ಪ್ರಸ್ತಾವನೆ

ಭಾರತದ ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಸಂಶೋಧನೆಗೆ ಸಂಸ್ಕೃತ ಭಾಷೆಯೇ ಭದ್ರವಾದ ಅಡಿಪಾಯವೆಂಬುದು ಎಲ್ಲರಿಗೂ ತಿಳಿದ ವಿಷಯ. ಅಂದರೆ ಸಂಸ್ಕೃತದ ಭಾಷೆಯ ಸರಿಯಾದ ಜ್ಞಾನವಿಲ್ಲದೆ ಈ ಯಾವ ಸಂಶೋಧನೆಗಳು ಸಾರ್ಥಕವಾಗಲಾರವು. ಈ ಮಾತು ಶಾಸನಗಳ ಸಂಶೋಧನೆಗೆ ಹೆಚ್ಚು ಸಮರ್ಪಕವಾಗಿ ಅನ್ವಯಿಸುತ್ತದೆ ಎಂದು ಹೇಳಬಹುದು. ಸಂಸ್ಕೃತ ಶಾಸನಗಳಷ್ಟೇ ಏಕೆ, ಇತರ ಭಾರತೀಯ ಭಾಷೆಗಳಲ್ಲಿಯ ಶಾಸನಗಳನ್ನು ಅರ್ಥ ಮಾಡಿಕೊಳ್ಳಲೂ ಸಂಸ್ಕೃತ ಭಾಷೆಯ ಜ್ಞಾನ ಅತ್ಯವಶ್ಯವೆಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರ ಅನುಭವವಾಗಿದೆ.

ಶಾಸನಗಳ ಸಂಶೋಧನೆಗೆ ಎರಡು ಮುಖಗಳು; ಒಂದು, ಪ್ರಾಚೀನ ಲಿಪಿಗಳ ಅಭ್ಯಾಸ ಅಂದರೆ ಶಾಸನಗಳನ್ನೊಡಗೊಂಡಿರುವ ವಿವಿಧ ಲಿಪಿಗಳನ್ನು ಸರಿಯಾಗಿ ಗುರುತಿಸುವುದು; ಇನ್ನೊಂದು ಶಾಸನಗಳನ್ನು ಸರಿಯಾಗಿ ಅರ್ಥೈಸುವುದು. ಇವೆರಡೂ ಅಷ್ಟೇ ಮಹತ್ವದ್ದಾಗಿದ್ದು ಒಂದಕ್ಕೊಂದು ಪೂರಕವಾಗಿವೆ ಎಂದು ಹೇಳಬಹುದು. ಲಿಪಿಯನ್ನು ಸರಿಯಾಗಿ ಗುರುತಿಸದೆ ಶಾಸನವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಶಾಸನಗಳ ಪಾಠಗಳ ಪರಿಜ್ಞಾನವಿಲ್ಲದೆ ಲಿಪಿಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಶಾಸನ ಸಂಶೋಧನೆಯಲ್ಲಿ ಸಂಸ್ಕೃತದ ಪಾತ್ರವೇನು ಎಂಬುದನ್ನು ಪರೀಕ್ಷಿಸುವುದು ಅವಶ್ಯಕವಾಗಿದೆ.

ಕರ್ನಾಟಕ ಶಾಸನ ಸಂಶೋಧನೆಯಲ್ಲಿ ಸಂಸ್ಕೃತದ ಪಾತ್ರ

ಭಾರತದ ಇತರ ಪ್ರದೇಶಗಳಲ್ಲಿಯಂತೆ ಕರ್ನಾಟಕದಲ್ಲಿ ದೊರೆತ ಪ್ರಾಚೀನತಮ ಶಾಸನಗಳೆಂದರೆ ಪ್ರಾಕೃತ ಭಾಷೆಯಲ್ಲಿಯ ಅಶೋಕನ ಧರ್ಮ ಲಿಪಿಗಳು. ಈ ಶಾಸನಗಳಲ್ಲಿ ಪ್ರಾಕೃತ ಭಾಷೆಯನ್ನು ಬಳಸಲು ಅಶೋಕನಿಗೆ ನಿಶ್ಚಿತವಾದ ಉದ್ದೇಶವಿದ್ದಿತು. ತನ್ನ ಕಾಲದ ಮತ್ತು ಮುಂದಿನ ಜನಾಂಗಕ್ಕೆ ಅವಶ್ಯವೆನಿಸಿದ ತನ್ನ ಧ್ಯೇಯ-ಧೋರಣೆಗಳನ್ನು, ತಾನು ಮಾಡಿದ ಕಾರ್ಯಗಳನ್ನು, ನೇರವಾಗಿ ಜನರಿಗೆ ಮುಟ್ಟಿಸುವುದು ಅವನ ಉದ್ದೇಶವಾಗಿತ್ತು. ಭಾರತದ  ಶಾಸನ ಪ್ರಪಂಚದಲ್ಲಿ ಈ ಧರ್ಮಲಿಪಿಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ.

ಮುಂದಿನ ಶತಮಾನಗಳಲ್ಲಿ ಶಾಸನಗಳ ರಚನೆ ಮುಂದುವರೆಯಿತಾದರೂ, ಉದ್ದೇಶಗಳು ಬದಲಾಗತೊಡಗಿದವು. ಆಳರಸರ ಮನೆತನದ ಮೇಲ್ಮೆಯನ್ನು, ಅವರ ಶೌರ್ಯಾದಿ ಕಾರ್ಯಗಳನ್ನು, ಮಾಡಿದ ದಾನಧರ್ಮಗಳನ್ನು, ಕಟ್ಟಿಸಿದ ದೇವಾಲಯ, ಕೆರೆ, ಕಟ್ಟೆಗಳನ್ನು ತಿಳಿಸುವದಕ್ಕಾಗಿ, ಅಥವಾ ಇನ್ನೂ ವಿವಿಧ ಉದ್ದೇಶಗಳಿಗಾಗಿ ಇಂಥ ಶಾಸನಗಳು ಬರೆಯಲ್ಪಡ ತೊಡಗಿದವು. ಇಂಥ ಎಲ್ಲ ಬರವಣಿಗೆಗಳು ಅಶೋಕನ ನಂತರದ ಕಾಲದಲ್ಲಿ ಸಂಸ್ಕೃತ ದಲ್ಲಿಯೇ ಇದ್ದವು. ೪-೫ನೇ ಶತಮಾನಗಳವರೆಗಿನ ಕರ್ನಾಟಕದ ಶಾಸನಗಳ ಬಗ್ಗೆಯೂ ಈ ಮಾತನ್ನು ಹೇಳಬಹುದು. ಈ ಕಾಲದ ಬನವಾಸಿಯ ಕದಂಬರ ಶಾಸನಗಳೇ ಇದಕ್ಕೊಂದು ಉದಾಹರಣೆ. ಒಂದೆರಡು ಚಿಕ್ಕ ಶಾಸನಗಳನ್ನು ಬಿಟ್ಟರೆ

[1] ಈ ಮನೆತನದ ಎಲ್ಲ ಶಾಸನಗಳೂ ಸಂಸ್ಕೃತದಲ್ಲಿಯೇ ಇವೆ. ಇವರ ಅನೇಕ ಶಾಸನಗಳು ಸಾಹಿತ್ಯಿಕವಾಗಿ ಉತ್ತಮವಾದ ಕಾವ್ಯ ಮಯ ರಚನೆಗಳಾಗಿವೆ. ಕಾಕುಸ್ಥವರ್ಮನ ತಾಳಗುಂದದ ಶಾಸನ, ಗುಡ್ನಾಪುರದ ರವಿವರ್ಮನ ಶಾಸನ ಇತ್ಯಾದಿಗಳನ್ನು ಇಲ್ಲಿ ಹೆಸರಿಸಬಹುದು.

ಶಾಸನಶಾಸ್ತ್ರದ ಬೆಳವಣಿಗೆಯಲ್ಲಿ ಈ ಕಾಲಕ್ಕೆ ಕಂಡುಬರುವ ಒಂದು ಮಹತ್ವದ ಬೆಳವಣಿಗೆ ಎಂದರೆ ತಾಮ್ರಶಾಸನಗಳು ಬಳಕೆಯಲ್ಲಿ ಬಂದವು. ಈ ಬೆಳವಣಿಗೆಯಿಂದ ಶಾಸನಗಳ ಒಕ್ಕಣೆಯೂ ಔಪಚಾರಿಕವಾಗಿ ಒಂದು ನಿಶ್ಚಿತ ಸ್ವರೂಪವನ್ನು ಪಡೆಯಿತು. ಆಳರಸರ ರಾಜಮುದ್ರೆಯೊಂದಿಗೆ ಹೊರಡಿಸಲ್ಪಟ್ಟ ಅಧಿಕೃತ ದಾಖಲೆಗಳೆಂದು ಇವು ಪರಿಗಣಿಸಲ್ಪಟ್ಟವು. ಇದರಿಂದ ಶಾಸನ ಕ್ಷೇತ್ರದಲ್ಲಿ ಶಿಲಾಶಾಸನಗಳು ಮತ್ತು ತಾಮ್ರ ಶಾಸನಗಳು ಎಂದು ಎರಡು ಬಗೆಯ ಶಾಸನಗಳು ಬಳಸಲ್ಪಡತೊಡಗಿದವು. ಶಿಲಾಶಾಸನಗಳೂ ಒಂದು ಬಗೆಯ ಔಪಚಾರಿಕ ಪದ್ಧತಿಯನ್ನೇ ಅನುಸರಿಸಿದರೂ ಅವುಗಳ ಕರ್ತೃಗಳು ಹೆಚ್ಚಿನ ಸ್ವಾತಂತ್ರ್ಯವನ್ನು ವಹಿಸಿ ಬರಬರುತ್ತ ಅವು ಹೆಚ್ಚು ವೈವಿಧ್ಯಮಯವೂ ಸಾಹಿತ್ಯಿಕವೂ ಆಗತೊಡಗಿದವು.

ಪ್ರಾದೇಶಿಕ ಭಾಷೆಗಳು ಬೆಳೆಯತೊಡಗಿದಂತೆ ಸಂಸ್ಕೃತದ ಸ್ಥಾನಮಾನಕ್ಕೆ ಚ್ಯುತಿಯುಂಟಾ ಗಲಿಲ್ಲ. ಅದು ದೇಶದ ಎಲ್ಲ ಜನರಿಗೂ ತಿಳಿಯುವಂಥ ಸಾಮಾನ್ಯ ಭಾಷೆಯಾಗಿ ಉಳಿಯಿತು. ಕರ್ನಾಟಕದಲ್ಲಿ ಬಾದಾಮಿ ಚಲುಕ್ಯರ ಕಾಲದಿಂದ (ಕ್ರಿ.ಶ. ೬-೭ ಶತಮಾನ) ಶಾಸನಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗತೊಡಗಿತು. ಸಂಸ್ಕೃತ ಶಿಲಾಶಾಸನಗಳ ಸಂಖ್ಯೆ ಕಡಿಮೆಯಾಗ ತೊಡಗಿತು. ಆದರೆ ಸಂಸ್ಕೃತವು ಒಂದು ರೀತಿಯಿಂದ, ದೇಶದ ಎಲ್ಲ ಜನರಿಗೂ ತಿಳಿಯುವ ರಾಷ್ಟ್ರ ಭಾಷೆಯ ಕಾರ್ಯವನ್ನು ನಿರ್ವಹಿಸಿತು. ಪ್ರಾದೇಶಿಕ ಭಾಷೆಯಲ್ಲಿಯ ಶಾಸನಗಳು ಆಯಾ ಪ್ರದೇಶದ ಜನರಿಗಷ್ಟೇ ತಿಳಿಯುವಂತಹವು. ಇತರರೂ ತಿಳಿಯಬೇಕಾದಂತಹ ವಿಷಯ ಗಳನ್ನು ತಿಳಿಸಲು ಸಂಸ್ಕೃತವೇ ಅಗತ್ಯವಾದ ಮಾಧ್ಯಮವಾಯಿತು. ಒಂದು ಚಿಕ್ಕ ಉದಾಹರಣೆ ಯನ್ನು ಇಲ್ಲಿ ಕೊಡಬಹುದು. ಬಾದಾಮಿಯ ಮೂರನೆಯ ಕಲ್ಮನೆಯ ಹೊರಗೋಡೆಯ ಮೇಲೆ ಒಂದು ಚಿಕ್ಕ ಕನ್ನಡ ಶಾಸನವಿದೆ. ಅದು, ಚಾಲುಕ್ಯ ಮಂಗಲೇಶನು ಆ ಕಲ್ಮನೆಯನ್ನು ನಿರ್ಮಿಸಿ ಅದಕ್ಕಾಗಿ ಒಂದು ಗ್ರಾಮವನ್ನು ದಾನವಾಗಿ ಕೊಟ್ಟ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.[2] ಆದರೆ ಇದೇ ವಿಷಯದ ಎಲ್ಲ ವಿವರಗಳನ್ನು ಒಳಗೊಂಡ ಸುದೀರ್ಘವಾದ ಸಂಸ್ಕೃತ ಶಾಸನವೊಂದು ಇದೇ ಕಲ್ಮನೆಯ ಒಳಗೋಡೆಯಲ್ಲಿದೆ.[3] ನನ್ನ ಅಭಿಪ್ರಾಯದಲ್ಲಿ ಕನ್ನಡ ಬಾರದ ಹೊರಗಿನವರು ವಿಷಯವನ್ನು ಪೂರ್ತಿಯಾಗಿ ತಿಳಿಯಲೆಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇಂಥ ಎಷ್ಟೋ ದ್ವಿಭಾಷಾ ಶಾಸನಗಳು ಕರ್ನಾಟಕದಲ್ಲಿ ದೊರೆಯುತ್ತವೆ.

ತಾಮ್ರಶಾಸನಗಳು ಒಂದು ದೃಷ್ಟಿಯಿಂದ ಅಧಿಕೃತ ದಾಖಲೆಗಳೆಂದು ಹೇಳಬಹುದು. ಹೆಚ್ಚಾಗಿ ಇವುಗಳನ್ನು ಅರಸನ ಅಥವಾ ಅಧಿಕಾರಿಗಳ ಅನುಮತಿಯೊಂದಿಗೆ ಹೊರಡಿಸ ಲಾಗುತ್ತಿತ್ತು. ಇಂಥ ಶಾಸನಗಳನ್ನು ಬರೆಯಲು ಸಂಧಿವಿಗ್ರಹಿ ಎಂಬ ಅಧಿಕಾರಿಯೇ ಇರುತ್ತಿದ್ದನು. ಅವುಗಳ ಕೊನೆಗೆ ಆಳರಸನ ಒಪ್ಪವು ಇರುವುದು ಕಂಡುಬರುತ್ತದೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲಿಯೂ ಬರೆದ ತಾಮ್ರಶಾಸನಗಳು ಎಷ್ಟೋ ಇವೆ. ಅರಸನ  ವಂಶಾವಳಿ ಮನೆತನದ ಶಾಸನಗಳು, ಪ್ರಶಸ್ತಿ ಇತ್ಯಾದಿಗಳನ್ನು ಹೇಳುವ, ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ಭಾಗಗಳು ಸಂಸ್ಕೃತದಲ್ಲಿರುತ್ತವೆ. ದಾನವಾಗಿ ಕೊಟ್ಟ ಗ್ರಾಮಗಳ ಅವುಗಳನ್ನು ಪಡೆದುಕೊಂಡವರ ವಿಸ್ತೃತವಾದ ವಿವರಗಳು ಹೆಚ್ಚಾಗಿ ಆಯಾ ಪ್ರದೇಶದವರಿಗೆ ಸಂಬಂಧಿಸಿರುವುದರಿಂದ ಕನ್ನಡದಲ್ಲಿ ಇರುತ್ತವೆ. ಇಂಥ ಪ್ರಸಂಗಗಳಲ್ಲಿ ಸಂಸ್ಕೃತದ ಭಾಗವು ಮುಗಿದ ನಂತರ, ‘ಇತಃಪರಂ ದೇಶಭಾಷಯಾ ಲಿಖ್ಯತೇ, ಕರ್ನಾಟ ಭಾಷಯಾ ಲಿಖ್ಯತೇ’ ಎಂದು ಮುಂತಾಗಿ ಹೇಳಿ ಮುಂದಿನ ಭಾಗವು ಕನ್ನಡದಲ್ಲಿ ರೂಪಿತವಾಗಿ ರುತ್ತದೆ. ಹೀಗೆ ಸಂಸ್ಕೃತವು ಸಂಪರ್ಕ ಭಾಷೆಯ, ಅಧಿಕೃತ ಭಾಷೆಯ, ರಾಷ್ಟ್ರ ಭಾಷೆಯ ಪಾತ್ರವನ್ನು ವಹಿಸಿತೆಂಬುದು ಸ್ಪಷ್ಟವಾಗುತ್ತದೆ.

ಶಾಸನಗಳು ಮತ್ತು ಸಂಸ್ಕೃತ ಸಾಹಿತ್ಯ

ಸಂಸ್ಕೃತವು ಶಾಸನಸಾಹಿತ್ಯವನ್ನು ಸಮೃದ್ಧಗೊಳಿಸಿದೆ. ಅದೇ ರೀತಿಯಾಗಿ ಶಾಸನಗಳು ಸಂಸ್ಕೃತ ಸಾಹಿತ್ಯದ ವೃದ್ದಿಗೆ ಕಾರಣವಾಗಿವೆ. ಹೆಚ್ಚಾಗಿ ಶಾಸನಗಳು ನೈಜ ಘಟನೆಗಳನ್ನು ನೇರವಾಗಿ ತಿಳಿಸುವ ಸಾಧನಗಳಾಗಿದ್ದರೂ ಅನೇಕ ಸಲ ಲೇಖಕನ ಜಾಣ್ಮೆ, ವೈದುಷ್ಯ, ಭಾಷಾ ಪ್ರೌಢಿಮೆ ಇವುಗಳಿಂದಾಗಿ ಉತ್ತಮ ಕಾವ್ಯಗಳೆಂದೆನಿಸುವ ಶಾಸನಗಳು ಬಹುಸಂಖ್ಯೆಯಲ್ಲಿ ಬಂದಿವೆ. ಎಷ್ಟೋ ಶಾಸನಗಳನ್ನು ಸಮಕಾಲೀನ ಕಾವ್ಯಗಳಿಗೆ ಹೋಲಿಸುವಷ್ಟು ಪ್ರೌಢ ಶೈಲಿ ಯಲ್ಲಿ ಅವು ರಚಿತವಾಗಿವೆ. ಇಂಥ ಶಾಸನಗಳಿಂದಾಗಿ ಸಾಹಿತ್ಯ ಚರಿತ್ರೆಯಲ್ಲಿ ಗೊತ್ತಿರದ ಅನೇಕ ನಿಷ್ಣಾತ ಕವಿಗಳ ಹೆಸರುಗಳು ಮತ್ತು ಅವರ ಪ್ರಬುದ್ಧ ರಚನೆಗಳು ನಮಗೆ ದೊರೆತಿವೆ. ಶಾಸನ ಕವಿಗಿರುವ ಒಂದು ನಿರ್ಬಂಧವೆಂದರೆ ಸ್ಥಳ; ಅಂದರೆ ತನ್ನ ಬರವಣಿಗೆಯನ್ನು ರೂಪಿಸುವ ಸ್ಥಳಾವಕಾಶ. ವಿಶದವಾಗಿ ಹೇಳಬೇಕೆಂದರೆ, ಯಾವನೊಬ್ಬ ಕವಿಗೆ ಸ್ಥಳದ ನಿರ್ಬಂಧವಿರುವುದಿಲ್ಲ. ಅಂದರೆ ಅವನು ತನಗೆ ಎಷ್ಟು ಬೇಕಾದಷ್ಟು ತಾಡ ಓಲೆಗಳನ್ನೋ, ಕಾಗದದ ಪುಟಗಳನ್ನೋ, ಇನ್ನಾವುದೋ ಸಾಮಗ್ರಿಯನ್ನೋ ಸ್ವಚ್ಛಂದವಾಗಿ ಬಳಸಬಹುದು. ಆದರೆ ಶಾಸನಕವಿಯು ತನಗೆ ದೊರೆತ ಚಿಕ್ಕ ಕಲ್ಲಿನಲ್ಲಿಯೇ ಅಥವಾ ನಾಲ್ಕಾರು ತಾಮ್ರ ಪಟ್ಟಿಕೆಗಳಲ್ಲಿಯೇ ತನ್ನ ಬರವಣಿಗೆಯನ್ನು ಮುಗಿಸಬೇಕಾಗುತ್ತದೆ; ಅಷ್ಟರಲ್ಲಿಯೇ ತನ್ನ ಪ್ರತಿಭೆಯನ್ನು ತೋರಿಸಬೇಕಾಗುತ್ತದೆ. ಹೀಗಿದ್ದರೂ ಆಶ್ಚರ್ಯದ ವಿಷಯವೆಂದರೆ ನಮ್ಮ ಶಾಸನ ಕವಿಗಳು ಸುಂದರವಾದ ಪ್ರಬುದ್ಧವಾದ ಕಾವ್ಯಗಳನ್ನು ರಚಿಸಿದ್ದಾರೆ. ಇಂಥವುಗಳಲ್ಲಿ ಕೆಲವಂತೂ ಆಯಾ ಕಾಲದ ಪ್ರಸಿದ್ಧ ಕಾವ್ಯಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲವುಗಳಾಗಿವೆ. ಇಂಥ ಕೆಲವು ಸಂಸ್ಕೃತ ಶಾಸನಕಾವ್ಯಗಳ ಉದಾಹರಣೆಗಳನ್ನು ಇಲ್ಲಿ ನೋಡಬಹುದು.

ನನಗೆ ತಿಳಿದಂತೆ ಕರ್ನಾಟಕದಲ್ಲಿಯ ಪ್ರಾಚೀನತಮ ಸಂಸ್ಕೃತ ಕಾವ್ಯವೆಂದರೆ ಸೋಮದೇವ ಸೂರಿಯ ‘ಯಶಸ್‌ತಿಲಕಚಂಪೂ’ ಎಂಬುದು. ರಾಷ್ಟ್ರಕೂಟ ಮೂರನೇ ಕೃಷ್ಣನ ಕಾಲದಲ್ಲಿ ಕ್ರಿ.ಶ. ೯೫೯ರಲ್ಲಿ ರಚಿತವಾಯಿತು.[4] ನೀತಿವಾಕ್ಯಾಮೃತಮ್[5] ಎಂಬ ಇನ್ನೊಂದು ಕೃತಿಯನ್ನೂ ಇವನು ರಚಿಸಿದ್ದಾನೆ. ಈ ಜೈನ ಯತಿಯು ಕೊಪ್ಪಳದಲ್ಲಿ ನಿಧನ ಹೊಂದಿದನೆಂದು ಈಚೆಗೆ ದೊರೆತ ಒಂದು ಶಾಸನದಿಂದ ತಿಳಿದುಬರುತ್ತದೆ.[6] ಕರ್ನಾಟಕದಲ್ಲಿ ಇವನಿಗಿಂತ ಮೊದಲಿನ ಕವಿಯೆಂದರೆ ವಿಝ್ಝಿಕಾ ಅಥವಾ ವಿಜಯಮಹಾದೇವಿ. ‘ಕೌಮುದೀ ಮಹೋತ್ಸವ’ ಎಂಬ ಕಾವ್ಯವನ್ನು ರಚಿಸಿದಳೆಂಬ ಪ್ರತೀತಿ ಇರುವ ಈಕೆ ಚಲುಕ್ಯ ಎರಡನೇ ಪುಲಕೇಶಿಯ ಸೊಸೆ. ಅಂದಿನ ಸಾಹಿತ್ಯ ಕ್ಷೇತ್ರದಲ್ಲಿ ಈಕೆಗೆ ವಿಶಿಷ್ಟ ಸ್ಥಾನವಿದ್ದಿತೆಂದು ತೋರುತ್ತದೆ. ಇವಳ ಬಗ್ಗೆ ಅನೇಕ ಕಥೆಗಳು ವಿವಿಧ ಗ್ರಂಥಗಳಲ್ಲಿ ಸಿಗುತ್ತವೆ. ಇವಳು ಕರ್ನಾಟಕ ಸರಸ್ವತಿ ಎಂಬ ಬಿರುದನ್ನು ಹೊಂದಿದ್ದಳೆಂದು ಹೇಳಲಾಗುತ್ತದೆ. ಇವಳ ಹೆಸರಿನಲ್ಲಿ ಎರಡು ತಾಮ್ರಶಾಸನ ಗಳಿರುವುದು ಇವಳ ಐತಿಹಾಸಿಕತೆಯನ್ನು ದೃಢಪಡಿಸುತ್ತದೆ.[7] ಇವಳು ಕಾಳಿದಾಸನ ಸರಿದೊರೆ ಎಂಬ ಐತಿಹ್ಯಗಳು ಸಾಹಿತ್ಯದಲ್ಲಿ ಸಿಗುತ್ತದೆ. ಇವಳ ಕಾಲ ಕ್ರಿ.ಶ. ೭ನೇ ಶತಮಾನ.

ಶಾಸನಗಳಲ್ಲಿ ಸಂಸ್ಕೃತ ಸಾಹಿತ್ಯದ ಕಾಲ ಇದಕ್ಕೂ ಬಹಳ ಹಿಂದೆ ಅಂದರೆ ಕ್ರಿ.ಶ. ೫ನೇ ಶತಮಾನದಷ್ಟು ಹಿಂದೆ ಹೋಗುತ್ತದೆ. ಕಲ್ಲಿನಲ್ಲಿ ನಮಗೆ ಮೊಟ್ಟಮೊದಲಿಗೆ ದೊರೆಯುವ ಕಾವ್ಯವೆಂದರೆ ಈ ಶತಮಾನದ ಕದಂಬ ಕಾಕುಸ್ಥವರ್ಮನ ತಾಳಗುಂದ ಶಾಸನದಲ್ಲಿರುವ ಕುಬ್ಜನೆಂಬ ಕವಿಯ ಕಾವ್ಯ.[8] ನುಣುಪಾದ ಕರಿಯ ಕಲ್ಲಿನ ಅಷ್ಟಪೈಲು ಆಕಾರದ ಕಂಬದ ಮೇಲೆ ಕಲಾತ್ಮಕವಾದ ಅಕ್ಷರಗಳಿಂದ ಈ ಶಾಸನವು ಬರೆಯಲ್ಪಟ್ಟಿದೆ. ಇದರ ವೈಶಿಷ್ಟ್ಯವೆಂದರೆ  ಪ್ರತಿಯೊಂದು ಪೈಲಿನಲ್ಲಿಯೂ ಬರಹವು ಅಡ್ಡವಾಗಿ ಕೆಳಗಿನಿಂದ ಮೇಲಕ್ಕೆ ಹೋಗುತ್ತದೆ. ಕುಬ್ಜನೆಂಬುದು ನಿಜವಾದ ಹೆಸರೋ ಅಥವಾ ಅವನನ್ನು ನೋಡಿ ಜನರಿಟ್ಟ ಹೆಸರೋ ಎಂಬುದು ತಿಳಿಯದಿದ್ದರೂ ೩೪ ಶ್ಲೋಕಗಳ ಈ ಸಂಸ್ಕೃತ ಕಾವ್ಯ ಸಾಕಷ್ಟು ಎತ್ತರದ ಸ್ಥಾನ ದಲ್ಲಿದೆ ಎಂದು ಹೇಳಬಹುದು.

ಕದಂಬರ ಇತಿಹಾಸವನ್ನು ನಿವೇದಿಸುವ ಈ ಶಾಸನವು, ಈ ಮನೆತನದ ಮೂಲಪುರುಷರ ಮನೆಯ ಸಮೀಪದಲ್ಲಿ ಒಂದೇ ಒಂದು ಕದಂಬ ವೃಕ್ಷವಿದ್ದುದರಿಂದ ಈ ಮನೆತನಕ್ಕೆ ಕದಂಬ ಎಂಬ ಹೆಸರು ಬಂದಿತೆಂದು ಹೇಳುತ್ತದೆ.[9] ಈ ಮನೆತನದ ಮಯೂರಶರ್ಮ ಎಂಬ ತೇಜಸ್ವಿ ಯುವಕ ವೇದಾಭ್ಯಾಸಕ್ಕೆಂದು ಕಂಚಿಯ (ಈಗಿನ ಕಾಂಚೀಪುರ, ತಮಿಳುನಾಡು) ಘಟಿಕಾಸ್ಥಾನಕ್ಕೆ ತೆರಳುತ್ತಾನೆ. ಅಲ್ಲಿ ಪ್ರಸಂಗವಶಾತ್ ಅರಮನೆಗೆ ಸೇರಿದ ಕುದುರೆಯ ಸವಾರನೊಬ್ಬನಿಂದ ಅವಮಾನಿತನಾಗುತ್ತಾನೆ. ಇದರಿಂದ ಸಿಡಿದೆದ್ದ ಯುವಕನು ಪ್ರತಿಭಟಿಸುತ್ತಾನೆ. ಈ ಕಲಿಯುಗ ದಲ್ಲಿ ಅಧಿಕಾರ ದರ್ಪದ ಮುಂದೆ ಸಿಡಿದೆದ್ದ ಯುವಕನು ಪ್ರತಿಭಟಿಸುತ್ತಾನೆ. ಈ ಕಲಿಯುಗ ದಲ್ಲಿ ಅಧಿಕಾರ ದರ್ಪದ ಮುಂದೆ ವಿದ್ವತ್ತೆಯು ಕೀಳಾಯಿತಲ್ಲ ಎಂದು ಹಳಹಳಿಸುತ್ತಾನೆ. ಇಷ್ಟೊಂದು ಅಭ್ಯಾಸ ಮಾಡಿ ಪಡೆದ ಬ್ರಹ್ಮಸಿದ್ದಿಯು ಅರಸೊತ್ತಿಗೆಯ ಅಧೀನವಾಯಿತಲ್ಲ ಎಂದು ದುಃಖಪಡುತ್ತಾನೆ. (ಗುರುಕುಲಾನಿ ಸಮ್ಯಗಾರಾಧ್ಯ ಶಾಖಾಮಧೀತ್ಯಾಪಿ ಯತ್ತಃ ಬ್ರಹ್ಮಸಿದ್ದಿಃ ಯದಿ ನೃಪಾಧೀನಾ ಕಿಮತಃ ಪರಂ ದುಃಖಮಿತ್ಯತಂ) ಆದರೆ ಸುಮ್ಮನೆ ಕೂಡುವದಿಲ್ಲ. ಯಜ್ಞಕ್ಕಾಗಿ ದರ್ಭ, ಆಜ್ಯಗಳನ್ನು ಹಿಡಿದ ಕೈಯಿಂದ ತೀಕ್ಷ್ಣವಾದ ಕತ್ತಿಯನ್ನು ಝಳಪಿಸುತ್ತಾನೆ. ಜಗತ್ತನ್ನೇ ಗೆಲ್ಲುವಂತೆ ಹೂಂಕರಿಸುತ್ತಾನೆ. (ವಿಜಿವೀಷಮಾಣೋ ವಸುಂಧರಾಂ). ಯುವಕನ ವೀರಾವೇಶವನ್ನು ನೋಡಿ ಪಲ್ಲವ ಆಳರಸರು ದಂಗಾಗುತ್ತಾರೆ. ಅವನನ್ನು ಸಮಾಧಾನಗೊಳಿಸಿ ಪಟ್ಟಾಭಿಷೇಕ ಮಾಡುತ್ತಾರೆ. ಇವನು ಅದನ್ನು ಬೆಳೆಸಿ ವಿರೋಧಿ ಗಳನ್ನು ಸದೆಬಡಿದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸುತ್ತಾನೆ ಎಂಬ ಐತಿಹಾಸಿಕ ಸಂಗತಿ ಇತಿಹಾಸಜ್ಞರಿಗೆ ತಿಳಿದ ವಿಷಯವಾಗಿದೆ.

ಈ ಘಟನೆಯನ್ನು ಕವಿ ಅತ್ಯಂತ ನಾಟಕೀಯವಾಗಿ ಚಿತ್ರಿಸಿದ್ದಾನೆ. ಅಧಿಕಾರದ ದರ್ಪದ  ವಿರುದ್ಧ ಪ್ರತಿಭಟಿಸುವ, ಸ್ವಾಭಿಮಾನಿ, ಸಾತ್ವಿಕ, ತೇಜಸ್ವಿ ಯುವಕನೊಬ್ಬನ ಚಿತ್ರ ಕಣ್ಣಿಗೆ ಕಟ್ಟಿದಂತಾಗುತ್ತದೆ.

ಈ ಶಾಸನದ ಇನ್ನೊಂದು ವೈಶಿಷ್ಟ್ಯವೆಂದರೆ ಅದರ ಕಾವ್ಯಗುಣ. ಇದರಲ್ಲಿಯ ೩೪ ಪದ್ಯಗಳಲ್ಲಿ ಕೊನೆಯ ಕೆಲವು ಪದ್ಯಗಳು ವಸಂತತಿಲಕ, ಮಂದಾಕ್ರಾಂತಾ ಮುಂತಾದ ತಿಳಿದ ವೃತ್ತಗಳಲ್ಲಿ ರಚಿತವಾಗಿವೆ. ಆದರೆ ಮೊದಲಿನ ೨೪ ಪದ್ಯಗಳನ್ನು ಗುರುತಿಸುವುದು, ಈ ಶಾಸನವನ್ನು ಮೊದಲಿಗೆ ಸಂಪಾದಿಸಿ ಪ್ರಕಟಿಸಿದ ವಿಖ್ಯಾತ ಸಂಸ್ಕೃತಜ್ಞ ಮತ್ತು ಶಾಸನತಜ್ಞ ಎಫ್. ಕೀಲ್‌ಹಾರ್ನ್‌ರಿಗೆ ಸಮಸ್ಯೆಯನ್ನೊಡ್ಡಿದವು. ಅವರು ಇವುಗಳನ್ನು ಕೂಲಂಕಷವಾಗಿ ಅಭ್ಯಸಿಸಿ ಇವುಗಳ ವೃತ್ತಗಳನ್ನು ಗುರುತಿಸುವುದು ಕಠಿಣವಾಗಿವೆ ಎಂದರು. ಈ ಭಾಗ ಗದ್ಯದಂತೆನಿಸಿದರೂ ಪದ್ಯಾತ್ಮಕವಾಗಿವೆ. ಇತ್ತೀಚಿನ ವಿದ್ವಾಂಸರು ಇದು ರಗಳೆಯ ಒಂದು ರೂಪವೆಂದು ಗುರುತಿಸಿದ್ದಾರೆ. ಕನ್ನಡದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಹರಿಹರ ಕವಿಯ ಮೂಲಕ ರಗಳೆ ಹೆಚ್ಚು ಪ್ರಚಲಿತವಾದದ್ದು ತಿಳಿದ ವಿಷಯವಾಗಿದೆ. ಸುಮಾರು ೧೦ನೇ ಶತಮಾನದ ಕೆಲವು ಕಾವ್ಯಗಳಲ್ಲಿ ರಗಳೆ ಕಂಡುಬಂದಿರುವುದೂ ತಿಳಿದ ವಿಷಯವೇ ಆಗಿದೆ. ತಾಳಗುಂದದ ಈ ಶಾಸನ ಇದರ ಪ್ರಾಚೀನತಮ ಉದಾಹರಣೆಯನ್ನು, ಅದೂ ಸಂಸ್ಕೃತ ಕಾವ್ಯದಲ್ಲಿ, ಒದಗಿಸುತ್ತದೆ ಎಂಬುದು ವಿಶೇಷ ಸಂಗತಿ. ಆಂಧ್ರಪ್ರದೇಶದ ಪೊರುವಿಲ್ಲಾ ಎಂಬಲ್ಲಿ ದೊರೆತ ೧೦ನೇ ಶತಮಾನ ಒಂದು ಸಂಸ್ಕೃತ ಶಾಸನದಲ್ಲಿಯೂ ರಗಳೆ ಅಥವಾ ರಘಟ ಇರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.

ಸುಮಾರು ೬ನೇ ಶತಮಾನದಲ್ಲಿ ರಚಿತವಾದ ಇನ್ನೊಂದು ಕಲಾತ್ಮಕವಾದ ರಚನೆಯೆಂದರೆ ಬನವಾಸಿಯ ಬಳಿ ದೊರೆತ ಗುಡ್ನಾಪುರ ಶಾಸನದಲ್ಲಿದೆ.[10] ಇಲ್ಲಿಯ ಗುಡ್ಡತಟಾಕ ಎಂಬ ಕೆರೆಯಿಂದಾಗಿ ಈ ಊರಿಗೆ ಈ ಹೆಸರು ಬಂದಿತು. ಈ ಶಾಸನವನ್ನು ಕಟೆದ ರೀತಿಯೂ ವಿಲಕ್ಷಣವಾಗಿದೆ. ಇದು ಒಂದು ಕಂಭದ ಮೇಲಿದ್ದು ಕೆತ್ತನೆಯು ಕಂಭದ ತಳದಿಂದ ಆರಂಭವಾಗಿ ಗಿಡವನ್ನು ಸುತ್ತುವ ಬಳ್ಳಿಯಂತೆ ಮೇಲೇರುತ್ತ ಹೋಗುತ್ತದೆ. ಅಕ್ಷರ ವಾಟಿಕೆಯೂ ಸುಂದರವಾಗಿದೆ. ಊರ ಮಧ್ಯದಲ್ಲಿ ಮನ್ಮಥನಿಗಾಗಿ ಒಂದು ದೇವಾಲಯವನ್ನು ನಿರ್ಮಿಸಿದ ವಿಷಯ ಈ ಶಾಸನದಲ್ಲಿದೆ. ಅಕ್ಕಪಕ್ಕದಲ್ಲಿ ಎರಡು ಅರಮನೆಗಳು, ಎರಡು ನೃತ್ಯ ಶಾಲೆಗಳು ಇದ್ದವೆಂದು ಇದರಲ್ಲಿ ಹೇಳಿದೆ. ಕೆಲವೇ ಪದ್ಯದಲ್ಲಿ ವಸಂತೋತ್ಸವದ ಸುಂದರವಾದ ವರ್ಣನೆ ಇಲ್ಲಿದೆ. ಗುಡ್ಡ ತಟಾಕದ ಅಂದಿನ ಸ್ವರೂಪದ ವಿವರಣೆ ಇದರಲ್ಲಿದ್ದು ಪುರಾತತ್ವವಿದರಿಗೆ ಅವುಗಳನ್ನು ಕಂಡುಹಿಡಿಯಲು ವಿಪುಲವಾದ ಅವಕಾಶ ಇಲ್ಲಿದೆ.

ಸಂಸ್ಕೃತದ ಬೆಳವಣಿಗೆಗೆ ಕದಂಬರು ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಒಂದೆರಡು ಚಿಕ್ಕ ಕನ್ನಡ ಶಾಸನಗಳನ್ನು ಬಿಟ್ಟರೆ ಅವರ ಕಾಲದ ಎಲ್ಲ ಶಾಸನಗಳೂ ಸಂಸ್ಕೃತದಲ್ಲಿವೆ ಮತ್ತು ಕಾವ್ಯಮಯವಾಗಿ ರಚಿತವಾಗಿವೆ. ಅವುಗಳನ್ನು ರಚಿಸಿದ ಕವಿಗಳ ಹೆಸರು ಲಭ್ಯವಾಗ ದಿದ್ದರೂ ಅವು ಆ ಕಾಲದಲ್ಲಿದ್ದ ಸಂಸ್ಕೃತದ ಪ್ರವರ್ಧಮಾನ ಸ್ಥಿತಿಯನ್ನು ಬಿಂಬಿಸುತ್ತವೆ.

ಪ್ರಾಚೀನ ಕರ್ನಾಟಕದ ಇನ್ನೊಂದು ಉತ್ತಮ ಸಂಸ್ಕೃತ ರಚನೆಯ ಉದಾಹರಣೆ ಮಹಾಕೂಟ ಸ್ತಂಬ ಶಾಸನದಲ್ಲಿದೆ.[11] ಚಲುಕ್ಯ ಒಂದನೇ ಕೀರ್ತಿವರ್ಮನ ತಮ್ಮನಾದ ಮತ್ತು ಎರಡನೇ ಪುಲಕೇಶಿಯ ಚಿಕ್ಕಪ್ಪನಾದ ಮಂಗಲೇಶನು ಇದನ್ನು ತನ್ನ ದಿಗ್ವಿಜಯದ ಸಂಕೇತವಾಗಿ ಬಾದಾಮಿಯ ಸಮೀಪವಿರುವ ಮಹಾಕೂಟದಲ್ಲಿ ನಿಲ್ಲಿಸಿದನು. ಇದನ್ನವನು ಗಂಗಾನದಿಯ ದಂಡೆಯ ಮೇಲೆ ನಿಲ್ಲಿಸಲು ಅಪೇಕ್ಷಿಸಿದ್ದನಂತೆ. ಆದರೆ ತನ್ನ ತಾಯಿಯ ಅಪೇಕ್ಷೆಯಂತೆ ಮಹಾಕೂಟೇಶ್ವರ ದೇವಾಲಯದ ಎದುರಿಗೆ ನಿಲ್ಲಿಸಿದನೆಂದು ಈ ಶಾಸನದಲ್ಲಿ ಹೇಳಿದೆ. ಇದೀಗ ಇದನ್ನು ವಿಜಾಪುರದ ವಸ್ತುಸಂಗ್ರಹಾಲಯದಲ್ಲಿ ನಿಲ್ಲಿಸಲಾಗಿದೆ. ಸುಮಾರು ೬ನೇ ಶತಮಾನದ ಸಂಸ್ಕೃತ ಗದ್ಯದ ಅತ್ಯುತ್ತಮ ಮಾದರಿಯನ್ನು ಅದು ಒದಗಿಸುತ್ತದೆ. ಅದರ ಸ್ವಲ್ಪ ಭಾಗವು ಇಲ್ಲಿದೆ.

ಕನೀಯಾನುರುರಣ ವಿಕ್ರಮಾಂಕಮಂಗಲೇಶ ಶ್ರೀಪೃಥ್ವೀವಲ್ಲಭೇಂದ್ರಾಖ್ಯನೃಪೋ ಬಭೂವ
ದೇವದ್ವಿಜಗುರು ಚರಣಾನುಧ್ಯಾತಃ ಚಳಿಕ್ಯವಂಶಾಂಬರಪೂರ್ಣಚಂದ್ರಃ ನಯವಿನಯ ಜ್ಞಾನ
ದಾನದಯಾದಾಕ್ಷಿಣ್ಯಸಂಪನ್ನಃ ಭಟಶಕುನಗಣಾಭಿಲಷಿತ ಯುವತೀಮಧುಕರಿಕುಲಕಲಿತ
ಲಲಿತಗುಣಕುಸುಮಾಕುಲಪುಣ್ಯವರಸೂರ್ಯಕಿರಣವಿಬೋಧಿತವಿಭವಶ್ರೀನಿಷ್ಠನೃಪತಿಕಮಲ
ವನಸೌಮ್ಯಃ ರಿಪುಜನಮುಖಕುಲಭಯಜಾತ ಸಂದೋಹತತ್ಪರಚರಣಸೇವಕಾಮಲನಯನ
ಶೌರ್ಯೋಗ್ರಹಸ್ತಪ್ರತಾಪವೀರ್ಯ್ಯ ಮೇಘೋದ್ಧೃತನೃಪತಿಸಂಘಃ ಮಂತ್ರಚಾರದೂತಸಂಧಿ
ವಿಗ್ರಹಸ್ಥಾನಪ್ರಯಾಣ ಪಾರ್ಷ್ಣಿಗ್ರಹಣಮಂಡಲಯಾತ್ರಾದುರ್ಗ್ಗವಿಧಾನಜನಪದಪೌರಮಾನ್ಯ
ವಿಭಾಗಕುಶಲಃ [1*] ಕಿಂಬಹುನಾ [1*] ಮಹೇಂದ್ರ ಇವ ದುರ್ದ್ಧರ್ಷಃ ರಾಮ ಇವಾ-
ಪರಾಜಿತಃ ಶಿಬಿರೌಶೀನರ ಇವ ಪ್ರದಾತಾ ಯುಧಿಷ್ಠರ ಇವ ಸತ್ಯಸಂಧಃ ವಾಸುದೇವ ಇವ
ಶ್ರೀಮಂತಃ ಮಾಂಧಾತಾರ ಇವ ಕೀರ್ತಿಸಂಪನ್ನಃ ಧಿಯಾ ಬೃಹಸ್ಪತ್ಯುಶನಸ್ಸಮಂಃ ಸಮುದ್ರ
ಇವ ಗಂಭೀರಃ ಕ್ಷಮಯಾ ಪೃಥ್ವೀಸಮಃ ಕುಲತಿಲಕಭೂತಃ . . . . . . . . . .

ಇದನ್ನು ರಚಿಸಿದ ಕವಿಯ ಹೆಸರು ಗೊತ್ತಿರದಿದ್ದರೂ, ರಚನೆಯು ಕವಿ ಬಾಣಭಟ್ಟನ ಶೈಲಿ ಯನ್ನು ನೆನಪಿಸುತ್ತದೆ. ಹಾಗೆ ನೋಡಿದರೆ ಇವನು ಬಾಣನ ಹಿರಿಯ ಸಮಕಾಲೀನನು. ಬಾಣನು ಹರ್ಷನ ಸಮಕಾಲೀನನು. ಹರ್ಷನು ಪುಲಕೇಶಿಯ ಸಮಕಾಲೀನನು. ಈ ಕವಿ ಇದ್ದುದು ಪುಲಕೇಶಿಯ ಚಿಕ್ಕಪ್ಪನ ಕಾಲದಲ್ಲಿ.

ಮುಂದಿನ ಶತಮಾನದ ಅತ್ಯುತ್ತಮ ಸಂಸ್ಕೃತ ಕಾವ್ಯದ ಉದಾಹರಣೆ ಎರಡನೆ ಪುಲಕೇಶಿಯ ಪ್ರಖ್ಯಾತವಾದ ಐಹೊಳೆ ಶಾಸನದಲ್ಲಿದೆ.* ನುಣುಪಾದ ಕರಿಯ ಕಲ್ಲಿನ ಮೇಲೆ ಬಹುಸುಂದರವಾದ ಅಕ್ಷರಗಳಲ್ಲಿ ಇದನ್ನು ಕೆತ್ತಲಾಗಿದ್ದು ಅಲ್ಲಿಯ ಮೇಗುಟಿ ಗುಡಿಯ ಗೋಡೆಯಲ್ಲಿ ಕೂಡಿಸಲಾಗಿದೆ.[12] ಈ ಗುಡಿಯು ಒಂದು ಜೈನ ಬಸದಿ ಅಥವಾ ಕವಿಯು ಕರೆಯುವಂತೆ  ಜಿನವೇಶ್ಮ. ಕ್ರಿ.ಶ. ೬೩೪-೩೫ರಲ್ಲಿ ರವಿಕೀರ್ತಿ ಎಂಬ ಕವಿಯು ಇದನ್ನು ರಚಿಸಿದನು. ಪುಲಕೇಶಿಯ ದಿಗ್ವಿಜಯವೇ ಈ ಕಾವ್ಯದ ವಸ್ತು.ಕವಿ ರವಿಕೀರ್ತಿಗೆ ತನ್ನ ಕಾವ್ಯಶಕ್ತಿಯ ಬಗ್ಗೆ ಅಭಿಮಾನವಿದ್ದಿರಬೇಕು. ಎಂತಲೇ ಕವಿತಾಶ್ರಿತ-ಕಾಳಿದಾಸ-ಭಾರವಿ-ಕೀರ್ತಿಃ ಎಂದು ತನ್ನ ಪೂರ್ವಿಕರಾದ ಕಾಳಿದಾಸ, ಭಾರವಿಗಳೊಂದಿಗೆ ಹೋಲಿಸಿಕೊಳ್ಳುತ್ತಾನೆ. ಈ ಶಾಸನವನ್ನು ಕೂಲಂಕಷವಾಗಿ ಅಭ್ಯಸಿಸಿದ ಪ್ರೊ. ಕೀಲ್‌ಹಾರ್ನ್ ಅವರು ರವಿಕೀರ್ತಿಯು ಹೀಗೆ ಹೇಳಿಕೊಳ್ಳುವುದರಲ್ಲಿ ಹುರುಳಿಲ್ಲದಿಲ್ಲ ಎನ್ನುತ್ತಾರೆ. ಈ ಕಾವ್ಯದಲ್ಲಿ ಕಾಳಿದಾಸನ ರಘುವಂಶದಲ್ಲಿಯ ರಘುದಿಗ್ವಿಜಯದ ಛಾಯೆಯಿದೆಯೆಂದೂ ಅವರು ಹೇಳುತ್ತಾರೆ. ಕವಿಯು ಕಾಳಿದಾಸನಿಂದ ಗಾಢವಾಗಿ ಪ್ರಭಾವಿತನಾಗಿದ್ದಾನಲ್ಲದೇ ಅನೇಕ ಸಲ ಅವನ ಭಾವಗಳನ್ನು, ಭಾಷೆಯನ್ನು ಎರವಲಾಗಿ ಪಡದಿದ್ದಾನೆಂದು ತುಲನಾತ್ಮಕ ಅಭ್ಯಾಸ ಮಾಡಿ ತೋರಿಸಿಕೊಟ್ಟಿದ್ದಾರೆ. ರವಿಕೀರ್ತಿಯ ರಚನೆಯ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು.

ಅಪರಜಲಧೇರ್ಲಕ್ಷ್ಮೀಂ ಯಸ್ಮಿನ್ ಪುರೀಂ
ಪುರುಭಿತ್‌ಪ್ರಭೇ ಮದಗಜಘಟಾ –
ಕಾರೈರ್ನಾವಾಂ ಶತೈರವಮೃದ್ನತಿ ಜಲಧಿರಿವ
ವ್ರೋವ್ರೋsಭವದಂಬುಧಿಃ

ಕೀಲ್‌ಹಾರ್ನ್‌ರು ಕವಿಯ ಈ ಕಲ್ಪನೆಯನ್ನು ರಘುವಂಶದ ಭುವನಸ್ಥಲಮಿವ ವ್ರೋಕುರ್ವನ್ ವ್ರೋಭೂತಲಮ್ ಎಂಬ ಸಾಲಿನಲ್ಲಿ ಗುರುತಿಸುತ್ತಾರೆ.

ಪುಲಕೇಶಿಯ ಸೈನ್ಯವು ಬನವಾಸಿಯ ಕೋಟೆಯನ್ನು ಸುತ್ತುವರಿದಾಗ ನೆಲದ ಮೇಲಿದ್ದ  ಆ ಸ್ಥಲದುರ್ಗವು ನೀರ ನಡುವೆ ನಿಂತ ಜಲದುರ್ಗವಾಯಿತೆಂದು ಕವಿ ಬಣ್ಣಿಸುತ್ತಾನೆ. ಇಂಥದೇ ಒಂದು ದಿಗ್ವಿಜಯ ಕಾವ್ಯವು ಇದಕ್ಕೂ ಪೂರ‍್ವದ (೪ನೇ ಶತಮಾನ) ಸಮುದ್ರಗುಪ್ತನ ಅಲಹಾಬಾದ ಸ್ತಂಬ ಶಾಸನದಲ್ಲಿದೆ.

ವರದಾತುಂಗತರಂಗರಂಗವಿಲಸದ್ ಹಂಸಾವಲೀಮೇಖಲಾಂ
ವನವಾಸೀಮವಮೃದ್ನತಃ ಸುರಪುರಪ್ರಧ್ವಂಸಿನೀಂ ಸಂಪದಾ
ಮಹತಾ ಯಸ್ಯ ಬಲಾರ್ಣವೇನ ಪರಿತಸ್ಸಂಛಾದಿತೋರ್ವೀತಲಂ
ಸ್ಥಲದುರ್ಗಂ ಜಲದುರ್ಗತಾಮಿವ ಗತಂ ತತ್ತತ್‌ಕ್ಷಣೇ ಪಶ್ಯತಾಂ

ನರ್ಮದಾನದಿಯ ದಂಡೆಯ ಮೇಲೆ ಪುಲಕೇಶಿಯನ್ನು ಎದುರಿಸಹೋದ ಹರ್ಷ ವರ್ಧನನ ಗತಿ ಏನಾಯಿತು? ಯುದ್ಧದಲ್ಲಿ ಒಂದೊಂದಾಗಿ ತನ್ನ ಆನೆಗಳು ಉರುಳುತ್ತಿ ರುವುದನ್ನು ನೋಡಿ ಭಯಭೀತನಾದ ಅವನ ಹರ್ಷವು ಸೋರಿಹೋಯಿತು!

ಅಪರಿಮಿತ ವಿಭೂತಿ ಸ್ಫೀತಸಾಮಂತಸೇನಾ –
ಮಕುಟಮಣಿಮಯೂಖಾಕ್ರಾಂತಪಾದಾರವಿಂದಃ
ಯುಧಿ ಪತಿತಗಜೇಂದ್ರಾನೀಕಭೀಭತ್ಸಭೂತೋ
ಭಯವಿಗಲಿತಹರ್ಷೋ ಯೇನ ಚಾಕಾರಿ ಹರ್ಷಃ

ತನ್ನ ಕಾವ್ಯ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಈ ಕವಿ ಸಂಸ್ಕೃತ ಸಾಹಿತ್ಯದ ವಿದ್ಯಾರ್ಥಿಗಳಿಗೆ ಕಾಳಿದಾಸನ ಹೆಸರನ್ನು ಉಲ್ಲೇಖಿಸಿ ಇನ್ನೊಂದು ಉಪಕಾರವನ್ನು ಮಾಡಿದ್ದಾನೆ. ಕಾಳಿದಾಸನು ತನಗಿಂತ ಪ್ರಾಚೀನನು ಎಂದು ಹೇಳಿದ್ದರಿಂದ ಕ್ರಿ.ಶ. ೭ನೇ ಶತಮಾನಕ್ಕಿಂತ ಮೊದಲಿನವನು ಎಂದು ಸೂಚಿತವಾಗಿ ಕಾಳಿದಾಸನ ಕಾಲವನ್ನು ನಿರ್ಧರಿಸಲಿಕ್ಕೆ ಇದೊಂದು ಮಹತ್ವದ ಗಡುವು ಆಗಿದೆ.

ಸಾಮಾನ್ಯವಾಗಿ ತಾಮ್ರಶಾಸನಗಳಿರುವ ರಚನೆಗಳು ಒಂದೇ ತೆರನಾಗಿದ್ದು ಅವುಗಳಲ್ಲಿ ಕಾವ್ಯ ಗುಣಗಳು ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಉತ್ತಮ ಕವಿಗಳಿಂದ ರಚಿತವಾದ ತಾಮ್ರಶಾಸನಗಳೂ ಸಹ ಉತ್ತಮ ಕಾವ್ಯಗಳ ಉದಾಹರಣೆಗಳನ್ನು ಒದಗಿಸಿವೆ. ಬಾಗುಮ್ರಾ ಎಂಬಲ್ಲಿ ದೊರೆತ ರಾಷ್ಟ್ರಕೂಟ ಮೂರನೇ ಇಂದ್ರನ ಎರಡು ತಾಮ್ರಶಾಸನಗಳು ಇಂತಹ ಸುಂದರ ಮಾದರಿಗಳನ್ನು ಒದಗಿಸಿವೆ.[13] ಇವುಗಳನ್ನು ರಚಿಸಿದವನು ತ್ರಿವಿಕ್ರಭಟ್ಟನೆಂಬ ಕವಿಯು. ‘ನಲಚಂಪೂ ಅಥವಾ ದಮಯಂತೀಕಥಾ ಮತ್ತು ಮದಾಲಸಾಚಂಪೂ’ ಎಂಬ ಕಾವ್ಯಗಳನ್ನು ಈತನು ರಚಿಸಿದ್ದಾನೆ.

ಮರಾಠವಾಡಾದಲ್ಲಿಯ ಕಂಧಾರದಲ್ಲಿ ದೊರೆತ ರಾಷ್ಟ್ರಕೂಟ ೩ನೇ ಕೃಷ್ಣನ ಒಂದು ಶಿಲಾಶಾಸನವು ಉತ್ತಮ ಚಂಪೂ ಕಾವ್ಯವಾಗಿದೆ.[14] ಗದ್ಯಪದ್ಯಗಳಲ್ಲಿದ್ದ ಅದರ ಅರ್ಧಭಾಗವು ಒಡೆದುಹೋಗಿದ್ದು ಕಾವ್ಯದ ಬಹುಭಾಗವು ಕಳೆದುಹೋದಂತಾಗಿದೆ. ಗುಡ್ನಾಪುರದ ಶಾಸನ ದಂತೆ ಈ ಕಾವ್ಯವೂ ಕಂಧಾರ ಪಟ್ಟಣದ ಸ್ವರೂಪವನ್ನು ವರ್ಣಿಸುತ್ತದೆ. ರಾಷ್ಟ್ರಕೂಟರ ಪಟ್ಟಣ ರಚನೆಯನ್ನು ಅಭ್ಯಸಿಸಲು ಇದು ಉತ್ತಮ ಸಾಧನವಾಗಿದೆ. ರಾಷ್ಟ್ರಕೂಟ ಅರಸರ ಹೆಸರಿನ ಮುಂದೆ ನೃಪತುಂಗ, ಶುಭತುಂಗ ಇತ್ಯಾದಿ ತುಂಗ ಎಂಬ ಉಪಾಧಿ ಇರುತ್ತಿದ್ದಿತು. ಇದು ಏಕೆ ಎಂಬುದನ್ನು ಈ ಶಾಸನಕವಿ ಹೀಗೆ ವಿವರಿಸುತ್ತಾನೆ.

ಉದ್ವೃತ್ತದೈತ್ಯಕುಲಕಂದಶಾಂತಿಹೇತುಃ
ತತ್ರಾವತಾರಮುದ ಭೂತ್ಪುರುಷಃ ಪುರಾಣಃ
ತದ್ವಂಶಜಾಃ ತುಂಗಯಶಃಪ್ರಭಾವಾಃ
ತುಂಗಾ ಇತಿ ಕ್ಷಿತಿಭುಜಾಃ ಪ್ರಥಿತಾ ಬಭೂವುಃ

ಮುಂದಿನ ಶತಮಾನದಲ್ಲಿ ಕಾಲಿಡುತ್ತಿದ್ದಂತೆ ಶಾಸನಗಳ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಯನ್ನು ಕಾಣುತ್ತೇವೆ. ಉತ್ತಮ ಕಾವ್ಯಗಳುಳ್ಳ ಕನ್ನಡ ಶಾಸನಗಳು ಸಂಸ್ಕೃತ ಕ್ಕಿಂತಲೂ ಬಹುಸಂಖ್ಯೆಯಲ್ಲಿ ದೊರೆಯಲಾರಂಭಿಸುತ್ತವೆ. ತಾಮ್ರಶಾಸನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗಿದ್ದರೂ ಅನೇಕ ಸಂಸ್ಕೃತ ಶಾಸನಗಳೂ ದೊರೆಯುತ್ತವೆ. ೧೨ನೇ ಶತಮಾನದ ವ್ಮರಾಠಾವಾಡಾ ಪ್ರದೇಶದಲ್ಲಿಯ ಅರ್ಧಾಪುರ ಎಂಬಲ್ಲಿಯ ಶಾಸನವು ಒಂದು ಉತ್ತಮವಾದ ಚಂಪೂ ಕಾವ್ಯವಾಗಿದೆ.[15] ಚೂಡಾಮಣಿ ಎಂಬುವನ ಮಗನಾದ ಈಶ್ವರದೇವನೆಂಬುವನು ಇದನ್ನು ಬರೆದನೆಂದು ಹೇಳಲಾಗಿದೆ. ಇದೇ ಪ್ರದೇಶದಲ್ಲಿಯ ಹೊಟ್ಟೂಲ ಎಂಬಲ್ಲಿಯ ೧೧ನೇ ಶತಮಾನದ ಒಂದು ಶಾಸನವು ಪೂರ್ಣ ವಾಗಿ ಪದ್ಯದಲ್ಲಿಯೇ ರಚಿತವಾಗಿದೆ.[16] ಕವಿಯ ಹೆಸರು ಮಾತ್ರ ಗೊತ್ತಾಗಿಲ್ಲ. ಆಕರ್ಷಕ ಅಲಂಕಾರಗಳನ್ನು ಬಳಸಿ ಕವಿ ತನ್ನ ಕಾವ್ಯವನ್ನು ರಸಿಕರು ಮೆಚ್ಚುವಂತೆ ಮಾಡಿದ್ದಾರೆ. ಸಿದ್ದುಗಿ ಎಂಬ ತನ್ನ ಒಡೆಯನೊಬ್ಬನನ್ನು ವರ್ಣಿಸುವಾಗ ಹಿಂದೆ ಇದ್ದ ಪುರಾಣ ಪುರುಷರೆಲ್ಲರೂ ಇವನ ಮುಂದೆ ತೇಜೋಹೀನರಾದರು ಎಂದು ಹೀಗೆ ಹೇಳುತ್ತಾನೆ:

ಕಿಂ ನಾಗಾರ್ಜುನ ಏಷ ಕರ್ಣನೃಪತಿಃ ಕಿಂ ವಾವತೀರ್ಣೋ ಭುವಿ
ಕಿಂ ವಾ ವಿಕ್ರಮಭೂಪತಿಃ ಶಿಬಿರಯಂ ಕಿಂ ವಾಥ ವೈರೋಚನಿಃ
ಇಥ್ಥಂ ಭ್ರಾಂತಿಮಯಂ ಜನಸ್ಯ ಜನಯನ್ನಜ್ಞಾಯತೇ ತೇಷು ಕಃ
ಶ್ರೀಮತ್‌ಸಿದ್ದುಗಿರಿತ್ಯಗಾತ್ ಪುನರಸೌ ಖ್ಯಾತಿಂ ಜನೇ ಸಾಂಪ್ರತಂ

ಈತನ ಸರ್ವವ್ಯಾಪಿ ಕೀರ್ತಿಯ ಮುಂದೆ ರಾಮಾಯಣ, ಮಹಾಭಾರತಗಳು ಮಸಳಿಸಿ ಹೋದವು.

ಭಗ್ನಾ ಭಾರತಭಾವತಾ ವಿಗಲಿತೋ ರಾಮಾಯಣೋಪಕ್ರಮಃ
ಜೀರ್ಣಾ ಶೀರ್ಣಪುರಾಣಪದ್ಧರಿತೋ ನಾಖ್ಯಾಯಿಕಾನಾಂ ಗತಿಃ
ಪ್ರತ್ಯಾಶಂ ಪ್ರತಿಮಂಡಲಂ ಪ್ರತಿಪುರಂ ಪ್ರತ್ಯಾಪಗಂ ಪ್ರತ್ಯಗಂ
ತಸ್ಯ ಕ್ಷತ್ರಿಯಪುಂಗವಸ್ಯ ಯಶಸಾ ತ್ರೈಲೋಕ್ಯಮಾಪೂರಿತಂ

ಬೆಳಗಾವಿ ಜಿಲ್ಲೆಯ ದೇಗಾಂವ ಎಂಬಲ್ಲಿಯ ೧೧ನೇ ಶತಮಾನದ ಒಂದು ಶಾಸನವು ಸುಂದರವಾದ ಚಿಕ್ಕ ಕಾವ್ಯದಂತಿದೆ.[17] ಅದನ್ನು ಬರೆದವನು ಗೋವಿಂದದೇವ ಎಂಬುವನು. ಅವನು ತನ್ನ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾನೆ;

ತರ್ಕೇ ತಂತ್ರೇ ಕವಿತ್ವೇ ಚ ನಿರಂಕುಶಮತೇರಿಯಂ
ಕೃತಿರ್ಗೋವಿಂದದೇವಸ್ಯ ಜಯತ್ಯಾಚಂದ್ರತಾರಕಂ

ಗೋವಾ ಕದಂಬರ ಗುಣಗಾನವನ್ನು ಮಾಡುವುದೇ ಈ ಶಿಲಾಕಾವ್ಯದ ವಸ್ತು. ವಿಶೇಷ ವೆಂದರೆ ಈ ಅರಸರು ಮಾಡಿದ ನೌಕಾಯುದ್ಧಗಳನ್ನು ಈ ಶಾಸನ ಬಣ್ಣಿಸುತ್ತದೆ. ಅವರ ಕಾಲದಲ್ಲಿ ಗೋವೆಯು ಒಂದು ಉತ್ತಮ ಬಂದರವಾಗಿದ್ದಿತು. ಆದರೆ ಕನ್ನಡ ಅರಸರು ಈ ಬಂದರನ್ನು ಉಪಯೋಗಿಸಿಕೊಂಡ ಬಗ್ಗೆ ಹೆಚ್ಚು ವಿವರಗಳಿಲ್ಲ. ಆದರೂ ಅನೇಕ ಶಾಸನಗಳು ಕನ್ನಡ ಅರಸರು ಬಾದಾಮಿ ಚಲುಕ್ಯರ ಕಾಲದಿಂದಲೂ ನೌಕಾಪಡೆಯನ್ನು ಹೊಂದಿದ್ದರು ಎಂಬ ಸೂಚನೆಗಳು ಬೇಕಾದಷ್ಟಿವೆ.

ಪ್ರಸ್ತುತ ಈ ಕದಂಬ ವಂಶದ ಷಷ್ಠದೇವನು ಶ್ರೀಲಂಕೆಯನ್ನು ಗೆದ್ದನು. ಹಿಂದಕ್ಕೆ ರಾಮಾಯಣದ ಕಾಲದಲ್ಲಿ ಶ್ರೀರಾಮನೂ ಈ ದೇಶವನ್ನು ಗೆದ್ದಿದ್ದನು. ಆದರೆ ಷಷ್ಠನು ರಾಮನಷ್ಟು ಪ್ರಯಾಸ ಪಡುವ ಸಂದರ್ಭವೇ ಬರಲಿಲ್ಲ. ಏಕೆಂದರೆ ಅವನು ರಾಮನಂತೆ ಸೇತುವೆಯನ್ನು ಕಟ್ಟಲಿಲ್ಲ. ಕೋಟೆಯನ್ನು ಮುತ್ತಲಿಲ್ಲ. ವಾನರ ಸೈನ್ಯದ ಅಧಿಪತಿಯ ಶ್ರಮವೂ ಈಗಿರಲಿಲ್ಲ. ಸುಮಿತ್ರಾತ್ಮಜ ಲಕ್ಷಣನು ಎಚ್ಚರ ತಪ್ಪಿ ಬೀಳಲಿಲ್ಲ. ಆದರೂ ಲಂಕೆಯ ಅಧಿಪತಿಯು ಇವನ ವಶನಾದನು.

ನ ಸೇತುಬಂಧೋ ನ ಚ ದುರ್ಗರೋಧೋ
ನ ವಾನರಾನೀಕಪತಿಪ್ರಯಾಸಃ
ನ ವಾ ಸುಮಿತ್ರಾತ್ಮಜಸಂಭ್ರಮೋsಭೂತ್
ಲಂಕಾಪತಿಸ್ತಸ್ಯ ತಥಾಪಿ ವಶ್ಯಃ

ಯಾಕೆಂದರೆ ಇವನ ಬಳಿಯಲ್ಲಿ ಬಲಾಢ್ಯವಾದ ನೌಕಾ ಪಡೆಯಿತ್ತು. ಗೋವೆಯಿಂದ ಲಂಕೆಯವರೆಗೆ ನೌಕೆಗಳನ್ನೇ ಸಾಲಾಗಿ ನಿಲ್ಲಿಸಿ ಲಂಕೆಯನ್ನು ಸುಲಭವಾಗಿ ವಶಪಡಿಸಿಕೊಂಡನು. ಷಷ್ಠನ ಮಗ ವಿಜಯಾದಿತ್ಯನೂ ಸಹ ಅನೇಕ ನೌಕಾಯುದ್ಧಗಳನ್ನು ನಡೆಸಿದನು. ಈ ವಿಷಯ ವನ್ನು ಕವಿ ಹೀಗೆ ಬಣ್ಣಿಸುತ್ತಾನೆ.

ಯಾತ್ರೋತ್ಸವೇ ಪೋತಪರಂಪರಾಭಿರ್ವಿಘಟ್ಟಿತೋ ವಾರಿಧಿರೂರ್ಮಿಘೋಷೈಃ
ದ್ವೀಪಾಂತರೇಷು ದ್ವಿಷತಾಂ ಪುರಸ್ತಾದ್ವಂದೀವ ಯದ್ವಿಕ್ರಮಘೋಷಣೋsಭೂತ್

ಇತಿಹಾಸದ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಸಾಮುದ್ರಿಕ-ಪುರಾತತ್ವದ (Marine Archaeology) ವಿದ್ಯಾರ್ಥಿಗಳಿಗೆ ಈ ಶಾಸನವು ಮಹತ್ವದ ವಿವರಗಳನ್ನು ಒದಗಿಸುತ್ತದೆ.

ಅಗ್ನಿಶರ್ಮನೆಂಬ ೧೨ನೇ ಶತಮಾನದ ಒಬ್ಬ ಕವಿಯು ೪೭ ಪದ್ಯಗಳುಳ್ಳ ಒಂದು ಚಿಕ್ಕ ಶಾಸನವನ್ನು ರಚಿಸಿದ್ದು ತನ್ನನ್ನು ಸಾರಸ್ವತ-ಸಾರ್ವಭೌಮನೆಂದು ಕರೆದುಕೊಂಡಿದ್ದಾನೆ.[18] ಹೊಯ್ಸಳ ವಂಶದ ಪ್ರಶಸ್ತಿಯಾಗಿದ್ದ ಈ ಕಾವ್ಯದಲ್ಲಿ ಕವಿಯು ಹೊಯ್ಸಳ ೨ನೇ ಬಲ್ಲಾಳ ನನ್ನು ಮೇರುಪವರ್ತಕ್ಕೆ ಹೀಗೆ ಹೋಲಿಸಿದ್ದಾನೆ.

ಮಧ್ಯಸ್ಥೇನೋನ್ನತ್ಯಾ ಕಾಂಚನವಿಭವೇನ ವಿಬುಧಸೇವ್ಯತಯಾ
ಯೋ ಜಂಗಮ ಇವ ಮೇರುರ್ಮಹೀಭೃತಾಂ ಅಗ್ರಣೀರ್ಜಗತಿ
ಪದ್ಯದಲ್ಲಿಯ ದ್ವಂದ್ವಾರ್ಥವು ಸ್ಪಷ್ಟವಿದೆ.

ಇಂಥ ಸುಂದರ ಶಾಸನಕಾವ್ಯಗಳ ಅನೇಕ ಉದಾಹರಣೆಗಳನ್ನು ಕೊಡಬಹುದು. ಆದರೆ ಶಾಸನಗಳಲ್ಲಿ ಸಂಸ್ಕೃತ ಸಾಹಿತ್ಯದ ಸಮೃದ್ದಿಯನ್ನು ಎತ್ತಿ ತೋರಿಸಲು ಇವಷ್ಟೇ ಉದಾಹರಣೆ ಗಳು ಸಾಕೆಂದು ತೋರುತ್ತವೆ. ಸಂಸ್ಕೃತ ಸಾಹಿತ್ಯದಲ್ಲಿ ಅಭಿರುಚಿ, ಗತಿ ಇರುವ ಸಂಶೋಧಕರಿಗೆ ಇಂಥ ಶಾಸನಗಳು ವಿಪುಲ ಸಾಮಗ್ರಿಯನ್ನು ಒದಗಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಸಂಶೋಧನೆಯ ಅವಕಾಶಗಳು

ನಮ್ಮ ದೇಶದ ಶಾಸನಗಳು ಅನರ್ಘ್ಯ ರತ್ನಭಂಡಾರವಿದ್ದಂತೆ. ನಮ್ಮ ಚರಿತ್ರೆ, ಸಾಹಿತ್ಯ, ಸಂಸ್ಕೃತಿಗಳಿಗೆ ಸಂಬಂಧಿಸಿದ ವಿಪುಲ ಅಣಿಮುತ್ತುಗಳು ಇಲ್ಲಿವೆ. ಯಾವ ವಿಷಯವನ್ನಾದರೂ ಆರಿಸಿಕೊಂಡು ಫಲಪ್ರದ ಸಂಶೋಧನೆಯನ್ನು ನಡೆಸಬಹುದು. ಸಾಮಾನ್ಯವಾಗಿ ಶಾಸನಗಳನ್ನು ಇತಿಹಾಸ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ವಿಶೇಷವಾಗಿ ರಾಜಕೀಯ ಚರಿತ್ರೆ ಮತ್ತು ಬಹುಮಟ್ಟಿಗೆ ಆರ್ಥಿಕ, ಸಾಮಾಜಿಕ ಚರಿತ್ರೆಗಳ ಅಭ್ಯಾಸಕ್ಕಾಗಿ ಉಪಯೋಗಿಸಿಕೊಳ್ಳ ಲಾಗುತ್ತದೆ. ಆದರೆ ಸಾಹಿತ್ಯ ಮತ್ತು ಈ ಜ್ಞಾನ ಶಾಖೆಯ ಇತರ ವಿಷಯಗಳ ಸಂಶೋಧನೆಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ. ಇಂಥ ಚಿಕ್ಕ ಕಾವ್ಯಗಳನ್ನು ಸಂಗ್ರಹಿಸಿ ಟಿಪ್ಪಣಿಗಳೊಂದಿಗೆ ಪ್ರಕಟಿಸಿದರೆ ಸಾಕು, ನಮ್ಮ ಸಂಸ್ಕೃತ ಸಾಹಿತ್ಯ ಭಂಡಾರಕ್ಕೆ ಅಪೂರ್ವ ಕೊಡುಗೆಯನ್ನು ಕೊಟ್ಟಂತಾಗುತ್ತದೆ. ಅನೇಕ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಕವಿಗಳು ಬೆಳಕಿಗೆ ಬಂದು ನಮ್ಮ ದೇಶದ ಸಾಹಿತ್ಯ ಪರಂಪರೆಯು ಇನ್ನಷ್ಟು ಸಮೃದ್ಧವಾಗಿದೆ.

ಛಂದಸ್ಸು ಮತ್ತು ಅಲಂಕಾರ ಶಾಸ್ತ್ರಗಳಿಗೆ ಶಾಸನಗಳ ಕೊಡುಗೆ ಅಪಾರ. ವಿವಿಧ ವೃತ್ತ ಗಳಲ್ಲಿ ವಿವಿಧ ಅಲಂಕಾರಗಳೊಂದಿಗೆ ರಚಿತವಾಗಿರುವ ಇಂಥ ಎಷ್ಟೋ ಕಾವ್ಯಗಳು ಬೆಳಕಿಗೆ ಬಾರದೇ ಉಳಿದಿವೆ. ಛಂದಶ್ಯಾಸ್ತ್ರಕ್ಕೆ ಹೊಸದೆನಿಸುವ ಎಷ್ಟೋ ವೃತ್ತಗಳು ಸಾಹಿತ್ಯ ರೂಪಗಳು ಬೆಳಕಿಗೆ ಬಂದೇ ಇಲ್ಲ. ೫ನೇ ಶತಮಾನದಷ್ಟು ಹಿಂದೆಯೇ ಸಂಸ್ಕೃತ ಶಾಸನದಲ್ಲಿದ್ದ ರಗಳೆಯ ಬಗ್ಗೆ ಮೇಲೆ ಉಲ್ಲೇಖಿಸಲಾಗಿದೆ. ಇಂಥ ಅನೇಕ ಹೊಸ ಹೊಸ ರೂಪಗಳು ಶಾಸನಗಳ ಕೂಲಂಕಷ ವಿಶ್ಲೇಷಣೆ, ಅಭ್ಯಾಸಗಳಿಂದ ಹೊರಬರುತ್ತದೆ.

ಶಾಸನಗಳಿಂದ ಬಹಳಷ್ಟು ಪ್ರಯೋಜನವನ್ನು ಪಡೆಯಬಹುದಾದ ಇನ್ನೊಂದು ಕ್ಷೇತ್ರ ವೆಂದರೆ ಶಬ್ದಶಾಸ್ತ್ರ. ಶಾಸನಗಳಲ್ಲಿ ಅನೇಕ ಹೊಸ ಹೊಸ ಶಬ್ದಗಳು ದೊರೆಯುತ್ತವೆ. ಇವುಗಳಲ್ಲೆಷ್ಟೋ ಪರಿಚಿತ ನಿಘಂಟುಗಳಲ್ಲಿಯೂ ದೊರೆಯುವುದಿಲ್ಲ. ಶಾಸನ ಕವಿಗಳು ಅದೆಷ್ಟೋ ಹೊಸ ಶಬ್ದಗಳನ್ನು ಸೃಷ್ಟಿಸಿದ್ದಾರೆ. ಪ್ರಾದೇಶಿಕ ಭಾಷೆಗಳ ಶಬ್ದಗಳಿಗೆ ಸಂಸ್ಕೃತ ರೂಪವನ್ನು ಕೊಟ್ಟಿದ್ದಾರೆ. ಇವೆಲ್ಲವುಗಳ ವಿಮರ್ಶಾತ್ಮಕ ಅಭ್ಯಾಸದಿಂದ ಭಾಷೆಯ ಅಭ್ಯಾಸಕ್ಕೆ ಮಹತ್ವ ಬರುತ್ತದೆ. ಹಿಂದಕ್ಕೆ ಫ್ಲೀಟ್ ಮತ್ತು ಕೀಲ್‌ಹಾರ್ನರಂಥ ವಿದ್ವಾಂಸರು ಶಾಸನಗಳಲ್ಲಿ ಬರುವ ಅನೇಕ ಅಪೂರ್ವ ಶಬ್ದಗಳ ವಿಶ್ಲೇಷಣಾತ್ಮಕ ಅಭ್ಯಾಸವನ್ನು ನಡೆಸಿ ಈ ದಿಶೆಯಲ್ಲಿ ದಾರಿ ತೋರಿಸಿಕೊಟ್ಟಿದ್ದಾರೆ. ಈಚೆಗೆ ಡಿ.ಸಿ. ಸರ್ಕಾರ್ ಅವರು ಶಾಸನ ಶಬ್ದಕೋಶವನ್ನೇ ರಚಿಸಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ವಿಪುಲ ಅವಕಾಶಗಳಿವೆ. ಶಾಸನ ಗಳಲ್ಲಿ ಬರುವ ಎಲ್ಲ ಬಗೆಯ ಶಬ್ದಗಳನ್ನು ಸಂಗ್ರಹಿಸಿ ವ್ಯಾಖ್ಯೆ, ಟಿಪ್ಪಣಿಗಳೊಂದಿಗೆ ಸಂಸ್ಕೃತದಲ್ಲಿಯೂ, ಕನ್ನಡದಲ್ಲಿಯೂ ಶಾಸನ ಪದಕೋಶಗಳನ್ನು ನಿರ್ಮಿಸುವ ಮಹತ್ವದ ಕಾರ್ಯ ಇನ್ನೂ ಆಗಬೇಕಾಗಿದೆ. ಇದರಿಂದ ನಮ್ಮ ನಿಘಂಟು ಶಾಸ್ತ್ರದ ಅಭ್ಯಾಸ ಸಮೃದ್ಧವಾಗುತ್ತದೆ. ಈ ದಿಶೆಯಲ್ಲಿ ನಾನು ಸಂಪಾದಿಸಿದ ‘ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ’ ಎಂಬ ಗ್ರಂಥವನ್ನು ಉದಾಹರಣೆಯಾಗಿ ಕೊಡಬಯಸುತ್ತೇನೆ.

ಶಾಸನಗಳಿಗೆ ಸಂಬಂಧಿಸಿದಂತೆ ನನಗೆ ಆಸ್ಥೆಯುಳ್ಳ ವಿಶೇಷವಾದ ಕ್ಷೇತ್ರವೆಂದರೆ ದೇವತಾ ಸ್ತುತಿಗಳು. ಹೆಚ್ಚು ಕಡಿಮೆ ಪ್ರತಿಯೊಂದು ಶಾಸನದಲ್ಲಿಯೂ ಆರಂಭದಲ್ಲಿ ಒಂದಿಲ್ಲೊಂದು ದೇವತೆಯ ಸ್ತುತಿ ಇದ್ದೇ ಇರುತ್ತದೆ. ಅದು ಶೈವ, ವೈಷ್ಣವ, ಜೈನ, ಬೌದ್ಧಗಳಂಥ ಮತಗಳಿಗೆ ಸಂಬಂಧಿಸಿದವುಗಳಿರಬಹುದು ಅಥವಾ ಯಾವ ಧರ್ಮಕ್ಕೂ ಸೇರದೇ ನಿಸರ್ಗದ ವಸ್ತುಗಳನ್ನೇ ಕುರಿತು ಸ್ತುತಿ ಇರಬಹುದು. ಇವುಗಳ ವಿಮರ್ಶೆ, ವಿಶ್ಲೇಷಣೆಯಿಂದ ನಮ್ಮ ಧರ್ಮ, ಸಂಸ್ಕೃತಿ, ಸಮಾಜಗಳ ತಿಳುವಳಿಕೆಗೆ ವಿಫುಲವಾದ ವಿಷಯಗಳು ದೊರೆಯುತ್ತವೆ. ಎಷ್ಟೋ ಸ್ತುತಿಗಳು ಬಹು ಸುಂದರವಾದ ಕಲ್ಪನೆಗಳಿಂದ ಕೂಡಿರುತ್ತವೆ. ಒಂದೇ ದೇವತೆಯನ್ನು ಹಲವು ಬಗೆಯಿಂದ ವರ್ಣಿಸಿದ ಅನೇಕ ಉದಾಹರಣೆಗಳು ದೊರೆಯುತ್ತವೆ. ಇಂಥ ಎಲ್ಲ ಸ್ತುತಿಗಳ ಸಂಗ್ರಹ ಮತ್ತು ಅಭ್ಯಾಸದಿಂದ ನಮ್ಮ ಸಂಸ್ಕೃತಿಯ ಅಭ್ಯಾಸಕ್ಕೆ ವಿಶೇಷವಾಗಿ ನೆರವು ದೊರೆಯುತ್ತದೆ. ಒಂದು ಶಾಸನದಲ್ಲಿ ಸಕಲ ಪ್ರಾಣಿಗಳೆಲ್ಲರಿಗೂ ಜೀವನಾಧಾರವಾದ ನೀರನ್ನೇ ದೇವತೆ ಯನ್ನಾಗಿಸಿ ಈ ರೀತಿ ಬಣ್ಣಿಸಲಾಗಿದೆ.[19]

ಯಸ್ಯ ಕೇಶೇಷು ಜೀಮೂತಾ ನದ್ಯಃ ಸರ್ವಾಂಗಸಿಂಧುಷು
ಕುಕ್ಷೌ ಸಮುದ್ರಾಶ್ಚತ್ವಾರಾಃ ತಸ್ಮೈ ತೋಯಾತ್ಮನೇ ನಮಃ
ನೀರು ಬರೀ ನೀರಲ್ಲ, ಅದು ಸಾಕ್ಷಾತ್ ಆತ್ಮ, ತೋಯಾತ್ಮ.

ಶಿವನ ವರ್ಣನೆಯೊಂದು ಹೀಗಿದೆ :

ಆಯುರಾರೋಗ್ಯದಾತಾರಂ ಭವವೈದ್ಯಂ ಜಗದ್ಗುರುಂ
ಆಧಿವ್ಯಾಧಿಹರಂ ವಂದೇ ಪರಾಶಕ್ತಿಯುತಂ ಶಿವಂ

ಪ್ರತಿಮಾಲಕ್ಷಣಶಾಸ್ತ್ರದ ಅಭ್ಯಾಸಕ್ಕಂತೂ ಶಾಸನಗಳು ಮೂಲಾಧಾರದಂತೆ. ನಮ್ಮ ದೇವಾಲಯಗಳಲ್ಲಿ ಕಂಡುಬರುವ ವಿವಿಧ ದೇವತೆಗಳಿಗೆ ಅವುಗಳವೇ ಆದ ಲಕ್ಷಣಗಳಿರುತ್ತವೆ. ನಾಲ್ಕು ಕೈಗಳು, ಮೂರು ಕಣ್ಣುಗಳು, ಶಂಖ, ಚಕ್ರ, ಗಧಾ, ಪದ್ಮ, ತ್ರಿಶೂಲ, ಪುಸ್ತಕ ಇತ್ಯಾದಿಗಳನ್ನು ನಾವು ಪ್ರತಿಮೆಗಳಲ್ಲಿ ಕಾಣುತ್ತೇವೆ. ಇಂಥವುಗಳ ವಿವರಣೆಗಳು ಪ್ರತಿಮಾ ಲಕ್ಷಣಶಾಸ್ತ್ರದ ಗ್ರಂಥಗಳಲ್ಲಿ ಇದ್ದೇ ಇರುತ್ತವೆ. ಆದರೆ ಈ ಲಕ್ಷಣಗಳ ಇತಿಹಾಸವನ್ನು, ಅವು ಬೆಳೆದು ಬಂದ ಬಗೆಯನ್ನು ತಿಳಿದುಕೊಳ್ಳಲು ಶಾಸನಗಳಿಂದ ಬಹಳಷ್ಟು ನೆರವು ದೊರೆಯುತ್ತದೆ.

ಹೀಗೆ ಶಾಸನಗಳ ಅಭ್ಯಾಸದಿಂದ ನಮಗೆ ಸಂಶೋಧನೆಯ ಹೊಸ ಹೊಸ ದಿಕ್ಕುಗಳು, ಹೊಸ ಹೊಸ ಮಾರ್ಗಗಳು ಗೋಚರವಾಗುತ್ತವೆ. ಇಂಥ ಸಂಶೋಧನೆಗಳಿಂದ ನಮ್ಮ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ವಿಸ್ತಾರವಾಗುತ್ತ ಹೋಗುತ್ತದೆ. ನಮ್ಮಲ್ಲಿ ಸಾಹಿತ್ಯ, ಸಂಸ್ಕೃತಿ, ಚರಿತ್ರೆಗಳ ಬಗ್ಗೆ ತಿಳುವಳಿಕೆ ಹೆಚ್ಚಬೇಕಾದರೆ ಶಾಸನಗಳ ಅಭ್ಯಾಸ ಅತ್ಯಗತ್ಯ. ಶಾಸನಗಳ ಅಭ್ಯಾಸಕ್ಕೆ ಭಾಷೆಯ ಅಭ್ಯಾಸ ಅವಶ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು. ಯಾಕೆಂದರೆ ಇದಕ್ಕೆ ಭಾಷಾಜ್ಞಾನವೇ ಭದ್ರ ಬುನಾದಿ. ಅದಿಲ್ಲದಿದ್ದರೆ, ಈ ಮೊದಲೇ ಹೇಳಿದಂತೆ ಶಾಸನಗಳ ಅಭ್ಯಾಸವು ಅಪೂರ್ಣವೂ ಅಪಕ್ವವೂ ಆಗುತ್ತದೆ. ಈ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಭಾಷೆ, ಸಾಹಿತ್ಯಗಳ ಅಭ್ಯಾಸದಲ್ಲಿ ಹಿನ್ನಡೆಯಾಗುತ್ತಿರುವುದು ಅಪಾಯಕರ ಬೆಳವಣಿಗೆ ಯಾಗಿದೆ. ಭಾಷೆಗಳ ಆಳವಾದ ಅಭ್ಯಾಸಕ್ಕೆ ಅವಕಾಶಗಳು ಕಡಿಮೆಯಾಗುತ್ತಿವೆ. ಸಂಸ್ಕೃತದ ಅಭ್ಯಾಸವಂತೂ ತೀರ ಕೆಳಮಟ್ಟಕ್ಕೆ ಇಳಿದಿದೆ. ಇತ್ತೀಚಿನ ಅಭ್ಯಾಸ ಕ್ರಮಗಳಲ್ಲಿ ಸಂಸ್ಕೃತಕ್ಕೆ ಯಾವ ಮಹತ್ವವೂ ಇಲ್ಲದೆ ಒಮ್ಮೊಮ್ಮೆ ಅದು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಸಾಧನೆಯಾಗಿ ಪರಿಣಮಿಸುತ್ತಿದೆ. ಸಂಸ್ಕೃತ ಮತ್ತು ಇತರ ಶಾಸ್ತ್ರೀಯ ಭಾಷೆಗಳ ಬೆಳವಣಿಗೆಗೆ ಸರಕಾರವೇನೋ ವಿವಿಧ ರೀತಿಗಳಲ್ಲಿ ಪ್ರೋತ್ಸಾಹ ನೀಡುತ್ತಿದೆ. ಆದರೆ ಅದು ಮೇಲಿನ ಮಟ್ಟದಲ್ಲಾಯಿತು. ಆದರೆ ಕೆಳಮಟ್ಟದಲ್ಲಿ ಅಂದರೆ ವಿದ್ಯಾರ್ಥಿಗಳ ಮಟ್ಟದಲ್ಲಿ ಇದಕ್ಕೆ ಯಾವ ಪ್ರೋತ್ಸಾಹವೂ ಇಲ್ಲದಾಗಿದೆ. ನಮ್ಮ ಚರಿತ್ರೆ, ಸಾಹಿತ್ಯ, ತತ್ವಜ್ಞಾನ, ಸಂಸ್ಕೃತಿ ಗಳ ಅಭ್ಯಾಸ ಇತರ ವಿಜ್ಞಾನ ಶಾಖೆಗಳಷ್ಟೇ ಅವಶ್ಯಕವಾಗಿದೆ. ಇವುಗಳ ಅಭ್ಯಾಸದ ಬೆಂಬಲ ವಿಲ್ಲದೆ ಯಾವ ಕ್ಷೇತ್ರದಲ್ಲಿಯೂ ಹೆಚ್ಚಿನದನ್ನು ಸಾಧಿಸಲಾಗದು. ಮಾಧ್ಯಮಿಕ ಶಾಲೆಯ ಮಟ್ಟದಲ್ಲಿ ಸಂಸ್ಕೃತ ಮತ್ತು ಹಳಗನ್ನಡಗಳ ಅಭ್ಯಾಸ ಕಡ್ಡಾಯವಾಗಬೇಕು. ಇವುಗಳಲ್ಲಿ ಕನಿಷ್ಠ ತರಬೇತಿಯಿಂದ ವಿದ್ಯಾರ್ಥಿಗಳ ಹೆಚ್ಚಿನ ಸಾಧನೆಗೆ ಭದ್ರ ಅಡಿಪಾಯವನ್ನು ಹಾಕಿದಂತಾ ಗುತ್ತದೆ.

ಸಾಫ್ಟ್‌ವೇರ್ ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಮುಂತಾದ ಜ್ಞಾನಶಾಖೆಗಳಲ್ಲಿ ನಾವು ದಾಪುಗಾಲು ಹಾಕುತ್ತಿದ್ದೇವೆಂಬುದೆನೋ ನಿಜ. ಕುಶಾಗ್ರಮತಿಯ ವಿದ್ಯಾರ್ಥಿಗಳೆಲ್ಲ ಅತ್ತ ಕಡೆ ಆಕರ್ಷಿತರಾಗಿ ನಮ್ಮ ಸಾಂಸ್ಕೃತಿಕ ಅಭ್ಯಾಸದ ಕ್ಷೇತ್ರ ಬಡವಾಗಿ ಅಷ್ಟೇ ಅಲ್ಲ, ಬರಡಾಗುತ್ತಲಿದೆ. ನಮ್ಮ ಪರಿಪೂರ್ಣ ಜೀವನಕ್ಕೆ ಸಾಹಿತ್ಯ, ಸಂವೀತ, ಸಂಸ್ಕೃತಿಗಳ ಅಭ್ಯಾಸ ಅತ್ಯವಶ್ಯವೆಂಬುದನ್ನು ಎಲ್ಲರೂ ಬಲ್ಲರು. ಇಲ್ಲವಾದರೆ ನಮ್ಮ ಗತಿ ‘ಸಾಹಿತ್ಯ ಸಂವೀತ ಕಲಾವಿಹೀನೊ ಸಾಕ್ಷಾತ್ ಪಶುಃ ಪುಚ್ಛವಿಶಾಣಹೀನಃ’ ಎಂಬಂತಾದೀತು. ವೈಜ್ಞಾನಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಮುನ್ನಡೆ ಅಗತ್ಯವೇ. ಆದರೆ ಮುಗಿಲನ್ನು ಮುಟ್ಟುವ ಭರದಲ್ಲಿ ನಿಂತ ನೆಲವನ್ನು ಕಳೆದುಕೊಳ್ಳಬಾರದು.

 

 


[1] Only two inscriptions are in Kannada

1. Halmidi Inscription of Ka=Kusthavarma and

2. Kalagundli Inscription of Ravivarma.

[2] Indian Antiquary, Vol. X, No. Lxxxii

[3] Ibid, Vol. X, p.p. 58ff.

[4] Ed. K.K. Handique.

[5] Ed. (with kannada commentary) G.S. Dikshit, B. Ramasvamy and Shrinivas Ritti.

[6] Koppal/District Inscriptions, (Kannada University, Hampi), No.95.

[7] Bombay Gazetteer, Vol. I, Part II, p.p. 365-66.

[8] Epigraphia Indica, Vol. VIII, p.p. 24ff.

[9] Such practice of identifying families with different objects, professions etc., is common even today in the northern part of Karnataka.

[10] Corpus of Kadamba Inscriptions, (Ed. B.R. Gopal) p.p. 81ff.

[11] Indian Antiquary, Vol. XIX, pp. 7ff.

[12] Epigraphia Indica, Vol. VI, pp. 1ff.

[13] Ibid, Vol. IX, pp 28ff.

[14] Inscriptions from Nanded District (Ed. Shrinivas Ritti and G.C. Shelke) p.p. 1ff.

[15] Ibid, pp. 80ff.

[16] Ibid, pp. 63ff.

[17] Journal of the Bombay Branh of Royal Asiatic Society, Vol. IX, pp. 287ff.

[18] Epigraphia Indica, Vol. VI, pp 94ff.

[19] Inscriptions of the Vijayanagara Rulers, Vol. I, (Ed. Shrinivas Ritti and B.R. Gopal) No. 371.