ಭಾರತದ ಇತಿಹಾಸದಲ್ಲಿ ವಿಜಯನಗರದ ಕಾಲ ಒಂದು ಅವಿಸ್ಮರಣೀಯ ಕಾಲಘಟ್ಟ. ಹದಿಮೂರನೆಯ ಶತಮಾನದ ಮಧ್ಯಭಾಗದಿಂದ ಹದಿನೇಳನೆಯ ಶತಮಾನದ ಮಧ್ಯಭಾಗದವರೆಗೆ ದಕ್ಷಿಣ ಭಾರತದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ವಿಜಯನಗರ ಮಹತ್ವದ ಪಾತ್ರವಹಿಸಿತ್ತು. ದಕ್ಷಿಣ ಭಾರತದ ಇತಿಹಾಸದ ಗತಿಯನ್ನೇ ನಿಯಂತ್ರಿಸಿದ ಕೀರ್ತಿ ಈ ಸಾಮ್ರಾಜ್ಯದ ಅರಸರಿಗೆ ಸಲ್ಲುತ್ತದೆ. ವಿಜಯನಗರ ಹಾಗೂ ಅದರ ಸಮಕಾಲೀನ ಮುಸ್ಲಿಂ ರಾಜ್ಯಗಳು ಹೊಸ ರಾಜಕೀಯ ಬೆಳವಣಿಗೆಗಳಿಗೆ ಕಾರಣೀಭೂತರಾದರು. ವಿಶಾಲವಾದ ಹಿಂದೂ ಸಾಮ್ರಾಜ್ಯದ ಸ್ಥಾಪನೆಯಾಯಿತು. ದ್ರಾವಿಡ ವಾಸ್ತುಶೈಲಿಯಲ್ಲಿ ಪರಾಕಾಷ್ಠೆ ತಲುಪಿತು. ನಗರಗಳ ಅಭಿವೃದ್ದಿ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅವಿರತವಾಗಿ ನಡೆಯಿತು. ಈ ಎಲ್ಲಾ ಚಟುವಟಿಕೆಗಳ ಅಧ್ಯಯನಕ್ಕೆ ಬೇಕಾದ ಅನೇಕ ಮೂಲಾಧಾರಗಳು ಲಭ್ಯವಿರುವುದೇ ಒಂದು ವಿಶೇಷತೆ.

ವಿಜಯನಗರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮೂಲಾಧಾರಗಳಲ್ಲಿ ಶಾಸನಗಳು ಬಹುಮುಖ್ಯ. ವಿಜಯನಗರದ ನೂರಾರು ಶಾಸನಗಳು ದೊರೆತಿದ್ದು ಅವುಗಳಲ್ಲಿ ಅನೇಕವು ಪ್ರಕಟವಾಗಿವೆ. ಇವುಗಳು ಎಪಿಗ್ರಾಫಿಯ ಕರ್ನಾಟಕ, ಎಪಿಗ್ರಾಫಿಯ ಇಂಡಿಕಾ, ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಶನ್ಸ್, ಕರ್ನಾಟಕ ಇನ್ಸ್‌ಕ್ರಿಪ್ಶನ್ಸ್, ಎಪಿಗ್ರಾಫಿಯ ಆಂಧ್ರಿಕ್ರಿ, ಆನ್ಯುಯಲ್ ರಿಪೋರ್ಟ್ ಆಫ್ ದಿ ಮೈಸೂರು ಆರ್ಕಿಯಾಲಾಜಿಕಲ್ ಡಿಪಾರ್ಟ್‌ಮೆಂಟ್, ಆನ್ಯುಯಲ್ ರಿಪೋರ್ಟ್ ಆನ್ ಇಂಡಿಯನ್ ಎಪಿಗ್ರಾಫಿ ಮುಂತಾದ ಸಂಪುಟಗಳಲ್ಲಿ ಸಂಪೂರ್ಣವಾಗಿ ಇಲ್ಲವೆ ಸಂಕ್ಷಿಪ್ತವಾಗಿ ಪ್ರಕಟಗೊಂಡಿವೆ. ಇವುಗಳಲ್ಲಿ ಅನೇಕ ತಾಮ್ರಪಟ ಗಳು ಸೇರಿವೆ. ವಿಜಯನಗರದ ಶಾಸನಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿ ನಲ್ಲಿ ದೊರೆತಿದ್ದು, ಅವುಗಳನ್ನು ಕನ್ನಡ, ತೆಲುಗು ಮತ್ತು ತಮಿಳು ಲಿಪಿ ಮತ್ತು ಭಾಷೆಗಳಲ್ಲಿ ಬರೆಯಲಾಗಿದೆ. ತಾಮ್ರಪಟ ಶಾಸನಗಳು ಸಾಮಾನ್ಯವಾಗಿ ನಾಗರೀ ಲಿಪಿಯಲ್ಲಿದ್ದು ಸಂಸ್ಕೃತ ಭಾಷೆಯಲ್ಲಿವೆ.

ವಿಜಯನಗರದ ಶಾಸನಗಳಲ್ಲಿ ವಿವಿಧ ಪ್ರಕಾರದ ವಿಷಯ ನಿರೂಪಣೆ ಇದೆ. ದಾನ, ದತ್ತಿಗಳ ವಿವರಗಳಿವೆ. ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳಿವೆ. ದಂಡೆಯಾತ್ರೆ,  ದಿಗ್ವಿಜಯ, ಸೈನಿಕ ದಾಳಿ, ಅತಿಕ್ರಮಣ ಮತ್ತು ಯುದ್ಧಗಳ ವಿವರಗಳಿವೆ. ಧಾರ್ಮಿಕ ಪರಿಸ್ಥಿತಿ ಮತ್ತು ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವ ಶಾಸನಗಳಿವೆ. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮದ ವಿಕಾಸದ ಬಗೆಗೆ ಅನೇಕ ವಿಷಯಗಳನ್ನು ತಿಳಿಸುವ ಶಾಸನಗಳು ಲಭ್ಯವಿವೆ. ಅದರಂತೆ ಶಾಸನಗಳಲ್ಲಿ ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಅವುಗಳ ಆಡಳಿತ  ಮುಂತಾದ ವಿಷಯಗಳ ಬಗೆಗೆ ಮಾಹಿತಿ ಇದೆ. ದೇವಾಲಯಗಳಲ್ಲಿ ಕಂಡುಬರುವ ಶಾಸನಗಳು ವಿಜಯನಗರ ವಾಸ್ತುಶೈಲಿ ಮತ್ತು ಶಿಲ್ಪಶೈಲಿಯ ಅಧ್ಯಯನಕ್ಕೆ ಅನುಕೂಲವಾಗಿವೆ. ದೇವಾಲಯಗಳಿಗೆ ಅರಸರು, ರಾಣಿಯರು, ಮಂತ್ರಿಗಳು, ದಂಡನಾಯಕರು, ಅಧಿಕಾರಿಗಳು ಮತ್ತು ಸಾಮಾನ್ಯ ಜನರು ನೀಡಿದ ದಾನಗಳ ವಿವರಗಳು ಶಾಸನಗಳಲ್ಲಿ ಉಲ್ಲೇಖಗೊಂಡಿದ್ದು, ಇವು ಈ ಕಾಲದ ಧಾರ್ಮಿಕ ಮನೋಭಾವನೆಗಳನ್ನು ತಿಳಿಯಲು ಒಂದು ರೀತಿಯ ಅಳತೆ ಗೋಲಾಗಿವೆ ಎಂದರೆ ತಪ್ಪಿಲ್ಲ.

ಪ್ರಸ್ತುತ ಕೆಲವು ಮಹತ್ವದ ಶಾಸನಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.

. ಆಲದಹಳ್ಳಿ ಶಾಸನ : ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿರುವ ಆಲದಹಳ್ಳಿ ಯಲ್ಲಿ ದೊರೆತ ಈ ಶಾಸನ ಹೊಯ್ಸಳ-ಸಂಗಮ ಅರಸರ ಸಂಬಂಧವನ್ನು ಅರಿಯಲು ಸಹಾಯಕವಾಗಿದೆ. ಕ್ರಿ.ಶ. ೧೩೩೮ನೆಯ ವರ್ಷದ ಈ ಶಾಸನದ ಆಧಾರದ ಮೇಲೆ ಫಾದರ್ ಹೆನ್ರಿಹೆರಾಸ್ ಮತ್ತು ಇತರ ಚರಿತ್ರೆಕಾರರು ಹೊಯ್ಸಳರಿಗೂ ಸಂಗಮರಿಗೂ ಸಮಧುರವಾದ ಬಾಂಧವ್ಯವಿದ್ದು, ಅರಸ ಮುಮ್ಮಡಿ ಬಲ್ಲಾಳನ ಸಹಾಯ, ಉತ್ತೇಜನದಿಂದ ಸಂಗಮ ವಂಶದ ಹರಿಹರನು ವಿಜಯನಗರ ರಾಜ್ಯ ಸ್ಥಾಪನೆ ಮಾಡಿದನೆಂದು ಹೇಳಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣ ವೀರಬಲ್ಲಾಳನು, ಹರಿಹರನು ಬಾರಕೂರಿನಲ್ಲಿ ನಿರ್ಮಿಸಿದ್ದ ಕೋಟೆ ಯನ್ನು ಕ್ರಿ.ಶ. ೧೩೩೮ರಲ್ಲಿ ಸಂದರ್ಶಿಸಿದ್ದು ಮತ್ತು ಹರಿಹರನು ಏರ್ಪಡಿಸಿದ್ದ ರಕ್ಷಣಾ ವ್ಯವಸ್ಥೆಯನ್ನು ವೀಕ್ಷಿಸಿದ್ದು. ಈ ವಿದ್ವಾಂಸರ ಪ್ರಕಾರ ಈ ವಿಷಯ ಆಲದಹಳ್ಳಿಯ ಶಾಸನ ದಲ್ಲಿದೆ. ಆದರೆ ಈ ಶಾಸನದ ಪಾಠವನ್ನು ಗಮನವಿಟ್ಟು ಓದಿದಾಗ ಕಂಡುಬರುವ ಅಂಶ ವೆಂದರೆ, ಈ ಶಾಸನದಲ್ಲಿ ಹರಿಹರನ ಉಲ್ಲೇಖವಿಲ್ಲದಿರುವುದು ಹಾಗೂ ವೀರಬಲ್ಲಾಳನು ರಕ್ಷಣಾ ವ್ಯವಸ್ಥೆಗೆ ಕೈಕೊಂಡ ಕಾರ್ಯದ ವಿವರಗಳಿರುವುದು. ಶಾಸನವು ವೀರಬಲ್ಲಾಳನು ಬಾರಕೂರು ಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಅಂಕೆಯ ನಾಯಕನಿಗೆ ವಹಿಸಿಕೊಟ್ಟ ವಿವರ ಗಳನ್ನು ಒದಗಿಸುತ್ತದೆ. ಅಲ್ಲದೆ ಈ ಶಾಸನ ಹೊಯ್ಸಳರಿಗೂ ಮತ್ತು ಸಂಗಮ ಸಹೋದರರಿಗೂ ಮಧ್ಯೆ ಇದ್ದ ವೈರತ್ವವನ್ನು ಪರೋಕ್ಷವಾಗಿ ಸೂಚಿಸುತ್ತದೆ. ಅಲ್ಲದೆ ಈ ಶಾಸನ ವೀರಬಲ್ಲಾಳನು ಹರಿಹರನಿಗೆ ಸಹಾಯ ಹಾಗೂ ಉತ್ತೇಜನ ನೀಡಿದನೆಂಬ ವಾದವನ್ನು ಸುಳ್ಳಾಗಿಸುತ್ತದೆ.

. ಶೃಂಗೇರಿಯ ಶಾಸನ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ, ಶೃಂಗೇರಿ ಯಲ್ಲಿರುವ ಶಾಸನದ ಕಾಲ ಕ್ರಿ.ಶ. ೧೩೪೬. ಈ ಶಾಸನವು, ಕ್ರಿ.ಶ. ೧೩೪೬ರಲ್ಲಿ ಮೊದಲನೆಯ ಹರಿಹರನು ತನ್ನ ಸಹೋದರರಾದ ಕಂಪಣ, ಬುಕ್ಕ, ಮಾರಪ್ಪ ಮತ್ತು ಮುದ್ದಪ್ಪ ಹಾಗೂ ತನ್ನ ಅಧಿಕಾರಿಗಳು ಮತ್ತು ದಂಡನಾಯಕರೊಂದಿಗೆ ಶೃಂಗೇರಿಯಲ್ಲಿ ವಿಜಯೋತ್ಸಾಹವನ್ನು ಆಚರಿಸಿ ಶೃಂಗೇರಿಯ ಶ್ರೀ ವಿದ್ಯಾತೀರ್ಥರಿಗೆ ಗೌರವವನ್ನು ಸಲ್ಲಿಸಿ ಭೂದಾನವನ್ನು ಕೊಟ್ಟಿದ್ದನ್ನು ತಿಳಿಸುತ್ತದೆ. ಈ ಭೂದಾನವನ್ನು ಪೂರ್ವ-ಪಶ್ಚಿಮ ಸಮುದ್ರಗಳವರೆಗಿನ ಭೂಪ್ರದೇಶವನ್ನು ಗೆದ್ದ ವಿಜಯದ ಸ್ಮರಣಾರ್ಥವಾಗಿ ಕೊಟ್ಟುದಾಗಿ ತಿಳಿದುಬರುತ್ತದೆ.

ಈ ಶಾಸನ ಸಂಗಮ ಸಹೋದರರು ಯಾವ ವರ್ಷ ವಿಜಯನಗರ ರಾಜ್ಯ ಸ್ಥಾಪನೆ ಮಾಡಿದರು ಎನ್ನುವ ವಿಷಯದ ಮೇಲೆ ಕೂಡ ಬೆಳಕು ಚೆಲ್ಲುತ್ತದೆ. ಅಲ್ಲದೇ ಈ ಶಾಸನದಲ್ಲಿ ಉಲ್ಲೇಖಿತ ವಿಜಯೋತ್ಸವ ಯಾರ ಮೇಲಿನ ವಿಜಯಕ್ಕಾಗಿ ಆಚರಿಸಲ್ಪಟ್ಟಿತ್ತೆಂದು ತಿಳಿಯಲು ಪರೋಕ್ಷವಾಗಿ ಸಹಾಯ ಮಾಡುತ್ತದೆ. ಶಾಸನದ ಕಾಲ ಕ್ರಿ.ಶ. ೧೩೪೬. ಕ್ರಿ.ಶ. ೧೩೪೬ರ ನಂತರ ಹೊಯ್ಸಳರ ಯಾವುದೇ ಶಾಸನಗಳು ಲಭ್ಯವಿಲ್ಲ. ಕ್ರಿ.ಶ. ೧೩೪೬ ನಾಲ್ಕನೆಯ ಬಲ್ಲಾಳನ ಆಳ್ವಿಕೆ ಕೊನೆಗೊಂಡ ವರ್ಷ. ಹೀಗಾಗಿ ಈ ವಿಜಯ ಹೊಯ್ಸಳರ ಮೇಲಿನ ವಿಜಯ ಎಂಬುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಕ್ರಿ.ಶ. ೧೩೪೬ರಿಂದ ಹೊಯ್ಸಳರ ರಾಜ್ಯ ಸಂಪೂರ್ಣವಾಗಿ ಸಂಗಮರ ಆಳ್ವಿಕೆಗೆ ಒಳಪಟ್ಟಿತೆಂಬುದು ಕೂಡ ಈ ವಿಜಯ ಯಾರ ಮೇಲೆ ಎಂಬುದನ್ನು ಅರಿಯಲು ಸಹಾಯವಾಗುತ್ತದೆ. ಅಲ್ಲದೆ ಈ ಶಾಸನ ಸಂಗಮರಿಗೆ ಶೃಂಗೇರಿಯ ಮಠದೊಂದಿಗಿದ್ದ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ.

. ಶ್ರವಣಬೆಳಗೊಳದ ಬುಕ್ಕರಾಯನ ಶಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳದಲ್ಲಿರುವ ಮೊದಲನೆಯ ಬುಕ್ಕರಾಯನ ಈ ಶಾಸನದ ಕಾಲ ಕ್ರಿ.ಶ. ೧೩೬೮. ಭವ್ಯರೆಂದು ಹೆಸರಿಸಲಾದ ಜೈನರಿಗೂ, ಭಕ್ತರೆಂದು ಕರೆಸಿಕೊಂಡಿರುವ ಶ್ರೀ ವೈಷ್ಣವರ ನಡುವೆ ಜಗಳ ತಲೆದೋರಿದಾಗ, ಆನೆಗೊಂದಿ, ಹೊಸಪಟ್ಟಣ, ಪೆನುಗೊಂಡ ಮುಂತಾದ ಸ್ಥಳಗಳ ಜೈನರು ತಮಗೆ ಶ್ರೀವೈಷ್ಣವರಿಂದ ಆಗುತ್ತಿದ್ದ ಅನ್ಯಾಯಗಳ ಬಗೆಗೆ ಬುಕ್ಕರಾಯನಿಗೆ ದೂರಿತ್ತಾಗ, ಅರಸನು ಜೈನ ಮತ್ತು ಶ್ರೀವೈಷ್ಣವ ಆಚಾರ್ಯರನ್ನು ತನ್ನ ಸಮಕ್ಷಮ ಕರೆಸಿ, ಜೈನ ಮತ್ತು ವೈಷ್ಣವ ಮತಗಳ ನಡುವೆ ಯಾವ ಭೇದವೂ ಇಲ್ಲ ಮತ್ತು ಅವರೆಂದೂ ಬೇರೆ ಬೇರೆಯೆಂದು ಪರಿಗಣಿಸದೆ ಅವರ ನಡುವೆ ಶಾಂತಿ, ಸೌಹಾರ್ದತೆ ಯನ್ನೇರ್ಪಡಿಸಿ, ವೈಷ್ಣವರು ಪಾಳುಬಿದ್ದ ಬಸದಿಗಳ ಜೀರ್ಣೋದ್ಧಾರ ಮಾಡಬೇಕೆಂದು ಆಜ್ಞಾಪಿಸಿ, ವಿಜಯನಗರ ಅರಸರ ಧಾರ್ಮಿಕ ಸಹಿಷ್ಣುತೆಯನ್ನು ಮೆರೆದುದನ್ನು ತಿಳಿಸುತ್ತದೆ ಎಂದು ಇತಿಹಾಸಕಾರರ ಅಭಿಪ್ರಾಯ. ಈ ನಿರ್ಣಯವನ್ನು ಅರಸನು ಕೇವಲ ಜೈನ-ವೈಷ್ಣವರ ಸಮಕ್ಷ ಮಾಡದೆ, ರಾಜ್ಯದಲ್ಲಿದ್ದ ಹಿಂದುಳಿದ ವರ್ಗಗಳ ಮುಖಂಡರುಗಳ ಸಮಕ್ಷಮದಲ್ಲಿ ಮಾಡಿದುದು ಮಹತ್ವವಾದ ಸಂಗತಿ. ಈ ಶಾಸನ ವಿಜಯನಗರ ರಾಜ್ಯದಲ್ಲಿ ಹದಿನಾಲ್ಕನೇ ಶತಮಾನದ ಉತ್ತರಾರ್ಧದಲ್ಲಿ ಜೈನ ಮತ್ತು ವೈಷ್ಣವ ಸಂಪ್ರದಾಯಗಳ ಸ್ಥಿತಿಯನ್ನು ಅರಿಯಲು ಇದು ಸಹಾಯಕವಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶ್ರೀವೈಷ್ಣವರೇ ಜೈನ ಬಸದಿಗಳ ನಿರ್ವಹಣೆ ಹೊತ್ತಿದ್ದನ್ನು ತಿಳಿಸುತ್ತದೆ. ಶ್ರವಣಬೆಳಗೊಳದ ಈ ಶಾಸನದ ಮೂಲ ಪಾಠ ಕಲ್ಲೆಹದಲ್ಲಿಯ ಶಾಸನದಲ್ಲಿ ದೊರಕಿದ್ದು ಯಾವ ರೀತಿಯ ಕಿರುಕುಳವನ್ನು ಜೈನರು ಅನುಭವಿಸಿದರು ಎನ್ನುವುದನ್ನು ತಿಳಿಸುತ್ತದೆ. ಇದರಿಂದಾಗಿ ಶ್ರವಣಬೆಳಗೊಳದ ಶಾಸನ ತಿದ್ದುಪಡಿ ಮಾಡಿದ ಶಾಸನವೆಂದು ಇದನ್ನು ಪರಿಗಣಿಸಬೇಕಾಗುತ್ತದೆ ಮತ್ತು ಇದು ವಸ್ತುಸ್ಥಿತಿಯ ಬಗ್ಗೆ ನಿಜವಾದ ಚಿತ್ರಣವನ್ನು ನೀಡುವುದಿಲ್ಲವೆಂದೇ ಹೇಳಬಹುದು.

. ಕೃಷ್ಣದೇವರಾಯನ ಹಂಪೆಯ ಎರಡು ಶಾಸನಗಳುಮೊದಲನೆಯ ಶಾಸನ : ಹಂಪೆಯ ಶ್ರೀ ವಿರೂಪಾಕ್ಷ ದೇವಾಲಯದ ರಂಗಮಂಟಪದ ಮುಂದಿರುವ ಈ ಶಾಸನದ ಕಾಲ ಕ್ರಿ.ಶ. ಜನವರಿ ೨೩-೨೪, ೧೫೧೦. ಇದು ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕದ  ಜ್ಞಾಪಕಾರ್ಥವಾಗಿ ವಿರೂಪಾಕ್ಷ ದೇವಾಲಯಕ್ಕೆ ರಂಗಮಂಟಪವನ್ನು, ಅದರ ಮುಂದೆ ಗೋಪುರವೊಂದನ್ನು ನಿರ್ಮಿಸಿದುದನ್ನು ಮತ್ತು ದೇವಾಲಯದ ಹಿರಿಯ ಗೋಪುರವನ್ನು ಜೀರ್ಣೋದ್ಧಾರ ಮಾಡಿದುದನ್ನು ತಿಳಿಸುತ್ತದೆ. ಇದಕ್ಕಿಂತ ಮಹತ್ವದ ಸಂಗತಿಯೆಂದರೆ ಕೃಷ್ಣದೇವರಾಯನು ಗಜಪತಿ ದೊರೆಯನ್ನು ಮತ್ತು ಬಹಮನಿ ಸುಲ್ತಾನನನ್ನು ಸೋಲಿಸಿದ ವಿಷಯವನ್ನು ಕೃಷ್ಣದೇವರಾಯನ ಪ್ರಶಸ್ತಿಯಲ್ಲಿ ಸೂಚಿಸಿರುವುದು. ಶಾಸನದಲ್ಲಿ ಕೃಷ್ಣ ದೇವರಾಯನನ್ನು “ಗಜಪತಿ ಗಜಕೂಟಪಾತಲ” ಮತ್ತು “ಹಿಂದೂರಾಯಪುರ ತ್ರಾಣ” ಎಂದು ವರ್ಣಿಸಲಾಗಿದೆ. ಇದರರ್ಥ ಕ್ರಿ.ಶ. ೧೫೧೦ರ ಜನವರಿಯ ಹೊತ್ತಿಗೆ ಕೃಷ್ಣದೇವರಾಯನು ಕಳಿಂಗ ಮತ್ತು ಬಹಮನಿ ಅರಸರ ವಿರುದ್ಧ ಯುದ್ಧವಾಡಿ ಜಯಗಳಿಸುದುದನ್ನು ಈ ಶಾಸನ ಖಚಿತಪಡಿಸುತ್ತದೆ. ಮುಸ್ಲಿಂ ಇತಿಹಾಸಕಾರ ಸಯ್ಯದ್ ಅಲಿತಬತಬನು ಬಹಮನಿ ಸುಲ್ತಾನ ಮತ್ತು ಕೃಷ್ಣದೇವರಾಯ ನಡುವೆ ಕ್ರಿ.ಶ. ೧೫೧೦ರಲ್ಲಿ ನಡೆದ ದೋಣಿ ಕದನದಲ್ಲಿ ಸುಲ್ತಾನನು ಅನುಭವಿಸಿದ ಪರಾಜಯವನ್ನು ವರ್ಣಿಸಿರುವುದನ್ನು ಇಲ್ಲಿ ನೆನೆಸಬಹುದು. ಅದೇ ರೀತಿ ಕ್ರಿ.ಶ. ೧೫೦೯ರಲ್ಲಿ ಚೈತನ್ಯರು ಪುರಿ-ಜಗನ್ನಾಥಕ್ಕೆ ಹೋದಾಗ ಕಳಿಂಗದ ಅರಸ ದಕ್ಷಿಣದ ರಾಜನ ಮೇಲೆ ದಂಡೆತ್ತಿ ಹೋದುದನ್ನು ಬಂಗಾಲದ ಸಾಹಿತ್ಯಾಧಾರಗಳು ಉಲ್ಲೇಖಿಸುವುದನ್ನು ಇಲ್ಲಿ ನೆನೆಯಬಹುದು.

ಎರಡನೆಯ ಶಾಸನ : ಈ ಶಾಸನವು ಬಾಲಕೃಷ್ಣ ದೇವಾಲಯದಲ್ಲಿ ಕಾಣಸಿಗುತ್ತದೆ. ಈ ಶಾಸನದ ಕಾಲ. ಕ್ರಿ.ಶ. ೧೫೧೫. ಈ ಶಾಸನವು ಕೃಷ್ಣದೇವರಾಯನು ಉದಯಗಿರಿ ದುರ್ಗವನ್ನು ಜಯಿಸಿ, ತಿರುಮಲರಾಹುತ್ತರಾಯನನ್ನು ಸೆರೆಹಿಡಿದು, ಉದಯಗಿರಿಯಿಂದ ಬಾಲಕೃಷ್ಣನ ವಿಗ್ರಹವೊಂದನ್ನು ವಿಜಯದ ಸೂಚಕವಾಗಿ ವಿಜಯನಗರಕ್ಕೆ ತೆಗೆದುಕೊಂಡು ಬಂದು, ಹೊಸ ದೇವಾಲಯವೊಂದನ್ನು ನಿರ್ಮಿಸಿ (ಈಗಿನ ಬಾಲಕೃಷ್ಣನ ದೇವಾಲಯ), ಅದರಲ್ಲಿ ಬಾಲ ಕೃಷ್ಣನ ವಿಗ್ರಹವನ್ನು ಪ್ರತಿಷ್ಠೆ ಮಾಡಿದುದನ್ನು ತಿಳಿಸುತ್ತದೆ. ಈ ಶಾಸನ ಕೃಷ್ಣದೇವರಾಯನ ಕಳಿಂಗ ದಿಗ್ವಿಜಯರ ಮೊದಲ ಘಟ್ಟವನ್ನು ಉಲ್ಲೇಖಿಸುತ್ತದೆ. ಹಂಪೆಯ ಬಾಲಕೃಷ್ಣ ದೇವಾಲಯ ವಿಜಯನಗರ ಶೈಲಿಯಲ್ಲಿ ನಿರ್ಮಿಸಿರುವ ಒಂದು ಉತ್ಕೃಷ್ಟ ದೇವಾಲಯ ಕೃಷ್ಣದೇವರಾಯನು ಉದಯಗಿರಿಯಿಂದ ತಂದ ಬಾಲಕೃಷ್ಣನ ವಿಗ್ರಹವನ್ನು ಈ ದೇವಾಲಯ ದಲ್ಲಿ ಇಂದು ಕಾಣಸಿಗುವುದಿಲ್ಲ. ಈಗ ಇದು ಚೆನ್ನೈನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿದೆ.

. ಕೃಷ್ಣದೇವರಾಯನ ತಿರುಪತಿ, ಶ್ರೀಶೈಲ, ಕಾಂಚಿ, ಮಂಗಳಗಿರಿ ಮತ್ತು ಅಹೋಬಲಂ ಶಾಸನಗಳು : ತಿರುಪತಿಯ ವೆಂಕಟೇಶ್ವರ ದೇವಾಲಯ, ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ, ಅಹೋಬಲದ ನರಸಿಂಹ ದೇವಾಲಯ, ಕಾಂಚಿಯಲ್ಲಿರುವ ವೈಕುಂಠ ಪೆರುಮಾಳ್ ದೇವಾಲಯಗಳಲ್ಲಿರುವ ಶಾಸನಗಳು ಮತ್ತು ಮಂಗಳಗಿರಿಯಲ್ಲಿರುವ ಶಾಸನ, ಇವೆಲ್ಲವೂ ಕೃಷ್ಣದೇವರಾಯನ ಕಳಿಂಗ ದಿಗ್ವಿಜಯದ ವಿವರಗಳನ್ನು ನೀಡುತ್ತವೆ. ಉದಯಗಿರಿ, ಕೊಂಡವೀಡು, ಬೆಲ್ಲಂಕೊಂಡ, ನಾಗಾರ್ಜುನಕೊಂಡ, ವಿನುಕೊಂಡ, ಅದ್ದಂಕಿ, ಕೇತಾವರಂ, ತಂಗೆಡ, ಕೊಂಡಪಲ್ಲಿ, ವಿಜಯವಾಡ, ಅನಂತಗಿರಿ, ಉಂಡ್ರಕೊಂಡ, ಉರ‍್ಲ ಕೊಂಡ, ಅರುವಪಲ್ಲಿ, ಓಲ್ಲಿಪಲ್ಲಿ, ಕಂದಿಕೊಂಡ, ನಲ್ಲಗೊಂಡ, ಖಮ್ಮಂ, ದೇವರಕೊಂಡ, ಪೋತನೂರು ಮುಂತಾದ ದುರ್ಗಗಳನ್ನು ಜಯಿಸಿದುದು ಹಾಗೂ ಆ ಸ್ಥಳಗಳಲ್ಲಿಯ ಕಳಿಂಗ ಮಹಾಪಾತ್ರನ್ನು, ದಂಡನಾಯಕರನ್ನು ಸೆರೆಹಿಡಿದ ವಿವರಗಳನ್ನು  ಉಲ್ಲೇಖಿಸಲಾಗಿದೆ. ಅಲ್ಲದೆ ಉದಯಗಿರಿ, ಕೊಂಡವೀಡು, ಕೊಂಡಪಲ್ಲಿ, ಸಿಂಹಾಚಲಂ ಮತ್ತು ಪೋತನೂರುಗಳನ್ನು ಕೈವಶ ಮಾಡಿಕೊಂಡ ದಿನಾಂಕಗಳನ್ನು ಕೂಡ ತಿಳಿಸುತ್ತವೆ. ಉದಾಹರಣೆಗೆ ಅಹೋಬಲಂ ಶಾಸನವು, ಕೊಂಡವೀಡು ದುರ್ಗವನ್ನು ಜಯಿಸಿದುದು, ಆ ದುರ್ಗದ ರಕ್ಷಣೆಯಲ್ಲಿ ನಿರತರಾದ ಕಳಿಂಗ ದಂಡನಾಯಕರಾದ ನರಹರಿದೇವ, ಲಕ್ಷ್ಮೀ ಪತಿರಾಜು, ಪಶ್ಚಿಮ ಬಾಲಚಂದ್ರ, ಮಹಾಪಾತ್ರ, ಜನ್ಯಾಲ ಕಸವಾಪಾತ್ತ ಮತ್ತು ಇಬ್ಬರು ಮುಸ್ಲಿಂ ದಂಡನಾಯಕರಾದ ರಾಯಚೂರಿನ ಮಲ್ಲಾಖಾನ ಮತ್ತು ಉದ್ದಂಡ ಖಾನರನ್ನು ಸೆರೆಹಿಡಿದ ವಿವರಗಳನ್ನು ನೀಡುತ್ತದೆ. ಶ್ರೀಶೈಲದ ಶಾಸನವೊಂದು, ಕೃಷ್ಣದೇವರಾಯನು ಉದಯಗಿರಿಯ ವಿಜಯದ ಅನಂತರ ಮಲ್ಲಿಕಾರ್ಜುನ ದೇವಾಲಯವನ್ನು ಸಂದರ್ಶಿಸಿ ದೇವಾಲಯದ ಮುಂದಿರುವ ರಥ ಬೀದಿಯ ಅಕ್ಕಪಕ್ಕದಲ್ಲಿ ಮಂಟಪಗಳು ಸಾಲನ್ನು ನಿರ್ಮಿಸಿದುದನ್ನು ತಿಳಿಸುತ್ತದೆ.

. ಕಾಳಹಸ್ತಿ ಶಾಸನ : ಅಚ್ಯುತರಾಯನ ಕಾಲದ ಕಾಳಹಸ್ತಿಯ ಶಾಸನವೊಂದು, ಅವನ ರಾಜ್ಯದಲ್ಲಿ ನಡೆದ ಸುಪ್ರಸಿದ್ಧ ತಾಮ್ರಪರ್ಣಿ ಕದನಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನು ನೀಡುತ್ತದೆ. ಈ ಶಾಸನದ ಕಾಲ ಕ್ರಿ.ಶ. ೧೫೩೨ರ ಜುಲೈ ತಿಂಗಳು. ಶಾಸನವು ಅಚ್ಯುತರಾಯನ ಪಟ್ಟಾಭಿಷೇಕ, ಅನಂತರ ಉದ್ಭವಿಸಿದ ಶೆಲ್ಲಪ್ಪನ ದಂಗೆ, ಪರಮಕ್ಕುಡಿಯ ತುಂಬಿಚಿನಾಯಕ ಮತ್ತು ತಿರುವಾಡಿಯ ಅರಸ ಉದಯ ಮಾರ್ತಾಂಡವರ್ಮನ ಪತನ ಮತ್ತು ತಾಮ್ರಪರ್ಣಿ ನದಿ ತೀರದ ಮೇಲೆ ವಿಜಯಸ್ತಂಭದ ನೆಡುವಿಕೆಯನ್ನು ತಿಳಿಸುತ್ತದೆ. ಅಚ್ಯುತರಾಯನ ಸೈನ್ಯದ ಮುಂದಾಳತ್ವವನ್ನು ಸಲಕರಾಜು ಬೆನ್ನ ತಿರುಮಲ ವಹಿಸಿದುದ್ದನ್ನು ಕೂಡ ತಿಳಿಸುತ್ತದೆ. ತೇನ್‌ಕಾಶಿಯಲ್ಲಿ ಪಾಂಡ್ಯ ಅರಸ ಶ್ರೀವಲ್ಲಭನ ಆಡಳಿತವನ್ನು ಪುನಃಸ್ಥಾಪಿಸಿ, ಅಚ್ಯುತನು “ಪಾಂಡ್ಯರಾಜ್ಯ ಸ್ಥಾಪನಾಚಾರ್ಯ” ಎಂಬ ಬಿರುದನ್ನು ಧರಿಸಿದುದನ್ನು ಈ ಶಾಸನವು ಉಲ್ಲೇಖಿಸುತ್ತದೆ. ಅಲ್ಲದೇ ಈ ಶಾಸನದ ಸಹಾಯದಿಂದ ತಾಮ್ರಪರ್ಣಿ ಕದನ ಕ್ರಿ.ಶ. ೧೫೩೨ರ ಆದಿಭಾಗದಲ್ಲಿ ಸಂಭವಿಸಿತೆಂದು ಹೇಳಬಹುದು.

ಇಂತಹ ಇನ್ನೂ ಅನೇಕ ಶಾಸನಗಳು ಈ ಕಾಲದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಅರಿಯಲು ಉಪಯುಕ್ತವಾಗಿವೆ. ಕುಮಾರಕಂಪಣನ ಕ್ರಿ.ಶ. ೧೩೬೩ರ ಮಾದಂಪಾಕ್ಕಂ ಶಾಸನವು ಸಂಗಮ ಅರಸರು ರಾಜಗಂಭೀರ ರಾಜ್ಯವನ್ನು ಜಯಿಸಿದುದನ್ನು ತಿಳಿಸಿದರೆ, ಕ್ರಿ.ಶ. ೧೩೭೧ರ ಶ್ರೀರಂಗಂನಲ್ಲಿಯ ಶಾಸನವೊಂದು ಗೋಪಣಾರ‍್ಯನು ರಂಗನಾಥನ ವಿಗ್ರಹವನ್ನು ಶ್ರೀರಂಗದ ದೇವಾಲಯದಲ್ಲಿ ಪುನಃ ಪ್ರತಿಷ್ಠೆ ಮಾಡಿದುದನ್ನು ವಿವರಿಸುತ್ತದೆ. ಹಂಪೆಯ ವಿಠ್ಠಲ ದೇವಾಲಯದ ಶಾಸನವೊಂದು ಕೃಷ್ಣದೇವರಾಯನ ರಾಣಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರು ವಿಠ್ಠಲ ದೇವಾಲಯದ ಗೋಪುರಗಳನ್ನು ನಿರ್ಮಿಸಿದ ವಿಷಯವನ್ನು ತಿಳಿಸಿದರೆ ಕಮಲಾಪುರದ ಹೊಲವೊಂದರಲ್ಲಿರುವ ಶಾಸನವು ಇಮ್ಮಡಿ ದೇವರಾಯನ ಅಧಿಕಾರಿ ಅಹಮ್ಮದಖಾನನು ಮಸೀದಿಯೊಂದನ್ನು ಕಟ್ಟಿಸಿದ ವಿಷಯವನ್ನೊಳಗೊಂಡಿದೆ. ಸಂಗಮ ಅರಸ ವಿರೂಪಾಕ್ಷನ ಶ್ರೀಶೈಲ ತಾಮ್ರಪಟ ಶಾಸನವು ಶ್ರೀಶೈಲದಲ್ಲಿ ವಾಸಿಸುತ್ತಿದ್ದ ಸಿದ್ಧಭಿಕ್ಷಾವೃತ್ತಿಗೆ ನಿರುಮಣ ಆತುಕೂರನ್ನು ದತ್ತಿಯಾಗಿ ನೀಡಿದ ವಿಷಯ ತಿಳಿಸುತ್ತದೆ.