ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ರಚನೆಗೆ ಮಹತ್ವದ ಆಕರ ಸಾಮಗ್ರಿಯೆನಿಸಿದ ಶಾಸನಗಳನ್ನು ಹೊರಗಡೆ ತರುವ ಪ್ರಯತ್ನ ಒಂದು ಶತಮಾನದಿಂದಲೂ ನಡೆಯುತ್ತಿದೆ.  ಒಂದು ಘಟ್ಟದ ಇತಿಹಾಸ ಮತ್ತು ಸಂಸ್ಕೃತಿಯ ವಿಷಯ ತಿಳಿಯಲು ಬಹುಮುಖ್ಯ ಆಕರ ಗಳೆಂದರೆ ಶಾಸನಗಳು. ಲಿಪಶಾಸ್ತ್ರದ ಜ್ಞಾನ ಇಲ್ಲದೇ ಇದ್ದಲ್ಲಿ ಅಪ್ರಕಟಿತ ಶಾಸನಗಳ ಓದುವಿಕೆ ಅಸಾಧ್ಯ. ಶಾಸನಗಳ ಲಿಪಿಗಳನ್ನು ಅಧ್ಯಯನ ಮಾಡಿ ಅವುಗಳ ಬೆಳವಣಿಗೆಯ ವಿವಿಧ ಹಂತ ಮತ್ತು ಲಕ್ಷಣಗಳನ್ನು ತಿಳಿಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಶಾಸನಗಳನ್ನು ಕ್ಷೇತ್ರಕಾರ್ಯದಿಂದ ಹುಡುಕುವುದು, ಪ್ರತಿ ಮಾಡುವುದು, ಓದುವುದು, ಅಧ್ಯಯನ ಮಾಡಿ ಲೇಖನ ಇಲ್ಲವೆ ಹೊತ್ತಿಗೆಗಳ ಮೂಲಕ ಪ್ರಕಟಿಸುವ ಕಾರ್ಯಕ್ಕೆ ಅನೇಕ ವಿದ್ವಾಂಸರು ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ.

. ಉಗಮ ಮತ್ತು ವಿಕಾಸ

ಭಾರತೀಯ ಲಿಪಿಗಳ ಅಧ್ಯಯನದ ಬಗ್ಗೆ ಕೆಲವು ಕೃತಿಗಳು ಸುಮಾರು ಒಂದು ಕಾಲು ಶತಮಾನದಿಂದ ಹೊರಬಂದಿವೆ. ಬರ‍್ನೆಲ್ ಅವರ Elements of South Indian Palaeography, ಡೇವಿಡ್ ಡಿರಿಂಜರ್ ಅವರ The Alphabet, ಸಿ. ಶಿವರಾಮಮೂರ್ತಿ ಅವರ Indian Epigraphy and South Indian Scripts, ಟಿ.ವಿ. ಮಹಾಲಿಂಗಂ ಅವರ Early South Indian Palaeography ಕೃತಿಗಳು ಮುಖ್ಯವಾಗಿವೆ. ಕನ್ನಡ ಲಿಪಿಗಳಿಗೆ ನೀಡುವ ಒತ್ತಕ್ಷರ, ಸಂಯುಕ್ತಾಕ್ಷರದ ಚಿತ್ರಗಳನ್ನೊಳಗೊಂಡ ವಿವರಗಳನ್ನು ಮೂಲ ಅಕ್ಷರಗಳ ಬೆಳವಣಿಗೆಯ ಲಕ್ಷಣಗಳ ಸ್ಥೂಲ ಮಾಹಿತಿಯನ್ನು ಮೊಟ್ಟಮೊದಲು ಎ.ಸಿ. ಬರ‍್ನೆಲ್ ಅವರ ಕೃತಿಯಲ್ಲಿ ಕಾಣಬಹುದು. ಕನ್ನಡ ಲಿಪಿಯ ಉಗಮ ಮತ್ತು ವಿಕಾಸ ಕುರಿತ ಕನ್ನಡದ ಪ್ರಥಮ ಕೃತಿಯನ್ನು ಎ.ವಿ. ನರಸಿಂಹಮೂರ್ತಿ ಅವರು (೧೯೬೮) ತಂದಿದ್ದಾರೆ. ಎಲ್ಲಾ ಲಿಪಿಗಳು ಹಂತಹಂತವಾಗಿ ಬೆಳೆದು ಬಂದ ವಿವರ, ಲಕ್ಷಣ, ಶೈಲಿ, ಚಿತ್ರ ಇತ್ಯಾದಿಗಳನ್ನು ಇದು ನೀಡುತ್ತದೆ. ಆದರೂ ಸಹ ಒಂದು ಕಾಲದಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣವುಳ್ಳ ಲಿಪಿಗಳ ವಿವರಗಳಲ್ಲಿ, ಒತ್ತಕ್ಷರ, ಸಂಯುಕ್ತಾಕ್ಷರ ಇತ್ಯಾದಿಗಳ ವಿವರಗಳ ಕೊರತೆಯಿರುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಲಿಪಿಯ ಉಗಮ ಮತ್ತು ವಿಕಾಸದ ಸ್ಥೂಲ ಅಧ್ಯಯನ ವನ್ನು ಇಲ್ಲಿ ಮಾಡಲಾಗಿದೆ.

ಇಂದಿನ ಎಲ್ಲಾ ಭಾರತೀಯ ಲಿಪಿಗಳ ಮೂಲ ಲಿಪಿ ಬ್ರಾಹ್ಮಿ. ಈ ದೇಶದ ಬ್ರಾಹ್ಮಿ ಲಿಪಿಯ ಸಹಾಯದಿಂದ ತಿಳಿಯದ ಲಿಪಿಗಳನ್ನೂ ಯಶಸ್ವಿಯಾಗಿ ಓದಲಾಯಿತು. ಆದರೆ ಇಂದಿನ ಕನ್ನಡ ಲಿಪಿಯೂ ಬ್ರಾಹ್ಮೀ ಲಿಪಿಯಿಂದ (ಕ್ರಿ.ಪೂ. ೩ನೇ ಶತಮಾನ) ಉಗಮವಾಗಿ ಹಂತಹಂತವಾಗಿ ವಿಕಾಸ ಹೊಂದಿದೆ.

ಬ್ರಾಹ್ಮಿ ಲಿಪಿಯನ್ನು ಬರವಣಿಗೆಯಲ್ಲಿ ಎಡಗಡೆಯಿಂದ ಬಲಗಡೆಗೆ ಬರೆಯಲಾಗುತ್ತಿತ್ತು. ಅದರ ಸಮಕಾಲೀನ ಲಿಪಿಯಾದ ಖರೋಷ್ಠಿಯನ್ನು ಬಲದಿಂದ ಎಡಗಡೆಗೆ ಬರೆಯ ಲಾಗುತ್ತಿತ್ತು. ಈ ಬ್ರಾಹ್ಮೀ ಲಿಪಿಯ ಕೆಲವು ಸಾಲುಗಳನ್ನು ಮಾತ್ರ ಒಂದೆರಡು ಕಡೆಗಳಲ್ಲಿ ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಬರೆಯಲಾಗಿದೆ.  (ಆಂಧ್ರದ ಯರ್ರಗುಡಿಯ ಅಶೋಕನ ಶಾಸನ). ಶಾಸನಗಳಲ್ಲಿ ಪದಗಳನ್ನು ಬಿಡಿ ಬಿಡಿಯಾಗಿ ಇಂದಿನಂತೆ ಬರೆಯುವ ಉದಾಹರಣೆಗಳಿಲ್ಲ. ಶಾಸನಗಳಲ್ಲಿ ತಪ್ಪಿದ್ದಲ್ಲಿ ತಿದ್ದಿದ ಉಲ್ಲೇಖಗಳಿವೆ. ಆರಂಭದಲ್ಲಿ ಡೊಂಕು ಡೊಂಕಾದ ಅಕ್ಷರಗಳು ಲಂಬರೇಖೆಯಿಂದ, ಉದ್ದವಾಗಿ, ಅಗಲವಾಗಿ, ಗುಂಡಾಗಿ, ವಿವಿಧ ರೀತಿಯ ತಲೆಕಟ್ಟು ಇತ್ಯಾದಿಯಾಗಿ ಬೆಳೆದುದನ್ನು ಕಾಣಬಹುದು.

ಕ್ರಿ.ಪೂ. ೩ನೇ ಶತಮಾನದ ಬ್ರಾಹ್ಮೀ ಲಿಪಿಯು, ಕ್ರಿ.ಶ.ಸು. ೪ನೇ ಶತಮಾನಕ್ಕೆ ಬರುವಷ್ಟ ರಲ್ಲಿ ಭಾರತದಲ್ಲಿ ಎರಡು ರೀತಿಯ ಲಿಪಿಗಳಿದ್ದವು. ಒಂದು ಉತ್ತರ (ಔತ್ತರೇಯ) ಬ್ರಾಹ್ಮಿ, ಇನ್ನೊಂದು ದಕ್ಷಿಣಾತ್ಯ ಬ್ರಾಹ್ಮೀ. ದಕ್ಷಿಣಾತ್ಯ ಬ್ರಾಹ್ಮೀ ಲಿಪಿಯಿಂದ ಕರ್ನಾಟಕಕ್ಕೆ ಕನ್ನಡ ಲಿಪಿಯಾಗಿ, ತಮಿಳುನಾಡಿಗೆ (ಮೊದಲು ಗ್ರಂಥಲಿಪಿ ಬೆಳೆದು ನಂತರ) ತಮಿಳು ಲಿಪಿಯಾಗಿ ಮತ್ತು ಆಂಧ್ರಕ್ಕೆ ತೆಲುಗು ಲಿಪಿಯಾಗಿ ಬದಲಾವಣೆಗೊಂಡಿದೆ. ಈ ಕಾಲದಲ್ಲಿ ಕರ್ನಾಟಕದಲ್ಲಿ ಬನವಾಸಿ ಕದಂಬರ ಕಾಲದ ಲಿಪಿಯಿಂದ ಕನ್ನಡ ಲಿಪಿ ಬೆಳವಣಿಗೆ ಆರಂಭವಾಯಿತು. ಬುಹ್ಲರ್ ಮತ್ತು ಇನ್ನಿತರ ಶಾಸನಶಾಸ್ತ್ರ ತಜ್ಞರು ಈ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.

ಬನವಾಸಿ ಕದಂಬರ ಲಿಪಿಗಳು

ಈ ಕಾಲದ ಶಾಸನಗಳ ಪಾಠವನ್ನು ಕೆಲವೊಮ್ಮೆ ಕೆಳಗಿನಿಂದ ಮೇಲಕ್ಕೆ ಬರೆಯಲಾಗಿದೆ. ಉದಾಹರಣೆಗೆ, ಬನವಾಸಿಯ ಮೃಗೇಶವರ್ಮನ ಶಾಸನ ಇತ್ಯಾದಿ. ಬನವಾಸಿ ಕದಂಬರ ಕಾಲದ ಲಿಪಿಗಳ ಲಕ್ಷಣಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ೧. ಸುಂದರ, ಉದ್ದ ಲಿಪಿಗಳು. ಒಂದಕ್ಕೊಂದು ಹತ್ತಿರದಲ್ಲಿ ಬರೆಯಲಾಗಿದ್ದು ಅವುಗಳ ತಲೆಕಟ್ಟುನ್ನು ಚೌಕಾಗಿ ಕೆತ್ತಲಾಗಿದೆ. ಪ್ರತಿಯೊಂದು ಸಾಲುಗಳ ಅಕ್ಷರಗಳು ಜೋಡು ಸಮನಾಂತರ ಸರಳ ರೇಖೆಗಳ ಮಧ್ಯ ಆಕರ್ಷಣೀಯವಾಗಿ ಬರೆದಿರುವುದು ಎದ್ದು ಕಾಣುತ್ತದೆ. ಈ ಲಕ್ಷಣವುಳ್ಳ ಲಿಪಿಗಳು ಉತ್ತರದಲ್ಲಿ ಆಳುತ್ತಿದ್ದ ಗುಪ್ತರ ಕೆಲ ಶಾಸನಗಳು ಮತ್ತು ವಾಕಾಟಕರ ಶಾಸನಗಳ ಲಿಪಿಗಳನ್ನು ಹೆಚ್ಚು ಹೋಲುತ್ತವೆ. ಆದರೆ ಈ ಭಾಗದ ಲಿಪಿಗಳಿಗಿರುವ ತಲೆಕಟ್ಟು ಕೇವಲ ಚೌಕಾದ ಗೆರೆಯನ್ನು ಹೊಂದಿರುತ್ತದೆ. ಈ ಲಕ್ಷಣವುಳ್ಳ ಕದಂಬರ ಶಾಸನಗಳು ತಾಳಗುಂದ, ಬನವಾಸಿ, ಗುಡ್ನಾಪುರ ಇತ್ಯಾದಿ ಕಡೆಗಳಲ್ಲಿವೆ. ಈ ಸ್ಥಳಗಳ ಕೆಲ ಲಿಪಿಗಳಾದ ‘ಅ’, ‘ರ’, ‘ಕ’ ಇನ್ನಿತರ ಲಿಪಿಗಳಿಗಿಂತ ಹೆಚ್ಚು ಉದ್ದವಾಗಿವೆ. ಹೀಗೆ ಅನೇಕ ಲಕ್ಷಣಗಳನ್ನು ಈ ಮಾದರಿ ಯಲ್ಲಿ ಕಾಣುತ್ತೇವೆ. ೨. ಈ ಮಾದರಿಯ ಲಿಪಿಗಳ ತಲೆಕಟ್ಟು ನೆಟ್ಟಗೆ, ತ್ರಿಕೋನಾಕೃತಿ ಅಂದರೆ ಮೊಳೆಯ ತಲೆಕಟ್ಟಿನಂತಿವೆ. ಲಿಪಿಗಳು ಡೊಂಕಾಗಿವೆ. ಆದರೆ ಕೆಲವು ಶಾಸನಗಳಲ್ಲಿ ಮೂಲ ಲಿಪಿಗಳ ತಲೆಕಟ್ಟು ಕೇವಲ ನೆಟ್ಟಗಿವೆ. ಗ, ಸ ಇನ್ನಿತರ ಲಿಪಿಗಳ ಕೆಳಭಾಗ ಡೊಂಕಾಗಿವೆ. ಕ, ರ, ಉ ಇತ್ಯಾದಿ ಲಿಪಿಗಳು ಹೆಚ್ಚು ಕಿರಿದಾಗಿವೆ. ಪ, ಬ, ಹ, ಇನ್ನಿತರ ಅಕ್ಷರಗಳು ಅಗಲ ವಾಗಿವೆ. ‘ಇ’ ಲಿಪಿ ಚುಕ್ಕೆಗಳ ಬದಲು ಜೋಡಿ ವೃತ್ತಗಳ ಎಡ-ಬಲ ತುದಿಗಳ ಕೆಳಗಡೆ ಬಿಂದುವುಳ್ಳ ಆಕಾರ ಈ ಕಾಲದಲ್ಲೇ ಬಂದಿದೆ. ತಾಳಗುಂದ ಶಾಸನದ ಲಿಪಿ ಎಲ್ಲಾ ಕದಂಬ ಶಾಸನಗಳ ಲಿಪಿಗಿಂತ ಸುಂದರವಾಗಿ ಮತ್ತು ಕಲಾತ್ಮಕವಾಗಿದೆ ಎಂದು ಎ.ವಿ. ನರಸಿಂಹ ಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಶೋಕನ ಕಾಲದಿಂದ ಎಲ್ಲಾ ಮೂಲ ಅಕ್ಷರಗಳು ಶಾತವಾಹನರ ಕಾಲಕ್ಕೆ ಸ್ವಲ್ಪ ಬದಲಾವಣೆಯಾಗಿವೆ. ಆ ಎಲ್ಲ ಅಕ್ಷರಗಳು ಈ ಕಾಲದಲ್ಲಿ ವೈವಿಧ್ಯಮಯವಾಗಿ ಬೆಳೆದಿವೆ. ‘ಅ’ ಲಿಪಿಯ ಲಂಬರೇಖೆ ಉದ್ದವಾಗಿ ಬಲಗಡೆ ಕೊಂಡಿಯಂತೆ ಬಗ್ಗಿದೆ. ‘ಋ’ ಲಿಪಿ ಪ್ರಥಮವಾಗಿ ಈ ಕಾಲದಲ್ಲಿ ಇಮ್ಮಡಿ ಕೃಷ್ಣವರ್ಮನ ತಾಮ್ರಶಾಸನದಲ್ಲಿ ಕಂಡಿದ್ದು ಅದು ಈ ಕಾಲದ ‘ಮ’ದಂತೆ ಇರುತ್ತದೆ. ‘ಕ’ ಅಕ್ಷರದ ಲಂಬರೇಖೆಯ ಕೆಳಭಾಗ ಎಡಕ್ಕೆ ಬಗ್ಗಿರುತ್ತದೆ. ‘ಖ’ದಲ್ಲಿ ಮೇಲಿನ ಕೊಂಡಿಯು ಕಿರಿದಾಗಿರುತ್ತದೆ. ‘ಚ’ದಲ್ಲಿ ಕೆಳಗಿನ ಭಾಗ ತ್ರಿಕೋನದ ಬದಲು ಆಯತಾಕೃತಿಯಂತಿರುತ್ತದೆ. ‘ಜ’ದಲ್ಲಿ ಮೂರು ಅಡ್ಡರೇಖೆಗಳಲ್ಲಿ ಕೆಳಗೆ ಮತ್ತು ಮೇಲಿನ ರೇಖೆಗಳು ಮಧ್ಯದಲ್ಲಿ ಬಗ್ಗಿರುತ್ತವೆ. ‘ಞ’ದಲ್ಲಿ ಈಗಿನ ‘ಇ’ ರೂಪದಂತೆ ಪರಿವರ್ತನೆಯಾಗಿದ್ದು ಅದರ ಕೆಳಗಿನ ಭಾಗ ಪೂರ್ಣ ಸುತ್ತಿಕೊಂಡಿರುವುದಿಲ್ಲ. ‘ಡ’ದಲ್ಲಿ ಕೆಳಗಿನ ಭಾಗ ಎರಡು ಕಿರು ಅರ್ಧವೃತ್ತಗಳಂತೆ ವಿಭಾಗಿಸಿದ್ದರೂ ಅದರ ಬಲಭಾಗ ಅಡ್ಡವಾಗಿರುತ್ತದೆ. ‘ಈ’ ಲಿಪಿ ಮತ್ತು ‘ದ’, ‘ಟ’ ಲಿಪಿಗಳು ಸುಮಾರಾಗಿ ಒಂದೇ ರೀತಿಯಲ್ಲಿವೆ ಎಂದು ತೋರುತ್ತವೆ. ‘ಣ’ದಲ್ಲಿ ಕೆಳಗಿನ ಅಡ್ಡಗೆರೆ ಬದಲು ಸಣ್ಣ ಕೊಂಡಿ ಹೊಂದಿರುತ್ತದೆ. ಮೇಲೆ ಎರಡು ಕಡೆಗಳಲ್ಲಿ ಗೆರೆಗಳು ಇಳಿದಿರುತ್ತವೆ. ಬಲಗಡೆ ರೇಖೆ ಹೆಚ್ಚು ಉದ್ದವಾಗಿರುತ್ತದೆ. ‘ಥ’ ಮತ್ತು ‘ಧ’ ಆಯತಾಕೃತಿಯನ್ನು ಹೊಂದಿವೆ. ‘ನ’ದಲ್ಲಿ ಕೆಳಗಿನ ಅಡ್ಡರೇಖೆಯು ಎರಡು ಭಾಗಗಳಾಗಿವೆ. ಕೆಲವೊಮ್ಮೆ ಇದು ಈ ಹಿಂದಿನ ‘ತ’ ಅಕ್ಷರದಂತಿರುತ್ತದೆ. ‘ಪ’ ಕೆಳಗಿನ ಭಾಗ ಎರಡು ಸಮಭಾಗಗಳಾಗಿ ವಿಭಜಿಸಿದ್ದು ಅದರ ಎಡ ಲಂಬರೇಖೆಯ ತುದಿಯು ಸ್ವಲ್ಪಕೊಂಡಿಯಂತಿರುತ್ತದೆ. ‘ಫ’ದ ಮಹಾಪ್ರಾಣವನ್ನು ಅದರ ಬಲರೇಖೆಯ ತುದಿಯನ್ನು ಸುರುಳಿಮಾಡಿ ಸೂಚಿಸಲಾಗಿದೆ. ‘ಬ’ದಲ್ಲಿ ಡಬ್ಬಿ ಆಕಾರದಲ್ಲಿ ಅದರ ಎಡರೇಖೆ ಲಂಬಕೋನದಂತೆ ರೇಖೆಯು ಎಡತುದಿಯ ಎತ್ತರದಷ್ಟು ಮೇಲಕ್ಕೆ ಹೋಗಿರುತ್ತದೆ. ‘ಯ’ ಕೆಳಗಿನ ಎರಡು ವೃತ್ತಿಗಳಲ್ಲಿ ಎಡಗಡೆಯ ತುದಿ ಕೊಂಡಿ ಯಂತೆ ಸುತ್ತಿರುತ್ತದೆ. ಬಲಗಡೆ ರೇಖೆ ಅಕ್ಷರದ ಮಧ್ಯದ ಲಂಬರೇಖೆಯ ಎತ್ತರದಷ್ಟು ಸಮಾನಾಂತರವಾಗಿ ಮೇಲಕ್ಕೆ ಹೋಗುತ್ತದೆ. ‘ರ’ದಲ್ಲಿ ಆಯತಾಕಾರದಲ್ಲಿದ್ದು ಹೆಚ್ಚು ಉದ್ದವಾಗಿರುತ್ತದೆ. ಕೆಲವೊಮ್ಮೆ ಅದರ ಎಡಲಂಬರೇಖೆ ಬಲರೇಖೆಯನ್ನು ಸಂಧಿಸಿರು ವುದಿಲ್ಲ. ಎಡರೇಖೆಗೆ ತಲೆ ಕಟ್ಟಿರುತ್ತದೆ. ‘ಲ’ದಲ್ಲಿ ಕೆಳಗಿನ ಅರ್ಧವೃತ್ತ ಅಗಲವಾಗಿ  ಮಧ್ಯ ಬಗ್ಗಿರುತ್ತದೆ. ‘ವ’ದ ತ್ರಿಕೋನ ಭಾಗ ಅಗಲವಾಗಿರುತ್ತದೆ. ಕೆಳಭಾಗದ ಮಧ್ಯ ಬಗ್ಗಿರುತ್ತದೆ. ‘ಶ’ ಗಂಟೆಯಾಕಾರದಲ್ಲಿದ್ದು, ಅದರ ಒಳಗಿನ ಬಲರೇಖೆಯಿಂದ ೪೫ಂ ಓರೆಯಾಗಿ ಗೆರೆಯನ್ನು ಎಳೆಯಲಾಗುತ್ತದೆ. ‘ಷ’ದ ಕೆಳಗಡೆ ಭಾಗ ಚೌಕಾಗಿದ್ದು ಅದರ ಎಡಭಾಗದ ಮೇಲೆ ಕಿರಿದಾದ ಲಂಬರೇಖೆಯನ್ನು ಬಲ ಲಂಬರೇಖೆಯ ಎತ್ತರದಷ್ಟು ಸಮಾನಾಂತರವಾಗಿ ಮೇಲಕ್ಕೆ ಗೆರೆಯನ್ನು ಎಳೆದು ತಲೆಕಟ್ಟನ್ನು ಕೊಡಲಾಗುತ್ತದೆ. ‘ಸ’ದ ಕೆಳಭಾಗದಲ್ಲಿ ಸ್ವಲ್ಪ ಮೇಲಕ್ಕೆ ಹೊಂದಿ ಕೊಂಡಿಯನ್ನುಇಳಿಬಿಟ್ಟು ಜೋಡಿಸಲಾಗಿರುತ್ತದೆ. ಅದರ ಮಧ್ಯ ಲಂಬರೇಖೆಗೆ ಸಮಾನಾಂತರ ಎತ್ತರವಾಗಿ ಬಲರೇಖೆಯನ್ನು ಎಳೆಯಲಾಗಿದೆ. ‘ಹ’ದ ಕೆಳಭಾಗ ಅಗಲವಾಗಿ ರುತ್ತದೆ. ಮಧ್ಯಭಾಗ ಬಗ್ಗಿರುತ್ತದೆ. ಬಲತುದಿಯು ಕೊಂಡಿಯಂತೆ ಬಲಕ್ಕೆ ಬಗ್ಗಿದೆ. ‘ಳ’ ಮತ್ತು ‘ರ’ ಲಿಪಿಗಳನ್ನು ಎರಡು ರೀತಿಯಲ್ಲಿ ಈ ಕಾಲದಿಂದ ಬರೆಯಲಾಗಿದೆ. ‘ಳ’ದ ಒಂದು ಲಿಪಿಯಲ್ಲಿ ಎರಡು ಜೋಡುವೃತ್ತಗಳು ಒಂದರ ಮಗ್ಗಲಿಗೆ ಇನ್ನೊಂದು ಕೂಡಿರುತ್ತದೆ. ಈ ಕಾಲದಿಂದ ಈ ಶೈಲಿಯು ಆರಂಭವಾಗಿದೆ. ಇನ್ನೊಂದು ‘ಳ’ದ ಕೆಳಗಿನ ಕೊಂಡಿ ಭಾಗದ ತುದಿ ಕೆಳಗಡೆ ಕೊಂಡಿಯಂತೆ ಬಲಗಡೆಗೆ  ಇಳಿದು ಬಾಗಿರುತ್ತದೆ. ‘ರ’ದಲ್ಲಿ ಒಂದು ಶಕಟರೇಫ ಈ ಕಾಲದಿಂದಲೇ ಕಾಣುತ್ತದೆ. ಇದರಲ್ಲಿ ಎರಡು ಅಗಲವುಳ್ಳ ವೃತ್ತಗಳು ಬದಿಗಳಲ್ಲಿ ಈ ಮೇಲೆ ತಿಳಿಸಿದ ‘ಳ’ದಂತೆ ಕೂಡಿರುತ್ತವೆ. ಇಲ್ಲಿ ಜೋಡು ವೃತ್ತಗಳ ಮಧ್ಯ ಅಡ್ಡಗೆರೆಯನ್ನು ಎಳೆಯಲಾಗಿರುತ್ತದೆ. ಇನ್ನೊಂದು ‘ರ’ದ ಲಕ್ಷಣವನ್ನು ಈ ಮೇಲೆ ತಿಳಿಸಲಾಗಿದೆ. ಸಂಯುಕ್ತಾ ಕ್ಷರದಲ್ಲಿ ಕಿರುದಂಡದಂತಹ ಲಂಬರೇಖೆಯಿಂದ ಕೆಳಗಿನ ಲಿಪಿಗಳನ್ನು ಜೋಡಿಸುವುದು ಮೊದಲ ಮಾದರಿಯಲ್ಲಿ ಕಾಣುತ್ತವೆ. ಅನುಸ್ವಾರವನ್ನು ಈ ಹಿಂದಿನಂತೆ ಮೂಲ ಲಿಪಿಯ ಮೇಲೆ ಬಿಂದುವಿಟ್ಟು ತೋರಿಸಲಾಗಿದೆ.

ಈ ಕಾಲದ ಕಾಗುಣಿತದಲ್ಲಿ (ಬಳ್ಳಿಯಲ್ಲಿ) ವೈವಿಧ್ಯತೆಯನ್ನು ಕಾಣಬಹುದು. ‘ಆ’, ‘ಏ’, ‘ಓ’ ಕಾರಗಳನ್ನು ಸಾಮಾನ್ಯವಾಗಿ ಮೂಲಲಿಪಿಯ ತಲೆಕಟ್ಟುಗಳಿಗೆ ಹೊಂದಿ ಸರಳಗೆರೆ ಬದಲು ಕೊಂಡಿಯಂತಹ ರೇಖೆಗಳನ್ನೂ ಕೂಡಿಸಲಾಗಿರುತ್ತದೆ. ‘ಉ’ ಮತ್ತು ‘ಊ’ಗಳನ್ನು ಮೂಲ ಅಕ್ಷರಕ್ಕೆ ಜೋಡಿಸುವುದರಲ್ಲಿ ಕೆಲವು ವೈವಿಧ್ಯತೆಗಳಿವೆ. ಉದಾಹರಣೆಗೆ ತ, ಗ, ಭ, ಶ, ಅಕ್ಷರಗಳಿಗೆ ಉ ಮತ್ತು ಊ ಕಾರಗಳು ಸಾಮಾನ್ಯವಾಗಿ ಕೊಂಡಿಯನ್ನು ಈ ಲಿಪಿಗಳ ಕೆಳಭಾಗದಿಂದ ಕೂಡಿಸಿದ್ದು ಅದರ ಲಂಬರೇಖೆ (ಉ) ಅಥವಾ ಲಂಬರೇಖೆಯ ಮೇಲಿನ ತುದಿಗೆ ಹೊಂದಿ ಬಲಗಡೆ ಬಗ್ಗಿದ ಇನ್ನೊಂದು ಕೊಂಡಿ(ಊ)ಯಿರುತ್ತದೆ. ಲಿಪಿ ರ, ಕ ಗಳಿಗೆ ಉ ಮತ್ತು ಊ ಕಾರಗಳನ್ನು ಅವುಗಳ ಲಂಬರೇಖೆಯ ಕೆಳಬಲಬದಿಗಳಲ್ಲಿ ಕಿರಿಕೊಂಡಿಯಂತಹ ಅಡ್ಡಗೆರೆಗಳನ್ನು ಕೂಡಿಸಲಾಗಿರುತ್ತದೆ. ‘ಐ’ ಕೂಡಿಸುವುದಿದ್ದರೆ ಮೂಲ ಲಿಪಿಯ ಎಡರೇಖೆಗೆ ಹೊಂದಿ ಕೆಳಗಡೆ ಮತ್ತು ಎರಡು ಕಿರು ಅಡ್ಡಗೆರೆಗಳನ್ನು ಸಾಮಾನ್ಯವಾಗಿ ಜೋಡಿಸಲಾಗಿದೆ. ಅಂದರೆ ಮೊದಲು ‘ಏ’ ಕಾರವನ್ನು ಬರೆದು ಅದರ ಕೆಳಗಡೆ ಒಂದು ಬಾಗಿದ ರೇಖೆಯನ್ನು ಎಳೆದು ‘ಐ’ ಕಾರವನ್ನು ತೋರಿಸಲಾಗಿದೆ. ‘ಓ’ ಕಾರದಲ್ಲಿ ಮೂಲ ಅಕ್ಷರದ ತಲೆಕಟ್ಟಿನಿಂದ ಎಡಗಡೆ ಮತ್ತು ಬಲಗಡೆ ಕೊಂಡಿಗಳನ್ನು ಇಳಿಸಲಾಗಿದೆ. ಕೆಲವೊಮ್ಮೆ ‘ಅಂ’ಕಾರವನ್ನು, ಕಿರಿದಾದ ‘ಮ’ಲಿಪಿಯನ್ನು ಮೂಲಲಿಪಿ ನಂತರ ಕೆಳಬದಿಯಲ್ಲಿ ಬರೆಯಲಾಗಿದೆ. ‘ರ’ಕಾರವನ್ನು ಈಗಿನ ಅರ್ಧಚಂದ್ರ ಮತ್ತು ಒಂಬತ್ತು ಚಿಹ್ನೆಯನ್ನು ಮೂಲ ಲಿಪಿಗೆ ಹೊಂದಿ ಬರೆಯುವುದರಲ್ಲಿ ವೈವಿಧ್ಯತೆಯಿದೆ. ಒಂಬತ್ತಿನಂತಹ ಚಿಹ್ನೆಯನ್ನು ‘ರ’ಕಾರಕ್ಕಾಗಿ ಸೂಚಿಸುವಾಗ ಈ ಕಾಲದಲ್ಲಿಯೂ ಹಿಂದಿನಂತೆ ಮೂಲ ಲಿಪಿಯ ತಲೆಕಟ್ಟಿನ ಬಲತುದಿಗೆ ಲಂಬದ ಗೆರೆಯನ್ನು ಕೂಡಿಸಲಾಗಿದೆ. ಅರ್ಧಚಂದ್ರ ಚಿಹ್ನೆಯನ್ನು ಈ ಕಾಲದಲ್ಲಿ ಸೂಚಿಸುವುದನ್ನು ಕಾಣಬಹುದು. ಮೂಲಲಿಪಿಗೆ ‘ಉ’ಕಾರದಂಥ ಕೊಂಡಿಯನ್ನು ಕೂಡಿಸಲಾಗಿದೆ. ಆದರೆ ಆ ಕೊಂಡಿಯು ಹೆಚ್ಚು ಅಗಲವಾಗಿದೆ. ‘ಉ’ಕಾರದ ಕೊಂಡಿಯು ಕಡಿಮೆ ಅಗಲವಾಗಿದೆ ‘ಇ’ ಕಾರದಲ್ಲಿ ಮೂಲ ಲಿಪಿಗಳ ತಲೆ ಮೇಲೆ ಒಂದು ಪೂರ್ಣವೃತ್ತ ವಿದೆ. ಕೆಲವೊಮ್ಮೆ ಅದರ ಎಡತುದಿ ಕೆಳಗಡೆ ತೆರೆದಿದೆ. ‘ಈ’ಕಾರ ಸೂಚಿಸುವಾಗ ಈ ಮೇಲಿನ ‘ಇ’ ಕಾರದಂತೆಯಿದ್ದು ಅದರ ವೃತ್ತದ ಎಡತುದಿ ಸುರುಳಿಗೊಂಡಿದೆ. ಮೂಲ ಲಿಪಿಗಳಿಗೆ ಒತ್ತಕ್ಷರಗಳನ್ನು ಬರೆಯುವ ಸಂದರ್ಭದಲ್ಲಿ ಮೂಲ ಲಿಪಿಗಳಂಥ ಅಕ್ಷರಗಳನ್ನೇ ಬರೆಯಲಾಗಿದೆ. ‘ಲ’ ಕಾರದ ಕೆಳಗಡೆ ಕಿರುವೃತ್ತ ಹೊಂದಿದ ಕೊಂಡಿ ಭಾಗ ಅಗಲವಿದ್ದು ಲಿಪಿಯ ಕೆಳಭಾಗದ ಬಲತುದಿಯನ್ನು ಕೂಡಿದೆ.

ಕನ್ನಡದ ಹೆಚ್ಚು ಸಂಖ್ಯೆಗಳು ಈ ಕಾಲದಿಂದ ಕಂಡುಬರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಗುಡ್ನಾಪುರದ ರವಿವರ್ಮನ ಶಾಸನದಲ್ಲಿ ಒಂದರಿಂದ ಒಂಬತ್ತರವರೆಗಿನ ಅಂಕಿಗಳಿವೆ. ಈ ಅಂಕಿಗಳೇ ಮುಂದೆ ವಿಕಾಸಗೊಂಡವು.

ಗಂಗರ ಲಿಪಿ

ಗಂಗರು ಆದಿಕದಂಬರ ಕಾಲದಿಂದ ರಾಷ್ಟ್ರಕೂಟರ ಕಾಲದವರೆಗೆ ಅಸ್ತಿತ್ವದಲ್ಲಿದ್ದುದರಿಂದ ಈ ಅರಸರ ಶಾಸನಗಳ ಲಿಪಿ ಮೂರು ಹಂತದಲ್ಲಿ ವಿಕಾಸ ಹೊಂದಿದ್ದನ್ನು ವಿದ್ವಾಂಸರು ಗಮನಿಸಿದ್ದಾರೆ. ಇವರ ಆರಂಭಿಕ ಕಾಲದ ಲಿಪಿಗಳಲ್ಲಿ ವೈವಿಧ್ಯತೆಯಿದೆ. ಜ, ಮ, ಬ, ಲ, ವ, ಶ ಇತ್ಯಾದಿ ಲಿಪಿಗಳು ಒಂದಕ್ಕಿಂತ ಹೆಚ್ಚಿನ ರೀತಿಯಿಲ್ಲಿವೆ. ‘ಉ’, ‘ಒ’ ಲಿಪಿಗಳಿವೆ. ಈ ಕಾಲದ ಲಿಪಿಗಳಿಗೆ ಸರಳ ಕಿರಿದಾದ ತಲೆಕಟ್ಟುಗಳಿವೆ. ಅರ್ಧ‘ರ್’ವನ್ನು ಉದ್ದವಾಗಿ ಕದಂಬರ ಕಾಲದ‘ರ’ದಂತೆ ಬರೆದು ತಲೆಕಟ್ಟಿನ ಬಲ ತುದಿ ಮೇಲಕ್ಕೆ ಏರಿದೆ. ‘ಕ’ ಲಿಪಿ ಹೆಚ್ಚು ಉದ್ದ ವಾಗಿದೆ. ಅಗಲ ರೇಖೆಯು ಹತ್ತಿರ ಬರುತ್ತದೆ. ‘ಘ’ ಲಿಪಿಯ ಮಧ್ಯರೇಖೆಯ ಉದ್ದವು ಇತರ ಎರಡು ರೇಖೆಗಳಿಗಿಂತ ಕಿರಿದಾಗಿದೆ. ಎಡಭಾಗದ  ತಲೆಮೇಲೆ ಸಣ್ಣ ಕೊಂಡಿ ನಿರ್ಮಾಣ ವಾಗಿದೆ. ‘ಜ’ ಅಗಲವಾಗಿ ಕೆಳಗಡೆ ಮಧ್ಯ ಬಗ್ಗಿದೆ. ‘ಜ’ದ ಅಡ್ಡಗೆರೆಗಳು ಮಧ್ಯ ಬಗ್ಗಿವೆ. ‘ಝ’ದಲ್ಲಿ ಮೂಲರೇಖೆ ಪುನಃ ಮೇಲಿಂದ ಬಲತುದಿಯಲ್ಲಿ ಎರಡು ಕಿರಿದಾದ ಅರ್ಧವೃತ್ತ ಭಾಗ ಆರಂಭವಾಗಿದೆ. ‘ಞ’ ಈಗಿನ ರೂಪಕ್ಕೆ ಹತ್ತಿರವಿದೆ. ‘ಟ’ದ ಕೆಳಭಾಗ ಕಿರಿದಾಗಿ ಎರಡು ಭಾಗವಾಗಿದೆ. ‘ಡ’ ಕೆಳಭಾಗ ಸಂಸ್ಕೃತ ‘ಟ’ ಲಿಪಿಯಾಗಿದೆ. ‘ಣ’ ಲಿಪಿ ಮೇಲಿನ ತುದಿಯಿಂದ ಬಲಗಡೆ ಕೆಳಗಿಳಿದ ಅರ್ಧವೃತ್ತದಂತಾಗಿದೆ. ಧ’ ಲಿಪಿಯ ಕೆಳಭಾಗವು ಅಗಲವಾಗಿದೆ. ಅದು ಮೇಲೆ ಹೋಗುತ್ತ ಕಿರಿದಾಗಿ ತಲೆಕಟ್ಟಿನಂತೆ ಅಡ್ಡರೇಖೆಯನ್ನು ಮುಚ್ಚು ತ್ತದೆ. ‘ಭ’ ಲಿಪಿಯ ಉದ್ದ ಕಡಿಮೆ ಅಗಲ ಹೆಚ್ಚಾಗಿದೆ. ‘ಮ’ ಕೆಳಗಡೆ ಹೆಚ್ಚು ಅಗಲವಾಗಿದೆ. ‘ಯ’ ವೃತ್ತದ ಎಡಭಾಗ ಕೊಂಡಿಯಂತೆ ಕೂಡಿದೆ. ‘ಳ’ ಕೆಳಗಿನ ಕೊಂಡಿಯು ಹೆಚ್ಚು ಉದ್ದ ವಾಗಿದೆ. ಕಾಗುಣಿತಗಳು ಮತ್ತು ಇನ್ನುಳಿದ ಲಿಪಿಗಳು ಹೆಚ್ಚಾಗಿ ಆರಂಭದ ಹಂತದಲ್ಲಿ ಕದಂಬರ ಲಿಪಿಗಳಂತಿವೆ. ತದನಂತರ ಕಾಲದ ಲಿಪಿಗಳು ಸಮಕಾಲೀನ ಬಾದಾಮಿ ಚಲುಕ್ಯ ಮತ್ತು ರಾಷ್ಟ್ರಕೂಟರ ಲಿಪಿಗಳಂತಿವೆ.

 

ಕನ್ನಡ ಲಿಪಿಯ ಉಗಮ ಮತ್ತು ವಿಕಾಸ

 

ಕೃಪೆ ಎ.ವಿ. ನರಸಿಂಹಮೂರ್ತಿ

 

ಕನ್ನಡ ಲಿಪಿಯ ಉಗಮ ಮತ್ತು ವಿಕಾಸ

ಕೃಪೆ ಎ.ವಿ. ನರಸಿಂಹಮೂರ್ತಿ

 

ಕನ್ನಡ ಲಿಪಿ ಬೆಳವವಣಿಗೆಯಲ್ಲಿ ಕಾಗುಣಿತ

 

ಕೃಪೆ ಎ.ವಿ. ನರಸಿಂಹಮೂರ್ತಿ

 

ಕನ್ನಡ ಅಂಕಿಗಳ ಉಗಮ ಮತ್ತು ವಿಕಾಸ

ಬಾದಾಮಿ ಚಲುಕ್ಯರ ಲಿಪಿ

ಈ ಕಾಲದ ಲಿಪಿಗಳು ಎರಡು ಶೈಲಿಯಲ್ಲಿವೆ. ಈ ಕಾಲದ ಲಿಪಿಗಳ ತಲೆಕಟ್ಟು ಸರಳ, ನೆಟ್ಟಗಿವೆ. ಅಕ್ಷರಗಳ ಉದ್ದ ಕಿರಿದಾಗಿ ಹೆಚ್ಚು ಅಗಲವಿವೆ. ಯ, ರ, ಸ, ಹ, ದ, ಕ, ನ ಇತ್ಯಾದಿ ಲಿಪಿಗಳು ಈಗಿನ ಲಿಪಿಗಳಂತಿದ್ದು ಅವು ಒಂದು ಸ್ಥಿಮಿತಕ್ಕೆ ಬಂದಿವೆ. ‘ಅ’ ಲಿಪಿ ಎರಡು ಶೈಲಿಯಲ್ಲಿದೆ. ಒಂದು ಆದಿ ಕದಂಬರ ಶೈಲಿಯಲ್ಲಿದೆ. ಇನ್ನೊಂದು ಅಗಲ ವೃತ್ತವು ಮೇಲಿನ ಮಧ್ಯಭಾಗದಲ್ಲಿ ಎರಡೂ ಕಡೆಯ ತುದಿಗಳು ಕೆಳಗಿಳಿದು ಸಂಧಿಸಿವೆ ಎಂದು ಕಾಣುತ್ತದೆ (ಕಪ್ಪೆಅರಭಟ್ಟನ ಶಾಸನ ಇತ್ಯಾದಿ). ಇದೇ ಶಾಸನದಲ್ಲಿ ‘ಆ’ ಲಿಪಿಯಿದ್ದು ಅದರ ಬಲ ತುದಿ ಮೇಲೆ ಕಿರಿಕೊಂಡಿ ನಿರ್ಮಾಣವಾಗಿದೆ. ‘ಈ’ ಲಿಪಿ ಕದಂಬರ ಕಾಲದ ‘ರ’ದಂತೆಯಿದ್ದು ಆ ಲಿಪಿಯ ಮಧ್ಯ ಹೊರಗಡೆ ಎಡ ಬಲಗಳಲ್ಲಿ ಬಿಂದುಗಳಿವೆ (ವಿಜಯಾದಿತ್ಯ ಇನ್ನಿತರ ಶಾಸನಗಳು). ‘ಉ’ ಲಿಪಿ ಅಶೋಕನ ಕಾಲದ ‘ಟ’ ಲಿಪಿಯಂತಿದ್ದು ಅದರ ತಲೆಭಾಗ ಚಪ್ಪಟೆಯಾಗಿದೆ. ‘ಎ’ ಲಿಪಿಯ ಕೆಳಗಿನ ಚೌಕ (ವೃತ್ತ) ಭಾಗದ ತುದಿಯು ಬಲಭಾಗದ ರೇಖೆಯನ್ನು ಕೂಡಿಕೊಂಡಿರುವುದಿಲ್ಲ, ತಲೆಕೆಟ್ಟು ಇರುವುದಿಲ್ಲ. ಹಳೆಗನ್ನಡ ‘ರ’, ‘ಳ’, ಅನುಸ್ವಾರ, ವಿಸರ್ಗ ಹಿಂದಿನಂತಿವೆ.

‘ಕ’ ಲಿಪಿಯ ಕೆಳಭಾಗದ ಕೊಂಡಿಯ ಎಡಗಡೆಯ ಲಂಬರೇಖೆಯು ಸ್ವಲ್ಪ ದೂರ ಮೇಲಿನವರೆಗೆ ಸಮಾನಾಂತರವಾಗಿ ಹೋಗಿದ್ದು ಅದರ ತುದಿಗೆ ಹೊಂದಿ ಬಲರೇಖೆ ಕಡೆಗೆ ಅಡ್ಡಗೆರೆಯನ್ನು ಎಳೆಯಲಾಗಿದೆ. ಇದರಿಂದ ಅದರ ಮೇಲಿನ ಬಲಗಡೆಯ ರೇಖೆ ಸ್ವಲ್ಪ ಬಗ್ಗಿದೆ. ಅದರ ಮೇಲೆ ಹೊಂದಿ ಸರಳ ತಲೆಕಟ್ಟು ಇರುತ್ತದೆ. ಇದಕ್ಕೆ ‘ಕ’ ಒತ್ತು ನೀಡ ಬೇಕಿದ್ದರೆ ಕೆಳಚೌಕ ಭಾಗದ ಮಧ್ಯ ಅಡ್ಡಗೆರೆಯನ್ನು ಎಳೆಯಲಾಗಿರುತ್ತದೆ. ‘ಖ’ ಸ್ವಲ್ಪ ಬದಲಾವಣೆ ಆಗಿದೆ.

ಅರ್ಧ‘ನಾ’ವನ್ನು ಕನ್ನಡದ ಒಂಬತ್ತಿನಂತೆ ಕಿರಿದಾಗಿ ಮೂಲ ಅಕ್ಷರದ ಬದಿಗೆ ಬರೆಯಲಾಗಿದೆ. ಅರ್ಧ ‘ರಾ’ವನ್ನು ಈಗಿನಂತೆ ‘ರ’ವನ್ನು ಉದ್ದವಾಗಿ ಬರೆದು ಅದರ ತಲೆಕಟ್ಟನ್ನು ಮೇಲಕ್ಕೆ ಏರಿಸಲಾಗಿದೆ. ವ-ಚ ಲಿಪಿಗಳು ಹಾಗೂ ದ-ಡ-ಟ ಲಿಪಿಗಳು ಹಲವಾರು ಸಲ ಒಂದೇ ಹೋಲಿಕೆಯಲ್ಲಿ ಕಾಣುತ್ತವೆ. ಇನ್ನಿತರ ಮೂಲ ಲಿಪಿಗಳು ಹಿಂದಿನಂತೆ ಮುಂದುವರಿದಿವೆ. ಹಳೆಗನ್ನಡ ಶಕಟರೇಫ ‘ರ’ ಈ ಹಿಂದಿನಂತಿದ್ದು ಅದರ ತುದಿಗಳಿಗೆ ಗಂಟು ಇರುವುದಿಲ್ಲ.

ಕಾಗುಣಿತದಲ್ಲಿ ‘ಆ’ ಮೂಲಲಿಪಿ ತಲೆಕಟ್ಟಿನಿಂದ ಬಲಗಡೆಗೆ ಹಿಂದಿನಂತೆ ಕೆಳಗಡೆ ರೇಖೆ ಇಳಿದಿರುತ್ತದೆ. ಇ, ಈ, ಉ, ಊ, ಏ, ಋಗಳು ಹಿಂದಿನ ಶೈಲಿಯನ್ನು ಹೋಲುತ್ತವೆ. ‘ಓ’ ಕಾರದ ತಲೆಕಟ್ಟನ್ನು ಮಧ್ಯದಲ್ಲಿ ಬಗ್ಗಿಸಿ ಎಡಬಲಗಳಲ್ಲಿ ಹೆಚ್ಚು ಉದ್ದ ಇಳಿಬಿಡು ವುದನ್ನು ಕಾಣಬಹುದು. ಈ ಕಾಲದ ಕನ್ನಡ ಅಂಕಿಗಳು ೪, ೫ ಮತ್ತು ೮ ಬಿಟ್ಟರೆ, ಉಳಿದವು ಇನ್ನೂ ಕಂಡಿಲ್ಲ.

ರಾಷ್ಟ್ರಕೂಟರ ಲಿಪಿ

ಈ ಕಾಲದ ಅನೇಕ ಲಿಪಿಗಳು ಹೆಚ್ಚು ಗುಂಡಾಗಿವೆ. ರಾಷ್ಟ್ರಕೂಟರ ಕಾಲದ ಅಕ್ಷರಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವುಗಳ ತಲೆಕಟ್ಟು ಬೆಳೆದುದನ್ನು ಗಮನಿಸಬಹುದು. ‘ಆ’ ಲಿಪಿಯು ಬಾದಾಮಿ ಚಲುಕ್ಯರ ಕಾಲದ ಅಕ್ಷರದಂತಿದ್ದು ಅದರ ಮೇಲೆ ಮಧ್ಯ ಒಂದು ಕಿರಿದಾದ ಅಡ್ಡರೇಖೆಯನ್ನು ಜೋಡಿಸಲಾಗಿದೆ. ‘ಕ’ದಲ್ಲಿ ಬಾದಾಮಿ ಚಲುಕ್ಯರ ಕಾಲದಂಥ ಲಿಪಿಯಲ್ಲಿ ಕೆಳಗಿನ ಚೌಕ ಬಲರೇಖೆಯ ತುದಿ ಅಡ್ಡಪಟ್ಟಿಯನ್ನು ಬಿಟ್ಟಿರುತ್ತದೆ. ಈ ಅಡ್ಡಪಟ್ಟಿಯ ಮಧ್ಯ ತಲೆಕಟ್ಟುಳ್ಳ ಲಂಬರೇಖೆ ಯಿರುತ್ತದೆ. ‘ಖ’ ಈಗಿರುವ ರೂಪವನ್ನು ಹೊಂದಿದೆ. ‘ಘ’ ಕೆಳಭಾಗ ಅಗಲವಾಗಿ ಎರಡು ಭಾಗಗಳಾಗಿವೆ. ಬಲಭಾಗದ ತುದಿಗೆ ಒಂದು ವಕ್ರರೇಖೆ ಕೂಡಿರುತ್ತದೆ. ‘ಝ’ ಲಿಪಿಗೆ ‘ರ’ ಎಂಬ ಅಕ್ಷರಕ್ಕೆ ಎರಡು ಕೊಂಬುಗಳನ್ನು ಬಲರೇಖೆಗೆ ಕೂಡಿಸಲಾಗಿದೆ. ಟ-ದ-ಡ ಮತ್ತು ವ-ಚ ಅಕ್ಷರಗಳು ಹಲವಾರು ಸಲ ಒಂದೇ ರೀತಿಯಲ್ಲಿವೆ. ‘ತ’ ಲಿಪಿಯ ಎಡಭಾಗಕ್ಕೆ ಬಗ್ಗಿದ ರೇಖೆಯು ದುಂಡಾಗಿ ಮತ್ತು ಅಗಲವಾಗಿದೆ. ‘ಥ’ದ ತಲೆಕಟ್ಟು ಬೆಳೆದಿದೆ. ಅದರ ಕೆಳಭಾಗ ಎರಡು ಭಾಗಗಳಂತೆ ಬಗ್ಗಿದೆ. ‘ಪ’ ಅಗಲವಾಗಿವೆ. ರ, ಯ, ಲ, ವ, ಸ, ಮ ಅಗಲವಾಗಿದೆ ಮತ್ತು ಸ್ವಲ್ಪ ಈಗಿನ ಲಿಪಿಗಳಂತೆ ಕಾಣುತ್ತವೆ. ‘ಳ್’ ಇದನ್ನು ಈ ಕಾಲದಲ್ಲಿ ಉದ್ದರೇಖೆಗೆ ಕಿರಿಕೊಂಡಿಯುಳ್ಳ ಚಿನ್ಹೆಯನ್ನು೪೫ಂ ಓರೆಯಾಗಿ ಬರೆಯಲಾಗುತ್ತಿತ್ತು (ಪಟ್ಟದಕಲ್ಲಿನ ಧೃವನ ಶಾಸನ) ಕಾಗುಣಿತದಲ್ಲಿ ಈ ಕಾಲದ ಕೊನೆ ಭಾಗದಲ್ಲಿ ‘ಉ’ವನ್ನು ಮೂಲ ಅಕ್ಷರದ ಕೆಳಭಾಗದಲ್ಲಿ ಒಂದು ವಕ್ರರೇಖೆಯನ್ನು ಜೋಡಿಸುವುದು ಕಾಣುತ್ತದೆ. ‘ಇ’ ಕಾರ ಲಿಪಿ ಮೇಲೆ ಪೂರ್ಣವೃತ್ತ ಹೊಂದಿರುತ್ತದೆ. ‘ಈ’ ಕಾರ ಮಾತ್ರ ಬಲಗಡೆ ಈ ಹಿಂದಿನಂತೆ ತೆರೆದು ಸುತ್ತಿರುತ್ತದೆ. ‘ಉ’ ಕಾರವೂ ಹಿಂದಿನಂತೆ  ‘ರ’ ಲಿಪಿಯ ಕೆಳಭಾಗದ ಚಿಹ್ನೆಯನ್ನು ಅಕ್ಷರದ ಕೆಳಗಡೆ ಜೋಡಿಸಲಾಗಿರುತ್ತದೆ. ‘ಓ’ ಕಾರವು ಎರಡು ರೀತಿಯಲ್ಲಿ ಜಾರಿಯಲ್ಲಿತ್ತು. ಮೂಲ ಲಿಪಿಯ ತಲೆಗೆ ಎಡಗಡೆ ಮತ್ತು ಬಲಗಡೆ ತಲೆಕಟ್ಟು ಇಳಿಮುಖ ವಾದ ರೇಖೆ ಹಾಗೂ ಒಂದೇ ಕಡೆಗೆ ತಲೆಕಟ್ಟು ಬಗ್ಗಿ ಇಳಿಮುಖವಾದುದನ್ನು ಕಾಣಬಹುದು. ‘ಐ’ ಕಾರದ ಮೂಲ ಲಿಪಿಯ ಬಲಭಾಗದ ಚಿಹ್ನೆಯು ಪೂರ್ಣವಾಗಿ ಕೊಂಡಿಯಂತಿಯಿ ರುತ್ತದೆ. ಇನ್ನುಳಿದ ಅಕ್ಷರಗಳು ಬಾದಾಮಿ ಚಲುಕ್ಯರ ಕಾಲದ ಲಿಪಿಗಳ ಶೈಲಿಯಲ್ಲಿವೆ. ೧, ೪, ೫ ಮತ್ತು ೬ ಅಂಕಿಗಳು ಈ ಕಾಲದಲ್ಲಿ ಬಳಕೆಯಲ್ಲಿದ್ದುವು.

ಕಲ್ಯಾಣ ಚಾಲುಕ್ಯರ ಲಿಪಿ

ಈ ಕಾಲದ ಲಿಪಿಗಳನ್ನು ಹಿರಿಯ ವಿದ್ವಾಂಸರಾದ ಬುಹ್ಲರ್ ಮತ್ತು ಫ್ಲೀಟ್ ಹಳಗನ್ನಡ ಎಂದು ಕರೆದಿದ್ದಾರೆ. ಏಕೆಂದರೆ ಈ ಕಾಲದ ಅನೇಕ ಅಕ್ಷರಗಳು (ಶ, ವ, ಮ, ಪ, ನ, ಥ, ತ, ಣ, ಠ, ಙ, ಜ, ಕ, ಖ, ಒ, ಇ, ಗ, ಘ, ಯ, ರ, ಲ ಇತ್ಯಾದಿ) ಈಗಿನ ಕನ್ನಡ ಅಕ್ಷರಗಳನ್ನು ಹೋಲುತ್ತವೆ. ಈ ಕಾಲದ ಅಕ್ಷರಗಳು ದುಂಡಾಗಿವೆ. ಅಕ್ಷರಗಳ ತಲೆಕಟ್ಟು ಕಿರಿದಾದ ಕಮಾನಿನಂತಿವೆ. ‘ಇ’ ಲಿಪಿಯ ಕೆಳಗಿನ ಬಿಂದು ಕೇವಲ ಈಗಿನ ಲಿಪಿಯಂತಿರು ವುದನ್ನು ಕಾಣಬಹುದು. ‘ಈ’ ಲಿಪಿಗೆ ಪಾರ್ಶ್ವದ ಎರಡು ಬಿಂದುಗಳು ಮೂಲ ಅಕ್ಷರದ ವೃತ್ತಕ್ಕೆ ಸೇರಿ ಒಂದು ಅಡ್ಡರೇಖೆಯಾಗಿ ಪರಿವರ್ತನೆ ಹೊಂದಿದೆ. ‘ಉ’ ಅಕ್ಷರ ಅಗಲವಾಗಿದೆ. ಕೆಳಭಾಗ ಎರಡು ಅರ್ಧವೃತ್ತ ಭಾಗಗಳಾಗಿ ಬಲತುದಿಯಿಂದ ಎಡರೇಖೆಗೆ ಅಡ್ಡಗೆರೆಯನ್ನು ಎಳೆಯಲಾಗಿದೆ. ‘ಋ’ ಲಿಪಿ ಕದಂಬರ ಕಾಲದನಂತರ ಈ ಕಾಲದ ಲಿಪಿ ಮೇಲೆ ಇರುತ್ತದೆ. ಅದು ಇನ್ನೂ ಸ್ವಲ್ಪ ದೊಡ್ಡದಾಗಿದೆ. ‘ಕ’ ಲಿಪಿ ಗುಂಡಾಗಿ ಪರಿವರ್ತನೆ ಹೊಂದಿದೆ. ‘ಖ’ ಇನ್ನೂ ಗುಂಡಾಗಿ ಈಗಿನ ರೂಪದಲ್ಲಿದೆ. ‘ಚ’ ಅಕ್ಷರದ ಮೇಲ್ಭಾಗವು ಬಾಯಿ ತೆರೆದು ಎರಡು ಭಾಗಗಳಾಗಿದೆ. ಅದರ ಕೆಳಗಿನ ಮಧ್ಯಭಾಗ ಕೂಡಿಕೊಂಡಿರುತ್ತದೆ. ‘ಛ’ದ ಕೆಳಭಾಗದ ವೃತ್ತಗಳಿರದೆ ಮೇಲ್ಭಾಗ ಬಾಯಿಬಿಟ್ಟಿದೆ. ಕೆಳಭಾಗ ಕೊಂಡಿಯಂತಿರುತ್ತದೆ. ‘ದ’ ಲಿಪಿಯ ಕೆಳಗಿನ ಬಲಗಡೆಯ ಅರ್ಧವೃತ್ತದ ತುದಿ ಸ್ವಲ್ಪ ಬಗ್ಗಿರುತ್ತದೆ. ‘ಠ’ ಲಿಪಿಯ ಒಂದು ವೃತ್ತ ದೊಳಗೆ ಬಿಂದುವಿದ್ದು ಅದಕ್ಕೆ ಕಿರಿದಾದ ತಲೆಕಟ್ಟಿರುತ್ತದೆ. ‘ಡ’ ಲಿಪಿ ಈ ಕಾಲದ ‘ದ’ ದಂತೆ ಕಂಡರೂ ಅದರ ಕೆಳಗಿನ ಬಲ ಅರ್ಧವೃತ್ತದ ತುದಿಯು ಮೇಲ್ಗಡೆ ಸುತ್ತಿರುತ್ತದೆ. ‘ಧ’ ಈಗಿನ ‘ದ’ ಲಿಪಿಯಂತಿದ್ದು ಅದಕ್ಕೆ ಹೊಕ್ಕಳ ಸೀಳಿರುವುದಿಲ್ಲ. ‘ಪ’ ಅದರ ಮೇಲ್ತುದಿಯು ಬಲಗಡೆಗೆ ಬಗ್ಗಿರುತ್ತದೆ. ಈ ಕಾಲದ ಅನೇಕ ಅಕ್ಷರಗಳ ಮೇಲೆ ತಲೆಕಟ್ಟು ಪ್ರತ್ಯೇಕವಾಗಿರುತ್ತದೆ. ಉದಾಹರಣೆಗೆ ಪ, ಫ, ಮ, ತ, ಥ, ದ, ಧ, ನ, ಟ, ಠ, ಡ, ಢ, ಕ, ಗ, ಘ, ಯ, ರ, ವ, ಷ, ಸ, ಶ, ಹ ಮತ್ತು ಳ. ‘ಬ’ಕ್ಕೆ ಮೇಲ್ಭಾಗ ಬಿಚ್ಚಿರುತ್ತದೆ. ಕೆಳಗಿನ ಮಧ್ಯಭಾಗ ಸ್ವಲ್ಪ ಬಗ್ಗಿರುತ್ತದೆ. ‘ಭ’ದಲ್ಲಿ ಎರಡು ಸಮಾನಾಂತರ ಭಾಗಗಳಾಗಿ ಒಂದಕ್ಕೊಂದು ಪ್ರತ್ಯೇಕವಾಗಿವೆ. ಬಲ ಲಂಬರೇಖೆಗೆ ತಲೆಕಟ್ಟಿದೆ. ಕಾಗುಣಿತದಲ್ಲಿ ಅಕ್ಷರಗಳು ವಾ, ದಾ, ಷಾ, ರಾ, ಯಾ, ಣಾ, ನಾ, ಮಾ, ಧಾ, ಶಾ ಇತ್ಯಾದಿ ಈಗಿನ ಅಕ್ಷರದಂತಿವೆ. ‘ಸಾ’ ಅಕ್ಷರದಲ್ಲಿ ಅದರ ಬಲರೇಖೆ ಬಗ್ಗಿರುತ್ತದೆ. ‘ಹಾ’ದಲ್ಲಿ ಅದರ ಬಲರೇಖೆಯ ಮೇಲೆ ಒಂದು ಗೆರೆಯನ್ನು ಮೇಲಕ್ಕೆ ಬಾಗಿಸಿ ಜೋಡಿಸಲಾಗಿದೆ. ‘ಇ’ ಕಾರವು ‘ವಿ, ತಿ, ವಿ, ನಿ ಇತ್ಯಾದಿ ಅಕ್ಷರಗಳ ತಲೆಕಟ್ಟು ಅರ್ಧವೃತ್ತದಲ್ಲಿ ಎಡಗಡೆಗೆ ಬಾಗಿದೆ. ‘ಉ, ಊ’ಕಾರವು ಈಗಿನಂತೆ ಮೂಲ ಅಕ್ಷರಗಳ ಬದಿಗೆ ಜೋಡಿಸಲಾಗಿದೆ. ‘ಋ’ ಕಾರ ಹೆಚ್ಚು ಅಗಲ ವಾಗಿರುತ್ತದೆ. ‘ಏ’ ಕಾರವು ಮೂಲ ಲಿಪಿಯ ತಲೆಕಟ್ಟಿನ ಬಲಭಾಗದ ರೇಖೆಯು ಮೇಲಕ್ಕೆ ಕೊಂಡಿಯಂತೆ ಇದೆ ಅಥವಾ ಆ ಕೊಂಡಿ ಅಂಚಿನಲ್ಲಿ ಕೆಳಗಡೆ ಬಾಗಿದೆ. ‘ಐ’ ಕಾರ  ಲಿಪಿ ಈ ಮೇಲೆ ಹೇಳಿದಂತೆ ಕಾಣಿಸುತ್ತದೆ. ‘ಓ’ ಕಾರ ಮೂಲ ಲಿಪಿಯ ಮೇಲಿನ ತಲೆಕಟ್ಟು ರೇಖೆಯನ್ನು ಮೇಲೆ ತಿಳಿಸಿದಂತೆ ‘ಏ’ ಚಿಹ್ನೆ ಸೂಚಿಸಿ, ತಲೆಕಟ್ಟಿನ ಬಲತುದಿಯನ್ನು ಉದ್ದವಾಗಿ ಇಳಿಬಿಡ ಲಾಗಿದೆ. ಇದು ಈ ಕಾಲದ ಮಹತ್ವದ ಪರಿವರ್ತನೆ. ಅದರ ‘ಹ’ ಮತ್ತು ‘ಔ’ ಕಾರ ಈ ಕಾಲದ ಲಕ್ಷಣವನ್ನು ಸೂಚಿಸುತ್ತವೆ. ಎಲ್ಲಾ ಹಳಗನ್ನಡ ಅಂಕಿಗಳು ಈ ಕಾಲದಲ್ಲಿ ಕಾಣುತ್ತವೆ. ಲಿಪಿಗಳನ್ನು ಅಲಂಕೃತಗೊಳಿಸಲಾಗಿದೆ. ಉದಾಹರಣೆಗೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪ್ರದೇಶದ ಶಾಸನಗಳಲ್ಲಿ, ಬೀದರ ಜಿಲ್ಲೆಯ ಖಿಣಿರಂಜೋಳ ಮುಂತಾದ ಶಾಸನಗಳಲ್ಲಿ ಕಾಣಬಹುದು.

ಮೂಲ ಲಿಪಿಗಳಿಗೆ ಒತ್ತು ನೀಡುವಾಗ ಸಂಬಂಧಿಸಿದ ಕಿರಿದಾದ ಲಿಪಿಗಳನ್ನು ಬರೆಯ ಲಾಗಿದೆ. ಉದಾಹರಣೆಗೆ ‘ಮ’ ಒತ್ತಿದ್ದರೆ ಈಗಿನ ‘ನ್ನ’ ಒತ್ತನ್ನು ಇನ್ನೊಂದು ಮಗ್ಗಲು ತಿರುವಿ ಬರೆಯಲಾಗಿದೆ. ‘ತ’ ಒತ್ತನ್ನು ಈಗಿನಂತೆ ಬರೆಯಲಾಗಿದೆ. ಉಳಿದವು ಈ ಹಿಂದಿನ ಶೈಲಿಯಲ್ಲಿವೆ.

ಹೊಯ್ಸಳ, ಕಳಚುರಿ, ಸೇವುಣ ಮತ್ತು ಕಾಕತೀಯರ ಲಿಪಿ

ಈ ನಾಲ್ಕು ಅರಸುಮನೆತನದ ಲಿಪಿಗಳು ಕಲ್ಯಾಣ ಚಾಲುಕ್ಯರ ಲಿಪಿಗಳನ್ನೇ ಹೆಚ್ಚಾಗಿ ಹೋಲುತ್ತವೆ. ಈ ಕಾಲದ ಲಿಪಿಗಳು ಗುಂಡಾಗಿ, ಸುಂದರವಾಗಿ, ಕೆಲವೊಮ್ಮೆ ಅಲಂಕಾರ ಯುಕ್ತವಾಗಿವೆ. ಹೊಯ್ಸಳರ ಹಲವಾರು ಶಾಸನಗಳ ಲಿಪಿಗಳು ಕಲಾತ್ಮಕವಾಗಿವೆ. ತಲೆಕಟ್ಟು ಕಿರಿಯ ಕಮಾನಿನಂತೆ ಮೂಲ ಲಿಪಿಗೆ ಕಿರುಲಂಬರೇಖೆಯಿಂದ ಅಥವಾ ಇಲ್ಲದೆ ಕೂಡಿರುತ್ತವೆ. ಈ ಕಾಲದ ಹೆಚ್ಚಿನ ಅಕ್ಷರಗಳು ಈ ಕಾಲದ ಲಿಪಿಗಳನ್ನು ಹೆಚ್ಚು ಹೋಲುತ್ತವೆ. ಆದರೆ ಈ ಊ, ಋ, ಚ, ಛ, ಞ, ಟ, ಢ, ದ, ಪ, ಫ, ಭ, ಷ, ಸ, ಹ, ಳ ಅಕ್ಷರಗಳು ಈ ಕಾಲದ ಲಿಪಿಗಳಿಗಿಂತ ಭಿನ್ನವಾಗಿವೆ. ಇವು ಹೆಚ್ಚು ಕಲ್ಯಾಣ ಚಾಲುಕ್ಯರ ಲಿಪಿಗಳನ್ನು ಹೋಲುತ್ತದೆ. ಕಾಗುಣಿತ ಇತ್ಯಾದಿಗಳು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿವೆ. ಆದರೆ ‘ಏ’ಕಾರಕವನ್ನು ಈಗಿನಂತೆ ಇಳಿ ಬರೆದು ಸೂಚಿಸಿದ ಉದಾಹರಣೆಗಳು ಕಾಕತೀಯರ ಹಲವಾರು ಶಾಸನಗಳ ಲಿಪಿಗಳಲ್ಲಿವೆ (ಬೀದರ ಶಾಸನ). ಅನುಸ್ವಾರ, ವಿಸರ್ಗಗಳು ಈಗಿನ ಶೈಲಿಯಲ್ಲಿವೆ.

ಹೊಯ್ಸಳರ ಕಾಲದ ಅನೇಕ ಶಾಸನಗಳ ಲಿಪಿಗಳಲ್ಲಿ ಅಲಂಕಾರಗಳಿವೆ. ಶಾಸನಗಳ ಆರಂಭ, ಅಂತ್ಯ ಮತ್ತು ಅಂಚಿನ ಅಕ್ಷರಗಳಾದ ಶ್ರೀ, ತ್ರೈ, ರ‍್ವರ್ಗಗಳಿಗೆ ಹೊಂದಿ ಹೂ, ಬಳ್ಳಿಗಳ ಅಲಂಕಾರಗಳಿವೆ. ಅಲಂಕೃತ ಲಿಪಿಗಳ ಬಗ್ಗೆ ದಿ. ರಘುನಾಥ ಭಟ್ಟ ಅವರು ಒಂದು ಲೇಖನವನ್ನು ಬರೆದಿದ್ದಾರೆ.

ವಿಜಯನಗರ ಲಿಪಿ

ಈ ಕಾಲದ ಲಿಪಿಗಳು ಹೆಚ್ಚು ಡೊಂಕಾಗಿವೆ. ಘ, ಝ, ಥ, ಧ, ಢ, ಫ, ಭ ಲಿಪಿಗಳ ಮಹಾಪ್ರಾಣವನ್ನು ಸೂಚಿಸಲು ಅವುಗಳ ಮಧ್ಯ ಅಲ್ಪಪ್ರಾಣವಾಗಿ ಒಂದು ಗೆರೆಯನ್ನು ಬರೆಯುವ ಪದ್ಧತಿ ಆರಂಭವಾಗಿದೆ. ಈ ಕಾಲದಲ್ಲಿ ಅನೇಕ ಡೊಂಕು ಲಿಪಿಗಳು ಕಾಣಿಸುತ್ತವೆ. ಆದರೆ ಉ, ಭ, ಣ, ಪ, ಫ, ಚ, ಷ, ಸ, ಹ ಲಿಪಿಗಳು ಹಿಂದಿನ ಶೈಲಿಯಲ್ಲೇ ಮುಂದುವರಿದಿವೆ. ಅಕ್ಷರಗಳ ತಲೆಕಟ್ಟುಗಳು ಹೆಚ್ಚು ಉದ್ದವಾಗಿವೆ.

ಮೈಸೂರು ಒಡೆಯರು ಮತ್ತು ನಾಯಕರ ಲಿಪಿಗಳು

ಈ ಕಾಲದ ಅನೇಕ ಲಿಪಿಗಳು ಹಿಂದಿನ ಕಾಲದ ಲಿಪಿಗಳನ್ನೇ ಹೋಲುತ್ತವೆ. ಆದರೆ ಈ ಮೇಲೆ ತಿಳಿಸಿದ (ವಿಜಯನಗರ ಕಾಲದ ಲಿಪಿ) ಲಿಪಿಗಳು ಈ ಕಾಲದ ಶೈಲಿಯಂತೆ ಪೂರ್ಣ ಬದಲಾವಣೆಯಾಗಿಲ್ಲ.

ಸುಮಾರು ಎರಡು ಸಾವಿರ ವರ್ಷದಲ್ಲಿ ಈಗಿನ ಕನ್ನಡ ಲಿಪಿಯು ಬ್ರಾಹ್ಮೀ ಲಿಪಿಯಿಂದ ಹಂತ ಹಂತವಾಗಿ ವಿಕಾಸ ಹೊಂದಿದ್ದನ್ನು ನೋಡಿದರೆ ಅವುಗಳ ಬದಲಾವಣೆಗೆ ಅನೇಕ ಕಾರಣಗಳಿರಬಹುದೆಂದು ಲಿಪಿಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

೧. ಲಿಪಿಗಳನ್ನು ಬರೆಯಲು ಉಪಯೋಗಿಸಿದ ಉಪಕರಣಗಳ ಪ್ರಭಾವ ಅಕ್ಷರಗಳ ಬದಲಾವಣೆಗೆ ಕಾರಣವಾಗಿದೆ. ಶಾಸನ ಬರವಣಿಗೆಗೆ ಬಳಸಿದ ಶಿಲೆ, ಲೋಹದ ತಗಡು, ಲೇಖನಿ ಇವುಗಳು ಲಿಪಿಯ ರೂಪದ ಮೇಲೆ ಪ್ರಭಾವ ಬೀರಿವೆ. ಶಾಸನ ಬರೆಸುವ ಮುನ್ನ ಅದರ ಪಾಠವನ್ನು ತಾಳೆಓಲೆ ಅಥವಾ ಭೂರ್ಜಪತ್ರ ಇತ್ಯಾದಿ ವಸ್ತುಗಳ ಮೇಲೆ ಬರೆಯಲಾಗುತ್ತಿತ್ತು. ಶಾಸನ ಬರೆಯಲು ಮಸಿ ಹಾಗೂ ಲೋಹದ, ಕಬ್ಬಿಣ ಅಥವಾ ತಾಮ್ರದ, ಚೂಪಾದ ಲೇಖನಿಗಳನ್ನು ಬಳಸಲಾಗುತ್ತಿತ್ತು. ಅಕ್ಷರಗಳನ್ನು ಬರೆಯುವಾಗ ಮಸಿ ದಪ್ಪವಾಗಿ ತ್ರಿಕೋನ, ಚೌಕ ಇತ್ಯಾದಿ ಆಕಾರದಲ್ಲಿ ಹರಡುತ್ತಿದ್ದು ಕೆತ್ತನೆಯ ಮೇಲೆ ಪರಿಣಾಮ ಮಾಡಿರಬೇಕೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

೨. ಸಮಗ್ರ ಭಾರತದಲ್ಲಿ ಒಂದೇ ಮಾದರಿ ಲಿಪಿ ಜಾರಿಯಲ್ಲಿ ಬರಲಿಲ್ಲ. ಆಳರಸರು, ಆಳ್ವಿಕೆಯ ವ್ಯಾಪ್ತಿ ಭಿನ್ನವಾಗಿತ್ತು ಮತ್ತು ಭಿನ್ನ ಸಾಂಸ್ಕೃತಿಕ ಸಂಬಂಧಗಳಿದ್ದವು. ಹೀಗೆ ಅನೇಕ ಕಾರಣಗಳಿಂದ ಲಿಪಿಯ ಬೆಳವಣಿಗೆಗೆ ಅವಕಾಶ ಕಲ್ಪಿಸಿರಬೇಕು. ಹೀಗಿದ್ದೂ ಮೌರ್ಯ ಕಾಲದ ಲಿಪಿಯೇ ಹಂತ ಹಂತವಾಗಿ ಸ್ವಲ್ಪ ಭಿನ್ನವಾಗಿ ವಿಕಾಸ ಹೊಂದಿದ್ದನ್ನು ಗಮನಿಸಬಹುದಾಗಿದೆ.

೩. ಲಿಪಿ ವಿಕಾಸಕ್ಕೆ ಅಲಂಕಾರದಲ್ಲಿ ಬದಲಾವಣೆ ನಿರೂಪಿತಗೊಂಡವು. ಹೊಯ್ಸಳರ ಕಾಲದಿಂದ ಲಿಪಿಯಲ್ಲಿ ಒತ್ತುಗಳು, ಇಳಿ, ಕೊಂಬುಗಳ ಅಲಂಕಾರ ಗಮನೀಯ.

೪. ವೈಯಕ್ತಿಕ ಶೈಲಿ, ಅಭಿರುಚಿ, ಪರಂಪರೆ ಇತ್ಯಾದಿ ಕಾರಣಗಳು ಲಿಪಿಯ ಶೈಲಿಯ ವಿಕಾಸಕ್ಕೆ ಕಾರಣವಾಗಿವೆ.

ಆಧುನಿಕತೆಯಲ್ಲಿ ಮುದ್ರಣ ಕಲೆಯ ಪ್ರಭಾವದಿಂದ ಏಕರೂಪದ ಲಿಪಿಯ ಬರವಣಿಗೆ ಸಾಧ್ಯವಾಗಿದೆ. ಗಣಕಯಂತ್ರದಲ್ಲಿ ಅದರಲ್ಲಿಯೂ ವೈವಿಧ್ಯವನ್ನು ಸಾಧಿಸಿರುವುದನ್ನು ಕಾಣುತ್ತೇವೆ.

ಗ್ರಂಥಋಣ

1. A.C. Burnell, Elements of South Indian Palaeography, Indologcal Book House, Varanasi, 1878.

2. David Deringer, The Alphabet, Hutching Sons of London, 1968.

3. C. Shivaram Murthy, Indian Epigraphy and South Indian Scripts, Madras, Government Museum, Madras.

4. Mahalingam T.V., Early South Indian Palaeography.

5. ಎ.ವಿ. ನರಸಿಂಹಮೂರ್ತಿ, ಕನ್ನಡ ಲಿಪಿಯ ಉಗಮ ಮತ್ತು ವಿಕಾಸ, ಮೈಸೂರು ವಿಶ್ವ ವಿದ್ಯಾಲಯ, ಮೈಸೂರು, ೧೯೬೮.

6. G. Buhler, Indian Palaeography, Indian Studies Past and Present, 1962.