ಕನ್ನಡದಲ್ಲಿ ಮಾರ್ಗ’ ಮತ್ತು ‘ದೇಸಿ’ ಶಬ್ದಗಳ ಬಳಕೆ ಮೊಟ್ಟಮೊದಲ (ಸು.ಕ್ರಿ.ಶ. ೮೫೦) ಉಪಲಬ್ಧಶಾಸ್ತ್ರ ಗ್ರಂಥವಾದ ಕವಿರಾಜಮಾರ್ಗದಲ್ಲಿಯೇ ಕಂಡು ಬರುತ್ತದೆ.* ಇಲ್ಲಿ,

‘ಸಮಸಂಸ್ಕೃತಂಗಳೊಳ್‌ತ | ಳ್ತಮರ್ದಿರೆ ಕನ್ನಡಮನಱದು, ಪೇೞ್ಗಿ’ಂಬುದಿದಾ
ಗಮಕೋವಿದ ನಿಗದಿತಮಾ | ರ್ಗಂ………….(ಕ.ಮಾ. ೧-೫೧)
‘ನೆಗೞ್ದಿರ್ದ ಕನ್ನಡಂಗಳೊ | ಳಗಣಿತಗುಣವಿದಿತ ಸಂಸ್ಕೃತೋಕ್ತಕ್ರಮಮಂ
ಬಗೆದೊಂದು ಮಾಡಿ ಪೇೞ್ದೊಡೆ ಸೊಗಯಿಸುಗುಂ ಕಾವ್ಯಬಂಧ ಮೆಂದುಮನಿಂದ್ಯಂ’
(ಕ.ಮಾ.೧-೫೧)

‘ಸಮಸಂಸ್ಕೃತ ಪದಗಳನ್ನು ಕನ್ನಡಪದಗಳೊಂದಿಗೆ ಸಮಾಸಮಾಡಿ ಬಳಸುವುದರಿಂದ ಕನ್ನಡ ಕಾವ್ಯಬಂಧ ಸೊಗಯಿಸುತ್ತದೆ’ ಎಂದು ಅಭಿಪ್ರಾಯಪಡಲಾಗಿದೆ. ಆದ್ದರಿಂದ ಕವಿರಾಜ ಮಾರ್ಗಕಾರನ ಪ್ರಕಾರ ಸಮಸಂಸ್ಕೃತ ಶಬ್ದ ಭೂಯಿಷ್ಠವಾದ ಕನ್ನಡ ಭಾಷಾ ಶೈಲಿಯೇ ‘ಮಾರ್ಗ, ಪಂಡಿತರು, ಕವಿಗಳು ಬಳಸುವ ಭಾಷೆ ಈ ‘ಮಾರ್ಗಶೈಲಿಯದೇ’ ಆಗಿದೆ. ಅವನೇ ಮತ್ತೊಂದಡೆ ‘ಕನ್ನಡ ತಿರುಳಿ’ನ ಬಗ್ಗೆ ವಿವರಗಳನ್ನು ನೀಡಿದ್ದಾನೆ; ಜೊತೆಗೆ ತಿರುಳ್ಗನ್ನಡ ಪ್ರದೇಶವನ್ನೂ ಗುರುತಿಸಿದ್ದಾನೆ.

‘ಅದೇಯೊಳಗಂ ಕಿಸುವೊೞಲಾ | ವಿದಿತ ಮಹಾಕೊಪಣನಗರದಾ ಪುಲಿಗೆಱಯಾ
ಸದಭಿಸ್ತುತಮಪ್ಪೊಕುಂ | ದದ ನಡುವಣ ನಾಡೆನಾಡೆ ಕನ್ನಡದ ತಿರುಳ್’
(ಕ.ಮಾ. ೧-೩೭)

ಇಲ್ಲಿ, ಕಿಸುವೊಳಲು (ಪಟ್ಟದಕಲ್ಲು), ಕೊಪಣನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಕ್ಕುಂದಗಳ ಮಧ್ಯದ ಪ್ರದೇಶವನ್ನು ‘ನಡುವಣನಾಡು’, ‘ಕನ್ನಡದ ತಿರುಳು’ ಎಂದು ಭಾವಿಸಲಾಗಿದೆ. ಈ ತಿರುಳ್ಗನ್ನಡ ಪ್ರದೇಶದ ಕನ್ನಡವನ್ನೇ ಆ ಕಾಲದ ಶಿಷ್ಟ ಅಥವಾ ಪ್ರಮಾಣ ಭಾಷೆಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ ಎಂ. ಚಿದಾನಂದಮೂರ್ತಿ. ಪಂಪ ಉಲ್ಲೇಖಿಸಿರುವ ‘ರಾಜದ್ರಾಜಕ ಮೆನಿಸಿದ ಸಾಜದ ಪುಲಿಗೆದೆಯ ತಿರುಳ್ಗನ್ನಡ (ಪಂಪಾ ೧೪-೫೮) ರನ್ನ ವಿದ್ಘೋಷಿಸಿದ. ಕನ್ನಡಂ ಎರದಱು ನೂಱಱ ಕನ್ನಡದಾ ತಿರುಳ್ಗನ್ನಡಂ ಗದಾಯುದ್ಧ (೧-೪೨) ಇವೆಲ್ಲವೂ ಕವಿರಾಜಮಾರ್ಗಕಾರ ಹೇಳಿದ ಪ್ರದೇಶದ ಕನ್ನಡವನ್ನೇ ದರ್ಶಿಸುತ್ತವೆ. ಆದ್ದರಿಂದ ಹಳಗನ್ನಡ ಶಿಷ್ಟ ಸಾಹಿತ್ಯ ರಚನೆಯ ‘ಮಾರ್ಗ’ ಭಾಷೆ ತಿರುಳ್ಗನ್ನಡ ನಾಡಿನ ಕನ್ನಡ ಭಾಷೆಯೇ ಆಗಿದೆ.

ಇದಕ್ಕೆ ಭಿನ್ನವಾಗಿ, ‘ಕಾವೇರಿಯಿಂದ ಮಾ ಗೋದಾವರಿ ವರಮಿರ್ದ ವಿಶಾಲನಾಡಿನಲ್ಲಿ ‘ಕನ್ನಂಡಗಳು’ ಇದ್ದುವೆಂದೂ, ಅವುಗಳ ಪ್ರಮಾಣ ಎಷ್ಟಿತ್ತೆಂದರೆ, ‘ವಾಸುಗಿಯುಂ ಮಱಿಯಲಾಱದೆ ಬೇಸಱುಗುಂ ದೇಸಿ ಬೇಱೆವೇಱಪ್ಪುದಱಿಂ’ (ಕ.ಮಾ. ೧-೪೬) ಎಂದು ಹೇಳುತ್ತಾನೆ. ಈ ದೇಸಿ ಸ್ವರೂಪ ನೀಡಿರದಿದ್ದರೂ ತಿರುಳ್ಗನ್ನಡ ಭಾಷಾ ಸ್ವರೂಪಕ್ಕಿಂತ ಭಿನ್ನ ಎಂಬುದು ಸ್ಪಷ್ಟ. ಈ ದೇಸಿ ನುಡಿಯ ಶೈಲಿಯನ್ನೇ ಮತ್ತೊಂದಡೆ ಅವನು, ‘ನುಡಿ ಗೆಲ್ಲಂಸಲ್ಲದ ಕನ್ನಡ’ವೆಂದಿದ್ದಾನೆ’ (ಕ.ಪೂ. ೧-೩೩). ಅದರಲ್ಲಿ ದೇಸಿ ಕಾವ್ಯ ಪ್ರಕಾರಗಳಾದ ಚಿತ್ತಾಣ, ಬೆದಂಡೆಗಳ ರಚನೆಯಾಗುತ್ತಿತ್ತೆಂಬ ವಿಷಯ ಗಮನಾರ್ಹವಾಗಿದೆ. ಜನಸಾಮಾನ್ಯರ ಮನರಂಜನೆಗಾಗಿ ಅವರ ಆಡುಮಾತುಗಳಲ್ಲೇ ರಚಿತವಾಗುತ್ತಿದ್ದ ಸಾಹಿತ್ಯವಿದು.

ಹೀಗೆ ‘ಕವಿರಾರ್ಜಮಾರ್ಗ’ಕಾರ ತಿಳಿಸುವ ವಿಷಯಗಳಿಂದ ‘ಮಾರ್ಗ ಮತ್ತು ‘ದೇಸಿ’ ಇವೆರಡೂ ಭಾಷಾಶೈಲಿಗಳಾಗಿದ್ದು, ಒಂದು, ಪಂಡಿತ ವರ್ಗಕ್ಕೆ ಪ್ರಿಯವಾಗುವ ಗಂಭೀರ ಸಾಹಿತ್ಯ ರಚನೆಯಲ್ಲಿ ಬಳಕೆಯಾಗುತ್ತಿದ್ದು, ಮತ್ತೊಂದು ಜನಸಾಮಾನ್ಯರಿಗೆ ಅರ್ಥವಾಗುವ ಜನಪ್ರಿಯ ಸಾಹಿತ್ಯ ರಚನೆಯಲ್ಲಿ ಬಳಕೆಯಾಗುವಂತಹದು ಆಗಿತ್ತೆಂಬುದು ವಿದಿತವಾಗುತ್ತದೆ.

ಕನ್ನಡ, ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ದಕ್ಷಿಣ ದ್ರಾವಿಡ ಗುಂಪಿನಿಂದ ಸುಮಾರು ಕ್ರಿ.ಪೂ. ೪-೩ನೆಯ ಶತಮಾನದಲ್ಲಿಯೇ ಬೇರೆಯಾಗಿ ಬೆಳೆಯತೊಡಗಿದೆ. ಕ್ರಿ.ಪೂ. ೧ನೆಯ ಶತಮಾನದ ಹೊತ್ತಿಗೆ ಕನ್ನಡ ನಾಡು-ನುಡಿ ಬಳಕೆಯಲ್ಲಿದ್ದ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಅಶೋಕನ ಬ್ರಹ್ಮಗಿರಿ ಶಾಸನ, ಶಾತವಾಹನರ ಕಾಲದ ಶಾಸನ, ಸಾಹಿತ್ಯ ಹಾಗೂ ನಾಣ್ಯ ಗಳಲ್ಲಿಯ ಬರಹಗಳಲ್ಲಿ ಪ್ರಾಕೃತದೊಂದಿಗೆ ಕೆಲವು ಕನ್ನಡ ಶಬ್ದಗಳೂ ಬಳಕೆಯಾಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ (ನೇಗಿನಾಳ ಎಂ.ಬಿ., ೧೯೯೯, ಪು. ೩೪-೫೦). ಶಾತವಾಹನರು ಕನ್ನಡ ನಾಡನ್ನು ಆಳಿದ್ದರೂ ಅವರ ಕಾಲದಲ್ಲಿ ಆಡಳಿತ ಭಾಷೆ ಪ್ರಾಕೃತವೇ ಆಗಿದ್ದಿತು. ಅವರ ನಂತರದಲ್ಲಿ ಕನ್ನಡ ನಾಡನ್ನಾಳಿದ ಕದಂಬರು ಮೂಲತಃ ಕನ್ನಡ ನಾಡಿನವರೇ ಆಗಿದ್ದು, ಅವರ ಆಳ್ವಿಕೆಯಲ್ಲಿ ಕ್ರಮೇಣ ಪ್ರಾಕೃತದ ಬದಲಾಗಿ ಕ್ರಿ.ಶ. ೪-೫ನೇ ಶತಮಾನದಲ್ಲಿ ಸಂಸ್ಕೃತ ಭಾಷೆಯ ಬಳಕೆಯಾಗತೊಡಗಿತು. ಏಕೆಂದರೆ ಆ ಕಾಲಕ್ಕಾಗಲೇ ಪ್ರಾಕೃತದ ಭಾಷೆಯ ಬಳಕೆ ಕಡಿಮೆಯಾಗ ತೊಡಗಿ ಸಂಸ್ಕೃತ ಪ್ರಬಲಗೊಳ್ಳತೊಡಗಿತ್ತು. ಕನ್ನಡದ ಮೇಲೆ ಅದರ ಪ್ರಭಾವ ದಟ್ಟವಾಗಿ ಆಗತೊಡಗಿತು. ಕದಂಬರು ಸಂಸ್ಕೃತವನ್ನು ರಾಜ್ಯಭಾಷೆಯಾಗಿ ಸ್ವೀಕರಿಸಿದ್ದರೂ (ಅಧಿಕಾರ ವಿಕೇಂದ್ರೀಕರಣದ ಮೂಲಕ) ಸ್ಥಳೀಯ ಮಟ್ಟದಲ್ಲಿ ನಾಡ ನುಡಿಯಾದ ಕನ್ನಡ ಬಳಕೆಗೂ ಅವಕಾಶ ನೀಡಿರುವುದು ಗಮನಾರ್ಹ. ಇದನ್ನು ಗಮನಿಸಿಯೇ ಎಂ.ಬಿ. ನೇಗಿನಾಳರು ‘ಕನ್ನಡವನ್ನು ದ್ವಿತೀಯ ರಾಜ್ಯ ಭಾಷೆಯಾಗಿ ಬಳಕೆಗೆ ತಂದದ್ದು ಕದಂಬ ಮನೆತನದ ಹೆಮ್ಮೆಯ ವಿಷಯ’ ಎಂದಿದ್ದಾರೆ (ನೇಗಿನಾಳ ಎಂ.ಬಿ., ೧೯೯೯, ಪು. ೩೮).

ಕದಂಬರ ಕಾಲದಲ್ಲಿ ಮೂರು ಕನ್ನಡ ಶಾಸನಗಳು ಹುಟ್ಟಿಕೊಂಡಿವೆ. ಕಾಕುತ್ಸ್ಯವರ್ಮನ ಕಾಲದ ಹಲ್ಮಿಡಿಶಾಸನ (೫ನೇ ಶತಮಾನ) ರವಿರ್ಮನ ಕಾಲದ ಕೆಲಗುಂದ್ಲಿ ಶಾಸನ (೬ನೇ ಶತಮಾನ) ಮತ್ತು ಅಜವರ್ಮನ ಕಾಲದ (ಇಮ್ಮಡಿ ಕೃಷ್ಣವರ್ಮನ ಮಗ) ಕಂಪ್ಲಿ ಶಾಸನಗಳು (೬ನೇ ಶತಮಾನ) ಇವುಗಳ ಜೊತೆಗೆ ಭೋಗಿವರ್ಮನ ತಗರೆಯ ತಾಮ್ರಪಟದ ಕೊನೆಯಲ್ಲಿ ರುವ ಐದು ಸಾಲುಗಳ ಕನ್ನಡ ಬರಹವನ್ನೂ ಇಲ್ಲಿ ಉಲ್ಲೇಖಿಸಬೇಕು. ಇವುಗಳಲ್ಲಿ ಹಲ್ಮಿಡಿ ಶಾಸನದ ಭಾಷೆ, ಸಂಸ್ಕೃತ ಭೂಯಿಷ್ಠವಾದ ಕನ್ನಡದ್ದಾಗಿದ್ದರೆ, ಉಳಿದೆರಡು ಶಾಸನಗಳಲ್ಲಿ ದೇಸಿ ಕನ್ನಡ ಹೆಚ್ಚು ಬಳಕೆಗೊಂಡಿದೆ. ತಗರೆಯ ತಾಮ್ರಪಟ ಸಂಸ್ಕೃತ ಭಾಷೆಯಲ್ಲಿದ್ದರೂ, ಅದರ ಕೊನೆಯಲ್ಲಿ ಅಚ್ಚಗನ್ನಡದ ಕೆಲವು ಸಾಲುಗಳಿವೆ.

ಹಲ್ಮಿಡಿ ಶಾಸನಕ್ಕೆ ಐತಿಹಾಸಿಕ ಮಹತ್ವವಿದೆ. ಕನ್ನಡದ ಉಪಲಬ್ಧ ಮೊಟ್ಟಮೊದಲ ಕಲ್ಬರಹವೆಂಬ ಹೆಗ್ಗಳಿಕೆ ಅದಕ್ಕಿದೆ. ಕದಂಬರ ಕಾಲದ ಉಳಿದೆರಡು ಕನ್ನಡ ಶಾಸನಗಳು ದೊರೆಯುವ ಮುನ್ನ ಹಲ್ಮಿಡಿಶಾಸನದ ಭಾಷೆಯನ್ನು ಅಧ್ಯಯನ ಮಾಡಿದ ವಿದ್ವಾಂಸರು ಕನ್ನಡ ತನ್ನ ಶೇಶಾವಸ್ಥೆಯಲ್ಲಿಯೇ ಸಂಸ್ಕೃತದ ಗಾಢ ಪ್ರಭಾವಕ್ಕೆ ಒಳಗಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ‘ಪತ್ತಜಯನ್’, ‘ಅಳುಕದಮ್ಬನ್’, ‘ಪೊಗಳೆಪ್ಪೊಟ್ಟಣ’, ‘ಪ್ರೇಮಾ ಲಯಸುತನ್’ ಮುಂತಾದ ಭಾಷಾ ರೂಪಗಳು ಸಂಸ್ಕೃತ ಹಾಗೂ ಕನ್ನಡಗಳ ದೀರ್ಘ  ಮೈತ್ರಿಯ ಪರಂಪರೆಗೆ ಸಾಕ್ಷಿಯಾಗಿರುವುದನ್ನು ಇಲ್ಲಿ ಗುರುತಿಸಿದ್ದರು. ಆದರೆ ಕೆಲಗುಂದ್ಲಿ ಮತ್ತು ಕಂಪ್ಲಿ ಶಾಸನಗಳು ದೊರೆತ ಮೇಲೆ ಕದಂಬರ ಕಾಲದಲ್ಲಿಯೇ ಸಂಸ್ಕೃತದ ಪ್ರಭಾವ ವಿಶೇಷವಾಗಿಲ್ಲದ, ಅಚ್ಚಗನ್ನಡ ಭಾಷೆಯೂ ಅಸ್ತಿತ್ವದಲ್ಲಿತ್ತು; ಕರ್ನಾಟಕದ ಜನಸಾಮಾನ್ಯರ ಭಾಷೆ ಅದಾಗಿತ್ತು ಎಂಬುದು ತಿಳಿದುಬಂದಿತು. ಈ ಹಿನ್ನೆಲೆಯಲ್ಲಿಯೇ ಶಾಸನ ಭಾಷಾ ಶೈಲಿಯಲ್ಲಿ ನಾವು ‘ಮಾರ್ಗ’ ಮತ್ತು ‘ದೇಸಿ’ಯ ಪರಿಕಲ್ಪನೆಯನ್ನು ಕುರಿತು ಆಲೋಚಿಸಬಹು ದಾಗಿದೆ. ಕನ್ನಡವನ್ನು ರಾಜಗದ್ದುಗೆಗೆ ಏರಿಸಲು ಪ್ರಯತ್ನಿಸಿದ ಕದಂಬರು ಹಲ್ಮಿಡಿ ಶಾಸನದಲ್ಲಿ ಸಂಸ್ಕೃತ-ಕನ್ನಡ ಶೈಲಿಯನ್ನು ಬಳಸಿ, ಅದಕ್ಕೊಂದು ‘ಮಾರ್ಗ’ ಸ್ವರೂಪವನ್ನು ನೀಡಿದರು. ಅದರಂತೆ ಸ್ಥಳೀಯ ಆಡಳಿತದಲ್ಲಿ ಜನಸಾಮಾನ್ಯರು ಪಾಲ್ಗೊಳ್ಳಲು ಅನುಕೂಲವಾಗುವ ಆಡುಭಾಷೆಯನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಇದರಿಂದಾಗಿ ಅವರ ಆಳ್ವಿಕೆಯ ಕಾಲದಲ್ಲಿ ‘ಮಾರ್ಗ’ ಶೈಲಿಯ ಶಾಸನಗಳು ಸೃಷ್ಟಿಯಾದಂತೆ ‘ದೇಸಿ’ ಶೈಲಿಯ ಶಾಸನಗಳೂ ಹುಟ್ಟಿಕೊಂಡವು. ಈ ಪ್ರಕ್ರಿಯೆ ಸಮಾನಾಂತರವಾಗಿ ಮುಂದೆ ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮುಂತಾದ ವಂಶಗಳ ಅರಸರ ಆಳ್ವಿಕೆಯ ಕಾಲದಲ್ಲಿಯೂ ಮುಂದುವರೆಯಿತು. ಇವುಗಳ ಸ್ವರೂಪ, ಲಕ್ಷಣಗಳನ್ನು ಕುರಿತು ಇನ್ನೂ ಆಳವಾದ ಅಧ್ಯಯನದ ಆವಶ್ಯಕತೆ ಇದ್ದು, ಪ್ರಸ್ತುತದಲ್ಲಿ ಮುಖ್ಯವಾಗಿ ಕದಂಬರ ಶಾಸನ ಗಳನ್ನು ಹಾಗೂ ೫-೬ನೇ ಶತಮಾನದ ಕೆಲವು ಶಾಸನಗಳನ್ನು ಇಟ್ಟುಕೊಂಡು ಅವುಗಳ ಸ್ವರೂಪವನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಮೊದಲು ಶಾಸನ ಪಾಠವನ್ನು ನೋಡೋಣ:

. ಹಲ್ಮಿಡಿ ಶಾಸನ ಪಾಠ

೧.  ಜಯತಿ ಶ್ರೀ ಪರಿಷ್ವಙ್ಗ ಶಾಙ್ಗ (ಮ್ಯಾನತಿ) ರಚ್ಯುತ : ದಾನವಾ ಕ್ಷ್ಣೋರ್ಯುಗಾನ್ತಾಗ್ನಿ: (ಶಿಷ್ಟಾನಾನ್ತು) ಸುದರ್ಶನ :
೨. ನಮಃ ಶ್ರೀ ಮತ್ಕದಂಬಪನ್ತ್ಯಾಗ ಸಂಪನ್ನನ್ಕಲಭೋರ (ನಾ) ಅರಿಕ
೩. ಕುಸ್ಥ ಭಟ್ಟೋರನಾಳೆ ನರಿದಾವಿ (ಳೆ) ನಾಡುಳ್ ಮೃಗೇಶನಾ
೪. ಗೇನ್ದ್ರಾಭೀಳರ್ಭ್ಭಟಹರಪ್ಟೊರ್ ಶ್ರೀ ಮೃಗೇಶನಾಗಾಹ್ವಯ
೫. ರಿರ್ವ್ವರಾ ಬಟರಿಕುಲಾಮಲದ್ಯೋಮ ತಾರಾಧಿನಾಥನ್ನಳಪ
೬. ಗಣಪಶುಪತಿ ಮಾದಕ್ಷಿಣಾಪಥ ಬಹುಶತಹವನಾ –
೭. ಹವದು(ಳೆ) ಪಶುಪ್ರದಾನ ಶೌರ್ಯೋದ್ಯಮ ಭರಿತೋ (ನ್ದಾನ) ಪ –
೮. ಶುಪತಿಯನ್ದು ಪೊಗೞೆಪ್ಪೊಟ್ಟಣ ಪಶುಪತಿ
೯. ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ
೧೦. ಸುತನ್ಗೆ ಸೇನ್ದ್ರಕ ಬಣೋಭಯದೇಶದಾ ವೀರಾಪುರುಷ ಸಮಕ್ಷ
೧೧. ದ ಕೇಕಯಪಲ್ಲವರಂ ಕಾದೆಱೆದು ಪೆತ್ತಜಯನಾ ವಿಜ
೧೨. ಅರಸನ್ಗೆ ಬಾಳ್ಗೞ್ಚು ಪಲ್ಮಡಿಉಂ ಮೂಱಿವಳ್ಳಿಉಂಕೊ-
೧೩. ಟ್ಟಾರೆ ಬಟಾರಿ ಕುಲದೊನಳು ಕದಮ್ಬನ್ಕಳ್ದೋನ ಮಹಾಪಾತಕನ
೧೪. ಇರ್ವ್ವರುಂ ಸೞ್ಬಙ್ಗದರ್ ವಿಜಾರಸರುಂ ಪಲ್ಮಡಿಗೆ ಕುಱು
೧೫. ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್ ಸ್ವಸ್ತಿ
೧೬. ಭಟ್ಟರ್ಗ್ಗೀಗೞ್ದಿ ಒಡ್ಡಲಿ ಆಪತ್ತೊನ್ದಿ ವಿಟ್ಟಾರಕರ
(ಶಾಸನ ಸಂಗ್ರಹ, ೧೯೮೨, ಪು. ೧-೨)

. ಕೆಲಗುಂದ್ಲಿ ಶಾಸನ ಪಾಠ
೧. (ಸ್ವಸ್ತಿಶ್ರೀ) ರವಿವರ್ಮರ್
೨. ನಾಡಾಳ್ ಮಲ್ಲಿಗೆ ಆ
೩. ಅರಸರಾ ಪೆಱೆಯಾ ಅರಸಿಯಾ
೪. ಕೞ () ಗುಜ್ಜೆನಿಯಾಪಡು (ಗಲ್)
೫. ಇನ್ನಿ(ನ್ಸಿ) ದಾನ್ನೞಿವೋರ್ಪ (ಞ್ಙಪಾ)
೬.  ದಗ  ಸಂಯುಕ್ತರಪ್ಪಾ (ಪ್ಟೊ) (ರ್) (ಕನ್ನಡನುಡಿ, ೧೯೮೩, ಸಂ. ೪೬, ಸಂ. ೨೯)

. ಕಂಪ್ಲಿ ಶಾಸನದ ಪಾಠ :
(ಆರಂಭದ ಕೆಲವು ಸಾಲುಗಳಿಲ್ಲ)
೧. ……… (ಥಿ) (ತೊರ್ಗ್ಗು) ದುಮ್ಬುಲಿಯರಾ
೨. ಧರ್ಮ್ಮಸೇನವರನ್ ಮೋರಿಯವಳ್ಳಿ
೩. ಯನ್ಸರ್ವ್ವಬಾ (ಬಾ) ಧಾ ಪರಿಹಾರ ಕೊಟ್ಟಾ (ನ್)
೪. ಕಮ್ಪಿಲ್ಲಿಯಾದೇವ ಭೋಗಂ ಪಯ್ವೆ
೫. ಯರದತ್ತಿ ಕೆಟ್ಟದನ್ಮಹಾರಾಜನ
೬. ಮಗನ ಜವರ್ಮ್ಮನ್ನಿರಿಸಿದಾನ್
೭. ಧರ್ಮ್ಮಸೇನವರನ್ಕಾದನ್ ಇದನ್ಕಾದೊ
೮. ನ್ಗೆ(ನ್ಗ)ಶ್ವಮೇಧದ ಫಲಂ ಮಕ್ಕು
೯. ಇದನ್ಕೆಡಿಸಿದೊ ನ್ವಾರಣಾಸಿಯ
೧೦. ನಳಿದ ಪಾಪಮಕ್ಕು
(ಪ್ರ. ಕ. ೬೬-೪, ೧೯೮೫)

ಭೋಗಿವರ್ಮನ ತಗರೆಯ ಶಾಸನ (ಕ್ರಿ.ಶ. ೬ನೇ ಶತಮಾನ)ದ ಕೊನೆಯ ಸಾಲುಗಳು :

ಕಿಱು ಕೂಡಲೂರ ಮೂವತ್ತಾ ಎರಡು ಸರ್ವ್ವ ಪರಿಹಾರಂ
ಓಂ ತಗರೆಯಾ | ಪೆರ್ಗ್ಗೆಪೆಯಾ ಮೊದಲ್ಗೆ | ಱೆ ಮೂವತ್ತಾ
ಎರಡುಂ ಸರ್ವ್ವ ಪರಿಹಾರಂ ವಡಗೈಗೇರಿ ಮನೆಭನಂ
ಭೂಮಿದಾನಂ | ಕೊಟ್ಟಂ …. ಇದಾನ
ಕಾದೊಂಗೆ | ಕಿೞ್ತುವೂರಲಿವಿಣ್ಣರ್ಗ್ಗೆ ಕೊಟ್ಟೋ(ನ)ಪರಿಯ
ಡಿಗಳೆ ಕಿಱುಕೂಡಲೂರಂ ಕೆಱೆಯ ಕೆೞಗು ಸಮಭಗ
ಸಕ್ಷಿಮಣಿಯ ಭಳ್ಳವಿಯಂ ಅಮೂಲ
(ಮೈ.ಆ.ರಿ., ೧೯೧೮, ಪು. ೩೫)

ಶಾಸನಗಳಲ್ಲಿ ‘ಮಾರ್ಗ’ ಮತ್ತು ‘ದೇಸಿ’ಯ ಕಲ್ಪನೆಯನ್ನು, ಬರವಣಿಗೆಗಾಗಿ ಬಳಸುವ ಕಲ್ಲಿನ ಸ್ವರೂಪದಿಂದಲೇ ಪ್ರಾರಂಭಿಸಬಹುದು. ‘ಮಾರ್ಗ’ ಶೈಲಿಯ ಶಾಸನಕಲ್ಲುಗಳು ಸಪಾಟುಗೊಳಿಸಲ್ಪಟ್ಟು, ಒಂದು ನಿರ್ದಿಷ್ಟ ಆಕಾರವನ್ನು ಪಡೆದುಕೊಂಡಿದ್ದರೆ, ‘ದೇಸಿ’ ಶೈಲಿಯ ಶಾಸನಗಳು ಒರಟು ಅಥವಾ ಸಮತಟ್ಟಿಲ್ಲದ ಕಲ್ಲು ಹಲಗೆಯ ಮೇಲೆ, ಅದು ಇದ್ದ ರೂಪದಲ್ಲಿಯೇ ಅಂದರೆ, ಯಾವುದೇ ವಿಶಿಷ್ಟ ಸಂಸ್ಕಾರಕ್ಕೆ ಒಳಪಡದೇ ಲಿಪಿಕಂಡರಣೆಯನ್ನು ಹೊಂದಿರುತ್ತವೆ. ಕದಂಬರ ಕಾಲದ ಕನ್ನಡ ಮಾರ್ಗ ಶೈಲಿಗೆ ಹಲ್ಮಿಡಿಶಾಸನ ಉದಾಹರಣೆ ಯಾದರೆ, ‘ದೇಸಿ’ಗೆ ಉಳಿದೆರಡು ಕನ್ನಡ ಶಾಸನಗಳನ್ನು ಹೆಸರಿಸಬಹುದಾಗಿದೆ. ಜೊತೆಗೆ, ಶಾಸನಗಳಲ್ಲಿ ಕಂಡುಬರುವ ಶಿಲ್ಪಗಳಲ್ಲಿಯೂ ಸಾಮಾನ್ಯವಾಗಿ ಶೈಲೀಕೃತ ಹಾಗೂ ಜಾನಪದೀಯ ಗುಣಗಳನ್ನು ಗುರುತಿಸಬಹುದಾಗಿದೆ. ಪ್ರಸ್ತುತ ಕದಂಬರ ಕಾಲದ ಹಲ್ಮಿಡಿ ಶಾಸನದಲ್ಲಿ ಸುದರ್ಶನ ಚಕ್ರ ಹಾಗೂ ಮೇಲ್ಗಡೆ ಜ್ಯೋತಿಯ ಚಿತ್ರಣವಿದ್ದರೆ ಕೆಲಗುಂದ್ಲಿ ಶಾಸನದಲ್ಲಿ ಯಾವುದೇ ಶಿಲ್ಪವಿಲ್ಲ; ಕಂಪ್ಲಿ ಶಾಸನದ ಮೊದಲ ಭಾಗ ತುಂಡಾಗಿರುವುದರಿಂದ ನಿರ್ಧಾರವಾಗಿ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಆದರೆ  ಮುಂದಿನ ರಾಜವಂಶಗಳ ಕಾಲದ ಕನ್ನಡ ಶಾಸನಗಳಲ್ಲಿ ಕೆಲವೆಡೆ ‘ದೇಸಿ ಶೈಲಿ’ಯನ್ನು ಉಬ್ಬುಶಿಲ್ಪಗಳನ್ನು ಗಮನಿಸ ಬಹುದು.

ಲಿಪಿಕಂಡರಣಿಗೆ ಸಂಬಂಧಿಸಿದಂತೆ ಅಕ್ಷರಗಳ ಪ್ರಮಾಣದಲ್ಲಿ ಅನೇಕ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಈ ದಿಸೆಯಲ್ಲಿ ಕೆಲಗುಂದ್ಲಿ ಮತ್ತು ಕಂಪ್ಲಿ ಶಾಸನಗಳ ಲಿಪಿಯನ್ನು ಕುರಿತು ಸಂಶೋಧಕ ರಘುನಾಥ ಭಟ್ಟರು ಮಾಡಿರುವ ಅಧ್ಯಯನ ಪ್ರಯೋಜನಕಾರಿಯಾಗಿದೆ. ಇಲ್ಲಿ ಕೆಲವು ಮಹತ್ವದ ವಿವರಗಳನ್ನು ಮಾತ್ರ ಅವಲೋಕಿಸಲಾಗಿದೆ. ಬನವಾಸಿ ಕದಂಬರ ಸಂಸ್ಕೃತ ರಾಜಶಾಸನಗಳು ಜ್ಯಾಮಿತಿಯ ವಿನ್ಯಾಸಕ್ಕನುಗುಣವಾಗಿ ಪೇಟಿಕಾಶಿರವುಳ್ಳ ಸುಂದರ ಲಿಪಿಯಲ್ಲಿ ಕಂಡರಿಸಿವೆ. ಇದಕ್ಕೆ ಹೋಲಿಸಿದರೆ, ಅವರ ಕಾಲದ ಕನ್ನಡ ಶಾಸನಗಳ ಲಿಪಿ ಅಷ್ಟೊಂದು ಸುಂದರವೂ ಇಲ್ಲ, ಸಮಪ್ರಮಾಣದಲ್ಲಿಯೂ ಇಲ್ಲ. ಆದರೆ ಹಲ್ಮಿಡಿಶಾಸನ, ಉಳಿದೆರಡು ಶಾಸನಗಳಿಗಿಂತ ಲಿಪಿ ವಿನ್ಯಾಸದಲ್ಲಿ ಹೆಚ್ಚು ಪ್ರೌಢತೆಯನ್ನು ಮೆರೆದಿದೆ ಎಂದಷ್ಟೇ ಹೇಳಬಹುದು. ಕೆಲಗುಂದ್ಲಿ ಹಾಗೂ ಕಂಪ್ಲಿ ಶಾಸನಗಳಲ್ಲಿ ಕಂಡರಿಸಿರುವ ಅಕ್ಷರಗಳ ಗಾತ್ರ ದಲ್ಲಿ ಅಸಮಾನತೆ ಇದೆ. ಕಲ್ಲಿನ ಆಕಾರಕ್ಕೆ ಅನುಗುಣವಾಗಿ ಸಾಲುಗಳ ಉದ್ದಳತೆಯಲ್ಲೂ ವ್ಯತ್ಯಾಸಗಳು ಕಂಡುಬರುತ್ತವೆ. ಕಂಪ್ಲಿ ಶಾಸನದಲ್ಲಿ ಪದಾಂತ್ಯದಲ್ಲಿ ಬರುವ ‘ನ್’ ಅಕ್ಷರ ಉಳಿದವುಗಳಿಗಿಂತ ಚಿಕ್ಕ ಪ್ರಮಾಣದಲ್ಲಿದೆ. ದ್ವಿತ್ವಾಕ್ಷರಗಳೂ ಉಳಿದವುಗಳಿಗಿಂತ ದೊಡ್ಡ ಪ್ರಮಾಣದಲ್ಲಿವೆ. ತಲೆಕಟ್ಟು ಚಿಕ್ಕರೇಖೆಯ ರೂಪದಲ್ಲಿದ್ದು, ಕೆಲವೊಮ್ಮೆ ತುಸುಬಾಗಿದೆ. ಕೆಲಗುಂದ್ಲಿ ಶಾಸನದಲ್ಲಿ ‘ಗ’ ಅಕ್ಷರ ಹಲ್ಮಿಡಿಯ ಶಾಸನದ ‘ಗ’ ಲಿಪಿಯಲ್ಲಿರುವ ಹಾಗೆ ಬೆಳೆದಿಲ್ಲ ಎಂಬುದನ್ನು ಗುರುತಿಸಲಾಗಿದೆ. ಶಾಸನ ಲಿಪಿ ಶೈಲಿಯನ್ನು ಕುರಿತು ಆಳವಾದ ಅಧ್ಯಯನ ನಡೆಸಿರುವ ರಘುನಾಥಭಟ್ಟರು ಲಿಪಿ ಕಂಡರಣಿಯಲ್ಲಿ ‘ಮಾರ್ಗ’ ಮತ್ತು ‘ದೇಸಿ’ ಪರಿಕಲ್ಪನೆಗಳನ್ನು ಹೀಗೆ ವಿವರಿಸಿರುತ್ತಾರೆ; “ಒಂದು ನಿರ್ದಿಷ್ಟ ಕಾಲಘಟ್ಟದ ಲಿಪಿಕಾರರ ವೈಯಕ್ತಿಕ ಕಂಡರಣೆಯ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ, ಕೆಲವು ಕಲಾತ್ಮಕ, ಪರಿಷ್ಕೃತ, ಸುಂದರ ಮಾದರಿಯಲ್ಲಿದ್ದರೆ, (ಇದನ್ನೇ ‘ಮಾರ್ಗ’, ಪಕ್ವ, ಪಳಗಿದ ಎಂಬ ವಿಶಿಷ್ಟ ಅರ್ಥದಲ್ಲಿರಿಸಿದೆ) ಇನ್ನು ಕೆಲವು ಅಷ್ಟೊಂದು ಕಲಾತ್ಮಕವಾಗಿರದ ಗ್ರಾಮೀಣ, ಅಪಕ್ವ, ಮೋಡಿ ಶೈಲಿಯಲ್ಲಿರುತ್ತವೆ. ಇದನ್ನು ‘ದೇಸಿ’, ಗ್ರಾಮ್ಯ, ಪಳಗದ ಶೈಲಿಯೆಂದು (ಸೀಮಿತ ಅರ್ಥದಲ್ಲಿ) ಕರೆಯಬಹುದು. ಶಾಸನರಚನೆ, ಭಾಷೆ, ಛಂದಸ್ಸುಗಳಲ್ಲಿ ಗಮನಿಸುವ ಈ ಬಗೆಯ ವ್ಯತ್ಯಾಸವನ್ನು ಒಂದು ಕಾಲಘಟ್ಟದ ಲಿಪಿ ಶೈಲಿಗಳಲ್ಲೂ ಗಮನಿಸಬಹುದಲ್ಲವೇ? ಪ್ರಾಯಶಃ ಹೀಗೆ ಪರಿಶೀಲಿಸಿದಲ್ಲಿ ಕದಂಬರ ಕಾಲದ ಬಹುತೇಕ ಪೇಟಿಕಾಶಿರವುಳ್ಳ ‘ಪಕ್ವ’ ಲಿಪಿಶೈಲಿ, ಪೇಟಿಕಾಶಿರವಿರದ ಗ್ರಾಮೀಣ, ಸರಳ, ಪಳಗದ ಲಿಪಿಶೈಲಿಗಳಿಗೆ ಇರುವ ವ್ಯತ್ಯಾಸದ ಕಲ್ಪನೆ ಸ್ಪಷ್ಟವಾಗುತ್ತದೆ. ಶ್ರೇಷ್ಠ ಕಲ್ಲುಕುಟಿಗ ಕೆತ್ತಿದ ರಾಜಶಾಸನ ಮತ್ತು ಸಾಮಾನ್ಯ ಲಿಪಿ ಶೈಲಿಗಳಲ್ಲಿ ಈ ಬಗೆಯ ವ್ಯತ್ಯಾಸವನ್ನು ನೋಡಬಹುದು. ಲಿಪಿಶೈಲಿಗೂ ಒಂದು ಸಾಂಸ್ಕೃತಿಕ ಮಹತ್ವವಿದೆ ಎಂಬುದು ಇಲ್ಲಿ ಮುಖ್ಯ ಸಂಗತಿ” (ಕದಂಬ ರವಿವರ್ಮನ ಕೆಲಗುಂದ್ಲಿಶಾಸನ, ಕನ್ನಡ ನುಡಿ, ಸಂ. ೪೬, ಸಂ. ೨೯, ೧೯೮೩, ಅಡಿಟಿಪ್ಪಣಿ ೧೧).

ಮಾರ್ಗಶೈಲಿಯ ಶಾಸನಗಳು ಸಾಮಾನ್ಯವಾಗಿ ದೀರ್ಘವಾಗಿರುತ್ತವೆ. ಅವುಗಳ ಆರಂಭದಲ್ಲಿ ‘ಸ್ವಸ್ತಿ’, ಶಬ್ದದೊಂದಿಗೆ ರಾಜರ ಆಳ್ವಿಕೆಯ ವಿವರ, ಅವರ ಬಿರುದಾವಳಿಗಳು. ನಮೂದಿಸಲ್ಪಟ್ಟಿದ್ದು, ನಂತರ ಘಟನೆಯ ವಿವರಗಳು, ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹೆಸರು, ಭೂಮಿದಾನ ಕೊಟ್ಟಿದ್ದರೆ ಅದರ ಮೇರೆಗಳ ವಿವರಗಳು ಇತ್ಯಾದಿ ಇರುತ್ತವೆ. ಕೊನೆಯಲ್ಲಿ ಶಾಪಾಶಯವಿರುತ್ತದೆ. ಹಲ್ಮಿಡಿಯ ಶಾಸನ ಸಾಕಷ್ಟು ದೀರ್ಘವಾಗಿದ್ದು, ಅದರ ವಸ್ತು-ವಿಷಯ ನಿರೂಪಣೆ ‘ಮಾರ್ಗ’ ಶೈಲಿಯ ಸ್ವರೂಪವನ್ನು ವ್ಯಕ್ತಪಡಿಸುವಂತಿದ್ದರೆ, ಕೆಲಗುಂದ್ಲಿ, ಕಂಪ್ಲಿ ಶಾಸನಗಳು ‘ದೇಸಿ’ ಶಾಸನಗಳಿಂತಿವೆ. ಹಲ್ಮಿಡಿ ಶಾಸನಕ್ಕೆ ಹೋಲಿಸಿದಲ್ಲಿ ಇವು ಅತಿ ಚಿಕ್ಕವಾಗಿದ್ದು, ನೇರವಾಗಿ ವಿಷಯವನ್ನು ಪ್ರಸ್ತಾಪಿಸುತ್ತವೆ. ಕೆಲವೇ ವಾಕ್ಯಗಳಲ್ಲಿ ತಿಳಿಸಬೇಕಾದದ್ದನ್ನು ತಿಳಿಸಿ, ಕೊನೆಯಲ್ಲಿ ಸಂಪ್ರದಾಯದಂತೆ ಶಾಪಾಶಯದೊಂದಿಗೆ ಮುಕ್ತಾಯಗೊಳ್ಳುತ್ತವೆ. ಇಂಥ ಶಾಸನಗಳಲ್ಲಿ ವರ್ಣನೆ, ಹೊಗಳಿಕೆಗಳು ತೀರ ಕಡಿಮೆ ಪ್ರಮಾಣದಲ್ಲಿರುತ್ತವೆ. ಆರಂಭದ ಸ್ವಸ್ತಿ ಮತ್ತು ಕೊನೆಯ ಶಾಪಾಶಯಗಳಲ್ಲಿ ಮಾತ್ರ ಸಾಂಪ್ರದಾಯಿಕ ಅನುಕರಣೆ ಅವುಗಳಲ್ಲಿರುತ್ತದೆ. ಭಾಷೆಯ ದೃಷ್ಟಿಯಿಂದ ‘ಮಾರ್ಗ’ ಶೈಲಿಯಲ್ಲಿ ಸಮಸಂಸ್ಕೃತ ಶಬ್ದಗಳೊಂದಿಗೆ ಕನ್ನಡ ಸಂಧಿ, ಸಮಾಸಗಳು ಹೆಣೆಯಲ್ಪಟ್ಟು ಕನ್ನಡ ಪ್ರೌಢ ಭಾಷೆಯಾಗಿ ಮಾರ್ಪಡುತ್ತದೆ. ಅದೇ ‘ದೇಸಿ’ ಶೈಲಿಯ ಶಾಸನಗಳು ಆಡು ಮಾತುಗಳಲ್ಲಿಯೇ ನಿರೂಪಿಸಲ್ಪಡುತ್ತವೆ. ಈ ಭಾಷಾ ಬಳಕೆಯಲ್ಲಿ ಪ್ರತಿಷ್ಠೆಯ ಅಂಶ ‘ಮಾರ್ಗ’ಕಾರನಿಗಿದ್ದರೆ, ಜನಸಾಮಾನ್ಯರಿಗೆ ತಿಳಿಯಬೇಕೆಂಬ ಉದ್ದೇಶ, ‘ದೇಸಿ’ ರಚಕನಿಗಿ ರುತ್ತದೆ. ಹಲ್ಮಿಡಿ ಹಾಗೂ ಕಂಪ್ಲಿ ಶಾಸನಗಳು ಮುಖ್ಯವಾಗಿ ದಾನ ಶಾಸನಗಳಾಗಿದ್ದು, ಕೆಲಗುಂದ್ಲಿ ಶಾಸನ, ‘ಸಮಾಧಿ’ ವಿಷಯಕ್ಕೆ ಸಂಬಂಧಿಸಿದೆ. ಶಾಸನದಲ್ಲಿ ದಾನಭೂಮಿಯ ಮೇರೆಗಳನ್ನು ಕನ್ನಡದಲ್ಲಿ ವಿವರಿಸಲಾಗಿದೆ. ದಾನ ಪಡೆದವರಿಗೂ ಹಾಗೂ ಇತರರಿಗೂ ಭೂಮಿಯ ಮೇರೆಗಳು ಸ್ವಷ್ಟವಾಗಿ ತಿಳಿಯಬೇಕು ಎಂಬುದೇ ಇದರ ಉದ್ದೇಶ.

ದಾನ ಶಾಸನದ ಉದ್ದೇಶ, ಜನಸಾಮಾನ್ಯರಿಗೆ ತಿಳಿಯಬೇಕೆಂಬ ಕಾರಣದಿಂದಲೇ ಮುಂದಿನ ಕೆಲವು ಶತಮಾನಗಳಲ್ಲಿ ಸಂಸ್ಕೃತ ದಾನ ಶಾಸನಗಳಲ್ಲಿಯೂ ಕನ್ನಡದಲ್ಲಿ ಮೇರೆಗಳನ್ನು ತಿಳಿಸುವ ಕ್ರಮ ಜಾರಿಗೆ ಬಂತು. ಶ್ರೀ ಪುರುಷನ ಕೊಂಡಜ್ಜಿ ಶಾಸನ (ಎಪಿ.ಕ. ೧೬ ಗುಬ್ಬಿ ೭೫), ಹುಳ್ಳೇನಹಳ್ಳಿ ಶಾಸನ (ಮೈ.ಆ.ರಿ. ೧೯೨೭ ನಂ. ೧೧೮), ಕೊಂಡಹಳ್ಳಿ ಶಾಸನ (ಮೈ.ಆ.ರಿ. ೧೯೪೧, ಪು. ೧೨೭), ಮಾರಸಿಂಹನ, ಆಲೂರು ಶಾಸನ (ಮೈ.ಆ.ರಿ. ೧೯೨೪ ನಂ. ೮೦), ದೇವನೂರು ಶಾಸನ (೧೯೨೭ ನಂ. ೧೨೨) ಮುಂತಾದವನ್ನು ಹೆಸರಿಸಬಹುದು. ಇದು ‘ದೇಸಿ’ ಪ್ರಚುರತೆಯನ್ನು ಪಡೆಯತೊಡಗಿದ ಮೊದಲ ಹಂತವನ್ನು ನಿರ್ದೇಶಿಸುತ್ತದೆಂದು ಭಾವಿಸಬಹುದು.

ಹಲ್ಮಿಡಿಯ ಶಾಸನದ ನಂತರದ ತಮಟುಗಲ್ಲು ಶಾಸನದಲ್ಲಿ (ಕ್ರಿ.ಶ. ೫೦೦) ನಮಗೆ ಮತ್ತೆ ಸಂಸ್ಕೃತ ಭೂಯಿಷ್ಠವಾದ ‘ಮಾರ್ಗ’ಶೈಲಿಯ ಕನ್ನಡ ಭಾಷೆ ನೋಡ ಸಿಗುತ್ತದೆ.

“ಫಣಿಮಣಿ ಅನ್ತು ಭೋಗಿ ಫಣದುಳ್ಮಣಿ ವಿಲ್ಮನದೋನ್
ರಣಮುಖದುಳ್ಳೆ ಕೋಲನರಿಯರ್ಕ್ಕು ಮುನಿನ್ಯಗುಣನ್
ಪ್ರಣಯಿಜನಕ್ಕೆ ಕಾಮನನಿತೋತ್ಪಲ ವರ್ಣ್ಣನವನ್
ಗುಣಮಧುರಾನ್ಕ ದಿವ್ಯಪುರುಷನ್ಪುರುಷಪ್ರವರನ್”
(ಶಾಸನ ಸಂಗ್ರಹ, ೧೯೮೨, ಪು. ೨.)

ಆದರೆ ಸಿರಿಗುಂದ ಶಾಸನದಲ್ಲಿ (ಕ್ರಿ.ಶ. ೬ನೇ ಶತಮಾನ) ಆರಂಭದ ಸ್ವಸ್ತಿಬರಹ ಮತ್ತು ಅಂತ್ಯದ ಶಾಪಾಶಯಗಳನ್ನು ಬಿಟ್ಟರೆ, ಮಿಕ್ಕೆಲ್ಲ ಅಚ್ಚಕನ್ನಡ ‘ದೇಸಿ’ಯಲ್ಲಿದೆ.

“ಸ್ವಸ್ತಿ ಶ್ರೀ ನಿವ್ವನೀತರಾಕಿಱಿಯಾಮಗನ್ದಿರ್ ಕದುವಟ್ಟಿಯರಿನ್ದಮ್
ಪಲ್ಲವರಸರಿನ್ದ ಕೊಗೊಣ್ಡಿಪದಸೂದಿ (ಡಿ)ದೂ
ರಾ ಅನುಜೊ ಇನ್ದು ಕನಲ್ಗೊಳಿ ನನ್ದಿಯಾಲರಾವಿ
ಟ್ಟದು ಪಡೆವೈಲಾಮು ಅಸಮಪಾಲುಮ್
ಇದಾನಱಿದೋನ್ನಾಡನಱಿದೋನ್ ಪಞ್ಚಮಹಾಪತಗಮಕ್ಕುಂ”
(ನೇಗಿನಹಾಳ ಎಂ.ಬಿ. ೧೯೯೯, ಪು. ೪೫)

ಆರನೆಯ ಶತಮಾನದ ಮಂಗಲೇಶನ ಬಾದಾಮಿ ಶಾಸನವೂ (ಕ್ರಿ.ಶ. ಸು. ೬೦೦೦) ‘ದೇಸಿ’ ಶೈಲಿಗೆ ಒಂದು ಉತ್ತಮ ನಿದರ್ಶನವಾಗಿದೆ.

“ಸ್ವಸ್ತಿ ಶ್ರೀ ಮತ್‌ಪ್ರಿಥಿವೀವಲ್ಲಭ ಮಂಗಲೀಸನಾಕಲ್ಮನೆಗೆ
ಇತ್ತೊದು ಲಂಜಿಗೇಸರಂ ದೇವರ್ಕ್ಕೆ ಪೂನಿಱುವಮಾಲ
ಕಾರನ್ಗೆ ಅರ್ದವಿಸದಿ ಇತ್ತೋದಾನೞಿವೊನ್ ಪಞ್ಚಮಹಾ
ಪಾತಕನಕ್ಕುಂ………ಏೞನೆಯಾ ನರಕದಾಪುೞುಅಕುಂ”
(ಶಾಸನ ಸಂಗ್ರಹ, ೧೯೮೨, ಪು. ೩)

ಹೀಗೆ ಒಂದೆಡೆ ಸಂಸ್ಕೃತ ಭೂಯಿಷ್ಠವಾದ ಕನ್ನಡ ಗದ್ಯ-ಪದ್ಯಗಳು, ಮತ್ತೊಂದೆಡೆ ಅಚ್ಚಕನ್ನಡ ಭಾಷೆ, ಸಮಾನಾಂತರವಾಗಿ ಬೆಳೆಯುತ್ತ ಬಂದುದನ್ನು ಕನ್ನಡದ ಆರಂಭ ಘಟ್ಟದ ಈ ಕೆಲವು ಶಾಸನಗಳು ತೋರ್ಪಡಿಸುತ್ತವೆ. ಈ ಪ್ರವೃತ್ತಿ ಮುಂದೆಯೂ ಬೆಳೆದು ಬಂದುದನ್ನು ಮುಂದಿನ ಕಾಲಘಟ್ಟದ ಶಾಸನಗಳಲ್ಲಿಯೂ ಗುರುತಿಸಬಹುದು. (ಕಂದಬರ ಕಾಲಘಟ್ಟಕ್ಕೆ ಸೀಮಿತಗೊಳಿಸಿ ಈ ಅಧ್ಯಯನ ಮಾಡಲಾಗಿದೆ).

ಸಹಾಯಕ ಗ್ರಂಥಗಳು

೧. ಅಣ್ಣಿಗೇರಿ ಎ.ಎಂ. ಮತ್ತು ಆರ್. ಶೇಷಶಾಸ್ತ್ರಿ, ೧೯೮೨, ಶಾಸನ ಸಂಗ್ರಹ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೨. ಕಲಬುರ್ಗಿ ಎಂ.ಎಂ., ೧೯೭೩, ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೩. ನೇಗಿನಹಾಳ ಎಂ.ಬಿ., ೧೯೮೨, ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪. ನೇಗಿನಹಾಳ ಎಂ.ಬಿ., ೧೯೯೯, ನೇಗಿನಹಾಳ ಪ್ರಬಂಧಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೫. ಕನ್ನಡನುಡಿ, ಸಂ. ೪೬, ಸಂ. ೨೯, ೧೯೮೩.

೬. ಪ್ರಬುದ್ಧ ಕರ್ನಾಟಕ ಸಂ. ೬೬, ೧೯೮೫.

. ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್ (ಮೈ..ರಿ), ೧೯೧೮.

 


* (ಗ್ರಂಥದ ತಲೆ ಬರಹದಲ್ಲಿಯೇ (ಕವಿರಾಜಮಾರ್ಗ) ‘ಮಾರ್ಗ’ ಶಬ್ದವಿದೆ. ಇದನ್ನು ಕವಿಗಳ ರಾಜಮಾರ್ಗ ಅಥವಾ ಕವಿರಾಜನ ಮಾರ್ಗ ಎಂದೂ ಅರ್ಥೈಸಬಹುದಾಗಿದೆ. ಮುಂದೆ ‘ದಕ್ಷಿ ಣೋತ್ತರ ಮಾರ್ಗ’ ಪ್ರಸ್ತಾಪ ಬರುತ್ತದೆ. ಈ ಸಂದರ್ಭದಲ್ಲಿ ನೀಡಿರುವ ಉದಾಹರಣೆಗಳನ್ನು ನೋಡಿದರೆ, ಶಬ್ದಗಳ ವಿಕಲ್ಪ ರೂಪಗಳನ್ನು ಆಧಾರವಾಗಿಟ್ಟುಕೊಂಡು ದಕ್ಷಿಣ, ಉತ್ತರ ಮಾರ್ಗಗಳನ್ನು ಗುರುತಿಸಿದ್ದು ಕಂಡುಬರುತ್ತದೆ. ಸಮಸಂಸ್ಕೃತ ಪದಗಳನ್ನು ಬಳಸಿ ರಚಿಸುವ, ಕನ್ನಡ ಸಾಹಿತ್ಯ ಶೈಲಿಗೂ ‘ಮಾರ್ಗ’ ಎಂದು ಕರೆಯಲಾಗಿದೆ. ಹೀಗೆ ‘ಕವಿರಾಜಮಾರ್ಗ’ದಲ್ಲಿ ‘ಮಾರ್ಗ’ ಎನ್ನುವ ಶಬ್ದವನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗಿದೆ.)