸಂಶೋಧಕನಿಗೆ ಹಲವಾರು ವಿಷಯಗಳ ಪರಿಣತಿಯು ಅವಶ್ಯಕವೆನಿಸುತ್ತದೆ.

ದೇವಾಲಯದ ಮುಂದಿರುವ ಅಥವಾ ಆ ದೇವಾಲಯಕ್ಕೆ ಸಂಬಂಧಿಸಿರುವ ಶಾಸನದಲ್ಲಿ ಉಲ್ಲೇಖವಾಗಿರುವ ಓಜ, ಆಚಾರಿ ಅಥವಾ ಅವನ ಹೆಸರಿರುವಾಗ ಈತನೇ ಆ ಶಾಸನೋಕ್ತ ವಾದ ದೇವಾಲಯವನ್ನು ಕಟ್ಟಿದನೋ ಅಥವಾ ಕೇವಲ ಕಂಡರಣಿಕಾರನೋ ಎಂಬ ಸಂಶಯ ಉಂಟಾಗುತ್ತದೆ (ಕುಮಾರಸ್ವಾಮಿ ಕೆ.ಎಸ್., ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು, ಪುಟ ೬).

ಕೆಲವು ಕಡೆ ಗುಡಿಯ ಬರಿಗೋಡೆಯ ಮೇಲೆ (ವಿಗ್ರಹದ ಕೆಳಗಲ್ಲ) ಅಲ್ಲಲ್ಲಿಯೇ ಕೆಲವು ಓಜರುಗಳ ಹೆಸರು ಮಾತ್ರ ಕೆತ್ತಲ್ಪಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ ಈತನೇ ಆ ಗುಡಿಯನ್ನು ಅಥವಾ ಗುಡಿಯ ಭಾಗವನ್ನು ರಚಿಸಿದನು ಎಂಬ ನಿರ್ಣಯಕ್ಕೆ ಬರುವುದು ಕಷ್ಟವಾಗುತ್ತದೆ.

ಮತ್ತೆ ಕೆಲವು ಕಡೆ ಶಿಲ್ಪಿಯು ತಾನು ಪ್ರಸಾದ, ವಿಮಾನಾಧಿಗಳನ್ನು ನಿರ್ಮಿಸುವುದರಲ್ಲಿ ನಿಷ್ಣಾತರೆಂದು ಹೇಳಿಕೊಂಡಿರುತ್ತಾರೆ .ಉದಾ. ಐಹೊಳೆಯ ಹುಚ್ಚಪ್ಪಯ್ಯ ಗುಡಿಯಲ್ಲಿರುವ ಕ್ರಿ.ಶ. ೮ನೆಯ ಶತಮಾನದ ಒಂದು ಶಾಸನದಲ್ಲಿ

ಸ್ವಸ್ತಿ ಜಮ್ಬುದ್ವೀಪಾನ್ತರೇ ಕಶ್ಚಿದೆ
ವಾಸ್ತುಪ್ರಾಸಾದ ತದ್ಗತಃ
ನರಸೊಬ್ಬಸಮೋ ವಿದ್ವಾನ್
ನ ಭೂತೋ ನ ಭವಿಷ್ಯತಿ
(ಅಣ್ಣಿಗೇರಿ ಎ.ಎಂ., ಐಹೊಳೆ ಸಂಸ್ಕೃತಿ ಮತ್ತು ಕಲೆ, ಪುಟ ೧೭೨)

ಎಂದು ಉಲ್ಲೇಖಿಸಿದೆ. ಇದರಿಂದ ಜಂಬೂದ್ವೀಪದಲ್ಲಿ ವಾಸ್ತು ಪ್ರಾಸಾದ ಕಟ್ಟುವುದರಲ್ಲಿ ನರಸೊಬ್ಬನಿಗೆ ಸಮನಾದ ವಿದ್ವಾಂಸರು ಹಿಂದೆ ಆಗಿಲ್ಲ, ಮುಂದೆ ಆಗುವದಿಲ್ಲ ಎಂದಿದ್ದಾರೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಲ್ಲಿರುವ ಶಾಸನವೊಂದರಲ್ಲಿ “ವಿಕ್ರಮಾದಿತ್ಯ ಭಟಾರನು ಮೂರು ಸಾರಿ ಪಲ್ಲವರ ಕಂಚಿಯನ್ನು ಗೆದ್ದ ಬಂದಿದ್ದರ ಸ್ಮರಣಾರ್ಥವಾಗಿ ಕಟ್ಟಿಸಿದ ಲೋಕೇಶ್ವರ ದೇವಾಲಯದ ಸೂತ್ರಧಾರಿ ಸರ್ವಸಿದ್ದಿ ಆಚಾರಿಯನ್ನು

“ಸ್ವಸ್ತಿಶ್ರೀ ಸರ್ವಸಿದ್ದಿ ಆಚಾರಿ ಸಕಲ ಗುಣಾಶ್ರಯ
ಅನೇಕ ರೂಪು ವಾಸ್ತುಪಿತಾಮಹನ್ ಸಕಲ ನಿಷ್ಕಾಲ ಸೂ
ಕ್ಷ್ಮಾತಿಭಾಷಿತನ್ ವಸ್ತುಪ್ರಾಸಾದ ಯೋಗಾಸನ ಸಯಿ
ನ ಮಣಿಮಕುಟ ರತ್ನಾಚೂಡಾಮಣಿ ತೆಂಕಣದಿ
ಶೆಯಾ ಸೂತ್ರದಾರಿ ಎಂದು ಹೇಳಿದೆ.
(ಅಣ್ಣಿಗೇರಿ ಎ.ಎಂ., ಪಟ್ಟದಕಲ್ಲು ಗುಡಿಗಳು, ಪುಟ ೭೮)

ವಿಗ್ರಹಗಳನ್ನು ಬಿಡಿಸಿದ ಮೂರ್ತಿಶಿಲ್ಪಗಳನ್ನು ಗುರುತಿಸುವುದು ಮತ್ತೊಂದು ಜಠಿಲ ವಾದ ಸಮಸ್ಯೆ. ದೇವಸ್ಥಾನದ ಬಳಿ ಅಥವಾ ಹೊರಗೊಡೆಗಳ ಮೇಲೆ, ಕಂಬಗಳ ಮೇಲೆ ಅಥವಾ ದೇವಸ್ಥಾನದ ಆವರಣಗಳಲ್ಲಿ ಬಿಡಿಯಾಗಿ ಬಿದ್ದಿರುವ ಅನೇಕ ಚಿತ್ರಪಟ್ಟಿಕೆಗಳು, ಕುಸುರಿನ ಕೆಲಸಗಳು, ದಿಂಡಿಗಳು ಮೊದಲಾದ ನಾನಾ ರಚನೆಗಳಿರುತ್ತವೆ. ಅವುಗಳ ಪಾದಪೀಠ, ಕಂಬಗಳ ಮೇಲೆ ಒಂದಕ್ಷರದಿಂದ ಹತ್ತಾರು ಅಕ್ಷರಗಳಗಿರುವ ಸಿದ್ಧ ಲೇಬಲ್ ಶಾಸನ ಬರಹಗಳು ಹೆಸರುಗಳೆಂದು ತಿಳಿಯುವುದು ಬಹಳ ಕಷ್ಟದ ಕೆಲಸ. ಇದು ಒಮ್ಮೊಮ್ಮೆ ದಾನಿಗಳ ಹೆಸರಾಗಿರಬಹುದು. ಇನ್ನೂ ಕೆಲವು ಬಾರಿ ಪ್ರವಾಸಿಗರ ಹೆಸರಾಗಿರಬಹುದು. ಆದರೆ ಬಾದಾಮಿಯ ಗುಹಾದೇವಾಲಯಗಳ ಎಡ-ಬಲ ಮತ್ತು ಎದುರಿನ ಬಂಡೆಗಳ ಮೇಲೆ ಕೆತ್ತಿರುವ ಅನೇಕ ಶಿಲ್ಪಿಗಳ ಹೆಸರುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಶ್ರೀನಿವಾಸ ಪಾಡಿಗಾರರವರು ಅವುಗಳಲ್ಲಿ ಬಹಳಷ್ಟು ಹೆಸರುಗಳು ಶಿಲ್ಪಿಗಳ ಹೆಸರುಗಳೆಂದು ತೋರಿಸಿಕೊಟ್ಟಿದ್ದಾರೆ (Craftsmen’s Inscriptions from Badami : Their Significance).

ಬಾದಾಮಿಯ ಮೂರನೆಯ ಗುಹೆಯ ಮಂಜೂರಿನಲ್ಲಿರುವ ಗರುಡ ಶಿಲ್ಪದ ಬಲ ರೆಕ್ಕೆಯ ಮೇಲೆ ‘ನೆಲವಱ್ಕೆ’ ಎಂಬ ಶಿಲ್ಪಿಯ ಹೆಸರಿದೆ. ಈತನು ಪ್ರತಿಭಾನ್ವಿತ ಕಲಾವಿದನೆಂಬು ದಕ್ಕೆ ಆ ಶಿಲ್ಪವೇ ಸಾಕ್ಷಿಯಾಗಿದೆ. ಇದರ ನಂತರದಲ್ಲಿ ಹಲವಾರು ಹೆಸರುಗಳು ಶಿಲ್ಪಗಳ ಪಕ್ಕದಲ್ಲಿ ಕೆಳಗೆ ಇರುವದರಿಂದ ಆ ಶಿಲ್ಪಗಳನ್ನು ಅವರೇ ಮಾಡಿರಬಹುದೆಂದು ಹೇಳಲು ಸಾಧ್ಯವಾಗುತ್ತದೆ. ಉದಾ. ಪಟ್ಟದಕಲ್ಲಿನ ಸಂಗಮೇಶ್ವರ ದೇವಾಲಯದ ಎರಡು ಕಂಬಗಳು ಪಾಕ ಎಂಬ ರೂವಾರಿಯ ರಚನೆಗಳು. ಅಲ್ಲಿಯ ವಿರೂಪಾಕ್ಷ ದೇವಾಲಯದ ಉತ್ತರ ಗೋಡೆಯ ಮೇಲಿರುವ ಶಿವನ ಶಿಲ್ಪವನ್ನು ಪುಲ್ಲಪ್ಪ ಕಂಡರಿಸಿದ್ದಾನೆ. ಅಪಸ್ಮಾರ ಶಿವನ ಶಿಲ್ಪವನ್ನು ರೂಪಿಸಿದವನು ಚೆಂಗಮ್ಮ. ಪಾಪನಾಥ ದೇವಾಲಯದ ಪೂರ‍್ವದ್ವಾರ, ಕಂಬ ಮತ್ತು ದಕ್ಷಿಣ ಗೋಡೆಯ ಕಿಟಕಿಗಳನ್ನು ಬಲದೇವ ನಿರ‍್ಮಿಸಿದನು (ಪತ್ತಾರ ಶೀಲಾಕಾಂತ, ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಪುಟ ೨೨೬).

ಬಂಕನ ಕಟ್ಟೆಯ ಬಂಕೇಶ್ವರ ದೇಗುಲವನ್ನು ಮಾಡಿದ ಎಬೋಜನಿಗೆ ಗದ್ದೆಯನ್ನು ದತ್ತಿ ನೀಡಲಾಗಿದೆ (ಎ.ಕ. VI, ತರೀಕೆರೆ ೬೨, ಕ್ರಿ.ಶ. ೧೧೦೪). ಶಂಕರನಹಳ್ಳಿಯ ಶಿವಾಲಯ ವನ್ನು ಮಾಡಿದವನು ಕಲುಕುಟಿಗ ಜಕ್ಕೋಜನು ತನಗೆ ದೊರೆತ ಹೊನ್ನಿನಲ್ಲಿ ಸಮಭಾಗವನ್ನು ದೇವಾಲಯಕ್ಕೆ ನೀಡಿದ್ದಾನೆ (ಅದೇ V,  ಅರಸೀಕೆರೆ ೫೬, ಕ್ರಿ.ಶ. ೧೧೧೭). ಕಾಗಿನೆಲೆಯ ಕಾಳೇಶ್ವರ ದೇವಾಲಯವನ್ನು ನಿರ್ಮಿಸಿದವನು ರೂವಾರಿ ಸಿಂಗೋಜ (ಎಸ್.ಆಯ್.ಆಯ್. XVIII-೧೧೭, ಕ್ರಿ.ಶ. ೧೧೨೧) ದೇವರ ನಾವಿದಿಗಿಯ ಮಲ್ಲಿಕಾರ್ಜುನ ದೇವಾಲಯವನ್ನು ನಿರ್ಮಾಣ ಮಾಡಿದವನು ಬಿನ್ನಾಣಿ ಚಿಪ್ರೋಅವನಿಗೆ ದೇವಾಲಯದ ಜೀರ್ಣೋದ್ಧಾರದ ಜವಾಬ್ದಾರಿಯನ್ನು ವಹಿಸಿ, ಅದಕ್ಕಾಗಿ ಭೂಮಿ ಮತ್ತು ಮನೆಗಳನ್ನು ದಾನ ನೀಡಲಾಗಿದೆ (ಅದೇ XX-೧೧೧, ಕ್ರಿ.ಶ. ೧೧೪೦).

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ದಕ್ಷಿಣ ಬಾಗಿಲ ತೋರಣವನ್ನು ರೂವಾರಿ ಕಾಳಿದಾಸನೂ, ಪೂರ್ವದ ಬಾಗಿಲವಾಡವನ್ನು ದೇವೋಜನೂ ಮಾಡಿದ್ದಾರೆ. ಹೀಗೆ ಪ್ರತ್ಯೇಕ ವಾಗಿ ಬಿಡಿಗೆಲಸಗಳ ಜವಾಬ್ದಾರಿಯನ್ನು ಮುಖ್ಯ ರೂವಾರಿಯ ಪರವಾಗಿಯೇ ವಹಿಸಿಕೊಳ್ಳ ಲಾಗುತ್ತಿತ್ತು. ಮಲಪರಗಂಡ ಬಿರುದ ರೂವಾರಿ ಗಿರಿವಜ್ರದಂಡ ರೂವಾರಿ ಕಾಳಿದಾಸನು ಮಕರ ತೋರಣವನ್ನು ರೂವಾರಿ ಕೇದಾರೋಜನಿಗಾಗಿ ಮಾಡಿದಂತೆ ಶಾಸನಗಳು ಸೂಚಿಸು ತ್ತವೆ. ರೂವಾರಿ ಕೇದಾರೋಜನು ಬಿಡಿಗುತ್ತಿಗೆದಾರ ಅಥವಾ ಮೇಲ್ವಿಚಾರಕನಾಗಿದ್ದು, ಅಂತಹವರ ಕೈಕೆಳಗೆ ಅನೇಕ ರೂವಾರಿಗಳು ಕೆಲಸ ಮಾಡುತ್ತಿದ್ದರು (ಗೋಪಾಲರಾವ್ ಎಚ್.ಎಸ್., ಕಲ್ಯಾಣ ಚಾಲುಕ್ಯ ದೇವಾಲಯಗಳು, ಪುಟ ೨೪೬). ಇನ್ನೂ ಒಂದು ದೇವಾಲಯವನ್ನು ಒಂದಕ್ಕಿಂತ ಹೆಚ್ಚು ಜನ ಶಿಲ್ಪಿಗಳು ಕೂಡಿ ಮಾಡಿರುವದುಂಟು. ಕಲ್ಲಂಗೆರೆಯ ಗ್ರಾಮೇಶ್ವರ ದೇವರ ದೇವಸ್ಥಾನವನ್ನು ಹಾನೋಜ, ಮಾಳೋಜ ಮತ್ತು ಚೆಂಗೋಜ ಎಂಬ ಮೂರು ರೂವಾರಿಗಳು ನಿರ್ಮಿಸಿದರು (ಎ.ಕ. V, ಅರಸೀಕೆರೆ, ಪು. ೧೧೦, ಕ್ರಿ.ಶ. ೧೧೪೧).

ಇನ್ನೂ ಬಾದಾಮಿಯ ಗುಹಾಲಯಗಳ ಹತ್ತಿರದಲ್ಲಿಯ ಬಂಡೆಗಳ ಮೇಲೆ ಅಲ್ಲಲ್ಲಿ ಸಣ್ಣಗೆರೆಗಳು, ಸಾಲಾಗಿ, ಸಮಾನ ಅಂತರಗಳೊಂದಿಗೆ, ಕೆಲವಡೆ ಭೂಮಿ ಸಮಾನಾಂತರವಾಗಿ, ಕೆಲವೆಡೆ ಲಂಬವಾಗಿ ಕಾಣಿಸಿಕೊಂಡಿವೆ. ಸುಮಾರು ೧ ರಿಂದ ೩ ಸೆಂ.ಮೀ ಉದ್ದದ ಗೆರೆಗಳಿವೆ. ಕೆಲವು ಕಡೆಗಳಲ್ಲಿ ಗೆರೆಯ ಬದಲು ಕೇವಲ ಚಾಣದಿಂದ ಮಾಡಲಾದ ಚುಕ್ಕೆಗಳಿವೆ. ಒಂದೆಡೆ ಇಂಥ ಚುಕ್ಕೆಗಳಿಂದ ಮಾಡಿದ ವರ‍್ತುಲವಿದೆ. ಈ ಚುಕ್ಕೆ ಹಾಗೂ ಗೆರೆಗಳು ಶಿಲ್ಪಗಳು ಕೆಲಸ ಮಾಡಿದ ದಿನಗಳ ಸಂಖ್ಯೆಯನ್ನು ಸೂಚಿಸುತ್ತಿರಬಹುದು. ಶಿಲ್ಪಕಾರ್ಯ ನಡೆದ ಸ್ಥಳದ ಪಕ್ಕದಲ್ಲಿ ಇಲ್ಲವೆ ಎದುರಿನ ಬಂಡೆಗಳ ಮೇಲೆ ಈ ಗೆರೆಗಳಿರುವುದು ಗಮನಾರ್ಹ ಸಂಗತಿ. ಗೆರೆಗಳನ್ನು ಬರೆದು ದಿನಗಳನ್ನು ಏಣಿಕೆ ಮಾಡುವ ಪದ್ಧತಿಯು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ.

ಹೀಗಾಗಿ ಸಂಶೋಧಕರು ಬಹು ಎಚ್ಚರಿಕೆಯಿಂದ ಇವುಗಳನ್ನು ಗುರುತಿಸಿಕೊಳ್ಳ ಬೇಕಾಗಿರುವುದು ಅನಿವಾರ್ಯ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಏಕಾಕ್ಷರ, ದ್ಪೆಯಾಕ್ಷರ ಅಥವಾ ಇನ್ನಿತರ ಅಕ್ಷರ ಜೋಡಣೆ ಮತ್ತು ಬಿಟ್ಟು ಹೋಗುವಿಕೆ, ಬೇರೆ ಬೇರೆ ಲಿಪಿಯಲ್ಲಿರುವ ಹೆಸರುಗಳನ್ನು ಗುರುತಿಸುವಿಕೆಯು ಸಂಶೋಧಕನಿಗೆ ಸಮಸ್ಯೆಯೆ ಆಗುತ್ತದೆ.

ಉದಾಹರಣೆಗೆ ಬಾದಾಮಿಯಲ್ಲಿ ಸಿದ್ಧಮಾತೃಕಾ ಲಿಪಿಯಲ್ಲಿ ಭಾರತಚಂದ್ರ, ಶರಣಚಂದ್ರ ಎಂಬ ಹೆಸರುಗಳು ಇರುವುದರಿಂದ ಇವರು ಉತ್ತರದ ಭಾಗದಿಂದ ಇಲ್ಲಿಗೆ ಬಂದವರಾಗಿರ ಬೇಕು. ಅದರಂತೆ ಮೂರನೆಯ ಗುಹೆಯ ಹತ್ತಿರ ಶಂಖ ಲಿಪಿಯಲ್ಲಿ ಇರುವ ಕೆಲವು ಶಬ್ದ ಗಳು ಶಿಲ್ಪಿಗಳು ಹೆಸರುಗಳಾಗಿರಬಹುದು. ಇವನ್ನು ಓದಲು ಸಾಧ್ಯವಿಲ್ಲ. ಇಂಥ ವಿಭಿನ್ನ ಬಗೆಯ ಲಿಪಿಗಳು ವಿಭಿನ್ನ ಪ್ರದೇಶದ ಕಲಾವಿದರು ಒಂದಡೆ ಸೇರಿ ಕೆಲಸ ನಿರ್ವಹಿಸಿದುದು ಗೊತ್ತಾಗುತ್ತದೆ.

ದೇವಾಲಯದ ನಿರ್ಮಾಣದ ಕೆಲಸವು ಮುಗಿದ ನಂತರ ಆಗಿಂದಾಗ್ಗೆ ಅದರ ಜೀರ್ಣೋ ದ್ಧಾರ ಮತ್ತು ಹೊರಗಿನ ಕೆಲಸಗಳನ್ನು ಮಾಡಿಸಿಕೊಳ್ಳುವ ಓಜರನ್ನು ನೇಮಿಸಿಕೊಳ್ಳ ಲಾಗುತ್ತಿತ್ತು. ಚೌಡದಾನಪುರದ ಶಾಸನವೊಂದು ‘ಕಲು ಹಂದರಾದಿಯಾಗಿ ಹೊಱಥರ ರೇಓಜನ ಕೆಲಸ’ ಎಂದು ಉಲ್ಲೇಖಿಸಿದೆ (ಎಸ್.ಆಯ್.ಆಯ್. XVII ೨೯೯, ಕ್ರಿ.ಶ. ೧೧೯೨).

ದೇವಾಲಯಗಳನ್ನು ಮೂರ್ತಿಶಿಲ್ಪಗಳನ್ನು ಮಾಡಿದ ಶಿಲ್ಪಿಗಳಿಗೆ ಪ್ರತಿಫಲವಾಗಿ ಭೂಮಿ, ಹಣ, ವೃತ್ತಿಗಳು ಮುಂತಾಗಿ ದಾನಗಳು ಲಭ್ಯವಾಗುತ್ತಿದ್ದವು. ಚಿಕ್ಕಬೆಮ್ಮಡಿಯ ಶಾಸನ ವೊಂದು ಬಂಕನ ಕಟ್ಟೆಯ ಬಂಕೇಶ್ವರ ದೇಗುಲವನ್ನು ಮಾಡಿದ ಎಬೋಜನಿಗೆ ಗದ್ದೆಯನ್ನು ದತ್ತಿ ನೀಡಲಾಗಿದೆ (ಎ.ಕ. VI ತರೀಕೆರೆ ೬೨, ಕ್ರಿ.ಶ. ೧೧೦೪). ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕ್ರಿ.ಶ. ೧೦೭೬ರ ವೀರಗಲ್ಲನ್ನು ಜಕ್ಕೋಜ ಮಾಡಿದನು. ಇವನಿಗೆ ಚಿತ್ತಾರದ ಜಕ್ಕ ಎಂದು ಕರೆಯುತ್ತಿದ್ದರೆಂದು ಶಾಸನದಿಂದ ತಿಳಿದುಬರುತ್ತದೆ. ಆ ವೀರಗಲ್ಲನ್ನು  ಮಾಡಿದಕ್ಕಾಗಿ ಅವನಿಗೆ ಸ್ವಲ್ಪ ಭೂಮಿಯನ್ನು ಉಂಬಳಿಯಾಗಿ ನೀಡಿದರೆಂದು ಶಾಸನವು ಉಲ್ಲೇಖಿಸಿದೆ (ಎ.ಕ. VII ಶಿಕಾರಿಪುರ ೫೦, ಕ್ರಿ.ಶ. ೧೦೭೬). ಅಸಂದಿಯ ಸೋಮೋಜನ ಮಗನಾದ ಹರಿಯೋಜನು ಚನ್ನರಾಯ ಪಟ್ಟಣದಲ್ಲಿ ಸಾತೇಶ್ವರ ದೇವಾಲಯ ವನ್ನು ಮಾಡಿ ಎರಡು ತಾಮ್ರ ಶಾಸನಗಳನ್ನು ಕೆತ್ತಿದ ಸಲುವಾಗಿ ಅಲ್ಲಿಯ ಪ್ರಮುಖರು ಸಾತಸಮುದ್ರದ ಕೆಳಗೆ ಗದ್ದೆ ಕೊಟ್ಟುದುದಾಗಿ ತಿಳಿದುಬರುತ್ತದೆ (ಅದೇ. ೧೬೨ ಕ್ರಿ.ಶ. ೧೧೮೧).

ಶಿಲ್ಪಿಗಳು ಶಿಲ್ಪದ ಕೆಲಸವನ್ನು ಮಾಡುವುದರೊಂದಿಗೆ ಶೂರತ್ವದಿಂದ ಹೋರಾಟವನ್ನು ಮಾಡಿದ್ದಾರೆ. ಆಡಳಿತದಲ್ಲಿ ಭಾಗವಹಿಸಿದ್ದಾರೆ. ತಾವು ದಾನಗಳನ್ನು ಸ್ವೀಕರಿಸುವುದರೊಂದಿಗೆ ತಾವು ದಾನಗಳನ್ನು ನೀಡಿದ್ದಾರೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹಿರೇಕಬ್ಬೂರಿನ ಶ್ರೀ ರಾಮೇಶ್ವರ ದೇವಸ್ಥಾನದ ಮುಂದಿರುವ ಶಾಸನದಲ್ಲಿ ಹಿರೇಕಬ್ಬೂರಿನ ಬೊಮ್ಮೋಜನ ಮಗ ಹಳೋಜನು ಗುರುವಾರ ದಿನ ದಾರಿಯಲ್ಲಿ ಕಳ್ಳರೊಂದಿಗೆ ಹೋರಾಡಿ ವೀರಸ್ವರ್ಗವನ್ನು ಪಡೆದನೆಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ (ಎಸ್.ಆಯ್. ಆಯ್ IX (1) ೪೨೦) ಕ್ರಿ.ಶ. ೧೧೩೮ರ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಮತ್ತೂರ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿರುವ ವೀರಗಲ್ಲಿನ ಮೇಲಿರುವ ಶಾಸನದಿಂದ ಕಮ್ಮನವಳ್ಳಿಯ ಜಕ್ಕಿ ಸೆಟ್ಟಿಯು ಊರಿನ ಮೇಲೆ ದಾಳಿ ಮಾಡಿ ಹೆಂಗಸರ ಮಾನ ಹಾನಿ ಮಾಡುತ್ತಿದ್ದ ಸಮಯದಲ್ಲಿ ಕಮ್ಮಾರ ಮಾಚನು ಕೆಲವರನ್ನು ಕೊಂದು ತಾನು ಸತ್ತ ವಿಷಯವನ್ನು ಉಲ್ಲೇಖಿಸುತ್ತದೆ (ಕೆ.ಎ. VI ೨೬, ಕ್ರಿ.ಶ. ೧೧೩೮). ಹೊಯ್ಸಳ ವೀರ ಬಲ್ಲಾಳನ ಕಾಲಕ್ಕೆ ಸೇರಿದ ಹಾಸನ ಜಿಲ್ಲೆಯ ಕೋರಮಂಗಲದ ಶಾಸನದಲ್ಲಿ ಕೋರಮಂಗಲ ಮತ್ತು ದುದ್ದ ಗ್ರಾಮಗಳ ಮಧ್ಯದಲ್ಲಿ ಸೀಮಾ ಸಂಬಂಧಿಸಿದ ಕಾಳಗವಾಗಲು ಬಿಟ್ಟಯೋಜನ ಮಕ್ಕಳಾದ ಬಮ್ಮೋಜ ಮತ್ತು ಮಸಣೋಜರು ಭಾಗವಹಿಸಿ ಹೋರಾಡಿ ಮರಣ ಹೊಂದಲು ಅವರಿಗಾಗಿ ಗೌಡ, ಮಹಾಜನರು ಮತ್ತು ಊರ ಜನರು ಕೂಡಿ ವೀರಗಲ್ಲನ್ನು ಹಾಕಿಸಿರು ವುದನ್ನು ಉಲ್ಲೇಖಿಸುತ್ತದೆ. ಈ ದುದ್ದ ಮತ್ತು ಕೋರಮಂಗಲ ಗ್ರಾಮಗಳು ಇಂದಿಗೂ ಹಾಸನ ಜಿಲ್ಲೆಯಲ್ಲಿದ್ದು ಅಕ್ಕಪಕ್ಕದ ಗ್ರಾಮಗಳಾಗಿವೆ (ಎ.ಕ. V, ಹಾಸನ ೭೦). ಹಾವೇರಿ ತಾಲ್ಲೂಕಿನ ಕೆಂಗೊಂಡದ ಕಾಲೇಶ್ವರ ದೇವಸ್ಥಾನದ ಹತ್ತಿರ ಇರುವ ಕನ್ನರದೇವನ ಕಾಲಕ್ಕೆ ಸೇರಿದ ವೀರಗಲ್ಲಿನ ಪಾಠದಿಂದ ಮನ್ನೆಯ ಜೋವಿದೇವನು ಹಾನಗಲ್ಲಿನ ಮೇಲೆ ಆಕ್ರಮಣ ಮಾಡಿದಾಗ ಕಮ್ಮಾರ ಬೊಂಮ್ಮೋಜನ ಮಗ ಕೆತೋಜನು ಈ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ್ದನ್ನು ತಿಳಿಸುತ್ತದೆ (ಎಸ್.ಆಯ್.ಆಯ್ XVIII, ೨೩೯).

ಸುಮಾರು ೫ನೆಯ ಶತಮಾನಕ್ಕೆ ಸೇರಿದ ಗಂಗದೊರೆ ಅವನೀತನ ಕಾಲದ ತಾಮ್ರಶಾಸನದ ಕೊನೆಯಲ್ಲಿ ಅದನ್ನು ಬರೆದಾತ ಅಪಾಪನು ಬಾಣಾಪುರದ ಅಧಿಪತಿಯಾಗಿದ್ದನೆಂದು (Lord of  Banapura) ಶಾಸನವು ಹೇಳುತ್ತದೆ (ಎಂ.ಎ.ಆರ್. ೧೯೨೪, ಪುಟ ೬೭). ಗಂಗ ಎರಡನೆಯ ಮಾಧವನ ಕಾಲಕ್ಕೆ ಸೇರಿದ ಪೆನುಕೊಂಡ ತಾಮ್ರಶಾಸನದಲ್ಲಿ ಅಪಾಪನು ಅಕ್ಕಸಾಲಿ ಆರ‍್ಯನ ಮಗನೆಂದು ಸ್ವಷ್ಟವಾಗಿ ಹೇಳಿದೆ. ಹೀಗಾಗಿ ಅಪಾಪನು ವಿಶ್ವಕರ್ಮನಾಗಿದ್ದು ಬಾಣಾಪುರದ ದೊರೆಯಾಗಿದ್ದನೆಂದು ಸ್ವಷ್ಟವಾಗುತ್ತದೆ. ಸುವರ್ಣಕಾರಾರ್ಯನ ಪುತ್ರೇಣ ಅಪಪೇನ ಲಿಖಿತೇಯ ತಾಮ್ರ ಪಟ್ಟಿಕಾ (ಎ.ಇ. XIV, ೩೩೧-೪೦). ಕ್ರಿ.ಶ. ೧೧೫೬ರ ಒಂದು ಶಾಸನವು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿರುವ ವಿಶ್ವಕರ್ಮರು ಮಲ್ಲಾಪುರದಲ್ಲಿ ನಿರ್ಮಾಣವಾಗುತ್ತಿದ್ದ ಕೆರೆಯ ಕೆಲಸಕ್ಕಾಗಿ ತಮ್ಮ ಮನೆಯ ಮಣ್ಣನ್ನು ದಾನವಾಗಿ ನೀಡಿದ್ದನ್ನು ಉಲ್ಲೇಖಿಸುತ್ತದೆ. ಬಡಗಿ ಕಮ್ಮಾಱಸ… ಮೂರು ಮನೆಯಮಣ್ನುವುಂ ಕೆಱಯ ಕೆಯ್ಗೆ ಕೊಟ್ಟರು (ಎಸ್.ಆಯ್.ಆಯ್-XX, ಪು. ೨.).

ಹೀಗೆ ಶಿಲ್ಪಿಗಳನ್ನು ಕುರಿತು ಅಧ್ಯಯನ ಮಾಡುವವರು ಅವರು ಬರೀ ಶಿಲ್ಪಿ ಕೆಲಸದಲ್ಲಿ ತೊಡಗಿಕೊಂಡಿದ್ದು ಇನ್ನುಳಿದ ಎಲ್ಲವೂ ಅವರಿಗೆ ಗೌಣವಾಗುತ್ತಿತ್ತು ಎಂಬದಂತಹ ಚಿತ್ರಣ ವನ್ನು ನೀಡುವುದೇ ಹೆಚ್ಚು. ಆದ್ದರಿಂದ ಅವರ ವಿವಿಧ ಮುಖಗಳನ್ನು ಕುರಿತು ಅಧ್ಯಯನ ಮಾಡುವುದು ಕಷ್ಟಕರವಾದ ಕಾರ್ಯವಾದರೂ ಅದಕ್ಕೆ ದಕ್ಕೆಯಾಗದ ರೀತಿಯಲ್ಲಿ ಸಂಶೋಧನೆ ಮಾಡುವುದು ಇಂದಿನ ಪ್ರಥಮ ಕಾರ್ಯವಾಗಿದೆ.

ಗ್ರಂಥಋಣ

೧. Settar S. & G.D. Sontheimer., Memorial Stones. IIAH, Karnataka, Vishwavidhyalaya Dharwad, 1982.

೨. Kelleson Collyer, The Hoysala Artists, Directorate of Archaeology and Museums, Mysore, 1990.

೩. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೮೨.

೪. ಕುಮಾರಸ್ವಾಮಿ ಕೆ.ಎಸ್., ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೯೬.

೫. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನ ಶಿಲ್ಪ, ಕನ್ನಡ ವಿಶ್ವವಿದ್ಯಾಲಯ, ಹಂಪಿ,  ೧೯೯೯.

೬. ಪತ್ತಾರ ಶೀಲಾಕಾಂತ, ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

೭. ಗೋಪಾಲರಾವ್ ಎಚ್.ಎಸ್., ಕಲ್ಯಾಣ ಚಾಲುಕ್ಯ ದೇವಾಲಯಗಳು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ೧೯೯೩.

೮. ಅಣ್ಣಿಗೇರಿ ಎ.ಎಂ., ಪಟ್ಟದಕಲ್ಲು ಗುಡಿಗಳು ಹಾಗೂ ಐಹೊಳೆ ಕಲೆ ಮತ್ತು ಸಂಸ್ಕೃತಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೬೦.

೯. ಈರಣ್ಣ ಕೆ.ಪಿ., ಶಾಸನೋಕ್ತ ವಿಶ್ವಕರ್ಮರ ವೀರಜೀವನ, ಶ್ರೀ ಭುವನೇಶ್ವರ ಸಾಹಿತ್ಯ ಪ್ರಕಾಶನ, ಶಿರಹಟ್ಟಿ, ೧೯೯೩.

೧೦. ಕಲಬುರ್ಗಿ ಎಂ.ಎಂ., ಶಾಸನ ವ್ಯಾಸಂಗ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ ೧೯೭೪.

೧೧. ಎಪಿಗ್ರಾಫಿಯಾ ಇಂಡಿಕಾ, ಸಂ. VI, VII, XIV.

೧೨. ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಶನ್ಸ್, ಸಂ. IX, XX

೧೩. ಮೈಸೂರು ಆರ್ಕಿಯಾಲಾಜಿಕಲ್ ರಿಪೋರ್ಟ್, ೧೯೨೪.