ವಿಸ್ತಾರಗೊಳ್ಳುತ್ತಿರುವ ಇತಿಹಾಸ ಅಧ್ಯಯನ ಅರ್ಥವ್ಯಾಪ್ತಿಯಿಂದ ನಾವು ಪ್ರಾದೇಶಿಕ ಅಧ್ಯಯನಕ್ಕೆ ಒತ್ತುಕೊಡುವ ಅವಶ್ಯವಿದೆ. ಕೊಪ್ಪಳ ಜಿಲ್ಲೆಗೆ ಸೀಮಿತವಾಗಿಟ್ಟು ಕೊಂಡು ಈ ಅಧ್ಯಯನ ಮಾಡಲಾಗಿದೆ. ಜೆ.ಎಫ್. ಫ್ಲೀಟರು ಉತ್ತರ ಕರ್ನಾಟಕದ ರಾಜಮನೆತನಗಳ ಇತಿಹಾಸವನ್ನು ಕುರಿತು; ಚೆನ್ನಕ್ಕ ಎಲಿಗಾರರವರು ಕರ್ನಾಟಕದ ಶಾಸನಗಳಲ್ಲಿ ಸ್ತ್ರೀ ಸಮಾಜ; ಬಿ.ಆರ್. ಹಿರೇಮಠರವರು ಕರ್ನಾಟಕದ ಶಾಸನಗಳಲ್ಲಿ ವರ್ತಕರು; ಡಿ.ವಿ. ಪರಮಶಿವ ಮೂರ್ತಿಯವರ ಕನ್ನಡ ಶಾಸನ ಶಿಲ್ಪ; ಎಂ. ಚಿದಾನಂದಮೂರ್ತಿಯವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ; ಜಿ.ಎಂ. ನಾಗಯ್ಯನವರ ವಿಕ್ರಮಾದಿತ್ಯನ ಶಾಸನಗಳು; ಎಂ.ಎಂ. ಕಲಬುರ್ಗಿಯವರ ಶಾಸನ ವ್ಯಾಸಂಗ, ಶಾಸನಗಳಲ್ಲಿ ಶಿವಶರಣರು, ಕನ್ನಡ ವಿಶ್ವವಿದ್ಯಾಲಯ ದಿಂದ ಸಂಪಾದಿಸಿರುವ ಶಾಸನ ಸಂಪುಟಗಳು; ದೇವರಕೊಂಡಾರೆಡ್ಡಿ ಮತ್ತು ಇತರರು, ಲಕ್ಷ್ಮಣ್ ತೆಲಗಾವಿ, ಎಸ್. ಶೆಟ್ಟರು, ಎಸ್. ರಾಜಶೇಖರ, ಶ್ರೀನಿವಾಸ ರಿತ್ತಿ, ಶ್ರೀನಿವಾಸ ಪಾಡಿಗಾರ, ರಘುನಾಥ ಭಟ್, ಕೆ.ಜಿ. ಭಟ್‌ಸೂರಿ, ಜಿ.ಎಸ್. ದೀಕ್ಷಿತ್, ಐ.ಕೆ. ಪತ್ತಾರ, ಸಿ.ಎಸ್. ಪಾಟೀಲರು, ಪಿ.ಬಿ. ದೇಸಾಯಿ, ಬಸವರಾಜ ಕಲ್ಗುಡಿ, ಎಸ್.ಕೆ. ರಾಮಚಂದ್ರ ರಾವ್, ಶೇಷಶಾಸ್ತ್ರಿ ಆರ್. ಮುಂತಾದ ವಿದ್ವಾಂಸರು ನಾಡಿನ ಶಾಸನಗಳ ಕುರಿತಾಗಿ, ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ಶಿಕ್ಷಣ ವ್ಯಾಪ್ತಿ, ಶಿಲ್ಪಕಲೆಯ ಸಾಂಸ್ಕೃತಿಕ ಜೀವನವನ್ನು ಚಿತ್ರಿಸಿದ್ದಾರೆ. ಇವುಗಳಲ್ಲಿ ಕೆಲವು  ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು, ಇತಿಹಾಸವನ್ನು, ಸಾಮಾಜಿಕ ಸ್ಥಿತಿಗತಿಗಳನ್ನು ಕುರಿತಾಗಿ ನಿರೂಪಿಸಿವೆ. ತುಲನಾತ್ಮಕವಾಗಿ ಗಮನಿಸಿದಾಗ ಪ್ರಾದೇಶಿಕವಾಗಿ ಅಲ್ಲಿಯ ಶಾಸನಗಳನ್ನು ವಿಮರ್ಶಿಸಿ ಅದರೊಂದಿಗೆ ಆ ಪ್ರದೇಶದಲ್ಲಿ ವಾಸಿಸುವ ಜನರ ಜೀವನದ ರೀತಿ-ನೀತಿ ಸಂಪ್ರದಾಯ ಆಚಾರ-ವಿಚಾರ ಚಿತ್ರಿಸಲ್ಪಡುವ ಪ್ರಯತ್ನ ಹೆಚ್ಚು ಸಮರ್ಪಕವಾಗಿ ನಡೆದಿಲ್ಲ. ಆದ್ದರಿಂದ, ಇಂದಿನ ನಮ್ಮ ಸಂಶೋಧಕರು ಒಂದೊಂದು ಪ್ರದೇಶಕ್ಕೆ ಸೀಮಿತವಾಗಿರಿಸಿಕೊಂಡು ಪ್ರತಿ ಯೊಂದು ಹಳ್ಳಿಗಳನ್ನು ಸುತ್ತಾಡಿ ಅಲ್ಲಿಯ ಶಾಸನಗಳನ್ನು, ವೀರಗಲ್ಲು, ಮಾಸ್ತಿಗಲ್ಲು, ಮೂರ್ತಿಶಿಲ್ಪ ದೇವಾಲಯಗಳನ್ನು, ಶಿಲಾಯುಗದ ಕಾಲದ ನಾಗರಿಕತೆಯ ನೆಲೆಗಳನ್ನು, ಗುರುತಿಸಿ ಅಧ್ಯಯನಿಸುವ ಅವಶ್ಯಕತೆ ಇದೆ.

ಜನಪದರ ಜ್ಞಾನ ತಿಳುವಳಿಕೆ ದೇಶಿಯತೆ ನೆಲೆಗಟ್ಟಿನ ಮೇಲೆ ನಮ್ಮ ಸಂಸ್ಕೃತಿ ನಿರ್ಮಾಣ ವಾಗಿದೆ. ಜನಾಂಗಗಳಲ್ಲಿನ ಸಂಪ್ರದಾಯಗಳು ಎಲ್ಲಾ ದೇಶಗಳಲ್ಲಿರುವುದಲ್ಲದೆ ಅವುಗಳಲ್ಲಿ ಜನಾಂಗದ ಸಂಸ್ಕೃತಿಯ ಮೇಲೆ ಪ್ರತಿಬಿಂಬಿತವಾಗಿದೆ. ಈ ಸಂಪ್ರದಾಯಗಳು ಜನರೂಢಿ ಯಲ್ಲಿರುವ ವಿಶಿಷ್ಟವಾದ ಆಚರಣೆ ಎಂದು ಹೇಳಬಹುದು. ಅದು ಇಂದು ಹುಟ್ಟಿ ಇಂದೇ ಜನಾಂಗದಲ್ಲಿ ಬೆಳೆದು ಬಂದಿಲ್ಲ. ಅದಕ್ಕೆ ದೊಡ್ಡ ಪರಂಪರೆಯಿದ್ದು ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಇಂದಿನ ಶಿಕ್ಷಣದ ಅರ್ಥವಂತಿಕೆಗೆ ಸಂಸ್ಕೃತಿ, ಕಾರಣವಾಗಿದ್ದು ಆ ಸಂಸ್ಕೃತಿಯ ಚಲನಶೀಲತೆಯ ಶಿಕ್ಷಣ ರೂಪಿತವಾಗಬೇಕಾದರೆ ನಾಲ್ಕು ಗೋಡೆಗಳ ಜ್ಞಾನ ಪರಿಕಲ್ಪನೆಯನ್ನು ಕೆಡವಿ ನಮ್ಮ ಗ್ರಾಮೀಣ ಜನಪದರ ಪ್ರಾದೇಶಿಕ ಚರಿತ್ರೆಯ ಜ್ಞಾನ ತಿಳುವಳಿಕೆಯ ದೇಶಿಯತೆಯ ಬಯಲು ಆಲಯ ಕಟ್ಟಬೇಕಾಗಿದೆ.

ಸಾಮಾನ್ಯವಾಗಿ ಶಾಸನಗಳ ಅಧ್ಯಯನದಿಂದ ಮುಖ್ಯ ವಿಷಯಗಳು ಎರಡು ರೀತಿ ಯಲ್ಲಿವೆ. ಒಂದು ಮತ-ಧರ್ಮ ಪ್ರಭುತ್ವದ ಸಂಸ್ಕೃತಿ ಮತ್ತೊಂದು ರಾಜಸತ್ತೆಯ ಪ್ರಭುತ್ವದ ಆಡಳಿತ, ಇವುಗಳಲ್ಲಿ ರಾಜ್ಯಸತ್ತೆ ಅತೀ ಹೆಚ್ಚು ಮಹತ್ವ ಪಡೆದುಕೊಂಡಿದೆ. ನಮ್ಮ ಸಮಾಜ ದಲ್ಲಿ ಆರ್ಥಿಕ ಅಸಮಾನತೆ ರಾಜಸತ್ತೆಯ ಪ್ರಭುತ್ವದಿಂದಾಗಿದ್ದರೆ, ಮತ-ಧರ್ಮಗಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ಚಾತುವರ್ಣ ಪದ್ಧತಿಯನ್ನು ಬಳಕೆಗೆ ತಂದ ಸಂಪ್ರದಾಯಸ್ಥರಿಂದ ಸಾಮಾಜಿಕ-ಸಾಂಸ್ಕೃತಿಕ ಅಸಮಾನತೆ ಉಂಟಾಗಿದೆ. ಇಲ್ಲಿಯ ಚಾತುವರ್ಣ ಸಾಮಾಜಿಕ ವ್ಯವಸ್ಥೆ ರಚನೆಯಾಗಲು ಇರುವ ಹಿಂದಿನ ವ್ಯವಸ್ಥೆಗೆ ಆರ್ಥಿಕ ಪರಿಸ್ಥಿತಿ ಮೂಲವಾಗಿದೆ. ಅದರ ಮೇಲೆ ಸಾಮಾಜಿಕ ಸ್ಥಿರತೆ ನಿಂತಿದೆ. ಕಾಡು ಬೀಡಾಗಿ, ನಾಡಾಗಿ ಮಾನವನು ಮನೆಕಟ್ಟಿಕೊಂಡು ಇರಹತ್ತಿದ ಮೇಲೆ ಅವನಿಗೆ ಅರಿಕೆಯಾಗಿ ಕಾಡುಸ್ಥಿತಿ ಜೀವನ ಬಿಟ್ಟು ಒಂದೆಡೆ ಉಳಿದುಕೊಳ್ಳುವದನ್ನು ಅರಿತನು. ಕೃಷಿ ಕರ್ಮವು ಮೂಲವೆಂಬ ದೊಡ್ಡ ತತ್ವವನ್ನು ತಿಳಿದು ತನ್ನ ಪ್ರಗತಿಯ ಹಾದಿಯನ್ನು ಕಂಡುಕೊಂಡು ಒಕ್ಕಲುತನವನ್ನು ಮುಖ್ಯ ಬೇಸಾಯವನ್ನಾಗಿ ಮಾಡಿಕೊಂಡನು. ಈ ಒಕ್ಕಲುತನ ಕಲಿತ ಮಾನವ ಕಾಲಮಾನಕ್ಕೆ ತಕ್ಕಂತೆ ಅನೇಕ ಸಂಪ್ರದಾಯಗಳನ್ನು ಆಚರಿಸುತ್ತ ಬಂದಿದ್ದಾನೆ. ಆ ಆಚರಣೆಗಳೇ ಕರ್ನಾಟಕ ದಲ್ಲಿ ಶತ ಶತಮಾನಗಳಲ್ಲಿ ಬದಲಾಗುತ್ತ ಬಂದು ಮುಂದೆ ೧೨ನೆಯ ಶತಮಾನದ ಶಿವ ಶರಣರ ಕಾಲಕ್ಕೆ ವಿಶಿಷ್ಟ ರೂಪಗಳನ್ನು ತಾಳಿ ಈಗಲೂ ಬಳಕೆಯಲ್ಲಿವೆ.

ಚಿಂತನೆ, ವಿಮರ್ಶೆ, ಹೊಸ ಹೊಸ ವಿಷಯಗಳ ಹುಡುಕಾಟ, ಆಳವಾದ ಸಂಶೋಧನೆ, ಪ್ರತಿಯೊಂದನ್ನು ತಿಳಿಯುವ ಕುತೂಹಲ, ಅವುಗಳಿಗೆ ಒಂದು ರೂಪ ಕೊಟ್ಟು ಚರಿತ್ರೆ ರಚಿಸುವುದು, ಇತಿಹಾಸ ಸಂಶೋಧಕನ ಮೇಲೆ ಇರುವ ಜವಾಬ್ದಾರಿ. ಚರಿತ್ರೆ ರಚನೆಗೆ ದಾಖಲೆಗಳ ಕೊರತೆ ಇಲ್ಲವಾದರೂ ಆತಂಕ, ಅಡೆತಡೆಗಳು ಹಲವಾರು ಇವೆ. ವಿಸ್ತಾರ ಭೂಭಾಗ ಹೊಂದಿದ ಕರ್ನಾಟಕಕ್ಕೆ ಎರಡು ಸಾವಿರಕ್ಕಿಂತ ಹೆಚ್ಚಿನ ಕಾಲದ ಪರಂಪರೆಯಿದೆ. ಇಲ್ಲಿ ಸಾಮ್ರಾಜ್ಯ ಕಟ್ಟಿ ಆಡಳಿತ ನಡೆಸಿದ ಸಾತವಾಹನರು, ಕದಂಬರು, ಗಂಗರು, ಚಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ವಿಜಯನಗರದ ಅರಸರು, ಅನೇಕ ಮಾಂಡಲೀಕ ಅರಸೊತ್ತಿಗೆಗಳು ಇವೆ. ಅಂದು ಆಡಳಿತ ನಡೆಸಲು ಸುಲಭವಾಗಲಿ ಎಂಬ ಉದ್ದೇಶದಿಂದ ರಾಜ್ಯವನ್ನು ಚಿಕ್ಕ-ದೊಡ್ಡ ವಿಭಾಗ ಉಪವಿಭಾಗ ಗಳನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದರು. ಮಧ್ಯಕಾಲೀನ ಕರ್ನಾಟಕದ ಜನರ ನಡೆನುಡಿ ಗಳು, ಗುಡಿ-ಗುಂಡಾರಗಳು, ಮಠ ಛತ್ರಗಳು-ಮೂರ್ತಿ ಮೊದಲಿಂದ ಅಲ್ಲಲ್ಲಿ ದೃಷ್ಟಿಗೆ ಬೀಳುವ ಅವಶೇಷಗಳು ಯಾರ ಕಾಲದಲ್ಲಿ ಹೇಗೆ ಅಸ್ತಿತ್ವದಲ್ಲಿ ಬಂದವು ಎಂಬ ಅಂಶಗಳನ್ನು ಅರಿಯಲಿಕ್ಕೆ ಪ್ರತಿಯೊಬ್ಬರಿಗೂ ಕುತೂಹಲವಿರುತ್ತದೆ. ಈ ಉತ್ಸುಕತೆಯನ್ನು ಶಾಂತ ಗೊಳಿಸಲಿಕ್ಕೆ ತಕ್ಕ ಸಾಧನಗಳು ಕಲ್ಲು ಮತ್ತು ಧಾತುಮಯ ಹಲಗೆಗಳ ಮೇಲೆ ಬರೆದಿಟ್ಟ ಶಾಸನಗಳಾಗಿವೆ. ಹಾರಿಕೆಯ ಚರಿತ್ರೆ ರಚನೆಗೆ ಸತ್ಯ ಸಂಗತಿಗಳನ್ನು ತಿಳಿಯಲು ಶಾಸನಗಳು, ವಿಶ್ವಾಸನೀಯ ಪ್ರಬಲ ಪ್ರಮಾಣಗಳಾಗಿವೆ.

ಕೊಪ್ಪಳ ಜಿಲ್ಲೆಯ ಚರಿತ್ರೆಯು ಕ್ರಿ.ಶ.ಪೂ. ೩ನೆಯ ಶತಮಾನದಿಂದ ವಿಜಯನಗರದ ಅಂದರೆ ೧೬ನೆಯ ಶತಕದ ಕೊನೆಯವರೆಗೆ ಅವಿಚ್ಛಿನ್ನವಾಗಿ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ದಿಕ, ಶೈಕ್ಷಣಿಕ ಮೊದಲಾದ ವಿವಿಧ ಅಂಗಗಳಲ್ಲಿ, ವೃತ್ತಗಳಿಂದ ತುಂಬಿ ರುವುದು ಪ್ರಾದೇಶಿಕ ಶಾಸನಗಳ ಅಧ್ಯಯನದಿಂದ ನಮಗೆ ತಿಳಿದು ಬರುತ್ತಿದೆ. ಈ ವ್ಯವಸ್ಥೆ ನಾಡಿನ ಚರಿತ್ರೆಯ ರಚನೆಗೆ ಭಿನ್ನವಾಗಿಲ್ಲವೆಂದು ಹೇಳಬಹುದಾಗಿದೆ. ಕ್ರಿ.ಶ. ೧೬ನೆಯ ಶತಕದ ಬಳಿಕ ಶಾಸನ ಯುಗ ಮುಗಿದು ‘ದಸ್ತಾವೇಜುಗಳ’ ಯುಗವು ಬಂದಿದ್ದರಿಂದ ಇತ್ತೀಚಿನ, ಅಂದರೆ ೨೦೦-೩೦೦ ವರ್ಷಗಳ ಇತಿಹಾಸ ಕಾಗದ ಪತ್ರಗಳ ಮೇಲೆ ಅವಲಂಬಿಸಿದೆ.

ಕೊಪ್ಪಳ ಜಿಲ್ಲೆಯ ಪ್ರಾದೇಶಿಕತೆಯಲ್ಲಿ ಬರುವ ಕ್ರಿ.ಶ. ೯೯೭ರ ಹಿರೇಮನ್ನಾಪೂರ ಶಾಸನವು ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಚಾರಿತ್ರಿಕ ಅಂಶವನ್ನು ತಿಳಿಸುತ್ತದೆ. ಕಲ್ಯಾಣ ಚಾಲುಕ್ಯರ ಅರಸ ಸತ್ಯಾಶ್ರಯನಿಗೆ ಇಲ್ಲಿಯವರೆಗೆ ಮಕ್ಕಳೆ ಇರಲಿಲ್ಲವೆಂದು ನಂಬಿದ್ದರು, ಆದರೆ ಈ ಶಾಸನ ತೈಲನರೇಂದ್ರ ಆತನ ಮಗ ಸತ್ಯಾಶ್ರಯವಲ್ಲಭ ಈತನ ಮಗ ವಿಕ್ರಮಾದಿತ್ಯದೇವ ಎಂದು ಚಿಕ್ಕವಂಶಾವಳಿಯನ್ನು ನೀಡುತ್ತದೆ. ಇಲ್ಲಿ ವಿಕ್ರಮಾದಿತ್ಯ ಸತ್ಯಾಶ್ರಯನ ಮಗನೆಂದು ಹೇಳಿ ಜಯಸಿಂಹನು ಯಾರ ಮಗನೆಂದು ಹೇಳದೆ ಅವನು ಇಲ್ಲಿ ರಾಜ್ಯವಾಳುತ್ತಿದ್ದನೆಂದು ಹೇಳುತ್ತದೆ. ಕೂಕ್ಕನೂರಿನ ಕ್ರಿ.ಶ. ೧೦೦೫ರ ಶಾಸನವು ಸತ್ಯಾಶ್ರಯನಿಗೆ ವಿಕ್ರಮಾದಿತ್ಯನ ಜೊತೆಗೆ ಅಯ್ಯಣ ಮತ್ತು ಜಯಸಿಂಹರೆಂಬ ಮಕ್ಕಳಿದ್ದ ರೆಂದು ಮತ್ತಷ್ಟು ಚರ್ಚೆಗೆ ಗ್ರಾಸ ಒದಗಿಸಿಕೊಟ್ಟಿದೆ. ಸೋಮೇಶ್ವರನ ಮಗ ಜಗದೇಕಮಲ್ಲ ಸಹ ಆಳ್ವಿಕೆ ಮಾಡಿ ಅವನು ಕುಂತಳ ವಿಷಯದ ಮೇಲೆ ರಾಜ್ಯಭಾರ ಮಾಡುತ್ತಿದ್ದನು. ಇರಿವ ಬೆಡಂಗನ ಕಾಲದ ಕ್ರಿ.ಶ. ೧೦೦೫ರ ಶಾಸನ ಅದು ಜಗದೇಕಮಲ್ಲನು ಕುಂತಳದ ಮೇಲೆ ರಾಜ್ಯಭಾರ ಮಾಡುತ್ತಿದ್ದನೆಂದು ಉಲ್ಲೇಖಿಸುತ್ತದೆ. ಬಹುಶಃ ಇರಿವ ಬೆಡಂಗನ ಕಾಲದಲ್ಲಿ ಹಾಕಿಸಿರುವ ಶಾಸನವನ್ನು ಜಗದೇಕಮಲ್ಲ ಕುಂತಳದ ಮೇಲೆ ರಾಜ್ಯಭಾರ ಮಾಡುವಾಗ ಮತ್ತೊಮ್ಮೆ ಹಾಕಿಸಿದ ಸಾಧ್ಯತೆ ಇದೆ. ಅದೇನೆ ಇದ್ದರೂ ಸತ್ಯಾಶ್ರಯನಿಗೆ ಮಕ್ಕಳಿರದೆ ಇದ್ದುದರಿಂದ ಸತ್ಯಾಶ್ರಯನ ಸಹೋದರ ದಶವರ್ಮನ ಮಗ ವಿಕ್ರಮಾದಿತ್ಯ ಸತ್ಯಾಶ್ರಯನ ನಂತರ ಸಿಂಹಾಸನಕ್ಕೆ ಬಂದಿದ್ದನ್ನೆನ್ನುವ ಅಸತ್ಯವನ್ನು, ಈ ಶಾಸನ ತೊಡೆದು ಹಾಕಿ ಸತ್ಯಾಶ್ರಯನಿಗೆ ವಿಕ್ರಮನೆಂಬ ಮಗನಿದ್ದನೆಂಬ ವಿಷಯ ತಿಳಿಸುವ ಮಹತ್ವದ ದಾಖಲೆ ಯಾಗಿ ಕಾಣಿಸಿಕೊಳ್ಳುತ್ತದೆ. ಕೊಪ್ಪಳದಲ್ಲಿರುವ ಗವಿಮg ಮತ್ತು ಪಾಲ್ಕಿಗೊಂಡು ಶಾಸನಗಳು ಅಶೋಕನು ಈ ಭಾಗದಲ್ಲಿ ಆಳಿದನೆಂದು ತಿಳಿಸುತ್ತಾ ಅಲ್ಲಿಯ ಪ್ರಾದೇಶಿಕ ಚರಿತ್ರೆಯ ಮೇಲೆ ಹೊಸ ಬೆಳಕನ್ನು ಚೆಲ್ಲುವುದರೊಂದಿಗೆ ಪ್ರಜೆಗಳು ಆಚರಿಸಬೇಕಾದ ಧರ್ಮದ ಕುರಿತು ತಿಳಿಸುತ್ತವೆ. ನಂದರು, ಮೌರ್ಯರು ಮೊದಲಗೊಂಡು ಸಾತವಾಹನರು, ಬನವಾಸಿ ಕದಂಬರು, ಬಾದಾಮಿ ಚಲುಕ್ಯರು, ಗಂಗರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಸೇವುಣರೂ ಹೊಯ್ಸಳರು ಯರಂಬರಿಗೆ ಸಿಂಧರು, ನೊಳಂಬರು, ಮಹಾ ಮಂಡಳೇಶ್ವರರು ಈ ಪ್ರದೇಶವನ್ನು ಆಳಿದರೆಂದು ಪ್ರಾದೇಶಿಕ ಶಾಸನಗಳು ಉಲ್ಲೇಖಿಸುತ್ತವೆ. ಅವುಗಳು ಕೇವಲ ರಾಜಕೀಯ ಚರಿತ್ರೆಯಲ್ಲದೆ ಜೈನ, ಬೌದ್ಧ, ಶೈವ, ವೈಷ್ಣವ, ಮುಂತಾದ ಧರ್ಮ ಪಂಗಡಗಳ ಇತಿಹಾಸ, ಸಮಾಜದ ಚಿತ್ರಣ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯ ಐತಿಹಾಸಿಕತೆಯ ಕುರಿತಾಗಿ ಬಹುಮುಖವಾಗಿ ವಿವರಿಸಿವೆ.

ಕೊಪ್ಪಳವು ಕರ್ನಾಟಕದಲ್ಲಿ ಜೈನ ಧರ್ಮದ ಪಂಗಡಗಳ ಚರಿತ್ರೆಗೆ ವಿಫುಲವಾದ ಆಕರಗಳನ್ನು ಒದಗಿಸಿದೆ. ದಕ್ಷಿಣ ಭಾರತದ ಇತಿಹಾಸದಲ್ಲಿ ಶ್ರವಣಬೆಳಗೊಳದಂತೆ ಜೈನರಿಗೆ ಕೊಪ್ಪಳ ಧಾರ್ಮಿಕ ಮುಖ್ಯ ಕೇಂದ್ರ ಸ್ಥಳಗಳಾಗಿತ್ತೆಂಬ ಅನೇಕ ಚಾರಿತ್ರಿಕ ಘಟನೆಗಳನ್ನು ಇಲ್ಲಿ ದೊರೆತ ೧೦೦ಕ್ಕಿಂತ ಹೆಚ್ಚು ಶಾಸನಗಳಿಂದ ತಿಳಿಯಲು ಸಾಧ್ಯವಾಗಿದೆ. ಅಶೋಕನ ಬೌದ್ಧ ಧರ್ಮದ ಕುರಿತಾಗಿ ತಿಳಿಸುವ ಪಾಲ್ಕಿಗೊಂಡು ಮತ್ತು ಗವಿಮಠ ಶಾಸನಗಳಿಗೆ ಪೂರಕವಾಗಿ, ಅಂದು ಬೌದ್ಧಯಾತ್ರಿಕನಾಗಿ ಬಂದ ಹುಯೇನ್‌ತ್ಸಾಂಗನು ಕೊಪ್ಪಳವನ್ನು ‘ಕೊಂಕಿನಪುಲೋ’ ಎಂದು ಉಲ್ಲೇಖಿಸಿದ್ದಾನೆ. ವೈಷ್ಣವ ಧರ್ಮದ ಕುರಿತಾಗಿ ಅಷ್ಟೊಂದು ವಿವರವಾದ ಮಾಹಿತಿಯನ್ನು ಇಲ್ಲಿಯ ಶಾಸನಗಳು ನೀಡದೆ ಇದ್ದರೂ ಆ ಧರ್ಮ ಈ ಭಾಗದಲ್ಲಿತ್ತೆಂಬುದಕ್ಕೆ ಶಾಸನಗಳು, ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿವೆ. ಅದಕ್ಕೆ ಪೂರಕವಾಗಿ ಇಲ್ಲಿನ ವೈಷ್ಣವ ದೇವಾಲಯ ಮೂರ್ತಿಶಿಲ್ಪಗಳು ಈ ಪ್ರದೇಶದಲ್ಲಿ ಕಂಡು ಬರುವವು. ಶೈವ ಧರ್ಮದ ಕುರಿತಾಗಿ ಹೇಳುವುದಾದರೆ ಇಲ್ಲಿಯ ಶಾಸನಗಳು ನಾಡಿನ ಚರಿತ್ರೆ ಯನ್ನು ಕಟ್ಟಿಕೊಡುವಲ್ಲಿ ತುಂಬಾ ಸಹಾಯಕವಾಗಿವೆ. ಕೂಕ್ಕನೂರು, ಅಳವಂಡಿ, ಕಲ್ಲೂರು, ಯರಂಬರಗಿ, ಪುಲಗೇರಿ, ಆನೆಗೊಂದಿ, ಪುರ, ಇಟಗಿ, ಬಳಗೇರಿ, ತಳಕಲ್ಲು, ವಿಪ್ರ, ಹುಲಗಿ, ಗೋತಗಿ, ಚಳಗೇರಿ, ಅಂಟೂರಠಾಣ, ಹಿರೇಜಂತಕಲ್ಲ ಸಂಕನೂರು, ಮುಧೋಳ, ಮಾದಿನೂರು, ಮುಂತಾದ ಗ್ರಾಮದ ಶಾಸನಗಳು ಈ ಭಾಗದಲ್ಲಿ ಶೈವ ಮತ್ತು ವೀರಶೈವ ಧರ್ಮ ಬೆಳೆದು ಅಲ್ಲಿಯ ಜನರ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತೆಂದು  ಉಲ್ಲೇಖಿಸುತ್ತವೆ.

ಜೈನಧರ್ಮದವರು ಮತ್ತು ಇತರ ಜನಾಂಗದವರು ವರ್ತಕರು, ರಾಜರು, ರಾಣಿಯರು, ಅಧಿಕಾರಿಗಳು ಸಹ ಶೈವಧರ್ಮವನ್ನು ಸ್ವೀಕರಿಸಿ ಅದರ ಸಿದ್ಧಾಂತವನ್ನು ಒಪ್ಪಿ ಅನೇಕ ಶೈವ ದೇವಾಲಯಗಳನ್ನು ಈ ಪ್ರದೇಶದಲ್ಲಿ ಕಟ್ಟಿರುವುದನ್ನು ಗಮನಿಸಿದರೆ ಜನರ ಮೇಲೆ ಅವು ಬೀರಿದ ಪ್ರಭಾವವನ್ನು ನಾವು ಗುರುತಿಸಬಹುದು. ಕುಕ್ಕನೂರಿನ ನವಮಠದ ಆಚಾರ್ಯ ಪಟ್ಟವನ್ನು ಪಡೆದ ಆಚಾರ್ಯರು, ಯರಂಬರವಿಯ ಮೂಲಸ್ಥಾನದ ಸಿಂಗೇಶ್ವರ ಸಿಂಧರಾಜ ಪೆರ್ಮಾಡಿಗೂ ಅವರ ಮಂಡಳೇಶ್ವರ ಚಾವುಂಡನಿಗೂ, ಗುರುವಾಗಿದ್ದ ಕಳೇಶ್ವರ ಮುನಿಯ ಶೈವ ಸಿದ್ಧಾಂತವನ್ನು ಒಪ್ಪಿಕೊಂಡನೆಂದಿದೆ. ಈ ಮುಂಚೆ ಈತ ಜೈನಮುನಿಯಾಗಿದ್ದಂತೆ ತಿಳಿದುಬರುವುದು, ಸಾಹಿತ್ಯದಲ್ಲಿ ವರ್ಣನೆ ಬರುವ ‘ಗಿರಿಜಾಕಲ್ಯಾಣ ಮದುವೆಯ’ ಪ್ರಸಂಗ ವನ್ನು ಆನೆಗೊಂದಿ ಶಾಸನವು ಕಾವ್ಯಾತ್ಮಕವಾಗಿ ವರ್ಣಿಸುತ್ತದೆ.  ಆ ಪ್ರದೇಶದಲ್ಲಿ ಹರಿಯುವ ನದಿ, ಪರ್ವತ, ತೀರ್ಥಕ್ಷೇತ್ರ, ಗಿಡಮರಗಳು, ವಿವಿಧ ಜಾತಿಯ ಹೂವುಗಳು, ಹಣ್ಣುಗಳು, ಅಲ್ಲಿ ಆಡಿ, ನಲಿಯುವ ಹಂಸಗಳು, ನವಿಲು, ಹುಲಿ, ಕರಡಿ, ಚಿರತೆ, ಸಿಂಹ ಮುಂತಾದ ಪ್ರಾಣಿ ಪಕ್ಷಿಗಳ ಪರಿಚಯ ಮತ್ತು ಶೈವ ಧರ್ಮದ ಕುರಿತಾಗಿ ತಿಳಿಸುವುದು, ಹರಿಹರ-ರಾಘವಾಂಕರ ಕಾರ್ಯಕ್ಷೇತ್ರ ಹಂಪೆಯಾಗಿದ್ದು, ಅಲ್ಲಿದ್ದ ಶರಣರು ಕಲಚೂರಿ ಸಾಮ್ರಾಜ್ಯದ ಅವನತಿಯ ಬಳಿಕ ‘ಉಳವಿ, ಶ್ರೀಶೈಲಕ್ಕೆ’ ಹೊದರೆಂದು ಮತ್ತು ಕುರಗೋಡಿನ ಸಿಂಧರು ಇವರಿಗೆ ಆಶ್ರಯ ನೀಡಿದ್ದಾಗಿ ಶಾಸನಗಳಿಂದ ತಿಳಿದುಬರುವುದು. ದೇವಾಲಯ-ಬಸದಿಗಳ ನಿರ್ಮಾಣ, ಮಹಾಜನರ ಆಡಳಿತ, ಕಾಳಾಮುಖ ಯತಿಗಳು ಸ್ಥಾನಿಕರಾಗಿದ್ದ ವಿಷಯ, ಅಗ್ರಹಾರ-ಬ್ರಹ್ಮಪುರಿ, ಘಟಿಕಾಸ್ಥಾನಗಳು ಸಾಕಷ್ಟು ಪ್ರಮಾಣದಲ್ಲಿ ಈ ಭಾಗದಲ್ಲಿ ಬೆಳೆದು ಶೈವ ಧರ್ಮದ ಬೆಳವಣಿಗೆಗೆ ಕಾರಣವಾಗಿರಲು ಸಾಕು.

ಕೊಪ್ಪಳ ಜಿಲ್ಲೆಯ ಪ್ರಾದೇಶಿಕ ಶಾಸನವೊಂದರ ಸುಳಿವನ್ನು ಆರಿಸಿ ಹೋದಾಗ “ಕಣ್ಣಿದ್ದ ವರು ಕನಕಗಿರಿಯನ್ನು ನೋಡಬೇಕೆಂಬ” ನಾಣ್ನುಡಿ ಈ ಭಾಗದ ಜನರಲ್ಲಿ ಕಂಡುಬಂದರೆ ಅದು ‘ಪುರ’ ಎಂಬ ಗ್ರಾಮಕ್ಕೂ ಅನ್ವಯಿಸುವುದೆಂಬ ಸತ್ಯ ಸಂಗತಿ ಇಲ್ಲಿನ ೧೫೪೭ರ ಶಾಸನ ಉಲ್ಲೇಖಿಸಿದೆ. ತೇದಿ ಇಲ್ಲದ ಇನ್ನೊಂದು ಶಾಸನ ಸೋಮೇಶ್ವರ ದೇವಾಲಯ ದಲ್ಲಿರುವ ಕೋಟಿಲಿಂಗಗಳನ್ನು ಪ್ರಸ್ತಾಪಿಸುತ್ತಾ, “ಸೌರಾಷ್ಟ್ರ ಸೋಮನಾಥ ದೇವನು ಓಹಿಲನಿಗೆ “ಹುಲಿಯ ಹೆಕ್ಕು ದೇಗುಲವ ಮಾಡು’ ಸರಿಗೆಯ ಹೆಕ್ಕು ಕೆರೆಯನು ಗಳಿಸು, ಬಾಗಿಲಿಲ್ಲದ ಕೋಟೆ ಕಟ್ಟಿಸು, ಈ ಓಹಿಲನು ಮಾಡಿಸಿದ ಕೋಟಿಲಿಂಗಕ್ಕೆ ತ್ರಿಕಾಲ ಮಜ್ಜನಕ್ಕೆ ಎರೆದಾತನೆ ಮೂರಕಾಲ ಮಂಚದ ಮೇಲೆ ಒರಗುವ ಪೆಳಿದವನೊರಗಿದಡೆ ಪ್ರತ್ಯಾಯವೆಂದು” ಉಲ್ಲೇಖಿಸುತ್ತದೆ. ಅಲ್ಲಿ ಸ್ಥಾಪಿಸಲ್ಪಟ್ಟ ಸಾವಿರಾರು ಲಿಂಗಗಳು, ೩ ಕಾಲಿನ ಕಲ್ಲಿನ ಮಂಚ, ರಾವಣನು ತಲೆಯ ಮೇಲೆ ಹೊತ್ತೊಯ್ಯುವ ಲಿಂಗ, ಆನೆಯ ತಲೆಯ ಮೇಲೆ ಇರುವ ಲಿಂಗ ಇತ್ಯಾದಿ ವಿಚಿತ್ರವಾದ ಶಿಲ್ಪಗಳು, ಬೆಡರ ಕಣ್ಣಪ್ಪನು ಬೇಟೆಯಾಡಿ ಶಿವನಿಗೆ ಮಾಂಸ ಅರ್ಪಿಸುವ ಶಿಲ್ಪದಲ್ಲಿ ಚಿತ್ರಿಸಿದೆ. ವಚನಕಾರರು ಸಾರಿದಂತೆ ಕಲ್ಲು ಕೋಳಿಯಾಗಿ ಕೂಗುವುದು ಮುಲ್ಲಾ ಬಂದು ಚೂರಿ ಹಾಕುವುದು ಇತ್ಯಾದಿ ದೃಶ್ಯಗಳುಳ್ಳ ಭಿನ್ನ ಭಿನ್ನವಾದ ಅನೇಕ ಶಿಲ್ಪ ಗಳಿವೆ. ಇವೆಲ್ಲ ಕರ್ನಾಟಕದ ಇತಿಹಾಸ ಅಧ್ಯಯನದಲ್ಲಿ ಹೊಸ ಚರಿತ್ರೆಯನ್ನೇ ನಿರ್ಮಿಸಲು ಸಹಕಾರಿಯಾಗಿವೆ.

ಈ ಭಾಗದ ಇನ್ನೊಂದು ಮಹತ್ವದ ಸಂಗತಿಯೆಂದರೆ ಇಟಗಿ ಗ್ರಾಮವು ಕರ್ನಾಟಕದ ಇತಿಹಾಸದ ವಾಸ್ತುಶಿಲ್ಪಕತೆಯಲ್ಲಿ ಪ್ರಸಿದ್ಧವಾಗಿದೆ. “ಹೂವು ಅರಳಿದಂತೆ ಕಲ್ಲರಳಿ ಕಲೆಯಾದ ಬಗ್ಗೆ” ವಿಸ್ಮಯವನ್ನುಂಟು ಮಾಡುವ ಚಾಲುಕ್ಯರ ಶೈಲಿಯ ಮಹಾದೇವ ದೇವಾಲಯ ಇಲ್ಲಿದೆ. ಶಾಸನದಲ್ಲಿ ಇದನ್ನು “ದೇವಾಲಯಗಳ ಚಕ್ರವರ್ತಿ” ಎಂದಿದ್ದು ಹೆನ್ರಿಕಜಿನ್ಸ್‌ರು ಸಹ ಇದನ್ನು ಮೆಚ್ಚಿ ಕರ್ನಾಟಕದ ‘ಎರಡನೇ ಹಳೆಬೀಡು’ ಎಂದಿದ್ದಾರೆ. ಈ ಗ್ರಾಮ ಮೂಲತಃ ಅಗ್ರಹಾರವಾಗಿತ್ತು. ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ತಾನದಂತ ಶಿಕ್ಷಣ ಕೇಂದ್ರಗಳ ಮತ್ತು ಕೇಂದ್ರಗಳ ಕುರಿತಾಗಿ, ದಾನದತ್ತಿ, ಸಾಂಸ್ಕೃತಿಕ ವಿಷಯಗಳು ಶಾಸನಗಳಿಂದ ತಿಳಿದುಬರುತ್ತದೆ.

ಈ ಪ್ರದೇಶದಲ್ಲಿ ಬರುವ ಮತ್ತೊಂದು ಗ್ರಾಮ ಕುಕ್ಕನೂರು. ಅಗ್ರಹಾರ, ಮಠ ಬ್ರಹ್ಮ ಪುರಿ, ಘಟಿಕಾಸ್ಥಾನಗಳು ಇಲ್ಲಿದ್ದುದರಿಂದ, ಎಲ್ಲಾ ರೀತಿಯ ವಿದ್ಯಾಭ್ಯಾಸಗಳು ಸರಾಗವಾಗಿ ನಡೆಯುತ್ತಿದ್ದವು. ಕೂಕ್ಕನೂರು – (೩೦) ಮೂವತ್ತು ಕುಂತಳ ದೇಶದ ಬೆಳ್ವೊಲದ ನಾಡಿನ ೩೦ ಗ್ರಾಮಕ್ಕೆ ಆಡಳಿತ ಕೇಂದ್ರವಾಗಿತ್ತು. ಭದ್ರಬೂಮಿರ ಕವಿ, ವೀರನಂದಿಮುನೀಂದ್ರ, ಮಲ್ಲಕವಿ, ವಿರೇಶ ಮೂರ್ಧನಿಕವಿ, ಸಜ್ಜನ ತಿಲಕ, ಕವಿಕಂದರ್ಪ, ಗೋಮಕವಿ, ಪಂಡಿತ ಲಕ್ಷ್ಮೀಧರ ಕವಿ, ರೋಣದ ಛಾವೋಜ, ಸೇನಭೋವ, ಕವಿ ವಿಶ್ವಾಮಿತ್ರ, ಮೈದುನ ಮಾದಿಯ ಹೆಗ್ಗಡೆ, ಕಣಗನ ಮುದ್ದಣಾಚಾರ್ಯ, ರಾಮೋಜಶ್ರೀ ಹೀಗೆ ಒಟ್ಟು ೧೮ ಶಾಸನ ಕವಿಗಳ ಅಪಾರ ಮಾಹಿತಿಯನ್ನು ಈ ಜಿಲ್ಲೆಯ ಶಾಸನಗಳಿಂದ ತಿಳಿಯಬಹುದು.

ಕೊಪ್ಪಳ ಜಿಲ್ಲೆಯ ಐತಿಹಾಸಿಕ ಆಡಳಿತ ವಿಭಾಗಗಳಾದ ಎಡದೊರೆ ಇಚ್ಚಾಸಿರ; ಕರಡಿ ಕಲ್ಲೂ ಮುನ್ನೂರು; ಬೆಳ್ವಲ-ಮುನ್ನೂರು; ಕುಕ್ಕನೂರು-ಮೂವತ್ತು; ನರೆಗಲ್-ಹನ್ನೆರಡು; ಕಿಸುಕಾಡು-ಎಪ್ಪತ್ತು; ಮಾಸವಾಡಿ-ನೂರನಲ್ವತ್ತು; ಎಕ್ಕಲವಾಡ-ಹದಿನಾಲ್ಕು; ಕೆಳವಾಡಿ-ಮೂನ್ನೂರು; ಬೆಣ್ಣೆಕಲ್ಲು-ಸೀಮೆ, ಬಗ್ಗೆ ಮತ್ತು ರಾಜಧಾನಿ-ಪಟ್ಟಣಗಳು, ನೆಲೆವೀಡುಗಳ ಕುರಿತಾಗಿ ಅಂಟೂರಠಾಣಾ, ಹನುಮದಾಳ, ಚಳಗೇರಿ, ಮನ್ನಾಪೂರು, ತಾವರಗೇರಿ, ಪುರ, ಕುಷ್ಟಗಿ, ಇಟಗಿ, ಗಂಗಾವತಿ, ವಿಪ್ರ, ಕೂಕ್ಕನೂರು, ಕಲ್ಲೂರು, ಯಲಬುರ್ಗಿ, ಹಲಗೇರಿ, ಮಾದಿಗನೂರು, ಕೊಪ್ಪಳ, ಉಪ್ಪಿನಬೆಟಗೇರಿ, ಅಳವಂಡಿ ಕವಲೂರು, ಬಳಗೇರಿಯಲ್ಲಿನ ಶಾಸನಗಳು ಆ ಭಾಗದ ಪ್ರಾಚೀನ ಆಡಳಿತ ವಿಭಾಗಗಳ ಮತ್ತು ಅಲ್ಲಿಯ ಆಡಳಿತ ವ್ಯವಸ್ಥೆಯ ಪರಿಚಯವನ್ನೊದಗಿಸುತ್ತವೆ.

ಭೌಗೋಳಿಕ ಜ್ಞಾನ, ನಮಗೆ ಸಿಗುವಂತಾಗಬೇಕಾದರೆ ಅಲ್ಲಿಯ ಮಣ್ಣು ಗಾಳಿ, ಚಳಿ, ಮಳೆ, ಹಳ್ಳ-ನದಿ-ಕಾಡು-ಬೆಟ್ಟ-ಹವಾಮಾನ, ಬೆಳೆಯುವ ಬೆಳೆ, ಸಸ್ಯ ಸಂಪತ್ತು, ಆ ಪರಿಸರ ದಲ್ಲಿರುವ ಕಾಡು ಪ್ರಾಣಿ, ವ್ಯವಸಾಯ, ವ್ಯಾಪಾರ ಪದ್ಧತಿ, ಇತ್ಯಾದಿಗಳು ಇತಿಹಾಸ ಕಾಲಘಟ್ಟ ದಲ್ಲಿ ಬೆಳೆದು ಬಂದ ಬಗೆ ಇದೆಲ್ಲಾ ಯಾವ ಆಧಾರದಿಂದ ರೂಪಗೊಂಡಿತ್ತೆಂದು ತಿಳಿಯಬೇಕಾದರೆ ಅಲ್ಲಿಯ ಪ್ರಾಗೈತಿಹಾಸಿಕ ಚರಿತ್ರೆಯನ್ನಷ್ಟಲ್ಲದೇ ಶಾಸನಗಳನ್ನು ಸಹ ಗಮನಿಸಬೇಕಾಗುತ್ತದೆ.

ಸಂಶೋಧಕರು ಇಂತಹ ಸಾಮಾಜಿಕ ಸ್ಥಿರತೆ, ಆರ್ಥಿಕ ಪರಿಸ್ಥಿತಿ, ಧಾರ್ಮಿಕ ಐತಿಹಾಸಿಕತೆಯ ಆಳವನ್ನು ಹುಡುಕುವಲ್ಲಿ “ಪ್ರಾದೇಶಿಕತೆಯ ಶಾಸನಗಳ ಜೊತೆಗೆ ಇತಿಹಾಸ ಪೂರ್ವಕಾಲದ ಚರಿತ್ರೆಯನ್ನು” ಅಭ್ಯಸಿಸಿದರೆ ಕರ್ನಾಟಕ ಇತಿಹಾಸ ಚರಿತ್ರೆಯ ರಚನೆಯಲ್ಲಿ ಹೊಸ ಆಯಾಮವನ್ನು ಪ್ರಾರಂಭಿಸಬಹುದಾಗಿದೆ. ಕಾಡು, ನದಿ, ಬೆಟ್ಟ, ಸಮುದ್ರ, ಗಿರಿ-ಪರ್ವತ, ಗಾಳಿ, ಋತು, ಪ್ರಾಣಿ, ಸಸ್ಯವರ್ಗ ಮುಂತಾದವುಗಳ ಕುರಿತು ಶಾಸನಗಳಲ್ಲಿ ಗುರುತಿಸುವುದು ಮುಖ್ಯವೆನಿಸುತ್ತದೆ. ಆದ್ದರಿಂದ “ಪ್ರಾದೇಶಿಕತೆಯ ಶಾಸನಗಳ ಅಧ್ಯಯನ ಸಂಶೋಧನೆಯಲ್ಲಿ” ಪ್ರಾದೇಶಿಕತೆಯ ಪ್ರಕೃತಿಯ ಅಧ್ಯಯನವೂ ಸಹ ಮಹತ್ವವನ್ನು ಪಡೆದುಕೊಳ್ಳುತ್ತವೆ.

ಅಳವಂಡಿ ಶಾಸನದಲ್ಲಿ

“ಭರತ ಮಮಧುರುಚಿರ ಕುಂತಳ ದಂದಿನಿಪ್ಪಾ ಆ ಕುಂತಳೋ
ರ್ವರೆಯ ವಿಭೂಷಾಕೃತಿಯೊಳೊಪ್ಪುವದೆಕ್ಕಲವಾಡ ಮಹಿ
ಗುರುಕಚದಗ್ರಹಾರ ಮೆನೆ ರಂಜಿಸುಗುಂಶ್ರೀತ್ನ ಮಳವಿಂಡಿ
ಇನಶಸೆ ರೂಸ್ಮೆಯಂ ನುಸುಳಲೀಯದ ನಾಗಲತಾ ವಿತಾನಿನಂದನ
ತಮವಂ ಘನಾಗಮನೊಡುರ್ಚುತಿರ್ಪನವಿಲೋತ್ತೊಡ ಗುಡ್ಡದ ||
ಜರಾಗದಿಂ ನೆರೆವ ದಂಪತಿ ದಿವ್ಯವನಾಂತರಾಳದೊಳ್‌ಹರವಾದ
ತುಂಗಾಭದ್ರಾನೀರವಳೆಸ್ನಾನ ಪುತಗಾತ್ರ ದ್ದುರ್ಗಿಚಿರಂಧರೆಯೊಳೆಂದು”

ತುಂಗಾನದಿಯ ಸ್ನಾನ, ಅಲ್ಲಿರುವ ನವಿಲುಗಳು, ಹಂಸಗಳು, ಇತ್ಯಾದಿ ವಸಂತಮಾಸದ ಪ್ರಾದೇಶಿಕತೆಯ ನಿಸರ್ಗದ ವರ್ಣನೆ ನೀಡಿದೆ. ಮಾದಿನೂರಿನ ಶಾಸನವೊಂದು “ಕಿಕ್ಕಿರಿದು ಪಾಲ್ದುಂಬಿದ ಕಳಮೆಗಳು ತೆನೆಗಳು ಕೊರಳ್ಬಾಗಿಸಿ ಕೊರಗಿಸದೆ ಪೊರೆದೆ ಧರೆಗೆ ನಮಸ್ಕರಿಸುವ ಪಾಲ್ದುಂಬಿದ ತೆನೆಗಳ ಪಾಲನ್ನುಣ್ಣಲು ಗಗನದಿಂದಿಳಿದು ಪಾಲ್ದೆನೆಗೆಯುವ ಗಿಳಿವಿಂಡಗಳನ್ನು ‘ಸೋ’ ಎಂದು ಅವುಗಳನ್ನು ಪಾಮರಿಯರು ಹಾರಿಸುತ್ತಿದ್ದರೆಂದಿದೆ. ಅಲ್ಲಿಯ ಕಬ್ಬನ್ನು ಕಡಿದು ಗಾಣಕ್ಕೆ ಹಾಕಿ ಬೆಲ್ಲವನ್ನು ತೆಗೆಯುವುದು, ಬಿಳಿಜೋಳ, ಕಡಲೆ, ಗೋಧಿ ಎರೆಯ ಸೀರಿ ನಲಿಯುತ್ತಿತ್ತು, ವಿವಿಧ ಹೂವುಗಳು ಅರಳಿದ ಹೂದೋಟದಲ್ಲಿ ದುಂಬಿಗಳು ಝೆಂಕರಿ ಸುತ್ತಿದ್ದುದಾಗಿ ವರ್ಣನೆ ಮಾಡಲಾಗಿದೆ. ಅದೇ ರೀತಿ ಕೂಕ್ಕನೂರಿನ ಶಾಸನವೊಂದು

“ಸೊಗಯಿಸುಗುಂ ಸಾರ ನಾಲ್ವತ್ತೆಂಟು ಕೇರಿಗಳಿರೆ ಬಳಸಿ
ಬೆಳೆದ ಬಾಳೆಯ ಬನದಿಂ ನಾರಂಗದ ತನಿವಣ್ಣಳಿನೋರೆಂತಿರೆ
ಕೂಕ್ಕನೂರು ಕಣ್ಣೆಸದಿಕ್ಕೂ || ಮನೋಹರವಾಗಿ ಈ ಭೂಭಾಗದೊಳು

ಫಲವುಂ, ಮಂಟಪದಿಂ, ದೇಗುಲದಿಂದಾಪುಣ್ಯವಿಧಿಯಂ” ಎಂದು ಆ ಪ್ರದೇಶದ ಸೊಬಗನ್ನು ವರ್ಣಿಸುತ್ತದೆ. ಕ್ರಿ.ಶ. ೧೧ನೇ ಶತಮಾನದ ಇಟಗಿ ಶಾಸನ “ಸಪ್ತದ್ವೀಪ ಜಂಭುದ್ವೀಪ”, ಅದರಲ್ಲಿಯ ಭಾರತ ದೇಶ ಅದಕ್ಕೆ ನಾಲ್ಕು ದಿಕ್ಕಿನ ಸಮುದ್ರ ಪರ್ವತ, ಸಾಗರ, ಗಂಗಾ, ಸಿಂಧು, ಜಾಹ್ನವಿ, ನದಿಗಳುಳ್ಳ ಈ ದೇಶದಲ್ಲಿ ಬೆಳ್ವಲನಾಡು-ಪಂಪಾಸ್ಥಳ, ಅದರ ಸುತ್ತಮುತ್ತಲಿನ ಚಿನ್ನರಡಿ, ಚಿಂಕಲಿ, ಕೊಳನೂರು, ನವಲಗುಂದ, ಮುಳಗುಂದ, ಹುನಗುಂದ, ನರೆಗಲ್ಲ, ಕೂಕ್ಕನೂರು, ಇಟಗಿ, ಇವೆಲ್ಲವುಗಳು ‘ಧರಾಂಗನೆಗೆತಿಲಕ’, ಹಾಲು ಸಮುದ್ರ, ಕನಕಾದ್ರಿ, ವಿಬುಧ ಜನತಾಣ, ಅನಂತಭೋಗ ಭಾಗ್ಯಗಳ ತವರು; ಹೂಬಳ್ಳಿ ಗಳಿಂದ, ಹೂದೋಟಗಳಿಂದ ನಂದನವಾಗಿ ನವಿಲುಗಳು ನರ್ತಿಸುತ್ತಿದ್ದವು. ಹಂಸಗಳು ನಡೆದಾಡುತ್ತಿದ್ದವು. ಪಕ್ಕದಲ್ಲಿಯೇ ನದಿ, ಹಳ್ಳಗಳು ಹರಿದು ಜೇಂಕರಿಸುತ್ತಿದ್ದವೆಂದು ಅಲ್ಲಿಯ ನಿಸರ್ಗ ಪ್ರಾಣಿ, ಪಕ್ಷಿ, ಹೂಬಳ್ಳಿ ನದಿ-ಪರ್ವತಗಳ ಬಗ್ಗೆ ಈ ಪ್ರಾದೇಶಿಕ ಶಾಸನಗಳು ಪರಿಚಯಿಸುತ್ತವೆ. ಆಯಾ ಪ್ರದೇಶದಲ್ಲಿಯ ದೇವಾಲಯದಲ್ಲಿರುವ ಉಬ್ಬುಶಿಲ್ಪಗಳು-ರಾಮಾಯಣ-ಮಹಾಭಾರತದಂತಹ ಪೌರಾಣಿಕ, ನೀತಿಕಥೆಯ ಸನ್ನಿವೇಶಗಳನ್ನು ಯುದ್ಧಕ್ಕೆ ಹೊರಟ ಸೈನಿಕರು, ಆನೆ, ಹಂಸ, ಸಿಂಹ, ಹೂವು-ಬಳ್ಳಿಗಳ ಸಾಲು-ಸಾಲು ನಿರೂಪಣೆ ಆ ಪ್ರದೇಶದಲ್ಲಿ ಕಂಡುಬರುವ ವೀರಗಲ್ಲು-ಮಾಸ್ತಿಕಲ್ಲಿನ ಸಹಾಯದಿಂದ ಅವರಲ್ಲಿಯ ಧಾರ್ಮಿಕ ಭಾವನೆ ಸ್ವರ್ಗ ನರಕಗಳ ಕಲ್ಪನೆ ಇತ್ಯಾದಿ ಮೌಖಿಕ ಚಿತ್ರ, ಪೂರ್ವಿಕರು ಸಮಾಜ ದಲ್ಲಿ ನಡೆದ ಘಟನೆಯನ್ನು ವಾಸ್ತವಕ್ಕೆ ಹತ್ತಿರವಾಗಿ ಈ ಶಾಸನ ಶಿಲ್ಪಗಳು ದಾಖಲಿಸಿದೆ. ಜಿಲ್ಲೆಯ ಪ್ರಾದೇಶಿಕ ಶಾಸನಗಳ ಅಧ್ಯಯನದಿಂದಲೂ ಇಂತಹ ವಿಷಯಗಳನ್ನು ತಿಳಿಯ ಬಹುದು. ಡಿ.ವಿ. ಪರಮಶಿವಮೂರ್ತಿಯವರ “ಕನ್ನಡ ಶಾಸನ ಶಿಲ್ಪ”  ಗ್ರಂಥ, ಪ್ರಾದೇಶಿಕ ಜನರ ಸಂಸ್ಕೃತಿಯನ್ನು ಬಿಂಬಿಸಿದೆ. ಶಾಸನ ಶಿಲ್ಪಗಳಲ್ಲಿ ಕಂಡುಬರುವ ಚಿಹ್ನೆಗಳು ಸಾಂಕೇತಿಕ ನಿರೂಪಣೆ, ಕಲೆಗಾರಿಕೆ, ಶಾಸನಗಳಲ್ಲಿಯ ಉನ್ನತಮಟ್ಟದ ಕಾವ್ಯಭಾಗಗಳು, ಶಬ್ದಗಳು ಭಾಷೆಯ ಬಳಕೆ, ಇತ್ಯಾದಿ. ಆ ಕಾಲದ ಕರ್ನಾಟಕ ಅರಸು ಮನೆತನಗಳ ಕೊಡುಗೆ ಅಪಾರ ವಾಗಿದೆ. ಹೀಗೆ ಗಮನೀಯ ಅಂಶಗಳನ್ನು ತಿಳಿಯಲು “ಪ್ರಾದೇಶಿಕ ಶಾಸನಗಳ ಅಧ್ಯಯನ ಕಾರ್ಯ’ ಮಹತ್ವವೆನಿಸುತ್ತವೆ.

ಶಾಸನಗಳು ಮೇಲೆ ಧರ್ಮ, ಸಂಸ್ಕೃತಿಗಳ ಪ್ರಭಾವ ಬೀರಿರುವುದರಿಂದ ಆ ಮೂಲಕ ಸಾಮಾಜಿಕ, ಧಾರ್ಮಿಕ, ರಾಜಕೀಯ ಸ್ಥಿತಿಗತಿ ಅಲ್ಲಿ ಪ್ರತಿನಿಧಿಸುವುದರಿಂದ, ಶಾಸನ ಹಾಕಿಸುವ ಪದ್ಧತಿ ಹೇಗೆ ರಾಜಾಜ್ಞೆಯೆಂಬ ಅರ್ಥದಿಂದ ವಿಮುಕ್ತಿ ಹೊಂದಿ ವಿಶಾಲಾರ್ಥ ಪಡೆದು ಕೊಂಡಿತೋ ಹಾಗೆಯೇ ಶಾಸನ ಹಾಕಿಸುವ ಪದ್ಧತಿ ಕಾಲಕಳೆದಂತೆ ಸಂಕೇತವಾಗಿ ಬೆಳೆದು ಬಂದಿರಲು ಸಾಕು. ಬರವಣಿಗೆಯ ಮೂಲಕ ಹೇಳಲಾಗದ ಅನೇಕ ವಿಷಯಗಳನ್ನು  ಶಿಲ್ಪ ಮಾಧ್ಯಮದಿಂದ ಹೇಳಲು ಪ್ರಾರಂಭಿಸಿರಬೇಕು ಆ ಹಿನ್ನೆಲೆಯಲ್ಲಿ ಪ್ರಾದೇಶಿಕ ಶಾಸನ ಶಿಲ್ಪಗಳ ಅಧ್ಯಯನವು ಸಹ ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ಹೀಗೆ ಕೊಪ್ಪಳ ವಿಶಿಷ್ಟವಾದ ಪ್ರಾಕ್ ಚರಿತ್ರೆ ಮತ್ತು ಇತಿಹಾಸ ಕಾಲದ ಚರಿತ್ರೆ ಇರುವ ಜಿಲ್ಲೆಯಾಗಿದೆ. ಹನುಮಸಾಗರ ಅತಿಪುರಾತನ ನೆಲೆಯಾಗಿದ್ದರೆ ಚಿಕ್ಕ ಮತ್ತು ಹಿರೇಬೆನಕಲ್ಲು ತಾವರಗೇರೆ ಈ ಭಾಗದ ಬೃಹತ್ ಶಿಲಾಯುಗದ ಗೋರಿಗಳ ಶ್ರೀಮಂತ ನೆಲೆಗಳಾಗಿದ್ದವು. ಪರ, ಇಟಗಿ, ಕೂಕನೂರು ವಾಸ್ತುಶಿಲ್ಪ ಕಲೆಗೆ ಹೆಸರಾಗಿದೆ. ಕೊಪ್ಪಳ ಬೃಹತ್ ಶಿಲಾಯುಗದ ಗೋರಿಗಳ ತಾಣದೊಂದಿಗೆ ಜೈನರ ಐತಿಹಾಸಿಕ ಕೇಂದ್ರವೂ ಕೂಡ ಹೌದು.

ಮೌರ‍್ಯವಂಶದ ಸಾಮ್ರಾಟ ಅಶೋಕನು ಬ್ರಾಹ್ಮೀ ಲಿಪಿಯ ಪ್ರಾಕೃತ ಭಾಷೆಯ ಎರಡು ಶಾಸನಗಳನ್ನು ತನ್ನ ಸಾಮ್ರಾಜ್ಯದ ಗಡಿಯಾದ ಕೊಪ್ಪಳದಲ್ಲಿ ಬರೆಯಿಸಿದನು. ಅಶೋಕನು ತಾನು ಧರ್ಮಿಷ್ಟನಾಗಿದ್ದುದಲ್ಲದೆ, ತನ್ನ ನಾಡಿನ ಸಮಸ್ತ ಜನರು ಶಾಂತಪ್ರಿಯರು ಧರ್ಮಿಷ್ಟರೂ, ಸುಸಂಸ್ಕೃತರು ಆಗಬೇಕೆಂಬ ಕಳಕಳಿಹೊಂದಿದ್ದನೆಂಬುದನ್ನು ದಕ್ಷಿಣ ಭಾರತದ ಆತನ ಸಾಮ್ರಾಜ್ಯದ ಗಡಿಯಲ್ಲಿ ದೊರೆತ ಶಾಸನಗಳು ದೃಢಪಡಿಸುತ್ತವೆ.

ದಾನಶಾಸನ, ವೀರಗಲ್ಲು, ಸತಿಗಲ್ಲು, ನಿಷಿಧಿಗಲ್ಲು ತಾಮ್ರಪಟ ಶಾಸನ, ಆಡಳಿತಾತ್ಮಕ ಘೋಷಣೆಗಳನ್ನು ತಿಳಿಸುವ ಶಾಸನಗಳು ನಮಗೆ ನೀಡುವ ಐತಿಹಾಸಿಕ ವಿವರಗಳನ್ನು ನೋಡಿದಾಗ, ಶಾಸನಗಳು ಗತಕಾಲದ ಚಿತ್ರಗಳನ್ನು ನಮ್ಮ ಮುಂದಿಡುತ್ತವೆ. ಆದರೆ ಹಿಂದಿನ ಕಾಲದ ನಮ್ಮ ಜನರ ಜೀವನ, ಭಾವನೆ, ನಂಬಿಕೆಗಳು, ಧಾರ್ಮಿಕ ಚಟುವಟಿಕೆಗಳು, ದೊರೆಗಳ ಆಡಳಿತದ ರೀತಿ, ಕಾಳಗಗಳು ಅಂದಿನ ಭಾಷೆಯ ವಿವಿಧ ಮುಖಗಳು ನಮ್ಮ ಪ್ರದೇಶದ ಜನರ ಚರಿತ್ರೆ. ಸಂಸ್ಕೃತಿಗಳಿಗೆ ಕನ್ನಡಿ ಹಿಡಿಯುವ ಎಷ್ಟೋ ಶಾಸನಗಳು ಜನರ ನಿರ್ಲಕ್ಷ ದಿಂದಾಗಿ ಮೂಢನಂಬಿಕೆಯಿಂದಾಗಿ ಹಾಳಾಗಿವೆ, ಹಾಳಾಗುತ್ತಲಿವೆ. ಅವುಗಳನ್ನು ರಕ್ಷಣೆ ಮಾಡುವ ಅವಶ್ಯಕತೆ ಇದೆ. ಇತಿಹಾಸ, ಧಾರ್ಮಿಕ, ಸಾಮಾಜಿಕ ಸ್ಥಿತಿಗತಿ, ಭಾಷೆಯ ವಿವಿಧ ಅವಸ್ಥೆಗಳ ವಿಕಾಸದ ಜೊತೆಗೆ ಸಂಸ್ಕೃತಿಯ ವಿಶೇಷಗಳ ಅಧ್ಯಯನ ಮಾಡಬೇಕಾಗಿರುವುದು ಅತ್ಯವಶ್ಯ.

ಆಕರಗ್ರಂಥಗಳು

೧.       ಡಾ. ದೇವರಕೊಂಡಾರೆಡ್ಡಿ (ಸಂ) ಮತ್ತು ಸಂಗಡಿಗರು, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೨, ಕೊಪ್ಪಳ ಜಿಲ್ಲೆ ಶಾಸನಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಡಾ. ಎಲ್. ನರಸಿಂಹಾಚಾರ‍್ಯ ಬಿ.ಎ., “ಕರ್ನಾಟಕ ಸಾಹಿತ್ಯದಲ್ಲಿ ಪ್ರಕೃತಿಯ ವರ್ಣನೆ”, ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ-೧೩, ಸಂಚಿಕೆ-೩, ಅಕ್ಟೋಬರ್ ೧೯೨೮.

೩. ಡಾ. ಬಿ.ಸಿ. ಜವಳಿ, ಹರಿಹರ ಕವಿಯ ಸ್ತ್ರೀ ಪಾತ್ರದರ್ಶನ, ಪ್ರಸಾರಾಂಗ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ, ೧೯೮೩.

೪. ಡಾ. ಎಂ.ಆರ್. ಉಮಾದೇವಿ, ಕವಿಚಕ್ರವರ್ತಿ ಪೊನ್ನ ಮತ್ತು ಆತನ ಕೃತಿಗಳು, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೮.

೫. ಡಾ. ಬಿ.ಎಸ್. ಕುಲಕರ್ಣಿ ನೇಮಿಚಂದ್ರ, “ಕವಿ ಕಾವ್ಯ ವಿಮರ್ಶೆ”, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ, ೧೯೬೯.

೬. ಡಾ. ಜಿ.ವಿ. ಮಲ್ಲಾಪೂರ, ನಯಸೇನ ಮತ್ತು ಅವನ ಕೃತಿಗಳು, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೮.

೭. ಎಚ್.ಎಸ್. ಪಾಟೀಲ (ಪ್ರ.ಸಂ) ಮತ್ತು ಸಂಪಾದಕರು “ತಿರುಳ್ಗನ್ನಡ”, ಅಖಿಲ ಭಾರತ ೬೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸವಿ ಸಂಚಿಕೆ, ಕೊಪ್ಪಳ, ೧೯೯೩.

೮. ಡಾ. ಗುರುಪಾದ ಮರಿಗುದ್ದಿ, “ಕುವೆಂಪು ಕಾದಂಬರಿಗಳಲ್ಲಿ ಪರಿಸರ”, ಕರ್ನಾಟಕ ವಿಶ್ವ ವಿದ್ಯಾಲಯ, ಹಂಪಿ, ೧೯೯೯.

೯. ಶ್ರೀ ಬಿ.ಸಿ. ಪಾಟೀಲರು, ಕೊಪ್ಪಳದ ಹೆಚ್ಚಿನ ಶಾಸನಗಳು, ಮಾದೆನೂರು ನೆನಹು ವಿಶಾಲ ಪ್ರಕಾಶ ಕೊಪ್ಪಳ ೧೯೯೮, ಕೊಪ್ಪಳ ಸಾಂಸ್ಕೃತಿಕ ಪರಂಪರೆ, ಇಟಗಿ ಮಹಾದೇವಾಲಯ, ಹರಿಹರ ಪ್ರಕಾಶನ ೨೦೦೧ ಕೊಪ್ಪಳ ಎಂಬ ಕೃತಿಗಳು.

೧೦. ಡಾ. ಡಿ.ವಿ. ಪರಮಶಿವಮೂರ್ತಿ, “ಕನ್ನಡ ಶಾಸನ ಶಿಲ್ಪ”, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

೧೧. ಡಾ. ಎಂ.ಎಂ. ಕಲಬುರ್ಗಿ, “ಶಾಸನ ವ್ಯಾಸಂಗ”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೧೨. ಡಾ. ಚಿದಾನಂದಮೂರ್ತಿ ಎಂ. “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ”, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೯.

೧೩. ಡಾ. ಚೆನ್ನಕ್ಕ ಎಲಿಗಾರ, “ಶಾಸನಗಳಲ್ಲಿ ಸ್ತ್ರೀ ಸಮಾಜ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೦.

೧೪. ದೇಸಾಯಿ ಪಿ.ಬಿ., “ಕನ್ನಡ ನಾಡಿನ ಶಾಸನಗಳು”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೦.

೧೫. ಬಸವರಾಜ ಕಲ್ಗುಡಿ, “ಮಹಾಸತಿ ಆಚರಣೆ : ಒಂದು ಅಧ್ಯಯನ, ಬೆಂಗಳೂರು ವಿಶ್ವ ವಿದ್ಯಾಲಯ, ಬೆಂಗಳೂರು, ೧೯೮೫.

೧೬. ರಘುನಾಥ ಭಟ್ ಎಚ್.ಆರ್. “ಕರ್ನಾಟಕ ಶಾಸನ ಕಲೆ”, ಮೈಸೂರು ಭಾರತೀ ಪ್ರಕಾಶನ, ೧೯೭೭.

೧೭. ರಮೇಶ ಕೆ.ವಿ., “ಕರ್ನಾಟಕ ಶಾಸನ ಸಮೀಕ್ಷೆ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೧.

೧೮. ರಾಮಚಂದ್ರರಾವ್ ಎಸ್.ಕೆ., “ಮೂರ್ತಿ ಶಿಲ್ಪ ನೆಲೆ ಹಿನ್ನೆಲೆ”, ಬೆಂಗಳೂರು ವಿಶ್ವ ವಿದ್ಯಾಲಯ, ಬೆಂಗಳೂರು, ೧೯೭೫.

೧೯. ಶೇಷಶಾಸ್ತ್ರಿ ಆರ್., “ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೨.

೨೦. ಡಾ. ಬಿ.ಆರ್. ಹಿರೇಮಠ, ಕರ್ನಾಟಕ ಶಾಸನಗಳಲ್ಲಿ ವರ್ತಕರು, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ, ೧೯೮೬.

೨೧. ಶಿವರಾಮ ಕಾರಂತ, “ಚಿತ್ರಶಿಲ್ಪ ವಾಸ್ತು ಕಲೆಗಳು”, ಕಲಾ ಪ್ರಪಂಚ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ, ೧೯೭೫-೧೯೭೮.

೨೨. ವೆಂಕೋಬರಾವ್ ಬಿ. “ಮೈಸೂರು ದೇಶದ ವಾಸ್ತುಶಿಲ್ಪ”, ಬೆಂಗಳೂರು, ೧೯೫೯.

೨೩. ಡಾ. ಬಿ.ಆರ್. ಹಿರೇಮಠ, “ವೀರಗಲ್ಲುಗಳು”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೬.

೨೪. ಸ್ವಾಮಿ ಬಿ.ಜಿ.ಎಲ್., “ಶಾಸನಗಳಲ್ಲಿ ಗಿಡಮರಗಳು”, ಬೆಂಗಳೂರು ವಿಶ್ವವಿದ್ಯಾಲಯ,  ಬೆಂಗಳೂರು, ೧೯೭೫.

೨೫. ಡಾ. ಶ್ರೀನಿವಾಸ ಪಾಡಿಗಾರ, “ಭಾರತೀಯ ಇತಿಹಾಸದ ಶಾಸನ ಆಕರಗಳು”, ರಾಮಾಶ್ರಯ  ಪಬ್ಲಿಕೇಶನ್ಸ್, ಧಾರವಾಡ, ೨೦೦೪.

೨೬. ಡಾ. ರಘುನಾಥ ಭಟ್ ಎಚ್.ಆರ್., “ಕರ್ನಾಟಕ ಶಾಸನ ಕಲೆ”, ಮೈಸೂರು, ೧೯೭೭.

೨೭. ರಮೇಶ ಕೆ.ವಿ., “ಕರ್ನಾಟಕ ಶಾಸನ ಸಮೀಕ್ಷೆ”, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೧.

೨೮. ಡಾ. ರಿತ್ತಿ ಶ್ರೀನಿವಾಸ, “ಅಶೋಕನ ಧರ್ಮ ಶಾಸನಗಳು”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೯.

೨೯. ದೇಸಾಯಿ ಪಿ.ಬಿ., “ಕನ್ನಡ ನಾಡಿನ ಶಾಸನಗಳು”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೬೧.