ಕಲಾವಿದರ ಕಲೆಯನ್ನು ಪ್ರೇಕ್ಷಕರು ಸಂಪೂರ್ಣವಾಗಿ ಆಸ್ವಾದಿಸಿ, ಸಂತೋಷಪಟ್ಟ ಆನಂದದಲ್ಲಿ ತಮ್ಮನ್ನು ತಾವು ಮರೆತಾಗ ಸಿದ್ಧಿ ಉಂಟಾಯಿತು ಎನ್ನುತ್ತಾರೆ. ಕಲೆಯನ್ನು ಪ್ರದರ್ಶಿಸುವವರು ಮತ್ತು ಕಲೆಯನ್ನು ಆಸ್ವಾದಿಸುವವರು ಇಬ್ಬರೂ ಈ ಪ್ರಪಂಚದ ಆಗುಹೋಗುಗಳನ್ನು ಮರೆತು ಬೇರೊಂದೇ ಕಲ್ಪನಾಲೋಕದಲ್ಲಿ ಸ್ಪಷ್ಟವಾದ ಆಂತರಿಕ ಭಾವನೆಗಳಿಗೆ ಸ್ಪಂದಿಸುತ್ತಾರೆ. ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿ ಯಾವ ಮಟ್ಟದಲ್ಲಿ ರಸಾನುಭವ ಉಂಟುಮಾಡುತ್ತಾರೋ ಅದು ಅವರು ಕಲಾಪ್ರಪಂಚದಲ್ಲಿ ಪಡೆದ ಸಿದ್ಧಿಯಾಗಿರುತ್ತದೆ.

ಸಿದ್ಧಿ ಎಂದರೆ ಎಲ್ಲ ದೃಷ್ಟಿಯಿಂದಲೂ ಒಂದು ಪ್ರಯೋಗ ಸಂಪೂರ್ಣವಾಗಿರುವುದು. ಸಿದ್ಧಿಯಲ್ಲಿ ಎರಡು ವಿಧ. ದೈವ ಸಿದ್ಧಿ ಮತ್ತು ಮಾನುಷಿಸಿದ್ಧಿ.

ಮಾನುಷಿ ಸಿದ್ಧಿ: ಪ್ರೇಕ್ಷಕರು ಕಲೆಯನ್ನು ನೋಡಿ ತೋರಿಸಿ ಪ್ರತಿಕ್ರಿಯೆ ಅಂದರೆ Reaction of the audience ಇದು ಎರಡು ರೀತಿಯಾಗಿ ಇರುತ್ತದೆ.

೧.   ಶಾರೀರಿಕ – ಆಂಗೀಕವಾಗಿ ಪ್ರತಿಕ್ರಿಯೆಸುವುದು. ರೋಮಾಂಚನಗೊಂಡು ಅತಿ ಸಂತೋಷದಿಂದ ಕುಣಿದಾಡುವುದು, ಎದ್ದುನಿಲ್ಲುವುದು ಇತ್ಯಾದಿ.

೨.    ವಾಚಿಕ- ಉದ್ಘಾರ ಎತ್ತುವುದು. ಸಂತೋಷದಿಂದ ಮುಗುಳ್ನಗುವುದು, ನಗುವುದು, ಆಹಾ ಭಲೆ ಭಲೆ ಪಾಪ ಎಂತಹ ಕಷ್ಟ ಮುಂತಾದ ಉದ್ಘಾರಗಳು, ಚಪ್ಪಾಳೆ ತಟ್ಟುವುದು ಮೊದಲಾದವು.

ಪ್ರೇಕ್ಷಕರಲ್ಲಿ ಕಲಾಸ್ವಾದನೆ ನಡೆಯುತ್ತಿರುವಾಗ ಗಮನಿಸಿದರೆ, ಈ ಪ್ರತಿಕ್ರಿಯೆಗಳು ಹತ್ತು ರೀತಿಯಲ್ಲಿ ಇರುತ್ತದೆ ಎಂದು ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಸೂಚಿಸಿದ್ದಾನೆ.

೧.    ಎರಡು ಅರ್ಥದ ಹಾಸ್ಯದ ಮಾತುಗಳು ಬಂದಾಗ ಪ್ರೇಕ್ಷಕರು ಮುಗುಳ್ನಗುತ್ತಾರೆ.

೨.   ಅಸ್ಪಷ್ಟ ಹಾಸ್ಯಕ್ಕೆ ; ತುಟಿ ಬಿರುದು ನಗುತ್ತಾರೆ.

೩.    ಆಂಗಿಕ ಹಾಸ್ಯವನ್ನು ಗಟ್ಟಿಯಾಗಿ ನಕ್ಕು ತೋರ್ಪಡಿಸುತ್ತಾರೆ.

೪.   ಸಂದರ್ಭಕ್ಕೆ ತಕ್ಕಂತೆ ಮೂಡಿ ಬಂದಾಗ ಆಹಾ ಭಲೆ ಮೊದಲಾದ ಶಬ್ದಗಳಿಂದ ವ್ಯಕ್ತಪಡಿಸುತ್ತಾರೆ.

೫.   ಮನುಷ್ಯ ಸ್ವಭಾವಕ್ಕೆ ತಕ್ಕಂತೆ ಮೂಡಿಬಂದಾಗ ಆಹಾ ಎನ್ನುತ್ತಾರೆ.

೬.   ಕರುಣರಸ ಅಥವಾ ಶೋಕ ಪ್ರದರ್ಶನ ನಡೆದಾಗ ಸ್ವಂತವೆಂಬಂತೆ ಅನುಭವಿಸಿ ಕಣ್ಣೀರು ಮಿಡಿಯುತ್ತಾರೆ.

೭. ಆಶ್ಚರ್ಯಕರವಾಗಿ, ತಾಳದ ಖಚಿತತೆ ನಿರ್ವಹಣೆ ಮೂಡಿ ಬಂದಾಗ ಸತ್ವಯುತ ಭಾವನೆಗಳು ಮೂಡಿಬಂದಾಗ, ಕ್ಷಿಷ್ಟವಾದ ಶಾರೀರಿಕ ಚಲನೆಗಳು ಮೂಡಿದಾಗ ಕವಿ ಗಡಚಿಕ್ಕುವ ಚಪ್ಪಾಳೆಯ ಸುರಿಮಳೆ ಕೇಳಿಬರುತ್ತದೆ.

೮.    ರೋಮಾಂಚಕರವಾಗಿ, ಉತ್ಸಾಹ ಆವೇಶಗಳು ಮೂಡಿ ಬಂದಾಗ ಪಾರಿತೋಷಕಗಳನ್ನು ನೀಡುತ್ತಾರೆ.

೯.   ಯುದ್ಧ, ಗಲಭೆ, ಹೋರಾಟಗಳು ನೈಜವಾಗಿ ಮೂಡಿಬಂದಾಗ ಎದ್ದು ನಿಲ್ಲುತ್ತಾರೆ.

೧೦. ಎಲ್ಲಕ್ಕಿಂತ ಹೆಚ್ಚಾಗಿ ತಲ್ಲೀನತೆ ಇಂದ ಬಾಹ್ಯ ಪರಿಸರದ ಅರಿವಿಲ್ಲದಂತೆ ಭಾವರಸ ಆಸ್ವಾದನೆಯಲ್ಲಿ ಮುಳುಗುತ್ತಾರೆ.

ದೈವಿಸಿದ್ಧಿ:

ದೈವಿಸಿದ್ಧಿಯಲ್ಲಿ ಸತ್ವಯುತ ಭಾವನೆಗಳಿಂದ ತುಂಬಿ ಪ್ರೇಕ್ಷಕರು ಮೂಕರಾಗುತ್ತಾರೆ. ಸೂಜಿಬಿದ್ದರೂ ಕೇಳಿಸುವಷ್ಟು ನಿಶ್ಯಬ್ದತೆ ಇರುತ್ತದೆ. ಆಗ ಪ್ರೇಕ್ಷಕರ ಕಲ್ಪನೆಯಲ್ಲಿ ಪಾತ್ರ, ಪರಿಕರ, ಭಾವಗಳು, ಹೇಗೆ ತೋರಿಸಬೇಕು ಎಂಬ ಅಪೇಕ್ಷೆ, ಇರುತ್ತದೋ ಅದರಂತೆ ಕಲಾವಿದರ ಕಲೆ ಉನ್ನತ ಸ್ತರಕ್ಕೆ ಏರಿ ಪ್ರೇಕ್ಷಕರು ಸಂಪೂರ್ಣವಾಗಿ ಸ್ಪಂದಿಸುತ್ತಾರೆ. ಕಲೆಯಲ್ಲಿ ತಮ್ಮನ್ನು ಒಂದಾಗಿಸಿಕೊಳ್ಳುತ್ತಾರೆ.

ಕಲಾವಿದರೂ ತಮ್ಮ ಕಲೆಯನ್ನು ಪ್ರದರ್ಶಿಸುವ ಅತಿ ಸಣ್ಣ ಹಂತದಲ್ಲೂ ಸಿದ್ಧಿಯನ್ನು ಪಡೆಯುವ ಪ್ರಯತ್ನವನ್ನು ಸಂಪೂರ್ಣವಾಗಿ ಮಾಡಬೇಕು. ಆದರೆ ಕೆಲವು ಸಲ ಸಿದ್ಧಿಯ ಮಾರ್ಗದಲ್ಲಿ ಅನೇಕ ವಿಘ್ನಗಳು ಎದುರಾಗುತ್ತವೆ. ಕಲಾಪ್ರದರ್ಶನ ಸಂಪೂರ್ಣ ಸ್ವರೂಪವನ್ನು ತಲುಪುವುದೇ ಇಲ್ಲ. ಕಲೆಯಲ್ಲಿ ಸೋಲನ್ನು ಅನುಭವಿಸಿ, ಸಾಧನೆಯು ಮೂಲಕವೇ, ತನ್ಮಯತೆ ಮತ್ತು ಏಕಾಗ್ರತೆಯ ಮೂಲಕವೇ ಸಿದ್ಧಿಗೆ ಪ್ರಯತ್ನಿಸಬೇಕು.

ಸಿದ್ಧಿ ಸಿಗದಿರಲು ಮೂರು ವಿಧದ ವಿಘ್ನಗಳನ್ನು ಭರತ ನಾಟ್ಯಶಾಸ್ತ್ರದಲ್ಲಿ ವಿವರಿಸುತ್ತಾನೆ.

೧.    ಮನುಷ್ಯನ ಕೈಮೀರಿದ್ದು – ಗಾಳಿ, ಮಳೆ, ಬೆಂಕಿ ಅನಾಹುತಗಳು, ಸೊಳ್ಳೆ-ಹುಳುಗಳ ಬಾಧೆ, ಈಗಿನ ಕಾಲದಲ್ಲಿ ನೋಡಿದರೆ ಧ್ವನಿವರ್ಧಕ – ವಿದ್ಯುತ್‌ಪೂರೈಕೆ ಇಂದ ಆಗುವ ವಿಘ್ನಗಳು ಮೊದಲಾದ “ದೈವಿಘಾತಗಳು”.

೨.   ಪರಪಕ್ಷದಿಂದ ಉಂಟಾಗುವ ಬಾಧೆ ಅಂದರೆ ಬೇಡದ ಶಬ್ದಗಳನ್ನು ಮಾಡುವುದು, ಕಲ್ಲು ಇತ್ಯಾದಿ ತೂರುವುದು, ಮತ್ಸರ ದ್ವೇಷದಿಂದ ಗಲಾಟೆ ಎಬ್ಬಿಸುವುದು ಇತ್ಯಾದಿ.

೩.    ಸ್ವಂತ ವಿಘ್ನಗಳು – ಲಕ್ಷ್ಯವಿಲ್ಲದೆ ಅಹಂಕಾರ ಹಾಗೂ ದುರಭಿಮಾನದಿಂದ ಮಾಡುವುದು, ಇನ್ನೊಬ್ಬರ ಪಾತ್ರ ಭಾಗವನ್ನು ತಾನೇ ಮಾಡುವುದು, ಪಾತ್ರಗಳಿಗೆ ಅಸಮರ್ಪಕ ಆಯ್ಕೆ, ಮಾಡಬೇಕಾದ್ದನ್ನು ಮರೆಯುವುದು, ರಂಗದಮೇಲೆ ಪ್ರಯೋಗದ ಮಧ್ಯೆ ಮತ್ತೊಬ್ಬರಿಗೆ ಸೂಚನೆ ನೀಡುವುದು, ತಪ್ಪಾದ ಹಸ್ತಪ್ರಯೋಗ, ಆಭರಣ ಗೆಜ್ಜೆ ಇತ್ಯಾದಿ ಕಳಚಿ ಬೀಳುವುದು, ಗಟ್ಟಿಯಾಗಿ ಕಿರುಚಿಕೊಂಡು ಅಥವಾ ಅತಿ ಮೆತ್ತಗೆ ಮಾತನಾಡುವುದು, ಜೋರಾಗಿ ನಗುವುದು ಅಥವಾ ಅಳುವುದು, ಕಾವ್ಯಾರ್ಥವನ್ನು ಸರಿಯಾಗಿ ತಿಳಿದುಕೊಳ್ಳದೆ ಅಪಾರ್ಥದಲ್ಲಿ ಅಭಿನಯಿಸುವುದು, ವ್ಯಾಕರಣ ಪದವಿಭಾಗಗಳ ದೋಷಗಳು, ಉಚ್ಛಾರಣೆ ದೋಷಗಳು, ಗ್ರಹ-ಮೋಕ್ಷಗಳಲ್ಲಿ ತಪ್ಪು ಮಾಡುವುದು, ಏಕಾಗ್ರತೆ ಇಲ್ಲದಿರುವುದು, ವಸ್ತ್ರಾಲಂಕಾರವಾಗಿ ತಪ್ಪಾಗಿ ಧರಿಸುವುದು, ಪ್ರವೇಶ ಮತ್ತು ನಿರ್ಗಮನದಲ್ಲಿ ತಪ್ಪು ಮಾಡುವುದು ಇತ್ಯಾದಿ.

ಇವುಗಳ ಜೊತೆಗೆ ದೇಶ, ವೇಷ ಭಾಷೆಗಳನ್ನು ಅನುಸರಿಸುವುದರಲ್ಲಿ ತಪ್ಪು ಮಾಡುವುದು ಸಹಿತ ಸಿದ್ಧಿಗೆ ವಿಘ್ನ ತರುತ್ತದೆ. ಹೊಸ ಪ್ರಯೋಗದ ಹೆಸರಿನಲ್ಲಿ ಭಾಗ ಆಸ್ವಾದನೆ ಮತ್ತು ಆತ್ಮಾನಂದಕ್ಕೆ ಚ್ಯುತಿ ಬರುವಂತಿರಬಾರದು. ಒಂದು ವಿಚಾರ ಸರ್ವವೇದ್ಯ. ಪೂರ್ಣಗುಣವಿಲ್ಲದ ಅಥವಾ ದೋಷವಿಲ್ಲದ ಯಾವುದೇ ಪ್ರಯೋಗವೂ ಇರುವುದಿಲ್ಲ.

ವಾಚಿಕ, ಸ್ವಾತಿಕ, ಆಂಗಿಕ, ಆಹಾರ್ಯಗಳನ್ನು ಯಾವ ಕಾರಣಕ್ಕೂ, ಅಲಕ್ಷಿಸಬಾರದು. ರಸ-ಭಾವಗಳುಳ್ಳ ಗೀತ-ಸಂಗೀತ-ವಾದ್ಯನಾದ ಮಾಧುರ್ಯವನ್ನು ಅಲಕ್ಷಿಸಬಾರದು. ಪ್ರೇಕ್ಷಕರು ಸಂತೋಷದಲ್ಲಿ ಸಂತುಷ್ಟರೂ, ಶೋಕಪ್ರದವಾದುದರಲ್ಲಿ ಶೋಕತಪ್ತನೂ ದೈನ್ಯತೆಯ ಸಂದರ್ಭದಲ್ಲಿ ದೀನತೆಯನ್ನು ಅನುಭವಿಸುವ ಹಾಗೆ ಪ್ರಯೋಗಗಳಿರಬೇಕು.

ಪ್ರೇಕ್ಷಕರಲ್ಲಿ ಭಿನ್ನ ಸ್ವಭಾವದ ಜನರಿರುತ್ತಾರೆ. ಎಲ್ಲರೂ ಅವರವರ ಯೋಚನಾಶಕ್ತಿಗೆ ಮತ್ತು ಭಾವಕ್ಕೆ ಅನುಗುಣವಾಗಿ ಮೆಚ್ಚುಗೆಯನ್ನು ತೋರಿಸುತ್ತಾರೆ. ಆದ್ದರಿಂದ ಆತ್ಮ ಸಿದ್ಧಿ ಇಂದ ಆತ್ಮ ಅನುಭವಕ್ಕೆ ಪ್ರಾಮಖ್ಯತೆ ಕೊಟ್ಟನಂತರ, ಭಿನ್ನ ಪ್ರೇಕ್ಷಕರ ಭಿನ್ನ ರೀತಿಯ ಮೆಚ್ಚುಗೆಯ ಸ್ವರೂಪದ ಸಿದ್ಧಿಯನ್ನು ಪರಿಗಣಿಸಬೇಕು. ಚಿಕ್ಕ ಮಕ್ಕಳಿಗೋಸ್ಕರ ಆಯೋಜಿತ ಕಾರ್ಯಕ್ರಮದಲ್ಲಿ ಆಧ್ಯಾತ್ಮವನ್ನೂ, ಆಧ್ಯಾತ್ಮ ಜಿಜ್ಞಾಸುಗಳೇ ಹೆಚ್ಚಾಗಿರುವ ಪ್ರೇಕ್ಷಕರಿಗೆ, ಚಿಕ್ಕಮಕ್ಕಳ ಕಥೆಯನ್ನು ಪ್ರಯೋಗಿಸುವುದು ಹಾಸ್ಯಾಸ್ಪದವಾಗಿ ಸಿದ್ಧಿಗೆ ಸ್ಥಳವಿಲ್ಲದಂತಾಗುತ್ತದೆ.

ಸಿದ್ಧಿಯ ಮಾರ್ಗದಲ್ಲಿ ನಡೆಯಲು ಕಲಾವಿದರು ಕೆಲವು ಗುಣಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬುದ್ಧಿಶಕ್ತಿ, ಉತ್ಸಾಹ, ದೇಹಾಕೃತಿಯ ಕಡೆಗಿನ ಕಾಳಜಿ. ತಾಳ-ಲಯ ಜ್ಞಾನ, ರಸ- ಭಾವಗಳಿಗೆ ಸ್ಪಂದಿಸುವ ಶಕ್ತಿ, ಕುತೂಹಲದಿಂದ ತಿಳಿದುಕೊಳ್ಳುವ ಆಸಕ್ತಿ, ಸ್ಮೃತಿ ಶಕ್ತಿ, ಹಾಡುಗಾರಿಕೆ, ಹೆದರಿಕೆ ಬಿಟ್ಟು ಪಾತ್ರಕ್ಕೆ ತಕ್ಕಂತೆ ಅಭಿನಯಿಸುವ ಮನಸ್ಸು, ಪಾತ್ರದ ಮನೋಭಾವನೆಗಳನ್ನು ಕೂಲಂಕುಷವಾಗಿ ಯೋಚಿಸಿ ವಿಶ್ಲೇಷಣೆ ಮಾಡಿಕೊಳ್ಳುವುದು- ಇವೆಲ್ಲವನ್ನು ತಳಹದಿಯಾಗಿ ರೂಢಿಸಿಕೊಳ್ಳಬೇಕು.

ಸಿದ್ಧಿಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಕಾವ್ಯ ಅಥವಾ ಸಾಹಿತ್ಯವನ್ನು ಪ್ರಯೋಗಕ್ಕೆ, ಆರಿಸುವ ರೀತಿ, ನಿರ್ದೇಶನ, ಕಲಾವಿದರು, ಪ್ರೇಕ್ಷಕರು, ತಕ್ಕ ಸಂಗೀತ ಸಹಕಾರ ಇವುಗಳೆಲ್ಲ ಕಲೆಯ ಪ್ರಯೋಗದ ಯಶಸ್ಸಿಗೆ ಕಾರಣವಾಗಿರುತ್ತದೆ.

ಸಿದ್ಧಿಗೆ ನಾಟ್ಯಧರ್ಮಿ ಮತ್ತು ಲೋಕಧರ್ಮಿಯ ಪ್ರಯೋಗ ಹದವಾಗಿ ಮಿಶ್ರಿತವಾಗಿರಬೇಕು. ಲೋಕ ವ್ಯವಹಾರದಲ್ಲಿ ನಡೆಯುವ ಹಾಗೆಯೇ ಪ್ರಯೋಗಿಸುವುದು, ಸ್ವಭಾವಕ್ಕೆ ತಕ್ಕಂತೆ ಭಾವಪ್ರಯೋಗ, ಸಹಜ ಅಭಿನಯ ಇವು ಲೋಕಧರ್ಮಿ ಎನಿಸಿಕೊಳ್ಳುತ್ತವೆ. ಲಕ್ಷಣಗಳನ್ನು ಅನುಸರಿಸಿ ಅಭಿನಯಿಸುವುದು ಹತ್ತಿರದಲ್ಲೇ ಇದ್ದರೂ ದೂರದಲ್ಲಿ ಇದ್ದಂತೆ ನಟಿಸುವುದು ಶಾಸ್ತ್ರಗ್ರಂಥಗಳ ಅನುಕರಣೆ ಪೂರೈಕೆ, ಸ್ವಗತ ಭಾಷಣ ಮುಂತಾದವು ನಾಟ್ಯಧರ್ಮಿ ಎನಿಸಿಕೊಳ್ಳುತ್ತವೆ. ಒಬ್ಬರೇ ಅನೇಕ ಪಾತ್ರಗಳನ್ನು ಮಾಡುವುದು, ಜನರ ಅಥವಾ ಪಾತ್ರಗಳ ಸ್ವಭಾವವನ್ನು ಆಂಗಿಕ, ಸಾತ್ವಿಕ, ಆಹಾರ್ಯಗಳಿಂದ ಸೂಚಿಸುವುದು ಮೊದಲಾದವು ನಾಟ್ಯಧರ್ಮಿ ಎನಿಸಿಕೊಳ್ಳುತ್ತದೆ.

ಸಿದ್ಧಿಯನ್ನು ಹೆಚ್ಚಾಗಿ ಪಡೆದು ದೋಷಗಳನ್ನು ಕಡಿಮೆ ಮಾಡಿಕೊಳ್ಳಲು ಕಲಾವಿದರು ಕೆಲವು ರೀತಿಯ ಸಾಧನೆಗಳನ್ನು ರೂಪಿಸಿಕೊಳ್ಳಬಹುದು.

೧.    ಅಂತಃ ಪ್ರಾಣ – ಕಲಾವಿದನ ಸತ್ವ

೨.   ಬಹಿರ್ ಪ್ರಾಣ – ಸಹಕಲಾವಿದರ ಸತ್ವ

೩.   ಅಂಗಶುದ್ಧಿ – ಲಕ್ಷಣಗಳಿಗೆ ಅನುಸಾರವಾಗಿ ಶರೀರ ಚಲನೆ

೪.   ಸ್ಪಂದನೆಗಳು – ಭಾವಸ್ಪಂದನೆ ಜೀವಾಳ

೫.   ದೇವ – ಗುರು ಹಿರಿಯರಲ್ಲಿ ಭಕ್ತಿ – ಕೃತಿ ಮತ್ತು ಕಾರ್ಯಕ್ಕೆ ಸಲ್ಲಿಸುವ ಗೌರವ.

ಸಿದ್ಧಿಯ ಮಾರ್ಗದಲ್ಲಿ ಒಂದೊಂದಾಗಿ ವಿಚಾರ ಮಾಡೋಣ. ಒಂದು ವಿಚಾರವನ್ನು ಸ್ಥೂಲವಾಗಿ ನೋಡಿದಲ್ಲಿ, ಮಾನುಷಿ ಸಿದ್ಧಿಯಲ್ಲಿ ಪ್ರೇಕ್ಷಕರು ಕಲೆ ಇಂದ ಆತ್ಮಾನಂದ ಅನುಭವಿಸಿದರೆ ದೈವಿ ಸಿದ್ಧಿಯಲ್ಲಿ ಕಲಾವಿದರು ತನ್ಮಯತೆ ಇಂದ ಆತ್ಮಾನಂದ ಪಡೆಯುತ್ತಾರೆ. ಕಲೆಯ ದೈವತ್ವಕ್ಕೆ ಈ ಎರಡೂ ಸಿದ್ಧಿಗಳು ಮುಖ್ಯ. ಕಲಾವಿದರು ಮೊದಲು ತಾವು ಆತ್ಮಾನಂದ ಅನುಭವಿಸಿದಾಗಲೇ ಪ್ರೇಕ್ಷಕರಿಗೆ ಆತ್ಮಾನಂದ ಉಂಟು ಮಾಡಲು ಸಾಧ್ಯ. ಅಂದರೆ ಕಲಾವಿದರ ಸ್ವಂತಸಾಧನೆ ಮತ್ತು ಉನ್ನತಮಟ್ಟದ ತನ್ಮಯತೆ ಪ್ರಥಮವಾಗುತ್ತದೆ. ಕಲಾಸಿದ್ಧಿಗೆ ಇದೇ ತಳಹದಿ ಎಂದರೆ ತಪ್ಪಾಗಲಾರದು. ಹಾಗಾದರೆ ಕಲಾವಿದರು ಯಾವ ವಿಚಾರದಲ್ಲಿ ಸಾಧನೆ ನಡೆಸಬೇಕು ಎಂಬ ವಿಚಾರ ಉದ್ಭವವಾಗುತ್ತದೆ. ಸರ್ವಪ್ರಥಮ ನಂದಿಕೇಶ್ವರ ತನ್ನ ಅಭಿನಯದರ್ಪಣದಲ್ಲಿ ಹೇಳಿರುವ ಅಂತಃ ಪ್ರಾಣವನ್ನು ರೂಢಿಸಿಕೊಳ್ಳಬೇಕು.

“ಜವ ಸ್ಥಿರತ್ಯಂ ರೇಖಾ ಚ ಭ್ರಮರಿ ದೃಷ್ಟಿ ಅಶ್ರಮಃ|
ಮೇಧಾ ಶ್ರದ್ಧಾವಚೋ ಗೀತಅಂತಃ ಪ್ರಾನಶಸ್ಮೃತಾ” ||

ಜವ: ನರ್ತನದಲ್ಲಿ ಲವಲವಿಕೆ ಇದ್ದು ಸಂಪೂರ್ಣ ಚೈತನ್ಯದಿಂದ ಕೂಡಿರಬೇಕು. ಚುರುಕುತನವಿದ್ದು ಶರೀರ ಭಾರವೆನ್ನಿಸದ ಸೋಮಾರಿತನವಿಲ್ಲದೆ ನೃತ್ಯದಲ್ಲಿನ ಅಂಗ ಚಲನೆಗಳ ಕ್ರಮವನ್ನು ಸರಿಯಾಗಿ ಸಾಧಿಸಬೇಕು.

ಸ್ಥಿರತೆ: ಸ್ಥಿರತೆ ಕಾಣಬೇಕು. ಆತ್ಮವಿಶ್ವಾಸ ಕಾಣಬೇಕು. ಒಂದು ಭಂಗಿಯಲ್ಲಿ ಪಾದಾಘಾತದಲ್ಲಿ ಹಸ್ತ ಪ್ರಯೋಗದಲ್ಲಿ ಖಚಿತತೆ ಇರಬೇಕು. ಅನೇಕ ಸಲ ನರ್ತಿಸಿ ಪ್ರಯೋಗವನ್ನು ಸರಿಯಾಗಿ ಅರ್ಥಮಾಡಿಕೊಂಡು ಶಾರೀರಿಕ ಮಾನಸಿಕ ಸ್ಥಿರತೆಯನ್ನು ರೂಢಿಸಿಕೊಳ್ಳಬೇಕು.

ರೇಖಾ: ಅಂಗ, ಪ್ರತ್ಯಂಗ, ಉಪಾಂಗಗಳ ಚಲನೆಗಳನ್ನು ಕಡಿತಗೊಳಿಸದೆ ಸಂಪೂರ್ಣವಾಗಿಸುವುದು. ಅಂದರೆ ಉದಾಹರಣೆಗೆ ಕೈಸುತ್ತಿದಾಗ ಸರಿಯಾದ ಚಕ್ರ, ಕೈಬಿಚ್ಚಿದಾಗ ಸಮರೇಖೆ, ಹಿಂದುಮುಂದು ಚಲಿಸಿದಾಗ ಸಮರೇಖೆಯಲ್ಲಿ ಚಲಿಸುವುದು ಅರಮಂಡಿಯಲ್ಲಿ ೯೦ ಕೋನ ಪ್ರಮಾಣವನ್ನು ಸಾಧಿಸುವುದು ಅಂದರೆ ಶರೀರ ಭಾಗದ ಚಲನೆಗಳನ್ನು ಜ್ಯಾಮಿತಿಯ ಪರಿಮಿತಿಗೆ ಒಳಪಡಿಸುವುದು.

ಭಮರಿ: ತಿರುಗುವ ಚಲನೆಗಳಲ್ಲಿ ಶರೀರದ ಸಮತೋಲನ ಸರಿಯಾಗಿ ಹಿಡಿಯುವುದು, ರಂಗವನ್ನು ಸುತ್ತುವ ಚಲನೆಗಳಲ್ಲಿ ಪಾದಗಳನ್ನು ಸರಿಯಾಗಿ ಚಕ್ರದಾಕಾರದಲ್ಲಿ ಚಲಿಸುವುದು ಇತ್ಯಾದಿ.

ದೃಷ್ಟಿ: ಕಣ್ಣುಗಳು ನರ್ತನಕ್ಕೆ ಬಹುಮುಖ್ಯ, ಉಪಾಂಗ ಭಾವನೆಗಳು ಪ್ರಖರವಾಗಿ ಹೊಮ್ಮುವುದು ಕಣ್ಣುಗಳಿಂದ, ತಾಳಕ ಖಚಿತತೆ, ಕೈಗಳು ಚಲಿಸಿದ ದಿಕ್ಕಿನಲ್ಲಿ ನೋಡುವುದು, ರಂಗದಮೇಲೆ ಇಲ್ಲದ ಪಾತ್ರಗಳೊಡನೆ ಸಂಭಾಷಿಸುವಾಗ ಪಾತ್ರದ ಇರುವಿಕೆಯನ್ನು ಸರಿಯಾಗಿ ಕಲ್ಪಿಸುವುದು ಇವೆಲ್ಲಾ ದೃಷ್ಟಿಯ ಸರಿಯಾದ ಚಲನೆಗಳನ್ನು ಆಧರಿಸುತ್ತದೆ.

ಅಶ್ರಮ: ಶರೀರಕ್ಕೆ, ಎಷ್ಟೇ ಅಯಾಸವಾದರೂ ಹೊರಗೆ ತೋರ್ಪಡಿಸದೆ

ಇರುವುದು, ಶ್ರಮಪೂರಿತ ಚಲನೆಗಳು ಅಂದರೆ ಏದುಸಿರಿನಿಂದ ಮಾಡಿದ ಚಲನೆಗಳ
ಪ್ರೇಕ್ಷಕರಲ್ಲಿ “ಅಯ್ಯೋ ಪಾಪ ಎಷ್ಟು ಕಷ್ಟ ಪಡುತ್ತಾರೆ” ಎಂಬ ಸಹಾನುಭೂತಿ ಮೂಡಿಸಿ ಸಿದ್ಧಿಯನ್ನು ಹಾರಿಸಿಬಿಡುತ್ತದೆ. ಇದೊಂದೇ ಅಲ್ಲ, ಕಲಿಯುವಾಗ, ಕಲಿಯುವ ವಿಚಾರದಲ್ಲಿ ನಾನು ಶ್ರಮಪಟ್ಟು ಕಲಿಯುತ್ತಿದ್ದೇನೆ, ಮಾಡುತ್ತಿದ್ದೇನೆ ಎಂಬ ಸ್ವಂತ ಕರುಣೆ ಬಂದಾಗ ಕಲಿಕೆ ನಿಲ್ಲುತ್ತದೆ. ಅಥವಾ ನಿಧಾನವಾಗುತ್ತದೆ. ಕಲಿಯುವ ಮತ್ತು ಪ್ರಯೋಗಿಸುವ ಹುಮ್ಮಸ್ಸು ಅಶ್ರಯಯುತವಾಗಿರಬೇಕು.

ಮೇಧಾ: ಬುದ್ಧಿವಂತಿಕೆ ಪಾಠಗಳನ್ನು ತರ್ಕಬದ್ಧವಾಗಿ ಕಲಿಯುವುದು ಅಂದರೆ ಇದೆ ಹೀಗೆಕೆ? ಹೀಗೆ ಮಾಡಿದರೆ ಏನಾಗುತ್ತದೆ? ಎಂಬ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳುವುದು, ತಪ್ಪುಗಳನ್ನು ತಕ್ಷಣ ತಿದ್ದಿಕೊಳ್ಳುವುದು, ಪ್ರತಿಯೊಂದು ಪಾಠವನ್ನು ಕಲಿಯುವಾಗ ಏಕೆ ತಪ್ಪಾಗುತ್ತಿದೆ ಎಂಬ ವಿಚಾರದ ಕುರಿತು ಯೋಜಿಸುವುದು, ಬುದ್ಧಿವಂತಿಕೆಯಿಂದ ನರ್ತನವನ್ನು ನಿರ್ವಹಿಸುವುದು, ಸಂಯೋಜಿಸುವುದು ಮೊದಲಾದವು ಸಿದ್ಧಿ ಮಾರ್ಗದಲ್ಲಿ ಕಲಾವಿದನನ್ನು ನಡೆಸುತ್ತದೆ.

ಶ್ರದ್ಧಾ: ಕಲಿಯುವಾಗಲೇ ಆಗಲಿ, ರಂಗದಲ್ಲಾಗಲಿ, ಅಥವಾ ಒಬ್ಬರ ಎದುರಿಗೆ ನರ್ತಿಸಬೇಕಾದಾಗ ಸಾಧನೆಯಲ್ಲಿ ಅಸಡ್ಡೆ ಮಾಡದೆ ಸಂಪೂರ್ಣ ಮನಸ್ಸಿನಿಂದ ಶ್ರದ್ಧೆ ಇಂದ ಮಾಡಬೇಕು. ಗುರುಗಳಲ್ಲಿ ಹಿರಿಯ ಕಲಾವಿದರದಲ್ಲಿ ವಯಸ್ಸಿನಲ್ಲಿ ಚಿಕ್ಕದಾದರೂ ಕಲೆಯಲ್ಲಿ ತನಗಿಂತ ಹಿರಿದಾದವರ ವಿಚಾರದಲ್ಲಿ ಶ್ರದ್ಧಾಪೂರ್ಣವಾಗಿ ನಡೆದುಕೊಳ್ಳುವುದು, “ನನಗೆ ಗೊತ್ತಿದೆ ಅಭ್ಯಾಸವಿಲ್ಲದೆ ಮಾಡಬಲ್ಲೆ” ಎಂಬ ಆಹಂಕಾರವನ್ನು ಬಿಟ್ಟು ಶ್ರದ್ಧೆ ಇಂದ ಸಾಧನೆ ಮಾಡಿದಾಗಲೇ ಆತ್ಮಾನಂದ ಕಾಣಬಹುದು.

ವಚೋ (ವಚನ): ಕೆಲವು ಸಲ ನೃತ್ಯದಲ್ಲಿ ವಾಚಿಕಾಭಿನಯ ಇರುತ್ತದೆ. ಅಥವಾ ನರ್ತನದ ಬಗ್ಗೆ ಪ್ರೇಕ್ಷಕರಿಗೆ ತಿಳಿಸಬೇಕಾಗುತ್ತದೆ. ಆಗ ವ್ಯಾಕರಣ, ಉಚ್ಛಾರಣೆ, ಭಾವ ಭಾಷೆ ಎಲ್ಲದರ ಬಗ್ಗೆ ಗಮನವಿಡುವುದು ಅವಶ್ಯಕ. ಅಷ್ಟೆ ಅಲ್ಲ ಮತ್ತೊಬ್ಬರೊಡನೆ ವ್ಯವಹರಿಸುವಾಗ ಸರಿಯಾದ ರೀತಿಯಲ್ಲಿ ಮಾತನಾಡುವುದು. ಕಲಾವಿದನ ಕಲೆ ಅವನಲ್ಲಿರುವ ವಿನೀತ ಭಾವದಿಂದ ಶೋಭಿಸುತ್ತದೆಯೇ ಹೊರತು ಕಟು ನುಡಿಗಳಿಂದಲ್ಲ. ಮಾತು ಕಲಾವಿದನ ಕಲಾಚೇತನದ ಆಳ ಮತ್ತು ವ್ಯಕ್ತಿತ್ವವನ್ನು ಅಳೆದು ಬಿಡುತ್ತದೆ.

ಗೀತ: ನರ್ತಿಸುವ ಸಾಹಿತ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡಾಗಲೇ ಅದರಲ್ಲಿರುವ ಕವಿಭಾವನೆ ಕಂಡುಬರುತ್ತದೆ. ಗೀತ ಅಂದರೆ ಸಾಹಿತ್ಯವನ್ನು ತಪ್ಪಿಲ್ಲದೆ ತಿಳಿದಾಗ ಅಭಿನಯ ಸುಲಭ. ಆ ಸಾಹಿತ್ಯಕ್ಕೆ ಸಂಬಂಧಿಸಿದ ಪಾತ್ರಗಳ ಮನೋಭಾವನೆಗಳನ್ನು ಸರಿಯಾಗಿ ತಿಳಿದು ನರ್ತಿಸಬಹುದು, ತಲ್ಲೀನತೆ ಬರುತ್ತದೆ. ಗೀತವನ್ನು ಅಳವಡಿಸಿಕೊಂಡ ಸಂಗೀತಕ್ಕೆ ಸ್ಪಂದಿಸಿದಾಗಲೇ ರಾಗಭಾವ ಮತ್ತು ಸಾಹಿತ್ಯ ಭಾವದಲ್ಲಿ ಮುಳುಗಬಹುದು. ಇಷ್ಟೆಲ್ಲಾ ಹೊಂದಿರುವ ಅಂತಃ ಪ್ರಾಣಗಳು ಮಾನುಷಿಸಿದ್ಧಿ ಮತ್ತು ದೈವಿಸಿದ್ಧಿಗೆ ತಳಹದಿಯ ಹೆಜ್ಜೆಗಳು.

ಕಲಾವಿದರ ಜೊತೆ ಸಹಕರಿಸುವ ಸಂಗೀತ ಕಲಾವಿದರು ಕಲೆಯ ಬಹಿರ್ ಪ್ರಾಣ. ಶೃತಿ ಶುದ್ಧ ಸಂಗೀತ, ತಾಳಬದ್ಧ ಮೃದಂಗವಾದನ, ಸಾಹಿತ್ಯ ಭಾಗದ ಸರಿಯಾದ ಉಚ್ಛಾರಣೆ ಇಂದ ಅರ್ಥಗೋಚರ. ಇವೆಲ್ಲ ಮನಸ್ಸಿಗೆ ನಾಟಿ ದೃಶ್ಯರೂಪ ನರ್ತನ ಭಾವಾತ್ಮಕವಾಗಿ ಸಿದ್ಧಿಗೆ ಅನುವುಮಾಡಿಕೊಡುತ್ತದೆ. ಒಂದು ನರ್ತನ ಕಾರ್ಯಕ್ರಮ ಸಂಪೂರ್ಣ ಯಶಸ್ಸು ಪಡೆಯಲು ಸಂಗೀತ ವಿಭಾಗ ಜೀವಾಳವಾಗಿರುತ್ತದೆ. ಇದು ಸಿದ್ಧಿಯ ಶ್ರವ್ಯ – ದೃಶ್ಯ ಹೊಂದಾಣಿಕೆಯ ಕುರುಹಾಗುತ್ತದೆ.

ಅಂಗ ಶುದ್ಧಿ ಎಂದರೆ ನರ್ತನದಲ್ಲಿ ಬರುವ ಚಲನೆಗಳು ಶಾಸ್ತ್ರಲಕ್ಷಣ ಬದ್ಧವಾಗಿರಬೇಕು. ಶರೀರದ ಸೌಷ್ಠವ ಎಂದರೆ ಸ್ನಾಯುಗಳ ಸರಿಯಾದ ಹಿಡಿತ ಸರಿಯಾಗಿರಬೇಕು. ಶರೀರದಲ್ಲಿ ಲವಲವಿಕೆ, ಶಕ್ತಿ ಕಾಣಬೇಕು, ಉಸಿರಿನ ಹಿಡಿತ ಸರಿಯಾಗಿರಬೇಕು. ನರ್ತಿಸುವಾಗ ಯಾವುದೇ ಕ್ಷಣದಲ್ಲಿ ಶರೀರ ಸೋಲು ಕಾಣಬಾರದು. ಚಲನೆಗಳಲ್ಲಿ ಸಂರ್ಪೂರ್ಣತೆ ಇದ್ದು ಕಲಾಸೌಂದರ್ಯ ಎದ್ದು ಕಾಣಬೇಕು. ನರ್ತನದಲ್ಲಿ ಅಂಗಶುದ್ಧಿ ಪ್ರತಿಕ್ಷಣದಲ್ಲೂ ಗಮನಿಸಬೇಕಾಗ ಅಂಶ. ಇದರಿಂದ ನರ್ತನ ಚೆನ್ನಾಗಿ ಮೂಡಿಬಂದು “ಆಹಾ ಎಷ್ಟು ಚೆನ್ನ” ಎನ್ನುವ ತೃಪ್ತಿ ನೀಡುತ್ತದೆ.

ಮುಂದೆ ಬೇಕಾದುದು ಕಲಾವಿದ ಹಾಗೂ ಪ್ರೇಕ್ಷಕರಲ್ಲಿ ಉಂಟಾಗುವ ಪರಸ್ಪರ ಭಾವಸ್ಪಂದನ. ಕಲಾವಿದ ತೋರಿಸುವ ಭಾವರಸಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸ್ಪಂದಿಸಿದಾಗಲೇ ರಸೋತ್ಪತ್ತಿ ಉಂಟಾಗುವುದು. ಕಲಾವಿದನಲ್ಲಿ ತನ್ಮಯತೆ ಏಕಾಗ್ರತೆ ಇದ್ದರೆ, ನೋಡುವವರಲ್ಲೂ ತನ್ಮಯತೆ ಏಕಾಗ್ರತೆ ಬಂದು ಭಾವ ಸ್ಪಂದನ ಉಂಟಾಗುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ನರ್ತನಕಲೆ ಪೂಜ್ಯವಾದದ್ದು ಗುರುಗಳಲ್ಲಿ ಗುರು ಹೇಳಿಕೊಟಿದ್ದರಲ್ಲಿ, ಕಲಾವಿದರಲ್ಲಿ ವಿನೀತ ಶ್ರದ್ಧಾ ಭಕ್ತಿಯನ್ನು ನೈಜವಾಗಿಟ್ಟುಕೊಳ್ಳಬೇಕು. ” ಕೃತಿ” ಅಂದರೆ ನರ್ತನದ ಅಧ್ಯಯನ ಮತ್ತು ಕಾರ್ಯ, ನರ್ತನದ ಕಾರ್ಯಕ್ರಮ, ಎರಡರಲ್ಲೂ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯನ್ನು ಬೆಳೆಸಿಕೊಳ್ಳಬೇಕು.

“ಸಿದ್ಧಿ ” ಎಂಬ ಶಬ್ದವನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಿದರೆ ಗುರಿ ಮುಟ್ಟುವುದು ಎಂದಾಗುತ್ತದೆ. ಭಗವಂತನನ್ನು ಕಂಡರೆ ಆಗಬಹುದಾಗ ಆನಂದವನ್ನು ಅನುಭವಿಸಲು ಒಂದು ತಪಸ್ಸಿನ ಮಾರ್ಗವೆನ್ನಬಹುದು. ನರ್ತಿಸುವಾಗ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮರೆದು ಬಿಡುತ್ತೇವೆ. ಮನಸಿಟ್ಟು ನರ್ತಿಸಿದ ನಂತರ ಸಿಗುವ ಆನಂದ ಹೇಳಿಕೊಳ್ಳಲಾಗದ ಅನುಭವ ಪ್ರತಿಕ್ಷಣದಲ್ಲೂ ಈ ರೀತಿಯ ಆನಂದವನ್ನು ಅನುಭವಿಸಿದಾಗ ಸಿದ್ಧಿಯ ಕಡೆ ಸಾಧನೆ ನಡೆಯುತ್ತಿದೆ ಎನ್ನಬಹುದು. ಯೋಗದಿಂದ, ಧಾನ್ಯದಿಂದ ಸಿಗುವ ಮಾನಸಿಕ ಶಾರೀರಿಕ ಸ್ಥಿರತೆ ನರ್ತನದ ಕೆಲವೇ ಕ್ಷಣಗಳಲ್ಲಿ ದೊರೆಯುತ್ತದೆ.

ನರ್ತಿಸುವವರು ಪ್ರಥಮವಾಗಿ ಸ್ವಂತ ಸಿದ್ಧಿಯನ್ನು ಸಾಧಿಸುವ ಮನಸ್ಸುಮಾಡಿ ನರ್ತಿಸಿದರೆ ದೈವಿಸಿದ್ಧಿ ಮತ್ತು ಮಾನುಷಿ ಸಿದ್ಧಿ ಎರಡೂ ಒಟ್ಟಿಗೆ ಪ್ರಾಪ್ತವಾಗುತ್ತದೆ ಪ್ರಯತ್ನ ಮುಖ್ಯ. ನರ್ತನ ನಿರ್ಣಯದಲ್ಲಿ ಪಂಡರೀಕ ವಿಠಲ ಸಿದ್ಧಿಯ ವಿಚಾರದಲ್ಲಿ ಪ್ರೇಕ್ಷಕರ ಬಗ್ಗೆ ಹೀಗೆ ಹೇಳುತ್ತಾನೆ. ಪ್ರೇಕ್ಷಕರಲ್ಲಿ ಮೂರು ರೀತಿಯ ರಸಿಕರನ್ನು ಅವನು ಗುರುತಿಸುತ್ತಾನೆ.

೧.    ಜ್ಞಾನವಂತ ರಸಿಕರು ಪ್ರಯೋಗದಲ್ಲಿನ ಶಾಸ್ತ್ರ ಆಧಾರ, ಧೈರ್ಯ ಸಾಹಸಗಳ ಬಗ್ಗೆ ಮೆಚ್ಚುಗೆ ನೀಡುತ್ತಾರೆ.

೨.    ಭಾವರಸಿಕರು ಸಾಹಿತ್ಯಾರ್ಥ, ಕವಿಭಾವನೆ ಎಷ್ಟರಮಟ್ಟಿಗೆ ಅಭಿನಯದ ಮೂಲಕ ರಸೋಸ್ಪತ್ತಿ ಮಾಡಿತು ಎನ್ನುವುದ ಬಗ್ಗೆ ಗಮನಹರಿಸುತ್ತಾರೆ.

೩.    ವಸ್ತುನಿಷ್ಠ ರಸಿಕರು ಲೌಕಿಕವಾಗಿ ಅವರಿಗೆ ಗೊತ್ತಿರುವ ವಿಚಾರಗಳು, ಎಷ್ಟರಮಟ್ಟಿಗೆ ಸ್ಪುರಿಸಿತ್ತು ಎನ್ನುವುದರ ಬಗ್ಗೆ ಗಮನಹರಿಸಿ ಮೆಚ್ಚುಗೆ ನೀಡುತ್ತಾರೆ.

ಎಲ್ಲರೂ ತಮ್ಮ ಪ್ರಕೃತಿ ಸ್ವಭಾವಕ್ಕೆ ಅನುಗುಣವಾಗಿ ಬಂದು ಪ್ರಯೋಗವನ್ನು ಅರ್ಥಮಾಡಿಕೊಂಡು ಸಿದ್ಧಿಗೆ ಅವಕಾಶ ಮಾಡಿ ಕೊಡುತ್ತಾರೆ. ರಸವನ್ನು ಯಾವುದೇ ಅನ್ಯಭಾವನೆ ಇಲ್ಲದೆ ಅನುಭವಿಸಲು ಸಿದ್ಧರಾಗುವುದು, ತನ್ಮಯತೆ ಇಂದ ವೀಕ್ಷಿಸುವುದು, ರಂಗಕಾರ್ಯವನ್ನು ಕಲಾತ್ಮಿಕೆಯ ಸ್ವರೂಪದಲ್ಲಿ ಸ್ವೀಕರಿಸಿದಾಗ ಪ್ರೇಕ್ಷಕರು ಕಲಾ ಸಿದ್ಧಿಯ ಮಾರ್ಗದಲ್ಲಿ ಜೊತೆಗೂಡುತ್ತಾರೆ. ಉತ್ತಮ ಕಲಾವಿದರಾಗಿ ರೂಪಿತಗೊಳ್ಳುವಾಗ ಉತ್ತಮ ಪ್ರೇಕ್ಷಕರಾಗಿ ಸಹ ರೂಪಿತಗೊಳ್ಳುವುದು ಕಲಾವಿದನ ಜವಾಬ್ದಾರಿಯಾಗುತ್ತದೆ.

ಹೀಗೆ ಕಲಾಸಿದ್ಧಿಗೆ ಕಲಾವಿದ – ಪ್ರೇಕ್ಷಕ ಇಬ್ಬರೂ ಆಧಾರ ಸ್ಥಂಭಗಳಾಗುತ್ತಾರೆ.

ಗ್ರಂಥ ಋಣ

೧.    ಪಂಡರೀಕ ವಿಠಲನ ನರ್ತನನಿರ್ಣಯ

೨.   ಭರತನ ನಾಟ್ಯ ಶಾಸ್ತ್ರ

೩.   ನಂದಿಕೇಶ್ವರನ ಅಭಿನಯದರ್ಪಣ.