ಸ್ವಾತಂತ್ರ‍್ಯ ಪೂರ್ವ ಕಾಲದಿಂದಲೂ ವಿದ್ಯಾಕೇಂದ್ರವೆಂಬ ಹೆಗ್ಗಳಿಕೆಯ ಮುಕುಟ ಧರಿಸಿದ ಧಾರವಾಡದ ಉಡಿಯಲ್ಲಿರುವ ಐದು ತಾಲೂಕುಗಳ ಪೈಕಿ ಕಲಘಟಗಿ ತಾಲೂಕು ಪ್ರಾಚೀನ ಕಾಲದಿಂದಲೂ ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹೆಸರಾಗಿದೆ. ಕಲಘಟಗಿ ತಾಲೂಕು ಅಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿದ್ದು ನಿಸರ್ಗ ಪ್ರಿಯರಿಗೊಂದು ನೈಸರ್ಗಿಕ ಪ್ರವಾಸಿ ತಾಣವಾಗಿದೆ. ಕಲಘಟಗಿಯ ಭೂಮಿಯು ಸಾಧಾರಣವಾಗಿ ಬೆಲೆಯುಳ್ಳದ್ದು. ಇಲ್ಲಿ ವಾಡಿಕೆಯಾಗಿ ೯೩೯.೦೦ ಮೀ.ಮೀ. ಮಳೆಯಾಗುತ್ತಿದ್ದು, ಕಳೆದ ವರ್ಷಗಳಿಮದ ಮಳೆ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಬೆಳೆಯುವ ಭತ್ತವು ಇಡೀ ನಾಡಿಗೆ ಪ್ರಸಿದ್ಧವಾದುದು. ಎಲ್ಲ ಮಾರುಕಟ್ಟೆಗಳಲ್ಲಿ ಜನ ಕಲಘಟಗಿಯ ಅಕ್ಕಿಯನ್ನು ಕೇಳಿ ಪಡೆಯುತ್ತಿದ್ದರು. ಇಲ್ಲಿ ಅಂಬೆಮುರಿ ಸಿದ್ಧಸಾಳಿ, ಹುಗ್ಗಿ ಭತ್ತ, ಮುಂತಾದವುಗಳ ಪರಿಮಳದಿಂದ ಹೆಸರೇ ಸೂಚಿಸುವಂತೆ ಪಕ್ವಾನ್ನಕ್ಕೆ ಹೇಳಿ ಮಾಡಿಸಿದಂತಿದ್ದವುಗಳು. ಕಲಘಟಗಿಯ ಸುತ್ತಮುತ್ತಲಿನ ಪ್ರದೇಶವು ಕರಾವಳಿಯ ಉತ್ತರಕನ

ಕಲಘಟಗಿ ಜಿಲ್ಲೆಯಿಂದ ದೂರ – ೩೨ ಕಿ.ಮೀ

ಇದು ತಾಲೂಕಿನ ಮುಖ್ಯ ಸ್ಥಳವಾಗಿದೆ. ಹಿಂದೆ ಮರಾಠರ ಕಾಲಕ್ಕೆ ಸಮ್ಮತೀನ ಗ್ರಾಮವಾಗಿತ್ತು. ಇಲ್ಲಿ ಮಂಗಳವಾರ ಸಂತೆ ಜರುಗುತ್ತದೆ. ಕಟ್ಟಿಗೆಯ ಬಣ್ಣದ ಸಾಮಾನುಗಳಿಗೆ, ವಿಶೇಷವಾಗಿ ಬಣ್ಣದ ತೊಟ್ಟಲಿಗೆ ಹಾಗೂ ಅಕ್ಕಿ, ಅವಲಕ್ಕಿಗೆ ಪ್ರಸಿದ್ಧವಾಗಿದೆ.

ಶ್ರೀ ಲಕ್ಷ್ಮೀ ದೇವಾಲಯ

ದೇವಾಲಯವನ್ನು ಹೋಲುತ್ತದೆ ಶ್ರೀ ಮಂಜುನಾಥ ನಾರಾಯಣ ಕಡ್ಲಾಸ್ಕರ ಹಾಗೂ ಊರಿನ ಸದ್ಭಕ್ತರ ಸಹಾಯದೊಂದಿಗೆ ಈ ದೇವಾಲಯ ನಿರ್ಮಾಣಗೊಂಡಿದೆ.

ಪೂರ‍್ವಕಾಲದಿಂದಲೂ ಬಣ್ಣದ ತೊಟ್ಟಿಲುಗಳ ತಯಾರಿಕೆಗೆ ಪ್ರಸಿದ್ಧವಾದ ಚಿತ್ರಕಾರ (ಸಾಹುಕಾರ) ಮನೆತನವು ನೈಸರ್ಗಿಕವಾಗಿ ತಯಾರಿಸಿದ ಬಣ್ಣಗಳಿಂದ ತೊಟ್ಟಿಲು, ಉಯ್ಯಾಲೆ, ಪ್ರಭಾವಳಿ ಹಾಗೂ ಮಂಟಪಗಳನ್ನು ರಾಮಾಯಣ, ಮಹಾಭಾರತ, ದಶಾವತಾರ, ಪುರಾಣಪುಣ್ಯಕಥೆಗಳ (ದೃಶ್ಯಾವಳಿಗಳಿಂದ) ಹಾಗೂ ಕಾಳಿದಾಸನ ಮೇಘಸಂದೇಶ, ಜೈನ ತೀರ್ಥಂಕರ, ಬಾದಶಹರ ಕಾಲದ ಸನ್ನಿವೇಶಗಳ ಚಿತ್ರಗಳಿಂದ ಚಿತ್ರಿಸಿ ದೇಶ ವಿದೇಶಗಳಿಗೆ ರಫ್ತು ಮಾಡಿದ್ದು ದಾಖಲೆಯಾಗಿದೆ.

ಕಲಘಟಗಿ ಗ್ರಾಮ ದೇವತೆ ದೇವಸ್ಥಾನ

ಇಲ್ಲಿಯ ಜನ ಧಾರ್ಮಿಕ ಭಾವನೆಯವರಾಗಿದ್ದು, ಭಯ, ಭಕ್ತಿಯಿಮದ ಸಾಮರಸ್ಯ ಭಾವದಿಂದ ಬೆರೆತು ಜಾತ್ರೆಗಳನ್ನು, ಹಬ್ಬಹರಿದಿನಗಳನ್ನು ಆಚರಿಸುತ್ತಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ (ಮಾರ್ಚ್‌ತಿಂಗಳಲ್ಲಿ) ಆಚರಿಸುವ ಗ್ರಾಮದೇವತೆಯ ಜಾತ್ರೆಯು ಬಹಳ ಸಡಗರ ಸಂಭ್ರಮದಿಂದ ಜರುಗುತ್ತದೆ. ಈ ಜಾತ್ರೆಗೆ ಸುಮಾರು ೨೫ ರಿಂದ ೩೦ ಸಾವಿರ ಜನ ಸೇರುತ್ತಾರೆ.

 

ಬೆಲವಂತರ:

ಜಿಲ್ಲೆಯಿಂದ ದೂರ – ೩೫ ಕಿ.ಮೀ

ಸುಕ್ಷೇತ್ರ ಬೆಲವಂತರ ಗ್ರಾಮವು ದಕ್ಷಿಣ ದಿಕ್ಕಿಗೆ ಮಲೆನಾಡಿನ ಬೆಟ್ಟಸಾಲಿನ ಪುಟ್ಟ ಗ್ರಾಮವಾದರೂ, ಇಲ್ಲಿ ಹುಟ್ಟಿ ಬೆಳೆದು ನಾಡಿಗೆ ಕೀರ್ತಿ ತಂದ ಪುಣ್ಯಪುರುಷರು ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗಳು. ಹಿರೇಮಠದ ಕೀರ್ತಿ ಅಗಾಧವಾದದ್ದು. ಅವರ ಕಾಲದಲ್ಲಿ ಮಠದಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲ ಮತ ಧರ್ಮೀರಿಗೆ ಮುಕ್ತ ಅವಕಾಶವನ್ನು ನೀಡಿ, ಶ್ರೀ ಗುರುಗಳು ತಮ್ಮ ನಾಟಿವೈದ್ಯ ಪದ್ಧತಿಯಿಂದ ರೋಗಿಗಳ ದೈಹಿಕ ಆರೈಕೆಯಲ್ಲದೆ ತಮ್ಮಲ್ಲಿದ್ದ ವೀರಶೈವ ಸಾಹಿತ್ಯ ಮತ್ತು ಆಧ್ಯಾತ್ಮಿಕ ಪ್ರಭಾವದ ಮೂಲಕ ಭವರೋಗಿಗಳನ್ನು ಸಚ್ಛಾರಿತ್ರ‍್ಯ ಉಳ್ಳವರನ್ನಾಗಿ ಮಾಡಿರುವುದು ಅವರ ಬದುಕಿನಿಂದ ತಿಳಿದುಬರುತ್ತದೆ.

 

ಕಲ್ಮೇಶ್ವರ ದೇವಾಲಯ (ಸಂಗಮೇಶ್ವರ) :

ಈ ದೇವಾಲಯವು ಸಂಗಮೇಶ್ವರದ ಊರ ಹೊರಗಿದ್ದು, ಈ ಗುಡಿಯಲ್ಲಿ ೩ ಶಾಸನಗಳು ಗುಡಿಯ ತೊಲೆಯ ಮೇಲಿವೆ. ಈ ಊರಿಗೆ ಸಂಗಮೇಶ್ವರ ಎಂಬ ಹೆಸರು ಬರಲು ಕಾರಣ ದೊಡ್ಡ ಹಳ್ಳ ಹಾಗೂ ಮಂಗ್ಯಾನ ಹಳ್ಳ, ಹಂಪಿಹಳ್ಳಿ ಹಾಗೂ ಸಂಗಮೇಶ್ವರಗಳ ನಡುವೆ ಕೂಡುತ್ತಿದ್ದು ಅದು ಇಂದಿನ ಸಂಗಮೇಶ್ವರದಿಂದ ೨.೫ ಕಿ.ಮೀ ದೂರದಲ್ಲಿದೆ.

ಊರ ಹೊರಗೆ ಇರುವ ಕಲ್ಮೇಶ್ವರ ಗುಡಿ ಪೂರ‍್ವಾಭಿಮುಖವಾಗಿದ್ದು ಗರ್ಭಗೃಹ ತೆರೆದ ಅರ್ಧ ಮಂಟಪ ಹಾಗೂ ನವರಂಗವನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು ಹಿಂದಿನ ಕೋಷ್ಠಕದಲ್ಲಿ ಉಮಾ ಮಹೇಶ್ವರ ಶಿಲ್ಪವಿದೆ. ತೆರೆದ ಮಂಟಪದ ಶಿರೋಭಾಗದ ತೊಲೆಯಲ್ಲಿ ಕ್ರಿ.ಶ ೧೦೬೮ ರ ದಾನ ಶಾಸನವಿದೆ. ಅರ್ಧ ಮಂಟಪದಲ್ಲಿ ನಾಗಶಿಲ್ಪ ಮಹಿಷಾಸುರ ಮರ್ದಿನಿ ಹಾಗೂ ಸರಸ್ವತಿಯ ಸುಂದರ ಬಿಡಿಶಿಲ್ಪಗಳಿವೆ. ನವರಂಗದಲ್ಲಿ ಭೈರವ, ಸಪ್ತಮಾತೃಕಾಪಟ್ಟಿಕೆ, ಗಣಪತಿ, ಕಾರ್ತಿಕೇಯರೊಂದಿಗಿರುವ ಶಿವಪಾರ್ವತಿ ನಂದಿ ಹಾಗೂ ಅನಂತಪದ್ಮನಾಭನ ಸುಂದರ ಶಿಲ್ಪಗಳಿವೆ. ಗುಡಿಯ ಮುಂದೆ ಕಿರಣ ಸ್ಥಂಭ ಹಾಗೂ ಚಂದ್ರಶಿಲೆಗಳು ಇವೆ. ನವರಂಗದ ಪ್ರವೇಶದ್ವಾರ ಸರಳ ತ್ರಿಶಾಖೆಯುಳ್ಳ ಬಾಗಿಲವಾಡವನ್ನು ಹೊಂದಿದೆ.

 

ನೀರಸಾಗರ

ತಾಲೂಕಿನಿಂದ ದೂರ – ೧೫ ಕಿ.ಮೀ.
ಜಿಲ್ಲೆಯಿಂದ ದೂರ – ೧೯ ಕಿ.ಮೀ.

ಧಾರವಾಡದಿಂದ ದಕ್ಷಿಣಕ್ಕೆ ಸುಮಾರು ೧೯ ಕಿ.ಮೀ. ದೂರದಲ್ಲಿ ಕಲಘಟಗಿಯಿಂದ ೧೫ ಕಿ.ಮೀ. ಉತ್ತರಕ್ಕಿರುವ ದುಮ್ಮವಾಡದಿಂದ ೬ ಕಿ.ಮೀ. ಇರುವ ಈ ಕೆರೆ “ನೀರಸಾಗರ” ವಿಶಾಲವಾದ ಸರೋವರವಾಗಿರುವ ಇದು ಅಪರೂಪದ ಜಲರಾಶಿಯಿಂದಾಗಿ ನೀರ ಸಾಗರದಂತೆ ಗೋಚರಿಸುತ್ತದೆ. ಇದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಒಳಪಟ್ಟಿದೆ. ಇದರ ಜಲಮೂಲ ಬೇಡ್ತಿ ಹಳ್ಳ.

ದೂರದ ಧಾರವಾಡ ಹಾಗೂ ಹುಬ್ಬಳ್ಳಿ ನಗರಗಳಿಗೆ ಕುಡಿಯುವ ನೀರನ್ನು ಭಾಗಶಃ ಪೂರೈಸುವ ಈ ಕೆರೆಯ ತಗ್ಗಿನಲ್ಲಿ ೧೦೭ ಎಕರೆ ಉದ್ಯಾನವನವಿದೆ. ವಾರದಂಚಿನ ವನ ವಿಹಾರ ಭೋಜನಗಳಿಗೆ ಇದು ಪ್ರಶಸ್ತ ತಾಣವಾಗಿದೆ. ಇಲ್ಲಿ ಮೀನು ಕೃಷಿ ತರಬೇತಿ ಕೇಂದ್ರ ಹಾಗೂ ತೋಟಗಾರಿಕೆ ಕೇಂದ್ರವಿದೆ. ನೀರಸಾಗರಕ್ಕೆ ಬೇರೆ ಬೇರೆ ಕಡೆಗಳಿಂದ ಪಕ್ಷಿಗಳು ವಲಸೆ ಬರುತ್ತವೆ.

 

ಸಸ್ಯೋದ್ಯಾನ (ಸೋರಶೆಟ್ಟಿಕೊಪ್ಪ)

ಜಿಲ್ಲೆಯಿಂದ ದೂರ: ೪೨ ಕಿ.ಮೀ.
ತಾಲೂಕಿನಿಂದ ದೂರ: ೨೦ ಕಿ.ಮೀ.

ಗ್ರಾಮೀಣ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆರಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಡುವ ತರಬೇತಿ ಕೇಂದ್ರ ಹೊಂದಿದ್ದು ಸುತ್ತಮುತ್ತಲಿನ ಗ್ರಾಮೀಣ ಹೆಣ್ಣು ಮಕ್ಕಳಿಗೆ ಒಂದು ವರದಾನವಾಗಿದ್ದು ಆರ್ಥಿಕವಾಗಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಸಹಕಾರಿಯಾಗಿದೆ.

 

ನರ್ಸರಿ (ಶಿಗೀಗಟ್ಟಿ)

ಸಾಮಾಜಿಕ ಅರಣ್ಯ ಇಲಾಖೆಗೆ ಒಳಪಟ್ಟ ಶಿಗೀಗಟ್ಟಿ ನರ್ಸರಿ ಕೇಂದ್ರವು ಹಲವಾರು ವಿವಿಧ ಬಗೆಯ ಸಸ್ಯಗಳನ್ನು ತಯಾರಿಸಿ ತಾಲೂಕಿನ ಪರಿಸರ ಅಭಿವೃದ್ಧಿಯ ಕಾರ‍್ಯಕ್ಕೆ ಉಪಯೋಗಿಸುವುದು ತುಂಬಾ ಸಹಕಾರಿಯಾಗಿದೆ.

ಇಲ್ಲಿ ತೇಗ, ಮತ್ತಿ, ಬಾಂಬೂ, ಹುಣಸೆ, ಮಾವು, ಆಲ, ಬೇವು, ಗೋಡಂಬಿ, ಕೇರ ಮುಂತಾದ ಮರಗಳ ಸಸಿಗಳನ್ನು ನಾಟಿಮಾಡುತ್ತಾರೆ.

 

ತಂಬೂರು

ತಾಲೂಕಿನಿಂದ ದೂರ – ೧೫ ಕಿ.ಮೀ.
ಜಿಲ್ಲೆಯಿಂದ ದೂರ – ೧೯ ಕಿ.ಮೀ.

ತಂಬೂರಯ ಬಸವೇಶ್ವರ ದೇವಸ್ಥಾನ

ಕಲಘಟಗಿಯಿಂದ ದಕ್ಷಿಣಕ್ಕೆ ೧೧ ಕಿ.ಮೀ. ದೂರದಲ್ಲಿರುವ ತಂಬೂರು ಪ್ರಾಚೀನ ಶಾಸನಗಳಲ್ಲಿ “ತಮ್ಮ ಊರು” “ತಮ್ಮೀಯಾರು” ಹಾಗೂ “ತಾಮ್ರಪುರ” ಎಂದೆಲ್ಲಾ ಉಲ್ಲೇಖಿತಗೊಂಡಿರುವ ಈ ಊರು ರಾಷ್ಟ್ರಕೂಟರ ಕಾಲದಷ್ಟು ಪುರಾತನವಾಗಿದೆ. ಈವರೆಗೆ ೧೫ ಶಾಸನಗಳು ದೊರೆತಿದ್ದು ಅವೆಲ್ಲಾ ದೇವಸ್ಥಾನಗಳಿಗೆ ದಾನ ಹಾಗೂ ದತ್ತಿಗಳನ್ನು ಕೊಟ್ಟ ವಿವರ, ವೀರಕಲ್ಲು, ದೇವಾಲಯ ನಿರ್ಮಾಣ ತಿಳಿಸುವ ವಿಧಾನ, ಸುಂಕದಾನ ಬಿಟ್ಟ  ವಿವರಗಳನ್ನು ತಿಳಿಸುತ್ತದೆ. ಶಾಸನಗಳಲ್ಲಿ ಉಕ್ತವಾಗಿರುವ ದೇವಾಲಯಗಳಲ್ಲಿ ಹೆಚ್ಚಿನವು ಹಾಳಾಗಿವೆ. ಉಳಿದ ಗುಡಿಗಳು ಗುರುತಿಸಲು ಬಾರದ ಸ್ಥಿತಿಯಲ್ಲಿವೆ. ಊರಿನಲ್ಲಿರುವ ಗುಡಿಗಳಲ್ಲಿ ಪ್ರಾಚೀನವಾದ ಬಸವಣ್ಣನ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ, ಹಾಗೂ ನಂದಿ ಮಂಟಪವನ್ನು ಹೊಂದಿದ್ದು ಈ ಗುಡಿಯ ಗರ್ಭಗೃಹದ ಬಾಗಿಲವಾಡ ಸರಳವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಇದ್ದು ಕಪೋತದಲ್ಲಿ ಪಂಚ ಶಿಖರವಿದ್ದು, ಬ್ರಹ್ಮ ಗಣಪತಿ, ನಟರಾಜ, ಸೂರ‍್ಯ ಮತ್ತು ವಿಷ್ಣುವಿನ ಕೆತ್ತನೆ ಹೊಂದಿದೆ ಗರ್ಭಗೃಹದೊಳಗೆ ಶಿವಲಿಂಗವಿದ್ದು ಹಿಂಬದಿಯಲ್ಲಿ ಕಿರುಗಾತ್ರದ ಸೂರ‍್ಯ, ವಿಷ್ಣು, ಉಮಾಮಹೇಶ್ವರ, ಗಣಪತಿ, ಭೈರವ ಶಿಲ್ಪಗಳಿವೆ.

ನವರಂಗದಲ್ಲಿ ಕಲ್ಯಾಣದ ಚಾಲುಕ್ಯರ ಕಾಲದ ಸ್ಥಂಭಗಳಿದ್ದು, ನುಣುಪಾಗಿದ್ದು ಮಿನುಗುತ್ತಿವೆ. ನವರಂಗದಲ್ಲಿ ದ್ವಾರದೆದುರೇ ಮಹಿಷ ಮರ್ದಿನಿಯ ಸುಂದರ ಶಿಲ್ಪವಿದೆ. ಈ ದೇವಾಲಯವು ಸುಂದರವಾದ ದ್ರಾವಿಡ ಶಿಖರವನ್ನು ಹೊತ್ತು ನಿಂತಿದೆ. ದೇವಾಲಯದ ಆವರಣದಲ್ಲಿ ಗಣಪತಿ ಹಾಗೂ ಸಪ್ತಮಾತೃಕಾ ವಿಗ್ರಹಗಳಿವೆ. ಊರಿನಲ್ಲಿರುವ ಮತ್ತೊಂದು ಪ್ರಾಚೀನ ದೇವಾಲಯ ಕಲ್ಮೇಶ್ವರ ಗುಡಿಯಿದ್ದು ಇದು ಪೂರ್ಣ ಜೀರ್ಣೋದ್ಧಾರಗೊಂಡಿದೆ. ಇಲ್ಲಿನ ಶಿವಲಿಂಗ, ನಂದಿ, ದ್ವಾರಬಂಧ, ಗಣಪತಿ ಮತ್ತು ವಿಷ್ಣು ಶಿಲ್ಪಗಳು ಕಲ್ಯಾಣದ ಚಾಲುಕ್ಯರ ಕಾಲದ್ದಾಗಿವೆ. ಊರ ಹೊರಗೆ ಗುಡ್ಡದ ಮೇಲೆ ಗರ್ಭಗೃಹ, ಅಂತರಾಳ ಹಾಗೂ ನವರಂಗವಿರುವ ಉತ್ತರ ಕುಮಾರನ ಗುಡಿಯಿದ್ದು ಇದಕ್ಕೆ ಕದಂಬ ನಾಗರ ಶೈಲಿಯ ಶಿಖರವಿದೆ.

 

ಅತ್ತೀವೇರಿ ಡ್ಯಾಮ ಹಾಗೂ ಪಕ್ಷಿಧಾಮ

ಇಲ್ಲಿನ ಪ್ರಕೃತಿಯು ನಯನಮನೋಹರವಾಗಿದ್ದು, ಸುಂದರ ಪ್ರವಾಸಿ ತಾಣವಾಗಿದೆ. ಈ ಪ್ರದೇಶದಲ್ಲಿ ವಿವಿಧ ಪ್ರದೇಶಗಳಿಂದ ವಿವಿಧ ಪಕ್ಷಿಗಳು ವಲಸೆ ಬರುತ್ತವೆ. ಈ ಪ್ರದೇಶವು ಆಸ್ತಕಟ್ಟಿ ಹಾಗೂ ನೆಲ್ಲಿಹರವಿಗೆ ಸಮೀಪದಲ್ಲಿದೆ.

ಕಸ್ತೂರ್‌ಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆ.ಜಿ.ಬಿ.ವಿ) ಗಂಜೀಗಟ್ಟಿ

ಪ್ರಾಥಮಿಕ ಹಂತದಲ್ಲಿ ಬಾಲಕಿಯರಿಗಾಗಿ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಮಕ್ಕಳಿಗಾಗಿ ಅತಿ ಕ್ಲಿಷ್ಟಕರವಾದ ಪ್ರದೇಶಗಳಲ್ಲಿ ಸುಮಾರು ೭೫೦ ವಸತಿ ಶಾಲೆಗಳನ್ನು ತೆರೆಯಲು ಭಾರತ ಸರಕಾರವು ಅನುಮತಿ ನೀಡಿದೆ. ಈ ಯೋಜನೆಯಡಿ ಕಸ್ತೂರ್‌ಬಾ ಗಾಂಧಿ ಬಾಲಿಕಾ ವಿದ್ಯಾಲಯ ಎಂಬ ಹೊಸ ವಸತಿನಿಲಯವು ಕಲಘಟಗಿಯ ಗಂಜೀಗಟ್ಟಿಯಲ್ಲಿ ಅನುಷ್ಠಾನಗೊಂಡಿದೆ.

ಈ ಯೋಜನೆಯನ್ನು ಹಾಲಿ ಚಾಲ್ತಿಯಲ್ಲಿರುವ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ, ಎನ್‌.ಪಿ.ಇ.ಜಿ.ಇ.ಎಲ್‌ಮತ್ತು ಮಹಿಳಾ ಸಮಖ್ಯಾಗಳೊಂದಿಗೆ ಸಮನ್ವಯಗೊಳಿಸಲಾಗಿದೆ.

೨೦೦೧ ರ ಜನಗಣತಿ ಪ್ರಕಾರ ಗ್ರಾಮೀಣ ಮಹಿಳಾ ಸಾಕ್ಷರತೆಯು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ, ಮತ್ತು ಮಹಿಳಾ ಸಾಕ್ಷರತೆ ಹಾಗೂ ಪುರುಷ ಸಾಕ್ಷರತೆಗಳ ನಡುವಿನ ಸರಾಸರಿಗಿಂತ ಹೆಚ್ಚಿರುವ, ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕಗಳಿಗೆ ಮಾತ್ರ ಅನ್ವಯಿಸುತ್ತದೆ.

ಈ ಶಾಲೆಯಲ್ಲಿ ೧೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ಹೊಂದಲು ಅವಕಾಶವಿದ್ದು ಸಮುದಾಯದಲ್ಲಿ ಅವಕಾಶವಂಚಿತ ಗುಂಪುಗಳ ಬಾಲಕಿಯರಿಗಾಗಿ ಶಾಲೆಯ ಅವಕಾಶ ಮತ್ತು ಗುಣಾತ್ಮಕ ಶಿಕ್ಷಣದ ಸೌಲಭ್ಯಗಳನ್ನು ಖಾತ್ರಿಪಡಿಸಲು ಈ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ.

 

ಬೇಡ್ತಿ ನದಿ (ಹಳ್ಳ)

ತಾಲೂಕಿನಿಂದ ದೂರ –  ಕಿ.ಮೀ.
ಜಿಲ್ಲೆಯಿಂದ ದೂರ –  ಕಿ.ಮೀ.

ಧಾರವಾಡ ಜಿಲ್ಲೆಯಲ್ಲಿ ಎಲ್ಲಾ ನದಿಗಳು, ತೊರೆಗಳು ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರಿದರೆ ಬೇಡ್ತಿ ನದಿ ಮಾತ್ರ ಪಶ್ಚಿಮಕ್ಕೆ ಹರಿಯುತ್ತದೆ. ಧಾರವಾಡದ ಸಮೀಪದಲ್ಲಿ “ಸೋಮೇಶ್ವರ” ಎಂಬಲ್ಲಿ ಹುಟ್ಟುವ “ಶಾಲ್ಮಲಾ” ಬೇಡ್ತಿ ನದಿಯ ಉಪನದಿಯಾಗಿದೆ. ಬೇಡ್ತಿಯು ಧಾರವಾಡ ತಾಲೂಕಿನಲ್ಲಿ ಉಗಮಿಸುತ್ತದೆ. ಕಲಘಟಗಿಯ ಬಳಿ ಸಂಗೇದೇವರಕೊಪ್ಪದಲ್ಲಿ ಇವುಗಳು ಕೂಡುತ್ತವೆ. ಉತ್ತರ ಕನ್ನಡದಲ್ಲಿ ಇದನ್ನು “ಗಂಗಾವಳಿ” ಎಂದು ಕರೆಯುತ್ತಾರೆ. ಬೇಡ್ತಿಗೆ ದುಮ್ಮವಾಡದ ಹತ್ತಿರ ಒಡ್ಡು ಹಾಕಿ “ನೀರಸಾಗರ”ವೆಂಬ ದೊಡ್ಡ ಕೆರೆ ಕಟ್ಟಿದ್ದಾರೆ ಈ ಕೆರೆಯ ನೀರನ್ನು ಭಾಗಶಃ ಧಾರವಾಡ, ಕುಂದಗೋಳ, ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಿಗೆ ಕುಡಿಯಲು ಉಪಯೋಗಿಸುತ್ತಾರೆ.

 

ಬಸವೇಶ್ವರ ದೇವಾಲಯ ಬೂಧನಗುಡ್ಡ (ಚಳಮಟ್ಟಿ)

ತಾಲೂಕಿನಿಂದ ದೂರ – ೨೧ ಕಿ.ಮೀ.
ಜಿಲ್ಲೆಯಿಂದ ದೂರ – ೫೩ ಕಿ.ಮೀ.

೧೨ನೇ ಶತಮಾನದಲ್ಲಿ ಚನ್ನಬಸವಣ್ಣನವರ ಈ ಸ್ಥಳದಲ್ಲಿ ವಾಸ್ತವ್ಯ ಮಾಡಿದ ಕುರಹಿಗಾಗಿ ಈ ಬಸವ ದೇವಾಲಯ ಸ್ಥಾಪಿತವಾಗಿದೆಯೆಂದು ಪ್ರತೀತಿ. ಶ್ರಾವಣಮಾಸದ ಸೋಮವಾರ ಹಾಗೂ ಗುರುವಾರದ ದಿನಗಳಂದು ಜಾತ್ರೆ ಜರುಗುತ್ತದೆ. ಕೊನೆಯ ಶ್ರಾವಣ ಸೋಮವಾರದಂದು ರಥೋತ್ಸವ ಜರುಗುವುದು. ಕಲಘಟಗಿ, ಹುಬ್ಬಳ್ಳಿ, ಧಾರವಾಡದ ಸುತ್ತಮುತ್ತಲಿನ ಹಳ್ಳಿಯ ಜನ ಜಾತ್ರೆಗೆ ಸೇರುತ್ತಾರೆ.

 

ಟಿಬೇಟಿಯನ್ಕಾಲೋನಿ

ತಾಲೂಕಿನಿಂದ ದೂರ – ೨೧ ಕಿ.ಮೀ.
ಜಿಲ್ಲೆಯಿಂದ ದೂರ – ೫೩ ಕಿ.ಮೀ.

“ಮುಂಡಗೋಡ” ಉತ್ತರಕನ್ನಡ ಜಿಲ್ಲೆಯ ಸಣ್ಣ ಪಟ್ಟಣ. ೧೯೬೬ರಲ್ಲಿ ರಾಜ್ಯ ಸರಕಾರವ ೪೦೦೦ ಎಕರೆ ಅರಣ್ಯ ಪ್ರದೇಶವನ್ನು ಮುಂಡಗೋಡ ಹತ್ತಿರ ಟಿಬೇಟಿಯನ್‌ಕಾಲನಿಗೆ ಕೊಟ್ಟಿದೆ. ಸುಮಾರು ೧೫೦೦೦ ಜನರಿಗೆ ಇದು ಆಶ್ರಯ ತಾಣವಾಗಿದೆ. ಟಿಬೇಟಿಯನ್ ಸಂಸ್ಕೃತಿ, ಔಷಧಿ ಹಾಗೂ ಬುದ್ಧನ ತತ್ವಗಳಿಗೆ ಇವರು ಆದ್ಯತೆ ನಡುತ್ತಾರೆ. ಸಹಕಾರ, ಸಹ ಜೀವನ, ಒಗ್ಗಟ್ಟು, ಶ್ರಮ ಜೀವನ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬೀಡುಬಿಟ್ಟಿರುವ ಈ ಕಾಲೋನಿಯಲ್ಲಿ ೭೦೦೦೦ ಜನರು ಪುಟ್ಟ ಪುಟ್ಟ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇವುಗಳಲ್ಲಿ ಎರಡು ಮಹತ್ವದ ದೇವಾಲಯಗಳು ಗೋಲ್ಡನ್‌ಜಂಗಟ್ಸೆ ಹಾಗೂ ಡ್ರೆಪಾಂಗ್‌ಲೋಲಿಂಗ ಹಾಗೂ ಉಳಿದಂತೆ ಹಳ್ಳಿಗಳು ೪-೫ ಕಿ.ಮೀ. ಅಂತರದಲ್ಲಿವೆ. ಹಳ್ಳಿಯ ಹಿರಿಯ ಮುಖಂಡನಿಗೆ ಗ್ಯಾಂಬೊ ಎಂದು ಕರೆಯುತ್ತಾರೆ. ಸಮುದಾಯದ ಆಡಳಿತವನ್ನು ಇವರೇ ನಿರ್ವಹಿಸುತ್ತಾರೆ. ಈ ಜನರ ಮುಖ್ಯ ಉದ್ಯೋಗ ವ್ಯವಸಾಯ. ಭತ್ತ, ಮುಸುಕಿನ ಜೋಳ, ಹತ್ತಿ ಇವುಗಳನ್ನು ಮುಖ್ಯವಾಗಿ ಬೆಳೆಯುತ್ತಾರೆ. ಅಲ್ಲದೆ ಟಿಬೇಟಿಯನ್‌ಕರಕುಶಲ ವಸ್ತುಗಳು ಉಣ್ಣೆಯ ಉತ್ಪನ್ನಗಳು ಹಾಗೂ ಚಾಪೆಗಳು ಮುಂತಾದ ಇತರೆ ಉದ್ಯೋಗಗಳಲ್ಲಿ ಇನ್ನುಳಿದವರು ನಿರತರಾಗಿದ್ದಾರೆ.