ಸಂಗೀತ ಸಾಹಿತ್ಯಾದಿ ಲಲಿತ ಕಲೆಗಳಿಗೆ ನೂರು ವರ್ಷಗಳಿಗೂ ಮಿಗಿಲಾಗಿ ಕೇಂದ್ರ ಬಿಂದುವಾಗಿರುವ ಮೈಸೂರು ರಾಜ ಮಹಾರಾಜರುಗಳ ಕಲಾಭಿರುಚಿಗೆ, ಸಂಸ್ಕೃತಿಗೆ, ಔದಾರ್ಯಕ್ಕೆ ಹಿಡಿದ ದರ್ಪಣವಾಗಿದೆ. ರಕ್ಷಣಾ ದಳಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಲೆಗೆ ಬರವಿಲ್ಲ ಎನ್ನುವುದಕ್ಕೆ ಕರ್ನಾಟಕ ರಾಜ್ಯ ಪೊಲೀಸ್‌ ಸಂಗೀತಗಾರರ ಕಾಶಿ ಎಂದೇ ಹೆಗ್ಗಳಿಕೆ ಪಡೆದಿರುವ ಕರ್ನಾಟಕ ಸರ್ಕಾರ ವಾದ್ಯ ವೃಂದವು ಸಾಕ್ಷಿಯಾಗಿದೆ.

ಈ ಕರ್ನಾಟಕ ವಾದ್ಯ ವೃಂದವು ೧೮೬೮ ರಲ್ಲಿ ಅಸ್ತಿತ್ವ ತಳೆದು ಪರಂಪರೆಯಾಗಿ ಸಂಗೀತವನ್ನು ಉಳಿಸಿಕೊಂಡು. ಬೆಳೆಸಿಕೊಂಡು ಮುನ್ನಡೆದಿದೆ. ಮೈಸೂರು ಸಂಸ್ಥಾನಿದ ಅರಸರು ತಮ್ಮ ಸೇನಾ ಪಡೆಗಳ ವೈವಿಧ್ಯಮಯ ಕಾರ್ಯ ಚಟುವಟಿಕೆಗಳಿಗೆ ಅನುಗುಣವಾಗಿ ಹೊಂದುವಂತಹ ಸಂಗೀತ ಪ್ರಕಾರಗಳಿಗೆ ಉತ್ತೇಜನವಿತ್ತು, ಭದ್ರ ಬುನಾದಿ ಹಾಕುವುದರೊಡನೆ ಭವ್ಯ ಸೌಧ ನಿರ್ಮಾಣ ಕಾರ್ಯದಲ್ಲೂ ನೆರವಾದರು. ಪಾಶ್ಚಿಮಾತ್ಯ ಕರ್ನಾಟಕ ಹಿಂದೂಸ್ಥಾನಿ ಸಂಗೀತ ಪ್ರಕಾರಗಳೆಲ್ಲದರ ಆಳವಡಿಕೆ ಸಮ್ಮೇಳನಕ್ಕೆ ಉಚ್ಚಮಟ್ಟದ ಪ್ರೋತ್ಸಾಹ ನೀಡಿದರು. ಎಲ್ಲ ಸಂಗೀತ ಪ್ರಕಾರಗಳ ಶ್ರೇಷ್ಠ ವಿದ್ವಾಂಸರ ಶಿಕ್ಷಣ, ಮಾರ್ಗದರ್ಶನ ಈ ತಂಡಕ್ಕೆ ದೊರಕುವ ವ್ಯವಸ್ಥೆ ಮಾಡಿದರು. ಈ ಸುವಿಖ್ಯಾತ ತಂಡವು ೧೯೫೧ ರಲ್ಲಿ ಪೋಲೀಸ್‌ ಇಲಾಖೆಗೆ ಸೇರ್ಪಡೆಯಾಗಿ, ವೈವಿಧ್ಯಮವಾದ, ಅದೇ ಸುಮಧುರ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು’ ಬಂದಿದೆ.

ಪ್ರಸ್ತುತ ಕರ್ನಾಟಕ ವಾದ್ಯ ವೃಂದದ ಉಪಾಧ್ಯಾಯರಾಗಿರುವ ವಿದ್ವಾನ್‌ ವಿ. ರಾಜಗೋಪಾಲ್‌, ಆಸ್ಥಾನ ವಿದ್ವಾನ್‌ ಎಸ್‌. ವೆಂಕಟರಮಣಯ್ಯ ಹಾಗೂ ಲಕ್ಷ್ಮಮ್ಮನವರ ಸುಪುತ್ರರಾಗಿದ್ದು ಸಂಗೀತಾದಿ ಕಲೆಗಳಲ್ಲಿ ಉತ್ತಮ ಆಸಕ್ತಿ, ಅಭಿರುಚಿ ಉಳ್ಳವರಾಗಿದ್ದು ಸಮರ್ಥ ನೇತಾರರಾಗಿರುತ್ತಾರೆ.

ಹಲವಾರು ದೇಶ ವಿದೇಶಗಳಿಂದ ಆಗಮಿಸುವ ರಾಯಭಾರಿಗಳ, ರಾಷ್ಟ್ರಪತಿಗಳ, ಪ್ರಧಾನ ಮಂತ್ರಿಗಳ, ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿಯೂ, ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿಯೂ ತಮ್ಮ ಸುಮಧುರ ಸಂಗೀತ ಸುಧೆಯನ್ನು ಹರಿಸುವ ಈ ವಾದ್ಯ ವೃಂದವು ಪೋಲೀಸ್‌ ಇಲಾಖೆಯಲ್ಲಿಯೂ, ಕಲಾವಿದರು, ಸಂಗೀತಗಾರರು ಇದ್ದಾರೆನ್ನುವುದನ್ನು ದೃಢೀಕರಿಸಿದೆ. ತನ್ನ ಪ್ರತಿಭೆಯನ್ನು ಮೆರೆಸುತ್ತ ಅತ್ಯಂತ ಜನಪ್ರಿಯ ಘಟಕವಾಗಿರುವ ಈ ವಾದ್ಯ ವೃಂದವನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯು ೨೦೦೦-೦೧ರ ಸಾಲಿನಲ್ಲಿ ‘ಕರ್ನಾಟಕ ಕಲಾರ್ಶರೀ’ ಸನ್ಮಾನ ನೀಡಿ ವಿಶೇಷವಾಗಿ ಪುರಸ್ಕರಿಸಿದೆ.