ಇನ್ನೂರು ವರ್ಷಗಳಿಗೂ ಮಿಕ್ಕಿದ ಇತಿಹಾಸವಿರುವ ಕರ್ನಾಟಕ ಶಾಸನಶೋಧನೆಯ ಕ್ಷೇತ್ರಕ್ಕೆ ಇತಿಹಾಸ ರಚನೆಯಲ್ಲಿ ಯಾವ ಪ್ರಮಾಣದ ಮಹತ್ವ ಇದೆ ಎಂಬುದನ್ನು ಮನದಟ್ಟು ಮಾಡುವ ಪ್ರಯಾಸ ಪ್ರಾಯಶಃ ಆಷ್ಟಾಗಿ ಈಗ ಅವಶ್ಯವಲ್ಲ ಎಂದು ಅನಿಸುತ್ತದೆ. ಶಾಸನ ಗಳಿಲ್ಲದೆ ಭಾರತದ ಇತಿಹಾಸ ನಿರೂಪಣೆ ಹೇಗೆ ಬರಡಾಗಿರುತ್ತಿತ್ತೋ ಹಾಗೆಯೇ ಕರ್ನಾಟಕ ಇತಿಹಾಸ ನಿರೂಪಣೆ ಕೂಡ ಬರಡಾಗಿರುತ್ತಿತ್ತು ಎಂಬುದರ ಬಗ್ಗೆ ಎರಡು ಮಾತು ಬರಲಾರದು. ಮೂವತ್ತೆಂಟು ವರ್ಷಗಳ ಹಿಂದೆ ಖ್ಯಾತ ಶಾಸನತಜ್ಞರಾದ ಡಾ. ಕೊ. ವ್ಯಾ. ರಮೇಶ್ ಅವರು ಭಾರತ ಮತ್ತು ಕರ್ನಾಟಕದ ಶಾಸನಗಳ ಸಮೀಕ್ಷೆ ಮಾಡುತ್ತ, ಶಾಸನಗಳು ಇತಿಹಾಸದ ವಿವಿಧ ಮುಖಗಳ ಮೇಲೆ ಬೆಳಕು ಚೆಲ್ಲುವ ಬಗೆಯನ್ನು ಮನದಟ್ಟು ಮಾಡುವುದ ರೊಂದಿಗೆ ಶಾಸನತಜ್ಞರೂ ಚರಿತ್ರಕಾರರೂ ಕೈಗೊಳ್ಳಬೇಕಾದ ಮೂರು ಮುಖ್ಯ ಕ್ರಮಗಳನ್ನು ಕುರಿತು ಎಚ್ಚರಿಸಿದ್ದರು (ರಮೇಶ್ ಕೆ.ವಿ., ೧೯೭೧,ಪು. ೧೭-೧೮) :

೧. ಮುಂಚೆ ಪ್ರಕಟಿಸಲ್ಪಟ್ಟಿರುವ ಶಾಸನಗಳ ಪುನರ್‌ಪರಿಶೀಲನೆ.

೨. ಐತಿಹಾಸಿಕ ನೆಲೆಗಳ ವೈಜ್ಞಾನಿಕ ಉತ್ಖನನ.

೩. ಶೋಧಿತ ಪ್ರದೇಶಗಳಲ್ಲಿ ಹಾಗೂ ಶೋಧನೆ ನಡೆಯದಿದ್ದ ಪ್ರದೇಶಗಳಲ್ಲಿ ಹೊಸ ಶಾಸನಗಳಿಗಾಗಿ ತೀವ್ರ ಅನ್ವೇಷಣೆ.

ಅಂದಿನಿಂದ ಇಂದಿನವರೆಗೆ ಮೇಲೆ ಉಲ್ಲಿಖಿತ ಪಟ್ಟಿಯಲ್ಲಿ ಎರಡನೆಯ ನೆಲೆಯಲ್ಲಿ ನಡೆದ ಕಾರ್ಯ ತೀರ ಕಡಿಮೆಯೆಂದೇ ಹೇಳಬೇಕಾಗಿದೆ. ಗುಲಬರ್ಗಾ ಜಿಲ್ಲೆಯ ಸನ್ನತಿಯ ಕಣಗನಹಳ್ಳಿ ಸ್ತೂಪದ ಉತ್ಖನನದಿಂದ ಶಾತವಾಹನ ಕಾಲದ ಹಲವು ಪ್ರಾಕೃತ, ಸಂಸ್ಕೃತ ಶಾಸನಗಳು ಬೆಳಕಿಗೆ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮೇಲೆ ಹೇಳಿದ ಪಟ್ಟಿಯಲ್ಲಿ ಮೊದಲನೆಯ ಮತ್ತು ಮೂರನೆಯ ನೆಲೆಗಳ ದೃಷ್ಟಿಯಿಂದ ಸಾಕಷ್ಟು ಪ್ರಗತಿ ಯಾಗಿರುವುದು ನಿಜ. ಆದರೆ ಅದು ಎಷ್ಟು ಸಮಾಧಾನಕರವಾಗಿದೆ ಎಂಬುದರ ಬಗ್ಗೆ ನಿರ್ಣಾಯಕ ಮಾತುಗಳನ್ನಾಡುವುದು ಕಷ್ಟಕರ. ಇವೇ ನೆಲೆಗಳಲ್ಲಿ ಇನ್ನೂ ಹೆಚ್ಚು ಶೋಧನಾ ಕಾರ್ಯ ಆಗಬೇಕಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಸದ್ಯ ನಡೆದ ಶೋಧನೆ, ಅನ್ವೇಷಣೆ, ಪುನರ್‌ಪರಿಶೀಲನೆಗಳಿಂದ ಶಾಸನಾಧ್ಯಯನ ಬಹಳಷ್ಟು ಪ್ರತಿಫಲ ನೀಡಿರುವುದು ಕಾಣುತ್ತಿದೆ.

ಪ್ರಸ್ತುತ ಸಮೀಕ್ಷೆಯಲ್ಲಿ ಹೊಸ ಶಾಸನಗಳ ಶೋಧನೆ, ಆಗಲೇ ತಿಳಿದಿರುವ ಶಾಸನಗಳ ಪುನರ್‌ಪರಿಶೀಲನೆ, ಶಾಸನಗಳಲ್ಲಿ ಪ್ರಸ್ತಾಪಿತ ಮಾಹಿತಿಗಳ ಅಂತರ್‌ವಿಮರ್ಶೆ ಮುಂತಾದವು ಗಳ ಅವಶ್ಯಕತೆ ಮತ್ತು ಪ್ರಯೋಜನವನ್ನು ತೋರಿಸಿ ಕೊಡುವುದು ಮುಖ್ಯ ಉದ್ದೇಶವಾಗಿದೆ. ಅದರೊಂದಿಗೆ ಶಾಸನಗಳ ಅಧ್ಯಯನದಿಂದ ಸಂಸ್ಕೃತಿಯ ವಿವಿಧ ಮುಖಗಳನ್ನು ವಿಶ್ಲೇಷಿಸು ವುದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸಲು ಕೆಲವು ಉದಾಹರಣೆಗಳನ್ನು ಪರಿಶೀಲಿಸ ಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ಎಲ್ಲ ಹೊಸ ಶೋಧಿತ ಶಾಸನಗಳನ್ನು ಪ್ರಸ್ತಾಪಿಸುವುದಿಲ್ಲ. ಅಲ್ಲದೆ, ಕದಂಬ ಮತ್ತು ಬಾದಾಮಿಯ ಚಲುಕ್ಯ ಕಾಲೀನ ಶಾಸನಗಳಿಗೆ ಹೆಚ್ಚು ಒತ್ತು ಕೊಟ್ಟಿದೆ.

ಕರ್ನಾಟಕದಲ್ಲಿ ಈವರೆಗೆ ದೊರೆತಿರುವ ಶಾಸನಗಳಲ್ಲಿ ಮೌರ್ಯ ಸಮ್ರಾಟ್ ಅಶೋಕ ಮಹಾಶಯನು ಹೊರಡಿಸಿದ ಧರ್ಮಲಿಪಿಗಳೇ ಪ್ರಾಚೀನತಮವಾದವುಗಳು. ಅವನು ಪರಿಚಯಿಸಿದ ಬ್ರಾಹ್ಮೀ ಲಿಪಿ ಲೇಖನ ಮಾಧ್ಯಮವಾಗಿ ಪ್ರಾದೇಶಿಕ ವಿಕಾಸ ಹೊಂದಿದ ಬಗೆ ಚಿರಪರಿಚತವಾಗಿದೆ. ಅದೇ ರೀತಿ ಅವನು ಬಳಸಿದ ಪ್ರಾಕೃತ ಭಾಷೆ ಆಡಳಿತ ದಾಖಲೆಗಳ ಭಾಷೆಯಾಗಿ ೬೦೦ ವರ್ಷಗಳಿಗೂ ಹೆಚ್ಚು ಕಾಲ ಬಾಳಿತು. ಆರ್ಯ ಭಾಷಾವರ್ಗದ ಪ್ರಾಕೃತವು  ಉಚ್ಚವರ್ಗದ ಧಾರ್ಮಿಕರ, ಅಧಿಕಾರಿವರ್ಗದ, ವಣಿಕವರ್ಗದ ಸಂಪರ್ಕ ಭಾಷೆಯಾಗಿ, ಆದುದರಿಂದ ಶಾಸನಗಳ ಭಾಷೆಯಾಗಿ, ದಖನ್ ಪ್ರದೇಶದಲ್ಲೆಲ್ಲ ಸ್ಥಾನವುಳಿಸಿಕೊಂಡಿತು. ಸಾತವಾಹನರು, ಅವರ ಸಮಕಾಲೀನ ಕುರ, ಮಹಾರಠಿ ಮುಂತಾದ ತುಂಡರಸರು ಹಾಗೂ ಸಾತವಾಹನೋತ್ತರ ಕಾಲದಲ್ಲಿ ಚುಟು, ಇಕ್ಪ್ವಾಕು, ಪಲ್ಲವ ಮುಂತಾದ ಪ್ರಾದೇಶಿಕ ಅರಸು ವಂಶೀಯರು ಪ್ರಾಕೃತದ ಬಳಕೆ ಉಳಿದುಬರುವುದಕ್ಕೆ ಕಾರಣರಾದರು. ಒಂದು ಹಂತದಲ್ಲಿ ಸಂಸ್ಕೃತ ಭಾಷೆ ಪ್ರಾಕೃತದ ಸ್ಥಾನವನ್ನಾಕ್ರಮಿಸಿತು. ಪ್ರಾಕೃತವೂ ಸಹ ಸಂಸ್ಕೃತದಂತೆ ಪಂಡಿತ ಭಾಷೆಯಾಯಿತು. ಸಾಮಾನ್ಯರ ಆಡು ಭಾಷೆ ದ್ರಾವಿಡ ಭಾಷಾವರ್ಗದ ಕನ್ನಡವಾಗಿದ್ದರೂ ಕರ್ನಾಟಕದಲ್ಲಿ ಕೂಡ ಶಾಸನಗಳಿಗೆ ಪ್ರಾಕೃತದ ಬಳಕೆ ಸಾತವಾಹನ ಮತ್ತು ಸಾತವಾಹನೋತ್ತರ ಕಾಲದಲ್ಲಿ ಅಸ್ತಿತ್ವದಲ್ಲಿತ್ತು.

ಕರ್ನಾಟಕದಲ್ಲಿ ಕದಂಬ ಪೂರ್ವ ಕಾಲದಲ್ಲಿ ಶಿಲಾಶಾಸನಗಳ ಸಂಖ್ಯೆ ಅತಿ ಹೆಚ್ಚು. ತಾಮ್ರಪಟಗಳು ಇಲ್ಲವೆಂದರೂ ತಪ್ಪಾಗದು. ಆದರೆ ಕದಂಬ-ಗಂಗ ಹಂತದಲ್ಲಿ ಶಿಲಾಶಾಸನ ಗಳ ಸಂಖ್ಯೆ ತೀರ ಕಡಿಮೆಯಾಗಿ ತಾಮ್ರಪಟಗಳ ಸಂಖ್ಯೆ ಅತಿ ಹೆಚ್ಚಾಗುತ್ತದೆ ಎಂಬುದು ಗಮನೀಯ. ಇದಕ್ಕೆ ಕಾರಣವೇನೆಂದು ಗುರುತಿಸುವುದು ಸರಳ. ಕದಂಬ ಪೂರ್ವ ಶಾಸನಗಳು ಬೌದ್ಧ ಧರ್ಮಕ್ಕೆ  ಸಂಬಂಧಿಸಿದವಾಗಿದ್ದು ಸನ್ನತಿಯಂತಹ ಅಂದಿನ ಬೌದ್ಧ ಕೇಂದ್ರಗಳಲ್ಲಿ ದೊರೆಯುತ್ತವೆ. ಅವು ಸ್ತೂಪಾದಿಗಳಿಗೆ ಸಂಬಂಧಿಸಿದಂತೆ ಕೆಲವು ಸಲ ಅರಸರಿಂದ, ಹಲವು ಸಲ ಉಪಾಸಕರಿಂದ ಸ್ತೂಪವಿಸ್ತರಣೆ, ಆಯಾಗಥಭಗಳ ಸ್ಥಾಪನೆ, ಮೇಧಿಯ ಶಿಲ್ಪಪಟಗಳ ದಾನ, ಬುದ್ಧ-ಬೋಧಿಸತ್ತ್ವರ ಶಿಲ್ಪಗಳ ಪ್ರತಿಷ್ಠಾಪನೆ ಮುಂತಾದವನ್ನು ದಾಖಲಿಸುತ್ತವೆ. ಕೆಲವು ನಿಧನರಾದವರ ಸ್ಮಾರಕಶಿಲೆಗಳ ಸ್ಥಾಪನೆಯನ್ನು ದಾಖಲು ಮಾಡುತ್ತವೆ. ಇವೆಲ್ಲ ವೈಯಕ್ತಿಕ ಶಾಸನಗಳಾಗಿದ್ದುದರಿಂದ ಇವನ್ನು ತಾಮ್ರಪಟಗಳ ಮೇಲೆ ಬರೆಯುವ ಅವಶ್ಯಕತೆ ಉಂಟಾಗಲಿಲ್ಲ. ಕದಂಬರ ಕಾಲದಿಂದ ಅರಸರು ದೇವದೇಯ (ದೇವಾಲಯಗಳಿಗೆ ಮಾನ್ಯ ವಾಗಿ ನೀಡಿದ ಭೂಮಿದಾನ) ಮತ್ತು ಬ್ರಹ್ಮದೇಯ (ಬ್ರಾಹ್ಮಣರಿಗೆ ಮಾನ್ಯವಾಗಿ ನೀಡಿದ ಭೂದಾನ) ಸ್ವರೂಪದ ದಾನಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನೀಡತೊಡಗಿದರು. ಬ್ರಹ್ಮದೇಯಗಳು ಭಾಗಶಃ ಇಲ್ಲವೆ ಪೂರ್ತಿಯಾಗಿ ತೆರಿಗೆಯಿಂದ ಮುಕ್ತವಾಗಿರುತ್ತಿದ್ದುದರಿಂದ ಅರಸನಲ್ಲಿ ಅಷ್ಟೇ ಅಲ್ಲದೆ ದಾನ ಪಡೆದವರಲ್ಲಿ ಕೂಡ ಶಾಶ್ವತ ಸಾಮಗ್ರಿಯ ಮೆಲೆ ಬರೆದ ಅಧಿಕೃತ ದಾಖಲೆ ಸದಾ ಇರಬೇಕಾಗುತ್ತಿತ್ತು. ಇದಲ್ಲದೆ ಇಂತಹ ದಾನದತ್ತಿಗಳು ಆಚಂದ್ರಾರ್ಕ ಸ್ಥಾಯಿಯಾಗಿ ಕೊಡಲ್ಪಡುತ್ತಿದ್ದವು. ಮುಂದೆ ಬಂದ ಅದೇ ವಂಶದ ಅರಸರಾಗಲಿ ಬೇರೆ ವಂಶಗಳ ಅರಸರಾಗಲಿ ಅವುಗಳನ್ನು ಕಸಿದುಕೊಳ್ಳುವಂತಿರಲಿಲ್ಲ. ಈ ಕಾರಣಗಳಿಂದಾಗಿ ದಾನ ಪಡೆದವರಿಗೆ ರಾಜಮುದ್ರೆಸಹಿತ ತಾಮ್ರಪಟ ಶಾಸನ ನೀಡಲಾಗುತ್ತಿತ್ತು. ಇವು ಅರಸರ ಅಧಿಕಾರಿಗಳಿಗೆ ಪರಿಶೀಲನೆಗೆ ಅನುಕೂಲ ಮಾಡುತ್ತಿದ್ದವು. ಇದೇ ಪ್ರಕಾರ ಸಾಮಾನ್ಯವಾಗಿ ಜೈನಸಂಘಗಳಿಗೆ ಹಾಗೂ ಅಪರೂಪಕ್ಕೆ ಬೌದ್ಧ ಸಂಘಗಳಿಗೆ, ಅರಸರು ಕೊಟ್ಟ ದಾನದತ್ತಿ ಗಳನ್ನು ತಾಮ್ರಪಟ ರೂಪದಲ್ಲಿ ನೀಡಿರುವುದು ಗೋಚರಿಸುತ್ತದೆ. ದೇವದೇಯಗಳು ದೇವಾಲಯಗಳಿಗೆ ಸಂಬಂಧಿಸಿರುತ್ತಿದ್ದವು. ಆದುದರಿಂದ ತಾಮ್ರಪಟವನ್ನು ದಾಖಲೆಯಾಗಿ ಕೊಡುವುದರೊಂದಿಗೆ ಅಧಿಕಾರಿಗಳ/ಸಾಮಾನ್ಯರ ಗಮನಕ್ಕಾಗಿ ಅವುಗಳನ್ನು ಸಂಬಂಧಿಸಿದ ದೇವಾಲಯದ ಮುಂದೆ ಶಿಲಾಶಾಸನವಾಗಿ ಸ್ಥಾಪಿಸಲಾಗುತ್ತಿತ್ತು. ಮುಂದೆ ದೇವಾಲಯಗಳ/ಬಸದಿಗಳ ನಿರ್ಮಾಣ ಕಾರ್ಯ ಹೆಚ್ಚು ಜನಪ್ರಿಯವಾಗತೊಡಗಿದಾಗ, ಅರಸರಷ್ಟೆ ಅಲ್ಲದೆ ಭಕ್ತಾದಿಗಳೂ ಭೂಮಿ-ಧನಾದಿಗಳನ್ನು ದಾನ ಕೊಡ ತೊಡಗಿದಾಗ ಮತ್ತೆ ಶಿಲಾಶಾಸನಗಳ ಸಂಖ್ಯೆ ಹೆಚ್ಚತೊಡಗಿದ್ದನ್ನು ಕಾಣಬಹುದು.

ಶಾಸನಗಳ ಭಾಷಾ ದೃಷ್ಟಿಯಿಂದ ಕದಂಬರದು ಪರ್ವಕಾಲ. ಮೊದಲ ಒಂದು ಪ್ರಾಕೃತ ಶಾಸನವನ್ನು ಹಾಗೂ ಒಂದೆರಡು ಕನ್ನಡ ಶಾಸನಗಳನ್ನು ಹೊರತುಪಡಿಸಿ ಅವರ ಉಳಿದೆಲ್ಲ ಶಾಸನಗಳು ಸಂಸ್ಕೃತದಲ್ಲಿವೆ. ವೈದಿಕ ಪರಂಪರೆಯ ಏಳ್ಗೆ ಮತ್ತು ಪ್ರಸಾರ, ಬೌದ್ಧಮತದ ಜನಪ್ರಿಯತೆಯ ಇಳಿಗಾಲ ಇದಕ್ಕೆ ಕಾರಣವೆಂದು ಬೇರೆ ಹೇಳಬೇಕಿಲ್ಲ. ಜೈನರೂ ಬೌದ್ಧರೂ ಪಂಡಿತ ಭಾಷೆಯಾಗಿ ಸಂಸ್ಕೃತಕ್ಕೆ ಮಾನ್ಯತೆ ನೀಡಿದ್ದು ಕೂಡ ಇದಕ್ಕೆ ಕಾರಣ. ಅದರಂತೆ ಬ್ರಹ್ಮದೇಯೇತರ ಶಾಸನಗಳಿಗೆ ಆಡುಭಾಷೆಯಾಗಿದ್ದ ಕನ್ನಡ ಬಳಕೆಯಾಗತೊಡಗಿದ್ದುದು ಕೂಡ ಈ ಕಾಲದ ಗಮನೀಯ ಅಂಶ. ಪ್ರಾಕೃತ ಶಾಸನ ಭಾಷೆಯಾಗಿ ತನ್ನ ಸ್ಥಾನವನ್ನು ಕಳೆದುಕೊಂಡಿತು. ರಾಜಘಟ್ಟದ ಬೌದ್ಧ ಚೈತ್ಯಾಲಯ ಮತ್ತು ವಿಹಾರದ ಉತ್ಖನನದಲ್ಲಿ ಹಲವು ಸಂಖ್ಯೆಯಲ್ಲಿ ದೊರೆತಿರುವ ಹರಕೆಯ ಸ್ತೂಪಗಳಲ್ಲಿಟ್ಟಿರುವ, ಅಚ್ಚಿನಿಂದ ತಯಾರಿಸಿ ರುವ ಸುಟ್ಟಮಣ್ಣಿನ ಬಿಲ್ಲೆಗಳ ಮೇಲೆ ಸು. ೫ನೇ ಶತಮಾನದ ಲಿಪಿಯಲ್ಲಿರುವ ಬುದ್ಧನನ್ನು ಸ್ತುತಿಸುವ ಸೂತ್ರ ಇನ್ನೂ ಪ್ರಾಕೃತದಲ್ಲಿಯೇ ಇದೆ ಎಂಬುದು ಒಂದು ದೃಷ್ಟಿಯಿಂದ ಗಮನಾರ್ಹ.

ಲಿಪಿಯ ದೃಷ್ಟಿಯಿಂದಲೂ ಕದಂಬ ಶಾಸನಗಳು ಗಮನೀಯವಾಗಿವೆ. ಬಹುತೇಕ ಶಾಸನ ಗಳೆಲ್ಲ ಪೇಟಿಕಾಶಿರ (ಚೌಕ ಪೆಟ್ಟಿಗೆಯಾಕಾರದ ತೆಲೆಯುಳ್ಳ) ಬ್ರಾಹ್ಮೀ ಲಿಪಿಯಲ್ಲಿವೆ. ಮುಂಚೆ ಸಾತವಾಹನರ ಕಾಲದಲ್ಲಿ ಬಳಕೆಯಲ್ಲಿದ್ದ ಬ್ರಾಹ್ಮೀ ಲಿಪಿಯ ಅಕ್ಷರಗಳ ಶಿರೋಭಾಗ ತ್ರಿಕೋಣ ಆಕಾರದಲ್ಲಿತ್ತು. ಉದಾಹರಣೆಗೆ ಸಿವಸಿರಿ ಪುಳುಮಾವಿಯ ಬನವಾಸಿ ಶಾಸನ (ಕೃಷ್ಣನ್ ಕೆ.ಜಿ., ೧೯೮೯, ನಂ. ೧೭೮). ಈಗ ಅದು ಚೌಕ ಪೆಟ್ಟಿಗೆಯ ಆಕಾರ ಕಂಡಿದೆ. ಇದು ಅಕ್ಷರಗಳಿಗೆ ಅಲಂಕಾರಿಕ ರೂಪ ಕೊಡುವುದಕ್ಕೆ ಸಹಕಾರಿಯಾಯಿತು.

ಅಶೋಕನ ಬ್ರಾಹ್ಮೀ ಲಿಪಿಯಿಂದ ಸಾತವಾಹನರ ಕಾಲದ ಮೊಳೆತಲೆಯ ಲಿಪಿಯ ಮೂಲಕ ಕದಂಬರ ಕಾಲದ ಪೇಟಿಕಾಶಿರ ಲಿಪಿಯ ರೂಪ ವಿಕಾಸವಾದುದು ಮುಖ್ಯವಾಗಿ ಎರಡು ಕಾರಣಗಳಿಂದ. ಒಂದು, ಲಿಪಿಯ ಬಳಕೆಯ ಪ್ರಮಾಣದಲ್ಲಿ ಹೆಚ್ಚಳ; ಎರಡು, ಬರವಣಿಗೆಗೆ ಬಳಕೆಯಾಗುತ್ತಿದ್ದ ಲೇಖನ ಸಾಮಗ್ರಿ. ಮೌರ್ಯರ ಕಾಲದಿಂದೀಚೆಗೆ ವೈವಿಧ್ಯಮಯ ಸಾಹಿತ್ಯದ ರಚನೆಯಲ್ಲಿ ಹೆಚ್ಚಳವಾದುದು ತಿಳಿದ ವಿಷಯವೇ ಆಗಿದೆ. ಇದು ಲಿಪಿಯ ಬಳಕೆಯ ಪ್ರಮಾಣದಲ್ಲಿ ಹೆಚ್ಚಳವಾದುದರ ಪರೋಕ್ಷ ಸೂಚಕವೂ ಆಗಿದೆ. ಬರವಣಿಗೆಗೆ ಹೆಚ್ಚು ಹೆಚ್ಚು ಬಳಕೆಯಾಗುವ ಲಿಪಿಯ ವಿಕಾಸ ಹೆಚ್ಚು ತೀವ್ರಗತಿಯಲ್ಲಿ ಉಂಟಾಗುತ್ತದೆ. ಅದು ಪ್ರಾದೇಶಿಕ ವೈವಿಧ್ಯಗಳನ್ನೂ ಗಳಿಸಲಾರಂಭಿಸುತ್ತದೆ. ಆಯಾ ಪ್ರದೇಶ ದಲ್ಲಿ ವೈವಿಧ್ಯಗಳನ್ನೂ ಮೀರಿ  ಒಪ್ಪಿತ ಲಿಪಿ ಎನ್ನಬಹುದಾದ ರೂಪದಲ್ಲಿ ಶಾಸನಗಳ ಲಿಪಿ ಕಾಣುತ್ತದೆ. ಎರಡನೆಯದಾಗಿ, ಲೇಖನಸಾಮಗ್ರಿ. ಅಶೋಕನ ಬ್ರಾಹ್ಮೀ ಲಿಪಿಯಿಂದ ಮೂಡಿದ ಸಾತವಾಹನ ಕಾಲದ ಮೊಳೆತಲೆಯ ಲಿಪಿಯಾಗಲಿ, ನಂತರ ಮೂಡಿಕೊಂಡ ಪೇಟಿಕಾಶಿರ ಲಿಪಿಯಾಗಲಿ, ಬಹುತೇಕ ಷಾಯಿ ಹಾಗೂ ಲೇಖನಿಯ ಬಳಕೆಯ ಸೂಚಕ ವಾಗಿದೆ. ತಾಳೆಗರಿಯ ಮೇಲೆ ಕಂಟಕದಿಂದ ಬರೆಯುವ ಪರಂಪರೆ ದಕ್ಷಿಣದಲ್ಲಿ ಬಲವಾಗಿದ್ದು ದರಿಂದ ಬ್ರಾಹ್ಮೀಲಿಪಿಯ ದಕ್ಷಿಣ ಶಾಖೆ ತುಸು ದುಂಡು ರೂಪವನ್ನು ಪಡೆದಿರಬಹುದಾದರೂ ಮೊಳೆತಲೆ ಮತ್ತು ಪೇಟಿಕಾಶಿರ ಅಕ್ಷರಗಳು ಭೂರ್ಜಪತ್ರದ ಮೇಲೆ ಷಾಯಿಯಿಂದ ಬರೆಯುವ ಪರಂಪರೆಯಿಂದ ವಿಕಾಸಗೊಂಡಿವೆ ಎಂದು ಹೇಳುವುದು ಸಮಂಜಸವಾಗುತ್ತದೆ. ಷಾಯಿಯಿಂದ ಅಕ್ಷರವನ್ನು ಬರೆದಾಗ ಲೇಖನಿಯನ್ನು ಪತ್ರದ ಮೇಲೆ ಮೊದಲು ಇರಿಸಿದಲ್ಲಿ ಷಾಯಿ ಹೆಚ್ಚು ದಪ್ಪವಾಗಿದ್ದು, ಲೇಖನಿ ಚಲಿಸಿದಂತೆ ಸಪುರವಾಗಿ ಸಾಗುತ್ತದೆ. ಅಕ್ಷರಗಳನ್ನು ಬರೆಯಲು ಕಲಿಯುವ ವಿದ್ಯಾರ್ಥಿ ಇಂತಹ ದಪ್ಪತಲೆಯ ಅಕ್ಷರಗಳನ್ನು ಅನುಕರಣೆ ಮಾಡುವುದು ಸಹಜ. ಈ ದಪ್ಪತಲೆಯ ಅಕ್ಷರಗಳೇ ಮೊಳೆತಲೆಯ ರೂಪದ ಅಕ್ಷರಗಳಾದವು. ಅದೇ ಪ್ರಕ್ರಿಯೆಯಿಂದಾಗಿ ಮೊಳೆತಲೆ ಪೇಟೆಕಾಶಿರವಾಗಿ ಪರಿವರ್ತಿತವಾಯಿತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕದಂಬರ ಕಾಲದಲ್ಲಿ ಸಾಮಾನ್ಯ ಬರವಣಿಗೆಗೆ ತಾಳೆಗರಿಗಳನ್ನು ಬಳಸಿರಬಹು ದಾದರೂ ಆಡಳಿತ ದಾಖಲೆಗಳಿಗೆ ಭೂರ್ಜಪತ್ರ/ವಸ್ತ್ರ, ಷಾಯಿ, ಲೇಖನಿಯನ್ನು ಬಳಸು ತ್ತಿದ್ದುದು ಪೇಟಿಕಾಶಿರ ಲಿಪಿಯಿಂದಾಗಿ ಪರೋಕ್ಷವಾಗಿ ಸೂಚಿತವಾಗುತ್ತದೆ. ಅಂತಹ ಅಕ್ಷರ ರೂಪವನ್ನು ತಾಳೆಗರಿಯ ಮೇಲೆ ಕಂಟಕದಿಂದ ಬರೆಯುವುದು ಕಷ್ಟತರ. ಇದೇ ರೀತಿಯ ಪೇಟಿಕಾಶಿರ ಅಕ್ಷರಗಳನ್ನು ಸಮಕಾಲೀನ ವಾಕಾಟಕರ ಶಾಸನಗಳಲ್ಲಿಯೂ ಕಾಣಬಹುದು ಎಂಬುದು ಮೇಲಿನ ನಿರ್ಣಯಕ್ಕೆ ಇನ್ನೊಂದು ಸಾಕ್ಷ್ಯವೊದಗಿಸುತ್ತದೆ. ಕದಂಬರ ಮತ್ತು ವಾಕಾಟಕರ ಪೇಟಿಕಾಶಿರ ಲಿಪಿಗಳ ನಡುವೆ ಮುಖ್ಯ ವ್ಯತ್ಯಾಸವೆಂದರೆ, ಕದಂಬ ಶಾಸನಗಳಲ್ಲಿ ಅಕ್ಷರಗಳ ಚೌಕ ತಲೆಯ ಚೌಕದ ಒಳಭಾಗವನ್ನು ಕೆತ್ತಿ ತೆಗೆದಿದೆಯಾದರೆ ವಾಕಾಟಕರ ಶಾಸನಗಳಲ್ಲಿ ಚೌಕ ತಲೆಯ ಹೊರ ರೇಖೆಗಳನ್ನು ಮಾತ್ರ ತೋರಿಸಿರುವುದು. ಇದು ಅಲಂಕಾರಿಕ ಲಿಪಿಯಾಗಿಯೂ ಗೋಚರಿಸುತ್ತದೆ. ತಾಮ್ರಪಟ ಶಾಸನಗಳಲ್ಲಿ ಅಷ್ಟೇ ಅಲ್ಲದೆ ಶಿಲಾಶಾಸನಗಳಿಗೆ ಕೂಡ ಈ ಹಂತದಲ್ಲಿ ಪೇಟಿಕಾಶಿರ ಲಿಪಿಯನ್ನು ಬಳಸಿರುವುದು ಗಮನೀಯ. ಅತ್ಯುತ್ತಮ ಪೇಟಿಕಾಶಿರ ಅಲಂಕಾರಿಕ ಲಿಪಿಯ ಉದಾಹರಣೆ ಮೃಗೇಶವರ್ಮನ ಬನವಾಸಿಯ ಸ್ತಂಭಶಾಸನದಲ್ಲಿ ಕಾಣುತ್ತದೆ (ಗೋಪಾಲ ಬಿ.ಆರ್. ೧೯೭೧, ಚಿತ್ರ).

ಕದಂಬರ ಶಾಸನಗಳು ನಿಖರ ಕಾಲಮಾನ ಗಣನೆಯ ಕ್ರಮವನ್ನು ಅನುಸರಿಸಿಲ್ಲ. ಕೇವಲ ಅರಸನ ಆಳ್ವಿಕೆಯ ವರ್ಷವನ್ನು ಹೇಳುತ್ತವೆ. ಹೀಗಾಗಿ ಅರಸರು ಆಳಿದ ಒಟ್ಟು ವರ್ಷಗಳನ್ನಾಗಲಿ, ನಾವೀಗ ಅನುಸರಿಸುವ ಕ್ರಿಸ್ತ ಶಕದ ತೇದಿಯನ್ನಾಗಲಿ ನಿರ್ಧರಿಸುವುದು ಕಷ್ಟವಾಗುತ್ತದೆ. ಆದುದರಿಂದ ಕದಂಬರ ವಂಶಾವಳಿಯಲ್ಲಿ ಸೂಚಿಸಬಹುದಾದ ಕಾಲಮಾನ ವಿವರಗಳು ಕೇವಲ ಸಾಧಾರ ಊಹೆಗಳಾಗಿರುತ್ತವೆ.

ಈವರೆಗೆ ಬೆಳಕಿಗೆ ಬಂದಿರುವ ಕದಂಬರ ಶಾಸನಗಳಲ್ಲಿ ಪ್ರಾಚೀನತಮವಾದುದು ಮಳವಳ್ಳಿಯ (ಶಿವಮೊಗ್ಗ ಜಿಲ್ಲೆ) ಶಿಲಾಸ್ತಂಭದ ಮೇಲಿನ ಪ್ರಾಕೃತ ಶಾಸನ. ಈ ಶಾಸನದ ಅರ್ಥವಿವರಣೆಯಲ್ಲಿ ಆಗಲೇ ಭಿನ್ನಾಭಿಪ್ರಾಯಗಳಿದ್ದವು. ಎಪಿಗ್ರಾಫಿಯ ಕರ್ನಾಟಿಕ ಶಾಸನ ಸಂಪುಟದಲ್ಲಿ (ಹಳೆಯ ಸಂಪುಟ ೭, ಎಸ್.ಕೆ. ೨೬೩) ಇದರ ಪ್ರಾರಂಭದಲ್ಲಿದ್ದ ದೇವಸ್ತುತಿಯ ಭಾಗವನ್ನು ‘ಜಯತಿ ಭಗವಾನ್ ಮಟಪಟಿದೇವೋ’ ಎಂಬುದಾಗಿ ಓದಲಾಗಿತ್ತು. ಇಲ್ಲಿ ಉಲ್ಲಿಖಿತ ‘ಮಟಪಟಿದೇವ’ನು ಬುದ್ಧನಾಗಿರಬಹುದಾದ ಸಾಧ್ಯತೆಯನ್ನೂ ಸೂಚಿಸಲಾಗಿತ್ತು. ರಘುನಾಥಭಟ್ಟರು ಈ ಶಾಸನ ಭಾಗವನ್ನು ಪುನರ್‌ಪರಿಶೀಲಿಸಿ ‘ಮಟಪಟಿದೇವ’ ಓದಿಗೆ ಬದಲಾಗಿ ‘ಮಳಪಳಿದೇವ’ ಎಂಬ ಸರಿಯಾದ ಓದನ್ನು ನೀಡಿದರು. ಮಳಪಳಿಯನ್ನು ಶಾಸನ ದೊರೆತಿರುವ ಇಂದಿನ ಮಳವಳ್ಳಿಗೆ ಸಮೀಕರಿಸುವುದು ಸಾಧ್ಯವಾಯಿತು. ಈ ಮಳಪಳಿ ದೇವನ ದೇವಾಲಯ ಆ ಗ್ರಾಮದಲ್ಲಿದ್ದ ಶಿವ ದೇವಾಲಯವಾಗಿದ್ದಿರಬೇಕು. ಇದು ನಂತರದ ಶಾಸನಗಳಲ್ಲಿ ಕಾಣುವ ‘ಮೂಲಸ್ಥಾನದೇವ’ರ ಕಲ್ಪನೆಯ ಪ್ರಾಚೀನತೆಯನ್ನು ಸೂಚಿಸುತ್ತದೆ.

ಮಳವಳ್ಳಿಯ ಈ ಶಾಸನದಲ್ಲಿ ಉಲ್ಲಿಖಿತ ಕದಂಬ ಅರಸನ ಹೆಸರಿನ ಬಗ್ಗೆ ಕೂಡ ಭಿನ್ನಾಭಿಪ್ರಾಯವಿದೆ. ಇದೊಂದು ಪುನರ್ನವೀಕರಣ ‘ದೇವದೇಯ’ ಶಾಸನ. ಮುಂಚೆ ಚುಟು ಅರಸ ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿಯು ಕೊಂಡಮಾನನೆಂಬ ಬ್ರಾಹ್ಮಣನಿಗೆ ಸರ್ವಬಾಧಾಪರಿಹಾರವಾಗಿ ಕೊಡಮಾಡಿದ್ದ ಸಹಲಾಟವೀ ಗ್ರಾಮವನ್ನು ಅದೇ ಕುಲದ ಬ್ರಾಹ್ಮಣ ಶ್ರೀನಾಗದತ್ತನಿಗೆ ಸುತ್ತಮುತ್ತಲಿನ ಇತರ ೧೧ ಗ್ರಾಮಗಳನ್ನು ಸೇರಿಸಿ ಪುನರ್ದತ್ತಿ ಯಾಗಿ ಕೊಟ್ಟುದನ್ನು ದಾಖಲಿಸುತ್ತದೆ. ಆದರೆ ಪ್ರಾರಂಭದಲ್ಲಿ ಹೆಸರಿಸಲಾಗಿರುವ ಶಿವಸ್ಕಂದ ವರ್ಮನು ಕದಂಬ ಅರಸನೊ ಅಲ್ಲವೊ ಎಂಬುದು ಚರ್ಚೆಗೆ ಅವಕಾಶ ಮಾಡಿದೆ. ವ್ಯಾಕರಣ ಪ್ರಕಾರ ಶಾಸನದಲ್ಲಿ ಉಲ್ಲಿಖಿತ ಶಿವಸ್ಕಂದವರ್ಮ ಮತ್ತು ಕದಂಬ ಅರಸ ಬೇರೆ ಬೇರೆಯಾಗು ತ್ತಾರೆ. ಆದರೆ ಸಾಂದರ್ಭಿಕ ದೃಷ್ಟಿಯಿಂದ ಇವರಿಬ್ಬರೂ ಒಬ್ಬನೆ ವ್ಯಕ್ತಿ ಎಂಬುದಾಗಿ ಅನೇಕರು ಭಾವಿಸುತ್ತಾರೆ. ಶಿವಸ್ಕಂದವರ್ಮ ಎಂಬ ಹೆಸರಿನ ಕದಂಬ ಅರಸನು ಕದಂಬರ ಇನ್ನಾವ ಶಾಸನದಿಂದಲೂ ತಿಳಿದಿಲ್ಲ. ಶಿವಸ್ಕಂದವರ್ಮನೆಂಬ ಸಮಕಾಲೀನ ಪಲ್ಲವ ಅರಸನು ಇದ್ದುದು ಶಾಸನಗಳಿಂದ ತಿಳಿದಿದೆ. ಕದಂಬ ಮಯೂರವರ್ಮನು ಪಟ್ಟವೇರುವ ಮೊದಲು ಪಲ್ಲವರು ಬನವಾಸಿ ರಾಜ್ಯದ ಮೇಲೆ ಹಿಡಿತ ಸಾಧಿಸಿದ್ದರೆಂಬುದು ತಾಳಗುಂದ ಶಾಸನದಿಂದ ವ್ಯಕ್ತ ವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಚೆ ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿಯು ನೀಡಿದ್ದ ಗ್ರಾಮದಾನವನ್ನು ಪಲ್ಲವ ಶಿವಸ್ಕಂದವರ್ಮನು ಪುನರ್ದತ್ತಿಯಾಗಿ ನೀಡಿದ್ದನೆಂದೂ, ಅದು ಲುಪ್ತವಾಗಿದ್ದುದರಿಂದ ಅನಾಮಿಕ ಕದಂಬ ಅರಸನೊಬ್ಬನು ಪುನರ್ನವೀಕರಿಸಿ ಹೊಸ ಗ್ರಾಮಗಳನ್ನು ಸೇರಿಸಿ ಕೊಂಡಮಾನನ ವಂಶದ ಶ್ರೀನಾಗದತ್ತನಿಗೆ ಕೊಟ್ಟನೆಂದೂ ಅಭಿಪ್ರಾಯ ವಾಗುತ್ತದೆ. ಆದರೆ ಪುನರ್ನವೀಕರಿಸಿ ದಾನಕೊಟ್ಟ ಕದಂಬ ಅರಸನ ಹೆಸರನ್ನು ದಾಖಲಿಸದೆ, ಮುಂಚಿನ ಅರಸನಾಗಿದ್ದ ಶಿವಸ್ಕಂದವರ್ಮನನ್ನು ಶಾಸನ ಹೆಸರಿಸಿರುವುದೆಂದು ಭಾವಿಸುವುದು ಸಮಂಜಸವಾಗಲಾರದು. ಹಾಗಾದರೆ ದತ್ತಿಯನ್ನು ಪುನರ್ನವೀಕರಿಸಿದ ಕದಂಬ ಅರಸ ಶಿವಸ್ಕಂದವರ್ಮನೇ ಎಂದು ಪರಿಗಣಿಸಬೇಕಾಗುತ್ತದೆ. ಪಲ್ಲವರು ಮಯೂರವರ್ಮನ ಶಕ್ತಿಪ್ರತಾಪಗಳಿಂದ ಪ್ರಭಾವಿತರಾಗಿ ಅವನ ಸ್ನೇಹ ಬಯಸಿದರೆಂದೂ, ಮಯೂರನು ಪಲ್ಲವ ಅರಸನಲ್ಲಿ ಮಾಂಡಲೀಕತ್ವ ಪಡೆದ ಮೇಲೆ ಯುದ್ಧಗಳಲ್ಲಿ ಅವನು ತೋರಿದ ಶೌರ್ಯದಿಂದ ಸಂಪ್ರೀತನಾಗಿ ಪಲ್ಲವ ಅರಸನು ತನ್ನ ಕರಪಲ್ಲವಗಳಿಂದಲೇ ಅವನಿಗೆ ಪಟ್ಟಬಂಧ ಮಾಡಿ ಪಶ್ಚಿಮ ಸಮುದ್ರದಿಂದ ಪ್ರೇಹಾರದವರೆಗಿನ ಪ್ರದೇಶದ ಅರಸನನ್ನಾಗಿ ಮಾಡಿದನೆಂದೂ ತಾಳಗುಂದ ಶಾಸನ ಹೇಳುತ್ತದೆ. ಮಯೂರನಿಗೆ ಪಟ್ಟಬಂಧ ಮಾಡಿದ ಪಲ್ಲವ ಅರಸನು ಶಿವಸ್ಕಂದವರ್ಮನೇ ಆಗಿದ್ದು, ಅಂದು ಕಾಣುವ ಪರಂಪರೆಯಂತೆ ಮಯೂರನು ಪಲ್ಲವ ಅರಸನ ಹೆಸರನ್ನು ಧರಿಸಿರಬೇಕೆಂಬುದಾಗಿ ಊಹಿಸಲು ಅವಕಾಶವಿದೆ (ಈ ಪರಂಪರೆ ಮುಖ್ಯವಾಗಿ ಸಮಕಾಲೀನ ಗಂಗರ ಶಾಸನಗಳಲ್ಲಿ ವ್ಯಕ್ತವಾಗಿದೆ). ಮಯೂರ ಎಂಬುದು ವ್ಯಕ್ತಿನಾಮವಾಗಿ ಪ್ರಾಚೀನ ಕಾಲದಲ್ಲಿ ಆಗಾಗ ಗೋಚರಿಸುತ್ತಿದ್ದು ಮಯೂರವಾಹನನೆನಿಸಿದ ಸ್ಕಂದನಿಗೆ ಪರ್ಯಾಯವಾಗಿ ಬಳಕೆಯಲ್ಲಿದ್ದಿರುವಂತೆ ಕಾಣುತ್ತದೆ. ಅಂತಾಗಿ ಕದಂಬ ಮಯೂರವರ್ಮನೂ ಮಳವಳ್ಳಿ ಶಾಸನದ ಕದಂಬ ಶಿವಸ್ಕಂದವರ್ಮನೂ ಅಭಿನ್ನರೆಂದು ತಿಳಿಯಬಹುದು. ಮಳವಳ್ಳಿಯ ಶಾಸನವು ಕದಂಬ ಅರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಹೊರಟ ಶಾಸನ ಎಂಬುದು ಈ ದೃಷ್ಟಿಯಿಂದ ಗಮನೀಯವಾಗಿದೆ. ಕ್ರಮೇಣ ಮಯೂರನು ಪಲ್ಲವರಿಂದ ಪೂರ್ತಿ ಸ್ವತಂತ್ರನಾದ ಮೇಲೆ ತನ್ನ ಮೂಲ ಹೆಸರು ‘ಮಯೂರ’ ಎಂಬುದನ್ನೇ ಬಳಕೆಯಲ್ಲಿಟ್ಟಿರಬೇಕು. ಹಾಗೆಯೇ ಶಾಸನಗಳಿಗೆ ಸಂಸ್ಕೃತ ಭಾಷೆಯನ್ನು ಬಳಸಲು ತೊಡಗಿರಬೇಕು.

ಈ ಶಾಸನದಲ್ಲಿರುವ ಮಾಹಿತಿಯ ಕುರಿತು ಇನ್ನೆರಡು ಮಾತು ಹೇಳಬಹುದು. ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿಯ ಶಾಸನದಲ್ಲಿ ದಾನ ನೀಡಿದ ಗ್ರಾಮದ ಹೆಸರು ‘ಸಹಲಾಟವಿ’, ಅಂದರೆ ‘ಕೃಷಿಗೆ ಯೋಗ್ಯವಾಗಿ ಪರಿವರ್ತಿಸಲಾಗಿದ್ದ ಅಡವಿ’. ಹೀಗೆ ಕೃಷಿ ವಿಸ್ತರಣೆಗೋಸ್ಕರ ಅಡವಿಯನ್ನು ಕಡಿದು ಹೊಸ ವಾಸ್ತವ್ಯ ನೆಲೆಗಳನ್ನು ರೂಪಿಸುವ ಕ್ರಮ ಸಾತವಾಹನೋತ್ತರ ಕಾಲದಲ್ಲಿ ಈ ಪ್ರದೇಶದಲ್ಲಿ ಆರಂಭವಾದುದನ್ನು ಗುರುತಿಸಬಹುದು. ಚುಟು-ಕದಂಬ ಕಾಲದ ಆರ್ಥಿಕ ಇತಿಹಾಸದ ದೃಷ್ಟಿಯಿಂದ ಇದು ಮಹತ್ವದ ಮಾಹಿತಿಯಾಗಿದೆ. ಮಳವಳ್ಳಿ ಶಾಸನದಲ್ಲಿ ಉಲ್ಲಿಖಿತ ಎಲ್ಲ ಗ್ರಾಮಗಳನ್ನು ಗುರುತಿಸುವ ಪ್ರಯತ್ನ ಆಗಬೇಕಿದೆ.

ಕದಂಬರ ಕಾಲದ ಶಾಸನಗಳ ಪುನರ್‌ಪರಿಶೀಲನೆಯ ಅವಶ್ಯಕತೆಯನ್ನು ಎತ್ತಿ ತೋರಿಸಿದ ಈಚಿನ ಶೋಧನೆಗಳಲ್ಲಿ ಮಯೂರವರ್ಮನ ಚಂದ್ರವಳ್ಳಿ ಶಾಸನ ಉಲ್ಲೇಖನೀಯ. ಇದರ ಮರುಪರಿಶೀಲನೆಯ ಮೂಲಕ ರಾಜಶೇಖರಪ್ಪ ಅವರು ಮಹತ್ವದ ವಿಚಾರಗಳನ್ನು ಬೆಳಕಿಗೆ ತಂದರು. ಮುಂಚೆ ಎಂ.ಎಚ್. ಕೃಷ್ಣ ಅವರ ಓದನ್ನು ಅವಲಂಬಿಸಿ ಈ ಶಾಸನವು ಪ್ರಾಕೃತ ಭಾಷೆಯಲ್ಲಿದೆಯೆಂದೂ ಅದರಲ್ಲಿ ತ್ರೇಕೂಟ, ಆಭೀರ, ಪಲ್ಲವ, ಪಾರಿಯಾತ್ರಿಕ, ಸಕಸ್ಥಾಣ, ಸಯಿಂದಕ, ಪುಣ್ಣಾಟ ಮತ್ತು ಮೋಕರಿಗಳನ್ನು ಜಯಿಸಿದ್ದ ಕದಂಬ ಮಯೂರಶರ್ಮನು ತಟಾಕವನ್ನು ಕಟ್ಟಿಸಿದ ಬಗ್ಗೆ ಉಲ್ಲೇಖವಿದೆಯೆಂದೂ ನಂಬಲಾಗಿತ್ತು. ರಾಜಶೇಖರಪ್ಪ ಅವರು ಇದರ ಪಾಠವನ್ನು ಸ್ಥಳದಲ್ಲಿಯೇ ಪರೀಕ್ಷಿಸಿ ಭಿನ್ನ ಮಾಹಿತಿಯನ್ನು ಹೊರತಂದಿದ್ದಾರೆ. ಅವರ ಪ್ರಕಾರ ಇದರ ಭಾಷೆ ಸಂಸ್ಕೃತ. ಇದು ಕದಂಬ ಮಯೂರವರ್ಮನು ತಟಾಕವನ್ನು ದೃಢಗೊಳಿಸಿದ ಬಗ್ಗೆ, (ಅದಕ್ಕೆ ಸುಂದರ?) ರೂಪವನ್ನು ರಚಿಸಿದ ಬಗ್ಗೆ ಹಾಗೂ ವನವಾಸದ (ಕಾಡಿನ ವಾಸದ) ನೆಲೆಯನ್ನು ಸ್ಥಾಪಿಸಿದ ಬಗ್ಗೆ ಹೇಳುತ್ತದೆ. ಕೊನೆಯ ಸಾಲಿನಲ್ಲಿ ಕುಪಣದ (ಇಂದಿನ ಕೊಪ್ಪಳದ, ಕೊಪ್ಪಳ ಜಿಲ್ಲೆ) ಚಮ ಎಂಬಾತನ (ಬಹುಶಃ ಈತ ಲಿಪಿಕಾರ) ಉಲ್ಲೇಖವಿದೆ. ಅಲ್ಲಿಗೆ ಕದಂಬ ಮಯೂರಶರ್ಮನಿಗೆ ಆರೋಪಿಸಲಾಗಿದ್ದ ವಿಜಯಗಳನ್ನು ಕೈಬಿಡಬೇಕಾಗುತ್ತದೆ.

ಶಾಸನ ಪಾಠದ ಪುನರ್‌ಪರಿಶೀಲನೆಯಿಂದಾಗುವ ಪ್ರಯೋಜನಕ್ಕೆ ಇನ್ನೊಂದು ಉದಾಹರಣೆ ಪ್ರಸಿದ್ಧ ಹಲ್ಮಿಡಿಯ ಕನ್ನಡ ಶಾಸನ. ಈ ಶಾಸನದ ೮-೯ನೇ ಸಾಲುಗಳು ಅರ್ಥವಿವರಣೆಗೆ ಬಹು ತೊಡಕನ್ನೊಡ್ಡಿವೆ: ‘ಪಶುಪತಿನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ’. ಈಚೆಗೆ ಪ್ರಸಿದ್ಧ ಶಾಸನತಜ್ಞ ಕೆ.ವಿ. ರಮೇಶ್ ಅವರು ಇದರ ಸರಿಯಾದ ಓದು ‘ಪಶುಪತಿನಾಮಧೇಯನಾ ಅರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ’ ಆಗಬೇಕೆಂದು ಪ್ರತಿಪಾದಿಸಿದ್ದಾರೆ. ಬಹುಶಃ ಇದು ಪಶುಪತಿ ಮತ್ತು ಅರಕ್ಕೆಲ್ಲ ಎಂಬವು ಒಬ್ಬನೇ ವ್ಯಕ್ತಿಯ ಬಿರುದು-ಹೆಸರುಗಳಿರಬೇಕೆಂದು ಸೂಚಿಸುವಂತಿದೆ. ಅರಕ್ಕೆಲ್ಲ ಎಂಬ ಹೆಸರುಳ್ಳ ವ್ಯಕ್ತಿಗಳಿದ್ದುದು ಬೇರೆ ಶಾಸನಗಳಿಂದ ತಿಳಿದಿದೆ (ಉದ್ಯಾವರದ ಸು. ೭೫೦-೭೦ರ ಶಾಸನ; ಇ.ಐ. ೯, ೨೩ (೮)) ಅದೇನಿದ್ದರೂ ಬಾಳ್ಗಳ್ಚು ಪಡೆದ ವಿಜಾರಸನು ಅರಕ್ಕೆಲ್ಲ ಎಂಬಾತನ ಪ್ರಿಯ ಮಗನೆಂದು (ವೇಳೆವಾಳಿ) ಸ್ಪಷ್ಟವಾಗುತ್ತದೆ.

ನಮ್ಮ ಪುನಾರಚಿತ ಇತಿಹಾಸದ ವಿವರಗಳು ಲಭ್ಯ ಶಾಸನ ಆಕರಗಳನ್ನು ಅವಲಂಬಿಸಿ ರುತ್ತವೆ. ಹೊಸ ಶಾಸನಗಳ ಶೋಧನೆಯಿಂದಾಗಿ ಅಂತಹ ವಿವರಗಳಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು ಮತ್ತು ಹೊಸ ವಿವರಗಳನ್ನು ಸೇರ್ಪಡಿಸುವುದು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಕದಂಬರ ಹೊಸ ಶಾಸನಗಳ ಶೋಧನೆಯಿಂದಾದ ಕೆಲವು ಮಾರ್ಪಾಡುಗಳನ್ನು ಉಲ್ಲೇಖಿಸುವುದು ಸಮಂಜಸವಾಗುತ್ತದೆ. ಎಸ್.ಜಿ. ಸಾಮಕ್, ಜಗದೀಶ್ ಮತ್ತು ಎಂ.ವಿ. ರಮೇಶ್ ಜೋಯಿಸ್ ಅವರು ಈಚೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅರತೆಲ ಗಡ್ಡೆ ಗ್ರಾಮದಲ್ಲಿ ಕದಂಬರ ಕಾಲದ ಏಳು ಹೊಸ ತಾಮ್ರಪಟ ಶಾಸನಗಳನ್ನು ಶೋಧಿಸಿದ್ದಾರೆ. ಇವುಗಳಲ್ಲಿ ಕೆಲವು ಕದಂಬ ವಂಶದ ಕೆಲವು ಹೊಸ ಅರಸರನ್ನು ಉಲ್ಲೇಖಿಸುತ್ತವೆ. ಇವುಗಳಲ್ಲಿ ಒಂದು ಪ್ರಿಯವ್ರತವರ್ಮನ ೧೨ನೇ ಆಳ್ವಿಕೆಯ ವರ್ಷದ್ದಾಗಿದೆ. ವೈಜಯಂತಿಯಿಂದ (=ಬನವಾಸಿಯಿಂದ) ಆಳುತ್ತಿದ್ದ ಕದಂಬ ವಂಶದ ಧರ್ಮಮಹಾರಾಜ ಶ್ರೀ ಪ್ರಿಯವ್ರತ ವರ್ಮನು ಯುವರಾಜ ಕಾಕುಸ್ಥನ ಪುಣ್ಯಫಲಕ್ಕೋಸ್ಕರ ಮುಲಮಲಿ ಗ್ರಾಮದ ನಾಲ್ಕು ದಿಶೆಗಳಲ್ಲಿ, ಪ್ರತಿ ದಿಕ್ಕಿನಲ್ಲಿ ೨೫ ನಿವರ್ತನದಂತೆ, ಒಟ್ಟು ೧೦೦ ನಿವರ್ತನ ಭೂಮಿಯನ್ನು ವೇದಪಾರಂಗತನಾದ ಕೌಶಿಕ ಗೋತ್ರದ ಸ್ವಾಮಿಮಿತ್ರನಿಗೆ ದಾನವಿತ್ತುದಾಗಿ ಈ ಶಾಸನವು ತಿಳಿಸುತ್ತದೆ. ಇದರಿಂದ ಕಾಕುಸ್ಥವರ್ಮನಿಗಿಂತ ಮುಂಚೆ ಪ್ರಿಯವ್ರತವರ್ಮನೆಂಬ ಕದಂಬ ಅರಸನು ಕನಿಷ್ಠ ೧೨ ವರ್ಷ ಬನವಾಸಿಯಿಂದ ಆಳಿದನೆಂಬುದು ಸ್ಪಷ್ಟವಾಗುತ್ತದೆ. ಇದು ಯುವರಾಜ ಕಾಕುಸ್ಥನನ್ನು ಉಲ್ಲೇಖಿಸುವ ಎರಡನೆಯ ಶಾಸನವಾಗಿದೆ (ಪುರಾಣಗಳ ಪ್ರಕಾರ ಪ್ರಿಯವ್ರತನು ಮನು ಮತ್ತು ಶತರೂಪಾ ಇವರ ಮಗ; ಇಕ್ಷ್ವಾಕು ವಂಶಜ). ಈ ಶೋಧನೆ ಯಿಂದಾಗಿ ಕದಂಬ ಭವೀರಥನ ತರುವಾಯ ಕ್ರಮವಾಗಿ ಅವನ ಮೂರು ಮಕ್ಕಳು – ರಘು, ಪ್ರಿಯವ್ರತ ಮತ್ತು ಕಾಕುಸ್ಥ-ಬನವಾಸಿಯಿಂದ ಆಳಿದರೆಂಬುದು ಪ್ರಕಟವಾಗುತ್ತದೆ. ಕಾಕುಸ್ಥನನ್ನು ಈ ಶಾಸನದಲ್ಲಿ ಯುವರಾಜನೆಂದು ಉಲ್ಲೇಖಿಸಿರುವದು ಮತ್ತು ಅವನ ಪುಣ್ಯಫಲಕ್ಕೋಸ್ಕರ ದಾನ ನೀಡಿರುವುದು ವಿಚಾರಣೀಯವಾಗಿದೆ. ಸ್ವತಃ ಯುವರಾಜ ಕಾಕುಸ್ಥವರ್ಮನು ಕದಂಬ ರಾಜ್ಯೋದಯದ ೮೦ನೆಯ ವರ್ಷದಲ್ಲಿ ಹಲಸಿಯ ತಾಮ್ರಪಟ ಶಾಸನವನ್ನು ಹೊರಡಿಸಿದ್ದು (ಗೋಪಾಲ್ ಬಿ.ಆರ್., ೧೯೮೩, ನಂ. ೩) ಅದರಲ್ಲಿ ತನ್ನ ಜೀವ ಉಳಿಸಿದ (ಜೈನ) ಶ್ರುತಿಕೀರ್ತಿ ಸೇನಾಪತಿಗೆ ಖೇಟಗ್ರಾಮದಲ್ಲಿ ಭೂದಾನ ನೀಡಿದ ಉಲ್ಲೇಖವಿದೆ. ಬಹುಶಃ ಕಾಕುಸ್ಥನು ಯುವರಾಜನಾಗಿದ್ದಾಗ ಯುದ್ಧವೊಂದರಲ್ಲಿ ಅಪಾಯ ಕಾರಿಯಾಗಿ ಗಾಯಗೊಂಡಿದ್ದು, ಸೇನಾಪತಿ ಶ್ರುತಕೀರ್ತಿಯು ಅವನನ್ನು ರಕ್ಷಿಸಿರಬೇಕು. ಆಗ ಪ್ರಿಯವ್ರತವರ್ಮನು ಕದಂಬ ರಾಜನಾಗಿದ್ದು, ಅವನಿಗೆ ಗಂಡುಮಕ್ಕಳು ಇರದ್ದರಿಂದ ಕಾಕುಸ್ಥನೇ ಯುವರಾಜನಾಗಿ ನೇಮಿತನಾಗಿದ್ದನು ಮತ್ತು ಭಾರೀ ಗಾಯಗಳಿಂದ ಬಳಲುತ್ತಿದ್ದ ಯುವರಾಜ ಕಾಕುಸ್ಥನಿಗೆ ಗುಣವಾಗಲೆಂಬ ಉದ್ದೇಶದಿಂದ ಈ ಶಾಸನವನ್ನು ಹೊರಡಿಸಿರ ಬೇಕು ಎಂದು ಊಹಿಸಲು ಅವಕಾಶವಿದೆ.

ಅರತೆಲಗಡ್ಡೆ ಗ್ರಾಮದಲ್ಲಿ ದೊರೆತ ಕದಂಬರ ಶಾಸನಗಳಲ್ಲಿ ಮೊದಲನೆಯ ಕೃಷ್ಣ ವರ್ಮನ ಶಾಸನವೂ ಮಹತ್ವದ್ದಾಗಿದೆ. ಈವರೆಗೆ ಮೊದಲನೇ ಕೃಷ್ಣವರ್ಮನ ಶಾಸನಗಳು ದೊರೆತಿರಲಿಲ್ಲ. ಕದಂಬರ ತ್ರಿಪರ್ವತ ಶಾಖೆಯನ್ನು ಸ್ಥಾಪಿಸಿದ ಅರಸನೀತ. ಪ್ರಸ್ತುತ ಶಾಸನವು ಈತ ಕನಿಷ್ಠಪಕ್ಷ ೧೫ ವರ್ಷ ಆಳಿದನೆಂದು ಸಿದ್ಧಪಡಿಸುತ್ತದೆ. ಇವನು ತನ್ನ ಸ್ವರಾಜ್ಯ ನಿರ್ಮಾಣಕ್ಕಾಗಿ ಅಶ್ವಮೇಧ ಯಾಗವನ್ನು ಮಾಡಿದ್ದನು. ದೋಷರಾಶಿ ನರೇಂದ್ರ ಎಂಬ ಬಿರುದುಳ್ಳವನಾಗಿದ್ದನು. ತ್ರೈರಾಜ್ಯಲಕ್ಷ್ಮಿಯಿಂದ ಗೌರವಿಸಲ್ಪಟ್ಟ ತಾರಕಾಯಣ ಗೋತ್ರದ ಧರ್ಮಮಹಾರಾಜ ರುದ್ರವರ್ಮನ ಹೆಚ್ಚಿನ ಪುಣ್ಯಾಭಿವೃದ್ದಿಗಾಗಿ ಶ್ರಾವಣ ಪೌರ್ಣಮಿಯಂದು ಗಬ್ಧಿಕ ಪ್ರದೇಶದಲ್ಲಿದ್ದ ಅದಲೂರು ಗ್ರಾಮವನ್ನು ೧೦೮ ಬ್ರಾಹ್ಮಣರಿಗೆ ದಾನ ನೀಡಿದ್ದನ್ನು ಈ ಶಾಸನದಲ್ಲಿ ದಾಖಲಿಸಿದೆ. ೧೦೮ ಬ್ರಾಹ್ಮಣರ ಹೆಸರುಗಳನ್ನು ಗೋತ್ರ-ಚರಣಗಳ ಸಹಿತ ಪಟ್ಟಿ ಮಾಡಿರುವುದು ವಿಶೇಷ. ಇಲ್ಲಿ ಉಲ್ಲಿಖಿತ ರುದ್ರವರ್ಮನು ಕೃಷ್ಣವರ್ಮನಿಗೆ ಬಹುವಾಗಿ ಬೇಕಾಗಿದ್ದ ಅರಸನಾಗಿದ್ದು, ಶಾಸನ ಹೊರಟಾಗ ಇಹಲೋಕ ವನ್ನು ತ್ಯಜಿಸಿದ್ದನೆಂದು ತೋರುತ್ತದೆ.

ಇದೇ ತಾಮ್ರಪಟ ಸಮೂಹದಲ್ಲಿ ದೊರೆತ ಇನ್ನೊಂದು ಮಹತ್ವದ ಶಾಸನ ಶಾನ್ತಿವರ್ಮನ ೫ನೇ ವರ್ಷದ್ದು. ಇದು ಶಾನ್ತಿವರ್ಮನ ಮೊದಲ ತಾಮ್ರಪಟ ಶಾಸನವಾಗಿದೆ. ವೈಜಯಂತಿ ಯಿಂದ ಆಳುತ್ತಿದ್ದ ಕದಂಬ ಶಾಂತಿವರ್ಮನು ಮೋಕರ ಗ್ರಾಮದಲ್ಲಿ ನೃಪಹಲ ರಾಜಮಾನ ದಿಂದ ಅಳೆದ ೧೨ ನಿವರ್ತನ ಭೂಮಿಯನ್ನು ಕಾಶ್ಯಪ ಗೋತ್ರದ ದೇವಾರ್ಯನೆಂಬ ಬ್ರಾಹ್ಮಣ ನಿಗೆ ದಾನ ನೀಡಿದ್ದಾಗಿ ಇದು ತಿಳಿಸುತ್ತದೆ.

ರವಿವರ್ಮನ ಮೊದಲನೇ ವರ್ಷದ ತಾಮ್ರಪಟ ಶಾಸನವು ರವಿವರ್ಮನು ಪೂತಿಮಾಷ ಗೋತ್ರದ ನಗ್ನಸ್ವಾಮಿ ಎಂಬ ಬ್ರಾಹ್ಮಣನಿಗೆ ವಸಗೂರು ಗ್ರಾಮದಲ್ಲಿ ಕಾರ್ಪಟೇಶ್ವರ ಮಾನದಿಂದ ಅಳೆದ ಆರು ನಿವರ್ತನ ಭೂಮಿಯನ್ನೂ ಪಾಷಾಣಪುಂಜ ಗ್ರಾಮದಲ್ಲಿ ಅರ್ಧ ನಿವರ್ತನ ಗೃಹನಿವೇಶವನ್ನೂ ಕೊಟ್ಟನೆಂದು ದಾಖಲಿಸುತ್ತದೆ.

ಹರಿವರ್ಮನ ೭ನೇ ವರ್ಷದ ತಾಮ್ರಪಟ ಶಾಸನವು ಗೌತಮ ಗೋತ್ರದ ರವಿಶರ್ಮನಿಗೆ ಮಳಪಲ್ಲೀ ವಿಷಯದಲ್ಲಿದ್ದ ಅನ್ತರಪಲ್ಲೀ ಗ್ರಾಮವನ್ನು ತನ್ನ ಚಿಕ್ಕಮ್ಮನ ಕೋರಿಕೆಯ ಮೇರೆಗೆ ತನ್ನ ಚಿಕ್ಕಪ್ಪ ಭಾನುವರ್ಮನು ತೀರಿಕೊಂಡಾಗ ಅವನಿಗೆ ಪುಣ್ಯಾಭಿವೃದ್ದಿಯಾಗಲೆಂದು (ಮೋಕ್ಷ ದೊರೆಯಲೆಂದು) ದಾನ ನೀಡಿದನೆಂದು ಹೇಳುತ್ತದೆ.

ಅರತೆಲಗಡ್ಡೆ ಶಾಸನಗುಚ್ಚದಲ್ಲಿದ್ದ ಇನ್ನೊಂದು ಬಹುಮಹತ್ವದ ಶಾಸನವು ಪುಳಿಂದ ವರ್ಮನದು. ಪುಳಿಂದವರ್ಮನೆಂಬ ಕದಂಬರಾಜನು ಆಳಿದ ಸಂಗತಿ ಈ ಶಾಸನದಿಂದ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಇವನು ಉಚ್ಚಶೃಂಗಿ (ಉಚ್ಚಂಗಿ) ಕದಂಬ ಶಾಖೆಯ ಅರಸನು. ಈವರೆಗೆ ಕುಮಾರವರ್ಮ ಮತ್ತು ಮಾಂಧಾತರಾಜ ಎಂಬ ಇಬ್ಬರು ಉಚ್ಚಂಗಿ ಕದಂಬ ಶಾಖೆಯ ಅರಸರು ಮಾತ್ರ ಪರಿಚಿತರಿದ್ದರು. ಪುಳಿಂದವರ್ಮನು ಇವರಿಗಿಂತ ಮುಂಚೆ ಆಳಿದ ಅರಸನಿರಬೇಕು.

ಬನವಾಸಿಯಿಂದ ಆಳಿದ ಕದಂಬ ಶಿವಮಾಂಧಾತವರ್ಮನ ೨ನೇ ವರ್ಷದ ಕೂಡಗೆರೆ ಶಾಸನವೇ ಈವರೆಗೆ ದೊರೆತ ಆ ಅರಸನ ಏಕಮೇವ ಶಾಸನವಾಗಿತ್ತು. ಈಚೆಗೆ ದೇವರಕೊಂಡಾ ರೆಡ್ಡಿಯವರು ಈ ಅರಸನ  ೧೩ನೇ ವರ್ಷದ ಮುತ್ತೂರು ಶಾಸನವನ್ನು ಬೆಳಕಿಗೆ ತಂದಿದ್ದು, ಅದು ಶಿವಮಾಂಧಾತೃವರ್ಮನ ಆಡಳಿತಾವಧಿಯನ್ನು ೧೩ ವರ್ಷಗಳಿಗೆ ವಿಸ್ತರಿಸಿದೆ.

ರವಿವರ್ಮನ ಗುಡ್ನಾಪುರ ಶಿಲಾಸ್ತಂಭ ಶಾಸನ (ಗೋಪಾಲ್ ಬಿ.ಆರ್., ೧೯೮೩, ನಂ. ೨೩) ಶೋಧವಾದಾಗ ತಾಳಗುಂದ ಸ್ತಂಭಶಾಸನದಲ್ಲಿ ಉಲ್ಲಿಖಿತ ಮಯೂರಶರ್ಮನ ‘ಗುರು’ ಬೇರಾರೂ ಆಗಿರದೆ ಅವನ ಅಜ್ಜ ವೀರಶರ್ಮನೇ ಎಂಬುದು ಪ್ರಕಟವಾಯಿತು. ಮಯೂರನ ತಂದೆ ಬಂಧುಷೇಣ ಎಂಬ ವಿಚಾರವೂ ಸ್ಥಿರಪಟ್ಟಿತು. ಅದೇ ಶಾಸನದಲ್ಲಿ ರವಿವರ್ಮನು ಅರಮನೆಯ ಪರಿಸರದಲ್ಲಿ ಮನ್ಮಥನಿಗಾಗಿ ಕಾಮದೇವಾಲಯವನ್ನು ನಿರ್ಮಿಸಿದ ಬಗ್ಗೆ, ಅಲ್ಲಿ ಪ್ರಜೆಗಳ ಸಂತೋಷಕ್ಕಾಗಿ ಮಧುಮಾಸದಲ್ಲಿ ಉತ್ಸವವನ್ನು ಏರ್ಪಡಿಸುತ್ತಿದ್ದ ಬಗ್ಗೆ, ಕಾಮದೇವಾಲಯದಲ್ಲಿ ಪೂಜಾಸಂಸ್ಕಾರಕ್ಕಾಗಿ ಭೂದಾನ ನೀಡಿದ ಬಗ್ಗೆ, ಆ ದೇವಾಲಯದ ಪರಿಸರದಲ್ಲಿ ರಾಜವಾಸಗೃಹ, ಅಂತಃಪುರ, ನೃತ್ಯಶಾಲೆಗಳು ಇದ್ದ ಬಗ್ಗೆ ಹಾಗೂ ಗುಡ್ಡತಟಾಕವೆಂಬ ಕೆರೆಯನ್ನು ತೋಡಿಸಿದ ಬಗ್ಗೆ ವಿವರಗಳಿವೆ. ಗುಡ್ಡತಟಾಕವು ಇಂದಿಗೂ ಬಳಕೆಯಲ್ಲಿದೆ. ಶಾಸನವು ದೊರೆತ ಸ್ಥಾನದ ಪರಿಸರದಲ್ಲಿ ಉತ್ಖನನ ಮಾಡಲಾಗಿದ್ದು ಇಟ್ಟಿಗೆಯಿಂದ ರಚಿತವಾದ ಕಟ್ಟಡಗಳ ವಿನ್ಯಾಸಗಳು ಬೆಳಕಿಗೆ ಬಂದಿವೆ.

ಕದಂಬರ ಕಾಲದಲ್ಲಿ ಶಾಸನಗಳಿಗೆ ಜನರ ಆಡುಭಾಷೆಯಾಗಿದ್ದ ಕನ್ನಡದ ಭಾಷೆ ಯಾವಾಗ ಬಳಕೆಯಾಗುತ್ತಿತ್ತು ಎಂಬುದರ ಸೂಚನೆಯನ್ನು ಹಲ್ಮಿಡಿ ಶಾಸನ ಆಗಲೇ ನೀಡಿದೆ. ದೇವದೇಯ, ಬ್ರಹ್ಮದೇಯ, ಜೈನ ಮತ್ತು ಬೌದ್ಧಾಲಯಗಳಿಗೆ ನೀಡಿದ ದಾನ ಮುಂತಾದ ಮತೀಯ ದಾನಗಳನ್ನು ದಾಖಲಿಸಲು, ಕೆರೆಗಳ ನಿರ್ಮಾಣವನ್ನು ದಾಖಲಿಸಲು ಸಂಸ್ಕೃತದ ಬಳಕೆಯಾಗಿದೆ. ‘ವೀರ’ ವಿಜಾರಸನಿಗೆ ‘ಬಾಳ್ಗಳ್ಚು’ ಸನ್ಮಾನವನ್ನು ದಾಖಲಿಸುವ ಹಲ್ಮಿಡಿ ಶಿಲಾಶಾಸನದಲ್ಲಿ (ಇದು ಸಂಸ್ಕೃತದಲ್ಲಿ ಪಾಂಡಿತ್ಯವಿದ್ದ ವ್ಯಕ್ತಿಯಿಂದ ರಚಿತವಾಗಿದ್ದರೂ) ಕನ್ನಡ ಬಳಕೆಯಾಗಿದೆ. ಅದರಂತೆ ಮರಣವನ್ನಪ್ಪಿದ ಓರ್ವ ವ್ಯಕ್ತಿಯ ಸ್ಮಾರಕ ಶಿಲಾಶಾಸನಕ್ಕೂ ಕನ್ನಡ ಬಳಕೆಯಾಗಿದೆ. ರಘುನಾಥ ಭಟ್ಟರು ಬೆಳಕಿಗೆ ತಂದಿರುವ ಕೆಲಗುಂದ್ಲಿಯ (ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ) ಶಿಲಾಶಾಸನವು (ಕದಂಬ) ರವಿವರ್ಮನು ನಾಡನ್ನು ಆಳುತ್ತಿದ್ದು ದಾಗಿ ಮಲ್ಲಿಗೆ ಅರಸನ ಪಿರಿಯರಸಿ ಕಳಗುಜ್ಜೆನಿಯ ಸ್ಮರಣಾರ್ಥ ನಿಲ್ಲಿಸಿದ ‘ಪಡುಗಲ್’ ಎಂಬ ಮಾಹಿತಿ ನೀಡುತ್ತದೆ. ಇವೆರಡೂ ಶಾಸನಗಳಲ್ಲಿ ಬಳಕೆಯಾಗಿರುವ ಕನ್ನಡದ ಸ್ವರೂಪವು ಆಗ ಕನ್ನಡದಲ್ಲಿ ಲಿಖಿತ ಸಾಹಿತ್ಯದ ವಿಪುಲತೆಯ ಕೊರತೆಯಿದ್ದುದನ್ನು ಸೂಚಿಸುತ್ತಿದೆ.

ಕದಂಬರ ತಾಮ್ರಪಟ ಶಾಸನಗಳ ಬಳೆಗಳಿಗೆ ಜೋಡಿಸಿರುವ ಮುದ್ರೆಗಳ ವಿವರಗಳು ವೈವಿಧ್ಯಮಯವಾಗಿವೆ. ಯುವರಾಜ ಕಾಕುಸ್ಥವರ್ಮನ ಹಲಸಿ ತಾಮ್ರಪಟ ಶಾಸನದ ಮುದ್ರೆ ಯಲ್ಲಿ ‘ನಾಯಿ’ಯ ಚಿತ್ರವಿದೆಯೆಂದು ಹೇಳಲಾಗಿದೆ, ಇದು ಸಂಶಯಾತೀತವಲ್ಲ. ವಿಜಯ ಶಿವಮೃಗೇಶವರ್ಮನ ದೇವಗಿರಿ ಶಾಸನದ ಮುದ್ರೆಯಲ್ಲಿ ‘ಕುಳಿತಿರುವ ಅಥವಾ ಮೊಳಕಾಲೂರಿ ಬಾಗಿರುವ ದೇವರ ಅಥವಾ ಮನುಷ್ಯನ, ಬಹುಶಃ ಜಿನೇನ್ದ್ರನ ಚಿತ್ರವಿದೆ ಯೆಂದು ವರ್ಣಿಸಲಾಗಿದೆ. ಅದೇ ಅರಸನ ಹೊಸನಗರ ಶಾಸನದ ದೀರ್ಘವೃತ್ತಾಕಾರದ ಮುದ್ರೆಯಲ್ಲಿ ‘ಎಡಮುಖವಾಗಿ ಕುಪ್ಪಳಿಸುವ ಸಿಂಹ’ದ ಉಬ್ಬುಚಿತ್ರವಿದೆ. ಅವನ ಹಿರೇಶಕುನ ಶಾಸನದ ಮುದ್ರೆಯಲ್ಲಿ ‘ಶ್ರೀ ಮೃಗೇಶವರ್ಮ್ಮಣಾ’ ಎಂಬ ಆಲೇಖವಿದೆ. ಅದೇ ಅರಸನ ಹಲಸಿ ಶಾಸನದ ಮುದ್ರೆಯಲ್ಲಿ ‘ಶ್ರೀ ಮೃಗೇಶ್ವರಃ’ ಎಂಬ ಆಲೇಖವಿದೆ. ರವಿವರ್ಮನ ಕುಂಟಗಣೀ ಶಾಸನದ ಮುದ್ರೆ ದೀರ್ಘವರ್ತುಲಾಕಾರದಲ್ಲಿದ್ದು ಯಾವುದೋ ಪ್ರಾಣಿಯ ಅಸ್ಪಷ್ಟ ಚಿತ್ರವಿದೆ. ಅದೇ ಅರಸನ ಹಲಸಿಯ ಇನ್ನೆರಡು ಶಾಸನಗಳ ಮುದ್ರೆಗಳಲ್ಲಿ ‘ನಾಯಿ’ಯ ಚಿತ್ರವಿದೆ. ಹರಿವರ್ಮನ ಹಲಸಿ ಶಾಸನದ ಮುದ್ರೆಯಲ್ಲಿ ಎರಡು ಸ್ವಸ್ತಿಕಗಳ ನಡುವೆ ‘ಶ್ರೀ ಹರಿವರ್ಮಣಾ’ ಎಂಬ ಬರಹವಿದೆ. ದೇವವರ್ಮನ ದೇವಗಿರಿ ಶಾಸನದ ದೀರ್ಘವೃತ್ತಾಕಾರದ ಮುದ್ರೆಯಲ್ಲಿ “ಬಲಮುಖವಾಗಿ ನಿಂತಿರುವ ಒಂದು ಪ್ರಾಣಿ ತನ್ನ ತಲೆಯನ್ನು ಎಡಕ್ಕೆ ಬಳಸಿದಂತಿದ್ದು ಅದರ ಮೇಲೆ ಕುಳಿತಂತೆ ಅಥವಾ ಅದಕ್ಕೆ ಒರಗಿದಂತೆ ದೇವತೆಯ ಅಥವಾ ಮನುಷ್ಯನ ಚಿತ್ರವನ್ನು ಕೆತ್ತಲಾಗಿದೆ; ತಲೆಯಭಾಗ ಮಾತ್ರವೇ ಸ್ಪಷ್ಟವಾಗಿ ಕಾಣುವಂತಿದ್ದು ಅದು ಬಹುಮಟ್ಟಿಗೆ ಸಣ್ಣ ಕೊಂಬುಗಳ ಜಿಂಕೆಯಂತೆ ತೋರುತ್ತದೆ” ಎಂಬುದಾಗಿ ವಿವರಿಸಲಾಗಿದೆ. ಇಮ್ಮಡಿ ಕೃಷ್ಣವರ್ಮನ ಶಿರಸಿ ಶಾಸನದ ದೀರ್ಘವೃತ್ತಾಕಾರದ ಮುದ್ರೆಯಲ್ಲಿ ಎಡಮುಖವಾಗಿರುವ ಚತುಷ್ಪಾದಿ  (ಬಹುಶಃ ಕುದುರೆ) ಚಿತ್ರಿತವಾಗಿದೆ. ಇದೇ ಅರಸನ ಬೆಣ್ಣೂರಿನ ಶಾಸನದ ಮುದ್ರಿಕೆಯಲ್ಲಿ ಸಿಂಹದ ಚಿತ್ರವಿದೆ. ಮಾಂಧಾತನ ಶಿವಮೊಗ್ಗದ ಶಾಸನದ ವೃತ್ತಾಕಾರದ ಮುದ್ರೆಯಲ್ಲಿ ಎಡಭಾಗದಲ್ಲಿ ನಿಂತಿರುವ ಸಿಂಹದ ಉಬ್ಬುಚಿತ್ರವಿದೆ. ಭೋಗಿವರ್ಮನ ತಗರೆ ತಾಮ್ರಶಾಸನದ ವೃತ್ತಾಕಾರದ ಮುದ್ರೆಯಲ್ಲಿ ಎಡಮುಖವಾಗಿ ನಿಂತ ಸಿಂಹದ ಚಿತ್ರವಿದೆ. ಹೊಸದಾಗಿ ದೊರೆತಿರುವ ಅರತೆಲಗಡ್ಡೆಯ ಶಾಸನಗಳಲ್ಲಿಯ ಮುದ್ರೆಗಳಲ್ಲಿ ಪ್ರಿಯವ್ರತನದು ದೀರ್ಘವೃತ್ತಾಕಾರವಿದ್ದು ಸಿಂಹದ ಚಿತ್ರ ವನ್ನು, ಮೊದಲನೇ ಕೃಷ್ಣವರ್ಮನದು ಸಿಂಹದ ಚಿತ್ರವನ್ನು, ಶಾನ್ತಿವರ್ಮನದು ಪ್ರಯೋಗ ಚಕ್ರದ ಮುಂದುಗಡೆ ಬರೆದಿರುವ ‘ಶ್ರೀ ಶಾನ್ತಿವರವರ್ಮ್ಮಣ’ ಎಂಬ ಆಲೇಖವನ್ನು ಹೊಂದಿವೆ. ಇವನ್ನೆಲ್ಲ ಪರಿಶೀಲಿಸಿದಾಗ ಈ ಮುದ್ರೆಗಳಲ್ಲಿ ಎರಡು ಮುಖ್ಯ ಪ್ರಕಾರಗಳನ್ನು ಗುರುತಿಸಬಹುದು: ಪ್ರಾಣಿಯ ಚಿತ್ರವುಳ್ಳವು ಮತ್ತು ಆಲೇಖಗಳುಳ್ಳವು. ಹಲವು ಸಂದರ್ಭ ಗಳಲ್ಲಿ ಪ್ರಾಣಿಯ ಚಿತ್ರ ಸ್ಪಷ್ಟವಿಲ್ಲದಿದ್ದರೂ ಹೆಚ್ಚಿನವು ನಿಂತ ಸಿಂಹದ ಚಿತ್ರವನ್ನು ಒಳಗೊಂಡಿ ರುವುದರಿಂದ, ಮುದ್ರೆಗಳಲ್ಲಿ ಅಸ್ಪಷ್ಟವಿರುವ ಇತರ ಎಲ್ಲ ಪ್ರಾಣಿಗಳೂ ಸಿಂಹವೇ ಆಗಿರ ಬೇಕೆಂದು ಹೇಳಬೇಕಾಗುತ್ತದೆ. ಶಾನ್ತಿವರ್ಮನ ಒಂದು ಶಾಸನ ಮುದ್ರೆಯಲ್ಲಿರುವ ಚಿಕ್ರವು ಧರ್ಮದ ಸಂಕೇತವಾಗಿದ್ದು, ‘ಧರ್ಮಮಹಾರಾಜ’ ಕಲ್ಪನೆಯನ್ನು ಸೂಚಿಸುವಂತಿದೆ. ಅದೇ ಪ್ರಕಾರ ಹರಿವರ್ಮನ ಶಾಸನದ ಮುದ್ರೆಯಲ್ಲಿರುವ ಸ್ವಸ್ತಿಕ ಚಿತ್ರವು ಸೂರ್ಯನ – ಚಕ್ರದ – ಪ್ರತಿನಿಧಿಯೇ ಆಗಿದ್ದು ‘ಧರ್ಮಮಹಾರಾಜ’ ಕಲ್ಪನೆ ಅಲ್ಲಿಯೂ ಅಡಗಿರಬಹುದು.

ಕದಂಬರ ಅರಸರ ಹೆಸರುಗಳ ಬಗ್ಗೆ ಒಂದು ಮಾತು. ಇವರಲ್ಲಿ ಮೊದಲ ವ್ಯಕ್ತಿಗಳ ಹೆಸರು ನೋಡಿ: ವೀರಶರ್ಮ, ಬಂಧುಷೇಣ, ಮಯೂರವರ್ಮ, ಕಂಗವರ್ಮ. ಇಲ್ಲಿಂದ ಮುಂದೆ ಬರುವ ಭವೀರಥ, ರಘು, ಪ್ರಿಯವ್ರತ, ಕಾಕುಸ್ಥ. ಇವೆಲ್ಲ ಸೂರ್ಯವಂಶದ/ಇಕ್ಪ್ವಾಕು ವಂಶದ ಪ್ರಸಿದ್ಧ ಆದರ್ಶ ಅರಸರ ಹೆಸರುಗಳು. ಈ ಸರಣಿಯನ್ನು ನೋಡಿದರೆ ರಘುವಂಶವನ್ನು ಪ್ರಸಿದ್ಧಗೊಳಿಸಿದ ಕಾಳಿದಾಸನ ರಘುವಂಶದ ಪ್ರಭಾವವೋ ಎನ್ನುವಂತಿದೆ. ನಂತರದ ಕದಂಬ ಅರಸರಲ್ಲಿ ಅಪರೂಪಕ್ಕೆ ಮಾನ್ಧಾತ, ಭೋಗಿ, ಅಜ ಎಂಬ ಹೆಸರುಗಳು ಕಂಡರೂ ವಿಶೇಷವಾಗಿ ಕೃಷ್ಣವರ್ಮ, ರವಿವರ್ಮ, ವಿಷ್ಣುವರ್ಮ ಮುಂತಾದ ದೇವಪರವಾದ ಮುಖ್ಯವಾಗಿ ವಿಷ್ಣು ಮತ್ತು ಸೂರ್ಯ ದೇವತೆಗಳ ಹೆಸರುಗಳಾಗಿರುವುದು ಗಮನೀಯವಾಗಿದೆ. ಇದು ಅರಸೊತ್ತಿಗೆಯ ದೈವೀಕರಣದ ಸೂಚನೆಯಿರಬಹುದೇನೋ.

ಸಾಮಾಜಿಕ, ಆರ್ಥಿಕ, ಧಾರ್ಮಿಕ ಪರಿಸರದ ದೃಷ್ಟಿಯಿಂದ ಕದಂಬರ ಮತ್ತು ಗಂಗರ ಶಾಸನಗಳ ವಿಸ್ತೃತ ಅಧ್ಯಯನ ಇನ್ನೂ ಆಗಬೇಕಿದೆ ಎಂದು ಹೇಳುವುದು ಪ್ರಸ್ತುತವಾಗುತ್ತದೆ.

ಚಲುಕ್ಯರು ತಾಮ್ರಪಟ ಮತ್ತು ಶಿಲಾಶಾಸನಗಳೆರಡಕ್ಕೂ ಕನ್ನಡ ಲಿಪಿಯನ್ನೇ ಬಳಸಿದರು. ಇದನ್ನು ವಿದ್ವಾಂಸರು ತೆಲುಗು-ಕನ್ನಡ ಲಿಪಿಯೆಂದು ಕರೆಯುತ್ತಾರೆ. ಕನ್ನಡ-ತೆಲುಗು ಲಿಪಿ ಯೆಂದು ಹೇಳುವುದು ಹೆಚ್ಚು ಸರಿಯಾದೀತು. ಅಕ್ಷರಗಳು ಪ್ರಾರಂಭದಲ್ಲಿ, ಮೊದಲನೇ ಪೊಲೆಕೇಶಿಯ ಬಾದಾಮಿಯ ಬಂಡೆ ಶಾಸನದಲ್ಲಿ ಕಾಣುವಂತೆ, ಪೇಟಿಕಾಶಿರವನ್ನು ಉಳಿಸಿ ಕೊಂಡಿರುವಂತೆ ಕಾಣುತ್ತದೆ. ಆದರೆ ಅವರ ಇನ್ನೂರು ವರ್ಷಗಳ ಅವಧಿಯಲ್ಲಿ ಪೇಟಿಕಾಶಿರದ ಸ್ಥಾನದಲ್ಲಿ ಕ್ರಮೇಣ ಕನ್ನಡ ತಲೆಕಟ್ಟು ಬೆಳೆದಿರುವುದು ಅರಿವಾಗುತ್ತದೆ. ಅಕ್ಷರಗಳೂ ಹೆಚ್ಚು ದುಂಡಗಾಗುತ್ತ ಸಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಬರವಣಿಗೆಗೆ ತಾಳೆಗರಿಯ ಬಳಕೆ ಉಚ್ಛ್ರಾಯದಲ್ಲಿತ್ತೆಂದು ಹೇಳಬಹುದು. ಶಿಲಾಶಾಸನಗಳಲ್ಲಿ ಸಿದ್ಧಮಾತೃಕಾ ಲಿಪಿ ಅಪರೂಪಕ್ಕೆ ಕಾಣುತ್ತದೆ. ಬಾದಾಮಿಯ ಲಯನಗಳ ಪರಿಸರದಲ್ಲಿರುವ ಕೆಲವೇ ಚಿಕ್ಕ ಶಾಸನಗಳನ್ನು ಬದಿಗಿರಿಸಿದರೆ, ಆಲಂಪುರದಲ್ಲಿ ದೊರೆತಿರುವ ವಿಜಯಾದಿತ್ಯನ ದ್ವಿಲಿಪಿ ಸಂಸ್ಕೃತ ಶಾಸನವೇ (ಇ. ಐ. ೩೫, ಪು. ೧೨೧-೧೨೪) ದಕ್ಷಿಣದಲ್ಲಿ ಸಿದ್ಧಮಾತೃಕಾ ಲಿಪಿಯ ಪ್ರಾಚೀನತಮ ಉದಾಹರಣೆಯಾಗಿದೆ. ನಂತರ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಪಟ್ಟದ ಕಲ್ಲಿನಲ್ಲಿ ಜ್ಞಾನಶಿವಾಚಾರ್ಯನು ತ್ರಿಶೂಲ ಸ್ತಂಭವನ್ನು ನಿಲ್ಲಿಸಿದಾಗ ಅದರ ಮೇಲೆ ಸಂಸ್ಕೃತ ಶಾಸನವನ್ನು ಕನ್ನಡ ಹಾಗೂ ಸಿದ್ಧಮಾತೃಕಾ ಲಿಪಿಗಳೆರಡರಲ್ಲೂ ಬರೆಸಿದನು (ಇ. ಐ. ೩, ಪು. ೧-೭).

ಕದಂಬ ಶಾಸನಗಳು ಅರಸನ ಆಳ್ವಿಕೆಯ ವರ್ಷವನ್ನು ಮಾತ್ರ ಹೇಳುತ್ತವೆ ಎಂಬುದನ್ನು ಅವರ ಶಾಸನ ಸಮೀಕ್ಷೆ ಮಾಡುವಾಗ ಮೇಲೆ ಗಮನಿಸಿದೆವು. ನಿಖರವಾದ ಕಾಲಗಣನಾ ಕ್ರಮ ಅಲ್ಲಿ ಕಾಣುವುದಿಲ್ಲ. ಆದರೆ ಚಲುಕ್ಯರ ಶಾಸನಗಳು ಶಕವರ್ಷ ಕಾಲಗಣನೆಯ ಬಳಕೆ ಯನ್ನು ಕರ್ನಾಟಕದಲ್ಲಿ ಪರಿಚಯಿಸಿದವು. ಪೊಲೆಕೇಶಿಯ ಬಾದಾಮಿಯ ಬಂಡೆಯ ಮುಖದ ಶಾಸನದಲ್ಲಿ (ಇ. ಐ. ೨೭, ಪು. ೪-೯) ಶಕವರ್ಷ ೪೬೫ (= ಕ್ರಿ.ಶ. ೫೪೩) ಉಲ್ಲಿಖಿತವಾಗಿದೆ. ಕರ್ನಾಟಕದಲ್ಲಿ ಶಕವರ್ಷ ಬಳಕೆಯಾಗಿರುವ ಮೊದಲ ಶಾಸನವಿದು. ಹಲವಾರು ಶಾಸನಗಳಲ್ಲಿ ಶಕವರ್ಷದೊಂದಿಗೆ ಆಡಳಿತ ವರ್ಷವನ್ನೂ ಹೇಳಿರುವುದರಿಂದ ಚಾಲುಕ್ಯ ಅರಸರ ಆಳ್ವಿಕೆಯ ಕಾಲಾವಧಿಯನ್ನು ಹೆಚ್ಚು ಕಡಿಮೆ ಸರಿಯಾಗಿ ನಿರ್ಣಯಿಸುವುದು ಸಾಧ್ಯವಾಗುತ್ತದೆ. ಇಮ್ಮಡಿ ಪೊಲೆಕೇಶಿಯ ಐಹೊಳೆಯ ಪ್ರಶಸ್ತಿಯಲ್ಲಿ (ಇ. ಐ., ೬, ಪು. ೧-೧೨) ಶಕವರ್ಷ ೫೫೬ (=ಕ್ರಿ.ಶ. ೬೩೪)ರೊಂದಿಗೆ ಭಾರತ ಯುದ್ಧವರ್ಷ ೫೭೩೫ರ ಉಲ್ಲೇಖವೂ ಇದೆ. ಈ ಆಧಾರದ ಮೇಲೆ ಮಹಾಭಾರತ ಯುದ್ಧ ಕಾಲಗಣನೆಯ ಆರಂಭವನ್ನು ವರ್ಷವನ್ನು ಕ್ರಿ.ಪೂ. ೩೧೦೧ಕ್ಕೆ ಸಮೀಕರಿಸಲಾಗಿದೆ.

ಚಲುಕ್ಯರು ಹೊರಡಿಸಿರುವ ಶಾಸನಗಳಲ್ಲಿ ಸುಮಾರು ೫೦ ಪ್ರತಿಶತ ಶಾಸನಗಳು ಸಂಸ್ಕೃತ ದಲ್ಲಿರುವ ತಾಮ್ರಪಟ ಶಾಸನಗಳು. ಉಳಿದವು ಶಿಲಾಶಾಸನಗಳಾಗಿದ್ದು ಅವುಗಳಲ್ಲಿಯೂ ಹಲವು ಸಂಸ್ಕೃತ ಶಾಸನಗಳಿವೆ. ಆದರೆ ಕದಂಬ ಕಾಲೀನ ಶಾಸನಗಳಿಗೆ ಹೋಲಿಸಿದಾಗ, ಕನ್ನಡವು ಶಾಸನ ಭಾಷೆಯಾಗಿ ಸಾಕಷ್ಟು ಪಳಗತೊಡಗಿರುವುದು ಗೋಚರಿಸುತ್ತದೆ. ಶಿಲಾಶಾಸನ ಗಳನ್ನು ಬರೆಯುವಾಗ ಭಾಷೆಯ ಆಯ್ಕೆ ಹೇಗೆ ಆಗುತ್ತಿತ್ತು ಎಂಬುದಕ್ಕೆ ಬಾದಾಮಿಯ ಮೂರನೇ ಲಯನದ ಎರಡು ಶಾಸನಗಳನ್ನು ಉಲ್ಲೇಖಿಸಬಹುದು. ಇಲ್ಲಿರುವ ಶಾಸನಗಳಲ್ಲಿ ಮೊದಲನೆಯದು (ಐ. ಎ., ಪು. ೩೦೫-೦೬) ಸಂಸ್ಕೃತದಲ್ಲಿದ್ದು ಇಮ್ಮಡಿ ಕೀರ್ತಿವರ್ಮನ ಆಡಳಿತಾವಧಿಯ ೧೨ನೇ ವರ್ಷದ, ಕ್ರಿ.ಶ. ೫೭೮ರ, ಮಂಗಲೇಶನು ಹೊರಡಿಸಿರುವ ಶಾಸನ. ಇದು ಮಂಗಲೇಶನು ನಿರ್ಮಿಸಿದ ಮಹಾವಿಷ್ಣು ಲಯನದಲ್ಲಿ ನಾರಾಯಣ ಬಲಿಗಾಗಿ (ನಾರಾಯಣ-ವಿಷ್ಣುವಿನ ಪೂಜಾಕಾರ್ಯಗಳಿಗೆ) ಹಾಗೂ ಸತ್ರದಲ್ಲಿ ೧೬ ಜನ ಬ್ರಾಹ್ಮಣರಿಗೆ ನಿತ್ಯ ಆಹಾರ ದಾನಕ್ಕಾಗಿ ಲಞ್ಜೇಶ್ವರ ಗ್ರಾಮವನ್ನು ನೀಡಿದ್ದಾಗಿ ಹೇಳುತ್ತದೆ. ಈ ದೇವದೇಯ ವನ್ನು ಸಂಸ್ಕೃತದಲ್ಲಿ ದಾಖಲಿಸಿರುವುದು ಅಚ್ಚರಿಯೇನಲ್ಲ. ಆದರೆ ಎರಡನೆಯ ಶಾಸನ (ಐ.ಎ., ೧೦, ಪು. ೫೯-೬೦) ಲಯನದ ಹೊರಗೆ ಪಕ್ಕದಲ್ಲಿದ್ದು ಕನ್ನಡದಲ್ಲಿದೆ. ಇದು ಪೃಥ್ವೀವಲ್ಲಭ ಮಂಗಲೇಶನ ಕಲ್ಮನೆಗೆ (ಲಯನಕ್ಕೆ) ನೀಡಲಾದ ಲಂಜಿಗೇಸರದ (ಮೇಲಿನ ಸಂಸ್ಕೃತ ಶಾಸನದ ಲಞ್ಞೇಶ್ವರ ಗ್ರಾಮ) ಆದಾಯದಲ್ಲಿ ದೇವರಿಗೆ ಹೂವನ್ನು ಒದಗಿಸುವ ಮಾಲಕಾರನಿಗೆ ಅರ್ಧ ‘ವೀಸ’ವನ್ನು ನೀಡುವ ಬಗ್ಗೆ ಹೇಳುತ್ತದೆ. ಅಂದರೆ ಮಾಲಕಾರರಂತಹ ಬ್ರಾಹ್ಮಣೇತರರಿಗೆ ಕೊಡಮಾಡಿದ ಆದಾಯ ಮುಂತಾದವನ್ನು ಕನ್ನಡದಲ್ಲಿ ದಾಖಲಿಸಿರುವುದು ಕಾಣುತ್ತದೆ. ಹಾಗೆಯೇ ಮಹಾಕೂಟದಲ್ಲಿ ವಿಜಯಾದಿತ್ಯನ ‘ಪ್ರಾಣವಲ್ಲಭೆ’ ಸೂಳೆ ವಿನಾ ಪೋಟಿಯ ದಾನ ವಿವರಗಳನ್ನು ಮಕುಟೇಶ್ವರ ದೇವಾಲಯದ ಕಂಬದ ಮೇಲೆ ಬರೆಯುವಾಗ (ಐ. ಎ., ೧೦, ಪು. ೧೦೩) ಕನ್ನಡವನ್ನೇ ಬಳಸಿರುವುದು ಗಮನೀಯ. ಓಜ, ಸಮ್ಮಗಾರ, ಮುಂತಾದವರ ವೃತ್ತಿ ತೆರಿಗೆಯನ್ನು ಮನ್ನಾಮಾಡುವ ಶಾಸನಗಳು ಕನ್ನಡದಲ್ಲಿವೆ ಎಂಬುದೂ ಈ ದೃಷ್ಟಿಯಿಂದ ವಿಚಾರಣೀಯವಾಗಿದೆ. ಪಟ್ಟದಕಲ್ಲಿನಲ್ಲಿ, ಐಹೊಳೆಯಲ್ಲಿ ಓಜರ ಕುರಿತು ಹಲವಾರು ಶಾಸನಗಳು ಕನ್ನಡದಲ್ಲಿವೆ.

ಈ ಕಾಲಘಟ್ಟದ ಶಾಸನಗಳನ್ನು ಇತರ ದೃಷ್ಟಿಕೋನಗಳಿಂದ ಸಮೀಕ್ಷೆ ಮಾಡುವ ಪೂರ್ವದಲ್ಲಿ ಬಾದಾಮಿಯಿಂದಾಳಿದ ಅರಸುಮನೆತನದ ಹೆಸರಿನ ಬಗ್ಗೆ ಹೇಳಬೇಕಾಗಿದೆ. ಈ ಸಂಬಂಧವಾಗಿ ಕೆ.ವಿ. ರಮೇಶ್ ಅವರು ಹಲವು ದಶಕಗಳ ಹಿಂದೆಯೇ ನಿಜ ಸಂಗತಿಯನ್ನು ಬಯಲು ಮಾಡಿದ್ದರೂ ಬಾದಾಮಿಯ ಅರಸುಮನೆತನವನ್ನು ಚಾಲುಕ್ಯ ಎಂದು ತಪ್ಪಾಗಿ ಕರೆಯುತ್ತಿರುವುದು ಮುಂದುವರಿದಿದೆ. ಆದುದರಿಂದ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸ ಬೇಕಾಗಿದೆ. ಬಾದಾಮಿಯ ಬಂಡೆಯ ಮುಖದಲ್ಲಿರುವ ಕ್ರಿ.ಶ. ೫೪೩ರ ಶಾಸನದಲ್ಲಿ ಮೊದಲನೆಯ ಪೊಲೆಕೇಶಿಯನ್ನು ‘ಚಲಿಕ್ಯೋ ವಲ್ಲಭೇಶ್ವರಃ’ ಎಂದು, ಅಂದರೆ ‘ಚಲಿಕ್ಯ’ ವಂಶದ ವಲ್ಲಭೇಶ್ವರ ಎದು ಸಂಬೋಧಿಸಿದೆ. ಕ್ರಿ.ಶ. ೫೭೮ರಲ್ಲಿ ಹೊರಟ ಬಾದಾಮಿಯ ಮೂರನೇ ಲಯನದ ಶಾಸನವು (ಐ. ಎ. ೩, ಪು. ೩೦೫-೦೬) ಈ ವಂಶವನ್ನು ‘ಚಲ್ಕ್ಯ’ ಎಂದು ಕರೆದಿದೆ. ಇಮ್ಮಡಿ ಪೊಲೆಕೇಶಿಯ ಕ್ರಿ.ಶ. ೬೩೪ರ ಐಹೊಳೆ ಪ್ರಶಸ್ತಿಯಲ್ಲಿ ‘ಚಲುಕ್ಯ’ ಕುಲ ಎಂಬುದಾಗಿ ಕರೆದಿದೆ. ‘ಚಲುಕ್ಯ’ ರೂಪವು ಈ ಮನೆತನದ ಉಳಿದೆಲ್ಲ ಶಾಸನಗಳಲ್ಲಿ ಬಳಕೆಯಾಗಿದೆ. ಆದರೆ ಯಾವುದೇ ಶಾಸನವು ಅವರನ್ನು ‘ಚಾಲುಕ್ಯ’ ಎಂಬುದಾಗಿ ಕರೆದಿಲ್ಲ. ಇದೇ ಕಾರಣವಾಗಿ ಬಾದಾಮಿಯಿಂದ ಆಳಿದ ಈ ಅರಸುಮನೆತನವನ್ನು ಬಾದಾಮಿಯ/ವಾತಾಪಿಯ ಚಲುಕ್ಯರು ಎಂಬುದಾಗಿ ಹೆಸರಿಸುವುದು ಸರಿ. ಈ ಹೆಸರನ್ನೇ ಫ್ಲೀಟ್, ಪಂಚ ಮುಖಿ, ರಮೇಶ್ ಮುಂತಾದ ವಿದ್ವಾಂಸರು ಪ್ರಯೋಗಿಸಿರುವುದು ಉಲ್ಲೇಖನೀಯವಾಗಿದೆ. ನಾವಾದರೂ  ಇದನ್ನೇ ಉಪಯೋಗದಲ್ಲಿರಿಸುವುದು ಒಳಿತು. ಅದೇ ಚಲುಕ್ಯರ ಪತನಾನಂತರ ಕೆಲ ಶತಮಾನಗಳ ಮೇಲೆ ಮತ್ತೆ ಕಾಣಿಸಿಕೊಂಡ ವೇಮುಲವಾಡ, ಕಲ್ಯಾಣ ಮುಂತಾದ ಕೇಂದ್ರಗಳಿಂದ ಆಳಿದ ಅರಸುಮನೆತನಗಳನ್ನು ಅವರವರ ಶಾಸನಗಳಲ್ಲಿ ಹೆಸರಿಸಿರುವಂತೆ ಚಾಲುಕ್ಯ ಅಥವಾ ಚಾಳುಕ್ಯ ಎಂಬುದಾಗಿ ಉಲ್ಲೇಖಿಸುವುದು ಕೂಡ ಸರಿಯಾಗುತ್ತದೆ (ರಮೇಶ್ ಕೆ.ವಿ.,  ೧೯೭೧, ಪು. ೩೩-೩೪) ಚಲುಕ್ಯರಿಂದ ಮೂಡಿದವರಾದ್ದರಿಂದ ಅವರು ಚಾಲುಕ್ಯ/ಚಾಳುಕ್ಯರು.

ಅದೇ ಪ್ರಕಾರ, ಬಾದಾಮಿಯಿಂದ ಆಳಿದ ಚಲುಕ್ಯ ವಂಶದ ಮೊದಲನೆಯ ಮತ್ತು ನಾಲ್ಕನೆಯ ಅರಸರನ್ನು ಪುಲಕೇಶಿ, ಪುಲಿಕೇಶಿ ಎಂದು ಮುಂತಾಗಿ ಹೆಸರಿಸುವುದು ವಾಡಿಕೆ ಯಾಗಿದೆ. ಆದರೆ ಅವರ ಶಾಸನಗಳಲ್ಲಿ ಇವರನ್ನು ‘ಪೊಲೆಕೇಶಿ’ (ಬಹುಶಃ ಮೂಲ ಪೊಲೆಕೇಸಿ) ಎಂದೇ ಉಲ್ಲೇಖಿಸಿರುವುದು ಗಮನೀಯ. ಎರೆಯಮ್ಮ ಎಂಬ ಹೆಸರೂ ಇಮ್ಮಡಿ ಪೊಲೆ ಕೇಶಿಗೆ ಇತ್ತು ಎಂಬುದು ಲಕ್ಷ್ಮೇಶ್ವರದ ಶಾಸನದಿಂದ (ರಮೇಶ್ ಕೆ.ವಿ., ೧೯೭೧, ಪು. ೯೩) ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಎರೆಯಮ್ಮ ಮತ್ತು ಪೊಲೆಕೇಶಿ ಪದಗಳ ಸಮೀಕರಣ ಸಾಧ್ಯವಿದೆಯೇ ಎಂದು ಪರಿಶೀಲಿಸಬೇಕಾಗಿದೆ.

ಚಲುಕ್ಯರ ಶಾಸನಗಳಲ್ಲಿ ಸಾಹಿತ್ಯಿಕವಾಗಿ ಉತ್ಪ್ರೇಕ್ಷೆಗಳು ಕಾಣಬರುತ್ತವೆಯಾದರೂ ಅರಸರ ಸಾಧನೆಗಳಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳು ಬಹು ವಸ್ತುನಿಷ್ಠವಾಗಿ ಪ್ರಸ್ತಾಪಿತ ವಾಗಿವೆಯೆಂಬುದು ಒತ್ತಿ ಹೇಳಬೇಕಾದ ವಿಷಯವಾಗಿದೆ. ಸಾಮಾನ್ಯವಾಗಿ ಇತಿಹಾಸ ಪುಸ್ತಕ ಗಳಲ್ಲಿ ಚಲುಕ್ಯ ಮೊದಲನೆಯ ಪೊಲೆಕೇಶಿಯು ಕದಂಬರನ್ನು ಸೋಲಿಸಿ ಚಲುಕ್ಯ ರಾಜ್ಯ ಸ್ಥಾಪಿಸಿದನೆಂದು ಹೇಳಲಾಗಿದೆ. ಚಲುಕ್ಯರ ಶಾಸನಗಳೇ ಈ ಹೇಳಿಕೆಯನ್ನು ಪುಷ್ಟೀಕರಿಸು ವುದಿಲ್ಲ. ಅವುಗಳ ಪ್ರಕಾರ ಬಾದಾಮಿಯ ಕೋಟೆಯನ್ನು ನಿರ್ಮಿಸಿ ರಾಜಧಾನಿಯನ್ನಾಗಿಸಿದ್ದು, ಅಶ್ವಮೇಧ ಮುಂತಾದ ಯಜ್ಞಯಾಗಾದಿಗಳನ್ನು ಮಾಡಿದ್ದು ಮೊದಲನೆಯ ಪೊಲೆಕೇಶಿಯ ಪ್ರಮುಖ ಸಾಧನೆ. ಸ್ವತಂತ್ರ ಚಲುಕ್ಯ ರಾಜ್ಯವನ್ನು ಸ್ಥಾಪಿಸಿದ್ದೇ ಅವನ ಹೆಗ್ಗಳಿಕೆ. ಕದಂಬ ಮುಂತಾದ ಇತರ ರಾಜವಂಶಗಳನ್ನು ಸೋಲಿಸಿದವನು ಅವನ ಮಗ ಮೊದಲನೆಯ ಕೀರ್ತಿವರ್ಮ. ಆದುದರಿಂದ ಮೊದಲನೆಯ ಪೊಲೆಕೇಶಿಯು ಕದಂಬರನ್ನು ಸೋಲಿಸಿ ರಾಜ್ಯ ಸ್ಥಾಪಿಸಿದನೆಂದು ಹೇಳುವುದು ತಪ್ಪಾಗುತ್ತದೆ. ಐಹೊಳೆ ಪ್ರಶಸ್ತಿಯಲ್ಲಿ ಕೀರ್ತಿವರ್ಮನು ಕದಂಬವೆಂಬ ವೃಕ್ಷಗಳನ್ನು ಉರುಳಿಸಿದನೆಂದು ಬಹುವಚನದಲ್ಲಿ ಹೇಳಿರುವುದನ್ನು ಗಮನಿ ಸಿದರೆ ಕದಂಬರು ಶಾಖೆಗಳಾಗಿ ಆಳುತ್ತಿದ್ದು, ಆಂತರಿಕ ಕಲಹದಲ್ಲಿ ತೊಡಗಿದ್ದರೆಂದು ಭಾಸವಾಗುತ್ತದೆ. ಅಂತಾಗಿ ಮೊದಲನೇ ಪೊಲೆಕೇಶಿಯ ಸಾಮರ್ಥ್ಯವನ್ನು ಉಪೇಕ್ಷಿಸಿದರೆಂದು ತೋರುತ್ತದೆ. ಅದು ಮುಂದೆ ಅವರ ಸ್ವಾತಂತ್ರ್ಯಕ್ಕೇ ಮುಳುವಾಯಿತು.

ಬಾದಾಮಿಯ ಬಂಡೆಯ ಮುಖದ ಶಾಸನದ ಇನ್ನೊಂದು ಪ್ರತಿಯ ಅಳಿದುಳಿದ ಭಾಗ ವನ್ನು ಕೆ.ವಿ. ರಮೇಶ್ ಅವರು ಗುರುತಿಸಿದ್ದಾರೆ. ಅಲ್ಲಿಯ ಕೋಟೆಯಲ್ಲಿ (ಪುರಾತತ್ವ ವಸ್ತುಸಂಗ್ರಹಾಲಯದ ಪರಿಸರದಲ್ಲಿ) ಬಂಡೆಯ ಮುಖದಲ್ಲಿರುವ ಪಲ್ಲವ ನರಸಿಂಹವರ್ಮನ ಶಾಸನವನ್ನು ಪರಿಶೀಲಿಸುವಾಗ, ಆ ಶಾಸನದ ಕೆಳಗಿರುವ ಚಲುಕ್ಯ ಕಾಲೀನ ಕನ್ನಡ ಅಕ್ಷರಗಳು ಮೊದಲನೆಯ ಪೊಲೆಕೇಶಿಯ ಆಗಲೇ ತಿಳಿದಿರುವ ಬಾದಾಮಿ ಬಂಡೆ ಶಾಸನದ ಮೂರು ಸಾಲುಗಳೇ ಆಗಿವೆ ಎಂಬುದು ಸ್ಥಿರಪಟ್ಟಿತು (ರಮೇಶ್ ಕೆ.ವಿ., ೧೯೮೪, ಪು. ೪೧).

ಚಲುಕ್ಯ ಅರಸರ ಆಳ್ವಿಕೆಯ ಕಾಲನಿರ್ಣಯದ ಬಗ್ಗೆ ಹೆಚ್ಚು ಸಮಸ್ಯೆಗಳಿಲ್ಲ. ಆದರೆ ಈಚೆಗೆ ಕೆಲವೊಂದು ಬದಲಾವಣೆಗಳನ್ನು ವಿದ್ವಾಂಸರು ಶಾಸನಗಳ ಪುನರ್ಪರಿಶೀಲನೆಯಿಂದ ಸೂಚಿಸಿದ್ದಾರೆ. ಅವುಗಳಲ್ಲಿ ಮಹತ್ವದ್ದೆಂದರೆ, ಮಂಗಲೇಶನ ಆಡಳಿತ ಪ್ರಾರಂಭ ವರ್ಷದ ನಿರ್ಣಯ. ಕ್ರಿ.ಶ. ೫೯೭-೯೮ರಲ್ಲಿ ಮಂಗಲೇಶನು ಪಟ್ಟಕ್ಕೆ ಬಂದಿರಬೇಕೆಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಈಚೆಗೆ ಡಿ. ಪಿ. ದೀಕ್ಷಿತ ಅವರು (೧೯೮೦, ಪು. ೪೭-೫೫) ಚಲುಕ್ಯ ಸತ್ಯಾ ಶ್ರಯ ಧ್ರುವರಾಜ ಇಂದ್ರವರ್ಮನ ಗೋವೆಯ ತಾಮ್ರಪಟ ಶಾಸನವನ್ನು ಪುನರ್ಪರಿಶೀಲಿಸಿ ಅದರಲ್ಲಿ ಉಲ್ಲಿಖಿತ ಶಕವರ್ಷ ೫೩೨ ಕ್ರಿ.ಶ. ೬೧೦ಕ್ಕೆ ಸಮನಾಗಿರುವುದರಿಂದ ಹಾಗೂ ಅದು ಶ್ರೀಪೃಥ್ವೀವಲ್ಲಭ ಮಹಾರಾಜನ ೨೦ನೇ ವರ್ಷದಲ್ಲಿ ಹೊರಟಿರುವುದರಿಂದ, ಆ ಶಾಸನದಲ್ಲಿ ಹೆಸರಿಸಲ್ಪಟ್ಟಿರುವ ಶ್ರೀಪೃಥ್ವೀವಲ್ಲಭ ಮಹಾರಾಜನು ಮಂಗಲೇಶನೇ ಆಗಿದ್ದಾನೆಂದು ಮಂಡಿಸಿದ್ದಾರೆ. ಆ ಪ್ರಕಾರ ಮಂಗಲೇಶನ ಆಳ್ವಿಕೆಯ ಪ್ರಥಮ ವರ್ಷವು ಕ್ರಿ.ಶ. ೫೯೧-೯೨ ಆಗುತ್ತದೆ. ಕೆ.ವಿ. ರಮೇಶ್ ಅವರು ಈ ವಾದವನ್ನು ಒಪ್ಪಿದ್ದಾರಲ್ಲದೆ, ಮುಂಚೆ ಇಮ್ಮಡಿ ಪೊಲೆಕೇಶಿ ಇಲ್ಲವೆ ಮೊದಲನೇ ವಿಕ್ರಮಾದಿತ್ಯನಿಗೆ ಅನ್ವಯಿಸಲಾಗಿದ್ದ ಮರಟೂರ ದಾನಶಾಸನವನ್ನೂ ಮಂಗಲೇಶನದೆಂದು ತೋರಿಸಿಕೊಟ್ಟಿದ್ದಾರೆ (೧೯೮೪, ಪು. ೫೯-೬೧).

ಐಹೊಳೆಯ ಇಮ್ಮಡಿ ಪೊಲೆಕೇಶಿಯ ರವಿಕೀರ್ತಿ ರಚಿತ ಪ್ರಶಸ್ತಿಯ ಮಹತ್ವ ಎಲ್ಲರಿಗೂ ತಿಳಿದಿರುವ ವಿಚಾರವೇ. ಅಂತಾಗಿ ಅದನ್ನು ಕುರಿತು ವಿವರಗಳಿಗೆ ಹೋಗುವುದು ಇಲ್ಲಿ ಅವಶ್ಯವಿಲ್ಲ. ಆದರೆ ಆ ಶಾಸನದ ಕವಿಯು ಐತಿಹಾಸಿಕ ಸಂಗತಿಗಳನ್ನು ವಸ್ತುನಿಷ್ಠವಾಗಿ ವರ್ಣಿಸಿರುವುದು ಉಲ್ಲೇಖನೀಯವಾಗಿದೆ. (ಮೊದಲನೇ) ಪೊಲೆಕೇಶಿಯು ವಾತಾಪಿಪುರಿ ಯನ್ನು ರಾಜಧಾನಿಯಾಗಿಸಿಕೊಂಡು ಅಶ್ವಮೇಧಯಾಗವನ್ನು ಮಾಡಿದನು; ನಳ, ಮೌರ್ಯ, ಕದಂಬರಿಗೆ ಕಾಳರಾತ್ರಿಯಂತಿದ್ದ (ಮೊದಲನೇ) ಕೀರ್ತಿವರ್ಮನು ಕದಂಬ ಕುಲದ ಶಾಖೆ ಗಳನ್ನು ಉರುಳಿಸಿದನು; ಮಂಗಲೇಶನು ಕಟಚುರಿಗಳನ್ನು ಸೋಲಿಸಿ ಅವರ ಸಂಪತ್ತನ್ನು ತನ್ನದಾಗಿಸಿಕೊಂಡು, ರೇವತೀ ದ್ವೀಪವನ್ನು ಹಿಡಿದುಕೊಂಡನು ಮತ್ತು (ಚಲುಕ್ಯ) ರಾಜ್ಯವನ್ನು ಪೂರ್ವ ಪಶ್ಚಿಮ ಸಮುದ್ರಗಳವರೆಗೆ ವಿಸ್ತರಿಸಿದನು; ಇತ್ಯಾದಿ ಉತ್ಪ್ರೇಕ್ಷೆಯಿಲ್ಲದೆ ವಿಷಯ ಪ್ರಸ್ತಾಪ ಮಾಡಿರುವುದು ಶ್ಲಾಘನೀಯವಾಗಿದೆ.

ಬಾದಾಮಿಯಲ್ಲಿ ನನ್ನ ಅನ್ವೆಷಣೆಯಲ್ಲಿ ಕಂಡುಬಂದ ಒಂದು ಚಿಕ್ಕ ಕನ್ನಡ ಶಾಸನ ಕುತೂಹಲಕಾರಿಯಾಗಿದೆ. ಮಾಲಗಿತ್ತಿ ಶಿವಾಲಯದ ಉತ್ತರ ದಿಕ್ಕಿಗಿರುವ ಬಂಡೆ ಬೆಟ್ಟದಲ್ಲಿ ರುವ ‘ಸಾಬರಫಡಿ’ ಎಂದು ಕರೆಯಲಾಗುವ ನೈಸರ್ಗಿಕ ಗವಿಯ ಮುಖದಲ್ಲಿ ಈ ಶಾಸನವಿದೆ. ಕ್ರಿ.ಶ. ೭ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಇದರ ಪಾಠ ಇಂತಿದೆ :

೧. ಸ್ವಸ್ತಿ ಶ್ರೀ ಸತ್ಯಾಶ್ರಯಮಹಾರಾಜರಾ ಪ್ರಾಸಾದಂ ಕೆಯ್ದೊರ್

೨. ಮಹಾಜನಮುಂಮೀ ಬಿಲಮಾನ್ ರಣಕೇಸಱೆಯರ್ಕೆ

‘(ಬಾದಾಮಿಯ) ಮಹಾಜನರು ಈ ಬಿಲವನ್ನು ರಣಕೇಸರಿ ಶ್ರೀ ಸತ್ಯಾಶ್ರಯ ಮಹಾ ರಾಜನ ಪ್ರಾಸಾದವಾಗಿ (ಆಲಯವಾಗಿ) ಮಾಡಿಸಿದರು’ ಎಂಬುದು ಇದರ ಅರ್ಥ. ಪಲ್ಲವ ಮೊದಲನೇ ನರಸಿಂಹವರ್ಮನು ಇಮ್ಮಡಿ ಪೊಲೆಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಆಕ್ರಮಿಸಿಕೊಂಡುದು ಚಲುಕ್ಯರ ಇತಿಹಾಸದಲ್ಲಿ ನಡೆದ ಅವಿಸ್ಮರಣೀಯ ಘಟನೆ. ಯುದ್ಧ ದಲ್ಲಿ ಇಮ್ಮಡಿ ಪೊಲೆಕೇಶಿ ಮಡಿದಿರಬೇಕೆಂಬುದು ತರ್ಕ. ಚಲುಕ್ಯ ರಾಜ್ಯವನ್ನು ನರ್ಮದೆ ಯಿಂದ ಕಾವೇರಿಯವರೆಗೆ ಹರಡಿದ ಸಾಮ್ರಾಜ್ಯದ ಮಟ್ಟಕ್ಕೇರಿಸಿದ ಪೊಲೆಕೇಶಿ ತೀರಿದಾಗ ಬಹುಶಃ ಅವನ ಅಂತ್ಯಕ್ರಿಯೆಗಳನ್ನು ಜರುಗಿಸಿ ಅವನ ಅವಶೇಷಗಳನ್ನು ಬಾದಾಮಿಯ ಮಹಾಜನರು ಈ ಬಿಲದಲ್ಲಿರಿಸಿದ್ದರೆಂದು ತೋರುತ್ತದೆ. ಪರಾಧೀನವಾಗಿದ್ದ ವಾತಾಪಿಯಲ್ಲಿ ಉಂಟಾಗಿದ್ದ ೧೨ ವರ್ಷಗಳ ಅರಾಜಕ ಸ್ಥಿತಿಯಲ್ಲಿ ಪೊಲೆಕೇಶಿಯ ಮಕ್ಕಳು ರಾಜಧಾನಿಯಿಂದ ದೂರವಿದ್ದಾಗ ಮಹಾಜನರು ಈ ಕಾರ್ಯವನ್ನು ನೆರವೇರಿಸಿದಂತೆ ತೋರುತ್ತದೆ (ವಿವರಗಳಿಗೆ, ಪಾಡಿಗಾರ ಎಸ್.ವಿ., ೧೯೯೦, ಪು. ೨೨೭-೨೨೮).

ಚಲುಕ್ಯ ಶಾಸನಗಳು ಬದಲಾಗುತ್ತಿರುವ ಧಾರ್ಮಿಕ ಸನ್ನಿವೇಶದ ಮೇಲೂ ಬೆಳಕು ಬೀರುತ್ತವೆ. ಬಾದಾಮಿಯ ಚಲುಕ್ಯ ಅರಸರಲ್ಲಿ ಮಂಗಲೇಶ ಮತ್ತು ಇಮ್ಮಡಿ ಪೊಲೆಕೇಶಿ ‘ಪರಮಭಾಗವತ’ರಾಗಿದ್ದರೆಂದು, ಅಂದರೆ ವಿಷ್ಣುವಿನ ಆರಾಧಕರಾಗಿದ್ದರೆಂದು ಅವರ ಶಾಸನಗಳಿಂದ ತಿಳಿಯುತ್ತದೆ. ಆದರೆ ಮೊದಲನೇ ವಿಕ್ರಮಾದಿತ್ಯನು ತನ್ನ ಆಳ್ವಿಕೆಯ ೫ನೇ ವರ್ಷದಲ್ಲಿ ‘ಶಿವಮಂಡಲದೀಕ್ಷೆ’ಯನ್ನು ಪಡೆದು ‘ಪರಮಮಾಹೇಶ್ವರ’ನಾದ ಸಂಗತಿ ಅವನ ಆಮೂಡಲಪಾಡು ತಾಮ್ರಪಟ ಶಾಸನದಿಂದ (ಇ. ಐ., ೩೨, ಪು. ೧೭೫-೮೪) ವ್ಯಕ್ತ ವಾಗುತ್ತದೆ. ಈ ಮತಪರಿವರ್ತನೆಯಿಂದಾಗಿ ಅರಸರ/ಅರಸಿಯರ ಹೆಸರಿನಲ್ಲಿ (ವಿಜಯೇಶ್ವರ, ಲೋಕೇಶ್ವರ, ತ್ರೈಲೋಕ್ಯೇಶ್ವರ, ಇತ್ಯಾದಿ) ಶಿವದೇಗುಲಗಳನ್ನೆತ್ತಿಸುವ ಪರಂಪರೆ ಚಲುಕ್ಯರ ನೆಲೆಗಳಲ್ಲಿ ದಟ್ಟವಾಗಿ ಕಾಣುತ್ತದೆ. ಅರಸನು ಮತ ಬದಲಾಯಿಸಿಕೊಳ್ಳುವಷ್ಟು ಪರಿಣಾಮಕಾರಿ ಯಾಗಿ ಬೆಳೆದ ಈ ಶೈವಧರ್ಮ ಯಾವುದು ಎಂಬುದು ಸ್ಪಷ್ಟವಿಲ್ಲದಿದ್ದರೂ ಹೊಸ ಪಾಶು ಪತದ – ಪ್ರಾಯಶಃ ಕಾಳಾಮುಖರ – ಅಲೆ ಇದಾಗಿರುವ ಸಾಧ್ಯತೆಯನ್ನು ಊಹಿಸಬಹುದು. ಆಂಧ್ರಪ್ರದೇಶದ ಆಲಂಪುರ, ಕರ್ನಾಟಕದ ಐಹೊಳೆ, ಮಹಾಕೂಟ, ಕೆಲೂರು, ಪಟ್ಟದಕಲ್ಲು ಮುಂತಾದ ನೆಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಿವ ದೇವಾಲಯಗಳು ನಿರ್ಮಿಸಲ್ಪಟ್ಟುದು ಈ ಅಲೆಯ ಹಿನ್ನೆಲೆಯಲ್ಲಿ ಎಂದು ತೋರುತ್ತದೆ.

ದೇವಾಲಯಗಳಿಗೆ ಸಂಬಂಧಿಸಿದ ಶಾಸನಗಳ ಪರಿಶೀಲನೆಯಿಂದ ಅರ್ಚನೆಯ ವಿಧಿಗಳಲ್ಲಿ ಚಲುಕ್ಯರ ಕಾಲದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದು ಗೋಚರಿಸುತ್ತದೆ. ನರ್ತಕರು, ಗಾಂಧರ್ವರು, ಸೂಳೆಯರು (ದೇವದಾಸಿಯರು), ಅರ್ಚಕವರ್ಗದವರು ಮುಂತಾದವರು ದೇಗುಲಗಳಿಗೆ ಅಂಟಿಕೊಂಡಿರುವುದನ್ನು ಗಮನಿಸಬಹುದು. ಪಟ್ಟದಕಲ್ಲಿನ ಶಾಸನೋಕ್ತ ‘ನಟಸೇವ್ಯ ಅಚಲ’ (ಅಣ್ಣಿಗೇರಿ ಎಂ. ಎಂ., ೧೯೬೦, ನಂ. ೧೦), ‘ಲೋಕಮಹಾದೇವಿಯರ ದೇಗುಲದ ಸೂಳೆ ಗೋಯಿನ್ದಪೊಟ್ಟಿಯ ಮಗಳು ಬಾದಿಪೊಟ್ಟಿ’ (ಅಣ್ಣಿಗೇರಿ ಎ. ಎಂ., ೧೯೬೦, ನಂ. ೧೩) ‘ಶ್ರೀ ಬಿಜೇಶ್ವರದ ಸೂಳೆ ಚಲಬ್ಬೆ’ (ಅಣ್ಣಿಗೇರಿ ಎ. ಎಂ., ೧೯೬೦, ನಂ. ೧೮), ‘ಗಾನ್ಧರ್ವ್ವರ್ಗ್ಗೆ ನಿರಿಸಿದಾ ಪೂರ್ವ್ವಮರ್ಯಾದೆ’ (ಅಣ್ಣಿಗೇರಿ ಎ. ಎಂ., ನಂ. ೪) ಮುಂತಾದವು ಈ ಸನ್ನಿವೇಶದ ಅರಿವು ಮಾಡಿಕೊಡುತ್ತವೆ.

ಚಲುಕ್ಯರ ಕಾಲದ ‘ಕವರ್ತೆ’ ಎಂಬ ತೆರಿಗೆಗೆ ಸಂಬಂಧಿಸಿದಂತೆ ಇಲ್ಲಿ ಪ್ರಸ್ತಾಪಿಸುವುದು ಯೋಗ್ಯವಾಗುತ್ತದೆ. ಈ ಪದವನ್ನು ಬಳಸಿರುವ ಎರಡು ಮೂರು ಸಂದರ್ಭಗಳು ಈ ಕಾಲ ದಲ್ಲಿ ಕಾಣುತ್ತವೆ. ಬಾದಾಮಿಯ ಜಂಬುಲಿಂಗ ದೇವಾಲಯದ ಕಂಬದ ಮೇಲೆ ಬರೆದಿರುವ ಶಾಸನವು ಸಮ್ಮಗಾರರ ಮೇಲಿನ ಕವರ್ತೆಯನ್ನು ಮನ್ನಾ ಮಾಡಿದ್ದನ್ನು ಹೇಳುತ್ತದೆ. ಪಟ್ಟದ ಕಲ್ಲಿನ ಎರಡು ಶಾಸನಗಳಲ್ಲಿ ‘ಬಳ್ಳಿಗವರ್ತೆ’ಯ ಉಲ್ಲೇಖ ಬಂದಿದೆ. ‘ಬಳ್ಳಿಗವರ್ತೆ’ಯು ಬಳ್ಳಿ=ವೀಳೆದೆಲೆಯ ಬಳ್ಳಿ, ಕವರ್ತೆ=ತೆರಿಗೆ; ಅಂತಾಗಿ ಬಳ್ಳಿ+ಕವರ್ತೆ = ವೀಳೆಯದೆಲೆಯ ಮೇಲೆ ಹಾಕುತ್ತಿದ್ದ ತೆರಿಗೆ ಎಂಬರ್ಥವನ್ನು ಕನ್ನಡ ನಿಘಂಟು ನೀಡಿದೆ. ಆದರೆ ‘ಬಳ್ಳಿಗವರ್ತೆ’ ಪದ ಪ್ರಯೋಗವಾಗಿರುವ ಸಂದರ್ಭ ಮಾತ್ರ ನಿಘಂಟು ನೀಡುವ ಅರ್ಥವನ್ನು ಪುಷ್ಟೀಕರಿ ಸುತ್ತಿಲ್ಲ. ಪಟ್ಟದಕಲ್ಲಿನ ವಿರೂಪಾಕ್ಷದೇಗುಲದ ಮಹಾದ್ವಾರದ ಪಾರ್ಶ್ವಗಳಲ್ಲಿರುವ ಈ ಎರಡು ಶಾಸನಗಳ ಪ್ರಸ್ತುತ ಭಾಗಗಳು ಇಂತಿವೆ :

…..ಶ್ರೀ ಲೋಕಮಹಾದೇವಿಯರಾ ಈ ಲೋಕೇಶ್ವರ ಮಾಡಿದ ಸೂತ್ರಧಾರಿಗೆ ಮೂಮೆ ಪೆರ್ಜ್ಜೆಱಪು
ಗೆಯ್ದ ಬೞಿಕ್ಕೆ ಈ ವಿಷಯದ ಬಿನ್ನಾಳಿಗಳಾ ಬಳ್ಳಿಗವರ್ತ್ತಿಯನುಳಿಪಿದ…..

ಶ್ರೀ ಸ್ವಸ್ತಿ ವಿಕ್ರಮಾದಿತ್ಯ ಶ್ರೀಪ್ರಿಥಿವೀವಲ್ಲಭ ಮಹಾದೇವಿಯರಾ ದೇಗುಲವಾನ್ ಮಾಡಿದ
ಸೂತ್ರಧಾರಿ ಶ್ರೀ ಗುಣ್ಡನ್ ಅನಿವಾರಿತಾಚಾರಿಗೆ ಮೂಮೆ ಪೆರ್ಜ್ಜೆಱೆಪು ಪಟ್ಟಮಂ
ತ್ರಿಭುವನಾಚಾರಿಯೆನ್ದು ಪೆಸರಿತ್ತು ಪ್ರಾಸಾದಙ್ಗಾಯ್ದ ಪ್ರಿಥಿವಿಯಾ ಬಿನ್ನಾಣಿಗಳಾ ಬಳ್ಳಿಗವಾರ್ತ್ತಿ ಇಲ್ಲ…

ಈ ಎರಡರಲ್ಲಿಯೂ ಬಳ್ಳಿಯನ್ನು ವೀಳ್ಯದೆಲೆಯ ಬಳ್ಳಿಯಾಗಿ ಪರಿಗಣಿಸುವಂತಿಲ್ಲ. ಎರಡೂ ಪ್ರಾಸಾದ ನಿರ್ಮಿಸಿದ ಓಜರ ಸಮುದಾಯಕ್ಕೆ ಕವರ್ತೆ ಮನ್ನಾ ಮಾಡಿದ ವಿಚಾರವನ್ನು ಅರುಹುವಂತಿವೆ. ಆದುದರಿಂದ ಇಲ್ಲಿ ‘ಬಳ್ಳಿ’ಯನ್ನು ಕುಲ, ವಂಶ, ಎಂಬರ್ಥದಲ್ಲಿ ತೆಗೆದು ಕೊಳ್ಳುವುದು ಸರಿ. ಅಂದಾಗ ಓಜರ ಮೇಲಿನ ತೆರಿಗೆಯನ್ನು ಮನ್ನಾ ಮಾಡಲಾಯಿ ತೆಂಬುದು ತಾತ್ಪರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕವರ್ತೆ ಪದವು ಕರಕುಶಲ ಕಾರ್ಮಿಕ ವೃತ್ತಿಯನ್ನು ಅವಲಂಬಿಸಿದ್ದ ಓಜರು, ಸಮ್ಮಗಾರರು, ಕಂಬಾರರು ಮುಂತಾದವರ ಮೇಲಿನ ವೃತ್ತಿ ತೆರಿಗೆ ಎಂಬರ್ಥದಲ್ಲಿ ಬಳಕೆಯಾಗಿದೆ ಎಂಬುದು ವ್ಯಕ್ತವಾಗುತ್ತದೆ. ಶಾಸನಗಳಲ್ಲಿ ಬಳಸಿರುವ ಪದಗಳ ಸರಿಯಾದ ಅರ್ಥ ತಿಳಿಯಲು ಅವು ಬಳಕೆಯಾಗಿರುವ ಸಂದರ್ಭವನ್ನು ಗುರುತಿಸುವುದರ ಮಹತ್ವವನ್ನು ಈ ಉದಾಹರಣೆ ತೋರಿಸುತ್ತದೆ.

ಚಲುಕ್ಯರ ಕಾಲವು ಕರ್ನಾಟಕದಲ್ಲಿ ಶಿಲಾವಾಸ್ತು ನಿರ್ಮಾಣ ಪರಂಪರೆಯ ಅಭಿಜಾತ ಯುಗವೆನಿಸಿದೆ. ಅವರ ಆಳ್ವಿಕೆಯಲ್ಲಿ ಲಯನಗಳೂ ರಾಚನಿಕ ದೇಗುಲಗಳೂ ನೂರಾರು ಸಂಖ್ಯೆಯಲ್ಲಿ ನಿರ್ಮಿತವಾದವು. ಇವುಗಳ ಬಹುಮುಖ ಅಧ್ಯಯನಕ್ಕೆ ಶಾಸನಗಳು ಮಹತ್ವದ ಆಕರಗಳಾಗಿವೆ. ಮೊದಲನೆಯದಾಗಿ ಕಾಲನಿರ್ಣಯ ಸಮಸ್ಯೆಗೆ ಶಾಸನಗಳು ಹೇಗೆ ಆಧಾರ ಗಳಾಗಿವೆ ಎಂಬುದನ್ನು ನೋಡಬಹುದು. ಚಲುಕ್ಯರ ಹಲವು ವಾಸ್ತುನಿರ್ಮಿತಿಗಳಿಗೆ ಖಚಿತ ಪ್ರತಿಷ್ಠಾಪನಾ ಶಾಸನಗಳಿಲ್ಲದಿರುವುದರಿಂದ ಅವುಗಳ ಕಾಲ ನಿರ್ಣಯ ಸಮಸ್ಯಾದಾಯಕ ವಾಗಿರುವುದು ತಿಳಿದ ವಿಷಯ. ಆದರೆ ಕೆಲವಾದರೂ ಶಾಸನಗಳು ಆಲಯ ಪ್ರತಿಷ್ಠಾಪನೆಯ ಬಗ್ಗೆ ಮತ್ತು ಅವುಗಳ ನಿರ್ಮಾಣ ಮಾಡಿದ ಅರಸ ಅಧಿಕಾರಿಗಳ ಬಗ್ಗೆ ಹೇಳುತ್ತವೆ. ಅಂಥವುಗಳಲ್ಲಿ ಮೂರನೆಯ ಲಯನದಲ್ಲಿರುವ ಶಕ ೫೦೦ರ (=ಕ್ರಿ.ಶ. ೫೭೮) ಶಾಸನವು ಉಲ್ಲೇಖನೀಯ. ಮಂಗಲೇಶನು ಈ ಲಯನವನ್ನು ಮಹಾವಿಷ್ಣುವಿಗಾಗಿ ನಿರ್ಮಿಸಿದನೆಂದು ಇದು ತಿಳಿಸುತ್ತದೆ. ಉಳಿದ ಲಯನಗಳಿಗೆ ಪ್ರತಿಷ್ಠಾಪನೆ ಹೇಳುವ ಶಾಸನಗಳಿಲ್ಲ. ಆದುದರಿಂದ ಹೋಲಿಕೆಯ ಕ್ರಮದಿಂದ ಉಳಿದ ಲಯನಗಳ ಕಾಲನಿರ್ಣಯ ಮಾಡಲು ಈ ಶಾಸನ ಅನುಕೂಲ ಕಲ್ಪಿಸಿದೆ. ಅದಲ್ಲದೆ ‘ಲಯನೋ ಮಹಾವಿಷ್ಣುಗೃಹಮತಿದೈವಂ ಮಾನುಷ್ಯ ಕಮತ್ಯದ್ಭುತಕರ್ಮವಿರಚಿತ ಭೂಮಿಭಾಗೋಪಭೋ ಗೋಪರಿಪರ್ಯ್ಯನ್ತಾತಿಶಯ ದರ್ಶನೀಯತಮಂ ಕೃತ್ವಾ’ ಎಂದು ಶಾಸನದಲ್ಲಿ ಹೇಳಿರುವುದು ಈ ಲಯನದ ಪರಿಸರದಲ್ಲಿ ಆಗಲೆ ಇದರಷ್ಟು ಅದ್ಭುತವಲ್ಲದ ಲಯನಗಳು (೧ ಮತ್ತು ೨ನೇ ಗುಹಾಲಯಗಳು) ರಚಿತವಾಗಿದ್ದಿರಬೇಕೆಂಬ ಪರೋಕ್ಷ ಸೂಚನೆ ನೀಡುವಂತಿದೆ. ಇದೇ ಪ್ರಕಾರ ಐಹೊಳೆಯ ಮೇಗುಡಿಯ ಇಮ್ಮಡಿ ಪೊಲೆಕೇಶಿಯ ಪ್ರಶಸ್ತಿ ಶಾಸನವು ಕೂಡ ಉಪಯುಕ್ತವಾದುದು. ಮೇಗುಡಿ ಜಿನಾಲಯದ ಕಾಲ ಕ್ರಿ.ಶ. ೬೩೪ ಎಂದು, ಅದರ ನಿರ್ಮಾತೃ ರವಿಕೀರ್ತಿಯೆಂದು ಆ ಶಾಸನ ಅರುಹುತ್ತದೆ. ರಾಚನಿಕ ದೇಗುಲಗಳ ತೌಲನಿಕ ಕಾಲನಿರ್ಣಯಕ್ಕೆ ಇದೊಂದು ಮೈಲಿಗಲ್ಲಾಗಿದೆ. ಪಟ್ಟದಕಲ್ಲಿನ ಸಂಗಮೇಶ್ವರ (ಮೂಲತಃ ವಿಜಯೇಶ್ವರ), ವಿರೂಪಾಕ್ಷ (ಮೂಲತಃ ಲೋಕೇಶ್ವರ), ಮಲ್ಲಿಕಾರ್ಜುನ (ಮೂಲತಃ ತ್ರೈಲೋಕ್ಯೇಶ್ವರ) ದೇವಾಲಯಗಳು ಕ್ರಮವಾಗಿ ವಿಜಯಾದಿತ್ಯನಿಂದ (ಕ್ರಿ.ಶ. ೬೯೬-೭೩೩), ಇಮ್ಮಡಿ ವಿಕ್ರಮಾದಿತ್ಯನ (ಕ್ರಿ.ಶ. ೭೩೩-೭೪೪) ಅರಸಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯರಿಂದ ನಿರ್ಮಾಣವಾಗಿವೆ ಎಂಬುದು ಅಲ್ಲಿರುವ ಶಾಸನಗಳಿಂದಲೇ ಬೆಳಕಿಗೆ ಬಂದಿದೆ.

ದೇಗುಲಗಳ ಮೂಲದೇವತೆಗಳನ್ನು ಗುರುತಿಸಲು ಸಹ ಶಾಸನಗಳು ಸಹಾಯ ಮಾಡಿವೆ. ಇದಕ್ಕೆ ಐಹೊಳೆಯ ಕೆಲವು ಶಾಸನಗಳ ಉದಾಹರಣೆಗಳನ್ನು ನೀಡಬಹುದು. ಪ್ರಸಿದ್ಧ ದುರ್ಗಾ ಗುಡಿಯ ದಕ್ಷಿಣ ಮಹಾದ್ವಾರದ ಗೋಡೆಯಲ್ಲಿ ಇಮ್ಮಡಿ ವಿಕ್ರಮಾದಿತ್ಯನ ಕಾಲದ ಶಾಸನವಿದೆ (ಐ. ಎ., ೮, ಪು. ೨೮೫-೮೬). ಇದರ ಪರಿಷ್ಕೃತ ಪಾಠವನ್ನು ಕೆ.ವಿ. ರಮೇಶ್ ಅವರು ಸೂಚಿಸಿದ್ದಾರೆ (೧೯೮೪, ಪು. ೧೬೪-೬೫). ಇದು ‘ಕೊಮರಸಿಂಗನ ದೇಗುಲ’ದ ‘ಆದಿತ್ಯಭಟರ’ನಿಗೆ ‘ರೇವಡಿ’ಯು ಬಡ್ಡರಾಉಳ ತೆರಿಗೆಯನ್ನು ಆಳುತ್ತಿದ್ದಾಗ ನೀಡಲಾದ ಸುಂಕಗಳ ದಾನವನ್ನು ದಾಖಲು ಮಾಡುತ್ತದೆ. ಇಲ್ಲಿ ಕೊಮರಸಿಂಗನು ದೇವಾಲಯದ ನಿರ್ಮಾತೃ; ಆದಿತ್ಯಭಟರನು ದುರ್ಗಾ ಗುಡಿಯಲ್ಲಿ ಪ್ರತಿಷ್ಠಾಪಿತವಾಗಿದ್ದ ಸೂರ್ಯದೇವ. ಅಂತಾಗಿ ದುರ್ಗಾಗುಡಿಯು ಮೂಲತಃ ಸೂರ್ಯನ ದೇವಾಲಯವಾಗಿದ್ದುದು ಪ್ರಕಟವಾಗು ತ್ತದೆ. ಈಗ ಅದರಲ್ಲಿ ಮೂಲಬೇರವಿಲ್ಲ. ಅದರಂತೆ ಐಹೊಳೆಯ ಗೌಡರಗುಡಿಯ ತೊಲೆಯ ಮೇಲಿರುವ ಶಾಸನವು ಆ ಗುಡಿಯು ದುರ್ಗಾಭಗವತಿಯ ದೇಗುಲವೆಂಬುದನ್ನು ಅರುಹುತ್ತದೆ (ಅಣ್ಣಿಗೇರಿ ಎ. ಎಂ., ೧೯೭೪, ಪು. ೧೫೨, ನಂ. ೧೪). ದುರ್ಗಾಭಗವತಿಯೆಂದರೆ ಮಹಿಷಮರ್ದಿನಿ.

ಮೇಗುಡಿಯಿರುವ ಬೆಟ್ಟದ ಉತ್ತರ ಮುಖದಲ್ಲಿ ಎತ್ತರದಲ್ಲಿರುವ ವಾಸ್ತುರಚನೆಯನ್ನು ಶ್ವೇತಾಂಬರ ಜೈನ ಆಲಯವೆಂದು ಕಸೆನ್ಸ್ ಅವರು ಬರೆದಿದ್ದರು. ಆದರೆ ಇಲ್ಲಿರುವ ಬುದ್ಧ ವಿಗ್ರಹಗಳ ಆಧಾರದ ಮೇಲೆ ಇದು ಬೌದ್ಧ ವಿಹಾರ ಎಂಬುದನ್ನು ಷ. ಶೆಟ್ಟರ ಅವರು ಮೊದಲಿಗೆ ಗುರುತಿಸಿದರು. ಆದಾಗ್ಯೂ ಸೌಂದರರಾಜನ್, ಗ್ಯಾರಿ ಟಾರ್ಟಕೊವ್ ಮುಂತಾದ ವರು ಇದು ಜಿನಾಲಯವೆಂದೇ ಪ್ರತಿಪಾದಿಸಿದ್ದಾರೆ. ಈಗ ಈ ಆಲಯದ ಕಂಬದ ಮೇಲಿರುವ ಶಾಸನವು ಈ ಕಟ್ಟಡವು ಬೌದ್ಧರಿಗೆ ಸೇರಿದ್ದೆಂಬುದನ್ನು ಸ್ಥಿರಪಡಿಸಿದೆ. ‘ಶ್ರೀ ಆನನ್ದ ಸ್ಥವಿರ ಶಿಷ್ಯ ಪಿಣ್ಡವಾದಿ ಮಹೇನ್ದ್ರರ್’ ಎಂಬುದು ಈ ಶಾಸನದ ಪಾಠ (ಅಣ್ಣಿಗೇರಿ ಎ. ಎಂ., ೧೯೭೪, ಪು. ೧೬೬, ನಂ. ೩೭). ಬೌದ್ಧ ಭಿಕ್ಷು ಆನನ್ದನ ಶಿಷ್ಯನಾದ ಪಿಣ್ಡವಾದ ಬೌದ್ಧ ಪಂಥದ ಮಹೇನ್ದ್ರ ಎಂಬ ಭಿಕ್ಷುವಿನ ಉಲ್ಲೇಖ ಇಲ್ಲಿದೆ.

ಓಜರನ್ನು ಉಲ್ಲೇಖಿಸುವ ನೂರಾರು ಚಿಕ್ಕ ಶಾಸನಗಳು ಚಲುಕ್ಯ ನೆಲೆಗಳ ಪರಿಸರದಲ್ಲಿವೆ. ಮುಖ್ಯವಾಗಿ ಬಾದಾಮಿಯ ಕೋಟೆ ಮತ್ತು ಲಯನಗಳ ಪರಿಸರದಲ್ಲಿ ಬರೆದಿರುವ ಓಜರ ಹೆಸರುಗಳು ಬಿರುದುಗಳು ಅಧ್ಯಯನ ಯೋಗ್ಯವಾಗಿವೆ. ಇವುಗಳಲ್ಲಿ ಹಲವು ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ, ಇನ್ನು ಕೆಲವು ಸಿದ್ಧಮಾತೃಕಾ ಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿವೆ. ಇವು ಹೇಗೆ ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ಓಜರ ಗುಂಪುಗಳನ್ನು ಸೂಚಿಸುತ್ತಿರ ಬಹುದು ಎಂಬುದನ್ನು ತೋರಿಸಲು ಕೆಲವು ಲೇಖನಗಳಲ್ಲಿ ಪ್ರಯತ್ನಿಸಿದ್ದೇನೆ (ಪಾಡಿಗಾರ ಎಸ್.ವಿ., ೧೯೮೮, ಪು. ೩೯೮-೪೦೫). ಈ ಹೆಸರುಗಳಲ್ಲಿ ‘ಮಞ್ಚಾ’  ಎಂದು ಅಂತ್ಯ ಗೊಳ್ಳುವ ಹೆಸರುಗಳು (ಕೋಳಿಮಞ್ಚಾ, ಸಿಂಗಿಮಞ್ಚಾ, ಕೊಟ್ಟಿಮಞ್ಚಾ, ಅರ್ಯಮಞ್ಚಾ, ಇತ್ಯಾದಿ) ಬಹುಶಃ ಆಂಧ್ರದಿಂದ ಬಂದ ಓಜರ ಹೆಸರುಗಳಾಗಿವೆ. ಸಿದ್ಧಮಾತೃಕಾ ಲಿಪಿಯಲ್ಲಿ ರುವ ಹೆಸರುಗಳು ಉತ್ತರ ಡೆಕ್ಕನ್ ಪ್ರದೇಶದಿಂದ ಬಂದ ಓಜರ ಹೆಸರುಗಳು. ಲಯನಗಳ ಶಿಲ್ಪಶೈಲಿಯಲ್ಲಿರುವ ವ್ಯತ್ಯಾಸಗಳಾದರೂ ಇದನ್ನೇ ಸೂಚಿಸುತ್ತಲಿವೆ.

ಐಹೊಳೆಯಲ್ಲಿ ಬಿಞ್ಜಡಿಓವಜ, ಬಿಣಅಮ್ಮ, ನರಸೊಬ್ಬ, ಉತುಣ, ಮುಂತಾದ ಓಜರ ಹೆಸರುಗಳೂ ಕಾಣುತ್ತಿವೆ. ಪಟ್ಟದಕಲ್ಲಿನಲ್ಲಿ ಲೋಕೇಶ್ವರ ದೇಗುಲವನ್ನು ನಿರ್ಮಿಸಿದ ಸೂತ್ರಧಾರಿ ಗುಣ್ಡ ಅನಿವಾರಿತಾಚಾರಿಗೆ ಮತ್ತು ಸರ್ವಸಿದ್ದಿ ಆಚಾರ್ಯನಿಗೆ ಮೂರು ಬಾರಿ ಪೆರ್ಜೆರೆಪು ಸನ್ಮಾನವನ್ನು ಮಾಡಿದ ಬಗ್ಗೆ ಶಾಸನಗಳಿರುವುದು ಪ್ರಸಿದ್ಧವಿದೆ. ಪಾಪನಾಥ ಗುಡಿಯ ದಕ್ಷಿಣ ಭಾಗದ ಸೂತ್ರಧಾರಿ ರೇವಡಿ ಓವಜನು (ವಿರೂಪಾಕ್ಷ ಗುಡಿಯ ದಕ್ಷಿಣ ಭಾಗದ ಸೂತ್ರಧಾರಿಯಾದ) ಸರ್ವಸಿದ್ದಿ ಆಚಾರ್ಯನ ಶಿಷ್ಯನಾಗಿದ್ದನು. ಪರೋಕ್ಷವಾಗಿ ಇದು ಪಾಪನಾಥ ದೇಗುಲವು ವಿರೂಪಾಕ್ಷ ದೇಗುಲ ನಿರ್ಮಾಣವಾದ ನಂತರದ್ದೆಂದು ಕೂಡ ಸೂಚಿಸುತ್ತದೆ.

ಪಟ್ಟದಕಲ್ಲಿನ ಪರಿಸರದಲ್ಲಿ ಈಚೆಗೆ ದೇವಾಲಯ ನಿರ್ಮಾಣಕ್ಕೆ ಬಳಸಲಾಗುತ್ತಿದ್ದ ಕಲ್ಲುಗಣಿಗಳ ಶೋಧವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಧಾರವಾಡ ವಲಯದ ಅಧೀಕ್ಷಕ ಪುರಾತತ್ವಜ್ಞರಾಗಿದ್ದ ಎಸ್.ವಿ. ವೆಂಕಟೇಶಯ್ಯ ಮತ್ತು ಅವರ ಸಹೋದ್ಯೋಗಿಗಳು ಈ ಗಣಿಗಳಿಗೆ ಸಂಬಂಧಿಸಿದ ಸು. ಕ್ರಿ.ಶ. ೮ನೇ ಶತಮಾನದ ಕನ್ನಡ ಲಿಪಿಯಲ್ಲಿರುವ ಹಲವು ಚಿಕ್ಕ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಉದಾಹರಣೆಗೆ ಶಂಕರ ಲಿಂಗನ ಗುಂಡು ಎಂಬ ತಾಣದ ಪರಿಸರದಲ್ಲಿರುವ ಈ ಕೆಳಗಿನ ಶಾಸನವನ್ನು ಬಂಡೆಯ ಮೇಲೆ ಕೊರೆದಿರುವ ಗಣೇಶ, ದುರ್ಗಾಭಗವತಿ, ಲಿಂಗ ಮತ್ತು ತ್ರಿಶೂಲಸ್ತಂಭ ಚಿತ್ರಗಳ ಸಂದರ್ಭದಲ್ಲಿ ಬರೆದಿದೆ :

೧. ಶ್ರೀ ಧರ್ಮ್ಮಸಂಘಾತನಾ ಕಣಿ

೨. ಪಪಾಕೊ ಅಞ್ಜವೊ ಪರಮಮಾ

೩. ಹೇಶ್ವರ

ಇದರಲ್ಲಿ ಧರ್ಮಸಂಘಾತ ಎಂಬಾತನ ಕಲ್ಲು ಗಣಿಯ ಉಲ್ಲೇಖವಿದ್ದು, ಪಪಾಕ ಮತ್ತು ಆಞ್ಚುವ  ಎಂಬ ಶಿವಾರಾಧಕರ ಹೆಸರುಗಳಿವೆ. ಈ ಹೆಸರುಗಳಲ್ಲಿ ಪಪಾಕ ಎಂಬುದು ಕುತೂಹಲಕಾರಿಯಾಗಿದ್ದು ಪಟ್ಟದಕಲ್ಲಿನ ಸಂಗಮೇಶ್ವರ ಗುಡಿಯ ಎರಡು ಕಂಬಗಳನ್ನು ‘ಪಾಕ’ ಎಂಬಾತನು ಮಾಡಿದ್ದನ್ನು ನೆನಪಿಸುತ್ತದೆ  (ಅಣ್ಣಿಗೇರಿ, ೧೯೬೦, ಪು. ೮೬-೯೭, ನಂ. ೨೧).

ಅದರಂತೆ ಹನುಮಂತಗುಂಡು ಎಂಬ ತಾಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀಕ್ಷಕ ಪುರಾತತ್ವಜ್ಞ ಶ್ರೀ ಎಲ್.ಎಸ್. ರಾವ್ ಅವರು ಗಮನಿಸಿದ ಈ ಕೆಳಗಿನ ಶಾಸನವಿದೆ :

೧. ಶ್ರೀ ಮಾರಡಿದೇವನಾ ಕಣಿಯ ಕೊಟ್ಟೊ

೨. ಪಂಚಮಹಾಪಾತಕನಕ್ಕು

‘ಶ್ರೀ ಮಾರಡಿದೇವನ ಈ ಗಣಿಯನ್ನು (ಇನ್ನೊಬ್ಬರಿಗೆ) ಕೊಟ್ಟವನು ಪಂಚಮಹಾಪಾತಕ ನಾಗುತ್ತಾನೆ’ ಎಂಬುದು ಈ ಶಾಸನದ ತಾತ್ಪರ್ಯ.

ಐಹೊಳೆಯಲ್ಲಿ ಕೂಡ ಓಜರು ಕೆಲವು ಶಿಲಾತಾಣಗಳನ್ನು ತಮ್ಮ ಗಣಿಗಳೆಂದು ಗುರುತಿಸಿ ಕೊಂಡಿದ್ದರು. ಉದಾಹರಣೆಗೆ, ನರಸೊಬ್ಬನೆಂಬ ವಾಸ್ತುಶಿಲ್ಪಿ ಮೇಗುಡಿ ಬೆಟ್ಟದ ಪಶ್ಚಿಮ ಪಾರ್ಶ್ವದಲ್ಲಿರುವ ಜೈನ ಲಯನದ ತಾಣವನ್ನು ತನ್ನ ಗಣಿ ಎಂದು ಗುರುತಿಸಿಕೊಂಡಿದ್ದ (‘ಶ್ರೀ ನರಸೊಬ್ಬನಾ ಕಣಿ). ಇಲ್ಲಿ ಅವನು ಲಯನವೊಂದನ್ನು ನಿರ್ಮಿಸಲು ಬಂಡೆಯ ಮುಖದಲ್ಲಿ ಕೊರೆದ ರೇಖೆಗಳನ್ನು ಈಗಲೂ ಕಾಣಬಹುದು. ಹುಚ್ಚಪ್ಪಯ್ಯಗುಡಿಯನ್ನು ನಿರ್ಮಿಸಿದವನು ಈ ನರಸೊಬ್ಬನೇ ಆಗಿದ್ದು ಅದಕ್ಕೆ ತನ್ನ ಈ ಗಣಿಯಿಂದಲೇ ಕಲ್ಲನ್ನು ಪಡೆದಿರಬೇಕೆಂದು ತರ್ಕಿಸಬಹುದು.

ಶಾಸನಗಳ ಓದಿನ ಪರಿಷ್ಕರಣದಿಂದ ಅವುಗಳ ತಾತ್ಪರ್ಯವೇ ಬದಲಾಗಬಹುದು. ಚಲುಕ್ಯರ ಕಾಲದ ಶಾಸನಗಳ ಸಂದರ್ಭದಲ್ಲಿ ಕೂಡ ಈ ಮಾತು ಅನ್ವಯಿಸುತ್ತದೆ. ಪಟ್ಟದ ಕಲ್ಲಿನ ವಿರೂಪಾಕ್ಷ ಗುಡಿಯ ಪೂರ್ವ ಮುಖಮಂಟಪದಲ್ಲಿರುವ ಒಂದು ಶಾಸನವನ್ನು ಹೀಗೆ ಓದಲಾಗಿತ್ತು (ಅಣ್ಣಿಗೇರಿ, ೧೯೬೦, ಪು. ೮೨, ನಂ. ೯.) :

೧. ಸ್ವಸ್ತಿ ಶ್ರೀ ಸಕ್ಕರೇಸಿವಾದಿಗ

೨. ಳ ಪಾದಧೂಳಿ ಲೋಕೇಶ್ವರದ

೩. ಮೇಲ್ಗಣ್ಡು ಗೆಯ್ದೋನ್ ಆದಿತ್ಯ

೪. ಶ್ರೀಪಾದದೇವ ಪುತ್ರನ್

(ಸಕ್ಕರೇಸಿವಾದಿಗಳ ಪಾದಧೂಳಿಯಾದ (ಶಿಷ್ಯನಾದ) ಆದಿತ್ಯಶ್ರೀಪಾದದೇವನ ಮಗನು ಲೋಕೇಶ್ವರದ ಛತ್ತನ್ನು (ಮೇಲ್ಗಣ್ಡು) ಮಾಡಿದನು).

ಈ ಮೇಲಿನ ತಾತ್ಪರ್ಯದ ಪ್ರಕಾರ ಮೇಲ್ಗಣ್ಡು ಮಾಡಿದ ಓಜನನ್ನು ಹೆಸರಿಸದೇ ಅವನ ತಂದೆಯ ಹೆಸರನ್ನು ಮಾತ್ರ ಹೇಳಿರುವುದು ವಿಚಿತ್ರವೆನಿಸಿದ್ದರಿಂದ ನಾನು ಸ್ಥಳದಲ್ಲಿಯೇ ಇದನ್ನು ಪರಿಶೀಲಿಸಿದೆ. ಆಗ ಕಂಡುಬಂದ ಸರಿಯಾದ ಪಾಠ ಈ ಕೆಳಗಿನಂತಿದೆ :

೧. ಸ್ವಸ್ತಿ ಶ್ರೀ ಸಕ್ಕರೇಸಿವಾದಿಗ

೨. ಳ ಪಾದಧೂಳಿ ಲೋಕೇಶ್ವರದ

೩. ಮೇಲ್ಗಣ್ಡು ಗೆಯ್ದೋನ್ ಆದಿತ್ಯ

೪. ಗಿಹದ ದೇವಪುತ್ರನ್

(ಸಕ್ಕರೇಸಿವಾದಿಗಳ ಶಿಷ್ಯ ಆದಿತ್ಯಗೃಹದ ದೇವಪುತ್ರನು ಲೋಕೇಶ್ವರದ (ದೇವಾಲಯದ) ಮೇಲ್ಗಣ್ಡು ಮಾಡಿದನು.)

ಈ ಶಾಸನವಿರುವ ಮುಖಮಂಟಪದ ಛತ್ತಿನಲ್ಲಿ ಬಹು ಸುಂದರವಾದ ಆದಿತ್ಯನ (ಸೂರ್ಯನ) ಉಬ್ಬುಶಿಲ್ಪವಿದ್ದು, ಪೂರ್ವದಿಶೆಯಲ್ಲಿರುವ ಈ ಮುಖಮಂಟಪವನ್ನು ಆದಿತ್ಯ ಗೃಹ ಎಂದು ಕರೆಯಲಾಗಿದೆ. ಇದನ್ನು ಮಾಡಿದಾತ ದೇವಪುತ್ರ ಎಂಬ ಓಜ ಎಂಬುದು ಶಾಸನದಿಂದ ಅರಿವಾಗುತ್ತದೆ.

ಇದೇ ಸನ್ನಿವೇಶದಲ್ಲಿ ಕಥಾನಿರೂಪಕ ಶಿಲ್ಪಸರಣಿಯನ್ನು ಗುರುತಿಸಲು ಶಾಸನಗಳು ಸಹಾಯಕಾರಿಯಾಗಬಲ್ಲ ಉದಾಹರಣೆಯೊಂದನ್ನು ನೀಡಬಹುದು. ವಿರೂಪಾಕ್ಷ ಗುಡಿಯ ಗೂಢಮಂಟಪದ ಎಡಗಡೆಯ ಕಂಬವೊಂದರ ಮುಖದಲ್ಲಿ ಕಥಾನಿರೂಪಕ ಶಿಲ್ಪಸರಣಿಯಿದ್ದು ಅದರಲ್ಲಿ ತೋರಿಸಿರುವ ವ್ಯಕ್ತಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಇಂದ್ರ, ತಿಲೋತ್ತಮೆ, ವಜ್ರ, ಅಹಲ್ಯೆ ಹೆಸರುಗಳನ್ನು ಬರೆದಿದೆ (ಅಣ್ಣಿಗೇರಿ ಎ.ಎಂ., ೧೯೬೦, ಪು. ೪೨-೪೩). ಈ ನಿರೂಪಣೆಯು ಅಹಲ್ಯಾ ಮತ್ತು ಇಂದ್ರರ ನಡುವೆ ಪ್ರಣಯಕ್ಕೆ ಸಂಬಂಧಿಸಿದೆ ಯಾದರೂ ನಮಗೆ ತಿಳಿದಿರುವ ಈ ಕಥೆಯ ಯಾವ ಪಾಠದಲ್ಲಿಯೂ ತಿಲೋತ್ತಮೆ ಮತ್ತು ವಜ್ರರ ಪಾತ್ರ ಕಾಣುತ್ತಿಲ್ಲ. ಅಂತಾಗಿ ಆ ಕಾಲದಲ್ಲಿ ಅಹಲ್ಯಾ-ಇಂದ್ರರ ಕಥೆಯು ಬೇರೆ ರೂಪದಲ್ಲಿ ಪ್ರಚಲಿತವಿತ್ತು ಎಂದು ತಿಳಿಯಲು ಸಾಧ್ಯವಾಗಿದೆ.

ಬಾದಾಮಿಯ ಬಂಡೆಯೊಂದರ ಮುಖದಲ್ಲಿರುವ ಕಪ್ಪೆಅರಭಟ್ಟನ ಶಾಸನ ಕನ್ನಡ ಸಾಹಿತ್ಯ ಬೆಳವಣಿಗೆಯ ಉದಾಹರಣೆಯ ದೃಷ್ಟಿಯಿಂದ ಬಹಳ ಮಹತ್ವವನ್ನು ಪಡೆದಿದೆ. ದೇಶೀ ತ್ರಿಪದಿ ಪದ್ಯಗಳಲ್ಲಿರುವ ಈ ಶಾಸನದಲ್ಲಿ ಕಪ್ಪೆಅರಭಟ್ಟ ಎಂಬಾತನ ಪ್ರಶಸ್ತಿಯಿದೆ. ಈತ ಯಾರು ಎಂಬುದು ಈವರೆಗೆ ಸ್ಪಷ್ಟವಿಲ್ಲ. ಮಾನಕ್ಕೆ ಮಹತ್ವ ಕೊಟ್ಟ ವ್ಯಕ್ತಿ ಈತ ಎಂದು ಹೇಳಲು ಸಾಧ್ಯವಿದೆ. ‘ಶಿಷ್ಟಜನಪ್ರಿಯನ್’, ‘ಕಷ್ಟಜನವರ್ಜಿತನ್’, ‘ಸಾಧುಗೆ ಸಾಧು’, ‘ಮಾಧೂರ್ಯನ್ಗೆ ಮಾಧೂರ್ಯನ್’, ‘ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್’ ಮುಂತಾಗಿ ಅವನನ್ನು ವರ್ಣಿಸಿದೆ. ಈ ಶಾಸನವನ್ನು ಈಚೆ ಸ್ಥಳದಲ್ಲಿಯೇ ಪರಿಶೀಲಿಸಿದಾಗ ಅರ್ಥದಲ್ಲಿ ಬದಲಾವಣೆಯಾಗದಿದ್ದರೂ ಪ್ರಕಟಿತ ಮತ್ತು ಈಗ ಬಹುವಾಗಿ ಚಾಲ್ತಿಯಲ್ಲಿ ರುವ ಪಾಠದ ಪರಿಷ್ಕರಣೆ ಅಗತ್ಯವೆನಿಸಿತು. ಪರಿಷ್ಕೃತ ಪಾಠ ಇಂತಿದೆ :

೧. ಕಪ್ಪೆಅರಭಟ್ಟನ್ ಶಿಷ್ಟಜನಪ್ರಿಯನ್
೨. ಕಷ್ಟಜನವರ್ಜಿತನ್ ಕಲಿಯುಗವಿಪರೀತನ್
೩. ವರನ್ತೇಜಸ್ವಿನೋ ಮೃತ್ತ್ಯುರ್ನ ತು ಮಾನಾವಖಣ್ಡನಮ್
೪. ಮೃತ್ತ್ಯುಸ್ತತಣಿಕೋ ದುಃಖಮ್ಮಾನಭಂಗನ್ದಿನೇ ದಿನೇ
೫. ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯ್ಯನ್ ಬಾಧಿಪ್ಪ
೬. ಕಲಿಗೆ ಕಲಿಯುಗವಿಪರೀತನ್ಮಾಧವನೀತನ್ಪೆಱನಲ್ಲನ್
೭. ಒಳ್ಳಿತ್ತ ಕೆಯ್ವೊರಾರ್ಪ್ಪೊಲ್ಲದುಮದಱನ್ತೆ ಬಲ್ಲಿತ್ತು ಕಲಿಗೆ
೮. ವಿಪರೀತಾ ಪುರಾಕೃತಮಿಲ್ಲಿ ಸನ್ಧಿಕ್ಕುಮದು ಬನ್ದುಮ್
೯. ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆನ್ದು ಬಿಟ್ಟವೋಲ್ಕಲಿಗೆ ವಿ
೧೦. ಪರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಮ್

ಸುಮಾರು ಇದೇ ಕಾಲದ (೮ನೇ ಶತಮಾನದ ಪೂರ್ವಾರ್ಧ) ಉದ್ಯಾವರದ (ಉಡುಪಿ ಜಿಲ್ಲೆ) ದೇವು ಎಂಬಾತನನ್ನು ಸಾಧುಪ್ರಿಯನ್ ಅಸಾಧುವರ್ಜಿತನ್ ಎಂದು ವರ್ಣಿಸುವ ಒಂದು ವೀರಗಲ್ಲು ಶಾಸನವು ಕಪ್ಪೆಅರಭಟ್ಟನ ಶಾಸನದ ಶಿಷ್ಟಜನಪ್ರಿಯನ್ ಕಷ್ಟಜನ ವರ್ಜಿತನ್ ಭಾಗವನ್ನು ನೆನಪಿಸುತ್ತದೆ (ಇ.ಐ. ೯, ೧೯ (೩) :

ಸ್ವಸ್ತಿ ಶ್ರೀ ಪಾಣ್ಡ್ಯವಿಲ್ಲರಸರಾ ಮಗನ್ದೇವು
ಸಾಧುಪ್ರಿಯನಸಾಧುಜನವರ್ಜಿತನ್ಯ್ವೇತವಾಹನರುದಯಪುರಮಾನ್ಪೊಗುವಲ್ಲಿ ಎಱಿದು
ಸ್ವರ್ಗಾಲಯಕ್ಕೇರಿದಾನ್

ಚಲುಕ್ಯರ ಕಾಲದಲ್ಲಾಗಲೇ ವಿವಿಧ ಛಂದಸ್ಸುಗಳು ಕನ್ನಡದಲ್ಲಿ ಬಳಕೆಯಾಗತೊಡಗಿದ ಉದಾಹರಣೆಗಳು ಲಭ್ಯವಾಗುತ್ತವೆ. ಬಾದಾಮಿಯ ಸು. ೮ನೇ ಶತಮಾನದ ಒಂದು ಶಾಸನ ದಲ್ಲಿ ಪೃಥ್ವೀವೃತ್ತವು ಬಳಸಲ್ಪಟ್ಟಿರುವುದು ಗಮನೀಯ (ನೇಗಿನಹಾಳ ಎಂ.ಬಿ., ೧೯೯೪, ಪು. ೮೧).

ಇಮ್ಮಡಿ ಪೊಲೆಕೇಶಿಯ ಐಹೊಳೆ ಪ್ರಶಸ್ತಿ ಶಾಸನವು ಕಾಳಿದಾಸ ಮತ್ತು ಭಾರವಿಯನ್ನು ಉಲ್ಲೇಖಿಸಿರುವ ವಿಚಾರ ಬಹು ಪ್ರಸಿದ್ಧವೇ ಆಗಿದೆ. ಕಾಳಿದಾಸನ ಕಾಲದ ಬಗ್ಗೆ ಇರುವ ಜಿಜ್ಞಾಸೆಯ ಹಿನ್ನೆಲೆಯಲ್ಲಿ ಅವನು ೬೩೪ಕ್ಕಿಂತ ಮುಂಚಿನವನೆಂದು ನಿರ್ಣಯಿಸುವುದಕ್ಕೆ ಇದು ಪುರಾವೆಯಾಗಿ ಬಳಸಲ್ಪಟ್ಟಿದೆ. ಆದರೆ ಮಂಗಲೇಶನ ಮಹಾಕೂಟದ ಸ್ತಂಭ ಶಾಸನದ ಕವಿಯು ಕಾಳಿದಾಸನ ರಘುವಂಶದಿಂದ ಪ್ರಭಾವಿತನಾಗಿರುವ ಸೂಚನೆ ನೀಡಿದ್ದಾನಲ್ಲದೆ ಆ ಕಾವ್ಯದಿಂದ ನೇರವಾಗಿ ಒಂದು ಸಾಲನ್ನು ಎತ್ತಿಕೊಂಡಿರುವುದು ಗಮನಾರ್ಹ (ಯಥಾವಿಧಿ ಹುತಾಗ್ನೀನಾಂ ಯಥಾಕಾಮಾರ್ಚಿತಾರ್ಥಿನಾಂ, ರಘುವಂಶ, ೧,೬; ಮಹಾಕೂಟ ಸ್ತಂಭಶಾಸನ, ಐ. ಎ., ೧೯, ಪು. ೭-೨೦). ಕ್ರಿ.ಶ. ೫೯೭ರ ಹೊತ್ತಿಗೆ ಆಗಲೇ ಕಾಳಿದಾಸನು ದಕ್ಷಿಣದಲ್ಲಿ ಪ್ರಸಿದ್ಧನೂ ಅನುಕರಣೀಯನೂ ಆಗಿದ್ದಾನೆಂಬುದನ್ನು ಇದು ಸಿದ್ಧಪಡಿಸುತ್ತದೆ.

ಬಾದಾಮಿಯ ಚಲುಕ್ಯರ ಅಂತ್ಯದ ಹೊತ್ತಿಗೆ ಶಾಸನ ಪ್ರಕಾರಗಳಲ್ಲಿ ಹೊಸತೊಂದು ಪ್ರಕಾರ ಕಾಣಿಸಿಕೊಳ್ಳುತ್ತದೆ. ಇದು ಗೊಸಾಸ-ಮೇಣ್ಟಿಗೆ ಸಂಬಂಧಿಸಿದ್ದು. ಇತ್ತೀಚೆಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಸಾತೇನಹಳ್ಳಿಯಲ್ಲಿ ಆಕಸ್ಮಿಕವಾಗಿ ಎರಡು ಮೇಣ್ಟಿ ಶಾಸನಗಳು ಶೋಧವಾದವು. ಅವುಗಳಲ್ಲಿ ಒಂದು ಅಪೂರ್ಣವಾಗಿದ್ದು, ಇನ್ನೊಂದರ ಪಾಠ ಈ ಕೆಳಗಿನಂತಿದೆ.

೧. ಸ್ವಸ್ತಿ ಶ್ರೀಕೀರ್ತ್ತಿ
೨.ವರ್ಮ್ಮರ್ಪೃಥು
೩. ವೀರಾಜ್ಯ ಕೆಯೆ
೪. ದೋಸಿ ನಾಡಾ
೫. ಳೆ ತಣ್ಗ್ಯ ಊರಾ
೬. [ಶ್ರೀ?]
೭. ಚನ್ದನ ಮೇಣ್ಟಿ

ಇಮ್ಮಡಿ ಕೀರ್ತಿವರ್ಮನು ರಾಜ್ಯವಾಳುತ್ತಿದ್ದಾಗ, ದೊಸಿ ಎಂಬಾತನು ನಾಡನ್ನು ಆಳುವಾಗ (ಬಹುಶಃ ಬನವಾಸಿ ನಾಡು) ತಣ್ಗ್ಯಊರ ಚನ್ದ ಎಂಬವನು ಮೇಣ್ಟಿ ನೆಡಿಸಿದ ಉಲ್ಲೇಖ ಇಲ್ಲಿದೆ. ಕಾಲ ೮ನೇ ಶತಮಾನದ ಮಧ್ಯಭಾಗ. ಗೋಸಾಸ-ಮೇಣ್ಟಿ ಶಾಸನಗಳು ಕೃಷಿ ಚಟುವಟಿಕೆಯ ವಿಸ್ತರಣೆಗೆ ಸಂಬಂಧಿಸಿವೆ. ಮುಂದೆ ರಾಷ್ಟ್ರಕೂಟರ ಕಾಲದಲ್ಲಿ ಇವು ಹೆಚ್ಚು ಸಂಖ್ಯೆಯಲ್ಲಿ ಕಾಣುತ್ತವೆ.

ಸಂಸ್ಕೃತಿಯ ಬಹುಮುಖ ಚಿತ್ರವನ್ನು ಚಲುಕ್ಯರ ಶಾಸನಗಳು ಒದಗಿಸುತ್ತವೆ. ಆದರೆ ಅವುಗಳ ವ್ಯವಸ್ಥಿತ, ಅಂತರ್ವಿಮರ್ಶನಾತ್ಮಕ  ಅಧ್ಯಯನಕ್ಕೆ ಇನ್ನೂ ಸಾಕಷ್ಟು ಅವಕಾಶಗಳಿವೆ ಎಂಬುದರಲ್ಲಿ ಸಂಶಯವಿಲ್ಲ.

ರಾಷ್ಟ್ರಕೂಟರ ತಾಮ್ರಶಾಸನಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವು ಸಾಮಾನ್ಯವಾಗಿ ಪ್ರಾಚೀನ ನಾಗರೀ ಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿವೆ. ಅವು ನೀಡುವ ತೇದಿಯ ವಿವರಗಳು ಉತ್ತರೀ ರೀತಿಯಲ್ಲಿವೆ (ರಮೇಶ್, ಕೆ.ವಿ., ೧೯೭೧, ಪು. ೩೩) ತಾಮ್ರಶಾಸನಗಳಲ್ಲಿ ಕೆಲವು ಅಪರೂಪಕ್ಕೆ ಕನ್ನಡ ಲಿಪಿ, ಭಾಷೆಯಲ್ಲಿ ಇವೆ. ಉದಾಹರಣೆಗೆ ಮುಮ್ಮಡಿ ಗೋವಿಂದನ ಬ್ರಿಟಿಷ್ ಮ್ಯೂಸಿಯಂ ತಾಮ್ರಪಟ ಶಾಸನ (ಇ. ಐ., ೩೩, ಪು. ೩೨೭-೩೩೨). ಇದಕ್ಕಿಂತ ಪ್ರಾಚೀನವೆನಿಸಿದ ಆಳುಪ ಅರಸರ ಬೆಳ್ಮಣ್ಣು ತಾಮ್ರಪಟ ಶಾಸನವನ್ನೂ ಹೆಸರಿಸಬಹುದು.

ಈ ಕಾಲದ ಶಿಲಾಶಾಸನಗಳಲ್ಲಿ ಕನ್ನಡ ಶಾಸನಗಳೇ ಹೆಚ್ಚು. ಕನ್ನಡ ಲಿಪಿಯಲ್ಲಿ ಮ, ವ, ಯ ಮುಂತಾದ ಕೆಲವು ಅಕ್ಷರಗಳು ವರ್ತುಲಾಕಾರದ ರೂಪತಾಳಿವೆಯಲ್ಲದೆ, ಅಕ್ಷರಗಳು ತುಸು ಲಂಬವಾಗಿದ್ದರೂ ಹೆಚ್ಚು ಕಡಿಮೆ ಇಂದಿನ ಕನ್ನಡ ಲಿಪಿಯ ಅಕ್ಷರಗಳಿಗೆ ಹತ್ತಿರವಾಗುತ್ತ ಸಾಗಿವೆ.

ಮಹಾರಾಷ್ಟ್ರದಲ್ಲಿ ದೊರೆತಿರುವ ಕೆಲವು ಶಿಲಾಶಾಸನಗಳು ಸಂಸ್ಕೃತದಲ್ಲಿದ್ದು, ಅವುಗಳಿಗೆ ನಾಗರೀ ಲಿಪಿ ಬಳಸಲ್ಪಟ್ಟಿದೆ. ಉದಾಹರಣೆಗೆ ಮುಮ್ಮಡಿ ಕೃಷ್ಣನಿಗೆ ಅನ್ವಯಿಸಲಾಗಿರುವ ಕಂಧಾರ (ನಾಂದೇಡ ಜಿಲ್ಲೆ) ಶಾಸನ (ರಿತ್ತಿ ಮತ್ತು ಶೇಳ್ಕೆ, ೧೯೬೮, ನಂ. ೨).

ಕನ್ನಡ ಶಾಸನಗಳಲ್ಲಿ ತೇದಿಯ ವಿವರಗಳಿಗೆ ಶಕ ಕಾಲಗಣನೆಯನ್ನು ಬಳಸಲಾಗಿದೆ. ‘ಶಕನೃಪಕಾಲಾತೀತ ಸಂವತ್ಸರ’ ಎಂಬುದಾಗಿ ತೇದಿ ಉಲ್ಲಿಖಿತವಾಗಿರುವುದು ಸಾಮಾನ್ಯ. ರಾಷ್ಟ್ರಕೂಟರ ಆಳ್ವಿಕೆಯ ಕೊನೆಯ ಹಂತದ ಕೆಲವು ಶಾಸನಗಳಲ್ಲಿ ಶಕವರ್ಷ, ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ, ಯೋಗಗಳನ್ನೂ ಹೇಳಿರುವುದುಂಟು. ಉದಾಹರಣೆಗೆ ಮುಮ್ಮಡಿ ಇಂದ್ರನ ಖಂಡೇಭಾಗೂರ ಶಿಲಾಶಾಸನ (ಕೆ. ಐ. ೬, ನಂ. ೪; ಡಿಸೆಂಬರ್ ೨೦, ೯೨೪):

‘ಸಕನೃಪಕಾಳಾತೀತ ಸಂವತ್ಸರ ಸತಂಗಳೆಣ್ಟುನೂರನಾಲ್ವತ್ತಾಱನೆಯ ತಾರಣವೆಂಬ ವರಿಷಂ
ಪ್ರವರ್ತ್ತಿಸೆ ಪೌಷಮಾಸದ ಕೃಷ್ಣಪಕ್ಷದ ಚಟ್ಟಿಯುಂ ಸೋಮವಾರಮುತ್ತರೆ
ನಕ್ಷತ್ರಮುಂ ಸೋಭನಮೆಂಬ ಯೋಗ….’

ಇನ್ನು ಕೆಲವು ಶಾಸನಗಳು ‘ಸ್ವಸ್ತಿ ನಿತ್ಯವರ್ಷದೇವ ಶ್ರೀಪ್ರಿಥ್ವೀವಲ್ಲಭ ಮಹಾರಾಜಾಧಿ ರಾಜ ಪರಮೇಶ್ವರ ಪರಮಭಟ್ಟಾರಕ ರಾಜ್ಯಾಭಿವೃದ್ದಿ ಉತ್ತರೋತ್ತರ ಸಲುತ್ತಿರೆ’ (ಕೆ. ಐ., ೬, ನಂ. ೪), ‘ಸ್ವಸ್ತಿ ಶ್ರೀ ಕನ್ದರದೇವ ಪೃಥ್ವೀರಾಜ್ಯಂ ಗೆಯ್ಯೆ’ (ಕೆ. ಐ., ೬, ನಂ. ೫) ಎಂಬುದಾಗಿ ನೇರವಾಗಿ ಅರಸನ ಉಲ್ಲೇಖದೊಂದಿಗೆ ಆರಂಭವಾಗುವುದುಂಟು. ಮತ್ತೆ ಕೆಲವು ನೇರವಾಗಿ ‘ಸ್ವಸ್ತಿ ಶ್ರೀ ಎಱಯಮ ರಾಜ್ಯಂ ಗೆಯ್ಯೆ’ (ಕೆ. ಐ. ೬, ನಂ. ೨), ‘ಸ್ವಸ್ತಿ ಶ್ರೀ ಭನವಸಿ ನಡ ಲೋಕಟೆ ಆಳೆ’ (ಕೆ. ಐ. ೬, ನಂ. ೩) ಎಂಬುದಾಗಿ ಪ್ರಾದೇಶಿಕ ಆಳರಸರ ಉಲ್ಲೇಖದೊಂದಿಗೆ ಆರಂಭವಾಗಿವೆ. ಹಲವು ಗೋಸಾಸ ಶಾಸನಗಳು ಈ ಕಾಲದ ವಿಶೇಷ. ವೀರಗಲ್ಲು ಶಾಸನಗಳು ಹೆಚ್ಚು ಸಂಖ್ಯೆಯಲ್ಲಿ ಈ ಕಾಲದಲ್ಲಿಯೇ ಕಾಣತೊಡಗಿವೆ. ಅವುಗಳಿಗೆ ಕನ್ನಡವನ್ನು ಬಳಸಿರುವುದು ಸಾಮಾನ್ಯ. ಇದು ವೀರ ವಿಧೇಯತೆಯ ಪಾವಿತ್ರ್ಯವನ್ನು ಹೊಸ ಮಟ್ಟಕ್ಕೆ ಏರಿಸಿರುವುದರ ಸಂಕೇತವಾಗಿದೆಯಲ್ಲದೆ ರಾಜಕೀಯ ಅವಶ್ಯಕತೆಗಳನ್ನು, ಆದರ್ಶ ಗಳನ್ನು ಸೂಚಿಸುತ್ತಿದೆ. ಜೈನರ ನಿಶಿಧಿ ಶಾಸನಗಳು ಕೊಪ್ಪಳ ಮುಂತಾದೆಡೆ ಸಾಕಷ್ಟು ಸಂಖ್ಯೆ ಯಲ್ಲಿವೆ (ನಾಗರಾಜಯ್ಯ ಹಂ. ಪ., ೧೯೯೮). ಕೆಲವು ಶಾಸನಗಳಲ್ಲಿ ಸ್ಖಾಲಿತ್ಯ ಕಂಡುಬರುತ್ತಿ ದ್ದರೂ, ಕನ್ನಡವು ಶಾಸನ ಮತ್ತು ಸಾಹಿತ್ಯಿಕ ಭಾಷೆಯಾಗಿ ಅಭಿವೃದ್ದಿ ಹೊಂದಿದ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ಕನ್ನಡ ಶಾಸನ ಗದ್ಯ ಹೆಚ್ಚು ಸ್ಪಷ್ಟತೆ ಪಡೆದಿರುವುದು ಈ ಕಾಲಘಟ್ಟದ ಪ್ರಾರಂಭದಲ್ಲಿಯೇ ಕಾಣತೊಡಗಿದೆ:

‘ಸ್ವಸ್ತಿ ಧಾರಾವರ್ಷ ಶ್ರೀಪೃಥುವಿವಲ್ಲಭ ಮಹಾರಾಜಾಧಿರಾಜ ಪರಮೇಶ್ವರಭಟ್ಟಾರ ಶ್ರೀ
ಕಲಿಬಲ್ಲಹನ್ ಪೃಥುವೀರಾಜ್ಯಂಗೆಯೆ ಲೋಕಮಹಾದೇವಿಯರ ದೇಗುಲದ ಸೂಳೆ
ಗೋಯಿನ್ದಪೊಡ್ಡಿಯ ಮಗಳು ಬಾದಿಪೊಡ್ಡಿಯೆಂಬೊಳ್ ಉತ್ತಮ ಗೋಸಾಸಮಿೞ್ದೊಳ್
ಅಶ್ವರಥಂಗೊಟ್ಟೊಳ್ಹಸ್ತಿರಥಮಿೞ್ದೊಳ್ ಭೂಮಿದಾನಮುಂ ಉಭಯಮುಖಿಯುಂ ಕೊಟ್ಟಾಳ್||
(ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಶಾಸನ; ಐ. ಎ. ೧೦, ಪು. ೧೦೩, ನಂ. ೯೪)

ಬಾದಾಮಿಯ ಚಲುಕ್ಯರ ಕಾಲದ ಉತ್ತರಾರ್ಧದಲ್ಲಿ ದೇವಾಲಯಗಳ ಚಟುವಟಿಕೆಗೆ ಸಂಬಂಧಿಸಿದಂತೆ ನಾವು ಆಗಲೇ ಮೇಲೆ ಗಮನಿಸಿರುವ ಕೆಲವು ವಿಷಯಗಳು ರಾಷ್ಟ್ರಕೂಟರ ಕಾಲದಲ್ಲಿ ಮುಂದುವರೆದಿರುವುದನ್ನು ಈ ಶಾಸನ ಸೂಚಿಸುತ್ತಿದೆಯಲ್ಲದೆ ದೇಗುಲದ ಸೂಳೆಯರ ಆರ್ಥಿಕ ಸ್ಥಾನಮಾನದ ಸೂಚನೆಯನ್ನೂ ನೀಡುತ್ತದೆ.

ರಾಷ್ಟ್ರಕೂಟರ ಕಾಲದ ಗೋಸಾಸ ಮೇಣ್ಟಿಕಲ್ಲು ಶಾಸನಗಳು ಹೆಚ್ಚು ಸಂಖ್ಯೆಯಲ್ಲಿ ಮಿಂಚುತ್ತವೆ. ಗೋಸಾಸ ಕಲ್ಲುಗಳನ್ನು ಗೋಸಹಸ್ರ ದಾನದ ದಾಖಲೆಗಳೆಂದು ಹೇಳಲಾಗಿ ದ್ದರೂ ಅವು ಕೃಷಿ ಚಟುವಟಿಕೆಯ ವಿಸ್ತರಣೆಗೆ ಸಂಬಂಧಿಸಿದ್ದವೆಂಬುದು ಅವುಗಳ ಮೇಲಿನ ನೇಗಿಲು, ಜೋಡೆತ್ತು, ಮುಂತಾದ ಚಿತ್ರಗಳಿಂದ ಸಿದ್ಧವಾಗುತ್ತದೆ. ಐಹೊಳೆ, ಗದಗ, ಹಿರೆಕೆರೂರು, ಹಳಿಯಾಳ ಮುಂತಾದ ಪ್ರದೇಶಗಳಲ್ಲಿ ಅವು ಹೆಚ್ಚು ಸಂಖ್ಯೆಯಲ್ಲಿ ದೊರೆತಿವೆ. ನನ್ನ ವಿದ್ಯಾರ್ಥಿ ಎಸ್.ಎಸ್. ಕಲ್ಲೂರ (೧೯೯೬, ನಂ. ೩) ಅವರು ಶೋಧಿಸಿದ ಬಿದರೊಳ್ಳಿಯ (ಹಳಿಯಾಳ ತಾಲೂಕು, ಉತ್ತರ ಕನ್ನಡ ಜಿಲ್ಲೆ) ಒಂದು ಗೋಸಾಸ ಶಾಸನದ ಪಾಠ ಇಲ್ಲಿದೆ :

೧. ಸ್ವಸ್ತಿ ಶಕವ
೨. ರ್ಷಂ ಎಣ್ಟುನೂಱ
೩. ಇಪ್ಪತ್ತೆಣ್ಟ
೪. ನೆಯನ್ದು ಪ್ರಭ
೫. ವಂ ಪ್ರವರ್ತ್ತಿ
೬. ಸೆ ಗೊನ್ದ ಮಹಾ
೭. ರಾಜ ಪ್ರಿಥಿವೀ
೮. ರಾಜ್ಯಂಗೆಯೆ
೯. ಪೆಇರ್ವ್ವರ ಮಾ
೧೦. ರಪುಲಿಯುಂ ನಾ
೧೧. ಗಿಯಬ್ಬೆಯು ಗೋ
೧೨. ಸಾಸಮಿೞ್ದರ್
೧೩. ಮಂಗಳಮಾ
೧೪. ಸಿರಿ

ಶಾಸನ ಹೇಳುವ ಕಾಲ ಕ್ರಿ.ಶ. ೯೦೭-೦೮ಕ್ಕೆ ಸಮನಾಗುತ್ತಿದ್ದು, ಆಳುವ ಅರಸನು ಗೋವಿಂದನೆಂದು (ಮುಮ್ಮಡಿ ಗೋವಿಂದ, ಕ್ರಿ.ಶ. ೭೯೩-೮೧೪) ಹೇಳಿದೆಯಾದರೂ, ಆಗ ರಾಷ್ಟ್ರಕೂಟ ಇಮ್ಮಡಿ ಕೃಷ್ಣನ ಆಳ್ವಿಕೆಯಿತ್ತು. ಮಾರಪುಲಿ ಮತ್ತು ನಾಗಿಯಬ್ಬೆ ಗೋಸಾಸ ಮಾಡಿದರೆಂದು ಇದು ತಿಳಿಸುತ್ತದೆ. ಈ ಶಾಸನದಲ್ಲಿ ಕಾಣುವ ಹಾಗೆಯೇ ಹಳಿಯಾಳ ಪ್ರದೇಶದ ಇತರ ಗೋಸಾಸ ಶಾಸನಗಳಲ್ಲಿ ಉಲ್ಲಿಖಿತ ತೇದಿ ಮತ್ತು ರಾಷ್ಟ್ರಕೂಟರ ಅರಸರ ಹೆಸರುಗಳು ಒಂದಕ್ಕೊಂದು ಹೊಂದದಿರುವುದು ಗಮನೀಯವಾಗಿದೆ. ಬಹುಶಃ ಇದು ತೀರ ದಟ್ಟಕಾಡುಗಳಿದ್ದ ಒಳ ಪ್ರದೇಶಗಳಲ್ಲಿದ್ದ ಜನರಿಗೆ ಆಳರಸರ ಬಗ್ಗೆ ಮಾಹಿತಿ ಯಿದ್ದರೂ ಬದಲಾವಣೆಗಳಾದ ಬಗ್ಗೆ ತೀವ್ರ ಮಾಹಿತಿ ದೊರೆಯುತ್ತಿರಲಿಲ್ಲ ಎಂಬುದರ ಸೂಚನೆಯಾಗಿದೆ. ಈ ಶಾಸನ ಶಿಲೆಯ ಕೆಳಭಾಗದಲ್ಲಿ ನೇಗಿಲು ಮತ್ತು ಜೋಡೆತ್ತುಗಳ ರೇಖಾಚಿತ್ರವಿದೆ.

ಕನ್ನಡದ ಗಡಿಗಳ ದೃಷ್ಟಿಯಿಂದ, ಈ ಕಾಲದ ಒಂದು ಮಹತ್ವದ ಶಾಸನವೆಂದರೆ ಮುಮ್ಮಡಿ ಕೃಷ್ಣನ ಜುರಾ ಪ್ರಶಸ್ತಿ (ಸು. ಕ್ರಿ.ಶ. ೯೬೪; ಇ.ಐ. ೧೯, ಪು. ೨೮೭-೯೦). ಮಧ್ಯಪ್ರದೇಶದ ಜುರಾದಲ್ಲಿ ದೊರೆತಿರುವ ಈ ಕನ್ನಡ ಲಿಪಿಯ ಶಾಸನವು ‘ಪರಾಂಗನಾ ಪುತ್ರಕ’ (ಪರಸ್ತ್ರೀಯರಿಗೆ ಮಗನಂತಿದ್ದ) ‘ಕಚ್ಚೆಗ’ (ಕಾಂಚಿಯನ್ನು ಗೆದ್ದ) ಮುಮ್ಮಡಿ ಗೋವಿಂದನನ್ನು ಹೊಗಳುವ ಕನ್ನಡ ಪದ್ಯಗಳನ್ನೊಳಗೊಂಡಿದೆ. ಕನ್ನಡದ ಗಡಿಗಳು ಮಧ್ಯಪ್ರದೇಶದವರೆಗೂ ಹರಡಿದ್ದು ತಕ್ಕಮಟ್ಟಿಗಾದರೂ ಕನ್ನಡದ ಚಲಾವಣೆಯಲ್ಲಿ ಆ ಪ್ರದೇಶದಲ್ಲಿದ್ದಿರಬೇಕು ಎಂಬುದನ್ನು ಇದು ಅರುಹುತ್ತಿದೆ.

ಈ ಕಾಲದ ವೀರಗಲ್ಲಿನ ವಿವಿಧ ಪ್ರಕಾರಗಳು ಗಮನಿತವಾಗಿವೆ. ಹತ್ತಿಮತ್ತೂರಿನ ಅಕಾಲವರ್ಷನ ಸು. ಕ್ರಿ.ಶ. ೭೬೫ರ ಶಾಸನವು (ಇ.ಐ. ೬, ೧೬೧ (ನಂ. ಎ.)) ಮಳ್ತವೂರ (=ಮತ್ತೂರ) ಊರಳಿವಿನಲ್ಲಿ ಸುರಗೆಯರಾ ದಾಸಮ್ಮ ಎಱಯರು ಇರಿದು ಸ್ವರ್ಗಾಲಯಕ್ಕೆ ಏರಿದ್ದನ್ನು ಹೇಳುತ್ತದೆ. ನರೇಗಲ್ಲಿನ ಸು. ಕ್ರಿ.ಶ. ೭೮೦ರ ಶಾಸನವು (ಇ.ಐ. ೬, ೧೬೨ (ನಂ. ಬಿ)) ದೊಮ್ಮರ ಕಾಡವನು ‘ತುರುಪಿನ ಪುಯ್ಯಲೊಳ್’ (ತುರುಗೋಳ್) ಸತ್ತ ವಿಚಾರ ತಿಳಿಸುತ್ತದೆ.

ಕನ್ನಡ ಶಾಸನಗಳಲ್ಲಿ ಶಾಪಾಶಯದ ಸ್ವರೂಪವೂ ಬದಲಾಗುತ್ತ ಸಾಗಿರುವುದನ್ನು ಗಮನಿಸಬಹುದು. ‘ಇದಾನಳಿದೋನ್ ಪಞ್ಚಮಹಾಪಾತಕನಕ್ಕುಂ’, ‘ಏಳನೆಯಾ ನರಕದಾ ಪುಳು ಅಕುಂ’ (ಮಂಗಲೇಶನ ಬಾದಾಮಿ ೩ನೇ ಲಯನದ ಶಾಸನ) ಎಂಬೀ ಬಳಕೆಗಳು ಬಾದಾಮಿಯ ಚಲುಕ್ಯರ ಕನ್ನಡ ಶಾಸನಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿವೆಯಾದರೆ, ಅದೇ ಕಾಲದ ಉತ್ತರಾರ್ಧದಲ್ಲಿ ‘ಇದಾನಳಿವೊನ್ ಬಾರಣಾಸಿಯ ಸಾಸಿರ ಕವಿಲೆಯುಂ ಸಾಸಿರ್ವ್ವರ್ ಪಾರ್ವರುಮಾನ್ ಕೊನ್ದ ಲೋಕಕ್ಕೆ ಸನ್ದೋನಕ್ಕುಮ್’ ಎಂಬುದಾಗಿ ವಾರಣಾಸಿ ತೀರ‍್ಥಕ್ಷೇತ್ರಕ್ಕೆ ಮಹತ್ವ ಬಂದಿರುವುದು ಗೋಚರಿಸುತ್ತದೆ. ಉಡುಪಿಯನ್ನೂ (ಶಿವವಳ್ಳಿ) ವಾರಣಾಸಿಗೆ ಸಮನಾಗಿ ಕಂಡಿರುವುದನ್ನು ಉದ್ಯಾವರದ (ಉಡುಪಿ ಜಿಲ್ಲೆ) ಸುಮಾರು ಇದೇ ಕಾಲದ ಮತ್ತು ರಾಷ್ಟ್ರಕೂಟರ ಕಾಲದ ಶಾಸನಗಳಲ್ಲಿ ಕಾಣಬಹುದು: ‘ಇದನ್ ಅಳಿದೊ ಬಾರಣಾಸಿಯು ಶಿವವಳ್ಳಿಯುಮನಳಿದ ಪಞ್ಚಮಹಾಪಾತಕನಕು’ (ಸು. ಕ್ರಿ.ಶ. ೭೫೦-೭೦; ಇ.ಐ. ೯, ೨೨ (೮)). ಮುಂದೆ, ಗಯೆ, ಪ್ರಯಾಗ ಮುಂತಾದ ತೀರ್ಥಗಳೂ ವಾರಣಾಸಿ ಯೊಂದಿಗೆ ಸೇರಿಕೊಂಡವು.

ಮುಂಚಿನ ಕಾಲದ ಶಾಸನಗಳಂತೆ, ಕಲ್ಯಾಣದ ಚಾಲುಕ್ಯರು ಮತ್ತು ಅವರ ಅಧೀನ ಅರಸುಮನೆತನಗಳ ಶಾಸನಗಳು ಮುಖ್ಯವಾಗಿ ಎರಡು ಗುಂಪುಗಳಲ್ಲಿ ಬೀಳುತ್ತವೆ: ತಾಮ್ರಪಟ ಶಾಸನಗಳು ಹಾಗೂ ಶಿಲಾಶಾಸನಗಳು. ಇವಲ್ಲದೆ ಲೋಹದ ವಿಗ್ರಹಗಳ ಮೇಲೆ ಬರೆದ ಶಾಸನಗಳು ಅಪರೂಪಕ್ಕೆ ಸಿಗುವುದುಂಟು. ತಾಮ್ರಪಟ ಶಾಸನಗಳ ಸಂಖ್ಯೆ ಸಾಕಷ್ಟಿದ್ದರೂ, ಶಿಲಾಶಾಸನಗಳು ಸಾವಿರಾರು ಸಂಖ್ಯೆಯಲ್ಲಿವೆ. ತಾಮ್ರಪಟ ಶಾಸನಗಳಿಗೆ ನಾಗರೀ ಲಿಪಿ ಬಳಕೆಯಾಗಿದೆ. ಇವುಗಳ ಭಾಷೆ ಸಂಸ್ಕೃತ. ಇವು ಮುಂಚಿನಂತೆ ಬ್ರಹ್ಮದೇಯ ಶಾಸನಗಳು. ವಿಶಿಷ್ಟ ಸಾಧನೆಗೈದ ಬ್ರಾಹ್ಮಣರಿಗೆ ಭೂದಾನ, ಬ್ರಾಹ್ಮಣ ಸಮುದಾಯಕ್ಕೆ ಹಳ್ಳಿ ಇಲ್ಲವೆ ಭೂಮಿಯ ದಾನ, ಅಗ್ರಹಾರಗಳ ಸ್ಥಾಪನೆ ಮುಂತಾದವುಗಳಿಗೆ ಇವು ಸಂಬಂಧಿಸಿವೆ.

ಕ್ರಿ.ಶ. ೧೨೦೨ ಮುತ್ತಗೆಯ ಒಂದು ಶಾಸನವು (ಗುರವ ಆರ್.ಎನ್., ಪು. ೪೪) ಶಾಸನದ ಐದು ಲಕ್ಷಣಗಳನ್ನು ಈ ರೀತಿ ಪಟ್ಟಿ ಮಾಡಿದೆ :

ರಾಜಾವಳೀ ಚ ಕರ್ತ್ತಾರಂ ಸ್ಥಾನಗೌರವಮೇವ ಚ
ದತ್ತಿಶ್ಚ ತತ್ಫಲಂ ಚೈವ ಶಾಸನಂ ಪಂಚಲಕ್ಷಣಂ

ಸಾಮಾನ್ಯವಾಗಿ ಈ ಕಾಲದ ಶಾಸನಗಳು ನಿಶ್ಚಿತ ನಿರೂಪಣಾ ವಿಧಾನವನ್ನು ಅನುಸರಿಸು ತ್ತವೆ. ಈ ವಿಷಯಗಳನ್ನು ಮೂರು ಭಾಗವಾಗಿ ಪರಿಗಣಿಸಬಹುದು.

ಮೊದಲ ಭಾಗದಲ್ಲಿ ‘ಸ್ವಸ್ತಿ’ ಎಂಬ ಮಂಗಲಪದ, ದೇವಸ್ತುತಿ, ರಾಜಕೀಯ ಇತಿಹಾಸದ ಪುನರಾಚನೆಗೆ ಉಪಯುಕ್ತ ಮಾಹಿತಿಯೊದಗಿಸುವ ಪ್ರಶಸ್ತಿರೂಪದ ರಾಜಾವಳಿ, ಅರಸ/ದಾನಿ ದಾನ ನೀಡಿದ ತೇದಿಯ ವಿವರಗಳಿರುತ್ತವೆ. ಪ್ರಶಸ್ತಿ ರೂಪದ ರಾಜಾವಳಿಗಳು ಕೆಲವು ಸಲ ಮಹತ್ವದ ಮಾಹಿತಿಯನ್ನೊದಗಿಸುತ್ತವೆ. ಉದಾಹರಣೆಗೆ ಕಲ್ಯಾಣದ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ನೀಲಗುಂದ ಶಾಸನವು ಬಾದಾಮಿಯ ಚಲುಕ್ಯರಿಂದ ಹಿಡಿದು ಕಲ್ಯಾಣದ ಚಾಲುಕ್ಯ ಆರನೇ ವಿಕ್ರಮಾದಿತ್ಯನವರೆಗಿನ ಅರಸರನ್ನು ಉಲ್ಲೇಖಿಸಿದೆ. ಇದರಿಂದ ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಮುಂದುವರಿದ ಚಾಲುಕ್ಯ ಅರಸರ ರಾಜಾವಳಿಯನ್ನು ಕಲ್ಯಾಣದ ಚಾಲುಕ್ಯರವರೆಗೆ ವಿಸ್ತರಿಸುವುದು, ಬಾದಾಮಿಯ ಚಲುಕ್ಯರೊಂದಿಗಿನ ಅವರ ವಂಶ ಸಂಬಂಧವನ್ನು ಗುರುತಿಸುವುದು ಸಾಧ್ಯವಾಗಿದೆ. ತೇದಿಯ ವಿವರಗಳನ್ನು ನೀಡುವಾಗ ಶಕವರ್ಷವನ್ನು, ಅರಸನ ಆಳ್ವಿಕೆಯ ವರ್ಷವನ್ನು ಹೇಳಿರುವುದು ಸಾಮಾನ್ಯ. ಗೋವೆಯ ಕಾದಂಬರ ಶಾಸನಗಳಲ್ಲಿ ಕಲಿಯುಗ ವರ್ಷದ (ಕ್ರಿ.ಪೂ. ೩೧೦೧) ಬಳಕೆಯೂ ಕಾಣುತ್ತದೆ. ವರ್ಷಗಳನ್ನು ಕೆಲವು ಸಲ ಅಂಕಿಗಳ ರೂಪದಲ್ಲಿ ನೇರವಾಗಿ, ಇಲ್ಲವೆ ಅಂಕಿಸೂಚಕ ಪದ ಗಳಿಂದ (ಅಂಕಾನಾಂ ವಾಮತೋ ಗತಿಃ ಎಂಬ ತತ್ವಕ್ಕನುಗುಣವಾಗಿ) ಉಲ್ಲೇಖಿಸಲಾಗಿರುತ್ತದೆ.

ಎರಡನೆಯ ಭಾಗದಲ್ಲಿ ಗೋತ್ರಾದಿ ವೈಶಿಷ್ಟ್ಯಗಳೊಂದಿಗೆ ದಾನ ಪಡೆದವನ/ರ ವಿವರಗಳು, ದಾನ ನೀಡಲ್ಪಟ್ಟ ಸಂದರ್ಭ, ನೀಡಲ್ಪಟ್ಟ ಹಳ್ಳಿ, ಭೂಮಿ, ನಿವೇಶನ, ಅವುಗಳ ಮೇರೆ ಮುಂತಾದವುಗಳ ವಿವರಗಳು, ಆ ಹಳ್ಳಿ/ಭೂಮಿಯಿರುವ ಪ್ರದೇಶದ ಭೌಗೋಲಿಕ ವಿವರಗಳು (ಉದಾ: ಅಂದಿನ ಆಡಳಿತ ವಿಭಾಗ, ನದಿ-ಗುಡ್ಡ-ಬೆಟ್ಟಗಳ ಉಲ್ಲೇಖ) ಕಾಣುತ್ತವೆ. ಈ ಶಾಸನಗಳಲ್ಲಿ ಗ್ರಾಮ ಸಮುದಾಯಗಳಿಗೆ, ರಾಷ್ಟ್ರಪತಿ, ವಿಷಯಪತಿ, ಗ್ರಾಮಕೂಟಕ, ಆಯುಕ್ತಕ, ನಿಯುಕ್ತಕ, ಅಧಿಕಾರಿಕ, ಮಹತ್ತರ, ಪ್ರಧಾನ, ಸಂಧಿವಿಗ್ರಹಿಕ, ಶಾಸನಾಧಿಕರ್ತಾ ಇತ್ಯಾದಿ ಹುದ್ದೆಗಳ ಉಲ್ಲೇಖ ಕಾಣುತ್ತದೆ.

ಮೂರನೆಯ ಹಾಗೂ ಕೊನೆಯ ಭಾಗ ಶಾಸನ ಸಂರಕ್ಷಣೆಗೆ ಸಂಬಂಧಿಸಿರುತ್ತದೆ. ಇದರಲ್ಲಿ ಫಲಶ್ರುತಿ, ಶಾಪಾಶಯಾದಿಗಳನ್ನು ಕೊಡಲಾಗಿರುತ್ತದೆ. ಸಾಮಾನ್ಯವಾಗಿ ಕೊನೆಯಲ್ಲಿ ಶಾಸನ ಬರೆದವನ ಹೆಸರು, ಶಾಸನ ಬರವಣಿಗೆಯನ್ನು ಪರಿಶೀಲಿಸಿದವನ ಹೆಸರು, ಶಾಸನವನ್ನು ತಾಮ್ರಪಟಗಳ ಮೇಲೆ ಕೊರೆದವನ ಹೆಸರು ಇರುವುದುಂಟು.

ಈ ತಾಮ್ರಪಟಗಳ ಗಾತ್ರ ಬಾದಾಮಿಯ ಚಲುಕ್ಯರ ಕಾಲದ ತಾಮ್ರಪಟಗಳಿಗಿಂತ ದೊಡ್ಡದಾಗಿರುವುದು ಗಮನೀಯ. ಶಾಸನ ಪಟಗಳನ್ನು ಬಳೆಯಿಂದ ಜೋಡಿಸಿ, ಆ ಬಳೆಗೆ ರಾಜ ಮುದ್ರೆಯನ್ನು (ಕೆಲವು ಸಲ ಅರಸನ ಹೆಸರನ್ನು ಆಲೇಖಿಸಿ) ಕೂಡಿಸಲಾಗಿರುತ್ತದೆ.

ಈ ಕಾಲಘಟ್ಟದ ಶಿಲಾಶಾಸನಗಳು ಸಾಮಾನ್ಯವಾಗಿ ತಾಮ್ರಪಟಗಳಲ್ಲಿ ಕಾಣುವ ವಿಷಯ ಕ್ರಮವನ್ನೇ ಅನುಸರಿಸುತ್ತವೆ. ಆದರೆ ದೀರ್ಘತೆಯಲ್ಲಿ ವ್ಯತ್ಯಾಸಗಳಿವೆ. ಲಿಪಿ ಸಾಮಾನ್ಯವಾಗಿ ಕನ್ನಡ. ಅಕ್ಷರಗಳು ದುಂಡುರೂಪ ಪಡೆದಿವೆ. ಬಹುಸುಂದರವಾಗಿ ಶಾಸನಗಳನ್ನು ಕಲ್ಲ ಹಲಗೆಯ ಮೇಲೆ ಕಂಡರಿಸಿರುವುದು ಗೋಚರಿಸುತ್ತದೆ. ಇವು ದೇವಾಲಯಗಳಿಗೆ ಕೊಟ್ಟ ‘ದೇವದೇಯ’, ಅಗ್ರಹಾರಗಳಿಗೆ ನೀಡಿದ ದಾನಗಳೇ ಮುಂತಾದವುಗಳಷ್ಟೇ ಅಲ್ಲದೆ ಜಯಪತ್ರ ಶಾಸನ, ವೀರಗಲ್ಲು ಶಾಸನ, ನಿಸಿಧಿ ಶಾಸನ, ಪ್ರತಿಮಾ ನಿರ್ಮಾಣ ಮತ್ತು ಸ್ಥಾಪನೆಯನ್ನು ದಾಖಲಿಸುವ ಶಾಸನ ಮುಂತಾದ ಬಗೆಗಳೂ ಕಾಣುತ್ತವೆ. ಕೆಲವು ಶಾಸನಗಳು ನೇರ ಮತ್ತು ಸಂಕ್ಷಿಪ್ತವಾಗಿವೆಯಾದರೆ ಇನ್ನು ಕೆಲವು ಸಾಕಷ್ಟು ವಿವರಗಳುಳ್ಳ, ಕಾವ್ಯಮಯವಾಗಿ ವಿಷಯ ನಿರೂಪಣೆ ಮಾಡುವ ಸುದೀರ್ಘ ಶಾಸನಗಳು. ಕೆಲವು ಸಂಸ್ಕೃತವನ್ನು, ಹಲವು ಕನ್ನಡವನ್ನು ಬಳಸಿವೆಯಾದರೆ ಇನ್ನು ಹಲವು ಕನ್ನಡ ಸಂಸ್ಕೃತಗಳೆರಡನ್ನೂ ಬಳಸಿ ರಚಿತವಾಗಿವೆ. ದಾನವೇ ಮುಖ್ಯ ವಸ್ತುವಾಗಿದ್ದರೂ, ಅದನ್ನು ದಾಖಲಿಸುವ ನೆವದಲ್ಲಿ ಅಪಾರ ಆಸಕ್ತಿಯಿಂದ ಕಾವ್ಯ ಗಳನ್ನು ರಚಿಸಿ ಪ್ರೌಢ ಪಾಂಡಿತ್ಯವನ್ನು ಮೆರೆಯುವ ಹುಮ್ಮಸ್ಸು ಈ ಕಾಲದುದ್ದಕ್ಕೂ ಗೋಚರಿಸುತ್ತದೆ. ಶಾಸನ ಕವಿಗಳ ಸೆಲೆಯೊಡೆದು ಕಾವ್ಯಮಯ ಶಾಸನಗಳ ಮಹಾಪೂರವೇ ಈ ಕಾಲಘಟ್ಟದಲ್ಲಿ ಹರಿಯತೊಡಗಿತೆಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಹಲವು ಸಲ ಈ ಕಾವ್ಯದ ಹುಚ್ಚು ವೀರಗಲ್ಲು, ನಿಸಿಧಿ, ಪ್ರತಿಮಾಪ್ರತಿಷ್ಠೆಯ ಶಾಸನಗಳಿಗೂ ಹರಡಿದೆಯೆಂದರೆ ಪರಿಸ್ಥಿತಿಯ ಅರಿವಾದೀತು. ಕೆಲವು ಶಾಸನಗಳು ಪೂರ್ತಿ ಪದ್ಯರೂಪದಲ್ಲಿ ರುವುದನ್ನು ಕಾಣಬಹುದು. ಉದಾಹರಣೆಗೆ ದೇವರಶೀಗಿಹಳ್ಳಿಯ ಸೂರ್ಯನಗುಡಿಯ ಅರೆಗಂಬದ ಮೇಲಿರುವ ೬ನೇ ವಿಕ್ರಮಾದಿತ್ಯನ ಕಾಲದ ೧೦೯೪ರ ಶಾಸನ (ಪಾಡಿಗಾರ ಎಸ್.ವಿ., ೨೦೦೧). ಓಜರು ಸಹ ತಮ್ಮ ಪ್ರಶಸ್ತಿಗಳನ್ನು ಪದ್ಯರೂಪದಲ್ಲಿ ದಾಖಲಿಸಿ ರುವುದು ಕಾಣುತ್ತದೆ (ದೇಗಾಂವೆಯ ಕಮಲನಾರಾಯಣ ಗುಡಿಯ ಕಂಬದಲ್ಲಿರುವ ತಿಪ್ರೋವರ್ಣನೆ, ಶಾರ್ದೂಲವಿಕ್ರೀಡಿತ ವೃತ್ತ, ಜೆ.ಬಿ.ಬಿ.ಆರ್.ಎ.ಎಸ್., ೯, ಪು. ೨೯೪):

ಪ್ರಾಸಾದಪ್ರತಿಮಾದಿ ಲಕ್ಷಣದೊಳಾ ಹೊಲ್ಲೋಜನೊಳುಪಾದಿಯಾ
ರ್ಲ್ಲೇಸೆಂದುರ್ವ್ವರೆ ಬಣ್ಣಿಸಲು ಮುದದಿನಿರ್ಪ್ಪಂ ಬಾಗೆಯೊಳು ತತ್ಸುತಂ
ದೇಸೀಯಂ ಬಗೆಕಾರ ಬಲ್ಲವರ ಬೆಲ್ಲಂ ಯಾಚಕೋದ್ಧಾರನೆಂ
ಬೀ ಸತುಕೀರ್ತಿಗೆ ತಿಪ್ಪಣೋಜನಧಿಪಂ ಬಂಕೇಶದಾಸೋತ್ತಮಂ

ಈ ಕಾಲದ ಬಹುತೇಕ ಶೈವ ಶಾಸನಗಳು ಕವಿ ಬಾಣನಿಂದ ರಚಿತ ‘ನಮಸ್ತುಂಗಶಿರಶ್ಚುಂಬಿ ಚಂದ್ರಚಾಮರಚಾರವೇ ತ್ರೈಲೋಕ್ಯನಗರಾರಂಭ ಮೂಲಸ್ತಂಭಾಯ ಸಂಭವೇ’ ಎಂಬ ಶಿವಸ್ತುತಿಯೊಂದಿಗೆ ಆರಂಭಗೊಂಡಿವೆ. ಅದರಂತೆ ಜೈನ ಶಾಸನಗಳು ‘ಶ್ರೀಮತ್ಪರಮಗಂಭೀರ-ಸ್ಯಾದ್ವಾದಾಮೋಘಲಾಂಛನಂ ಜೀಯಾತ್ತ್ರೈಲೋಕನಾಥಸ್ಯ ಶಾಸನಂ ಜಿನಶಾಸನಂ’ ಎಂಬ ಜಿನಶಾಸನದ ಸ್ತುತಿಯೊಂದಿಗೆ ಶುರುವಾಗುತ್ತವೆ. ‘ಜಯತ್ಯಾವಿಷ್ಕೃತಂ ವಿಷ್ಣೋರ್ವ್ವಾರಾಹಂ ಕ್ಷೋಭಿತಾರ್ಣವಂ ದಕ್ಷಿಣೋನ್ನತ ದಂಷ್ಚ್ಟ್ರಾಗ್ರ ವಿಶ್ರಾಂತಂ ಭುವನಂವಪುಃ’ ಎಂಬುದು ವೈಷ್ಣವ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ತುತಿಪದ್ಯ. ಇವಲ್ಲದೆ ಹಲವು ಶಾಸನ ಕವಿಗಳಿಂದ ರಚಿತ ಕನ್ನಡ ಇಲ್ಲವೆ ಸಂಸ್ಕೃತ ಪದ್ಯಗಳೂ ಗೋಚರಿಸುತ್ತವೆ.

ಕೆಲವು ದೀರ್ಘ ಶಾಸನಗಳಲ್ಲಿ ದೇವಸ್ತುತಿಯ ನಂತರ ಭೌಗೋಲಿಕ ವಿವರಗಳು ನಿರೂಪಿತ ವಾಗಿವೆ. ಉದಾಹರಣೆಗೆ ಒಂದು ಶಾಸನದಲ್ಲಿ ವೇಣುಗ್ರಾಮದ (=ಬೆಳಗಾಂವಿ) ಭೌಗೋಲಿಕ ಸ್ಥಾನವನ್ನು ಗುರುತಿಸುವಲ್ಲಿ, ಜಂಬೂದ್ವೀಪ, ಅದರ ಮಧ್ಯದಲ್ಲಿರುವ ಮಂದರಪರ್ವತ, ಅದರ ದಕ್ಷಿಣಕ್ಕಿರುವ ಭರತದೇಶ, ಅದರ ದಕ್ಷಿಣದಿಶಾಭಾಗದಲ್ಲಿರುವ ಕುಂತಳದೇಶ, ಅದರೊಳಗೆ ಕೂಹುಂಡಿ-೩೦೦೦, ಅದರೊಳಗಿದ್ದ ವೇಣುಗ್ರಾಮದ ಉಲ್ಲೇಖ ಕಾಣುತ್ತದೆ (ಹನ್ನಿಕೇರಿಯ ೧೨೦೯/೧೨೫೮ರ ರಟ್ಟ ಲಕ್ಷ್ಮೀದೇವನ ಶಾಸನ).

ಪ್ರಶಸ್ತಿ ಭಾಗ ಸಾಮಾನ್ಯವಾಗಿ ಸಂಕ್ಷಿಪ್ತವಾಗಿದ್ದು ಶಾಸನ ಹೊರಡಿಸಿದ ಅರಸನ ವರ್ಣನೆಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಗೋವೆಯ ಕಾದಂಬರು, ಸೌಂದತ್ತಿ/ಬೆಳಗಾಂವಿಯ ರಟ್ಟರು, ದ್ವಾರಸಮುದ್ರದ ಹೊಯ್ಸಳರು ಹೊರಡಿಸಿದ ಶಾಸನಗಳಲ್ಲಿ ವಿವರವಾದ ರಾಜಾವಳಿಯನ್ನು ಕೊಟ್ಟಿರುವುದುಂಟು. ಇದಲ್ಲದೆ ದಾನವಿತ್ತ ಕೆಲವು ಅಧೀನ ಅಧಿಕಾರಿಗಳ ವಿವರಪೂರ್ಣ ಸಂತತಿ ಪ್ರಶಸ್ತಿಯನ್ನು ಶಾಸನಗಳಲ್ಲಿ ನೋಡಬಹುದು. ಉದಾಹರಣಗೆ, ತಿಳಿವಳ್ಳಿಯ (ಹಾವೇರಿ ಜಿಲ್ಲೆ) ಒಂದು ಶಾಸನದಲ್ಲಿ (ಕೆ.ಐ., ೫, ನಂ. ೧೪೨) ಸಾವಂತ ಠಕ್ಕುರನ ವಂಶದ ಕಾವ್ಯಮಯ ವರ್ಣನೆಯಿದೆ.

ತೇದಿಗೆ ಸಂಬಂಧಿಸಿದಂತೆ, ಅರಸನ ಆಳ್ವಿಕೆಯ ವರ್ಷ, ಶಕವರ್ಷಗಳೆರಡನ್ನೂ ಉಲ್ಲೇಖಿಸಿ ರುವುದು ಸಾಮಾನ್ಯ. ಅಲ್ಲದೇ ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ (ಸೂರ್ಯಗ್ರಹಣ/ಚಂದ್ರಗ್ರಹಣ/ಸಂಕ್ರಾಂತಿ) ಮುಂತಾದ ವಿವರಗಳೂ ಇರುವುದರಿಂದ ಕ್ರಿಸ್ತಶಕದ ವಿವರಗಳಿಗೆ ಹೋಲಿಸುವುದು ಸರಳವಾಗುತ್ತದೆ. ಅಂಕೆಗಳಲ್ಲಿ ವರ್ಷಗಳನ್ನು ಉಲ್ಲೇಖಿಸಿರುವುದು ಸಾಮಾನ್ಯ ವಾದರೂ, ಅಪರೂಪಕ್ಕೆ ಸಂಖ್ಯಾಸೂಚಕ ಪದಗಳನ್ನು ಬಳಸಿರುವುದೂ ಉಂಟು. ಆರನೇ ವಿಕ್ರಮಾದಿತ್ಯನು ತನ್ನ ಪಟ್ಟದ ವರ್ಷದಿಂದ ಹೊಸ ಕಾಲಗಣನೆಯ ಕ್ರಮವನ್ನು ಪ್ರಾರಂಭಿಸಿದ್ದ ರಿಂದ, ಅವನ ಕಾಲದ ಮತ್ತು ಅವನ ನಂತರ ಕಾಲದ ಹಲವು ಶಾಸನಗಳಲ್ಲಿ ಕ್ರಿ.ಶ. ೧೦೭೬ರಲ್ಲಿ ಪ್ರಾರಂಭಗೊಳ್ಳುವ ‘ಚಾಳುಕ್ಯವಿಕ್ರಮ ವರ್ಷ’ದ ಬಳಕೆಯಾಗಿದೆ.

ಶಿಲಾಶಾಸನಗಳಲ್ಲಿ ಬಹುತೇಕ ಶಾಸನಗಳು ಶೈವ, ಮುಖ್ಯವಾಗಿ ಕಾಳಾಮುಖ ಶೈವ ಮಠ-ದೇಗುಲಗಳಿಗೆ ಕೊಟ್ಟಿರುವ ದಾನಶಾಸನಗಳು. ಅನೇಕ ಶಾಸನಗಳಲ್ಲಿ ಕಾಳಾಮುಖ ಯತಿಗಳ ಸಂತತಿಯ ವಿವರಗಳು ಪ್ರಶಸ್ತಿ ಸಹಿತ ಕಂಡುಬರುತ್ತವೆ. ಅದೇ ಪ್ರಕಾರ, ಜೈನ ಶಾಸನಗಳಲ್ಲಿ ಜೈನ ಯತಿಪರಂಪರೆಯ ಪ್ರಶಸ್ತಿ ವಿವರಗಳಿವೆ.

ದಾನ ಪಡೆದವರ ವಿವರಗಳಾದ ತರುವಾಯ, ದಾನದ ಸಂದರ್ಭ ಮತ್ತು ದಾನದ ವಿವರಗಳು ದಾಖಲಾಗಿರುತ್ತವೆ. ಆರ್ಥಿಕ ಇತಿಹಾಸದ ದೃಷ್ಟಿಯಿಂದ ಇವು ಬಹಳಷ್ಟು ಮಾಹಿತಿಗಳನ್ನೊಳಗೊಂಡಿರುತ್ತವೆ. ಭೂಮಿಯ ಪ್ರಕಾರಗಳು, ಕೃಷಿ, ಅಳತೆಯ ಮಾನಗಳು, ವ್ಯಾಪಾರ ಮತ್ತು ಉತ್ಪಾದಕ ವೃತ್ತಿ ಸಂಘಗಳು, ಸುಂಕವ್ಯವಸ್ಥೆ, ತೆರಿಗೆಗಳು, ನಾಣ್ಯಪದ್ಧತಿ, ಮುಂತಾದ ಮಾಹಿತಿಗಳನ್ನು ಇವುಗಳಿಂದ ಸಂಗ್ರಹಿಸಬಹುದು. ಅದರಂತೆ, ದೇವಾಲಯಗಳಲ್ಲಿ ಪೂಜಾವಿಧಿಗಳ ವಿವರಗಳು, ಹಬ್ಬ-ಹರಿದಿನಗಳು, ಇತ್ಯಾದಿಗಳಿಗೂ ವಿಷಯಗಳು ಲಭ್ಯ ವಾಗುವವು. ಕೆಲವು ಶಾಸನಗಳಲ್ಲಿ ಮೂಲ ಶಾಸನದ ತರುವಾಯ ಬೇರೆ ಕಾಲದಲ್ಲಿ ಕೊಡಲಾದ ದಾನಗಳ ವಿವರಗಳನ್ನು ಅದೇ ಶಾಸನಕಲ್ಲ ಮೇಲೆ ಬರೆದಿರುವ ಉದಾಹರಣೆಗಳಿವೆ.

ಶಾಸನದ ಕೊನೆಯಲ್ಲಿ ಫಲಶ್ರುತಿ, ಶಾಪಾಶಯಗಳನ್ನೊಳಗೊಂಡ ಸಂಸ್ಕೃತ ಶ್ಲೋಕಗಳು ಮತ್ತು/ಇಲ್ಲವೆ/ ಕನ್ನಡ ಗದ್ಯ/ಪದ್ಯದಲ್ಲಿರುವ ಹೇಳಿಕೆಗಳಿರುತ್ತವೆ. ಕೆಲವು ಶಾಸನಗಳಲ್ಲಿ ಶಾಸನ ಬರೆದವನ, ಕೊರೆದ ಓಜನ ಹೆಸರುಗಳನ್ನೂ ಗಮನಿಸಬಹುದು.

ಶಾಸನಗಳನ್ನು ಆಧರಿಸಿ ಈ ಕಾಲದ ವಿವಿಧ ರಾಜವಂಶಗಳ, ಮಾಂಡಲೀಕ ಮನೆತನಗಳ ರಾಜಕೀಯ ಹಾಗೂ ಸಾಂಸ್ಕೃತಿಕ ಅಧ್ಯಯನಗಳಾಗಿರುವುದು ತಿಳಿದ ವಿಷಯವೇ ಆಗಿದೆ. ಗೋಪಾಲ್ ಅವರು ಕಲ್ಯಾಣದ ಚಾಲುಕ್ಯರು ಮತ್ತು ಕಳಚುರಿಗಳ ಇತಿಹಾಸವನ್ನು, ರಿತ್ತಿ ಯವರು ಮತ್ತು ನರಸಿಂಹಮೂರ್ತಿಯವರು ಸೇಉಣರ ಇತಿಹಾಸವನ್ನು, ಗುರವ್ ಅವರು ಗೋವೆಯ ಕಾದಂಬರ ಇತಿಹಾಸವನ್ನು, ಮೊರೇಸ್ ಅವರು ಕಾದಂಬ ವಂಶಗಳ ಇತಿಹಾಸ ವನ್ನು, ಚನ್ನಕ್ಕ ಪಾವಟೆ ಅವರು ಹಾನಗಲ್ಲಿನ ಕ(ಕಾ)ದಂಬರ ಕುರಿತು, ಡೆರೆಟ್ ಮತ್ತು ಕೊಯ್ಲೊ ಅವರು ಹೊಯ್ಸಳ ವಂಶದ ಇತಿಹಾಸ ಕುರಿತು ರಚಿಸಿರುವ ಕೃತಿಗಳು ಉಲ್ಲೇಖ ನೀಯವಾಗಿವೆ. ಆದುದರಿಂದ, ಇತರ, ಹೆಚ್ಚು ಬೆಳಕಿಗೆ ಬಾರದಿರುವ ಮಾಂಡಲಿಕ ಮನೆತನಗಳ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಯೋಗ್ಯವಾದೀತು.

ಚಂದಾವರದ ಕ(ಕಾ)ದಂಬರು ಎಂಬ ವಂಶದ ಆಳ್ವಿಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದ್ದುದನ್ನು ಆರ್. ಎಸ್. ಪಂಚಮುಖಿ ಅವರು ಬೆಳಕಿಗೆ ತಂದಿದ್ದರು (ಪಿ.ಕೆ.ಆರ್.ಬಿ., ೧೯೪೧, ಪು. ೬-೭). ಈಚೆಗೆ ಈ ವಂಶದವರದ್ದೆನ್ನಲ್ಲಾದ ವಿವಿಧ ಶಾಸನಗಳನ್ನು ಪರಿಶೀಲಿಸಲಾಗಿ ಅವುಗಳಲ್ಲಿ ಮೊದಲಿನ ಶಾಸನಗಳು ಶಿಸುಗಲಿಯಿಂದಾಳಿದ ಪಾಂಡ್ಯವಂಶದ ಅರಸರವೆಂದು ತಿಳಿದುಬಂದಿತು (ಗಣಪತಿ ಗೌಡ, ೧೯೯೩, ಪು. ೫೫-೯೨). ಹೀಗಾಗಿ ಕಲ್ಯಾಣದ ಚಾಳುಕ್ಯರ ಇನ್ನೊಂದು ಮಾಂಡಲೀಕ ಮನೆತನ ಬೆಳಕಿಗೆ ಬಂದಂತಾಯಿತು. ಈ ಪಾಂಡ್ಯವಂಶವು ಸು. ಕ್ರಿ.ಶ. ೯೯೫ರಿಂದ ೧೧೬೮ರವರೆಗೆ ಆಳಿತು. ಅಲ್ಲಿಂದ ಮುಂದೆ, ಬಹುಶಃ ಪಾಂಡ್ಯರಲ್ಲಿ ಗಂಡು ಸಂತಾನವಿರದ್ದರಿಂದ ಪಟ್ಟಣತೈಲ ಎಂಬ ಪಾಂಡ್ಯ ವಂಶೀಯನ ಮಗಳು ಹಂಪಾದೇವಿ ಮತ್ತು ಕಾದಂಬ ಮಲ್ಲಿಕಾರ್ಜುನನಿಗೆ ಹುಟ್ಟಿದ ಸಂತತಿ ಚಂದಾವರದ ಕಾದಂಬರ ವಂಶಕ್ಕೆ ಮೂಲವಾಯಿತೆಂದು ತೋರುತ್ತದೆ. ಈ ಕಾದಂಬವಂಶೀಯರು ಸು. ಕ್ರಿ.ಶ. ೧೩೭೫ರವರೆಗೆ ಆಳಿದರು.

ಶಾಸನಗಳ ಸಾಂಸ್ಕೃತಿಕ ಅಧ್ಯಯನದಿಂದ ಬಯಲಾಗುವ ವಿಚಾರಗಳ ವಿಪುಲತೆಯನ್ನು ತಿಳಿಯಲು ಎಂ. ಚಿದಾನಂದಮೂರ್ತಿಯವರ (೧೯೬೬) ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಪ್ರಸಿದ್ಧ ಕೃತಿಯನ್ನು ಉಲ್ಲೇಖಿಸಬಹುದು. ಇದೇ ಜಾಡಿನಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ಮತ್ತು ಇತಿಹಾಸ ವಿಭಾಗಗಳಿಂದ ಹೊರಬರುತ್ತಿರುವ ವಿವಿಧ ಜಿಲ್ಲೆಗಳ ಶಾಸನಗಳ ‘ಸಾಂಸ್ಕೃತಿಕ ಅಧ್ಯಯನ’ಗಳನ್ನೊಳಗೊಂಡ ಮಹಾಪ್ರಬಂಧಗಳು ಶಾಸನ ಗಳಲ್ಲಿರುವ ವಿಷಯ ವೈಶಾಲ್ಯವನ್ನು ಪ್ರಕಟಿಸುತ್ತಲಿವೆ.

ದಾನವೆಂಬ ಪುಣ್ಯಕಾರ್ಯದಲ್ಲಿ ಸಮಾಜದ ವಿವಿಧ ವರ್ಗದ ಸ್ತ್ರೀ-ಪುರುಷರು ಭಾಗವಹಿಸಿ ರುವುದು ಪ್ರಕಟವಾಗುತ್ತದೆ. ವಕ್ಕುಂದದ ಜೈನ ಬಸದಿಯ ದ್ವಾರಬಂಧದ ಮೇಲಿನ ಉತ್ತರಾಂಗ ವನ್ನು ‘ಕೋಣನ ಕಾವ ತೆನಿಗಾರ ಮಾಳೆಯ’ನು ಮಾಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಮೇಲೆ ಹೇಳಿದ ಶಾಸನ ಪ್ರಕಾರಗಳಲ್ಲದೆ ಕೆಲವು ಅಪರೂಪದ ‘ಸಮಯಶಾಸನ’ಗಳು ನೋಡ ದೊರೆಯುತ್ತವೆ. ಅಂತಹ ಒಂದು ಉದಾಹರಣೆ ಸೊಲ್ಲಾಪುರದಲ್ಲಿ ಕಾಣ ದೊರೆಯು ತ್ತದೆ (ರಿತ್ತಿ ಎಸ್. ಎಚ್. ಮತ್ತು ಕುಂಬಾರ್ ಎಂ., ೧೯೭೮, ನಂ. ೪೦). ಕುಂಬಾರ ವೃತ್ತಿಯವರು ತಮ್ಮ ವೃತ್ತಿಯು ಗಿರಿಜಾಕಲ್ಯಾಣ ಸಂದರ್ಭದಲ್ಲಿ ಪರ್ವತರಾಜನಿಂದ ಮೂಡಿ ದ್ದೆಂದು ಕಾವ್ಯಮಯವಾಗಿ ಸಾಧಿಸುವ ಈ ಶಾಸನವು ಹೇಗೆ ಅಭಿವೃದ್ದಿಪಥದಲ್ಲಿದ್ದ ಬೇರೆ ಬೇರೆ ವೃತ್ತಿಯವರು ತಮ್ಮ ಕಸುಬಿಗೆ ಪೌರಾಣಿಕ ಪೂರ್ವಚರಿತ್ರೆಯನ್ನು ರೂಪಿಸಿ ಹೆಮ್ಮೆ ಪಡಲಿಚ್ಚಿಸಲಾರಂಭಿಸಿದ್ದರೆಂಬುದನ್ನು ತೋರಿಸಿಕೊಡುತ್ತದೆ. ಇದನ್ನೇ ಹೋಲುವ ತಾಮ್ರಪಟ ಶಾಸನವು ಆನೆಗೊಂದಿಯಲ್ಲಿಯೂ ದೊರೆತಿದೆ (ಈ ಶಾಸನದ ವಿಷಯದ ವಿಮರ್ಶೆಗೆ ನೋಡಿ, ಪಾಡಿಗಾರ ಎಸ್.ವಿ., ೧೯೯೭).

ಅಪೂರ್ವವೆನಿಸುವ ಯಂತ್ರ ತಿಳಿವಳ್ಳಿಯಲ್ಲಿ ಜಿನಬಿಂಬದ ಪೀಠದ ಮೇಲೆ ಗಮನಿತ ವಾಗಿದೆ (ಪಾಡಿಗಾರ್ ಎಸ್.ವಿ., ೨೦೦೧). ಅಷ್ಟದಳ ಪದ್ಮದಲ್ಲಿ ವಿಶಿಷ್ಟ ರೀತಿಯಲ್ಲಿ ಬರೆದಿರುವ ಅಕ್ಷರಗಳು ಇಂತಿವೆ :

೧. ಓಂ ಹ್ರೀಂ ಹ್ರೀಂ ಕ್ಲೀಂ (ಪದ್ಮದ ಮಧ್ಯ ಭಾಗದಲ್ಲಿ ಮೇಲಿನಿಂದ ಕೆಳಕ್ಕೆ
೨. ಓಂ ಹ್ರೀಂ ನ ಮೋ ಅ ರ ಹಂ ನೇ (ಪದ್ಮದ ಪಕಳೆಗಳಲ್ಲಿ)
೩. ವಷಟ್ (ಪದ್ಮದ ಮಧ್ಯ ಭಾಗದಲ್ಲಿ ಎಡದಿಂದ ಬಲಕ್ಕೆ)

ಇದು ಜೈನ ಬಿಂಬವನ್ನು ಪ್ರತಿಷ್ಠಾಪಿಸುವಾಗ ಬರೆದಿರುವ ಆವಾಹನ ಮಂತ್ರವಿರಬಹುದು.

ಇದೇ ಪೀಠದ ಮುಖ ಭಾಗದಲ್ಲಿ ಈ ಕೆಳಕಂಡ ಶಾಸನವೂ ಇರುವುದನ್ನು ಇಲ್ಲಿ ಉಲ್ಲೇಖಿಸಬಹುದು :

‘ಶ್ರೀಮದ್ ಗುಣಚಂದ್ರದೇವರ ಗುಡ್ಡಂ ಪೆರ್ಗ್ಗಡೆ ನಾಗಚಂದ್ರಯ್ಯ ಶ್ರೀ ಬ್ರಹ್ಮ ಜಿನಾಲಯಮಂ ಮಾಡಿಸಿದಂ’.

ಕೊನೆಯದಾಗಿ, ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಶಾಸನಗಳಿಂದ ತಿಳಿಯುವ ಕೆಲ ವಿಚಾರ ಗಳನ್ನು ಪ್ರಸ್ತಾಪಿಸುವುದು ಇಲ್ಲಿ ಪ್ರಸ್ತುತವಾದೀತು. ಮುಂಚಿನ ಶಾಸನಗಳಂತೆ  ಈ ಕಾಲದ ಶಾಸನಗಳಾದರೂ ಮಂದಿರ ನಿರ್ಮಾಣ ಕಾಲ, ನಿರ್ಮಾತೃ, ಮುಂತಾದ ವಿಚಾರಗಳನ್ನು ಬಯಲು ಮಾಡುವುದಕ್ಕೆ ಸಹಕಾರಿಯಾಗಿವೆ. ಅದರ ವಿವರ ಇಲ್ಲಿ ಅವಶ್ಯವಿಲ್ಲವೆನಿಸುತ್ತದೆ.

೧೦-೧೪ನೆಯ ಶತಮಾನಗಳ ಕಾಲಾವಧಿಯಲ್ಲಿ ಕರ್ನಾಟಕ ಸಹಸ್ರಾರು ದೇಗುಲಗಳ ನಿರ್ಮಾಣವನ್ನು ಕಂಡಿತು. ಇವು ವಿವಿಧ ದೇಗುಲ ವಾಸ್ತು ಪ್ರಭೇದಗಳನ್ನು ಪ್ರಕಟಿಸುತ್ತಿದ್ದು ಆ ದೃಷ್ಟಿಯಿಂದ ಶಿಲ್ಪಶಾಸ್ತ್ರ ಗ್ರಂಥಗಳ ಹಿನ್ನೆಲೆಯಲ್ಲಿ ಅವುಗಳ ವಿವರಪೂರ್ಣ ಅಧ್ಯಯನ ಇನ್ನೂ ಆಗಬೇಕಿದೆ. ಈ ಕಾಲದ ದೇವಾಲಯಗಳು ಮುಖ್ಯವಾಗಿ ‘ಸಮರಾಂಗಣ ಸೂತ್ರಧಾರ’, ‘ಅಪರಾಜಿತಪೃಚ್ಛಾ’, ‘ಪ್ರಾಸಾದ ಮಂಡನ’ ಮುಂತಾದ ಔತ್ತರೇಯ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ರುವ ವಿವರಗಳಿಗೆ ಪೂರಕವಾಗಿರುವುದನ್ನು ಈಗಾಗಲೇ ಗುರುತಿಸಲಾಗಿದೆ (ಪ್ರಭಾಕರ್ ಎಂ.ಎನ್., ೨೦೦೦). ಶಾಸನಗಳು ಇದಕ್ಕೆ ಯಾವ ರೀತಿ ಸಹಕಾರಿಯಾಗಿವೆ ಎಂಬುದಕ್ಕೆ ಇಲ್ಲಿ ಒಂದೆರಡು ಉದಾಹರಣೆಗಳಿಲ್ಲಿವೆ. ಕುಬಟೂರಿನ ಒಂದು ಶಾಸನದಲ್ಲಿ ಕಾಣುವ ಈ ಸಾಲುಗಳು ಗಮನೀಯವಾಗಿವೆ :

ಕೈಲಾಸಾದ್ರಿಯ ವಿಶ್ವಕರ್ಮನೆ ಭವಂಗೆಂದೊಲ್ದು ಸದ್ಭಕ್ತಿಯೊಳ್ ಭದ್ರದಿಂ ಕಂಡರಿಸಿಟ್ಟನೆಂಬೀ
ನೆಗಳನೇಕ ದ್ರಾವಿಡಂ ಭೂಮಿಜಂ ಪಿರಿದುಂ ನಾಗರಮೆಂಬ ಬಹುವಿಧದ ಭದ್ರೋಪೇತದಿಂ…
(ಪ್ರಭಾಕರ್ ಎಂ.ಎನ್., ೨೦೦೦, ಪು. ೧೪)

ಇಲ್ಲಿ ಕೈಟಭೇಶ್ವರ ದೇವಾಲಯದ ಭದ್ರಗಳಲ್ಲಿರುವ ದೇಗುಲಶಿಖರ ಮಾದರಿಗಳ ವರ್ಣನೆಯಿದ್ದು, ಭೂಮಿಜದ ಉಲ್ಲೇಖವಿರುವುದು ಗಮನಾರ್ಹವಾಗಿದೆ. ದಾಕ್ಷಿಣಾತ್ಯ ಮಾನಸಾರ, ಮಯಮತ ಮುಂತಾದ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಭೂಮಿಜದ ಉಲ್ಲೇಖ ಬರುವುದಿಲ್ಲ. ಸಮರಾಂಗಣಸೂತ್ರಧಾರ ಇತ್ಯಾದಿ ಔತ್ತರೇಯ ಗ್ರಂಥಗಳಲ್ಲಿ ಭೂಮಿಜದ ವೈವಿಧ್ಯಗಳ ವರ್ಣನೆ ಕೂಡ ಕಾಣುತ್ತದೆ. ಆದ್ದರಿಂದ ನಮ್ಮ ವಾಸ್ತುಶಿಲ್ಪಿಗಳು ಔತ್ತರೇಯ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡಿದ್ದರೆಂಬುದು ಸ್ಫುಟವಾಗುತ್ತದೆ.

ಈಚೆಗೆ ಹೂಲಿಯ (ಸೌಂದತ್ತಿ ತಾಲೂಕು, ಬೆಳಗಾಂವಿ ಜಿಲ್ಲೆ) ಪಂಚಲಿಂಗೇಶ್ವರ ದೇವಾಲಯದ (ಮೂಲತಃ ಇದು ಜೈನ ಬಸದಿ) ಶಾಸನಗಳನ್ನು ಪರಿಶೀಲಿಸುತ್ತಿದ್ದಾಗ ಶಿಲ್ಪಶಾಸ್ತ್ರಗಳಲ್ಲಿ ಕಾಣುವ ಕೆಲವು ಪಾರಿಭಾಷಿಕ ಪದಗಳು ಕಂಡವು (ಪಾಡಿಗಾರ ಎಸ್.ವಿ., ೨೦೦೬). ‘ಕಪೋತ-ತರ’ ಎಂಬ ಪದವು ಅಧಿಷ್ಠಾನದ ‘ಕಪೋತ’ ಎಂದು ಕರೆಯುವ ಭಾಗದ ಮೇಲೆಯೆ ಬರೆದಿದೆ. ಅದರಂತೆ ‘ಮಕರವಟ್ಟಿಗೆ’ ಎಂಬ ಪದವು ವಿದ್ವಾಂಸರು ‘ವ್ಯಾಳಮಾಲಾ’ ಎಂದು ಗುರುತಿಸುವ ಅಧಿಷ್ಠಾನದ ಭಾಗಕ್ಕೆ ಅನ್ವಯವಾಗಿ ಬರೆಯಲ್ಪಟ್ಟಿದೆ. ಔತ್ತರೇಯ ಗ್ರಂಥಗಳು ಇದನ್ನು ‘ಮಕರಪಟ್ಟಿಕಾ’ ಎಂಬುದಾಗಿಯೇ ನಿರ್ದೇಶಿಸಿರುವುದು ಗಮನೀಯ. ಅದರಂತೆ ‘ಪಿಷ್ಟ’ (=ಪೀಠ) ಪದವು ಅಧಿಷ್ಠಾನಕ್ಕೆ ಬಳಕೆಯಾಗಿದೆ. ಓಡಿಸಾದ ದೇಗುಲಗಳಲ್ಲಿ ಈ ಭಾಗಕ್ಕೆ ಪಿಷ್ಟ ಎಂದೇ ಕರೆದಿರುವುದನ್ನು ಇಲ್ಲಿ ನೆನಪಿಸಬಹುದು.

ಗ್ರಂಥಋಣ

ಅಣ್ಣಿಗೇರಿ ಎ.ಎಂ., ೧೯೬೦, ಪಟ್ಟದಕಲ್ಲ ಗುಡಿಗಳು, ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ.

ಅಣ್ಣಿಗೇರಿ ಎ.ಎಂ., ೧೯೭೪, ಐಹೊಳೆ : ಸಂಸ್ಕೃತಿ ಮತ್ತು ಕಲೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಇ.ಐ. : ಎಪಿಗ್ರಾಫಿಯ ಇಂಡಿಕ ಸಂಪುಟಗಳು, ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯ, ದೆಹಲಿ.

ಐ.ಎ. : ಇಂಡಿಯನ್ ಆಂಟಿಕ್ವೇರಿ ಸಂಪುಟಗಳು.

ಕಲಬುರ್ಗಿ ಎಂ.ಎಂ., ೧೯೮೦, ಸಮಾಧಿಬಲಿದಾನವೀರಮರಣ ಸ್ಮಾರಕಗಳು, ಐಬಿಎಚ್ ಪ್ರಕಾಶನ, ಬೆಂಗಳೂರು.

ಕಲ್ಲೂರ ಎಸ್.ಎಸ್., ೧೯೯೬, ಆರ್ಕಿಯಾಲಜಿ ಆಫ್ ದಿ ಕಾಳೀ ರೀಜನ್, ಪಿಎಚ್.ಡಿ. ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಕೃಷ್ಣನ್ ಕೆ.ಜಿ., ೧೯೮೯, ಉಟ್ಟಂಕಿತ ಸಂಸ್ಕೃತ ವಿದ್ಯಾ ಅರಣ್ಯ ಎಪಿಗ್ರಾಫ್ಸ್, ಸಂಪುಟ , ಉಟ್ಟಂಕಿತ ವಿದ್ಯಾರಣ್ಯ ಟ್ರಸ್ಟ್, ಮೈಸೂರು.

ಕೆ.ಐ. : ಕರ್ನಾಟಕ್ ಇನ್ಸ್ಕ್ರಿಪ್ಯನ್ಸ್ ಸಂಪುಟಗಳು, ಕನ್ನಡ ರಿಸರ್ಚ್ ಇನ್ಸ್ಟಿಟ್ಯೂಟ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪಿ.ಆರ್.ಕೆ.ಆರ್.ಬಿ.ಕೆ. : ಪ್ರೊಗ್ರೆಸ್ ಆಫ್ ಕನ್ನಡ ರಿಸರ್ಚ್ ಇನ್ ಬಾಂಬೆ ಕರ್ನಾಟಕ, ಕನ್ನಡ ರಿಸರ್ಚ್ ಇನ್ಸ್ಟಿಟ್ಯೂಟ್, ಧಾರವಾಡ.

ಗಣಪತಿ ಗೌಡ ಎಸ್., ೧೯೯೩, ಮೈನರ್ ಡೈನಾಸ್ಟೀಸ್ ಆಫ್ ಉತ್ತರ ಕನ್ನಡ ರೀಜನ್, ಪಿಎಚ್.ಡಿ. ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಗುರವ ಆರ್.ಎನ್., ಪಾರ್ಶ್ವಪಂಡಿತನ ಕಲ್ಹೊಳೆಯ ಶಾಸನ, ಕರ್ನಾಟಕ ಭಾರತಿ, ೬/೩, ಪು. ೪೩-೫೪.

ಗೋಪಾಲ್ ಬಾ. ರಾ., ೧೯೮೩, ಬನವಾಸಿ ಕದಂಬರು, ಕದಂಬ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ.

ಚಿದಾನಂದಮೂರ್ತಿ ಎಂ., ೧೯೬೬, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಜೆ.ಬಿ.ಬಿ.ಆರ್.ಎ.ಎಸ್. : ಜರ್ನಲ್ ಆಫ್ ದಿ ಬಾಂಬೆ ಬ್ರಾಂಚ್ ಆಫ್ ದಿ ರಾಯಲ್ ಏಶಿಯಾಟಿಕ್ ಸೊಸೈಟಿ ಸಂಪುಟಗಳು.

ನೇಗಿನಹಾಳ ಎಂ.ಬಿ., ೧೯೯೪, ಪೂರ್ವದ ಹಳಗನ್ನಡದ ಶಾಸನಗಳ ಸಾಹಿತ್ಯಿಕ ಅಧ್ಯಯನ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪ್ರಭಾಕರ್ ಎಂ.ಎನ್., ೨೦೦೦, ದೇವಾಲಯ ವಾಸ್ತುಚಂದ್ರಿಕೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

ಪಾಡಿಗಾರ ಎಸ್.ವಿ., ೧೯೯೦,  ಎ ನಿವ್ ಇನ್ಸ್‌ಕ್ರಿಪ್ಶನ್ಸ್ ಫ್ರಾಮ್ ಬಾದಾಮಿ ಆಂಡ್ ದಿ ಮೆಮೋರಿಯಲ್ ಆಫ್ ಪುಲಕೇಶಿ ೨, ಇಂಡಿಯನ್ ಹಿಸ್ಟರಿ ಆಂಡ್ ಎಪಿಗ್ರಾಫಿ, (ಡಾ. ಜಿ.ಎಸ್. ಗೈ ಅಭಿನಂದನ ಗ್ರಂಥ), ಆಗಮ್ ಕಲಾ ಪ್ರಕಾಶನ, ದೆಹಲಿ, ಪು. ೨೨೭-೨೨೮.

ಪಾಡಿಗಾರ ಎಸ್.ವಿ., ೧೯೯೭, ಆನೆಗೊಂದಿ ತಾಮ್ರಪಟ ಶಾಸನ : ಒಂದು ಮರುನೋಟ, ವಿಜಯನಗರ ಅಧ್ಯಯನ, ೨, ಪು. ೫೮-೬೧.

ಪಾಡಿಗಾರ ಎಸ್.ವಿ., ೨೦೦೧, ಎನ್ ಎನ್ಗ್ರೇವ್ಡ್ ಜೈನ ಯಂತ್ರ ಫ್ರಾಮ್ ತಿಳಿವಳ್ಳಿ, ವಸಂತ ಗೌರವಮ್ : ಎಸ್ಸೇಸ್ ಇನ್ ಜೈನಿಸಮ್, ವಕೀಲ್ಸ್, ಫೆಫೆರ್ ಅಂಡ್ ಸೈಮನ್ಸ್ ಲಿಮಿಟೆಡ್, ಮುಂಬೈ, ಪು. ೯೯-೧೦೨.

ಪಾಡಿಗಾರ ಎಸ್.ವಿ., ೨೦೦೧, ದೇವರಶೀಗಿಹಳ್ಳಿ ಇನ್ಸ್ಕ್ರಿಷ್ಯನ್ ಆಫ್ ದಿ ಟೈಮ್ ಆಫ್ ವಿಕ್ರಮಾದಿತ್ಯ, ಹೇಮಕೂಟ : ರೀಸೆಂಟ್ ರಿಸರ್ಚಸ್ ಇನ್ ಆರ್ಕೆಯಾಲಜಿ ಅಂಡ್ ಮ್ಯೂಸಿಯಾಲಜಿ, ಭಾರತೀಯ ಕಲಾ ಪ್ರಕಾಶನ್, ದೆಹಲಿ, ಪು. ೪೦೦-೪೦೨.

ಪಾಡಿಗಾರ ಎಸ್.ವಿ., ೨೦೦೬, ಆರ್ಕಿಟೆಕ್ಚರಲ್ ಟರ್ಮ್ಸ್ ಇನ್ ಇನ್ಸಿಕ್ರಿಪ್ಯನ್ಸ್ ಆಫ್ ಹೂಲಿ, .ಕೆ. ಶರ್ಮ ಫೆಲಿಸಿಟೇಶನ್ ವಾಲ್ಯೂಮ್, ಶಾರದಾ ಪ್ರಕಾಶನ, ದೆಹಲಿ.

ರಮೇಶ್ ಕೆ.ವಿ., ೧೯೭೧, ಕರ್ಣಾಟಕ ಶಾಸನ ಸಮೀಕ್ಷೆ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ರಮೇಶ್ ಕೆ.ವಿ., ೧೯೮೪, ಚಲುಕ್ಯಸ್ ಆಫ್ ವಾತಾಪಿ, ಆಗಂ ಪುಬ್ಲಿಷರ್ಸ್, ದೆಹಲಿ.

ರಿತ್ತಿ ಶ್ರೀನಿವಾಸ ಮತ್ತು ಕುಂಬಾರ ಆನಂದ, ೧೯೮೮, ಇನ್ಸ್ಕ್ರಿಪ್ಯನ್ಸ್ ಆಫ್ ಶೊಲಾಪೂರ್ ಡಿಸ್ಟ್ರಿಕ್ಟ್, ಶ್ರೀಹರಿ ಪ್ರಕಾಶನ, ಧಾರವಾಡ.

ರಿತ್ತಿ ಶ್ರೀನಿವಾಸ ಮತ್ತು ಶೇಳ್ಕೆ ಜಿ.ಸಿ., ೧೯೬೮, ಇನ್ಸ್ಕ್ರಿಪ್ಶನ್ಸ್ ಫ್ರಾಮ್ ನಾಂದೇಡ್ ಡಿಸ್ಟ್ರಿಕ್ಟ್, ಯಶವಂತ ಮಹಾವಿದ್ಯಾಲಯ, ನಾಂದೇಡ.

ಸಾಮಕ್, ಜಗದೀಶ್ ಮತ್ತು ರಮೇಶ್ ಜೋಯಿಸ್, ವೈಜಯಂತಿಯ ಕದಂಬರು, ಧಾರವಾಡ.

ಸಾಮರ ಎಸ್.ಜಿ., ಜಗದೀಶ್ ಮತ್ತು ರಮೇಶ ಜೋಯಿಸ್ (ಸಂಪಾದಕರು), ಕದಂಬರ ಅರೆತಲಗದ್ದೆಯ ಅಪೂರ್ವ ತಾಮ್ರಶಾಸನಗಳ ಭಂಡಾರ, ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ, ಧಾರವಾಡ, ೨೦೦೮.