ಕನ್ನಡ ಶಾಸನಗಳನ್ನು ಓದಲು ಬೇಕಾದ ಪ್ರಥಮ ಅರ್ಹತೆ ಲಿಪಿಜ್ಞಾನ. ಈ ಲಿಪಿಜ್ಞಾನ ಪಡೆದವರು ಶಾಸನಗಳನ್ನು ಸ್ಪಷ್ಟವಾಗಿ, ಖಚಿತವಾಗಿ ಹಾಗೂ ಅಧಿಕೃತವಾಗಿ ಓದಲು ಸಾಧ್ಯವಾಗುತ್ತದೆ. ಶಾಸನಗಳನ್ನು ಓದುವವರಿಗೆ ಆಯಾ ಅರಸುಮನೆತನಗಳು, ಆಯಾ ಕಾಲದ ಕನ್ನಡ ಅಕ್ಷರಗಳ ಸ್ವರೂಪವನ್ನು ಪರಿಚಯಿಸಿಕೊಂಡಿರಬೇಕು. ಇದಲ್ಲದೆ ಆಯಾ ಅರಸುಮನೆತನಗಳ ಶಾಸನಗಳನ್ನು ಓದಿದ ಅನುಭವ ಇರಬೇಕು. ಇದೆಲ್ಲಕ್ಕಿಂತ ಅತ್ಯಂತ ಮುಖ್ಯವಾದುದು, ಶಾಸನಗಳ ಒಡನಾಟ. ಶಾಸನಗಳ ಓದುವಿಕೆಯನ್ನು ನಿರಂತರ ವಾಗಿ ರೂಢಿಸಿಕೊಂಡಿರಬೇಕು. ಅಂದರೆ ಮಾತ್ರ ಶಾಸನಗಳ ಓದುವಿಕೆ ಗಟ್ಟಿಯಾಗುತ್ತದೆ, ಸರಾಗವೆನಿಸುತ್ತದೆ. ಹೀಗಾಗಿ ಶಾಸನಗಳನ್ನು ಓದುವವರು ಯಾವಾಗಲೂ ಕ್ಷೇತ್ರಕಾರ‍್ಯ ನಡೆಸಬೇಕಾಗುತ್ತದೆ. ಶಾಸನಗಳ ನಿರಂತರ ಓದುವಿಕೆ ಪ್ರಾಮಾಣಿಕತೆ ಮತ್ತು ಅಧಿಕೃತೆಯನ್ನು ಪರಿಸ್ಫುಟಗೊಳಿಸುತ್ತದೆ.

ಶಾಸನಗಳನ್ನು ಓದುವ ವಿಧಾನ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುವುದು ಕಂಡು ಬರುತ್ತದೆ. ಇಲ್ಲಿ ಕನ್ನಡ ಶಾಸನಗಳನ್ನು ಓದಲು ನಾನು ಅಳವಡಿಸಿಕೊಂಡ ವಿಧಾನಗಳನ್ನು ಮಾತ್ರ ವಿವರಿಸಿದ್ದೇನೆ. ಇದು ಕೇವಲ ನನ್ನೊಬ್ಬನ ಇಲ್ಲವೆ ಅನೇಕ ಜನರ ಅನುಭವ ಆಗಿರುವ ಸಾಧ್ಯತೆಯಿದೆ.

ಶಾಸನಗಳನ್ನು ‘ಪಡಿಯಚ್ಚು’ ಮಾಡಿಕೊಳ್ಳುವುದು, ಇದರ ಮೊದಲ ಹಂತ. ಈ ಹಂತದ ಕಾರ‍್ಯವನ್ನು ಶಾಸನ ಓದುವವರೇ ಸ್ವತಃ ನೆರವೇರಿಸಬೇಕು. ಇದಕ್ಕಾಗಿ ಸಹಾಯಕರ ನೆರವನ್ನು ಪಡೆಯಬಹುದು. ಶಾಸನ ಓದುವವರೇ ಕೈಮುಟ್ಟಿ ಪರಿಶ್ರಮವಹಿಸಿ ಈ ಕಾರ‍್ಯವನ್ನು ಪೂರೈಸುವುದು ಹೆಚ್ಚು ಅಪೇಕ್ಷಣೀಯ. ಶಾಸನವನ್ನು ಪಡಿಯಚ್ಚು ಮಾಡಿಕೊಳ್ಳುವಾಗ ಅಕ್ಷರಗಳ ಕೊಂಬು, ಒತ್ತಕ್ಷರ, ಬಿಂದು, ಅಂಚು, ಮೇಲ್ಭಾಗ, ಕೆಳಭಾಗ ಈ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕು ಅಂದಾಗ ಮಾತ್ರ ‘ಶಾಸನ ಪಠ್ಯ’ ಪೂರ್ಣವಾಗಿ ಲಭಿಸಲು ಸಾಧ್ಯವಾಗುತ್ತದೆ.  ಶಾಸನ ಪಡಿಯಚ್ಚು ಸರಿಯಾಗಿ ಬರದಿದ್ದರೆ, ಮತ್ತೊಂದು ಪಡಿಯಚ್ಚು ಮಾಡಿಕೊಳ್ಳುವುದು ಅನಿವಾರ‍್ಯ. ಇದೆಲ್ಲವನ್ನೂ ನಿರ್ಧರಿಸುವವ ಶಾಸನವನ್ನು ಓದುವವ ಮಾತ್ರ. ‘ಶಾಸನ ಪಡಿಯಚ್ಚು’ ಮಾಡುವ ಕಾರ‍್ಯಪೂರ್ಣಗೊಂಡ ಮೆಲೆ ಆ ಎಲ್ಲ ‘ಪಡಿಯಚ್ಚು’ಗಳನ್ನು ಕ್ರಮವಾಗಿ ಹೊಂದಿಸಿಕೊಳ್ಳಬೇಕು. ಆಮೇಲೆ ಶಾಸನವಿರುವ ಸ್ಥಳ, ಸ್ವರೂಪ ಮೊದಲಾದವುಗಳನ್ನು ದಾಖಲಿಸಿಕೊಳ್ಳಬೇಕು. ಶಾಸನಪಡಿಯಚ್ಚಿನ ಎರಡೂ ಕಡೆ ೧-೧, ೨-೨, ೩-೩, ೪-೪, ೫-೫ ಹೀಗೆ ಅಂಕಿ ಹಾಕಿಕೊಳ್ಳಬೇಕು. ಆ ಸ್ಥಳದಲ್ಲಿಯೇ ಇದ್ದುಕೊಂಡು ‘ಶಾಸನ ಪಡಿಯಚ್ಚು’ ಓದಿ, ಶಾಸನಪಠ್ಯ ಸಿದ್ಧಪಡಿಸಿಕೊಳ್ಳುವದು ಅತ್ಯಂತ ಸೂಕ್ತ. ಇದಕ್ಕಾಗಿ ಸುಮಾರು ಪರಿಶ್ರಮ ಬಹಳವೆನಿಸಿದರೂ ಇದು ಬಹಳಷ್ಟು ಪ್ರಯೋಜನ ಕಾರಿಯೆನಿಸುತ್ತದೆ. ಶಾಸನಪಡಿಯಚ್ಚಿನಲ್ಲಿ ಕೆಲವು ಅಕ್ಷರಗಳು ಅಸ್ಪಷ್ಟವಾಗಿದ್ದರೆ, ನೇರವಾಗಿ ಶಾಸನ ನೋಡಿ ಅಸ್ಪಷ್ಟತೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದಲ್ಲದೆ ‘ಶಾಸನ ಪಡಿಯಚ್ಚು’ ಮೂಲಕ ‘ಶಾಸನ ಪಠ್ಯ’ ತಯಾರಿಸಿದ ಮೇಲೆ ‘ಶಾಸನ’ ಮತ್ತು ‘ಪಡಿಯಚ್ಚು’ ಗಳನ್ನು ಹೋಲಿಸಿ ಮತ್ತೊಮ್ಮೆ ಓದಬೇಕು. ಇದರಿಂದ ‘ಶಾಸನಪಠ್ಯ’ ಪೂರ್ಣವೆನಿಸುತ್ತದೆ. ಅದಕ್ಕೆ ಅಧಿಕೃತತೆ ಸಂಪ್ರಾಪ್ತವಾಗುತ್ತದೆ.

ಶಾಸನ ಮತ್ತು ಶಾಸನಗಳ ಪಡಿಯಚ್ಚು ಓದುವಾಗ ಶಾಸನ ಲಿಪಿಕಾರ ಹಾಗೂ ರೂವಾರಿಗಳ ಬರೆವಣಿಗೆಯ ಶೈಲಿ, ಮನೋಧರ‍್ಮಗಳನ್ನು ಅವಶ್ಯವಾಗಿ ಅರ್ಥೈಸಿಕೊಳ್ಳಬೇಕು. ಇದಕ್ಕಾಗಿ ಶಾಸನ ಓದುವವರು ಒಂದು ಸಲ ಓದಿ, ಶಾಸನದ ಅಕ್ಷರಗಳ ಸ್ವರೂಪ ಸ್ವಭಾವಗಳನ್ನು ತಿಳಿದುಕೊಳ್ಳುವುದು ತೀರ ಅವಶ್ಯವಿದೆ. ಯಾಕೆಂದರೆ ಅಕ್ಷರಗಳ ಕೊಂಬು, ಒತ್ತಕ್ಷರ, ದೀರ್ಘಾಕ್ಷರ ಚಿಹ್ನೆ, ಬಿಂದುಗಳನ್ನು ಒಂದೊಂದು ಶಾಸನದಲ್ಲಿ ಒಂದೊಂದು ರೀತಿಯಾಗಿ ಇಲ್ಲವೆ ಒಂದೇ ಶಾಸನದಲ್ಲಿ ಹಲವು ರೀತಿಯಾಗಿ ಬಳಸಲಾಗಿರುತ್ತದೆ.

ಶಾಸನ ಓದುವವರಿಗೆ ಕನ್ನಡದ ಜೊತೆಗೆ ಸಂಸ್ಕೃತ, ಪ್ರಾಕೃತ ಭಾಷೆ-ಸಾಹಿತ್ಯಗಳ ಪರಿಜ್ಞಾನವು ಇರಬೇಕಾಗುತ್ತದೆ. ಇದಲ್ಲದೆ ವ್ಯಾಕರಣ, ಛಂದಸ್ಸು, ಅಲಂಕಾರಗಳ ಪರಿಚಯವೂ ತೀರ ಅವಶ್ಯ. ಇಂಥ ‘ಪರಿಣತಿ’, ‘ಪರಿಜ್ಞಾನ’ ಹೊಂದಿದವರು ಶಾಸನಗಳನ್ನು ಓದುವುದರಿಂದ ‘ಶಾಸನಗಳ ಅಧಿಕೃತ ಪಾಠ’ ಲಭ್ಯವಾಗುತ್ತದೆ. ಅಪ್ರಮಾಣಿಕತೆ, ಅನಧಿಕೃತತೆ ಯಿಂದ ಕೂಡಿದ ಶಾಸನಗಳ ಪಠ್ಯವನ್ನು ಆಧರಿಸಿ ಕೈಕೊಳ್ಳುವ ಅಧ್ಯಯನಗಳ ಗತಿ ಏನಾಗು ತ್ತದೆ? ಶಾಸನಗಳನ್ನು ಆಧರಿಸಿ ನಡೆಯುವ ಭಾಷಿಕ, ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಮೊದಲಾದ ಎಲ್ಲ ಸಂಶೋಧನೆಗಳಿಗೆ ಈ ‘ಶಾಸನಪಠ್ಯ’ವೇ ಮೂಲವಾಗಿರುತ್ತದೆ. ಆದುದ ರಿಂದ ಶಾಸನಗಳನ್ನು ಓದುವವರು ಅತ್ಯಂತ ಪ್ರಾಮಾಣಿಕ, ಬಹುಶ್ರುತ ಆಗಿರಬೇಕಾಗುತ್ತದೆ. ಇದರಿಂದ ಶಾಸನ ಓದುವವರ ಜವಾಬ್ದಾರಿ ಎಂಥದು ಎಂಬುದು ಮನದಟ್ಟಾಗುತ್ತದೆ. ಶಾಸನಗಳನ್ನು ಓದುವಾಗ ಮರಹು, ಆಲಸ್ಯ ಸಮೀಪ ಸುಳಿಯದಂತೆ ಎಚ್ಚರವಹಿಸಬೇಕು.

ಶಾಸನ ಅಕ್ಷರ ಓದುವಾಗ, ಶಾಸನ ಮಧ್ಯದಲ್ಲಿ ಕಲ್ಲು ಒಡೆದಿದ್ದರೆ ಆ ಭಾಗದಲ್ಲಿ ನಷ್ಟವಾದ ಅಕ್ಷರಗಳನ್ನು ಮೇಲೆ ಮತ್ತು ಕೆಳಗಿನ ಸಾಲುಗಳ ಪ್ರಮಾಣದಿಂದ ಪ್ರತಿಯೊಂದು ಅಕ್ಷರಕ್ಕೆ ಒಂದರಂತೆ ಡಾಟ್ (.) ಹಾಕಬೇಕು. ಓದುವಾಗ ಅಕ್ಷರ ಅಸ್ಪಷ್ಟವೆನಿಸಿದರೆ ಅದನ್ನು ಚೌಕ ಕಂಸ[   ]ನಲ್ಲಿ ಇಡಬೇಕು. ಶಾಸನದಲ್ಲಿ ಭಾಷಾದೋಷಗಳಿದ್ದರೆ, ಅವುಗಳನ್ನು ತಿದ್ದದೆ ಇದ್ದಕ್ಕಿದ್ದಂತೆಯೇ ಓದಬೇಕು. ಬೇಕೆನಿಸಿದರೆ ಅವುಗಳ ಶುದ್ಧರೂಪವನ್ನು ಆಶುದ್ಧ ಅಕ್ಷರದ ಮುಂದೆಯೇ ದುಂಡು ಕೌಂಸಿ(  )ನಲ್ಲಿ ಕೊಡಬಹುದಾಗಿದೆ.

ಶಾಸನಗಳ ಸಾಲುಗಳನ್ನು ಮೂಲದಲ್ಲಿ ಇದ್ದಂತೆಯೇ ಓದಬೇಕು, ಬರೆದುಕೊಳ್ಳಬೇಕು. ಪದ್ಯ ಶಾಸನವಿದ್ದರೆ ಪದ್ಯರೂಪದಲ್ಲಾಗಲೀ, ಗದ್ಯಶಾಸನವಿದ್ದರೆ ಗದ್ಯದಲ್ಲಾಗಲೀ ಮುರಿದು ಕಟ್ಟಬಾರದು. ಸಾಲುಗಳು ಮೂಲರೂಪ, ಕಾಯ್ದುಕೊಂಡು ಹೋಗುವುದು ಓದುಗನ ಜವಾಬ್ದಾರಿಯಾಗಿರುತ್ತದೆ. ಯಾವುದೇ ಒಂದು ಶಾಸನವನ್ನು ೩-೪ ಸಲ, ಕೆಲವು ಪ್ರಸಂಗದಲ್ಲಿ ಇನ್ನೂ ಅಧಿಕ ಸಲ ಓದಬೇಕಾಗುತ್ತದೆ. ಇದು ಅವಸರದಿಂದ ಮಾಡುವ ಕಾರ‍್ಯ ಅಲ್ಲ. ಶಾಸನ ಓದುವವನಿಗೆ ತಾಳ್ಮೆ ಅಧಿಕವಿರಬೇಕಾಗುತ್ತದೆ. ಶಾಸನ ಓದುವವ ಪೂರ್ವಾಗ್ರಹ ಪೀಡಿತ ಮನಸ್ಸು ಹೊಂದಿದವನಾಗಿರಬಾರದು. ಶಾಸನ ಓದುವುದರಲ್ಲಿ ‘ಪಾರದರ್ಶಕತೆ’ ಅತ್ಯಂತ ಪ್ರಮುಖವಾಗಿದೆ. ಆದುದರಿಂದ ಶಾಸನ ಓದುವವ ಪಾರದರ್ಶಕ ವ್ಯಕ್ತಿತ್ವ ಪಡೆದು ಕೊಂಡಿರಬೇಕಾಗುತ್ತದೆ.

ಶಾಸನವಿರುವ ಸ್ಥಳದಿಂದ ನಾವು ಮರಳಿ ನಮ್ಮ ಸ್ಥಳಕ್ಕೆ ಬಂದ ಮೇಲೆಯೂ ‘ಶಾಸನಪಾಠ’ ದಲ್ಲಿ ಸಂಶಯ, ಸಮಸ್ಯೆ, ಅಸ್ಪಷ್ಟತೆ ಗೋಚರಿಸಿದರೂ ಅದನ್ನು ಅಷ್ಟಕ್ಕೇ ಬಿಡಬಾರದು. ಮತ್ತೆ ಶಾಸನವಿರುವ ಸ್ಥಳಕ್ಕೆ ಹೋಗಿ ‘ಶಾಸನಪಾಠ’ವನ್ನು ಪರಿಶೀಲಿಸಿದರೆ, ಅವುಗಳಲ್ಲಿ ಕೆಲವನ್ನಾದರೂ ಪರಿಹರಿಸಿಕೊಳ್ಳುವ ಸಾಧ್ಯತೆಯಿದೆ. ಕೆಲವು ಶಾಸನಗಳಲ್ಲಿ ‘ಪಡಿಯಚ್ಚು’ ತೆಗೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಶಿಲೆ’ಯ ಅಕ್ಷರಗಳನ್ನೇ ಓದಿ ಶಾಸನಪಾಠ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇದು ಅತ್ಯಂತ ಪರಿಶ್ರಮ, ಸಮಯ ಉಳ್ಳದ್ದಾಗಿರುತ್ತದೆ. ಇದಕ್ಕಾಗಿ ಬೇಸರಪಟ್ಟುಕೊಳ್ಳಬಾರದು. ಶಾಸನ ಕ್ಷೇತ್ರದಲ್ಲಿ ಸರ್ವ ಸಮರ್ಪಣ ಭಾವದಿಂದ ಕಾರ‍್ಯ ಮಾಡುವವರಿಗೆ ಇದು ಅನಿವಾರ‍್ಯ ಹಾಗೂ ಅತ್ಯಂತ ಆವಶ್ಯಕ ಉಪಕ್ರಮ.

ಶಾಸನಗಳನ್ನು ಓದುವವರು ‘ಶಾಸನದ ಪರಿಸರ’ಗಳನ್ನೂ ಅಭ್ಯಸಿಸುವುದು ತೀರ ಅಗತ್ಯವಿದೆ. ಆ ಶಾಸನದ ಸುತ್ತ ಬೆಳೆದಿರುವ ಕಥೆ-ಐತಿಹ್ಯ-ನಂಬಿಕೆ-ಮೂಢನಂಬಿಕೆ-ಹಾಡು-ಆಚರಣೆ-ಉತ್ಸವ-ಜಾತ್ರೆಗಳ ವಿವರಗಳನ್ನು ಅದು ಹೊಂದಿರುವ ಪ್ರಾಮುಖ್ಯತೆಗಳನ್ನು ಸಂಗ್ರಹಿಸಬೇಕು. ಶಾಸನಗಳನ್ನು ಓದುವಾಗ ಇವುಗಳಲ್ಲಿ ಕೆಲವಾದರೂ ನೆರವಾಗುವ ಸಂಭವ ವಿದೆ. ಶಿಲಾಶಾಸನಗಳಲ್ಲಿ ಅಕ್ಷರಗಳು ಒತ್ತೊತ್ತಾಗಿ ಬಿಟ್ಟೂ ಬಿಡದೆ ಬರೆಯಲ್ಪಟ್ಟಿರುತ್ತವೆ. ಆದುದರಿಂದ ಶಾಸನ ಓದುವವರು ಪ್ರತಿಯೊಂದು ಅಕ್ಷರದ ಅಂಗರಚನೆ, ಪದವಿನ್ಯಾಸ, ವಾಕ್ಯವಿನ್ಯಾಸ, ಭಾಷೆಯ ಅವಸ್ಥಾ ಭೇದ, ಪ್ರಾಂತಭೇದ, ಶಾಸನ ಪರಿಭಾಷೆ, ಛಂದಸ್ಸು, ವ್ಯಾಕರಣ ಪ್ರಕ್ರಿಯೆ, ರಾಜಕೀಯ ಚರಿತ್ರೆ ಮೊದಲಾದವುಗಳನ್ನು ಅರಿತವನಾಗಿರಬೇಕು. ಶಾಸನಗಳನ್ನು ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಪಾತುಳಿಯಿಂದ ಓದುವಂತಾಗಬೇಕು. ಹೀಗೆ ಶಾಸನಗಳನ್ನು ಓದುವಿಕೆಯಲ್ಲಿ ವಿಷಯ ಪರಿಜ್ಞಾನ, ಗ್ರಹಿಕೆ, ಅನುಭವ, ಪರಿಶ್ರಮ, ಪ್ರಯತ್ನ ತಾಳ್ಮೆ, ಬಹುಶ್ರುತಜ್ಞಾನ, ಸಿದ್ಧತೆ ಹಾಗೂ ಪಾರದರ್ಶಕತೆಗಳು ಅವಶ್ಯವಾಗಿ ಇರಬೇಕಾಗುತ್ತದೆ. ಶಾಸನಗಳನ್ನು ಓದುವುದು ವಸ್ತುನಿಷ್ಟ, ವಿಷಯನಿಷ್ಟವಾಗಿರಬೇಕೇ ಹೊರತು ವ್ಯಕ್ತಿನಿಷ್ಠವಾಗಿರಬಾರದು.

ಶಾಸನಗಳ ಭಾಷೆ

ಕರ್ನಾಟಕದಲ್ಲಿರುವ ಬಹುಸಂಖ್ಯೆಯ ಶಾಸನಗಳ ಭಾಷೆ, ಕನ್ನಡ. ಎರಡನೆಯ ಸ್ಥಾನ ಸಂಸ್ಕೃತ ಭಾಷೆಗೆ ಸಲ್ಲುತ್ತದೆ. ಹೆಚ್ಚಿನ ಸಂಖ್ಯೆಯ ತಾಮ್ರಶಾಸನಗಳು ಸಂಸ್ಕೃತ ಭಾಷೆಯಲ್ಲಿ ರುತ್ತದೆ. ಇದಲ್ಲದೆ ತಮಿಳು, ತೆಲುಗು, ಮರಾಠಿ, ಪರ್ಶಿಯನ್ ಮೊದಲಾದ ಭಾಷೆಯ ಶಾಸನಗಳೂ ಕರ್ನಾಟಕದಲ್ಲಿ ದೊರೆತಿವೆ. ಒಟ್ಟಿನಲ್ಲಿ ಕರ್ನಾಟಕದ ಶಾಸನಗಳಲ್ಲಿ ಬಹು ಭಾಷೆಯ ಬಳಕೆ ಆಗಿರುವುದು ಗೊತ್ತಾಗುತ್ತದೆ.

ಶಿಲಾಶಾಸನಗಳ ಆರಂಭದಲ್ಲಿರುವ ಮಂಗಲ ಶ್ಲೋಕ, ಅಂತ್ಯದಲ್ಲಿರುವ ಶಾಪಶಯ ಶ್ಲೋಕಗಳು ಮಾತ್ರ ಸಂಸ್ಕೃತ ಭಾಷೆಯಲ್ಲಿದ್ದು ಉಳಿದ ಭಾಗ ಕನ್ನಡ ಭಾಷೆಯಲ್ಲಿ ಇರುತ್ತದೆ. ಇನ್ನು ಕೆಲವು ಸಲ ಇಡೀ ಶಾಸನ ಕನ್ನಡ ಭಾಷೆಯಲ್ಲೇ ಬರೆಯಲ್ಪಟ್ಟಿರುತ್ತದೆ. ತಾಮ್ರ ಶಾಸನಗಳ ಬಹುಭಾಗ ಸಂಸ್ಕೃತ ಭಾಷೆಯಲ್ಲಿದ್ದು, ದಾನದ ವಿವರ ಮತ್ತು ಸೀಮೆಯ ವಿವರ ಹೇಳುವ ಭಾಗ ಮಾತ್ರ ಕನ್ನಡ ಭಾಷೆಯಲ್ಲಿರುತ್ತದೆ. ಕೆಲವು ಶಿಲಾಶಾಸನಗಳಲ್ಲಿ ಕನ್ನಡ, ಸಂಸ್ಕೃತ, ತೆಲುಗು ಹೀಗೆ ಮೂರು ಭಾಷೆಗಳನ್ನು ಬಳಸಲಾಗಿರುತ್ತದೆ. ಹೀಗಿದ್ದರೂ ಶಾಸನಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ಮಾತ್ರ ಅಧಿಕವಾಗಿ ಉಪಯೋಗಿಸಿ ರುವುದು ವಿಧಿತವಾಗುತ್ತದೆ.

ಕರ್ನಾಟಕದಲ್ಲಿ ಲಭಿಸುವ ಅಶೋಕನ ಕ್ರಿ.ಪೂ. ೩೦೦ರ ಶಾಸನಗಳ ಭಾಷೆ ಪ್ರಾಕೃತ. ಸಾತವಾಹನರ ಕಾಲದ ಶಾಸನಗಳ ಭಾಷೆಯೂ ಪ್ರಾಕೃತ. ಆಮೇಲೆ ಕದಂಬರ ಕಾಲದ ಶಾಸನಗಳಲ್ಲಿ ಸಂಸ್ಕೃತಕ್ಕೆ ಪ್ರಾಧಾನ್ಯತೆ ಸಂದಿದೆ. ಅಂದರೆ ಕದಂಬರ ಶಾಸನಗಳಲ್ಲಿ ಸಂಸ್ಕೃತಕ್ಕೆ ಪ್ರಾಬಲ್ಯ ಉಂಟಾಯಿತು. ಬಾದಾಮಿ ಚಲುಕ್ಯರ ಕಾಲದವರೆಗೂ ಕರ್ನಾಟಕದ ಶಾಸನಗಳಲ್ಲಿ ಸಂಸ್ಕೃತ ಪ್ರಾಬಲ್ಯ ಅಧಿಕವಾಗಿಯೇ ಇದ್ದಿತು. ಕದಂಬ ಮತ್ತು ಬಾದಾಮಿ ಚಲುಕ್ಯರ ಕಾಲ ದಲ್ಲಿ ಕನ್ನಡದ ಎಳಮೆಯನ್ನೂ ಸಂಸ್ಕೃತದ ಗರಿಮೆಯನ್ನೂ ಕಾಣುತ್ತೇವೆ. ಮುಂದೆ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಯಾದವ, ಹೊಯ್ಸಳರ ಕಾಲದಲ್ಲಿ ಕನ್ನಡದ ಪ್ರೌಢಿಮೆ ಯನ್ನು ಗುರುತಿಸಬಹುದಾಗಿದೆ.

ಕನ್ನಡ ಶಾಸನಗಳಲ್ಲಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಭಾಷೆ ಬಳಕೆ ಯಾಗಿದೆ. ಆದರೆ ಪೂರ್ವದ ಹಳಗನ್ನಡದ ಕಾಲದಲ್ಲಿ ಹಳಗನ್ನಡ, ಹಳಗನ್ನಡದ ಕಾಲದಲ್ಲಿ ಪೂರ್ವದ ಹಳಗನ್ನಡ, ನಡುಗನ್ನಡದ ಕಾಲದಲ್ಲಿ ಹಳಗನ್ನಡ ಮತ್ತು ಹೊಸಗನ್ನಡದ ಪ್ರಯೋಗಗಳು ಶಾಸನಗಳಲ್ಲಿ ಕಾಣಸಿಗುತ್ತವೆ. ಹೀಗಾಗಿ ಕನ್ನಡ ಶಾಸನಗಳನ್ನು ಪೂರ್ವದ ಹಳಗನ್ನಡದ ಶಾಸನ, ಹಳಗನ್ನಡದ ಶಾಸನ, ನಡುಗನ್ನಡದ ಶಾಸನ, ಹೊಸಗನ್ನಡದ ಶಾಸನಗಳೆಂದು ನಿಖರವಾಗಿ, ನಿರ್ದಿಷ್ಟವಾಗಿ ವರ್ಗೀಕರಿಸಲು ಸಾಧ್ಯವಾಗುವುದಿಲ್ಲ. ಆದುದ ರಿಂದ ಕರ್ನಾಟಕದ ಶಾಸನಗಳನ್ನು ಪ್ರಾಕೃತ ಶಾಸನ, ಸಂಸ್ಕೃತ ಶಾಸನ, ಸಂಸ್ಕೃತ ಕನ್ನಡ ಶಾಸನ, ಕನ್ನಡ ಶಾಸನ, ತಮಿಳು ಶಾಸನ, ತೆಲುಗು ಶಾಸನ, ಮರಾಠಿ ಶಾಸನ, ಪರ್ಶಿಯನ್ ಶಾಸನ ಎಂದು ಭಾಷೆಯ ದೃಷ್ಟಿಯಿಂದ ಅಭ್ಯಸಿಸಬಹುದಾಗಿದೆ. ಆದರೆ ಕರ್ನಾಟಕದ ಸಮಗ್ರ ಶಾಸನಗಳನ್ನು ಭಾಷೆಯ ದೃಷ್ಟಿಯಿಂದ ಈ ಕೆಳಗಿನಂತೆ ವರ್ಗೀಕರಿಸಬಹುದು.

೧. ದಾನ (ಶಿಲಾ) ಶಾಸನಗಳ ಭಾಷೆ

೨. ತಾಮ್ರ ಶಾಸನಗಳ ಭಾಷೆ

೩. ವೀರಗಲ್ಲು-ಮಾಸ್ತಿಕಲ್ಲುಗಳ ಭಾಷೆ

೪. ನಿಷದಿ ಮತ್ತು ಬಲಿದಾನ ಮರಣ ಶಾಸನಗಳ ಭಾಷೆ

೫. ಸಂಕೀರ್ಣ ಶಾಸನಗಳ ಭಾಷೆ

ಯಾಕೆಂದರೆ ದಾನ ಶಾಸನಗಳ ಭಾಷೆ ಹೆಚ್ಚಾಗಿ ಪ್ರೌಢವಾಗಿರುತ್ತದೆ. ವೀರಗಲ್ಲು-ಮಾಸ್ತಿಕಲ್ಲುಗಳಲ್ಲಿ ಜನಭಾಷೆ ಅಥವಾ ಆಡುಭಾಷೆಯನ್ನು ಬಳಸಲಾಗಿದೆ. ಹೀಗಾಗಿ ಇವು ಗಳನ್ನು ಭಾಷೆಯ ದೃಷ್ಟಿಯಿಂದ ಪ್ರತ್ಯೇಕವಾಗಿಯೇ ಅಧ್ಯಯನ ಮಾಡುವುದು ಹೆಚ್ಚು ಸೂಕ್ತವೆನಿಸುತ್ತದೆ. ಇದಲ್ಲದೆ ಶಾಸನಗಳನ್ನು ಪ್ರದೇಶವಾರು ಅಭ್ಯಸಿಸುವುದರಿಂದ ಆಯಾ ಪ್ರದೇಶದ ‘ಉಪಭಾಷೆ’ ಗುರುತಿಸಲು ಇನ್ನೂ ಅನುಕೂಲವಾಗುತ್ತದೆ.

ವ್ಯಕ್ತಿನಾಮ, ಸ್ಥಳನಾಮ, ಪರಿಭಾಷೆಗಳ ದೃಷ್ಟಿಯಿಂದ ಶಾಸನಗಳು ಅಪೂರ್ವ ಮಾಹಿತಿ ಯನ್ನು ಒದಗಿಸುತ್ತವೆ. ಆ ಮೂಲಕ ಭಾಷೆಯ ಮಹತ್ವವನ್ನು ಸ್ಪಷ್ಟಪಡಿಸುತ್ತವೆ. ಕರ್ನಾಟಕದ ಶಾಸನಗಳ ಭಾಷೆಯ ಚಾರಿತ್ರಿಕ ಅಧ್ಯಯನ ಹಲವಾರು ಹೊಸ ಸಾಧ್ಯತೆ ಸಂಬಂಧಗಳನ್ನು ಪ್ರಕಟಪಡಿಸುತ್ತದೆ. ಭಾಷೆಯ ಪ್ರಾಚೀನತೆ, ಅದರ ಸ್ವರೂಪ, ಬೆಳವಣಿಗೆಯ ವಿವಿಧ ಹಂತಗಳು ಬದಲಾವಣೆ, ವ್ಯಾಕರಣ ಪ್ರಕ್ರಿಯೆ ಮೊದಲಾದ ಪ್ರಮುಖ ಸಂಗತಿಗಳನ್ನು ಶಾಸನಗಳ ಭಾಷೆಯ ಅಧ್ಯಯನ ನಮಗೆ ತಿಳಿಸಿಕೊಡುತ್ತದೆ.

ಶಾಸನಗಳನ್ನು ಭಾಷೆಯ ದೃಷ್ಟಿಯಿಂದ ಅಧ್ಯಯನ ಮಾಡಿದ್ದು ಅತ್ಯಲ್ಪ, ಈ ಕ್ಷೇತ್ರದಲ್ಲಿ ಇನ್ನೂ ಆಗಬೇಕಾದ ಕೆಲಸ ಅಪಾರವಾಗಿದೆ. ಶಾಸನ ಪದಪ್ರಯೋಗಕೋಶ, ಶಾಸನ ಪದ್ಯ ಕೋಶ, ಶಾಸನ ಪರಿಭಾಷಾಕೋಶ ಮೊದಲಾದವು ಅಗತ್ಯವಾಗಿ ನೆರವೇರಬೇಕಾದ ಕಾರ‍್ಯ ಗಳೆನಿಸಿವೆ. ಹೀಗೆ ಕರ್ನಾಟಕದ ಶಾಸನಗಳು ಅಧ್ಯಯನದ ದೃಷ್ಟಿಯಿಂದ ಅತ್ಯಂತ ಉಪಯುಕ್ತ ಆಕರ ಸಾಮಗ್ರಿಗಳಾಗಿರುತ್ತವೆ.