ಕರ್ನಾಟಕದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಶಾಸನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಜಟಿಂಗರಾಮೇಶ್ವರ, ಸಿದ್ಧಾಪುರ, ರಾಯಚೂರು ಜಿಲ್ಲೆಯ ಮಸ್ಕಿ, ಕೊಪ್ಪಳ ಜಿಲ್ಲೆಯ ಗವಿಮಠ, ಪಾಲ್ಕಿಗುಂಡುಗಳಲ್ಲಿ ಅಶೋಕನ ಲಘು ಶಾಸನಗಳು ದೊರಕಿವೆ. ಇವುಗಳ ಕಾಲ ಕ್ರಿ.ಪೂ. ೩ನೆಯ ಶತಮಾನ. ಈ ಶಾಸನಗಳಿಂದ ಅಂದಿನ ಕರ್ನಾಟಕದ ವಿಶೇಷವಾದ ಮಾಹಿತಿ ಏನೂ ತಿಳಿದುಬರುವುದಿಲ್ಲವಾದರೂ ಅವುಗಳ ಪಾಠಗಳು ಭಾಷಾಭ್ಯಾಸಿಗಳಿಗೆ ತುಸುಮಟ್ಟಿಗೆ ಆಸಕ್ತಿದಾಯಕವಾಗಿವೆ. ಮಸ್ಕಿಯ ಲಘುಶಿಲಾಶಾಸನದಲ್ಲಿ ‘ದೇವಾನಾಂಪ್ರಿಯ ಪ್ರಿಯದರ್ಶಿ’ಯನ್ನು ಸ್ಪಷ್ಟವಾಗಿ ಅಶೋಕನೆಂದು ಹೆಸರಿಸಿರುವುದೇ ಒಂದು ಮಹತ್ವದ ಸಂಗತಿ.

ಭರತಖಂಡದ ಶಾಸನ ಭಾಷೆ ಮೂಲತಃ ಪ್ರಾಕೃತವಾಗಿದ್ದು ಆ ಮೇರೆಗೆ ಕರ್ನಾಟಕದಲ್ಲಿ ಈವರೆಗೆ ೧೧೩ ಪ್ರಾಕೃತ ಶಾಸನಗಳು ದೊರೆತಿವೆ. ಆದ್ದರಿಂದ ಕ್ರಿ.ಶ. ೪ನೆಯ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ ಬನವಾಸಿ ಕದಂಬ ಮನೆತನದ ಮಯೂರ ಶರ್ಮನ ಆಳ್ವಿಕೆಯ ಚಂದ್ರವಳ್ಳಿ ಶಾಸನದವರೆಗಿನ ಕಾಲವನ್ನು ಶಾಸನಗಳ ಭಾಷೆಯ ದೃಷ್ಟಿಯಿಂದ “ಪ್ರಾಕೃತ ಯುಗ”ವೆಂದು ಕರೆಯಬಹುದು. ಬನವಾಸಿಯಲ್ಲಿ ದೊರೆತಿರುವ ನಾಗರಕಲ್ಲಿನ ಶಾಸನ (ಪ್ರ.ಕ. ೫೧-೩), ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿ ದೊರೆತ ಪಲ್ಲವ ಶಿವಸ್ಕಂದ ವರ್ಮನ ತಾಮ್ರಶಾಸನ (ಎಪಿ.ಇಂ.XXXVII) ಹಾಗೂ ಗುಲಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ದೊರೆತ ೪೦ಕ್ಕೂ ಮಿಕ್ಕಿದ ಬ್ರಾಹ್ಮಿಲಿಪಿಯ ಪ್ರಾಕೃತ ಶಾಸನಗಳನ್ನೂ ಇಲ್ಲಿ ಉಲ್ಲೇಖಿಸ ಬಹುದು.

ಆಡಳಿತವು ಬದಲಾದಂತೆ, ದಕ್ಷಿಣ ಭಾರತದ ಇತರ ಪ್ರಾಂತಗಳಂತೆಯೇ ಕರ್ನಾಟಕ ದಲ್ಲೂ ಕ್ರಿ.ಶ. ೪-೫ನೆಯ ಶತಮಾನದ ಸಂಧಿಕಾಲದಲ್ಲಿ ಪ್ರಾಕೃತವು ಹಿಂದೆ ಸರಿದು, ಸಂಸ್ಕೃತಕ್ಕೆ ಎಡೆಮಾಡಿಕೊಟ್ಟಿತು. ಇದಕ್ಕೆ ನಿದರ್ಶನವಾಗಿ ಹಿರೇಹಡಗಲಿ ತಾಮ್ರಶಾಸನದ ಕೊನೆಯಲ್ಲಿ ಕಂಡುಬರುವ ಸಂಸ್ಕೃತ ಮಂಗಳ ವಾಕ್ಯ, ಆ ಶಾಸನದ ಮುದ್ರೆಯ ಮೇಲಿನ ಸಂಸ್ಕೃತ ಆಲೇಖ್ಯ ಹಾಗೂ ಕದಂಬ ಮಯೂರಶರ್ಮನ ಆಳ್ವಿಕೆ ಕಾಲದ ಮಳವಳ್ಳಿ ಶಾಸನ(ಪ್ರ.ಕ.೫೧-೩)ದ ಕೊನೆಯಲ್ಲಿ ಕಂಡುಬರುವ ಸಂಸ್ಕೃತ ಮಂಗಳ ವಾಕ್ಯಗಳನ್ನು ಹೇಳಬಹುದು. ಇದಕ್ಕೆ ಮುಖ್ಯಕಾರಣ ಔತ್ತರೇಯರ ಅಧಿಕಾರ ಪೂರ್ಣ ತಪ್ಪಿ ಸ್ಥಳೀಯರ ಕೈಗೆ ಆಡಳಿತ ಹಸ್ತಾಂತರಗೊಂಡುದೇ ಆಗಿರಬಹುದು. ಅವರ ಭಾಷೆ ಇಲ್ಲಿನ ಜನರಿಗೆ ಪರಕೀಯವೆನಿಸಿದ್ದರಿಂದ ಹೀಗಾಗಿರಬೇಕು. ಕ್ರಿ.ಶ. ೪ನೆಯ ಶತಮಾನದಲ್ಲಿ ಮಯೂರ ಶರ್ಮನ ಮೊಮ್ಮಗ ಕಾಕುಸ್ಥವರ್ಮನ ಕಾಲದಿಂದ ಕರ್ನಾಟಕದ ಶಾಸನಗಳಲ್ಲಿ ಸಂಸ್ಕೃತವು ಬಳಕೆಯಾಗತೊಡಗಿ, ಅದು ಕೊನೆಯತನಕವೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿತು. ಮೊದಮೊದಲು ದಾನ ಕೊಡಲಾದ ಭೂಮಿಯ ಮೇರೆಗಳನ್ನೂ ದಾನದ ವಿವರಗಳನ್ನೂ ಸಂಸ್ಕೃತದಲ್ಲಿಯೇ ವಿವರಿಸಲಾಗುತ್ತಿದ್ದಿತು. ಆದರೆ ಅದು ಜನ ಸಾಮಾನ್ಯರಿಗೆ ಅರ್ಥವಾಗದ ಕಾರಣ ಆ ಭಾಗವನ್ನು ದೇಶಿ ರೂಪದಲ್ಲಿ ಬರೆಯತೊಡಗಿದರು. ಇದನ್ನೇ ‘ಲಿಖ್ಯತೇ ದೇಶ ಭಾಷಾಯಾ’ ಎಂದು ಸೂಚಿಸಿರುವಂತಿದೆ. ಹೀಗಾಗಿ ಕನ್ನಡ ಪ್ರಾಂತ್ಯಗಳ ಶಾಸನಗಳಲ್ಲಿ ದಾನ ಭಾಗವನ್ನು ವಿವರಿಸಲು ಕನ್ನಡ ಭಾಷೆಗೆ ಅವಕಾಶ ದೊರೆಯಿತು.

ಕರ್ನಾಟಕದಲ್ಲಿ ದೊರೆತ ಮೊಟ್ಟಮೊದಲ ಕನ್ನಡ ಶಾಸನ ಹಲ್ಮಿಡಿ ಶಾಸನ. ಲಿಪಿಶಾಸ್ತ್ರದ ದೃಷ್ಟಿಯಿಂದ ಕ್ರಿ.ಶ. ೫ನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದುದೆಂದು ನಿರ್ಧರಿಸಲಾಗಿದೆ. ಈ ಶಾಸನವು ಒಟ್ಟು ೧೬ ಸಾಲು, ೬ ವಾಕ್ಯಗಳನ್ನೊಳಗೊಂಡು ೩ ದಾನದ ವಿಷಯಗಳನ್ನೊಳ ಗೊಂಡಿದೆ. ೧ನೆಯ ಸಾಲಿನಲ್ಲಿ ಅಚ್ಯುತನಿಗೆ ಜಯವಾಗಲಿ ಎಂಬ ಸ್ತುತಿ ವಾಕ್ಯವಿದೆ. ೧ನೆಯ ದಾನ ವಿಷಯವನ್ನು ಹೇಳುವ ೨-೧೩ ಸಾಲುಗಳನ್ನೊಳಗೊಂಡಿದೆ. ೧-೪ನೆಯ ವಾಕ್ಯಗಳು ನರಿದಾವಿಳೆನಾಡಿನ ಮೃಗೇಶ ಮತ್ತು ನಾಗರು ವಿಜ ಅರಸನಿಗೆ ಪಲ್ಮಡಿ ಮತ್ತು ಮೂೞಿವಳ್ಳಿ ಯನ್ನು ಬಾಳ್ಗಚ್ಚಾಗಿ ನೀಡಿದುದನ್ನು ಹೇಳುತ್ತವೆ. ೨ನೆಯ ಸಾಲಿನಲ್ಲಿರುವ ೫ನೆಯ ವಾಕ್ಯ ಮೇಲಿನ ಅಧಿಕಾರಿಗಳಿಬ್ಬರೂ ಮತ್ತು ವಿಜ ಅರಸರು ಪಲ್ಮಿಡಿಗೆ ಮತ್ತು ಕುಱುಮ್ಬಿಡಿಯನ್ನು ದಾನವಿತ್ತುದಾಗಿ ಹೇಳಿದೆ. ೧೬ನೆಯ ಸಾಲು ಮತ್ತು ೬ನೆಯ ವಾಕ್ಯದಲ್ಲಿರುವ ೩ನೆಯ ದಾನಶಾಸನ ಪತ್ತೊಂದಿಯೆಂಬ ತೆರಿಗೆಯನ್ನು ದಾನಬಿಟ್ಟುದಾಗಿ ಹೇಳಿದೆ.

ಪಂಡಿತರು ಇದನ್ನು ಮೂಲವಾಗಿಟ್ಟುಕೊಂಡು, ಇಲ್ಲಿಂದ ಮುಂದೆ ಬಂದ ಕನ್ನಡ ಶಾಸನಗಳನ್ನು ಭಾಷಿಕವಾಗಿ ಪೂರ್ವದ ಹಳಗನ್ನಡ (ಕ್ರಿ.ಶ. ೪೫೦-೮೦೦), ಹಳಗನ್ನಡ (ಕ್ರಿ.ಶ. ೮೦೦-೧೦೦೦), ನಡುಗನ್ನಡ (ಕ್ರಿ.ಶ. ೧೦೦೦-೧೯೦೦) ಎಂದು ವಿಭಜಿಸಲು ಪ್ರಯತ್ನಿಸಿದ್ದಾರೆ.

ಪೂರ್ವದ ಹಳಗನ್ನಡದಲ್ಲಿ ಹಳಗನ್ನಡದಿಂದ ಭಿನ್ನವಾದ ಹಲವಾರು ವಿಭಕ್ತಿ ಪ್ರತ್ಯಯ ಗಳು, ಶಬ್ದರೂಪಗಳು, ವಾಕ್ಯ ವಿಶೇಷಗಳು ಗೋಚರಿಸುತ್ತಿವೆ. ಅವನ್ನು ಈ ರೀತಿ ಗುರುತಿಸಲಾಗಿದೆ.

. ದ್ವಿತೀಯಾ ವಿಭಕ್ತಿ ಪ್ರತ್ಯಯ ಅನ್>ಆನ್
೧. ಪ್ರಾಸಾದಾಂತರಮಾನ್ ವಿಚಿತ್ರಕನಕ ಪ್ರಜ್ವಲ್ಯದಿನ ಮಿಕ್ಕುದಾನ್
೨. ಅದಾನ್ ಅಳಿವೊನ್ಗೆ ಮಹಾಪಾತಕಮ್ – ಹಲ್ಮಿಡಿ ೪೫೦
೩. ಅವರ ಸ್ವರ್ಗಾಗ್ರಮಾನೇರಿದಾರ್ – ಶ್ರ.ಬೆ. ೭೦೦

. ಷಷ್ಟಿ >
೧. ಕಲಭೋರನಾ – ಹಲ್ಮಿಡಿ ೪೫೦
೨. ಏಳನೆಯಾ ನರಕದಾ ಪುಳ ಅಕ್ಕುಂ – ಬಾದಾಮಿ ಶಾಸನ ೭೫೭

. ಸಪ್ತಮಿ
೧. ನಾಡುಳ್, ಅಹವದುಳ್ – ಹಲ್ಮಿಡಿ
೨. ಕಳ್ವೊಪ್ಪಿನಾ, ವೆಟ್ಟದುಳ್ – ಶ್ರ.ಬೆ. ೭೦೦
‘ಎ’ ಮತ್ತು ‘ಅಲಿ’ಗಳೂ ಸಪ್ತಮಿ ಪ್ರತ್ಯಯಗಳಾಗಿವೆ. ಉದಾ. ಸಮಕ್ಷಮದೆ, ಒಡ್ಡಲಿ (ಹಲ್ಮಿಡಿ).

. ಆಖ್ಯಾತ ಪ್ರತ್ಯಯ
೧. ಬಟಾರಿಕುಲದೊನ್ – ಹಲ್ಮಿಡಿ
೨. ವಿಲ್ಮನದೊನ್ – ತಮಟಕಲ್ಲು
೩. ನಂದಿಸೇನಮುನಿವರನ್ ದೇವಲೋಕಕ್ಕೆ ಸಂದಾನ್ – ಶ್ರವಣಬೆಳಗೊಳ.
೪. ಕೊಟ್ಟಾರ್ – ಹಲ್ಮಿಡಿ

೫. ಪ್ರಕೃತಿಗಳಿಗೆ ಸಮುಚ್ಚಯದ “ಉಂ” ಪ್ರತ್ಯಯ ಸೇರುವಾಗ ಅಲ್ಲಿ ವಿಸಂಧಿಯಾಗಿರುವು ದನ್ನು ಕಾಣುತ್ತೆವೆ
ಪಲ್ಮಿಡಿ ಉಂ, ಮುಳವಳ್ಳಿಉಂ ಹಲ್ಮಿಡಿ
ಇದು ಪೂರ್ವದ ಹಳಗನ್ನಡದ ಒಂದು ಲಕ್ಷಣವೇ ಆಗಿದೆ.

೬. ಅನುಸ್ವಾರಕ್ಕೆ ಬದಲಾಗಿ ಬಳಸುವ ನಕಾರಗಳು ಪೂರ್ವದ ಹಳಗನ್ನಡದಲ್ಲಿವೆ. ಉದಾ. ಕಂದಬಪನ್, ತ್ಯಾಗ ಸಂಪನ್ನನ್ – ಹಲ್ಮಿಡಿ.

೭. ಕೆಲವು ವಿಶಿಷ್ಟ ಶಬ್ದರೂಪಗಳು ಪ್ರಯೋಗವಾಗಿವೆ.
ವಿಟ್ಟಾರ್ (ಬಿಟ್ಟಾರ್ ಎಂಬುದರ ರೂಪ) – ಹಲ್ಮಿಡಿ
ವೆಟ್ಟ (ಬೆಟ್ಟ) ಶ್ರವಣಬೆಳಗೊಳ
ಕಿಡುಗೆ (ಕೆಡುಗೆ)

೮. ಬಟಾರಿ ಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್ ಎಂಬ ಸಂಧಿಗ್ಧ ವಾಕ್ಯ, ಭಟಾರ್ಗೀಗೞ ಒಡ್ಡಲಿ ಆ ಪತ್ತೊನ್ದಿವಿಟ್ಟಾರಕರ ಎಂಬ ವಾಕ್ಯದ ಭಟಾರ್ಗೀನೞ್ದಿ ಒಡ್ಡಲಿ ಆ ಪತ್ತೊನ್ದಿವಿಟ್ಟಾರಕರ ಎಂಬ ವಾಕ್ಯದ ತೊಡಕುಗಳನ್ನು ನೋಡಬೇಕು. ಇದಲ್ಲದೆ ಬಾಳ್ಗಮ್ಚಿ, ಪಲ್ಮಿಡಿಉಂ ಮೂೞುವಳ್ಳಿಉಂ ಕೊಟ್ಟಾರ್….ಇವರುಂಸೞ್ಬಙ್ಗದರ ವಿಚಾರ ಸರುಂ ಪಲ್ಮಿಡಿಗೆ ಕುಱುಮ್ಬಿಡಿವಿಟ್ಟಾರ್…ಮುಂತಾದವುಗಳಲ್ಲಿನ ಶೈಲಿಯ ವಿನಾಡಂಬರತೆ, ಬಟರಿಕುಲಾಮಲವ್ರೋಪಶುಪತಿ. . ಎಂಬಂತಹ ಸಂಸ್ಕೃತದ ವಾಗಾಡಂಬರಗಳು ಈ ಗದ್ಯದ ಇನ್ನೆರಡು ಲಕ್ಷಣಗಳು.

ಈ ಲಕ್ಷಣಗಳಿಂದ ಹೊರತಾದ ಹಲವಾರು ಶಾಸನಗಳೂ ಈ ಕಾಲದಲ್ಲಿ ದೊರೆಯುತ್ತಿವೆ. ಉದಾಹರಣೆಗೆ ಕ್ರಿ.ಶ.ಸು. ೮೦೦ರ ಗೋವಿಂದನ ಮಾವಳ್ಳಿ ಶಾಸನ “ಚಿತ್ರವಾಹನನಾಳುತ್ತುಂ ಬಾಯ್ಕೇಳದಿರೆ…. ಬಿಲ್ವಿಲ್ಲಳ್ಕುದುರೆ ಕುದುರೆಯೊಳ್ಕಿಟ್ಟ ಅತಿ ತುಮುಲ ಕಾಳೆಗ ಪೆೞ…. ಕುಲಮುದ್ದ ನೀನೀ ಕಯ್ಯ ಪೊಕ್ಕು ಕಾದೆನ್ದು ಬೆಸಸೆ ಪ್ರಸಾದಮೆನ್ದಯ್ದಿ ಕಿಟ್ಟಿಕಾದಿ                  ಮಱುವಕ್ಕದವರ ಮೆಯ್ಮೆಯ್ಯಮ್ಬಾಗೆ ಎಚ್ಚೋಡಿಸಿ ಆಕಯ್ಯಂಗೆಲ್ದು ತಾನುಂಪಲವುಂ ಎಸುವೆತ್ತು ಎಯ್ವೊದೊದಪ್ಪಿದಪ್ಪೊಲ್ಕಣೆಪಂಜರದೊಳಱಗಿ ಭೀಷ್ಮನ್ವಿೞ್ದನ್ತೆ ನೆಲಮುಟ್ಟದೆ                  ಬಿನಾನ್ದೇವಗಣಿಕ್ಕೆಯರಾರ್ಗ್ಘಮ್ಬಿಡಿದು ಬನ್ದಿರ್ಗೊಣ್ಡುಯೆ ವೀರಲೋಕಕ್ಕೆ ಸನ್ದೋನ್” ಪಂಪಪೂರ್ವಯುಗದ ಗದ್ಯಸಾಹಿತ್ಯಕ್ಕೆ ಒಳ್ಳೆಯ ನಿದರ್ಷನ ಎನ್ನುವಂತಿರುವ ಈ ಶಾಸನದ ಕೊನೆಯ ಕ್ರಿಯಾಪದವೊಂದನ್ನು ಬಿಟ್ಟರೆ ಉಳಿದೆಲ್ಲ ಹಳಗನ್ನಡ ರೂಪದಲ್ಲಿಯೇ ಇದೆ. ಇಲ್ಲಿಯ ಸನ್ನಿವೇಶ ಪಂಪಭಾರತದ ಭೀಷ್ಮರ ಶರಶಯನ ಪ್ರಸಂಗವನ್ನು ನೆನಪಿಗೆ ತರುತ್ತಿರುವುದು ವಿಶಿಷ್ಟವಾದುದೆಂದು ಹೇಳಬಹುದು. ಹಾಗೆಯೆ ಕಪ್ಪೆ ಅರಭಟ್ಟನ ರುದ್ರ-ಶಿವ ವ್ಯಕ್ತಿತ್ವವನ್ನು ಬಣ್ಣಿಸುವ ಬಾದಾಮಿ ಶಾಸನವಂತೂ

ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತ
ನ್ಮಾಧವನೀತತ್ಪೆಱನಲ್ಲ

ಮುಂತಾದ ಹೊಸಗನ್ನಡಕ್ಕೆ ತೀರಸಮೀಪ ಎನ್ನುವಂಥ ಮೂರು ತ್ರಿಪದಿ ಪದ್ಯಗಳನ್ನೊಳ ಗೊಂಡಿದೆ. ಇದರಿಂದ ಸ್ಪಷ್ಟವಾಗುವುದು ಕ್ರಿ.ಶ. ೪೫೦ ರಿಂದ ೮೦೦ರ ವರೆಗಿನ ಶಾಸನಗಳಲ್ಲಿ ಪೂರ್ವದ ಹಳಗನ್ನಡದಿಂದ ಕೂಡಿದ ಶಿಷ್ಟಭಾಷೆಯೊಂದಿಗೆ ಬಾದಾಮಿ ಶಾಸನದಲ್ಲಿಯಂತೆ ದೇಶಿ ಭಾಷೆಯೂ ಆಗಾಗ ಪ್ರಯೋಗವಾಗುತ್ತ ಬಂದಿದೆ. ಆ ದೇಶಿಭಾಷೆಯ ಶಾಸನಗಳಲ್ಲಿ ಪೂರ್ವದ ಹಳಗನ್ನಡದ್ದೆಂದು ಮೇಲೆ ಗುರುತಿಸಿರುವ ಯಾವ ಲಕ್ಷಣಗಳೂ ಕಂಡುಬರದೆ ಇರುವುದೇ ವಿಶೇಷವೆಂದು ಹೇಳಬಹುದು.

ಈ ಕಾಲದ ಶಾಸನಗಳು ಸಂಕ್ಷೇಪವಾಗಿದ್ದರೂ ಮುಂದಿನ ಚಂಪೂಕಾವ್ಯಗಳ ಅರುಣೋದಯವೆಂಬಂತೆ ಸಾಹಿತ್ಯದ ಒಳ್ಳೆಯ ಗುಣದಿಂದ ಕೂಡಿದವುಗಳಾಗಿವೆ. ಉದಾ ಹರಣೆಗೆ “ಶ್ರೀ ಬಾಳಾಮೇಲ್ಶಿಖಿ ಮೇಲೆ ಸರ್ಪ್ಪದ ಮಹಾದನ್ತಾಗ್ರದುಳ್ಸಲ್ವವೊಲ್ ಸಾಲಮ್ಬಾಲತಪೋಗ್ರದಿನ್ತು ನಡದೊಂ ನಱಮ್ಟು ಸಂವತ್ಸರಂ”, “ಸುರಚಾಪಂಚೋಲೆ ವಿದ್ಯುಲ್ಮತೆಗಳ ತೆಱವೋಲಲ್ಮಂಜು ವೋಲ್ತೋಱಿ ಬೇಗಂ ಪಿರಿಗುಂ ಶ್ರೀ ರೂಪಲೀಲಾಧನ ವಿಭವಮಹಾರಾಶಿಗಳ್ನಿಲ್ಲವಾರ್ಗ್ಗಂ ಪರಮಾರ್ತ್ಥಂ ಮೆಚ್ಚೆ ನಾನೀ ಧರಣಿಯುಳಿರವಾನೆನ್ದು ಸನ್ಪಸನಂಗೆಯ್ದುರುಸತ್ವನ್ನನ್ದಿಸೇನ ಪ್ರವರ ಮುನಿವರನ್ದೇವಲೋಕಕ್ಕೆ ಸನ್ದಾನ್” ಮೊದಲಾದ ಶಾಸನಗಳಲ್ಲಿ ಮಡುಗಟ್ಟಿ ನಿಂತಿರುವ ಉಪಮೆ, ರೂಪಕಗಳ ಸೊಗಸು ಮೆಚ್ಚುವಂತಿದೆ. ಇದೇ ಕಾಲದ ಚಾಲುಕ್ಯ ಮಂಗಳೇಶನ ಒಂದು ಶಾಸನದಲ್ಲಿ “ಸ್ವಸ್ತಿ ಶ್ರೀಮತ್ ಪ್ರಿಥಿವೀವಲ್ಲಭ ಮಂಗಲೀಸನಾ ಕಲ್ಮನೆಗೆ ಇತ್ತೊಂದು ಲಂಜಿಗೇಸರಂ…..” ಎಂದಿದೆ. ಇಲ್ಲಿಯೆ ‘ಕಲ್ಮನೆ’ ಎಂಬ ಅಚ್ಚಗನ್ನಡ ಪದ ಕನ್ನಡದ ಕಸುವನ್ನು ಎತ್ತಿತೋರುತ್ತಿದೆ.

ಕ್ರಿ.ಶ. ೮೦೦ ರಿಂದ ೧೦೦೦ರ ವರೆಗಿನ ಶಾಸನಗಳನ್ನು ಹಳಗನ್ನಡ ಶಾಸನಗಳು ಎಂದು ಗುರುತಿಸಲಾಗುತ್ತಿದೆಯಾದರೂ ಕ್ರಿ.ಶ. ೧೨ನೆಯ ಶತಮಾನದವರೆಗಿನ ಶಾಸನಗಳೂ ಹಳಗನ್ನಡ ಭಾಷಾಪ್ರಯೋಗ ಹೊಂದಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ಕ್ರಿ.ಶ.ಸು. ೧೨೦೦ರ ಅಬ್ಬಲೂರು ಶಾಸನದ ಒಂದು ಪದ್ಯ ಹೀಗಿದೆ.

ಬಡಿಗೊಂಡೊರ್ಬನೆ ಸೊಸ್ಕಿ ಬಾಳೆವನಮಂ ಕಾಡಾನೆ ಪೊಕ್ಕಿನ್ತಿರು
ಕಡಗಲು ಕಾಪಿನ ವೀರರಂ ತರುಗಮಂ ಸಾಮನ್ತರಂತೊಳ್ದು ಮಾಮಾ
ರ್ಪ್ಪಡೆಗಳು ಜೈನರ ಮೂರಿ ಬಂದುದೆನುತುಂ ಬೆ

[ಂ]ಗೊಟ್ಟುಪೋಗಲು ಜಿನಂ
ಕೆಡೆವ[ಂ]ನಂ ಬಡಿದಲ್ಲಿ ಕೈಕೊಳಿಸಿದಂ ಶ್ರೀ ವೀರಸೋಮೇಶನಂ[1]

ಅದೇ ರೀತಿ ಮೇಘಚಂದ್ರಮುನಿಯನ್ನು ಬಣ್ಣಿಸುವ ಕ್ರಿ.ಶ. ೧೧೧೫ರ ಶ್ರವಣಬೆಳಗೊಳ ಶಾಸನದ

“ಕ್ಷಮೆವೀಗಳ್ಜೌವ್ವನಂ ತೀವಿದುದತುಳ ತಪಶ್ರೀಗೆ ರಾವಣ್ಯಮೀಗ ಸಮಸನ್ದಿರ್ದತ್ತು…..”

ಎಂಬ ಪದ್ಯವನ್ನು ನೋಡಬಹುದು. ಕ್ಲಿಷ್ಟ ಸಂಧಿ, ಮ್ ಅಮ್ ವಿಭಕ್ತಿ ಪ್ರತ್ಯಯ ಇವುಗಳ ವಿಶಿಷ್ಟ ಲಕ್ಷಣವಾಗಿದೆ. ಆದರೆ ಕ್ರಿ.ಶ. ೯೭೪ರ ಶ್ರವಣಬೆಳ್ಗೊಳದ ಒಂದು ಶಾಸನ ಗಂಗ ಚೂಡಾಮಣಿಯನ್ನು

“ಕಾಳನೋ ರಾವಣನೋ ಶಿಶುಪಾಳನೋ ತಾನೆನಿಸಿ….”
ನುಡಿದನೆ ಕಾವುದನೇ ಎೞ್ದೆಗಿಡದಿರು ಜವನಿಟ್ಟರಕ್ಕೆ….”

ಎಂಬಲ್ಲಿ ಮೇಲಿನ ಲಕ್ಷಣಗಳಿಲ್ಲ. ಅಲ್ಲದೆ ಬಳ್ಳಾರಿ ಜಿಲ್ಲೆಯ ಬಾಗಳಿ ಶಾಸನ(ಕ್ರಿ.ಶ. ೧೦೩೫)ದಲ್ಲಿಯೂ ನಡುಗನ್ನಡ ಭಾಷಾ ಛಾಯೆಯನ್ನು ಕಾಣಬಹುದು. ‘ಹಾಡುವ ಕಾಮನೆ ನಾಗವೆಯೆ ಮಗಳುಂ ಶ್ರೀ ಕಲಿದೇವರ ತೊತ್ತು ಪಾತ್ರದ ಸಿರಿಯವೆ, ಕಲ್ಲಕೆರಿಯ ತನ್ನ ಮನೆಯನಾ ದೇವರಿಗೆ ಕೊಟ್ಟು ಆ ಮನೆದೊಳಗೆ ತಾನುಂ ತನ್ನ ವಂಶಜರಾರಿರ್ದೊಡಂ ಅಚಂದ್ರಾರ್ಕತಾರಂಬರಂ.

ಕ್ರಿ.ಶ. ೧೨೮೪ರ ಮಾವನೂರ ಶಾಸನದ ಗದ್ಯದ ಸೊಗಸು ಹೀಗಿದೆ. “ಶಿವನ ವುಭಯೆ ನೇತ್ರದಿಂ ಚಂದ್ರಸೂರ‍್ಯರೊಗೆದಂತೆ | ಪರ್ವ್ವತೈಯನುಭಯವಹ ಕಾರುಣ್ಯ ಕಟಾಕ್ಷದಿಂದು ದಯಿಸಿದ ಅಪ್ಪಯ್ಯ ದೆವರಸರಂ ಕಂಡು ಕಾರುಂಣ್ಯಂ ಮಾಡಲು ವೇಡಿ ಚಂದ್ರಂಗೆ ಬೆಳದಿಂಗಳಂ | ಬೆಳದಿಂಗಳಿಂಗೆ ಪರಿಮೆಳವು | ಪರಿಮೆಳಕ್ಕೆ ಸವಿಯ | ಸವಿಗೆ ರೂಪಂ | ರೂಪಂಗೆ ಸೌಂದರ್ಯ್ಯಮಂ ಕೊಡುವಂತೆ ವುಪದೇಶಂ ಮಾಡೆ | ಕೈಕೊಂಡಪ್ಪೆಯ ದೇವದೆವರಸರು ಪುಟವಿಟ್ಟ ಪುಂಣ್ಯಂ ಪುರುಷಾಕಾರವಾದಂತೆ | ಶಾಂತಿ ಸಾಕಾರವಾದಂತೆ….” ಈ ಗದ್ಯ ಭಾಗದ ಮೊದಲ ಸಾಲು ಸ್ವಲ್ಪ ಕ್ಲಿಷ್ಟವೆನ್ನಿಸಿದರೂ ಮುಂದಿನ ವಿವರಣೆ ಸುಲಭವಾಗಿ ಸೊಬಗಿನಿಂದ ಕೂಡಿದೆ. ಈ ಗದ್ಯ ಭಾಗವನ್ನು ಓದುತ್ತಿದ್ದಂತೆ ಹರಿಹರನ ರಗಳೆಯೆ ಸೊಗಸು ಪಡಿಮೂಡಿರುವಂತೆ ಕಾಣುತ್ತಿದೆ. ಹೀಗಾಗಿ ಪಂಡಿತರು ಹಳಗನ್ನಡ ಕಾಲವೆಂದು ಗುರುತಿಸಿದ ಸಮಯದಲ್ಲಿಯೂ ಹಲವು ಶಾಸನಕಾರರು ನಡುಗನ್ನಡದ ಜನಸಾಮಾನ್ಯರ ಆಡುನುಡಿಯಲ್ಲಿಯೇ ಶಾಸನ ರಚಿಸಿರುವಂತೆ ತೋರುತ್ತಿದೆ.

ಮುಂದೆ ಕ್ರಿ.ಶ. ೧೩೫೮ ವಿಜಯನಗರದರಸರ ಕಾಲದಲ್ಲಿ “ಕೆಱಯ ಕಟ್ಟಿಸು ಭಾವಿಯಂ ಸವಸು ದೇವಾಗಾರಮಂ ಮಾಡಿಸಜ್ಜೆರೆಯೊಳ್ಸಿಲ್ಕಿದನಾಥರಂ ಬಿಡಿಸು….” ಎಂಬಂಥ ಹಳಗನ್ನಡ ಸೊಗಸಿನಿಂದ ಕೂಡಿದ ಕೆಲವೇ ಕೆಲವು ಶಾಸನಗಳು ಮೂಡಿಬಂದವು. ಈ ಕಾಲದ ಬಹಳಷ್ಟು ಶಾಸನಗಳು ಗದ್ಯದಲ್ಲಿದ್ದು ಹೊಸಗನ್ನಡ ರೂಪದಲ್ಲಿ ಮೂಡಿಬಂದಿವೆ. ಉದಾಹರಣೆಗೆ ಶ್ರವಣಬೆಳ್ಗೊಳದ ಬುಕ್ಕರಾಯನ ಶಾಸನ(೧೩೫೮)ದ ಭಾಗ ಹೀಗಿದೆ. “ಹದಿನೆಂಟು ನಾಡ ಶ್ರೀ ವೈಷ್ಣವರ ಕೈಯಲು ಮಹಾರಾಯನು ವೈಷ್ಣವ ದರ್ಶನಕ್ಕೆ ಜೈನ ದರ್ಶನಕ್ಕೆ ಭೇದವಿಲ್ಲವೆಂದು ರಾಯನು ವೈಷ್ಣವರ ಕೈಯ್ಯಲು ಜೈನರ ಕೈವಿಡಿದು ಕೊಟ್ಟು… ಇದಲ್ಲದೆ ಹೊಳೆನರಸೀಪುರ ತಾಲೂಕಿನ ಭಾಗವಾಳ ಶಾಸನವು ಸೋಮೆಯ ದಣ್ನಾಯಕರು ಬೊಮ್ಮತೂರ ದುರ್ಗವನಾಳುವಲಿ ಸೇವಣರಣಿಯನಾಯ್ಕ ಕಂಪಿಲದೇವನು ಹೊಳಲಕೆರೆಗೆ ಯ(ಎ)\ ಬಂದಲ್ಲಿ ಆ ಬೆಮತೂರ ಕಲ್ಲಿಂದೆತ್ತಿ ಹೋಗಿ……” ಎಂದಿದೆ. ಇಲ್ಲೆಲ್ಲ ಹೊಸಗನ್ನಡ ಪ್ರಯೋಗವಾಗಿರುವುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಅದೇ ರೀತಿ ೧೬ನೆಯ ಶತಮಾನದ ಜಾವಗಲ್ಲು ಶಾಸನದಲ್ಲಿಯೂ “ಭೈರವಭೂಪಾಲನು ಜಾವಗಲಿನಲಿ ಸುಖ ಸಂಕಥಾ ವಿನೋದದಿಂದ ರಾಜ್ಯವನ್ನು ಪರಿಪಾಲಿಸುತಲು ತಮಗೆ ನಿರವಧಿಕವಾಗಿದ್ದ ಧರ್ಮ ಕೀರ್ತಿಗಳಾಗಬೇಕೆಂದು…” ಎಂಬ ಹೊಸಗನ್ನಡದ ರೂಪವನ್ನೇ ಕಾಣುತ್ತಿದ್ದೇವೆ.

ಅಲ್ಲದೆ ವಿಜಯನಗರದ ಅರಸರ ಕಾಲದಲ್ಲಿ ಅರವೀಡು ವಂಶದ ರಕ್ತಸಂಬಂಧದಿಂದ ತೆಲುಗು ಭಾಷೆಯ ಶಾಸನಗಳು ಪ್ರಚುರತೆ ಪಡೆದವು. ಕೋಲಾರ ಜಿಲ್ಲೆಯ ಮುದನಾಡಿಯ ಶಾಸನ (ಕ್ರಿ.ಶ. ೧೪೮೨) ಕನ್ನಡ ತೆಲುಗು ಭಾಷೆಗಳ ಮಿಶ್ರಣವಾಗಿದೆ.[2] ಬಹುಶಃ ಒಂದು ಆಡಳಿತ ಭಾಷೆಯಾಗಿ ಇನ್ನೊಂದು ಪ್ರಾಂತ ಭಾಷೆಯಾಗಿ ಸ್ಥಾನವನ್ನು ಗಿಟ್ಟಿಸಿಕೊಂಡಿರಬೇಕು. ಹಾಗೆಯೇ ಬೆಂಗಳೂರು, ತುಮಕೂರು, ಕೋಲಾರ ಭಾಗದಲ್ಲಿ ತಮಿಳು ಪ್ರಭಾವದ ಶಾಸನಗಳಿದ್ದರೆ, ರಾಯಚೂರು ಭಾಗದಲ್ಲಿ ತೆಲುಗು ಪ್ರಭಾವದ, ಗುಲಬರ್ಗಾ ಭಾಗಗಳಲ್ಲಿ ಉರ್ದು ಪ್ರಭಾವದ ಕನ್ನಡ ಶಾಸನಗಳು ದೊರೆಯುತ್ತಿವೆ.

ಒಟ್ಟಾರೆ ಈ ಅವಲೋಕನದಿಂದ ಕನ್ನಡ ಶಾಸನಗಳು ಪ್ರಾಚೀನ ಕಾಲದಿಂದಲೂ ಒಂದು ಶಿಷ್ಟರೂಪ, ಇನ್ನೊಂದು ದೇಶಿರೂಪದಲ್ಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ಶಿಷ್ಟರೂಪದ ಶಾಸನಗಳು ಸಂಸ್ಕೃತ ಭಾಷೆವಾಗಿ, ಮಾತ್ರಾವೃತ್ತ ಮೊದಲಾದವನ್ನೊಳಗೊಂಡು ಪ್ರತ್ಯಯ ಮೊದಲಾದವುಗಳಲ್ಲಿ ವ್ಯತ್ಯಾಸ ತೋರಿ ಬೆಳವಣಿಗೆಯ ಹಂತವನ್ನು ಸ್ಪಷ್ಟವಾಗಿ ಗುರುತಿಸುವಂತಾದವು. ಆದರೆ ದೇಶಿರೂಪದ ಶಾಸನಗಳು ತ್ರಿಪದಿ, ರಗಳೆ, ಏಳೆ, ಗದ್ಯ ಮೊದಲಾದ ಬಂಧವನ್ನು ಹೊಂದಿ, ಆಡುನುಡಿಯನ್ನು ಬಹಳಷ್ಟು ಮಟ್ಟಿಗೆ ಅಳವಡಿಸಿ ಕೊಂಡು, ಜನಸಾಮಾನ್ಯರ ಭಾಷೆಗೆ ಹತ್ತಿರವಾಗಿ ನಿಂತವು. ಇವೂ ಕೂಡಾ ಪ್ರಾಚೀನಕಾಲ ದಿಂದಲೂ ತಮ್ಮ ಅಸ್ತಿತ್ವವನ್ನು ತೋರುತ್ತ ಬಂದಿರುವುದೊಂದು ವಿಶೇಷ. ಹೀಗೆ ಕನ್ನಡ ಶಾಸನದ ಭಾಷೆ ಆರಂಭದಿಂದಲೂ ಶಿಷ್ಟರೂಪ ದೇಶಿರೂಪದಲ್ಲಿ ಹಾಸುಹೊಕ್ಕಾಗಿ ಪ್ರವಹಿಸಿ ಬಂದಿರುವುದನ್ನು ಕಾಣುತ್ತೇವೆ.[1] ಈ ಪದ್ಯದ ಛಂದಸ್ಸು ತಪ್ಪಿದೆ.]

[2] ಕನ್ನಡ ಶಾಸನದಲ್ಲಿ ತೆಲುಗು ಬಳಕೆಯಾಗಿರುವುದಕ್ಕೆ ಮೊದಲು ಉದಾಹರಣೆ ಗಂಗಾಧರಂ ಶಾಸನ. ಅಲ್ಲಿ ಇವೆರಡರ ಜೊತೆ ಸಂಸ್ಕೃತವೂ ಸೇರಿದ್ದು – “ಭಾರತೀಯ ಭಾಷೆಯೆಂದು ಸಂಸ್ಕೃತವನ್ನು, ಆಡಳಿತ ಭಾಷೆಯೆಂದು ಕನ್ನಡವನ್ನು, ಪ್ರಾಂತ ಭಾಷೆಯೆಂದು ತೆಲುಗನ್ನೂ ಬಳಸಿರಬೇಕು