ಪ್ರಾಕೃತ ಹಾಗೂ ಸಂಸ್ಕೃತ ಭಾಷೆಗಳು, ಅಲ್ಲಲ್ಲ ಭಾರತೀಯರ ಪ್ರಾಚೀನ ಭಾಷೆಯ  ಆಡುವ ಸ್ವರೂಪ ಹಾಗೂ ಬರೆಹ ಅದರಲ್ಲೂ ಸಂಸ್ಕರಿಸಿದ ಭಾಷೆಯ ರೂಪ ಇವನ್ನು ಅನೇಕರು ಬೇರೆ ಬೇರೆ ಎಂದು ತಿಳಿದಿದ್ದಾರೆ! ಭಾರತೀಯ ಜನತೆ ಎಷ್ಟು ಸಹಸ್ರಮಾನಗಳ ಕಾಲದಿಂದ ಅಸ್ತಿತ್ವದಲ್ಲಿ ಇದೆ ಎಂಬುದರ ಲೆಕ್ಕ ಹಾಕದೆ ಪ್ರಾಚ್ಯ ಹಾಗೂ ಅವರಿಗೆ ಅಂದು ಸಹಾಯಕ್ಕೆ ನಿಂತ ಭಾರತೀಯ ವಿದ್ವಾಂಸರು ಮೇಲ್ಮೈಯಲ್ಲಿ (Surface) ದೊರಕಿದ, ಹೇಳಿಕೆ ಕೇಳಿಕೆಗಳನ್ನು ಮತ್ತು ವಿಶೇಷ ವಿಮರ್ಶೆಗೆ, ಅಧ್ಯಯನಕ್ಕೆ, ಒಳಪಡಿಸದೆ ಇತಿಹಾಸ ವನ್ನು ನಿರೂಪಿಸಿದರು. ಇಂದು ನಾವು ಪ್ರಾಕೃತ ದಾಖಲೆಗಳನ್ನು ಪರಿಶೀಲಿಸಿಸುವುದಕ್ಕೆ  ಎತ್ತಿಕೊಂಡ ಕೂಡಲೇ ನಮ್ಮ ಗಮನಕ್ಕೆ ಬರುವುದೇನೆಂದರೆ ಬರಹದ ಪ್ರಾಚೀನ ಪಳೆಯುಳಿಕೆ ಗಳು; ಬೌದ್ಧ ಧರ್ಮದ ಪ್ರಸಾರಕ್ಕಾಗಿ ಹುಟ್ಟಿದ ಆಶೋಕ ಚಕ್ರವರ್ತಿಯ ಶಿಲಾಲೇಖಗಳು; ದೇವನಾಂಪ್ರಿಯನ ಪ್ರಿಯವಾದ ಧರ್ಮಶಾಸನಗಳು. ಇವು ಜನರ ತಿಳಿವಳಿಕೆಗಾಗಿ ಸರಳ ಭಾಷೆಯಲ್ಲಿ ಹುಟ್ಟಿಕೊಂಡವು. ಭಾರತ ದೇಶದಲ್ಲಿ ಭಾಷೆ ಎಷ್ಟು ಬೆಳೆದಿತ್ತು ಎಂಬುದನ್ನು ದಯವಿಟ್ಟು ಗಮನಿಸಿ. ಆಡುಮಾತಿನ ಬಗೆಯೆ ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ. ಪ್ರಾಕೃತ ಎಂದು ಕರೆಯಲ್ಪಟ್ಟ ಭಾಷೆ ಪ್ರಕೃತಿಗೆ ಆನಿಕೊಂಡು ಬಂದುದು. ಕ್ರಿ.ಪೂ. ೬ ಹಾಗೂ ೫ನೇ ಶತಮಾನಗಳಲ್ಲಿ ಬೆಳಗಿದ ಮಹಾನ್ ವ್ಯಕ್ತಿಗಳಾದ ಮಹಾವೀರ ವರ್ಧಮಾನ ಹಾಗೂ ಗೌತಮಬುದ್ಧ ದೂರದ ನೆಂಟರು, ‘ಲಿಚ್ಛವಿ’ ಎಂಬ ಒಂದು ಕುಟುಂಬದ ಇಬ್ಬರು ಸ್ತ್ರೀಯರಲ್ಲಿ, ಎರಡು ಬೇರೆ ಬೇರೆ ರಾಜಮನೆತನಗಳಲ್ಲಿ ಜನ್ಮವೆತ್ತ ಮಹಾಪುರುಷರು. ಇವರು ಸಂವಹನಕ್ಕಾಗಿ ಬಳಸಿದ ಭಾಷೆ, ಎಂದರೆ ಜನಭಾಷೆಯಾದ ಪ್ರಾಕೃತ ಹಾಗೂ ಪಾಲಿ. ನಮ್ಮ ವಿದ್ವಾಂಸರು ಇವು ಬೇರೆ ಬೇರೆ ಎಂದು ಕಂಡರು! ಒಂದೇ ಮನೆಯ ಇಬ್ಬರು ಹೆಣ್ಣುಮಕ್ಕಳು ಹೆತ್ತ ಕೂಸುಗಳಿಗೆ ಬೇರೆ ಬೇರೆ ಭಾಷೆಗಳಲ್ಲಿ ಲಾಲಿ ಹಾಡಿದರು! ಇದು ನಮ್ಮ ವಿವೇಕ-ವಿವೇಚನೆ-ಒಪ್ಪದಮಾತು. ಅದು ಆ ಕಾಲದ ಅಂದಿನ ಜನ ಬಳಕೆ ಯಲ್ಲಿದ್ದ ಒಂದೇ ಭಾಷೆ, ಎರಡಲ್ಲ. ಇದನ್ನು ಪರಿಶೀಲಿಸಲು ಆಗುಳಿನಿಂದ ಅನ್ನದ ಹಾಗೆ ‘ಧಮ್ಮ’ ಒಂದು ಶಬ್ದವನ್ನು ನೋಡೋಣ.

೧.       ಧಮ್ಮಂ ಶರಣಂ ಗಚ್ಛಾಮಿ (ಬೌದ್ಧಧರ್ಮ್ಮ)

೨.       ಏಯಾ ದಸದಸ ಭೇಯಂ
ಧಮ್ಮಂ ಸಮ್ಮತ್ತಂ ಪುಬ್ಬಯಂ ಭಣಿಯಂ
ಸಾಗಾರಣಗಾರಾಣಂ
ಉತ್ತಮ ಸುಹ ಸಂಪಜುತ್ತೇಹಿಂ ||೬೭||
– ಬಾರಸ ಅಣುಪೇಹಣಂ (ದ್ವಾದಶಾನುಪ್ರೇಕ್ಷೆ)
ಕೊಣ್ಡಕುಂದಾಚಾರ್ಯರು (ಜೈನಧರ್ಮ)

ಬುದ್ಧನ ಭಾಷೆಯ ಪಳೆಯುಳಿಕೆ ಒಂದಾದರೆ ಮಹಾವೀರ ವರ್ದ್ಧಮಾನರ ಚಿಂತನದ ಪಳೆಯುಳಿಕೆ ಇನ್ನೊಂದು. ಬೌದ್ಧಧರ್ಮದ ನಿರೂಪಣೆಯನ್ನು ಅಧ್ಯಯನ ಮಾಡಿದ ವಿದ್ವಾಂಸರು ಪಾಲಿ ಅಂದರು; ಮತ್ತೆ ಜೈನಧರ್ಮವನ್ನು ಕಿಂಚಿತ್ ಅಧ್ಯಯನ ಮಾಡಿ ನಿರೂಪಿಸಿದ ವಿದ್ವಾಂಸರು ಪ್ರಾಕೃತ ಇಲ್ಲವೆ ಮಾಗಧಿ (ಮಗಧ ಪ್ರಾಂತದ ಭಾಷೆ) ಎಂದರು! ವಾಸ್ತವದಲ್ಲಿ ಇವು ಒಂದು ಭಾಷೆಯ ಪ್ರಾಂತಭೇದರೂಪಗಳು; ಧಾರವಾಡ ಕನ್ನಡ ಮತ್ತು ಮೈಸೂರು ಕನ್ನಡ ಎಂದಹಾಗೆ. ಇವುಗಳಲ್ಲಿ ಇದ್ದ ಕನ್ನಡವು ಹೇಗೆ ಒಂದೋ ಹಾಗೆ ಪ್ರಾಕೃತ ಪಾಲಿಗಳಲ್ಲಿ ಅಂತರ್ಗತವಾಗಿ ಇದ್ದದ್ದು ಸಂಸ್ಕೃತ. ಪ್ರಾಕೃತ ಹಾಗೂ ಸಂಸ್ಕೃತ ಇವು ಒಂದೇ ನಾಣ್ಯದ ಎರಡು ಮುಖಗಳು. ಈ ಸಂಗತಿಯನ್ನು ಡಾ. ಆ.ನೇ. ಉಪಾಧ್ಯೆ ಪ್ರಾಕೃತ ಪ್ರಾಚಾರ್ಯರು (Professor) ತಮ್ಮ ಉಪನ್ಯಾಸಗಳಲ್ಲಿ ಹೇಳುತ್ತಿದ್ದರು. ಪ್ರಾಕೃತ ಭಾಷೆಯ ಶಬ್ದಭಂಡಾರವನ್ನು ನೋಡಿದಾಗ ಅವಲೋಕನದಲ್ಲಿ ವಿಮರ್ಶೆಯ ನಿಕಷಕ್ಕೆ ಒರೆದಾಗ ನಿಲ್ಲುವ ಸುವರ್ಣ ಒಂದೇ, ಅದೇ ಸಂಸ್ಕೃತ ಭಾಷೆ-ಬರಹದ ನುಡಿ ಹಾಗೂ ಮಾತಿನ ನುಡಿ (i.e. Written language and spoken language).

ಅಕ್ಷರ ಪ್ರಕರಣವನ್ನು ಎತ್ತಿಕೊಂಡರೆ ಕಂಡುಬರುವ ಸೋಜಿಗ ಎಂದರೆ ಅತ್ಯಂತ ಉಪಲಬ್ಧ ಬರವಣಿಗೆಯೆಲ್ಲ ಉತ್ತರ ಭಾರತವಿರಲಿ ದಕ್ಷಿಣ ಭಾರತವಿರಲಿ (ಪ್ರಾಚೀನ ಬರವಣಿಗೆಯೆಲ್ಲ) ಪ್ರಾಕೃತವೇ. ಅಶೋಕನ ಶಾಸನಗಳೇ ಅತ್ಯಂತ ಖಚಿತ ಪ್ರಾಚೀನ ದಾಖಲೆಗಳು. ಇದರಲ್ಲಿ ಸಂದೇಹಪಡುವಂತಹ ವಿಷಯವೇ ಇಲ್ಲ. ಅಶೋಕನ ಧರ್ಮ್ಮ ಶಾಸನಗಳ ಬರವಣಿಗೆ ಸಾಕಷ್ಟು ಬೆಳವಣಿಗೆ ಪಡೆದ ಬರಹ. ಅವು ರಾಜನಿಗೆ ಬೇಕಾದ ಸಂಗತಿಗಳನ್ನು ತಿಳಿಸಲು ಬರೆದ ಬರಹಗಳು. ಅವು ಅಕ್ಷರ ಪ್ರಕರಣ ನಿರೂಪಿಸಲು ರಚಿಸಿದ ಕೃತಿಗಳಲ್ಲ; ಎಂದರೆ ಅಕ್ಷರಗಳೆಲ್ಲವನ್ನು ತಿಳಿಸಲು ಬರೆದ, ಅರ್ಥಾತ್ ಲಿಪಿಮಾಲೆ ಯೆಲ್ಲವನ್ನೂ ತಿಳಿಸಲು ಬರೆದ ಬರಹವಲ್ಲ. ಅರ್ಥಾತ್ ಅಶೋಕನ ಶಾಸನಗಳಲ್ಲಿ ಎಲ್ಲ ಅಕ್ಷರಗಳ ಚಾಕ್ಷುಷ ರೂಪಗಳು ಇರಲೇಬೇಕೆಂದಿಲ್ಲ. ಎಂದರೆ ಅವುಗಳಲ್ಲಿ ಒಂದು ಅಕ್ಷರ ಉದಾಹರಣೆಗೆ ‘ಋ’ ಅಕ್ಷರ ಇಲ್ಲವೆಂದ ಮಾತ್ರಕ್ಕೆ ಅಂದಿನ ಲಿಪಿಮಾಲೆಯಲ್ಲಿ ‘ಋ’ ಅಥವಾ ಇನ್ನಾವುದೇ ಅಕ್ಷರ ಇದ್ದಿಲ್ಲವೆಂದಲ್ಲ. ಜೇಮ್ಸ್ ಪ್ರಿನ್ಸೆಪ್, ಎ.ಸಿ. ಬರ್ನೆಲ್; ಲಾಸೆನ್ ಹಾಗೂ ಜಿ. ಬುಹ್ಲರ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರ ಕಾರ್ಯ್ಯ ಓದಲು ಒಗಟಾಗಿದ್ದ ಲಿಪಿಯನ್ನು ಓದಿ ಇತರರಿಗೆ ಓದಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವ ಹಾಗೆ ಆ ಲಿಪಿಮಾಲೆಯನ್ನು ಸೃಜಿಸಿಕೊಂಡು ಪುಸ್ತಕಗಳನ್ನು ರಚಿಸಿದುದು. ಇವು ಅದ್ಭುತ ಕಾರ್ಯಗಳು ಎನ್ನುವದರಲ್ಲಿ ನನಗೆ ಕಿಂಚಿತ್ತೂ ಸಂದೇಹವಿಲ್ಲ. ಈ ಲಿಪಿಮಾಲೆಯನ್ನು ಸೃಜಿಸಿಕೊಡಲು ಆಧಾರಗಳು ಆಗಾಗ ದೊರೆತ ಪ್ರಾಕೃತ ಬರಹವನ್ನುಳ್ಳ ನಾಣ್ಯಗಳು ಮತ್ತು ಅಶೋಕನ ಶಾಸನಗಳಾಗಿವೆ. ಅಶೋಕನ ಕಾಲಕ್ಕಾಗಲೇ ಭಾರತದಲ್ಲಿ ಭಾಷೆ ಬರಹದ ರೂಪದಲ್ಲಿ ಸಾಕಷ್ಟು ಬೆಳೆದು ನಿಂತಿತ್ತು. ಅರ್ಥಾತ್ ಪ್ರೌಢಾವಸ್ಥೆಗೆ ಬಂದಿತ್ತು. ಭಾರತದ ಸಾಹಿತ್ಯಾಕಾಶದಲ್ಲಿ ಆ ಸಮಯಕ್ಕಾಗಲೆ ಮುಂಚೆಯೇ ವೇದ, ಉಪನಿಷತ್ತು, ಅರಣ್ಯಕ, ರಾಮಾಯಣ ಹಾಗೂ ಮಹಾಭಾರತ ಇತ್ಯಾದಿ ವೈದಿಕ ಸಾಹಿತ್ಯವೂ ಜೈನ ಹಾಗೂ ಬೌದ್ಧ ಸಾಹಿತ್ಯಗಳೂ ಜನ್ಮತಳೆದು ಹಲವು ಶತಮಾನಗಳೇ ಆಗಿದ್ದವು. ಮತ್ತೆ ಹಲವು ಪುರಾಣಗಳೂ ಹುಟ್ಟಿ ದಾರಿದೀಪವಾಗಿದ್ದವು. ಅಶೋಕನ ಬ್ರಹ್ಮಗಿರಿ, ಸಿದ್ಧಾಪುರ ಹಾಗೂ ಜಟಿಂಗ ರಾಮೇಶ್ವರ ಸಂಕೀರ್ಣದಲ್ಲಿ ದೊರಕಿದ ಶಾಸನಗಳಿಂದ ಎಂದರೆ ಅಲ್ಲಿ ಬಂದಿರುವ “ಏಸಾ ಪೋರಾಣಾ ಪಂಕಿತಿ” ಎಂಬ ವಾಕ್ಯದಿಂದ ಸ್ಪಷ್ಟವಿದೆ. ಇದು ಪುರಾಣ ಪಥ-ಪರಂಪರೆ. ಪುರಾಣಗಳ ಕಾಲವೂ ‘ಪುರಾಣ’ ಶಬ್ದದ ಪ್ರಯೋಗವೂ ಹುಟ್ಟಿನಿಂದ ಹಿಂದಕ್ಕೆ ಹೋಗುತ್ತದೆ. ವ್ಯಾಸರು ತಮ್ಮ ಶಿಷ್ಯ ಹಾಗೂ ಪುತ್ರ ಹೀಗೆ ಐದು ಮಂದಿಗೆ ಸುಮಂತ, ಪೈಲ, ಜಯಮುನಿ (ಜೈಮಿನಿ), ವೈಶಂಪಾಯನ ಹಾಗೂ ಶುಕ(ಪುತ್ರ)ರಿಗೆ ಭಾರತದ ಕಥೆಯನ್ನು ಹೇಳಿದರು. ಆ ಐದೂ ಮಂದಿ ಭಾರತ ಕಥೆಯನ್ನು ಬೇರೆ ಬೇರೆಯಾಗಿ ಬರೆದರೆಂಬುದು ಹರಿವಂಶದಿಂದ (ಖಿಲಪರ್ವ) ಸ್ಪಷ್ಟವಿದೆ. ಸದ್ಯ ಉಪಲಬ್ಧವಿರುವ ಭಾಗವತ ಪುರಾಣವು ಮಹಾಭಾರತದ ಕಥೆಯನ್ನು ಭಾರತದಂತೆಯೇ ಒಳಗೊಂಡಿರುವುದರಿಂದ ಇನ್ನೊಂದು ಭಾರತ ಕಥೆಯನ್ನು ಅವರು ಬರೆದರೆಂದು ಹೇಳುವುದಕ್ಕೆ ಆಧಾರವಿಲ್ಲ. ಕಾರಣ ಭಾಗವತ ಪುರಾಣ ಮಹಾಭಾರತ ದಷ್ಟೇ ಪ್ರಾಚೀನ ಎಂದು ತೋರುತ್ತದೆ. ಲಿಪಿಯ ಬೆಳವಣಿಗೆಯನ್ನು ಉಪಲಬ್ಧ ಸಾಮಗ್ರಿ ಯಿಂದ ಪುನಾರಚಿಸಲಾಗಿದೆ. ಅರ್ಥಾತ್ ಅಶೋಕನ ಕಾಲಕ್ಕೆ ಏನೆಲ್ಲವನ್ನೂ ಬರೆಯುವಷ್ಟು ಲಿಪಿಯ ಬೆಳವಣಿಗೆ ಆಗಿಹೋಗಿತ್ತು. ಅಶೋಕನ ಶಾಸನಗಳು ‘ಅಂಕಲಿಪಿ’ ಪುಸ್ತಕ ಅಲ್ಲ!

ಕರ್ನಾಟಕದ ಇತಿಹಾಸ ಅಶೋಕನ ಶಾಸನಗಳಿಂದಲೇ ಆರಂಭಗೊಳ್ಳುತ್ತದೆ. ತತ್ಪೂರ್ವದ ಚಾರಿತ್ರಿಕ ದಾಖಲೆಗಳು, ಬರಹ ರೂಪದ್ದು ಎಂಬುವು ಒಂದಾದರೂ ದೊರಕಿಲ್ಲ. ಆದರೆ ಗಂಗರ ದಾಖಲೆಗಳು ಒಂದು ಸತ್ಯವನ್ನು ನಮ್ಮ ಮುಂದೆ ಇಟ್ಟಿವೆ. ಆ ಸತ್ಯವೆಂದರೆ ‘ನಂದಗಿರಿ’ ಗಿರಿದುರ್ಗವನ್ನು ಗಂಗರು ನಂದ ವಂಶದವರಿಂದ ಕಿತ್ತುಕೊಂಡಿದ್ದಾರೆ. ಅರ್ಥಾತ್ ಮೌರ್ಯರ ಜೊತೆ ಜೊತೆಗೆ ನಂದರೂ ಕರ್ನಾಟಕಕ್ಕೆ ಬಂದಿದ್ದರು. ಮೂಲತಃ ಉತ್ತರ ಭಾರತದಿಂದ ಮೌರ್ಯರಿಗಿಂತ ಮುಂಚೆಯೇ ನಂದರು ಕರ್ನಾಟಕಕ್ಕೆ ಬಂದಿದ್ದಾರೆ. ಅನಂತರ ದಲ್ಲಿ ಮೌರ್ಯರು ಬಂದಿದ್ದಾರೆ. ಏಕೆಂದರೆ ಮೌರ್ಯರ ದಾಳಿಯನ್ನು ಎದುರಿಸದೇ ನಂದರು ತಮ್ಮನ್ನು ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳವಾದ ಕರ್ನಾಟಕಕ್ಕೆ ಬಂದಿದ್ದರು; ಅಂದಿನ ಸೇನಾ ಚಟುವಟಿಕೆಗಳಿಗೆ ಏನು ಬೇಕಿತ್ತೊ, ಹೇಗೆ ಹೇಗೆ ಬೇಕಿತ್ತೊ ಹಾಗೆ ಹಾಗೆ ಅವರು ಬಾಳಿ ಬದುಕಿದರು. ಅಂದು ರಕ್ಷಿಸಿಕೊಳ್ಳಲು ದುರ್ಗಗಳನ್ನು (ಗಿರಿದುರ್ಗ, ವನದುರ್ಗ, ಜಲದುರ್ಗ ಹಾಗೂ ಸ್ಥಲದುರ್ಗಗಳನ್ನು) ಕಟ್ಟಿಕೊಳ್ಳುತ್ತಿದ್ದರು. ಹಾಗೇ ಕಟ್ಟಿಕೊಂಡ ಒಂದು ದುರ್ಗವೇ ನಂದಗಿರಿ (ದುರ್ಗ). ಗಂಗರ ಶಾಸನಗಳಲ್ಲಿ ಅವರ ಒಂದು ಬಿರುದು “ನಂದಗಿರಿ ನಾಥ” ಎಂಬುದು ಗಮನಾರ್ಹ. ‘ನಂದಗಿರಿ’ ಹಾಗೂ ‘ನಂದಿದುರ್ಗ’ ಮುಂತಾಗಿ ಅದು ಶಾಸನಗಳಲ್ಲಿ ಕಾಣಿಸಿಕೊಂಡಿದೆ. ಈಗ ‘ನಂದಿಬೆಟ್ಟ’, ‘ನಂದಿಗಿರಿಧಾಮ’ ಆಗಿದೆ. ಕೆಳಗೆ ಹಾಗೂ ಮೇಲೆ ಇರುವ ‘ಭೋಗನಂದಿ’ ಹಾಗೂ ‘ಯೋಗನಂದಿ’ ದೇವಾಲಯಗಳಿಂದ ಗುರುತಿಸಲಾಗುತ್ತದೆ. ‘ನಂದ’ ಹಾಗೂ ‘ನಂದಿ’ ಇವುಗಳಲ್ಲಿ ಭೇದ ಉಳಿಯಲಿಲ್ಲ! ನಂದರ ಅಸ್ತಿತ್ವ ಕಾಲಗತಿಯಲ್ಲಿ ಮರೆತುಹೋಯಿತು.

ಕಾಲಗತಿಯಲ್ಲಿ ಚಂದ್ರಗುಪ್ತ ಮೌರ್ಯನು ಕರ್ನಾಟಕದ ಶ್ರವಣಬೆಳ್ಗೊಳಕ್ಕೆ ಕೞ್ಬಪ್ಪಿಗೆ (ಕಟವಪ್ರಕ್ಕೆ) ಬಂದದ್ದೂ ಮರೆತುಹೋಯಿತು. ಇತಿಹಾಸಜ್ಞರಿಗೆ ಒಪ್ಪಿಗೆ ಆಗುವುದಕ್ಕೂ ಕಾಲ ಹಿಡಿಯಿತು! ಚಕ್ರವರ್ತಿ ಚಂದ್ರಗುಪ್ತ ಮೌರ್ಯ ಸಹಸ್ರಾರು ಜನರ ಜೊತೆಗೆ ಮುನಿಗಳಾದ ಭದ್ರಬಾಹು ಭಟ್ಟಾರಕರೊಂದಿಗೆ ಅವರ ನೇತೃತ್ವದಲ್ಲಿ ದಕ್ಷಿಣಕ್ಕೆ ಬಂದವರು ಅಲ್ಲಲ್ಲಿ ಮುನಿಗಳ ಜೊತೆಗೆ ಕಾಡಿನಲ್ಲಿ ಬೆಟ್ಟಗುಡ್ಡಗಳಲ್ಲಿ ನಿಲ್ಲುತ್ತ ನಿಲ್ಲುತ್ತ ಮುಂದುವರೆದರು. ಆ ಚಕ್ರವರ್ತ್ತಿ-ಮುನಿ-ತನ್ನಗುರುಗಳು, ನಿರ್ವಾಣವನ್ನು ಕಂಡುಕೊಂಡಾಗ ಮುಂದಕ್ಕೆ ಹೋಗದೆ ಅಲ್ಲಿಯೆ ಅವರ ನಿಷಧಿ ಸ್ಥಳ ಇದ್ದಲ್ಲಿಯೇ ನಿಂತುಬಿಟ್ಟನು. ಅದೇ ‘ಕಟವಪ್ರ’. ರಾಜನಿರುವ ಸ್ಥಳಕ್ಕೆ ಅವನ ಭಾಷೆಯ ಹೆಸರು ಬರುವುದು ಲೋಕರೂಢಿ. ಫ್ರೆಂಚ್‌ರಾಕ್ (ಈಗಿನ ಪಾಂಡವಪುರ) (FRENCH ROCK) ಇದನ್ನು ನೆನಸಿಕೊಂಡರೆ ಸಾಕು. ಆಡಳಿತ ಭಾಷೆಯ ಆವಿಷ್ಕಾರ ಸ್ವರೂಪ ಸ್ಪಷ್ಟವಾಗುತ್ತದೆ.

[1] ‘ಕಟವಪ್ರ’ ಬೆಟ್ಟದ ತುದಿಯೂ ಅಹುದು ಗಿರಿದುರ್ಗವೂ ಅಹುದು. ಭದ್ರಬಾಹು ಯತಿಗಳ ನಿಷಧಿ ಸ್ಥಳವನ್ನು ಹೊಂದಿರುವುದರಿಂದ ಅದು ಆ ಮುಂದೆ ಜೈನ ಜನಾಂಗಕ್ಕೆ ಆದರಣೀಯವಾದ ತೀರ್ಥಕ್ಷೇತ್ರ ವಾಯಿತು. ಈಗ ಅದು ಸಹಸ್ರಾರು ಜೈನ ಜನ ನಿರ್ವಾಣವನ್ನು ಸಾಧಿಸಿದ ಸ್ಥಳ; ಅದು ಅವರಿಗೆ ಆ ಮೋಕ್ಷದ ಮೆಟ್ಟಿಲು-ತೊಟ್ಟಿಲು.

ಇಲ್ಲಿ ಗಮನಿಸಬೇಕಾದ ಒಂದು ಮಹತ್ವದ ಸಂಗತಿ ಇದೆ. ಅದೆಂದರೆ ಸಹಸ್ರಾರು (ಹನ್ನೆರಡು ಸಾವಿರ) ಶಿಷ್ಯರೊಂದಿಗೆ ಹೊರಟ ಭದ್ರಬಾಹು ಮುನಿಗಳಿಗೆ ಅನ್ನಪಾನಾದಿ ಆಹಾರ ವ್ಯವಸ್ಥೆಯನ್ನು ಹೇಗೆ ಮಾಡಲಾಯಿತು. ಉತ್ತರ ಕರ್ನಾಟಕದಲ್ಲಿ ಉಳಿದುಬಂದಿರುವ ಪ್ರಾಚೀನ ಜಿನಾಲಯಗಳಲ್ಲಿ ಶೇಕಡ ೮೦ ಜಿನಾಲಯಗಳು ಪಾರ್ಶ್ವನಾಥ ತೀರ್ಥಂಕರರಿಗೆ ಸಂಬಂಧಪಟ್ಟಿವೆ. ಇಷ್ಟು ಪಾರ್ಶ್ವನಾಥನ ಜಿನಾಲಯಗಳಿರುವುದಕ್ಕೆ ಕಾರಣ ಆ ಸ್ವಾಮಿಯ ಭಕ್ತರು-ಆರಾಧಕರು ಇರುವುದೇ ಕಾರಣ. ಮಹಾವೀರ ವರ್ಧಮಾನರಿಗಿಂತ ಬಹಳ ಹಿಂದೆಯೇ ಪಾರ್ಶ್ವನಾಥರು ಬಾಳಿ ಬದುಕಿದ್ದರು; ಜನತೆಗೆ ಧರ್ಮದ ದಾರಿಯಲ್ಲಿ ನಡೆಯುವುದಕ್ಕೆ ದಾರಿ ತೋರಿದ ಮಹಾನುಭಾವರು. ಆತನ ಪ್ರಭಾವ ಎಷ್ಟಿತ್ತೆಂದರೆ ಆಚಾರ್ಯ ಜಿನಸೇನರು ಆತನನ್ನು ಕುರಿತೇ ಬೇರೊಂದು ಕಾವ್ಯವನ್ನು ಕಾಳಿದಾಸನ ಮೇಘದೂತ ಕಾವ್ಯದ ಒಂದೊಂದು ಪಂಕ್ತಿಯನ್ನು ಎತ್ತಿಕೊಂಡು ಪಾರ್ಶ್ವಾಭ್ಯುದಯ ಕಾವ್ಯವನ್ನು ಬರೆದಿದ್ದಾರೆ. ಚಂದ್ರಗುಪ್ತ ಮೌರ್ಯ ಹಾಗೂ ಆತನ ಗುರು ಭದ್ರಬಾಹು ಭಟ್ಟಾರಕರಿಗೆ ಇಲ್ಲಿ ಬಂದಾಗ್ಗೆ ಆಹ್ವಾನಿಸಲು ಜೈನಧರ್ಮದ ಕುಟುಂಬಗಳಿದ್ದವು. ಚಿಕ್ಕಬೆಟ್ಟದ ಮೇಲೆ ಇರುವ ಜಿನಾಲಯಗಳನ್ನು ಪರಿಶೀಲಿಸಿದಾಗ ಅತ್ಯಂತ ಪ್ರಾಚೀನ ಜಿನಾಲಯ ಪಾರ್ಶ್ವನಾಥನದು ಎಂದೇ ನಮಗೆ ತೋರುತ್ತದೆ. ಚಂದ್ರಗುಪ್ತ ಬಸದಿಯಲ್ಲಿ ಇರುವ ಮೂರ್ತಿ ಪಾರ್ಶ್ವನಾಥರದು. ಪಾರಂಪರಿಕ ವಾಗಿ ಇಲ್ಲಿ ಅಸ್ತಿತ್ವದಲ್ಲಿ ಇದ್ದುದು ಪಾರ್ಶ್ವನಾಥರ ಬಸದಿ. ಪಾರ್ಶ್ವನಾಥನ ಸಂಪ್ರದಾಯದ ಜನತೆಯೇ ಭದ್ರಬಾಹು ಮುನೀಂದ್ರರನ್ನೂ ಚಕ್ರವರ್ತಿ ಚಂದ್ರಗುಪ್ತನನ್ನೂ ಅವರ ಹಿಂದೆ ಬಂದ ಅನುಯಾಯಿಗಳನ್ನೂ ಸಕಲ ಮರ್ಯಾದೆಗಳೊಂದಿಗೆ ಸ್ವಾಗತಿಸಿದ ಜನತೆ, ಶ್ರಾವಕರು ಜೈನ ಸಂಪ್ರದಾಯದ ಶ್ರಾವಕರು ಆಗಿರದಿದ್ದರೆ ಮುನಿಧರ್ಮಕ್ಕೆ ಬಾಧೆ ಬರುತ್ತದೆ. ಇದು ಯೋಚಿಸಬೇಕಾದ ಸಂಗತಿ. ಕರ್ನಾಟಕದಲ್ಲಿ ಅನೇಕ ಜೈನಕುಟುಂಬಗಳು ವಾಸವಾಗಿದ್ದವು. ಆ ಧರ್ಮದ ಆಚರಣೆಗೆ ಸಂಬಂಧಿಸಿದ ಆಚಾರ ವಿಚಾರಗಳು, ಅವುಗಳನ್ನುಳ್ಳ ಕೃತಿಗಳು, ರಾಜರಿಂದರಂಕರವರಗೆ ಸಂಬಂಧಪಟ್ಟ ಸಂಗತಿಗಳು ಅವರಾಡುತ್ತಿದ್ದ ಭಾಷೆ ಏನೆಲ್ಲ ಇಲ್ಲಿ ಕರ್ನಾಟಕದ ನೆಲದಲ್ಲಿ ಪರಿಚಿತವಾಗಿದ್ದವು ಮತ್ತು ಪ್ರಚಲಿತವಾಗಿದ್ದವು. ಅಂತೆಯೇ ಮುಂದೆ ಅಶೋಕನ ಕಾಲದಲ್ಲಿ ಬೌದ್ಧ ಧರ್ಮವು ತನ್ನ ಜೊತೆಗೆ ಬೌದ್ಧ ಧರ್ಮದ ಸಂಗತಿಗಳನ್ನು ಸಹ ಈ ನೆಲಕ್ಕೆ ಸಾಗಿಸಿಕೊಂಡು ಬಂದಿತು. ಎರಡರ ವಿಚಾರಧಾರೆಗಳನ್ನುಳ್ಳ ಆ ಭಾಷೆ ಪ್ರಾಕೃತ ಸಾಕಷ್ಟು ಭದ್ರವಾಗಿ ಕರ್ನಾಟಕದಲ್ಲಿ ಬೆಳೆದು ನಿಂತಿತ್ತು ಎನ್ನುವುದಕ್ಕೆ ಅಶೋಕನು ಇಲ್ಲಿ ಬರೆಸಿದ ಆ ದೊಡ್ಡ ದೊಡ್ಡ ಶಾಸನಗಳೇ ಸಾಕ್ಷಿ. ಗೋದಾವರಿಯಿಂದ ಅತ್ತತ್ತ ಕಾವೇರಿಯ ಕಡೆಗೆ ಇತ್ತಿತ್ತ ಸೋಪಾರ, ಸನ್ನತಿ ಹಾಗೂ ಎರ್ರಗುಡಿಗಲ್ಲಿ ೧೪ ಶಿಲಾ ಪ್ರಸ್ತರ ಶಾಸನಗಳನ್ನು, ಮಸ್ಕಿ, ಕೊಪ್ಪಳ, ಉದೆಗೊಳ್ಳ, ನಿಟ್ಟೂರು, ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗ ರಾಮೇಶ್ವರ, ರಾಜುಲ ಮಂದಗಿರಿ ಹಾಗೂ ಎರ್ರಗುಡಿ ಇತ್ಯಾದಿ ಸ್ಥಳಗಳಲ್ಲಿ ಲಘುಪ್ರಸ್ತರ ಶಾಸನಗಳನ್ನು ಬರೆಸಿರುವುದು ಆ ಕಾಲಕ್ಕೆ ಇಲ್ಲಿನ ಜನರಿಗೆ ಇಷ್ಟರಮಟ್ಟಿಗೆ ಪ್ರೌಢ ಬರವಣಿಗೆ- ಪ್ರಾಕೃತ ಭಾಷೆ-ಅರ್ಥವಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಇಷ್ಟರಮಟ್ಟಿಗೆ ಒಂದು ಅಪರಿಚಿತ ಜನಸಮುದಾಯಕ್ಕೆಂದು ಒಂದೇ ಭಾಷೆಯಲ್ಲಿ ಶಾಸನ ಬರೆಯಲು ಸಾಧ್ಯವಿಲ್ಲ. ಅಶೋಕನಿಗಿಂತ ಮುಂಚೆ ಕರ್ನಾಟಕದ ಈ ಪ್ರದೇಶದಲ್ಲಿ ಪ್ರಾಕೃತ ಭಾಷೆ ಸಾಕಷ್ಟು ವಿಸ್ತಾರವಾಗಿ ಬೆಳೆದಿತ್ತು ಎಂಬುದು ಮೊದಲು ಮನವರಿಕೆ ಆಗಬೇಕು; ಅನೇಕರಿಗೆ ಈ ವಿಷಯವೇ ಗೊತ್ತಿಲ್ಲ. ಜೈನಧರ್ಮ ಇಲ್ಲಿ ಪ್ರಚಲಿತವಾಗಿತ್ತೆಂಬುದು ಖಚಿತವಾದ ಮೇಲೆ ಆ ಜೈನ ಕುಟುಂಬಗಳು ಅನುಸರಿಸುತ್ತಿದ್ದ ಆಚಾರ ವಿಚಾರಗಳು, ಆಗಮಗಳು, ಸಂಪ್ರದಾಯ ಗಳು ಈ ನೆಲದಲ್ಲಿ-ಜನ ಸಮುದಾಯದಲ್ಲಿ ಪ್ರಚಲಿತವಾದ ಸಂಗತಿಗಳಾಗಿದ್ದವು. ಕೂಟ ದಾಖಲೆಯೊಂದನ್ನು ಆಧರಿಸಿ ಕೊಂಡಕುಂದರ (ಕುಂದಕುಂದಾಚಾರ್ಯರು) ಕಾಲವನ್ನು ನಿರ್ಧರಿಸಲಾಗಿತ್ತು. ಅದು ಸರಿಯಲ್ಲ. ಅವರು ಚಂದ್ರಗುಪ್ತನ ಅತ್ಯಂತ ಸಮಕಾಲೀನರು ಎಂಬುದನ್ನು ಕೊಂಡಕುಂದರ “ಬಾರಸಕ ಅಣುಪೇಹಣಂ” ಮುನ್ನುಡಿಯಲ್ಲಿ ತೋರಿಸ ಲಾಗಿದೆ.[2]

ಕೊಣ್ಡಕುಂದರ ವಿಪುಲ ಸಾಹಿತ್ಯವನ್ನು ನಾವು ಮನಕ್ಕೆ ತಂದರೆ ೮೪ ಕೃತಿಗಳ ಸಂಖ್ಯೆ ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾಕೃತ ಸಾಹಿತ್ಯ ಎಷ್ಟು ವಿಪುಲವಾಗಿ ಬೆಳೆದಿತ್ತೆಂಬದರ ಅರಿವಾಗುತ್ತದೆ.

೧. ಷಟ್ಖಂಡಾಗಮ ಟೀಕೆ ‘ಪರಿಕ್ರಮ’-  ದೊರೆತಿಲ್ಲ.
೨. ಪಂಚಾಸ್ತಿಕಾಯ (ಪಂಚಣ್ಹಂ/ಪಂಚತ್ಥಿ ಸಂಗಹ)
೩. ಪ್ರವಚನಸಾರ (ಪವಯಣಸಾರ)
೪. ಸಮಯಸಾರ (ಸಮಯ ಪಾಹುಡ)
೫. ರಯಣಸಾರ
೬. ನಿಯಮಸಾರ

ಅಷ್ಟಪಾಹುಡ

೧. ದಂಸಣ ಪಾಹುಡ
೨. ಚಾರಿತ್ರ ಪಾಹುಡ
೩. ಸುತ್ತ ಪಾಹುಡ
೪. ಬೋದ ಪಾಹುಡ
೫. ಭಾವ ಪಾಹುಡ
೬. ಮೋಕ್ಖ ಪಾಹುಡ
೭. ಲಿಂಗ ಪಾಹುಡ
೮. ಶೀಲ (ಸೀಲ) ಪಾಹುಡ

ದಶ ಭಕ್ತಿಗಳು

೧. ತಿತ್ಥಯರಭತ್ತಿ
೨. ಸಿದ್ಧಭತ್ತಿ
೩. ಸುದಭತ್ತಿ
೪. ಚಾರಿತ್ತಭತ್ತಿ
೫. ಅಣಗಾರ (ಮುನಿ) ಭತ್ತಿ
೬. ಆಯಿರಿಯಭತ್ತಿ
೭. ನಿವ್ವಾಣಭತ್ತಿ
೮. ಪಂಚಪರಮೇಟ್ಠಿಭತ್ತಿ
೯. ನಂದೀಸರಭತ್ತಿ
೧೦. ಸಾಂತಭತ್ತಿ

ಅಶೋಕನ ಕಾಲಕ್ಕಿಂತಲೂ ಮುಂಚೆಯೇ ಕರ್ನಾಟಕದಲ್ಲಿ ಪ್ರಾಕೃತ ಸಾಹಿತ್ಯ ಸಾಕಷ್ಟು ವಿಸ್ತಾರವಾಗಿಯೆ ಬಳಕೆಯಲ್ಲಿ ಇದ್ದಿತು. ಇದರ ಜೊತೆಗೆ ಬೌದ್ಧ ಸಾಹಿತ್ಯವನ್ನು ಇಲ್ಲಿಗೆ ಬಂದುದನ್ನು ಮನಕ್ಕೆ ತರಬೇಕು. ಗೌತಮ ಬುದ್ಧರು ಕ್ರಿ.ಪೂ.ಸು. ೪೮೦ರಲ್ಲಿ ನಿರ್ವಾಣವನ್ನು ಹೊಂದಿದರೆಂದು ತಿಳಿದುಬಂದಿದೆಯಷ್ಟೇ. ಅಶೋಕನ ಕಾಲ ಕ್ರಿ.ಪೂ.ಸು. ೨೭೨-೨೩೨ ಎಂಬುದನ್ನು ಜ್ಞಾಪಿಸಿಕೊಂಡರೆ ಏನೆಲ್ಲ ಬೆಳವಣಿಗೆಯನ್ನು ಕಲ್ಪಿಸಿಕೊಳ್ಳಬಹುದು.

ಅಶೋಕನ ಶಾಸನಗಳು ಸುಲಲಿತವಾಗಿ ಬರೆಯಲ್ಪಟ್ಟಿರುವುದನ್ನು ಗಮನಿಸಿದರೆ, ಅಲ್ಲಿ ಆಗಿರುವ ಅಕ್ಷರಗಳ ಬೆಳವಣಿಗೆಯನ್ನು ನೋಡಿದರೆ ಅಕ್ಷರ ಪ್ರಕರಣ ಸಾಕಷ್ಟು ವಿಸ್ತಾರವಾಗಿ ಬೆಳೆದಿತ್ತು ಎಂಬುದರಲ್ಲಿ ಸಂದೇಹವಿಲ್ಲ. ನಾವು ಈಗ ಅಭ್ಯಾಸಮಾಡುವ ಪದ್ಧತಿಗೂ ಪಾಣಿಯಲ್ಲಿನ ಪದ್ಧತಿಗೂ ಬಹಳ ವ್ಯತ್ಯಾಸ ಕಾಣುತ್ತದೆ. ನಾವು ಈಗ ಓದುವ ಬಗೆ (ಅ). ಸ್ವರಗಳು-೧೪ (ಆ). ವರ್ಗೀಯ ವ್ಯಂಜನಗಳು-೨೫ (ಇ). ಅವರ್ಗೀಯ ವ್ಯಂಜನಗಳು-೧೧ ಹಾಗೂ (ಈ). ಯೋಗವಾಹಗಳು-೪.

ಸ್ವರಗಳು : ಅ ಆ ಇ ಈ ಉ ಊ ಋ ೠ        [3]ಎ ಏ[4] ಐ ಓ[5] ಔ = ೧೪

ವರ್ಗೀಯ ವ್ಯಂಜನಗಳು : ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ    =        ೨೫

ಅವರ್ಗೀಯ ವ್ಯಂಜನಗಳು : ಯ ರ ಲ ವ ಷ ಸ ಹ +ಳ ಱ ೞ  =        ೧೧

ಯೋಗವಾಹಗಳು : ಂ ಃ X[6]    =          ೪

[X  [7]ಈ ಅಕ್ಷರಗಳು ಬಳಕೆಯಿಂದ ಸಂಸ್ಕೃತದಲ್ಲೇ ಬಹಳ ಹಿಂದೆ ಬಿಟ್ಟು ಹೋಗಿವೆ. ಬಿಂದು (ಂ) ಹಾಗೂ ವಿಸರ್ಗ (ಃ) ಇಂದಿಗೂ ಬಳಕೆಯಲ್ಲಿವೆ. ಜಿಹ್ವಾಮೂಲೀಯ (X) ಹಾಗೂ ಉಪಧ್ಮಾನೀಯ (    ) ಕೇಶಿರಾಜನ ಶಬ್ದಮಣಿದರ್ಪಣದ ಕಾಲಕ್ಕೆ ಬಿಟ್ಟು ಹೋಗಿದ್ದವು.]

ಅಲ್ಲಮಪ್ರಭುಗಳು ಐವತ್ತೆರಡು ಅಕ್ಷರಗಳನ್ನು ತಮ್ಮ ಎರಡು ವಚನಗಳಲ್ಲಿ ಹೇಳಿದ್ದಾರೆ. ಮತ್ತೆ ಯೋಗದ ಪರಿಭಾಷೆಯಲ್ಲಿ ಬರುವ ಷಟ್‌ಚಕ್ರಗಳಲ್ಲಿ ಅವುಗಳ ಸ್ಥಾನ ವನ್ನು ನಿರ್ದೇಶಿಸಿದ್ದಾರೆ.[8] ಅಲ್ಲಿ ಲಿಪಿಯ ಪ್ರಸ್ತಾಪವೂ ಇದೆ.

ಯೋಗ ಶಿವಯೋಗವೆಂದೆಂಬರು ಯೋಗದ ಹೊಲಬನಾರು ಬಲ್ಲರಯ್ಯ? ಹೃದಯ ಕಮಲದ ಪತ್ರದಲ್ಲಿ ಭ್ರಮಿಸುವನ ಕಳೆದುದಲ್ಲದೆ ಯೋಗವೆಂತಪ್ಪುದೋ? ಐವತ್ತೆರಡಕ್ಷರದಲಿಪಿ ನೋಡಿ ಆರು ನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲಡೆ ಅದು ಯೋಗ. ಸೋಹಂ ಎಂಬಲ್ಲಿ ಸುಳುಹಡಗಿ ಮನನಷ್ಟವಾಗಿರಬಲ್ಲ ಕಾರಣ ಗೋಹೇ ಶ್ವರ ಲಿಂಗದಲ್ಲಿ ನೀನುಸ್ವತಂತ್ರಧೀರನೆಂಬುದು ಕಾಣಬಂದಿತ್ತು ಕಾಣಾ ಸಿದ್ಧರಾಮಯ್ಯ (..)

‘ಚಾವುಂಡರಾಯ ಪುರಾಣ’ ಗ್ರಂಥದಲ್ಲಿ ಚಾವುಂಡರಾಯ “ಸಿದ್ಧಂ ನಮಃ” ಎಂದು ಅಕಾರಾದಿ ಹಕಾರಪರ್ಯ್ಯಂತ ಅಕ್ಷರಂಗಳಂ ಬ್ರಾಹ್ಮಿಗೆ ಉಪದೇಶಂಗೆಯ್ದಂ ಎಂದು ಅಕಾರದಿಂದ ಹಕಾರ (ಸ್ವರ : ೧೪, ವರ್ಗೀಯ ವ್ಯಂಜನಗಳು : ೨೫ ಹಾಗೂ ಅವರ್ಗೀಯ ವ್ಯಂಜನಗಳು : ೮) ಪರ್ಯಂತ ೪೭ ಅಕ್ಷರಗಳನ್ನು ತಿಳಿಸಿದ್ದಾನೆ; ಆದಿನಾಥ ತೀರ್ಥಂಕರ ತನ್ನ ಪುತ್ರಿ ಬ್ರಾಹ್ಮೀದೇವಿಗೆ ಅಕ್ಷರಗಳನ್ನು ಹೇಳಿದ್ದಾನೆ.[9] ‘ಕಾವ್ಯಾವಲೋಕನ’, ‘ವರ್ದ್ಧಮಾನ ಪುರಾಣಂ’ ಇತ್ಯಾದಿಗಳನ್ನು ಬರೆದ ನಾಗವರ್ಮ (ಕ್ರಿ.ಶ. ೧೦೪೨) ಕಾವ್ಯಾವಲೋಕನದ ಶಬ್ದಸ್ಮೃತಿ ಅಧಿಕರಣದಲ್ಲಿ ಸೂತ್ರ   : ೧ರ ಕೆಳಗೆ –

ಸೂ :    ಸ್ವರಮೆಂದುಂ ವ್ಯಂಜನಮೆಂ
ದೆರಡಕ್ಕುಂ ವರ್ಣ್ನಭೇದಮಾದ್ಯಕ್ಷರದಿಂ
ಬರೆ ಪದಿನಾಲ್ಕುಂ ಸ್ವರಮಿಂ
ಪರಿಶೇಷಂ ವ್ಯಂಜನಂಗಳರೆ ಮಾತ್ರಿಕೆಗಳ್   || ೧ ||

ಸ್ವರಕ್ಕೆ ___
ನಿರುಪಮರಮೇಯ ಮಹಿಮರ್
ಚರಿತಾರ್ಥರ್ ಸ್ವಪ್ರಧಾನರಾದಿ ಪ್ರಭವರ್
ಸ್ವರದಂತಿರೆ ಪದಿನಾಲ್ವರ್
ಪರಿವಿಡಿಯಿಂ ಮನುಗಳಾದರಲ್ಲಿ ಬೞಯಂ    || ೮ ||

ವ್ಯಂಜನಕ್ಕೆ____
ಉದ್ಯೋತಿತ ವಿಶ್ವರ್ ಕೃತ
ವಿದ್ಯರ್ ಸೋಷ್ಮಪ್ರತಾಪರಖಿಲಾಂತ ಪದ
ಕ್ಕಾದ್ಯರ್ ವ್ಯಂಜನದಂತನ
ವದ್ಯರ್ ಮೂವತ್ತು ಮೂವರಾದರ್ ದೇವರ್   || ೯ ||

ಸ್ವರ-೧೪; ವ್ಯಂಜನಗಳು : ೨೫+೮=೩೩; ಒಟ್ಟು ೪೭ ಅಕ್ಷರಗಳು. ಇಲ್ಲಿ ಯೋಗವಾಹ ಗಳ ಪ್ರಸಕ್ತಿ ಇಲ್ಲದ್ದು ಆಶ್ಚರ್ಯ ಹಾಗೂ ಗಮನಾರ್ಹ.[10]

‘ಕರ್ನಾಟಕ ಭಾಷಾಭೂಷಣ’ ಗ್ರಂಥದಲ್ಲಿ ಅ ಕಾರದಿಂದ ಹ ಕಾರ ಪರ್ಯಂತ ಅಕ್ಷರ ಗಳನ್ನು ಮೇಲಿನಂತೆ ಹೇಳಿದರೂ ಯೋಗವಾಹಗಳಲ್ಲಿ ಬಿಂದೂ ಅನುಸ್ವಾರ (ಂ, ಃ) ಅಕ್ಷರ ಗಳನ್ನೂ ಹೇಳಿದೆ :

ಅ.       ಸೂ   ||  ಅಕಾರಾದಯಃ ಪ್ರಸಿದ್ಧಾವರ್ಣಾ      || ೨ ||
ವೃತ್ತಿ ||   ಅಕಾರದಯೋ ವರ್ಣಾಃ ಹ ಕಾರ
ಪರ್ಯವಸಾನಾಃ ಪ್ರಸಿದ್ಧಾ ಏವ ವೇದಿತವ್ಯಾಃ ಇತ್ಯಾದಿ

ಆ.       ಸೂ ||    ಅನುಸ್ವಾರೋ ಬಿಂದುಃ     || ೧೪ ||

ಇದರ ಕರ್ತೃ ನಾಗವರ್ಮನ ಪ್ರಕಾರ ೪೭+೨=೪೯ ಅಕ್ಷರಗಳು. ಈ ಎಲ್ಲರಿಗೂ ಆಕರ- ಮೂಲ-ಒಂದೇ ಕೃತಿ; ಅದೇ ಪಾಣಿನೀಯ ‘ಅಷ್ಟಾಧ್ಯಾಯೀ’. ಆರಂಭದ ಹದಿನಾಲ್ಕು ಸೂತ್ರಗಳಲ್ಲಿ ಅ ಇ ಉ ಣ್ ದಿಂದ ಹಲ್-ದ ವರೆಗೆ ಆತ ಅಕ್ಷರಗಳನ್ನು ಹೇಳಿ ಏಕಮಾತ್ರಾ ದ್ವಿಮಾತ್ರಾ ಹಾಗೂ ತ್ರಿಮಾತ್ರಾ (ಏಮಾ=ಅ; ದ್ವಿಮಾ=ಆ; ತ್ರಿಮಾಕ್ಕೆ ಚಾಕ್ಷುಷ ರೂಪ ಇಲ್ಲ) ಎಂದು ಅಕ್ಷರ ಬೆಳವಣಿಗೆ-ಬಳ್ಳಿರೂಪ ತಿಳಿಸಿದ್ದಾನೆ. ಚಾಕ್ಷುಷರೂಪಗಳು ಏಕಮಾತ್ರಾ ಹಾಗೂ ದ್ವಿಮಾತ್ರಾಕ್ಕೆ ಮಾತ್ರ ಇವೆ. ಮೂರುಮಾತ್ರಾ ಸಮಯಕ್ಕೆ ಒಂದು ಧ್ವನಿಯನ್ನು ಎಳೆದು ಹೇಳಿದಾಗ ಅದು ತ್ರಿಮಾತ್ರಾ ಅಥವಾ ‘ಪ್ಲುತ’ ಎನ್ನಿಸಿಕೊಳ್ಳುತ್ತದೆ. ಕುಕ್ಕೂಕೂ ಎಂದು ಕೋಳಿ ಕೂಗಿದುವಾಗಳ್ ಕುಕ್ಕೂಕೂ ೩ ಎಂದು ತೋರಿಸಿದರೂ ಛಂದಸ್ಸಿನ ಪ್ರಸಾರದಲ್ಲಿ ಅದಕ್ಕೆ ಎರಡೇ ಮಾತ್ರೆಗಳಿರುವುದರಿಂದ ಪ್ಲುತಕ್ಕೆ ಚಾಕ್ಷುಷ ರೂಪ ಇಲ್ಲವೇ ಇಲ್ಲ; ಸಂವೀತದಲ್ಲಿ ಅದನ್ನು ತೋರಿಸಬಹುದು ಲಿಪಿಯಲ್ಲಿ ಅಲ್ಲ. ಲಿಪಿಯ ಅಧ್ಯಯನ ಭಾಷೆಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನೇ ತೆರೆಯುತ್ತದೆ. ಪಾಣಿನೀಯ ಸೂತ್ರಗಳು ಚಾಕ್ಷಷ ರೂಪಗಳನ್ನು ಆಧರಿಸಿ ಹುಟ್ಟಿಯೇ ಇಲ್ಲ. ಅ ಇ ಉ ಣ್ (೧) ಋ ಇ ಕ್ (೨) ಏ ಓಙ (೩) ಐ ಔ ಚ್ (೪) ಹ ಯ ವ ರ ಟ್ (೫) ಲ ಣ್ (೬) ಞ ಮ ಣ ನ ಮ್ (೭) ಝ ಭ ಞ (೮) ಘ ಢ ಧ ಷ್ (೯) ಜ ಬ ಗ ಡ ದ ಶ್ (೧೦) ಖ ಫ ಛ ಠ ಥ ಚ ಟ ತ ವ್ (೧೧) ಕ ಪ ಯ್ (೧೨) ಶ ಷ ಸ ರ್ (೧೩) ಹ ಲ್ (೧೪) ಸೂತ್ರಗಳು ಧ್ವನಿಗಳು ಹುಟ್ಟುವ ವದನದಲ್ಲಿನ ಸ್ಥಳಗಳಿಗೆ ಸಂಬಂಧಿಸಿವೆ.[11]

ಅಕ್ಷರ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಶಾಸ್ತ್ರಜ್ಞನೆಂದರೆ ಕೇಶಿರಾಜ. ಅವನು ವರ್ಣಮಾಲೆಯನ್ನು ಚಾಕ್ಷುಷ ರೂಪದಲ್ಲಿ ಗುರುತಿಸಿ ಐವತ್ತೇಳು ಅಕ್ಷರಗಳೆಂದು ಹೇಳಿದ್ದಾನೆ. ಅವನ ಪ್ರಕಾರ-

ಸೂ||    ತರದಿಂ ಪದಿನಾಲ್ಕಕ್ಕುಂ
ಸ್ವರಮಿರ್ಪ್ಪತ್ತೈದು ವರ್ಣಮವು ವರ್ಗಂ ತ
ತ್ಪರದೊಂಬತ್ತುಮವರ್ಗಂ
ಪರಿಭಾವಿಸೆ ಯೋಗವಾಹಮವು ನಾಲ್ಕೆವಲಂ || ೪೨ ||
ತಿಳಿ ದೇಶೀಯಮವೈದಂ || ೪೩ ||

…………ಇತ್ಯಾದಿ

ಸ್ವರಗಳು = ೧೪
ವರ್ಗೀಯ ವ್ಯಂಜನಗಳು = ೨೫
ಅವರ್ಗೀಯ ವ್ಯಂಜನಗಳು = ೯ (>ಯ ರ ಲ ವ ಶ ಷ ಸ ಹ ಳ)
ಯೋಗವಾಹಗಳು = ೪
ದೇಶೀಯ ಅಕ್ಷರಗಳು = ೫ (ಱ ಱೞ ಳ ಎ ಒ)
ಳ ಪುನರಾವರ್ತನಗೊಂಡಿದೆ = (-) ೧ (ಅವರ್ಗೀಯ ವ್ಯಂಜನ)  (-) ೨

ಒಟ್ಟು ೫೪ ಅಕ್ಷರಗಳ ಚಾಕ್ಷುಷ ರೂಪಗಳು ಪ್ರಾಚೀನ ಕರ್ನಾಟಕದಲ್ಲಿ ಇದ್ದವು. ಹೃಸ್ವ ಎ ಹಾಗೂ ಒ ಅಕ್ಷರಗಳಿಗೆ ಪ್ರತ್ಯೇಕ ಚಾಕ್ಷುಷ ರೂಪ ಇದ್ದಿಲ್ಲ. ‘ಏ’ ಒಂದೇ ಅಕ್ಷರ ಹೃಸ್ವ ದೀರ್ಘ ಎರಡರ ಪ್ರತಿನಿಧಿಯಾಗಿದ್ದಿತು. ‘ಓ’ ಒಂದೇ ಒ ಓ ಎರಡರ ಪ್ರತಿನಿಧಿ ಆಗಿದ್ದಿತು.[12] ಕೇಶಿರಾಜನು ಇಷ್ಟೆಲ್ಲವನ್ನೂ ಶಾಸ್ತ್ರೀಯವಾಗಿ ವಿಚಾರಿಸಿ ಚಿಂತನ ಮಂಥನ ಮಾಡಿದರೂ ಆತನ ಕಾಲಕ್ಕೆ ಜನಬಳಕೆಯ ತಿಳಿವಳಿಕೆಯಲ್ಲಿ ೪೯ ಅಕ್ಷರಗಳು ಇದ್ದವೆಂಬುದು ಮುಂದಿನ ಪುಟದಲ್ಲಿ ಕೊಟ್ಟಿರುವ ಶಾಸನದಿಂದ ಪೋಟೋ ದಿಂದ ಸ್ಪಷ್ಟವಿದೆ; ನೋಡಿ ಫೋಟೋ ಹಾಗೂ ವಿವರಣೆ.

 

ಕಾಗುಣಿತ ಹಾಗೂ ಒತ್ತಕ್ಷರಗಳು ಬ್ರಾಹ್ಮೀಲಿಪಿಯ ವೈಶಿಷ್ಟ್ಯ. ಪಾಶ್ಚಾತ್ಯ ಭಾಷೆಗಳಲ್ಲಿ ಈ ಎರಡು ಕೊಂಚವಾದರೂ ಕಾಣದೊರೆಯವು. ಒತ್ತಕ್ಷರವು ಪಾಶ್ಚಾತ್ಯ ಭಾಷೆಗಳಲ್ಲಿ ಹ ಲಂತದ ಮುಂದೆ ಬರೆಯಲ್ಪಡುತ್ತದೆ. ಉದಾ. ಇಂದ್ರ – I N D R A; ನಾವು ಇದನ್ನು ಇಂದ್‌ರ ಈಗ ಹೀಗೆ ಬರೆದರೆ, ಓದಲು ಹೊರೆ ಆಗುತ್ತದೆ. ಪ್ರಾಚೀನ ಕಾಲದಲ್ಲಿ ಭಾರತೀಯ ಬರವಣಿಗೆಯಲ್ಲಿ ಈ ಬಗೆಯ ಬರೆಯುವ ಪದ್ಧತಿಯೇ ಇದ್ದಿಲ್ಲ. ಬ್ರಾಹ್ಮೀ ಭಾಷೆಯಲ್ಲಿ ಇರುವ ವಿಶಾಲ ಬಳ್ಳಿಯ ಪದ್ಧತಿ ಆ ಲಿಪಿಯನ್ನು ತನಿಯಾಗಿ ನಿಲ್ಲಿಸಿ ಅದರ ಬೆಳವಣಿಗೆಯ ಚರಿತ್ರೆಯನ್ನು ನಿರೂಪಿಸುವಂತೆ ಮಾಡುತ್ತದೆ. ಮೂಲಸ್ವರಗಳು ಅ, ಇ, ಉ, ಏ ಹಾಗೂ ಓ ಇವು ಪಾಶ್ಚಾತ್ಯ ಭಾಷೆಗಳಲ್ಲಿ A E I O U ಎಂದು ಈಗ ಹೇಳುತ್ತಾರೆ ಯಾದರೂ ಅ ಏ ಇ ಓ (A E I O) ಇವು ನಾಲ್ಕೇ ಇದ್ದು U V Y ಈ ಮೂರು ಉಪ್ಸಿಲಾನ್ (Upsilon) ಎಂಬುದರಿಂದ ಹುಟ್ಟಿಕೊಂಡವು. ೧೮ನೇ ಶತಮಾನದವರೆಗೆ ‘V’ (ವ್ಹಿ) ವಾವೆಲ್ (ಸ್ವರ) ಆಗಿತ್ತು. ಈಗ ಅದು ವ್ಯಂಜನ. ಮುಂದಿನ ಪುಟಗಳಲ್ಲಿ ಇಂಗ್ಲಿಷ್, ಗ್ರೀಕ್ ಹಾಗೂ ಉರ್ದು ಭಾಷೆಗಳ ಲಿಪಿಮಾಲೆಯನ್ನು ತೌಲನ ಮೀಮಾಂಸೆಗೆ ಕೊಟ್ಟಿದೆ. ‘ಹಿಬ್ರೂ’- ಸೆಮಿಟೆಕ್ ಭಾಷೆ ಹಾಗೂ ಲಿಪಿ ನಾಶವಾಗಿ ಹೋಗಿರುವುದರಿಂದ ಇಂದು ಬ್ರಾಹ್ಮೀ ಹಾಗೂ ಸಂಸ್ಕೃತ ಭಾಷೆ ಹಾಗೂ ಲಿಪಿಗಳ ಬೆಳವಣಿಗೆಯನ್ನು ತಿಳಿದುಕೊಳ್ಳುವಲ್ಲಿ ಪಾಶ್ಚಾತ್ಯ ಭಾಷೆಗಳ ಸಂಬಂಧಗಳನ್ನು ಅರಿತುಕೊಳ್ಳುವಲ್ಲಿ ಕಷ್ಟಪಡಬೇಕಾಗಿದೆ. ಲಿಪಿಗಳ ಪಟ್ಟಿಕೆಗಳನ್ನು ಗಮನಿಸಿ. ಏಕಮಾತ್ರಾ, ದ್ವಿಮಾತ್ರಾ ಹಾಗೂ ಪ್ಲುತ ಇವು ಅಲ್ಲಿ ಇಲ್ಲಿ ಒಂದೇ ಆಗಿವೆ. ಇದು ಗಮನಾರ್ಹ.

ಪಾಶ್ಚಾತ್ಯ ಭಾಷೆಗಳ ಮುಖ್ಯ ಅಕ್ಷರಗಳು  —

ಇಂಗ್ಲಿಷ್ ವಿವರಣೆಗಳು ಗ್ರೀಕ್ ಇಂಗ್ಲಿಷ್ ಹೆಸರುಗಳು

ಪ್ರಾಕೃತ ಭಾಷೆಯಲ್ಲಿ ಇರುವ ಅಕ್ಷರಗಳ ಸಂಖ್ಯೆ ___

ಸ್ವರಗಳು : ಅ ಆ ಇ ಈ ಉ ಊ ಏ ಐ ಓ = ೯

ವರ್ಗೀಯ ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ = ೨೫

ಅವರ್ಗೀಯ ವ್ಯಂಜನಗಳು : ಯ ರ ಲ ವ ಸ ಹ = ೬

ಯೋಗವಾಹಗಳು : ‘ಂ’ ಬಿಂದು, ‘ಃ’ ವಿಸರ್ಗ = ೨.

ಮೇಲ್ಕಾಣಿಸಿದ ಅಕ್ಷರಗಳಲ್ಲಿ ಪ್ರಾಕೃತ ಭಾಷೆಯ ವ್ಯವಹಾರ ಮುಗಿಯುತ್ತದೆ. ಈಗಾಗಲೇ ವಿವರಿಸಿದ ಲಿಪಿಯ ವ್ಯಾಪ್ತಿ – ಅಕ್ಷರಗಳ ಅಗಾಧ ಸಂಖ್ಯೆ – ಬ್ರಾಹ್ಮೀಲಿಪಿಯ ಮೂಲವು ಪ್ರಾಕೃತ ಭಾಷೆ ಅಲ್ಲವೆಂಬುದನ್ನು ಸಾಬೀತುಪಡಿಸಿದೆ. ಬ್ರಾಹ್ಮೀ ಲಿಪಿಯಲ್ಲಿನ ‘ಬ್ರಾಹ್ಮೀ’ ಹಾಗೂ ಆದಿನಾಥ ತೀರ್ಥಂಕರರ ಪುತ್ರಿ ‘ಬ್ರಾಹ್ಮೀ’ ಈ ಎರಡರಲ್ಲಿ ಉಚ್ಚಾರಣೆಯ ಸಾಮ್ಯತೆಯನ್ನು ಬಿಟ್ಟರೆ ಚಾರಿತ್ರಿಕ ಆಧಾರಗಳೇನು ದೊರೆಯವು. ೫೨ ಅಕ್ಷರಗಳ ಬೆಳವಣಿಗೆ, ಮೂಲಸೃಷ್ಟಿ ಇವುಗಳ ಬಗೆಗೆ ಪಾಣಿನಿಯ ಸೂತ್ರಗಳೇ ಹೆಚ್ಚು ಪ್ರಾಚೀನ ಹಾಗೂ ಬೆಳಕನ್ನು ಬೀರುತ್ತವೆ. ಪಾಣಿನಿಯ ಕಾಲಕ್ಕೆ ಲಿಪಿಯ ಬೆಳವಣಿಗೆಯನ್ನು ಹೇಳಲು ಕಷ್ಟವಾದರೂ ಸದ್ಯ ಲಿಖಿತ ದಾಖಲೆ ದೊರೆತಿಲ್ಲವಾದುದರಿಂದ ಲಿಪಿಯ ಬಗ್ಗೆ ಇದಮಿತ್ಥಂ ಎಂದು ಹೇಳಲು ಬರದಿದ್ದರೂ ಉಚ್ಚಾರದಲ್ಲಿ – ಮಾತಿನಲ್ಲಿ – ಮಂತ್ರದಲ್ಲಿ ಅಕ್ಷರ ಸಂಜ್ಞೆಗಳೆಲ್ಲವೂ ಹುಟ್ಟಿದ್ದವೆಂದರೆ ತಪ್ಪಾಗದು, ಪ್ರಾಕೃತದಲ್ಲಿ ಇಲ್ಲದ ಅಕ್ಷರಗಳೂ ಚಾಕ್ಷುಷ ರೂಪಗಳು (Visual letters) ಪಾಣಿನೀಯ ಸೂತ್ರಗಳಲ್ಲಿ ಹೇಳಿದೆ. ಆದುದರಿಂದ ‘ಬ್ರಾಹ್ಮೀ ಲಿಪಿ’ ಜೈನಧರ್ಮದ್ದೆಂದು ಹೇಳಲ್ಪಡುವ ಇತ್ತೀಚಿನ ವಾದಕ್ಕೆ ಆಧಾರವಿಲ್ಲ. ಅರ್ಥಾತ್ ಲಿಪಿಯು-ಚಾಕ್ಷುಷ ರೂಪಗಳು – ಜೈನ ಧರ್ಮದ ಮೂಲದವಲ್ಲ.

 

ಪಾಶ್ಚಾತ್ಯ ಭಾಷೆಗಳ ಮುಖ್ಯ ಅಕ್ಷರಗಳು

 

* There is no ‘Koppa’ in Greek language.

** Originally up to 18th Century ‘V’ was the Vowel ; and ‘U’ was not there. But now ‘V’ is a consonant and ‘U’ is a Vowel.

ಅಶೋಕನ ಶಾಸನಗಳು ಸದ್ಯ ಉಪಲಬ್ಧ ಸಮೃದ್ಧ ಸಾಮಗ್ರಿ. ಆ ಕಾಲಕ್ಕಾಗಲೇ ಪ್ರಾಕೃತ ಸಾಕಷ್ಟು ಬೆಳೆದಿತ್ತು. ಅಶೋಕನ ಶಾಸನಗಳು ಬೌದ್ಧಧರ್ಮದ ಪ್ರಸಾರಕ್ಕಾಗಿ ಹುಟ್ಟಿದ ಧರ್ಮಶಾಸನಗಳು. ಅವುಗಳ ಬಗ್ಗೆ ಅಶೋಕನೇ ಬರೆಸಿದ್ದಾನೆ; ಈ ಧರ್ಮಲಿಪಿಗಳು

೧. ಸಂಖಿತೇನ ಆಸ್ತಿ (ಸಂಕ್ಷಿಪ್ತವಾಗಿವೆ.) (Short)

೨. ಮಝಮೇನ ಆಸ್ತಿ (ಮಧ್ಯಮವಾಗಿವೆ.) (Medium)

೩. ವಿಸ್ತತನ (ಚ) (ಮತ್ತೆ ವಿಸ್ತೃತವಾಗಿಯೂ ಇವೆ.)[13] (Long)

ಎಂದರೆ ಅಶೋಕನ ಶಾಸನಗಳನ್ನು ‘ಸಂಕ್ಷಿಪ್ತ ಶಾಸನಗಳು’, ‘ಮಧ್ಯಮ ಶಾಸನಗಳು’ ಹಾಗೂ ‘ವಿಸ್ತೃತ ಶಾಸನಗಳು’ ಎಂದು ಅಭ್ಯಾಸ ಮಾಡಬಹುದಿತ್ತು. ‘ಪ್ರಸ್ತರ’ ಹಾಗೂ ‘ಲಘು ಪ್ರಸ್ತರ’ ಇತ್ಯಾದಿ ಅರ್ಥಾತ್ ‘Rock Edicts’ and ‘Minor Rock Edicts’ ಎಂಬುದು ಅಷ್ಟು ಸರಿಯಲ್ಲ. ಗಿರಿನಗರ ಶಾಸನಗಳು ಪ್ರಕಟವಾಗಿ ಶತಮಾನ ದಾಟಿ ಹೋಗಿದೆ. ಅಧ್ಯಯನದ ಮಾರ್ಗ ಒಂದು ರೀತಿಯಲ್ಲಿ ಭದ್ರವಾಗಿ ಏರ್ಪಟ್ಟು ಕೂತಿದೆ. ಹಳೆಯ ತಲೆಮಾರಿನವರು ನ್ಯಾಯಯುತವಾದ ಸಂಗತಿಗಳನ್ನು ಹೊಸದಾಗಿ ಬೆಳಕಿಗೆ ಬಂದಾಗ್ಗೆ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಹೊಸ ಆಧಾರಗಳನ್ನು ಒಪ್ಪಿಕೊಳ್ಳದೆ ಹೊಸ ಸಂಶೋಧನೆಗಳು ನ್ಯಾಯಯುತವಾಗಿದ್ದರೂ, ದಾಖಲೆ ಎದುರಿಗಿದ್ದರೂ ಅದನ್ನು ಸ್ವೀಕರಿಸಲು ಸಿದ್ಧರಾಗಿರುವುದಿಲ್ಲ. ಅಶೋಕನು ಈ ಧರ್ಮಲಿಪಿಗಳನ್ನು “ಇಯಂ ಧಂಮಲಿಪಿ ಲಿಖಾಪಿತಾ ಏಭಿ ದೇವಾನಾಂಪಿಯೆ ಆಹಾ – ಇಯಂ ಧಂಮಲಿಪಿ ಏಭಿ ಅಧಿಸಿಲಾಥಂಬಾನಿ ವಾ ಸಿಲಾ ಫಲಕಾನಿ ವಾ ತತ ಕಟವಿಯಾ ಏನ ಏಸ ಚಿಲಠಿತಿಕೇ ಸಿಯಾ” (ದಿಲ್ಲಿ; ಟೋಪ್ರಾ).

[ಅನುವಾದ : ಇದನ್ನು ಕುರಿತು ದೇವಾನಾಂಪ್ರಿಯನು ಹೇಳುವನು : ಎಲ್ಲಿ ಶಿಲಾಸ್ತಂಭಗಳಿವೆಯೋ ಎಲ್ಲಿ ಶಿಲಾಫಲಕಗಳಿವೆಯೋ ಅಲ್ಲಿ ಇದು ಚಿರಸ್ಥಾಯಿಯಾಗಿ ನಿಲ್ಲುವಂತೆ ಧರ್ಮಲಿಪಿಯನ್ನು ಬರೆಸತಕ್ಕದ್ದುಅಶೋಕ : ನಾ. ಕಸ್ತೂರಿ, ಪುಟ ೧೫೩.
Saith the Beloved of the Gods on this point.
This record relating to Dharma should be engraved on stone pillars and stone tablets, wherever they are available, in order that it may endure for a long time.
– A’soka : D.C. Sircar, p.p. 77]

ಬರವಣಿಗೆ ಕಲ್ಲಕಂಭದ ಮೇಲಾದರೇನು? ಅಥವಾ ಕಲ್ಲ ಫಲಕದ ಮೇಲೆ ಆದರೇನು? ಶಾಸನ ಒಂದೇ ಅದು ಧರ್ಮಶಾಸನ; ಅದು ಸಂಕ್ಷಿಪ್ತ ಆಗಿರಬಹುದು, ಮಧ್ಯಮ ಗಾತ್ರ ದ್ದಾಗಿರಬಹುದು ಇಲ್ಲವೇ ವಿಸ್ತೃತವಾಗಿರಬಹುದು. ಶಿಲಾ ಫಲಕ(ದಲ್ಲಿನ) ಶಾಸನಗಳು, ಸ್ತಂಭ ಶಾಸನಗಳು, ಬಿಡಿಶಾಸನಗಳು ಇತ್ಯಾದಿ ವಿಭಜನೆ ಸಮಂಜಸವಲ್ಲ.

ವಸ್ತುವಿನ ಕಡೆಗೆ ನಿಗಾ ಇಲ್ಲದಾದಾಗಲೇ ತಪ್ಪುಗಳು ಹುಟ್ಟಿಕೊಳ್ಳುತ್ತವೆ. ‘ಪದೇನ’ ಇದ್ದದ್ದು ‘ಚಪಡೇನ’ ಎಂದು ಓದಲಾಯಿತು. ಪಂಕ್ತಿಯ ಆರಂಭದ ‘ಚ’ ಅಕ್ಷರ ವಾಕ್ಯ ದೊಳಗಿನ ಸಂಯೋಜನೆಯ ಶಬ್ದ (Conjoining letter : ಚ, ವ ಇತ್ಯಾದಿಗಳು) ಎಂಬುದು ಮರೆತು ಹೋಯಿತು. ದೊಡ್ಡವರೊಬ್ಬರು ಮಾಡಿದ ತಿದ್ದುಪಡಿ ಸತ್ಯದ ಮೆಲೆ ಮುಸುಕನ್ನು ಎಳೆದಿತು. ಬುಲ್ಹರ್ ‘ಪದೇನ’ ಎಂದು ಸರಿಯಾಗಿ ಓದಿದುದು ಬಿದ್ದು ಹೋಯಿತು, ದೊಡ್ಡವರ-ಅನುಯಾಯಿಗಳ, ಸಿಬ್ಬಂದಿಯವರ, ಪದ ತಲದ ಆಘಾತಕ್ಕೆ ಅಸುನೀಗಿತು. ‘ಚಪಡ’ ಅಯಿತು! ಪದೇನ!! ‘ಪದ’, ‘ಪದಣ’ ಎಂಬ ಶಬ್ದದ ಸಂಕ್ಷಿಪ್ತ ರೂಪ ಬೆಟ್ಟದಪ್ಪದ ‘ಬೆಟ್ಟ’ ಗಿರಿಯಪ್ಪದ ‘ಗಿರಿ’ ಪದಣಯ್ಯದ ‘ಪದ’ ಅರ್ಥಾತ್ ಬೆಟ್ಟ | ಗಿರಿ | ಪದ – ಇವು ಸಮಾನಾರ್ಥಕ ಶಬ್ದಗಳು ಗಿರಿಯನ್ನು (Hill) ಸೂಚಿಸುತ್ತವೆ. [ಲುಡರ್ಸ್ ಲಿಸ್ಟಿನಲ್ಲಿ ಬರುವ ಪದಣ ಪ್ರಸ್ತರ ಶಾಸನಗಳನ್ನು (Padana rock Inscriptions No. 973-983) ಇಲ್ಲಿ ಜ್ಞಾಪಕಕ್ಕೆ ತಂದುಕೊಳ್ಳಬೇಕು.] ಬ್ರಹ್ಮಗಿರಿ, ಸಿದ್ದಾಪುರ ಹಾಗೂ ಜಟಿಂಗ ರಾಮೇಶ್ವರ ಸ್ಥಳಗಳಲ್ಲಿ ಇರುವ ಶಿಲಾ ಲೇಖನಗಳನ್ನು ತೌಲನಿಕ ವಿಮರ್ಶೆಗೆ ಇಟ್ಟು ನೋಡಬೇಕು – ಅಭ್ಯಸಿಸಬೇಕು. ಆಗ ಸತ್ಯವು ಹೊರಬೀಳುತ್ತದೆ.

೧.       ದ್ವೇಚಿಕೀಛಕತಾ ಮನುಸ ಚ ಚಕೀಛಾಚ
ಪಸು ಚಕೀಛಾಚ…….ಇತ್ಯಾದಿ
(ಗಿರಿನಗರ-೨)

೨.       ಆಞಾಪಿತಂ ಸರ್ವತ ವಿಜಿತೇಮಮಎಯುತಾಚ
ರಾಜೂಕೇಚ ಪ್ರಾದೇಸಿಕೇಚ…..ಇತ್ಯಾದಿ
(ಗಿರಿನಗರ-೩)

೩.       ಧಂಮಘೋಸೋ ವಿಮಾನದರ್ಸಣಾಚ
ಹಸ್ತಿದಸಣಾಚ……ಇತ್ಯಾದಿ
(ಗಿರಿನಗರ-೪)

೪.       ಕಟೇತಂ ಮಅಪುತ್ರಚನತರೇಚ……ಇತ್ಯಾದಿ
(ಮಾನಸೇರಾ-೫)

೫.       ಸರ್ವಲೋಕ ಹಿತಂ ತಸಚ ಪುನೇಸಮೂಲೇ
ಉಸ್ಟಾನಂಚ ಅಥಸಂತೀರಣಾಚ…..ಇತ್ಯಾದಿ
(ಗಿರಿನಗರ-೬)

ಹೀಗೆಯೇ ಇನ್ನೂ ಅನೇಕ ಉದಾಹರಣೆಗಳನ್ನು ‘ಚ’ ಇದು ವಾಕ್ಯಸಂಯೋಜಕ ಶಬ್ದ ಎಂದು ತೋರಿಸಲು ಕೊಡಬಹುದು. ಮಾತಿನ ಮಥಿತಾರ್ಥವಿಷ್ಟೆ “ಚಪಡ” ಎಂಬುದು ಸಾಧು ಶಬ್ದವಲ್ಲ (i.e.Not A Genuine Word).

ಇಲ್ಲಿಯೇ ‘ಇಸಿಲ’ ಇದರ ಬಗ್ಗೆಯೂ ಇನಿತನ್ನು ಬರೆಯಬೇಕಿದೆ. ಏಕೆಂದರೆ ಇದೊಂದು ಅಂಕಿತನಾಮ. ‘ಸುವರ್ಣಗಿರಿ’ ಸ್ಥಳದಿಂದ ‘ಇಸಿಲ’ ಎಂಬ ಸ್ಥಳದಲ್ಲಿರುವ ಮಾಹಮಾತ್ರರಿಗೆ ಸುದ್ದಿಯನ್ನು ತಿಳಿಸಬೇಕಾಗಿದೆ.

“ಸುವಂಣಗಿರಿತೇ ಅಯಪುತಸ ಮಹಾಮಾತಾಣಾಂ ಚ ವಚನೇನ ಇಸಿಲಸಿ
ಮಹಾಮಾತಾ ಆರೋಗಿಯಂ ವತವಿಯಾ ಹೇವಂಚ ವತವಿಯಾ”-

‘ಇಸಿಲ’ ಎಂಬುದು ‘ಕೋಟೆ’ ಎಂದಾದರೆ ಅದರ ಹಿಂದೆ ಇನ್ನೊಂದು ಶಬ್ದವೂ ಇರಬೇಕಾ ಗುತ್ತದೆ. ಉದಾ. ‘ಹೆಗ್ಗಡದೇವನಕೋಟೆ’, ‘ಹೊಸಕೋಟೆ’, ‘ಮಿಶ್ರೀಕೋಟೆ’, ‘ತಾಳೀ ಕೋಟೆ, ‘ಗಂಡಿಕೋಟೆ’, ‘ಧರಣೀಕೋಟೆ’ ಇತ್ಯಾದಿ ಇತ್ಯಾದಿ. ಅಶೋಕನ ಶಾಸನಗಳು ಪ್ರಾಕೃತ ಶಾಸನಗಳಾದುದರಿಂದ ಪ್ರಾಕೃತ ಭಾಷೆಯ ಪರಿಧಿಯಲ್ಲಿ ಇದನ್ನು ನೋಡಬೇಕು. ಈಗ ಇದು ‘ಬುದ್ದಿಲ’, (L.L.೧೯೩) ‘ಕಣ್ಣಿಲ’ (ಕೃಷ್ಣಲ) ಶಬ್ದಗಳ ಹಾಗೆ ‘ಇಸಿಲ’ ಕಣ್ಣಿಲದಲ್ಲಿಯ ‘ಲ’ ತೆಗೆದರೆ ಕಣ್ಹಿ/ಕಣ್ಹ (ಕೃಷ್ಣ) ಎಂಬುದು (L.L. ೮೩೩) ಉಳಿಯುವಂತೆ ‘ಇಸಿಲ’ದಲ್ಲಿನ ‘ಲ’ ಬೇರ್ಪಡಿಸಿದರೆ ಉಳಿಯುವುದು ‘ಇಸಿ’ ಎಂಬುದು. ಲುಡರ್ಸಪಟ್ಟಿ (Luder’s List)ಕೆಯಲ್ಲಿನ ಕೆಳಗಿನ ಶಬ್ದಗಳು ‘ಇಸಿ’ ಶಬ್ದದ ಮೇಲೆ ಹೊಸಬೆಳಕನ್ನು ಚೆಲ್ಲುವದನ್ನು ಕಾಣಬಹುದು

೧. ಇಸಿದಾತ (ಋಷಿದತ್ತ/ಇಸಿ>ಋಷಿ LL. ೨೧೩)

೨. ಇಸಿಮಿತ (ಋಷಿ+ಮಿತ್ರ ೨೧೫ ಋಷಿ>ಇಸಿ LL. ೨೨೯)

೩. ಇಸಿಮಿತಾ (ಋಷಿಮಿತ್ರಾ  LL.೨೩೦)

೪. ಇಸಿದತಾ (ಋಷಿದತ್ತಾ LL. ೨೯೧, ೨೯೨)

೫. ಇಸಿರಖಿತ (ಋಷಿರಕ್ಷಿತ LL. ೨೯೫)

೬. ಇಸಿದಿನಾ (ಋಷಿದತ್ತಾ LL. ೩೦೫)

೭. ಇಸಿದಾಸೀ (ಋಷಿದಾಸೀ LL. ೩೨೭)

೮. ಇಸಿಪಾಲಿತ (ಇಸಿ+ಪಾಲಿತ<ಋಷಿಪಾಲಿತ LL. ೩೩೬)

೯. ಇಸಿಗುತ (ಇಸಿ+ಗುತ<ಋಷಿಗುಪ್ತ LL. ೩೫೫)

೧೦. ಇಸಿಕ (ಋಷಿಕ LL. ೩೫೬)

೧೧. ಇಸಿರಖಿತ (ಋಷಿರಕ್ಷಿತ LL. ೩೫೮)

೧೨. ಇಸಿದಸೀ (ಋಷಿದಾಸಿ LL. ೪೦೨)

೧೩. ಇಸಿನದನ (ಋಷಿನಂದನ ಋಷಿ+ನಂದನ>ಇಸಿ+ನಂದನ LL. ೪೦೩)

೧೪. ಇಸಿನಿಕಾ (ಋಷಿಣಿಕಾ LL. ೪೪೧)

೧೫. ಇಸಿಪಿಯತಾ (ಋಷಿಪ್ರೀತಾ LL. ೫೬೭)

೧೬. ಇಸಿರಖಿತ (ಇಸಿ+ರಖಿತ<ಋಶಿರಕ್ಷಿತ LL. ೭೨೧) ಇತ್ಯಾದಿ.

ಹೀಗೆಯೇ ಉದಾಹರಣೆಗಳನ್ನು ಇನ್ನೂ ಬೇಕಾದಷ್ಟು ಕೊಡಬಹುದು. ‘ಇಸಿಲ’ ಕನ್ನಡ ಶಬ್ದ ಅಥವಾ ದ್ರಾವಿಡ ಶಬ್ದ ಎಂಬುದಕ್ಕೆ ಅದನ್ನು ಕನ್ನಡ ಎಂದು ಮೊದಲು ಬರೆದಿರುವ ದಿ. ಪ್ರೊ. ಡಿ.ಎಲ್.ಎನ್ ಅವರು ಒಂದಾದರೂ ಪ್ರಯೋಗವನ್ನು ಕೊಟ್ಟಿಲ್ಲ. ‘ಇಸಿಲ’ ಕನ್ನಡ ಎಂಬುದು ಅವರ ಕಲ್ಪನೆ; ಅದಕ್ಕೆ ಆಧಾರವಿಲ್ಲ. ಅದು ಮೊದಲು ಕನ್ನಡ ಶಬ್ದವೇ ಅಲ್ಲ. ಅದು ಪ್ರಾಕೃತ ಶಬ್ದ. ‘ಇಸಿಲ’ ಎಂದರೆ ಇಸಿಲ ಪಟ್ಟಣ ಅದು ವಾರಣಾಸಿ (ಕಾಶಿ) ಬಳಿ ಇರುವ ಸಾರನಾಥ. ದಿ. ಪ್ರೊ. ತೀನಂ.ಶ್ರೀಕಂಠಯ್ಯನವರು ಆಗಲೆ ಇದು ಕನ್ನಡ ಶಬ್ದ ಅಲ್ಲ ಎಂದೂ, ಆ ವಾದವನ್ನು ಒಪ್ಪುವದಕ್ಕೆ ಆಗುವದಿಲ್ಲ ಎಂದೂ ತಿಳಿಸಿದ್ದರು. ತೀನಂಶ್ರೀ ಅವರ ಅಭಿಪ್ರಾಯವೇ ಸರಿಯಾದದ್ದು. ‘ಇಸಿಲ’ ಕನ್ನಡ ಶಬ್ದ ಅಲ್ಲ, ಅದು ಪ್ರಾಕೃತ. ಪ್ರೊ. ಡಿ.ಎಲ್.ಎನ್ ಅವರ ಶಿಷ್ಯರು ಅದನ್ನು ವೈಭವೀಕರಿಸಿದ್ದಾರೆ. ಮತ್ತೆ ಕೆಲವರು ಅದೇ ಸರಿ ಎಂದು ನಿರೂಪಿಸಿಕೊಂಡು ಹೋಗಿದ್ದಾರೆ. ಇವರ ಹೇಳಿಕೆಗಳಿಗೆ ಆಧಾರವಿಲ್ಲ.[14]

ಭಾರತದ (ಆಕೃತಿಯ) ನಕಾಶ

ಅಶೋಕನ ಶಾಸನಗಳು
ದೊರಕಿದ ಸ್ಥಳಗಳು

ಅಶೋಕನ ಶಾಸನಗಳು ದೊರಕಿದ ಸ್ಥಳಗಳತ್ತ ಕಣ್ಣು ಹಾಯಿಸಿದರೆ ಹೊಳೆಯುತ್ತದೆ ಆಫ್‌ಘಾನಿಸ್ತಾನದಿಂದ ಎಂದರೆ ಕಂದಹಾರದಿಂದ ಇತ್ತಿತ್ತ ಕಾವೇರಿ ಜಲಾನಯನದ ಭೂಮಿ ಯವರೆಗೆ ಮೌರ್ಯರ ಸಾಮ್ರಾಜ್ಯ ಹಬ್ಬಿತ್ತು. ಆ ವಿಸ್ತಾರವಾದ ಭೂಭಾಗದಲ್ಲಿ ವಿಶೇಷತಃ ಭಾರತದಲ್ಲಿ ಇದ್ದ ಭಾಷೆ ಪ್ರಾಕೃತ, ಅದರಲ್ಲಿ ಪ್ರಾಂತೀಯ ಭೇದಗಳು ಇದ್ದಿರಲೇಬೇಕು. ಉತ್ತರದ ಶಾಸನಗಳ ಹಾಗೂ ದಕ್ಷಿಣದ ಅವೇ ಶಾಸನಗಳ ಪಾಠಗಳಲ್ಲಿ ಪಾಠಬೇಧಗಳು ಇದ್ದುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಇನ್ನು ಪ್ರಾದೇಶಿಕ ಜನತೆ ತಮ್ಮ ತಮ್ಮ ಭಾಷೆಗಳನ್ನು ಆಡುತ್ತಿದ್ದು ಅವು ಆಡುಮಾತಿನ ಸ್ವರೂಪದಲ್ಲೇ ಇದ್ದುದು ಸ್ಪಷ್ಟ. ಅವುಗಳಲ್ಲಿ ಜಾನಪದೀಯ ಸಾಹಿತ್ಯ ಇದ್ದೀತು! ಆದರೆ ಶಿಷ್ಟಸಾಹಿತ್ಯ ಇದ್ದುದಕ್ಕೆ ಆಧಾರ ದೊರೆತಿಲ್ಲ ‘ಸಿರಿ’ (<ಶ್ರೀ>) ‘ತಿರು’ ಇವು ವಿಕೃತ ಶಬ್ದಗಳೇ ಹೊರತು ಆಯಾ ಭಾಷೆಗಳ ಮೂಲ ಶಬ್ದಗಳಲ್ಲ. ಕ್ರಿ.ಶ. ಸು. ೪ನೇ ಶತಮಾನದ ತನಕ ಪ್ರಾಕೃತ ಭಾಷೆ ಜನಜೀವನದ ಬಳಕೆಯ ಭಾಷೆಯಾಗಿ ಮೆರೆಯಿತು. ಆಮೇಲೆ ಸಂಸ್ಕೃತ ಹಾಗೂ ಪ್ರಾದೇಶಿಕ ಭಾಷೆಗಳು ಬಳಕೆಯಲ್ಲಿ ಬಂದವು. ಅನಂತರ ಬೆಳೆಯುತ್ತ ಬೆಳೆಯುತ್ತ ವಿಸ್ತರಿಸುತ್ತ ಬಂದಿವೆ. ಸಂಸ್ಕೃತ ನಾಟಕಗಳಲ್ಲಿ ಸ್ತ್ರೀ ಪಾತ್ರ ಹಾಗೂ ಕೆಳಸ್ತರದ ಪಾತ್ರಗಳು ಪ್ರಾಕೃತವನ್ನು ಮೇಲ್‌ಸ್ತರದ ಪಾತ್ರಗಳು ಸಂಸ್ಕೃತವನ್ನು ಆಡುಭಾಷೆಯನ್ನಾಗಿ ಬಳಸಿರುವುದು ಕಂಡುಬರುತ್ತದೆ. ಶಿಷ್ಟ ಭಾಷೆಯ ದಾಖಲೆಗಳನ್ನು ಹಾಳು ಮಾಡಿರಬಹುದೆ? ಕಾವ್ಯ ಮೀಮಾಂಸಕಾರ ರಾಜಶೇಖರನ ಕಾಲದವರೆಗೆ ಕಾವ್ಯ ಕೃತಿಗಳ ಮಾಧ್ಯಮವಾಗಿ ಪ್ರಾಕೃತ ಮೆರೆಯಿತು. ಮೌರ್ಯರು, ಸಾತವಾಹನರು ಹಾಗೂ ಅವರ ಸಾಮಂತರು, ಅಮಾತ್ಯರು ಅಷ್ಟೇ ಅಲ್ಲ ರಾಜರಿಂದ ರಂಕರವರೆಗೆ ಸಾಮ್ರಾಟರಿಂದ ಸಾಮಾನ್ಯರವರೆಗೆ ಅರಮನೆಯಿಂದ ಗುರುಮನೆಯವರೆಗೆ ಮದುವೆಯಿಂದ ಮಸಣದವರೆಗೆ ಪ್ರಾಕೃತ ಭಾಷೆ ಜನರ ಸಂವಹನದ ಮಾಧ್ಯಮವಾಗಿ ಮೆರೆಯಿತು. ಆಯಗಾರರಿಂದ ಅರಸರ ವರೆಗೆ, ಬಿಕ್ಷುಕರಿಂದ, ಬಿಕ್ಷುಗಳಿಂದ ರಕ್ಷಕರವರೆಗೆ ರಾಜರವರೆಗೆ, ರಾಜ, ರಾಣಿ, ವ್ಯಾಪಾರಿಗಳು, ಯೋಧರು-ಜೋಧರು, ಕೃಷಿಕರು, ಯೋಗಿಗಳು-ಜೋಗಿಗಳು ಒಟ್ಟಾರೆ ಜನಪದಗಳ ಜಾನಪದರೆಲ್ಲರ ನಿತ್ಯ ಜೀವನದಲ್ಲಿ ಬಳಸುವ ಭಾಷೆ ಪ್ರಾಕೃತವಾಯಿತು. ಮಂತ್ರ ತಂತ್ರ ಸಾಹಿತ್ಯ ಶಾಸ್ತ್ರಗಳ ಭಾಷೆಯಾಗಿ ಪ್ರಾಕೃತವು ರಾರಾಜಿಸಿತು.

ಪಾಶ್ಚಾತ್ಯ ವಿದ್ವಾಂಸರಾದ ಜೇಮ್ಸ್ ಪ್ರಿನ್ಸೆಪ್ ಹಾಗೂ ಪ್ರೊ. ಲ್ಯಾಸೆನ್ ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಬ್ರಾಹ್ಮೀ ಲಿಪಿಯ ರಹಸ್ಯವನ್ನು ಕಂಡುಹಿಡಿದರು. ಅಲ್ಲಿಂದ ಮುಂದೆ ಅನೇಕ ವಿದ್ವಾಂಸರು ಅಧ್ಯಯನವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ.ಶ. ೧೮೩೬-೩೭ ರಿಂದ ಅಧ್ಯಯನದ ಸಾಪೇಕ್ಷ ತೋರ ರೂಪದಲ್ಲಿ ಬ್ರಾಹ್ಮೀಲಿಪಿ ಹಾಗೂ ಪ್ರಾಕೃತ ಅಧ್ಯಯನಗಳು ಸಂಬಂಧಿಸಿದಂತೆ ಪ್ರಕಟವಾಗಿವೆ. ಭಾರತೀಯ ಶಾಸ್ತ್ರದ (Indology) ಪಿತಾಮಹರೆಂದರೆ ಸರ್ ವಿಲಿಯಂ ಜೋನ್ಸ್ ಹಾಗೂ ವಿಲ್ಕಿನ್ಸ್ ಅವರು ಕ್ರಿ.ಶ. ೧೭೮೪ರಲ್ಲಿ ಏಷಿಯಾಟಿಕ್ ಸೊಸೈಟಿ ಆಫ್. ಬೆಂಗಾಲ್ (Asiatic Society of Bengal) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಕರ್ನಲ್ ಕಾಲಿನ್ ಮೆಕೆಂಜಿ ಹಸ್ತಪ್ರತಿಗಳ ಸಂಗ್ರಹ ಹಾಗೂ ಶಾಸನಗಳ ಸಂಗ್ರಹ ಅವುಗಳ ಅನುವಾದದ ಕಾರ್ಯ ಮಾಡಿದ, ಮಾಡಿಸಿದ, ಎ.ಸಿ. ಬರ್ನೆಲ್ ಹಾಗೂ ಜಿ. ಬೂಲರ್ ಇವರು ಲಿಪಿಯ ಬಗ್ಗೆ ವಿಸ್ತೃತ ಪುಸ್ತಕಗಳನ್ನು ಬರೆದ ಹಾಗೆ ಪ್ರೊ. ಕೀಲ್ ಹಾರ್ನ್ ಹಾಗೂ ಪ್ರೊ. ಲುಡರ್ಸ್ ಸಂಸ್ಕೃತ ಹಾಗೂ ಪ್ರಾಕೃತ ಶಾಸನಗಳನ್ನು ಪಟ್ಟಿ ಮಾಡಿದ್ದಾರೆ. ಲುಡರ್ಸ್ ಅವರೇ ಓ. ಫ್ರಾಂಕ್ (O. Frank : Pali and Sanskrit) ಮೊದಲು ಈ ಕೆಲಸವನ್ನು ಮಾಡಿದ್ದಾರೆಂದು ತಿಳಿಸಿದ್ದಾರೆ. ಬರ್ಜೆಸ್ಸ್, ಕನ್ನಿಂಗ್ ಹ್ಯಾಮ್ ಹಾಗೂ ಓಗೆಲ್ಲ್ (Vogel) ಮುಂತಾಗಿ ಅನೇಕ ವಿದ್ವಾಂಸರು ದುಡಿದಿದ್ದಾರೆ. ಲುಡರ್ಸ್ ೧೯೦೯-೧೦ ರಲ್ಲಿ ಪ್ರಕಟವಾದ ಎಪಿಗ್ರಾಫಿಯಾ ಇಂಡಿಕಾ ಸಂಪುಟ ೧೦ರಲ್ಲಿ ಪ್ರಾಕೃತ ಶಾಸನಗಳ ಒಂದು ಪಟ್ಟಿಕೆಯನ್ನು ಮಾಡಿಕೊಟ್ಟಿದ್ದಾರೆ. ಅವರ ಪಟ್ಟಿಯಲ್ಲಿ ಪ್ರಾಚೀನ ಬ್ರಾಹ್ಮೀ ಶಾಸನಗಳು ಹೆಚ್ಚು ದೊರೆತಿವೆ. ಶ್ರೀಯುತರು ತಮಗೆ ದೊರಕಿದ ಶಾಸನಗಳು ೧೪೫೪ ಎಂದು ದಾಖಲಿಸಿದ್ದಾರೆ. (List of Brahmi Inscriptions from the Earliest times, pp. 1-179, Appendix) ಲುಡರ್ಸ್ ಅವರ ತರುವಾಯದಲ್ಲಿ ಒಂದು ನೂರು ವರ್ಷಗಳು (ಒಂದು ಶತಮಾನ!) ಕಳೆದಿವೆ. ಅನಂತರದಲ್ಲಿ ಸರ್ಕಾರೀ ಕಚೇರಿಗಳು ಮತ್ತು ದೇಶೀಯ ವಿದ್ವಾಂಸರು ಅನೇಕ ಶಾಸನಗಳನ್ನು ನೂರಾರು ಶಾಸನಗಳನ್ನು ಹೊಂದಿರುವ ಸ್ಥಳವನ್ನು ಕಂಡು ಹಿಡಿದಿದ್ದಾರೆ. ಎಂ.ಜಿ. ದೀಕ್ಷಿತರ ಅಪ್ರಕಟಿತ ಮಹಾಪ್ರಬಂಧ (Buddhist Settlements in Western India) ಮುಂಬಯಿ ವಿಶ್ವವಿದ್ಯಾಲಯದಲ್ಲಿದೆ. ಅನಂತರದಲ್ಲಿ ಎಸ್. ನಾಗರಾಜು ಅವರ ಕೃತಿ Buddhist Architecture of Western India ಪ್ರಕಟವಾಗಿದೆ. ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸನ್ನತಿಯಲ್ಲಿ ಅನೇಕರಿಗೆ ಗೊತ್ತಿರುವಂತೆ ನೂರಾರು ಶಾಸನಗಳು ದೊರಕಿವೆ, ಪ್ರಕಟವಾಗಿವೆ.  ಇಂಗುವ ಕಾರ್ತಿಕೇಯ ಶರ್ಮ (I.K. Sharma), ಶಿವಶರ್ಮ ಹಾಗೂ ವರಪ್ರಸಾದರಾವ್ ಮೂವರೂ ಸೇರಿ ಪುಸ್ತಕವನ್ನು ಪ್ರಕಟಿಸಿ ದ್ದಾರೆ. ಕೆ.ವಿ ರಮೇಶ, ಎಂ.ಎಸ್. ನಾಗರಾಜರಾವ್‌ರವರು ಲೇಖನ ಬರೆದಿದ್ದಾರೆ, ಅಶೋಕನ ಶಿಲಾಶಾಸನಗಳಿಂದ ಹಿಡಿದು ಕ್ರಿ.ಶ. ೨-೪ನೇಯ ಶತಮಾನದವರೆಗೆ ಬರೆಯಲಾದ ಪ್ರಾಕೃತ ಶಾಸನಗಳು ಉಪಲಬ್ಧವಾಗಿವೆ. ಈ ನಿವೇಶನವನ್ನು ಮೊದಲು ಗುರುತಿಸಿದವರು ಮತ್ತು ನಾಗಾರ್ಜುನ ಕೊಂಡದೊಡನೆ ಅದನ್ನು ಹೋಲಿಸಿದವರು ದಿ. ಕಪಟರಾಳ ಕೃಷ್ಣರಾಯರು (೧೯೫೪ ಹೈದರಾಬಾದು ಇಂದು). ದಕ್ಷಿಣಾಪಥೇಶ್ವರರು ಎಂದು ಕರೆಯಿಸಿಕೊಂಡ ಸಾತವಾಹನರ ಮತ್ತು ಪಲ್ಲವರ ಆರಂಭದ ಶಾಸನಗಳು ಪ್ರಾಕೃತ ಭಾಷೆಯಲ್ಲೇ ಇವೆ. ನರ್ಮದಾ ಅಥವಾ ರೇವಾತಟದಿಂದ ರಾಮೇಶ್ವರದವರೆಗೆ ದಕ್ಷಿಣಾಪಥದ ವಿಸ್ತಾರವನ್ನು ಮನಕ್ಕೆ ತಂದರೆ ಸಾತವಾಹನರ ರಾಜ್ಯದ ವಿಸ್ತಾರ ಹಾಗೂ ರಾಜಧಾನಿ ಮತ್ತು ಉಪರಾಜಧಾನಿ ಗಳ ಅವಶ್ಯಕತೆ ಎದ್ದುಕಾಣುತ್ತದೆ. ಪ್ರತಿಷ್ಠಾನ (ಪೈಠಣ) ರಾಜಧಾನಿಯಾದರೆ ಹಲವು ಉಪರಾಜಧಾನಿಗಳು ಇದ್ದದ್ದು ಗಮನಕ್ಕೆ ಬರುತ್ತದೆ. ಮತ್ತೆ ಸಾಮಂತರು, ಮಂಡಲಾ ಧೀಶ್ವರರು ಇರುತ್ತಿದ್ದ ಊರುಗಳನ್ನೂ ರಾಜಧಾನಿಗಳೆಂದೇ ಹೇಳಲಾಗುತ್ತಿತ್ತು. ಅಂತಹ ಉಪರಾಜಧಾನಿಗಳಲ್ಲಿ ಬನವಾಸಿಯನ್ನು ವೈಜಯಂತ, ವಿಜಯ ವೈಜಯಂತಿ, ಸಂಜಯಂತ, ಜಯಂತೀಪುರ ಇತ್ಯಾದಿಗಳಿಂದಲೂ ಗುರುತಿಸಲಾಗಿತ್ತು. ಸಾತವಾಹನ ರಾಜ ‘ರಾಣೋ< ರಾಞೋ<ರಾಜ್ಞೋ’ ಸಿವಸಿರಿಪುಳುಮಾವಿಸನ ಪತ್ನಿ ಮಹಾದೇವಿಯ ಛಾಯಾಪಥರ ಅಲ್ಲಿ ದೊರಕಿದುದನ್ನು ದಿ. ಎಚ್.ಆರ್. ರಘುನಾಥ ಭಟ್ಟರು ಪ್ರಕಟಿಸಿದ್ದಾರೆ. ಆ ಶಾಸನದಿಂದ ನಮಗೆ ಬಹಳ ಮಹದುಪಕಾರವಾಗಿದೆ. ಶಾಸನ ಪಾಠವನ್ನಿತ್ತು ವಿಮರ್ಶೆಯನ್ನು ಮಾಡುವೆ. ಶಾಸನ ಪಾಠ

೧. ಸಿಧಂ ರಞೋ ವಾಸಿಠೀಪುತಸ ಸಿವಸಿರಿ

೨. ಪುಳುಮಾವಿಸ ಮಹಾದೇವಿಯ ಛಆ ಪಥರೋ

ಇಲ್ಲಿ ಕನ್ನಡ ಭಾಷೆಗೆ ಸಂಬಂಧಪಟ್ಟ ಎರಡು ಸಂಗತಿಗಳಿವೆ.

೧. ‘ಳು’ (ಳ+ಉ) ಚಾಕ್ಷುಷ ರೂಪದಲ್ಲಿ “ಳ” ಅಕ್ಷರದ ಬಳ್ಳಿಯದಾಗಿದ್ದು ವ್ಯಾಕರಣ ಕೃತಿಗಳಲ್ಲಿ (ಕಾವ್ಯಾ. ಶಬ್ದಸ್ಮೃತಿ) ಅಸ್ತಿತ್ವದಲ್ಲಿ ಇಲ್ಲದಿದ್ದರೂ ಸಾತವಾಹನರ ಕಾಲದಿಂದ ಜೀವಂತವಾಗಿದೆ.

೨. ಪ್ರಾಕೃತದಲ್ಲಿ “ಮಹಾದೇವಿಅ” ಎಂದು ಇರಬೇಕಾದದ್ದು “ಮಹಾದೇವಿಯ” ಎಂದಿದ್ದು ‘ಯ’ ಅಕ್ಷರ ಯಕಾರಾಗಮ ಸಂಧಿಯನ್ನು ಸೂಚಿಸಿ ಈ ಶಾಸನ ಪ್ರಾಕೃತ ಹಾಗೂ ಕನ್ನಡ ಎರಡರ ಮಿಶ್ರ ಭಾಷೆಯನ್ನು (Mixed Dialect) ಹೊಂದಿರುವುದನ್ನು ಸೂಚಿಸುತ್ತದೆ. ಇದು ಅತ್ಯಂತ ಮಹತ್ವದ ಸಂಗತಿ. ಬನವಾಸಿಯಲ್ಲೇ ದೊರಕಿದ ಇನ್ನೊಂದು ಪ್ರಾಕೃತ ಶಾಸನವು ಇಂತಿದೆ.

೧. ಸಿಧಂ ರಞೋಹಾರೀತಿ ಪುತಸ ವಿಣ್ಹುಕಡ ಚುಟುಕುಲಾನಂದ ಸಾತಕಂಣಿಸ ವಸ ಸತಾಯ ಸಂವಛರಂ ೧೦=೨ ಹೇಮಂತಾನ ಪಕೋ ೭ ದಿವಸ ೧ ಮಹಾಭುವಿಯ ಮಹಾರಾಜ ಬಾಲಿಕಾಯ ಜೀವಪುತಾಯ

೨. [ರಾ] ಞೋ ಯುವರಾಜ [ಮಾ]ತುಯ ಸಿವಖದ ಣಾಗಸಿರಿಯ ದೇಯಧಂಮಂ ಣಾಗೋ ತಡಾಗೋ ವಿಹಾರೋಚ ಏಥ ಕಮತಿಕೋ ಅಮಚೋ ಖದಸಾತಿ ಸಜಯತಕಸ ಆಚರಿಯಸ

೩. ದಾಮೋರಕಸ ಸಿಸೆನ ಣಟಕೇನ ಣಾಗೋ ಕತೋ

ರಾಜಾ ಹಾರೀತಿ ಪುತ್ರ ವ್ಹಿಣುಕಡ ಚುಟುಕುಲಾನಂದ ಸಾತಕರ್ಣಿಯ ಹನ್ನೆರಡನೆಯ ವರ್ಷದಲ್ಲಿ ಹೇಮಂತ ಋತುವಿನಲ್ಲಿ ಏಳನೆಯ ಪಕ್ಷದಲ್ಲಿ ಮೊದಲನೆಯ ದಿವಸದಂದು ಮಹಾಭುವಿ (ಮಹಾಬಲಿ) ವಂಶದ ಮಹಾರಾಜನ ವಂಶಸ್ಥಳಾದ ಯುವರಾಜರ ಮಾತೆಯಾದ ರಾಣಿ (ರಾಜ್ಞಿ) ಶಿವಸ್ಕಂದ ನಾಗಶ್ರೀಯು ನಾಗರ ಪ್ರತಿಮೆಯನ್ನು, ತಟಾಕವನ್ನು ಮತ್ತು ವಿಹಾರವನ್ನು ಮಾಡಿಸಿ (ದಾನಮಾಡಿದಳು). (ಈ) ನಾಗಪ್ರತಿಮೆಯನ್ನು ದಾಮೋರಗ (ಕ>ಗ ಹಾಗೂ ಗ>ಕ ಆಗುವುದು ರೂಢಿ) (ಕಂಪಣ್ಣ<ಗಂಪಣ್ಣ<ಗಣಪಣ್ಣ) (ದಾಮ+ಉರಗ= ದಾಮೋರಗ=ಗಣಪತಿ ಎಂಬುದು) ಎಂಬ ಶಿಲ್ಪಾಚಾರ್ಯನ ಶಿಷ್ಯ ನಟಕನಿಂದ ಮಾಡ ಲ್ಪಟ್ಟಿತು. ‘ಮಹಾಭುವಿ’ ಎಂದು ತಿದ್ದಿ ಬರೆಯಲಾಗಿದೆ. ‘ಮಹಾಬಲಿ’ ಎಂದಿದ್ದು ಅದು ‘ಬಾಣ’ ವಂಶವನ್ನು ಸೂಚಿಸುತ್ತದೆ.

ಸಾತವಾಹನರ ರಾಜ್ಯ ನಾಶವಾದ ಮೇಲೆ ಅವರ ಅಧಿಕಾರಿಗಳು, ಅಮಾತ್ಯರು, ಸಾಮಂತರು ಸ್ವತಂತ್ರ ರಾಜರಾದರು. ಪಲ್ಲವರು ಈ ಸಂದರ್ಭದಲ್ಲೇ ಸ್ವತಂತ್ರರಾದರು ಅವರ ಮೊದಲ ರಾಜಧಾನಿಯು ‘ವಿಜಯ ವೈಜೇಯಕಿ’ ಎಂದರೆ ವಿಜಯ ವೈಜಯಂತಿ ಅಥವಾ ಇಂದಿನ ಬನವಾಸಿ. ಎಪಿಗ್ರಾಫಿಯ ಇಂಡಿಕಾ ಸಂಪುಟ ೧ರಲ್ಲಿ ಪ್ರಕಟವಾದ ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿ ದೊರೆತ ಪಲ್ಲವ ಶಿವಸ್ಕಂದವರ್ಮನ ಶಾಸನವನ್ನು ಅನುವಾದ ಮಾಡುವವರು ಶಿವಸ್ಕಂದವರ್ಮನ ತಂದೆ ಬೊಪ್ಪಸ್ವಾಮಿ ಭಟ್ಟಾರಕನು ‘ವಿಜಯ ವೈಜಕೇಯಿ’ ಇಂದ ಆಳುತ್ತಿದ್ದುದನ್ನು ಕೈಬಿಟ್ಟು ಪಲ್ಲವರ ಇತಿಹಾಸವನ್ನು ಬರೆಯುವಲ್ಲಿ ಮೋಸಮಾಡಿ ದರು. ಅನಂತರ ಬಂದ ವಿದ್ವಾಂಸರು ಮೂಲದತ್ತ ಕಣ್ಣು ಹಾಯಿಸಲೇ ಇಲ್ಲ. ಇವರಿಂದ ಸತ್ಯದ ಸಮಾಧಿ ಆಗಿ ಹೋಯಿತು (ನೋಡಿ : Ep. Ind. Vol. 1, p.p. ೧-೧೦). ಎರಡನೆಯ ಫಲಕದ ಹಲಗೆಯಲ್ಲಿ, ಪಂಕ್ತಿ ೯ರಲ್ಲಿ ‘ವಿಜಯ ವೈಜಯಕೇ’ ನಗರದ ಪ್ರಸ್ತಾಪ ಇದೆ. ಪಲ್ಲವರ ಸದ್ಯದ ಇತಿಹಾಸ ಅಸಂಬದ್ಧವಾಗಿದೆ. ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡು ಮೂರು ಪ್ರದೇಶಗಳ ಶಾಸನಗಳನ್ನು ಸೇರಿಸಿ ಇತಿಹಾಸವನ್ನು ಬರೆಯ ಬೇಕು. ಇತಿಹಾಸದ ಕೃತಿಗಳನ್ನು ರಚಿಸಿರುವವರು ಅದುವರೆಗೆ ಬಂದ ಸಂಶೋಧನೆಗಳನ್ನು ನೋಡದೆ ಬರೆದಿರುವುದರಿಂದ ಹೀಗಾಗಿದೆ. ಮೂಲ ಆಕರಗಳನ್ನು ನೋಡಬೇಕಲ್ಲವೆ?

ಜೈನಸಾಹಿತ್ಯದಲ್ಲಿ ಪ್ರಾಕೃತ ಕರ್ನಾಟಕದಲ್ಲಿ ೧೦ನೆಯ ಶತಮಾನದವರೆಗೆ ಮಹಾಕಾವ್ಯ ಗಳಲ್ಲಿ ಶಾಸ್ತ್ರಗಳಲ್ಲಿ ಸಂವಹನ ಕಾರ್ಯಮಾಡಿ ಮೆರೆಯಿತು. ಮಹಾಪುರಾಣವನ್ನು  ರಚಿಸಿದ, ಮುಮ್ಮಡಿಕೃಷ್ಣ ರಾಷ್ಟ್ರಕೂಟ ಚಕ್ರವರ್ತಿಯ ಮಂತ್ರಿ, ಭರತ ಹಾಗೂ ನನ್ನರಿಂದ ಪೋಷಿತ ನಾದ ಪುಷ್ಪದಂತ ಹಾಗೂ ಚಾವುಂಡರಾಯ ಮಂತ್ರಿಯ (ಗೊಮ್ಮಟೇಶ್ವರನನ್ನು ಮಾಡಿಸಿದ) ಗುರುಗಳಾದ, “ಗೊಮ್ಮಟ ಸಾರ” ಕೃತಿ ರಚಿಸಿದ, ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳು ಸಾಕ್ಷಿಯಾಗಿದ್ದಾರೆ. ಆದರೆ ಅನಂತರದಲ್ಲಿ ಬಂದ ಪಂಡಿತರು ಪಾಂಡಿತ್ಯ ಪ್ರದರ್ಶನಕ್ಕೆ ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಪ್ರಾಕೃತ ಭಾಷೆಯಲ್ಲಿ ಬರೆದಿರುವುದುಂಟು. ಬಳ್ಳಾರಿ ಜಿಲ್ಲೆಯ ತಾಲೂಕಿನ ಹುಲುಗೋಡೆ ಗ್ರಾಮದ ಒಂದು ಶಾಸನದಲ್ಲಿ ಅದರ ಕರ್ತೃ ಪ್ರಾಕೃತ ಪದ್ಯವನ್ನು ಹೀಗೆ ಬರೆದಿದ್ದಾನೆ (ಕ.ವಿ. ಶಾಸನ ಸಂಪುಟ ೧, ಬಳ್ಳಾರಿ-೧೮).

ಸ್ರ ||      ಗೋರೀಪೀಣತ್ಥಣತ್ಥತ್ಥಗಿದ ಘುಸಿಣ ದಿನ್ನೇಕ ವಣ್ಣೋಗ್ಘವಚ್ಛೋ
ಕಂದಪ್ರೋವಿಪ್ಫಾಳಣೈ ಣಿವುಣೋವಿಚ್ಚುರನ್ತೈಚ್ಚೋ
ಗಿಬ್ಬಾಣೋಕ್ಕೇರ ರಖೋ ತಿಹುವಣ ಭವಸಾರಂಭ ಸ್ತಬನ್ತಖಂಭೋ
ಳಚ್ಚೀಣಾಹಪ್ಪಿಯೋಸೋಜೇ ಐಸಐಜಏ ನಮ್ಮ ಶಂಭೂ
ಸ್ವಯಂಭೂ ||*

ಇದೊಂದು ಚೋದ್ಯದ ಕವಿತೆ, ಇಲ್ಲಿ ಛಂದೋಬಂಧವೂ ಕೆಟ್ಟಿದೆ ಮತ್ತು ಅರ್ಥವೂ ಅಲ್ಲಲ್ಲಿ ಸರಿಯಾಗಿಲ್ಲ. ಅಶೋಕನ ಬ್ರಹ್ಮಗಿರಿ ಇತ್ಯಾದಿ ಶಾಸನಗಳಲ್ಲಿ ಇರುವ “ಲಿಪಿಕರೇಣ” ಎಂಬ ಖರೋಷ್ಠಿ ಬರಹವೂ ಇದೇ ಬಗೆಯದ್ದು.

ಪ್ರಾಕೃತ ಶಾಸನಗಳು, ವಿಶೇಷವಾಗಿ ಕರ್ನಾಟಕದಲ್ಲಿ ದೊರಕಿದವು ಬೌದ್ಧಧರ್ಮಕ್ಕೆ ಸಂಬಂಧಿಸಿವೆ. ಅವು ಗುಲ್ಬರ್ಗಾ ಜಿಲ್ಲೆಯಲ್ಲೇ ವಿಶೇಷವಾಗಿ ದೊರಕಿವೆ. ಶ್ರೀ ಕ್ಷೇತ್ರ ಸನ್ನತಿ ಯಲ್ಲಿ ಅಶೋಕನ ಪ್ರಸ್ಥರ ಶಾಸನಗಳು ಹದಿನಾಲ್ಕೂ ಇದ್ದವೆಂಬುದು ಖಚಿತ. ಆದರೆ ಅವುಗಳು ಸುಸ್ವರೂಪದಲ್ಲಿ ದೊರೆತಿಲ್ಲ. ಬೌದ್ಧ ಅವಶೇಷಗಳು, ಭಗ್ನ ದೇವಾಲಯಗಳು ಇತಿಹಾಸದ ಆಕರಗಳು ಕಾಲನ, ದಾಳಿಕಾರರ ಹಾಗೂ ಅಸಂಸ್ಕೃತ ಜನರ ವಿಧ್ವಂಸಕ ಕೃತ್ಯಗಳಿಗೆ ಈಡಾಗಿ ಹಾಳಾಗಿ ಹದುಳ ಅವಸ್ಥೆಯನ್ನು ಕಳೆದುಕೊಂಡಿವೆ. ಪ್ರಸ್ಥರ ಶಾಸನಗಳು (Rock Edicts), ಲಘು ಪ್ರಸ್ಥರ ಶಾಸನಗಳು (Minor Rock Edicts) ಏನೆಲ್ಲವೂ ಅಶೋಕನ ರಾಜಾಜ್ಞೆಗಳೇ. ಸಿರುಗುಪ್ಪ ತಾಲ್ಲೂಕಿನ ನಿಟ್ಟೂರ ಶಾಸನವೊಂದರಲ್ಲಿ ಬಂದಿರುವ “ಯಥರಾಜಾ ಅಸೋಕೋ ಆಹ ತಥಾತಿ” ಎಂಬ ವಾಕ್ಯದಲ್ಲಿ ಸ್ಪಷ್ಟವಿದೆ EDICT (An Order Issued By a King or A Law Giver) ಎಂಬ ಶಬ್ದವೂ ಇದನ್ನೇ ಸೂಚಿಸುತ್ತದೆ. ಅಶೋಕನ ಹೆಸರು ಶಾಸನದ ಕೊನೆಯಲ್ಲಿ ಬಂದಿರುವುದೂ ತುಂಬ ಗಮನಾರ್ಹ ಹಾಗೂ ಏಕೈಕ ಉದಾಹರಣೆ.

ಮೌರ್ಯರ ನಂತರ ಸಾತವಾಹನರ ರಾಜ್ಯ ನರ್ಮದೆಯಿಂದ ದಕ್ಷಿಣಕ್ಕೆ ಸಂಪೂರ್ಣ ಹಬ್ಬಿದ್ದು ಪಲ್ಲವರು ಅವರ ಸಾಮಂತರಾಗಿದ್ದರು. ಸಾತವಾಹನರನ್ನು ‘ದಕ್ಷಿಣಾಪಥೇಶ್ವರ’ ಬಿರುದಿನಿಂದ ಕರೆಯಲಾಗುತ್ತದೆ. ಬನವಾಸಿಯಲ್ಲಿ ದೊರೆತ ಸಾತವಾಹನ ದೊರೆ ಸಿವಸಿರಿಪುಳು ಮಾವಿಯ ಮಹಾದೇವಿಯ ‘ಛಆ ಪಥರ’ ಶಿಲೆಯಂತೆ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬೆಳ್ವಾಡಗಿ ಗ್ರಾಮದಲ್ಲಿ ‘ಕಲಕಸ ಛಆಪಡಿಮಾ’ (ಕಲಕನ ಛಾಯಾ ಪ್ರತಿಮೆ) ಶಿಲೆ ದೊರಕಿದೆ, ಸತ್ತವರ ನೆನಪಿಗಾಗಿ ಅವರ ಜ್ಞಾನಪಕ ಶಿಲಾಪ್ರತಿಮೆಯನ್ನು ಮಾಡಿಸಿ ನೆಡುತ್ತಿದ್ದುದು ಒಂದು ಪುರಾತನ ಸಂಪ್ರದಾಯ ಎಂಬುದು ಇದೀಗ ಸ್ಪಷ್ಟ. ಅದೇ ಜೇವರ್ಗಿ ತಾಲ್ಲೂಕಿನ ಗ್ರಾಮ ಅವರಾದದಲ್ಲಿ ಒಂದು ಶಿಲಾಫಲಕವೂ ದೊರೆತಿದ್ದು ಅದರ ಒಕ್ಕಣೆ ಹೀಗಿದೆ :

ರಕಸ ಬೋಧಿಣಸ ವಿಜಲಯ

ಇದು ರಕ್ಕಸ ಬೋಧಿಣಸನ ವಿದ್ಯಾಲಯ ಎಂಬ ವಿದ್ಯಾಲಯವನ್ನು ಸೂಚಿಸುತ್ತದೆ. ಶಾಲಾ ಬೋರ್ಡುಗಳು ಇದ್ದುದೂ ಗಮನಿಸಬೇಕಾದ ಸಂಗತಿ. ‘ರಕಸ’, ‘ರಾಕ್ಷಸ’ದ ತದ್ಭವ. ಅಮಾತ್ಯ ರಾಕ್ಷಕನ ಸಣ್ಣಿಸಿದ ರೂಪ. ನಂದರು ದಕ್ಷಿಣ ಭಾರತಕ್ಕೆ ಬಂದಿದ್ದರು ಎನ್ನುವುದಕ್ಕೆ ಅವರ ಅಮಾತ್ಯನ ಹೆಸರು ಪ್ರಚಲಿತವಾಗಿದ್ದುದು ಒಂದು ದೊಡ್ಡ ಸಾಕ್ಷಿ. ‘ರಕ್ಕಸಗಂಗ’ ದೊಳಗಿನ ‘ರಕ್ಕಸ’ ಅಂತೆಯೆ ಚಾಳುಕ್ಯ ಚಕ್ರವರ್ತಿ ತ್ರಿಭುವನಮಲ್ಲನ ಕಾಲದ ಮಂತ್ರಿ ‘ರಕ್ಕಸಯ್ಯ’ ಇತ್ಯಾದಿಗಳನ್ನು ಗುರುತಿಸಬಹುದು.

ಸಾತವಾಹನರ ಕಾಲದಲ್ಲಿ ಬೌದ್ಧಧರ್ಮ, ವಿಶೇಷವಾಗಿ ಬೆಳೆದುನಿಂತಿತ್ತು. ಪ್ರಾಚೀನ ಕರ್ನಾಟಕದ ಅಂಗವಾದ ಈಗಿನ ಮಹಾರಾಷ್ಟ್ರದ ಅಂಗವಾಗಿರುವ ಮುಂಬಯಿ, ನಾಶಿಕ ಎಲ್ಲೋರಾ ಹಾಗೂ ಅಜಂತ ಮುಂತಾಗಿ ಅ  ನೇಕ ಬೌದ್ಧ ಕೇಂದ್ರಗಳಲ್ಲಿ ಪ್ರಾಕೃತ ಶಾಸನ ಗಳು ಉಪಲಬ್ಧವಾಗಿವೆ. ಎಸ್.ಬಿ. ದೇವ ಅವರ ಕೃತಿ “ಮಹಾರಾಷ್ಟ್ರವ ಗೋವೆ ಶಿಲಾಲೇಖ ತಾಮ್ರಪಟಾಂಚೀ ವರ್ಣನಾತ್ಮಕ ಸಂದರ್ಭ ಸೂಚಿ” ಗ್ರಂಥದಲ್ಲಿ ಸುಮಾರು ೨೫೭ ಪ್ರಾಕೃತ ಶಾಸನಗಳು ದಾಖಲಾಗಿವೆ. ಸಂಶೋಧನೆಯಲ್ಲಿ ಇನ್ನೂ ದೊರೆಯಬಹುದು. ಸಾತವಾಹನರ ಚರಿತ್ರೆಯನ್ನು ತಿಳಿಸುವಲ್ಲಿ ನಾಶಿಕ ಶಾಸನಗಳು ವಿಶೇಷ ಮಹತ್ವವನ್ನು ಪಡೆದಿವೆ. ಶೈಲಗೃಹ ಕ್ರ.ಸಂಖ್ಯೆ. ೩ರಲ್ಲಿ ಇರುವ ಸಾತವಾಹನ ರಾಣಿ ಗೌತಮಿ ಬಲಸಿರಿಯು ಭದಾಯತೀಯ ಭಿಕ್ಷುಸಂಘಕ್ಕೆ ತಿರಣಹ ಹಿನ್ನೆಲೆಯ ಮೇಲೆ ವೇಣಿಯನ್ನು ಮಾಡಿಸಿಕೊಟ್ಟಳು. ಆನುಷಂಗಿಕ ವಾಗಿ ಸಾತವಾಹನರ ರಾಜ ಗೌತಮಿಪುತ್ರ ಸಾತಕರ್ಣಿ ದೊರೆಯ ಹಲವು ವಿಜಯಗಳನ್ನೂ ಗೆದ್ದ ದೇಶಗಳನ್ನೂ ಉಲ್ಲೇಖಿಸಿದೆ. ಅಸಿಕ, ಅಸಕ, ಮುಳ(ಲ)ಕ, ಸುರಠ, ಕುಕುರ, ಆಪರಂತ, ಅನುಪ, ವಿದರ್ಭ ಹಾಗೂ ಆಕರಾವತಿ ಇತ್ಯಾದಿ ದೇಶಗಳ ಹೆಸರುಗಳು ಗಮನಾರ್ಹವಾಗಿವೆ. ಷಿಕಾರಿಪುರ ತಾಲ್ಲೂಕಿನ ತಾಳಗುಂದದ ಶಾಸನದಲ್ಲಿ ತಾಳಗುಂದದಲ್ಲಿರುವ ಪ್ರಣವೇಶ್ವರನನ್ನು ಸಾತಕರ್ಣಿಗಳು ಪೂಜಿಸಿದರು ಎಂಬುದು ಸಾತವಾಹನರ ಸಂಬಂಧವನ್ನು ಸೂಚಿಸುತ್ತದೆ. ಇದೇ ವಾಸಿಠಿಪುತ ಸಿರಿ ಸಾತಕರ್ಣಿ ದೊರೆಯ ತಂದೆ ಸಿರಿಸಾತಕರ್ಣಿ ಹಾಗೂ ಶಿವಶ್ರೀಪುಳು ಮಾವಿಯ ಶಾಸನಗಳು ಸನ್ನತಿಯಲ್ಲಿ ದೊರಕಿದ್ದು (Early Brahmi Inscriptions from Sannati – I.K. Sharma and  J. Varaprasad Rao) ಸಾತವಾಹನ ರಾಜಮನೆತನದ ಚರಿತ್ರೆಯ ಮೇಲೆ ಹೊಸಬೆಳಕನ್ನು ಬೀರುತ್ತದೆ. ಇಲ್ಲಿ ಬಂದಿರುವ ಶಿವಶ್ರೀ (ಶಿವಸಿರಿ) ಪುಡುಮಾವಿಯ ಮಹಾರಾಣಿಯ ಮಹಾದೇವಿಯ “ಛಆ ಸನ್ನತಿಯಲ್ಲಿ ದೊರಕಿದ ಹಾಗೆಯೇ ಇತರ ಕಡೆಗಳಲ್ಲಿ ದೊರಕಿದ ಸುಮಾರು ೨೦೦ಕ್ಕೂ ಹೆಚ್ಚು ಶಾಸನಗಳು ಆಗ ಈ ನೆಲದಲ್ಲಿ ಪ್ರಾಕೃತ ಭಾಷೆ ಜನಭಾಷೆಯಾಗಿ, ರಾಜಭಾಷೆಯಾಗಿ ಮತ್ತು ವ್ಯವಹಾರಭಾಷೆ ಆಗಿ ವರ್ತಿಸಿತು ಎಂಬುದನ್ನು ಸಾದರಪಡಿಸಿವೆ.

 


[1] ಶ್ರವಣಬೆಳ್ಗೊಳದ ಮೂಲ ಹೆಸರು ‘ಕಟವಪ್ರ’, ‘ಕೞ್ಬಪ್ಪು’ ಎಂದು ವಿವರಿಸುತ್ತ ‘ಕಟವಪ್ರ’ ಹಾಗೂ ‘ಕೞ್ಬಪ್ಪು’ ಇವುಗಳಲ್ಲಿ ಸಂಸ್ಕೃತ ರೂಪ ಕಟವಪ್ರ ಮೊದಲು ಎಂದೂ ಇಲ್ಲ ಕನ್ನಡ ರೂಪ ‘ಕೞ್ಬಪ್ಪು’ ಎಂಬುದೇ ಮೂಲ ಎಂದೂ ವಿದ್ವಾಂಸರು ವಾದಿಸಿದ್ದಾರೆ. ಆದರೆ ಈ ಎರಡೂ ಪಂಗಡದವರು ವಪ್ರ ಇದಕ್ಕೆ ಸಂಸ್ಕೃತ ಹಾಗೂ ಪ್ರಾಕೃತದಲ್ಲಿ ಇರುವ ಎಷ್ಟೋ ಅರ್ಥಗಳನ್ನೇ ಗಮನಿಸಿಲ್ಲ. ತೀರ್ಥಕಲ್ಪ, ಆಚಾರಾಂಗ ಹಾಗೂ ‘ಪಾಇಅಲಚ್ಛೀ ನಾಮಮಾಲಾ’ ಗ್ರಂಥಗಳನ್ನು ಆಧರಿಸಿ ‘ದುರ್ಗ, ಕೇದಾರ, ಖೇತ, ತಟ, ದಂಡೆ (ಕಿನಾರಾ) ಉನ್ನತ ಭೂಭಾಗ, ಹಾಗೂ ವಿಜಯ ಕ್ಷೇತ್ರ ವಿಶೇಷ ಎಂಬ ಅರ್ಥಗಳೂ ಇವೆ ಎಂಬುದು ಗಮನಾರ್ಹ’. ಶ್ರವಣ ಬೆಳ್ಗೊಳದ ಶಾಸನ ಸಂಪುಟ ಎಪಿ.ಕ.ಸಂಪುಟ-೨ ಶಾ.ಸಂಖ್ಯೆ : ೯೯(೧೯೭೩)ರ ಪ್ರಕಾರ ಚಿಕ್ಕಬೆಟ್ಟವು ಬಾಣವಂಶದ ದುರ್ಗ ಎಂಬುದು ಸ್ಪಷ್ಟವಿದೆ : ಪಂಕ್ತಿಗಳು

೧. ಕನಾದೊ…….[ಬಾ]ಣವಂಶ..

೨. ಕಳ್ಪಪ್ಪಿನ್ದುರ್ಗ………..

ತತ್ಪೂರ್ವದಲ್ಲಿಯೂ ಅದು ದುರ್ಗವಾಗಿದ್ದು ಮೌರ್ಯರ ರಾಜ್ಯದ ಕೊನೆಯ ದುರ್ಗ ಆಗಿರಬೇಕು. “ಕಟವಪ್ರ” ಎಂದರೆ ಕೊನೆಯ ದುರ್ಗ ಎಂದರ್ಥವಾಗುತ್ತದೆ. ಅರ್ಥಾತ್ ಈಗಿರುವ ಅರ್ಥ ಸಮಂಜಸವಲ್ಲ. ಅದು ಮೊದಲು ದುರ್ಗ ಅನಂತರ ಸ್ಮಶಾನ ಭೂಮಿ, ಇದು ಅನೇಕ ರಾಜಧಾನಿಗಳ ಚರಿತ್ರೆ. ಮೈತ್ರಕರಾಜ ಧ್ರುವಸೇನನ ಟ್ರಸ್ಟ್ ಆಫ್ ವೇಲ್ಸ ಮ್ಯೂಜಿಯಮ್‌ನಲ್ಲಿ ಇರುವ ಶಾಸನದಲ್ಲಿ ಬಂದಿರುವ ಹಸ್ತವಪ್ರ ಸ್ಥಳದಂತೆ ಕಟವಪ್ರ. (S.B. Deo : MGSI. Vol. Pp. 272)

[2] ಕೊಣ್ಡಕುಂದರ “ಬಾರಸ ಅಣುಪೇಹಣಂ” (ದ್ವಾದಶಾನುಪ್ರೇಕ್ಷೆ) ಚಂದ್ರಗಿರಿ-ಚಿಕ್ಕಬೆಟ್ಟ ಮಹೋತ್ಸವ ಪ್ರಕಟಣೆ, ಶ್ರವಣಬೆಳ್ಗೊಳ (2001 A.D. Pin. 573 135).

[3] ಆಧುನಿಕ ಕನ್ನಡದಲ್ಲಿ ಎಂದರೆ ಅಚ್ಚಿನ ಮೊಳೆಗಳು ಬಂದನಂತರ ಹೃಸ್ವ ‘ಎ’ ಹಾಗೂ ಹೃಸ್ವ ‘ಒ’ ಅಕ್ಷರಗಳಿಗೆ ಚಾಕ್ಷುಷ ರೂಪ ಏರ್ಪಟ್ಟಿದೆ. ತತ್ಪೂರ್ವದಲ್ಲಿ ‘ಎಏ’ ಹಾಗೂ ‘ಒಓ’ ಈ ಅಕ್ಷರಗಳಿಗೆ ಒಂದೊಂದೇ ಚಾಕ್ಷುಷ ರೂಪ ‘ಏ’ ಹಾಗೂ ‘ಓ’ ಇದ್ದವು.

[4] “  ”

[5] “  ”

[6] ಇವುಗಳ ವಿವರಣೆ ಬಳಕೆ ಬಹಳ ಹಿಂದೆಯೆ ನಿಂತು ಹೋಗಿದೆ. ‘ಅಕ್ಷರಮಾಲಿಕೆ’ಯ ಫೋಟೋ ನೋಡಿ.

[7] “  “

[8] ಅಲ್ಲಮನ ವಚನ ಚಂದ್ರಿಕೆ (ಸಂ. ಡಾ. ಎಲ್. ಬಸವರಾಜು) ವಚನ ಸಂಖ್ಯೆ ೧೮೮ ಮತ್ತು ೯೮೫

[9] ಚಾವುಂಡರಾಯ ಪುರಾಣಂ (ಸಂ. ಕೆ.ಆರ್.ಎಸ್ ಮತ್ತು ಕ. ಹಂಪನಾ) ಪುಟ. ೪೩-೪೪.

[10] ಕಾವ್ಯಾವಲೋಕನಂ ೧೯೬೭, ಆವೃತ್ತಿ ೩, ಪುಟ….

[11] ಈ ಸೂತ್ರಗಳು ಕಂಠ, ತಾಲು, ದಂತ, ಓಷ್ಠ್ಯ, ನಾಶಿಕ ಇತ್ಯಾದಿ ಸ್ಥಾನಗಳಲ್ಲಿ ಹುಟ್ಟುವ ರೀತಿಯಲ್ಲಿ ಸೃಷ್ಟಿಗೊಂಡಿವೆ. ಇದು ಗಮನಾರ್ಹವಾದ ಸಂಗ

[12] ಕೇಶಿರಾಜ ಶಬ್ದಮಣಿದರ್ಪ್ಪಣದಲ್ಲಿ ಭಾಷಾಶಾಸ್ತ್ರ ದೃಷ್ಟಿಯಿಂದಲೂ ಚಿಂತನಗೈದು ೪೭ ಅಕ್ಷರಗಳು ಕನ್ನಡದಲ್ಲಿ ಇವೆ ಎಂದು ಹೇಳಿದ್ದಾನೆ.
ಸೂ ||      ತಿಳಿದೇಶೀಯಮವೈದಂ
ಕಳೆನೀಂ ಋಇವರ್ಣಶಷ ವಿಸರ್ಗ್ಗX
ಕ್ಷಳನಂ ನಾಲ್ವತ್ತೇೞi
ಯ್ತಳೆ ಶುದ್ಧಗೆಯಚ್ಚನ್ನಡಕ್ಕೀ ಕ್ರಮದಿಂ || ೪೩ ||

(ಶಬ್ದಮಣಿ ದರ್ಪ್ಪಣ – ಸಂ : ಪ್ರೊ. ಡಿ.ಎಲ್.ಎನ್. ೧೯೬೮)

[13] ಅಯಂ ಧಂಮಲಿಪೀ ದೇವಾನಂಪ್ರಿಯೇನ ಪ್ರಿಯದಶಿನಾ ರಾಞಾ ಲೇಖಾಪಿತಾ ಅಸ್ತಿ ಏವ
ಸಂಖಿತೇನ ಅಸ್ತಿ ಮಝಮೇನ ಅಸ್ತಿ ವಿಸ್ತತನ ನಚ ಸರ್ವ್ವಂ ಸರ್ವ್ವತ ಘಟಿತಂ
ಮಹಾಲಕೇಹಿ ವಿಜಿತಂ ಬಹುಚ ಲಿಖಿತಂ ಲಿಖಾಪಯಿಸಂ ಚೇವ ಅಸ್ತಿ ಚ ಏತಕಂ
ಪುನಪುನವುತಂ ತಸತಸ ಅಥಸ ಮಾಧೂರತಾಯ ಕಿಂತಿ ಜನೋ ತಥಾ ಪಟಿಪಜೇಥ
ತತ್ರ ಏಕದಾ ಅಸಮಾತಂ ಲಿಖಿತಂ ಅಸ ದೇಸಂ ವ ಸಛಾಯಕಾರಣಂವ ಆಲೋಚೇತ್ವಾ
ಲಿಪಿಕರಾಪರಾಧೇನ ಚ (ಗಿರಿನಗರ-೧೪)

[14] ಬ್ರಹ್ಮಗಿರಿ, ಸಿದ್ದಾಪುರ ಹಾಗೂ  ಜಟಂಗ ರಾಮೇಶ್ವರ ಸಂಕೀರ್ಣದಲ್ಲಿ ‘ಕೋಟೆ’ ಇದ್ದುದಕ್ಕೆ ಅದರ ಪಳೆಯುಳಿಕೆಯ ಆಧಾರವಿಲ್ಲ. ಮತ್ತೆ ಸಿದ್ಧಾಪುರದಲ್ಲಿನ ‘ಸಿದ್ಧ’ ಶಬ್ದವು ಇದನ್ನು ಕೋಟೆ ಎಂದು ಸೂಚಿಸದು.