ಸಂದರ್ಶಿಸಿದವರು: ಹಿ.ಚಿ.ಬೋರಲಿಂಗಯ್ಯ
ಸಂದರ್ಶಕ : ತಿಮ್ಮಪ್ಪನವ್ರೆ ಈಗ ನಮಗೊಂದು ರಾಮಾಯಣ ಕಾವ್ಯ ಹಾಡಿದ್ರಿ; ರಾಮಾಯಣ ಕಾವ್ಯ ಅಲ್ದೆ ಹರಿಶ್ಚಂದ್ರ ಕಾವ್ಯ ಹಾಡಿದ್ರಿ; ಆ….ಸಿಂಗಿ ಸರ್ಪದ ಕಾವ್ಯ ಹಾಡಿದ್ರಿ, ಆ…ನಳ ಮಹಾರಾಜನ ಕಾವ್ಯ ಹಾಡಿದ್ರಿ, ಇವಲ್ದೆ ಇನ್ನೇನು ಕಾವ್ಯ ಹಾಡ್ತೀರಿ?
ಕಲಾವಿದ : ಅಂದ್ರೆ ಇನ್ನೆಲ್ಲ ಹಾಡ್ತಾರೆ, ಸರ್ರು, ಅಂದ್ರೆ, ನಾವು ಪಸ್ಟಿಕೆ ಮಾಡಕಂಡಿದ್ದಿಷ್ಟೆ, ನಮಗೇಂದ್ರೆ ಇದ್ಯೆಯಿಂದ ಮಾಡಿಕಂಡಿದ್ದಲ್ಲ, ವಷ್ಟು ಅಲ್ಲಲ್ಲಿ ಯಾರಾರು ಹೇಳಿದ್ದು ಕೇಳಿ, ಮಾಡಿ, ಕಲ್ತುಕಂಡು ಹಾಡುದ್ದು, ಅದಿಬಿಟ್ಟಿ ಮತ್ತೇನು ನಾವೇನು ಕಲಿಲಿಕ್ಕೇ ಹೇಳಿ, ನಾವಿದು ಮಾಡಿ ಕಲ್ತುದ್ದಲ್ಲ
ಸಂ : ಅಲ್ಲ ಇದರ ಜೊತೆಗೆ ನೀವು ಈಗ ತಿರುಪತಿ ವೆಂಕಟರಮಣ….
ಕ : ಆ ಅಂದ್ರೆ ಈ ಹರಿಸೇವು ಮಾಡ್ತಾರಲ್ಲ, ಹರಿಸೇವು ಮಾಡುದ್ರೆ ಅದು ಒಂದು ಕೊಣತಾ ಅಂತ ಹೇಳ್ತಾರೆ, ಕೊಣತಾ ಅಂದ್ರೆ ಈ ತಿರುಪತಿ ಎಂಕಟರಮಣನ ಕಾರ್ಯ. ಹಾಡಿನಲ್ಲಿ ತಿರುಪತಿ ಎಂಕಟರಮಣನ ಇಲ್ಲಿಗೆ ಕರೆಸಿ ಮತ್ತೆ ಪುನಃ ಅಲ್ಲಿಗೆ ಕಳುಹಿಸುವಂತದ್ದು, ಆ ಕೊಣತದ ಹಾಡ್ನಲ್ಲಿ ಹೇಳ್ತೇವು
ಸಂ : ಅದು, ಸುಮಾರು ಎಷ್ಟು ಹಾಡುಗಳು ಬರ್ತಾವೆ?
ಕ : ಬಾಳ ಹಾಡುಗಳು ಬರ್ತಾವೆ, ಬಾಳಾ
ಸಂ : ಅಂದ್ರೆ ಅದು ಕಥೆಯೋ? ಇಲ್ಲ ಹಾಡುಗಳೋ?
ಕ : ಹಾಡುಗಳು, ನಾವು ಹಾಡು ಹೇಳ್ತಾ ಹೋದಂಗೊ, ಉಳದವ್ರ ‘ಹೌದೇರಣ್ಣೊ ಗೋವಿಂದೋ’ ಅಂತ ಹೇಳಿ ಕುಣಿತಾರೆ.
ಸಂ : ಘಿರುಪತಿ ವೆಂಕಟರಮಣನ ಕರಕಂಬೋರೋದು ಕಳಿಸೋದು ಅಂದ್ರೆ ಹೆಂಗೆ?
ಕ : ಆ ಹಾಡಿನಲ್ಲಿ, ಹಾಡನಲ್ಲಿ ಅಂದ್ರೆ ನಮ್ಮ ಈ ಕೆಲಸಕ್ಕೆ ಆ ದೇವರು, ಇಲ್ಲಿ ಬಂದು ವಾಸವಾಗಿ, ಇಲ್ಲಿ ಮಾಡಿದ್ದು ನೋಡಿಕೊಂಡು, ಅವುನು ಪುನಃ ಮತ್ತಲ್ಲಿಗೇ ಕಳುಹಿಸೋದು.
ಸಂ : ಈಗ ನಿಮ್ಮ ಗೊಂಡ್ರು ಉತ್ತರಕನ್ನಡದಲ್ಲಿ ಮೊದ್ಲಿಂದ ಇರುವಂತಹವರು, ಮತ್ತೆ ಈ ಅರಣ್ಯದ ನಡುವೆ ಇರುವಂತಹವರು, ಅಪ್ಪಟ ಕನ್ನ ಮಾತಾಡುವವರು, ಆದ್ರೆ ಕೆಲವರು ಏನೇಳ್ತಾರೆ, ತಿರುಪತಿ ವೆಂಕಟರಮಣನ ಪೂಜೆ ಮಾಡ್ತಿರೋದ್ರಿಂದ ಅವರು ತಿರುಪತಿ ಕಡೆಯಿಂದ ಬಂದೋವ್ರ ಅಂತಾರೆ?
ಕ : ಅಲ್ಲಲ್ಲ ಸಾರ್, ಅಲ್ಲ ಸಾರ್, ಇಲ್ಲೆ ಇದ್ದವರು, ಮೂಲ ಇಲ್ಲೇ, ಅಂದ್ರೆ ನಮ್ಮ ಸಂಪ್ರದಾಯದ ಪರಕಾರ ಎಂಕಟರಮಣನ ಭಕ್ತುರು ನಾವು.
ಸಂ : ಸುಮಾರು ಯಾವಾಗ್ನಿಂದ ಭಕ್ತರು?
ಕ : ಯಾವಾಗ್ನಿಂದ ಅಂದ್ರೆ ನಮ್ಮಕ್ಕಿಂತ ಹಿಂದಿನ ಕಾಲದಲ್ಲೂ ಭಕ್ತರೇ ಹೌದೌದು, ನಮುಗೆ ಗೊತ್ತಿರೋಕಿಂತ ಹಿಂದಿನ ಕಾಲದಲ್ಲು ಬಕುತರೆ. ಸಾಮಾನ್ಯ ಒಂದು ನೂರು ವರುಸುದ ಹಿಂದೆಯು ತಿರುಪತಿ ಎಂಕಟರಮಣನ ಬಕುತರೆ.
ಸಂ : ಈ ವೆಂಕಟರಮಣ ಅಲ್ದೆ ಇನ್ನ್ಯಾವು ದೇವ್ರಗಳಿಗೆ ಪೂಜೆಮಾಡ್ತೀರಿ?
ಕ : ನಾವು ಮಂಜುನಾಥ ಸ್ವಾಮಿಗೂ ಧರ್ಮಸ್ಥಳಕ್ಕೂ ಇದ ಮಾಡ್ತೀವಿ, ಗ್ರಾಮುದಾಗ ಜಟ್ಟಿಗ, ನಾಗುರು, ಚೌಡಿ, ಐಗೂಳಿ, ಇಂಥವೆಲ್ಲ ಗ್ರಾಮುದಲ್ಲೆಲ್ಲ ಇರ್ತಾವಲ್ಲ ಆ ದೇವ್ರಿಗೆಲ್ಲ ಪೂಜೆ ಮಾಡ್ತೀವಿ ನಾವು
ಸಂ : ಈಗ ಇಲ್ಲಿ ಮಾರೂಕೇರಿ ಇದೆಯಲ್ಲ, ಆ ಮಾರುಕೇರೀಲಿ ಇರುವ ದೇವಸ್ಥಾನಕ್ಕೆ ಏನಂತ ಹೇಳ್ತೀರಿ ನೀವು?
ಕ : ಅದಕ್ಕೆ ‘ಬೀರನಮನೆ’ ಅಂತ ಹೇಳ್ತಾರೆ.
ಸಂ : ಅಲ್ಲಿ ಏನೇನು ದೇವರುಗಳಿವೆ?
ಕ : ಅಲ್ಲಿ ಬೀರು ಅದೆ, ಐಗುಳಿ ಅದೆ, ಹುಲಿಗಿರ್ತಿ ಅದೆ, ಆ … ಚೌಡಿ ಅದೆ, ಆ.. ನಾಗರದೆ ಸುಮಾರು ಎಲ್ಲಾ ದೇವತೆಗಳು ಅವೆ
ಸಂ : ಅಂದ್ರೆ ಅವೆಲ್ಲ ನಿಮ್ಮ ಮೂಲದೇವತೆಗಳು?
ಕ : ಮೂಲದೇವತೆ ಅಂದ್ರೆ ಆ ಗ್ರಾಮದಾಗೆ ಇದ್ದುದ್ದು, ಅಲ್ಲೆಲ್ಲ ಪೂಜೆಮಾಡಕಂಡು ಅವುಕ್ಕೆ ಏನಾರು ನವಿದ್ದೆಕಟ್ಟಿಕಂಡು ನಮ್ಮುದೊಂದು ಬೆಳಿಗೂ ಮತ್ತೊಂದಕ್ಕೂ ಏನಕ್ಕೂ ತೊಂದರೆ ಬರುದಿದ್ದಂತೆ ಅದಕ್ಕೊಂದು ಪೂಜೆ ಕೋಡ್ತಿವಿ ಅಂತ ಹೇಳ್ಕಂಡೀವಿ, ವರುಸಕ್ಕೆ ಎಲ್ಡು ಮೂರು ಪೂಜೆ ಸಲುಸ್ತಾ ಇರ್ತೇವೆ.
ಸಂ : ಅಂದ್ರೆ ಅದು ಕೂಡಾ ಬಾಳ ಹಿಂದ್ಲಿಂದ ಇರೋ ಪೂಜೇನೆ?
ಕ : ಹೌದೌದು
ಸಂ : ಈಗ ಜಟ್ಟಿಗ ಇದೆಯಲ್ಲ, ಜಟ್ಟಿಗನ ಕಥೆಯೊಂದು ಬರ್ತದೆ ನಿಮ್ಮಲ್ಲಿ, ಈಗ ಸಮುದ್ರದೊಳಗಡೆ ನೇತ್ರಾಣಿ ಗುಡ್ಡ ಇದೆಯಲ್ಲ ಅಲ್ಲಿ ಒಂದು ಜಟ್ಟಿಗ ಇದೆಯಲ್ಲ, ಈಗ ಅಲ್ಲಿ ಹಬ್ಬ ಎಲ್ಲ ಆಗ್ತಾವ?
ಕ : ಹೌದೌದು ಅಲ್ಲಿ ವರ್ಸುಕ್ಕೊಂದುಸಲ, ನಾವೆಲ್ಲ ಹೋಗೋದಿಲ್ಲ ಸಾರು, ಅಂತೂ ಹೋಗ್ತಾರೆ, ನೇತ್ರಾಣಿಗುಡ್ಡದಗೆ ‘ಬಸವನಬಾವಿಹತ್ರ’ ಅಲ್ಲೊಂದು ಜಟ್ಟಿಗನ ಮನೆ ಅದೆ, ಅದು ಬಾಳ ದೊಡ್ಡ ಸತ್ಯದ ಸ್ಥಳ.
ಸಂ : ಆ ಜಟ್ಟಿಗನದೊಂದು ಕಥೆ ಹೇಳ್ತಾರಲ್ಲ?
ಕ : ನಾನು ಕೇಳಿಲ್ಲ ಸಾರು, ಅದು ನನಗೆ ಆ ಜಟ್ಟಿನ ಕಥೆ ಗೊತ್ತಿಲ್ಲ
ಸಂ : ಅಲ್ಲ, ಈಗ ಭಟ್ಕಳದ ಕೋಗತಿ ದೇವತೆ?
ಕ : ಹೌದೌದು ನಮ್ಮ ದೇವರು, ಮಾಸ್ತಿ ದೇವರು, ನಮ್ಮ ಮೂಲ ದೇವರು ಮಾಸ್ತೀನೆ
ಸಂ : ಇಲ್ಲಿಯ ಅರಣ್ಯಗಳ ಜೊತೆಗೆ ಬದುಕುದೋರು ನೀವು, ಆದ್ರೆ ಭಟ್ಕಳ ಈಗ ಪ್ಯಾಟೆ ಆಗಿದೆ, ನಿಮ್ಮೋರು ಕೆಲವರು ಪ್ಯಾಟೇಲೂ ಅವುರಲ್ಲಾ?
ಕ : ಪೇಟೆದಲ್ಲಂದ್ರೆ ಅಲ್ಲಿ ಆವಗ ಹಿಂದಿನ ಕಾಲದಲ್ಲು ಅವುರು ಮಾಮೂಲಿಯಾಗಿ ಉಳುದಾವ್ರೆ. ಅವಾಗ ಪ್ಯಾಟಿಲ್ಲಾಗಿತ್ತು. ಅವಗೆಲ್ಲ ಕಾಡೆ ಇತ್ತು, ಈಗ ಕೋಗತಿ, ಬೀಗತಿ ಅಲ್ಲೆ ಉಂಟಲ್ಲ ನೋಡಿ, ಅಲ್ಲೂ ಕಾಡೇ ಇತ್ತು, ಅವಾಗ ಪ್ಯಾಟಿಗೀಟಿ ಏನು ಇಲ್ಲ, ಈಗ ಮಾತ್ರ ತುಂಬಾ ಪ್ಯಾಟಿ ಆಗೋತು.
ಸಂ : ಸಮುದ್ರೋಳಗಡೆ ಇರೊ ನೇತ್ರಾಣಿ ಗುಡ್ಡ?
ಕ : ಸುಮಾರುದೂರ ಹೋಗಬೇಕು
ಸಂ : ಅದರಲ್ಲಿ ಗೊಂಡರಿದ್ರಾ?
ಕ : ಅಲ್ಲಿ ಗೊಂಡರ್ಯಾರು ಇಲ್ಲ, ಅಲ್ಲಿ ಒಕ್ಕಲು ಯಾರೂ ಇಲ್ಲ ಸಾರ್
ಸಂ : ಅಂದ್ರೆ ದೇವರು ಮಾತ್ರ ಇರೋದ?
ಕ : ಹೌದು ದೇವರು ಮಾತ್ರ ಇರೋದು, ‘ನೇತ್ರಾಣಿ ಜಟ್ಟಿಗ’ ಅಂತೇಳಿ ಆ ದೇವರು ಸೇವೆ ಮಾಡ್ಲಿಕ್ಕಾಗಿ ಅಲ್ಲಿಗೆ ಹೋಗಬೇಕು
ಸಂ : ಅಂದ್ರೆ ಒಂದು ರೀತಿನಲ್ಲಿ ನೀವು ಈ ಕಡೆ ದೊಡ್ಡ ಅರಣ್ಯ ಆ ಕಡಿಗೆ ಸಮುದ್ರ, ಇದರ ನಡುವೆ ಜೀವನ ಮಾಡುವಂತವರು, ಸಮುದ್ರುಕ್ಕು ನಿಮುಗು ಏನಾರು ಸಂಬಂಧ ಇದೆಯಾ?
ಕ : ನಮಗೇನು ಸಂಬಂದಿಲ್ಲ ಸಾರ್
ಸಂ : ಮೀನುಗೀನು ಹಿಡಿಯುವಂತದ್ದಾಗಲಿ! ಏನು ಇಲ್ಲವ?
ಕ : ಏನು ಇಲ್ಲ, ಕೃಷಿನೆ
ಸಂ : ಬೇಟೆಗೀಟೆ ಇಂಥ ಸಂಪ್ರದಾಯಗಳು?
ಕ : ಬೇಟೆ ಸಂಪ್ರದಾಯಗಳು ಮುಂದೆಲ್ಲ ಮಾಡತ್ತಿದ್ರು ನಮ್ಮಲ್ಲಿ, ಆದ್ರೆ ಇಲ್ಲಿ ಈಗೆಲ್ಲ ಅರಣ್ಯ ಕಾನೂನು ಬಂದು ಬಾಳ ಬಿಗಿಯಾಯ್ತು, ಗ್ರಾಮದೊರೆಲ್ಲ ಸೇರಿಕಂಡು ಬ್ಯಾಟೆಯಾಡಕೆ ಹೋಗತಿದ್ರು, ಬೇಟೆಯಾಡತಿದ್ರು, ಹೊಲಕಟ್ಟಿ ಕಡ ಹೊಡಿತಿದ್ರು, ಬಲಿಹಾಕಿ ಮೊಲ ಮಿಗ ಇಂಥವೆಲ್ಲ ಹೊಡಿತಿದ್ರು.
ಸಂ : ಏನೇನು ಪ್ರಾಣಿಗಳು ಸಿಗತಿದ್ವು ಆವಾಗ?
ಕ : ಇಲ್ಲಿ ಬರ್ಕ, ಮೊಲ, ಕಡ, ಆ… ಮತ್ತೆ ಮಿಗ, ಆ ಮತ್ತೆ ಕಾಡಕುರಿ ಅಷ್ಟೆ ಪ್ರಾಣಿ ಇಲ್ಲಿ ನಮ್ಮಲ್ಲಿ ಸಿಕ್ಕೋದು
ಸಂ : ಈ ಹಿಂದೆ ಹುಲಿಗಿಲಿ ಕಾಟ ನಿಮಗಿರಲಿಲ್ಲವ?
ಕ : ಹುಲಿಕಾಟ ಇತ್ತು
ಸಂ : ಈಗಲು ಇದೆಯ?
ಕ : ಈಗಲೂ ಇದೆ ಹೌದೌದು, ಈಗಲು ವರುಸಕ್ಕೊಂದುಸಲ ಎಲ್ಲಾರು ಬಂದು ಎರಡುಮೂರು ಗಂಟಿ ದನನೆಲ್ಲ ಹಿಡಿತವೆ
ಸಂ : ಇಲ್ಲಿ ನೀವು ಕಂಡಂಗೆ, ಚಿಕ್ಕ ಹುಡಗಾಗಿದ್ದಾಗ ನೋಡತಿದ್ದಂಗೆ ಬಹಳ ಬೃಹತ್ ಅರಣ್ಯ ಇತ್ತು, ಇವತ್ತೂ ಈ ಭಾಗದಲ್ಲಿ ಚೆನ್ನಾಗೇ ಇದೆ, ಆದ್ರೂ ನಿಮಗೆ ಈ ನಡುವೆ ಅರಣ್ಯ ಕಡಿಮೆ ಆಗುತ್ತಿದೆ ಅನ್ನಸ್ತಿಲ್ಲವ?
ಕ : ಅಂದ್ರೆ ನಮ್ಮಲ್ಲಿ ಅರಣ್ಯ ಕಡಿಮೆ ಆಗತದೆ ಅಂತೇಳುವಂಥ ಕೊರತೆ ಬರಲಿಲ್ಲ, ಇನ್ನೂ ಬರಲಿಲ್ಲ, ನಮ್ಮಲ್ಲಂದ್ರೆ ಕಡದ್ರು, ಒಂದು ಸಲ ಎಲ್ಲ ಕಂಪ್ಲೀಟು ಕಡದು ಬಿಟ್ರು, ಕಡದು ಎದುರಲ್ಲಿ ಪುನಃ ಏನು ಮಾಡಿದು ಅಂದ್ರೆ ಸಾಗುವಾನಿ, ನೀಲಗಿರಿ, ಎಕ್ಕೇಸು (ಅಕೇಶಿಯಾ) ಇಂಥದ್ದೆಲ್ಲ ಬೆಳಿಸ್ಯಾರೆ. ಮುಂಚಿದ್ದುದುಕ್ಕಿಂತ ಜಾಸ್ತೀನೇ ಅರಣ್ಯ ಸಂಪತ್ತು ಬಂದದೆ ನಮ್ಮಲ್ಲಿ
ಸಂ : ಅಲ್ಲ, ಆದ್ರೆ ಈಗ ಕಾಡಿನಲ್ಲಿ ಸ್ವತಃ ಒಂಥರ ಸ್ವಾಭಾವಿಕವಾಗಿ ಬೆಳಿತಿದ್ದಂತ ಎಲ್ಲ ಬೇರೆ ಬೇರೆ ತರದ ಮರಗಳಿದ್ವಲ್ಲ….
ಕ : ಆ ಮರಗಳು ಕಡಿಮೆ ಆಗೆವೆ, ಅದು ಕಡಿಮೆ ಆಗೆವೆ
ಸಂ : ಈ ಔಷಧಿ ಗಿಡಗಳು, ಇವೆಲ್ಲ ಇದ್ದುವು (ಹೌದೌದು) ಆದ್ರೆ ಈಗ ನೀಲಗಿರಿ, ಅಕೇಶಿ, ನೀವು ಒಪ್ಪುಕೊಳ್ಳತೀರ ಒಳ್ಳೆ ಗಿಡಗುಳಂತ?
ಕ : ಅಲ್ಲ, ಅಂದ್ರೆ ಆ ಒಳ್ಳೆಗಿಡಗುಳು ಕಡಿಮೆ ಆಗದೆ
ಸಂ : ಅದಕ್ಕೆ ನಿಮಗೆ ಸ್ವಲ್ಪನೂ ಬೇಸರ ಆಗ್ತಿಲ್ವ?
ಕ : ನಮಗ ಬ್ಯಾಸರ ಅಂದ್ರೆ ಯಾಕ ಸಾರ್ ಆಗತದೆ?
ಸಂ : ಅಲ್ಲ, ನಮ್ಮದೇನಂದ್ರೆ ನಾವು ನಗರದ ಕಡೆಯಿಂದ ಬಂದವರು ಬಿಡಿ, ಆದ್ರೂವೆ ಈಗ ಕಳೆದ ೧೫ ವರ್ಷದಿಂದ ನಾನು ನಿಮ್ಮ ಭಾಗ ಎಲ್ಲ ನೋಡ್ತಾ ಇದ್ದೀನಿ (ಹೌದು) ಬರ್ತ ಬರ್ತ ಸುಮಾರು ಭಾಗ ಯಾಕೊ ಅರಣ್ಯ ಅಲ್ಲಲ್ಲಿ ಕಡಮೆ ಆಗ್ತ ಬರ್ತಾ ಇದೆ ಮತ್ತೆ, ಆಗ ಇದ್ದಂತೆ (ಮರ ಇಲ್ಲ) ಸ್ವಾಭಾವಿಕವಾದ ಗಿಡಮರ ಇಲ್ಲ, ಇಲ್ಲ (ಇಲ್ಲ) ಅದು ಹೋಗಿ ಬರಿ ನೀಲಗಿರಿ, ಎಕ್ಕೇಸಿಯಾ ಜಾಸ್ತಿ ಆಗತದೆ ಹೊರತು ಹಳೇ ತರ ಇಲ್ಲ. ಈಗ, ಹಿಂದೆ ನೀವು ಕಂಡಂಗೆ ಯಾವ ಯಾವ ತರದ ಮರಗಳು ಇರತಿದ್ವು, ಸ್ವಲ್ಪ ಹೇಳಿ ನೋಡೋಣ ಮರಗಳ ಹೆಸರು?
ಕ : ಹಿಂದಿದ್ದ ಮರಗಳು ಈಗು ಮ್ಮ ಕಾಡ್ನಲ್ಲವೆ
ಸಂ : ಹೇಳು ಅವುನ್ನ ಎಂತೆಂತವು ಅಂತ ಹೇಳಿ
ಕ : ಈಗಿರವಂದ್ರೆ ಹೊನ್ನುಲು ಅಂತಾರೆ, ಮತ್ತಿ ಹೇಳ್ತರೆ, ನಂದಿ, ವಾಟೆ, ಆ ಕಡಿಗೆ, ಕಿಂದಾಳಿ ಅಂತೇಳಿ ಅದೊಂದುಜಾತಿ, ಆ ಭರುಣಿ, ಬಾಳಷ್ಟು ಜಾತಿಮರವೆ, ಕಳುಗುಲು ಆ ಆಯ್ತು, ಆ ಬೀಟಿ, ಗಂದದ ಮರಂತು ನಮ್ಮ ಈ ಸೈಡ್ನಲ್ಲಿಲ್ಲ
ಸಂ : ಈಗ ನೀವು ಯಾವುದಾದರು ಮರಗಳ್ನ ಪೂಜೆಮಾಡಾದುಂಟ?
ಕ : ನಾವು ಯಾವುಮರಕ್ಕು ಪೂಜೆಮಾಡಾದಿಲ್ಲ, ಇಲ್ಲಿ, ಇಲ್ಲ ಸರು
ಸಂ : ಅಂದ್ರೆ ಪವಿತ್ರ ಅಂತ ಹೇಳೋ ಮರಗಳು ಯಾವು?
ಕ : ಪವಿತ್ರ ಅಂತ ಮರುಗಳು ನಮ್ಮಲ್ಲಿ ಹಲಸಿನಮರ ಹೇಳ್ತಾರೆ, ಹಲಸಿನಮರ ಪವಿತ್ರ ಅಂತೇಳಿದ್ರೆ ನಮಗೆ ಯಾವುದೇ ಒಂದು ಕೆಲಸಕ್ಕೂ ಸಹ ಹಲಸು ಉಪಯೋಗಿಸ್ತರೆ, ಅದೊಂದು ಪವಿತ್ರಾದ ಮರಂತ ಹೇಳಬೋದು ಯಾಕೆಂದ್ರೆ, ಒಂದು ಭಟ್ರು ವಾಮಕ್ಕೆ ಬೇಕಂದ್ರು ಆ ಚಕ್ಕೀನೆ, ಹಲಸಿನ ಮರದ ಚೆಕ್ಕೀನೇ ಬೇಕು
ಸಂ : ಮನೆ ಕಟ್ಟುವಾಗ ಇಂಥ ಸಂದರ್ಭದಲ್ಲಿ?
ಕ : ಅದು ಬೇಕು ತೋರಣ ಗೀರ್ಣುಕ್ಕೆ ಆದ್ರೂನೆ ಆದ್ರ ಟೊಂಗೀನೆ
ಸಂ : ಈಗ ನಿಮ್ಮಲ್ಲಿ ಈ ವಿವಾಹ ಇವೆಲ್ಲ ಇದೆಯಲ್ಲ, ಹಿಂದೆ ಇಬ್ಬರು ಮೂವರು ಹೆಂಡ್ತೀರು, ಈ ತರದ್ದೇನಾರು ಇತ್ತ?
ಕ : ಮೂರೆಣ್ತೀರು ಅಂದ್ರೆ?
ಸಂ : ಈಗ ಒಬ್ಬಗಂಡ ಒಂದು ಮದ್ವೆ ಅಂತಿದೆ. ಇಬ್ಬರು, ಮೂವರು ಮಾಡಕೊಳ್ಳೋದು ಆತರದ್ದೇನಾದರು ಅವಕಾಶಗಳಿತ್ತ?
ಕ : ಆ… ಹಿಂದೆ ಮಾಡಕಣ್ತೀರಂತೆ, ನಾವಂತು ನೋಡ್ಲಿಲ್ಲ ಹೇಳ್ತಿರು, ಅಂದ್ರೆ ಒಬ್ಬ ಒಂದು ತೀರೊಯ್ತುಪ್ಪ, ತೀರೋದ್ರೆ ಮತ್ತೊಂದು ಮಾಡಕಳಾದು
ಸಂ : ಈ ವಿಧವೆಯರಾದ ಮೇಲೆ ವಿಧವೆಯರ ಮದುವೆ ಮಾಡುವ ಅವಕಾಶಗಳುಂಟ ನಿಮ್ಮಲ್ಲಿ?
ಕ : ಅದು ಹಿಂದಿತ್ತು, ಈಗಿಲ್ಲ, ಒಂದು ಇಪ್ಪತ್ತೈದು ಮೂವತ್ತೊರ್ಸುದ ಹಿಂದೆ, ನಲವತ್ತೊರ್ಸುದ ಹಿಂದೆ ವಿಧವೆಯಾದೋರನ ಮತ್ತ ಪುನಃ ಆಗತಿದ್ರು, ಅದು ಬಿಡದಾರಿ ಮದುವೆ ಅಂತೇಳಿ ಮಾಡಕಂತಿದ್ರು ಆದ್ರುನ ಈಗ ಕಡಿಮೆ ಮಾಡಿಬಿಟ್ಟರೆ
ಸಂ : ಬುಡಕಟ್ಟು ಸಮಾಜ ನಿಮ್ಮದು, ಈಗೊಂದು ವೇಳೆ ಒಬ್ರು ಹೆಣ್ಣು ಮಗಳು ಏನೇ ತಪ್ಪುದಾರಿಗೆ ಬಂದು ನಡದ್ಲು ಅಥವಾ ಕೆಟ್ಲು ಅಂತಿಟ್ಟುಕೊಳ್ಳಿ, ಅಂಥ ಸಂದರ್ಭದಲ್ಲಿ ಏನ್ ಮಾಡತಿದ್ರಿ?
ಕ : ಅಂತ ಸಂದರ್ಭದಲ್ಲಿ ನಾವು ತಕ್ಕಳ್ಳದಿಲ್ಲ ಜಾತಿವಳಗೆ, ಆದ್ರುನ ಹೊರಗಾಕಿ ಬಿಡ್ತೀರು, ಅದೇ ಸಮಾಜ ನಮ್ಮಲ್ಲಿ ಒಂದು ನಡದದೆ, ಕುಲಗೆಟ್ಟೋರು ಹೇಳಿ ನಮ್ಮ ಜಾತಿಯವುರು ತಗದಾಕಿದವುರೆ ಬಾಳ ಜನ ಆಗಿಬಿಟ್ಟವರೆ, ಅವುರದೆ ಸ್ವಲ್ಪ ಮನಿ ಅವೆ.
ಸಂ : ಅವುರಿಗೆ ಒಂದು ಕಾಲೋನಿ ಮಾಡಿದಿರಾ?
ಕ : ಹೌದೌದು
ಸಂ : ಎಲ್ಲಿ ಅದು
ಕ : ಇಲ್ಲೆ ಅವರೆ ಇಲ್ಲಿ, ಮಾರುಕೇರಿ ಇಲ್ಲೆಲ್ಲ ಬಾಳ ಜನ ಅವರೆ, ನಮ್ಮಲ್ಲಿಲ್ಲ
ಸಂ : ಅಂದ್ರೆ ಪ್ರತ್ಯೇಕ ಮನಿಗಳು
ಕ : ಪ್ರತ್ಯೇಕ ಮನಿಗಳು, ಅವುರು ಮನಿಗೆ ನಾವೇನು ಸಂಪ್ರದಾಯ ಮಾಡದಿಲ್ಲ, ನಾವು ಹೆಣ್ಣು ಗಂಡು ತರದಿಲ್ಲ, ನಾವು ಅವರ ಮನಿಗೆ ಹೋಗೋದಿಲ್ಲ, ಊಟ ವಿಳ್ಳೇ ಏನೂ ಮಾಡದಿಲ್ಲ, ಏನಿಲ್ಲ ಅವರಿಷ್ಟಗೆ ಅವುರೇ ಬ್ಯಾರೆ
ಸಂ : ಈಗ ಅವುರ ಏನಂತ ಕರೀತಾರೆ?
ಕ : ಅವುರಿಗೆ ಕುಲಗೆಟ್ಟೋರು ಹೇಳ್ತಾರೆ
ಸಂ : ಈಗ ಗಂಡಸ್ರಾದ್ರೂ ಅವರುಗೂ ಅದೇ ತರ ಮಾಡುತೀರಾ?
ಕ : ಅದೇ ತರ
ಸಂ : ಗಂಡುಸ್ರಾಗ್ಲಿ ಹೆಂಗುಸುರಾಗ್ಲಿ ಆ ರೀತಿ ತಪ್ಪು ಮಾಡದೋರಿಗೆ…
ಕ : ಹೌದು ತಪ್ಪ ಮಾಡದೋರಿಗೆ
ಸಂ : ಈಗ ಆಯ್ತು, ಒಂದು ಕಳ್ಳತನ ಮಾಡ್ತಾರೆ, ಒಂದು ಕೊಲೆ ಮಾಡ್ತಾರೆ, ಅಂಥೋರಿಗೆ ಏನ್ ಮಾಡ್ತೀರಿ?
ಕ : ಅಂಥವರಿಗೆ ನಮ್ಮ ಜಾತಿಯಲ್ಲಿ ಒಂದು ಪಂಚಾಯಿತಿ ನ್ಯಾಯ ಮಾಡ್ತಾರೆ, ಆ ಅಂಥವರಿಗೆ ಏನಾರು ತಪ್ಪು ಅಂತೇಳಿಕಂಡು ನಮ್ಮ ನಾಲಕ ಜನಿಗೆ ಎಲ್ಲಾರಿಗೂ ಕಂಡು ಬಂದ್ರೆ ಅವನಿಗೆ ದಂಡ ಮಾಡ್ತಾರೆ, ಇಂತಿಷ್ಟು ದಂಡ ನೀ ಮಾಡಿ ಕೊಡಬೇಕು ನೀ ಗೋಕಣ್ಣಕ್ಕೆ ಹೋಗಬೇಕು ಇಲ್ಲೆ ಮುರ್ಡೇಸ್ರುರುಕ್ಕೋಗಬೇಕು, ಸುದ್ದಾಗಿ ಬರಬೇಕು ಆ… ಅಂತೇಳಿ ಅವುನಿಗೆ ದಂಡ ನೇಮಿಸಿ ಅವುನಿಗೆ ಸುದ್ದಾ ಮಾಡಿ ನಮ್ಮ ಜಾತಿಗೆ ತಕ್ಕಳ್ಳತೀವಿ
ಸಂ : ನಿಮ್ಮಲ್ಲಿ ಒಬ್ಬರಗೊಬ್ಬರಿಗೆ ಹೊಡೆದಾಟವಾಗಿ ಗುಂಪುಘರ್ಷಣೆಯಾಗಿ ಕೊಲೆಗಿಲೆಯಾಗಿದ್ದೇನಾರು ಉಂಟ?
ಕ : ಇಲ್ಲ ನಮ್ಮ ಸಮಾಜದೊಳಗೆ ಆದದ್ದಿಲ್ಲ, ಇಲ್ಲ
ಸಂ : ಈಗ ತಿಮ್ಮಪ್ಪನವರೆ ಇನ್ನೊಂದು ಪ್ರಶ್ನೆ ಕೇಳತೀನಿ, ಇತ್ತೀಚೆಗೆ ಭಟ್ಕಳದಲ್ಲಿ ಕೋಮುಗಲಭೆ ಆಯ್ತು ನಿಮಿಗೆ ಗೊತ್ತಲ್ಲ?
ಕ : ಹೌದೌದು
ಸಂ : ಹಿಂದೂ ಮುಸ್ಲಿಂಗಳ ನಡುವೆ ಇತ್ತೀಚಿಗೆ ಹುಟ್ಟಿಕೊಂಡಿದ್ದು
ಕ : ಹೌದೌದು
ಸಂ : ಅದ್ರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕ : ನಮ್ಮಗೇನು ಗೊತ್ತಾಗತದೆ ಸಾರು, ಅವುರು ಒಂದು ರಾತ್ರಿ ಬೆಳಗಾಗಲ್ಲುವರಿಗೆ ಅಲ್ಲಿ ಗಲಾಟಿಯಾಯ್ತು ಗಲಭೆ ಆಯ್ತು. ೩೦೪ನೇ ಕಲಂ ಜಾರಿ ಅಂತೇಳಿಬಿಟ್ರು, ನಾವು ಭಟ್ಕಳಕ್ಕೋಗೋದಿಲ್ಲ, ನಮ್ಮಿಗ್ಹ್ಯಂಗೆ ಗೊತ್ತಾಗತದೆ ಸಾರು, ನಮ್ಮಿಗೇನು ಅದ್ರಾಗೆ ಇದ್ಯೇ ಇಲ್ಲ, ಪೇಪರುನ ಬೆಳಿಗೇನು ಓದೋಕೆ ಇದ್ಯೆ ಇಲ್ಲ, ಏನು ರೇಡೇನ, ನ್ಯೂಸು ಇಂಥಾದ್ದು ಕೇಳಿಕಂಡು ಇರಬೇಕು ವರ್ತ್ಲಾಗಿ ಯಾವ ರೀತಿಯಾಗಿ ಗಲಭೆ ಆಗತದಂತ ಹೇಳೋಕೆ ಸಾದ್ಯಿಲ್ಲ ಸಾರು
ಸಂ : ಅಲ್ಲ ಇದು ಸರಿಯೋ ಸರಿಯಲ್ಲೋ ಅಂಥ?
ಕ : ಅಲ್ಲ, ಇದು ಸರಿಯಲ್ಲ ಹೇಳಿ, ಇದು ನಮ್ಮನಿಸಿಗೆ ಸರಿಯಲ್ಲ. ಈಗ ನಮ್ಮಿಗೆ ಭಟ್ಕಳ ಹೋಗ್ಲಿಕ್ಕೆ ತೊಂದ್ರಲ್ಲ? ಭಟ್ಕಳದಾಗ ಗಲಾಟಿಯಾದಂಗೆ ನಮಗೆ ಒಂದು ಸಾಮಾನು ತರ್ಲಿಕ್ಕಿಲ್ಲ, ನಮಿಗೆ ಇಲ್ಲೇನೊ ಕಾಯಿಲಿ ಬಿತ್ತಪ್ಪ, ಆಸ್ಪತ್ರಿಗೋಗೋಕೆ ಹೆದ್ರಿಕಿ, ಭಟ್ಕಳದಲ್ಲಿ ಗಲಾಟಿ, ಇಲ್ಲಿ ಸಾವು ಪರಿಸ್ಥಿತಿ, ಅಂದ್ರೆ ತೊಂದ್ರೀನೆ ಆ…
ಸಂ : ಇದು ಇತ್ತೀಚೆಗೆ ಮಾತ್ರಾ ಜಾಸ್ತಿ ಹಿಂದೇನು ಇರ್ಲಿಲ್ಲ?
ಕ : ಇಲ್ಲ ಇರ್ಲಿಲ್ಲ, ಈ ಒಂದು ಇಪ್ಪತ್ತುವರ್ಸದ ಈಚೆ
ಸಂ : ಈಗ ನಮಿಗೆ ಸ್ವಾತಂತ್ರ್ಯ ಬಂದಕ್ಕಿಂತ ಮೊದ್ಲಿಂದನು ನೀವು ನೋಡ್ತಾ ಇದಿರೀ (ಹೌದು) ಆವಾಗ ಪರಿಸ್ಥಿತಿ ಹೆಂಗಿತ್ತು?
ಕ : ಆವಾಗ, ಬಾಳ ಕಷ್ಟಿತ್ತು ಸಾರು, ನಮ್ಮಲ್ಲಿ ಜೀವ್ನಾ ಅಂತೇಳದು ಬಾಳಕಷ್ಟ, ಇಲ್ಲಿಂದ ಭಟ್ಕಳಕ್ಕೆ ನಡದೇ ಹೋಗಬೇಕು, ಬೆಳಿಗ್ಗೇ ಎದ್ದು ನಡದೇ ಹೋದ್ರೆ ಬಂದು ಮನೆ ಮುಟ್ಟುಬೇಕಾಗಿತ್ತು. ಭಟ್ಕಳಕ್ಕೆ ನಡದೇಹೋಗಿ ನಡದೇ ಸಾಮಾನೇನಿದ್ರು ತಲಿಹೊರಿಮೇಲೆ ಹೊತ್ತಕಂಡು ಬಂದು ಇಲ್ಲಿ ಜೀವಣ ಮಾಡಬೇಕಾಗಿತ್ತು. ಏನಾದ್ರು ಒಬ್ರಿಗ್ಗೆ ಆಪತ್ತಿಕೆ ಕಷ್ಟ ಬಂತು ಅಂತೇಳದಂಗಾದ್ರೆ ಕಂಬಳಿ ಜೋಳಿಗಿ ಮಾಡಕಂಡೆ ಭಟ್ಕಳಕ್ಕೆ ಹೊತ್ತಕಂಡು ಹೋಗಬೇಕು, ಈಗ ಅವಗಿನಿಕಿಂತ ಎಲ್ಲ ಲೆಕ್ಕದಲ್ಲು ಅಡ್ಡಿ ಇಲ್ಲ
ಸಂ : ಆಮೇಲೆ ಭೂಮಿ, ಈ ಭೂಮಿಯೆಲ್ಲ ನೀವು ಸ್ವತಃ ಮಾಡಿಕೊಂಡಿದ್ದೊ? ಇಲ್ಲ, ಯಾವುದೊ ಒಡೆಯರತ್ರ ಮಾಡ್ತಾ ಇದ್ದು ಭೂಸುಧಾರಣೆಯಲ್ಲಿ ಬಂದದ್ದೊ?
ಕ : ನಾವು ಮುಂಚೆ ಒಡೆಯರತ್ರೇ ಮಾಡಕಂಡಿದ್ದು ಸಾರು, ಇಲ್ಲಿ ನಮ್ಮಲ್ಲಿ ಜಮೀನು ಎಲ್ಲರ್ದು ಅಷ್ಟೆ, ಸ್ವತಃ ಮಾಡಕಂಡಿದ್ದಿಲ್ಲ, ನಮ್ಮದೆಲ್ಲ ಒಡೀರುದು, ಒಡೀದಿಕ್ಕೂಳದು ಜಮೀನು ಗೇಣೀಗಿ ನಾವು ಮಾಡತಾ ಇದ್ದು, ಗೇಣೀ ಆಂದ್ರೆ ಒಂದು ಮುಡಿಗದ್ದಿಗೆ ಇಂತಿಷ್ಟು ಅಂತ ಗೇಣಿಕೊಡಬೇಕಂತೇಳಿ ಮಾಡಕಂಡು ಗೇಣಿ ಹಾಕ್ತಾ ಇದ್ದದು, ಅದು ಈ ಭೂಸುಧಾರಣೆ ಕಾಯ್ದೆ ಬಂದು ಮೇಲೆ ಆ ರಿಕಾರ್ಡಿದ್ದೊರಿಗೆ ಮಾತ್ರ ಆಗದೆ, ಆ ರಿಕಾರ್ಡಿಲ್ಲೊದೊರಿಗೆ ಏನೂ ಇಲ್ಲ, ಈಗ್ಲೂ ಇಲ್ಲ
ಸಂ : ಈಗ ನಿಮಗೆ ಈ ತೋಟ ಎಲ್ಲ ಸಿಕ್ಕಿದೆಯಲ್ಲ ಇದೆಲ್ಲ ಭೂಸುಧಾರಣೆಯಲ್ಲಿ ಸಿಕ್ಕಿದ್ದೇ?
ಕ : ಹೌದೌದು, ಹೌದುಸಾರು
ಸಂ : ಅಂದ್ರೆ ಭೂಸುಧಾರಣೆ ಆಗ್ದೇ ಇದ್ರೆ ನಿಮ್ಮದು ಕಷ್ಟ ಇತ್ತು
ಕ : ಕಷ್ಟಿತ್ತು, ಕಷ್ಟಿತ್ತು ಹೌದು
ಸಂ : ನಿಮ್ಮ ಮದುವೆ ಇಂಥ ಸಂಪ್ರದಾಯಗಳಲ್ಲಿ ನೀವು ನಿಮ್ಮ ಸಮಾಜದೋರು ಸೇರಿ ಮಾಡ್ತಿದ್ದರೊ? ಇಲ್ಲ, ಈ ಪುರೋಹಿತರ ಕರಸ್ತೀರೊ?
ಕ : ಆ ಮುಂಚೆ ನಮ್ಮ ಹಿಂದಿನ ಕಾಲ್ದಲ್ಲೇ ಸಾಗುತ್ತಿತ್ತು, ಒಂದು ಇಪ್ಪತ್ತೊರುಸು ದಾಚೆ, ನಾವೆ ಸೇರಿಮಾಡ್ತಿದ್ವು ಮೊದ್ಲು
ಸಂ : ಪುರೋಹಿತರು ಇರತಿರ್ಲಿಲ್ಲ?
ಕ : ಪುರೋಹಿತರು ಇರಲಿಲ್ಲ, ಈಗ ಈ ಹುಡುಗರೆಲ್ಲ ಸ್ವಲ್ಪ ವಿದ್ಯಾಭ್ಯಾಸೆಲ್ಲ ಕಲ್ತುರು ನೋಡಿ, ಎಲ್ಲ ಜಾತೀಲು ಪುರೋಹಿತರ ಕರೀತಾರೆ, ಭಟ್ಟರ ಕರ್ದು ಮದಿವಿ ಮಾಡ್ತಾರೆ
ಸಂ : ಈಗ ನೀವು ರಾಮಯಣದ ತರಾನೇ ಮಹಾಭಾರತ ಹಾಡ್ತೀರ?
ಕ : ಮಹಾಭಾರತನೂ ಸ್ವಲ್ಪ ಸ್ವಲ್ಪೆಲ್ಲ ಬರ್ತದೆ ಸಾರು, ಈಗೆಲ್ಲ ಮರ್ತೋಯ್ತು ನನಿಗೆ
ಸಂ : ಈಗ ನೀವು ಕಂಡಂಗೆ ನಿಮ್ಮ ಜನಾಂಗದಲ್ಲಿ ನಿಮ್ಮ ತರ ಹಾಡೋರು ಇನ್ನ್ಯಾರಾರು ಇದಾರಾ?
ಕ : ಇದ್ದರು ಸಾರು, ಬಾಳ ನನ್ಗಿಂತ ಹೆಚ್ಚು ಹಾಡುವವರೆಲ್ಲ ಇದ್ದರು, ಈಗೆಲ್ಲ ತೀರಿಕಂಡ್ರು ಅಂಥವರೆಲ್ಲ ತೀರಿಕಂಡ್ರು, ಬಾಳ ಜನ ನನಿಗಂತ ಎಷ್ಟೋ……
ಸಂ : ಮೋದ್ಲೇ ಇದ್ದದ್ದು ಸರಿ …. ಈಗ?
ಕ : ಈಗಿಲ್ಲ, ಈಗ ಯಾರೂ ಇಲ್ಲ, ಈಗ ಅದನೆಲ್ಲ ಮರತಕಂತ ಬಂದಬಿಟ್ರು, ಯಾರು ಕೇಳುವವರು ಇಲ್ಲ ಹೇಳುವವರು ಇಲ್ಲ
ಸಂ : ಹೆಂಗಸ್ರು ಹಾಡೋದಿತ್ತ?
ಕ : ಹೌದೌದು
ಸಂ : ಈಗ ತಿಮ್ಮಪ್ಪನೋರೆ ಕಾಲ ಬದಲಾಗತಿದೆ, ಎಷ್ಟು ಬದ್ಲಾಗುತಿದೆಂದ್ರೆ ಮೊದ್ಲುಗ್ಗು ಈಗ್ಗುವೆ ಬಹಳ ವ್ಯತ್ಯಾಸ……
ಕ : ಹೌದೌದು ಅಜಗಜ ಎತ್ಯಾಸ
ಸಂ : ಈಗ ಮೊದ್ಲು ನೀವು ನೋಡತ್ತಿದ್ದುಕ್ಕು ಈಗ್ಗುವೆ ಜನಗಳಲ್ಲಿ ನೀತಿ, ನಿಯಮ, ನ್ಯಾಯ, ನಿಷ್ಟೆ ಇವೆಲ್ಲ ಇದ್ವಲ್ಲ ಆವಾಗ್ಗೂ ಈವಾಗ್ಗೂ ನಿಮಗೆ ಏನನ್ನುಸ್ತದೆ?
ಕ : ಆವಾಗಿಂತ ಈಗ್ಗೆ ಸ್ವಲ್ಪ ಅದೆಲ್ಲ ಬಿಟ್ಟು ಹೋಗದೆ, ಅವಾಗ್ಗೆ ಒಬ್ರು ಹೇಳದ್ರೆ ಆ ಮಾತಿಗೆ ಎಲ್ಲವುರು ಕೇಳತಿದ್ರು, ಈಗ ಒಬ್ಬ ಹೇಳಿದ ಮಾತು ಯಾರು ಕೇಳುವರೆ ಇಲ್ಲ. ಆ ನ್ಯಾಯ ಇಲ್ಲ ನಮ್ಮಲ್ಲಿ, ನಮ್ಮ ಸಂಪ್ರದಾಯದೊಳಗು ಹೋಗು ಬಿಟ್ಟದೆ ಈಗ ಈ ನಮ್ಮ ಗೊಂಡರಲ್ಲಿ ನಮ್ಮ ಗ್ರಾಮಕೊಬ್ಬ ಗೊಂಡಿರ್ತಾನೆ, ಆ ಗೊಂಡ ಹೇಳಿದ್ರು ಮನೆ ಆ ಗೊಂಡನಮಾತು ಯಾರು ಎಲ್ಲು, ತಗುದಾಕಂಗಿಲ್ಲ ಅವುನು ಹೇಳದಂಗೆ ಕೇಳೋದೆ ಆಗಿತ್ತು, ಈಗ ಗೊಂಡನ ಮಾತು ಯಾರು ಕೇಳೋದಿಲ್ಲ ಸಾರು, ಈಗ ಅದೆಲ್ಲ ಹೋಗ್ತಾ ಬಂದದೆ
ಸಂ : ಈಗ್ಲುವೆ ಊರುಗೊಂಡ ಉಂಟಾ?
ಕ : ಉಂಟು
ಸಂ : ಎಲ್ಲಾ ಊರುಗುಳಲ್ಲು?
ಕ : ಎಲ್ಲಾ ಊರುಗಳಲ್ಲು ಉಂಟು
ಸಂ : ಈಗ ನಿಮ್ಮಲ್ಲಿ ಸ್ವಲ್ಪ ರಾಜಕಾರಣ ಅದು ಇದು ಮಾಡುದೋರುಂಟ ಯಾರಾದ್ರು?
ಕ : ನಮ್ಮಲ್ಯ್ರಿಲ್ಲ
ಸಂ : ಈಗ ಇವೆಲ್ಲ ಬಂತಲ್ಲ ಮಂಡ್ಲ ಪಂಚಾಯ್ತಿ, ಈ ತಾಲ್ಲೂಕು ಪಂಚಾಯ್ತಿ (ಹೌದೌದು) ಇಂಥವುಕ್ಕೆಲ್ಲ ನಿಮಗೆ ರಿಜರ್ವೇಷನ್ ಉಂಟಾ ಅಧ್ಯಕ್ಷರಾಗುದಕ್ಕೆ ಅಥವಾ….
ಕ : ಅದುಂಟು
ಸಂ : ಇದುವರೆಗೂ ಯಾರೂ ಆಗಿಲ್ಲವಾ?
ಕ : ಇಲ್ಲ…. ಇಲ್ಲಿ ನಮ್ಮ ಎಸ್. ಎಸ್.ಗೊಂಡ್ರಂತೇಳಿ ಈಗ ಹಾಡ್ವಳ್ಳಿ ಮಂಡಳ ಪಂಚಾಯಿತಿದು, ಮತ್ತ್ಯಾರು ಆಗ್ಲಿಲ್ಲ
ಸಂ : ಇದುವರೆಗು ಯಾರೂ ಪ್ರಧಾನರು, ಆಗಿಲ್ಲವಾ?
ಕ : ಯಾರು ಆಗ್ಲಿಲ್ಲ
ಸಂ : ಮೆಂಬರುಗಳಿದಾರ?
ಕ : ಮೆಂಬರುಗಳಾಗಿದಾರೆ, ಪಂಚಾಯಿತಿಮೆಂಬರೆಲ್ಲ ಬಾಳ ಅವರೆ
ಸಂ : ಮೊದ್ಲಿಗೆ ಒಂದು ಕಾಲಕ್ಕೆ ನಿಮ್ಮ ಸಮಾಜದಲ್ಲಿ, ನಿಮ್ಮ ಸಮಾಜಕ್ಕೆ ನೀವೆ ಒಡೆಯರಾಗಿದ್ರಿ, ನಿಮ್ಮ ಸಮಾಜ ಏನು ಹೇಳ್ತದೋ ಅದು ನ್ಯಾಯ ಪಂಚಾಯಿತಿ ಇದೆಲ್ಲ ನೀವೇ ನಿಯಂತ್ರಣ ಮಾಡುತಿದ್ರಿ
ಕ : ಹೌದೌದು ಮಾಡತಿದ್ರು
ಸಂ : ಈಗ ಇಂಗೆ ಮಂಡ್ಲ ಪಂಚಾಯ್ತಿ ಆಯಿತು, ಮತ್ತೆ ಆಮೇಲೆ ತಾಲ್ಲೂಕ್ ಪಂಚಾಯ್ತಿ ಆಯ್ತು, ಈ ತರದ ವ್ಯವಸ್ಥೆ ಬಂತು (ಹೌದೌದು) ವ್ಯವಸ್ಥೆಯಿಂದ ನಿಮಗೇನಾರು ಅನುಕೂಲ ಆಗಿದೆಯೋ ಅನಾನುಕೂಲ ಆಗಿದೆಯೋ?
ಕ : ಎನೂ ತೊಂದ್ರಿಲ್ಲ
ಸಂ : ಆಯ್ತು, ತಿಮ್ಮಪ್ಪನವರೆ ಈಗ ನೀವು ಒಬ್ರು ಒಳ್ಳೇ ಕಲಾವಿದ್ರು, ಇಲ್ಲಿ ನಿಮ್ಮ ಜನಾನೆಲ್ಲ ಸೇರಿಸಿ ಬೇರೆ ಕಡೆ ಹೋಗಿ ಪ್ರದರ್ಶನ ಮಾಡಿ ಬಂದಿದ್ದೀರಿ, ಎಲ್ಲೆಲ್ಲಿ ಹೋಗಿ ಪ್ರದರ್ಶನ ಮಾಡಿದಿರಿ?
ಕ : ನಾವು ಹೋದ್ದಿಲ್ಲ ಸಾರು, ನಮ್ಮ ಹುಚ್ಚಪ್ಪ ಮಾಸ್ತರು ಕರಕೊಂಡು ಹೋದಲ್ಲಿ ಹೋದ್ದು, ಮೈಸೂರು, ಶಿವಮೊಗ್ಗ, ಸಾಗರ….
ಸಂ : ಅಂದ್ರೆ ನಿಮ್ಮನ್ನ ಮೊದ್ಲು ಹೊರಗಡೆ ಪರಿಚಯಿಸಿದವ್ರೆ ಹುಚ್ಚಪ್ಪ ಮಾಸ್ತರಾ?
ಕ : ಹೌದೌದು ಮತ್ತ್ಯಾರಿಲ್ಲ ಹುಚ್ಚಪ್ಪ ಮಾಸ್ತರೆ. ಮೈಸೂರು, ಬೆಂಗಳೂರು ಅಮೇನೆ ಸಾಗರ, ಶಿವಮೊಗ್ಗ, ಸಿರ್ಸಿ ಅಕಡೀಗೆ, ಚಿತ್ತರುದುರ್ಗ ಇಷ್ಟಕಡೆಲ್ಲ ಹೋಗ ಬಂದೋ ಪ್ರೋಕೊಟ್ಟೋರು ಹುಚ್ಚಪ್ಪ ಮಾಸ್ತರಾದ ಮೇಲೆ ತಾವು, ಅದರ್ ನಂತರ ಕರೀಂಖಾನ್ರು, ಕಡೆಗೆ ನಾಗೇಗೌಡ್ರು ಬಂದ್ರು ಅವರೆಲ್ಲ ಸಹಾಯ ಮಾಡಿದ್ರಿಂದ ನಾವೆಲ್ಲಾ ಹೊರಗಡೆ ಹೋಗುವಂತದ್ದು ಅವಕಾಶ ನಮಗೆ ಮಡ್ಕೊಟ್ರು
ಸಂ : ಈಗ ಈ ಕುಣಿತ ಇದೆಯಲ್ಲಾ, ಈ ಕುಣ್ತಾನ ಯಾವ ಟೈಮಲ್ಲಿ ಮಾಡ್ತಿರಿ?
ಕ : ನಮ್ಮಲ್ಲಿ ಸಂಪ್ರದಾಯದ ಪ್ರಕಾರ ಮಹಾಶಿವರಾತ್ರಿಗೆ ಬಿಟ್ಟರೆ ಮತ್ತೆಲ್ಲ ನಾವೇನು ಮಾಡದಿಲ್ಲ ವರ್ಷಕ್ಕೆ ಒಂದ್ ಸಲ
ಸಂ : ಈ ಹೋಳಿ?
ಕ : ಅದೇ ಹೋಳಿ, ನಮಗೆ ಕುಣ್ತನೇ ಅದು, ಶಿವರಾತ್ರಿ
ಸಂ : ಶಿವರಾತ್ರೀನೆ ನಿಮಗೆ ದೊಡ್ಡ ಹಬ್ಬಾನಾ?
ಕ : ದೊಡ್ ಹಬ್ಬ, ಶಿವರಾತ್ರಿ ಹಬ್ಬ.
ಸಂ : ಗೊಂಡ್ರು ಅಂದ್ರೇನು?
ಕ : ಗೊಂಡ್ರಂದ್ರೆ, ನಾವೊಂದು ಗಾಮೊಕ್ಲು ಅಂತೇಳಿ ಮುಂಚೆ ಹೇಳ್ತಿದ್ರು ನಮ್ಗೆ, ನಾವಂದ್ರೆ ಭೂಮು ಪುತ್ರುರು.
ಸಂ : ಈಗ ಭೂಮಿ ಪುತ್ರರು ಅಂತೇಳಿದ್ರಿ, ಪಾಪ ನಿಮಗೆ ಸ್ವಂತ ಭೂಮೀನೆ ಇರಲಿಲ್ಲವಲ್ಲ?
ಕ : ಅಂದ್ರೆ ಭೂಮಿ ಇಲ್ಲಾದ್ರು ಇದ್ದೋರುದಾದ್ರು ಉಳಕಂಡೇ ಭೂಮಿ ಕಸುಬು ಮಾಡಬೇಕು ಹೇಳಿತ್ತು, ವ್ಯವಸಾಯವೇ ಆ ವ್ಯವಸಾಯ, ಆ ಲೆಕ್ಕದಾಗೆ ನಾವು ಗಾಮೊಕ್ಕುಲು ಅಂತ ಹೇಳತೀರು, ಈಗ ಅದು ಗೊಂಡ್ರು ಆಗಿ ಬಂತೀಗ
ಸಂ : ಅದೆ, ಈಗ ಆ ಕಡೆ ಹೊನ್ನಾವರ ಕುಮುಟ ಆಕಡಿಗೆಲ್ಲ ಗಾಮೊಕ್ಕಲು ಅಂತ ಜನಾನು ಇದಾರೆ, ಅವುರು ನಿಮ್ಮವರಾ?
ಕ : ಅವುರು ನಮ್ಮವರೆ ಇರಬೇಕು ಅವುರು
ಸಂ : ಅವುರಿಗು ನಿಮಗೂ ಏನಾರು ಸಂಬಂಧ?
ಕ : ಸಂಬಂಧ ಏನೂ ಇಲ್ಲಾಸಾರ್ ನಮಿಗೆ
ಸಂ : ನಿಮ್ಮ ಬಳಿ ಯಾವುದು?
ಕ : ನಾವು ಹೊಲಿ ಬಳಿ
ಸಂ : ಹೊಲಿ ಬಳಿ!
ಕ : ಹೊಲಿ ಬಳೀಂತ
ಸಂ : ಅಂದ್ರೆ ಹೊಲಿ ಅಂದ್ರೇನು?
ಕ : ಅದು ಏನೋ ನನಿಗೆ ಗೊತ್ತಿಲ್ಲ ಹೊಲಿಬಳಿ ಹೇಳ್ತಾರೆ
ಸಂ : ನಿಮ್ಮ ಮಾವನವರು ಯಾವ ಬಳಿಯವರು?
ಕ : ಅವರು ನಮ್ಮ ಹೆಂಡತೀನ ತಕ್ಕಂಡ ಬಂದಿದ್ದ ಮನೆಯವ್ರ, ದೇವತ್ರ ಬಳಿ ಅಂತೇಳಿ
ಸಂ : ಈಗ ನಿಮ್ಮ ಮಗನಿಗೆ ಹೆಣ್ಣು ತಂದೀರಲ್ಲ ಅವರೆಲ್ಲ ಯಾವ ಯಾವ ಬಳಿಯವರು?
ಕ : ಅವರೆಲ್ಲ, ಅವರಿಗೆ ದೇವತ್ರ ಬಳಿ ಆಯ್ತಲ್ಲ, ಅವರಿಗೆ ಆಬಳಿ ಹೆಣ್ಣು ತರೂಕಾಗೊದಿಲ್ಲ
ಸಂ : ಬಳಿ ಹೆಸರುಗಳು ಹೇಳಿ ಸ್ವಲ್ಪ
ಕ : ಬಳಿಯಂದ್ರೆ ಹೊಲಿಬಳಿ, ದ್ಯಾವತರ ಬಳಿ, ಅಗ್ಗೀರಿ ಬಳಿ, ಚೇಂದಿಬಳಿ, ಬಾಳ ಸುಮಾರೆಲ್ಲ ಇತ್ತು ಅಂತದ್ದು ಅದು ಹೇಳಕೆ ಬಾಯಿಲೆ ಬರೋದಿಲ್ಲ ನನಗೆ, ಬಾಳಬಳಿ
ಸಂ : ಈಗ ನೀವು ನಿಮ್ಮ ಹಾಡುಗಳನ್ನು ಸ್ವಲ್ಪ ಕಿರಿಯರಿಗೆ ಯಾಕೆ ಕಲಸಬಾರ್ದು?
ಕ : ಕಿರಿಯೋರು ಕಲಿಸಿದುರೆ ಕಲಿಯೋದಿಲ್ಲ ಅವರು. ಆ ಭಾವಣೀನೆ ಅವರಿಗೆ ಮೂಡೊದಿಲ್ಲ
ಸಂ : ಈಗೆಲ್ಲ ಟೇಪ್ ರೆಕಾರ್ಡು, ಟಿವಿ ಎಲ್ಲ ಬಂದು ಬಿಟ್ವು, ಗೊಂಡ್ರ ಮನಿಗೂ ಬಂದಿದಾವಾ?
ಕ : ಹೌದು ಬಾಳಾ ಕಡಿ ಬಂದಿದಾವೆ
ಸಂ : ಅವೆಲ್ಲ ಬರೀ ಕ್ಯಾಸೆಟ್ಟುಗಳು?
ಕ : ಕ್ಯಾಸೆಟ್ಟುಗಳು, ಬರೀ ಸಿಲಿಮಿ ಹಾಡುಗಳು
ಸಂ : ಈ ರೀತಿ ಬದ್ಲಾಯ್ತತಲ್ಲ ಕಾಲ, ಈ ನಮ್ಮ ಸಂಸ್ಕೃತಿ ಎಲ್ಲೋ ಒಂದು ಕಡಿಗೆ ಪೂರಾ ಮರೆಯಾಗಿ ಹೋಗುತಿದೆ ಅನ್ನುಸ್ತಿಲ್ಲವಾ?
ಕ : ಅನ್ನುಸ್ತಿದೆ ಸಾರು ನಮ್ಮಗನ್ನುಸ್ತುದೆ, ಈಗ ಹುಟ್ಟಿದರಿಗೆ ಅದು ಇಲ್ಲಲ್ಲ ಸಾರು? ಸಂಪ್ರದಾಯ ಇಟ್ಟಕೊಳಬೇಕು ಅಂತೇಳುವ ಭಾವಣೀನೆ ಬರೋದಿಲ್ಲಲ್ಲ ಅವರಿಗೆ
ಸಂ : ನಿಮ್ಮಲ್ಲಿ ಹಿಂದೆ ಡ್ರಸ್ಸುಗಳು ಅಂದ್ರೆ ಬಟ್ಟೆಗಳು ಇವೆಲ್ಲ ಹ್ಯಾಗಿತ್ತು ಏನೇನು?
ಕ : ಮುಂಚೆ ನಮ್ಮಲ್ಲಿ, ನಮ್ಮ ಸಾಸ್ತ್ರ ಪ್ರಕಾರ ಗೊಂಡರ ಸಾಸ್ತ್ರ ಪ್ರಕಾರ ಅಂಡೋ (ಅಂಡರವೇರ್) ಆಕೊಂಗಿಲ್ಲ, ಈ ಕಟಿಂಗ್ ಮಾಡುವಂಗಿಲ್ಲ, ಈ ಜುಟ್ಟ ಬಿಡಬೇಕಿತ್ತು; ಹೆಂಗಸುರು ಕುಬಸ ಹಾಕಂಗಿಲ್ಲ, ಆ ಸೀರಿ ನಿರಿ ವಯ್ದು ಕೆಳವರಿಗೆ ಉಡುವಂಗಿಲ್ಲ, ಮಡಿಕಿ ಮಡಕಿ ಮಾಡಿ ಮ್ಯಾಲೆ ಉಡುತೀರು. ಆ ಸಂಪ್ರದಾಯ ಇತ್ತು. ಈ ಮದವಿ ಟೈಮದಲ್ಲು ಸಹ ನಮ್ಮಲ್ಲಿ ಈ ಮೈಮೇಲೆ ಬೇರೆ ಬಟ್ಟೆ ಹಾಕುವಂಗಿಲ್ಲಾಗಿತ್ತು. ಆ ತರದಲ್ಲಿ ನಮ್ಮಲ್ಲಿ ಸಂಪ್ರದಾಯದ ಪ್ರಕಾರವಾಗಿ ನಾವು ಮದಿವಿ ಎಲ್ಲ ಮಾಡತಿದ್ವಿ
ಸಂ : ಈಗ ಮದ್ವೆನಲ್ಲು ಕೂಡ….
ಕ : ಈಗ ಮದುವೆನಲ್ಲಿ ಪುಲ್ ಶೇಟ್ ಆಗಬೇಕು, ಈ ಪಂಚೆ ಹೋಗದೆ, ಪ್ಯಾಂಟೂನು ಸಹ ಹಾಕ್ಕಂಡು ಮದಿವಿ ಮಾಡಕ್ ತಯಾರಾಗರೆ, ಅವಗ್ಗೆ ಹೂಹೂಂ.
Leave A Comment